ವಿದೇಶಿ ತಂತ್ರಜ್ಞಾನವನ್ನು ಅವಲಂಬಿಸದೆ, ಭಾರತದ ವಿಮಾನಯಾನ ಸುರಕ್ಷತೆಗೆ ಸ್ವದೇಶಿ ಪರಿಹಾರ ಕಂಡುಕೊಟ್ಟ ಮಹಿಳಾ ವಿಜ್ಞಾನಿ, ಅವರ ಸಾಧನೆಯ ಹಿಂದಿದೆ ದಶಕಗಳ ಪರಿಶ್ರಮ, ಸಂಶೋಧನೆ ಮತ್ತು ದೇಶಸೇವೆ.
ಚಳಿಗಾಲದ ಬೆಳಗಿನ ಜಾವ. ದಟ್ಟವಾದ ಮಂಜು ಇಡೀ ವಿಮಾನ ನಿಲ್ದಾಣವನ್ನು ಆವರಿಸಿದೆ. ರನ್ವೇ ಎಲ್ಲಿದೆ, ವಿಮಾನ ಎಷ್ಟು ದೂರದವರೆಗೆ ಸ್ಪಷ್ಟವಾಗಿ ಕಾಣುತ್ತದೆ ಎಂಬುದನ್ನು ನಿರ್ಧರಿಸುವುದೇ ಕಷ್ಟ. ಇಂತಹ ಸಂದರ್ಭದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸುವುದು ಪೈಲಟ್ಗಳಿಗೆ ದೊಡ್ಡ ಸವಾಲು. ಆದರೆ ಪ್ರಯಾಣಿಕರಿಗೆ ಕಾಣದಂತೆ, ವಿಮಾನ ನಿಲ್ದಾಣದ ಹಿನ್ನಲೆಯಲ್ಲಿ ಕಾರ್ಯನಿರ್ವಹಿಸುವ ಒಂದು ತಂತ್ರಜ್ಞಾನ ಪೈಲಟ್ಗಳಿಗೆ ಅತ್ಯಂತ ಮಹತ್ವದ ಮಾಹಿತಿಯನ್ನು ಒದಗಿಸುತ್ತದೆ. ಆ ತಂತ್ರಜ್ಞಾನವೇ ‘ದೃಷ್ಟಿ’ (Drishti). ಭಾರತದ ವಿಮಾನಯಾನ ಸುರಕ್ಷತೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಈ ಸ್ವದೇಶಿ ವ್ಯವಸ್ಥೆಯ ಅಭಿವೃದ್ಧಿಯ ಹಿಂದೆ ಇದ್ದ ನಮ್ಮ ಬೆಂಗಳೂರಿನ ಹೆಮ್ಮೆಯ ವಿಜ್ಞಾನಿ ಡಾ. ಶುಭಾ ವಿ. ಅಯ್ಯಂಗಾರ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಪ್ರವೇಶವೇ ಅಪರೂಪವಾಗಿದ್ದ ಕಾಲದಲ್ಲಿ ತಮ್ಮ ಪ್ರತಿಭೆ, ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಉನ್ನತ ಸ್ಥಾನಕ್ಕೇರಿದ ಶುಭಾ ಅಯ್ಯಂಗಾರ್ ಅವರ ಜೀವನ ಪಯಣ ಇಂದಿನ ಯುವತಿಯರಿಗೆ ಮಾತ್ರವಲ್ಲ, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸು ಕಾಣುವ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ.
ಬಾಲ್ಯ ಮತ್ತು ಶಿಕ್ಷಣದ ಹಾದಿ

ಡಾ. ಶುಭಾ ವೆಂಕಟೇಶ ಅಯ್ಯಂಗಾರ್ ಅವರು 1954ರ ಮೇ 14ರಂದು ಬೆಂಗಳೂರಿನಲ್ಲಿ ಶ್ರೀಮತಿ ರಾಜಮ್ಮ ಮತ್ತು ಶ್ರೀ ವೆಂಕಟೇಶ ಐಯ್ಯಂಗಾರ್ ಅವರ ಒಂಭತ್ತು ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದರು. ಆಸ್ತಿಕ ಸಂಪ್ರದಾಯಸ್ಥರ ಮನೆಯಲ್ಲಿ ಕಿರಿಯವರಾಗಿದ್ದರೂ, ಬಾಲ್ಯದಿಂದಲೇ ವಿದ್ಯಾಭ್ಯಾಸದ ಕಡೆಗೆ ವಿಶೇಷ ಒಲವನ್ನು ಅವರ ತಂದೆಯವರು ಮೂಡಿಸಿದ್ದರು.ಆ ಕಾಲದಲ್ಲಿ ಹೆಣ್ಣುಮಕ್ಕಳು ಪ್ರೌಢ ಶಿಕ್ಷಣ ಮುಗಿಯುತ್ತಿದ್ದಂತೆಯೇ ಮನೆಯಲ್ಲಿ ಹಾಡು ಹಸೆ ಕಲಿತುಕೊಂಡು ತಂದೆ ತೋರಿಸಿದ ಗಂಡಿನೊಂದಿಗೆ ಮದುವೆಯಾಗಿ ಅಡುಗೆ ಮನೆಯಲ್ಲಿ ಮುಸುರೇ ತಿಕ್ಕಿಕೊಂಡು ಇರುವಂತಹ ಸಮಯದಲ್ಲಿ ಅವರ ತಂದೆ ವೆಂಕಟೇಶ ಐಯ್ಯಂಗಾರ್ ಅವರಿಗೆ ತಮ್ಮ ಮಗಳು ಉನ್ನತ ಶಿಕ್ಷಣ, ಅದರಲ್ಲೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುಂದುವರಿಯಲೇ ಬೇಕೆಂಬ ಆಸೆ ಇದ್ದ ಕಾರಣ ಅವರು ಎಲ್ಲ ರೀತಿಯ ಸಹಕಾರ ಮತ್ತು ಪ್ರೋತ್ಸಾಹಗಳನ್ನು ನೀಡಿದರು. ಅದರ ಫಲವೆಂಬಂತೆ SSLC (ಕನ್ನಡ ಮಾಧ್ಯಮ) & PUC (English medium) ಎರಡರಲ್ಲೂ ರ್ಯಾಂಕ್ ನೊಂದಿಗೆ ಉತ್ತೀರ್ಣರಾಗಿದ್ದರು.
ತಂದೆಯ ಸ್ಥಾನದಲ್ಲಿ ನಿಂತ ನ್ಯಾಷನಲ್ ಕಾಲೇಜ್ ನರಸಿಂಹಯ್ಯನವರು
ಮಗಳನ್ನು ಪಿಎಚ್ಡಿ ಮಾಡಿಸಲೇ ಬೇಕೆಂಬ ಕನಸು ಹೊತ್ತಿದ್ದ ವೆಂಕಟೇಶ ಐಯ್ಯಂಗಾರು ಮಗಳು ಪಿಯೂಸಿ ಮುಗಿಸುವಷ್ಟರಲ್ಲೇ ಅಕಾಲಿಕವಾಗಿ ಅಸುನೀಗಿದಾಗ, ನ್ಯಾಷನಲ್ ಕಾಲೇಜಿನ ಅಂದಿನ ಪ್ರಾಂಶುಪಾಲರಾಗಿದ್ದಂತಹ ಶ್ರೀ ಹೆಚ್ ನರಸಿಂಹಯ್ಯನವರು ತಂದೆಯ ಸ್ಥಾನದಲ್ಲಿ ನಿಂತು ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡಿದ್ದಲ್ಲದೇ ತನ್ನ ಶೈಕ್ಷಣಿಕ ಅರ್ಹತೆಯಿಂದ ಗಳಿಸಿದ್ದ ಎಲ್ಲಾ ರೀತಿಯ ವಿದ್ಯಾರ್ಥಿವೇತನ ಸಕಾಲಕ್ಕೆ ಬರುವಂತೆ ಮಾಡುವ ಮೂಲಕ ಶುಭಾ ಅವರ ವಿದ್ಯಾಭ್ಯಾಸ ಕುಂಠಿತವಾಗದಂತೆ ನೋಡಿಕೊಂಡರು.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್ ವಿಷಯಗಳಲ್ಲಿ ವಿಶ್ವವಿದ್ಯಾಲಯಕ್ಕೇ ಮೊದಲ ರ್ಯಾಂಕ್ ನೊಂದಿಗೆ ಪದವಿ ಪಡೆದ ನಂತರ ಉನ್ನತ ಸ್ನಾತಕೋತ್ತರ ಪದವಿಗಾಗಿ ಮತ್ತೊಮ್ಮೆ ಹೆಚ್ ನರಸಿಂಹಯ್ಯನವರ ಅಗ್ರಹದ ಮೇರೆಗೆ ನ್ಯಾಷನಲ್ ಕಾಲೇಜಿಗೆ ಬಂದು 1974ರಲ್ಲಿ ಎಂ.ಎಸ್ಸಿ. ಭೌತಶಾಸ್ತ್ರ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಲ್ಲದೆ, ಚಿನ್ನದ ಪದಕಗಳನ್ನೂ ಗಳಿಸಿದರು. ಅವರ ಶೈಕ್ಷಣಿಕ ಸಾಧನೆಗೆ ಭಾರತ ಸರ್ಕಾರದ ಮೆರಿಟ್ ವಿದ್ಯಾರ್ಥಿವೇತನವೂ ದೊರೆಯಿತು.
ಹೀಗೆ ಎಂ.ಎಸ್ಸಿ. ಭೌತಶಾಸ್ತ್ರ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದದ್ದಕ್ಕಾಗಿ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನವಿಲ್ಲದೇ ನೇರವಾಗಿ ವಿಶೇಷ ಅರ್ಹತೆಯ ಮೇರೆಗೆ ಸಿಎಸ್ಐಆರ್-ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ (ಎನ್ಎಎಲ್)ನಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿಕೊಂಡು ಅಲ್ಲಿಯೂ ಸಹಾ ತಮ್ಮ ಬುದ್ದಿವಂತಿಕೆ ಮತ್ತು ಕಠಿಣ ಪರಿಶ್ರಮದಿಂದಾಗಿ ಕೆಲವೇ ವರ್ಷಗಳಲ್ಲಿ ತಂದೆಯ ಅಸೆಯಂತೆ ಪಿಎಚ್ಡಿ ಪದವಿಯನ್ನು ಮುಗಿಸಿ ಎನ್ಎಎಲ್ ಸಂಸ್ಥೆಯಲ್ಲೇ ವಿಜ್ಞಾನಿಯಗಿ ತಮ್ಮ ಹುದ್ದೆಯನ್ನು ಪ್ರಾರಂಭಿಸಿದರು
1974ರಲ್ಲಿ ಆರಂಭವಾದ ಸಂಶೋಧನಾ ಪಯಣ
1974ರಲ್ಲಿ ಬೆಂಗಳೂರಿನ CSIR–ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ (NAL) ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಶುಭಾ ಅಯ್ಯಂಗಾರ್, ಸುಮಾರು 46 ವರ್ಷಗಳ ಕಾಲ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದರು. ವಿಮಾನಯಾನ, ರಕ್ಷಣಾ ತಂತ್ರಜ್ಞಾನ ಮತ್ತು ಸ್ವದೇಶಿ ಉಪಕರಣಗಳ ಅಭಿವೃದ್ಧಿ ಸೇರಿದಂತೆ ಹಲವು ಮಹತ್ವದ ಸಂಶೋಧನಾ ಕ್ಷೇತ್ರಗಳಲ್ಲಿ ಅವರು ಕೆಲಸ ಮಾಡಿದರು. ವಿಶೇಷವಾಗಿ ವಿಮಾನಗಳ ಸುರಕ್ಷಿತ ಹಾರಾಟ ಮತ್ತು ಪ್ರತಿಕೂಲ ಹವಾಮಾನದಲ್ಲಿಯೂ ವಿಮಾನ ಕಾರ್ಯಾಚರಣೆ ಸುಗಮವಾಗುವಂತೆ ಮಾಡುವ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಅವರ ಪಾತ್ರ ಗಮನಾರ್ಹವಾಗಿದೆ. ವಿಜ್ಞಾನ ಎಂದರೆ ಕೇವಲ ಪ್ರಯೋಗಾಲಯದಲ್ಲಿ ನಡೆಯುವ ಪ್ರಯೋಗಗಳಲ್ಲ. ಜನರ ಬದುಕಿಗೆ ಉಪಯುಕ್ತವಾಗುವ ಪರಿಹಾರಗಳನ್ನು ಕಂಡುಕೊಳ್ಳುವುದೂ ವಿಜ್ಞಾನದ ಮುಖ್ಯ ಉದ್ದೇಶ ಎಂಬುದಕ್ಕೆ ಅವರ ವೃತ್ತಿಜೀವನವೇ ಸಾಕ್ಷಿ.
ದೃಷ್ಟಿ – ಮಂಜಿನಲ್ಲೂ ವಿಮಾನಗಳಿಗೆ ದಾರಿ ತೋರಿದ ಸ್ವದೇಶಿ ತಂತ್ರಜ್ಞಾನ

ಶುಭಾ ಅಯ್ಯಂಗಾರ್ ಅವರ ವೃತ್ತಿಜೀವನದ ಅತ್ಯಂತ ಮಹತ್ವದ ಸಾಧನೆಗಳಲ್ಲಿ ದೃಷ್ಟಿ ರನ್ವೇ ದೃಶ್ಯಮಾನತೆ ಅಳೆಯುವ ವ್ಯವಸ್ಥೆ ಪ್ರಮುಖವಾದುದು. ದಟ್ಟವಾದ ಮಂಜು, ಮಳೆ, ಧೂಳು ಅಥವಾ ಹೊಗೆಯಿಂದ ವಿಮಾನ ನಿಲ್ದಾಣದ ರನ್ವೇ ಸ್ಪಷ್ಟವಾಗಿ ಕಾಣದಿದ್ದಾಗ ವಿಮಾನವನ್ನು ಇಳಿಸುವುದು ಅಪಾಯಕಾರಿ. ಇಂತಹ ಸಂದರ್ಭಗಳಲ್ಲಿ ಪೈಲಟ್ಗಳು ರನ್ವೇಯಲ್ಲಿ ಎಷ್ಟು ದೂರದವರೆಗೆ ಕಾಣುತ್ತಿದೆ ಎಂಬ ನಿಖರ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಇದನ್ನು ತಾಂತ್ರಿಕವಾಗಿ Runway Visual Range (RVR) ಎಂದು ಕರೆಯಲಾಗುತ್ತದೆ.
ಹಿಂದೆ ಇಂತಹ ಮಾಹಿತಿಯನ್ನು ಪಡೆಯಲು ಭಾರತವು ವಿದೇಶಗಳಿಂದ ಆಮದು ಮಾಡಿಕೊಂಡ ದುಬಾರಿ ಉಪಕರಣಗಳನ್ನು ಅವಲಂಬಿಸಬೇಕಾಗಿತ್ತು. ಅವುಗಳ ಖರೀದಿ, ನಿರ್ವಹಣೆ ಮತ್ತು ಬಿಡಿಭಾಗಗಳಿಗಾಗಿ ಹೆಚ್ಚಿನ ವೆಚ್ಚವಾಗುತ್ತಿತ್ತು. ಈ ಸಮಸ್ಯೆಗೆ ಭಾರತದ ಪರಿಸ್ಥಿತಿಗೆ ಹೊಂದುವ, ಕಡಿಮೆ ವೆಚ್ಚದ ಸ್ವದೇಶಿ ಪರಿಹಾರವನ್ನು ರೂಪಿಸುವ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಶುಭಾ ಅಯ್ಯಂಗಾರ್ ಅವರು ಭಾರತೀಯ ಹವಾಮಾನ ಇಲಾಖೆಯ (IMD) ಸಹಯೋಗದೊಂದಿಗೆ ರನ್ವೇ ದೃಶ್ಯಮಾನತೆ ಅಳೆಯುವ ಸ್ವದೇಶಿ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದರ ಫಲವೇ ದೃಷ್ಟಿ (Drishti) ಎಂಬ ಉಪಕರಣ.
ಈ ವ್ಯವಸ್ಥೆಯು ರನ್ವೇ ಸುತ್ತಲಿನ ವಾತಾವರಣದ ಸ್ಪಷ್ಟತೆಯನ್ನು ಅಳೆಯುತ್ತದೆ. ಮಂಜು, ಮಳೆ ಮತ್ತು ಧೂಳಿನಂತಹ ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಪೈಲಟ್ಗಳು ಹಾಗೂ ವಿಮಾನ ನಿಲ್ದಾಣದ ನಿಯಂತ್ರಣ ಸಿಬ್ಬಂದಿಗೆ ಅಗತ್ಯವಾದ ದೃಶ್ಯಮಾನತೆಯ ಮಾಹಿತಿಯನ್ನು ಒದಗಿಸುತ್ತದೆ. ಈ ಉಪಕರಣವು ಸುಮಾರು ನಾಲ್ಕು ಮೀಟರ್ಗಳಷ್ಟು ಕಡಿಮೆ ದೃಶ್ಯಮಾನತೆಯನ್ನೂ ಅಳೆಯುವ ಸಾಮರ್ಥ್ಯ ಹೊಂದಿದೆ.
2011ರಲ್ಲಿ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದರ ಪ್ರಾಯೋಗಿಕ ಬಳಕೆ ಆರಂಭವಾಯಿತು. ನಂತರ ಕೋಲ್ಕತ್ತಾ ಮತ್ತು ಲಖನೌ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿಯೂ ಈ ತಂತ್ರಜ್ಞಾನ ಬಳಕೆಗೆ ಬಂದಿತು. ಇಂದು ದೇಶದ ಹಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನಯಾನ ಸುರಕ್ಷತೆಗೆ ಇದು ನೆರವಾಗುತ್ತಿದೆ. ದೃಷ್ಟಿಯ ಮಹತ್ವ ಕೇವಲ ಒಂದು ಉಪಕರಣದ ಆವಿಷ್ಕಾರಕ್ಕೆ ಸೀಮಿತವಾಗಿಲ್ಲ. ದುಬಾರಿ ವಿದೇಶಿ ಉಪಕರಣಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಭಾರತದ ವಿಜ್ಞಾನಿಗಳು ನಮ್ಮದೇ ಸಮಸ್ಯೆಗಳಿಗೆ ನಮ್ಮದೇ ತಂತ್ರಜ್ಞಾನದಿಂದ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಇದು ತೋರಿಸಿಕೊಟ್ಟಿದೆ. it’s not make in India, it is made in india ಆತ್ಮ ನಿರ್ಭರ ಭಾರತದ ಕೊಡುಗೆ
ಆನಂದ್ ಮಹೀಂದ್ರಾ ಅವರ ಮಂಡೇ ಮೋಟಿವೇಷನ್, ಡಾ. ಶುಭಾ ವಿ. ಅಯ್ಯಂಗಾರ್

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಇತ್ತೀಚೆಗೆ ಭಾರತದ ಖ್ಯಾತ ವಿಜ್ಞಾನಿಯೊಬ್ಬರನ್ನು ತಮ್ಮ ‘ಮಂಡೇ ಮೋಟಿವೇಷನ್’ (Monday Motivation) ಎಂದು ಬಣ್ಣಿಸಿದ್ದು, ಈ ಮೂಲಕ ದೇಶದ ಗಮನವನ್ನು ಅಪರೂಪದ ಸಾಧಕಿಯೊಬ್ಬರತ್ತ ಸೆಳೆದಿದ್ದಾರೆ. ಸಾಮಾನ್ಯವಾಗಿ ಸ್ಟಾರ್ಟ್ಅಪ್ಗಳ ಹೊಸ ಪ್ರಯೋಗಗಳು, ತಂತ್ರಜ್ಞಾನದ ಅದ್ಭುತ ಆವಿಷ್ಕಾರಗಳು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಸಾಧನೆಗಳನ್ನು ಪ್ರೇರಣೆಯಾಗಿ ಗುರುತಿಸುವುದು ಸಹಜ. ಆದರೆ, ಆನಂದ್ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಏನಾದರೂ ಸಮಸ್ಯೆ ಎದುರಾದಾಗ ಮಾತ್ರ ಜನರ ಗಮನಕ್ಕೆ ಬರುವ, ಆದರೆ ಪ್ರತಿದಿನ ಸಾವಿರಾರು ವಿಮಾನಗಳ ಸುರಕ್ಷಿತ ಹಾರಾಟಕ್ಕೆ ಮಹತ್ವದ ಕೊಡುಗೆ ನೀಡುವ ಕ್ಷೇತ್ರದಲ್ಲಿ ಕೆಲಸ ಮಾಡಿರುವ 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಶುಭಾ ಅವರ ಸಾಧನೆ ಭಾರತದ ವಾಯುಯಾನ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅವರು ನಡೆಸಿರುವ ಸಂಶೋಧನೆ ಮತ್ತು ತಾಂತ್ರಿಕ ಕೊಡುಗೆಗಳು ಗಮನಾರ್ಹವಾಗಿವೆ.
ಈ ಸಂದರ್ಭದಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತವೊಂದು ಮತ್ತೆ ರನ್ವೇ ಗೋಚರತೆ ಮತ್ತು ವಿಮಾನಯಾನ ಸುರಕ್ಷತೆಯ ಮಹತ್ವವನ್ನು ನೆನಪಿಸುತ್ತದೆ. 2026ರ ಜನವರಿ 28ರಂದು ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದ ವಿಮಾನವೊಂದು ಅಪಘಾತಕ್ಕೀಡಾಗಿ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಹಲವರು ಮೃತಪಟ್ಟ ಘಟನೆ ದೇಶವನ್ನು ಬೆಚ್ಚಿಬೀಳಿಸಿತ್ತು. ಆರಂಭಿಕ ಮಾಧ್ಯಮ ವರದಿಗಳಲ್ಲಿ ರನ್ವೇ ಸಮೀಪದ ಕಡಿಮೆ ಗೋಚರತೆಯೂ ತನಿಖೆಯ ಪರಿಶೀಲನೆಯಲ್ಲಿರುವ ಅಂಶಗಳಲ್ಲಿ ಒಂದೆಂದು ಉಲ್ಲೇಖಿಸಲಾಗಿತ್ತು. ಇಂತಹ ಘಟನೆಗಳು ವಿಮಾನ ನಿಲ್ದಾಣಗಳಲ್ಲಿ ಹವಾಮಾನ ಪರಿಸ್ಥಿತಿಯನ್ನು ನಿಖರವಾಗಿ ಅಳೆಯುವ ಮತ್ತು ಪೈಲಟ್ಗಳಿಗೆ ವಿಶ್ವಾಸಾರ್ಹ ಮಾಹಿತಿ ಒದಗಿಸುವ ಡಾ. ಶುಭಾ ವಿ. ಅಯ್ಯಂಗಾರ್ ಅವರಂತಹ ವಿಜ್ಞಾನಿಗಳ ಸಂಶೋಧನೆಯ ಅಗತ್ಯವನ್ನು ಸ್ಪಷ್ಟಪಡಿಸುತ್ತವೆ ಮತ್ತು ಇನ್ನಷ್ಟು ಮಹತ್ವ ಪಡೆದುಕೊಳ್ಳುತ್ತವೆ.
ರಕ್ಷಣಾ ಕ್ಷೇತ್ರದಲ್ಲಿಯೂ ಮಹತ್ವದ ಕೊಡುಗೆ

ಶುಭಾ ಅಯ್ಯಂಗಾರ್ ಅವರ ಸಂಶೋಧನಾ ಆಸಕ್ತಿ ವಿಮಾನ ನಿಲ್ದಾಣಗಳ ಸುರಕ್ಷತೆಗೆ ಮಾತ್ರ ಸೀಮಿತವಾಗಿರಲಿಲ್ಲ. ಭಾರತದ ರಕ್ಷಣಾ ಮತ್ತು ಏರೋಸ್ಪೇಸ್ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಅವರು ಕೆಲಸ ಮಾಡಿದ್ದಾರೆ. ಅತಿ ಹೆಚ್ಚಿನ ಉಷ್ಣಾಂಶವನ್ನು ತಡೆದುಕೊಳ್ಳುವ ಸಾಮರ್ಥ್ಯವಿರುವ ಸ್ವದೇಶಿ ಘಟಕಗಳ ಅಭಿವೃದ್ಧಿ, ಕ್ಷಿಪಣಿ ವ್ಯವಸ್ಥೆಗಳು ಹಾಗೂ ಉನ್ನತ ವೇಗದ ಎಂಜಿನ್ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಸಂಶೋಧನೆಗಳಲ್ಲಿ ಅವರ ಕೊಡುಗೆಯನ್ನು ಉಲ್ಲೇಖಿಸಲಾಗಿದೆ. ಸುಮಾರು 3,000 ಕೆಲ್ವಿನ್ಗಳಷ್ಟು ಉಷ್ಣಾಂಶದಲ್ಲಿಯೂ ಕಾರ್ಯನಿರ್ವಹಿಸಬಲ್ಲ ಘಟಕಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಂಶೋಧನಾ ಕಾರ್ಯಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದರು. ಇಂತಹ ತಂತ್ರಜ್ಞಾನಗಳು ಕ್ಷಿಪಣಿ ವ್ಯವಸ್ಥೆಗಳು, ರಾಮ್ಜೆಟ್ ಮತ್ತು ಸ್ಕ್ರ್ಯಾಮ್ಜೆಟ್ ಎಂಜಿನ್ಗಳಂತಹ ಅತ್ಯಾಧುನಿಕ ಕ್ಷೇತ್ರಗಳಿಗೆ ಅಗತ್ಯವಾಗಿವೆ. ಅವರ ಕೆಲವು ಸಂಶೋಧನಾ ವರದಿಗಳು ನಾಸಾದ ಅಧಿಕೃತ ಪ್ರಕಟಣೆಗಳಲ್ಲಿಯೂ ಉಲ್ಲೇಖಿಸಲ್ಪಟ್ಟಿವೆ ಎಂದು ಲಭ್ಯವಿರುವ ಜೀವನಚರಿತ್ರೆಯ ಮೂಲಗಳು ತಿಳಿಸುತ್ತವೆ.
ನಾಲ್ಕು ದಶಕಗಳಿಗೂ ಮೀರಿದ ಸೇವೆ
1974ರಲ್ಲಿ ವಿಜ್ಞಾನಿಯಾಗಿ NAL ಸಂಸ್ಥೆಗೆ ಸೇರಿದ ಶುಭಾ ಅಯ್ಯಂಗಾರ್ ಅವರು 2020ರಲ್ಲಿ ನಿವೃತ್ತರಾಗುವವರೆಗೂ ಸುಮಾರು 46 ವರ್ಷಗಳ ಕಾಲ ಅಲ್ಲಿಯೇ ಸೇವೆ ಸಲ್ಲಿಸಿದರು. ಅವರ ವೃತ್ತಿಜೀವನವು ಭಾರತದ ಏರೋಸ್ಪೇಸ್ ಸಂಶೋಧನಾ ಕ್ಷೇತ್ರದ ಬೆಳವಣಿಗೆಯೊಂದಿಗೆ ಬೆಸೆದುಕೊಂಡಿತ್ತು. ಸಾಮಾನ್ಯವಾಗಿ ವಿಜ್ಞಾನಿಗಳ ಸಾಧನೆಗಳು ಪ್ರಯೋಗಾಲಯಗಳ ಒಳಗೆ ಅಥವಾ ಸಂಶೋಧನಾ ಪ್ರಕಟಣೆಗಳಲ್ಲಿ ಮಾತ್ರ ಉಳಿಯುತ್ತವೆ. ಆದರೆ ಶುಭಾ ಅವರ ಸಂಶೋಧನೆಯ ಫಲಿತಾಂಶವನ್ನು ಪ್ರತಿದಿನ ಸಾವಿರಾರು ವಿಮಾನ ಪ್ರಯಾಣಿಕರ ಸುರಕ್ಷತೆಯೊಂದಿಗೆ ನೇರವಾಗಿ ಸಂಬಂಧಿಸಬಹುದಾಗಿದೆ. ಮಂಜು ಕವಿದ ಬೆಳಗಿನ ಜಾವ ವಿಮಾನವೊಂದು ಸುರಕ್ಷಿತವಾಗಿ ಇಳಿಯುವಾಗ, ಅದರ ಹಿಂದೆ ಇಂತಹ ವಿಜ್ಞಾನಿಗಳ ವರ್ಷಗಳ ಪರಿಶ್ರಮವೂ ಅಡಗಿರುತ್ತದೆ.
ಶೃಂಗೇರಿ ಶಾರದಾ ಪೀಠದೊಂದಿಗೆ ಡಾ. ಶುಭಾ ವಿ. ಅಯ್ಯಂಗಾರ್ ಅವರ ಆತ್ಮೀಯ ನಂಟು

NAL ಸಂಸ್ಥೆಯಿಂದ ನಿವೃತ್ತರಾದ ನಂತರವೂ ಡಾ. ಶುಭಾ ವಿ. ಅಯ್ಯಂಗಾರ್ ಅವರು ತಮ್ಮ ತಾಂತ್ರಿಕ ಪರಿಣತಿಯನ್ನು ರಾಷ್ಟ್ರಸೇವೆಗೆ ಬಳಸಿಕೊಳ್ಳುವುದನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣಗಳಿಗೆ ಅಗತ್ಯವಿದ್ದ ತಾಂತ್ರಿಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕಾಗಿ ಅವರು ಶೃಂಗೇರಿ ಶಾರದಾ ಪೀಠದ ಅಧೀನದಲ್ಲಿರುವ ಸಂಶೋಧನಾ ಕೇಂದ್ರದೊಂದಿಗೆ ಸಂಪರ್ಕ ಬೆಳೆಸಿದರು. ಅಲ್ಲಿಗೆ ಭೇಟಿ ನೀಡಿದಾಗ ಶೃಂಗೇರಿ ಮಠದ ಕಿರಿಯ ಜಗದ್ಗುರುಗಳ ಆಶೀರ್ವಾದ ಪಡೆಯುವ ಅವಕಾಶವೂ ಅವರಿಗೆ ದೊರೆಯಿತು.
ಅರುಣಾಚಲ ಪ್ರದೇಶದ ಇಟಾನಗರ ವಿಮಾನ ನಿಲ್ದಾಣಕ್ಕೆ ಅಗತ್ಯವಿದ್ದ ವಿಶೇಷ ಉಪಕರಣವೊಂದನ್ನು ಅವರು ತಮ್ಮ ಸ್ವಂತ ಖರ್ಚಿನಲ್ಲಿ ಅಭಿವೃದ್ಧಿಪಡಿಸಿದರು. ಈ ಕಾರ್ಯದಿಂದ ಬಂದ ಆರು ಲಕ್ಷ ರೂಪಾಯಿಗಳ ಲಾಭದಲ್ಲಿ ನಾಲ್ಕೂವರೆ ಲಕ್ಷ ರೂಪಾಯಿಗಳನ್ನು ಶೃಂಗೇರಿ ಶಾರದಾ ಪೀಠದ ಸಂಶೋಧನಾ ಸಂಸ್ಥೆಗೆ ದೇಣಿಗೆಯಾಗಿ ನೀಡಿದರು. ಉಳಿದ ಒಂದೂವರೆ ಲಕ್ಷ ರೂಪಾಯಿಗಳನ್ನು ಉಪಕರಣದ ನಿರ್ಮಾಣಕ್ಕೆ ಶ್ರಮಿಸಿದ ಯಂತ್ರ ನಿರ್ವಾಹಕರು ಮತ್ತು ಇತರ ಸಿಬ್ಬಂದಿಗೆ ಹಂಚಿದರು. ಹೀಗೆ ತಮ್ಮ ಪರಿಶ್ರಮದಿಂದ ಬಂದ ಸಂಪೂರ್ಣ ಲಾಭವನ್ನು ಸಮಾಜದ ಒಳಿತಿಗೆ ವಿನಿಯೋಗಿಸಿ, ಒಂದು ರೂಪಾಯಿಯನ್ನೂ ವೈಯಕ್ತಿಕವಾಗಿ ಉಳಿಸಿಕೊಳ್ಳಲಿಲ್ಲ. ಇದನ್ನು ಶಾರದಾ ಮಾತೆಯ ಆಶೀರ್ವಾದದೊಂದಿಗೆ ರಾಷ್ಟ್ರಕ್ಕೆ ಸಲ್ಲಿಸಿದ ಸೇವೆ ಎಂದು ಅವರು ಭಾವಿಸಿದ್ದು ವಿಶೇಷ.
ಅವರ ಸೇವಾಮನೋಭಾವಕ್ಕೆ ಮತ್ತೊಂದು ಉದಾಹರಣೆಯೆಂದರೆ, ಅವರ ಸೋದರಸಂಬಂಧಿಯೊಬ್ಬರು ತಮ್ಮ ಕಾರ್ಖಾನೆಯನ್ನು ಮುಚ್ಚುವ ಸಂದರ್ಭದಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಉಪಕರಣಗಳನ್ನು ಶೃಂಗೇರಿ ಶಾರದಾ ಪೀಠದ ಸಂಶೋಧನಾ ಸಂಸ್ಥೆಗೆ ದೇಣಿಗೆಯಾಗಿ ನೀಡಿದ್ದು. ಹೀಗೆ ತಮ್ಮ ಕೊಡುಗೆಯ ಜೊತೆಗೆ ಕುಟುಂಬದವರನ್ನೂ ಸಂಶೋಧನಾ ಕಾರ್ಯಗಳಿಗೆ ನೆರವಾಗುವಂತೆ ಪ್ರೇರೇಪಿಸಿದರು.
ವಿಜ್ಞಾನ ಮತ್ತು ಆಧ್ಯಾತ್ಮಿಕತೆಯನ್ನು ಸಮನ್ವಯಗೊಳಿಸಿದ ಡಾ. ಶುಭಾ ಅವರ ಈ ನಡೆ ನಿಜಕ್ಕೂ ಶ್ಲಾಘನೀಯ. ತಮ್ಮ ಜ್ಞಾನವನ್ನು ದೇಶದ ಸೇವೆಗೆ, ಸಾಧನೆಯ ಫಲವನ್ನು ಸಂಶೋಧನೆಗೆ ಮತ್ತು ತಮ್ಮ ಸಂಪರ್ಕಗಳನ್ನು ಸಮಾಜದ ಒಳಿತಿಗೆ ಬಳಸಿಕೊಂಡಿರುವ ಅವರ ವ್ಯಕ್ತಿತ್ವ, ಪ್ರತಿಭೆಯ ಜೊತೆಗೆ ಸೇವಾಭಾವವೂ ಎಷ್ಟು ಮುಖ್ಯ ಎಂಬುದನ್ನು ಸಾರುತ್ತದೆ.
ಸ್ವಂತ ತಂದೆಯ ಹೊರತಾಗಿ ಇನ್ನೂ ಮೂವರನ್ನು ತಂದೆಯ ಸ್ಥಾನದಲ್ಲಿ ಕಾಣುವ ಶುಭಾ ಐಯ್ಯಂಗಾರ್!
ತಮ್ಮ ಬದುಕಿನ ಯಶಸ್ಸು ಮತ್ತು ಸಾಧನೆಯ ಹಾದಿಯಲ್ಲಿ ತಂದೆ ವೆಂಕಟೇಶ್ ಅವರ ಜೊತೆಗೆ ಇನ್ನೂ ಮೂವರು ಮಹನೀಯರ ಕೊಡುಗೆಯನ್ನು ಶುಭಾ ಐಯ್ಯಂಗಾರ್ ಅವರು ಎಂದಿಗೂ ಮರೆಯುವುದಿಲ್ಲ. ಈ ಮೂವರನ್ನೂ ಅವರು ತಮ್ಮ ಜೀವನದಲ್ಲಿ ತಂದೆಯ ಸ್ಥಾನದಲ್ಲಿಯೇ ಗೌರವಿಸುತ್ತಾರೆ. ಅವರ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಪ್ರೀತಿ ಶುಭಾ ಅವರ ವ್ಯಕ್ತಿತ್ವ ಹಾಗೂ ವೃತ್ತಿಜೀವನದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿವೆ.
ಈ ಮೂವರಲ್ಲಿ ಮೊದಲನೆಯವರು ಶಿಕ್ಷಣ ತಜ್ಞ ಹಾಗೂ ಸಮಾಜ ಸುಧಾರಕರಾದ ಹೆಚ್. ನರಸಿಂಹಯ್ಯ (ಹೆಚ್.ಎನ್.). ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಶುಭಾ ಅವರ ಬದುಕಿನಲ್ಲಿ ಮಹತ್ವದ ಪ್ರಭಾವ ಬೀರಿದೆ.
ಎರಡನೆಯವರು ಶುಭಾ ಅವರು ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ (NAL)ನಲ್ಲಿ ವೃತ್ತಿಜೀವನ ಆರಂಭಿಸಿದ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾಗಿದ್ದ ಎಸ್.ಆರ್. ವಲ್ಲೂರಿ. ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸಂಬಂಧಿಯಾಗಿದ್ದ ವಲ್ಲೂರಿ ಅವರು ಶುಭಾ ಅವರಿಗೆ ನೀಡಿದ ಸಹಕಾರ, ಮಾರ್ಗದರ್ಶನ ಮತ್ತು ಪ್ರೋತ್ಸಾಹಕ್ಕೆ ಅವರು ಸದಾ ಕೃತಜ್ಞರಾಗಿದ್ದಾರೆ. ವೃತ್ತಿಜೀವನದ ಆರಂಭದ ದಿನಗಳಲ್ಲಿ ಸೂಕ್ತ ಬೆಂಬಲ ನೀಡಿದ ಅವರ ಪಾತ್ರವನ್ನು ಶುಭಾ ಇಂದಿಗೂ ಗೌರವದಿಂದ ಸ್ಮರಿಸುತ್ತಾರೆ.
ಮೂರನೆಯವರು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್ ಸಿ.ವಿ. ರಾಮನ್ ಅವರ ಮೊದಲ ವಿದ್ಯಾರ್ಥಿಯಾಗಿದ್ದ ಎ. ಜಯರಾಮನ್. ಅಮೆರಿಕದ ಬೆಲ್ ಟೆಲಿಫೋನ್ ಲ್ಯಾಬೊರೇಟರಿಯಲ್ಲಿ ಕಾರ್ಯನಿರ್ವಹಿಸಿದ್ದ ಅವರು, ನಂತರ ಭಾರತಕ್ಕೆ ಮರಳಿ ಶುಭಾ ಕೆಲಸ ಮಾಡುತ್ತಿದ್ದ NALನಲ್ಲಿ ಅಧಿಕ ಒತ್ತಡದ ಪ್ರಯೋಗಾಲಯವನ್ನು (High Pressure Laboratory) ಸ್ಥಾಪಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ನೇರವಾಗಿ ಕೆಲಸ ಮಾಡುವ ಅವಕಾಶ ಶುಭಾ ಅವರಿಗೆ ದೊರೆಯಿತು.
ಜಯರಾಮನ್ ಅವರು ಶುಭಾ ಅವರನ್ನು ತಮ್ಮ ಸ್ವಂತ ಮಗಳಂತೆಯೇ ಪ್ರೀತಿಸುತ್ತಿದ್ದರು. ಅನೇಕ ಬಾರಿ ಅಮೆರಿಕಕ್ಕೆ ಬಂದು ತಮ್ಮೊಂದಿಗೆ ಕೆಲಸ ಮಾಡುವಂತೆ ಆಹ್ವಾನಿಸಿದ್ದರು. ಆದರೆ ತಾಯಿ ಮತ್ತು ಕುಟುಂಬದವರೊಂದಿಗೆ ಭಾರತದಲ್ಲಿಯೇ ಇರಬೇಕೆಂಬ ಬಯಕೆಯಿಂದ ಶುಭಾ ಆ ಆಹ್ವಾನವನ್ನು ಪ್ರೀತಿಯಿಂದ ನಿರಾಕರಿಸಿದರು. ಆದರೂ ಜಯರಾಮನ್ ಅವರೊಂದಿಗಿನ ಸಂಬಂಧ ಅಲ್ಲಿಗೆ ಮುಗಿಯಲಿಲ್ಲ. ತಮ್ಮ ಕೊನೆಯ ದಿನಗಳವರೆಗೂ ಅವರು ಶುಭಾ ಅವರ ಸಂಶೋಧನಾ ಕಾರ್ಯಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಕಾರ ನೀಡುತ್ತಲೇ ಇದ್ದರು.
ಅವರಿಬ್ಬರ ನಡುವಿನ ತಂದೆ-ಮಗಳ ಬಾಂಧವ್ಯ ಎಷ್ಟು ಗಾಢವಾಗಿತ್ತು ಎಂಬುದಕ್ಕೆ ಒಂದು ಘಟನೆ ಸಾಕ್ಷಿಯಾಗಿದೆ. ಜಯರಾಮನ್ ಅವರು ನಿಧನರಾಗುವುದಕ್ಕೆ ಕೇವಲ ಒಂದು ದಿನ ಮೊದಲು ಕೂಡ ಶುಭಾ ಅವರಿಗೆ ಸಂದೇಶವೊಂದನ್ನು ಕಳುಹಿಸಿದ್ದರು. ಆ ಸಂದೇಶದಲ್ಲಿ ಅವರು ಶುಭಾ ಅವರನ್ನು ಪ್ರೀತಿಯಿಂದ ‘ಅಪ್ಪ’ ಎಂದು ಸಂಬೋಧಿಸಿದ್ದರು. ಆ ಕೊನೆಯ ಸಂದೇಶವನ್ನು ನೆನಪಿಸಿಕೊಂಡಾಗಲೆಲ್ಲ ಶುಭಾ ಭಾವುಕರಾಗುತ್ತಾರೆ. ರಕ್ತಸಂಬಂಧವಿಲ್ಲದಿದ್ದರೂ ಪ್ರೀತಿ, ವಿಶ್ವಾಸ ಮತ್ತು ಆತ್ಮೀಯತೆಯಿಂದ ರೂಪುಗೊಂಡಿದ್ದ ಅವರ ಸಂಬಂಧದ ಆಳವನ್ನು ಈ ಘಟನೆ ಮನದಟ್ಟಾಗಿಸುತ್ತದೆ.
ಹೀಗೆ, ತಮ್ಮ ತಂದೆ ವೆಂಕಟೇಶ್ ಅವರ ಜೊತೆಗೆ ಹೆಚ್. ನರಸಿಂಹಯ್ಯ, ಎಸ್.ಆರ್. ವಲ್ಲೂರಿ ಮತ್ತು ಎ. ಜಯರಾಮನ್ ಎಂಬ ಮೂವರು ಮಹನೀಯರನ್ನು ಶುಭಾ ಅವರು ತಂದೆಯ ಸ್ಥಾನದಲ್ಲಿಟ್ಟು ಗೌರವಿಸುತ್ತಾರೆ. ಒಬ್ಬ ವ್ಯಕ್ತಿಯ ಜೀವನದ ಸಾಧನೆಗೆ ಕುಟುಂಬದ ಬೆಂಬಲದಷ್ಟೇ ಹೊರಗಿನ ಮಾರ್ಗದರ್ಶಕರ ಪ್ರೀತಿ, ಪ್ರೋತ್ಸಾಹ ಮತ್ತು ನಿಸ್ವಾರ್ಥ ಸಹಕಾರವೂ ಎಷ್ಟು ಮುಖ್ಯ ಎಂಬುದಕ್ಕೆ ಶುಭಾ ಅವರ ಬದುಕಿನ ಈ ಅನುಭವವೇ ಒಂದು ಸುಂದರ ಉದಾಹರಣೆ.
ಪ್ರಶಸ್ತಿ ಮತ್ತು ಗೌರವಗಳು

ದೇಶೀಯ ತಂತ್ರಜ್ಞಾನ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ 2015ರಲ್ಲಿ ಅವರಿಗೆ‘ಮೇಕ್ ಇನ್ ಇಂಡಿಯಾ ಪ್ರಶಸ್ತಿ ದೊರೆತಿದೆ.

ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಅವರ ದೀರ್ಘಕಾಲದ ಸಂಶೋಧನೆ, ವಿಮಾನಯಾನ ಸುರಕ್ಷತೆಗೆ ನೀಡಿದ ಕೊಡುಗೆ ಮತ್ತು ಸ್ವದೇಶಿ ಏರೋಸ್ಪೇಸ್ ತಂತ್ರಜ್ಞಾನ ಅಭಿವೃದ್ಧಿಯ ಸಾಧನೆಗಳನ್ನು ಗುರುತಿಸಿ, ಭಾರತ ಸರ್ಕಾರವು 2026ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ವಿಜ್ಞಾನ ಕ್ಷೇತ್ರದ ಮಹಿಳೆಯರಿಗೆ ಸ್ಫೂರ್ತಿಯಾದ ಸಾಧಕಿ

ಹೆಣ್ಣುಮಕ್ಕಳು ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆಯಲು ಅನೇಕ ಸಾಮಾಜಿಕ ಅಡೆತಡೆಗಳಿದ್ದ ಕಾಲದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ, ಅತ್ಯುತ್ತಮ ಶೈಕ್ಷಣಿಕ ಸಾಧನೆಯ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ಪ್ರವೇಶಿಸಿ, ಸುಮಾರು ಐದು ದಶಕಗಳ ಕಾಲ ದೇಶದ ತಾಂತ್ರಿಕ ಪ್ರಗತಿಗೆ ತಮ್ಮ ಕೊಡುಗೆ ನೀಡಿರುವುದು ವಿಶೇಷವಾಗಿ ಗಮನ ಸೆಳೆಯುತ್ತದೆ
ಅವರ ಸಾಧನೆಯ ಮತ್ತೊಂದು ವಿಶೇಷತೆಯೆಂದರೆ, ಅವರು ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ಕೇವಲ ಪ್ರಶಸ್ತಿ ಅಥವಾ ದಾಖಲೆಗಾಗಿ ಉಳಿದಿಲ್ಲ. ವಿಮಾನಯಾನ ಸುರಕ್ಷತೆಯಂತಹ ಅತ್ಯಂತ ಸೂಕ್ಷ್ಮ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಬಳಕೆಯಾಗುತ್ತಿದೆ. ಆಕಾಶದಲ್ಲಿ ಹಾರುವ ವಿಮಾನಗಳ ಸುರಕ್ಷತೆಯ ಹಿಂದೆ ನೆಲಮಟ್ಟದಲ್ಲಿ ನಡೆಯುವ ಇಂತಹ ಸಂಶೋಧನೆಗಳ ಮಹತ್ವವನ್ನು ನಾವು ಸಾಮಾನ್ಯವಾಗಿ ಗಮನಿಸುವುದಿಲ್ಲ.
ಇಂದು ಭಾರತವು ಸ್ವದೇಶಿ ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಯ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಶುಭಾ ಅಯ್ಯಂಗಾರ್ ಅವರಂತಹ ವಿಜ್ಞಾನಿಗಳ ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಅತ್ಯಂತ ಅಗತ್ಯ. ಮಂಜು ಕವಿದ ರನ್ವೇಯಲ್ಲಿ ಪೈಲಟ್ಗಳಿಗೆ ಸ್ಪಷ್ಟತೆಯ ದಾರಿ ತೋರಿದ ದೃಷ್ಟಿಯನ್ನು ರೂಪಿಸಿದ ವಿಜ್ಞಾನಿ ಶುಭಾ ಅಯ್ಯಂಗಾರ್ ಅವರು, ತಮ್ಮ ಸಾಧನೆಯ ಮೂಲಕ ಮುಂದಿನ ಪೀಳಿಗೆಯ ಯುವ ವಿಜ್ಞಾನಿಗಳಿಗೂ ಹೊಸ ದೃಷ್ಟಿಕೋನ ನೀಡಿದ್ದಾರೆ.
ಅವರ ಬದುಕು ನಮಗೆ ಕಲಿಸುವ ಪಾಠ ಒಂದೇ, ಸಾಧನೆಗೆ ಲಿಂಗದ ಮಿತಿಯಿಲ್ಲ. ಜ್ಞಾನ, ಪರಿಶ್ರಮ ಮತ್ತು ಸಮಾಜಕ್ಕೆ ಉಪಯುಕ್ತವಾದ ಆಲೋಚನೆಗಳಿದ್ದರೆ ಜಗತ್ತಿನ ಯಾವುದೇ ಸವಾಲಿಗೂ ಪರಿಹಾರ ಕಂಡುಕೊಳ್ಳಬಹುದು. ಹಾಗಾಗಿಯೇ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ