ಜಾತಿ ವ್ಯವಸ್ಥೆಯ ಬಗ್ಗೆ ಆತಂಕ, ಆದರೆ ಸಚಿವ ಸಂಪುಟ ಮಾತ್ರ ಜಾತಿ ಸಮೀಕರಣ

ಭಾರತದಲ್ಲಿ ರಾಜಕೀಯ ಚರ್ಚೆಗಳು ಅನೇಕ ಬಾರಿ ವಿಚಾರಗಳಿಗಿಂತ ಭಾವನೆಗಳ ಸುತ್ತ ಹೆಚ್ಚು ತಿರುಗುತ್ತವೆ. ಇತ್ತೀಚೆಗೆ ಕಾಂಗ್ರೆಸ್ ನಾಯಕ ಯತೀಂದ್ರ ಸಿದ್ದರಾಮಯ್ಯ ಅವರು, “ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಿದರೆ ಜಾತಿ ವ್ಯವಸ್ಥೆ ಇನ್ನಷ್ಟು ಬಲಗೊಳ್ಳುತ್ತದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಸ್ವಾಭಾವಿಕವಾಗಿಯೇ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಅದೇ ರೀತಿಯಲ್ಲಿ ಈ ರಾಜ್ಯದ ಗೃಹಖಾತೆ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಿಗಳಾಗಿದ್ದರೂ ಅವರ ಖಾತೆಯನ್ನು ಬಿಟ್ಟು ಉಳಿದೆಲ್ಲರ ಖಾತೆಗಳಲ್ಲಿಯೂ ಮೂಗು ತೂರಿಸುವ ಮತ್ತು ಬೆಳಿಗ್ಗೆಯಿಂದ ಸಂಜೆಯವರೆಗೂ RSS ಬಗ್ಗೆನೇ ಮಾತನಾಡುವ ಪ್ರಿಯಾಂಕ ಖರ್ಗೆ ಹಿಂದೂ ದರ್ಮ ಸಾವಿರಾರು ವರ್ಷಗಳಿಂದಲೂ ಇದೆ ಆದರೆ ಈ ಹಿಂದುತ್ವ ಎನ್ನುವುದು ಮಾತ್ರ ಸಾವರ್ಕರ್ ಅವರ ಕನಸಿನ ಕೂಸು ಅದನ್ನೇ ನೆಪ ಮಾಡಿಕೊಂಡು ಸಂಘ ಕಳೆದ ನೂರು ವರ್ಷಗಳಿಂದಲೂ ಅಸ್ಥಿತ್ವದಲ್ಲಿದೆ ಎಂದಿರುವುದು ನಿಜಕ್ಕೂ ಅವರ ಬೌದ್ಧಿಕ ದೀವಾಳಿ ತನಕ್ಕೆ ಸಾಕ್ಷಿಯಲ್ಲದೇ ಅನಾವಶ್ಯಕ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ

ಆದರೆ ಇಲ್ಲಿ ಮೂಡುವ ಮತ್ತೊಂದು ಪ್ರಶ್ನೆ ಏನೆಂದರೆ ನಮ್ಮ ದೇಶದಲ್ಲಿ ಹಿಂದೂಗಳಲ್ಲಿ ಮಾತ್ರವೇ ಜಾತಿ ವ್ಯವಸ್ಥೆ ಇದೆಯೇ? ಸ್ವಾತ್ರಂತ್ರ ಬಂದ 75+ ವರ್ಷಗಳಲ್ಲಿ ನಮ್ಮ ದೇಶ ಮತ್ತು ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಜಾತಿಯ ಪಾತ್ರ ನಿಜವಾಗಿಯೂ ಕಡಿಮೆಯಾಗಿದೆಯೇ? ಅಥವಾ ಜಾತಿಯೇ ಇಡೀ ವ್ಯವಸ್ಥೆಯನ್ನು ನುಂಗಿ ಹಾಕಿದೆಯೇ? ಏಕಂದರೆ, ನಮ್ಮ ದೇಶದಲ್ಲಿ ಹುಟ್ಟಿದ ಮಗುವಿಗೆ ಕೊಡಲಾಗುವ ಜನನ ಪ್ರಮಾಣಪತ್ರ, ನಂತರ ಶಾಲೆಗೆ ಸೇರಿಸುವಾಗ, ಶಿಕ್ಷಣದ ನಂತರ ಕೆಲಸಕ್ಕೆ ಸೇರಿಕೊಳ್ಳುವಾಗ, ಕೆಲಸ ಸಿಕ್ಕಿ ಭಡ್ತಿ ಪಡೆಯುವಾಗ, ಸರ್ಕಾರದ ಯಾವುದೇ ರೀತಿಯ ಸೌಲಭ್ಯಗಳನ್ನು ಪಡೆಯುವಾಗ, ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರ ಆಯ್ಕೆ ಮಾಡಿಕೊಳ್ಳುವಾಗ, ಅಭ್ಯರ್ಥಿಗಳ ಆಯ್ಕೆ ಮತ್ತು ಸಚಿವ ಸಂಪುಟ ರಚನೆಯ ಪ್ರಮುಖ ಮಾನದಂಡವನ್ನಾಗಿ ಮಾಡಿಕೊಳ್ಳುವಾಗ ಎಲ್ಲಾ ಕಡೆಯಲ್ಲೂ ಜಾತಿಯನ್ನೇ ಮಾನದಂಡವಾಗಿಸಿರುವುದು ರಾಜಕೀಯ ಪಕ್ಷಗಳೇ ಹೊರತು ಜನಸಾಮಾನ್ಯರಲ್ಲಾ.

ಸಚಿವ ಸಂಪುಟ ರಚನೆ – ಮೊದಲ ಪ್ರಶ್ನೆ ಅರ್ಹತೆಯಾ? ಜಾತಿಯಾ?

ರಾಜ್ಯ ಅಥವಾ ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾದಾಗ ಮಾಧ್ಯಮಗಳಲ್ಲಿ ಮೊದಲು ಕೇಳಿಬರುವ ಪ್ರಶ್ನೆಗಳೇನು?

  • ಲಿಂಗಾಯತರಿಗೆ ಎಷ್ಟು ಸಚಿವ ಸ್ಥಾನ?
  • ಒಕ್ಕಲಿಗರಿಗೆ ಎಷ್ಟು?
  • ಕುರುಬರಿಗೆ ಎಷ್ಟು?
  • ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರಿಗೆ ಎಷ್ಟು? ಅದರಲ್ಲೂ ಎಡಗೈ ಮತ್ತು ಬಲಗೈ ಉಪ ಪಂಗಡ
  • ಪ್ರಾದೇಶಿಕ ಸಮತೋಲನ ಹೇಗೆ?

ಅತ್ಯಂತ ವಿರಳವಾಗಿ ಮಾತ್ರ,

  • ಯಾರಿಗೆ ಯಾವ ಕ್ಷೇತ್ರದಲ್ಲಿ ಪರಿಣತಿ ಇದೆ?
  • ಯಾವ ಸಚಿವರು ತಮ್ಮ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸಬಲ್ಲರು?

ಎಂಬ ಪ್ರಶ್ನೆಗಳು ಮೊದಲ ಆದ್ಯತೆಯಾಗುತ್ತವೆ. ಇದು ಒಂದೇ ಪಕ್ಷದ ಸಮಸ್ಯೆಯಲ್ಲ. ಭಾರತದ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಸಚಿವ ಸಂಪುಟ ರಚನೆಯಲ್ಲಿ ಜಾತಿ, ಪ್ರಾದೇಶಿಕ ಮತ್ತು ಸಮುದಾಯದ ಸಮೀಕರಣವನ್ನು ಗಮನದಲ್ಲಿಟ್ಟುಕೊಂಡೇ ಮುಂದುವರಿಯುತ್ತವೆ.

ಹಿಂದೂ ರಾಷ್ಟ್ರವಾದರೆ ಜಾತಿ ವ್ಯವಸ್ಥೆ ತಾಂಡವವಾಡುತ್ತದೆ ಎನ್ನುವ ಯತೀಂದ್ರ ಸಹಾ ಈ ರಾಜ್ಯದ ಮಂತ್ರಿಮಂಡಳದಲ್ಲಿ ಮಂತ್ರಿಯಾಗಿದ್ದೂ ಅವರ ಜಾತಿಯ ಬಲದಿಂದಲೇ ಹೊರತು ಅರ್ಹತೆಯಿಂದಲ್ಲಾ, ಇನ್ನು ಅವರ ತಂದೆ ಮಾಜಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರೂ ಸಹಾ ತಮ್ಮ ರಾಜಕೀಯ ಪ್ರಭಾವವನ್ನು ಹೆಚ್ಚಿಸಿಕೊಂಡಿದ್ದೂ ಸಹಾ ಅಹಿಂದ ( ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತರು) ಎಂಬ ಜಾತಿ ರಾಜಕಾಣದ ಪ್ರಭಾವದಿಂದಲೇ ಎನ್ನುವುದು ಸತ್ಯವಾಗಿರುವಾಗ, ತಮ್ಮ ತಟ್ಟೆಯಲ್ಲೇ ಹೆಗ್ಗಣ ಬಿದ್ದಿರುವಾಗ, ಪಕ್ಕದವರ ತಟ್ಟೆಯಲ್ಲಿ ನೋಣ ಬಿದ್ದಿರುವುದನ್ನು ಎತ್ತಿ ತೋರಿಸಿದ ಗಾದೆ ನೆನಪಾಗುತ್ತಿದೆ

ಹಿಂದೂ ರಾಷ್ಟ್ರವೇ ಜಾತಿಯನ್ನು ಹೆಚ್ಚಿಸುತ್ತದೆಯೇ, ಅಥವಾ ಮತಬ್ಯಾಂಕ್ ರಾಜಕೀಯವೇ?

ಜಾತಿ ವ್ಯವಸ್ಥೆ ಭಾರತದ ಸಾಮಾಜಿಕ ಇತಿಹಾಸದ ಒಂದು ಸಂಕೀರ್ಣ ವಾಸ್ತವ. ಆದರೆ ಇಂದಿನ ಕಾಲದಲ್ಲಿ ಅದನ್ನು ಜೀವಂತವಾಗಿಟ್ಟಿರುವ ಪ್ರಮುಖ ಕಾರಣಗಳಲ್ಲಿ ಒಂದಾಗಿ ಅನೇಕ ರಾಜಕೀಯ ವಿಶ್ಲೇಷಕರು ಮತಬ್ಯಾಂಕ್ ರಾಜಕೀಯವನ್ನು ಉಲ್ಲೇಖಿಸುತ್ತಾರೆ. ಇಂದು ಚುನಾವಣೆಯಲ್ಲಿ,

  • ಜಾತಿ ಆಧಾರಿತ ಸಮಾವೇಶಗಳು,
  • ಜಾತಿ ಸಂಘಟನೆಗಳೊಂದಿಗೆ ಮಾತುಕತೆ,
  • ಅಭ್ಯರ್ಥಿಗಳ ಆಯ್ಕೆ,
  • ಕ್ಷೇತ್ರವಾರು ಜಾತಿ ಲೆಕ್ಕಾಚಾರ,
  • ಸಚಿವ ಸಂಪುಟ ಹಂಚಿಕೆ

ಇವೆಲ್ಲವೂ ಸಾಮಾನ್ಯ ರಾಜಕೀಯ ಪ್ರಕ್ರಿಯೆಗಳಾಗಿವೆ. ಹೀಗಿರುವಾಗ, ಜಾತಿ ರಾಜಕೀಯವನ್ನು ಪ್ರತಿದಿನ ಬಳಸುವವರು ಜಾತಿಯ ವಿರುದ್ಧ ಮಾತನಾಡಿದಾಗ ಜನರಲ್ಲಿ ಸಹಜವಾಗಿಯೇ ಪ್ರಶ್ನೆಗಳು ಮೂಡುತ್ತವೆ.

ಜಾತಿ ಆಧಾರಿತ ಪೋಲೀಸ್ ಇಲಾಖೆಯ ಸಭೆ

ಪ್ರತಿ ತಿಂಗಳ ಎರಡನೇ ಭಾನುವಾರದಂದು ಕರ್ನಾಟಕ ಪೊಲೀಸರ ಎಸ್‌ಸಿ/ಎಸ್‌ಟಿ ಕುಂದುಕೊರತೆ ಸಭೆಗಳು ಪೊಲೀಸ್ ಸಿಬ್ಬಂದಿಗಾಗಿ ನಡೆಸಲು ಆಯೋಜಿಸಲಾಗಿದೆ ಎಂದು ಹೇಳಿದ್ದ ಗೃಹ ಇಲಾಖೆ, ಯಾವಾಗ ಇದಕ್ಕೆ ಜನರಿಂದ ಆಕ್ರೋಶ ಬರುತ್ತಿದ್ದಂತೆಯೇ, ತಮ್ಮ ಮಾಹಿತಿಯನ್ನು ತಿರುಚಲಾಗಿದ್ದು, ಈ ಸಭೆ ಪೊಲೀಸ್ ಸಿಬ್ಬಂದಿಗಳಿಗಲ್ಲದೇ, ಅದರ ಬದಲಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ಎಸ್‌ಸಿ/ಎಸ್‌ಟಿ) ಸಾರ್ವಜನಿಕರ ಕುಂದುಕೊರತೆಗಳು ಹಾಗೂ ಸಮಸ್ಯೆಗಳನ್ನು ಆಲಿಸುವುದು ಎಂದು ತಿಪ್ಪೇಸಾರಿಸಿದ್ದದ್ದು ಜನರಿಗೆ ತಿಳಿಯದ ವಿಷಯವೇನೂ ಅಲ್ಲ.

ಜಾತಿ ನಿರ್ಮೂಲನೆಗೆ ರಾಜಕೀಯ ಪಕ್ಷಗಳು ಏನು ಮಾಡಿವೆ?

ಜಾತಿ ವ್ಯವಸ್ಥೆಯನ್ನು ವಿರೋಧಿಸುವುದು ಒಂದು ವಿಚಾರ. ಆದರೆ ಅದನ್ನು ನಿರ್ಮೂಲನೆ ಮಾಡುವ ಪ್ರಯತ್ನವೇನು? ಉದಾಹರಣೆಗೆ,

  • ಪಕ್ಷದ ಹುದ್ದೆಗಳಲ್ಲಿ ಜಾತಿ ಲೆಕ್ಕಾಚಾರ ಇಲ್ಲವೇ?
  • ಟಿಕೆಟ್ ಹಂಚಿಕೆಯಲ್ಲಿ ಜಾತಿ ಪರಿಗಣನೆಯಿಲ್ಲವೇ?
  • ಸಚಿವ ಸಂಪುಟ ರಚನೆಯಲ್ಲಿ ಕೇವಲ ಸಾಮರ್ಥ್ಯವನ್ನೇ ನೋಡಲಾಗುತ್ತದೆಯೇ?

ಈ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ನೀಡಿದಾಗ ಮಾತ್ರ ಜಾತಿ ನಿರ್ಮೂಲನೆಯ ಬಗ್ಗೆ ನಡೆಯುವ ಚರ್ಚೆಗೆ ಹೆಚ್ಚು ವಿಶ್ವಾಸಾರ್ಹತೆ ಬರುತ್ತದೆ.

ಸಂವಿಧಾನ ಏನು ಹೇಳುತ್ತದೆ?

ಭಾರತದ ಸಂವಿಧಾನವು ಎಲ್ಲ ನಾಗರಿಕರಿಗೂ ಸಮಾನ ಹಕ್ಕುಗಳನ್ನು ನೀಡುತ್ತದೆ.

  • ಲೇಖನ 14 – ಸಮಾನತೆ.
  • ಲೇಖನ 15 – ಜಾತಿ, ಧರ್ಮ, ಲಿಂಗದ ಆಧಾರದ ಮೇಲೆ ತಾರತಮ್ಯ ನಿಷೇಧ.
  • ಲೇಖನ 16 – ಸರ್ಕಾರಿ ಉದ್ಯೋಗದಲ್ಲಿ ಸಮಾನ ಅವಕಾಶ.

ಅದೇ ಸಮಯದಲ್ಲಿ, ಐತಿಹಾಸಿಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಮೀಸಲಾತಿಯಂತಹ ವಿಶೇಷ ಕ್ರಮಗಳಿಗೂ ಅವಕಾಶ ನೀಡಲಾಗಿದೆ. ಹೀಗಾಗಿ ಸಂವಿಧಾನದ ಉದ್ದೇಶ ಜಾತಿಯನ್ನು ಶಾಶ್ವತವಾಗಿ ಉಳಿಸುವುದು ಅಲ್ಲ; ಸಾಮಾಜಿಕ ನ್ಯಾಯದ ಮೂಲಕ ಸಮಾನ ಅವಕಾಶ ಕಲ್ಪಿಸುವುದು.

ಹಿಂದೂ ರಾಷ್ಟ್ರದ ಕಲ್ಪನೆ ಎಂದರೇನು?

ಹಿಂದೂ ರಾಷ್ಟ್ರ ಎಂಬ ಪರಿಕಲ್ಪನೆಗೆ ಒಂದೇ ಅರ್ಥವಿಲ್ಲ. ಕೆಲವರ ದೃಷ್ಟಿಯಲ್ಲಿ ಅದು ಹಿಂದೂ ಧರ್ಮವನ್ನೇ ರಾಜ್ಯಧರ್ಮವನ್ನಾಗಿ ಮಾಡುವ ರಾಷ್ಟ್ರ ಎಂದಿದ್ದರೆ, ನಿಜವಾಗಿಯೂ ಅದು ಯಾವುದೇ ಒಂದು ಧರ್ಮದ ದೇಶವಾಗಿರದೇ ಬದಲಾಗಿ ಭಾರತದ ಬಹು ಸಹಸ್ರ ವರ್ಷಗಳ ನಾಗರಿಕತೆ, ಸಂಸ್ಕೃತಿ, ಪರಂಪರೆ, ತತ್ವಚಿಂತನೆ ಮತ್ತು ಜೀವನಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡ ರಾಷ್ಟ್ರಭಾವನೆ ಎಂಬ ಅರ್ಥ ಹೊಂದಿದೆ. ನಮ್ಮ ಉಪನಿಷತ್ತಿನಲ್ಲಿಯೇ ಹೇಳಿರುವಂತೆ ವಸುದೈವ ಕುಟುಂಬಕಂ ಎಂದರೆ ಇಡೀ ಜಗತ್ತೇ ಒಂದು ಕುಟುಂಬ ಎಂದರ್ಥ.  ಭಾರತದಲ್ಲಿ ಎಲ್ಲಾ ಧರ್ಮ ಪಂಥದವರಿಗೂ ಸಮಾನವಾಗಿ ವಾಸಿರುವ ಹಕ್ಕಿದ್ದು, ಇಡೀ ವಿಶ್ವಕ್ಕೆ ನೀಡಿದ ಕೊಡುಗೆಗಳಾದ ಯೋಗ, ವೇದಾಂತ, ಉಪನಿಷತ್ತು, ಆಯುರ್ವೇದ, ಧ್ಯಾನ, ಅಹಿಂಸೆ ಮುಂತಾದ ಪರಂಪರೆಗಳ  ಮೇಲೆ ಆಳ್ವಿಕೆ ನಡೆಯಲ್ಪಡುತ್ತದೆಯೇ ಹೊರತು, ಯಾರನ್ನಾದರೂ ವಿರೋಧಿಸುವ ಇಲ್ಲವೇ ಹೊರಗಟ್ಟುವ  ರಾಜಕೀಯ ವ್ಯವಸ್ಥೆಯ ಬದಲಾವಣೆಯಲ್ಲ

ಸಮಾಜ ಸುಧಾರಣೆಯ ಪರಂಪರೆ

ಭಾರತದ ಇತಿಹಾಸದಲ್ಲಿ,

  • ಬಸವಣ್ಣ,
  • ಶ್ರೀ ನಾರಾಯಣ ಗುರು,
  • ಸ್ವಾಮಿ ವಿವೇಕಾನಂದ,
  • ಮಹಾತ್ಮ ಗಾಂಧಿ,
  • ಡಾ. ಬಿ.ಆರ್. ಅಂಬೇಡ್ಕರ್

ಇವರಂತಹ ಅನೇಕ ಮಹನೀಯರು ಜಾತಿ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಅಂದರೆ, ಜಾತಿ ನಿರ್ಮೂಲನೆಯ ಹೋರಾಟವು ಭಾರತೀಯ ಸಮಾಜದೊಳಗೇ ಬಹುಕಾಲದಿಂದ ನಡೆಯುತ್ತಲೇ ಬಂದಿದೆ.  ಆದರೆ,  ಹೆಜ್ಜೆ ಹೆಜ್ಜೆಗೂ ಜಾತಿಯನ್ನೇ ಒಪ್ಪಿ ಅಪ್ಪಿಕೊಂಡಿರುವ ಈ ರಾಜಕಾರಣಿಗಳಿಗೆ ಈ ಸುಧಾರಣೆಗಳಿಂದಾಗಿ ಹಿಂದೂಗಳು ಒಗ್ಗಟ್ಟಾದಲ್ಲಿ ತಮ್ಮ ರಾಜಕೀಯ ಬೇಳೆ ಬೇಯುವುದಿಲ್ಲ ಎಂಬ ಕಾರಣದಿಂದ ಹಿಂದೂ ಧರ್ಮದಲ್ಲಿ ಮಾತ್ರವಲ್ಲದೇ ಮುಸ್ಲಿಮ್ಮರಲ್ಲಿ ಮತ್ತು ಕ್ರಿಶ್ಚಿಯನ್ನರಲ್ಲೂ ಜಾತಿ ಮತ್ತು ಉಪಜಾತಿಗಳಿವೆ ಎಂಬುದನ್ನು ಮರೆ ಮಾಚಿ, ಬ್ರಿಟೀಷರಂತೆ ಹಿಂದೂಗಳನ್ನು ಜಾತಿಯ ಹೆಸರಿನಲ್ಲಿ ಮತ್ತೆ ಮತ್ತೆ ಒಡೆಡು ತಾವು ಅಧಿಕಾರಕ್ಕೇರುವ ಹುನ್ನಾರ ನಡೆಸುತ್ತಿರುವುದು ದೇಶದ ಹಿತಕ್ಕೆ ಮಾರಕವಾಗಿದೆ

ಮೂಲ ಪ್ರಶ್ನೆ ಇದೇ

ಯಾವುದೇ ರಾಜಕೀಯ ನಾಯಕ ಜಾತಿ ವ್ಯವಸ್ಥೆಯ ಬಗ್ಗೆ ಆತಂಕ ವ್ಯಕ್ತಪಡಿಸಬಹುದು. ಆದರೆ ಜನರು ಕೇಳುವ ಪ್ರಶ್ನೆ ಸರಳವಾಗಿದೆ: ಜಾತಿ ಆಧಾರಿತ ರಾಜಕೀಯವನ್ನು ಮೊದಲು ನಿಲ್ಲಿಸಲು ರಾಜಕೀಯ ಪಕ್ಷಗಳು ಸಿದ್ಧವೇ?

ಏಕೆಂದರೆ,

  • ಟಿಕೆಟ್ ಹಂಚಿಕೆ ಜಾತಿ ಆಧಾರಿತ,
  • ಸಚಿವ ಸಂಪುಟ ಜಾತಿ ಸಮೀಕರಣದ ಆಧಾರಿತ,
  • ಚುನಾವಣೆ ಜಾತಿ ಲೆಕ್ಕಾಚಾರದ ಆಧಾರಿತ,
  • ಮತಬ್ಯಾಂಕ್ ಕೂಡ ಜಾತಿಯ ಆಧಾರಿತ

ಆಗ ಜಾತಿಯ ಬಗ್ಗೆ ಮಾಡುವ ಟೀಕೆ ಜನರಿಗೆ ವೈಚಾರಿಕವಾಗಿ ಅಪೂರ್ಣವಾಗಿ ಕಾಣುವುದು ಸಹಜ.

ಹಿಂದೂ ಧರ್ಮ ಮತ್ತು ಹಿಂದುತ್ವ

ಇನ್ನು ಹಿಂದೂ ಧರ್ಮ ಬೇರೆ ಮತ್ತು ಹಿಂದುತ್ವ ಬೇರೆ ಎಂದು ಗೊಂದಲವನ್ನು ಹುಟ್ಟು ಹಾಕುತ್ತಿರುವವರಿಗೆ, ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ಈ ದೇಶದ ಮೇಲೆ ಧಾಳಿ ಮಾಡುವ ಮುನ್ನಾ ಈ ದೇಶದಲ್ಲಿ ಇದ್ದವರು ಕೇವಲ ಹಿಂದೂಗಳು ಮತ್ತು ಹಿಂದೂ ಧರ್ಮದಿಮ್ದ ವಿವಿಧ ಕಾರಣಗಳಿಂದ ಹಿಂದೂ ಧರ್ಮದ ಟಿಸಿಲಾಗಿ ಹೊಮ್ಮಿದ್ದ ಪಂಥಗಳು. ಹಾಗಾಗಿ ಅಂದಿನಿಂದಲೂ ಭಾರತವನ್ನು ಇಡೀ ಜಗತ್ತು ಹಿಂದೂಸ್ಥಾನ ಎಂದೇ ಗುರುತಿಸುತ್ತಿತ್ತು. ಇಂದಿಗೂ ಅದು ಹಾಗೆಯೇ ಮುಂದುವರೆದಿದೆ ಎಂಬುದರ ಅರಿವಿರ ಬೇಕು.

ಸುಮಾರು ಏಳನೇ ಶತಮಾನದಿಂದ ಮೊಘಲರು ಭಾರತದ ಮೇಲೆ ನಿರಂತರವಾಗಿ ಧಾಳಿ ನಡೆಸುತ್ತಾ, ಇಲ್ಲಿನ ಹಿಂದೂ ದೇವಾಲಯಗಳನ್ನು ಹಾಳು ಮಾಡುತ್ತಾ, ಸಂಪತ್ತನ್ನು ಲೂಟಿ ಮಾಡುತ್ತಾ, ನಂತರದ ದಿನಗಳಲ್ಲಿ ಆಮಿಷದಿಂದಲೋ ಭಯದಿಂದಲೋ ಇಲ್ಲಿನ ಹಿಂದೂಗಳನ್ನು ಮತಾಂತರವನ್ನು ಮಾಡುತ್ತಾ ಉತ್ತರ ಭಾರತದ ಬಹಳಷ್ಟು ರಾಜ್ಯಗಳನ್ನು ಕೈವಶ ಮಾಡಿಕೊಂಡಿದ್ದಂತಹ ಸಂಧರ್ಭದಲ್ಲಿ, ವಿಜಯನಗರ ಸಾಮ್ರಾಜ್ಯವನ್ನು 1336ರ ಏಪ್ರಿಲ್ 28ರಂದು ಹರಿಹರ ಮತ್ತು ಬುಕ್ಕರಾಯ ಎಂಬ ಸಹೋದರರು ಗುರು ವಿದ್ಯಾರಣ್ಯರ ಸಾರಥ್ಯದಲ್ಲಿ ಸ್ಥಾಪಿಸಿದ್ದೇ ಹೈಂದವೀ ಸಾಮ್ರಾಜ್ಯ. ಅದೇ ರೀತಿ 1674ರ ಜೂನ್ 6ರಂದು ಹಿಂದೂ ಹೃದಯ ಸಾಮ್ರಾಟ ಎಂಬ ಕೀರ್ತಿಯಿಂದಲೇ, ಛತ್ರಪತಿ ಶಿವಾಜಿ ಮಹಾರಾಜರು. ಹಿಂದೂ ಸಾಮ್ರಾಜ್ಯದ ಅಧಿಕಾರಕ್ಕೆ ಏರಿದ್ದು. ಹಾಗಾಗಿ ಅನಾದಿ ಕಾಲದಿಂದಲೂ ಹಿಂದೂ ಧರ್ಮ ಮತ್ತು ಹಿಂದುತ್ವ ಎಂಬದು ಇಲ್ಲಿನ ಜನರ ರಕ್ತದ ಕಣಕಣಗಳಲ್ಲಿಯೇ ಇದ್ದು ಅದು ಇವರು ಹೇಳುವಂತೆ ಸಾವರ್ಕರ್ ಅವರು ಹುಟ್ಟು ಹಾಕಿದ ಪದ ಅಥವಾ ಸಂಸ್ಕೃತಿಯಲ್ಲಾ. ನೂರಾರು ವರ್ಷಗಳ ಮುಂಚೆಯೇ ನಮ್ಮ ದೇಶದಲ್ಲಿ ಹಿಂದೂಗಳು ಮತ್ತು ಹಿಂದುತ್ವ ಇತ್ತು, ಈಗಲೂ ಇರುತ್ತದೆ ಮತ್ತು ಮುಂದೆಯೂ ಇರುತ್ತದೆ. ಹಾಗಾಗಿ ಹಿಂದೂತ್ವ ಎನ್ನುವುದು ವಾಟ್ಸಾಪ್ ಯೂನಿವರ್ಸಿಟಿಯ ಕಟ್ಟು ಕಥೆ ಎಂದು ಕಾಂಗ್ರೇಸ್ಸಿಗರು ಹೇಳುವುದು ನೋಡಿದರೆ, ಅವರಿಗೆ ಈ ದೇಶದ ಇತಿಹಾಸವೇ ತಿಳಿದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಯಾರಿಗೆ ತಮ್ಮ ದೇಶದ ಇತಿಹಾಸದ ಅರಿವಿಲ್ಲವೋ ಅವರು ಇತಿಹಾಸವನ್ನು ನಿರ್ಮಿಸಲಾರರು ಎಂಬ ಮಾತು ಇಂತಹವರಿಗೇ ಹೇಳಿ ಮಾಡಿಸಿದ್ದೇನೋ ಎಂದನಿಸುತ್ತದೆ

ಕೊನೆಯ ಮಾತು

ಭಾರತದ ಭವಿಷ್ಯವು ಜಾತಿ ಆಧಾರಿತ ರಾಜಕೀಯದಿಂದಲ್ಲ, ಸಾಮರ್ಥ್ಯ, ಸಮಾನ ಅವಕಾಶ, ಶಿಕ್ಷಣ ಮತ್ತು ಸಾಮಾಜಿಕ ಸಾಮರಸ್ಯದಿಂದ ನಿರ್ಮಾಣವಾಗಬೇಕು. ಜಾತಿ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯುವುದು ತಪ್ಪಲ್ಲ. ಆದರೆ ಅದೇ ಚರ್ಚೆಯನ್ನು ಮಾಡುವವರು ತಮ್ಮ  ವಯಕ್ತಿಕ ಜೀವನದಲ್ಲಿ ಮತ್ತು ರಾಜಕೀಯದಲ್ಲಿಯೂ ಅದೇ ತತ್ವವನ್ನು ಅನುಸರಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸುವ ಜವಾಬ್ದಾರಿಯೂ ಇದೆ. ಜಾತಿ ನಿರ್ಮೂಲನೆ ಕೇವಲ ಭಾಷಣಗಳಿಂದ ಸಾಧ್ಯವಿಲ್ಲ. ರಾಜಕೀಯದ ಕಾರ್ಯಪದ್ಧತಿಯಲ್ಲಿಯೇ ಬದಲಾವಣೆ ಬಂದಾಗ ಮಾತ್ರ ಅದು ಸಾಧ್ಯ ಆಗುತ್ತದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply