ಎಂಟು ತಲೆಮಾರುಗಳ ಸಂಗೀತ ಪರಂಪರೆಯ ವಾರಸುದಾರ, ಸಾರಂಗಿಯ ನಾದದಲ್ಲಿ ಮಾನವೀಯತೆಯ ಸಂದೇಶ ಸಾರುತ್ತಿರುವ ಅಪರೂಪದ ಕಲಾವಿದ

ಹೆಸರಿನಲ್ಲಿ ಧರ್ಮವಿರಬಹುದು. ಆದರೆ ಸಂಗೀತಕ್ಕೆ ಧರ್ಮದ ಹಂಗಿಲ್ಲ. ಮುಸ್ಲಿಂ ಕುಟುಂಬದಲ್ಲಿ ಜನಿಸಿದರೂ ತಮ್ಮ ಸಂಗೀತದ ಮೂಲಕ ಧರ್ಮಕ್ಕಿಂತ ಮಾನವೀಯತೆ ಮತ್ತು ಕಲೆಯೇ ದೊಡ್ಡದು ಎಂಬ ಸಂದೇಶ ಸಾರುತ್ತಾ, ಬಸವಣ್ಣನವರ ವಚನಗಳು, ಅಕ್ಕಮಹಾದೇವಿಯವರ ಭಕ್ತಿಗೀತೆಗಳು, ಪುರಂದರದಾಸರು ಮತ್ತು ಕನಕದಾಸರ ದಾಸರ ಪದಗಳನ್ನು ಹಿಂದೂಸ್ತಾನಿ ಸಂಗೀತದ ರಾಗಗಳಲ್ಲಿ ಸುಶ್ರಾವ್ಯವಾಗಿ ಹಾಡಿ ಕನ್ನಡಿಗರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿರುವ. ಸಾರಂಗಿಯ ತಂತಿಗಳಲ್ಲಿ ಮಾನವ ಧ್ವನಿಯ ಭಾವನೆಗಳನ್ನು ಮೂಡಿಸುವ ಈ ಕಲಾವಿದ. ಉಸ್ತಾದ್ ಫೈಯಾಜ್ ಖಾನ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
ಎಂಟು ತಲೆಮಾರುಗಳ ಸಂಗೀತ ಪರಂಪರೆ
1968ರ ಫೆಬ್ರವರಿ 17ರಂದು ಧಾರವಾಡದಲ್ಲಿ ಜನಿಸಿದ ಫೈಯಾಜ್ ಖಾನ್ ಅವರ ಕುಟುಂಬದ ಸಂಗೀತ ಪರಂಪರೆ ಎಂಟು ತಲೆಮಾರುಗಳಷ್ಟು ಹಳೆಯದು. ಅವರ ಕುಟುಂಬದ ಬೇರುಗಳು ಗ್ವಾಲಿಯರ್ನಲ್ಲಿದ್ದು, ಪೂರ್ವಜರು ಮೈಸೂರು ಮಹಾರಾಜರು ಮತ್ತು ಹೈದರಾಬಾದ್ ನವಾಬರ ಆಸ್ಥಾನಗಳಲ್ಲಿ ಸಂಗೀತ ಸೇವೆ ಸಲ್ಲಿಸಿದ್ದರು. ಅವರ ಅಜ್ಜ ಅಬ್ದುಲ್ ಕರೀಂ ಖಾನ್ ಪ್ರಸಿದ್ಧ ಸಾರಂಗಿ ವಾದಕರಾಗಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಂಗೀತ ಪ್ರತಿಭೆಗೆ ಮಾರುಹೋಗಿ ಮೈಸೂರಿನಲ್ಲಿಯೇ ಉಳಿಸಿಕೊಳ್ಳಲು ಬಯಸಿದ್ದರು. ಶಿವಮೊಗ್ಗದ ಭಾಗದಲ್ಲಿ ಇನಾಂ ರೂಪದಲ್ಲಿ ಭೂಮಿಯನ್ನೂ ನೀಡಿದ್ದರೆಂದು ಫೈಯಾಜ್ ಖಾನ್ ಕುಟುಂಬದ ಹಿರಿಯರಿಂದ ಕೇಳಿದ್ದಾರೆ.
ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ರೈಲು ಅಪಘಾತದಲ್ಲಿ ಅಜ್ಜ ಮೃತಪಟ್ಟರು. ಆಗ ಅವರ ತಂದೆ ಅಬ್ದುಲ್ ಖಾದರ್ ಖಾನ್ ಅವರಿಗೆ ಕೇವಲ 13 ವರ್ಷ. ತಂದೆಯೊಂದಿಗೆ ಇದ್ದ ಅವರು ಮತ್ತು ಅವರ ಸಹೋದರಿ ಬದುಕುಳಿದರು. ನಂತರ ಶಿವಮೊಗ್ಗದಲ್ಲಿ ನೆಲೆಸಿದ ಅಬ್ದುಲ್ ಖಾದರ್ ಖಾನ್ ಗುಬ್ಬಿ ರಂಗಭೂಮಿಯಲ್ಲಿ ಕೆಲಸ ಮಾಡಿದರು. 1950ರ ದಶಕದಲ್ಲಿ ಧಾರವಾಡ ಆಕಾಶವಾಣಿಯಲ್ಲಿ ಸಾರಂಗಿ ಕಲಾವಿದರಾಗಿ ಉದ್ಯೋಗ ಪಡೆದರು. ಆಗ ಅವರ ಮಾಸಿಕ ಸಂಬಳ ಕೇವಲ 8ರಿಂದ 10 ರೂಪಾಯಿಗಳಷ್ಟಿತ್ತು. ಆ ಅಲ್ಪ ಆದಾಯದಲ್ಲಿಯೇ ಆರು ಮಕ್ಕಳ ಕುಟುಂಬವನ್ನು ಸಾಕಿ, ಸ್ವಲ್ಪ ಹಣವನ್ನೂ ಉಳಿಸುತ್ತಿದ್ದ ತಂದೆಯ ಶ್ರಮವನ್ನು ಫೈಯಾಜ್ ಖಾನ್ ಸ್ಮರಿಸುತ್ತಾರೆ.
ಬಾಲ್ಯದಿಂದಲೇ ಸಂಗೀತದ ಸಾಧನೆ
ನಾಲ್ಕನೇ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಫೈಯಾಜ್ ಖಾನ್, ಬಾಲ್ಯದಲ್ಲೇ ಸಂಗೀತದತ್ತ ಆಕರ್ಷಿತರಾದರು. ಆರು ವರ್ಷದ ವಯಸ್ಸಿನಲ್ಲಿ ಪಂಡಿತ್ ಬಸವರಾಜ ಬೆಂಡಿಗೇರಿ ಅವರ ಮಾರ್ಗದರ್ಶನದಲ್ಲಿ ತಬಲಾ ಅಭ್ಯಾಸ ಆರಂಭಿಸಿದರು. ನಂತರ ಉಸ್ತಾದ್ ನಿಜಾಮುದ್ದೀನ್ ಖಾನ್ ಮತ್ತು ಉಸ್ತಾದ್ ಮಾಮುಲಾಲ್ ಸಂಗೋಂಕರ್ ಅವರಿಂದಲೂ ಕಲಿತರು. ಹನ್ನೊಂದನೇ ವಯಸ್ಸಿನಿಂದ ಉಸ್ತಾದ್ ಬೇಲ್ ಖಾನ್, ಅಬ್ದುಲ್ ಕರೀಂ ಖಾನ್ ಮತ್ತು ಪಂಡಿತ್ ಬಸವರಾಜ ರಾಜಗುರು ಅವರಂತಹ ಹಿರಿಯ ಕಲಾವಿದರೊಂದಿಗೆ ತೆರಳಿ ಸಂಗೀತ ಕೇಳಿ ಕಲಿಯುವ ಅವಕಾಶ ಪಡೆದರು.
16–17ನೇ ವಯಸ್ಸಿನಲ್ಲಿ ತಂದೆಯನ್ನೂ ಕಳೆದುಕೊಂಡರು. ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಪರೀಕ್ಷೆಯ ಹಾಲ್ಟಿಕೆಟ್ಗೆ ಬೇಕಾದ 15 ರೂಪಾಯಿಗಳನ್ನೂ ಹೊಂದಿಸಲಾಗದೆ ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ. ಆದರೆ ಸಂಗೀತಾಭ್ಯಾಸ ನಿಲ್ಲಲಿಲ್ಲ. ಅಭ್ಯಾಸಕ್ಕೆ ಮನೆಯಲ್ಲಿಯೇ ಜಾಗವಿಲ್ಲದಾಗ ನೆರೆಹೊರೆಯವರ ಸಲಹೆಯಂತೆ ಸ್ಮಶಾನಕ್ಕೆ ತೆರಳಿ ರಾತ್ರಿ 2 ಗಂಟೆಯವರೆಗೂ ಸಾರಂಗಿ ಮತ್ತು ಗಾಯನ ಅಭ್ಯಾಸ ಮಾಡುತ್ತಿದ್ದರು. ನಂತರ ಹನುಮಂತರಾಯರ ಗುಡಿ ಮತ್ತು ಕಾಳಮ್ಮನ ದೇವಸ್ಥಾನಗಳಲ್ಲಿಯೂ ಅಭ್ಯಾಸ ನಡೆಸಿದರು. ದಿನಕ್ಕೆ 12 ಗಂಟೆಗಳಂತೆ ಸತತ 41 ದಿನಗಳ ಕಾಲ ಅಭ್ಯಾಸ ಮಾಡುವ ಎರಡು ಚಿಲ್ಲಾ ಸಾಧನೆಗಳನ್ನು ಪೂರ್ಣಗೊಳಿಸಿದರು. ದೇವಸ್ಥಾನದ ಅರ್ಚಕರೂ ಅವರಿಗೆ ಸಂಪೂರ್ಣ ಸಹಕಾರ ನೀಡಿದರು.
ಗುರುಗಳನ್ನು ಹುಡುಕುತ್ತಾ ಬನಾರಸ್, ಭೋಪಾಲ್ ಮೂಲಕ ಮುಂಬೈ ತಲುಪಿದ ಅವರು, ಸಾರಂಗಿ ದಿಗ್ಗಜ ಪಂಡಿತ್ ರಾಮ್ ನಾರಾಯಣ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದರು. ಗಾಯನದಲ್ಲಿ ಪಂಡಿತ್ ರಂಗನಾಥ ಜೋಶಿ ಅವರ ಮಾರ್ಗದರ್ಶನವೂ ದೊರೆಯಿತು. ಕಾಬೂಲ್ ಅರಮನೆಯ ಗಾಯಕ ಮೊಹಮ್ಮದ್ ಹುಸೇನ್ ಸರ್ಹಾನ್ ಅವರ ಪುತ್ರ ಅಲ್ತಾಫ್ ಹುಸೇನ್ ಖಾನ್ ಅವರಿಂದ ಪಟಿಯಾಲ ಘರಾನಾ ಶೈಲಿಯಲ್ಲಿ ಎರಡು ವರ್ಷಗಳ ಕಾಲ ಕಲಿತರು. ಕಲಿಕೆ ಎಂದಿಗೂ ಮುಗಿಯುವುದಿಲ್ಲ ಎಂಬುದು ಅವರ ನಂಬಿಕೆ.
ಸಾರಂಗಿ ಏಕೆ ಮಾನವ ಧ್ವನಿಗೆ ಹತ್ತಿರ?

ಸಾರಂಗಿ ಫೈಯಾಜ್ ಖಾನ್ ಅವರ ಸಂಗೀತ ಬದುಕಿನ ಪ್ರಮುಖ ಗುರುತು. ಪಿಟೀಲಿನಂತೆ ಬಿಲ್ಲಿನ ಸಹಾಯದಿಂದ ನುಡಿಸುವ ಈ ವಾದ್ಯದಲ್ಲಿ ಒಂದೇ ಸ್ವರವನ್ನು ನಿರಂತರವಾಗಿ ಹಿಡಿದಿಡಲು ಸಾಧ್ಯ. ಸಿತಾರ್ ಮತ್ತು ಸರೋದ್ನಂತಹ ಮೀಟುವ ವಾದ್ಯಗಳಲ್ಲಿ ಸ್ವರವನ್ನು ನಿರಂತರವಾಗಿ ಉಳಿಸಿಕೊಳ್ಳುವುದು ಕಷ್ಟ. ಆದರೆ ಸಾರಂಗಿಯ ಬಿಲ್ಲು ಸ್ವರದ ನಿರಂತರತೆ, ಕಂಪನ ಮತ್ತು ಸೂಕ್ಷ್ಮ ಭಾವನೆಗಳನ್ನು ವ್ಯಕ್ತಪಡಿಸಲು ನೆರವಾಗುತ್ತದೆ. ಸಾಂಪ್ರದಾಯಿಕವಾಗಿ ಬಿಲ್ಲಿಗೆ ಬಳಸುವ ಪ್ರಾಣಿಗಳ ಕರುಳಿನಿಂದ ತಯಾರಿಸಿದ ತಂತುಗಳೂ ಅದರ ಧ್ವನಿಗೆ ವಿಶಿಷ್ಟ ಗುಣ ನೀಡುತ್ತವೆ. ಹೀಗಾಗಿ ಮಾನವ ಧ್ವನಿಯಲ್ಲಿರುವ ಮೃದುತ್ವ, ಏರಿಳಿತ ಮತ್ತು ಭಾವನೆಗಳನ್ನು ಸಾರಂಗಿಯ ಮೂಲಕ ಮರುಸೃಷ್ಟಿಸಬಹುದು ಎಂಬುದು ಅವರ ವಿವರಣೆ.
ಕನ್ನಡ ವಚನ ಮತ್ತು ದಾಸಸಾಹಿತ್ಯಕ್ಕೆ ಹಿಂದೂಸ್ತಾನಿ ಸ್ಪರ್ಶ

12ನೇ ಶತಮಾನದ ಶರಣ ಚಳವಳಿಯ ಬಸವಣ್ಣನವರ ಕಾಯಕ, ಸಮಾನತೆ ಮತ್ತು ಮಾನವೀಯತೆಯ ಸಂದೇಶಗಳು; ಅಕ್ಕಮಹಾದೇವಿಯವರ ಭಕ್ತಿ, ವೈರಾಗ್ಯ ಮತ್ತು ಆತ್ಮನಿವೇದನೆಯ ವಚನಗಳು; ಪುರಂದರದಾಸರು ಮತ್ತು ಕನಕದಾಸರ ಭಕ್ತಿಪದಗಳು ಫೈಯಾಜ್ ಖಾನ್ ಅವರಿಗೆ ವಿಶೇಷ ಆಪ್ತ. ಈ ಸಾಹಿತ್ಯವನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸದೆ, ಇಡೀ ಮನುಕುಲಕ್ಕೆ ಅನ್ವಯಿಸುವ ಜೀವನದರ್ಶನವೆಂದು ಅವರು ಪರಿಗಣಿಸುತ್ತಾರೆ. ‘ಕಳಬೇಡ, ಕೊಲಬೇಡ…’ ಎಂಬ ಬಸವಣ್ಣನವರ ನೈತಿಕ ಸಂದೇಶವಾಗಲಿ, ‘ಬೆಟ್ಟದ ಮೇಲೊಂದು ಮನೆಯ ಮಾಡಿ…’ ಎಂಬ ಅಕ್ಕಮಹಾದೇವಿಯವರ ವಚನದ ಬದುಕಿನ ಒಳನೋಟವಾಗಲಿ, ಅವುಗಳ ಭಾವವನ್ನು ಹಿಂದೂಸ್ತಾನಿ ರಾಗಗಳ ಮೂಲಕ ಕೇಳುಗರಿಗೆ ತಲುಪಿಸುತ್ತಾರೆ. ಪುರಂದರದಾಸರ ‘ಜಗದೋದ್ಧಾರನ ಆಡಿಸಿದಳೆ ಯಶೋದೆ’, ‘ಭಾಗ್ಯದ ಲಕ್ಷ್ಮೀ ಬಾರಮ್ಮ’, ‘ಕೃಷ್ಣ ನೀ ಬೇಗನೆ ಬಾರೋ’ ಮುಂತಾದ ಕೃತಿಗಳಿಗೂ ತಮ್ಮದೇ ಆದ ಸಂಗೀತ ಸ್ಪರ್ಶ ನೀಡಿದ್ದಾರೆ.
ಚಿತ್ರರಂಗದ ಸಂಗೀತ ನಿರ್ದೇಶಕರೊಂದಿಗೆ ಒಡನಾಟ
1995ರಲ್ಲಿ ಹೆಚ್ಚಿನ ಅವಕಾಶಗಳನ್ನು ಅರಸಿ ಬೆಂಗಳೂರಿಗೆ ಬಂದ ಫೈಯಾಜ್ ಖಾನ್, ಪ್ರಸಿದ್ಧ ಕಥಕ್ ಕಲಾವಿದೆ ಮಾಯಾ ರಾವ್ ಅವರ ನೃತ್ಯ ಸಂಸ್ಥೆಯೊಂದಿಗೆ ಕೆಲಸ ಮಾಡಿದರು. ನಂತರ ನಿರುಪಮಾ ರಾಜೇಂದ್ರ ಅವರ ನೃತ್ಯ ತಂಡದ ಕಥಕ್ ರೂಪಕಗಳಿಗೆ ಸಂಗೀತ ಸಂಯೋಜಿಸಿದರು. ರಾಜನ್–ನಾಗೇಂದ್ರ, ವಿಜಯಭಾಸ್ಕರ್, ಹಂಸಲೇಖ, ಎಂ.ಎಂ. ಕೀರವಾಣಿ, ರಾಮನ್ ಗೋಕೂಲ, ಇಳಯರಾಜ ಮತ್ತು ಎ.ಆರ್. ರೆಹಮಾನ್ ಸೇರಿದಂತೆ ಹಲವು ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಚಿತ್ರಗೀತೆಗಳು, ಧಾರಾವಾಹಿಗಳ ಶೀರ್ಷಿಕೆ ಗೀತೆಗಳು ಹಾಗೂ ನೃತ್ಯರೂಪಕಗಳಲ್ಲಿಯೂ ತಮ್ಮ ಪ್ರತಿಭೆ ತೋರಿದ್ದಾರೆ.
ಎ.ಆರ್. ರೆಹಮಾನ್ ಅವರ ಸ್ಟುಡಿಯೋದಲ್ಲಿ ರಾತ್ರಿ 12 ಗಂಟೆಯ ನಂತರ ಸಾರಂಗಿ ನುಡಿಸಲು ಆಹ್ವಾನ ಬಂದಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಹಾಡಿನ ಹಿನ್ನೆಲೆ ವಿವರಿಸಿ ನಾಲ್ಕೈದು ತುಣುಕುಗಳನ್ನು ನುಡಿಸಲು ಕೇಳಿದ ರೆಹಮಾನ್, ಸುಮಾರು 15 ನಿಮಿಷಗಳಲ್ಲಿ ಕೆಲಸ ಮುಗಿಸಿದ ಅವರ ವಾದನದಿಂದ ತೃಪ್ತರಾದರು. ರೆಹಮಾನ್ ಅವರ ಸರಳತೆ ಮತ್ತು ಕಲಾವಿದರಿಗೆ ನೀಡುವ ಗೌರವವನ್ನು ಫೈಯಾಜ್ ಖಾನ್ ವಿಶೇಷವಾಗಿ ಮೆಚ್ಚುತ್ತಾರೆ. ಭಾರತದಲ್ಲಷ್ಟೇ ಅಲ್ಲದೆ ಮಲೇಷ್ಯಾ, ದುಬೈ, ಚೀನಾ, ಸಿಂಗಾಪುರ, ಜರ್ಮನಿ, ಫ್ರಾನ್ಸ್ ಮತ್ತು ಕೆನಡಾದಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ.
ಪತ್ನಿಯ ಅಗಲಿಕೆ, ನೋವಿನಿಂದ ಸಂಗೀತದತ್ತ ಮರಳಿದ ಪಯಣ
2012ರ ಅಕ್ಟೋಬರ್ 25ರಂದು ದಾವಣಗೆರೆ ಜಿಲ್ಲೆಯ ಹರಿಹರದ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪತ್ನಿ ಪರ್ವೀನ್ ಬೇಗಂ ಅವರನ್ನು ಕಳೆದುಕೊಂಡರು. ಫೈಯಾಜ್ ಖಾನ್ ಅವರ ಎರಡೂ ಕಾಲುಗಳು, ಕೈಗಳು, ಸೊಂಟ ಮತ್ತು ಬಲಭುಜದ ಮೂಳೆಗಳಿಗೆ ಗಂಭೀರ ಗಾಯಗಳಾದವು. ದೇಹದ ಹಲವು ಭಾಗಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಲೋಹದ ಪ್ಲೇಟ್ಗಳು ಮತ್ತು ಸ್ಕ್ರೂಗಳನ್ನು ಅಳವಡಿಸಬೇಕಾಯಿತು. ಸುಮಾರು ಒಂದು ವರ್ಷದ ನಂತರವೂ ಸಂಪೂರ್ಣ ಚೇತರಿಸಿಕೊಳ್ಳದಿದ್ದರೂ ಸಂಗೀತ ಕಾರ್ಯಕ್ರಮಗಳಿಗೆ ಮರಳುವ ಪ್ರಯತ್ನ ಆರಂಭಿಸಿದರು.
ಪತ್ನಿಯ ನೆನಪಿಗಾಗಿ 2013ರ ನವೆಂಬರ್ 2ರಂದು ಬೆಂಗಳೂರಿನ ಬಸವೇಶ್ವರನಗರದಲ್ಲಿ ಪರ್ವೀನ್ ಬೇಗಂ ಸ್ಮೃತಿ ಸಂಗೀತ ಮತ್ತು ಶಿಕ್ಷಣ ಟ್ರಸ್ಟ್ ಸ್ಥಾಪಿಸಿದರು. ಸಂಗೀತ ಮತ್ತು ನೃತ್ಯದಲ್ಲಿ ಆಸಕ್ತಿ ಹೊಂದಿರುವ ಪ್ರತಿಭಾವಂತ ಯುವಕ-ಯುವತಿಯರಿಗೆ ವೇದಿಕೆ ಕಲ್ಪಿಸುವುದು, ಅವಕಾಶವಂಚಿತ ಕಲಾವಿದರನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶ. ಪತ್ನಿಯ ಅಗಲಿಕೆಯ ನಂತರ ಮತ್ತೊಂದು ಮದುವೆಯ ಬಗ್ಗೆ ಯೋಚಿಸಿಲ್ಲವೆಂದು ಅವರು ಹೇಳುತ್ತಾರೆ. ಪರ್ವೀನ್ ಬೇಗಂ ಅವರಿಂದ ದೊರೆತ ಪ್ರೀತಿ ಮತ್ತು ನೆಮ್ಮದಿಯನ್ನು ಮರೆಯಲು ಸಾಧ್ಯವಿಲ್ಲ; ಮಕ್ಕಳನ್ನು ಮತ್ತೊಂದು ಕೌಟುಂಬಿಕ ಸಂಕಷ್ಟಕ್ಕೆ ತಳ್ಳಲು ಇಷ್ಟವಿಲ್ಲ ಎಂಬುದು ಅವರ ಮನದಾಳದ ಮಾತು. ದಾಸರ ಪದಗಳಲ್ಲಿನ ನೋವು ಮತ್ತು ಜೀವನದರ್ಶನವನ್ನು ತಮ್ಮ ಅನುಭವದೊಂದಿಗೆ ಇನ್ನಷ್ಟು ಆಳವಾಗಿ ಅನುಭವಿಸಲು ಸಾಧ್ಯವಾಯಿತು ಎನ್ನುತ್ತಾರೆ.
ಪ್ರಶಸ್ತಿ, ಗೌರವ ಮತ್ತು ಅಕಾಡೆಮಿಯ ಜವಾಬ್ದಾರಿ
ಸಂಗೀತ ಕ್ಷೇತ್ರದ ಸೇವೆಗೆ 1989ರಲ್ಲಿ ಆಕಾಶವಾಣಿಯ ರಾಷ್ಟ್ರೀಯ ಸಂಗೀತ ಪ್ರಶಸ್ತಿ ಸೇರಿದಂತೆ ಕರ್ನಾಟಕ ಕಲಾಶ್ರೀ, ಕೆಂಪೇಗೌಡ, ಆರ್ಯಭಟ, ಕರ್ನಾಟಕ ರಾಜ್ಯಮಟ್ಟದ ಗೌರವ, ಪಂಡಿತ್ ಪುಟ್ಟರಾಜ ಗವಾಯಿ ಅವರ ಹೆಸರಿನ ಕೃಪಾಭೂಷಣ ಸಮ್ಮಾನ್, 2020ರ ನಿರ್ಮಾಣ ಪುರಂದರ ಸಂಗೀತ ರತ್ನ ಪ್ರಶಸ್ತಿ ಮತ್ತು ಕಲಾವತಂಸ ಗೌರವಗಳು ಸಂದಿವೆ.

ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ಆರು ತಿಂಗಳಲ್ಲಿ ಕಲಾ ಪ್ರತಿಷ್ಠಾನ ಪುರಸ್ಕಾರ, ಬೀದರ್ನಲ್ಲಿ ಗಡಿನಾಡು ಉತ್ಸವ, ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ಗ್ರಾಮೀಣ ಕಲಾವಿದರಿಗೆ ಮಾಸಿಕ 1,500 ರೂಪಾಯಿ ಪಿಂಚಣಿ ನೀಡುವ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ಗಮಕ, ವ್ಯಾಖ್ಯಾನ ಮತ್ತು ಕಥಾ ಕೀರ್ತನೆ ಎಂಬ ಆರು ಕ್ಷೇತ್ರಗಳ ಜೊತೆಗೆ ನೃತ್ಯ ಪ್ರಕಾರಗಳನ್ನೂ ಅಕಾಡೆಮಿ ಪ್ರೋತ್ಸಾಹಿಸುತ್ತದೆ. ವಿಶೇಷವಾಗಿ ರಾಜ್ಯದಲ್ಲಿ ಹೆಚ್ಚು ಪ್ರಚಲಿತದಲ್ಲಿರದ ಗಮಕ ಮತ್ತು ವ್ಯಾಖ್ಯಾನ ಕಲೆಗಳ ಅಭಿವೃದ್ಧಿಗೆ ಒತ್ತು ನೀಡಿ, ಅವುಗಳ ಕಲಾವಿದರಿಗೆ ಕಲಾಶ್ರೀ ಪ್ರಶಸ್ತಿ ನೀಡುವ ಉದ್ದೇಶ ಹೊಂದಿದ್ದಾರೆ.
ಧರ್ಮಕ್ಕಿಂತ ದೊಡ್ಡದು ಮಾನವೀಯತೆ

ಫೈಯಾಜ್ ಖಾನ್ ಅವರ ಮನೆಯಲ್ಲಿ ಕುಟುಂಬದ ಆರಾಧ್ಯ ದೈವ ಮೆಹಬೂಬೆ ಸುಬಾನಿಗೆ ದೀಪ ಹಚ್ಚುವುದರ ಜೊತೆಗೆ ಸರಸ್ವತಿ ಪೂಜೆಯನ್ನೂ ಮಾಡುತ್ತಾರೆ. ನಮಾಜ್ ಮುಗಿಸಿದ ನಂತರ ಸ್ನೇಹಿತರೊಂದಿಗೆ ಚರ್ಚ್ಗೆ ತೆರಳಿ ನೆಮ್ಮದಿಯಿಂದ ಕುಳಿತ ಅನುಭವವನ್ನೂ ಹಂಚಿಕೊಂಡಿದ್ದಾರೆ. ಧರ್ಮವು ವೈಯಕ್ತಿಕ ನೆಮ್ಮದಿಗಾಗಿ ಇರಬೇಕೇ ಹೊರತು ಪ್ರದರ್ಶನಕ್ಕಾಗಿ ಅಲ್ಲ ಎಂಬುದು ಅವರ ನಿಲುವು. ತಮ್ಮನ್ನು ಯಾವುದೇ ಜಾತಿಯ ಚೌಕಟ್ಟಿನಲ್ಲಿ ಬಂಧಿಸಿಕೊಳ್ಳದೆ, ನಾನು ಸಂಗೀತಗಾರರ ಜಾತಿಗೆ ಸೇರಿದವನು ಎನ್ನುತ್ತಾರೆ.
ಹಿರಿಯ ಮಗ ಸರ್ಫರಾಜ್ ಖಾನ್ ಸಾರಂಗಿ ನುಡಿಸುತ್ತಿದ್ದು, ಕಿರಿಯ ಮಗ ಫರಾಜ್ ಖಾನ್ ಪಂಡಿತ್ ರಾಜೀವ್ ತಾರಾನಾಥ್ ಅವರಿಂದ ಸರೋದ್ ಕಲಿಯುತ್ತಿದ್ದಾರೆ. ತಮ್ಮ ಜ್ಞಾನವನ್ನು ಶಿಷ್ಯರಿಗೆ ಹಂಚಬೇಕು, ಅವರ ಯಶಸ್ಸಿನಲ್ಲಿ ಸಂತೋಷಪಡಬೇಕು ಎಂಬುದು ಫೈಯಾಜ್ ಖಾನ್ ಅವರ ಆಶಯ. ಪ್ರಶಸ್ತಿ ಮತ್ತು ಜನಪ್ರಿಯತೆ ದೊರೆತಿದ್ದರೂ ತಾವು ಇನ್ನೂ ಕಲಿಯಬೇಕಾದದ್ದು ಬಹಳಷ್ಟಿದೆ ಎಂಬ ವಿನಯ ಅವರಲ್ಲಿದೆ.
ಬಸವಣ್ಣನವರ ವಚನ ಹಾಡಲು ಅವರ ಧರ್ಮದವರಾಗಿರಬೇಕಿಲ್ಲ; ಪುರಂದರದಾಸರ ಪದ ಹಾಡಲು ಅವರ ಧಾರ್ಮಿಕ ಪರಂಪರೆಯಲ್ಲಿ ಹುಟ್ಟಿರಬೇಕಿಲ್ಲ. ಆ ಸಾಹಿತ್ಯದ ಭಾವವನ್ನು ಅರ್ಥಮಾಡಿಕೊಳ್ಳುವ ಹೃದಯವಿದ್ದರೆ ಸಾಕು ಎಂಬುದನ್ನು ಉಸ್ತಾದ್ ಫೈಯಾಜ್ ಖಾನ್ ತಮ್ಮ ಬದುಕಿನ ಮೂಲಕ ತೋರಿಸಿಕೊಡುತ್ತಿದ್ದಾರೆ. ಸಾರಂಗಿಯ ನಾದದ ಮೂಲಕ ಸಂಗೀತದ ಸೌಂದರ್ಯವನ್ನಷ್ಟೇ ಅಲ್ಲ, ಮಾನವೀಯತೆ, ಸಹಬಾಳ್ವೆ ಮತ್ತು ಧಾರ್ಮಿಕ ಸಾಮರಸ್ಯದ ಸಂದೇಶವನ್ನೂ ಸಾರುತ್ತಿರುವ ಅವರು ನಿಜಕ್ಕೂ ಧರ್ಮದ ಗಡಿಗಳನ್ನು ಮೀರಿದ ಸಂಗೀತದ ಸ್ವರಸಾಧಕರು ಆಗಿರುವುದರಿಂದಲೇ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.