ಇದು ಆಸ್ತಿ ಹಂಚಿಕೊಳ್ಳಲು ಅಲ್ಲ… ತಂದೆ-ತಾಯಿಯನ್ನು ನೋಡಿಕೊಳ್ಳುವ ಅವಕಾಶಕ್ಕಾಗಿ ಮೂವರು ಸಹೋದರರ ಜಗಳ!
ಮಕ್ಕಳ ಭವಿಷ್ಯ ಉಜ್ವಲವಾಗಬೇಕು, ಅವರು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವಯುತ ಜೀವನ ನಡೆಸಬೇಕು ಎಂಬ ಕನಸಿಗಾಗಿ ಅನೇಕ ತಂದೆ-ತಾಯಿಗಳು ತಮ್ಮ ಇಡೀ ಬದುಕನ್ನೇ ತ್ಯಾಗ ಮಾಡುತ್ತಾರೆ. ತಮ್ಮ ಆಸೆಗಳನ್ನು ಬದಿಗೊತ್ತಿ, ತಮ್ಮ ಸುಖವನ್ನು ಮರೆತು, ಮಕ್ಕಳ ಸಂತೋಷವನ್ನೇ ಜೀವನದ ಗುರಿಯಾಗಿಸಿಕೊಂಡು ದುಡಿಯುತ್ತಾರೆ. ಆದರೆ, ಆ ಮಕ್ಕಳೇ ಒಂದು ದಿನ ತಮ್ಮ ತಂದೆ-ತಾಯಿಯನ್ನು ಅನಾಥರಂತೆ ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳೇ ಹೆಚ್ಚಾಗಿದ್ದಾರೆ. ಇದಕ್ಕೆ ಜ್ವಲಂತ ಉದಾರಣೆ ಎನ್ನುವಂತೆ ಮಕ್ಕಳಿಗಾಗಿ ಬದುಕನ್ನೇ ತ್ಯಾಗ ಮಾಡಿದ ತಂದೆಯವರು ವೃದ್ಧಾಶ್ರಮದಲ್ಲಿ ಅಗಲಿದಾಗ, ಕೊನೆಯ ಕ್ಷಣದಲ್ಲಿ ಮಕ್ಕಳು ಅವರ ಅಂತಿಮದರ್ಶನಕ್ಕೂ ಬಾರದೇ, ತಂದೆಯ ಅಂತಿಮ ಸಂಸ್ಕಾರವನ್ನು ಹಣ ನೀಡಿ ವೃದ್ಧಾಶ್ರಮದವರಿಂದಲೇ ಮಾಡಿಸಿ, ಅದನ್ನು ವೀಡಿಯೋ ಕಾಲ್‌ನಲ್ಲಿ ವೀಕ್ಷಿಸಿದ ಮೂವರು ಪುತ್ರಿಯರ ಮನಕಲಕುವ ಘಟನೆಯನ್ನು ನೋಡಿರುವಾಗ, ನ್ಯಾಯಾಲದಲ್ಲಿ ಅಣ್ಣ ತಮ್ಮಂದಿರು ಹೋರಾಟ ಮಾಡುತ್ತಿದ್ದ ಅಪರೂಪದ ಪ್ರಸಂಗ ನಿಜಕ್ಕೂ ಇಂದಿನ ಯುವಜನತೆಗೆ ಕಣ್ತೆರೆಸುತ್ತದೆ.
ನ್ಯಾಯಾಲಯದಲ್ಲಿ ಸಾಮಾನ್ಯವಾಗಿ ಕೇಳಿಬರುವುದು ಆಸ್ತಿ ವಿವಾದ, ಹಣದ ವ್ಯಾಜ್ಯ, ವ್ಯವಹಾರದ ಕಲಹ, ವಾರಸುದಾರಿಕೆಯ ಜಗಳ. ಆದರೆ ಆ ದಿನ ನ್ಯಾಯಾಲಯದ ಕೋಣೆ ಕಂಡ ದೃಶ್ಯ ಮಾತ್ರ ಸಂಪೂರ್ಣ ವಿಭಿನ್ನವಾಗಿತ್ತು. ಅದು ಆಸ್ತಿಗಾಗಿ ನಡೆದ ಜಗಳವಾಗಿರಲಿಲ್ಲ… ಹೆತ್ತವರನ್ನು ನೋಡಿಕೊಳ್ಳುವ ಹಕ್ಕಿಗಾಗಿ ನಡೆದ ಜಗಳವಾಗಿತ್ತು!
ನ್ಯಾಯಾಲಯದ ಹೊರಗೆ ಜನಸಂದಣಿ
ಕೋರ್ಟ್ ನಂಬರ್ 7 ಜನರಿಂದ ತುಂಬಿ ತುಳುಕುತ್ತಿತ್ತು. ನ್ಯಾಯಾಲಯದ ಹೊರಗಿನ ಕಾರಿಡಾರ್‌ಗಳಲ್ಲೂ ಜನರು ಗುಂಪುಗೂಡಿ ನಿಂತಿದ್ದರು.
“ಇವತ್ತು ಯಾವ ಕೇಸ್?” “ಮೂರು ಸಹೋದರರ ಆಸ್ತಿ ವಿವಾದವಂತೆ!” “ಅಯ್ಯೋ… ಮತ್ತೊಂದು ಆಸ್ತಿ ಜಗಳ!” ಎಂದು ಜನರು ತಮ್ಮಷ್ಟಕ್ಕೆ ತಾವು ಮಾತನಾಡಿಕೊಳ್ಳುತ್ತಿದ್ದರು. ಆದರೆ ನ್ಯಾಯಾಲಯದ ಬಾಗಿಲು ತೆರೆದು ಒಳಗಿನ ದೃಶ್ಯ ಕಂಡಾಗ, ಎಲ್ಲರೂ ಮೌನವಾದರು. ಅಲ್ಲಿ ಯಾವುದೇ ಅಪರಾಧಿಗಳಿರಲಿಲ್ಲ. ಯಾವುದೇ ವ್ಯಾಪಾರ ಪ್ರತಿಸ್ಪರ್ಧಿಗಳಿರಲಿಲ್ಲ. ಆಸ್ತಿ ಹಂಚಿಕೆಯ ದಾಖಲೆಗಳಿರಲಿಲ್ಲ. ನ್ಯಾಯಾಧೀಶರ ಮುಂದೆ ಕಣ್ಣೀರಿನಿಂದ ಕುಳಿತಿದ್ದವರು 70 ವರ್ಷದ ರಾಮಸ್ವರೂಪ್ ಮಿಶ್ರಾ ಮತ್ತು ಅವರ ಪತ್ನಿ ಸರಳಾ ದೇವಿ. ಅವರ ಎದುರು ನಿಂತಿದ್ದವರು ಅವರ ಮೂವರು ಮಕ್ಕಳು—ವಿನಯ್, ದೀಪಕ್ ಮತ್ತು ಮೋಹಿತ್. ನ್ಯಾಯಾಧೀಶರು ಕಡತವನ್ನು ತೆರೆದು ನೋಡಿದರು. “ಹಾಗಾದರೆ… ನಿಮ್ಮ ವಿವಾದವೇನು?”
“ನನ್ನ ತಂದೆ-ತಾಯಿ ನನ್ನ ಜೊತೆ ಇರಬೇಕು!”
ಹಿರಿಯ ಮಗ ವಿನಯ್ ಕೈಮುಗಿದು ಹೇಳಿದ, “ಯುವರ್ ಆನರ್, ನನ್ನ ತಂದೆ-ತಾಯಿ ನನ್ನ ಜೊತೆ ಇರಬೇಕು. ಅವರನ್ನು ನಾನು ನೋಡಿಕೊಳ್ಳಲು ಬಯಸುತ್ತೇನೆ.” ಅಷ್ಟರಲ್ಲಿ ಎರಡನೇ ಮಗ ದೀಪಕ್ ಎದ್ದು, “ಇಲ್ಲ ಸರ್. ಇಷ್ಟು ವರ್ಷ ಅಣ್ಣ ಅವರನ್ನು ನೋಡಿಕೊಂಡಿದ್ದಾರೆ. ಇನ್ನು ಮುಂದೆ ಅವರನ್ನು ನೋಡಿಕೊಳ್ಳುವ ಅವಕಾಶ ನನಗೆ ಕೊಡಬೇಕು.” ಎಂದನು. ಕಿರಿಯ ಮಗ ಮೋಹಿತ್ ಕೂಡ ಮುಂದೆ ಬಂದು, “ಅಣ್ಣಂದಿರಿಬ್ಬರೂ ತಪ್ಪು ಮಾಡುತ್ತಿದ್ದಾರೆ. ನಾನು ಮನೆಯ ಕಿರಿಯ ಮಗ. ನನ್ನ ಹೆತ್ತವರಿಗೆ ನಾನು ಮಾಡಬೇಕಾದ ಋಣವನ್ನು ತೀರಿಸುವ ಅವಕಾಶ ನನಗೆ ಸಿಗಬೇಕು.” ಎಂದನು. ನ್ಯಾಯಾಲಯದಲ್ಲಿ ಸಂಪೂರ್ಣ ಮೌನ ಆವರಿಸಿತು. ಅಲ್ಲಿ ನೆರೆದಿದ್ದ ಯಾರೂ ಇಂತಹ ವ್ಯಾಜ್ಯವನ್ನು ಹಿಂದೆ ಕೇಳಿರಲಿಲ್ಲ.
ಮೂರು ಸಹೋದರರು ಆಸ್ತಿಗಾಗಿ ಜಗಳವಾಡುತ್ತಿರಲಿಲ್ಲ… ತಮ್ಮ ತಂದೆ-ತಾಯಿಯನ್ನು ನೋಡಿಕೊಳ್ಳುವ ಅವಕಾಶಕ್ಕಾಗಿ ಜಗಳವಾಡುತ್ತಿದ್ದರು!
“ಮೂವರೂ ಒಂದೇ ವಿಷಯ ಬಯಸುತ್ತಿದ್ದರೆ, ಕೋರ್ಟ್‌ಗೆ ಬಂದಿದ್ದು ಏಕೆ?” ನ್ಯಾಯಾಧೀಶರು ಆಶ್ಚರ್ಯದಿಂದ ಕೇಳಿದರು:
“ನಿಮ್ಮ ಮೂವರಿಗೂ ಬೇಕಾಗಿರುವುದು ಒಂದೇ ವಿಷಯ. ಹಾಗಿದ್ದರೆ ನ್ಯಾಯಾಲಯಕ್ಕೆ ಬಂದಿರುವುದೇಕೆ?” ರಾಮಸ್ವರೂಪ್ ಮಿಶ್ರಾ ಕಣ್ಣೀರಿನ ನಡುವೆ ಸಣ್ಣದಾಗಿ ನಕ್ಕರು. “ಅದೇ ನಮ್ಮ ಸಮಸ್ಯೆ ಸರ್…” ಅವರು ನಿಧಾನವಾಗಿ ಮಾತನಾಡಲು ಆರಂಭಿಸಿದರು. “ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕು ಎಂದು ನಾವು ನಮ್ಮ ಕೃಷಿಭೂಮಿಯನ್ನೇ ಮಾರಿಕೊಂಡೆವು. ಅವರು ಶಾಲೆಗೆ ಚೆನ್ನಾಗಿ ಹೋಗಲಿ ಎಂದು ನಾವು ಹಳೆಯ ಬಟ್ಟೆಗಳನ್ನು ಧರಿಸುತ್ತಿದ್ದೆವು. ಅವರು ಒಳ್ಳೆಯ ಜೀವನ ನಡೆಸಲಿ ಎಂಬುದೇ ನಮ್ಮ ಆಸೆಯಾಗಿತ್ತು.”
“ಈಗ ನಮ್ಮ ವಯಸ್ಸಾಗಿದೆ. ಜೀವನದ ಕೊನೆಯ ದಿನಗಳಲ್ಲಿ ಒಬ್ಬ ಮಗನ ಮನೆಯಲ್ಲಿ ನೆಮ್ಮದಿಯಾಗಿ ಇರಬೇಕು ಎಂದುಕೊಂಡಿದ್ದೆವು. ಉಳಿದ ಇಬ್ಬರು ತಮ್ಮ ತಮ್ಮ ಜೀವನವನ್ನು ನೆಮ್ಮದಿಯಾಗಿ ನಡೆಸಿಕೊಳ್ಳಲಿ ಎಂದು ಬಯಸಿದ್ದೆವು.” ಅವರ ಕಂಠ ಗದ್ಗದಿತವಾಯಿತು. “ಆದರೆ ನಮ್ಮ ಮೂವರು ಮಕ್ಕಳಲ್ಲಿ ಯಾರೂ ನಮ್ಮನ್ನು ಬಿಟ್ಟುಕೊಡಲು ಸಿದ್ಧರಿಲ್ಲ…”
ವಿನಯ್‌ನ ಕಣ್ಣೀರಿನ ಕಥೆ
ನ್ಯಾಯಾಧೀಶರು ವಿನಯ್‌ನತ್ತ ನೋಡಿದರು. “ನೀನು ಇಷ್ಟು ಹಠ ಮಾಡುತ್ತಿರುವುದೇಕೆ?” ವಿನಯ್ ಕೆಲವು ಕ್ಷಣ ಮೌನವಾಗಿದ್ದ. ನಂತರ ನಿಧಾನವಾಗಿ ಹೇಳಿದ: “ನನಗೆ ಬಾಲ್ಯದಲ್ಲಿ ಪೋಲಿಯೋ ಬಂದಿತ್ತು. ನಾನು ಸರಿಯಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆಗ ನನ್ನ ತಂದೆ ಪ್ರತಿದಿನ ನನ್ನನ್ನು ಐದು ಕಿಲೋಮೀಟರ್ ದೂರದ ಆಸ್ಪತ್ರೆಗೆ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದರು.” ಅವನ ಕಣ್ಣುಗಳು ಒದ್ದೆಯಾದವು. “ಅಂದು ಅವರು ನನ್ನನ್ನು ಹೊತ್ತುಕೊಂಡು ಹೋಗದಿದ್ದರೆ… ಇಂದು ನಾನು ನಿಮ್ಮ ಮುಂದೆ ನಿಂತಿರುತ್ತಿದ್ದೇನೆಯೋ ಗೊತ್ತಿಲ್ಲ.” “ಈಗ ಅವರಿಗೆ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಹಾಗಿರುವಾಗ… ನಾನು ಅವರನ್ನು ಹೇಗೆ ಬಿಟ್ಟುಬಿಡಲಿ ಸರ್?” ನ್ಯಾಯಾಲಯದ ವಾತಾವರಣ ಭಾವುಕವಾಯಿತು.
ದೀಪಕ್‌ನ ತಾಯಿಯ ಬಳೆ
ನ್ಯಾಯಾಧೀಶರು ದೀಪಕ್‌ನತ್ತ ತಿರುಗಿದರು. ದೀಪಕ್ ತನ್ನ ಜೇಬಿನಿಂದ ಹಳೆಯ ಕರವಸ್ತ್ರವೊಂದನ್ನು ತೆಗೆದು ಕೈಯಲ್ಲಿ ಹಿಡಿದುಕೊಂಡ. “ಇದು ನನ್ನ ತಾಯಿಯದ್ದು…” ಅವನು ಕ್ಷಣಕಾಲ ನಿಂತ. “ನನಗೆ ಇಂಜಿನಿಯರಿಂಗ್ ಓದಲು ಹಣವಿರಲಿಲ್ಲ. ಆಗ ನನ್ನ ತಾಯಿ ತಮ್ಮ ಮದುವೆಯ ಬಳೆಗಳನ್ನು ಯಾರಿಗೂ ಹೇಳದೆ ಮಾರಿಬಿಟ್ಟಿದ್ದರು.” “ನನಗೆ ಬೇಸರವಾಗಬಾರದು ಎಂದು, ‘ಬಳೆಗಳು ಕಳೆದುಹೋಗಿವೆ’ ಎಂದು ಸುಳ್ಳು ಹೇಳಿದ್ದರು.” ದೀಪಕ್ ತಲೆತಗ್ಗಿಸಿದ. “ನಾನು ಇಂದು ಸಾಧಿಸಿರುವುದಕ್ಕೆ ಕಾರಣ ನನ್ನ ತಾಯಿಯ ತ್ಯಾಗ. ಆದರೆ ನನ್ನ ತಾಯಿ ನನ್ನ ಮನೆಯಲ್ಲೇ ಇರದಿದ್ದರೆ… ನನ್ನ ಈ ಯಶಸ್ಸಿಗೆ ಅರ್ಥವೇನು?”
ಮೋಹಿತ್‌ನ ತಂದೆಯ ರಕ್ತ
ಈಗ ನ್ಯಾಯಾಧೀಶರು ಕಿರಿಯ ಮಗ ಮೋಹಿತ್‌ನತ್ತ ನೋಡಿದರು. ಮೋಹಿತ್‌ಗೆ ಮಾತೇ ಬರಲಿಲ್ಲ. ಕೆಲವು ಕ್ಷಣಗಳ ನಂತರ ನಿಧಾನವಾಗಿ ಹೇಳಿದ: “ನನಗೆ ಒಮ್ಮೆ ಭೀಕರ ಅಪಘಾತವಾಗಿತ್ತು. ತಕ್ಷಣ ರಕ್ತ ಬೇಕಾಗಿತ್ತು. ನನ್ನ ತಂದೆಯ ಆರೋಗ್ಯ ಆಗಲೇ ತುಂಬಾ ಹದಗೆಟ್ಟಿತ್ತು. ವೈದ್ಯರು ಅವರಿಗೆ ರಕ್ತದಾನ ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದ್ದರು.” ಅವನು ಕಣ್ಣೀರನ್ನು ಒರೆಸಿಕೊಂಡ. “ಆದರೆ ನನ್ನ ತಂದೆ ವೈದ್ಯರಿಗೆ ಒಂದೇ ಮಾತು ಹೇಳಿದರು…” “ನನ್ನ ಮಗ ಉಸಿರಾಡುತ್ತಿದ್ದರೆ ಸಾಕು. ನನ್ನ ದೌರ್ಬಲ್ಯ ಏನೂ ಅಲ್ಲ.” ಮೋಹಿತ್‌ನ ಧ್ವನಿ ಮುರಿಯಿತು. “ಅಂತಹ ತಂದೆಯನ್ನು ಈಗ ಮತ್ತೊಬ್ಬರ ಆರೈಕೆಯಲ್ಲಿ ಬಿಟ್ಟು ನಾನು ಹೇಗೆ ಬದುಕಲಿ?” ನ್ಯಾಯಾಲಯದಲ್ಲಿದ್ದ ವಕೀಲರ ಕಣ್ಣುಗಳಲ್ಲೂ ನೀರು ತುಂಬಿತ್ತು.
“ಒಬ್ಬ ತಾಯಿ ಮೂರು ಹೃದಯಗಳಲ್ಲಿ ಒಂದನ್ನು ಹೇಗೆ ಆಯ್ಕೆ ಮಾಡಲಿ?”
ನ್ಯಾಯಾಧೀಶರು ಸರಳಾ ದೇವಿಯತ್ತ ತಿರುಗಿದರು. “ತಾಯಿ… ನೀವು ಯಾವ ಮಗನ ಜೊತೆ ಹೋಗಲು ಬಯಸುತ್ತೀರಿ?” ಸರಳಾ ದೇವಿ ಕಣ್ಣೀರಿನ ನಡುವೆ ಮುಗುಳ್ನಕ್ಕರು. ಅವರು ನಿಧಾನವಾಗಿ ಹೇಳಿದರು: “ಮೂವರು ನನ್ನ ಮಕ್ಕಳು ಅಲ್ಲ ಸರ್… ನನ್ನ ಹೃದಯದ ಮೂರು ತುಣುಕುಗಳು. ಒಬ್ಬನನ್ನು ಬಿಟ್ಟು ಇನ್ನೊಬ್ಬನನ್ನು ನಾನು ಹೇಗೆ ಆಯ್ಕೆ ಮಾಡಲಿ?” ನ್ಯಾಯಾಲಯ ಮತ್ತೆ ಮೌನವಾಯಿತು.
ನ್ಯಾಯಾಧೀಶರ ಅಪರೂಪದ ತೀರ್ಪು
ನ್ಯಾಯಾಧೀಶರು ತಮ್ಮ ಕುರ್ಚಿಯಿಂದ ನಿಧಾನವಾಗಿ ಎದ್ದು ಹೇಳಿದರು: “ಇಂದು ಈ ನ್ಯಾಯಾಲಯ ಕಾನೂನಿನ ಆಧಾರದ ಮೇಲೆ ತೀರ್ಪು ನೀಡುವುದಿಲ್ಲ. ಇಂದು ಈ ನ್ಯಾಯಾಲಯ ಒಂದು ಪ್ರೀತಿಯನ್ನು ಗೌರವಿಸುತ್ತದೆ.” ಅವರು ಮೂವರು ಸಹೋದರರತ್ತ ನೋಡಿದರು. “ಹಾಗಾದರೆ… ನಿಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವಂತೆ ನಾನು ಆದೇಶಿಸಿದರೆ?” ಕ್ಷಣಮಾತ್ರದಲ್ಲಿ ಮೂವರೂ ಒಟ್ಟಿಗೆ ಕೂಗಿದರು: “ಬೇಡ ಸರ್! ಎಂದಿಗೂ ಬೇಡ!” ನ್ಯಾಯಾಧೀಶರು ಮುಗುಳ್ನಕ್ಕರು. “ಹಾಗಾದರೆ, ಯಾವ ಮಗನಿಗೆ ತಂದೆ-ತಾಯಿಯನ್ನು ನೋಡಿಕೊಳ್ಳುವ ಹಕ್ಕು ಹೆಚ್ಚು ಎಂಬುದನ್ನು ಈ ನ್ಯಾಯಾಲಯ ನಿರ್ಧರಿಸುವುದಿಲ್ಲ.”
ಬದಲಾಗಿ, ಈ ಪ್ರಕರಣವನ್ನು ಒಂದು ಅಪರೂಪದ ಕುಟುಂಬದ ಸಾಕ್ಷಿಯಾಗಿ ದಾಖಲಿಸುತ್ತದೆ. ಆಸ್ತಿಗಾಗಿ ಅಲ್ಲ… ತಮ್ಮನ್ನು ಹೆತ್ತು ಬೆಳೆಸಿದ ತಂದೆ-ತಾಯಿಯನ್ನು ಸೇವಿಸುವ ಗೌರವಕ್ಕಾಗಿ ಮಕ್ಕಳು ನ್ಯಾಯಾಲಯದ ಮೆಟ್ಟಿಲೇರಿದ ಕುಟುಂಬವೊಂದು ಇನ್ನೂ ಇದೆ ಎಂಬುದಕ್ಕೆ ಇದು ಸಾಕ್ಷಿಯಾಗಲಿ.
ನಂತರ ನ್ಯಾಯಾಧೀಶರು ಒಂದು ಷರತ್ತು ಹೇಳಿದರು: ನಿಮ್ಮ ತಂದೆ-ತಾಯಿ ಯಾರ ಜೊತೆ ಇರಲು ಬಯಸುತ್ತಾರೋ ಅವರ ಜೊತೆ ಇರಲಿ. ಆದರೆ ಪ್ರತೀ ಭಾನುವಾರ ಮೂವರು ಮಕ್ಕಳು, ಸೊಸೆಯರು ಮತ್ತು ಮೊಮ್ಮಕ್ಕಳು ಎಲ್ಲರೂ ಒಂದೇ ಮನೆಯಲ್ಲಿ ಸೇರಬೇಕು. ಒಟ್ಟಿಗೆ ಊಟ ಮಾಡಬೇಕು.” “ಇದು ಕಾನೂನು ಆದೇಶವಲ್ಲ.
ಇದು ನಿಮ್ಮ ಕುಟುಂಬದ ಪರಂಪರೆಯಾಗಬೇಕು.
ಪೋಷಕರು ಎಂದಿಗೂ ಹೊರೆ ಅಲ್ಲ…
ನ್ಯಾಯಾಲಯದ ಹೊರಗೆ ಪತ್ರಕರ್ತರು ಮೂವರು ಸಹೋದರರನ್ನು ಸುತ್ತುವರಿದರು. ಈ ವಿಷಯವನ್ನು ಮನೆಯಲ್ಲೇ ಬಗೆಹರಿಸಿಕೊಳ್ಳಬಹುದಿತ್ತಲ್ಲ? ಕೋರ್ಟ್‌ಗೆ ಬರುವ ಅಗತ್ಯವೇನಿತ್ತು?” ವಿನಯ್ ನಗುತ್ತಾ ಹೇಳಿದ. “ನಾವು ಇಲ್ಲಿಗೆ ಬಂದಿದ್ದು ಒಂದೇ ಕಾರಣಕ್ಕಾಗಿ… ದೀಪಕ್ ಮಾತು ಮುಂದುವರಿಸಿದ: ಜಗತ್ತು ಇದನ್ನು ನೆನಪಿಟ್ಟುಕೊಳ್ಳಲಿ… ಮೋಹಿತ್ ಮಾತು ಮುಗಿಸಿದ:
ಪೋಷಕರು ಎಂದಿಗೂ ಹೊರೆ ಅಲ್ಲ. ಅವರು ಒಂದು ಮನೆಯು ಪಡೆಯಬಹುದಾದ ಅತ್ಯಂತ ದೊಡ್ಡ ಆಶೀರ್ವಾದ.
ಒಂದು ಕಥೆ… ಹಲವು ಹೃದಯಗಳ ಬದಲಾವಣೆ
ಮರುದಿನ ಪತ್ರಿಕೆಗಳಲ್ಲಿ ಈ ಅಪರೂಪದ ಪ್ರಕರಣದ ಸುದ್ದಿ ದೊಡ್ಡ ಶೀರ್ಷಿಕೆಯೊಂದಿಗೆ ಪ್ರಕಟವಾಯಿತು
“ಆಸ್ತಿ ಹಂಚಿಕೊಳ್ಳಲು ಅಲ್ಲ… ತಂದೆ-ತಾಯಿಯನ್ನು ನೋಡಿಕೊಳ್ಳುವ ಗೌರವವನ್ನು ಹಂಚಿಕೊಳ್ಳಲು ನ್ಯಾಯಾಲಯದ ಮೆಟ್ಟಿಲೇರಿದ ಮೂವರು ಮಕ್ಕಳು!”
ಆ ಕಥೆಯ ನಂತರ ಒಂದು ಅದ್ಭುತ ಸಂಗತಿಯೂ ನಡೆಯಿತು ಎಂದು ಹೇಳಲಾಗುತ್ತದೆ. ಕೆಲವು ವೃದ್ಧ ತಂದೆ-ತಾಯಿಗಳನ್ನು ವೃದ್ಧಾಶ್ರಮಗಳಿಂದ ಅವರ ಮಕ್ಕಳು ಮತ್ತೆ ಮನೆಗೆ ಕರೆತಂದರು. ಅದು ಯಾವುದೇ ನ್ಯಾಯಾಲಯದ ಆದೇಶದಿಂದ ಆಗಿರಲಿಲ್ಲ. ಒಂದು ಕಥೆ ಮರೆತುಹೋಗಿದ್ದ ಹೃದಯಗಳನ್ನು ಎಚ್ಚರಿಸಿತ್ತು.
ಕೊನೆಯ ಮಾತು
ನಾವು ಜೀವನದಲ್ಲಿ ಆಸ್ತಿ ಗಳಿಸುತ್ತೇವೆ. ಮನೆ ಕಟ್ಟುತ್ತೇವೆ. ಹಣ ಸಂಪಾದಿಸುತ್ತೇವೆ. ಹೆಸರು ಮಾಡುತ್ತೇವೆ. ಆದರೆ ನಮ್ಮ ತಂದೆ-ತಾಯಿಗಳು ನಮಗಾಗಿ ಮಾಡಿದ ತ್ಯಾಗಕ್ಕೆ ಪ್ರತಿಯಾಗಿ ನಾವು ಅವರಿಗೆ ಕೊಡುವುದು ಏನು? ಅವರಿಗೆ ಬೇಕಾಗಿರುವುದು ಬಹುಶಃ ದೊಡ್ಡ ಮನೆ ಅಲ್ಲ. ದುಬಾರಿ ಕಾರು ಅಲ್ಲ. ಅಪಾರ ಸಂಪತ್ತು ಕೂಡ ಅಲ್ಲ. ಅವರಿಗೆ ಬೇಕಾಗಿರುವುದು ನಮ್ಮ ಸಮಯ… ನಮ್ಮ ಮಾತು… ನಮ್ಮ ಸಾನ್ನಿಧ್ಯ… ಮತ್ತು “ನೀವು ನಮ್ಮ ಜೊತೆ ಇದ್ದೀರಿ” ಎಂಬ ಭರವಸೆ. ಯಾಕೆಂದರೆ, ಪೋಷಕರು ನಮ್ಮ ಪಾಲಿಗೆ ಬಿಟ್ಟುಹೋಗುವ ಅತಿ ದೊಡ್ಡ ಆಸ್ತಿ ಜಮೀನು, ಹಣ ಅಥವಾ ಮನೆ ಅಲ್ಲ—ಅದು ಅವರ ಪ್ರೀತಿ. ಮತ್ತು ಒಬ್ಬ ಮಗುವಿನ ನಿಜವಾದ ಯಶಸ್ಸು ದೊಡ್ಡ ಮನೆಯನ್ನು ಕಟ್ಟುವುದರಲ್ಲಿ ಇಲ್ಲ… ಆ ಮನೆಯಲ್ಲಿ ತನ್ನ ತಂದೆ-ತಾಯಿಗೆ ಸದಾ ಒಂದು ಗೌರವದ ಸ್ಥಾನವನ್ನು ಉಳಿಸುವುದರಲ್ಲಿ ಇದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಸಾಮಾಜಿಕ ಜಾಲತಾಣದಲ್ಲಿ ಓದಿದ ಆಂಗ್ಲ ಭಾಷೆಯ ಸಂದೇಶವೊಂದರ ಭಾವಾನುವಾದವಾಗಿದ್ದು ಈ ಲೇಖನದ ಸಂಪೂರ್ಣ ಶ್ರೇಯ ಮೂಲಕ ಲೇಖಕರಿಗೇ ಸಲ್ಲುತ್ತದೆ.
