ತಪ್ಪು ಮಾಡುವುದು ಸಹಜ ಕಣೋ… ಅದನ್ನು ತಿದ್ದಿ ನಡೆಯುವುದು ಮನುಜ ಕಣೋ!

ಸಂಸ್ಕಾರ ಕಲಿಯಲು ವಯಸ್ಸಿನ ಹಂಗಿಲ್ಲ! ಅಂದು ಮಗುವಿಗೆ ಬುದ್ಧಿ ಹೇಳಿದ ಅಂಗಡಿಯವನು… ಇಂದು ತಂದೆಗೆ ಪಾಠ ಕಲಿಸಿದ ಮಗ!

ತಪ್ಪು ಮಾಡುವುದು ಮನುಷ್ಯ ಸಹಜ. ಆದರೆ ಆ ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳುವ ಮನಸ್ಸು ಇರುವುದು ನಿಜವಾದ ಸಂಸ್ಕಾರ. ಮಕ್ಕಳಿಗೆ ಹಿರಿಯರು ಬುದ್ಧಿ ಹೇಳಬೇಕು ಎಂಬುದು ಸಹಜ. ಆದರೆ ಕೆಲವೊಮ್ಮೆ ಹಿರಿಯರಿಗೂ ಕಿರಿಯರು ಜೀವನದ ಅಮೂಲ್ಯ ಪಾಠ ಕಲಿಸಬಹುದು. ಪ್ರೀತಿಯಿಂದ ಹೇಳಿದ ನಾಲ್ಕು ಮಾತುಗಳು, ಕೋಪದಿಂದ ನೀಡುವ ನೂರು ಶಿಕ್ಷೆಗಳಿಗಿಂತಲೂ ಹೆಚ್ಚು ಪರಿಣಾಮ ಬೀರುತ್ತವೆ. ಇದಕ್ಕೆ ಸಾಕ್ಷಿಯಂತಿರುವ ತಂದೆ-ಮಗನ ಈ ಹೃದಯಸ್ಪರ್ಶಿ ಕಥೆಯನ್ನು ಒಮ್ಮೆ ಓದಿ.

ಮುಕ್ತ ಮನಸ್ಸಿನ ಕುಟುಂಬವೊಂದು…

ಒಂದು ಊರಿನಲ್ಲಿ ಸುಂದರವಾದ ಕುಟುಂಬವೊಂದಿತ್ತು. ತಂದೆ, ತಾಯಿ ಮತ್ತು ಇಬ್ಬರು ಮಕ್ಕಳು. ಆ ಮನೆಯಲ್ಲಿ ಯಾವುದಕ್ಕೂ ಮುಚ್ಚುಮರೆ ಇರಲಿಲ್ಲ. ತಂದೆ-ತಾಯಿ ತಮ್ಮ ದಿನನಿತ್ಯದ ವಿಚಾರಗಳನ್ನು ಮಕ್ಕಳೊಂದಿಗೂ ಹಂಚಿಕೊಳ್ಳುತ್ತಿದ್ದರು. ಮಕ್ಕಳೂ ತಮ್ಮ ಮನಸ್ಸಿನಲ್ಲಿರುವ ಆಸೆ, ಆತಂಕ, ಸಂತೋಷ ಮತ್ತು ತಪ್ಪುಗಳನ್ನು ಮುಕ್ತವಾಗಿ ಹೇಳಿಕೊಳ್ಳಬೇಕೆಂಬುದು ಅವರ ಬಯಕೆಯಾಗಿತ್ತು.

ಮನೆಯ ದೈನಂದಿನ ಖರ್ಚಿಗೆ ಬೇಕಾಗುವಷ್ಟು ಹಣವನ್ನು ದೇವರ ಮನೆಯಲ್ಲಿದ್ದ ಒಂದು ಸಣ್ಣ ಡಬ್ಬಿಯಲ್ಲಿ ಇಡುತ್ತಿದ್ದರು. ತಂದೆಯಾಗಲಿ, ತಾಯಿಯಾಗಲಿ ಅಗತ್ಯ ಬಿದ್ದಾಗ ಅದರಿಂದ ಹಣ ತೆಗೆದುಕೊಳ್ಳುತ್ತಿದ್ದರು. ಹಾಗೆ ತೆಗೆದುಕೊಂಡ ವಿಚಾರವನ್ನೂ ಮನೆಯವರೊಂದಿಗೆ ಹೇಳಿಕೊಳ್ಳುತ್ತಿದ್ದರು. ಹೀಗಾಗಿ ಆ ಡಬ್ಬಿಯಲ್ಲಿ ಎಷ್ಟು ಹಣವಿದೆ ಎಂಬುದು ಮನೆಯ ಎಲ್ಲರಿಗೂ ತಿಳಿದಿರುತ್ತಿತ್ತು.

ಅದು ಆಷಾಢ ಮಾಸ. ಮಳೆಗಾಲದ ಆರಂಭದ ದಿನಗಳು. ಆಗಿನ ಮಕ್ಕಳಿಗೆ ಆಷಾಢ ಮಾಸವೆಂದರೆ ಗಾಳಿಪಟಗಳ ಹಬ್ಬವೇ ಸರಿ! ಇಂದಿನ ಮಕ್ಕಳಿಗೆ ಮೊಬೈಲ್, ವಿಡಿಯೊ ಗೇಮ್‌ಗಳು ಹೇಗೆ ಆಕರ್ಷಣೆಯೋ, ಅಂದಿನ ಮಕ್ಕಳಿಗೆ ಬಣ್ಣಬಣ್ಣದ ಗಾಳಿಪಟಗಳು, ಉದ್ದನೆಯ ದಾರಗಳು ಮತ್ತು ಆಕಾಶದಲ್ಲಿ ಹಾರುವ ಪಟಗಳೇ ಜಗತ್ತಾಗಿದ್ದವು. ಆ ಮನೆಯ ಮಗನಿಗೂ ಗಾಳಿಪಟ ಹಾರಿಸುವ ಹುಚ್ಚು. ಮನೆಯಲ್ಲಿದ್ದ ಹಳೆಯ ದಿನಪತ್ರಿಕೆ, ಪೊರಕೆಯ ತೆಂಗಿನಕಡ್ಡಿಗಳು ಮತ್ತು ಕಾಗದ ಅಂಟಿಸಲು ಅಡುಗೆಮನೆಯಿಂದ ತಂದ ಅನ್ನದ ಅಗುಳುಗಳನ್ನು ಬಳಸಿ ತಾನೇ ಒಂದು ಸುಂದರವಾದ ಗಾಳಿಪಟ ತಯಾರಿಸಿದ. ಅಮ್ಮ ಬಟ್ಟೆ ಹೊಲಿಯಲು ಇಟ್ಟಿದ್ದ ದಾರದ ಉಂಡೆಯನ್ನು ತೆಗೆದುಕೊಂಡು ಪಟಕ್ಕೆ ದಾರ ಕಟ್ಟಿದ. ಅದಕ್ಕೆ ಬೇಕಾದಷ್ಟು ಬಾಲಂಗೋಚಿಯನ್ನೂ ಅಂಟಿಸಿದ.

ಸಂಜೆ ಮೈದಾನಕ್ಕೆ ಹೋಗಿ ಗಾಳಿಪಟ ಹಾರಿಸಲು ಆರಂಭಿಸಿದ. ಆಷಾಢದ ತಂಗಾಳಿ ಬೀಸುತ್ತಿದ್ದಂತೆ ಅವನ ಗಾಳಿಪಟವೂ ಆಕಾಶದಲ್ಲಿ ನರ್ತಿಸತೊಡಗಿತು. ತನ್ನ ಕೈಯಿಂದಲೇ ತಯಾರಿಸಿದ ಪಟ ಗಾಳಿಯಲ್ಲಿ ಸುಂದರವಾಗಿ ಹಾರುವುದನ್ನು ಕಂಡು ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಪಕ್ಕದಲ್ಲಿದ್ದ ಗೆಳೆಯರ ಗಾಳಿಪಟಗಳು ಇನ್ನೂ ಎತ್ತರಕ್ಕೆ ಹಾರುತ್ತಿದ್ದುದನ್ನು ಕಂಡಾಗ ಅವನ ಮನಸ್ಸಿನಲ್ಲಿ ಹೊಸ ಆಸೆಯೊಂದು ಮೂಡಿತು. ನನ್ನ ಪಟವೂ ಎಲ್ಲರಿಗಿಂತ ಎತ್ತರಕ್ಕೆ ಹಾರಬೇಕು! ಆದರೆ ಅವನ ಬಳಿ ಇದ್ದ ದಾರ ಕಡಿಮೆಯಾಗಿತ್ತು. ಸಂಜೆ ಕತ್ತಲಾಗುತ್ತಿದ್ದಂತೆ ದಾರವನ್ನು ಸುತ್ತಿಕೊಂಡು ಪಟದೊಂದಿಗೆ ಮನೆಗೆ ಹಿಂದಿರುಗಿದರೂ, ಅವನ ಮನಸ್ಸು ಮಾತ್ರ ಆಕಾಶದಲ್ಲೇ ಉಳಿದಿತ್ತು.

ಆಸೆ ದಾರಿ ತಪ್ಪಿಸಿದಾಗ…

ರಾತ್ರಿ ಊಟ ಮುಗಿಸಿ ಹಾಸಿಗೆಗೆ ಹೋದರೂ ಹುಡುಗನಿಗೆ ನಿದ್ದೆ ಬರಲಿಲ್ಲ. ಗೆಳೆಯರಿಗಿಂತ ತನ್ನ ಗಾಳಿಪಟವನ್ನು ಎತ್ತರಕ್ಕೆ ಹಾರಿಸುವುದು ಹೇಗೆ ಎಂಬ ಯೋಚನೆಯೇ ಅವನನ್ನು ಕಾಡುತ್ತಿತ್ತು. ಅಷ್ಟರಲ್ಲಿ ಅವನಿಗೆ ದೇವರ ಮನೆಯಲ್ಲಿದ್ದ ಹಣದ ಡಬ್ಬಿ ನೆನಪಾಯಿತು.

ಅದರಲ್ಲಿ ಎರಡು ರೂಪಾಯಿ ತೆಗೆದುಕೊಂಡು ದೊಡ್ಡ ದಾರದ ಉಂಡೆಗಳನ್ನು ಖರೀದಿಸಿದರೆ ನನ್ನ ಪಟವೂ ಎಲ್ಲರಿಗಿಂತ ಎತ್ತರಕ್ಕೆ ಹಾರಬಹುದು ಎಂದು ಯೋಚಿಸಿದ. ಕೊನೆಗೆ ಆಸೆಯ ಮುಂದೆ ಪ್ರಾಮಾಣಿಕತೆ ಸೋತಿತು. ಯಾರಿಗೂ ತಿಳಿಯದಂತೆ ಎದ್ದು ಹೋಗಿ ಡಬ್ಬಿಯಿಂದ ಎರಡು ರೂಪಾಯಿಯ ನೋಟೊಂದನ್ನು ತೆಗೆದುಕೊಂಡು ತನ್ನ ಜೇಬಿನಲ್ಲಿಟ್ಟುಕೊಂಡು ಮತ್ತೆ ಬಂದು ಮಲಗಿದ.

ಮರುದಿನ ಶಾಲೆಗೆ ಹೋಗುವಾಗ ಆ ನೋಟನ್ನು ಸಮವಸ್ತ್ರದ ಜೇಬಿನಲ್ಲಿ ಭದ್ರವಾಗಿ ಇಟ್ಟುಕೊಂಡ. ಆದರೆ ಅವನ ಮನಸ್ಸು ಮಾತ್ರ ಶಾಲೆಯ ಪಾಠಗಳ ಕಡೆ ಇರಲಿಲ್ಲ. ಆಗಾಗ್ಗೆ ಜೇಬಿಗೆ ಕೈಹಾಕಿ ಹಣವಿದೆಯೇ ಎಂದು ನೋಡಿಕೊಳ್ಳುತ್ತಿದ್ದ. ಸಂಜೆ ಶಾಲೆ ಮುಗಿಯುವ ಸಮಯಕ್ಕಾಗಿ ಕಾತರದಿಂದ ಕಾಯುತ್ತಿದ್ದ. ಶಾಲೆಯ ಗಂಟೆ ಬಾರಿಸುತ್ತಿದ್ದಂತೆ ಪುಸ್ತಕದ ಚೀಲವನ್ನು ಹೆಗಲಿಗೇರಿಸಿಕೊಂಡು ಪೇಟೆ ಬೀದಿಯಲ್ಲಿದ್ದ ಶೆಟ್ಟರ ಅಂಗಡಿಗೆ ಓಡಿದ.

ಶೆಟ್ರೇ, ಗಾಳಿಪಟ ಹಾರಿಸಲು ದೊಡ್ಡ ದಾರದ ಉಂಡೆ ಎಷ್ಟು? ಎಂದು ಕೇಳಿದ. ಆ ಹುಡುಗನ ಮನೆಯವರನ್ನು ಬಹಳ ವರ್ಷಗಳಿಂದ ಪರಿಚಯವಿದ್ದ ಶೆಟ್ಟರು, ಒಂದು ರೂಪಾಯಿಗೆ ಒಂದು ಉಂಡೆ ಎಂದರು. ಹಾಗಾದರೆ ಎರಡು ಉಂಡೆ ಕೊಡಿ ಎಂದು ಹೇಳಿ ಜೇಬಿನಿಂದ ಎರಡು ರೂಪಾಯಿ ನೋಟನ್ನು ತೆಗೆದು ಅವರ ಮುಂದೆ ಇಟ್ಟ.

ಸಾಮಾನ್ಯವಾಗಿ ಆ ಮನೆಯವರು ಶೆಟ್ಟರ ಅಂಗಡಿಯಲ್ಲಿ ತಿಂಗಳ ಖಾತೆ ಇಟ್ಟುಕೊಂಡಿದ್ದರು. ಅಗತ್ಯವಿದ್ದಾಗ ವಸ್ತುಗಳನ್ನು ತೆಗೆದುಕೊಂಡು, ‘ಲೆಕ್ಕದಲ್ಲಿ ಬರೆದುಕೊಳ್ಳಿ ಶೆಟ್ರೇ, ಸಂಬಳ ಬಂದಾಗ ಅಪ್ಪ ಬಂದು ಹಣ ಕೊಡುತ್ತಾರೆ’ ಎಂದು ಹೇಳುವುದು ರೂಢಿ. ಆದರೆ ಇಂದು ಹುಡುಗ ನೇರವಾಗಿ ಹಣ ಕೊಡುತ್ತಿರುವುದನ್ನು ಕಂಡ ಶೆಟ್ಟರಿಗೆ ಅನುಮಾನವಾಯಿತು. ಬೇಡ ಮಗು, ನಾನು ಲೆಕ್ಕದಲ್ಲಿ ಬರೆದುಕೊಳ್ಳುತ್ತೇನೆ. ನಿಮ್ಮ ಅಪ್ಪ ತಿಂಗಳ ಮೊದಲ ವಾರದಲ್ಲಿ ಬಂದಾಗ ಅವರ ಬಳಿಯೇ ಹಣ ತೆಗೆದುಕೊಳ್ಳುತ್ತೇನೆ ಎಂದರು. ಅಯ್ಯೋ ಶೆಟ್ರೇ, ಅಪ್ಪನ ಲೆಕ್ಕದಲ್ಲಿ ಬರೆಯಬೇಡಿ. ನಾನೇ ಹಣ ಕೊಡುತ್ತಿದ್ದೀನಲ್ಲಾ! ಎಂದು ಹುಡುಗ ಸ್ವಲ್ಪ ಆತುರದಿಂದ ಹೇಳಿದ.

ಅಷ್ಟೇ! ಶೆಟ್ಟರಿಗೆ ಏನೋ ಸರಿಯಿಲ್ಲವೆನಿಸಿತು. ಈ ಹುಡುಗ ಹಣವನ್ನು ಎಲ್ಲಿಂದಲೋ ಕದ್ದು ತಂದಿರಬೇಕು ಅಥವಾ ದಾರಿಯಲ್ಲಿ ಸಿಕ್ಕ ಹಣವನ್ನು ಹೀಗೆ ಖರ್ಚು ಮಾಡುತ್ತಿದ್ದಾನೆ ಎಂಬ ಅನುಮಾನ ಬಲವಾಯಿತು. ನೋಡು ಮಗು, ನಾನು ನಿನ್ನಿಂದ ಹಣ ತೆಗೆದುಕೊಂಡು ದಾರ ಕೊಟ್ಟರೂ ನಿಮ್ಮ ಅಪ್ಪ ಬಂದಾಗ ನೀನು ಎರಡು ರೂಪಾಯಿ ಕೊಟ್ಟು ದಾರ ತೆಗೆದುಕೊಂಡು ಹೋಗಿದ್ದೀಯೆಂದು ಹೇಳುತ್ತೇನೆ. ಈಗ ನಿಜ ಹೇಳು, ಈ ಹಣ ಎಲ್ಲಿಂದ ಬಂತು? ಎಂದು ಸ್ವಲ್ಪ ಗಂಭೀರವಾಗಿ ಕೇಳಿದರು. ಹುಡುಗನ ಮುಖ ಬಾಡಿಹೋಯಿತು. ಸ್ವಲ್ಪ ಹೊತ್ತು ಸುಮ್ಮನಿದ್ದವನು ಕೊನೆಗೆ ಎಲ್ಲವನ್ನೂ ಒಪ್ಪಿಕೊಂಡ. ನಾನು ದೇವರ ಮನೆಯ ಡಬ್ಬಿಯಿಂದ ತೆಗೆದುಕೊಂಡೆ ಶೆಟ್ರೇ. ನನ್ನ ಪಟ ಎಲ್ಲರಿಗಿಂತ ಎತ್ತರಕ್ಕೆ ಹಾರಿಸಬೇಕೆಂದು ಆಸೆಯಾಯಿತು. ಅಪ್ಪನಿಗೆ ಹೇಳಬೇಡಿ ಎಂದು ಗೋಗರೆದ.

ಶಿಕ್ಷೆ ಕೊಡದೆ ಸಂಸ್ಕಾರ ಕಲಿಸಿದ ಶೆಟ್ಟರು

ಹುಡುಗನ ಮಾತು ಕೇಳಿದ ಶೆಟ್ಟರ ಮನಸ್ಸು ಕರಗಿತು. ನೋಡು ಮಗು, ನಿನ್ನನ್ನೂ ನಿಮ್ಮ ಮನೆಯವರನ್ನೂ ನಾನು ಬಹಳ ವರ್ಷಗಳಿಂದ ನೋಡುತ್ತಿದ್ದೇನೆ. ನಿಮ್ಮ ತಂದೆ-ತಾಯಿ ಎಷ್ಟು ಒಳ್ಳೆಯವರು ಎಂಬುದು ನನಗೆ ಗೊತ್ತು. ನೀನು ಹೀಗೆ ಹಣ ತೆಗೆದುಕೊಂಡು ಬಂದಿರುವುದು ತಪ್ಪು. ಆದರೆ ನೀನು ಚಿಕ್ಕವನು. ಆಸೆಯಿಂದ ತಪ್ಪು ಮಾಡಿದ್ದೀಯೆ. ಈಗಲೇ ಅದನ್ನು ಸರಿಪಡಿಸಿಕೊಳ್ಳುವ ಅವಕಾಶವಿದೆ’ ಎಂದರು.

ನಂತರ ಎರಡು ದಾರದ ಉಂಡೆಗಳನ್ನು ಕೊಟ್ಟು, ತೆಗೆದುಕೊಂಡಿದ್ದ ಎರಡು ರೂಪಾಯಿ ನೋಟನ್ನೂ ಹುಡುಗನ ಕೈಗಿಟ್ಟರು. ಈಗ ನೀನು ಮನೆಗೆ ಹೋಗಿ ಈ ಹಣವನ್ನು ಎಲ್ಲಿಂದ ತೆಗೆದುಕೊಂಡಿದ್ದೀಯೋ, ಅದೇ ಜಾಗದಲ್ಲಿ ಮತ್ತೆ ಇಟ್ಟುಬಿಡು. ಇನ್ನು ಮುಂದೆ ಯಾರ ಅನುಮತಿಯಿಲ್ಲದೆ ಮನೆಯ ಹಣವನ್ನಾಗಲಿ, ಬೇರೆಯವರ ವಸ್ತುವನ್ನಾಗಲಿ ತೆಗೆದುಕೊಳ್ಳುವುದಿಲ್ಲ ಎಂದು ನನಗೆ ಮಾತು ಕೊಡು’ ಎಂದರು. ಹುಡುಗನಿಂದ ಮಾತು ಪಡೆದುಕೊಂಡು, ಪ್ರೀತಿಯಿಂದ ಬುದ್ಧಿ ಹೇಳಿ ಕಳುಹಿಸಿದರು.

ಅಬ್ಬಾ! ದೊಡ್ಡ ಅಪಾಯದಿಂದ ಪಾರಾದೆ ಎಂಬ ಸಮಾಧಾನ ಹುಡುಗನಿಗೆ. ಸಂತೋಷದಿಂದ ದಾರದ ಉಂಡೆಗಳನ್ನು ತೆಗೆದುಕೊಂಡು ಮನೆಗೆ ಹೋದ. ಸಂಜೆ ಕೈಕಾಲು ತೊಳೆದು ದೇವರಿಗೆ ನಮಸ್ಕಾರ ಮಾಡುವ ಸಮಯದಲ್ಲಿ ಯಾರಿಗೂ ತಿಳಿಯದಂತೆ ಎರಡು ರೂಪಾಯಿ ನೋಟನ್ನು ಮತ್ತೆ ಡಬ್ಬಿಯಲ್ಲಿ ಇಟ್ಟ. ನಂತರ ದಾರದ ಉಂಡೆಗಳನ್ನು ತೆಗೆದುಕೊಂಡು ಮೈದಾನಕ್ಕೆ ಓಡಿದ. ಅಂದು ಅವನ ಗಾಳಿಪಟ ಎಲ್ಲರಿಗಿಂತ ಎತ್ತರಕ್ಕೆ ಹಾರಿತೋ ಇಲ್ಲವೋ ಗೊತ್ತಿಲ್ಲ. ಆದರೆ ತನ್ನ ತಪ್ಪನ್ನು ಸರಿಪಡಿಸಿಕೊಂಡ ಸಂತೋಷ ಮಾತ್ರ ಅವನ ಮನಸ್ಸಿನಲ್ಲಿ ತುಂಬಿತ್ತು.

ತಂದೆಗೆ ಅನುಮಾನ ಬಂದರೂ… ಮೌನವೇ ಉತ್ತರವಾಗಿತ್ತು!

ಕೆಲವು ದಿನಗಳ ನಂತರ ತಂದೆ ಯಾವುದೋ ಕಾರಣಕ್ಕೆ ದೇವರ ಮನೆಯ ಡಬ್ಬಿಯಿಂದ ಹಣ ತೆಗೆದುಕೊಳ್ಳಲು ಹೋದರು. ಆಗ ಹೊಸ ನೋಟುಗಳ ನಡುವೆ ಒಂದು ಎರಡು ರೂಪಾಯಿ ನೋಟು ಸ್ವಲ್ಪ ಸುಕ್ಕಾಗಿರುವುದನ್ನು ಗಮನಿಸಿದರು. ಇದು ಹೇಗೆ ಸುಕ್ಕಾಯಿತು? ಎಂಬ ಅನುಮಾನ ಬಂದರೂ ಏನೂ ಹೇಳದೆ ಸುಮ್ಮನಾದರು. ತಿಂಗಳ ಮೊದಲ ವಾರದಲ್ಲಿ ಎಂದಿನಂತೆ ಸಂಬಳ ಬಂದ ನಂತರ ಶೆಟ್ಟರ ಅಂಗಡಿಗೆ ಹೋಗಿ ಮನೆಯ ದಿನಸಿ ಖರೀದಿಸಿ ಹಿಂದಿನ ತಿಂಗಳ ಲೆಕ್ಕ ಚುಕ್ತಾ ಮಾಡಿದರು.

ಆಗ ಶೆಟ್ಟರು ಆ ದಿನ ನಡೆದ ಘಟನೆಯನ್ನು ವಿವರಿಸಿದರು. ನಿಮ್ಮ ಮಗ ಎರಡು ರೂಪಾಯಿ ತೆಗೆದುಕೊಂಡು ದಾರ ಖರೀದಿಸಲು ಬಂದಿದ್ದ. ಹಣವನ್ನು ಎಲ್ಲಿಂದ ತಂದಿದ್ದಾನೆಂದು ವಿಚಾರಿಸಿದಾಗ ಮನೆಯ ಡಬ್ಬಿಯಿಂದ ತೆಗೆದುಕೊಂಡಿದ್ದಾಗಿ ಒಪ್ಪಿಕೊಂಡ. ನಾನು ಅವನಿಗೆ ಹಣವನ್ನು ಮತ್ತೆ ಅದೇ ಜಾಗದಲ್ಲಿ ಇಡಲು ಹೇಳಿದ್ದೆ. ಅವನು ನನ್ನ ಮಾತಿನಂತೆ ನಡೆದುಕೊಂಡಿದ್ದಾನೆ. ಹಾಗಾಗಿ ಅವನನ್ನು ದಯವಿಟ್ಟು ಬೈಯಬೇಡಿ, ಹೊಡೆಯಬೇಡಿ. ಅವನಿಗೆ ತಪ್ಪಿನ ಅರಿವಾಗಿದೆ. ಈ ವಿಚಾರವನ್ನು ಅವನೊಂದಿಗೆ ಮತ್ತೆ ಪ್ರಸ್ತಾಪಿಸದೆ ಇಲ್ಲಿಗೇ ಬಿಡಿ ಎಂದರು.

ಶೆಟ್ಟರ ಮಾತು ಕೇಳಿದ ತಂದೆಗೆ ಆ ಸುಕ್ಕಾದ ನೋಟಿನ ನೆನಪಾಯಿತು. ಹೌದು ಶೆಟ್ರೇ, ನನಗೂ ಆ ನೋಟು ನೋಡಿ ಅನುಮಾನ ಬಂದಿತ್ತು. ಈಗ ಅದರ ಹಿಂದಿನ ಕಥೆ ತಿಳಿಯಿತು’ ಎಂದು ಮುಗುಳ್ನಕ್ಕರು. ಆದರೆ ಶೆಟ್ಟರ ಮಾತು ಅವರಿಗೆ ಬಹಳ ಇಷ್ಟವಾಯಿತು. ಮಗನನ್ನು ಶಿಕ್ಷಿಸುವ ಬದಲು, ಅವನಿಗೆ ತಪ್ಪಿನ ಅರಿವು ಮೂಡಿಸಿದ ಆ ವ್ಯಕ್ತಿಯ ದೊಡ್ಡತನಕ್ಕೆ ಮನಸ್ಸಿನಲ್ಲೇ ಮೆಚ್ಚುಗೆ ವ್ಯಕ್ತಪಡಿಸಿದರು. ಆ ದಿನ ಆ ಹುಡುಗನಿಗೆ ಕೇವಲ ಹಣದ ಪ್ರಾಮಾಣಿಕತೆಯ ಪಾಠ ಮಾತ್ರ ಸಿಗಲಿಲ್ಲ. ತಪ್ಪನ್ನು ಒಪ್ಪಿಕೊಳ್ಳುವ ಧೈರ್ಯ ಮತ್ತು ಅದನ್ನು ಸರಿಪಡಿಸುವ ಜವಾಬ್ದಾರಿಯ ಅರಿವೂ ಮೂಡಿತ್ತು.

ಮೂವತ್ತು ವರ್ಷಗಳ ನಂತರ… ಕಾಲವೇ ತಿರುಗಿ ಬರೆದ ಕಥೆ!

ಕಾಲ ಯಾರಿಗಾಗಿ ಕಾಯುವುದಿಲ್ಲ. ದಿನಗಳು, ತಿಂಗಳುಗಳು, ವರ್ಷಗಳು ಉರುಳಿದವು. ಅಂದು ಗಾಳಿಪಟ ಹಾರಿಸಲು ಎರಡು ರೂಪಾಯಿ ಕದ್ದಿದ್ದ ಆ ಪುಟ್ಟ ಹುಡುಗ ಇಂದು ದೊಡ್ಡ ಅಧಿಕಾರಿಯಾಗಿದ್ದ. ಮದುವೆಯಾಗಿ ಅವನಿಗೂ ಇಬ್ಬರು ಮಕ್ಕಳಿದ್ದರು.

ಈ ನಡುವೆ ಕೆಲವು ವರ್ಷಗಳ ಹಿಂದೆಯಷ್ಟೇ ತಾಯಿ ತೀರಿಕೊಂಡಿದ್ದರು. ತಂದೆಯವರಿಗೆ ವಯಸ್ಸಾಗಿತ್ತು. ಮಗನಿಗೆ ತಂದೆಯೇ ಪ್ರಪಂಚ. ಬಾಲ್ಯದಿಂದ ಬೆಳೆಸಿದ ತಂದೆಯನ್ನು ಈಗ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕೆಂಬ ಜವಾಬ್ದಾರಿ ಅವನದಾಗಿತ್ತು. ಅಪ್ಪಾ, ನಿಮಗೆ ಈಗ ವಯಸ್ಸಾಗಿದೆ. ಎಲ್ಲಿಗಾದರೂ ಹೋಗಬೇಕೆಂದರೆ ನನಗೆ ಹೇಳಿ. ಅಗತ್ಯವಿದ್ದರೆ ನಾನೇ ಕರೆದುಕೊಂಡು ಹೋಗುತ್ತೇನೆ. ನೀವೊಬ್ಬರೇ ವಾಹನ ಓಡಿಸಿಕೊಂಡು ಹೋಗಬೇಡಿ ಎಂದು ಮಗ ಹಲವು ಬಾರಿ ಹೇಳಿದ್ದ. ತಂದೆಯವರೂ ಮಗನ ಮಾತಿಗೆ ಒಪ್ಪಿಕೊಂಡಿದ್ದರು. ಮನೆಯಲ್ಲಿ ಪತ್ರಿಕೆ, ವಾರಪತ್ರಿಕೆ ಓದುತ್ತಾ, ದೂರದರ್ಶನದಲ್ಲಿ ಧಾರಾವಾಹಿಗಳನ್ನು ನೋಡುತ್ತಾ, ಸಂಜೆ ಶಾಲೆಯಿಂದ ಬರುವ ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದರು.

ಆದರೆ ಒಂದು ದಿನ ಅವರಿಗೆ ತಮ್ಮ ತಂಗಿಯ ಮನೆಗೆ ಹೋಗಿ ಬರುವ ಆಸೆಯಾಯಿತು. ತಂಗಿಯ ಮನೆ ಬೆಂಗಳೂರಿನ ವಯ್ಯಾಳಿಕಾವಲ್‌ನಲ್ಲಿತ್ತು. ಮಗ ಮತ್ತು ಸೊಸೆ ಕಚೇರಿಗೆ ಹೋಗಿದ್ದರು. ಮೊಮ್ಮಕ್ಕಳು ಶಾಲೆಯಲ್ಲಿದ್ದರು. ಸಂಜೆ ನಾಲ್ಕು ಗಂಟೆಯೊಳಗೆ ಎಲ್ಲರೂ ಮನೆಗೆ ಬರುವುದರೊಳಗೆ ಹಿಂದಿರುಗಿಬಿಡಬಹುದು ಎಂದುಕೊಂಡರು. ಮಗನಿಗೆ ಹೇಳಿದರೆ ಬೇಡ ಎನ್ನುತ್ತಾನೆ. ಸುಮ್ಮನೆ ಹೋಗಿ ಬಂದುಬಿಡೋಣ ಎಂದು ನಿರ್ಧರಿಸಿ, ಮಗ ಹಾಕಿದ್ದ ಲಕ್ಷ್ಮಣರೇಖೆಯನ್ನು ದಾಟಿ ತಮ್ಮ ಟಿವಿಎಸ್-50 ವಾಹನ ಏರಿ ಹೊರಟೇಬಿಟ್ಟರು.

ಒಂದು ಫೋನ್ ಕರೆ… ಮಗನ ಮನಸ್ಸಿನಲ್ಲಿ ಆತಂಕ!

ವಿಧಿಯಾಟವೇ ಬೇರೆ. ದಾರಿಯಲ್ಲಿ ಅವರ ಮಗನ ಸ್ನೇಹಿತನೊಬ್ಬ ತಂದೆಯವರು ಟಿವಿಎಸ್-50 ಓಡಿಸಿಕೊಂಡು ಹೋಗುತ್ತಿರುವುದನ್ನು ನೋಡಿದ ತಕ್ಷಣ ಮಗನಿಗೆ ಕರೆ ಮಾಡಿ, ನಿಮ್ಮ ತಂದೆಯವರನ್ನು ಸ್ವಲ್ಪ ಹೊತ್ತಿನ ಹಿಂದೆ ನ್ಯೂ ಬಿಇಎಲ್ ರಸ್ತೆಯಲ್ಲಿ ಟಿವಿಎಸ್-50 ಓಡಿಸಿಕೊಂಡು ಹೋಗುತ್ತಿರುವುದನ್ನು ನೋಡಿದೆ ಎಂದ. ಮಗನಿಗೆ ಆಶ್ಚರ್ಯವಾಯಿತು. ಛೇ! ನಮ್ಮ ತಂದೆ ಗಾಡಿ ಓಡಿಸುವುದನ್ನು ಬಿಟ್ಟು ಬಹಳ ತಿಂಗಳುಗಳೇ ಆಗಿವೆ. ನೀವು ಬೇರೆ ಯಾರನ್ನೋ ನೋಡಿರಬೇಕು ಎಂದ.

ಆದರೆ ಸ್ನೇಹಿತ ಬಿಡಲಿಲ್ಲ. ನನಗೆ ನಿಮ್ಮ ತಂದೆ ಗೊತ್ತಿಲ್ಲವೇ? ಅವರು ಹಾಕಿಕೊಂಡಿದ್ದ ಬಟ್ಟೆ, ಗಾಡಿ, ಸಮಯ ಎಲ್ಲವನ್ನೂ ಸರಿಯಾಗಿ ಗಮನಿಸಿದ್ದೇನೆ. ಅವರೇ ಎಂದು ಖಚಿತವಾಗಿ ಹೇಳಿದ. ಮಗನಿಗೆ ಅನುಮಾನ ಮೂಡಿತು. ಆದರೆ ತಕ್ಷಣ ತಂದೆಯನ್ನು ಪ್ರಶ್ನಿಸುವ ಬದಲು, ಮನೆಗೆ ಹೋದ ನಂತರ ವಿಚಾರಿಸೋಣ ಎಂದು ಸುಮ್ಮನಾದ.

ಮಗನಿಗೆ ಗೊತ್ತಾದ ಸತ್ಯ… ತಂದೆಗೆ ಕಾಡಿದ ಪಶ್ಚಾತ್ತಾಪ!

ಸಂಜೆ ಎಂದಿನಂತೆ ಮನೆಗೆ ಬಂದು ಕಾರಿನ ಹಾರ್ನ್ ಮಾಡಿದ. ಟಿವಿ ನೋಡುತ್ತಿದ್ದ ತಂದೆಯವರು ಮಗ ಬಂದಿರುವುದನ್ನು ತಿಳಿದು ತಕ್ಷಣ ಎದ್ದು ಬಂದು ಗೇಟ್ ತೆರೆದರು. ಮಗನ ಮುಖದಲ್ಲಿ ಎಂದಿನ ಪ್ರೀತಿಯ ನಗು ಇತ್ತು. ಏನು ಯಜಮಾನರೇ, ಇವತ್ತು ಹೇಗಿತ್ತು ದಿನ? ಎಂದು ಕೇಳಿದ.

ಏನೂ ವಿಶೇಷವಿಲ್ಲಪ್ಪಾ. ಪೇಪರ್ ಓದಿದೆ, ಟಿವಿ ನೋಡಿದೆ’ ಎಂದು ತಂದೆಯವರು ಸಹಜವಾಗಿ ಉತ್ತರಿಸಿದರು. ಮಗ ಬಟ್ಟೆ ಬದಲಿಸಿಕೊಂಡು ಕೈಕಾಲು ತೊಳೆದು ಬಂದ. ನಂತರ ಅಡುಗೆಮನೆಗೆ ಹೋಗಿ, ಬೆಳಿಗ್ಗೆ ಮಾಡಿದ್ದ ಅಡುಗೆ ಹಾಗೆಯೇ ಇದೆಯೇ ಎಂದು ನೋಡಲು ಸೊಸೆಗೆ ಹೇಳಿದ. ಆಕೆಯೂ ಹೋಗಿ ನೋಡಿದಾಗ ಬೆಳಿಗ್ಗೆ ಇದ್ದಷ್ಟೇ ಅಡುಗೆ ಇತ್ತು. ಇದರಿಂದ ಮಗನಿಗೆ ಅನುಮಾನ ಮತ್ತಷ್ಟು ಖಚಿತವಾಯಿತು.

ತಂದೆಯವರು ನ್ಯೂ ಬಿಇಎಲ್ ರಸ್ತೆಯ ಕಡೆ ಹೋಗಿದ್ದರೆ, ಬಹುಶಃ ತಂಗಿಯ ಮನೆಗೆ ಹೋಗಿರಬಹುದು ಎಂದುಕೊಂಡ. ತಕ್ಷಣ ಅತ್ತೆಗೆ ಫೋನ್ ಮಾಡಿದ. ಏನತ್ತೆ, ಹೇಗಿದ್ದೀರಾ? ಏನು ಸಮಾಚಾರ? ಎಂದು ವಿಚಾರಿಸಿದ. ಅತ್ತೆ ಆಶ್ಚರ್ಯದಿಂದ, ಏನಪ್ಪಾ, ಇಂದು ಸೂರ್ಯ ಯಾವ ಕಡೆ ಹುಟ್ಟಿದ್ದಾನೆ? ಅಣ್ಣ-ಅಳಿಯ ಇಬ್ಬರೂ ಈ ಬಡಪಾಯಿಯನ್ನು ನೆನಪಿಸಿಕೊಂಡಿದ್ದೀರಲ್ಲಾ! ಎಂದು ತಮಾಷೆ ಮಾಡಿದರು.

ಮಗನ ಅನುಮಾನ ಪರಿಹರಿಸಿಕೊಳ್ಳಲು ಮಾತನಾಡುತ್ತಿದ್ದಂತೆ ಅತ್ತೆ, ಅಯ್ಯೋ, ನಿನ್ನ ತಂದೆ ಮಧ್ಯಾಹ್ನ ಮನೆಗೆ ಬಂದಿದ್ದರು. ನನ್ನನ್ನು ನೋಡಬೇಕೆನಿಸಿತಂತೆ. ಆದರೆ ಮಕ್ಕಳು ಬರುವಷ್ಟರಲ್ಲಿ ಮನೆಗೆ ಹೋಗಬೇಕೆಂದು ಹೆಚ್ಚು ಹೊತ್ತು ಇರಲಿಲ್ಲ. ಊಟವನ್ನೂ ಸರಿಯಾಗಿ ಮಾಡಲಿಲ್ಲ‘ ಎಂದರು.

ಈಗ ಮಗನಿಗೆ ಎಲ್ಲವೂ ಸ್ಪಷ್ಟವಾಯಿತು. ತಂದೆಯವರ ಕೋಣೆಗೆ ಹೋಗಿ ಪಕ್ಕದಲ್ಲಿ ಕುಳಿತ. ಮತ್ತೆ… ಎಂದು ಮಾತು ಆರಂಭಿಸಿದ. ಮತ್ತೇನಿಲ್ಲಪ್ಪಾ!’ ಎಂದು ತಂದೆ ಉತ್ತರಿಸಿದರು. ಸರಿ, ಮಧ್ಯಾಹ್ನ ಏನು ಊಟ ಮಾಡಿದಿರಿ?’ಎಂದು ಕೇಳಿದ. ತಂದೆಯವರು ಯಾವುದೇ ತಡವರಿಕೆಯಿಲ್ಲದೆ ಮನೆಯಲ್ಲಿ ಮಾಡಿದ್ದ ಅಡುಗೆಯ ವಿವರಗಳನ್ನೆಲ್ಲ ಹೇಳಿದರು. ಸ್ವಲ್ಪ ಹೊತ್ತು ಸುಮ್ಮನಿದ್ದ ಮಗ, ಅಪ್ಪಾ, ಮಧ್ಯಾಹ್ನ ಸುಮಾರು ಹನ್ನೆರಡು ಗಂಟೆಯ ಹೊತ್ತಿಗೆ ನ್ಯೂ ಬಿಇಎಲ್ ರಸ್ತೆಯಲ್ಲಿ ಹೋಗುತ್ತಿದ್ದಿರಲ್ಲಾ? ಏನು ಸಮಾಚಾರ? ಎಂದು ಕೇಳಿದ.

ಆ ಪ್ರಶ್ನೆ ಕೇಳುತ್ತಿದ್ದಂತೆ ತಂದೆಯವರ ಮುಖ ಬದಲಾಯಿತು. ತಮ್ಮ ತಪ್ಪು ಮಗನಿಗೆ ಗೊತ್ತಾಗಿದೆ ಎಂಬುದು ಅವರಿಗೆ ಅರ್ಥವಾಯಿತು. ಆದರೂ ಅದನ್ನು ಒಪ್ಪಿಕೊಳ್ಳಲು ಮನಸ್ಸು ಸಿದ್ಧವಾಗಲಿಲ್ಲ. ಹೇ… ಹೇ… ನಾನೇಕೆ ಅಲ್ಲಿಗೆ ಹೋಗಲಿ? ಗಾಡಿ ಓಡಿಸಿಯೇ ಎಷ್ಟೋ ತಿಂಗಳಾಯಿತು‘ ಎಂದು ತಮಗೆ ತಾವೇ ಸಮರ್ಥನೆ ಮಾಡಿಕೊಳ್ಳಲು ಪ್ರಯತ್ನಿಸಿದರು. ಮಗ ಏನೂ ಹೇಳಲಿಲ್ಲ. ಸುಮ್ಮನೆ ಅಲ್ಲಿಂದ ಎದ್ದು ಹೊರಗೆ ಹೋದ. ಆದರೆ ತಂದೆಯವರಿಗೆ ಮಾತ್ರ ಮನಸ್ಸಿನಲ್ಲಿ ನೆಮ್ಮದಿ ಇರಲಿಲ್ಲ.

ಒಂದು ಸುಳ್ಳು… ನಿದ್ದೆಯಿಲ್ಲದ ರಾತ್ರಿ!

ತನ್ನ ಮಗನಿಗೆ ಸುಳ್ಳು ಹೇಳಿಬಿಟ್ಟೆನಲ್ಲಾ ನನ್ನನ್ನು ಇಷ್ಟು ಪ್ರೀತಿಯಿಂದ ನೋಡಿಕೊಳ್ಳುವ ಮಗನ ಮುಂದೆ ನಾನೇಕೆ ಸತ್ಯ ಹೇಳಲಿಲ್ಲ? ಎಂಬ ಪಶ್ಚಾತ್ತಾಪ ತಂದೆಯವರನ್ನು ಕಾಡತೊಡಗಿತು. ರಾತ್ರಿ ಹಾಸಿಗೆಯಲ್ಲಿ ಮಲಗಿದ್ದರೂ ನಿದ್ದೆ ಬರಲಿಲ್ಲ. ಆಗಾಗ್ಗೆ ಎದ್ದು ಬಚ್ಚಲುಮನೆಗೆ ಹೋಗಿ ಬರುತ್ತಿದ್ದರು. ಮಗನೂ ಅದನ್ನು ಗಮನಿಸುತ್ತಿದ್ದ. ಆದರೆ ತಂದೆಯವರನ್ನು ಮುಜುಗರಕ್ಕೀಡುಮಾಡಬಾರದೆಂದು ಏನೂ ಕೇಳಲಿಲ್ಲ. ಆ ರಾತ್ರಿ ತಂದೆಯವರಿಗೆ ನಿದ್ದೆಗಿಂತ ಪಶ್ಚಾತ್ತಾಪವೇ ಹೆಚ್ಚು ಕಾಡಿತ್ತು.

ಮರುದಿನ ಬೆಳಿಗ್ಗೆ ಮಗ ಬಾಗಿಲು ತೆರೆಯುತ್ತಿದ್ದಂತೆಯೇ ತಂದೆಯವರೇ ಅವನ ಬಳಿಗೆ ಬಂದರು. ಅಪ್ಪಾ, ಏನಾಯಿತು? ಎಂದು ಮಗ ಕೇಳುವ ಮೊದಲೇ ತಂದೆಯವರು ತಮ್ಮ ತಪ್ಪನ್ನು ಒಪ್ಪಿಕೊಂಡರು. ನಿನ್ನ ಬಳಿ ಹೇಳದೆ ನಿನ್ನೆ ತಂಗಿಯ ಮನೆಗೆ ಹೋಗಿಬಿಟ್ಟೆ. ನೀನು ಹೋಗಬೇಡ ಎಂದು ಹೇಳಿದ್ದರೂ ನಿನ್ನ ಮಾತು ಕೇಳದೆ ಗಾಡಿ ತೆಗೆದುಕೊಂಡು ಹೋದೆ. ಅದನ್ನು ಮುಚ್ಚಿಡಲು ನಿನ್ನೆ ನಿನ್ನ ಬಳಿ ಸುಳ್ಳನ್ನೂ ಹೇಳಿಬಿಟ್ಟೆ. ನನ್ನನ್ನು ಕ್ಷಮಿಸಪ್ಪಾ. ಇನ್ನು ಮುಂದೆ ಹಾಗೆ ಮಾಡುವುದಿಲ್ಲ ಎಂದು ಹೇಳಿದರು.

ಮಗ ಹೇಳಿದ ನಾಲ್ಕು ಮಾತುಗಳು… ತಂದೆಯ ಕಣ್ಣಲ್ಲಿ ನೀರು!

ತಂದೆಯ ಮಾತು ಕೇಳಿದ ಮಗನ ಮನಸ್ಸು ಕರಗಿತು. ಅಯ್ಯೋ ಅಪ್ಪಾ, ಅದಕ್ಕೇನು ಇಷ್ಟೊಂದು ಬೇಸರ ಮಾಡಿಕೊಳ್ಳುತ್ತೀರಿ? ನಿಮಗೆ ವಯಸ್ಸಾಗಿದೆ. ನೀವು ಗಾಡಿ ಓಡಿಸಿಕೊಂಡು ಹೋಗುವಾಗ ಯಾರಾದರೂ ಬಂದು ಡಿಕ್ಕಿ ಹೊಡೆದಿದ್ದರೆ? ಅಥವಾ ನಿಮಗೇ ಏನಾದರೂ ಹೆಚ್ಚುಕಡಿಮೆ ಆಗಿದ್ದರೆ ಯಾರು ಹೊಣೆ? ನೀವು ಮನೆಗೆ ಬರುವಾಗ ಮನೆಯಲ್ಲಿ ಇಲ್ಲದಿದ್ದರೆ ನಾವು ಎಷ್ಟು ಆತಂಕಪಡಬೇಕು?’

ಸ್ವಲ್ಪ ಹೊತ್ತು ನಿಂತು ಮತ್ತೆ ಹೇಳಿದ. ಅಪ್ಪಾ, ನಿಮಗೆ ಬುದ್ಧಿ ಹೇಳುವಷ್ಟು ದೊಡ್ಡವನು ನಾನಲ್ಲ. ನನ್ನನ್ನು ಬೆಳೆಸಿ, ಜೀವನದ ದಾರಿ ತೋರಿಸಿದವರು ನೀವು. ಆದರೆ ನಿಮ್ಮ ಬಗ್ಗೆ ನಮಗೆ ಇರುವ ಕಾಳಜಿಯಿಂದಲೇ ಹೀಗೆ ಹೇಳುತ್ತಿದ್ದೇನೆ. ನೀವು ಸುರಕ್ಷಿತವಾಗಿರಬೇಕು ಎನ್ನುವುದಷ್ಟೇ ನಮ್ಮ ಆಸೆ.

ಆ ಮಾತುಗಳನ್ನು ಕೇಳಿದ ತಂದೆಯವರ ಕಣ್ಣು ತುಂಬಿಬಂತು. ಇಲ್ಲಪ್ಪಾ, ನಿನಗೆ ಹೇಳದೆ ಹೋಗಿದ್ದು ನನ್ನ ತಪ್ಪು. ಮುಂದೆಂದೂ ಹಾಗೆ ಮಾಡುವುದಿಲ್ಲ’ ಎಂದು ಕೈಮುಗಿದರು. ತಕ್ಷಣ ಮಗ ತಂದೆಯವರ ಕೈಗಳನ್ನು ಹಿಡಿದುಕೊಂಡು, ಛೇ ಅಪ್ಪಾ! ದೊಡ್ಡವರು ಚಿಕ್ಕವರ ಮುಂದೆ ಕೈಮುಗಿಯುವುದೇನು? ನೀವು ನನ್ನ ತಂದೆ. ನಿಮ್ಮನ್ನು ನೋಡಿಕೊಳ್ಳುವುದು ನನ್ನ ಕರ್ತವ್ಯ. ನೀವು ತಪ್ಪು ಮಾಡಿದ್ದೀರಿ ಎಂದು ನಾನು ನಿಮ್ಮನ್ನು ಕಡಿಮೆ ಗೌರವಿಸುವುದಿಲ್ಲ. ಆದರೆ ಮುಂದೆ ಇಂತಹ ಅಪಾಯಕ್ಕೆ ಹೋಗಬೇಡಿ ಅಷ್ಟೇ ಎಂದ.

ಈ ಮಾತುಕತೆಯನ್ನು ಸದ್ದಿಲ್ಲದೆ ಕೇಳಿಸಿಕೊಳ್ಳುತ್ತಿದ್ದ ಸೊಸೆ ಮತ್ತು ಮೊಮ್ಮಕ್ಕಳ ಮನಸ್ಸಿಗೂ ಆ ಕ್ಷಣ ಬಹಳ ಆಳವಾದ ಅನುಭವ ನೀಡಿತು. ಆ ಮನೆಯ ನಾಲ್ಕು ಗೋಡೆಗಳ ನಡುವೆ ನಡೆದದ್ದು ಒಂದು ಸಾಮಾನ್ಯ ಮಾತುಕತೆಯಲ್ಲ. ಅದು ಮೂರು ತಲೆಮಾರುಗಳಿಗೆ ಸಂಸ್ಕಾರದ ಅರ್ಥ ತಿಳಿಸಿದ ಅಮೂಲ್ಯ ಕ್ಷಣವಾಗಿತ್ತು.

ಅಂದು ಅಂಗಡಿಯವನು ಕಲಿಸಿದ ಪಾಠ… ಇಂದು ಮಗ ತಂದೆಗೆ ನೆನಪಿಸಿದ!

ಈ ಕಥೆಯಲ್ಲಿರುವ ಅತ್ಯಂತ ಸುಂದರವಾದ ಸಂಗತಿ ಏನು ಗೊತ್ತೇ? ಸುಮಾರು ಮೂವತ್ತು ವರ್ಷಗಳ ಹಿಂದೆ, ಇದೇ ತಂದೆ ಚಿಕ್ಕ ಹುಡುಗನಾಗಿದ್ದಾಗ, ತನ್ನ ತಂದೆಯ ಜೇಬಿನಿಂದ ಎರಡು ರೂಪಾಯಿ ತೆಗೆದುಕೊಂಡು ಹೋಗಿದ್ದ. ಆಗ ಅಂಗಡಿಯವನು ಅವನನ್ನು ಬೈಯದೆ, ಅವಮಾನಿಸದೆ, ಪ್ರೀತಿಯಿಂದ ತಿದ್ದಿದ್ದ. ತಪ್ಪನ್ನು ಒಪ್ಪಿಕೊಳ್ಳುವುದು ಮತ್ತು ಅದನ್ನು ಸರಿಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ಕಲಿಸಿದ್ದ. ಆ ಪಾಠ ಅವನ ಮನಸ್ಸಿನಲ್ಲಿ ಉಳಿದಿತ್ತು.

ಇಂದು ಅದೇ ಹುಡುಗ ದೊಡ್ಡವನಾಗಿ ತನ್ನ ತಂದೆಯ ತಪ್ಪನ್ನು ಪ್ರೀತಿಯಿಂದ ತಿದ್ದುತ್ತಿದ್ದಾನೆ. ಅಂದು ಅಂಗಡಿಯವನು ಅವನಿಗೆ ನೀಡಿದ್ದ ಸಂಸ್ಕಾರದ ಬೆಳಕು, ಇಂದು ಅವನ ಮೂಲಕ ತಂದೆಯ ಮನಸ್ಸಿಗೂ ತಲುಪಿದೆ. ಜೀವನದಲ್ಲಿ ನಾವು ಕಲಿಯುವ ಪಾಠಗಳು ಯಾವಾಗ, ಯಾರ ಮೂಲಕ ನಮ್ಮ ಬಳಿಗೆ ಮರಳಿ ಬರುತ್ತವೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ!

ಸಂಸ್ಕಾರಕ್ಕೆ ವಯಸ್ಸಿನ ಮಿತಿಯಿಲ್ಲ!

ಸಾಮಾನ್ಯವಾಗಿ ಹಿರಿಯರು ಕಿರಿಯರಿಗೆ ಬುದ್ಧಿ ಹೇಳಬೇಕು, ತಂದೆ-ತಾಯಿ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದು ನಾವು ಭಾವಿಸುತ್ತೇವೆ. ಅದು ನಿಜವೇ. ಆದರೆ ಸಂಸ್ಕಾರವೆಂಬುದು ಹಿರಿಯರಿಂದ ಕಿರಿಯರಿಗೆ ಮಾತ್ರ ಹರಿಯುವ ಜ್ಞಾನವಲ್ಲ. ಅದು ಒಳ್ಳೆಯ ಮನಸ್ಸಿನಿಂದ ಯಾರಿಂದ ಬೇಕಾದರೂ ಯಾರಿಗಾದರೂ ತಲುಪಬಹುದು.

ಅಂದು ಆ ಅಂಗಡಿಯವನು ಆ ಬಾಲಕನನ್ನು ಶಿಕ್ಷಿಸಿದ್ದರೆ, ಬಹುಶಃ ಅವನ ಮನಸ್ಸಿನಲ್ಲಿ ಭಯ ಮಾತ್ರ ಉಳಿಯುತ್ತಿತ್ತು. ಆದರೆ ಪ್ರೀತಿಯಿಂದ ತಿದ್ದಿದ್ದರಿಂದ ಪ್ರಾಮಾಣಿಕತೆಯ ಪಾಠ ಉಳಿಯಿತು. ಅದೇ ರೀತಿ, ಮಗ ತನ್ನ ತಂದೆಯನ್ನು ಎಲ್ಲರ ಮುಂದೆ ಅವಮಾನಿಸಬಹುದಿತ್ತು. ನೀವು ಸುಳ್ಳು ಹೇಳಿದ್ದೀರಿ ಎಂದು ಪ್ರಶ್ನಿಸಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ತಂದೆಯ ಗೌರವಕ್ಕೆ ಧಕ್ಕೆ ಬರದಂತೆ, ಅವರ ಮನಸ್ಸಿಗೆ ನೋವಾಗದಂತೆ ಸತ್ಯವನ್ನು ಅರಿತುಕೊಳ್ಳಲು ಅವಕಾಶ ನೀಡಿದ. ಇದಕ್ಕಿಂತ ದೊಡ್ಡ ಸಂಸ್ಕಾರ ಮತ್ತೇನು ಬೇಕು?

ಮಕ್ಕಳು ತಪ್ಪು ಮಾಡಿದಾಗ ಅವರನ್ನು ತಿದ್ದುವ ಹೊಣೆ ತಂದೆ-ತಾಯಿಯರದ್ದು. ಆದರೆ ತಂದೆ-ತಾಯಿಯರು ತಪ್ಪು ಮಾಡಿದಾಗ ಅವರನ್ನು ಪ್ರೀತಿಯಿಂದ ತಿದ್ದುವ ಜವಾಬ್ದಾರಿ ಮಕ್ಕಳಿಗೂ ಇದೆ. ಅದೇ ರೀತಿ ಸಮಾಜದಲ್ಲಿರುವ ಪ್ರತಿಯೊಬ್ಬರೂ ಪರಸ್ಪರ ಗೌರವದಿಂದ ನಡೆದುಕೊಂಡು, ತಪ್ಪನ್ನು ತಿದ್ದುವ ಮನೋಭಾವ ಬೆಳೆಸಿಕೊಳ್ಳಬೇಕು.

ತಪ್ಪು ಮಾಡುವುದು ಸಹಜ ಕಣೋ… ಅದನ್ನು ತಿದ್ದಿ ನಡೆಯುವುದು ಮನುಜ ಕಣೋ!

ನಾವು ಮಕ್ಕಳಿಗೆ ಎಷ್ಟು ಆಸ್ತಿ ಮಾಡಿಟ್ಟಿದ್ದೇವೆ ಎಂಬುದಕ್ಕಿಂತ, ಎಂತಹ ಮೌಲ್ಯಗಳನ್ನು ಕಲಿಸಿದ್ದೇವೆ ಎಂಬುದೇ ಮುಖ್ಯ. ಏಕೆಂದರೆ ಹಣ, ಮನೆ, ಆಸ್ತಿ ಒಂದು ದಿನ ಕಳೆದುಹೋಗಬಹುದು. ಆದರೆ ಬಾಲ್ಯದಲ್ಲಿ ಕಲಿತ ಪ್ರಾಮಾಣಿಕತೆ, ಪ್ರೀತಿ, ಗೌರವ ಮತ್ತು ಮಾನವೀಯತೆ ಜೀವನಪೂರ್ತಿ ನಮ್ಮೊಂದಿಗೆ ಇರುತ್ತವೆ.

ಕೊನೆಗೆ ಒಂದೇ ಮಾತು…

ಸಂಸ್ಕಾರ ಕಲಿಯಲು ವಯಸ್ಸಿನ ಹಂಗಿಲ್ಲ; ಬುದ್ಧಿ ಹೇಳಲು ದೊಡ್ಡವರಾಗಬೇಕಿಲ್ಲ; ತಪ್ಪನ್ನು ಒಪ್ಪಿಕೊಳ್ಳಲು ಚಿಕ್ಕವರಾಗಬೇಕಿಲ್ಲ. ಪ್ರೀತಿಯಿಂದ ಹೇಳುವ ಒಂದು ಒಳ್ಳೆಯ ಮಾತು, ತಲೆಮಾರುಗಳ ನಡುವಿನ ಅಂತರವನ್ನೇ ಅಳಿಸಬಲ್ಲದು ಅಲ್ವೇ?

ಏನಂತೀರೀ?
ನಿಮ್ಮವನೇ ಶ್ರೀಮಂತ

Leave a Reply