ಭಾರತೀಯ ಕ್ರಿಕೆಟ್ ತಂಡದಲ್ಲಿ ಮತ್ತೆ ಸೆಹ್ವಾಗ್–ದ್ರಾವಿಡ್ ಕಲರವ!

ಮಕ್ಕಳ ರೂಪದಲ್ಲಿ ಮರಳಿದ ಕ್ರಿಕೆಟ್ ದಿಗ್ಗಜರ ನೆನಪು

ವಿರೇಂದರ್ ಸೆಹ್ವಾಗ್ ಮತ್ತು ಕನ್ನಡಿಗ ರಾಹುಲ್ ದ್ರಾವಿಡ್—ಭಾರತೀಯ ಕ್ರಿಕೆಟ್‌ನ ಎರಡು ವಿಭಿನ್ನ ಬ್ಯಾಟಿಂಗ್ ಶೈಲಿಗಳ ಪ್ರತೀಕಗಳು. ಒಬ್ಬರು ಬೌಲರ್‌ಗಳ ಎದೆಯ ಮೇಲೆ ಚೆಂಡನ್ನು ಬಡಿದು ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈಯುತ್ತಿದ್ದ ‘ಮುಲ್ತಾನ್ ಸುಲ್ತಾನ್’ ಸೆಹ್ವಾಗ್; ಮತ್ತೊಬ್ಬರು ಗಂಟೆಗಟ್ಟಲೆ ಕ್ರೀಸ್‌ನಲ್ಲಿ ನಿಂತು ಎದುರಾಳಿ ಬೌಲರ್‌ಗಳ ತಾಳ್ಮೆಯನ್ನೇ ಪರೀಕ್ಷಿಸುತ್ತಿದ್ದ ‘ದಿ ವಾಲ್’ ರಾಹುಲ್ ದ್ರಾವಿಡ್. ಇದೀಗ ಈ ಇಬ್ಬರು ದಿಗ್ಗಜರ ನೆನಪು ಮತ್ತೆ ಭಾರತೀಯ ಕ್ರಿಕೆಟ್‌ನಲ್ಲಿ ಮೂಡಿದೆ. ಕಾರಣ, ಅವರ ಪುತ್ರರಾದ ಆರ್ಯವೀರ್ ಸೆಹ್ವಾಗ್ ಮತ್ತು ಅನ್ವಯ್ ದ್ರಾವಿಡ್ ಭಾರತ ಅಂಡರ್-19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ! ಇದು ಕೇವಲ ಇಬ್ಬರು ಸ್ಟಾರ್ ಕ್ರಿಕೆಟಿಗರ ಮಕ್ಕಳು ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿಯಲ್ಲ. ಭಾರತೀಯ ಕ್ರಿಕೆಟ್‌ನ ಎರಡು ವಿಭಿನ್ನ ಬ್ಯಾಟಿಂಗ್ ತತ್ವಗಳ ಮುಂದುವರಿಕೆಯ ಸಾಧ್ಯತೆಯನ್ನೂ ಈ ಆಯ್ಕೆ ಅಭಿಮಾನಿಗಳ ಮುಂದೆ ತೆರೆದಿಟ್ಟಿದೆ.

ಒಬ್ಬರು ಹೊಡಿಬಡಿ ನಜಫ್‌ಗಢದ ಬ್ಯಾಟಿಂಗ್‌ನ ರಾಜ, ಮತ್ತೊಬ್ಬರು ‘ದಿ ವಾಲ್’!

ವಿರೇಂದರ್ ಸೆಹ್ವಾಗ್ ಎಂದರೆ ಮೊದಲಿಗೆ ನೆನಪಾಗುವುದು ಅವರ ನಿರ್ಭೀತ ಬ್ಯಾಟಿಂಗ್. ಚೆಂಡು ಹೊಸದಾಗಿರಲಿ, ಎದುರು ವಿಶ್ವದ ಶ್ರೇಷ್ಠ ವೇಗದ ಬೌಲರ್‌ಗಳಿರಲಿ—ಸೆಹ್ವಾಗ್ ಅವರ ಬ್ಯಾಟ್ ಮಾತ್ರ ತನ್ನದೇ ಭಾಷೆಯಲ್ಲಿ ಮಾತನಾಡುತ್ತಿತ್ತು.

ಟೆಸ್ಟ್ ಕ್ರಿಕೆಟ್‌ನಲ್ಲಿ 104 ಪಂದ್ಯಗಳಿಂದ 8,586 ರನ್, ಗರಿಷ್ಠ 319 ರನ್, 23 ಶತಕ ಮತ್ತು 32 ಅರ್ಧಶತಕಗಳನ್ನು ಗಳಿಸಿರುವ ಸೆಹ್ವಾಗ್, ಏಕದಿನ ಕ್ರಿಕೆಟ್‌ನಲ್ಲಿ 251 ಪಂದ್ಯಗಳಿಂದ 8,273 ರನ್ ಗಳಿಸಿದ್ದಾರೆ. ಏಕದಿನದಲ್ಲಿ ಅವರ ಗರಿಷ್ಠ ಸ್ಕೋರ್ 219.

ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಎರಡು ತ್ರಿಶತಕಗಳು ವಿಶೇಷ. ಪಾಕಿಸ್ತಾನದ ವಿರುದ್ಧ ಮುಲ್ತಾನ್‌ನಲ್ಲಿ 2004ರಲ್ಲಿ 309 ರನ್ ಗಳಿಸಿದ್ದ ಸೆಹ್ವಾಗ್, ದಕ್ಷಿಣ ಆಫ್ರಿಕಾ ವಿರುದ್ಧ ಚೆನ್ನೈನಲ್ಲಿ 2008ರಲ್ಲಿ 309* ಗಳಿಸಿದರು. ಎರಡನೇ ತ್ರಿಶತಕವನ್ನು ಕೇವಲ 278 ಎಸೆತಗಳಲ್ಲಿ ಪೂರ್ಣಗೊಳಿಸಿ ಟೆಸ್ಟ್ ಇತಿಹಾಸದಲ್ಲೇ ವೇಗವಾಗಿ 300 ರನ್ ತಲುಪಿದ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದರು.

ಟೆಸ್ಟ್‌ನಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ತ್ರಿಶತಕಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಡಾನ್ ಬ್ರಾಡ್‌ಮನ್, ಬ್ರಿಯಾನ್ ಲಾರಾ ಮತ್ತು ಕ್ರಿಸ್ ಗೇಲ್ ಅವರೊಂದಿಗೆ ಸೆಹ್ವಾಗ್ ಕೂಡ ಸ್ಥಾನ ಪಡೆದಿದ್ದಾರೆ.

ಇನ್ನೊಂದೆಡೆ, ರಾಹುಲ್ ದ್ರಾವಿಡ್ ಎಂದರೆ ತಾಳ್ಮೆ, ತಂತ್ರಗಾರಿಕೆ ಮತ್ತು ರಕ್ಷಣೆಯ ಪರ್ಯಾಯ ಪದವೇ ಸರಿ.

Rahul Dravid plays a defensive shot | Cricinfo.com

164 ಟೆಸ್ಟ್ ಪಂದ್ಯಗಳಲ್ಲಿ 13,288 ರನ್, 36 ಶತಕ ಮತ್ತು 63 ಅರ್ಧಶತಕ—ಈ ಅಂಕಿ-ಅಂಶಗಳೇ ದ್ರಾವಿಡ್ ಅವರ ಮಹತ್ವವನ್ನು ಹೇಳುತ್ತವೆ. ಅವರ ಗರಿಷ್ಠ ಟೆಸ್ಟ್ ಸ್ಕೋರ್ 270.  ಆದರೆ ದ್ರಾವಿಡ್ ಅವರ ನಿಜವಾದ ವಿಶೇಷತೆ ಕೇವಲ ರನ್‌ಗಳಲ್ಲ. ಅತ್ಯುತ್ತಮ ತಂತ್ರಗಾರಿಕೆಯನ್ನು ಹೊಂದಿದ್ದ ಪರಿಪೂರ್ಣ ರಕ್ಷಣಾತ್ಮಕ ಬ್ಯಾಟಿಂಗ್ ಶೈಲಿಯು ಅವರನ್ನು ಔಟ್ ಮಾಡುವುದನ್ನು ಅತ್ಯಂತ ಕಷ್ಟಕರವಾಗಿಸಿತ್ತು.  ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಎದುರಿಸಿದ 31,258 ಎಸೆತಗಳು ಇಂದಿಗೂ ವಿಶೇಷ ದಾಖಲೆ. ಯಾವುದೇ ಬ್ಯಾಟರ್‌ಗಿಂತ ಹೆಚ್ಚು ಎಸೆತಗಳನ್ನು ಎದುರಿಸಿರುವ ಆಟಗಾರ ಎಂಬ ಹೆಗ್ಗಳಿಕೆ ಅವರದ್ದು. ದೃಢವಾದ ರಕ್ಷಣಾತ್ಮಕ ಆಟ, ಅಪಾರ ತಾಳ್ಮೆ ಮತ್ತು ತೀವ್ರ ಒತ್ತಡದ ನಡುವೆಯೂ ದೀರ್ಘಕಾಲದವರೆಗೆ ಬ್ಯಾಟಿಂಗ್ ಮಾಡುವ ಸಾಮರ್ಥ್ಯಕ್ಕಾಗಿ ಕ್ರಿಕೆಟ್‌ನ  ದಿ ವಾಲ್ ಎಂಬ ಬಿರುದು ಅವರಿಗೆ ಅಕ್ಷರಶಃ ಹೊಂದಿಕೊಂಡಿತ್ತು.

ಈಗ ಅಪ್ಪಂದಿರ ಜಾಗದಲ್ಲಿ ಮಕ್ಕಳು!

ಇಂತಹ ಇಬ್ಬರು ಮಹಾನ್ ಆಟಗಾರರು ನಿವೃತ್ತರಾದ ನಂತರ, ಸೆಹ್ವಾಗ್‌ನಂತಹ ಹೊಡಿಬಡಿ ಬ್ಯಾಟಿಂಗ್ ಮತ್ತು ದ್ರಾವಿಡ್‌ನಂತಹ ತಾಳ್ಮೆಯ ಆಟವನ್ನು ಮತ್ತೆ ಯಾವಾಗ ನೋಡುತ್ತೇವೆ? ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಈಗ ಕ್ರಿಕೆಟ್ ಅಭಿಮಾನಿಗಳ ಮುಂದೆ ಒಂದು ಕುತೂಹಲಕಾರಿ ಅಧ್ಯಾಯ ತೆರೆದುಕೊಂಡಿದೆ.

ಬಿಸಿಸಿಐ ಆಗಸ್ಟ್ 27, 2026ರಂದು ಪ್ರಕಟಿಸಿರುವ ಭಾರತ ಅಂಡರ್-19 ತಂಡದಲ್ಲಿ ವಿರೇಂದರ್ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಹಾಗೂ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ. ಇಬ್ಬರೂ ಮುಂಬರುವ ಆಸ್ಟ್ರೇಲಿಯಾ ಅಂಡರ್-19 ತಂಡದ ಭಾರತ ಪ್ರವಾಸದ ಮೂರು ಏಕದಿನ ಪಂದ್ಯಗಳ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.  ಆದರೆ ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಸಂಗತಿಯಿದೆ—ಇಬ್ಬರೂ ಮಲ್ಟಿ-ಡೇ ಪಂದ್ಯಗಳ ತಂಡದಲ್ಲಿ ಸ್ಥಾನ ಪಡೆದಿಲ್ಲ. ಬಿಸಿಸಿಐ ಏಕದಿನ ಮತ್ತು ಮಲ್ಟಿ-ಡೇ ಪಂದ್ಯಗಳಿಗೆ ಪ್ರತ್ಯೇಕ ತಂಡಗಳನ್ನು ಪ್ರಕಟಿಸಿದೆ.

ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಸವಾಲು

ಆಸ್ಟ್ರೇಲಿಯಾ ಅಂಡರ್-19 ತಂಡದ ಭಾರತ ಪ್ರವಾಸದಲ್ಲಿ ಒಟ್ಟು ಐದು ಪಂದ್ಯಗಳು ನಡೆಯಲಿವೆ. ಅದರಲ್ಲಿ ಮೂರು ಏಕದಿನ ಪಂದ್ಯಗಳು ಮತ್ತು ಎರಡು ಮಲ್ಟಿ-ಡೇ ಪಂದ್ಯಗಳು ಸೇರಿವೆ.

ಏಕದಿನ ಪಂದ್ಯಗಳು:

  • ಸೆಪ್ಟೆಂಬರ್ 18 – ಮೊದಲ ಏಕದಿನ, ರಾಜ್‌ಕೋಟ್
  • ಸೆಪ್ಟೆಂಬರ್ 21 – ಎರಡನೇ ಏಕದಿನ, ರಾಜ್‌ಕೋಟ್
  • ಸೆಪ್ಟೆಂಬರ್ 23 – ಮೂರನೇ ಏಕದಿನ, ರಾಜ್‌ಕೋಟ್

ಈ ಮೂರು ಪಂದ್ಯಗಳು ಬೆಳಗ್ಗೆ 9:00 ಗಂಟೆಗೆ ಆರಂಭವಾಗಲಿವೆ.

ನಂತರ ಮಲ್ಟಿ-ಡೇ ಪಂದ್ಯಗಳು:

  • ಸೆಪ್ಟೆಂಬರ್ 27–30 – ಮೊದಲ ಮಲ್ಟಿ-ಡೇ ಪಂದ್ಯ, ರಾಜ್‌ಕೋಟ್
  • ಅಕ್ಟೋಬರ್ 5–8 – ಎರಡನೇ ಮಲ್ಟಿ-ಡೇ ಪಂದ್ಯ, ಅಹಮದಾಬಾದ್

ಈ ಪಂದ್ಯಗಳು ಬೆಳಗ್ಗೆ 9:30ಕ್ಕೆ ಆರಂಭವಾಗಲಿವೆ.

ಯಾರ ಕೈಯಲ್ಲಿ ತಂಡದ ನಾಯಕತ್ವ?

ಏಕದಿನ ಸರಣಿಯಲ್ಲಿ ಲಕ್ಷ್ಯ ರಾಯ್‌ಚಂದಾನಿ ಭಾರತ ಅಂಡರ್-19 ತಂಡವನ್ನು ಮುನ್ನಡೆಸಲಿದ್ದು, ಯಶ್‌ವರ್ಧನ್ ಚೌಹಾಣ್ಉಪನಾಯಕರಾಗಿದ್ದಾರೆ. ಮಲ್ಟಿ-ಡೇ ಪಂದ್ಯಗಳಲ್ಲಿ ನಾಯಕತ್ವದ ಜವಾಬ್ದಾರಿ ಯಶ್‌ವರ್ಧನ್ ಚೌಹಾಣ್ ಅವರಿಗೆ ನೀಡಲಾಗಿದ್ದು, ಲಕ್ಷ್ಯ ರಾಯ್‌ಚಂದಾನಿ ಉಪನಾಯಕರಾಗಿದ್ದಾರೆ.  ಅಂದರೆ, ಬಿಸಿಸಿಐ ಭವಿಷ್ಯದ ಆಟಗಾರರನ್ನು ವಿವಿಧ ಮಾದರಿಗಳಲ್ಲಿ ಪರೀಕ್ಷಿಸಲು ಪ್ರತ್ಯೇಕ ತಂಡಗಳ ಮೂಲಕ ಅವಕಾಶ ಕಲ್ಪಿಸಿದೆ.

ಆರ್ಯವೀರ್ ಸೆಹ್ವಾಗ್: ಅಪ್ಪನಂತೆ ಬಲಗೈ ಬ್ಯಾಟರ್, ಆದರೆ ತನ್ನದೇ ಗುರುತು!

18 ವರ್ಷದ ಆರ್ಯವೀರ್ ಸೆಹ್ವಾಗ್ ಬಲಗೈ ಬ್ಯಾಟರ್. ಇದೇ ಮೊದಲ ಬಾರಿಗೆ ಅವರು ಭಾರತ ಅಂಡರ್-19 ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಇತ್ತೀಚಿನ ಪ್ರದರ್ಶನಗಳು ಆಯ್ಕೆಗಾರರ ಗಮನ ಸೆಳೆದಿರುವುದರಲ್ಲಿ ಆಶ್ಚರ್ಯವೇನಿಲ್ಲ. ವಿಶೇಷವಾಗಿ 2024ರ ಕೂಚ್ ಬೆಹಾರ್ ಟ್ರೋಫಿಯಲ್ಲಿ ದೆಹಲಿ ಪರ ಮೇಘಾಲಯದ ವಿರುದ್ಧ 297 ರನ್ ಗಳಿಸಿದ್ದ ಅವರ ಇನ್ನಿಂಗ್ಸ್ ಇನ್ನೂ ಕ್ರಿಕೆಟ್ ಪ್ರಿಯರ ನೆನಪಿನಲ್ಲಿದೆ. ಕೇವಲ 309 ಎಸೆತಗಳಲ್ಲಿ 297 ರನ್, 51 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಸಿಡಿಸಿದ್ದ ಆರ್ಯವೀರ್ ಕೇವಲ ಮೂರು ರನ್‌ಗಳಿಂದ ತ್ರಿಶತಕ ತಪ್ಪಿಸಿಕೊಂಡಿದ್ದರು.

ಆ ಇನ್ನಿಂಗ್ಸ್‌ನ ಮತ್ತೊಂದು ಕುತೂಹಲಕಾರಿ ಸಂಗತಿ ಎಂದರೆ, ಅವರ ತಂದೆ ವಿರೇಂದರ್ ಸೆಹ್ವಾಗ್ ತಮ್ಮ ಟೆಸ್ಟ್ ವೃತ್ತಿಜೀವನದ ಗರಿಷ್ಠ ಸ್ಕೋರ್ 319ರನ್‌ಗಿಂತ ಆರ್ಯವೀರ್ ಹೆಚ್ಚು ರನ್ ಗಳಿಸಿದರೆ ‘ಫೆರಾರಿ’ ಕೊಡಿಸುವುದಾಗಿ ಹಿಂದೆ ಹೇಳಿದ್ದ ಮಾತು ಮತ್ತೆ ಸುದ್ದಿಯಾಗಿತ್ತು. 297ಕ್ಕೆ ಔಟಾದ ನಂತರ ಸೆಹ್ವಾಗ್ “23 ರನ್‌ಗಳಿಂದ ಫೆರಾರಿ ತಪ್ಪಿತು” ಎಂಬ ಹಾಸ್ಯಮಯ ಪ್ರತಿಕ್ರಿಯೆ ನೀಡಿದ್ದರು.

ಇತ್ತೀಚೆಗೆ ನಡೆಯುತ್ತಿರುವ ದೆಹಲಿ ಪ್ರೀಮಿಯರ್ ಲೀಗ್ 2026ನಲ್ಲಿಯೂ ಆರ್ಯವೀರ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಗಮನ ಸೆಳೆದಿದೆ. ವೆಸ್ಟ್ ದೆಹಲಿ ಲಯನ್ಸ್ ಪರ ಆಡುತ್ತಿರುವ ಅವರ ಸ್ಟ್ರೋಕ್‌ಪ್ಲೇಯಲ್ಲಿ ಸೆಹ್ವಾಗ್ ಅವರ ಛಾಯೆ ಕಾಣುತ್ತದೆ ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗಿದೆ.  ಆದರೆ ಆರ್ಯವೀರ್‌ಗೆ ಈಗ ದೊಡ್ಡ ಸವಾಲು ಒಂದೇ—ಅಪ್ಪನ ನೆರಳಿನಿಂದ ಹೊರಬಂದು ತನ್ನದೇ ಹೆಸರನ್ನು ನಿರ್ಮಿಸಿಕೊಳ್ಳುವುದು.

ಅನ್ವಯ್ ದ್ರಾವಿಡ್: ‘ದಿ ವಾಲ್’ ಪುತ್ರನಿಗೆ ವಿಕೆಟ್ ಹಿಂದಿನ ಜವಾಬ್ದಾರಿ

ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ 17 ವರ್ಷದ ಅನ್ವಯ್ ದ್ರಾವಿಡ್ ವಿಕೆಟ್‌ಕೀಪರ್-ಬ್ಯಾಟರ್ ಆಗಿ ಭಾರತ ಅಂಡರ್-19 ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದು ಅವರ ಮೊದಲ ರಾಷ್ಟ್ರೀಯ ಅವಕಾಶವಲ್ಲ. 2026ರ ಜುಲೈನಲ್ಲಿ ನಡೆದ ಭಾರತ ಅಂಡರ್-19 ತಂಡದ ಶ್ರೀಲಂಕಾ ಪ್ರವಾಸದಲ್ಲಿಯೂ ಅನ್ವಯ್ ತಂಡದ ಭಾಗವಾಗಿದ್ದರು. ಆ ಪ್ರವಾಸದ ಎರಡು ಏಕದಿನ ಪಂದ್ಯಗಳಲ್ಲಿ ಅವರು ಕ್ರಮವಾಗಿ 14 ಮತ್ತು 87 ರನ್ ಗಳಿಸಿದ್ದರು. ಅದರಲ್ಲೂ 87 ರನ್‌ಗಳ ಇನ್ನಿಂಗ್ಸ್ ಅವರ ಸ್ಥಾನವನ್ನು ಮತ್ತಷ್ಟು ಬಲಪಡಿಸಿತು.

ಬಿಸಿಸಿಐ ಪ್ರಕಟಿಸಿರುವ ಪ್ರಸ್ತುತ ತಂಡದಲ್ಲಿ ಅನ್ವಯ್ ವಿಕೆಟ್‌ಕೀಪರ್‌ಗಳ ಪೈಕಿ ಒಬ್ಬರಾಗಿದ್ದು, ರಾಜತ್ ಬಘೇಲ್ ಕೂಡ ವಿಕೆಟ್‌ಕೀಪರ್ ಆಗಿ ತಂಡದಲ್ಲಿದ್ದಾರೆ.  ಇಲ್ಲಿ ಮತ್ತೊಂದು ಆಸಕ್ತಿದಾಯಕ ಸಂಗತಿಯೆಂದರೆ—ರಾಹುಲ್ ದ್ರಾವಿಡ್ ಬ್ಯಾಟಿಂಗ್‌ನಲ್ಲಷ್ಟೇ ಅಲ್ಲ, ವಿಕೆಟ್‌ಕೀಪಿಂಗ್‌ನಲ್ಲಿಯೂ ಭಾರತಕ್ಕೆ ಸೇವೆ ಸಲ್ಲಿಸಿದ್ದರು. ಹೀಗಾಗಿ ಅನ್ವಯ್ ಅವರ ವಿಕೆಟ್‌ಕೀಪರ್-ಬ್ಯಾಟರ್ ಪಾತ್ರವು ತಂದೆಯ ಕ್ರಿಕೆಟ್ ಬದುಕಿನ ಒಂದು ಭಾಗವನ್ನು ನೆನಪಿಸುವಂತಿದೆ.

ಇದು ‘ನೆಪೋಟಿಸಂ’ ಅಲ್ಲ, ಪರೀಕ್ಷೆಯ ಆರಂಭ!

ಆರ್ಯವೀರ್ ಮತ್ತು ಅನ್ವಯ್ ಅವರ ಆಯ್ಕೆಯ ಸುದ್ದಿ ಹೊರಬಿದ್ದ ತಕ್ಷಣ ಸಹಜವಾಗಿಯೇ ಒಂದು ಪ್ರಶ್ನೆ ಎದುರಾಗುತ್ತದೆ—“ಅಪ್ಪಂದಿರ ಹೆಸರಿನಿಂದಲೇ ಅವಕಾಶ ಸಿಕ್ಕಿದೆಯೇ?” ಆದರೆ ಕ್ರಿಕೆಟ್‌ನಲ್ಲಿ ಕೊನೆಗೂ ಮೈದಾನವೇ ಅಂತಿಮ ಪರೀಕ್ಷೆ. ತಂದೆ ಎಷ್ಟೇ ದೊಡ್ಡ ಆಟಗಾರರಾಗಿದ್ದರೂ, ಮಗ ಬ್ಯಾಟ್ ಹಿಡಿದಾಗ ರನ್ ಗಳಿಸಲೇಬೇಕು. ವಿಕೆಟ್‌ಕೀಪರ್ ಆಗಿದ್ದರೆ ಕ್ಯಾಚ್ ಹಿಡಿಯಲೇಬೇಕು, ಸ್ಟಂಪಿಂಗ್ ಮಾಡಲೇಬೇಕು. ಆಯ್ಕೆಗಾರರ ವಿಶ್ವಾಸವನ್ನು ಪ್ರದರ್ಶನದ ಮೂಲಕವೇ ಉಳಿಸಿಕೊಳ್ಳಬೇಕು.

ಅದರಲ್ಲೂ ಆರ್ಯವೀರ್ ಅವರ 297 ರನ್‌ಗಳ ಇನ್ನಿಂಗ್ಸ್ ಮತ್ತು ಅನ್ವಯ್ ಅವರ ಶ್ರೀಲಂಕಾ ಪ್ರವಾಸದ 87 ರನ್‌ಗಳ ಪ್ರದರ್ಶನ ಅವರ ಆಯ್ಕೆಗೆ ಕ್ರಿಕೆಟ್ ಆಧಾರವಿರುವುದನ್ನು ತೋರಿಸುವ ಪ್ರಮುಖ ಅಂಶಗಳಾಗಿವೆ.  ಆದರೆ ಇದೇ ಸಮಯದಲ್ಲಿ ಮತ್ತೊಂದು ಸತ್ಯವನ್ನೂ ಮರೆಯಬಾರದು—ಪ್ರಸಿದ್ಧ ಕ್ರಿಕೆಟಿಗರ ಮಕ್ಕಳು ಎಂಬ ಕಾರಣದಿಂದ ಅವರ ಮೇಲೆ ನಿರೀಕ್ಷೆಯ ಒತ್ತಡವೂ ಸಾಮಾನ್ಯ ಆಟಗಾರರಿಗಿಂತ ಹೆಚ್ಚಿರುತ್ತದೆ. ಒಂದು ಕೆಟ್ಟ ಇನ್ನಿಂಗ್ಸ್ ಬಂದರೂ ಅದು ಸಾಮಾನ್ಯ ಯುವ ಆಟಗಾರನ ವೈಫಲ್ಯವಾಗಿ ಮಾತ್ರ ಕಾಣಿಸಿಕೊಳ್ಳುವುದಿಲ್ಲ; ತಕ್ಷಣವೇ “ಅಪ್ಪನಂತೆ ಆಡಲಿಲ್ಲ” ಎಂಬ ಹೋಲಿಕೆ ಶುರುವಾಗುತ್ತದೆ.

ಅಪ್ಪಂದಿರು ಎದುರಿಸಿದ ಸವಾಲು ಬೇರೆ, ಮಕ್ಕಳ ಸವಾಲು ಇನ್ನಷ್ಟು ವಿಭಿನ್ನ!

ಸೆಹ್ವಾಗ್ ಮತ್ತು ದ್ರಾವಿಡ್ ತಮ್ಮದೇ ಕಾಲದಲ್ಲಿ ಭಾರತೀಯ ಕ್ರಿಕೆಟ್‌ನ ಎರಡು ತುದಿಗಳನ್ನು ಪ್ರತಿನಿಧಿಸಿದ್ದರು. ಸೆಹ್ವಾಗ್ ವೇಗ, ಆಕ್ರಮಣ ಮತ್ತು ನಿರ್ಭೀತಿಯ ಪ್ರತೀಕವಾಗಿದ್ದರೆ, ದ್ರಾವಿಡ್ ತಾಳ್ಮೆ, ತಂತ್ರ ಮತ್ತು ರಕ್ಷಣೆಯ ಪ್ರತೀಕ. ಒಬ್ಬರು ಬೌಲರ್‌ನ ಮನಸ್ಸಿನಲ್ಲಿ ಭಯ ಹುಟ್ಟಿಸುತ್ತಿದ್ದರು; ಮತ್ತೊಬ್ಬರು ಬೌಲರ್‌ನ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದರು. ಈಗ ಅವರ ಮಕ್ಕಳು ಹೊಸ ತಲೆಮಾರಿನ ಕ್ರಿಕೆಟ್‌ಗೆ ಕಾಲಿಡುತ್ತಿದ್ದಾರೆ. ಇಂದಿನ ಕ್ರಿಕೆಟ್‌ನಲ್ಲಿ ಫಿಟ್‌ನೆಸ್, ವೇಗದ ಫೀಲ್ಡಿಂಗ್, ಡೇಟಾ ವಿಶ್ಲೇಷಣೆ, ಶಾಟ್ ಆಯ್ಕೆ, ಮಾನಸಿಕ ಸಿದ್ಧತೆ ಮತ್ತು ವಿವಿಧ ಮಾದರಿಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ—ಎಲ್ಲವೂ ಸಮಾನವಾಗಿ ಮುಖ್ಯ.

ಹೀಗಾಗಿ ಆರ್ಯವೀರ್ ಮತ್ತು ಅನ್ವಯ್ ಮುಂದೆ ಇರುವ ಸವಾಲು ಕೇವಲ “ಅಪ್ಪನ ಹೆಸರನ್ನು ಉಳಿಸುವುದು” ಅಲ್ಲ. ಅದಕ್ಕಿಂತ ದೊಡ್ಡ ಸವಾಲು “ತಮ್ಮದೇ ಕ್ರಿಕೆಟ್ ಗುರುತನ್ನು ನಿರ್ಮಿಸುವುದು.”

ಸೆಹ್ವಾಗ್–ದ್ರಾವಿಡ್ ಜೋಡಿ ಮತ್ತೆ ಒಂದೇ ತಂಡದಲ್ಲಿ!

ಇದು ಕೇವಲ ಒಂದು ಕ್ರಿಕೆಟ್ ಆಯ್ಕೆ ಅಲ್ಲ. ಭಾರತೀಯ ಕ್ರಿಕೆಟ್‌ನ ಒಂದು ಸುವರ್ಣ ಯುಗದ ನೆನಪು ಕೂಡ. ಒಂದೆಡೆ ಎದುರಾಳಿ ಬೌಲರ್‌ಗಳ ಮೇಲೆ ಮೊದಲ ಎಸೆತದಿಂದಲೇ ದಾಳಿ ನಡೆಸುತ್ತಿದ್ದ ಸೆಹ್ವಾಗ್. ಮತ್ತೊಂದೆಡೆ ಗಂಟೆಗಟ್ಟಲೆ ಕ್ರೀಸ್‌ನಲ್ಲಿ ನಿಂತು ತಂಡವನ್ನು ಸಂಕಷ್ಟದಿಂದ ಪಾರು ಮಾಡುತ್ತಿದ್ದ ದ್ರಾವಿಡ್. ಈಗ ಅವರ ಪುತ್ರರು ಒಂದೇ ಭಾರತ ಅಂಡರ್-19 ಏಕದಿನ ತಂಡದ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲಿದ್ದಾರೆ. ಮೈದಾನದಲ್ಲಿ ಒಬ್ಬರ ಬ್ಯಾಟ್‌ನಲ್ಲಿ ಸೆಹ್ವಾಗ್ ಅವರ ಆಕ್ರಮಣದ ಛಾಯೆ ಕಾಣುತ್ತದೆಯೇ? ಮತ್ತೊಬ್ಬರ ಆಟದಲ್ಲಿ ದ್ರಾವಿಡ್ ಅವರ ತಾಳ್ಮೆಯ ಪ್ರತಿಫಲನ ಕಾಣುತ್ತದೆಯೇ? ಎಂಬ ಕುತೂಹಲ ಈಗಲೇ ಶುರುವಾಗಿದೆ.

ಆದರೆ ಒಂದು ವಿಷಯ ಮಾತ್ರ ಖಚಿತ—ಅಪ್ಪಂದಿರು ಭಾರತೀಯ ಕ್ರಿಕೆಟ್‌ಗೆ ಬರೆದಿದ್ದ ಸುವರ್ಣ ಅಧ್ಯಾಯವನ್ನು ಮಕ್ಕಳು ತಮ್ಮದೇ ರೀತಿಯಲ್ಲಿ ಮುಂದುವರಿಸುತ್ತಾರೆಯೇ ಎಂಬುದನ್ನು ನೋಡಲು ಇಡೀ ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿದೆ.

ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹಾರೈಕೆ ಒಂದೇ—
ಆರ್ಯವೀರ್ ಮತ್ತು ಅನ್ವಯ್ ತಮ್ಮ ತಂದೆಯರ ನೆರಳಿನಲ್ಲಿ ನಿಲ್ಲದೆ, ತಮ್ಮದೇ ಪ್ರತಿಭೆಯ ಬೆಳಕಿನಲ್ಲಿ ಮಿಂಚಲಿ. ಭಾರತ ತಂಡದ ಭವಿಷ್ಯದ ತಾರೆಗಳಾಗಿ ಬೆಳೆಯಲಿ.

ಅಪ್ಪಂದಿರ ಬ್ಯಾಟ್‌ನ ಸದ್ದು ಮತ್ತೆ ಕೇಳಿಸಲಿ ಆದರೆ ಈ ಬಾರಿ ಆರ್ಯವೀರ್ ಮತ್ತು ಅನ್ವಯ್ ಅವರ ಬ್ಯಾಟ್‌ಗಳಿಂದ!

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply