ರಿಂಗ್ ರೋಡ್ ಗಿರೀಶ್ ಮರ್ಡರ್ ಕೇಸ್, ಶುಭಾ ಮತ್ತು ಅರುಣ್ ವರ್ಮಾ ಕ್ಷಮಾದಾನಕ್ಕೆ ಅರ್ಹರೇ?

ಗಿರೀಶ್ ಕೊಲೆ ಪ್ರಕರಣ. ಪ್ರೀತಿಯ ಹೆಸರಿನಲ್ಲಿ ನಡೆದ ಕ್ರೌರ್ಯಕ್ಕೆ ಕ್ಷಮೆ ಇರಬೇಕೇ? ರಾಜ್ಯಪಾಲರು ಕರುಣೆ ತೋರುವ ಮುನ್ನ ಸಂತ್ರಸ್ತ ಕುಟುಂಬದ ನೋವನ್ನೂ ನೆನಪಿಸಿಕೊಳ್ಳಲಿ!

ಪ್ರೀತಿ, ನಂಬಿಕೆ, ಮದುವೆಯ ಕನಸುಗಳು—ಇವೆಲ್ಲವನ್ನೂ ನಂಬಿ ಬದುಕು ಕಟ್ಟಿಕೊಳ್ಳಲು ಹೊರಟಿದ್ದ ಯುವಕನ ಬದುಕೇ ದುರಂತದಲ್ಲಿ ಅಂತ್ಯಗೊಂಡರೆ, ಆ ನೋವನ್ನು ಅನುಭವಿಸಿದ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ ಎಂಬ ಸಮಾಧಾನವಾದರೂ ಹೇಗೆ ಸಿಗಬೇಕು? 2003ರ ಬೆಂಗಳೂರಿನ ರಿಂಗ್ ರೋಡ್ ಗಿರೀಶ್ ಕೊಲೆ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿರುವ ಈ ಸಂದರ್ಭದಲ್ಲಿ, ಅಪರಾಧಿಗಳಿಗೆ ಕ್ಷಮಾದಾನ ನೀಡಬೇಕೇ ಎಂಬ ಪ್ರಶ್ನೆ ಕೇವಲ ಕಾನೂನಿನ ಪ್ರಶ್ನೆಯಲ್ಲ; ಅದು ನ್ಯಾಯ, ಮಾನವೀಯತೆ ಮತ್ತು ಸಂತ್ರಸ್ತ ಕುಟುಂಬದ ವೇದನೆಗೆ ಸಂಬಂಧಿಸಿದ ಪ್ರಶ್ನೆಯೂ ಹೌದು.

ಮದುವೆಯ ಕನಸು ಕಂಡ ಯುವಕನ ಬದುಕನ್ನೇ ಕಸಿದುಕೊಂಡ ಕ್ರೌರ್ಯ!

There was a case similar to Raja Raghuvanshi's years ago in Bengaluru and here's how it ended - CNBC TV18

ಅದು 2003 ಬೆಂಗಳೂರಿನ ಬನಶಂಕರಿ 2ನೇ ಹಂತದ 23ನೇ ಮುಖ್ಯ ರಸ್ತೆಯ ಮನೆ ಸಂಖ್ಯೆ 1420ಯಲ್ಲಿದ್ದ ಬಿ. ವೆಂಕಟೇಶ ಅವರ ಮಗ ಇಂಟೆಲ್ ಕಂಪನಿಯಲ್ಲಿ ಅಂದಿನ ಕಾಲಕ್ಕೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದ ಬಿ.ವಿ. ಗಿರೀಶನಿಗೆ ಮದುವೆಗಾಗಿ ಹೆಣ್ಣು ನೋಡುತ್ತಿದ್ದಂತಹ ಸಮಯ. ಹತ್ತಾರು ಕಡೆ ಹೆಣ್ಣುಗಳನ್ನು ನೋಡಿದರೂ ಜಾತಕ ಕೂಡಿ ಬರಲಿಲ್ಲಾ ಅಥವಾ ಇನ್ಯಾವುದೋ ಕಾರಣಕ್ಕಾಗಿ ಹೊಂದಾಣಿಕೆ ಆಗದೇ ಇದ್ದಂತಹ ಸಂಧರ್ಭದಲ್ಲಿ, ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಹುಡುಕುವ ಹಾಗೆ ಅದೇ ರಸ್ತೆಯ ಮನೆ ಸಂಖ್ಯೆ 1414ರಲ್ಲಿ ಸುಮಾರು ಎರಡು ದಶಕಗಳಿಂದಲೂ ಪರಿಚಯವಿದ್ದ ಲಾಯರ್ ಶಂಕರನಾರಾಯಣ ಕಾನೂನು ಪದವಿಯನ್ನು ಓದುತ್ತಿದ್ದ ಶುಭಾಳಿಗೂ ಗಂಡು ಹುಡುಕುತ್ತಿದ್ದರು. ಹೀಗೆ ಬಹಳ ಕಾಲದಿಂದಲೂ ಒಂದೇ ಬಡಾವಣೆಯಲ್ಲಿ ನೆರೆಹೊರೆಯವರಾಗಿ ವಾಸಿಸುತ್ತಿದ್ದು, ಪರಸ್ಪರ ಎರಡೂ ಕುಟುಂಬಳೂ ಸುಮಾರು ವರ್ಷಗಳಿಂದ ಪರಿಚಯವಿದ್ದ ಕಾರಣ ಶುಭಾ ಮತ್ತು ಗಿರೀಶ್ ನಡುವೆ ಮದುವೆಯ ನಿಶ್ಚಿತಾರ್ಥ ನಡೆದಿತ್ತು. ಗಿರೀಶ್ ತಮ್ಮ ಭಾವಿ ಪತ್ನಿಯೊಂದಿಗೆ ಸುಂದರ ಭವಿಷ್ಯದ ಕನಸುಗಳನ್ನು ಕಂಡಿದ್ದಿರಬಹುದು. ಆದರೆ ಆ ಕನಸುಗಳು ನನಸಾಗುವ ಮುನ್ನವೇ ಅವರ ಬದುಕು ದುರಂತದಲ್ಲಿ ಕೊನೆಗೊಂಡಿತು.

2003ರ ಡಿಸೆಂಬರ್ 3ರಂದು ಗಿರೀಶ್ ಶುಭಾ ಅವರನ್ನು ಊಟಕ್ಕೆ ಕರೆದುಕೊಂಡು ಹೋಗಿದ್ದರು. ನಂತರ ಎಚ್‌ಎಎಲ್ ವಿಮಾನ ನಿಲ್ದಾಣದ ಸಮೀಪ ವಿಮಾನಗಳ ಹಾರಾಟ ವೀಕ್ಷಿಸುವ ಆಸೆಯನ್ನು ಶುಭಾ ವ್ಯಕ್ತಪಡಿಸಿದ್ದರಿಂದ, ಅವರು ರಿಂಗ್ ರೋಡ್‌ನ ವೀಕ್ಷಣಾ ಸ್ಥಳಕ್ಕೆ ತೆರಳಿದ್ದರು ಎನ್ನಲಾಗಿದೆ. ವಿಮಾನಗಳ ಹಾರಾಟವನ್ನು ನೋಡುತ್ತಾ ಸಂತೋಷದ ಕ್ಷಣಗಳನ್ನು ಕಳೆಯಬೇಕಿದ್ದ ಆ ರಾತ್ರಿ, ಗಿರೀಶ್ ಅವರ ಬದುಕಿನ ಕೊನೆಯ ರಾತ್ರಿಯಾಯಿತು. ಆರೋಪಿಗಳ ದಾಳಿಯಲ್ಲಿ ಬೈಕ್‌ನ ಶಾಕ್ ಅಬ್ಸಾರ್ಬರ್‌ನಿಂದ ಅವರ ತಲೆಗೆ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಗಿರೀಶ್ ಮೃತಪಟ್ಟಾಗ ಎಲ್ಲರೂ ಇದೊಂದು ಹಣಕ್ಕಾಗಿ ಯಾರೋ ಪುಂಡು ಪೋಕರಿಗಳು ನಡೆಸಿರಬಹುದಾದ ಪ್ರಕರಣ ಎಂದೇ ಭಾವಿಸಿದ್ದರು.

ಭಾವೀ ಪತಿಯನ್ನು ಕಳೆದುಕೊಂಡರೂ ಕೊಂಚವೂ ದುಃಖವನ್ನು ವ್ಯಕ್ತಪಡಿಸದೇ ಇದ್ದ ಶುಭಾಳ ವರ್ತನೆಯನ್ನು ಕಂಡು ಆಶ್ಚರ್ಯ ಚಕಿತರಾದ ಗಿರೀಶ್ ಕುಟುಂಬದವರು ಅನುಮಾನಗೊಂಡು ಪೋಲೀಸರಿಗೆ ನೀಡಿದ ದೂರಿನನ್ವಯ ನಡೆದ ವಿಚಾರಣೆಯಲ್ಲಿ ಶುಭಾ ಹೊರಹಾಕಿದ ಸುದ್ದಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.

Ring Road Murder : r/TrueCrimeDiscussion

ತನ್ನದೇ ಕಾಲೇಜಿನಲ್ಲಿ ಓದುತ್ತಿದ್ದ ನೋಡಲು ಚಪ್ಪರ್ ನಂತಿದ್ದ ಅರುಣ್ ವರ್ಮಾನ ಬಗ್ಗೆ ಒಲವಿದ್ದ ಶುಭಾ, ಅಚಾನಕ್ಕಾಗಿ ಗಿರೀಶ್ ನೊಂದಿಗೆ ನಡೆದ ನಿಶ್ಚಿತಾರ್ಥದಿಂದ ವಿಚಲಿತಳಾಗಿ ಅದನ್ನು ತನ್ನ ಗೆಳೆಯ ಅರುಣ್ ವರ್ಮಾನೊಂದಿಗೆ ಹೇಳಿಕೊಂಡಾಗ. ಶುಭ, ಅರುಣ್ ಮತ್ತು ಅತನ ಗೆಳೆಯರಾದ ವೆಂಕಟೇಶ್ ಮತ್ತು ದಿನೇಶ್ ಸೇರಿಕೊಂಡು ಗಿರೀಶ್ ನನ್ನು ರಿಂಗ್ ರೋಡಿಗೆ ಕರೆವಂತಹ ಸಂಚು ರೂಪಿಸಿ ಭಯ ಪಡಿಸುವಬೇಕೆಂದು ಹಾಕಿಕೊಂಡಿದ್ದ ಯೋಜನೆ ವಿಫಲವಾಗಿ ಬಲವಾಗಿ ತಲೆಗೆ ಪೆಟ್ಟು ತಿಂದ ಗಿರೀಶ್ ನಿಧನರಾಗಿದ್ದರು, ಮನೆಯವರು ಪ್ರೀತಿಯಿಂದ ಬೆಳೆಸಿದ ಮಗ, ಮದುವೆಯಾಗಿ ಹೊಸ ಜೀವನ ಆರಂಭಿಸಲಿದ್ದ ಯುವಕ, ತನ್ನ ಭವಿಷ್ಯದ ಬಗ್ಗೆ ಸಾವಿರಾರು ಕನಸುಗಳನ್ನು ಕಂಡಿದ್ದ ವ್ಯಕ್ತಿ—ಹೀಗೆ ಅಕಾಲಿಕವಾಗಿ ಸಾವಿಗೀಡಾದಾಗ ಆತನ ಕುಟುಂಬದ ಹೃದಯದಲ್ಲಿ ಉಂಟಾಗುವ ನೋವಿಗೆ ಬೆಲೆ ಕಟ್ಟಲು ಸಾಧ್ಯವೇ?

Shankar Reddy from AP moved to Bangalore for education of his 2 kids. But his wife Dilli Rani started affair & murdered him as he was a roadblock. Shankar was killed in

ಈ ಪ್ರಕರಣದ ಕುರಿತಾಗಿ ಬೆಂಗಳೂರಿನ ಉಚ್ಚನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ತಪ್ಪದೇ ಬರುತ್ತಿದ್ದ ಗಿರೀಶ್ ಅವರ ತಂದೆ ವೆಂಕಟೇಶ್, ಪುತ್ರ ಶೋಕಂ ನಿರಂತರಂ ಎನ್ನುವಂತೆ ವಿಚಾರಣಾ ಸಂಧರ್ಭದಲ್ಲಿ ಕಣ್ಣೀರು ಹಾಕುತ್ತಿದ್ದದ್ದನ್ನು ಅದೇ ಪ್ರಕರಣದ ವಿಚಾರಗಳ ಕುರಿತಾಗಿ ನೋಟ್ಸ್ ಮಾಡಿಕೊಳ್ಳುತ್ತಿದ್ದ ನನ್ನ ಶ್ರೀಮತಿ ಪ್ರತೀ ದಿನವೂ ಮನೆಗೆ ಬಂದು ಹೇಳುವಾಗ ನಿಜಕ್ಕೂ ಬಹಳ ಬೇಸರವಾಗುತ್ತಿದ್ದದ್ದಲ್ಲದೇ, ಸುಖಾ ಸುಮ್ಮನೇ ತಿಂಗಳಾನುಗಟ್ಟಲೇ ವಿಚಾರಣೆ ನಡೆಸುತ್ತಾ ಕಾಲ ಹರಣ ಮಾಡುವ ಬದಲು ಅಮಾಯಕ ಗಿರೀಶ್ ನನ್ನು ಕೊಂದು ಹಾಕಿದ ಆ ಪಾಪಿಗಳಿಗೆ ತತ್ ಕ್ಷಣವೇ ಮರಣ ದಂಡನೆ ನೀಡಬಾರದೇ ಎಂಬ ಆಲೋಚನೆಯೂ ಬಂದಿದ್ದಂತೂ ಸುಳ್ಳಲ್ಲಾ.

Girish Mother : ಆರೋಪಿ Shubhaಗೆ ಜೀವಾವಧಿ ಶಿಕ್ಷೆ..ಗಿರೀಶ್​ ತಾಯಿ ನೋವಿನ ಮಾತು | Ring Road Incident

ಸುಧೀರ್ಘ ಕಾಲ ವಿಚಾರಣೆ ನಡೆಯುತ್ತಿದ್ದ ಸಂಧರ್ಭದಲ್ಲೇ ಶುಭಾ ಸೆರೆಮನೆಯಿಂದಲೇ ತನ್ನ ಕಾನೂನು ಪದವಿ ಮುಗಿಸಿದ್ದಳು. ಮಗನನ್ನು ಕಳೆದುಕೊಂಡ ದುಃಖದಲ್ಲೇ ಗಿರೀಶ್ ತಂದೆಯವರೂ ವಿಚಾರಣಾ ಹಂತದಲ್ಲೇ ಅಸುನೀಗಿ ಅವರ ಕುಟುಂಬಕ್ಕೆ ಎರಡೆರಡು ಆಘಾತವಾಗಿತ್ತು. ನ್ಯಾಯಾವಾದಿಯಾಗಿದ್ದ ಆಕೆಯ ತಂದೆಯೇ ಹಲವಾರು ರೀತಿಯಲ್ಲಿ ಬೇಲ್ ಪಡೆಯಲು ಮತ್ತು ತಮ್ಮ ಮಗಳನ್ನು ನಿರಪರಾಧಿ ಎಂದು ನಿರೂಪಿಸಲು ಪ್ರಯತ್ನಿಸಿ ವಿಫಲರಾಗಿ ಅಂತಿಮವಾಗಿ ಅ ಪ್ರಕರಣದಲ್ಲಿ ಭಾಗಿಗಳಾದವರಿಗೆಲ್ಲಾ ಜೀವಾವಧಿ ಶಿಕ್ಷೆಯಾಗಿತ್ತು. ನ್ಯಾಯಾಲಯದ ತೀರ್ಪು ಅಪರಾಧಕ್ಕೆ ಶಿಕ್ಷೆ ವಿಧಿಸಬಹುದು; ಆದರೆ ಕುಟುಂಬದ ಕಣ್ಣೀರನ್ನು ಸಂಪೂರ್ಣವಾಗಿ ಒರೆಸಲು ಸಾಧ್ಯವಿಲ್ಲ. ಗಿರೀಶ್ ಅವರ ಕುಟುಂಬಕ್ಕೆ ಕಳೆದುಹೋದ ಮಗ ಮತ್ತು ಅವರ ತಂದೆಯನ್ನು  ಮರಳಿ ತಂದುಕೊಡಲು ಯಾರಿಂದಲೂ ಸಾಧ್ಯವಿಲ್ಲ

ಈಗ ಕ್ಷಮಾದಾನ ಅರ್ಜಿ. ಅಪರಾಧಿಗಳ ಶಿಕ್ಷೆ ಕಡಿಮೆಯಾಗಬೇಕೇ?

ಈ ಪ್ರಕರಣದಲ್ಲಿ ದೋಷಿಗಳೆಂದು ತೀರ್ಪುಗೊಂಡಿರುವ ಶುಭಾ ಶಂಕರನಾರಾಯಣ ಮತ್ತು ಡಿ. ಅರುಣ್ ವರ್ಮಾ ಇತ್ತೀಚೆಗೆ  ಜೀವಾವಧಿ ಶಿಕ್ಷೆಯಿಂದ ವಿನಾಯಿತಿ ಕೋರಿ ಕ್ಷಮಾದಾನ ಅರ್ಜಿ ಸಲ್ಲಿಸಿರುವ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಸುಪ್ರೀಂ ಕೋರ್ಟ್ ನಾಲ್ವರು ಆರೋಪಿಗಳಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿರುವ ಹಿನ್ನೆಲೆಯಲ್ಲಿ, ಈ ಅರ್ಜಿಗಳ ಕುರಿತು ಸರ್ಕಾರದ ನಿಲುವು ಮಹತ್ವ ಪಡೆದಿದೆ.

ಕ್ಷಮಾದಾನ ನೀಡುವ ಅಧಿಕಾರವು ಸಂವಿಧಾನ ಮತ್ತು ಕಾನೂನು ನಿಗದಿಪಡಿಸಿರುವ ಪ್ರಕ್ರಿಯೆಗೆ ಒಳಪಟ್ಟಿದೆ. ರಾಜ್ಯ ಸರ್ಕಾರದ ಅಭಿಪ್ರಾಯ ಮತ್ತು ರಾಜ್ಯಪಾಲರ ನಿರ್ಧಾರವೂ ಅನ್ವಯಿಸುವ ಕಾನೂನು ಚೌಕಟ್ಟಿನೊಳಗೇ ಇರಬೇಕು. ಆದರೆ ಕಾನೂನುಬದ್ಧವಾಗಿ ಕ್ಷಮಾದಾನವನ್ನು ಪರಿಗಣಿಸುವ ಅವಕಾಶವಿದೆ ಎಂಬ ಕಾರಣಕ್ಕೆ ಪ್ರತಿಯೊಂದು ಪ್ರಕರಣದಲ್ಲಿಯೂ ಶಿಕ್ಷೆ ಕಡಿಮೆ ಮಾಡಲೇಬೇಕು ಎಂದರ್ಥವಲ್ಲ.

ಕ್ಷಮೆ ನೀಡುವ ಮೊದಲು ಅಪರಾಧದ ಗಂಭೀರತೆ, ಅಪರಾಧಿಯ ನಡವಳಿಕೆ, ಶಿಕ್ಷೆಯ ಉದ್ದೇಶ, ಸಂತ್ರಸ್ತ ಕುಟುಂಬದ ಸ್ಥಿತಿ ಮತ್ತು ನ್ಯಾಯದ ಹಿತಾಸಕ್ತಿಯನ್ನು ಸಮಗ್ರವಾಗಿ ಪರಿಗಣಿಸಬೇಕು.

ಗಿರೀಶ್ ಕೊಲೆ ಪ್ರಕರಣದಂತಹ ಗಂಭೀರ ಪ್ರಕರಣದಲ್ಲಿ ಕ್ಷಮಾದಾನ ನೀಡುವ ವಿಚಾರವನ್ನು ಸರ್ಕಾರ ಮತ್ತು ರಾಜ್ಯಪಾಲರು ಅತ್ಯಂತ ಎಚ್ಚರಿಕೆಯಿಂದ ಪರಿಶೀಲಿಸಬೇಕು. ಕೇವಲ ಅರ್ಜಿ ಸಲ್ಲಿಸಲಾಗಿದೆ ಎಂಬ ಕಾರಣಕ್ಕೆ ಅಥವಾ ರಾಜಕೀಯ ಒತ್ತಡಕ್ಕೆ ಮಣಿದು ಯಾವುದೇ ನಿರ್ಧಾರ ಕೈಗೊಳ್ಳಬಾರದು.

ರಾಜ್ಯಪಾಲರು ಕರುಣೆ ತೋರುವ ಮುನ್ನ ಸಂತ್ರಸ್ತ ಕುಟುಂಬದ ಕಣ್ಣೀರನ್ನೂ ನೆನಪಿಸಿಕೊಳ್ಳಲಿ!

ಕ್ಷಮಾದಾನ ಎಂಬುದು ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿರುವ ಮಾನವೀಯ ಅವಕಾಶ. ಆದರೆ ಅದರ ಉದ್ದೇಶ ಅಪರಾಧದ ಗಂಭೀರತೆಯನ್ನು ಕಡೆಗಣಿಸುವುದಾಗಲೀ, ಸಂತ್ರಸ್ತರ ನೋವನ್ನು ನಿರ್ಲಕ್ಷಿಸುವುದಾಗಲೀ ಆಗಬಾರದು. ಒಂದು ಜೀವವನ್ನು ಕಳೆದುಕೊಂಡ ಕುಟುಂಬಕ್ಕೆ ನ್ಯಾಯವೆಂದರೆ ಕೇವಲ ಆರೋಪಿಗಳಿಗೆ ಶಿಕ್ಷೆ ವಿಧಿಸುವುದಲ್ಲ. ಆ ಶಿಕ್ಷೆಯ ಗಂಭೀರತೆಯನ್ನು ಕಾಪಾಡುವ ಮೂಲಕ ನ್ಯಾಯವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಉಳಿಸುವುದೂ ಹೌದು.

ಈ ಪ್ರಕರಣದಲ್ಲಿ ಕ್ಷಮಾದಾನ ಅರ್ಜಿಗಳನ್ನು ಪರಿಶೀಲಿಸುವಾಗ, ಗಿರೀಶ್ ಅವರ ಕುಟುಂಬದ ಅಭಿಪ್ರಾಯ ಮತ್ತು ಅವರಿಗೆ ಉಂಟಾದ ಅಪಾರ ನಷ್ಟಕ್ಕೂ ಸೂಕ್ತ ಮಹತ್ವ ನೀಡಬೇಕು. ಕಾನೂನಿನ ಪ್ರಕಾರ ಅಗತ್ಯವಿರುವ ಎಲ್ಲಾ ಅಂಶಗಳನ್ನು ಪರಿಶೀಲಿಸಬೇಕು. ಕ್ಷಮಾದಾನಕ್ಕೆ ಸಂಬಂಧಿಸಿದ ನಿರ್ಧಾರವು ಭಾವನಾತ್ಮಕ ಒತ್ತಡಕ್ಕಾಗಲೀ, ರಾಜಕೀಯ ಲಾಭಕ್ಕಾಗಲೀ ಒಳಗಾಗಬಾರದು.

ನನ್ನ ಅಭಿಪ್ರಾಯದಲ್ಲಿ, ಗಿರೀಶ್ ಅವರ ಬದುಕನ್ನು ಕಸಿದುಕೊಂಡ ಈ ಪ್ರಕರಣದಲ್ಲಿ ಶಿಕ್ಷೆಯಿಂದ ವಿನಾಯಿತಿ ನೀಡಲು ಅತ್ಯಂತ ಬಲವಾದ, ಕಾನೂನುಬದ್ಧ ಕಾರಣಗಳಿರಬೇಕು. ಅಂತಹ ಕಾರಣಗಳಿಲ್ಲದೆ ಕೇವಲ ಕರುಣೆಯ ಹೆಸರಿನಲ್ಲಿ ಕ್ಷಮಾದಾನ ನೀಡುವುದು ಸಂತ್ರಸ್ತ ಕುಟುಂಬದ ನೋವನ್ನು ಮತ್ತಷ್ಟು ಹೆಚ್ಚಿಸಬಹುದು.

ರಾಜ್ಯಪಾಲರು ಕಾನೂನು ಮತ್ತು ಸಂವಿಧಾನದ ಚೌಕಟ್ಟಿನೊಳಗೆ ನಿರ್ಧಾರ ಕೈಗೊಳ್ಳುವಾಗ, ನ್ಯಾಯಕ್ಕಾಗಿ ಕಾಯುತ್ತಿರುವ ಕುಟುಂಬದ ಭಾವನೆಗಳನ್ನೂ ಮರೆಯಬಾರದು.

ಸಮಾಜಕ್ಕೆ ಯಾವ ಸಂದೇಶ ಹೋಗಬೇಕು?

ಕೊಲೆ ಸೇರಿದಂತೆ ಗಂಭೀರ ಅಪರಾಧಗಳಿಗೆ ಕಾನೂನು ವಿಧಿಸುವ ಶಿಕ್ಷೆಯ ಉದ್ದೇಶ ಪ್ರತೀಕಾರವಲ್ಲ. ಅಪರಾಧದ ಗಂಭೀರತೆಯನ್ನು ಗುರುತಿಸುವುದು, ನ್ಯಾಯವನ್ನು ಸ್ಥಾಪಿಸುವುದು ಮತ್ತು ಸಮಾಜದಲ್ಲಿ ಕಾನೂನಿನ ಮೇಲಿನ ವಿಶ್ವಾಸವನ್ನು ಕಾಪಾಡುವುದು ಅದರ ಉದ್ದೇಶ. ಅದೇ ಸಮಯದಲ್ಲಿ, ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಗೆ ಕಾನೂನುಬದ್ಧವಾಗಿ ಲಭ್ಯವಿರುವ ಪರಿಹಾರಗಳನ್ನು ನಿರಾಕರಿಸುವುದೂ ನ್ಯಾಯಸಮ್ಮತವಲ್ಲ. ಕ್ಷಮಾದಾನ ಅರ್ಜಿಯನ್ನು ಸಲ್ಲಿಸುವುದು ಅಪರಾಧಿಯ ಹಕ್ಕಿನ ಭಾಗವಾಗಿರಬಹುದು; ಆದರೆ ಅದನ್ನು ಅಂಗೀಕರಿಸುವುದು ಸ್ವಯಂಚಾಲಿತ ಪ್ರಕ್ರಿಯೆಯಲ್ಲ. ಹೀಗಾಗಿ, ಗಿರೀಶ್ ಕೊಲೆ ಪ್ರಕರಣದಲ್ಲಿ ನಿರ್ಧಾರ ಕೈಗೊಳ್ಳುವವರು ಭಾವೋದ್ವೇಗಕ್ಕಿಂತ ಸಾಕ್ಷ್ಯ, ಕಾನೂನು, ಪ್ರಕರಣದ ಗಂಭೀರತೆ ಮತ್ತು ಸಂತ್ರಸ್ತ ಕುಟುಂಬದ ಹಿತಾಸಕ್ತಿಯನ್ನು ಆಧಾರವಾಗಿಟ್ಟುಕೊಳ್ಳಬೇಕು.

ಕೊನೆಯ ಮಾತು: ಗಿರೀಶ್‌ಗೆ ಮರಳಿ ಬಾರದ ಬದುಕು, ಕುಟುಂಬಕ್ಕೆ ಮರಳಿ ಬಾರದ ಸಂತೋಷ!

ತನಗೆ ಇಷ್ಟವಿಲ್ಲದ ಹುಡುಗನೊಂದಿಗೆ ಮದುವೆ ಮಾಡಲು ಮುಂದಾಗಿದ್ದ ತಮ್ಮ ಕುಟುಂಬದವರಿಗೆ ತಾನು ಮತ್ತೊಬ್ಬನನ್ನು ಪ್ರೀತಿಸುತ್ತಿರುವ ವಿಚಾರವನ್ನು ಹೇಳಿದ್ದಲ್ಲಿ ನೂರಾರು ಕನಸನ್ನು ಹೊತ್ತಿದ್ದ ಅಮಾಯಕ ಗಿರೀಶ್ ಮತ್ತು ಆತನ ತಂದೆಯ ಪ್ರಾಣವೂ ಉಳಿಯುತ್ತಿತ್ತು. ಕೇವಲ ನಿಶ್ಚಿತಾರ್ಥ ಮಾತ್ರವೇ ನಡೆದದ್ದರಿಂದ ಆತ ಬೇರೆ ಹುಡುಗಿಯೊಂದಿಗೆ ಮದುವೆಯಾಗಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳಬಹುದಿತ್ತು.  ಆದರೆ ಅವರ ಬದುಕು ಕಸಿದುಕೊಳ್ಳಲ್ಪಟ್ಟಿದೆ. ಆ ನಷ್ಟವನ್ನು ಯಾವ ಪರಿಹಾರವೂ ಸಂಪೂರ್ಣವಾಗಿ ತುಂಬಲಾರದು. ಈ ಪ್ರಕರಣದ ಕ್ಷಮಾದಾನ ಅರ್ಜಿಗಳ ಕುರಿತು ಅಂತಿಮ ನಿರ್ಧಾರವನ್ನು ಕಾನೂನು ಮತ್ತು ಸಂವಿಧಾನದ ಪ್ರಕಾರವೇ ಕೈಗೊಳ್ಳಬೇಕು ಎನ್ನುವುದು ಸತ್ಯವಾದರೂ, ನಿರ್ಧಾರ ಕೈಗೊಳ್ಳುವಾಗ ಸಂತ್ರಸ್ತ ಕುಟುಂಬದ ನೋವು ಮತ್ತು ನ್ಯಾಯದ ಮೇಲಿನ ಸಾರ್ವಜನಿಕ ವಿಶ್ವಾಸಕ್ಕೆ ಸಮಾನವಾಗಿ ಮಾನವೀಯ ಮೌಲ್ಯಗಳನ್ನೂ ಎತ್ತಿ ಹಿಡಿಯುವಂತಹ ಮಹತ್ವ ನೀಡಬೇಕು. ಈ ರೀತಿಯ ಅಪರಾಧವನ್ನು ಮುಂದೆ ಯಾರೂ ಸಹಾ ಮಾಡಬಾರದು ಎಂಬ ಎಚ್ಚರಿಕೆಯ ಗಂಟೆಯೂ ಆಗಿರಬೇಕು

ಕರುಣೆ ಮಾನವೀಯ ಗುಣ. ಆದರೆ ಕರುಣೆ ತೋರಿಸುವಾಗ ನ್ಯಾಯಕ್ಕೆ ಅನ್ಯಾಯವಾಗಬಾರದು. ಗಿರೀಶ್ ಅವರ ಕುಟುಂಬದ ಕಣ್ಣೀರನ್ನು ಮರೆತು ಯಾವುದೇ ನಿರ್ಧಾರ ಕೈಗೊಳ್ಳಬಾರದು.

ನ್ಯಾಯದ ತಕ್ಕಡಿಯಲ್ಲಿ ಅಪರಾಧಿಯ ಹಕ್ಕುಗಳಷ್ಟೇ ಅಲ್ಲ, ಪ್ರಾಣ ಕಳೆದುಕೊಂಡ ಗಿರೀಶ್ ಅವರ ಕುಟುಂಬದ ನ್ಯಾಯದ ನಿರೀಕ್ಷೆಯೂ ತೂಕ ಹೊಂದಿರಬೇಕು. ಅದೇ ಕಾನೂನಿನ ಗೌರವ, ಅದೇ ನ್ಯಾಯವ್ಯವಸ್ಥೆಯ ಮೇಲಿನ ಜನರ ವಿಶ್ವಾಸ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply