ಪ್ರತಿ ಮನೆಯ ಮುಂದೆ ಹೂವಿನ ತೋಟ, ಪ್ರತಿ ರಸ್ತೆಯಲ್ಲೂ ಬಿದಿರಿನ ಕಸದ ಬುಟ್ಟಿ, ವಾರಕ್ಕೊಮ್ಮೆ ಸಾಮೂಹಿಕ ಸ್ವಚ್ಛತಾ ಕಾರ್ಯ! | ಪ್ರಕೃತಿಯ ಮಡಿಲಿನಲ್ಲಿರುವ ಮಾವ್ಲಿನ್ನಾಂಗ್ ಗ್ರಾಮದ ವಿಶೇಷತೆಗಳೇನು? | ಮಹಿಳೆಯರಿಗೆ ಮಹತ್ವದ ಸ್ಥಾನವಿರುವ ಖಾಸಿ ಸಮುದಾಯದ ಜೀವನಶೈಲಿ, ಜೀವಂತ ಬೇರುಗಳ ಸೇತುವೆ ಮತ್ತು ಬಾಂಗ್ಲಾದೇಶದ ಗಡಿಯ ಸುಂದರ ನೋಟ!
ಒಂದು ಊರಿನ ಸ್ವಚ್ಛತೆಯನ್ನು ಕೇವಲ ಅಲ್ಲಿನ ಪುರಸಭೆ ಅಥವಾ ಪಂಚಾಯಿತಿಯ ಕೆಲಸವೆಂದು ಪರಿಗಣಿಸುವುದು ನಮ್ಮಲ್ಲಿ ಸಾಮಾನ್ಯ. ರಸ್ತೆಯಲ್ಲಿ ಕಸ ಬಿದ್ದರೆ ಅದನ್ನು ಸ್ವಚ್ಛಗೊಳಿಸುವುದು ಪೌರಕಾರ್ಮಿಕರ ಜವಾಬ್ದಾರಿ, ಮನೆ ಮುಂದೆ ಕಸ ಸಂಗ್ರಹವಾದರೆ ಅದನ್ನು ತೆಗೆದುಕೊಂಡು ಹೋಗುವುದು ಸ್ಥಳೀಯ ಆಡಳಿತದ ಕರ್ತವ್ಯ ಎಂದು ಭಾವಿಸುತ್ತೇವೆ. ಆದರೆ ಒಂದು ಗ್ರಾಮದ ಪ್ರತಿಯೊಬ್ಬ ನಿವಾಸಿಯೂ ಸ್ವಚ್ಛತೆಯನ್ನು ತನ್ನ ವೈಯಕ್ತಿಕ ಜವಾಬ್ದಾರಿಯೆಂದು ಪರಿಗಣಿಸಿದರೆ ಆ ಊರು ಹೇಗಿರಬಹುದು?
ರಸ್ತೆಗಳಲ್ಲಿ ಎಲ್ಲಿಯೂ ಪ್ಲಾಸ್ಟಿಕ್ ಕಾಣುವುದಿಲ್ಲ, ಮನೆಗಳ ಮುಂದೆ ಕಸದ ರಾಶಿ ಇರುವುದಿಲ್ಲ, ಹೂವಿನ ತೋಟಗಳು ಮತ್ತು ಹಸಿರಿನಿಂದ ಕಂಗೊಳಿಸುವ ದಾರಿಗಳು, ರಸ್ತೆಯ ಬದಿಯಲ್ಲಿ ಸುಂದರವಾದ ಬಿದಿರಿನ ಕಸದ ಬುಟ್ಟಿಗಳು, ಪ್ರತಿಯೊಬ್ಬರೂ ತಮ್ಮ ಊರಿನ ಸ್ವಚ್ಛತೆಯಲ್ಲಿ ಪಾಲ್ಗೊಳ್ಳುವ ಸಂಪ್ರದಾಯ. ಇವೆಲ್ಲವನ್ನೂ ಒಂದೇ ಕಡೆ ನೋಡಬೇಕೆಂದರೆ ಮೇಘಾಲಯದ ಮಾವ್ಲಿನ್ನಾಂಗ್ ಗ್ರಾಮಕ್ಕೆ ಭೇಟಿ ನೀಡಬೇಕು.
ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ (Asia’s Cleanest Village) ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಈ ಪುಟ್ಟ ಹಳ್ಳಿ, ಸ್ವಚ್ಛತೆ ಎನ್ನುವುದು ಸರ್ಕಾರದ ಯೋಜನೆಯಾಗಿರಬೇಕಿಲ್ಲ, ಅದು ಜನರ ಜೀವನಶೈಲಿಯಾಗಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ. ಪ್ರಕೃತಿಯ ಸೌಂದರ್ಯ, ಖಾಸಿ ಬುಡಕಟ್ಟು ಸಮುದಾಯದ ಸಂಸ್ಕೃತಿ, ಮಹಿಳಾ ಪ್ರಧಾನ ವಂಶಪಾರಂಪರ್ಯ ವ್ಯವಸ್ಥೆ, ಪರಿಸರ ಸಂರಕ್ಷಣೆಯ ಬಗ್ಗೆ ಜನರ ಕಾಳಜಿ ಮತ್ತು ಪ್ರವಾಸೋದ್ಯಮದ ಬೆಳವಣಿಗೆ, ಇವೆಲ್ಲವೂ ಸೇರಿ ಮಾವ್ಲಿನ್ನಾಂಗ್ ಗ್ರಾಮವನ್ನು ವಿಶ್ವದ ಗಮನ ಸೆಳೆದ ಪ್ರವಾಸಿ ತಾಣವನ್ನಾಗಿ ಮಾಡಿವೆ.
ಈ ಮಾವ್ಲಿನ್ನಾಂಗ್ ಗ್ರಾಮ ಎಲ್ಲಿದೆ??

ಮಾವ್ಲಿನ್ನಾಂಗ್ (Mawlynnong) ಭಾರತದ ಈಶಾನ್ಯ ರಾಜ್ಯವಾದ ಮೇಘಾಲಯದ ಈಸ್ಟ್ ಖಾಸಿ ಹಿಲ್ಸ್ (East Khasi Hills) ಜಿಲ್ಲೆಯಲ್ಲಿರುವ ಒಂದು ಸುಂದರ ಗ್ರಾಮ. ಮೇಘಾಲಯದ ರಾಜಧಾನಿ ಶಿಲ್ಲಾಂಗ್ನಿಂದ ಸುಮಾರು 76 ಕಿ.ಮೀ. ದೂರದಲ್ಲಿರುವ ಈ ಗ್ರಾಮ ಭಾರತ–ಬಾಂಗ್ಲಾದೇಶ ಗಡಿಯ ಸಮೀಪದಲ್ಲಿದೆ. ಸುತ್ತಲೂ ಹಚ್ಚಹಸಿರಿನ ಬೆಟ್ಟಗಳು, ದಟ್ಟವಾದ ಮರಗಳು, ಅಡಿಕೆ ತೋಟಗಳು, ಹೂವಿನಿಂದ ಅಲಂಕೃತವಾದ ಮನೆಗಳು ಮತ್ತು ಸ್ವಚ್ಛವಾದ ಕಿರಿದಾದ ರಸ್ತೆಗಳು ಈ ಹಳ್ಳಿಯ ಸೌಂದರ್ಯವನ್ನು ಹೆಚ್ಚಿಸಿವೆ.
ಮೇಘಾಲಯವನ್ನು ಮೇಘಗಳ ನಾಡು ಎಂದು ಕರೆಯುವುದಕ್ಕೆ ಕಾರಣವಾಗಿರುವ ಮೋಡ ಕವಿದ ವಾತಾವರಣ, ಮಳೆ, ಹಸಿರು ಪ್ರಕೃತಿ ಮತ್ತು ಸುಂದರವಾದ ಬೆಟ್ಟಗುಡ್ಡಗಳ ಸೊಬಗನ್ನು ಮಾವ್ಲಿನ್ನಾಂಗ್ನಲ್ಲಿ ಮನಸಾರೆ ಆಸ್ವಾದಿಸಬಹುದು. ಇಲ್ಲಿನ ಬಹುತೇಕ ನಿವಾಸಿಗಳು ಖಾಸಿ (Khasi) ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಕೃಷಿ, ಅಡಿಕೆ, ಕಾಳುಮೆಣಸು ಮತ್ತು ಇತರ ತೋಟಗಾರಿಕಾ ಉತ್ಪನ್ನಗಳ ಬೆಳೆ ಇವರ ಜೀವನೋಪಾಯದ ಪ್ರಮುಖ ಭಾಗವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮವೂ ಗ್ರಾಮದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ಎಂಬ ಹೆಗ್ಗಳಿಕೆ ಬಂದಿದ್ದು ಹೇಗೆ?
ಮಾವ್ಲಿನ್ನಾಂಗ್ ಇಂದು ಜಗತ್ತಿನ ಪ್ರವಾಸಿಗರನ್ನು ಆಕರ್ಷಿಸುತ್ತಿರುವುದಕ್ಕೆ ಪ್ರಮುಖ ಕಾರಣ ಅದರ ಸ್ವಚ್ಛತೆ. 2003ರಲ್ಲಿ Discover India ಎಂಬ ಪ್ರವಾಸಿ ಪತ್ರಿಕೆಯ ಬರಹಗಾರರೊಬ್ಬರು ಈ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ಸ್ವಚ್ಛತೆ, ಪರಿಸರ ಸಂರಕ್ಷಣೆ ಮತ್ತು ಜನರ ಶಿಸ್ತನ್ನು ಕಂಡು ಮೆಚ್ಚಿ ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ’ಎಂದು ಬಣ್ಣಿಸಿದರು. ಆ ನಂತರ ವಿವಿಧ ಮಾಧ್ಯಮಗಳು ಮತ್ತು ಪ್ರವಾಸಿ ಪ್ರಕಟಣೆಗಳು ಈ ಹೆಸರನ್ನು ಬಳಸತೊಡಗಿದವು. ಹೀಗೆ ಮಾವ್ಲಿನ್ನಾಂಗ್ ವಿಶ್ವದ ಗಮನ ಸೆಳೆಯಿತು.
ಹೀಗಾಗಿ ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ಎಂಬುದು 2003ರಲ್ಲಿ ಪ್ರವಾಸಿ ಪತ್ರಿಕೆಯ ಮೂಲಕ ಪ್ರಸಿದ್ಧಿಗೆ ಬಂದ ಬಿರುದಾಗಿದೆಯೇ ಹೊರತು, ಇದು ಪ್ರತಿವರ್ಷ ನಡೆಯುವ ಏಷ್ಯಾ ಮಟ್ಟದ ಅಧಿಕೃತ ಸ್ವಚ್ಛತಾ ಸ್ಪರ್ಧೆಯಲ್ಲಿ ನೀಡುವ ಶಾಶ್ವತ ಪ್ರಮಾಣಪತ್ರವಲ್ಲ. ಆದರೂ ಸ್ವಚ್ಚತೆಯನ್ನೇ ತಮ್ಮ ಜೀವನ ಶೈಲಿಯನ್ನಾಗಿಸಿಕೊಂಡಿರುವ ಈ ಮಾವ್ಲಿನ್ನಾಂಗ್ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸ್ವಚ್ಢತೆಯನ್ನು ಗಮನಿಸಿದವರಿಗೆ ಮೇಘಾಲಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಏಷ್ಯಾದ ಸ್ವಚ್ಛ ಗ್ರಾಮವೆಂದು ಪರಿಚಯಿಸುವುದರಲ್ಲಿ ಅತಿಶಯವಿಲ್ಲಾ ಎನ್ನಿಸುತ್ತದೆ.
Discover India ಪತ್ರಿಕೆಯ ಈ ಬಿರುದು ದೊರೆತ ನಂತರ ಗ್ರಾಮದ ಜನರು ತಮ್ಮ ಸ್ವಚ್ಛತೆಯ ಸಂಪ್ರದಾಯವನ್ನು ಇನ್ನಷ್ಟು ಗಟ್ಟಿಗೊಳಿಸಿದರು. ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಯಿತು. ಹಿಂದೆ ಹೊರಗಿನವರಿಗೆ ಹೆಚ್ಚು ಪರಿಚಯವಿಲ್ಲದಿದ್ದ ಪುಟ್ಟ ಹಳ್ಳಿ ಇಂದು ಭಾರತ ಮಾತ್ರವಲ್ಲದೆ ವಿದೇಶಿ ಪ್ರವಾಸಿಗರಿಗೂ ಆಕರ್ಷಣೆಯಾಗಿದೆ.
ಸ್ವಚ್ಛತೆಯ ಹಿಂದೆ ಅಡಗಿರುವ ಗ್ರಾಮಸ್ಥರ ಶಿಸ್ತು!
ಮಾವ್ಲಿನ್ನಾಂಗ್ ಗ್ರಾಮದ ಸ್ವಚ್ಛತೆಯನ್ನು ನೋಡಿದಾಗ ಮೊದಲು ಗಮನ ಸೆಳೆಯುವುದು ಅಲ್ಲಿನ ರಸ್ತೆಗಳ ಬದಿಯಲ್ಲಿರುವ ಬಿದಿರಿನ ಕಸದ ಬುಟ್ಟಿಗಳು. ಇವು ಸಾಮಾನ್ಯ ಕಸದ ಬುಟ್ಟಿಗಳಲ್ಲ. ಖೋಹ್ (Khoh) ಎಂದು ಕರೆಯಲಾಗುವ ಶಂಕುವಿನಾಕಾರದ ಬಿದಿರಿನ ಬುಟ್ಟಿಗಳನ್ನು ಗ್ರಾಮದ ವಿವಿಧ ಭಾಗಗಳಲ್ಲಿ ಇರಿಸಲಾಗಿದೆ. ಪ್ರವಾಸಿಗರು ಮತ್ತು ಗ್ರಾಮಸ್ಥರು ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಈ ಬುಟ್ಟಿಗಳಲ್ಲಿಯೇ ಹಾಕಬೇಕು ಎಂಬುದು ಇಲ್ಲಿನ ನಿಯಮ.
ಈ ಬುಟ್ಟಿಗಳಲ್ಲಿ ಸಂಗ್ರಹವಾದ ಕಸವನ್ನು ಸ್ಥಳೀಯರು ನಿಯಮಿತವಾಗಿ ಸಂಗ್ರಹಿಸಿ, ಸೂಕ್ತ ರೀತಿಯಲ್ಲಿ ವಿಂಗಡಿಸುತ್ತಾರೆ. ಕೊಳೆಯುವ ತ್ಯಾಜ್ಯವನ್ನು ಗೊಬ್ಬರ ತಯಾರಿಸಲು ಬಳಸುವ ವಿಧಾನವೂ ಅನುಸರಿಸಲಾಗುತ್ತದೆ. ಹೀಗಾಗಿ ಮನೆಯ ತ್ಯಾಜ್ಯವನ್ನು ಸಾಧ್ಯವಾದಷ್ಟು ಸ್ಥಳೀಯವಾಗಿಯೇ ನಿರ್ವಹಿಸುವ ಪ್ರಯತ್ನ ನಡೆಯುತ್ತದೆ.
ಇಲ್ಲಿನ ಸ್ವಚ್ಛತಾ ವ್ಯವಸ್ಥೆಯ ಇನ್ನೊಂದು ವಿಶೇಷವೆಂದರೆ, ವಾರಕ್ಕೊಮ್ಮೆ ನಡೆಯುವ ಸಾಮೂಹಿಕ ಸ್ವಚ್ಛತಾ ಕಾರ್ಯ. ಇಲ್ಲಿನ ಗ್ರಾಮದ ನಿವಾಸಿಗಳು ಪ್ರತೀ ಶನಿವಾರ ಬೆಳಿಗ್ಗೆ 7ರಿಂದ 9ರವರೆಗೆ ಎರಡು ಗಂಟೆಗಳ ಕಾಲ ಒಟ್ಟಾಗಿ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಸಂಪ್ರದಾಯವನ್ನು ಪಾಲಿಸುತ್ತಾರೆ. ಈ ಸ್ವಚ್ಷತಾ ಕಾರ್ಯದಲ್ಲಿ ಮಕ್ಕಳು, ಯುವಕರು, ವೃದ್ಧರು ಸೇರಿದಂತೆ, ಆಬಾಲವೃದ್ಧರಾಗಿ ಎಲ್ಲ ವಯೋಮಾನದವರೂ ಈ ಕಾರ್ಯದಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ. ಇಲ್ಲಿ ಸ್ವಚ್ಛತೆ ಎಂಬುದು ಕೇವಲ ಕಸ ಗುಡಿಸುವುದಕ್ಕೆ ಸೀಮಿತವಾಗಿಲ್ಲ. ಮನೆಗಳ ಮುಂದೆ ಹೂವಿನ ಗಿಡಗಳನ್ನು ಬೆಳೆಸುವುದು, ರಸ್ತೆಗಳ ಬದಿಯಲ್ಲಿ ಗಿಡಗಳನ್ನು ನೆಡುವುದು, ಸಾರ್ವಜನಿಕ ಸ್ಥಳಗಳನ್ನು ಅಚ್ಚುಕಟ್ಟಾಗಿ ಇಡುವುದು ಮತ್ತು ಪ್ರವಾಸಿಗರಿಗೂ ಸ್ವಚ್ಛತೆಯ ನಿಯಮಗಳನ್ನು ಪಾಲಿಸುವಂತೆ ತಿಳಿಸುವುದು ಈ ಸಂಸ್ಕೃತಿಯ ಭಾಗವಾಗಿರುವುದು ಗಮನಾರ್ಹ.
ಪ್ಲಾಸ್ಟಿಕ್ ಬಳಕೆಗೆ ನಿರ್ಬಂಧ, ಕಸ ಎಸೆದರೆ ಎಚ್ಚರಿಕೆ!
ಮಾವ್ಲಿನ್ನಾಂಗ್ ಗ್ರಾಮದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಲಾಗುತ್ತದೆ. ಧೂಮಪಾನ ಮತ್ತು ಎಲ್ಲೆಂದರಲ್ಲಿ ಕಸ ಎಸೆಯುವುದಕ್ಕೂ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಾರೆ. ಪ್ರವಾಸಿಗರೂ ಸಹ ಅಲ್ಲಿನ ನಿಯಮಗಳನ್ನು ಪಾಲಿಸಬೇಕೆಂದು ಸೂಚಿಸಲಾಗುತ್ತದೆ.
ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಚಾಕೊಲೇಟ್ ಕವರ್, ನೀರಿನ ಬಾಟಲಿ, ತಿಂಡಿ ಪೊಟ್ಟಣ ಅಥವಾ ಇತರ ತ್ಯಾಜ್ಯಗಳನ್ನು ರಸ್ತೆಯಲ್ಲಿ ಎಸೆಯುವಂತಿಲ್ಲ. ಕಸವನ್ನು ತಮ್ಮ ಬಳಿ ಇಟ್ಟುಕೊಂಡು ಸೂಕ್ತ ಕಸದ ಬುಟ್ಟಿಗೆ ಹಾಕಬೇಕು. ನಮ್ಮ ನಗರಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯಬಾರದೆಂದು ಫಲಕಗಳನ್ನು ಹಾಕಿದರೂ ಅನೇಕರು ಅದನ್ನು ನಿರ್ಲಕ್ಷಿಸುವುದನ್ನು ನೋಡುತ್ತೇವೆ. ಆದರೆ ಮಾವ್ಲಿನ್ನಾಂಗ್ನಲ್ಲಿ ಸ್ವಚ್ಛತೆಯ ನಿಯಮವನ್ನು ಉಲ್ಲಂಘಿಸುವುದನ್ನು ಸ್ಥಳೀಯರು ಗಂಭೀರವಾಗಿ ಪರಿಗಣಿಸುತ್ತಾರೆ. ಇಲ್ಲಿ ಒಂದು ಕುತೂಹಲಕಾರಿ ಅಂಶವಿದೆ. ಸ್ವಚ್ಛತೆಯ ಜವಾಬ್ದಾರಿಯನ್ನು ಸರ್ಕಾರಕ್ಕೆ ಮಾತ್ರ ಬಿಟ್ಟುಬಿಡದೆ, ಪ್ರತಿಯೊಬ್ಬರೂ ತಮ್ಮ ಮನೆಯ ಮುಂದೆ ಮಾತ್ರವಲ್ಲದೆ ಇಡೀ ಗ್ರಾಮದ ಪರಿಸರದ ಬಗ್ಗೆಯೂ ಕಾಳಜಿ ವಹಿಸುತ್ತಾರೆ.
ಮಾವ್ಲಿನ್ನಾಂಗ್ನ ಸ್ವಚ್ಛತೆಯ ಹಿಂದಿನ ಆರೋಗ್ಯದ ಕಾರಣ

ಮಾವ್ಲಿನ್ನಾಂಗ್ನಲ್ಲಿ ಸ್ವಚ್ಛತೆಯ ಸಂಪ್ರದಾಯವು ಇತ್ತೀಚಿನ ಪ್ರವಾಸೋದ್ಯಮದ ಕಾರಣದಿಂದ ಮಾತ್ರ ಆರಂಭವಾಗಿಲ್ಲ. ಸುಮಾರು 130 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳ ಅನುಭವದ ನಂತರ ಸ್ವಚ್ಛತೆ ಮತ್ತು ನೈರ್ಮಲ್ಯದ ಮಹತ್ವವನ್ನು ಜನರು ಹೆಚ್ಚು ಗಂಭೀರವಾಗಿ ಪರಿಗಣಿಸಲು ಆರಂಭಿಸಿದರು. ರೋಗ ಹರಡುವುದನ್ನು ತಡೆಯಲು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯ ಎಂಬ ಅರಿವು ಸಮುದಾಯದಲ್ಲಿ ಬೇರೂರಿತು ಎನ್ನಲಾಗುತ್ತದೆ. .
ಹೀಗೆ ಆರಂಭವಾದ ಸ್ವಚ್ಛತೆಯ ಅಭ್ಯಾಸ ಕ್ರಮೇಣ ತಲೆಮಾರಿನಿಂದ ತಲೆಮಾರಿಗೆ ಮುಂದುವರಿಯಿತು. ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಪರಿಸರವನ್ನು ಸ್ವಚ್ಛವಾಗಿಡುವ ಅಭ್ಯಾಸವನ್ನು ಕಲಿಯುತ್ತಾರೆ. ಸ್ವಚ್ಛತೆ ಎಂದರೆ ಶಾಲೆಯಲ್ಲಿ ಕಲಿಯುವ ಪಾಠ ಮಾತ್ರವಲ್ಲ, ಮನೆಯಲ್ಲಿ ಮತ್ತು ಸಮಾಜದಲ್ಲಿ ಪಾಲಿಸಬೇಕಾದ ಜೀವನಶೈಲಿ ಎಂಬುದನ್ನು ಅವರಿಗೆ ತಿಳಿಸಿಕೊಡಲಾಗುತ್ತದೆ. ಈ ರೀತಿಯ ಸಾಮಾಜಿಕ ಶಿಸ್ತೇ ಮಾವ್ಲಿನ್ನಾಂಗ್ನ ಯಶಸ್ಸಿನ ಮೂಲ ಕಾರಣಗಳಲ್ಲಿ ಒಂದು.
ಖಾಸಿ ಸಮುದಾಯದ ವಿಶೇಷತೆ. ಮಹಿಳೆಯರಿಗೆ ಮಹತ್ವದ ಸ್ಥಾನ

ಮಾವ್ಲಿನ್ನಾಂಗ್ ಗ್ರಾಮದ ಮತ್ತೊಂದು ವಿಶೇಷತೆಯೆಂದರೆ ಅಲ್ಲಿನ ಖಾಸಿ ಬುಡಕಟ್ಟು ಸಮುದಾಯದ ಮಾತೃವಂಶೀಯ ವ್ಯವಸ್ಥೆ (Matrilineal Society). ಭಾರತದ ಬಹುತೇಕ ಸಮುದಾಯಗಳಲ್ಲಿ ವಂಶಪಾರಂಪರ್ಯ ಮತ್ತು ಕುಟುಂಬದ ಆಸ್ತಿ ತಂದೆಯ ಕಡೆಯಿಂದ ಮುಂದುವರಿಯುವುದನ್ನು ಕಾಣುತ್ತೇವೆ. ಆದರೆ ಖಾಸಿ ಸಮುದಾಯದಲ್ಲಿ ವಂಶವನ್ನು ತಾಯಿಯ ಕಡೆಯಿಂದ ಗುರುತಿಸಲಾಗುತ್ತದೆ. ಮಕ್ಕಳಿಗೆ ತಾಯಿಯ ಕುಟುಂಬದ ಹೆಸರು ಮತ್ತು ವಂಶಪರಂಪರೆ ಮುಂದುವರಿಯುತ್ತದೆ.
ಇಲ್ಲಿನ ವಿಶೇಷ ಸಂಪ್ರದಾಯದ ಪ್ರಕಾರ, ಕುಟುಂಬದ ಪೂರ್ವಜರ ಆಸ್ತಿಯ ವಾರಸುದಾರಳಾಗಿ ಸಾಮಾನ್ಯವಾಗಿ ಕಿರಿಯ ಮಗಳು ಕಾ ಖದ್ದುಹ್ (Ka Khadduh) ಆಯ್ಕೆಯಾಗುತ್ತಾಳೆ. ಕುಟುಂಬದ ಪರಂಪರೆ, ಆಸ್ತಿ ಮತ್ತು ಹಿರಿಯರ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಆಕೆಗೆ ಪ್ರಮುಖ ಸ್ಥಾನವಿದೆ.
ಹಾಗೆಂದ ಮಾತ್ರಕ್ಕೆ ಈ ಸಮುದಾಯವೆಲ್ಲವೂ ಮಹಿಳೆಯರ ಆಡಳಿತವಿರುವ ವ್ಯವಸ್ಥೆ ಎನ್ನಲಾಗದು. ಖಾಸಿ ಸಮಾಜದಲ್ಲಿ ಪುರುಷರಿಗೂ ಕುಟುಂಬ ಮತ್ತು ಸಾಮಾಜಿಕ ವಿಚಾರಗಳಲ್ಲಿ ಮಹತ್ವದ ಪಾತ್ರವಿದೆ. ವಿಶೇಷವಾಗಿ ತಾಯಿಯ ಸಹೋದರನಾದ ಮಾವನಿಗೆ ಕೆಲವು ಕುಟುಂಬ ಮತ್ತು ಧಾರ್ಮಿಕ ನಿರ್ಧಾರಗಳಲ್ಲಿ ಪ್ರಮುಖ ಜವಾಬ್ದಾರಿ ಇರುತ್ತದೆ. ಹೀಗಾಗಿ ಖಾಸಿ ಸಮಾಜದ ಮಾತೃವಂಶೀಯ ವ್ಯವಸ್ಥೆಯು ಮಹಿಳೆಯರ ಸ್ಥಾನಮಾನ, ಕುಟುಂಬದ ಪರಂಪರೆ ಮತ್ತು ಆಸ್ತಿ ಹಕ್ಕುಗಳ ದೃಷ್ಟಿಯಿಂದ ಅಧ್ಯಯನಕ್ಕೆ ಅರ್ಹವಾದ ವಿಶಿಷ್ಟ ಸಾಮಾಜಿಕ ವ್ಯವಸ್ಥೆಯಾಗಿದೆ.
ಮಾವ್ಲಿನ್ನಾಂಗ್ನ ಆಕರ್ಷಣೆ. ಜೀವಂತ ಬೇರುಗಳಿಂದ ನಿರ್ಮಿಸಿದ ಸೇತುವೆ!

ಮಾವ್ಲಿನ್ನಾಂಗ್ಗೆ ಭೇಟಿ ನೀಡಿದಾಗ ಪ್ರವಾಸಿಗರಿಗೆ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಆ ಗ್ರಾಮದ ಸಮೀಪದಲ್ಲಿರುವ ಜೀವಂತ ಬೇರುಗಳ ಸೇತುವೆಗಳು (Living Root Bridges). ಮೇಘಾಲಯದ ಖಾಸಿ ಮತ್ತು ಜೈಂತಿಯಾ ಸಮುದಾಯದವರು ಪ್ರಕೃತಿಯನ್ನೇ ಬಳಸಿಕೊಂಡು ಸೇತುವೆಗಳನ್ನು ನಿರ್ಮಿಸುವ ವಿಶಿಷ್ಟ ಕೌಶಲವನ್ನು ಬೆಳೆಸಿಕೊಂಡಿದ್ದಾರೆ.
ಇದಕ್ಕಾಗಿ ರಬ್ಬರ್ ಮರದ ಒಂದು ಜಾತಿಯಾದ Ficus elastica ಮರದ ಗಾಳಿಬೇರುಗಳನ್ನು ಮಾರ್ಗದರ್ಶನ ನೀಡಿ ನದಿಯ ಅಥವಾ ಹಳ್ಳದ ಒಂದು ದಡದಿಂದ ಮತ್ತೊಂದು ದಡದವರೆಗೆ ಬೆಳೆಸುತ್ತಾರೆ. ಆರಂಭದಲ್ಲಿ ಬಿದಿರು ಅಥವಾ ಇತರ ತಾತ್ಕಾಲಿಕ ಆಧಾರಗಳನ್ನು ಬಳಸಿ ಬೇರುಗಳಿಗೆ ದಿಕ್ಕು ನೀಡಲಾಗುತ್ತದೆ. ಹಲವು ವರ್ಷಗಳ ಕಾಲ ಅವುಗಳನ್ನು ಬೆಳೆಸಿ, ಹೆಣೆಯುತ್ತಾ, ಬಲಪಡಿಸುತ್ತಾ ಹೋದಾಗ ಸೇತುವೆಯ ರೂಪ ಪಡೆಯುತ್ತದೆ.
ಸಾಮಾನ್ಯ ಮರದ ಸೇತುವೆಗಳಂತೆ ಇವು ಕೆಲವೇ ವರ್ಷಗಳಲ್ಲಿ ಹಾಳಾಗುವುದಿಲ್ಲ. ಸರಿಯಾಗಿ ಬೆಳೆಸಿ ನಿರ್ವಹಿಸಿದರೆ ಬೇರುಗಳು ಮತ್ತಷ್ಟು ಬಲಗೊಳ್ಳುತ್ತವೆ. ಇದು ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕುವ ಸ್ಥಳೀಯ ಸಮುದಾಯದ ಅದ್ಭುತ ಜ್ಞಾನಕ್ಕೆ ಸಾಕ್ಷಿಯಾಗಿದೆ. ಮಾವ್ಲಿನ್ನಾಂಗ್ ಸಮೀಪದ ರಿವಾಯಿ ಮತ್ತು ನೋಹ್ವೆಟ್ ಪ್ರದೇಶಗಳಲ್ಲಿ ಇಂತಹ ಜೀವಂತ ಬೇರುಗಳ ಸೇತುವೆಗಳನ್ನು ನೋಡಬಹುದು. ಅವುಗಳಲ್ಲಿ ಒಂದೇ ಹಂತದ ಸೇತುವೆಯೂ ಪ್ರವಾಸಿಗರ ಗಮನ ಸೆಳೆಯುತ್ತದೆ. ಈ ಸೇತುವೆಗಳನ್ನು ನಿರ್ಮಿಸುವುದಕ್ಕೆ ಯಂತ್ರೋಪಕರಣಗಳು ಅಥವಾ ಕಾಂಕ್ರೀಟ್ ಅಗತ್ಯವಿಲ್ಲ. ಪ್ರಕೃತಿಯ ಬೆಳವಣಿಗೆಯನ್ನೇ ಆಧಾರವಾಗಿಟ್ಟುಕೊಂಡು ಮನುಷ್ಯ ತನ್ನ ಅಗತ್ಯಕ್ಕೆ ತಕ್ಕಂತೆ ರೂಪಿಸಿಕೊಂಡಿರುವುದು ಇವುಗಳ ವಿಶೇಷತೆ.
ಸ್ಕೈ ವ್ಯೂ ಪಾಯಿಂಟ್. ಬಾಂಗ್ಲಾದೇಶದ ಬಯಲು ಪ್ರದೇಶದ ಸುಂದರ ನೋಟ
ಮಾವ್ಲಿನ್ನಾಂಗ್ ಗ್ರಾಮದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ, ಸ್ಕೈ ವ್ಯೂ ಪಾಯಿಂಟ್ (Sky Viewpoint).
ಬಿದಿರಿನಿಂದ ನಿರ್ಮಿಸಲಾದ ಎತ್ತರದ ವೀಕ್ಷಣಾ ಗೋಪುರವನ್ನು ಹತ್ತಿದರೆ ಸುತ್ತಲಿನ ಹಸಿರು ಬೆಟ್ಟಗಳು ಮತ್ತು ದೂರದಲ್ಲಿರುವ ಬಾಂಗ್ಲಾದೇಶದ ಬಯಲು ಪ್ರದೇಶಗಳ ಸುಂದರ ನೋಟವನ್ನು ನೋಡಬಹುದು. ವಿಶೇಷವಾಗಿ ಮಳೆಗಾಲದ ನಂತರ ಆಕಾಶ ನಿರ್ಮಲವಾಗಿರುವ ದಿನಗಳಲ್ಲಿ ಇಲ್ಲಿಂದ ಕಾಣುವ ದೃಶ್ಯ ಮನಮೋಹಕವಾಗಿರುತ್ತದೆ. ಒಂದೆಡೆ ಮೇಘಾಲಯದ ಬೆಟ್ಟಗಳು, ಮತ್ತೊಂದೆಡೆ ದೂರದ ಸಮತಟ್ಟಾದ ಬಯಲು ಪ್ರದೇಶಗಳು — ಭೌಗೋಳಿಕವಾಗಿ ಎರಡು ವಿಭಿನ್ನ ಭೂಪ್ರದೇಶಗಳ ಸೌಂದರ್ಯವನ್ನು ಒಂದೇ ಕಡೆ ನಿಂತು ವೀಕ್ಷಿಸಬಹುದು. ಈ ಗೋಪುರವು ಗ್ರಾಮದ ಬಿದಿರು ನಿರ್ಮಾಣ ಕೌಶಲ ಮತ್ತು ಸ್ಥಳೀಯ ಪರಿಸರಕ್ಕೆ ಹೊಂದಿಕೊಂಡ ಕಟ್ಟಡ ವಿನ್ಯಾಸಕ್ಕೂ ಉದಾಹರಣೆಯಾಗಿದೆ.
ಚರ್ಚ್ ಆಫ್ ದಿ ಎಪಿಫನಿ. ನೂರು ವರ್ಷಗಳ ಇತಿಹಾಸ
ಮಾವ್ಲಿನ್ನಾಂಗ್ ಗ್ರಾಮದ ಮತ್ತೊಂದು ಗಮನಾರ್ಹ ಕಟ್ಟಡವೆಂದರೆ ಚರ್ಚ್ ಆಫ್ ದಿ ಎಪಿಫನಿ (Church of the Epiphany). ಸುಮಾರು ಒಂದು ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಈ ಚರ್ಚ್, ಗ್ರಾಮದ ಮಧ್ಯದಲ್ಲಿರುವ ಹಸಿರು ಪರಿಸರ ಮತ್ತು ಹೂವಿನ ತೋಟಗಳ ನಡುವೆ ನೆಲೆಸಿದೆ. ಇದರ ಸರಳವಾದ ಯುರೋಪಿಯನ್ ವಾಸ್ತುಶಿಲ್ಪ, ಹಳೆಯ ಕಟ್ಟಡದ ವಿನ್ಯಾಸ ಮತ್ತು ಸುತ್ತಲಿನ ಸುಂದರ ಪರಿಸರ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಮೇಘಾಲಯದಲ್ಲಿ ಕ್ರೈಸ್ತ ಧರ್ಮದ ಪ್ರಭಾವ ಮತ್ತು ಸ್ಥಳೀಯ ಖಾಸಿ ಸಮುದಾಯದ ಧಾರ್ಮಿಕ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಈ ಚರ್ಚ್ ಸಹಾಯ ಮಾಡುತ್ತದೆ.
ಬ್ಯಾಲೆನ್ಸಿಂಗ್ ರಾಕ್. ಪ್ರಕೃತಿಯ ಮತ್ತೊಂದು ಅಚ್ಚರಿ
ಮಾವ್ಲಿನ್ನಾಂಗ್ಗೆ ಸಮೀಪದಲ್ಲಿರುವ ಮತ್ತೊಂದು ಕುತೂಹಲಕಾರಿ ನೈಸರ್ಗಿಕ ಆಕರ್ಷಣೆ ಬ್ಯಾಲೆನ್ಸಿಂಗ್ ರಾಕ್ (Balancing Rock). ಒಂದು ಬೃಹತ್ ಬಂಡೆಯ ಮೇಲೆ ಮತ್ತೊಂದು ಕಲ್ಲು ವಿಚಿತ್ರ ರೀತಿಯಲ್ಲಿ ಸಮತೋಲನದಲ್ಲಿರುವಂತೆ ಕಾಣುತ್ತದೆ. ಕೆಳಗಿನ ಬಂಡೆಯ ಮೇಲೆ ಮೇಲಿನ ಕಲ್ಲು ನಿಂತಿರುವ ರೀತಿ ಪ್ರವಾಸಿಗರಲ್ಲಿ ಕುತೂಹಲ ಮೂಡಿಸುತ್ತದೆ. ಇದು ಪ್ರಕೃತಿಯ ದೀರ್ಘಕಾಲದ ಭೌಗೋಳಿಕ ಪ್ರಕ್ರಿಯೆಗಳ ಪರಿಣಾಮವಾಗಿ ರೂಪುಗೊಂಡಿರುವ ನೈಸರ್ಗಿಕ ಕಲ್ಲಿನ ರಚನೆ. ಈ ಪ್ರದೇಶದ ಪ್ರವಾಸಿ ಆಕರ್ಷಣೆಗಳಲ್ಲಿ ಇದಕ್ಕೂ ಸ್ಥಾನವಿದೆ.
ಮಾವ್ಲಿನ್ನಾಂಗ್ನಲ್ಲಿ ಪ್ರವಾಸೋದ್ಯಮದಿಂದ ಬದಲಾದ ಗ್ರಾಮೀಣ ಆರ್ಥಿಕತೆ
2003ರಲ್ಲಿ ಏಷ್ಯಾದ ಸ್ವಚ್ಛ ಗ್ರಾಮ ಎಂಬ ಹೆಗ್ಗಳಿಕೆ ದೊರೆತ ನಂತರ ಮಾವ್ಲಿನ್ನಾಂಗ್ಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗತೊಡಗಿತು. ಮೊದಲು ಹೊರಗಿನವರಿಗೆ ಹೆಚ್ಚು ಪರಿಚಯವಿಲ್ಲದಿದ್ದ ಈ ಗ್ರಾಮ ಕ್ರಮೇಣ ದೇಶೀಯ ಮತ್ತು ವಿದೇಶಿ ಪ್ರವಾಸಿಗರ ತಾಣವಾಯಿತು.
ಈ ಬದಲಾವಣೆಯಿಂದ ಸ್ಥಳೀಯ ಜನರಿಗೆ ಹಲವು ಉದ್ಯೋಗಾವಕಾಶಗಳು ಸೃಷ್ಟಿಯಾದವು.
- ಮನೆಗಳಲ್ಲಿಯೇ ಹೋಂಸ್ಟೇ ವ್ಯವಸ್ಥೆಗಳನ್ನು ಆರಂಭಿಸಲಾಯಿತು.
- ಸ್ಥಳೀಯ ಮಹಿಳೆಯರು ಮತ್ತು ಕುಟುಂಬಗಳು ಆಹಾರ ಹಾಗೂ ಆತಿಥ್ಯ ಸೇವೆಗಳಲ್ಲಿ ತೊಡಗಿಸಿಕೊಂಡರು.
- ಪ್ರವಾಸಿಗರಿಗೆ ಸ್ಥಳೀಯ ಕರಕುಶಲ ವಸ್ತುಗಳು ಮತ್ತು ಸ್ಮರಣಿಕೆಗಳನ್ನು ಮಾರಾಟ ಮಾಡುವ ಅಂಗಡಿಗಳು ಆರಂಭವಾದವು.
- ಸ್ಥಳೀಯ ಮಾರ್ಗದರ್ಶಕರಿಗೆ ಉದ್ಯೋಗ ದೊರೆಯಿತು.
- ವಾಹನ ಚಾಲಕರು, ಸಣ್ಣ ವ್ಯಾಪಾರಿಗಳು ಮತ್ತು ಆಹಾರ ಮಳಿಗೆಗಳ ಆದಾಯ ಹೆಚ್ಚಾಯಿತು.
2023ರಲ್ಲಿ ಪ್ರಕಟವಾದ ವರದಿಯೊಂದರಲ್ಲಿ ಸ್ಥಳೀಯ ಹೋಂಸ್ಟೇ ನಿರ್ವಹಿಸುವ ವ್ಯಕ್ತಿಯೊಬ್ಬರು ಗ್ರಾಮದ ಸುಮಾರು ಶೇ.60ರಷ್ಟು ಜನರು ಪ್ರವಾಸೋದ್ಯಮದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಂದಾಜಿಸಿದ್ದರು. ಉಳಿದವರು ಅಡಿಕೆ, ತಮಾಲಪತ್ರೆ, ಕಾಳುಮೆಣಸು ಮತ್ತು ಋತುಮಾನಕ್ಕೆ ಅನುಗುಣವಾದ ತರಕಾರಿ ಬೆಳೆಗಳಂತಹ ಕೃಷಿ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದರು ಎಂದು ವರದಿ ತಿಳಿಸಿತ್ತು. ಹೀಗೆ ಸ್ವಚ್ಛತೆಯ ಮೂಲಕ ವಿಶ್ವದ ಗಮನ ಸೆಳೆದ ಗ್ರಾಮವು ತನ್ನದೇ ಆದ ಗ್ರಾಮೀಣ ಪ್ರವಾಸೋದ್ಯಮ ಮಾದರಿಯನ್ನು ನಿರ್ಮಿಸಿಕೊಂಡಿದೆ.
ದುರಾದೃಷ್ಟವೆಂದರೆ, 2026ರ ಅಕ್ಟೋಬರ್ ತಿಂಗಳಿನಲ್ಲಿ ಏಷ್ಯಾದ ಸ್ವಚ್ಛ ಗ್ರಾಮ ಮಾವ್ಲಿನ್ನಾಂಗ್ ಹೋಗಿ ನೋಡಿದಾಗ ಅದು ಇಂದು ಕೇವಲ ಗ್ರಾಮವಾಗಿ ಉಳಿಯದೇ, ಅದೊಂದು ದೊಡ್ಡ ವ್ಯಾಪಾರೀ ತಾಣವಾಗಿ ಹೋಗಿರುವುದು ನಿಜಕ್ಕೂ ದುರಾದೃಷ್ಟವಾಗಿದೆ. ಗ್ರಾಮಕ್ಕೆ ಒಳಗೆ ಹೋಗುವುದರಿಂದ ಹಿಡಿದು ಶೌಚಾಲಯಕ್ಕೆ ಹೋಗುವುದಕ್ಕೆ, ಅಲ್ಲಿ ಮನೆ ಮನೆಗಳ ಮುಂದೆ ನಿರ್ಮಿಸಿರುವ ಬಿದುರಿನ ಅಟ್ಟಣಿಕೆ ಎಲ್ಲದರಲ್ಲೂ ಹಣ ಮಾಡುವ ದಂದೆಯನ್ನು ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಬಹುತೇಕ ಮನೆಗಳು ಹೋಮ್ ಸ್ಟೇಗಳಾಗಿ ಬದಲಾಗಿರುವುದಲ್ಲದೇ ಪಾರ್ಕಿಂಗ್ ಮತ್ತು ಅದರ ಸುತ್ತಮುತ್ತಲು ಇರುವ ಹೋಟೆಲ್ಲುಗಳು, ಬೆತ್ತದಿಂದ ಮಾಡಿರುವ ವಿವಿಧ ವಸ್ತುಗಳ ಅಂಗಡಿಗಳಿಂದ ಸಂಪೂರ್ಣವಾಗಿ ವ್ಯಾಪಾರೀ ಕೇಂದ್ರವಾಗಿರುವುದು ಸಹಾ ಬೇಸರ ಎನಿಸುತ್ತದೆ.
ಪ್ರವಾಸಿಗರ ಹೆಚ್ಚಳವೇ ಈಗ ಗ್ರಾಮದ ಮುಂದಿರುವ ಸವಾಲೇ?
ಒಂದು ಕಾಲದಲ್ಲಿ ಪ್ರವಾಸಿಗರ ಕೊರತೆಯಿಂದ ಪರಿಚಯವಿಲ್ಲದಿದ್ದ ಮಾವ್ಲಿನ್ನಾಂಗ್, ಇಂದು ಪ್ರತಿದಿನ ನೂರಾರು ಪ್ರವಾಸಿಗರನ್ನು ಆಕರ್ಷಿಸುವ ಮಟ್ಟಕ್ಕೆ ಬೆಳೆದಿದೆ. ಆದರೆ ಪ್ರವಾಸೋದ್ಯಮದ ಬೆಳವಣಿಗೆಯೊಂದಿಗೆ ಹೊಸ ಸವಾಲುಗಳೂ ಎದುರಾಗಿವೆ.
ಹೆಚ್ಚುತ್ತಿರುವ ವಾಹನಗಳ ಸಂಚಾರ, ಪ್ರವಾಸಿಗರಿಂದ ಉಂಟಾಗುವ ತ್ಯಾಜ್ಯ, ಶಬ್ದ ಮಾಲಿನ್ಯ, ಸಾರ್ವಜನಿಕ ಸ್ಥಳಗಳ ಮೇಲಿನ ಒತ್ತಡ ಮತ್ತು ಸ್ಥಳೀಯರ ಖಾಸಗಿತನಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆಗಳು ಚರ್ಚೆಗೆ ಬಂದಿವೆ. 2023ರ ದಿ ನ್ಯಾಷನಲ್ ವರದಿಯಲ್ಲಿಯೂ ಅತಿಯಾದ ಪ್ರವಾಸೋದ್ಯಮದಿಂದ ಗ್ರಾಮದ ಶಾಂತ ವಾತಾವರಣ ಮತ್ತು ಸ್ಥಳೀಯರ ಖಾಸಗಿತನದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಆತಂಕವನ್ನು ಕೆಲ ನಿವಾಸಿಗಳು ವ್ಯಕ್ತಪಡಿಸಿದ್ದರು. ಪ್ರವಾಸೋದ್ಯಮದಿಂದ ಆದಾಯ ದೊರೆಯುವುದು ಒಳ್ಳೆಯದಾದರೂ, ಅದನ್ನು ನಿಯಂತ್ರಣವಿಲ್ಲದೆ ವಿಸ್ತರಿಸುವುದು ದೀರ್ಘಕಾಲದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಹೀಗಾಗಿ ಮಾವ್ಲಿನ್ನಾಂಗ್ ಮುಂದಿನ ದಿನಗಳಲ್ಲಿ ತನ್ನ ಸ್ವಚ್ಛತೆಯ ಹೆಗ್ಗಳಿಕೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಪ್ರವಾಸೋದ್ಯಮವನ್ನು ಪರಿಸರ ಸ್ನೇಹಿಯಾಗಿ ನಿರ್ವಹಿಸುವ ಸವಾಲನ್ನೂ ಎದುರಿಸಬೇಕಾಗಿದೆ.
ಮಾವ್ಲಿನ್ನಾಂಗ್ಗೆ ಭೇಟಿ ನೀಡಲು ಉತ್ತಮ ಸಮಯ ಯಾವುದು?
ಮೇಘಾಲಯದಲ್ಲಿ ಮಳೆಗಾಲದಲ್ಲಿ ಹೆಚ್ಚಿನ ಮಳೆಯಾಗುವುದರಿಂದ ಪ್ರವಾಸದ ಯೋಜನೆ ಮಾಡುವಾಗ ಹವಾಮಾನವನ್ನು ಗಮನಿಸುವುದು ಅಗತ್ಯ. ಅಕ್ಟೋಬರ್ನಿಂದ ಏಪ್ರಿಲ್ವರೆಗಿನ ಅವಧಿ ಸಾಮಾನ್ಯವಾಗಿ ಮಾವ್ಲಿನ್ನಾಂಗ್ ಪ್ರವಾಸಕ್ಕೆ ಅನುಕೂಲಕರವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಮಳೆಗಾಲದ ನಂತರದ ತಿಂಗಳುಗಳಲ್ಲಿ ಪ್ರಕೃತಿ ಹಸಿರಿನಿಂದ ಕಂಗೊಳಿಸುತ್ತಿದ್ದು, ಚಳಿಗಾಲದಲ್ಲಿ ಹೊರಾಂಗಣ ಪ್ರವಾಸ ಮತ್ತು ದೃಶ್ಯ ವೀಕ್ಷಣೆ ಸುಲಭವಾಗುತ್ತದೆ.
ಆದರೆ ಮಳೆಗಾಲದಲ್ಲಿಯೂ ಮೇಘಾಲಯದ ಪ್ರಕೃತಿ ಅದ್ಭುತ ಸೌಂದರ್ಯವನ್ನು ಹೊಂದಿರುತ್ತದೆ. ಆ ಸಮಯದಲ್ಲಿ ರಸ್ತೆ ಜಾರುವಿಕೆ, ಭೂಕುಸಿತ ಮತ್ತು ಭಾರಿ ಮಳೆಯ ಸಾಧ್ಯತೆ ಇರುವುದರಿಂದ ಹವಾಮಾನದ ಮುನ್ಸೂಚನೆಯನ್ನು ಗಮನಿಸಿ ಪ್ರಯಾಣಿಸುವುದು ಉತ್ತಮವಾಗಿರುತ್ತದೆ.
ಮಾವ್ಲಿನ್ನಾಂಗ್ಗೆ ತಲುಪುವುದು ಹೇಗೆ?
ಮಾವ್ಲಿನ್ನಾಂಗ್ಗೆ ತೆರಳಲು ಶಿಲ್ಲಾಂಗ್ ಪ್ರಮುಖ ಪ್ರವೇಶ ಕೇಂದ್ರವಾಗಿದೆ.
ಶಿಲ್ಲಾಂಗ್ನಿಂದ: ಸುಮಾರು 76 ಕಿ.ಮೀ. ದೂರವಿದ್ದು, ಖಾಸಗಿ ವಾಹನ, ಬಾಡಿಗೆ ಟ್ಯಾಕ್ಸಿ ಅಥವಾ ಪ್ರವಾಸಿ ಪ್ಯಾಕೇಜ್ ಮೂಲಕ ತೆರಳಬಹುದು.
ಗುವಾಹಟಿಯಿಂದ: ಗುವಾಹಟಿ ವಿಮಾನ ನಿಲ್ದಾಣ ಅಥವಾ ರೈಲು ನಿಲ್ದಾಣಕ್ಕೆ ಬಂದ ನಂತರ ಶಿಲ್ಲಾಂಗ್ ಮೂಲಕ ಮಾವ್ಲಿನ್ನಾಂಗ್ಗೆ ಪ್ರಯಾಣಿಸಬಹುದು.
ಸ್ಥಳೀಯ ಸಾರಿಗೆ: ಶಿಲ್ಲಾಂಗ್ನಿಂದ ಪೈನರ್ಸ್ಲಾ (Pynursla) ಕಡೆಗೆ ಹಂಚಿಕೆ ವಾಹನಗಳು ಅಥವಾ ಟ್ಯಾಕ್ಸಿಗಳು ಲಭ್ಯವಿರುತ್ತವೆ. ಅಲ್ಲಿಂದ ಮಾವ್ಲಿನ್ನಾಂಗ್ಗೆ ಸ್ಥಳೀಯ ವಾಹನ ಅಥವಾ ಬಾಡಿಗೆ ಟ್ಯಾಕ್ಸಿ ಮೂಲಕ ತೆರಳಬಹುದು.
ಗ್ರಾಮದ ಸುತ್ತಮುತ್ತಲಿನ ಜೀವಂತ ಬೇರುಗಳ ಸೇತುವೆ, ಸ್ಕೈ ವ್ಯೂ ಪಾಯಿಂಟ್ ಮತ್ತು ಇತರ ಸ್ಥಳಗಳನ್ನು ನೋಡಲು ಸಾಕಷ್ಟು ಸಮಯ ಮೀಸಲಿಡುವುದಷ್ಟೇ ಅಲ್ಲದೇ, ಸ್ಥಳೀಯ ಮಾರ್ಗದರ್ಶಿಯನ್ನು ನೇಮಿಸಿಕೊಂಡರೆ ಗ್ರಾಮದ ಸಂಸ್ಕೃತಿ ಮತ್ತು ಪರಿಸರದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
ನಮ್ಮ ಊರುಗಳೂ ಮಾವ್ಲಿನ್ನಾಂಗ್ನಿಂದ ಕಲಿಯಬೇಕಾದ ಪಾಠವೇನು?
ಮಾವ್ಲಿನ್ನಾಂಗ್ನ ವಿಶೇಷತೆ ಅಲ್ಲಿನ ರಸ್ತೆಗಳು ಕೇವಲ ಸ್ವಚ್ಛವಾಗಿರುವುದಲ್ಲ. ಆ ಸ್ವಚ್ಛತೆಯನ್ನು ಕಾಪಾಡಲು ಸರ್ಕಾರದ ಆದೇಶಕ್ಕಾಗಿ ಕಾಯದೆ, ಜನರೇ ಸ್ವಯಂಪ್ರೇರಿತರಾಗಿ ಜವಾಬ್ದಾರಿ ತೆಗೆದುಕೊಳ್ಳುತ್ತಿರುವುದು. ನಮ್ಮಲ್ಲಿ ಅನೇಕ ನಗರಗಳು, ಪಟ್ಟಣಗಳು ಮತ್ತು ಗ್ರಾಮಗಳಲ್ಲಿ ಸ್ವಚ್ಛ ಭಾರತ ಅಭಿಯಾನದಂತಹ ಯೋಜನೆಗಳಿದ್ದರೂ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ಪ್ರವೃತ್ತಿ ಇನ್ನೂ ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಮನೆಗಳನ್ನು ಮಾತ್ರ ಸ್ವಚ್ಛವಾಗಿಟ್ಟುಕೊಂಡು ಸಾರ್ವಜನಿಕ ರಸ್ತೆ, ಉದ್ಯಾನವನ, ಕೆರೆ, ಬಸ್ ನಿಲ್ದಾಣ ಮತ್ತು ಪ್ರವಾಸಿ ತಾಣಗಳನ್ನು ನಿರ್ಲಕ್ಷಿಸುವ ಮನೋಭಾವ ಬದಲಾಗಬೇಕಿದೆ.
ಮಾವ್ಲಿನ್ನಾಂಗ್ ನಮಗೆ ಕಲಿಸುವ ಕೆಲವು ಸರಳ ಪಾಠಗಳು ಇಂತಿವೆ:
- ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ: ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಸೂಕ್ತ ಸ್ಥಳದಲ್ಲಿ ಹಾಕಬೇಕು.
- ಮಕ್ಕಳಿಂದಲೇ ಅಭ್ಯಾಸ ಆರಂಭವಾಗಲಿ: ಶಾಲೆ ಮತ್ತು ಮನೆಯಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸಬೇಕು.
- ಸಮುದಾಯದ ಸಹಭಾಗಿತ್ವ: ವಾರಕ್ಕೊಮ್ಮೆ ಅಥವಾ ನಿಗದಿತ ಅವಧಿಯಲ್ಲಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸಬೇಕು.
- ಪರಿಸರ ಸ್ನೇಹಿ ವಸ್ತುಗಳಿಗೆ ಆದ್ಯತೆ: ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಮರುಬಳಕೆ ಮತ್ತು ತ್ಯಾಜ್ಯ ವಿಂಗಡಣೆಗೆ ಒತ್ತು ನೀಡಬೇಕು.
- ಪ್ರವಾಸಿ ತಾಣಗಳ ಸಂರಕ್ಷಣೆ: ಪ್ರವಾಸಿಗರು ಅಲ್ಲಿನ ಪ್ರಕೃತಿ, ಸಂಸ್ಕೃತಿ ಮತ್ತು ಸ್ಥಳೀಯರ ಜೀವನಶೈಲಿಯನ್ನು ಗೌರವಿಸಬೇಕು.
ಸ್ವಚ್ಛತೆಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುವುದಕ್ಕಿಂತ, ಜನರಲ್ಲಿ ಜವಾಬ್ದಾರಿಯ ಅರಿವು ಮೂಡಿಸುವುದು ಹೆಚ್ಚು ಪರಿಣಾಮಕಾರಿ ಎಂಬುದನ್ನು ಮಾವ್ಲಿನ್ನಾಂಗ್ನ ಅನುಭವ ತೋರಿಸುತ್ತದೆ.
ಕೊನೆಯ ಮಾತು. ಸ್ವಚ್ಛತೆ ಎನ್ನುವುದು ಕೇವಲ ಒಂದು ದಿನದ ಕಾರ್ಯಕ್ರಮವಲ್ಲ, ತಲೆಮಾರುಗಳ ಸಂಸ್ಕೃತಿ!
ಮಾವ್ಲಿನ್ನಾಂಗ್ ಗ್ರಾಮವು ಕೇವಲ ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿಲ್ಲ. ಪ್ರಕೃತಿಯನ್ನು ಪ್ರೀತಿಸುವ ಖಾಸಿ ಸಮುದಾಯದ ಜೀವನಶೈಲಿ, ಮಹಿಳೆಯರಿಗೆ ಮಹತ್ವದ ಸ್ಥಾನ ನೀಡುವ ಮಾತೃವಂಶೀಯ ವ್ಯವಸ್ಥೆ, ಜೀವಂತ ಬೇರುಗಳಿಂದ ಸೇತುವೆ ನಿರ್ಮಿಸುವ ಸ್ಥಳೀಯ ಜ್ಞಾನ, ಬಿದಿರಿನ ಕಸದ ಬುಟ್ಟಿಗಳ ಮೂಲಕ ತ್ಯಾಜ್ಯ ನಿರ್ವಹಣೆ ಮತ್ತು ಸಾಮೂಹಿಕ ಸ್ವಚ್ಛತೆಯ ಸಂಪ್ರದಾಯ, ಇವೆಲ್ಲವೂ ಈ ಗ್ರಾಮದ ನಿಜವಾದ ಸಂಪತ್ತು.
ಇಲ್ಲಿನ ಜನರು ತಮ್ಮ ಊರನ್ನು ಸ್ವಚ್ಛವಾಗಿಟ್ಟುಕೊಳ್ಳಲು ಯಾವುದೇ ದೊಡ್ಡ ಆಧುನಿಕ ತಂತ್ರಜ್ಞಾನವನ್ನು ಅವಲಂಬಿಸಿಲ್ಲ. ಪರಸ್ಪರ ಸಹಕಾರ, ಶಿಸ್ತು, ಪರಿಸರದ ಮೇಲಿನ ಪ್ರೀತಿ ಮತ್ತು ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ನಿಭಾಯಿಸುವ ಮನೋಭಾವವೇ ಅವರ ಯಶಸ್ಸಿನ ಹಿಂದಿನ ಶಕ್ತಿ.
ವಿಶ್ವದ ಹಲವು ನಗರಗಳು ಸ್ವಚ್ಛತೆಯ ಕುರಿತು ದೊಡ್ಡ ದೊಡ್ಡ ಯೋಜನೆಗಳನ್ನು ರೂಪಿಸುತ್ತಿರುವಾಗ, ಮೇಘಾಲಯದ ಈ ಪುಟ್ಟ ಹಳ್ಳಿ ತನ್ನ ದೈನಂದಿನ ಬದುಕಿನಲ್ಲಿಯೇ ಸ್ವಚ್ಛತೆಯ ಪಾಠವನ್ನು ಕಲಿಸುತ್ತಿದೆ.
ಒಂದು ಗ್ರಾಮ ಸುಂದರವಾಗಬೇಕಾದರೆ ಅಲ್ಲಿ ದೊಡ್ಡ ಕಟ್ಟಡಗಳು, ವಿಶಾಲ ರಸ್ತೆಗಳು ಅಥವಾ ದುಬಾರಿ ಉದ್ಯಾನವನಗಳೇ ಇರಬೇಕಿಲ್ಲ. ಅಲ್ಲಿನ ಜನರ ಮನಸ್ಸು ಸ್ವಚ್ಛವಾಗಿದ್ದರೆ, ಅವರ ನಡವಳಿಕೆಯಲ್ಲಿ ಶಿಸ್ತು ಇದ್ದರೆ, ಪ್ರಕೃತಿಯ ಬಗ್ಗೆ ಕಾಳಜಿ ಇದ್ದರೆ ಆ ಊರೇ ಸ್ವರ್ಗದಂತೆ ಕಾಣುತ್ತದೆ ಎಂಬುದಕ್ಕೆ ಮಾವ್ಲಿನ್ನಾಂಗ್ ಜೀವಂತ ಸಾಕ್ಷಿ! ಎಂದರೂ ತಪ್ಪಾಗದು ಅಲ್ವೇ?
ಏನಂತೀರೀ?
ನಿಮ್ಮವನೇ ಶ್ರೀಮಂತ