“ಮಕ್ಕಳು ನಮ್ಮವರೇ… ಆದರೆ ನಮ್ಮ ಸ್ವತ್ತು ಅಲ್ಲ!”
ಭಾರತೀಯ ಕುಟುಂಬ ವ್ಯವಸ್ಥೆಯ ಬಗ್ಗೆ ಮಾತನಾಡುವಾಗ ಮೊದಲು ನೆನಪಾಗುವುದು ಪ್ರೀತಿ, ಮಮತೆ, ತ್ಯಾಗ ಮತ್ತು ಬಾಂಧವ್ಯ. ನಮ್ಮ ಸಮಾಜದಲ್ಲಿ ಮಕ್ಕಳ ಮೇಲಿನ ಪ್ರೀತಿ ಎಷ್ಟು ಆಳವಾಗಿದೆಯೆಂದರೆ, ಮಗು ಹುಟ್ಟಿದ ಕ್ಷಣದಿಂದಲೇ ಅದರ ಭವಿಷ್ಯವೇ ಪೋಷಕರ ಬದುಕಿನ ಗುರಿಯಾಗಿಬಿಡುತ್ತದೆ. ಹೆಣ್ಣು ಮಕ್ಕಳಿಗೆ 22–23 ವರ್ಷ, ಗಂಡು ಮಕ್ಕಳಿಗೆ 26–27 ವರ್ಷ ಆಗುತ್ತಿದ್ದಂತೆ, “ಮದುವೆ ಯಾವಾಗ?” ಎಂಬ ಪ್ರಶ್ನೆ ಆರಂಭವಾಗುತ್ತದೆ. ಮದುವೆಯಾದ ಕೆಲವೇ ತಿಂಗಳುಗಳಲ್ಲಿ, “ಏನಾದರೂ ವಿಶೇಷವಿದೆಯೇ?” ಎಂಬ ಮತ್ತೊಂದು ಪ್ರಶ್ನೆ. ಇದು ಕೇವಲ ಕುತೂಹಲವಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬದ ಮುಂದುವರಿಕೆ, ವಂಶಪಾರಂಪರ್ಯ, ವೃದ್ಧಾಪ್ಯದ ಆಸರೆ, ಅಂತ್ಯಸಂಸ್ಕಾರದ ಜವಾಬ್ದಾರಿ ಇವೆಲ್ಲವೂ ಮಕ್ಕಳೊಂದಿಗೆ ಬೆಸೆದುಕೊಂಡಿರುವುದರಿಂದ ಈ ಭಾವನೆ ಸಹಜವಾಗಿದೆ. ಆದರೆ ಪ್ರಶ್ನೆ ಏನೆಂದರೆ… ಈ ಪ್ರೀತಿ ಯಾವಾಗ ಮೋಹವಾಗುತ್ತದೆ?
ಮಕ್ಕಳಿಗಾಗಿ ಬದುಕುವ ಪೋಷಕರು
ನಮ್ಮ ದೇಶದಲ್ಲಿ ಅನೇಕ ಪೋಷಕರು ತಮ್ಮ ಜೀವನದ ಅತ್ಯುತ್ತಮ ವರ್ಷಗಳನ್ನು ಮಕ್ಕಳಿಗಾಗಿಯೇ ಮೀಸಲಿಡುತ್ತಾರೆ.
- ಉತ್ತಮ ಶಾಲೆ
- ಉತ್ತಮ ಕಾಲೇಜು
- ಉತ್ತಮ ಉದ್ಯೋಗ
- ಉತ್ತಮ ಭವಿಷ್ಯ
ಇವುಗಳಿಗಾಗಿ ತಮ್ಮ ಕನಸುಗಳನ್ನು ತ್ಯಜಿಸುತ್ತಾರೆ. ಸಾಲ ಮಾಡುತ್ತಾರೆ. ಹಗಲು-ರಾತ್ರಿ ದುಡಿಯುತ್ತಾರೆ. ತಮ್ಮ ಆಸೆಗಳನ್ನು ಮುಂದೂಡುತ್ತಾರೆ. ಆದರೆ ಇದೇ ಪ್ರೀತಿಯು ಅನೇಕ ಬಾರಿ ಅತಿಯಾದ ಅವಲಂಬನೆಯಾಗಿ ಮಾರ್ಪಡುತ್ತದೆ.
ಪಾಶ್ಚಾತ್ಯ ಸಂಸ್ಕೃತಿ ವಿರುದ್ಧ ಭಾರತೀಯ ಸಂಸ್ಕೃತಿ
ಒಂದು ಕಾಲದಲ್ಲಿ ನಾವು ಪಾಶ್ಚಾತ್ಯ ದೇಶಗಳನ್ನು ಟೀಕಿಸುತ್ತಿದ್ದೆವು. ಅವರು ಮಕ್ಕಳನ್ನು 18 ವರ್ಷವಾದ ಕೂಡಲೇ ಮನೆಯಿಂದ ಹೊರಗೆ ಕಳುಹಿಸುತ್ತಾರೆ. ಅವರಿಗೆ ಕುಟುಂಬದ ಮೌಲ್ಯವೇ ಇಲ್ಲ.ಎಂದು ಹೇಳುತ್ತಿದ್ದೆವು. ಆದರೆ ಅವರ ಉದ್ದೇಶ ಮಕ್ಕಳನ್ನು ದೂರ ಮಾಡುವುದು ಅಲ್ಲ.
ಸ್ವಾವಲಂಬಿಗಳನ್ನಾಗಿ ಮಾಡುವುದು. ಅವರು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಕಲಿಸುವುದು—
- ತಮ್ಮ ಬಟ್ಟೆ ತಾವೇ ತೊಳೆಯುವುದು
- ತಮ್ಮ ಖರ್ಚನ್ನು ತಾವೇ ನಿರ್ವಹಿಸುವುದು
- ಕೆಲಸ ಮಾಡುವುದು
- ತಪ್ಪುಗಳಿಂದ ಕಲಿಯುವುದು
- ಜೀವನದ ಹೊಣೆಗಾರಿಕೆಯನ್ನು ಸ್ವೀಕರಿಸುವುದು
ಇವೆಲ್ಲವೂ ಜೀವನ ಕೌಶಲ್ಯಗಳು.
ಇಂದಿನ ಭಾರತದ ವಾಸ್ತವ
ವಿಚಿತ್ರವೆಂದರೆ, ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಕುಟುಂಬದ ಬಾಂಧವ್ಯ ಮತ್ತೆ ಬಲವಾಗುತ್ತಿರುವಾಗ, ಭಾರತದಲ್ಲಿ ಅನೇಕ ಯುವಕರು 18 ವರ್ಷ ದಾಟುತ್ತಿದ್ದಂತೆ “ನನ್ನ ಜೀವನ… ನನ್ನ ನಿರ್ಧಾರ…” ಎಂಬ ಮನೋಭಾವವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದು ತಪ್ಪಲ್ಲ. ಆದರೆ ಸಮಸ್ಯೆ ಏನೆಂದರೆ ಸ್ವಾತಂತ್ರ್ಯ ಬೇಕು… ಆದರೆ ಜವಾಬ್ದಾರಿ ಬೇಡ. ಅಪ್ಪಾ ಅಮ್ಮಂದಿರು ಮಾಡಿಟ್ಟ ಆಸ್ತಿ ಬೇಕು ಸಂಬಂಧ ಬೇಡ ಎನ್ನುವ ಮನಸ್ಥಿತಿ
ಪೋಷಕರ ತ್ಯಾಗಕ್ಕೆ ಬೆಲೆ ಎಲ್ಲಿದೆ?
ಒಂಬತ್ತು ತಿಂಗಳು ಹೊತ್ತು, ಹೆತ್ತು, ರಾತ್ರಿ-ಹಗಲು ನಿದ್ರೆ ಬಿಟ್ಟು ಸಾಕಿ… ತಮ್ಮ ಜೀವನವನ್ನೇ ತ್ಯಾಗ ಮಾಡಿ… ಉತ್ತಮ ಶಿಕ್ಷಣ ನೀಡಿ… ಮಕ್ಕಳ ಕನಸುಗಳನ್ನು ನನಸಾಗಿಸಿದ ನಂತರ, ಅನೇಕ ಪೋಷಕರಿಗೆ ಸಿಗುವುದು… ಒಂದು ವೀಡಿಯೋ ಕಾಲ್. ಅಥವಾ… ತಿಂಗಳಿಗೆ ಒಮ್ಮೆ ಫೋನ್. ಇಂದಿನ ಬಹುತೇಕ ಮಕ್ಕಳು ತಮ್ಮ ಪೋಷಕರ ಈ ತ್ಯಾಗಕ್ಕೆ ಕೊಂಚವೂ ಬೆಲೆ ಕೊಡದೇ, ತಮ್ಮ ಉಜ್ವಲ ಭವಿಷ್ಯ ಮತ್ತು ಐಶಾರಾಮಿ ಜೀವನಕ್ಕಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ಹಾರಿ ನಂತರ ಅಲ್ಲಿಯೇ ಕೆಲಸವನ್ನು ಗಿಟ್ಟಿಸಿಕೊಂಡು ಎರಡು ವರ್ಷಕ್ಕೋ ಇಲ್ಲವೇ ನಾಲ್ಕು ವರ್ಷಕ್ಕೂ ಒಮ್ಮೆ ಎರಡು ವಾರಗಳ ಕಾಲ ಭಾರತಕ್ಕೆ ಬಂದರೂ, ಬರುವ ಮತ್ತು ಹೋಗುವ ದಿನ ಮಾತ್ರ ಮನೆಯಲ್ಲಿ ಉಳಿದು ಉಳಿದ ದಿನಗಳಲ್ಲಿ ಆ ಯಾತ್ರೆ, ಈ ಯಾತ್ರೆ ಎಂದು ಕಳೆಯುವುದಾದರೆ ಯಾವ ಪುರುಷಾರ್ಥಕ್ಕಾಗಿ ಅಷ್ಟೋಂದು ಹಣವನ್ನು ಖರ್ಚು ಮಾಡಿ ಬರುತ್ತಾರೋ ಎಂದೆಸುತ್ತದೆ.
ವಿದೇಶದಲ್ಲಿ ಮಕ್ಕಳು… ಇಲ್ಲಿ ಖಾಲಿ ಮನೆ
ಇಂದು ಸಾವಿರಾರು ಭಾರತೀಯ ಕುಟುಂಬಗಳ ಕಥೆ ಇದೇ. ಆರಂಭದಲ್ಲಿ… ಪ್ರತಿದಿನ ಕರೆ. ನಂತರ… ವಾರಕ್ಕೊಮ್ಮೆ. ನಂತರ… ತಿಂಗಳಿಗೆ ಒಮ್ಮೆ. ಕೊನೆಗೆ… ಹಬ್ಬದ ಶುಭಾಶಯದ ಸಂದೇಶ.
ಅದೆಷ್ಟೋ ಮನೆಗಳಲ್ಲಿ ತಂದೆ ತಾಯಿ ಸತ್ತಾಗಲೂ ತಂದೆ ತಾಯಿಯರ ಶ್ರಾದ್ಧ ಕರ್ಮಗಳನ್ನು ಬಿಡಿ ಅಂತಿಮ ದರ್ಶನಕ್ಕೂ ಬರಲಾಗದಂತಹ ಬಿಡುವಿಲ್ಲದ ಕೆಲಸ ಕಾರ್ಯಗಳು. ಇಂತಹ ಮಕ್ಕಳು ಮತ್ತು ಪೋಷಕರ ಅನುಕೂಲಕ್ಕಾಗಿಯೇ online ಮೂಲಕ ಹಣ ಕೊಟ್ಟಲ್ಲಿ, ಅಂತ್ಯ ಕರ್ಮದಿಂದ ಹಿಡಿದು ಶ್ರಾದ್ಧಕಾರ್ಯಗಳನ್ನೂ ಪೂರೈಸಿ ಎಲ್ಲವನ್ನೂ online Live ಮೂಲಕ ಮಕ್ಕಳು ಮೊಮ್ಮಕ್ಕಳು ಮತ್ತು ಬಂಧು ಬಾಂಧವರಿಗೆ ತೋರಿಸಿ, ಕಡೆಗೆ ಪ್ರಸಾದವನ್ನು ಪಾರ್ಸಲ್ ಮಾಡುವ ಏಜೆನ್ಸಿಗಳೂ ನಾಯಿಕೊಡೆಯಂತೆ ಹುಟ್ಟಿಕೊಂಡಿರುವುದು ವಿಪರ್ಯಾಸವಾಗಿದ್ದು, ಇಂತಹ ಪುರುಷಾರ್ಥಕ್ಕೆ ಮಕ್ಕಳೇಕೆ ಬೇಕು ಎಂದೆನಿಸಿದರೂ ತಪ್ಪಲ್ಲಾ.
ಒಂದು ನೈಜ ಘಟನೆ
ಇತ್ತೀಚೆಗೆ ಒಂದು ಸಮಾರಂಭದಲ್ಲಿ ಪರಿಚಿತರೊಬ್ಬರನ್ನು ಭೇಟಿಯಾದೆ.
“ಹೇಗಿದ್ದೀರಿ?” ಎಂದು ಕೇಳಿದಾಗ, ಅವರು ನಗುತ್ತಲೇ ಹೇಳಿದರು… “ಇಬ್ಬರು ಗಂಡು ಮಕ್ಕಳು… ಒಬ್ಬ ಮಗಳು… ಎಲ್ಲರೂ ಕೆನಡಾದಲ್ಲಿದ್ದಾರೆ. ಈಗ ನಾವೂ ಅಲ್ಲಿಗೆ ಹೋಗುತ್ತಿದ್ದೇವೆ.”
“ಯಾಕೆ?” ಎಂದು ಕೇಳಿದೆ. ಅವರು ಕೊಟ್ಟ ಉತ್ತರ ಮನಸ್ಸಿಗೆ ತಟ್ಟಿತು. “ನನಗೆ ಈಗ 70 ವರ್ಷ. ನಾನು ಇಲ್ಲಿ ಸತ್ತರೆ, ಮಕ್ಕಳು ಕೆನಡಾದಿಂದ ಬರಲು ಮೂರು ದಿನ ಬೇಕು. ನಾನು ಕಾಯುವ ಹೆಣವಾಗಬಾರದು. ಅದಕ್ಕಾಗಿಯೇ ಅವರ ಬಳಿ ಹೋಗುತ್ತಿದ್ದೇನೆ.”
ಆ ಮಾತು ಕೇಳಿದಾಗ… ಜೀವನದ ದೊಡ್ಡ ವ್ಯಂಗ್ಯ ಅರಿವಾಯಿತು. ಇರುವಾಗ ಯಾವುದನ್ನೂ ಅನುಭವಿಸದೇ ಚಿಂತೆಯಿಂದಲೇ ಚೆತೆಯನ್ನು ಏರುತ್ತೇನೆ ಎನ್ನುವಂತಹ ಮನಸ್ಥಿತಿಯವರಿಗೆ ಏನು ತಾನೇ ಹೇಳಲು ಸಾಧ್ಯ? ಎಂದು ಸುಮ್ಮನಾಗಿದ್ದೆ.
ಪ್ರಕೃತಿಯೂ ಇದೇ ಪಾಠ ಹೇಳುತ್ತದೆ
ಈ ಪ್ರಕ್ರಿಯೇ ಕೇವಲ ಪಾಶ್ಚಿಮಾತ್ಯ ಸಂಸ್ಕತಿಯಲ್ಲದೇ, ಪ್ರಕೃತಿಯಲ್ಲೂ ಇದೇ ನಿಯಮವಿದ್ದು, ಕವಿ ಬಿ.ಆರ್. ಲಕ್ಷ್ಮಣ್ ರಾವ್ ಅವರ ಪ್ರಸಿದ್ಧ ಗೀತೆಯಲ್ಲಿ ಮಗು ತಾಯಿಯನ್ನು ಕೇಳುತ್ತದೆ—
“ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ?”
ಇದು ಕೇವಲ ಕವಿತೆಯಲ್ಲ. ಜೀವನದ ತತ್ವ. ಮಕ್ಕಳು ಹಾರಬೇಕು. ಸ್ವತಂತ್ರರಾಗಬೇಕು. ತಪ್ಪು ಮಾಡಬೇಕು. ಕಲಿಯಬೇಕು. ಬೆಳೆಯಬೇಕು.
” ಇಂಧನ ತೀರಲು, ಬಂದೇ ಬರುವೆನು ಮತ್ತೆ ನಿನ್ನ ತೊಡೆಗೆ, ಮೂರ್ತ ಪ್ರೇಮದೆಡೆಗೆ”
ಇಂಧನ ತೀರಲು, ಬಂದೇ ಬರುವೆನು ಎಂಬುದಂತೂ ಇಂದಿನ ಜೀವನದ ಕಠು ಸತ್ಯವಾಗಿದ್ದು, ಅಪ್ಪಾ ಅಮ್ಮಾಂದಿರ ಕೈಕಾಲುಗಳು ಕುಸಿದು ವಯಸ್ಸಾದಾಗ ಅವರನ್ನು ನೋಡಿಕೊಳ್ಳಲು ಮಕ್ಕಳು ಬರುವುದಿಲ್ಲಾ. ಅವರನ್ನು ಯಾವುದಾದರೂ ವೃದ್ಧಾಶ್ರಮಕ್ಕೋ ಇಲ್ಲವೋ ಅನಾಥಾಶ್ರಮಕ್ಕೆ ಸೇರಿಸಲು ಮುಂದಾಗುವವರಿಗೆ ಅಪ್ಪಾ ಅಮ್ಮಾ ಪೈಸೆ ಪೈಸೆ ಕೂಡಿಟ್ಟು ಮಾಡಿದ ಆಸ್ತಿಯಲ್ಲಿ ಪಾಲು ಮಾತ್ರಾ ಬೇಕು ಎನ್ನುವುದು ಅತೀವ ಸಂಕಟದ ವಿಷಯವಾಗಿದೆ.
ಪೋಷಕರ ದೊಡ್ಡ ತಪ್ಪು
ಬಹುತೇಕ ಭಾರತೀಯ ಪೋಷಕರು ಮಾಡುವ ದೊಡ್ಡ ತಪ್ಪು… ತಮ್ಮ ಜೀವನವನ್ನೇ ಮಕ್ಕಳಲ್ಲಿ ಹೂಡಿಕೆ ಮಾಡುವುದು. ಅವರಿಗೆ…
- ತಮ್ಮದೇ ಹವ್ಯಾಸವಿಲ್ಲ.
- ತಮ್ಮದೇ ಸ್ನೇಹ ಬಳಗವಿಲ್ಲ.
- ತಮ್ಮದೇ ಕನಸುಗಳಿಲ್ಲ.
ಮಕ್ಕಳೇ ಅವರ ಜಗತ್ತು.
ಆದರೆ…
ಮಕ್ಕಳು ತಮ್ಮ ಬದುಕು ಕಟ್ಟಿಕೊಳ್ಳಲು ಹೊರಟ ನಂತರ,ಅವರ ಬದುಕು ಖಾಲಿಯಾಗುತ್ತದೆ.
ಮಕ್ಕಳಿಗೂ ಸ್ವಾತಂತ್ರ್ಯ ಬೇಕು
ಇಂದಿನ ಮಕ್ಕಳು ಹೇಳುವುದು…
“ನಮ್ಮನ್ನು ನಂಬಿ.”
ಅದು ಸರಿಯೇ. ಆದರೆ… ಸ್ವಾತಂತ್ರ್ಯದ ಜೊತೆಗೆ ಹೊಣೆಗಾರಿಕೆಯೂ ಬರಬೇಕು.
ಪೋಷಕರಿಗೂ ಹೊಸ ಜೀವನ ಬೇಕು
ಮಕ್ಕಳಿಗಾಗಿ ಬದುಕುವುದರ ಜೊತೆಗೆ… ಪೋಷಕರೂ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು.
- ಓದು
- ಪ್ರವಾಸ
- ಸ್ನೇಹಿತರು
- ಸಮಾಜ ಸೇವೆ
- ಆರೋಗ್ಯ
- ಹವ್ಯಾಸ
ಇವೆಲ್ಲವೂ ಬದುಕಿನ ಭಾಗವಾಗಬೇಕು.
ಪ್ರೀತಿ ಇರಲಿ… ಮೋಹ ಬೇಡ
ಪ್ರೀತಿ ಬೆಳೆಸುತ್ತದೆ. ಮೋಹ ಬಂಧಿಸುತ್ತದೆ. ಪ್ರೀತಿ ಆತ್ಮವಿಶ್ವಾಸ ಕೊಡುತ್ತದೆ. ಮೋಹ ಭಯ ಹುಟ್ಟಿಸುತ್ತದೆ. ಪ್ರೀತಿ ಸ್ವಾತಂತ್ರ್ಯ ನೀಡುತ್ತದೆ. ಮೋಹ ನಿಯಂತ್ರಿಸುತ್ತದೆ.
ಮಕ್ಕಳನ್ನು ಬೆಳೆಸುವುದು ಎಂದರೆ…
ಅವರನ್ನು ನಮ್ಮ ಬಳಿ ಇಟ್ಟುಕೊಳ್ಳುವುದು ಅಲ್ಲ. ನಮ್ಮಿಲ್ಲದೆಯೂ ಬದುಕುವಷ್ಟು ಶಕ್ತಿಯನ್ನು ಕೊಡುವುದು.
ಸಮಾರೋಪ
ಮಕ್ಕಳು ನಮ್ಮ ಮೂಲಕ ಈ ಜಗತ್ತಿಗೆ ಬಂದವರು. ಅವರು ನಮ್ಮ ಆಸ್ತಿ ಅಲ್ಲ. ಅವರಿಗೆ ಪ್ರೀತಿ ನೀಡಿ. ಸಂಸ್ಕಾರ ನೀಡಿ. ಮೌಲ್ಯಗಳನ್ನು ಕಲಿಸಿ. ಸ್ವಾವಲಂಬನೆ ಕಲಿಸಿ.
ಆದರೆ… ನಿಮ್ಮ ಸಂಪೂರ್ಣ ಬದುಕನ್ನೇ ಅವರಲ್ಲಿ ಹೂಡಿಕೆ ಮಾಡಬೇಡಿ. ಏಕೆಂದರೆ ಜೀವನದ ಒಂದು ಹಂತದಲ್ಲಿ ಅವರು ತಮ್ಮ ದಾರಿಯಲ್ಲಿ ನಡೆಯಲೇಬೇಕು. ಅದನ್ನು ತಡೆಯುವುದು ಪ್ರೀತಿ ಅಲ್ಲ… ಮೋಹ.
“ಮಕ್ಕಳನ್ನು ಹಿಡಿದುಕೊಳ್ಳಲು ಪ್ರಯತ್ನಿಸಬೇಡಿ… ಅವರು ಮರಳಿ ಬರುವಂತಹ ಮನೆ ಮತ್ತು ನೆನಪುಗಳನ್ನು ಕಟ್ಟಿಕೊಡಿ.”
ಕೊನೆಯ ಮಾತು
ಇವೆಲ್ಲವೂ ಓದುವುದಕ್ಕೆ ಮತ್ತು ಕೇಳುವುದಕ್ಕೆ ಹಿತ ಎನಿಸುತ್ತದೆ. ಅದೇ ನಿಜ ಜೀವನದಲ್ಲಿ ಉಪೇಂದ್ರ ಎ ಸಿನಿಮಾದಲ್ಲಿ ಹೇಳುವಂತೆ ಎಲ್ಲವೂ ಪುಸ್ತಕದ ಬದ್ನೇಕಾಯಿ ಎನಿಸುತ್ತದೆ. ಎಲ್ಲರೂ ಇದೇ ರೀತಿಯಲ್ಲೇ ವರ್ತಿಸುವಂತಾದರೆ, ಒಂದು ಕಾಲದಲ್ಲಿ ಭಾರತೀಯ ಕುಟುಂಬ ವ್ಯವಸ್ಥೆ ವಿಶ್ವದಲ್ಲೇ ಅತ್ಯಂತ ಬಲಿಷ್ಠ ಕುಟುಂಬ ವ್ಯವಸ್ಥೆ ಎಂದು ಹೇಳಲಾಗುತ್ತಿತ್ತು. ಇಲ್ಲಿ ಮಕ್ಕಳು ಕೇವಲ ತಂದೆ-ತಾಯಿಯವರಷ್ಟೇ ಅಲ್ಲ, ಇಡೀ ಕುಟುಂಬದ ಆಸ್ತಿ ಎಂಬ ಭಾವನೆ ಇತ್ತು. ಆದರೆ ಇಂದು ಅವೆಲ್ಲವೂ ಬದಲಾಗಿ ಹೋಗಿ, ಭಾರತೀಯ ಕುಟುಂಬ ವ್ಯವಸ್ಥೆಯಾದ ಮಮತೆ ಕರುಣೆ ಎಲ್ಲಕ್ಕೂ ಎಳ್ಳು ನೀರು ಬಿಟ್ಟ ಹಾಗೆ ಆಗುತ್ತದೆಯಲ್ಲವೇ? ಇದಕ್ಕೆ ಪರಿಹಾರ ಏನು ಎಂದು ಯಾರಾದರೂ ಅನುಭವಸ್ಥರು ತಿಳಿಸಲು ಸಾಧ್ಯವೇ?
ಏನಂತೀರೀ?
ನಿಮ್ಮವನೇ ✍️ ಉಮಾಸುತ