ಭಾರತದ ಯುವಶಕ್ತಿಗೆ ಸ್ಫೂರ್ತಿಯ ಕೇಂದ್ರವಾಗಲಿರುವ ಮೈಸೂರಿನ ಹೊಸ ಹೆಗ್ಗುರುತು
“ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲಬೇಡಿ!”
ಸ್ವಾಮಿ ವಿವೇಕಾನಂದರ ಈ ಅಮರ ಸಂದೇಶ ಕಳೆದ 130ಕ್ಕೂ ಹೆಚ್ಚು ವರ್ಷಗಳಿಂದ ಕೋಟ್ಯಂತರ ಯುವಕರಿಗೆ ಸ್ಪೂರ್ತಿಯ ಮೂಲವಾಗಿದೆ. ಭಾರತದ ಆತ್ಮವಿಶ್ವಾಸವನ್ನು ಜಗತ್ತಿನ ಮುಂದೆ ಸಾರಿದ ಈ ಮಹಾನ್ ಸಂನ್ಯಾಸಿಯ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಜೀವಂತವಾಗಿ ತಲುಪಿಸುವ ಉದ್ದೇಶದಿಂದ ಮೈಸೂರಿನಲ್ಲಿ ನಿರ್ಮಾಣಗೊಂಡಿರುವ ಸ್ವಾಮಿ ವಿವೇಕಾನಂದ ಸ್ಮಾರಕ ಮತ್ತು ಸಾಂಸ್ಕೃತಿಕ ಯುವ ಕೇಂದ್ರ’ವನ್ನು 2026ರ ಆಗಸ್ಟ್ 1ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಸುಮಾರು ₹45 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಭವ್ಯ ಸ್ಮಾರಕವು ಕೇವಲ ಒಂದು ಕಟ್ಟಡವಲ್ಲ. ಇದು ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ, ಯುವಶಕ್ತಿ, ವ್ಯಕ್ತಿತ್ವ ವಿಕಾಸ ಹಾಗೂ ರಾಷ್ಟ್ರಚಿಂತನೆಯ ಜೀವಂತ ಕೇಂದ್ರವಾಗಿ ರೂಪುಗೊಂಡಿದೆ.
ಮೈಸೂರಿನಲ್ಲೇ ಈ ಸ್ಮಾರಕ ಏಕೆ ?
ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ಸನಾತನ ಧರ್ಮದ ಕೀರ್ತಿಯನ್ನು ಜಗತ್ತಿಗೆ ಸಾರುವ ಮೊದಲು ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ದೇಶಪರ್ಯಟನೆ ನಡೆಸುತ್ತಿದ್ದ, ಸಂದರ್ಭದಲ್ಲಿ 1892ರ ನವೆಂಬರ್‌ನಲ್ಲಿ ಅವರು ಮೈಸೂರಿಗೆ ಆಗಮಿಸಿ ಸುಮಾರು ಮೂರು ವಾರಗಳ ಕಾಲ ಇಲ್ಲಿ ತಂಗಿದ್ದರು. ಅವರು ತಂಗಿದ್ದ ಸ್ಥಳವೇ ಇಂದಿನ ದೇವರಾಜ ಮೊಹಲ್ಲಾದ ನಾರಾಯಣ ಶಾಸ್ತ್ರಿ ರಸ್ತೆಯ ನಿರಂಜನ ಮಠದ ಪ್ರದೇಶ. ಅಲ್ಲೇ ಹತ್ತಿರಲ್ಲೇ ಇದ್ದ ಸದ್ವಿದ್ಯಾ ಪಾಠಶಾಲೆಯಲ್ಲಿ ಸಾರ್ವಜನಿಕರಿಗೆ ಉಪನ್ಯಾಸಗಳನ್ನು ಸಹ ನೀಡಿದ್ದರು ಈ ಐತಿಹಾಸಿಕ ಸ್ಮರಣೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಇದೇ ಪ್ರದೇಶದಲ್ಲಿ ಇಂದು ಭವ್ಯ ವಿವೇಕ ಸ್ಮಾರಕ ನಿರ್ಮಾಣಗೊಂಡಿದೆ.
ಮೈಸೂರು ಮಹಾರಾಜರ ಬೆಂಬಲವೇ ಚಿಕಾಗೋ ಪ್ರವಾಸಕ್ಕೆ ಶಕ್ತಿ
ಮೈಸೂರಿನಲ್ಲಿ ತಂಗಿದ್ದ ವೇಳೆ ಸ್ವಾಮಿ ವಿವೇಕಾನಂದರು ಅಂದಿನ ಮೈಸೂರು ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರ್ X ಹಾಗೂ ಆಗ ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್, ಅರಮನೆಯ ಪಂಡಿತರು, ಆಸ್ಟ್ರಿಯನ್ ಸಂಗೀತಗಾರ ಮತ್ತಿತರ ಪ್ರತಿಷ್ಠಿತ ವ್ಯಕ್ತಿಗಳನ್ನು ಅವರನ್ನು ಭೇಟಿಯಾಗಿ ವೇದಾಂತ, ಭಾರತದ ಭವಿಷ್ಯ, ಶಿಕ್ಷಣ, ಧರ್ಮ ಹಾಗೂ ಸಮಾಜದ ಕುರಿತು ದೀರ್ಘ ಚರ್ಚೆ ನಡೆಸಿದರು. ಸ್ವಾಮೀಜಿಯವರ ಅಸಾಮಾನ್ಯ ಜ್ಞಾನ, ವ್ಯಕ್ತಿತ್ವ ಮತ್ತು ರಾಷ್ಟ್ರದ ಕುರಿತ ದೂರದೃಷ್ಟಿಯಿಂದ ಪ್ರಭಾವಿತರಾದ ಮಹಾರಾಜರು ಅವರಿಗೆ ಅಪಾರ ಗೌರವ ಸಲ್ಲಿಸಿದರು.
ಅಷ್ಟೇ ಅಲ್ಲದೇ, 1893ರಲ್ಲಿ ಅಮೆರಿಕದ ಚಿಕಾಗೋದಲ್ಲಿ ನಡೆಯಲಿದ್ದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಮೈಸೂರು ಸಂಸ್ಥಾನದಿಂದ ದೊರೆತ ಪ್ರೋತ್ಸಾಹ ಮತ್ತು ಆರ್ಥಿಕ ಬೆಂಬಲವು ಸ್ವಾಮಿ ವಿವೇಕಾನಂದರ ಜೀವನದಲ್ಲಿ ಮಹತ್ವದ ತಿರುವಾಗಿ ಪರಿಣಮಿಸಿತು.
ಮಹಾರಾಜರು ಧ್ವನಿಯನ್ನು ನೆನಪಾಗಿ ಉಳಿಸಿಕೊಂಡ ಅಪರೂಪದ ಪ್ರಸಂಗ
ಸ್ವಾಮಿ ವಿವೇಕಾನಂದರು ಮತ್ತು ಮೈಸೂರು ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರ್ X ಅವರ ಭೇಟಿ ಕೇವಲ ಔಪಚಾರಿಕವಾಗಿರಲಿಲ್ಲ. ಕೇವಲ ಒಂದೆರಡು ದಿನಗಳ ಆತ್ಮೀಯ ಒಡನಾಟವೇ ಅವರಿಬ್ಬರ ನಡುವೆ ಅಪೂರ್ವವಾದ ಗುರು-ಶಿಷ್ಯರ ಬಾಂಧವ್ಯವನ್ನು ಬೆಳೆಸಿತ್ತು. ಸ್ವಾಮೀಜಿಯವರ ಅಪಾರ ಪಾಂಡಿತ್ಯ, ರಾಷ್ಟ್ರದ ಕುರಿತ ದೂರದೃಷ್ಟಿ, ಆಧ್ಯಾತ್ಮಿಕ ಚಿಂತನೆ ಮತ್ತು ಅದ್ಭುತ ವ್ಯಕ್ತಿತ್ವವು ಮಹಾರಾಜರ ಮನಸ್ಸಿನ ಮೇಲೆ ಅಳಿಸಲಾಗದ ಛಾಪು ಮೂಡಿಸಿತ್ತು.
ಸ್ವಾಮಿ ವಿವೇಕಾನಂದರು ಮೈಸೂರಿನಿಂದ ತಮ್ಮ ಮುಂದಿನ ಪ್ರವಾಸಕ್ಕೆ ಹೊರಡಲು ಸಜ್ಜಾದಾಗ, ಮಹಾರಾಜರು ಅವರನ್ನು ಇನ್ನೂ ಕೆಲವು ದಿನಗಳು ಮೈಸೂರಿನಲ್ಲೇ ಉಳಿಯುವಂತೆ ಆತ್ಮೀಯವಾಗಿ ವಿನಂತಿಸಿಕೊಂಡರು. ಆದರೆ ದೇಶಪರ್ಯಟನೆಯ ತಮ್ಮ ಸಂಕಲ್ಪವನ್ನು ಮುಂದುವರಿಸಬೇಕಿದ್ದ ಕಾರಣ, ಸ್ವಾಮೀಜಿಯವರು ಆ ಆಹ್ವಾನವನ್ನು ಅತ್ಯಂತ ವಿನಯದಿಂದ ನಿರಾಕರಿಸಿದರು.
ಆಗ ಮಹಾರಾಜರ ಮನಸ್ಸಿನಲ್ಲಿ ಒಂದು ವಿಭಿನ್ನ ಆಸೆ ಮೂಡಿತು. “ಇಂತಹ ಮಹಾನ್ ವ್ಯಕ್ತಿತ್ವದ ನೆನಪಾಗಿ ನನ್ನ ಬಳಿ ಏನಾದರೂ ಶಾಶ್ವತವಾಗಿ ಉಳಿಯಬೇಕು” ಎಂಬ ಭಾವನೆಯಿಂದ, ಸ್ವಾಮಿ ವಿವೇಕಾನಂದರ ಪ್ರೇರಣಾದಾಯಕ ಸಂದೇಶ ಮತ್ತು ಧ್ವನಿಯನ್ನು ಅಂದಿನ ಅತ್ಯಾಧುನಿಕ ತಂತ್ರಜ್ಞಾನವಾಗಿದ್ದ ಫೋನೋಗ್ರಾಫ್‌ನಲ್ಲಿ ಧ್ವನಿಮುದ್ರಿಸಿಕೊಳ್ಳುವ ವ್ಯವಸ್ಥೆ ಮಾಡಿದರು. ಭಾರತದ ಇತಿಹಾಸದಲ್ಲಿಯೇ ಆಧ್ಯಾತ್ಮಿಕ ಮಹಾಪುರುಷರ ಧ್ವನಿಯನ್ನು ತಂತ್ರಜ್ಞಾನದ ಮೂಲಕ ದಾಖಲಿಸಲು ನಡೆದ ಮೊದಲ ಪ್ರಯತ್ನಗಳಲ್ಲಿ ಇದೂ ಒಂದೆಂದು ಪರಿಗಣಿಸಲಾಗುತ್ತದೆ.
ದುರದೃಷ್ಟವಶಾತ್, ಕಾಲಕ್ರಮೇಣ ಆ ಧ್ವನಿಮುದ್ರಣದ ಗುಣಮಟ್ಟ ಕುಂದಿದ್ದು, ಇಂದಿಗೆ ಅದರ ಶಬ್ದ ಸ್ಪಷ್ಟವಾಗಿ ಕೇಳಿಸದಿದ್ದರೂ, ಆ ಅಮೂಲ್ಯ ಧ್ವನಿಸುರುಳಿಯನ್ನು ಮೈಸೂರು ಅರಮನೆಯ ಸಂಗ್ರಹದಲ್ಲಿ ಐತಿಹಾಸಿಕ ಸ್ಮರಣಿಕೆಯಾಗಿ ಇಂದಿಗೂ ಸಂರಕ್ಷಿಸಲಾಗಿದೆ ಎಂದು ಹೇಳಲಾಗುತ್ತದೆ.
ಇದೇ ಸಂದರ್ಭದಲ್ಲಿ ಮಹಾರಾಜರು ತಮ್ಮ ಅಪಾರ ಭಕ್ತಿ ಮತ್ತು ಗೌರವದ ಸಂಕೇತವಾಗಿ ಸ್ವಾಮಿ ವಿವೇಕಾನಂದರ ಪಾದಪೂಜೆ ಮಾಡಲು ಮುಂದಾದರು. ಆದರೆ ವೈಯಕ್ತಿಕ ಪೂಜೆ ಮತ್ತು ವ್ಯಕ್ತಿಪೂಜೆಯನ್ನು ಸದಾ ವಿರೋಧಿಸುತ್ತಿದ್ದ ಸ್ವಾಮೀಜಿಯವರು, ತಮ್ಮ ಸಹಜ ವಿನಯದಿಂದ ಆ ಗೌರವವನ್ನು ನಯವಾಗಿ ನಿರಾಕರಿಸಿದರು. ವ್ಯಕ್ತಿಗಿಂತ ಆದರ್ಶ ಮತ್ತು ಧರ್ಮವೇ ಶ್ರೇಷ್ಠ ಎಂಬ ಅವರ ಜೀವನದರ್ಶನಕ್ಕೆ ಈ ಘಟನೆ ಮತ್ತೊಂದು ಸುಂದರ ಉದಾಹರಣೆಯಾಗಿದೆ.
ಹತ್ತಾರು ವರ್ಷಗಳ ಹೋರಾಟದ ಬಳಿಕ ಸಾಕಾರವಾದ ಕನಸು
ಅಂದು ಸ್ವಾಮಿಗಳು ತಂಗಿದ್ದ ನಿರಂಜನ ಮಠವು ಮಹಾರಾಣಿ NTM ಶಾಲೆಯ (ನ್ಯೂ ಟೈಪ್ ಮಾಡೆಲ್) ಆವರಣದಲ್ಲಿದ್ದ ಕಾರಣ, ಈ ಪ್ರದೇಶವನ್ನು ಸ್ವಾಮಿ ವಿವೇಕಾನಂದರ ಸ್ಮಾರಕವನ್ನಾಗಿ ರೂಪಿಸುವ ಕನಸನ್ನು ಸಾಕಾರಗೊಳಿಸಲು ರಾಮಕೃಷ್ಣ ಆಶ್ರಮ ಹಲವು ವರ್ಷಗಳ ಕಾಲ ಪ್ರಯತ್ನಿಸಿತು. ಹಳೆಯ ಶಾಲೆಯನ್ನು ಸ್ಥಳಾಂತರಿಸುವ ವಿಚಾರವಾಗಿ ಸ್ಥಳೀಯರಿಂದ ಸಾಕಷ್ಟು ವಿರೋಧ ವ್ಯಕ್ತವಾದರೂ, ಸುದೀರ್ಘ ಕಾಲದ ಕಾನೂನು ಹೋರಾಟದ ಬಳಿಕ ನ್ಯಾಯಾಲಯದ ಆದೇಶದಂತೆ ಆ ಜಾಗವನ್ನು ರಾಮಕೃಷ್ಣ ಆಶ್ರಮಕ್ಕೆ ಪಡೆಯುವಲ್ಲಿ ಸಫಲವಾಯಿತು. ಆ ಸ್ಥಳದಲ್ಲಿ ವಿವೇಕ ಸ್ಮಾರಕ ನಿರ್ಮಿಸುವ ಮುನ್ನವೇ, ರಾಮಕೃಷ್ಣ ಆಶ್ರಮವು NTM ಶಾಲೆಯ ವಿದ್ಯಾರ್ಥಿಗಳಿಗಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಹೊಸ ಶಾಲಾ ಕಟ್ಟಡವನ್ನು ನಿರ್ಮಿಸಿ ಕೊಟ್ಟಿರುವುದು ಗಮನಾರ್ಹ.
ಆಧುನಿಕ ತಂತ್ರಜ್ಞಾನ ಮತ್ತು ಭಾರತೀಯ ಸಂಸ್ಕೃತಿಯ ಸಂಗಮ

ವಿವೇಕ ಸ್ಮಾರಕವು ಸಾಮಾನ್ಯ ಸ್ಮಾರಕವಲ್ಲ.
ಇಲ್ಲಿ ಭೇಟಿ ನೀಡುವವರಿಗೆ ಸ್ವಾಮಿ ವಿವೇಕಾನಂದರ ಜೀವನವೇ ಒಂದು ಅನುಭವವಾಗಿ ಮೂಡಿಬರುತ್ತದೆ.
ಈ ಕೇಂದ್ರದಲ್ಲಿ ಇರುವ ಪ್ರಮುಖ ಸೌಲಭ್ಯಗಳು:
- ಅತ್ಯಾಧುನಿಕ ಡಿಜಿಟಲ್ ಗ್ಯಾಲರಿಗಳು
- ಸ್ವಾಮಿ ವಿವೇಕಾನಂದರ ಜೀವನದ ಮಲ್ಟಿಮೀಡಿಯಾ ಪ್ರದರ್ಶನಗಳು
- 3D ಮತ್ತು ಇಂಟರಾಕ್ಟಿವ್ ಅನುಭವ ಕೇಂದ್ರಗಳು
- ವಿಶಾಲ ಗ್ರಂಥಾಲಯ
- ಧ್ಯಾನ ಮಂದಿರ
- ಯೋಗ ಮತ್ತು ಧ್ಯಾನ ತರಬೇತಿ ಕೇಂದ್ರ
- ವಸ್ತುಸಂಗ್ರಹಾಲಯ
- ಸಾವಿರಾರು ಜನರು ಸೇರಬಹುದಾದ ಸಭಾಂಗಣ
- ಮೌಲ್ಯಾಧಾರಿತ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಕೇಂದ್ರ
- ಯುವ ನಾಯಕತ್ವ ತರಬೇತಿ ಕಾರ್ಯಕ್ರಮಗಳು
ಈ ಕೇಂದ್ರವು ಯುವಜನರಿಗೆ ರಾಷ್ಟ್ರಭಕ್ತಿ, ಆತ್ಮವಿಶ್ವಾಸ, ನಾಯಕತ್ವ ಹಾಗೂ ಭಾರತೀಯ ಮೌಲ್ಯಗಳನ್ನು ಪರಿಚಯಿಸುವ ಪ್ರಮುಖ ರಾಷ್ಟ್ರೀಯ ಕೇಂದ್ರವಾಗಲಿದೆ.
‘ವಿಕಸಿತ ಭಾರತ 2047’ ಕನಸಿಗೆ ಹೊಸ ವೇದಿಕೆ

ಕೇಂದ್ರ ಸರ್ಕಾರದ ‘ವಿಕಸಿತ ಭಾರತ 2047’ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಯುವಶಕ್ತಿಯನ್ನು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಈ ಕೇಂದ್ರವನ್ನು ರೂಪಿಸಲಾಗಿದೆ. ಸ್ವಾಮಿ ವಿವೇಕಾನಂದರು ಹೇಳಿದ ಯುವಶಕ್ತಿಯ ಮಹತ್ವವನ್ನು ಆಧುನಿಕ ಶಿಕ್ಷಣ, ತಂತ್ರಜ್ಞಾನ ಮತ್ತು ಭಾರತೀಯ ಸಂಸ್ಕೃತಿಯೊಂದಿಗೆ ಸಂಯೋಜಿಸುವ ಪ್ರಯತ್ನವೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಅರುಣ್ ಯೋಗಿರಾಜ್ ಕೆತ್ತನೆಯ ವಿಶೇಷ ಕಾಣಿಕೆ
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಅಯೋಧ್ಯೆಯ ಶ್ರೀರಾಮಲಲ್ಲಾ ವಿಗ್ರಹದ ಶಿಲ್ಪಿ, ಮೈಸೂರಿನವರೇ ಆದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೇವಲ 15 ದಿನಗಳಲ್ಲಿ ಕೆತ್ತಿರುವ ವಿಯೆಟ್ನಾಂನ ಬಿಳಿ ಅಮೃತಶಿಲೆಯ ಏಕಶಿಲೆಯಿ ಸುಮಾರು 7.5 ಕೆಜಿ ತೂಕ ಮತ್ತು 1.5 ಅಡಿ ಎತ್ತರವಿರುವ ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್‌ನಲ್ಲಿರುವ ಸ್ವಾಮಿ ವಿವೇಕಾನಂದ ಪ್ರತಿಮೆಯ ಮಾದರಿಯ ಪುಟ್ಟ ಸ್ವಾಮಿ ವಿವೇಕಾನಂದರ ವಿಶೇಷ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಮರಣಿಕೆಯಾಗಿ ನೀಡಲಾಗುತ್ತಿದೆ. ಜೊತೆಗೆ ಮೈಸೂರಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ವಿಶೇಷ ನೆನಪಿನ ಕಾಣಿಕೆಯನ್ನೂ ಪ್ರಧಾನಿಗೆ ಸಮರ್ಪಿಸಲಾಗುತ್ತದೆ.
ಮೈಸೂರಿನ ಪ್ರವಾಸೋದ್ಯಮಕ್ಕೆ ಮತ್ತೊಂದು ಹೆಮ್ಮೆಯ ಗರಿ
ಮೈಸೂರು ಈಗಾಗಲೇ ವಿಶ್ವವಿಖ್ಯಾತ ಅರಮನೆ, ಚಾಮುಂಡಿಬೆಟ್ಟ, ಜಗನ್ಮೋಹನ ಅರಮನೆ, ಸೇಂಟ್ ಫಿಲೋಮಿನಾ ಚರ್ಚ್, ಶ್ರೀರಂಗಪಟ್ಟಣ, ಮೃಗಾಲಯ ಹಾಗೂ ದಸರಾ ವೈಭವದಿಂದ ಜಗತ್ತಿನ ಪ್ರವಾಸಿಗರನ್ನು ಸೆಳೆಯುತ್ತಿದೆ. ಇದೀಗ ಆ ಪಟ್ಟಿಗೆ ವಿವೇಕ ಸ್ಮಾರಕವೂ ಸೇರ್ಪಡೆಯಾಗಿದ್ದು, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡಲಿದೆ.
ಮೈಸೂರು ಅರಮನೆ ರಾಜವೈಭವದ ಪ್ರತೀಕವಾಗಿದ್ದರೆ, ಚಾಮುಂಡಿಬೆಟ್ಟ ಭಕ್ತಿಯ ಸಂಕೇತ. ಅದೇ ರೀತಿ ಸ್ವಾಮಿ ವಿವೇಕಾನಂದ ಸ್ಮಾರಕ ಯುವಶಕ್ತಿ, ರಾಷ್ಟ್ರಭಕ್ತಿ, ಆಧ್ಯಾತ್ಮಿಕತೆ ಮತ್ತು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ಮುಂದಿನ ಹಲವು ದಶಕಗಳ ಕಾಲ ದೇಶದ ಯುವಜನತೆಗೆ ಸ್ಫೂರ್ತಿಯ ಕೇಂದ್ರವಾಗಲಿದೆ.
ಸ್ಮಾರಕಗಳು ಕೇವಲ ಕಲ್ಲು ಮತ್ತು ಸಿಮೆಂಟ್‌ನಿಂದ ನಿರ್ಮಾಣವಾಗುವುದಿಲ್ಲ; ಅವು ಒಂದು ರಾಷ್ಟ್ರದ ಇತಿಹಾಸ, ಮೌಲ್ಯಗಳು ಮತ್ತು ಭವಿಷ್ಯದ ಕನಸುಗಳನ್ನು ಹೊತ್ತು ನಿಲ್ಲುತ್ತವೆ. ಮೈಸೂರಿನ ಈ ವಿವೇಕ ಸ್ಮಾರಕವೂ ಅಂತಹ ಒಂದು ರಾಷ್ಟ್ರೀಯ ಕನಸಿನ ಸಾಕಾರ ರೂಪವಾಗಿದೆ.
ಸ್ವಾಮಿ ವಿವೇಕಾನಂದರು ಯುವಜನರಲ್ಲಿ ಬಿತ್ತಿದ ಆತ್ಮವಿಶ್ವಾಸ, ಸೇವಾಭಾವ ಮತ್ತು ರಾಷ್ಟ್ರಚೇತನೆಯನ್ನು ಮುಂದಿನ ಹಲವು ತಲೆಮಾರುಗಳಿಗೆ ಬೆಳಗುವ ಜ್ಞಾನ ದೀಪವಾಗಲಿ ಎಂಬುದೇ ಪ್ರತಿಯೊಬ್ಬ ಭಾರತೀಯನ ಆಶಯ ಆಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ