ನವೆಂಬರ್ 28ರಂದು ಬೆಟ್ಟದ ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ಆದೇಶ. ದೇವಸ್ಥಾನದ ಆಡಳಿತ ಮಂಡಳಿ ಅಮಾನತು, ಇಬ್ಬರು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಆಡಳಿತದ ಹೊಣೆ, ಭದ್ರತೆಗೆ CRPF ನಿಯೋಜನೆ. ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್. ಧಾರ್ಮಿಕ ಆಚರಣೆ, ಆಸ್ತಿಯ ಹಕ್ಕು, ಸಾರ್ವಜನಿಕ ಸುವ್ಯವಸ್ಥೆ ಮತ್ತು ನ್ಯಾಯಾಲಯದ ಆದೇಶ ಪಾಲನೆಯ ಸುತ್ತ ಸುತ್ತುತ್ತಿರುವ ಶತಮಾನಕ್ಕೂ ಮೀರಿದ ವಿವಾದಕ್ಕೆ ಈಗ ಮತ್ತೊಂದು ಮಹತ್ವದ ತಿರುವು!
ತಮಿಳುನಾಡಿನ ಮಧುರೈ ಸಮೀಪದ ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿ ಕಾರ್ತಿಕ ದೀಪವನ್ನು ಎಲ್ಲಿ ಬೆಳಗಿಸಬೇಕು ಎಂಬ ವಿವಾದ ಈಗ ದೇಶದ ಗಮನ ಸೆಳೆದಿದೆ. ಒಂದು ಕಡೆ ಹಿಂದೂ ಭಕ್ತರು ಬೆಟ್ಟದ ತುದಿಯಲ್ಲಿರುವ ಪ್ರಾಚೀನ ಕಲ್ಲಿನ ಸ್ತಂಭದ ಮೇಲೆ ಕಾರ್ತಿಕ ದೀಪ ಬೆಳಗಿಸಲು ಅವಕಾಶ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಮತ್ತೊಂದು ಕಡೆ ದರ್ಗಾದ ಸಮೀಪದಲ್ಲಿರುವ ಆ ಸ್ತಂಭದ ಸ್ವರೂಪ, ಅದರ ಐತಿಹಾಸಿಕ ಬಳಕೆ, ಧಾರ್ಮಿಕ ಆಚರಣೆಯ ಸಂಪ್ರದಾಯ ಮತ್ತು ಸಾರ್ವಜನಿಕ ಶಾಂತಿಯ ಪ್ರಶ್ನೆಗಳನ್ನು ಮುಂದಿಟ್ಟು ವಿರೋಧ ವ್ಯಕ್ತವಾಗಿದೆ. ಈ ವಿವಾದದಲ್ಲಿ ಮದ್ರಾಸ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳು, ತಮಿಳುನಾಡು ಸರ್ಕಾರದ ನಿಲುವು, ದೇವಸ್ಥಾನದ ಆಡಳಿತ ಮಂಡಳಿಯ ನಿರ್ಧಾರ ಮತ್ತು ದರ್ಗಾ ಆಡಳಿತದ ಆಕ್ಷೇಪಣೆಗಳು ಪರಸ್ಪರ ಮುಖಾಮುಖಿಯಾಗಿವೆ.
ಆದರೆ 2026ರ ನವೆಂಬರ್ 27ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶ ಮಾತ್ರ ಈ ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ. ದೇವಸ್ಥಾನದ ಟ್ರಸ್ಟಿಗಳ ಮಂಡಳಿಯನ್ನು ಅಮಾನತುಗೊಳಿಸುವುದರಿಂದ ಹಿಡಿದು, CRPF ಭದ್ರತೆ ಒದಗಿಸುವವರೆಗೆ ಹಲವು ಕಠಿಣ ನಿರ್ದೇಶನಗಳನ್ನು ನ್ಯಾಯಾಲಯ ನೀಡಿದೆ.
ಈ ವಿವಾದದ ಹಿನ್ನೆಲೆ ಏನು? ನೂರು ವರ್ಷಗಳಿಗೂ ಹಿಂದಿನ ದಾಖಲೆಗಳಲ್ಲಿ ಏನಿದೆ? 1920ರ ದಾವೆ ಮತ್ತು 1931ರ ಪ್ರಿವಿ ಕೌನ್ಸಿಲ್ ತೀರ್ಪು ಏನು ಹೇಳುತ್ತದೆ? ನವೆಂಬರ್ 20ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ನವೆಂಬರ್ 24ರಂದು ಏಕೆ ಜಾರಿಗೊಳಿಸಲಾಗಲಿಲ್ಲ? ಕೊನೆಗೆ ನವೆಂಬರ್ 27ರಂದು ಸುಪ್ರೀಂ ಕೋರ್ಟ್ ಏಕೆ ಇಷ್ಟೊಂದು ಕಠಿಣ ನಿಲುವು ತಳೆಯಿತು? ಇವೆಲ್ಲವನ್ನೂ ಅರ್ಥಮಾಡಿಕೊಳ್ಳಲು ಈ ವಿವಾದದ ಇತಿಹಾಸವನ್ನು ತಿಳಿದುಕೊಳ್ಳುವುದು ಅಗತ್ಯ.
ತಿರುಪ್ಪರಂಕುಂಡ್ರಂ ಬೆಟ್ಟದ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವ

ತಮಿಳುನಾಡಿನ ಮಧುರೈ ನಗರದಿಂದ ಸ್ವಲ್ಪ ದೂರದಲ್ಲಿರುವ ತಿರುಪ್ಪರಂಕುಂಡ್ರಂ ಬೆಟ್ಟವು ಧಾರ್ಮಿಕ, ಐತಿಹಾಸಿಕ ಮತ್ತು ಪುರಾತತ್ವದ ದೃಷ್ಟಿಯಿಂದ ಮಹತ್ವದ ಸ್ಥಳವಾಗಿದೆ. ಭಗವಾನ್ ಮುರುಗನ ಆರು ಪವಿತ್ರ ಕ್ಷೇತ್ರಗಳಾದ ‘ಅರುಪದೈ ವೀಡು’ಗಳಲ್ಲಿ ತಿರುಪ್ಪರಂಕುಂಡ್ರಂ ಮೊದಲನೆಯದು ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ತಮಿಳು ಹಿಂದೂಗಳ ಪ್ರಮುಖ ಯಾತ್ರಾಸ್ಥಳವಾಗಿದೆ.
ಇದೇ ಬೆಟ್ಟದಲ್ಲಿ ಸಿಕಂದರ್ ಬಾದುಷಾ ದರ್ಗಾ, ಇತರ ಮುಸ್ಲಿಂ ಧಾರ್ಮಿಕ ನೆಲೆಗಳು ಮತ್ತು ಜೈನ ಪರಂಪರೆಯ ಕುರುಹುಗಳೂ ಇವೆ. ಹೀಗಾಗಿ ಈ ಬೆಟ್ಟವು ಒಂದೇ ಧಾರ್ಮಿಕ ಸಮುದಾಯಕ್ಕೆ ಮಾತ್ರವಲ್ಲದೆ, ಹಲವು ಧಾರ್ಮಿಕ ಪರಂಪರೆಗಳ ಇತಿಹಾಸವನ್ನು ತನ್ನೊಳಗೆ ಹೊಂದಿದೆ.
ಬೆಟ್ಟದ ಒಟ್ಟು ವಿಸ್ತೀರ್ಣದ ಕುರಿತು ದಾಖಲೆಗಳಲ್ಲಿ 170 ಎಕರೆಗೂ ಹೆಚ್ಚಿನ ಅಂಕಿಅಂಶಗಳು ಉಲ್ಲೇಖವಾಗಿವೆ. ಮದ್ರಾಸ್ ಹೈಕೋರ್ಟ್ ಮುಂದೆ ಸಲ್ಲಿಸಲಾದ ದಾಖಲೆಗಳಲ್ಲಿ ಈ ಬೆಟ್ಟದ ವಿಸ್ತೀರ್ಣವನ್ನು 172.70 ಎಕರೆ ಎಂದು ಉಲ್ಲೇಖಿಸಲಾಗಿದೆ. ಇದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ಸಂರಕ್ಷಿತ ಪಾರಂಪರಿಕ ಪ್ರದೇಶವೂ ಆಗಿದೆ. ಬೆಟ್ಟದ ಗುಹೆಗಳು, ಶಾಸನಗಳು, ಜೈನ ಶಿಲಾಶಯ್ಯೆಗಳು ಮತ್ತು ಪ್ರಾಚೀನ ಶಿಲ್ಪಗಳು ಇದರ ಐತಿಹಾಸಿಕ ಮಹತ್ವವನ್ನು ಹೆಚ್ಚಿಸಿವೆ.
1862 ಮತ್ತು 1912ರಲ್ಲಿಯೇ ವಿವಾದದ ಆರಂಭ
ತಿರುಪ್ಪರಂಕುಂಡ್ರಂ ಬೆಟ್ಟದ ತುದಿಯಲ್ಲಿ ಕಾರ್ತಿಕ ದೀಪ ಬೆಳಗಿಸುವ ಪ್ರಯತ್ನ ಇದೇ ಮೊದಲ ಬಾರಿಗೆ ನಡೆದದ್ದಲ್ಲ. ಲಭ್ಯವಿರುವ ಐತಿಹಾಸಿಕ ದಾಖಲೆಗಳು ಮತ್ತು ನ್ಯಾಯಾಲಯದ ವಿಚಾರಣೆಗಳಲ್ಲಿ 1862 ಹಾಗೂ 1912ರಲ್ಲಿ ಬೆಟ್ಟದ ತುದಿಯಲ್ಲಿ ದೀಪ ಬೆಳಗಿಸುವ ವಿಚಾರವಾಗಿ ವಿವಾದಗಳು ಉಂಟಾಗಿದ್ದವು ಎಂಬ ಉಲ್ಲೇಖಗಳಿವೆ.
1923ರಲ್ಲಿ ಮಧುರೈ ಅಧೀನ ನ್ಯಾಯಾಲಯ ನೀಡಿದ ತೀರ್ಪಿನಲ್ಲಿಯೂ 1862ರ ಪ್ರಯತ್ನದ ಕುರಿತು ಉಲ್ಲೇಖವಿದೆ. 1920ರ ಆಸ್ತಿ ಹಕ್ಕಿನ ದಾವೆಯಲ್ಲಿ ದರ್ಗಾ ಪರವಾಗಿ ಸಲ್ಲಿಸಲಾದ ವಾದಗಳಲ್ಲಿಯೂ 1862 ಮತ್ತು 1912ರ ಘಟನೆಗಳನ್ನು ಪ್ರಸ್ತಾಪಿಸಲಾಗಿದೆ. ಆ ಕಾಲದಲ್ಲಿ ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಬೆಟ್ಟದ ತುದಿಯಲ್ಲಿ ದೀಪ ಬೆಳಗಿಸುವ ಪ್ರಯತ್ನಗಳಿಗೆ ವಿರೋಧ ವ್ಯಕ್ತವಾಗಿತ್ತು ಎಂಬ ಅಂಶ ದಾಖಲೆಗಳಲ್ಲಿ ಕಾಣುತ್ತದೆ.
ನಂತರ ಕಾರ್ತಿಕ ದೀಪವನ್ನು ಬೆಟ್ಟದ ಮಧ್ಯಭಾಗದಲ್ಲಿರುವ ಉಚ್ಚಿಪಿಳ್ಳೈಯಾರ್ ದೇವಾಲಯದ ಸಮೀಪದ ದೀಪ ಮಂಟಪದಲ್ಲಿ ಬೆಳಗಿಸುವ ಪದ್ಧತಿ ಮುಂದುವರಿಯಿತು. ಹೀಗಾಗಿ ಕಳೆದ ಹಲವು ದಶಕಗಳಿಂದ ಅಲ್ಲಿ ದೀಪ ಬೆಳಗಿಸಲಾಗುತ್ತಿದೆ ಎಂಬುದು ವಿವಾದದ ಎರಡೂ ಕಡೆಯವರು ಒಪ್ಪಿಕೊಳ್ಳುವ ಪ್ರಮುಖ ಸಂಗತಿ. ಆದರೆ ಬೆಟ್ಟದ ತುದಿಯಲ್ಲಿರುವ ಕಲ್ಲಿನ ಸ್ತಂಭದಲ್ಲಿ ಹಿಂದೆ ದೀಪ ಬೆಳಗಿಸುವ ಸಂಪ್ರದಾಯವಿತ್ತೇ ಎಂಬುದೇ ಈಗಿನ ಕಾನೂನು ಹೋರಾಟದ ಪ್ರಮುಖ ಪ್ರಶ್ನೆಯಾಗಿದೆ.
1920ರ ದಾವೆ: ಬೆಟ್ಟದ ಮಾಲೀಕತ್ವ ಯಾರಿಗೆ?
ತಿರುಪ್ಪರಂಕುಂಡ್ರಂ ಬೆಟ್ಟದ ಮಾಲೀಕತ್ವಕ್ಕೆ ಸಂಬಂಧಿಸಿದ ವಿವಾದವು 1917ರ ಸುಮಾರಿಗೆ ತೀವ್ರಗೊಂಡಿತು. ದರ್ಗಾ ಆಡಳಿತದವರು ಮಂಟಪ ನಿರ್ಮಿಸಲು ಮುಂದಾದಾಗ ದೇವಸ್ಥಾನದ ಆಡಳಿತ ಮಂಡಳಿ ಆಕ್ಷೇಪ ವ್ಯಕ್ತಪಡಿಸಿತು.
ಇದರ ಪರಿಣಾಮವಾಗಿ 1920ರಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಮಧುರೈ ಅಧೀನ ನ್ಯಾಯಾಲಯದಲ್ಲಿ O.S. No. 4 of 1920 ಎಂಬ ದಾವೆ ಹೂಡಿತು. ಬೆಟ್ಟದ ಮೇಲಿನ ಹಕ್ಕು ಮತ್ತು ಸ್ವಾಧೀನವನ್ನು ಘೋಷಿಸಬೇಕೆಂದು ದೇವಸ್ಥಾನ ಮನವಿ ಮಾಡಿತ್ತು. 1923ರಲ್ಲಿ ಅಧೀನ ನ್ಯಾಯಾಲಯ ನೀಡಿದ ತೀರ್ಪು ದೇವಸ್ಥಾನದ ಪರವಾಗಿತ್ತು. ಆದರೆ ದರ್ಗಾಕ್ಕೆ ಸಂಬಂಧಿಸಿದ ಕೆಲವು ನಿರ್ದಿಷ್ಟ ಪ್ರದೇಶಗಳ ಹಕ್ಕುಗಳನ್ನು ಪ್ರತ್ಯೇಕವಾಗಿ ಗುರುತಿಸಿತು.
ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಕೆಯಾಯಿತು. ಮದ್ರಾಸ್ ಹೈಕೋರ್ಟ್ನ ಹಂತದ ನಂತರ ಪ್ರಕರಣ ಲಂಡನ್ನ ಪ್ರಿವಿ ಕೌನ್ಸಿಲ್ಗೆ ತಲುಪಿತು. 1931ರಲ್ಲಿ ಪ್ರಿವಿ ಕೌನ್ಸಿಲ್ ದೇವಸ್ಥಾನದ ಪರವಾಗಿ ನೀಡಿದ್ದ ತೀರ್ಪನ್ನು ಪುನಃ ಸ್ಥಿರಪಡಿಸಿತು. ಈ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಬೆಟ್ಟದ ಬಹುಪಾಲು ಪ್ರದೇಶ ದೇವಸ್ಥಾನದ ಹಕ್ಕಿಗೆ ಸೇರಿದ್ದು, ದರ್ಗಾಕ್ಕೆ ಸಂಬಂಧಿಸಿದ ನಿರ್ದಿಷ್ಟ ಸ್ಥಳಗಳು ಮತ್ತು ಅವುಗಳಿಗೆ ಹೋಗುವ ದಾರಿಗಳ ಹಕ್ಕುಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗಿದೆ ಎಂಬುದು ಮಹತ್ವದ ಅಂಶ.
ನ್ಯಾಯಾಲಯದ ದಾಖಲೆಗಳಲ್ಲಿ ದರ್ಗಾಕ್ಕೆ ಸಂಬಂಧಿಸಿದ ನೆಲ್ಲಿತೋಪು ಪ್ರದೇಶವನ್ನು 33 ಸೆಂಟ್ಸ್ ಎಂದು ಉಲ್ಲೇಖಿಸಲಾಗಿದೆ. ಆದರೆ ಈ 33 ಸೆಂಟ್ಸ್ ಅಂಕಿಅಂಶವನ್ನು ದರ್ಗಾದ ಸಂಪೂರ್ಣ ಐತಿಹಾಸಿಕ ಅಥವಾ ಪ್ರಸ್ತುತ ಆವರಣದ ಪ್ರತಿಯೊಂದು ಅಂಶಕ್ಕೂ ಅನ್ವಯಿಸುವ ಸರಳ ಲೆಕ್ಕಾಚಾರವಾಗಿ ಪರಿಗಣಿಸಬಾರದು. ಆಸ್ತಿ ಹಕ್ಕಿನ ನಿರ್ದಿಷ್ಟ ದಾಖಲೆಗಳ ಆಧಾರದಲ್ಲಿಯೇ ಅದನ್ನು ಅರ್ಥಮಾಡಿಕೊಳ್ಳಬೇಕು. ಈ ತೀರ್ಪು ದೇವಸ್ಥಾನದ ಆಸ್ತಿ ಹಕ್ಕು ಮತ್ತು ದರ್ಗಾದ ನಿರ್ದಿಷ್ಟ ಧಾರ್ಮಿಕ ಹಕ್ಕುಗಳನ್ನು ಪ್ರತ್ಯೇಕವಾಗಿ ಗುರುತಿಸಿತ್ತು. ಇದೇ ಅಂಶ ಇಂದಿನ ವಿವಾದದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದೆ.
ದೀಪತೂಣ್ ಅಥವಾ ಸರ್ವೇ ಕಲ್ಲು? ವಿವಾದದ ಕೇಂದ್ರಬಿಂದು ಇದೇ!

ಬೆಟ್ಟದ ತುದಿಯಲ್ಲಿರುವ ಕಲ್ಲಿನ ಸ್ತಂಭವನ್ನು ಭಕ್ತರು ದೀಪತೂಣ್ ಅಥವಾ ದೀಪಸ್ತಂಭ ಎಂದು ಕರೆಯುತ್ತಾರೆ. ಅಲ್ಲಿ ಕಾರ್ತಿಕ ದೀಪ ಬೆಳಗಿಸುವುದು ತಮ್ಮ ಧಾರ್ಮಿಕ ಹಕ್ಕು ಎಂದು ಅವರು ವಾದಿಸುತ್ತಿದ್ದಾರೆ. ಆದರೆ ತಮಿಳುನಾಡು ಸರ್ಕಾರ ಮತ್ತು ದೇವಸ್ಥಾನದ ಆಡಳಿತದ ಕೆಲವು ವಾದಗಳಲ್ಲಿ ಆ ಸ್ತಂಭವು ಬ್ರಿಟಿಷರ ಕಾಲದಲ್ಲಿ ಸ್ಥಾಪಿಸಲಾದ ಸರ್ವೇ ಕಲ್ಲು ಮಾತ್ರವಾಗಿದ್ದು, ದೇವಸ್ಥಾನದ ಧಾರ್ಮಿಕ ಆಚರಣೆಯೊಂದಿಗೆ ಅದಕ್ಕೆ ಸಂಬಂಧವಿಲ್ಲ ಎಂದು ಹೇಳಲಾಗಿದೆ.
ಇದೇ ಈ ವಿವಾದದ ಅತ್ಯಂತ ಮುಖ್ಯವಾದ ತಾಂತ್ರಿಕ ಮತ್ತು ಐತಿಹಾಸಿಕ ಪ್ರಶ್ನೆ. ಭಕ್ತರ ವಾದದ ಪ್ರಕಾರ, ಕಲ್ಲಿನ ರಚನೆ ಮತ್ತು ಅದರ ಮೇಲಿರುವ ವ್ಯವಸ್ಥೆ ದೀಪ ಬೆಳಗಿಸಲು ಬಳಸಬಹುದಾದ ರೀತಿಯಲ್ಲಿದೆ. ಆದ್ದರಿಂದ ಅದನ್ನು ದೀಪಸ್ತಂಭವೆಂದು ಗುರುತಿಸಬೇಕು ಎಂಬುದು ಅವರ ಅಭಿಪ್ರಾಯ. ಸರ್ಕಾರದ ವಾದದ ಪ್ರಕಾರ, ಒಂದು ಕಲ್ಲಿನ ಸ್ತಂಭದ ಆಕಾರ ಅಥವಾ ರಚನೆಯನ್ನು ಆಧರಿಸಿ ಅದನ್ನು ಧಾರ್ಮಿಕ ದೀಪಸ್ತಂಭವೆಂದು ನಿರ್ಧರಿಸಲು ಸಾಧ್ಯವಿಲ್ಲ. ಅದರ ಐತಿಹಾಸಿಕ ಬಳಕೆ ಮತ್ತು ಸಂಪ್ರದಾಯವನ್ನು ದಾಖಲೆಗಳ ಮೂಲಕ ಸಾಬೀತುಪಡಿಸಬೇಕು.
1994ರಿಂದ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ ವಿವಾದ

1920ರ ದಾವೆ ಮತ್ತು 1931ರ ಪ್ರಿವಿ ಕೌನ್ಸಿಲ್ ತೀರ್ಪಿನ ನಂತರ ಹಲವು ದಶಕಗಳ ಕಾಲ ದೀಪ ಬೆಳಗಿಸುವ ಸ್ಥಳದ ವಿಚಾರದಲ್ಲಿ ದೊಡ್ಡ ಮಟ್ಟದ ವಿವಾದ ಕಂಡುಬರಲಿಲ್ಲ. 1994ರಲ್ಲಿ ಬೆಟ್ಟದ ತುದಿಯಲ್ಲಿ ದೀಪ ಬೆಳಗಿಸುವ ಪ್ರಯತ್ನದ ಕುರಿತು ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಲಾಯಿತು. ಆಗ ಹಿಂದೂ ಸಂಘಟನೆಗಳು ಬೆಟ್ಟದ ತುದಿಯಲ್ಲಿ ದೀಪ ಬೆಳಗಿಸುವ ಪ್ರಯತ್ನ ಮಾಡಬಾರದು ಎಂಬ ಮನವಿಯೂ ನ್ಯಾಯಾಲಯದ ಮುಂದೆ ಬಂದಿತ್ತು.
ಆ ಸಂದರ್ಭದಲ್ಲಿ ದೇವಸ್ಥಾನದ ಆಡಳಿತದ ಪರವಾಗಿ ದೀಪವನ್ನು ಉಚ್ಚಿಪಿಳ್ಳೈಯಾರ್ ದೇವಾಲಯದ ಸಮೀಪದ ಮಂಟಪದಲ್ಲಿಯೇ ಬೆಳಗಿಸಲಾಗುತ್ತದೆ ಎಂಬ ವಾದ ಮಂಡಿಸಲಾಗಿತ್ತು. 2014ರಲ್ಲಿ ಬೆಟ್ಟದ ತುದಿಯಲ್ಲಿ ದೀಪ ಬೆಳಗಿಸಲು ಅವಕಾಶ ನೀಡಬೇಕೆಂದು ಸಲ್ಲಿಸಲಾದ ಅರ್ಜಿಗಳನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತು. ನಂತರ 2017ರಲ್ಲಿ ವಿಭಾಗೀಯ ಪೀಠವೂ ಆ ನಿರ್ಧಾರವನ್ನು ಎತ್ತಿಹಿಡಿದಿತ್ತು. ಹೀಗಾಗಿ ಬೆಟ್ಟದ ತುದಿಯಲ್ಲಿ ದೀಪ ಬೆಳಗಿಸುವ ವಿಚಾರವು ಹಲವು ದಶಕಗಳಿಂದ ಕಾನೂನು ವಿವಾದದ ಭಾಗವಾಗಿತ್ತು.
2025–2026ರಲ್ಲಿ ಮತ್ತೆ ಭುಗಿಲೆದ್ದ ಕಾರ್ತಿಕ ದೀಪ ವಿವಾದ
2025ರ ಅಕ್ಟೋಬರ್ 28ರಂದು ರಾಮ ರವಿಕುಮಾರ್ ಎಂಬ ಭಕ್ತರು ತಿರುಪ್ಪರಂಕುಂಡ್ರಂ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿ, ಕಾರ್ತಿಕ ದೀಪವನ್ನು ಬೆಟ್ಟದ ತುದಿಯಲ್ಲಿ ಬೆಳಗಿಸಲು ಅವಕಾಶ ನೀಡಬೇಕೆಂದು ಕೋರಿದರು. ನವೆಂಬರ್ 3ರಂದು ದೇವಸ್ಥಾನದ ಆಡಳಿತವು ತನ್ನ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಉಚ್ಚಿಪಿಳ್ಳೈಯಾರ್ ದೇವಾಲಯದ ಸಮೀಪದ ದೀಪ ಮಂಟಪದಲ್ಲಿಯೇ ದೀಪ ಬೆಳಗಿಸಲಾಗುವುದು ಎಂದು ಉತ್ತರಿಸಿತು.
ಇದನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠದಲ್ಲಿ ಅರ್ಜಿ ಸಲ್ಲಿಸಲಾಯಿತು. 2025ರ ಡಿಸೆಂಬರ್ 1ರಂದು ಏಕಸದಸ್ಯ ಪೀಠವು ಭಕ್ತರ ಮನವಿಗೆ ಅನುಕೂಲಕರ ಆದೇಶ ನೀಡಿತು. ನಂತರ ಈ ಆದೇಶದ ವಿರುದ್ಧ ಮೇಲ್ಮನವಿಗಳು ಸಲ್ಲಿಕೆಯಾದವು. 2026ರ ಜನವರಿ 6ರಂದು ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠವು ಪ್ರಕರಣದ ಕುರಿತು ಮಹತ್ವದ ತೀರ್ಪು ನೀಡಿತು. ಈ ತೀರ್ಪಿನಲ್ಲಿ ದೀಪತೂಣ್ನಲ್ಲಿ ದೀಪ ಬೆಳಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಪರವಾಗಿ ಮತ್ತು ಭಕ್ತರ ಪರವಾಗಿ ಮಂಡಿಸಲಾದ ವಾದಗಳನ್ನು ಪರಿಶೀಲಿಸಲಾಯಿತು. ಆದರೆ ಈ ತೀರ್ಪಿನ ವಿರುದ್ಧ ತಮಿಳುನಾಡು ಸರ್ಕಾರ ಮತ್ತು ಇತರರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರು.
ಅಂದಿನ ಡಿಎಂಕೆ ಸರ್ಕಾರ ಕಾರ್ತೀಕ ದೀಪದ ವಿಚಾರದಲ್ಲಿ ಮಾಡಿದ್ದ ಘನಘೋರ ಅಪರಾಧದ ಕುರಿತಾದ ಹೆಚ್ಚಿನ ಮಾಹಿತಿಯನ್ನು 2025ರಲ್ಲಿ ಬರೆದ ಈ ಲೇಖನವನ್ನು ಓದ ಬಹುದಾಗಿದೆ.
ನವೆಂಬರ್ 20: ಸುಪ್ರೀಂ ಕೋರ್ಟ್ನ ಮಧ್ಯಂತರ ಆದೇಶ
2026ರ ನವೆಂಬರ್ 20ರಂದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಂಚೋಲಿ ಅವರ ಪೀಠವು ಮಹತ್ವದ ಮಧ್ಯಂತರ ಆದೇಶ ನೀಡಿತು. ನವೆಂಬರ್ 24ರ ಕಾರ್ತಿಕ ದೀಪದ ದಿನದಂದು ಬೆಟ್ಟದ ತುದಿಯಲ್ಲಿರುವ ದೀಪತೂಣ್ನಲ್ಲಿ ದೀಪ ಬೆಳಗಿಸಲು ಒಂದು ಬಾರಿಯ ವಿಶೇಷ ಅವಕಾಶ ನೀಡಿತು. ಆದರೆ ಈ ಆದೇಶದಲ್ಲಿ ಕೆಲವು ಪ್ರಮುಖ ನಿರ್ಬಂಧಗಳಿದ್ದವು:
- ದೇವಸ್ಥಾನದ ಆಡಳಿತದಿಂದ ಅಧಿಕೃತವಾಗಿ ನೇಮಿಸಲಾದ ಸೀಮಿತ ತಂಡ ಮಾತ್ರ ದೀಪ ಬೆಳಗಿಸಬೇಕು.
- ಜಿಲ್ಲಾಧಿಕಾರಿ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ, ಪುರಾತತ್ವ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಸಮನ್ವಯದಿಂದ ವ್ಯವಸ್ಥೆ ಮಾಡಬೇಕು.
- ಸಾರ್ವಜನಿಕರು ಗುಂಪು ಗುಂಪಾಗಿ ಬೆಟ್ಟದ ತುದಿಗೆ ಹೋಗಲು ಅವಕಾಶವಿರಬಾರದು.
- ಯಾವುದೇ ಮೆರವಣಿಗೆ, ಘೋಷಣೆ ಅಥವಾ ಸಾರ್ವಜನಿಕ ಸಭೆಗೆ ಅವಕಾಶ ನೀಡಬಾರದು.
- ಅಗತ್ಯವಿದ್ದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು.
ಇಲ್ಲಿ ಅತ್ಯಂತ ಮುಖ್ಯವಾದ ಸಂಗತಿಯೆಂದರೆ, ಸುಪ್ರೀಂ ಕೋರ್ಟ್ ಆ ದಿನದ ದೀಪ ಬೆಳಗಿಸುವುದಕ್ಕೆ ಮಾತ್ರ ತಾತ್ಕಾಲಿಕ ಅನುಮತಿ ನೀಡಿತ್ತು. ಅದರಿಂದ ಆ ಸ್ಥಳದಲ್ಲಿ ದೀಪ ಬೆಳಗಿಸುವುದು ಶಾಶ್ವತ ಸಂಪ್ರದಾಯವೆಂದು ಅಥವಾ ಯಾವುದೇ ಪಕ್ಷಕ್ಕೆ ಅಂತಿಮ ಧಾರ್ಮಿಕ ಹಕ್ಕು ಸಿಕ್ಕಿದೆ ಎಂದು ಅರ್ಥವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಮದ್ರಾಸ್ ಹೈಕೋರ್ಟ್ನ ತೀರ್ಪಿನ ಸಂಬಂಧಿತ ಭಾಗಗಳನ್ನೂ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆವರೆಗೆ ತಡೆಹಿಡಿದಿತ್ತು.
ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು? ಜಾತ್ಯಾತೀತರೆ ಎಂದರೆ ಹಿಂದೂ ವಿರೋಧಿಯೇ?
ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಎನ್ನುವಂತೆ ತಮಿಳುನಾಡಿನಲ್ಲಿ ಇರುವರೆವಿಗೂ ಆಳಿದ ಎಲ್ಲಾ ಸರ್ಕಾರಗಳಿಗೂ ಹಿಂದೂಗಳ ಓಟು ಬೇಕು ಮತ್ತು ಹಿಂದೂ ದೇವಾಲಯಗಳಿಂದ ಬರುವ ಆದಾಯ ಬೇಕು. ಹಿಂದೂಗಳ ಧಾರ್ಮಿಕ ಆಚರಣೆಗಳಿಗೆ ಸರ್ಕಾರ ಬೆಂಬಲಿಸಿದರೆ ಎಲ್ಲಿ ಅನ್ಯಧರ್ಮೀಯರ ಓಟುಗಳಿಗೆ ಕೊಕ್ಕೆ ಬೀಳುತ್ತದೆ ಎನ್ನುವ ಕಾರಣದಿಂದ ಜಾತ್ಯಾತೀತತೆ ಎನ್ನುವ ಗೊಡ್ಡು ನೆಪವೊಡ್ಡಿ ಹಿಂದೂಗಳ ಧಾರ್ಮಿಕ ಆಚರಣೆಗಳಿಗೆ ಅಡ್ಡಿ ಮಾಡುತ್ತಲೇ ಬಂದಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ.
ನವೆಂಬರ್ 24ರಂದು ನಿಜವಾಗಿ ಏನಾಯಿತು?
ಸುಪ್ರೀಂ ಕೋರ್ಟ್ನ ಆದೇಶದಂತೆ ನವೆಂಬರ್ 24ರಂದು ದೀಪ ಬೆಳಗಬೇಕಿತ್ತು. ಆದರೆ ವಿವಾದಿತ ದೀಪತೂಣ್ನಲ್ಲಿ ದೀಪ ಬೆಳಗಿಸಲಿಲ್ಲ. ದೇವಸ್ಥಾನದ ಆಡಳಿತ ಮಂಡಳಿಯು ತನ್ನ ಹಿಂದಿನ ಸಂಪ್ರದಾಯದಂತೆ ಉಚ್ಚಿಪಿಳ್ಳೈಯಾರ್ ದೇವಾಲಯದ ಸಮೀಪದ ದೀಪ ಮಂಟಪದಲ್ಲಿಯೇ ದೀಪ ಬೆಳಗಿಸಬೇಕು ಎಂಬ ನಿಲುವು ತಳೆದಿತ್ತು.
ಆದರೆ ಹಿಂದೂ ವಿರೋಧಿ ಮನಸ್ಥಿತಿಯ ಸರ್ಕಾರ ಆ ಬೆಟ್ಟದಲ್ಲಿ ಸಾವಿರಾರು ಪೋಲೀಸರ ಸರ್ಪಗಾವಲು ಹಾಕಿ ಬೆಟ್ಟದ ತುದಿಯ ಮೇಲಿರುವ ದೀಪಸ್ಥಂಭದ ಮೇಲೆ ದೀಪವನ್ನು ಹಚ್ಚಲು ಬಂದ ಸಾವಿರಾರು ಹಿಂದೂ ಭಕ್ತರನ್ನು ಬಂದಿಸಿದ್ದಲ್ಲದೇ, ಕಾಟಾಚಾರಕ್ಕೆ ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಅವರು ಸುಪ್ರೀಂ ಕೋರ್ಟ್ ಸೂಚನೆಯಂತೆ ವ್ಯವಸ್ಥೆ ಮಾಡಲು ಪ್ರಯತ್ನಿಸಿದ್ದರು ಆದರೆ, ದೇವಸ್ಥಾನದ ಟ್ರಸ್ಟಿಗಳ ಮಂಡಳಿ ಒಪ್ಪಿಗೆ ನೀಡಲಿಲ್ಲ ಎಂಬ ಅಂಶವನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿ, ಮತ್ತೆ ಕಾರ್ತಿಕ ದೀಪದ ದಿನದಂದು (ಕಾರ್ತೀಕ ಮಾಸದ ಹುಣ್ಣೆಮೆ) ಸಾಮಾನ್ಯವಾಗಿ ನಡೆಯುತ್ತಿದ್ದ ಉಚ್ಚಿಪಿಳ್ಳೈಯಾರ್ ಮಂಟಪದ ಸ್ಥಳದಲ್ಲಿಯೇ ದೀಪ ಬೆಳಗಿಸುವ ಮೂಲಕ ಹಿಂದೂಗಳ ಆಸೆಗೆ ತಣ್ಣೀರೆರೆಚಿತು.
ಹೀಗೆ ಸುಪ್ರೀಂ ಕೋರ್ಟ್ ನಿರ್ದಿಷ್ಟವಾಗಿ ಸೂಚಿಸಿದ್ದ ಬೆಟ್ಟದ ತುದಿಯ ದೀಪತೂಣ್ ಮಾತ್ರ ಕತ್ತಲೆಯಲ್ಲಿಯೇ ಉಳಿಯಿತು. ಈ ಘಟನೆಯ ನಂತರ ಸುಪ್ರೀಂ ಕೋರ್ಟ್ನ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ನ್ಯಾಯಾಂಗ ನಿಂದನೆ ಅರ್ಜಿಗಳು ಸಲ್ಲಿಸಲಾಯಿತು. ಇಂದು ಬೆಟ್ಟದ ತುದಿಯಲ್ಲಿ ದೀಪ ಹಚ್ಚುವುದಕ್ಕೆ ವಿರೋಧ ವ್ಯಕ್ತಪಡಿಸುವ ಈ ಹಿಂದೂ ವಿರೋಧಿ ಮನಸ್ಥಿತಿಯ ಸರ್ಕಾರಗಳು ನಾಳೇ ಹಿಂದೂ ದೇವಾಲಯಗಳಿಗೆ ಹಿಂದೂಗಳು ಹೋಗಲೇ ಬಾರದು ಎಂದು ತಡೆದರೂ ಅಚ್ಚರಿ ಇಲ್ಲಾ! ಆನಂತರದ ದಿನಗಳಲ್ಲಿ ಹಿಂದೂಗಳೇ ದೇವಾಲಯಕ್ಕೆ ಬರುತ್ತಿಲ್ಲಾ ಎಂದು ಸಾವಿರಾರು ವರ್ಷಗಳ ಇತಿಹಾಸವಿರುವ ಒಂದೊಂದೇ ದೇವಾಲಯಗಳನ್ನು ಶಾಶ್ವತವಾಗಿ ಮುಚ್ಚಿದರೂ ಅಚ್ಚರಿ ಪಡಬೇಕಿಲ್ಲಾ! ಎನ್ನುವುದೇ ಹಿಂದೂಗಳ ಆತಂಕವಾಗಿದೆ.
2026ರ ನವೆಂಬರ್ 27, ಸುಪ್ರೀಂ ಕೋರ್ಟ್ನ ಕಠಿಣ ನಿಲುವು
2026ರ ನವೆಂಬರ್ 27ರಂದು, ಈ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರ ಮತ್ತು ಮಧುರೈ ಜಿಲ್ಲಾಡಳಿತದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಂಚೋಲಿ ಅವರ ಪೀಠವು ನವೆಂಬರ್ 20ರ ಆದೇಶವನ್ನು ಪ್ರಾಥಮಿಕವಾಗಿ ಉದ್ದೇಶಪೂರ್ವಕವಾಗಿ ಮತ್ತು ಬಹಿರಂಗವಾಗಿ ಉಲ್ಲಂಘಿಸಲಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು. ನ್ಯಾಯಾಲಯದ ಮುಖ್ಯ ನಿರ್ದೇಶನಗಳು ಹೀಗಿವೆ.

- ನವೆಂಬರ್ 28ರಂದು ದೀಪ ಬೆಳಗಿಸಬೇಕು : ನವೆಂಬರ್ 28ರಂದು ಬೆಟ್ಟದ ತುದಿಯ ದೀಪತೂಣ್ನಲ್ಲಿ ಕಾರ್ತಿಕ ದೀಪ ಬೆಳಗಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತು. ಅಗತ್ಯವಿದ್ದಲ್ಲಿ ಉಚ್ಚಿಪಿಳ್ಳೈಯಾರ್ ಮಂಟಪದಲ್ಲಿ ಬೆಳಗಿಸಿದ ದೀಪದಿಂದ ಜ್ಯೋತಿಯನ್ನು ತರಲು ಅಥವಾ ಬೇರೆ ಸೂಕ್ತ ವ್ಯವಸ್ಥೆ ಮಾಡಲು ಸೂಚಿಸಿತು.
- ಭಕ್ತರಿಗೂ ದೀಪ ಬೆಳಗಿಸಲು ಅವಕಾಶ : ನವೆಂಬರ್ 20ರ ಆದೇಶದಲ್ಲಿ ಸೀಮಿತ ತಂಡಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ನವೆಂಬರ್ 27ರ ಹೊಸ ಆದೇಶದಲ್ಲಿ ಭಕ್ತರೂ ದೀಪ ಬೆಳಗಿಸಲು ಅವಕಾಶ ನೀಡಲಾಯಿತು. ದರ್ಗಾದಿಂದ ಕನಿಷ್ಠ 50 ಮೀಟರ್ ದೂರವನ್ನು ಎಲ್ಲ ದಿಕ್ಕುಗಳಲ್ಲಿಯೂ ಕಾಯ್ದುಕೊಳ್ಳುವಂತೆ ನಿರ್ದೇಶಿಸಲಾಯಿತು.
- ದೇವಸ್ಥಾನದ ಟ್ರಸ್ಟಿಗಳ ಮಂಡಳಿ ಅಮಾನತು : ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೊಳಿಸುವಲ್ಲಿ ದೇವಸ್ಥಾನದ ಆಡಳಿತ ಮಂಡಳಿ ತೋರಿದ ನಿಲುವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಟ್ರಸ್ಟಿಗಳ ಮಂಡಳಿಯನ್ನು ಅಮಾನತುಗೊಳಿಸಿತು.
- ಇಬ್ಬರು ನಿವೃತ್ತ ನ್ಯಾಯಮೂರ್ತಿಗಳಿಗೆ ಆಡಳಿತದ ಹೊಣೆ : ಮದ್ರಾಸ್ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳಾದ ಎಸ್. ವೈಧ್ಯನಾಥನ್ ಮತ್ತು ವಿ. ಪಾರ್ಥಿಬನ್ ಅವರನ್ನು ದೇವಸ್ಥಾನದ ಆಡಳಿತದ ಮೇಲ್ವಿಚಾರಣೆಗಾಗಿ ರಿಸೀವರ್ಗಳಾಗಿ ನೇಮಿಸಲಾಯಿತು. ನ್ಯಾಯಾಲಯದ ನಿರ್ದೇಶನಗಳು ಜಾರಿಯಾಗುವಂತೆ ನೋಡಿಕೊಳ್ಳುವುದು ಇವರ ಜವಾಬ್ದಾರಿಯಾಗಿದೆ.
- ಭದ್ರತೆಯ ಹೊಣೆ CRPFಗೆ : ದೇವಸ್ಥಾನದ ಸುತ್ತಮುತ್ತಲಿನ ಭದ್ರತೆಯ ಹೊಣೆಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆಗೆ (CRPF) ವಹಿಸಲು ನ್ಯಾಯಾಲಯ ಸೂಚಿಸಿತು. ಅಷ್ಟೇ ಅಲ್ಲ, ದರ್ಗಾಕ್ಕೂ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಅಲ್ಲಿಗೆ ಪ್ರಾರ್ಥನೆಗೆ ಬರುವ ಮುಸ್ಲಿಂ ಭಕ್ತರಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿತು.
- ಹಿರಿಯ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ : ತಮಿಳುನಾಡಿನ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ (DGP), ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಕಾರ್ಯದರ್ಶಿ ಹಾಗೂ ಆಯುಕ್ತರು, ಮಧುರೈ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಪೊಲೀಸ್ ಅಧೀಕ್ಷಕರು, ದೇವಸ್ಥಾನದ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಲಾಯಿತು.
- ಡಿಸೆಂಬರ್ 15ರಂದು ಮುಖ್ಯ ಕಾರ್ಯದರ್ಶಿ ಹಾಜರಾಗಬೇಕು : ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಸಾಯಿ ಕುಮಾರ್ ಅವರು ಡಿಸೆಂಬರ್ 15ರಂದು ಸುಪ್ರೀಂ ಕೋರ್ಟ್ ಮುಂದೆ ಖುದ್ದಾಗಿ ಹಾಜರಾಗಬೇಕು ಎಂದು ನಿರ್ದೇಶಿಸಲಾಯಿತು. ಅಧಿಕಾರಿಗಳ ನಡುವೆ ಈ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಇಮೇಲ್ಗಳು, ದೂರವಾಣಿ ಕರೆಗಳು ಮತ್ತು ಸಂದೇಶಗಳ ವಿವರಗಳನ್ನು ಒಳಗೊಂಡ ಸಮಗ್ರ ಪ್ರಮಾಣಪತ್ರ ಸಲ್ಲಿಸುವಂತೆಯೂ ಸೂಚಿಸಲಾಯಿತು.
ನ್ಯಾಯಾಲಯವು ಆಡಳಿತಾತ್ಮಕ ಅವ್ಯವಸ್ಥೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಅಧಿಕಾರಿಗಳು ರಾಜಕೀಯ ನಾಯಕರ ಸೂಚನೆಯಂತೆ ನಡೆದುಕೊಂಡಿರುವ ಸಾಧ್ಯತೆಯನ್ನೂ ಪ್ರಸ್ತಾಪಿಸಿತು. ಆದರೆ ಇದು ವಿಚಾರಣೆಯಲ್ಲಿನ ಪ್ರಾಥಮಿಕ ನ್ಯಾಯಾಲಯದ ಅಭಿಪ್ರಾಯವೇ ಹೊರತು ಅಂತಿಮವಾಗಿ ಸಾಬೀತಾದ ಅಪರಾಧ ನಿರ್ಣಯವಲ್ಲ ಎಂಬುದನ್ನು ಗಮನಿಸಬೇಕು.
ನ್ಯಾಯಾಲಯದ ಮುಖ್ಯ ಸಂದೇಶ ಸ್ಪಷ್ಟವಾಗಿತ್ತು. ಸುಪ್ರೀಂ ಕೋರ್ಟ್ನ ಆದೇಶವನ್ನು ಪಾಲಿಸಬೇಕೋ ಬೇಡವೋ ಎಂದು ನಿರ್ಧರಿಸುವ ಅಧಿಕಾರ ಕಾರ್ಯಾಂಗಕ್ಕಿಲ್ಲ. ನ್ಯಾಯಾಲಯದ ಆದೇಶವನ್ನು ಪಾಲಿಸುವುದು ಸರ್ಕಾರ ಮತ್ತು ಅದರ ಅಧಿಕಾರಿಗಳ ಸಾಂವಿಧಾನಿಕ ಕರ್ತವ್ಯವಾಗಿದೆ.
ದರ್ಗಾದ ಹಕ್ಕು ಮತ್ತು ಭಕ್ತರ ಧಾರ್ಮಿಕ ಸ್ವಾತಂತ್ರ್ಯ – ಎರಡೂ ಮುಖ್ಯ
ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿ ಮುರುಗನ್ ದೇವಾಲಯವೂ ಇದೆ, ಸಿಕಂದರ್ ಬಾದುಷಾ ದರ್ಗಾವೂ ಇದೆ. ಎರಡೂ ಧಾರ್ಮಿಕ ನೆಲೆಗಳಿಗೂ ತಮ್ಮದೇ ಆದ ಇತಿಹಾಸ ಮತ್ತು ಭಕ್ತರ ನಂಬಿಕೆಗಳಿವೆ. ದೀಪತೂಣ್ ದರ್ಗಾದಿಂದ ಸುಮಾರು 50 ಮೀಟರ್ ದೂರದಲ್ಲಿದೆ ಎಂಬುದು ವರದಿಗಳಲ್ಲಿ ಉಲ್ಲೇಖವಾಗಿದೆ. ಈ ಅಂತರವನ್ನು ಕಾಯ್ದುಕೊಂಡು ದೀಪ ಬೆಳಗಿಸಲು ಅವಕಾಶ ನೀಡಿರುವುದು ಎರಡೂ ಧಾರ್ಮಿಕ ಸ್ಥಳಗಳ ಹಕ್ಕು ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡ ನ್ಯಾಯಾಲಯದ ಮಧ್ಯಂತರ ವ್ಯವಸ್ಥೆಯಾಗಿದೆ.
ದರ್ಗಾ ಆಡಳಿತದ ಆಕ್ಷೇಪಣೆಗಳು ಮತ್ತು ಸರ್ಕಾರದ ಸಾರ್ವಜನಿಕ ಸುವ್ಯವಸ್ಥೆಯ ವಾದಗಳನ್ನೂ ನ್ಯಾಯಾಲಯದ ಅಂತಿಮ ವಿಚಾರಣೆಯಲ್ಲಿ ಪರಿಶೀಲಿಸಬೇಕಿದೆ. ಅದೇ ರೀತಿ, ದೇವಸ್ಥಾನದ ಭಕ್ತರು ತಮ್ಮ ಧಾರ್ಮಿಕ ಆಚರಣೆಯನ್ನು ನಡೆಸುವ ಹಕ್ಕನ್ನೂ ಕಾನೂನಿನ ಚೌಕಟ್ಟಿನಲ್ಲಿ ರಕ್ಷಿಸಬೇಕಾಗಿದೆ. ಧಾರ್ಮಿಕ ಸ್ವಾತಂತ್ರ್ಯವೆಂದರೆ ಇತರರ ಧಾರ್ಮಿಕ ಹಕ್ಕುಗಳನ್ನು ನಿರಾಕರಿಸುವ ಸ್ವಾತಂತ್ರ್ಯವಲ್ಲ. ಅದೇ ರೀತಿ, ಸಾರ್ವಜನಿಕ ಶಾಂತಿಯ ಹೆಸರಿನಲ್ಲಿ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸುವ ಅಧಿಕಾರವೂ ಯಾವುದೇ ಸರ್ಕಾರಕ್ಕಿಲ್ಲ.
1323ರಿಂದ 1378ರವರೆಗಿನ ಮಧುರೈ ಸುಲ್ತಾನರ ಇತಿಹಾಸ
ತಿರುಪ್ಪರಂಕುಂಡ್ರಂ ಬೆಟ್ಟದ ವಿವಾದದ ಸಂದರ್ಭದಲ್ಲಿ ಮಧುರೈ ಸುಲ್ತಾನರ ಇತಿಹಾಸವನ್ನೂ ಕೆಲವರು ಉಲ್ಲೇಖಿಸುತ್ತಿದ್ದಾರೆ.
14ನೇ ಶತಮಾನದಲ್ಲಿ ದೆಹಲಿ ಸುಲ್ತಾನರ ದಕ್ಷಿಣ ಭಾರತದ ದಂಡಯಾತ್ರೆಗಳ ಪರಿಣಾಮವಾಗಿ ಮಧುರೈ ಪ್ರದೇಶದಲ್ಲಿ ರಾಜಕೀಯ ಬದಲಾವಣೆಗಳು ಸಂಭವಿಸಿದವು. 1323ರ ವೇಳೆಗೆ ತುಘಲಕ್ ಆಡಳಿತದ ದಾಳಿಗಳು ಮತ್ತು ವಿಜಯನಗರದ ಉದಯದ ನಡುವೆ ದಕ್ಷಿಣ ಭಾರತದ ರಾಜಕೀಯ ಸ್ಥಿತಿ ಬದಲಾಗುತ್ತಿತ್ತು.
1335ರ ಸುಮಾರಿಗೆ ಜಲಾಲುದ್ದೀನ್ ಅಹ್ಸನ್ ಖಾನ್ ಮಧುರೈ ಸುಲ್ತಾನತೆಯನ್ನು ಸ್ಥಾಪಿಸಿದನು. 1335ರಿಂದ 1378ರವರೆಗೆ ಸುಮಾರು 43 ವರ್ಷಗಳ ಕಾಲ ಮಧುರೈ ಸುಲ್ತಾನತೆಯ ಆಡಳಿತ ಮುಂದುವರಿದಿತ್ತು ಎಂದು ಇತಿಹಾಸದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಈ ಅವಧಿಯಲ್ಲಿ ಎಂಟು ಮಂದಿ ಆಡಳಿತ ನಡೆಸಿದರು ಎಂಬ ಮಾಹಿತಿಯೂ ಇದೆ. ಅಲ್ಲಾವುದ್ದೀನ್ ಸಿಕಂದರ್ ಶಾ ಈ ಸುಲ್ತಾನತೆಯ ಕೊನೆಯ ಆಡಳಿತಗಾರನೆಂದು ಗುರುತಿಸಲಾಗಿದೆ.
ತಿರುಪ್ಪರಂಕುಂಡ್ರಂ ದರ್ಗಾದಲ್ಲಿ ಸಮಾಧಿಯಾಗಿರುವ ಸಿಕಂದರ್ ಬಾದುಷಾ ಮತ್ತು ಮಧುರೈ ಸುಲ್ತಾನತೆಯ ಕೊನೆಯ ದೊರೆ ಅಲ್ಲಾವುದ್ದೀನ್ ಸಿಕಂದರ್ ಶಾ ಇಬ್ಬರೂ ಒಂದೇ ವ್ಯಕ್ತಿಯೇ? ಎಂದು ಪರಿಶೀಲಿಸದೇ, ಗೊಂದಲ ಉಂಟುಮಾಡುವ ರೀತಿಯಲ್ಲಿ ಇತಿಹಾಸವನ್ನು ತಮ್ಮ ಮೂಗಿನ ನೇರಕ್ಕೆ ತಿರುಚಬಾರದು. ಆದೇ ರೀತಿಯಾಗಿ ಗಂಗಾದೇವಿ ರಚಿಸಿದ ಮಧುರಾ ವಿಜಯಂ ವಿಜಯನಗರದ ಕುಮಾರ ಕಂಪಣನ ಮಧುರೈ ವಿಜಯದ ಹಿನ್ನೆಲೆಯನ್ನು ತಿಳಿಸುವ ಪ್ರಮುಖ ಐತಿಹಾಸಿಕ ಕೃತಿಯಾಗಿದ್ದು ಅದನ್ನೂ ಸಹಾ ತೀರ್ಪು ನೀಡುವಾಗ ಪರಿಶೀಲಿಸಿ ಸೂಕ್ತ ತೀರ್ಮಾನವನ್ನು ನೀಡಬೇಕು ಎನ್ನುವುದೇ ಎಲ್ಲರ ಅಭಿಪ್ರಾಯವಾಗಿದೆ.
ರಾಜಕೀಯಕ್ಕಿಂತ ಕಾನೂನು ಮತ್ತು ಸಂವಿಧಾನವೇ ಮುಖ್ಯ
ತಮಿಳುನಾಡಿನಲ್ಲಿ ಈ ವಿವಾದ ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿದೆ. ಹಿಂದೂ ಧಾರ್ಮಿಕ ಆಚರಣೆಗಳ ಹಕ್ಕು, ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ, ಸಾರ್ವಜನಿಕ ಶಾಂತಿ ಮತ್ತು ಸರ್ಕಾರದ ಜವಾಬ್ದಾರಿ ಎಂಬ ವಿಷಯಗಳು ರಾಜಕೀಯ ಚರ್ಚೆಯ ಕೇಂದ್ರವಾಗಿವೆ. ಆದರೆ ಚುನಾಯಿತ ಸರ್ಕಾರವಾಗಿರಲಿ, ದೇವಸ್ಥಾನದ ಆಡಳಿತ ಮಂಡಳಿಯಾಗಿರಲಿ ಅಥವಾ ಯಾವುದೇ ಧಾರ್ಮಿಕ ಸಂಸ್ಥೆಯಾಗಿರಲಿ, ನ್ಯಾಯಾಲಯದ ಆದೇಶವನ್ನು ಪಾಲಿಸುವುದು ಎಲ್ಲರಿಗೂ ಕಡ್ಡಾಯ.
ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸಂವಿಧಾನದ 144ನೇ ವಿಧಿಯನ್ನು ಉಲ್ಲೇಖಿಸಿರುವುದು ಗಮನಾರ್ಹ. ಈ ವಿಧಿಯ ಪ್ರಕಾರ ಭಾರತದ ಎಲ್ಲ ನಾಗರಿಕ ಮತ್ತು ನ್ಯಾಯಾಂಗ ಪ್ರಾಧಿಕಾರಗಳು ಸುಪ್ರೀಂ ಕೋರ್ಟ್ಗೆ ನೆರವಾಗುವಂತೆ ಕಾರ್ಯನಿರ್ವಹಿಸಬೇಕು. ನ್ಯಾಯಾಲಯದ ಆದೇಶವನ್ನು ಪಾಲಿಸುವುದು ಸರ್ಕಾರದ ಆಯ್ಕೆಯ ವಿಷಯವಲ್ಲ. ಅದನ್ನು ಒಪ್ಪದಿದ್ದರೆ ಮೇಲ್ಮನವಿ ಸಲ್ಲಿಸಬಹುದು, ಮರುಪರಿಶೀಲನೆ ಕೋರಬಹುದು. ಆದರೆ ಆದೇಶವನ್ನು ತಾವೇ ನಿರ್ಲಕ್ಷಿಸುವಂತಿಲ್ಲ.
ನವೆಂಬರ್ 28ರ ದೀಪೋತ್ಸವ: ಮುಂದೇನು?
ಸುಪ್ರೀಂ ಕೋರ್ಟ್ನ ನವೆಂಬರ್ 27ರ ಆದೇಶದಂತೆ ತಮಿಳುನಾಡು ಸರ್ಕಾರ 2026 ನವೆಂಬರ್ 28ರಂದು ದೀಪತೂಣ್ನಲ್ಲಿ ದೀಪ ಬೆಳಗಿಸುವ ವ್ಯವಸ್ಥೆಯನ್ನು ಮಾಡಲೇಬೇಕಿದೆ
ಈ ಸಂದರ್ಭದಲ್ಲಿ CRPF ಭದ್ರತೆ, ದೇವಸ್ಥಾನದ ಆಡಳಿತದ ಮೇಲ್ವಿಚಾರಣೆಗೆ ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿಗಳು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸಮನ್ವಯ ಮಹತ್ವದ್ದಾಗಿದೆ. ದರ್ಗಾದಿಂದ ಕನಿಷ್ಠ 50 ಮೀಟರ್ ಅಂತರ ಕಾಯ್ದುಕೊಂಡು ಭಕ್ತರಿಗೆ ದೀಪ ಬೆಳಗಿಸಲು ಅವಕಾಶ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ. ದರ್ಗಾಕ್ಕೆ ಬರುವ ಮುಸ್ಲಿಂ ಭಕ್ತರ ಪ್ರಾರ್ಥನೆಗೂ ಯಾವುದೇ ಅಡ್ಡಿಯಾಗಬಾರದು ಎಂದು ಸ್ಪಷ್ಟಪಡಿಸಿದೆ. ಇದು ಕೇವಲ ಒಂದು ಧಾರ್ಮಿಕ ಆಚರಣೆಯ ನಿರ್ವಹಣೆಯಲ್ಲ;.ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸುವುದರ ಜೊತೆಗೆ ಎರಡೂ ಸಮುದಾಯಗಳ ಧಾರ್ಮಿಕ ಹಕ್ಕುಗಳನ್ನು ರಕ್ಷಿಸುವ ಪರೀಕ್ಷೆಯೂ ಹೌದು.
ಈ ಪ್ರಕರಣದ ಅಂತಿಮ ವಿಚಾರಣೆ ಇನ್ನೂ ಬಾಕಿಯಿದೆ. ದೀಪತೂಣ್ನ ನಿಜವಾದ ಸ್ವರೂಪ, ಅದರ ಐತಿಹಾಸಿಕ ಬಳಕೆ, ಸಂಪ್ರದಾಯದ ನಿರಂತರತೆ, ಆಸ್ತಿಯ ಹಕ್ಕು ಮತ್ತು ಸಂಬಂಧಪಟ್ಟವರ ಧಾರ್ಮಿಕ ಹಕ್ಕುಗಳ ಕುರಿತು ಅಂತಿಮ ತೀರ್ಮಾನವನ್ನು ನ್ಯಾಯಾಲಯದ ಮುಂದಿನ ವಿಚಾರಣೆಯೇ ನಿರ್ಧರಿಸಲಿದೆ.
ಅಂತಿಮವಾಗಿ…
ತಿರುಪ್ಪರಂಕುಂಡ್ರಂ ವಿವಾದ ನಮಗೆ ಒಂದು ಮಹತ್ವದ ಪಾಠವನ್ನು ಕಲಿಸುತ್ತದೆ. ಕಳೆದ ವರ್ಷ ಮಧುರೈ ಬೆಂಚ್ನ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ಕಾರ್ತೀಕ ದೀಪೋತ್ಸವವು ಹಿಂದೂ ಸಂಪ್ರದಾಯಕ್ಕೆ ಅನುಗುಣವಾಗಿದ್ದು, ಆ ಬೆಟ್ಟದ ಮೇಲಿರುವ ದೀಪಸ್ಥಂಭದ ಮೇಲೆ ದೀಪ ಹಚ್ಚುವುದರಿಂದ ಯಾರ ಸಂವೇದನೆಗಳನ್ನೂ ನೋಯಿಸುವುದಿಲ್ಲವಾದ್ದರಿಂದ ಡಿಸೆಂಬರ್ 1, 2025ರಂದು ಅಲ್ಲಿನ ದೀಪತೂಣ್ನಲ್ಲಿ ದೀಪ ಹಚ್ಚಲು ಹಿಂದೂಗಳಿಗೆ ಅನುಮತಿ ನೀಡುವ ಆದೇಶವನ್ನು ನೀಡಿದ್ದರು. ಹೀಗೆ ತಮ್ಮ ವಾದಕ್ಕೆ ಸೋಲಾಗಿ ಹಿಂದೂಗಳ ಪರ ಆದೇಶ ಬಂದುದ್ದು ಕಂಡು ಕೆರಳಿದ ಅಂದಿನ ಸ್ಟಾಲಿನ್ ನೇತೃತ್ವದ ಅವರ ಡಿಎಂಕೆ ಸರ್ಕಾರ ಮತ್ತು ಇಂದು ತಮಿಳುನಾಡಿನ ಸರ್ಕಾರದ ಪರವಾಗಿರುವ ಕಾಂಗ್ರೇಸ್ ಆ ಆದೇಶ ನೀಡಿದ್ದ, ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಅವರ ತೀರ್ಪಿನ ವಿರುದ್ಧ ಲೋಕಸಭಾ ಅಧಿವೇಶನದಲ್ಲಿ ಮಹಾಭಿಯೋಗವನ್ನು ಮಂಡಿಸಿ ಸೋಲನ್ನು ಹೊಂದಿತ್ತು.
ಚುನಾವಣಾ ಸಮಯದಲ್ಲಿ ಹಣೆಗೆ ವೀಭೂತಿ/ಕುಂಕುಮ ಹಚ್ಚಿಕೊಂಡು ಕಂಡ ಕಂಡ ಹಿಂದೂ ದೇವಾಲಯಗಳಿಗೆ ಕೇವಲ ವಿಜಯ್ ಎಂದೇ ಹೇಳಿಕೊಂಡು ಆಧಿಕಾರಕ್ಕೆ ಬಂದ ತಕ್ಷಣವೇ ಜೋಸೆಫ್ ವಿಜಯ್ ಎಂದು ತನ್ನ ಧರ್ಮದ ಅಸಲೀ ತನವನ್ನು ತೋರಿದ್ದವರನ್ನು ಕೇವಲ ಜನಪ್ರಿಯ ಚಲನಚಿತ್ರ ನಟ ಎಂದು ಆರಿಸಿ ಕಳುಹಿಸಿದ ತಮಿಳು ನಾಡಿನ ಹಿಂದೂಗಳಿಗೆ ಇದೊಂದು ಪಾಠವಾಗಿದೆ ಎಂದರೂ ತಪ್ಪಾಗದು. ಹಿಂದೂಸ್ಥಾನದಲ್ಲಿ ಹಿಂದೂಗಳೇ ಬಹುಸಂಖ್ಯಾತರಾಗಿದ್ದರೂ, ಹಿಂದೂ ವಿರೋಧಿ ಮನಸ್ಥಿಯವರು ಆಡಳಿತಕ್ಕೆ ಬಂದು ಹೇಗೆ ಹಿಂದೂಗಳನ್ನು ಧಾರ್ಮಿಕವಾಗಿ ತುಳಿಯುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರೂ ತಪ್ಪಾಗದು.
ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿ ಬೆಳಗುವ ಜ್ಯೋತಿ ಕೇವಲ ಕಾರ್ತಿಕ ದೀಪದ ಬೆಳಕಾಗಿರದೆ, ಅಥವಾ ಓಲೈಕೆಯ ರಾಜಕಾರಣಕ್ಕೆ ಒಂದು ಧರ್ಮಕ್ಕೆ ಮಾತ್ರವೇ ಸೀಮಿತವಾಗದೇ ನಿಸ್ಪಶ್ಷಪಾತವಾಗಿ ಕಾನೂನಿನ ಆಳ್ವಿಕೆ, ಪರಸ್ಪರ ಗೌರವ ಮತ್ತು ಧಾರ್ಮಿಕ ಸಹಬಾಳ್ವೆಯ ಸಂಕೇತವಾಗಲಿ ಎಂಬುದೇ ಎಲ್ಲರ ಆಶಯವಾಗಿದೆ
ಧರ್ಮೋ ರಕ್ಷತಿ, ರಕ್ಷಿತಃ!
ಏನಂತೀರೀ?
ನಿಮ್ಮವನೇ ಶ್ರೀಮಂತ