ಜನೋಪಕಾರಿ ದೊಡ್ಡಣ್ಣ ಶೆಟ್ಟಿ, ಬೆಂಗಳೂರಿನ ಶಿಕ್ಷಣ, ಸಂಸ್ಕೃತಿ ಮತ್ತು ಸಮಾಜ ಸೇವೆಯ ಅಮರ ದಾನಿ

ಬೆಂಗಳೂರಿನ ಇತಿಹಾಸದಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ ಮಹಾನ್ ದಾನಿ, ಉದ್ಯಮಿ, ಶಿಕ್ಷಣ ಪ್ರೇಮಿ, ಸಮಾಜ ಸುಧಾರಕ ಹಾಗೂ ಜನಸೇವಕರಾಗಿದ್ದರು. ತಮ್ಮ ಅಪಾರ ಸಂಪತ್ತನ್ನು ಸ್ವಂತ ವೈಭವಕ್ಕಾಗಿ ಬಳಸದೇ, ಬಡವರ ಶಿಕ್ಷಣ, ಸಂಸ್ಕೃತಿ, ಧಾರ್ಮಿಕ ಸೇವೆ ಮತ್ತು ಸಮಾಜದ ಏಳಿಗೆಗಾಗಿ ಮುಡಿಪಾಗಿಟ್ಟ ಅಪರೂಪದ ವ್ಯಕ್ತಿತ್ವ ಅವರದು. ಅವರ ಜನೋಪಕಾರಿ ಕಾರ್ಯಗಳನ್ನು ಮೆಚ್ಚಿದ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅವರಿಗೆ ಜನೋಪಕಾರಿ ಎಂಬ ಗೌರವ ಬಿರುದನ್ನು ನೀಡಿ ಸನ್ಮಾನಿಸಿದ್ದ ಜನೋಪಕಾರಿ ದೊಡ್ಡಣ್ಣ ಶೆಟ್ಟಿ (1840–1921) ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ

ಬಾಲ್ಯ ಮತ್ತು ಕುಟುಂಬ ಹಿನ್ನೆಲೆ

ದೊಡ್ಡಣ್ಣ ಶೆಟ್ಟಿಯವರು 1840ರ ಫೆಬ್ರವರಿ 3ರಂದು ಬೆಂಗಳೂರಿನಲ್ಲಿ ನಂಜುಂಡಪ್ಪ ಮತ್ತು ಸಿದ್ದಮ್ಮ ದಂಪತಿಗಳಿಗೆ ಜನಿಸಿದರು. ಅವರು ಅಡಿಗೆಗೆ ಬಳಸುವ ಎಣ್ಣೆಯನ್ನು ಉತ್ಪಾದಿಸಿ ವ್ಯಾಪಾರ ಮಾಡುತ್ತಿದ್ದ ಗಾಣಿಗ ಸಮುದಾಯಕ್ಕೆ ಸೇರಿದವರು. 1830ರ ದಶಕದಲ್ಲಿ ಅವರ ಕುಟುಂಬವು ಬೆಂಗಳೂರು ಕಂಟೋನ್ಮೆಂಟ್ ಪ್ರದೇಶದ ಸಮೀಪವಿದ್ದ ವಾಣಿಜ್ಯ ಚಟುವಟಿಕೆಗಳ ಪ್ರಮುಖ ಕೇಂದ್ರವಾದ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ನೆಲೆಸಿತ್ತು. ಅವರ ತಂದೆಯನ್ನು ಸ್ಥಳೀಯವಾಗಿ ಗೌರವಸೂಚಕವಾಗಿ ಯಜಮಾನರು ಎಂದು ಕರೆಯಲಾಗುತ್ತಿತ್ತು.

ದೊಡ್ಡಣ್ಣ ಸೆಟ್ಟಿಯವರು ಕುಟುಂಬದ ವ್ಯಾಪಾರವನ್ನು ಮುನ್ನಡೆಸಲು ಅಗತ್ಯವಾದ ಶಿಕ್ಷಣ ಮತ್ತು ವ್ಯವಹಾರ ಜ್ಞಾನವನ್ನು ಬಾಲ್ಯದಲ್ಲಿಯೇ ಪಡೆದುಕೊಂಡಿದ್ದರು. ತಂದೆಯ ನಿಧನದ ನಂತರ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡ ಅವರು, ಯಜಮಾನರು ಎಂಬ ಗೌರವದ ಸ್ಥಾನವನ್ನು ಅಲಂಕರಿಸಿದರು. ತಂದೆಯಿಂದ ಬಂದ ವ್ಯಾಪಾರ ಪರಂಪರೆಯನ್ನು ಮುಂದುವರಿಸುವುದರ ಜೊತೆಗೆ ಕುಟುಂಬದ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಿದರು.

ಆದರೆ ವೈಯಕ್ತಿಕ ಜೀವನದಲ್ಲಿ ಅವರಿಗೆ ಅಪಾರ ದುಃಖಗಳು ಎದುರಾದವು. ಕ್ರಮವಾಗಿ ಮೂವರು ಪತ್ನಿಯರನ್ನು ಕಳೆದುಕೊಂಡರು. ನಾಲ್ಕನೇ ಪತ್ನಿಯಿಂದ ಇಬ್ಬರು ಪುತ್ರರು ಜನಿಸಿದರೂ, 1898ರಲ್ಲಿ ಬೆಂಗಳೂರಿನಲ್ಲಿ ಉಂಟಾದ ಭೀಕರ ಪ್ಲೇಗ್ ಮಹಾಮಾರಿಯಲ್ಲಿ ಹಿರಿಯ ಮಗ ಲಕ್ಷ್ಮೀನಾರಾಯಣ ನಿಧನರಾದರು. ಕೆಲವು ವರ್ಷಗಳ ನಂತರ ಎರಡನೇ ಮಗ ಲಕ್ಷ್ಮೀನರಸಿಂಹ ಕೂಡ ಅಕಾಲಿಕವಾಗಿ ನಿಧನರಾದರು. ಕುಟುಂಬದ ಈ ದುರಂತಗಳು ಅವರನ್ನು ಸಂಪೂರ್ಣವಾಗಿ ಬದಲಾಯಿಸಿತು. ಅವರು ತಮ್ಮ ಜೀವನವನ್ನು ಸಮಾಜ ಸೇವೆಗೆ ಅರ್ಪಿಸಲು ನಿರ್ಧರಿಸಿದರು.

ದೊಡ್ಡಣ್ಣ ಶೆಟ್ಟಿಯವರು ಶಿಕ್ಷಣ ಕ್ಷೇತ್ರದ ಜೊತೆಗೆ ಬಡಬಗ್ಗರ- ಅಸಹಾಯಕರ ಸೇವೆಯಲ್ಲೂ ತಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡಿದ್ದವರು. ಬೆಂಗಳೂರಿನಲ್ಲಿ 1898 ರಲ್ಲಿ ಪ್ಲೇಗ್ ಕಾಯಿಲೆ ಹಾಗೂ 1918 ರಲ್ಲಿ ವಿಷಮಶೀತ ಜ್ವರ ವ್ಯಾಪಿಸಿದಾಗ ದೊಡ್ಡಣ್ಣ ಶೆಟ್ಟರು ಜೀವದ ಹಂಗು ತೊರೆದು ತಿಂಗಳುಗಟ್ಟಲೆ ಜನರ ಸೇವೆ ಮಾಡಿದರು.

ಶ್ರೀ ಲಕ್ಷ್ಮೀ ನರಸಿಂಹ ಸಂಸ್ಥೆ – ಬಡವರ ಶಿಕ್ಷಣಕ್ಕಾಗಿ ಮಹತ್ತರ ಹೆಜ್ಜೆ

SLN College, Fort, Chamarajpet

ತಮ್ಮ ಮಕ್ಕಳ ನೆನಪಿಗಾಗಿ ಹಾಗೂ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ 1906ರ ಮಾರ್ಚ್ 11ರಂದು ಶ್ರೀ ಲಕ್ಷ್ಮೀ ನರಸಿಂಹ ಸಂಸ್ಥೆ (SLN ಸಂಸ್ಥೆ) ಯನ್ನು ಸ್ಥಾಪಿಸಿದರು. ಈ ಸಂಸ್ಥೆಗೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸುಮಾರು 5.5 ಎಕರೆ ಜಮೀನನ್ನು ದಾನವಾಗಿ ನೀಡಿದರು. 

1909ರಲ್ಲಿ ನಗರ ಪುರಸಭೆಯು ಮೂಲ ಕಟ್ಟಡದ ಗೋಡೆಯನ್ನು ಕೆಡವಿದಾಗ, ಮಹಾರಾಜರು ಕೋಟೆ ಆಂಜನೇಯಸ್ವಾಮಿ ದೇವಾಲಯದ ಹಿಂದಿನ ಮತ್ತೊಂದು ಜಾಗವನ್ನು ನೀಡಿದರು. ಅದನ್ನು ಸಮತಟ್ಟು ಮಾಡಿ ಹೊಸ ಶಾಲಾ ಆವರಣ ನಿರ್ಮಿಸಲಾಯಿತು. 1915ರಲ್ಲಿ ಪ್ರಾಥಮಿಕ ಶಾಲೆ ಆರಂಭವಾಯಿತು. 1917ರಲ್ಲಿ ಈ ಶಾಲೆಯನ್ನು ಆನಿ ಬೆಸೆಂಟ್ ಅವರ ಮಾರ್ಗದರ್ಶನದಲ್ಲಿ National High School ಆಗಿ ಅಭಿವೃದ್ಧಿಪಡಿಸಲಾಯಿತು. ನಂತರ ಅದು ಚಾಮರಾಜಪೇಟೆ ಹಾಗೂ ಬಳಿಕ ಬಸವನಗುಡಿಗೆ ಸ್ಥಳಾಂತರಗೊಂಡಿತು.

ದೊಡ್ಡಣ್ಣ ಶೆಟ್ಟಿಯವರು ಮತ್ತೆ 1918ರಲ್ಲಿ SLN ಧರ್ಮಪಾಠಶಾಲೆಯನ್ನು ಪುನಃ ಆರಂಭಿಸಿದರು.

ಶಿಕ್ಷಣವು ಶ್ರೀಮಂತರಿಗಷ್ಟೇ ಸೀಮಿತವಾಗದೆ, ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೂ ಸುಲಭವಾಗಿ ದೊರೆಯಬೇಕು ಎಂಬ ಮಹತ್ತರ ಆಶಯದಿಂದ ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ವಸತಿ ಮತ್ತು ಆಹಾರ, ಗ್ರಾಮೀಣ ಮಕ್ಕಳಿಗೆ ರಾತ್ರಿ ಶಾಲೆಗಳು, ಎಲ್ಲ ವರ್ಗದ ಮಕ್ಕಳಿಗೂ ಸಮಾನ ಶಿಕ್ಷಣ  ನೀಡುವ ಸಲುವಾಗಿ ಈ ಸಂಸ್ಥೆಯನ್ನು ಆರಂಭಿಸಿದರು. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಬಾಗಿಲು ತೆರೆದ ಮಹತ್ವದ ಕಾರ್ಯವನ್ನು ಎಸ್.ಎಲ್.ಎನ್. ಸಂಸ್ಥೆ ಮಾಡಿತು. ಒಂದು ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಈ ಶಿಕ್ಷಣ ಸಂಸ್ಥೆಯು ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದು, ಸಾವಿರಾರು ವಿದ್ಯಾರ್ಥಿಗಳು ಇಲ್ಲಿಂದ ಶಿಕ್ಷಣ ಪಡೆದು ವೈದ್ಯರು, ಇಂಜಿನಿಯರ್‌ಗಳು, ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದ್ದಾರೆ. ಇಂದಿಗೂ ಬೆಂಗಳೂರಿನ ಕಲಾಸಿಪಾಳ್ಯದಲ್ಲಿರುವ SLN ಶಿಕ್ಷಣ ಸಂಸ್ಥೆ ಅವರ ಸೇವೆಯ ಜೀವಂತ ಸ್ಮಾರಕವಾಗಿದೆ. ನಂತರ ಇದೇ ಸಂಸ್ಥೆಯ ಅಡಿಯಲ್ಲಿ 1966ರಲ್ಲಿ SLN ಕಲಾ ಮತ್ತು ವಾಣಿಜ್ಯ ಕಾಲೇಜು ಆರಂಭವಾಯಿತು.

ದೊಡ್ಡಣ್ಣ ಸಭಾಂಗಣ – ಬೆಂಗಳೂರಿನ ಮೊದಲ ಸಾರ್ವಜನಿಕ ಸಾಂಸ್ಕೃತಿಕ ಕೇಂದ್ರ

ದೊಡ್ಡಣ್ಣ ಶೆಟ್ಟಿಯವರ ಮತ್ತೊಂದು ಅಪೂರ್ವ ಕೊಡುಗೆ 1905ರಲ್ಲಿ ನಿರ್ಮಿಸಿದ ದೊಡ್ಡಣ್ಣ ಸಭಾಂಗಣ. ಆ ಕಾಲದಲ್ಲಿ ಇದು ಬೆಂಗಳೂರಿನ ಅತ್ಯಂತ ದೊಡ್ಡ ಸಾರ್ವಜನಿಕ ಸಭಾಂಗಣವಾಗಿತ್ತು. ಈ ದೊಡ್ಡಣ್ಣ ಹಾಲ್ ಹಗಲಿನಲ್ಲಿ ಶಾಲೆ, ಸಂಜೆ ನಾಟಕಗಳು, ಯಕ್ಷಗಾನ, ಸಂಗೀತ ಕಾರ್ಯಕ್ರಮಗಳು, ಸಾರ್ವಜನಿಕ ಸಮಾರಂಭ ಅಥವಾ ರಂಗಮಂದಿರ, ಹಾಗೂ ರಾತ್ರಿ ಸಿನಿಮಾ ಥಿಯೇಟರ್ ಪರಿವರ್ತನೆಯಾಗುತ್ತಿತ್ತು. 1935ರಲ್ಲಿ ಟೌನ್ ಹಾಲ್ ನಿರ್ಮಾಣವಾಗುವವರೆಗೆ, ದೊಡ್ಡಣ್ಣ ಸಭಾಂಗಣವೇ ಬೆಂಗಳೂರಿನ ಪ್ರಮುಖ ಸಾರ್ವಜನಿಕ ವೇದಿಕೆಯಾಗಿತ್ತು.

ಭಾರತದ ಮೊದಲ ಚಲನಚಿತ್ರ ಪ್ರದರ್ಶನಗಳಲ್ಲಿ ಒಂದರ ಸಾಕ್ಷಿ

ಮೂಕ ಚಲನಚಿತ್ರಗಳ ಯುಗ ಆರಂಭವಾದಾಗ ದೊಡ್ಡಣ್ಣ ಸಭಾಂಗಣವನ್ನು ಚಿತ್ರಮಂದಿರವಾಗಿ ಪರಿವರ್ತಿಸಲಾಯಿತು. ನಂತರ ಅದು ಪ್ಯಾರಾಮೌಂಟ್ ಥಿಯೇಟರ್ ಎಂದು ಪ್ರಸಿದ್ಧಿಯಾಯಿತು. ಇದರ ಪ್ರಮುಖ ಐತಿಹಾಸಿಕ ಘಟನೆಗಳು:

  • 1913ರಲ್ಲಿ ಭಾರತದ ಮೊದಲ ಮೂಕಿ ಚಿತ್ರ ರಾಜಾ ಹರಿಶ್ಚಂದ್ರ ಬೆಂಗಳೂರಿನಲ್ಲಿ ಇದೇ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು.
  • 1934ರಲ್ಲಿ ಕನ್ನಡದ ಮೊದಲ ಟಾಕಿ ಚಿತ್ರ ಸತಿ ಸುಲೋಚನ ಇದೇ ಪ್ಯಾರಾಮೌಂಟ್ ಥಿಯೇಟರ್‌ನಲ್ಲಿ ಪ್ರದರ್ಶನಗೊಂಡಿತು.

1974ರಲ್ಲಿ ಈ ಐತಿಹಾಸಿಕ ಕಟ್ಟಡವನ್ನು ಕೆಡವಲಾಯಿತು. ಅದೇ ಸ್ಥಳದಲ್ಲಿ 1976ರಲ್ಲಿ ಪರಿಮಳ ಮತ್ತು ಪ್ರದೀಪ್ ಎಂಬ ಅವಳಿ ಚಿತ್ರಮಂದಿರಗಳು ನಿರ್ಮಾಣಗೊಂಡವು. ಇವು ಹಲವು ದಶಕಗಳ ಕಾಲ ಕಲಾಸಿಪಾಳ್ಯದ ಪ್ರಮುಖ ಮನರಂಜನಾ ಕೇಂದ್ರಗಳಾಗಿದ್ದವು.

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಪುನರುಜ್ಜೀವನ

1910ರಲ್ಲಿ ಅವರು ಶಿವಾಜಿನಗರದ OPH ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯವನ್ನು ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಿಸಿದರು. ಜೀವನದ ಕೊನೆಯ ದಿನಗಳಲ್ಲಿ ಸನ್ಯಾಸ ಸ್ವೀಕರಿಸಿ ಶ್ರೀ ಲಕ್ಷ್ಮೀ ನರಸಿಂಹ ಆಶ್ರಮ ಸ್ಥಾಪಿಸಿ ಧಾರ್ಮಿಕ ಸೇವೆಯಲ್ಲೂ ತೊಡಗಿದರು.

ಜನೋಪಕಾರಿ ಬಿರುದು

1907ರ ಅಕ್ಟೋಬರ್ 18ರಂದು, ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೊಡ್ಡಣ್ಣ ಶೆಟ್ಟಿಯವರ ಸಮಾಜ ಸೇವೆಯನ್ನು ಗೌರವಿಸಿ ಅವರಿಗೆ ದಸರಾ ದರ್ಬಾರಿನಲ್ಲಿ  “ಜನೋಪಕಾರಿ” ಎಂಬ ಬಿರುದನ್ನೂ, “ಗಂಡಭೇರುಂಡ” ಪದಕವನ್ನೂ ನೀಡಿ ಗೌರವಿಸಿದರು. ಇಂದಿಗೂ ಕೆ.ಆರ್. ಮಾರ್ಕೆಟ್ ಸಮೀಪದ ವೃತ್ತವು “ಜನೋಪಕಾರಿ ದೊಡ್ಡಣ್ಣ ಶೆಟ್ಟಿ ವೃತ್ತ” ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.

ಸರಳ ಜೀವನ – ಮಹಾನ್ ಆದರ್ಶ

ಅಪಾರ ಸಂಪತ್ತಿನ ಒಡೆಯರಾಗಿದ್ದರೂ ದೊಡ್ಡಣ್ಣ ಶೆಟ್ಟಿಯವರು ಅತ್ಯಂತ ಸರಳ ಜೀವನ ನಡೆಸಿದರು. ಸಮಾಜಕ್ಕಾಗಿ ಬದುಕಿದ ಅವರು ತಮ್ಮ ಆಸ್ತಿಯನ್ನು ಜನರ ಶಿಕ್ಷಣ ಮತ್ತು ಸೇವೆಗೆ ಮೀಸಲಿಟ್ಟರು. ಅವರ ಸೇವೆಯಿಂದ ಸಾವಿರಾರು ಬಡ ಮಕ್ಕಳು ವಿದ್ಯಾವಂತರಾದರು.

ನಿಧನ

1921ರ ಆಗಸ್ಟ್ 5ರಂದು, 81ನೇ ವಯಸ್ಸಿನಲ್ಲಿ ಅವರು ನಿಧನರಾದರು. ಅವರ ಗೌರವಾರ್ಥವಾಗಿ SLN ಸಂಸ್ಥೆಯ ಆವರಣದಲ್ಲಿ ಸ್ಮಾರಕ ನಿರ್ಮಿಸಲಾಗಿದೆ.

ದೊಡ್ಡಣ್ಣ ಶೆಟ್ಟಿಯವರ ಶಾಶ್ವತ ಪರಂಪರೆ

ಇಂದು ಬೆಂಗಳೂರಿನ ಇತಿಹಾಸದಲ್ಲಿ ಜನೋಪಕಾರಿ ದೊಡ್ಡಣ್ಣ ಶೆಟ್ಟಿಯವರ ಹೆಸರು ಅಕ್ಷರಶಃ ಚಿರಸ್ಥಾಯಿಯಾಗಿದೆ. SLN ಶಿಕ್ಷಣ ಸಂಸ್ಥೆ, ದೊಡ್ಡಣ್ಣ ಸಭಾಂಗಣ (ನಂತರದ ಪ್ಯಾರಾಮೌಂಟ್ ಥಿಯೇಟರ್), ಬಡ ಮಕ್ಕಳ ಶಿಕ್ಷಣಕ್ಕಾಗಿ ಮಾಡಿದ ಅಪಾರ ಸೇವೆ, ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಅಭಿವೃದ್ಧಿ ಮತ್ತು ಸಾರ್ವಜನಿಕ ಹಿತಕ್ಕಾಗಿ ಸಂಪತ್ತನ್ನು ಮುಡಿಪಾಗಿಟ್ಟ ಅವರ ಜೀವನ ಇಂದಿಗೂ ಸಮಾಜ ಸೇವಕರಿಗೆ ಆದರ್ಶವಾಗಿದೆ.

ತಮ್ಮ ಸ್ವಂತ ಕುಟುಂಬವನ್ನು ಕಳೆದುಕೊಂಡ ನೋವನ್ನು ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸುವ ಸೇವೆಯಾಗಿ ಪರಿವರ್ತಿಸಿದ ಜನೋಪಕಾರಿ ದೊಡ್ಡಣ್ಣ ಶೆಟ್ಟಿಯವರು ನಿಜಕ್ಕೂ ಬೆಂಗಳೂರಿನ ಇತಿಹಾಸದ ಅಮರ ದಾನಶೂರರಲ್ಲಿ ಒಬ್ಬರಷ್ಟೇ ಅಲ್ಲದೇ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ

ಏನಂತೀರೀ?
ನಿಮ್ಮವನೇ ಶ್ರೀಮಂತ

Leave a Reply