ಚಿನ್ನದ ಗಣಿಯನ್ನು ಬೆಳಗಿಸಿದ ಶಿವನಸಮುದ್ರದ ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆಯ ರೋಚಕಥೆ

ಇಂದು ನಾವು ಸ್ವಿಚ್ ಒತ್ತಿದ ಕ್ಷಣದಲ್ಲೇ ಮನೆ, ಕಚೇರಿ, ಕಾರ್ಖಾನೆ ಎಲ್ಲೆಡೆ ವಿದ್ಯುತ್ ದೊರೆಯುವುದನ್ನು ಸಹಜವೆಂದು ಭಾವಿಸುತ್ತೇವೆ.  ಕಚೇರಿ, ಕಾರ್ಖಾನೆ, ಮೆಟ್ರೋ, ಐಟಿ ಕಂಪನಿಗಳು—ಎಲ್ಲವೂ ವಿದ್ಯುತ್ ಇಲ್ಲದೆ ಕ್ಷಣವೂ ಸಾಗಲಾರವು. ಆದರೆ ಇದೇ ವಿದ್ಯುತ್ ಒಂದು ಕಾಲದಲ್ಲಿ ಜಗತ್ತಿಗೇ ಆಶ್ಚರ್ಯವಾಗಿತ್ತು ಎಂಬುದು ಇಂದಿನ ಪೀಳಿಗೆಗೆ ಊಹಿಸಲೂ ಕಷ್ಟ. ಆದರೆ ಒಂದು ಶತಮಾನಕ್ಕೂ ಹಿಂದೆ, ವಿದ್ಯುತ್ ಎನ್ನುವುದು ಜನರಿಗೆ ಪವಾಡದಂತಿದ್ದ ಕಾಲವಿತ್ತು. ಅಂತಹ ಕಾಲದಲ್ಲೇ ಕಾವೇರಿ ನದಿಯ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಿ, ದಟ್ಟ ಕಾಡು, ಬೆಟ್ಟ-ಗುಡ್ಡಗಳನ್ನು ದಾಟಿಸಿ 147 ಕಿಲೋಮೀಟರ್ ದೂರದ ಕೋಲಾರ ಚಿನ್ನದ ಗಣಿಗಳಿಗೆ (KGF) ವಿದ್ಯುತ್ ತಲುಪಿಸಿದ ಮಹತ್ವಾಕಾಂಕ್ಷೆಯ ಯೋಜನೆ ಜಗತ್ತಿನ ಎಂಜಿನಿಯರಿಂಗ್ ಇತಿಹಾಸದಲ್ಲೇ ಹೊಸ ಅಧ್ಯಾಯವನ್ನು ಬರೆದಿತ್ತು. ಇದು ಕೇವಲ ಒಂದು ವಿದ್ಯುತ್ ಯೋಜನೆಯಲ್ಲ. ಏಷ್ಯಾದ ಮೊದಲ ಬೃಹತ್ ಜಲವಿದ್ಯುತ್ ಯೋಜನೆ, ವಿಶ್ವದ ಅತಿ ಉದ್ದದ ಹೈ-ವೋಲ್ಟೇಜ್ ವಿದ್ಯುತ್ ಪ್ರಸರಣ ಮಾರ್ಗ ಮತ್ತು ಭಾರತದ ಕೈಗಾರಿಕಾ ಕ್ರಾಂತಿಯ ಮುನ್ನುಡಿಯಾಗಿತ್ತು.


ಕಾವೇರಿ ಹರಿಸಿದ ವಿದ್ಯುತ್…  ಮೈಸೂರು… ವಿಶ್ವವನ್ನೇ ಬೆರಗುಗೊಳಿಸಿದ 147 ಕಿ.ಮೀ ಸಾಹಸ!

ಇಂದು ನಾವು ಮೊಬೈಲ್ ಚಾರ್ಜರ್ ಅನ್ನು ಗೋಡೆಗೆ ಜೋಡಿಸಿದ ಕ್ಷಣದಲ್ಲೇ ವಿದ್ಯುತ್ ಹರಿಯುತ್ತದೆ. “ಭಾರತದಲ್ಲಿ ವಿದ್ಯುತ್ ಕ್ರಾಂತಿಗೆ ಅಡಿಪಾಯ ಹಾಕಿದ್ದು ಯಾರು?” “ಏಷ್ಯಾದ ಮೊದಲ ಬೃಹತ್ ಜಲವಿದ್ಯುತ್ ಯೋಜನೆ ಎಲ್ಲಿತ್ತು?” “ವಿಶ್ವದ ಅತಿ ಉದ್ದದ ವಿದ್ಯುತ್ ಪ್ರಸರಣ ಮಾರ್ಗವನ್ನು 120 ವರ್ಷಗಳ ಹಿಂದೆಯೇ ಯಾರು ನಿರ್ಮಿಸಿದರು?” ಪ್ರಶ್ನೆಗಳಿಗೆ ಉತ್ತರ ಕೇಳಿದರೆ ಬಹುತೇಕರು ಅಮೆರಿಕಾ, ಇಂಗ್ಲೆಂಡ್ ಅಥವಾ ಯುರೋಪಿನ ದೇಶಗಳ ಹೆಸರನ್ನೇ ಹೇಳಬಹುದು.

ಆದರೆ ನಿಜವಾದ ಉತ್ತರ ನಮ್ಮದೇ ಕರ್ನಾಟಕದಲ್ಲಿದೆ.

ಹೌದು…! ಇದು ಕಾವೇರಿ ನದಿಯ ಕಥೆ… ಇದು ಮೈಸೂರು ಸಂಸ್ಥಾನದ ದೂರದೃಷ್ಟಿಯ ಕಥೆ… ಇದು ಕೆ.ಜಿ.ಎಫ್ ಚಿನ್ನದ ಗಣಿಯನ್ನು ಬೆಳಗಿಸಿದ ವಿದ್ಯುತ್ ಕ್ರಾಂತಿಯ ಕಥೆ… ಮತ್ತು   ವಿಶ್ವದ ಅತ್ಯಂತ ಸಾಹಸಮಯ ಎಂಜಿನಿಯರಿಂಗ್ ಸಾಧನೆಗಳಲ್ಲಿ ಒಂದನ್ನು ನಿರ್ಮಿಸಿದ ಕೆನಡಾ ಮೂಲದ ಬ್ರಿಟಿಷ್ ಇಂಜಿನಿಯರ್ ಮೇಜರ್ ಜೋಲಿ ಡಿ ಲಾಟ್‌ಬಿನಿಯರ್ ಅವರ ರೋಚಕತೆ ತಿಳಿಯೋಣ ಬನ್ನಿ


ಒಂದು ಸಮಸ್ಯೆ… ಇಡೀ ಇತಿಹಾಸವನ್ನೇ ಬದಲಿಸಿತು

19ನೇ ಶತಮಾನದ ಕೊನೆಯಲ್ಲಿ ಕೋಲಾರ ಗೋಲ್ಡ್ ಫೀಲ್ಡ್ಸ್ (KGF) ವಿಶ್ವದ ಅತ್ಯಂತ ಶ್ರೀಮಂತ ಚಿನ್ನದ ಗಣಿಗಳಲ್ಲಿ ಒಂದಾಗಿತ್ತು. ಆದರೆ ಚಿನ್ನ ಹೊರತೆಗೆಯುವ ಕೆಲಸ ಸುಲಭವಾಗಿರಲಿಲ್ಲ. ಗಣಿಗಳು ಕ್ರಮೇಣ 3000 ಅಡಿಗೂ ಹೆಚ್ಚು ಆಳಕ್ಕೆ ಇಳಿಯುತ್ತಿದ್ದಂತೆ ಕಲ್ಲಿದ್ದಲಿನಿಂದ ಓಡುತ್ತಿದ್ದ ಉಗಿ ಯಂತ್ರಗಳು ಸಾಲದೆ ಹೋದವು. ಇಂಧನ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿತ್ತು. ಸೌದೆಯ ಕೊರತೆ ಮತ್ತೊಂದು ದೊಡ್ಡ ಸಮಸ್ಯೆಯಾಗಿತ್ತು. ಆ ಸಮಯದಲ್ಲಿ ಕೆ.ಜಿ.ಎಫ್ ಗಣಿಗಳನ್ನು ನಿರ್ವಹಿಸುತ್ತಿದ್ದ ಬ್ರಿಟಿಷ್ ಕಂಪನಿಯಾದ John Taylor & Sons  “ನಿರಂತರ ಮತ್ತು ಅಗ್ಗದ ವಿದ್ಯುತ್ ದೊರೆತರೆ ಮಾತ್ರ ಗಣಿಗಳನ್ನು ಲಾಭದಾಯಕವಾಗಿ ಮುಂದುವರಿಸಬಹುದು.” ಎಂದು ಮೈಸೂರು ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿತು.  ಆದರೆ ಇದು ಸಾಮಾನ್ಯ ಬೇಡಿಕೆಯಾಗಿರಲಿಲ್ಲ. ಇದು ಮೈಸೂರು ಸಂಸ್ಥಾನದ ಆರ್ಥಿಕ ಭವಿಷ್ಯವನ್ನು ನಿರ್ಧರಿಸುವ ಕ್ಷಣವಾಗಿತ್ತು.


50 ಲಕ್ಷ ರೂಪಾಯಿಯ ದಿಟ್ಟ ನಿರ್ಧಾರ

1902ರ ಆಗಸ್ಟ್ 8ರಂದು ಪೂರ್ಣ ಆಡಳಿತಾಧಿಕಾರದೊಂದಿಗೆ ಅಧಿಕೃತವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಿಂಹಾಸನವನ್ನೇರುವವರೆಗೂ ಅವರು ಅಪ್ರಾಪ್ತರಾಗಿದ್ದ ಕಾರಣ ಅವರ ತಾಯಿ ಮಹಾರಾಣಿ ಕೆಂಪನಂಜಮ್ಮಣ್ಣಿ ದೇವಿ (ವಾಣಿ ವಿಲಾಸ ಸನ್ನಿಧಾನ) ಅವರು ರಾಜ್ಯದ ಆಡಳಿತವನ್ನು ‘ರೀಜೆಂಟ್’ (ಪ್ರತಿನಿಧಿ ಆಡಳಿತಗಾರ್ತಿ) ಆಗಿ ನಿರ್ವಹಿಸಿದ್ದರು. ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಮೈಸೂರು ಏಷ್ಯಾದ ಅತ್ಯಂತ ಪ್ರಗತಿಪರ ಮತ್ತು ಆಧುನಿಕ ಸಂಸ್ಥಾನಗಳಲ್ಲಿ ಒಂದಾಗಿ ರೂಪಾಂತರಗೊಂಡಿತು.  ಇಂದು ಸಾವಿರಾರು ಕೋಟಿ ರೂಪಾಯಿಗಳಿಗೆ ಸಮಾನವಾಗುವ ಸುಮಾರು 50 ಲಕ್ಷ ರೂಪಾಯಿಗಳ ವೆಚ್ಚದ ಯೋಜನೆಯನ್ನು ಮೈಸೂರು ಸರ್ಕಾರ ತನ್ನ ಖಜಾನೆಯಿಂದಲೇ ಭರಿಸಲು ಮುಂದಾಯಿತು. ಆದರೆ, ತನ್ನ ಹೂಡಿಕೆಯ ಮೇಲಿನ ಆದಾಯಕ್ಕೆ (ROI) ತೊಂದರೆಯಾಗದಂತೆ   John Taylor & Sons ಸಂಸ್ಥೆಯೊಂದಿಗೆ 10 ವರ್ಷಗಳ ಖಾತರಿ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಳ್ಳುವ ಮೂಲಕ ಹಾಕಿದ ಬಂಡವಾಳಕ್ಕೆ ಮೋಸವಾಗದಂತೆ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿಗೆ ತೊಂದರೆಯಾಗದಂತಹ ಯೋಜನೆಯನ್ನು ರೂಪಿಸಿ ಅಂದು ತೆಗೆದುಕೊಂಡ ಆ ನಿರ್ಧಾರವೇ ಮುಂದೆ ಭಾರತದ ಕೈಗಾರಿಕಾ ಅಭಿವೃದ್ಧಿಯ ದಿಕ್ಕನ್ನೇ ಬದಲಿಸಿತು.


ನಯಾಗರದಿಂದ ಶಿವನಸಮುದ್ರದವರೆಗೆ

1899ರಲ್ಲಿ ಯೋಜನೆಯ ಜವಾಬ್ದಾರಿ ಕೆನಡಾ ಮೂಲದ 37 ವರ್ಷದ ಬ್ರಿಟಿಷ್ ರಾಯಲ್ ಎಂಜಿನಿಯರ್ ಮೇಜರ್ ಜೋಲಿ ಡಿ. ಲಾಟ್‌ಬಿನಿಯರ್ ಅವರಿಗೆ ನೀಡಲಾಯಿತು. ಒಪ್ಪಂದವಾದ ಕೂಡಲೇ ಅವರು ನೇರವಾಗಿ ಅಮೆರಿಕಾದ ನಯಾಗರ ಜಲಪಾತಕ್ಕೆ ತೆರಳಿದರು. ಆ ಸಮಯದಲ್ಲಿ ನಯಾಗರದಲ್ಲೇ ಜಗತ್ತಿನ ಅತ್ಯಾಧುನಿಕ ಜಲವಿದ್ಯುತ್ ಯೋಜನೆ ನಿರ್ಮಾಣವಾಗುತ್ತಿತ್ತು.

ಅಲ್ಲಿ ಅವರು:

  • ಜಲವಿದ್ಯುತ್ ಉತ್ಪಾದನೆ,
  • ಹೈ-ವೋಲ್ಟೇಜ್ ಪ್ರಸರಣ,
  • ಜನರಲ್ ಎಲೆಕ್ಟ್ರಿಕ್ (GE) ತಂತ್ರಜ್ಞಾನ,

ಇವೆಲ್ಲವನ್ನೂ ಅಧ್ಯಯನ ಮಾಡಿ ಶಿವನಸಮುದ್ರಕ್ಕೆ ಬೇಕಾದ ಯಂತ್ರೋಪಕರಣಗಳ ವಿನ್ಯಾಸವನ್ನು ಅಂತಿಮಗೊಳಿಸಿ, ಅಮೆರಿಕದ ದೈತ್ಯ ಕಂಪನಿ ಜನರಲ್ ಎಲೆಕ್ಟ್ರಿಕ್ (GE) ನ ಉನ್ನತ ತಜ್ಞರೊಂದಿಗೆ ಮಾತುಕತೆ ನಡೆಸಿ, ಶಿವನಸಮುದ್ರ ಜಲವಿದ್ಯುತ್ ಯೋಜನೆಗೆ ಬೇಕಾದ ಅತ್ಯಾಧುನಿಕ ಜನರೇಟರ್‌ಗಳನ್ನು ನಿಗದಿತ ಸಮಯಕ್ಕೆ ಪೂರೈಸುವಂತೆ ಆದೇಶಿಸಿ  ಮೈಸೂರಿಗೆ ಮರಳಿದರು.


ಆನೆಗಳ ಬೆನ್ನಿನ ಮೇಲೆ ನಡೆದ ಸರ್ವೆ!

ಇಂದು ನಾವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುವುದಕ್ಕಾಗಿ ಗೂಗಲ್ ಮ್ಯಾಪ್ ತೆರೆದು ರಸ್ತೆ ನೋಡುತ್ತೇವೆ. ಅದೇ ರೀತಿಯಲ್ಲಿ ಡ್ರೋನ್, GPS ಅಥವಾ ಉಪಗ್ರಹಗಳ ಮೂಲಕ ಸರ್ವೇ ಮಾಡಿಸುತ್ತೇವೆ.  ಆದರೆ 1900ರ ಕಾಲದಲ್ಲಿ ಈ ರೀತಿಯಾದ ಯಾವುದೇ ಸೌಲಭ್ಯವಿಲ್ಲದಿದ್ದಾಗ ಶಿವನಸಮುದ್ರದಿಂದ ಕೆ.ಜಿ.ಎಫ್‌ವರೆಗಿನ 147 ಕಿಲೋಮೀಟರ್ ಕಡಿದಾದ ಬೆಟ್ಟಗಳು ಮತ್ತು ಕಾಡಾನೆಗಳು, ಹುಲಿ ಚಿರತೆಗಳಂತಹ, ಕ್ರೂರ ಮೃಗಗಳಿರುವ ದಟ್ಟ ಅರಣ್ಯ ಪ್ರದೇಶವಾಗಿದ್ದರಿಂದ ನಡೆದುಕೊಂಡು ಸರ್ವೆ ಮಾಡುವುದು ದುಸ್ಸಾಹಸ ಎಂದರಿತು, ಮೈಸೂರು ಸಂಸ್ಥಾನದಿಂದ ವಿಶೇಷ ತರಬೇತಿ ಪಡೆದ ದೈತ್ಯ ಆನೆಗಳನ್ನು ಕರೆಸಿಕೊಂಡು ಸ್ಥಳೀಯ ತಂತ್ರಜ್ಞರ ಜೊತೆ ದಿನಗಟ್ಟಲೆ ಆನೆಗಳ ಮೇಲೆ ಕುಳಿತು, ಭೀಕರ ಪೊದೆಗಳನ್ನು ಸವರುತ್ತಾ, ಹಳ್ಳ-ಕೊಳ್ಳಗಳನ್ನು ದಾಟುತ್ತಾ ಅತ್ಯಂತ ದುರ್ಗಮ ಹಾದಿಗಳಲ್ಲಿ ವಿಶ್ವದ ಅತಿ ಉದ್ದದ ವಿದ್ಯುತ್ ಪ್ರಸರಣ ಲೈನ್‌ನ ಐತಿಹಾಸಿಕ ನಕ್ಷೆಯನ್ನು ಮೇಜರ್ ಲಾಟ್‌ಬಿನಿಯರ್ ಅವರು ಸಿದ್ಧಪಡಿಸಿದರು.


ಅಮೆರಿಕ, ಸ್ವಿಟ್ಜರ್‌ಲ್ಯಾಂಡ್, ಆಸ್ಟ್ರೇಲಿಯಾದಿಂದ ಬಂದ ಯಂತ್ರಗಳು

ಅಮೆರಿಕದ General Electric (GE) ಕಂಪನಿಯಿಂದ ಜನರೇಟರ್‌ಗಳು, ಶುದ್ಧ ತಾಮ್ರದ ತಂತಿಗಳು… ಸ್ವಿಟ್ಜರ್‌ಲ್ಯಾಂಡ್‌ನಿಂದ ಬೃಹತ್ ಟರ್ಬೈನ್‌ಗಳು, ಆಸ್ಟ್ರೇಲಿಯಾದಿಂದ ಗೆದ್ದಲು ನಿರೋಧಕ Jarrah ಮತ್ತು Karri ಮರದ ವಿದ್ಯುತ್ ಕಂಬಗಳು,  ಇವಲ್ಲವೂ ಹಡಗಿನ ಮೂಲಕ ಮದ್ರಾಸ್ ಬಂದರಿಗೆ ಬಂದು ಅಲ್ಲಿಂದ ರೈಲಿನ ಮೂಲಕ ಮದ್ದೂರಿಗೆ ತಲುಪಿಸಲಾಯಿತು. ಅಲ್ಲಿಂದ ಮುಂದಕ್ಕೆ ಯಾವುದೇ ರೀತಿಯ ಆಧುನಿಕ ಸಾರಿಗೆ ಸೌಲಭ್ಯ ಇರದಿದ್ದರಿಂದ ನೂರಾರು ಎತ್ತುಗಳ ಗಾಡಿಗಳು ಮತ್ತು ಆನೆಗಳ ಮೂಲಕ ಶಿವನಸಮುದ್ರದ ದಟ್ಟ ಕಾಡಿನೊಳಗೆ ಸಾಗಿಸಲಾಯಿತು. ಹಾಗೆ ನೋಡಿದರೆ ಇವೆಲ್ಲವೂ ಸಹಾ ನಿಗಧಿತ ಸಮಯಕ್ಕೆ ಸರಿಯಾಗಿ ಇಲ್ಲವೇ ಅದಕ್ಕೂ ಮೊದಲೇ ಸರಬರಾಜಾಗಿದ್ದದ್ದೂ ಸಹಾ ಗಮನಾರ್ಹವಾಗಿತ್ತು.


ವಿಶ್ವದಾಖಲೆ ನಿರ್ಮಿಸಿದ 147 ಕಿಲೋಮೀಟರ್ ವಿದ್ಯುತ್ ಮಾರ್ಗ

ಸಾವಿರಾರು ಕಾರ್ಮಿಕರು ಹಾರೆ-ಪಿಕಾಸಿಗಳಿಂದ ನೆಲ ತೋಡಿ ಮರದ ಕಂಬಗಳನ್ನು ನೆಟ್ಟು ಅವುಗಳ ಮೇಲೆ 30,000 ವೋಲ್ಟ್ ಸಾಮರ್ಥ್ಯದ ಹೈ-ವೋಲ್ಟೇಜ್ ತಾಮ್ರದ ವಿದ್ಯುತ್ ತಂತಿಗಳನ್ನು 147 ಕಿಲೋಮೀಟರ್ ದೂರಕ್ಕೆ ಎಳೆಯುವ ಸಾಹಸ ಕೆಲದಲ್ಲಿ ನಿರತರಾಗಿದ್ದರೆ,

ಮತ್ತೊಂಡೆಡೆ

ಶಿವನಸಮುದ್ರದ ಕಡಿದಾದ ಹಾಗೂ ಆಳವಾದ ಕಣಿವೆಯ ತಳದಲ್ಲಿದ್ದ ಪವರ್‌ಹೌಸ್ ಗೆ ಆ ಪರಿಯ ಭಾರಿ ತೂಕದ ಯಂತ್ರಗಳನ್ನು ಇಳಿಸುವುದು ಅಷ್ಟು ಸುಲಭದ ಕಾರ್ಯವಾಗಿರದೇ, ಸ್ವಲ್ಪ ಮಟ್ಟಿಗೆ ಆಚೀಚೆಯಾದರೂ, ಆ ಭಾರೀ ಯಂತ್ರಗಳು ಅಷ್ಟು ಮೇಲಿಂದ ಕೆಳಗೆ ಬಿದ್ದು ಹಾಳಾಗುವ ಮೂಲಕ ಲಕ್ಷಾಂತರ ರೂಪಾಯಿ ಹಣ ನಷ್ಟವಾಗುತ್ತಿದ್ದದ್ದಲ್ಲದೇ, ಆ ಕೆಲಸದಲ್ಲಿ ನಿರತರಾಗಿರುವ ಅನೇಕರ ಪ್ರಾಣಕ್ಕೂ ಸಂಚಕಾರವಾಗುವಂತಹ ಸಂಧರ್ಭವಿದ್ದ ಕಾರಣ, ಆ ಭೀಕರ ಕಣಿವೆಯೊಳಗೆ, ದೈತ್ಯ ಆನೆಗಳ ಬಾಹುಬಲ ಮತ್ತು ಗಟ್ಟಿಮುಟ್ಟಾದ ದಪ್ಪ ಹಗ್ಗಗಳು (Ropes) ಹಾಗೂ ಕಪ್ಪಿ (Pulley) ತಂತ್ರಜ್ಞಾನವನ್ನು ಬಳಸಿ ಯಂತ್ರೋಪಕರಣಗಳನ್ನು ವಿದೇಶದಿಂದ ಬಂದಿದ್ದಂತಹ ಎಂಜಿನಿಯರ್‌ಗಳು ಯಶಸ್ವಿಯಾಗಿ ಕೆಳಗೆ ಇಳಿಸಿದ್ದಲ್ಲದೇ, ಅದಾಗಲೇ ಯೋಜಿಸಿದ ರೀತಿಯಲ್ಲಿ ಜೋಡಿಸಿದರು.

 

ಆ ಸಮಯದಲ್ಲಿ  ಮೈಸೂರಿನ ದಿವಾನರಾದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಈ ಪ್ರವರ್ತಕ ಘಟಕವು,

  • ಏಷ್ಯಾದ ಮೊದಲ ಬೃಹತ್ ಜಲವಿದ್ಯುತ್ ಯೋಜನೆ
  • Niagara Falls ಯೋಜನೆಯ ಪ್ರಸರಣ ಮಾರ್ಗ ಕೇವಲ 21 ಕಿ.ಮೀ ಆದರೆ ಶಿವನಸಮುದ್ರದಿಂದ KGF ವರೆಗೆ 147 ಕಿ.ಮೀ ದೂರವಿದ್ದದ್ದರಿಂದ ಇದು ಜಗತ್ತಿನ ಗಮನ ಸೆಳೆದ ಸಾಧನೆಯಾಗಿ ವಿಶ್ವದ ಅತಿ ಉದ್ದದ ವಿದ್ಯುತ್ ಪ್ರಸರಣ ಮಾರ್ಗ ಎಂಬ ದಾಖಲೆ ನಿರ್ಮಿಸಿತು.

 


ಜೂನ್ 30, 1902 – ಭಾರತದ ವಿದ್ಯುತ್ ಇತಿಹಾಸದ ಸುವರ್ಣ ದಿನ

1902ರ ಜೂನ್ 30. ಶಿವನಸಮುದ್ರ ವಿದ್ಯುತ್ ಸ್ಥಾವರದಲ್ಲಿ ಮುಖ್ಯ ಸ್ವಿಚ್ ಒತ್ತಲಾಯಿತು. ಕಾವೇರಿ ನದಿಯ ನೀರಿನಿಂದ ಉತ್ಪಾದನೆಯಾದ ವಿದ್ಯುತ್  ಕೇವಲ ಕೆಲವೇ ಕ್ಷಣಗಳಲ್ಲಿ 147 ಕಿ.ಮೀ ದೂರದ ಕೆ.ಜಿ.ಎಫ್ ಗಣಿಗಳನ್ನು ತಲುಪಿತು. ಅಲ್ಲಿಯವರೆಗೆ ಕತ್ತಲಿನಲ್ಲಿ ಮುಳುಗಿದ್ದ

  • ಸುರಂಗಗಳು,
  • ಗಣಿಯ ಯಂತ್ರಗಳು,
  • ಬ್ರಿಟಿಷರ ಬಂಗಲೆಗಳು

ಒಂದೇ ಕ್ಷಣದಲ್ಲಿ ವಿದ್ಯುತ್ ಬೆಳಕಿನಿಂದ ಜಗಮಗಿಸಿದವು. ಅಂದಿನ ಜನರಿಗೆ ಅದು ಸಾಕ್ಷಾತ್ ಪವಾಡವಾಗಿತ್ತು. ಆ ಕ್ಷಣದಲ್ಲಿ ಅದನ್ನು ಕಂಡವರು, “ಇದು ಸಾಕ್ಷಾತ್ ಪವಾಡ!” ಎಂದೇ ಉದ್ಘರಿಸಿದ್ದರು.


25 ಹರ್ಟ್ಜ್ ವಿದ್ಯುತ್ – ಒಂದು ವಿಶಿಷ್ಟ ವ್ಯವಸ್ಥೆ

ಕೆ.ಜಿ.ಎಫ್‌ಗೆ ಸರಬರಾಜು ಮಾಡುತ್ತಿದ್ದ ವಿದ್ಯುತ್ 25 cycles (25 Hz) ಆಗಿತ್ತು. ಇದು ವಿಶೇಷವಾಗಿ

  • ಭಾರವಾದ ಮೋಟಾರ್‌ಗಳು,
  • ಏರ್ ಕಂಪ್ರೆಸರ್‌ಗಳು,
  • ಗಣಿಗಾರಿಕೆ ಯಂತ್ರಗಳು

ಚಾಲನೆಗೆ ಸೂಕ್ತವಾಗಿತ್ತು. ಆದರೆ ಮನೆಗಳಲ್ಲಿ ಬಳಸಿದಾಗ ಒಂದು ವಿಚಿತ್ರ ಅನುಭವವಾಗುತ್ತಿತ್ತು. ಆ ಸಮಯದ ವಿದ್ಯುತ್ ಬಲ್ಬ್‌ಗಳು ಇಂದಿನಂತೆ ನಿರಂತರ ಬೆಳಗದೆ ಸ್ವಲ್ಪ ಮಿಣುಕುತ್ತಿದ್ದವು.


ಕೆ.ಜಿ.ಎಫ್ – “ಲಿಟಲ್ ಇಂಗ್ಲೆಂಡ್”

ವಿದ್ಯುತ್ ಬಂದ ನಂತರ ಕೆ.ಜಿ.ಎಫ್‌ನಲ್ಲಿ

  • ನೀರು ಶುದ್ಧೀಕರಣ ವ್ಯವಸ್ಥೆ,
  • ಕ್ಲಬ್‌ಗಳು,
  • ಗಾಲ್ಫ್ ಮೈದಾನಗಳು,
  • ಬ್ರಿಟಿಷ್ ಶೈಲಿಯ ಬಂಗಲೆಗಳು,
  • ಆಸ್ಪತ್ರೆಗಳು,
  • ಆಧುನಿಕ ಮೂಲಸೌಕರ್ಯ ಬೆಳೆದವು.

ಶಿವನ ಸಮುದ್ರದ ವಿದ್ಯುತ್ ನಿಂದಾಗಿ 1902ರಲ್ಲಿ ಕೋಲಾರ ಚಿನ್ನದ ಗಣಿಪ್ರದೇಶ (KGF) ಜಗಮಗಿಸುತ್ತಿದ್ದಂತೆಯೇ ಗಣಿ ಅಧಿಕಾರಿಗಳು, ಭೂವಿಜ್ಞಾನಿಗಳು ಮತ್ತು ಯುರೋಪಿಯನ್ ಕಾರ್ಮಿಕರಿಗೆ ವಸತಿ ಕಲ್ಪಿಸಲು ಬ್ರಿಟಿಷ್ ಗಣಿಗಾರಿಕೆ ಸಂಸ್ಥೆಯಾದ ‘ಜಾನ್ ಟೇಲರ್ & ಸನ್ಸ್’ ರಾಬರ್ಟ್‌ಸನ್‌ಪೇಟೆ (ಮೈಸೂರಿನ ಬ್ರಿಟಿಷ್ ರೆಸಿಡೆಂಟ್ ಆಗಿದ್ದ ಸರ್ ಡೊನಾಲ್ಡ್ ರಾಬರ್ಟ್‌ಸನ್)ಯನ್ನು ‍ಸ್ಥಾಪಿಸಿದ ಎರಡು ವರ್ಷಗಳ ನಂತರ 1904 ರಲ್ಲಿ ಸ್ಥಾಪಿಸಲಾದ ಈ ಪಟ್ಟಣಕ್ಕೆ, ಪ್ರಮುಖ ಬ್ರಿಟಿಷ್ ಗಣಿ ಅಧಿಕಾರಿಯೊಬ್ಬರ ನನೆಪಿನಲ್ಲಿ ಆಂಡರ್‌ಸನ್‌ಪೇಟೆಯನ್ನು ಸ್ಥಾಪಿಸಲಾಯಿತಾದರೂ, ಆ ಕಾಲದಲ್ಲಿಯೇ ಈ ಪ್ರದೇಶ ಬೀಯರ್ ಮಾರಾಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ಪಡೆದಿದ್ದ ಕಾರಣ ಅಂದಿನಿಂದ ಇಂದಿನವರೆಗೂ ಜನರ ಆಡು ಭಾಷೆಯಲ್ಲಿ ಬೀಯರ್ ಶಾಪ್ ಅಪಭ್ರಂಷವಾಗಿ ಬೀರ್ ಶಾಪ್ ಎಂದೇ ಅಸ್ತಿತ್ವದಲ್ಲಿದೆ. ಇದಾದ ಎರಡು ವರ್ಷಗಳ ನಂತರ ಕೆಜಿಎಫ್‌ನ ಗದ್ದಲದಿಂದ ಸುಮಾರು 13 km ದೂರದಲ್ಲಿ ಅಂದಿನ ಹಿರಿಯ ಬ್ರಿಟಿಷ್ ಅಧಿಕಾರಿಯಾಗಿದ್ದ ಎಲ್.ಬಿ. ಬೌರಿಂಗ್ ಅವರ ನೆನಪಿನಾರ್ಥವಾಗಿ ಬೌರಿಂಗ್‌ಪೇಟೆ ಸ್ಥಾಪನೆಗೊಂಡು ಅದು ಪ್ರಸ್ತುತ ಬಂಗಾರಪೇಟೆಯಾಗಿ ದೊಡ್ಡ ನಗರವಾಗಿದೆ.  ಈ ಪಟ್ಟಣಗಳ ಜೊತೆಗೆ, ಚಾಂಪಿಯನ್ ರೀಫ್, ಊರ್ಗಾಂ ಮಾರಿಕುಪ್ಪಂನಂತಹ ಸುತ್ತಮುತ್ತಲಿನ ಗಣಿ ವಸಾಹತುಗಳೂ ಜನನಿಬಿಡವಾಗಿ ಬ್ರಿಟಿಷ್ ಕಾಲದ ಬಂಗಲೆಗಳು, ಚರ್ಚ್‌ಗಳು ಮತ್ತು ಸಾಮಾಜಿಕ ಕ್ಲಬ್‌ಗಳ ವಸಾಹತುಶಾಹಿ ವಾಸ್ತುಶಿಲ್ಪದಿಂದಾಗಿ ಇಡೀ ಕೆಜಿಎಫ್ ಪ್ರದೇಶವು  “Little England”  ಲಿಟಲ್ ಇಂಗ್ಲೆಂಡ್” ಎಂದೇ ಪ್ರಸಿದ್ಧಿ ಪಡೆದಿತ್ತು .


ಬೆಂಗಳೂರು ವಿದ್ಯುದ್ದೀಕರಣಕ್ಕೂ ಇದೇ ಯೋಜನೆ ಕಾರಣ. ಮೂವರು ವ್ಯಕ್ತಿಗಳಿಂದ ಸ್ವಿಚ್‌ವರೆಗೆ

ಶಿವನಸಮುದ್ರ ಯೋಜೆಯ ಯಶಸ್ಸಿನ ನಂತರ ಉಳಿದ ವಿದ್ಯುತ್ ಸಾಮರ್ಥ್ಯವನ್ನು ಬಳಸಿಕೊಂಡು 1905ರ ಆಗಸ್ಟ್ 5ರಂದು ಬೆಂಗಳೂರು ನಗರಕ್ಕೆ ವಿದ್ಯುತ್ ನೀಡಲಾಯಿತು. ಇದರಿಂದ ಬೆಂಗಳೂರು ಭಾರತದಲ್ಲೇ ವಿದ್ಯುತ್ ಬೀದಿ ದೀಪಗಳನ್ನು ಪಡೆದ ಮೊದಲ ನಗರಗಳಲ್ಲಿ ಒಂದಾಯಿತು.

ಬೆಂಗಳೂರಿನಲ್ಲಿ  ವಿದ್ಯುತ್  ಬೀದಿ ದೀಪಗಳು ಬರುವ ಮೊದಲು, ಬೀದಿಗಳ ಬದಿಯಲ್ಲಿ ಎತ್ತರದ ಕಂಬಗಳ ಮೇಲೆ ಸೀಮೆಎಣ್ಣೆ ದೀಪಗಳಿಂದ ಬೆಳಗಿಸಲಾಗುತ್ತಿತ್ತು. ಇವುಗಳನ್ನು ಸ್ವಚ್ಛಗೊಳಿಸಲು, ಎಣ್ಣೆ ತುಂಬಲು ಮತ್ತು ಬೆಳಗಿಸಲು ಮೂವರು ವ್ಯಕ್ತಿಗಳ ತಂಡವೇ ಇದ್ದು ಪ್ರತೀ ದಿನವೂ ಅವರೆಲ್ಲರೂ ತಮ್ಮ ತಮ್ಮ ಪಾಳಿಯಲ್ಲಿ ತಮಗೆ ಒಪ್ಪಿಸಿದ ಕೆಲಸವನ್ನು ಮಾಡುವ ಮೂಲಕ ಬೀದಿ ದೀಪಗಳನ್ನು ಬೆಳಗಿಸಲಾಗುತ್ತಿತ್ತು. ಶಿವನಸಮುದ್ರದಲ್ಲಿ ಉತ್ಪಾದಿಸಿದ ವಿದ್ಯುತ್ ಕೆಜಿಎಫ್ ಚಿನ್ನದ ಗಣಿಗಳಿಗೆ ಪೂರೈಸಿ ಹೆಚ್ಚುವರಿಯಾಗಿ ಉಳಿದ ವಿದ್ಯುತ್ತನ್ನು ಸದುಪಯೋಗಪಡಿಸಿಕೊಳ್ಳಲು, ಮೈಸೂರಿನ ದೂರದೃಷ್ಟಿಯುಳ್ಳ ದಿವಾನರಾಗಿದ್ದ ಶೇಷಾದ್ರಿ ಐಯ್ಯರ್ ಮತ್ತು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಆ ಹೆಚ್ಚುವರಿ ವಿದ್ಯುತ್ ಸಂಪರ್ಕವನ್ನು ಬೆಂಗಳೂರಿನ ಹೃದಯಭಾಗವನ್ನು ಬೆಳಗಿಸಲು ಯೋಜಿಸಿ, ಕೆ.ಆರ್. ಮಾರುಕಟ್ಟೆಯ ಬಳಿ ಸಬ್‌ಸ್ಟೇಷನ್ ಸ್ಥಾಪಸಿ, ಹಳೆಯ ದೀಪಗಳನ್ನು ಬದಲಿಸಿ ಹೊಸಾ ವಿದ್ಯುತ್ ಕಂಬಗಳನ್ನು ನೆಟ್ಟು ತಾಮ್ರದ ತಂತಿಗಳ ಮೂಲಕ ವಿದ್ಯುತ್ ಪ್ರಸರಿಸಲಾಯಿತು.

1905ರ ಆಗಸ್ಟ್ 5ರ ಸಂಜೆ 7:00 ಗಂಟೆಗೆ ಸರಿಯಾಗಿ ಕೇವಲ ಒಂದು ಸ್ವಿಚ್ ಒತ್ತುವ ಮೂಲಕ ಹಳೆಯ ಸಿದ್ದನಕಟ್ಟೆ ಪ್ರದೇಶದಲ್ಲಿ (ಇಂದಿನ ಕೆ.ಆರ್. ಮಾರುಕಟ್ಟೆ) 100ಕ್ಕೂ ಹೆಚ್ಚು ಬೀದಿ ದೀಪಗಳನ್ನು ಬೆಳಗಿಸಲಾಯಿತು. ಕೇವಲ ಒಂದು ಸ್ವಿಚ್ ಒತ್ತಿದ ತಕ್ಷಣ ಇಡೀ ಪ್ರದೇಶವು ವಿದ್ಯುತ್ ದೀಪಗಳಿಂದ ಝಗಮಗಿಸಿದ್ದನ್ನು ಕಂಡು ನಾಗರಿಕರು ವಿಸ್ಮಿತರಾಗಿದ್ದಲ್ಲದೇ, ಈ ಭವ್ಯವಾದ ದೃಶ್ಯವನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ಅನೇಕ ದಿನಗಳ ಕಾಲ ತಂಡೋಪ ತಂಡವಾಗಿ ಸಂಜೆ ಕೆ.ಆರ್. ಮಾರುಕಟ್ಟೆ ಪ್ರದೇಶಕ್ಕೆ ಜನರು ಬರುವ ಮೂಲಕ ಅದೊಂದು ಪ್ರವಾಸಿತಾಣವಾಗಿ ಮಾರ್ಪಟ್ಟಿತ್ತು. ಇದಾದ 10 ತಿಂಗಳುಗಳಲ್ಲೇ ಬೆಂಗಳೂರಿ ನಗರದಲ್ಲಿ 861 ವಿದ್ಯುತ್ ಬೀದಿ ದೀಪಗಳು ಮತ್ತು 1,639 ಮನೆಗಳಿಗೆ ವಿದ್ಯುತ್ ಸಂಪರ್ಕಗಳು ಲಭ್ಯವಾದವು. ಆ ಐತಿಹಾಸಿಕ ದಿನದಂದು ಅಳವಡಿಸಲಾಗಿದ್ದ 30 ಅಡಿ ಎತ್ತರದ, ಗಟ್ಟಿಮುಟ್ಟಾದ ಕಬ್ಬಿಣದ (wrought-iron) ಬೀದಿ ದೀಪದ ಕಂಬಗಳಲ್ಲಿ ಎರಡು ಕಂಬಗಳನ್ನು ಕಾರ್ಪೊರೇಷನ್ ವೃತ್ತದಲ್ಲಿರುವ ಬಿಬಿಎಂಪಿ (BBMP) ಮುಖ್ಯ ಕಚೇರಿಯಲ್ಲಿ ಇಂದಿಗೂ ಸಂರಕ್ಷಿಸಿಡಲಾಗಿದೆ.


1908ರ ಸೆಪ್ಟೆಂಬರ್ 26ರ ದಸರಾ ಹಬ್ಬದ ಸಂದರ್ಭದಲ್ಲಿ ವಿದ್ಯುತ್ ದೀಪಗಳಿದ ಝಗಮಗಿಸಿದ ಮೈಸೂರು

1908ರ ಸೆಪ್ಟೆಂಬರ್ 26ರಂದು ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಆವರು ಜಗನ್ಮೋಹನ ಅರಮನೆಯ ತಮ್ಮ ಸಿಂಹಾಸನ ಕೊಠಡಿಯಿಂದಲೇ ವಿದ್ಯುತ್ ಸಂಪರ್ಕವನ್ನು ಚಾಲನೆಗೊಳಿಸುವ ಮೂಲಕ ಮೈಸೂರಿನ ಅರಮನೆಗೂ ಸಹಾ ವಿದ್ಯುತ್ ಶಕ್ತಿಯನ್ನು ಅಳವಡಿಸುವ ಮೂಲಕ ಶಿವನಸಮುದ್ರ ಜಲವಿದ್ಯುತ್ ಯೋಜನೆಯಿಂದ ವಿದ್ಯುತ್ ಪಡೆದ ಮೂರನೇ ನಗರವಾಯಿತು.


ನನ್ನ ಬಾಲ್ಯದ ನೆನಪು

ಈ ಲೇಖನವನ್ನು ಬರೆಯಲು ನನಗೊಂದು ವಿಶೇಷವಾದ ಹೆಮ್ಮೆಯೂ ಇದೆ,  ಏಕೆಂದರೆ ನನ್ನ ತಾಯಿಯ ತವರೂರು KGFನ Champion Reef ಗಣಿಯ ಎದುರಿಗೇ ಇತ್ತು. ನಾನು ಹುಟ್ಟಿದ್ದೂ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿಯೇ.  ಚಿಕ್ಕಂದಿನಿಂದಲೂ ಅಜ್ಜಿಯ ಮನೆಗೆ ಹೋದಾಗಲೆಲ್ಲಾ ಅದೇ ಗಣಿಯೇ ನಮ್ಮೆಲ್ಲರ ಅಚ್ಚುಮೆಚ್ಚಿನ ಆಟದ ಸ್ಥಳವಾಗಿತ್ತು. ಗಣಿಯಿಂದ ಬರುತ್ತಿದ್ದ ಚುಕ್ ಬುಕ್ ಶಬ್ಧ ಮತ್ತು ಪ್ರತೀ ಪಾಳಿ ಮುಗಿದ ನಂತರ ಸೌರನ್ ಶಭ್ಧ ನನಗೆ ಕೌತಕವನ್ನುಂಟು ಮಾಡುತ್ತಿತ್ತು. ಸಮಯ ಸಿಕ್ಕಾಗಲೆಲ್ಲಾ ಸಮವಸ್ತ್ರ ಧರಿಸಿ ದೀಪವಿರುತ್ತಿದ್ದ ಹೆಲ್ಮೆಟ್ ಧರಿಸಿ ಕ್ರೇನ್ ಮಾದರಿಯ ಚಾಲಕರು ನಿರ್ವಹಿಸುತ್ತಿದ್ದ ಲಿಫ್ಟ್ ಮೂಲಕ ಗಣಿಯ ಒಳಗೆ ಇಳಿಯುತ್ತಿದ್ದ ಗಣಿ ಕಾರ್ಮಿಕರನ್ನು ನೋಡುವುದು ಅಲ್ಲಿ ಬಿದ್ದಿರುತ್ತಿದ್ದ ರಾಶಿ ರಾಶಿ ಕಪ್ಪನೆಯ ಕಲ್ಲುಗಳೊಡನೆ ಆಡುತ್ತಿದ್ದ ಸಮಯ ನೆನಪಾಯಿತು.

ಆಷ್ಟೇ ಅಲ್ಲದೇ.  80ರ ದಶಕದ ಕಡೆಯ ವರೆಗೂ ಅಲ್ಲಿನ ಗಣಿಗಳಲ್ಲಿ ಮತ್ತು ಗಣಿ ಕಾರ್ಮಿಕರು ಮತ್ತು ಬಿ.ಜೆ.ಎಮ್.ಲ್ ನಲ್ಲಿ ಕೆಲಸಮಾಡುತ್ತಿದ್ದವವರಿಗೆ ವಸತಿ ಗೃಹಗಳಲ್ಲಿ  ಇನ್ನೂ 25 ಹರ್ಟ್ಜ್ ವಿದ್ಯುತ್ ವ್ಯವಸ್ಥೆಯ ಬಗ್ಗೆ  ಕಣ್ಣಾರೆ ಕಂಡಿದ್ದೇನೆ. ಆ ಸಮಯದಲ್ಲಿ ಇಂದಿನ 50 Hz ಫ್ಯಾನ್, ಟಿವಿ, ಮಿಕ್ಸರ್‌ಗಳು ನೇರವಾಗಿ ಕೆಲಸ ಮಾಡುತ್ತಿರಲಿಲ್ಲ. ವಿಶೇಷ ಪರಿವರ್ತಕ ಬಳಸಿ ಬಳಸಬೇಕಾಗುತ್ತಿತ್ತು. ಆ ನೆನಪುಗಳು ಇಂದಿಗೂ ಮನಸ್ಸಿನಲ್ಲಿ ಹಸಿರಾಗಿವೆ.


ಇದು ಕೇವಲ ವಿದ್ಯುತ್ ಯೋಜನೆಯಲ್ಲ… ಭಾರತದ ಕೈಗಾರಿಕಾ ಕ್ರಾಂತಿಗೆ ನಾಂದಿ, 30 ಜೂನ್ 1902 – ಇತಿಹಾಸ ನಿರ್ಮಾಣವಾದ ದಿನ

ಶಿವನಸಮುದ್ರ ಜಲವಿದ್ಯುತ್ ಯೋಜೆ ಕೇವಲ ಒಂದು ವಿದ್ಯುತ್ ಸ್ಥಾವರವಲ್ಲ.

ಇದು ಭಾರತದ

  • ಜಲವಿದ್ಯುತ್ ಅಭಿವೃದ್ಧಿ,
  • ಕೈಗಾರಿಕಾ ವಿದ್ಯುದ್ದೀಕರಣ,
  • ದೀರ್ಘ ದೂರದ ವಿದ್ಯುತ್ ಪ್ರಸರಣ,
  • ಆಧುನಿಕ ಎಂಜಿನಿಯರಿಂಗ್

ಇವೆಲ್ಲಕ್ಕೂ ಅಡಿಪಾಯ ಹಾಕಿದ ಐತಿಹಾಸಿಕ ಸಾಧನೆಯಾಗಿದೆ. ಇದು  ಭಾರತೀಯ ಇಂಜಿನಿಯರಿಂಗ್ ಸಾಮರ್ಥ್ಯದ ಮೊದಲ ವಿಶ್ವದರ್ಜೆಯ ಸಾಧನೆ. ಇದು ಕರ್ನಾಟಕದ ಹೆಮ್ಮೆ. ಇಂದು ನಾವು ಹೆಮ್ಮೆಯಿಂದ ಐಟಿ ರಾಜಧಾನಿ ಎಂದು ಕರೆಯುವ ಬೆಂಗಳೂರು, ವಿದ್ಯುತ್ ಬೆಳಕನ್ನು ಕಂಡ ಮೊದಲ ನಗರಗಳಲ್ಲಿ ಒಂದಾಗಲು ಕಾರಣವಾದ ಕಥೆಯೂ ಇದೇ.

ಕಾವೇರಿ ಹರಿಸಿದ ಆ ವಿದ್ಯುತ್ ಕೇವಲ ಕೆ.ಜಿ.ಎಫ್ ಅನ್ನು ಮಾತ್ರ ಬೆಳಗಿಸಲಿಲ್ಲಭಾರತದ ಕೈಗಾರಿಕಾ ಭವಿಷ್ಯವನ್ನೇ ಬೆಳಗಿಸಿತು. ಇಂದಿಗೂ ಶಿವನಸಮುದ್ರದ ಆ ವಿದ್ಯುತ್ ಸ್ಥಾವರ ಮತ್ತು ಕೆ.ಜಿ.ಎಫ್‌ಗೆ ತೆರಳಿದ 147 ಕಿಲೋಮೀಟರ್ ಪ್ರಸರಣ ಮಾರ್ಗವು, ಮೈಸೂರು ಸಂಸ್ಥಾನದ ದೂರದೃಷ್ಟಿ, ಮೇಜರ್ ಜೋಲಿ ಡಿ ಲಾಟ್‌ಬಿನಿಯರ್ ಅವರ ಎಂಜಿನಿಯರಿಂಗ್ ಪ್ರತಿಭೆ ಹಾಗೂ ಸಾವಿರಾರು ಕಾರ್ಮಿಕರ ಪರಿಶ್ರಮಕ್ಕೆ ಶಾಶ್ವತ ಸಾಕ್ಷಿಯಾಗಿ ನಿಂತಿದೆ ಎಂದರೂ ತಪ್ಪಾಗದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

 

 

Leave a Reply