ಮೋದಿ ನನ್ನ ಫೋನ್ ಟ್ಯಾಪ್ ಮಾಡುತ್ತಿದ್ದಾರೆ! ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಸ್ಯಾಮ್ ಪ್ತಿತ್ರೋಡ ಅಪಸ್ವರ! ಇದು ಕಾಂಗ್ರೇಸ್ ಮುಕ್ತ ಭಾರತಕ್ಕೆ ಮುನ್ನುಡಿಯೇ?

ನನ್ನ ಮೊಬೈಲ್‌ನಲ್ಲೇ ಎಲ್ಲ ಆರೋಪಗಳಿಗೂ ಸಾಕ್ಷ್ಯವಿದೆ. ಆದರೆ ಆ ಫೋನ್ ಅನ್ನೇ ಪ್ರಧಾನಿ ನರೇಂದ್ರ ಮೋದಿ ಕದ್ದಾಲಿಕೆ ಮಾಡುತ್ತಿದ್ದಾರೆ! – ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಈ ಹೇಳಿಕೆ ಇದೀಗ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಪ್ರಧಾನಿಯವರಿಗೆ ನೇರ ಚರ್ಚೆಯ ಸವಾಲು ಹಾಕಿರುವ ರಾಹುಲ್, ಇಬ್ಬರೂ ಮುಖಾಮುಖಿಯಾಗಿ ಕುಳಿತು ಮಾತನಾಡಿದರೆ ದೇಶದ್ರೋಹಿ ಯಾರು, ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿ ಇರುವವರು ಯಾರು ಎಂಬುದು ದೇಶದ ಜನರಿಗೆ ತಿಳಿಯಲಿದೆ ಎಂದು ಹೇಳಿದ್ದಾರೆ.

ಆದರೆ ಈ ಆರೋಪಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಅವರೇ ಅಪನಂಬಿಕೆ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿಸಿದ್ದು ಇದು ಕಾಂಗ್ರೇಸ್ ಮುಕ್ತ ಭಾರತಕ್ಕೆ ಮುನ್ನುಡಿಯೇ? ಎಂದು ಜನರು ಮಾತನಾಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ, ಬಿಜೆಪಿ ಈ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿಹಾಕಿದೆ.

ಹಾಗಾದರೆ ರಾಹುಲ್ ಗಾಂಧಿ ಅವರ ಆರೋಪಗಳೇನು? ಸ್ಯಾಮ್ ಪಿತ್ರೋಡಾ ಏಕೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ? ಹಿಂದಿನ ಪೆಗಾಸಸ್ ವಿವಾದಕ್ಕೂ ಈ ಪ್ರಕರಣಕ್ಕೂ ಏನು ಸಂಬಂಧ? ಈ ಎಲ್ಲ ವಿಚಾರಗಳನ್ನು ಗಮನಿಸೋಣ.

ಇನ್‌ಸ್ಟಾಗ್ರಾಂ ಸಂವಾದದಲ್ಲಿ ಫೋನ್ ಟ್ಯಾಪಿಂಗ್ ಆರೋಪ

Proof is in this phone': Rahul Gandhi dares PM Modi to debate, renews phone tapping

2026ರ ನವೆಂಬರ್ 13ರಂದು ರಾಹುಲ್ ಗಾಂಧಿ ಅವರು ಇನ್‌ಸ್ಟಾಗ್ರಾಂನಲ್ಲಿ ನಡೆಸಿದ ಆಸ್ಕ್ ಮೀ (Ask Me) ಸಂವಾದದಲ್ಲಿ ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧರಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ಬಿಜೆಪಿ ನಾಯಕರು ಹೇಳುತ್ತಾರೆ. ಆದರೆ ಕೃಷಿ ಕಾಯ್ದೆಗಳು, ಮತಗಳ್ಳತನದ ಆರೋಪ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR), ಚೀನಾ, ಜನರಲ್ ಎಂ.ಎಂ. ನರಾವಣೆ ಅವರ ಪುಸ್ತಕ ಮತ್ತು ಎಪ್ಸ್ಟೀನ್ ಪ್ರಕರಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಲು ತಮಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು. ಮಾತನಾಡಲು ಪ್ರಯತ್ನಿಸಿದಾಗ ಮೈಕ್ರೊಫೋನ್ ಸ್ಥಗಿತಗೊಳಿಸಲಾಗುತ್ತದೆ ಎಂಬುದು ಅವರ ಮತ್ತೊಂದು ಆರೋಪ.

ನನಗೆ ಉದ್ದುದ್ದ ಭಾಷಣಗಳಿರುವ ಚರ್ಚೆ ಬೇಡ. ಪ್ರಧಾನಿ ನರೇಂದ್ರ ಮೋದಿ ಒಂದು ಕಡೆ ಕುಳಿತುಕೊಳ್ಳಲಿ, ನಾನು ಮತ್ತೊಂದು ಕಡೆ ಕುಳಿತುಕೊಳ್ಳುತ್ತೇನೆ. ಅವರು ನನ್ನ ಮೇಲೆ ಆರೋಪ ಮಾಡಲಿ, ನಾನು ಅವರ ಮೇಲೆ ಆರೋಪ ಮಾಡುತ್ತೇನೆ. ಇಬ್ಬರೂ ನೇರವಾಗಿ ಮಾತನಾಡೋಣ ಎಂದು ಸವಾಲು ಹಾಕಿದರು. ಅಷ್ಟೇ ಅಲ್ಲದೆ, ಚರ್ಚೆಗೆ ಗೌತಮ್ ಅದಾನಿ ಅಥವಾ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ತೀರ್ಪುಗಾರರನ್ನಾಗಿ ನೇಮಿಸಿದರೂ ತಮಗೆ ಅಭ್ಯಂತರವಿಲ್ಲ ಎಂದು ಹೇಳಿದರು.

ನನ್ನೊಂದಿಗೆ ಪ್ರಧಾನಿ ಮುಖಾಮುಖಿ ಚರ್ಚೆಗೆ ಬಂದರೆ, ಅವರು ಪ್ರಧಾನಿಯಾಗಿ ಮುಂದುವರಿಯುವುದಿಲ್ಲ ಎಂಬುದಕ್ಕೆ ನಾನು ಖಾತರಿ ನೀಡುತ್ತೇನೆ ಎಂದು ರಾಹುಲ್ ಸವಾಲು ಹಾಕಿರುವುದು ನೋಡಿದಾಗ, ಪಪ್ಪೂ ಖ್ಯಾತಿಯ ರಾಹುಲ್ ಅವರ ಈ ನಡೆ, ನವಿಲು ನೋಡಿ ಕೆಂಭೂತ ಗರಿ ಕೆದರಿಕೊಂಡು ಕುಣಿಯಿತಂತೆ ಎನ್ನುವಂತಾಗಿದೆ.

ಎಲ್ಲ ಸಾಕ್ಷ್ಯವೂ ನನ್ನ ಮೊಬೈಲ್‌ನಲ್ಲಿದೆ! ಧರ್ಮಸ್ಥಳ ಬುರುಡೇ ಗ್ಯಾಂಗ್ ನೆನಪಿಸಿದ ರಾಹುಲ್

Girish Mattannavar • 7.5K reels on Instagram

ಸಂವಾದದ ಮತ್ತೊಂದು ಸಂದರ್ಭದಲ್ಲಿ, ಪ್ರಧಾನಿ ಮೋದಿ ವಿರುದ್ಧ ಮಾಡಿರುವ ಆರೋಪಗಳಿಗೆ ಸಾಕ್ಷ್ಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ ತಮ್ಮ ಮೊಬೈಲ್ ಫೋನ್ ಅನ್ನು ತೋರಿಸಿಸುತ್ತಾ, ನನ್ನ ಎಲ್ಲ ಆರೋಪಗಳಿಗೂ ಸಾಕ್ಷ್ಯ ಈ ಫೋನ್‌ನಲ್ಲಿದೆ. ಪ್ರಧಾನಿಯವರಿಗೆ ಅದು ಗೊತ್ತಿದೆ. ಏಕೆಂದರೆ ಅವರೇ ನನ್ನ ಫೋನ್ ಟ್ಯಾಪ್ ಮಾಡುತ್ತಿದ್ದಾರೆ ಎಂದು ಆರೋಪಿಸಿರುವುದನ್ನು ನೋಡಿವರು ಸೌಜನ್ಯ ಕೇಸ್ ಸಂಬಧದಲ್ಲಿ ಬುರುಡೇ ಗ್ಯಾಂಗಿನ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಇದೇ ರೀತಿಯಲ್ಲೇ ಮೊಬೈಲ್ ಹಿಡಿದುಕೊಂಡು ನಮ್ಮ ಮೊಬೈಲ್ ನಲ್ಲಿರುವ ಸಾಕ್ಷಗಳನ್ನು ಎಸ್.ಐ.ಟಿಗೆ ಕೊಟ್ಟಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತವರ ಇಡೀ ಕುಟುಂಬ ಜೈಲಿಗೆ ಸೇರುತ್ತಾರೆ ಎಂದು ಹೇಳಿಕೊಂಡು ಓಡಾಡಿ ನಂತರದ ದಿನಗಳಲ್ಲಿ ಅವರ ಮಾತುಗಳೆಲ್ಲವೂ ಅವರಿಗೇ ತಿರುಗು ಮುರುಗಾಗಿ ಕಡೆಗೆ ಎದ್ದೆನೋ ಬಿದ್ದೆನೋ ಎಂದು ಓಡುತ್ತಿರುವುದು ನೆನಪಾಗುತ್ತಿದೆ ಎನ್ನುತ್ತಿರುವುದರಲ್ಲಿಯೂ ಸತ್ಯ ಇದೆ ಎನಿಸುತ್ತಿದೆ.

ಈ ಇನ್‌ಸ್ಟಾಗ್ರಾಂ ಸಂವಾದದ ವೇಳೆ ಫೋನ್ ಕದ್ದಾಲಿಕೆಗೆ ಸಂಬಂಧಿಸಿದ ಯಾವುದೇ ತಾಂತ್ರಿಕ ವರದಿ, ಫೋರೆನ್ಸಿಕ್ ಪರೀಕ್ಷೆಯ ಫಲಿತಾಂಶ ಅಥವಾ ನಿರ್ದಿಷ್ಟ ದಾಖಲೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸದೇ, ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿ ಯಾರು ಇದ್ದಾರೆ? ಯಾರು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ? ದೇಶವಿರೋಧಿ ಚಟುವಟಿಕೆಗಳಲ್ಲಿ ಯಾರ ಪಾತ್ರವಿದೆ? ಎಂಬುದನ್ನು ಮುಖಾಮುಖಿ ಚರ್ಚೆಯಲ್ಲಿ ಬಹಿರಂಗಪಡಿಸುವುದಾಗಿ ಹೇಳಿರುವುದು, ಸದ್ಯಕ್ಕೆ ರಾಹುಲ್ ಗಾಂಧಿ ಮಾಡಿರುವ ಆರೋಪಗಳಾಗಿದ್ದು, ಮೋದಿಯವರು ರಾಹುಲ್ ಅವರೊಡನೆ ಬಹಿರಂಗವಾಗಿ ಎಂದಿಗೂ ಚರ್ಚೆಗೆ ಬರುವುದಿಲ್ಲಾ ಎಂಬುದನ್ನು ಚೆನ್ನಾಗಿಯೇ ಅರಿತಿರುವ ಮತ್ತು ಸಂಸತ್ತಿನಲ್ಲಿ ತಮ್ಮ ಆರೋಪಗಳನ್ನು ದೃಢಪಡಿಸುವ ಯಾವುದೇ ಸಾಕ್ಷಗಳನ್ನು ರಾಹುಲ್ ಪ್ರದರ್ಶಿಸಲು ಸಿದ್ದರಿಲ್ಲದೇ ಇರುವುದು ಸುಮ್ಮನೇ ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿದೆ.

ಸ್ವಪಕ್ಷದ ಸ್ಯಾಮ್ ಪಿತ್ರೋಡಾ ಅವರಿಂದಲೇ ಭಿನ್ನ ಅಭಿಪ್ರಾಯ!

ರಾಹುಲ್ ಗಾಂಧಿ ಅವರ ಫೋನ್ ಕದ್ದಾಲಿಕೆ ಆರೋಪ ರಾಜಕೀಯವಾಗಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆ ಮತ್ತಷ್ಟು ಗಮನ ಸೆಳೆದಿದೆ. 84 ವರ್ಷದ ಸ್ಯಾಮ್ ಪಿತ್ರೋಡಾ ಅವರು ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ ವೈಯಕ್ತಿಕವಾಗಿ ಫೋನ್ ಕದ್ದಾಲಿಕೆ ಮಾಡುತ್ತಾರೆ ಎಂಬುದನ್ನು ತಾವು ನಂಬುವುದಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ಹಾಗೆ ಮಾಡುವುದಿಲ್ಲ. ಪ್ರಧಾನಿಯವರು ಸ್ವತಃ ಸ್ಕ್ರೂಡ್ರೈವರ್ ಹಿಡಿದುಕೊಂಡು ಕಂಪ್ಯೂಟರ್ ಬಳಿ ಹೋಗಿ ಇಂತಹ ಕೆಲಸ ಮಾಡುವುದಿಲ್ಲ ಎಂಬ ಅರ್ಥದಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ. ಇದರೊಂದಿಗೆ ರಾಹುಲ್ ಗಾಂಧಿ ಅವರ ಆರೋಪದಿಂದ ಅವರು ಅಂತರ ಕಾಯ್ದುಕೊಂಡಿರುವುದು ಸ್ಪಷ್ಟವಾಗಿದೆ.

ಆದರೆ ತಮ್ಮದೇ ಫೋನ್ ಮತ್ತು ಇತರ ಡಿಜಿಟಲ್ ಸಾಧನಗಳ ಮೇಲೆ ನಿಗಾ ಇರಿಸಲಾಗಿದೆ ಎಂಬ ಅನುಮಾನ ತಮಗೂ ಇದೆ ಎಂದು ಪಿತ್ರೋಡಾ ಹೇಳಿದ್ದಾರೆ. ತಮ್ಮ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಬ್ಯಾಂಕ್ ಖಾತೆಗಳ ಮೇಲೆ ನಿಗಾ ಇರಿಸಿರುವ ಸಾಧ್ಯತೆಯ ಬಗ್ಗೆ ತಂತ್ರಜ್ಞಾನ ತಜ್ಞರನ್ನು ಸಂಪರ್ಕಿಸಿದ್ದಾಗಿ ತಿಳಿಸಿದ್ದಾರೆ. ತಜ್ಞರು ಸಾಧನಗಳನ್ನು ಪರಿಶೀಲಿಸಿದ ಬಳಿಕ ಎಚ್ಚರಿಕೆ ನೀಡಿದ್ದರು ಎಂದೂ ಹೇಳಿದ್ದಾರೆ. ಆದರೆ ಈ ಕೃತ್ಯವನ್ನು ಯಾರು ನಡೆಸುತ್ತಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಪಿತ್ರೋಡಾ ಅವರು ತಮ್ಮ ಸಾಧನಗಳ ಮೇಲೆ ನಿಗಾ ಇರಿಸಿರುವ ಸಾಧ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರೂ, ಅದಕ್ಕೆ ಪ್ರಧಾನಿ ಮೋದಿ ಕಾರಣ ಎಂದು ಆರೋಪಿಸಿಲ್ಲ.

ಸ್ಯಾಮ್ ಪಿತ್ರೋಡಾ ಯಾರು? ಭಾರತದಲ್ಲಿ ದೂರಸಂಪರ್ಕ ಕ್ರಾಂತಿಯ ಹಿಂದಿನ ಪ್ರಮುಖ ವ್ಯಕ್ತಿ

Image of Sam Pitroda quits Congress post after his racial analogy triggers storm - The Hindu

ರಾಹುಲ್ ಗಾಂಧಿ ಅವರ ಆರೋಪದ ಹಿನ್ನೆಲೆಯಲ್ಲಿ ಸುದ್ದಿಯಲ್ಲಿರುವ ಸ್ಯಾಮ್ ಪಿತ್ರೋಡಾ ಅವರ ಪೂರ್ಣ ಹೆಸರು ಸತ್ಯನಾರಾಯಣ ಗಂಗಾರಾಮ ಪಿತ್ರೋಡಾ. ದೂರಸಂಪರ್ಕ ಕ್ಷೇತ್ರದ ಆವಿಷ್ಕಾರಕ, ಉದ್ಯಮಿ, ತಂತ್ರಜ್ಞಾನ ಚಿಂತಕ ಮತ್ತು ನೀತಿ ನಿರೂಪಕರಾಗಿ ಅವರು ಗುರುತಿಸಿಕೊಂಡಿದ್ದಾರೆ. 1980ರ ದಶಕದಲ್ಲಿ ಭಾರತದಲ್ಲಿ ದೂರಸಂಪರ್ಕ ವ್ಯವಸ್ಥೆಯನ್ನು ಆಧುನೀಕರಿಸುವ ಪ್ರಯತ್ನಗಳಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಆಗ ದೂರವಾಣಿ ಸಂಪರ್ಕ ಪಡೆಯಲು ಜನರು ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿಯಿತ್ತು. ಗ್ರಾಮೀಣ ಪ್ರದೇಶಗಳಿಗೂ ದೂರವಾಣಿ ಸೇವೆ ತಲುಪಿಸುವ ಉದ್ದೇಶದಿಂದ ನಡೆದ ತಂತ್ರಜ್ಞಾನ ಅಭಿವೃದ್ಧಿ ಮತ್ತು ದೂರಸಂಪರ್ಕ ವಿಸ್ತರಣೆಯ ಪ್ರಯತ್ನಗಳಲ್ಲಿ ಅವರು ಪ್ರಮುಖವಾಗಿ ತೊಡಗಿಸಿಕೊಂಡಿದ್ದರು.

ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಕ್ಷೇತ್ರದ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (C-DOT) ಸ್ಥಾಪನೆ ಮತ್ತು ಸ್ವದೇಶಿ ದೂರಸಂಪರ್ಕ ತಂತ್ರಜ್ಞಾನ ಅಭಿವೃದ್ಧಿಯಲ್ಲಿಯೂ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ. ಸುಮಾರು ಐದು ದಶಕಗಳ ತಂತ್ರಜ್ಞಾನ ಅನುಭವ ಹೊಂದಿರುವ ಪಿತ್ರೋಡಾ ಅವರೇ ರಾಹುಲ್ ಗಾಂಧಿಯವರ ಫೋನ್ ಟ್ಯಾಪಿಂಗ್ ಆರೋಪದ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿರುವುದು ರಾಜಕೀಯ ಚರ್ಚೆಗೆ ಹೊಸ ಆಯಾಮ ನೀಡಿದೆ.

ಪೆಗಾಸಸ್ ವಿವಾದ, ಹಿಂದೆಯೂ ಫೋನ್ ಕದ್ದಾಲಿಕೆ ಆರೋಪ ಮಾಡಿದ್ದ ರಾಹುಲ್

“I Had Pegasus On My Phone,” Says Rahul Gandhi At Cambridge Lecture

ರಾಹುಲ್ ಗಾಂಧಿ ಅವರ ಇತ್ತೀಚಿನ ಆರೋಪವನ್ನು ಅರ್ಥಮಾಡಿಕೊಳ್ಳಬೇಕಾದರೆ 2021ರಲ್ಲಿ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದ್ದ ಪೆಗಾಸಸ್ ವಿವಾದವನ್ನು ನೆನಪಿಸಿಕೊಳ್ಳಬೇಕು. ಇಸ್ರೇಲ್ ಮೂಲದ ಎನ್‌ಎಸ್‌ಒ ಗ್ರೂಪ್ (NSO Group) ಅಭಿವೃದ್ಧಿಪಡಿಸಿದ ಪೆಗಾಸಸ್ ಎಂಬ ಅತ್ಯಾಧುನಿಕ ಸ್ಪೈವೇರ್ ಮೂಲಕ ಹಲವು ದೇಶಗಳ ರಾಜಕಾರಣಿಗಳು, ಪತ್ರಕರ್ತರು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಇತರ ಪ್ರಮುಖ ವ್ಯಕ್ತಿಗಳ ಮೊಬೈಲ್ ಫೋನ್‌ಗಳನ್ನು ಗುರಿಯಾಗಿಸಿಕೊಂಡಿರುವ ಆರೋಪಗಳು 2021ರ ಜುಲೈನಲ್ಲಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾದವು.

ಈ ವಿವಾದದಲ್ಲಿ ಭಾರತದಲ್ಲಿನ ಹಲವು ಪ್ರಮುಖ ವ್ಯಕ್ತಿಗಳ ಫೋನ್ ಸಂಖ್ಯೆಗಳೂ ಸಂಭಾವ್ಯ ಗುರಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದವು. ರಾಹುಲ್ ಗಾಂಧಿ ಅವರ ಹೆಸರೂ ಈ ಪಟ್ಟಿಯಲ್ಲಿ ವರದಿಯಾಗಿತ್ತು. ಆದರೆ ಒಂದು ಫೋನ್ ಸಂಖ್ಯೆ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಎಂದ ಮಾತ್ರಕ್ಕೆ ಆ ಮೊಬೈಲ್‌ನಲ್ಲಿ ಪೆಗಾಸಸ್ ಸ್ಪೈವೇರ್ ಯಶಸ್ವಿಯಾಗಿ ಅಳವಡಿಸಲಾಗಿದೆ ಎಂದು ಸಾಬೀತಾಗುವುದಿಲ್ಲ ಎಂಬುದನ್ನು ತಾಂತ್ರಿಕವಾಗಿ ಗಮನಿಸಬೇಕು.

ಈ ವಿವಾದದ ಗಂಭೀರತೆಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ 2021ರ ಅಕ್ಟೋಬರ್‌ನಲ್ಲಿ ನಿವೃತ್ತ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಅವರ ಮೇಲ್ವಿಚಾರಣೆಯಲ್ಲಿ ತಾಂತ್ರಿಕ ಸಮಿತಿಯನ್ನು ರಚಿಸಿ ತನಿಖೆಗೆ ಆದೇಶಿಸಿತು. 2022ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಈ ಸಮಿತಿಯ ವರದಿಯ ಕೆಲವು ಅಂಶಗಳನ್ನು ಉಲ್ಲೇಖಿಸಿತು. ಪರಿಶೀಲನೆಗೆ ಒಳಪಟ್ಟ 29 ಮೊಬೈಲ್ ಫೋನ್‌ಗಳಲ್ಲಿ ಐದರಲ್ಲಿ ಕೆಲವು ಮಾಲ್‌ವೇರ್ ಪತ್ತೆಯಾಗಿತ್ತು. ಆದರೆ ಅವು ಪೆಗಾಸಸ್ ಸ್ಪೈವೇರ್ ಎಂಬುದಕ್ಕೆ ನಿರ್ಣಾಯಕ ಸಾಕ್ಷ್ಯ ಸಿಕ್ಕಿಲ್ಲ ಎಂದು ನ್ಯಾಯಾಲಯ ತಿಳಿಸಿತು. ಕೇಂದ್ರ ಸರ್ಕಾರ ತನಿಖೆಗೆ ಸಹಕರಿಸಲಿಲ್ಲ ಎಂಬ ಸಮಿತಿಯ ಅಭಿಪ್ರಾಯವನ್ನೂ ನ್ಯಾಯಾಲಯ ಉಲ್ಲೇಖಿಸಿತು.

ಹೀಗಾಗಿ ಪೆಗಾಸಸ್ ವಿವಾದದಲ್ಲಿ ಎರಡು ಅಂಶಗಳನ್ನು ಪ್ರತ್ಯೇಕವಾಗಿ ನೋಡಬೇಕು. ಮೊದಲನೆಯದು, ರಾಜಕಾರಣಿಗಳು, ಪತ್ರಕರ್ತರು ಮತ್ತು ಇತರರ ಮೇಲೆ ಅನಧಿಕೃತ ಕಣ್ಗಾವಲು ನಡೆದಿರಬಹುದೇ ಎಂಬ ಗಂಭೀರ ಪ್ರಶ್ನೆ. ಎರಡನೆಯದು, ನಿರ್ದಿಷ್ಟ ವ್ಯಕ್ತಿಯ ಮೊಬೈಲ್‌ನಲ್ಲಿ ಪೆಗಾಸಸ್ ಸ್ಪೈವೇರ್ ಬಳಕೆಯಾಗಿದೆ ಎಂಬುದನ್ನು ತಾಂತ್ರಿಕವಾಗಿ ಸಾಬೀತುಪಡಿಸುವುದು. ಇವೆರಡೂ ಒಂದೇ ಅಲ್ಲ.

ಫೋನ್ ಕದ್ದಾಲಿಕೆ ಕಾನೂನುಬದ್ಧವಾಗಿ ಯಾವಾಗ ಸಾಧ್ಯ?

ಸಾಮಾನ್ಯವಾಗಿ ಸರ್ಕಾರ ಯಾವುದೇ ವ್ಯಕ್ತಿಯ ದೂರವಾಣಿ ಸಂಭಾಷಣೆಯನ್ನು ಮನಬಂದಂತೆ ಕದ್ದಾಲಿಕೆ ಮಾಡಲು ಸಾಧ್ಯವಿಲ್ಲ. ಭಾರತದ ಕಾನೂನಿನಲ್ಲಿ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಸಂವಹನವನ್ನು ತಡೆಹಿಡಿಯಲು ಅಥವಾ ಮೇಲ್ವಿಚಾರಣೆ ಮಾಡಲು ಅವಕಾಶವಿದೆ.

ಭಾರತೀಯ ಟೆಲಿಗ್ರಾಫ್ ಕಾಯ್ದೆ, 1885ರ ಸೆಕ್ಷನ್ 5(2) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ಸೆಕ್ಷನ್ 69 ಅಡಿಯಲ್ಲಿ ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ ಸೇರಿದಂತೆ ನಿರ್ದಿಷ್ಟ ಕಾರಣಗಳಿಗಾಗಿ ಕಾನೂನುಬದ್ಧವಾಗಿ ಸಂವಹನ ಕದ್ದಾಲಿಕೆಗೆ ಅವಕಾಶವಿದೆ. ಇಂತಹ ಕ್ರಮಗಳಿಗೆ ಸಂಬಂಧಿಸಿದಂತೆ ಅನುಮೋದನೆ, ಅಧಿಕಾರ ಮತ್ತು ಮೇಲ್ವಿಚಾರಣೆಗೆ ನಿಯಮಗಳಿವೆ. ಕೇಂದ್ರ ಸರ್ಕಾರದ ಪ್ರಕರಣಗಳಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ರಾಜ್ಯ ಸರ್ಕಾರದ ಪ್ರಕರಣಗಳಲ್ಲಿ ಸಂಬಂಧಪಟ್ಟ ರಾಜ್ಯದ ಗೃಹ ಕಾರ್ಯದರ್ಶಿ ಅನುಮೋದನಾ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇಲ್ಲಿ ಮುಖ್ಯವಾದ ಪ್ರಶ್ನೆ ಏನೆಂದರೆ, ಕಾನೂನುಬದ್ಧ ಕಣ್ಗಾವಲು ಮತ್ತು ಅನಧಿಕೃತ ಫೋನ್ ಕದ್ದಾಲಿಕೆ ಎರಡೂ ವಿಭಿನ್ನ. ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಕಾನೂನುಬದ್ಧ ಕ್ರಮ ಕೈಗೊಳ್ಳುವುದಕ್ಕೂ, ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಕದ್ದಾಲಿಕೆ ನಡೆಸುವುದಕ್ಕೂ ಬಹಳ ವ್ಯತ್ಯಾಸವಿದೆ.

ಪ್ರಣಬ್ ಮುಖರ್ಜಿ ಕಚೇರಿಯಲ್ಲೂ ಕಣ್ಗಾವಲು ಸಾಧನಗಳ ಅನುಮಾನ!

Corruption alleged in granting of 2G licences

ಫೋನ್ ಕದ್ದಾಲಿಕೆ ಮತ್ತು ರಹಸ್ಯ ಕಣ್ಗಾವಲು ವಿಚಾರಗಳು ಭಾರತದ ರಾಜಕಾರಣಕ್ಕೆ ಹೊಸದೇನಲ್ಲ. 2011ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರ ನಾರ್ತ್ ಬ್ಲಾಕ್ ಕಚೇರಿಯಲ್ಲಿ ರಹಸ್ಯವಾಗಿ ಕಣ್ಗಾವಲು ಸಾಧನಗಳನ್ನು ಅಳವಡಿಸಲಾಗಿದೆಯೇ ಎಂಬ ಅನುಮಾನ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ಪ್ರಣಬ್ ಮುಖರ್ಜಿ ಅವರು 2010ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದು ತಮ್ಮ ಕಚೇರಿ ಮತ್ತು ಕೆಲವು ಪ್ರಮುಖ ಸ್ಥಳಗಳಲ್ಲಿ ಅನುಮಾನಾಸ್ಪದ ಅಂಟು ಪದಾರ್ಥಗಳು ಕಂಡುಬಂದಿರುವ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದರು. ಒಟ್ಟು 16 ಸ್ಥಳಗಳಲ್ಲಿ ಇಂತಹ ವಸ್ತುಗಳು ಪತ್ತೆಯಾಗಿದ್ದವು ಎಂಬ ವರದಿಗಳು ಪ್ರಕಟವಾಗಿದ್ದವು. ಆದರೆ ಪ್ರಣಬ್ ಮುಖರ್ಜಿ ಅವರೇ ನಂತರ ಗುಪ್ತಚರ ಇಲಾಖೆ ನಡೆಸಿದ ತನಿಖೆಯಲ್ಲಿ ಯಾವುದೇ ಕದ್ದಾಲಿಕೆ ಸಾಧನ ಪತ್ತೆಯಾಗಿಲ್ಲ ಎಂದು ತಿಳಿಸಿದ್ದರು. ಅಂದರೆ, ಆ ಘಟನೆ ರಹಸ್ಯ ಕಣ್ಗಾವಲಿನ ಅನುಮಾನ ಮತ್ತು ರಾಜಕೀಯ ವಿವಾದಕ್ಕೆ ಕಾರಣವಾಗಿದ್ದರೂ, ಕಚೇರಿಯಲ್ಲಿ ನಿಜವಾಗಿಯೂ ಕಾರ್ಯನಿರ್ವಹಿಸುವ ಧ್ವನಿಮುದ್ರಣ ಸಾಧನಗಳು ಪತ್ತೆಯಾಗಿದ್ದವು ಎಂದು ಹೇಳಲು ಸಾಧ್ಯವಿಲ್ಲ.

ಬಿಜೆಪಿ ತಿರುಗೇಟು. ಆರೋಪಗಳಿಗೆ ಸಾಕ್ಷ್ಯ ಎಲ್ಲಿದೆ?

ರಾಹುಲ್ ಗಾಂಧಿ ಅವರ ಆರೋಪಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಂತರವಾಗಿ ಆರೋಪಗಳನ್ನು ಮಾಡುವ ರಾಹುಲ್ ಗಾಂಧಿ, ಅವುಗಳಿಗೆ ಸೂಕ್ತ ದಾಖಲೆ ಮತ್ತು ಸಾಕ್ಷ್ಯಗಳನ್ನು ಬಹಿರಂಗಪಡಿಸಬೇಕು ಎಂಬುದು ಬಿಜೆಪಿಯ ವಾದ.

ಮತ್ತೊಂದೆಡೆ, ಕಾಂಗ್ರೆಸ್ ನಾಯಕರು ಈ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು ಮತ್ತು ರಾಜಕೀಯ ನಾಯಕರ ಖಾಸಗಿತನ ಹಾಗೂ ಡಿಜಿಟಲ್ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ರಾಹುಲ್ ಗಾಂಧಿ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂಬ ಆರೋಪ ಮಾಡುತ್ತಿದ್ದರೆ, ಬಿಜೆಪಿ ಸಂಸತ್ತಿನಲ್ಲೇ ಚರ್ಚೆ ನಡೆಸಲು ಅವಕಾಶವಿದೆ, ವಿರೋಧ ಪಕ್ಷದ ನಾಯಕರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಪ್ರತಿಕ್ರಿಯಿಸಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಸಂಸತ್ತಿನಲ್ಲಿನ ಚರ್ಚೆ ಮತ್ತು ಪ್ರಧಾನಿಯವರೊಂದಿಗಿನ ಸಾರ್ವಜನಿಕ ಮುಖಾಮುಖಿ ಚರ್ಚೆ ಎರಡೂ ವಿಭಿನ್ನ ವೇದಿಕೆಗಳು. ಸಂಸತ್ತಿನಲ್ಲಿ ಸರ್ಕಾರದ ನೀತಿಗಳು, ನಿರ್ಧಾರಗಳು ಮತ್ತು ಆಡಳಿತದ ಬಗ್ಗೆ ಪ್ರಶ್ನಿಸುವುದು ವಿರೋಧ ಪಕ್ಷದ ಸಾಂವಿಧಾನಿಕ ಜವಾಬ್ದಾರಿ. ಅದೇ ರೀತಿ, ಸಾರ್ವಜನಿಕ ಚರ್ಚೆಗೆ ಸವಾಲು ಹಾಕುವುದು ರಾಜಕೀಯ ಸಂವಹನದ ಒಂದು ವಿಧಾನ. ಆದರೆ ಅಂತಿಮವಾಗಿ ಆರೋಪಗಳ ಸತ್ಯಾಸತ್ಯತೆ ದಾಖಲೆಗಳು ಮತ್ತು ಪರಿಶೀಲಿಸಬಹುದಾದ ಸಾಕ್ಷ್ಯಗಳ ಮೂಲಕವೇ ನಿರ್ಧಾರವಾಗಬೇಕು.

ದೀಪಾವಳಿ ಶುಭಾಶಯ ವಿನಿಮಯವೂ ಸುದ್ದಿಯಾಗಿತ್ತು!

On Thursday, PM Narendra Modi exchanged Diwali greetings with Sam Pitroda, chief of the Indian Overseas Congress and a vocal critic of the BJP-led government. This came after Pitroda called him a

ಇತ್ತೀಚೆಗೆ ಸ್ಯಾಮ್ ಪಿತ್ರೋಡಾ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೀಪಾವಳಿ ಮತ್ತು ಗುಜರಾತಿ ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದ ವಿಚಾರವೂ ಸುದ್ದಿಯಾಗಿತ್ತು. ಇಬ್ಬರೂ ಗುಜರಾತಿ ಹಿನ್ನೆಲೆಯವರು ಎಂಬ ಕಾರಣಕ್ಕೆ ಪರಸ್ಪರ ಗೌರವ ಮತ್ತು ಸೌಜನ್ಯದಿಂದ ಮಾತನಾಡುವುದರಲ್ಲಿ ತಪ್ಪೇನಿಲ್ಲ ಎಂದು ಪಿತ್ರೋಡಾ ಸ್ಪಷ್ಟಪಡಿಸಿದ್ದರು.

ರಾಜಕೀಯವಾಗಿ ಭಿನ್ನಾಭಿಪ್ರಾಯ ಹೊಂದಿರುವವರು ವೈಯಕ್ತಿಕವಾಗಿ ಸೌಹಾರ್ದಯುತ ಸಂಬಂಧ ಹೊಂದಿರಬಹುದು ಎಂಬುದು ಅವರ ನಿಲುವಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ರಾಹುಲ್ ಗಾಂಧಿ ಅವರ ಫೋನ್ ಕದ್ದಾಲಿಕೆ ಆರೋಪದ ಬಗ್ಗೆ ಪಿತ್ರೋಡಾ ವ್ಯಕ್ತಪಡಿಸಿರುವ ಭಿನ್ನ ಅಭಿಪ್ರಾಯ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಆರೋಪಕ್ಕಿಂತ ಮುಖ್ಯವಾದುದು ಸಾಕ್ಷ್ಯ!

 ಫೋನ್ ಕದ್ದಾಲಿಕೆಯ ಆರೋಪಗಳನ್ನು ಕೇವಲ ರಾಜಕೀಯ ಆರೋಪ-ಪ್ರತ್ಯಾರೋಪಗಳಾಗಿ ನೋಡದೆ, ಅವುಗಳ ತಾಂತ್ರಿಕ ಮತ್ತು ಕಾನೂನುಬದ್ಧ ಸತ್ಯಾಸತ್ಯತೆಗಳನ್ನು ಪರಿಶೀಲಿಸುವುದು ಅತ್ಯಂತ ಅಗತ್ಯ. ರಾಹುಲ್ ಗಾಂಧಿ ಅವರ ಬಳಿ ನಿಜವಾಗಿಯೂ ಸಾಕ್ಷ್ಯಗಳಿದ್ದರೆ ಅವುಗಳನ್ನು ಸೂಕ್ತ ತನಿಖಾ ಸಂಸ್ಥೆ ಅಥವಾ ನ್ಯಾಯಾಂಗದ ಮುಂದೆ ಮಂಡಿಸುವುದರಿಂದ ಆರೋಪಗಳಿಗೆ ಸ್ಪಷ್ಟತೆ ಸಿಗಬಹುದು. ಅದೇ ರೀತಿ, ಸರ್ಕಾರದ ಮೇಲಿನ ಕಣ್ಗಾವಲು ಆರೋಪಗಳ ಬಗ್ಗೆ ಪಾರದರ್ಶಕ ತನಿಖೆ ನಡೆಯುವುದೂ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಅಗತ್ಯ.

ಕೊನೆಯದಾಗಿ,

Rahul Gandhi's history of apologizing for false claims

ಒಬ್ಬ ಪ್ರಧಾನಿಯ ಮರಿಮಗನಾಗಿ, ಮೊಮ್ಮಗನಾಗಿ, ಮಗನಾಗಿ ಮತ್ತು ಪ್ರಸ್ತುತ ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್ ಗಾಂಧಿ ಕೇವಲ ಮತ್ತು ಕೇವಲ ಈ ದೇಶದ ಪ್ರಧಾನಿಯಾಗುವ ಅಸೆಯಿಂದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಳೆದ 10-12 ವರ್ಷಗಳಿಂದಲೂ ಈ ರೀತಿಯ ಮಾಡಿರುವ ಹತ್ತು ಹಲವಾರು ಆರೋಪಗಳು ತೋಳ ಬಂತು ತೋಳ ಎಂಬ ಕಥೆಯಂತಾಗಿರುವುದು ಇಡೀ ದೇಶವೇಕೆ, ಇಡೀ ಪ್ರಪಂಚಕ್ಕೆ ತಿಳಿದಿದ್ದು, ಹೀಗಿ ಸುಮ್ಮನೇ ಆರೋಪ ಮಾಡುವುದಕ್ಕಿಂತಲೂ ದೇಶದ ಜನರ ಮುಂದೆ ಸ್ಪಷ್ಟವಾದ ಸಾಕ್ಷಿಯನ್ನು ಮಂಡಿಸುವುದು ಉತ್ತಮ ಎನಿಸುತ್ತದೆ. ಏಕೆಂದರೆ, ರಾಜಕೀಯದಲ್ಲಿ ಮಾತಿನ ಚಕಮಕಿ ಕ್ಷಣಿಕ ಸುದ್ದಿಯಾಗಬಹುದು. ಆದರೆ ಪ್ರಜಾಪ್ರಭುತ್ವದಲ್ಲಿ ಸಾಕ್ಷ್ಯ ಮತ್ತು ಸತ್ಯವೇ ಶಾಶ್ವತವಾಗಿರುತ್ತದೆ ಅಲ್ವೇ?

ಏನಂತೀರೀ?
ನಿಮ್ಮವನೇ ಶ್ರೀಮಂತ

Leave a Reply