ಭರವಸೆಯ ಹಾದಿಯಲ್ಲಿ ಭಾರತೀಯ ಕ್ರೀಡಾರಂಗ

ಪ್ರತೀ ಬಾರೀ ಓಲಂಪಿಕ್ಸ್ ಕ್ರೀಡಾಕೂಟಗಳು ನಡೆದಾಗ ಪದಕಗಳ ಪಟ್ಟಿಯಲ್ಲಿ ಅಮೇರಿಕಾ, ಚೀನಾ, ಜಪಾನ್ ದೇಶಗಳದ್ದೇ ಪ್ರಾಬಲ್ಯ ಮೆರೆದು, ನಮ್ಮ ಭಾರತವನ್ನು  ಕೆಳಗಿನ ಸ್ಥಾನದಲ್ಲಿ ನೋಡುತ್ತಿದ್ದಾಗ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿಯೂ ಥಟ್ ಅಂತಾ ಮೂಡಿ ಬರುವುದೇ ನಾವೂ ನಮ್ಮ ದೇಶದ ಪರಿಸ್ಥಿತಿ ಹೀಗೇಕೆ? ಎನ್ನುವ ನಿರಾಶೆ. ಅದೇ ಗುಂಗಿನಲ್ಲಿ ತÀಮ್ಮೆಲ್ಲಾ ಗೆಳೆಯರೊಡನೇ, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಅಸಹನೆಯನ್ನು ವ್ಯಕ್ತಪಡಿಸುವ ಜನರೇನು ಕಡಿಮೆ ಇಲ್ಲ. ಆದರೆ ಈಗಷ್ಟೇ ಸಂಪನ್ನಗೊಂಡ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಳುಗಳ ಪ್ರದರ್ಶನವನ್ನು ಗಮನಿಸಿದರೆ ದೇಶದ ಕ್ರೀಡಾರಂಗ ಭರವಸೆಯ ಹಾದಿಯತ್ತ ಮುಖ ಮಾಡಿರುವ ಆಶಾಭಾವ ಮೂಡುತ್ತಿದೆ.

sp6ಒಲಂಪಿಕ್ಸ್ ಪದಕಕ್ಕೆ ಒಂದು ವಿಶೇಷ ಸ್ಥಾನವಿದೆ. ಹಿಂದೆ 1996ರ ಒಲಂಪಿಕ್ಸ್‍ನಲ್ಲಿ ಕಂಚು ಗೆದ್ದ ಟೆನ್ನಿಸ್ ಪಟು ಲಿಯಾಂಡರ್ ಪೇಸ್ ಏಕೈಕ ಭಾರತೀಯ ಕ್ರೀಡಾಳುವಾದಾಗ, 2000 ಇಸವಿಯ ಸಿಡ್ನಿ ಒಲಂಪಿಕ್ಸ್‍ನಲ್ಲಿ ಕರ್ಣಂ ಮಲ್ಲೇಶ್ವರಿ ವೇಯ್ಟ್ ಲಿಫ್ಟಿಂಗ್‍ನಲ್ಲಿ ಕಂಚು ಗೆದ್ದಾಗ, 2008ರ ಬೀಜಿಂಗ್ ಒಲಂಪಿಕ್ಸ್‍ನಲ್ಲಿ ಶೂಟರ್ ಅಭಿನವ್ ಬಿಂದ್ರಾ ಚಿನ್ನದ ಪದಕವನ್ನೇ ಗೆದ್ದಾಗ ಇಡೀ ದೇಶ ಸಂಭ್ರಮಿಸಿತ್ತು. ಆದರೆ ಪ್ರತಿ ಒಲಂಪಿಕ್ಸ್‍ನಲ್ಲಿ ಪದಕಪಟ್ಟಿಯಲ್ಲಿ ಭಾರತ ಮೇಲೇರಿರಲಿಲ್ಲ. ಆದರೆ ಈ ಬಾರಿಯ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಏಳು ಪದಕ ಗೆದ್ದ ಭಾರತ ತಂಡದ ಸಾಧನೆ ಇದುವರೆಗಿನೆ ಅತ್ಯುತ್ಕಷ್ಟ ದಾಖಲೆಯಾಗಿದೆ. ಹಾಗೆಯೇ ಪದಕ ಗೆಲ್ಲದಿದ್ದರೂ ಅನೇಕ ಕ್ರೀಡಾಪಟುಗಳ ಪ್ರದರ್ಶನ ಜನಮನ ಸೂರೆಗೊಂಡಿದೆ. ಉದಾಹರಣೆ ಇದುವರೆಗೂ ಯಾವ ಭಾರತೀಯ ಕ್ರೀಡಾಳುವೂ ಗಂಭೀರವಾಗಿ ಪರಿಗಣಿಸದ ಫೆನ್ಸಿಂಗ್ ಕ್ರೀಡೆಯಲ್ಲಿ ಅರ್ಹತೆ ಪಡೆದ ಭವಾನಿ ದೇವಿ ಪ್ರಶಸ್ತಿ ಗೆಲ್ಲಲು ತೀರ ಹತ್ತಿರಕ್ಕೆ ತಲುಪಿದರು. ಯಾರೂ ಊಹಿಸಲಾರದ ರೀತಿಯಲ್ಲಿ ಕರ್ನಾಟಕದವರೇ ಆದ ಗಾಲ್ಫ್ ಕ್ರೀಡಾಳು ಅದಿತಿ ಅಶೋಕ್ ಅತ್ಯುತ್ತಮ ಪ್ರದರ್ಶನ ನೀಡಿದರು. ಕುಸ್ತಿ, ಬಿಲ್ಗಾರಿಕೆ ಮೊದಲಾದ ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಳುಗಳು ಅತ್ಯುತ್ತಮ ಸ್ಪರ್ಧೆಯೊಡ್ಡಿದರು. ಇನ್ನೊಂದು ಸಂತಸದ ಬೆಳವಣಿಗೆ ಎಂದರೆ ಭಾರತದ ಹಾಕಿಯ ಪುನರುತ್ಥಾನ. ಹಿಂದೆ ಎಂಟು ಬಾರಿ ಚಿನ್ನದ ಪದಕ ಗೆದ್ದ ಭಾರತದ ಪುರುಷರ ತಂಡ 41 ವರ್ಷಗಳ ಬಳಿಕೆ ಒಲಂಪಿಕ್ಸ್ ಪದಕ ಗೆದ್ದರೆ, ನಾಲ್ಕನೇ ಸ್ಥಾನ ಪಡೆದ ಮಹಿಳಾ ತಂಡದ ಸಾಧನೆ ಎಲ್ಲರ ಮನಸೂರೆಗೊಂಡಿತು.

sp5ಈ ಪ್ರಗತಿಗೆ ಕಾರಣ ಭಾರತದಲ್ಲಿ ಕ್ರೀಡೆಗಳ ಕುರಿತು ಧೋರಣೆಯಲ್ಲಿ ಆದ ಬದಲಾವಣೆ, ತರಬೇತಿಯಲ್ಲಿ ಬಂದ ಗಂಭೀರತೆ, ಸಿದ್ಧತೆಯಲ್ಲಿ ಭಾರತದ ಕ್ರೀಡಾಳುಗಳು ಹಾಕುತ್ತಿರುವ ಪರಿಶ್ರಮ. ಎಲ್ಲಕ್ಕೂ ಮಿಗಿಲಾಗಿ ಕ್ರಿಡಾಳುಗಳಿಗೆ ಸಿಗುತ್ತಿರುವ ಪ್ರೇರಣೆ-ಪ್ರೋತ್ಸಾಹ. ಜಿಮ್ನಾಸ್ಟಿಕ್ಸ್‍ನಲ್ಲಿ ಕಳೆದ ಒಲಂಪಿಕ್ಸ್ ನಲ್ಲಿ ದೀಪ ಕರ್ಮಾರ್ಕರ್ 4ನೇ ಸ್ಥಾನ ಪಡೆದು ಪದಕವನ್ನು ಗೆಲ್ಲಲಿಲ್ಲವಾದರೂ, ಆಕೆಯ ಸಾಹಸ ಅನೇಕರಿಗೆ ಸ್ಫೂರ್ತಿ ನೀಡಲು ಸಹಕಾರಿಯಾಯಿತು ಎಂದರೆ ತಪ್ಪಲ್ಲ. ಇದರಿಂದಾಗಿಯೇ ಅಷ್ಟೇನೂ ಜನಪ್ರಿಯವಾಗಿಲ್ಲದಿದ್ದ ಕುಸ್ತಿ, ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಜಿಮ್ನಾಸ್ಟಿಕ್ಸ್, ಶೂಟಿಂಗ್ ಮುಂತಾದ ಆಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಕ್ರಿಡಾಪಟುಗಳು ತೊಡಗಿಸಿಕೊಳ್ಳಲು ಪ್ರೇರಣೆ ದೊರಕಿತು.

ಕರ್ಣಂ ಮಲ್ಲೇಶ್ವರಿ 2000ರ ಓಲಂಪಿಕ್ಸಿನಲ್ಲಿ ಕಂಚು ಪಡೆದಾಗ, ಆಕೆಯ ಸಂಪೂರ್ಣ ತರಬೇತಿ ಭಾರತದಲ್ಲಿ ಮತ್ತು ಭಾರತೀಯರ ತರಬೇತುದಾರರಿಂದ ದೊರಕಿತ್ತು.  ಆದರೆ, 2021ರ ಟೋಕಿಯೋ ಓಲಂಪಿಕ್ಸಿನಲ್ಲಿ ಬೆಳ್ಳಿ ಪದಕವನ್ನು ಪಡೆದ ಮೀರಾಭಾಯಿ ಚಾನು ಅವರ ಸಾಮಥ್ರ್ಯವನ್ನು ಚಿಕ್ಕವಯಸ್ಸಿನಲ್ಲಿಯೇ ಗುರುತಿಸಿ ಆಕೆಗೆ ಅಂತರರಾಷ್ಟ್ರೀಯ ಮಟ್ಟದ ಉತ್ತಮ ತರಬೇತುದಾರರಿಂದ ಸೂಕ್ತವಾದ ತರಬೇತಿ ಕೊಡಿಸಿದ ಪರಿಣಾಮ ಪದಕ ಗೆಲ್ಲಲು ಸಹಕಾರಿಯಾಗಿತು. ಅದೇ ರೀತಿ ಪಂಜಾಬ್ ಪ್ರಾಂತ್ಯದ  ಕುಸ್ತಿಪಟುಗಳಾದ ಪೋಗಟ್ ಸಹೋದರಿಯರು ಆರಂಭದಲ್ಲಿ ಅವರ ತಂದೆ ಮಹಾವೀರ್ ಸಿಂಗ್ ಪೋಗಟ್ ಅವರಿಂದ ತರಭೇತಿ ಪಡೆದರೂ ನಂತರ ದಿನಗಳಲ್ಲಿ ಅವರ ತರಭೇತಿಯನ್ನು ಕೇವಲ ಹರಿಯಾಣಕ್ಕೆ ಮಾತ್ರವೇ  ಸೀಮಿತಗೊಳಿಸದೇ, ಕಳೆದ 2 ವರ್ಷಗಳಿಂದ ಅವರನ್ನು ವಿದೇಶಗಳಲ್ಲಿಯೂ ಉನ್ನತ ದರ್ಜೆಯ ಸೌಲಭ್ಯಗಳಲ್ಲಿ ತರಬೇತಿ ಕೊಡಿಸಿದ ಕಾರಣವೇ ಅವರ ಸಾಧನೆಯ ಮಟ್ಟ ಏರುತ್ತಿದೆ ಎಂದರೂ ತಪ್ಪಾಗಲಾರದು.

sp7ಕ್ರೀಡಾ ಕ್ಷೇತ್ರಗಳಲ್ಲಿ ಭಾರತೀಯರ ಯಶಸ್ಸಿಗೆ ಭಾರತೀಯ ಸೈನ್ಯದ ಕೊಡುಗೆಯೂ ಹೆಚ್ಚಾಗಿಯೇ ಇದೆ. ಸದ್ಯದ ಭಾರತಿಯ ಪ್ರಮುಖ ಹಾಕಿ, ಶೂಟಿಂಗ್ ಬಾಕ್ಸಿಂಗ್, ಅಥ್ಲೆಟಿಕ್ಸ್ ಆಟಗಳಲ್ಲಿ ಅನೇಕ ಸೈನಿಕ ಕ್ರೀಡಾಳುಗಳು ಭಾಗವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಸಾಮಾನ್ಯ ಸೈನಿಕನಾಗಿ 17ನೇ ವರ್ಷಕ್ಕೆ ಸೈನ್ಯದಲ್ಲಿ ಭರ್ತಿಯಾದ ಯುವಕ ನೀರಜ್ ಚೋಪ್ರಾ ಅವರಿಗೆ ಸೂಕ್ತವಾದ ತರಬೇತಿಯನ್ನು ಕೊಡಿಸಿದ ಕಾರಣದಿಂದಾಗಿಯೇ ಈ ಬಾರಿಯ ಓಲಂಪಿಕ್ಸ್‍ನಲ್ಲಿ ಭಾರತಕ್ಕೆ ಅಥ್ಲೆಟಿಕ್ಸಿನಲ್ಲಿ ಮೊದಲ ಬಾರಿಗೆ ಚಿನ್ನದ ಪದಕವನ್ನು ಗಳಿಸುವಂತಾಗಿದೆ. ಹಿಂದೆ ಸೈನ್ಯದ ಸೇವೆಯಲ್ಲಿದ್ದ ಇದ್ದ ರಾಜವರ್ಧನ್ ಸಿಂಗ್ ರಾಥೋಡ್ ಸಹಾ ಓಲಂಪಿಕ್ಸ್ ಶೂಟಿಂಗ್‍ನಲ್ಲಿ ರಜತ ಪದಕವನ್ನು ಗೆದ್ದು ನಂತರ ಕೇಂದ್ರ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿದ್ದರು.

sp2ದೇಶದ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಸರ್ಕಾರಗಳ ಪಾತ್ರವೂ ಹಿರಿದು. ಕೇಂದ್ರ ಸರ್ಕಾರವೂ ಸೇರಿ ಪ್ರತಿ ರಾಜ್ಯದಲ್ಲಿಯೂ ಕ್ರೀಡಾ ಸಚಿವಾಲಯವಿದೆ, ಅದಕ್ಕಾಗಿ ಅನುದಾನವನ್ನೂ ಬಿಡುಗಡೆಗೊಳಿಸಲಾಗುತ್ತದೆ, ಸರ್ಕಾರದ ಅಧೀನದಲ್ಲಿ ಅನೇಕ ಕ್ರೀಡಾ ಸಂಸ್ಥೆಗಳೂ ಕಾರ್ಯ ನಿರ್ವಹಿಸುತ್ತವೆ. ಆದರೂ ಫಲಿತಾಂಶ ತೃಪ್ತಿಕರವಾಗಿಲ್ಲ ಎಂದರೆ ಅಲ್ಲಿ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ. ಗೆದ್ದಾಗ ಒಂದಿಷ್ಟು ಬಹುಮಾನ ಘೋಷಿಸಿ ಕೈತೊಳೆದುಕೊಳ್ಳುವುದೇ ಪ್ರಮುಖ ಕೆಲಸ ಎಂದೆನಿಸಿಬಿಟ್ಟಿದೆ. ಆದರೆ ಈಚೆಗೆ ಕ್ರೀಡೆಯ ಕುರಿತು ಸರ್ಕಾರದ ಇಲಾಖೆಗಳ ವಿಶೇಷವಾಗಿ ಕೇಂದ್ರ ಸರ್ಕಾರದ ಧೋರಣೆ ಬದಲಾವಣೆಗೊಂಡಿದ್ದನ್ನು ಕಾಣಬಹುದು. ಭಾರತದ ಹಾಕಿ ತಂಡಕ್ಕೆ ಪ್ರಾಯೋಜಕರೇ ಇಲ್ಲದೇ ಸಂಕಷ್ಟ ಉಂಟಾದಾಗ 2018ರಲ್ಲಿ ಒಡಿಶಾ ಸರ್ಕಾರ ಪ್ರಾಯೋಕತ್ವ ವಹಿಸಿಕೊಂಡಿತು, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸ್ವಯಂ ಮುತುವರ್ಜಿ ವಹಿಸಿದರು.

ಗುಜರಾತ್ ಸರ್ಕಾರ ಖೇಲ್ ಮಹಾಕುಂಭ್‍ದಂತಹ ಕಾರ್ಯಕ್ರಮ ರೂಪಿಸಿ ಕ್ರೀಡೆಯಲ್ಲಿ ಆಸಕ್ತಿ ಮೂಡಿಸುವ ಕೆಲಸ ಮಾಡಿತು. ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆ ನಡೆಸುವ ವಾರ್ಷಿಕ ಖೇಲೋ ಇಂಡಿಯಾ ಕ್ರೀಡಾಕೂಟ ಅಭಿಯಾನಗಳು ದೇಶದ ಯುವಕರು ಆಟಗಳತ್ತ ಮುಖಮಾಡಲು ಪ್ರೇರೇಪಿಸಿತು.

sp3ಹಾಗೆಯೇ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ತರಭೇತಿಯನ್ನು ನೀಡುವುದರ ಜೊತೆಗೆ ಅವರಿಗೆ ಆರ್ಥಿಕ ಭಧತೆಯನ್ನು ಒದಗಿಸುವ, ಸರ್ಕಾರಿ ಕೆಲಸಗಳನ್ನು ಕೊಡಿಸುವ ಸರ್ಕಾರಗಳ ಕ್ರಮಗಳಿಂದ ಅನೇಕ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಗಿದೆ. ಇಂತಹ ಸದುಪಯೋಗವನ್ನು ಅದರಲ್ಲೂ ಈಶಾನ್ಯ ಭಾರತದ ಮತ್ತು ಪಂಜಾಬ್ ಪ್ರಾಂತ್ಯದ ಕ್ರೀಡಾಪಟುಗಳು ಹೆಚ್ಚಿನ ರೀತಿಯಲ್ಲಿ ಬಳಸಿಕೊಂಡು ಕ್ರೀಡೆಗಳಲ್ಲಿ ಉನ್ನತ ಮಟ್ಟಕ್ಕೇರುತ್ತಿರುವುದು ನಿಜಕ್ಕೂ ಭಾರತಕ್ಕೆ ಆಶಾಕಿರಣವಾಗಿದೆ.

ಒಲಂಪಿಕ್ಸ್ ಕ್ರೀಡಾಕೂಟ ಕ್ರೀಡಾಳುಗಳ ತರಬೇತಿ, ಅವರ ಅವಶ್ಯಕತೆಗಳನ್ನು ಪೋರೈಸಲು ಕೇಂದ್ರ ಕ್ರೀಡಾ ಸಚಿವಾಲಯ ಖುದ್ದು ಆಸ್ಥೆ ವಹಿಸಿದುದರ ಜೊತೆಗೆ ಪ್ರಧಾನಮಂತ್ರಿಗಳೇ ಆಸಕ್ತಿ ವಹಿಸಿ ಗಮನಿಸಿದರು. ಅವರು ಕ್ರೀಡಾಳುಗಳನ್ನು ಪ್ರದರ್ಶನಕ್ಕೆ ಮೊದಲು, ನಂತರ ಸ್ವಯಂ ಮಾತನಾಡಿಸಿ ಹುರಿದುಂಬಿಸುವ ಪರಿ, ಪ್ರತಿಯೊಬ್ಬ ಕ್ರೀಡಾಪಟುವಿನ ಹೆಸರು ಹೇಳಿ ವಿಚಾರಿಸುವ ಮಟ್ಟಿಗಿನ ಆಸಕ್ತಿ ಕ್ರೀಡಾಳುಗಳ ಹುಮ್ಮಸ್ಸನ್ನು ದ್ವಿಗುಣಗೊಳಿಸಿತು. ಮೊದಲೆಲ್ಲ ಒಲಂಪಿಕ್ಸ್ ಸಮಯದಲ್ಲಿ ಭಾರತದ ಕ್ರೀಡಾಮಂತ್ರಿ, ಒಲಂಪಿಕ್ಸ್ ಸಮಿತಿಯ ಅಧ್ಯಕ್ಷ, ಅಧಿಕಾರಿಗಳು ಅತಿಥಿಗಳಂತೆ ಕ್ರೀಡಾಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಆದರೆ ಈ ಬಾರಿ ಸ್ವಯಂ ಕ್ರೀಡಾ ಮಂತ್ರಿಗಳೇ ಠಿಕಾಣಿ ಹೂಡಿ ಜೊತೆಯಾಗಿದ್ದುದು ಸರ್ಕಾರ ಕ್ರೀಡೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತದೆ ಎನ್ನುವ ಸಂದೇಶವನ್ನು ನೀಡಿತು. ಹಾಗೆಯೇ ಒಲಂಪಿಕ್ಸ್ ನಲ್ಲಿ ಪಾಲ್ಗೊಂಡ ಎಲ್ಲ ಕ್ರೀಡಾಳುಗಳು, ತರಬೇತುದಾರರು, ಸಹಾಯಕರನ್ನೆಲ್ಲ ಆಹ್ವಾನಿಸಿ ಪ್ರತಿಯೊಬ್ಬರನ್ನೂ ಗೌರವಿಸಿದ ಪರಿ ಅವಿಸ್ಮರಣೀಯ ಪ್ರೇರಣೆ ಎಂದು ಸ್ವಯಂ ಕ್ರೀಡಾಪಟುಗಳೇ ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನು ದೇಶದ ಕ್ರೀಡಾ ದಿಗ್ಗಜರಾದ ಕಪಿಲ್ ದೇವ್, ಅಂಜು ಬಾಬಿ ಜಾರ್ಜ್ ಮೊದಲಾದವರೆಲ್ಲ ಶ್ಲಾಘಿಸಿದರು.

ಒಟ್ಟಿನಲ್ಲಿ ಭಾರತದ ಕ್ರೀಡಾರಂಗ ಭರವಸೆಯ ಪಥದಲ್ಲಿ ಸಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ನಮ್ಮಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ಪ್ರತಿಭೆ ಪ್ರಕಾಶಗೊಳ್ಳಬೇಕಿದೆ, ಪ್ರತಿಭೆಗೆ ನೀರೆರೆಯಬೇಕಿದೆ. ಸರ್ವರ ಸಾಮೂಹಿಕ ಪ್ರಯತ್ನ, ಕ್ರೀಡಾ ಪ್ರತಿಭೆಗಳ ಪರಿಶ್ರಮದಿಂದ ಮುಂದಿನ ದಿನಗಳಲ್ಲಿ ಭಾರತದ ರಾಷ್ಟ್ರಗಾನ ವಿಶ್ವದ ಕ್ರೀಡಾಂಗಣದಲ್ಲಿ ಮೊಳಗಲಿ. ಭಾರತ ಕ್ರೀಡಾ ರಾಷ್ಟ್ರವಾಗಿ ಹೊರಹೊಮ್ಮಲಿ.

ಕ್ರೀಡೆ ಕೇವಲ ಮನರಂಜನೆಗಲ್ಲ. ಅದು ಗೆಲ್ಲಲೇಬೇಕೆನ್ನುವ ಪೈಪೋಟಿಯೂ ಅಲ್ಲ. ಇಂಗ್ಲೀಷ್ ಭಾಷೆಯಲ್ಲಿ ಸ್ಪೋಟ್ರ್ಸಮನ್‍ಶಿಪ್, ಸ್ಪೋಟ್ರ್ಸಮನ್ ಸ್ಪಿರಿಟ್-ಕ್ರೀಡಾ ಸ್ಪೂರ್ತಿ, ಕ್ರೀಡಾ ಪ್ರವೃತ್ತಿ ಎನ್ನುವ ನುಡಿಗಟ್ಟಿದೆ. ಉತ್ತಮ ವಿಜೇತನಾದಂತೆ ಉತ್ತಮ ಪರಾಜಿತನಾಗುವ ಗುಣವೂ ಇರಬೇಕು, ಸೋಲು ಮತ್ತು ಗೆಲುವು ಎರಡನ್ನೂ ವಿನಮ್ರನಾಗಿ ಸ್ವೀಕರಿಸಬೇಕು ಎನ್ನುವುದು ಅದರ ಅರ್ಥ. ಅಂದರೆ ಕ್ರೀಡೆ ಬಯಸುವುದು ಕ್ರೀಡಾ ಪ್ರವೃತ್ತಿಯನ್ನು. ಓರ್ವ ಕ್ರೀಡಾಳು ಉತ್ತಮ ಪ್ರದರ್ಶನ ನೀಡಬೇಕಿದ್ದರೆ ಆತನ ಶಾರೀರಿಕ ಪಟುತ್ವದ ಜೊತೆಗೆ ಮನ-ಬುದ್ಧಿಗಳ ಸಮತೋಲನವೂ ಅತ್ಯಗತ್ಯ. ಹಾಗಾಗಿ ಕ್ರೀಡೆ ಸ್ವಾಸ್ಥ್ಯದ ಸಂಕೇತ, ಶರೀರ-ಮನ-ಬುದ್ಧಿಗಳ ಆರೋಗ್ಯಪೂರ್ಣ ವಿಕಾಸ ಮಾರ್ಗ. ಹಾಗೆಯೇ ಯುದ್ಧಕ್ಷೇತ್ರದಲ್ಲಿ ಹೋರಾಟಕ್ಕಿಳಿದಿರುವ ಸೈನಿಕನ ಚಿತ್ತಸ್ಥಿತಿಯನ್ನು ಹೋಲಿಸಬಹುದಾದ ಇನ್ನೊಂದಿದ್ದರೆ ಅದು ಕ್ರೀಡಾಕಣದಲ್ಲಿ ನಿಂತಿರುವ ಕ್ರೀಡಾಪಟುವಿನ ಮನಃಸ್ಥಿತಿ. ಆದ್ದರಿಂದಲೇ ಕ್ರೀಡೆಗೆ ಮೈನವಿರೇಳಿಸುವ, ಕೌತುಕದ ತುದಿಗಾಲ ಮೇಲೆ ನಿಲ್ಲಿಸುವ ಗುಣವಿರುವುದು. ಇವೆಲ್ಲ ಕಾರಣಗಳಿಂದ ಆಟಗಳಿಗೆ ನಮ್ಮ ಜೀವನದಲ್ಲಿ ಒಂದು ಪ್ರಮುಖ ಸ್ಥಾನ ದೊರಕಿರುವುದು.

ಕ್ರೀಡೆಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಇಂದು ವಿಶ್ವದಾದ್ಯಂತ ಒಂದು ಉನ್ನತ ಮನ್ನಣೆ ಇದೆ. ಕ್ರೀಡೆಯನ್ನು ತಮ್ಮ ಜೀವನದ ವೃತ್ತಿಮಾರ್ಗವಾಗಿ-ಕೆರಿಯರ್ ಆಗಿ ಆಯ್ದುಕೊಂಡು ಯಶಸ್ವಿಯಾದ ಸಾವಿರಾರು ಉದಾಹರಣೆಗಳನ್ನು ನಾವು ಭಾರತವನ್ನೂ ಸೇರಿದಂತೆ ವಿಶ್ವದಾದ್ಯಂತ ಕಾಣಬಹುದು. ಓರ್ವ ಯಶಸ್ವಿ ಕ್ರೀಡಾಳು (ಕೇವಲ ಪದಕ ಗೆದ್ದ ಆಧಾರದ ಮೇಲಲ್ಲ, ಆತನ/ಆಕೆಯ ಕ್ರೀಡಾ ಪ್ರವೃತ್ತಿಯನ್ನು ಆಧರಿಸಿ) ಲಕ್ಷಾಂತರ ಜನರಿಗೆ ಪ್ರೇರಣೆಯಾಗಿರುವ ನಿದರ್ಶನಗಳನ್ನು ನಾವು ಗಮನಿಸಬೇಕು. ಇಂದು ಕ್ರೀಡಾರಂಗ ಎಲ್ಲೆ ಮೀರಿದ ಅವಕಾಶಗಳನ್ನು ತೆರೆದಿಟ್ಟಿದೆ. ಆಟೋಟಗಳು ಕ್ರೀಡಾ ಪರಿಕರಗಳ ಉದ್ಯಮವೂ ಸಾಕಷ್ಟು ಬೆಳೆದಿದೆ. ಆದ್ದರಿಂದ ಕ್ರೀಡಾರಂಗವೂ ಕೂಡ ನಮ್ಮ ಆಯ್ಕೆಯ ಕೆರಿಯರ್ ಆಗಬಲ್ಲದು, ಕ್ರೀಡೆಯನ್ನು ವೃತ್ತಿಯಾಗಿ ಸ್ವೀಕರಿಸಬಹುದು ಎನ್ನವುದನ್ನು ಯುವಜನರು ಮನಗಾಣಬೇಕು. ನಮ್ಮ ಮಕ್ಕಳೂ ಕ್ರೀಡಾಳುಗಳಾಗಿ ಮನ್ನಣೆ ಗಳಿಸಬಲ್ಲರು ಎನ್ನುವುದನ್ನು ಪೋಷಕರೂ ಅರಿಯಬೇಕು.

ಏನಂತೀರೀ?

ನಿಮ್ಮವನೇ ಉಮಾಸುತ

ಈ ಲೇಖನ ಪುಂಗವ ಪಾಕ್ಷಿಕ ಮಾಸಪತ್ರಿಕೆಯ ಆಗಸ್ಟ್ -2021ರ ಸಂಚಿಕೆಯಲ್ಲಿ ಪ್ರಕಟವಾಗಿದೆ

Pungava

ಈ ಗೆಲುವನ್ನು ನೋಡಲು ಅಪ್ಪಾ ಇರ್ಬೇಕಿತ್ತು

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಮನೆಯಲ್ಲಿ ಎಲ್ಲರೂ ಇಷ್ಟ ಪಡುವ ಮತ್ತು ಅದೇ ಕುರಿತಾಗಿ ಆಗಾಗ ವಿವಾದವೂ ಏರ್ಪಡುವ ವಿಷಯವೆಂದರೆ ಕ್ರಿಕೆಟ್. ಅಗಲಿದ ಅಪ್ಪ ಅಮ್ಮಾ ನಿಂದ ಹಿಡಿದು ನಾನು ನಮ್ಮಾಕಿ, ಮುದ್ದಿನ ಮಗಳು ಮತ್ತು ನಮ್ಮ ಮನೆಯ ಸ್ವಘೋಷಿತ ಕ್ರಿಕೆಟ್ ಎಕ್ಸಪರ್ಟ್ ಮಗ ಎಲ್ಲರೂ ಕ್ರಿಕೆಟ್ ಪ್ರಿಯರೇ. ಆದರೆ ಬೆಂಬಲಿಸುವ ಆಟಗಾರರು ಮತ್ತು ತಂಡಗಳು ಮಾತ್ರಾ ವಿಭಿನ್ನ.

ವಿಶ್ವ ಟೆಸ್ಟ್ ಕ್ರಿಕೆಟ್ ಛಾಂಪಿಯನ್ ಶಿಪ್ಪಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವಿನ ಹಾದಿಯಲ್ಲಿದ್ದು ಕಡೆಯಲ್ಲಿ ಆದ ಕೆಲವು ಅನಿರೀಕ್ಷಿತ ಘಟನೆಗಳಿಂದ ಸೋತು ಹೊಗಿದ್ದು ನಿಜಕ್ಕೂ ಬೇಸರವನ್ನು ತರಿಸಿತ್ತು. ಕಳೆದು ಹೊದುದ್ದರ ಬಗ್ಗೆ ಚಿಂತಿಸಿ ಫಲವಿಲ್ಲ. ಇಂಗ್ಲೇಂಡ್ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮವಾಗಿ ಆಡಲಿದ್ದಾರೆ ಎಂಬ ಭರವಸೆಯನ್ನು ಇಟ್ಟುಕೊಂಡಿದ್ದೆವು. ಅದೇ ರೀತಿ ಮೊದಲ ಪಂದ್ಯ ಇನ್ನೇನು ಭಾರತ ತಂಡ ಮೊದಲ ಗೆಲುವಿನೊಂದಿಗೆ ಶುಭಾರಂಭ ಮಾಡುತ್ತದೆ ಎಂದು ಎಣಿಸಿದ್ದಕ್ಕೆ ಸರಿಯಾಗಿ ನಾಲ್ಕನೇಯ ದಿನದ ಅಂತ್ಯದಲ್ಲಿ ಇನ್ನೇನು ಭಾರತ ಸುಲಭವಾಗಿ ಗೆಲ್ಲಬಹುದು ಎಂದೆಣಿಸಿದ್ದವರಿಗೆ ಮಳೆರಾಯ ಅಡ್ಡಿ ಬಂದು ಪಂದ್ಯ ಡ್ರಾನಲ್ಲಿ ಮುಕ್ತಾಯವಾಗಿದ್ದು ತುಸು ಬೇಸರವನ್ನು ತರಿಸಿತ್ತಾದರೂ, ಪ್ರತಿಭಾನ್ವಿತ ಕನ್ನಡಿಗ ರಾಹುಲ್ ಅಚಾನಕ್ಕಾಗಿ ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಸದುಪಯೋಗ ಪಡಿಸಿಕೊಂಡಿದ್ದು, ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತಾಗಿತ್ತು.

gangually

ಎರಡನೆಯ ಪಂದ್ಯ. ಅದರಲ್ಲೂ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಎಂದಾಗ ಇನ್ನೂ ಕುತೂಹಲ ಹೆಚ್ಚಾಗಿತ್ತು. ಸಾಧಾರಣವಾಗಿ ಭಾರತೀಯರಿಗೆ ಲಾರ್ಡ್ಸ್ ಮೈದಾನ ತುಸು ಅದೃಷ್ಟಕರ ಎಂದೇ ಹೇಳಬಹುದು. ಒಂದೋ ಭಾರತೀಯರು ಪಂದ್ಯವನ್ನು ಗೆಲ್ಲುತ್ತಾರೆ ಇಲ್ಲವೇ ಭಾರತದ ಆಟಗಾರರು ವಯಕ್ತಿಕವಾಗಿ ಅಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ. 1983 ರ ವಿಶ್ವಕಪ್ ಗೆದ್ದದ್ದು ಅಲ್ಲಿಯೇ, ಲಾರ್ಡ್ಸ್ ನಲ್ಲಿ ಸತತವಾಗಿ ಆಡಿದ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ವಿಶ್ವದ ಏಕೈಕ ಆಟಗಾರ ಎಂಬ ಕೀರ್ತಿ ಇನ್ನೂ ದಿಲೀಪ್ ವೆಂಗ್ಸರ್ಕಾರ್ ಅವರ ಹೆಸರಿನಲ್ಲಿಯೇ ಇದೆ. ಟೆಸ್ಟ್ ಪಾದಾರ್ಪಣೆ ಮಾಡಿದ ಪಂದ್ಯದಲ್ಲಿಯೇ ಶತಕ ಗಳಿಸಿದ ಗಂಗೂಲಿ ಮತ್ತು ಕೇವಲ 5 ರನ್ನುಗಳಿಂದ ರಾಹುಲ್ ಶತಕವಂಚಿತರಾಗಿದ್ದೂ ಇದೇ ಲಾರ್ಡ್ಸ್ ನಲ್ಲಿಯೇ. ಇನ್ನು ನ್ಯಾಟ್ವೆಸ್ಟ್ ಟ್ರೋಫಿಯ ಅಂತಿಮ ಪಂದ್ಯದಲ್ಲಿ ಯುವರಾಜ್ ಮತ್ತು ಕೈಫ್ ಅಸಂಭವವಾದ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದಾಗ ಗಂಗೂಲಿ ತನ್ನ ಅಂಗಿಯನ್ನು ಬಿಚ್ಚಿ ತಿರುಗಿಸಿದ್ದೂ ಇದೇ ಲಾರ್ಡ್ಸ್ ಬಾಲ್ಕನಿಯಲ್ಲಿಯೇ. 2014 ರಲ್ಲಿ ದೋನಿ ನಾಯಕತ್ವದಲ್ಲಿ ಜಯಗಳಿಸಿದ್ದೂ ಇದೇ ಮೈದಾನದಲ್ಲಿಯೇ ಹೀಗೆ ಲಾರ್ಡ್ಸ್ ಮೈದಾನ ಭಾರತೀಯರಿಗೆ ಒಂದು ರೀತಿಯ ಅದೃಷ್ಟದ ಮೈದಾನವಾಗಿದ್ದ ಕಾರಣ ಈ ಪಂದ್ಯ ಬಹಳ ಕುತೂಹಲಕಾರಿಯಾಗಿತ್ತು.

cr6

ಟಾಸ್ ಗೆದ್ದ ಇಂಗ್ಲೇಂಡ್ ತಂಡ ಭಾರತಕ್ಕೆ ಮೊದಲು ಬ್ಯಾಟ್ ಮಾಡಲು ಕರೆ ಇತ್ತಾಗ, ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅತ್ಯಂತ ಎಚ್ಚರಿಕೆಯ ಶತಕದ ಜೊತೆಯಾಟವನ್ನಾಡಿ 83 ರನ್ನುಗಳಿಗೆ ರೋಹಿತ್ ಔಟಾದರೇ, ಅಂತಹ ಕಠಿಣ ಬ್ಯಾಟಿಂಗ್ ಪರಿಸ್ಥಿತಿಯಲ್ಲಿ ರಾಹುಲ್ ಅದ್ಭುತವಾಗಿ ಶತಕ ಗಳಿಸಿದ ಪರಿಣಾಮ ಭಾರತ ತಂಡ ಸ್ಪರ್ಧಾತ್ಮಕ ಮೊತ್ತವಾದ 364ರನ್ನುಗಲನ್ನು ಗಳಿಸಿತು. ಇದಕ್ಕೆ ಉತ್ತರವಾಗಿ ಇಂಗ್ಲೇಂಡ್ ತಂಡದ ನಾಯನ ಭರ್ಜರಿ 180 ರನ್ನುಗಳ ಸಹಾಯದಿಂದ ಮೂರನೇ ದಿನದಂತ್ಯಕ್ಕೆ ಅತ್ಯಲ್ಪ ಮುನ್ನಡೆಯೊಂದಿಗೆ 391ರನ್ನುಗಳಿಗೆ ಆಲೌಟ್ ಆದಾಗ ಉಳಿದ ಇನ್ನೆರಡು ದಿನಗಳಲ್ಲಿ ಹೆಚ್ಚೆನದ್ದೇನು ಸಂಭವಿಸದೇ ಡ್ರಾದಲ್ಲಿ ಮುಕ್ತಾಯವಾಗುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು.

anthem

ಮೂರನೇಯ ದಿನ ಪಂದ್ಯ ಆರಂಭವಾಗುವ ಮೊದಲು ಲಾರ್ಡ್ಸ್ ಮೈದಾನದಲ್ಲಿ ಸೇರಿದ್ದ ಸಾವಿರಾರು ಬ್ರೀಟೀಷರ ಸಮ್ಮುಖದಲ್ಲಿಯೇ ಭಾರತೀಯರು ನಮ್ಮ 75ನೇ ಸ್ವಾತ್ರಂತ್ರ್ಯೋತ್ಸವದ ಅಂಗವಾಗಿ ತ್ರಿವರ್ಣ ಧ್ವಜವನ್ನು ಹಾರಿಸಿ ನಮ್ಮ ರಾಷ್ಟ್ರಗೀತೆಯನ್ನು ಮುಗಿಲು ಮುಟ್ಟುವಂತೆ ಹಾಡಿದ್ದು ನಿಜಕ್ಕೂ ವರ್ಣಿಸಲದಳವಾಗಿತ್ತು.

cr4

ತಾನೊಂದು ಬಗೆದರೆ ದೈವವೊಂದು ಬಗೆದಿತು ಎನ್ನುವಂತೆ ಕೇವಲ 27 ರನ್ನುಗಳಷ್ಟರಲ್ಲಿ ಆರಂಭಿಕ ಆಟಗಾರನ್ನು ಕಳೆದುಕೊಂಡು ತಾಂತ್ರಿಕವಾಗಿ ಹೇಳಬೇಕೆಂದರೆ 0-2 ವಿಕೆಟ್ ಕಳೆದುಕೊಂಡಾಗ ಅಕ್ರಮಣಕಾರಿ ಆಟಕ್ಕಿಳಿದ ನಾಯಕ ಕೊಹ್ಲಿ ಇಂಗ್ಲೇಂಡ್ ತಂಡದ ಮೇಲೆ ಒತ್ತಡವನ್ನು ಹೇರಿದರೂ ಅವರೂ ಸಹಾ ಹೆಚ್ಚಿನ ಹೊತ್ತು ನಿಲ್ಲದೇ ಔಟಾದಾಗ, ಸತತ ವೈಫಲ್ಯಗಳಿಂದ ನಲುಗುತ್ತಿರುವ ಪೂಜಾರ ಮತ್ತು ರಹಾನೆ ಅವರ ಮೇಲೆ ಪಂದ್ಯದ ಅಳಿವು ಉಳಿವು ನಿಂತಿತು. ತಮ್ಮ ಅಪಾರವಾದ ಅನುಭವದ ಮೂಲಕ ಟೆಸ್ಟ್ ಪಂದ್ಯಾವಳಿಗೆಂದೇ ಹೇಳಿ ಮಾಡಿಸಿರುವ ಈ ಇಬ್ಬರೂ ಆಟಗಾರರು, ಅಂತಹ ಒತ್ತಡದ ನಡುವೆಯೂ ಗುಣಮಟ್ಟದ ರಕ್ಷಣಾತ್ಮಕವಾದ ಆಟವನ್ನು ಆಡಿದ್ದಲ್ಲದೇ, ಅದ್ಭುತವಾಗಿ 100 ರನ್ ಗಳ ಜೊತೆಯಾಟವಾಡಿದ್ದಲ್ಲದೇ ಇಂಗ್ಲೇಂಡ್ ತಂಡದ ಬೋಲರ್ಗಳಿಗೆ ನೀರಿಳಿಸುವಂತೆ ಮಾಡಿದರೂ ಅಂತಿಮವಾಗಿ ಅವರಿಬ್ಬರ ಜೊತೆಗೆ ಮತ್ತೊಬ್ಬ ಆಪಧ್ಭಾಂಧವ ಜಡೇಜಾ ದಿನದಂತ್ಯಕ್ಕೆ ಔಟಾಗುವ ಮೂಲಕ ಭಾರತ ತಂಡ 4ನೇ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿ, 154 ರನ್ಗಳ ಮುನ್ನಡೆಯಲ್ಲಿದ್ದಾಗ ಬಹುತೇಕ ಭಾರತ ತಂಡ ಪಂದ್ಯ ಸೋಲುತ್ತದೆ ಎಂದು ಭಾವಿಸಿ ವರುಣ ದೇವನೇ ದಯವಿಟ್ಟು ಐದನೇಯ ದಿನ ಮಳೆಯನ್ನು ಸುರಿಸಿ ಭಾರತ ತಂಡವನ್ನು ಸೋಲಿನಿಂದ ಪಾರು ಮಾಡು ಎಂದು ಪ್ರಾರ್ಥಿಸಿದ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೇನು ಕಡಿಮೆ ಇರಲಿಲ್ಲ.

cr3

ಐದನೆಯ ದಿನ 14 ರನ್ ಗಳಿಸಿದ್ದ ರಿಷಭ್ ಪಂತ್ ಮತ್ತು4 ರನ್ ಗಳಿಸಿದ್ದ ಇಶಾಂತ್ ಶರ್ಮಾ ಅವರು ಮೈದಾನಕ್ಕೆ ಇಳಿದರು ಎಲ್ಲರ ಚಿತ್ತ ರಿಷಭ್ ಗಳಿಸುವ ರನ್ನುಗಳ ಮೇಲಿತ್ತು, ಬಾಲಗೊಂಚಿಗಳ ಮೇಲೆ ಯಾವುದೇ ಭರವಸೆ ಇರಲಿಲ್ಲ. ದುರಾದೃಷ್ಟವಶಾತ್, 209 ರನ್ನುಗಳಿಗೆ 8 ವಿಕೆಟ್ ಕಳೆದುಕೊಂಡಾಗ ಭಾರತದ ಸೋಲು ಕಟ್ಟಿಟ್ಟ ಬುತ್ತಿ ಎಂದೇ ಎಲ್ಲರೂ ಭಾವಿಸಿದ್ದರೆ, ಇಂಗ್ಲೇಡ್ ಆಟಗಾರರ ಮುಖದಲ್ಲಿ ಪಂದ್ಯ ಗೆದ್ದ ಮಂದಹಾಸ ಮೂಡಿತ್ತು. ಶಮಿ ಮತ್ತು ಭುಮ್ರಾ ಅವರ ಮೇಲೆ ಯಾವುದೇ ರೀತಿಯ ಒತ್ತಡವಿಲ್ಲದೇ ಅವರು ಗಳಿಸಿದ ರನ್ನುಗಳೆಲ್ಲವೂ ಬೋನಸ್ ಎಂದೇ ಭಾವಿಸಿದ್ದರು. ಹಿಂದಿನ ಪಂದ್ಯದಲ್ಲಿಯೂ ಭೂಮ್ರಾ ತನ್ನ ಬ್ಯಾಟ್ ಬೀಸಿ ಸ್ವಲ್ಪ ರನ್ನುಗಳನ್ನು ಗಳಿಸಿದ್ದು ಮತ್ತು ಶಮಿ ಕೂಡಾ ಭರ್ಜರಿ ಹೊಡೆತಗಳಿಗೆ ಖ್ಯಾತರಾಗಿರುವುದು ಭರವಸೆಯ ಕಿರಣವನ್ನು ಮೂಡಿಸುತ್ತಿದ್ದಾದರೂ ನಂಬಿಕೆ ಇರಲಿಲ್ಲ. ಆದರೆ ಈ ಎಲ್ಲ ಅಪನಂಬಿಕೆಗಳನ್ನೂ ಹುಸಿ ಮಾಡಿದ ಶಮಿ ಮತ್ತು ಭ್ರೂಮ್ರಾ ಎಲ್ಲರನ್ನು ಅದರಲ್ಲೂ ಇಂಗ್ಲೇಂಡ್ ಆಟಗಾರನ್ನೂ ಹೈರಾಣು ಮಾಡಿ ಅಜೇಯ 89 ರನ್ನುಗಳ ಜೊತೆಯಾಟ, ಭಾರತವನ್ನು ಗೆಲ್ಲುವುದಿರಲಿ ಕನಿಷ್ಟ ಪಕ್ಷ ಸೋಲುವುದನ್ನು ತಪ್ಪಿಸಿದರೆಂದೇ ಎಲ್ಲರೂ ಸಮಾಧಾನ ಪಟ್ಟುಕೊಳ್ಳುತ್ತಿದ್ದಾಗ, ಛಲಗಾರ ವಿರಾಟ್ ಕೊಹ್ಲಿ ತಂಡದ ಮೊತ್ತ 298-8 ಶಮಿ ಅಜೇಯ 56, ಭೂಮ್ರಾ ಅಜೇಯ 34 ರನ್ನುಗಳನ್ನು ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡು ಇಂಗ್ಲೆಂಡ್ ತಂಡಕ್ಕೆ 60 ಓವರುಗಳಲ್ಲಿ 271 ರನ್ ಗಳ ಗುರಿಯನ್ನು ಕೊಟ್ಟಾಗ, ಪಂದ್ಯ ಬಹುತೇಕ ಡ್ರಾ ಎಂದೇೆ ಎಲ್ಲರೂ ನಂಬಿದ್ದರು.

cr5

ಗೆಲ್ಲುವ ಪಂದ್ಯ ಕೈ ಜಾರಿದ್ದ ಇಂಗ್ಲೇಂಡಿಗೆ ಕನಿಷ್ಟ ಪಕ್ಷ ರಕ್ಷಣಾತ್ಮಕವಾಗಿ ಆಡಿ ಸೋಲುವುದನ್ನು ತಪ್ಪಿಸಿಕೊಳ್ಳುವ ಇಂಗಿತದಿಂದಲೇ ಪಂದ್ಯವನ್ನು ಆರಂಭಿಸಿ ಮೊದಲ ಎರಡು ಓವರ್ಗಲಲ್ಲಿಯೇ 1-1, 1-2 ವಿಕೆಟ್ ಕಳೆದುಕೊಂಡಾಗ ಭಾರತಕ್ಕೆ ಗೆಲುವಿನ ಮುನ್ಸೂಚನೆ ಬಡಿಯಿತಾದರು ಸರಣಿಯಲ್ಲಿ ಅತ್ಯುತ್ತಮವಾಗಿ ಆಡುತ್ತಿರುವ ನಾಯಕ ಜೋರೂಟ್ ಇರುವ ವರೆಗೂ ಏನನ್ನೂ ಹೇಳುವ ಹಾಗಿರಲಿಲ್ಲ. ಆರಂಭಿಕ ಬೌಲರ್ಗಳನ್ನು ಬದಲಿಸಿ ಇಶಾಂತ್ ಮತ್ತು ಸಿರಾಜ್ ಅವರನ್ನು ಧಾಳಿ ಗಿಳಿಸುತ್ತಿದ್ದಂತೆಯೇ ನಾಯಕನ ಭರವಸೆಯನ್ನು ಹುಸಿ ಮಾಡದೇ ಒಂದಾದ ಮೇಲೊಂದು ವಿಕೆಟ್ಗಳನ್ನು ಕಬಳಿಸುವ ಮೂಲಕ ಜೋ ರೂಟ್ ಅವರನ್ನೂ ಔಟ್ ಮಾಡಿದಾಗ ಇಂಗ್ಲೇಂಡ್ ತಂಡದ ಮೊತ್ತ 90-5. ಭಯಂಕರ ಆಟಗಾರ ಮೋಯಿನ್ ಅಲಿ ಮತ್ತು ಭರವಸೆಯ ಆಟಗಾರ ಸ್ಯಾಮ್ ಕರೆನ್ ಅವರ ಸತತ ವಿಕೆಟ್ ಗಳನ್ನು ಸಿರಾಜ್ ಕಿತ್ತಾಗ 90-7 ಆದಾಗಲಂತೂ ಡ್ರಾ ಆಗುತ್ತದೆ ಎಂದು ನಿದ್ದೆಮಾಡಲು ಹೋಗುತ್ತಿದ್ದವರೆಲ್ಲರೂ ಎಚ್ಚೆತ್ತು ಕೊಂಡು ಪಂದ್ಯದ ರೋಚಕತೆಯನ್ನು ಸವಿಯಲಾರಂಭಿಸಿದರು. ಇಂಗ್ಲೇಂಡ್ ತಂಡಕ್ಕೆ 10 ಓವರುಗಳನ್ನು ಸುರಕ್ಶಿತವಾಗಿ ಆಡಿಕೊಂಡರೆ ಪಂದ್ಯ ಉಳಿಸಿಕೊಳ್ಲಬಹುದು, ಭಾರತ 3 ವಿಕೆಟ್ ಗಳಿಸಿದರೆ ಪಂದ್ಯ ಗೆಲ್ಲಬಹುದು ಎಂಬ ಡೋಲಾಯಮಾನ ಸ್ಥಿತಿ. ಇಂಗ್ಲೇಂಡ್ ತಂಡದ ಮೊತ್ತ 120 ಇದ್ದಾಗ ಭೂಮ್ರಾ ಬೋಲಿಂಗಿನಲ್ಲಿ ರಾಬಿನ್ಸನ್ ಔಟಾಗಿ ಅದರ ನಂತರದ ಓವರಿನಲ್ಲಿ ಸಿರಾಜ್ ಸತತ ಎರಡು ಬಾಲಿನಲ್ಲಿ ಬಟ್ಲರ್ ಮತ್ತು ಜೇಮ್ಸ್ ಆಂಡರ್ಸನ್ ವಿಕೆಟ್ ಹಾರಿಸುವ ಮೂಲಕ ಇಂಗ್ಲೇಂಡ್ 120 ರನ್ನುಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನೂ ಕಳೆದು ಕೊಂಡಾಗ ಭಾರತ 151 ರನ್ನುಗಳ ಭರ್ಜರಿ ಜಯವನ್ನು ಪಡೆಯಿತು.

50 ಮತ್ತು 20 ಓವರುಗಳಷ್ಟು ರೋಚಕತೆ ಟೆಸ್ಟ್ ಪಂದ್ಯಗಳಲ್ಲಿಿ ಇರುವುದಿಲ್ಲ ಎಂದು ಹೇಳುವವರಿಗೆ ಮುಟ್ಟಿ ನೋಡಿಕೊಳ್ಳುವಂತೆ ರೋಚಕವಾಗಿದ್ದ ಈ ಪಂದ್ಯದಿಂದ ಎರಡೂ ತಂಡಗಳು ಕಲಿಯಬೇಕಾದ ಪಾಠಗಳು ಬಹಳಷ್ಟಿವೆ.

ಕ್ರಿಕೆಟ್ ತಂಡ ಆಟವಾಗಿದ್ದು ಸಾಂಘೀಕವಾಗಿ ಎಲ್ಲರೂ ಒಬ್ಬರ ಮೇಲೆ ಒಬ್ಬರು ಭರವಸೆಯನ್ನು ಇಟ್ಟು ಆಡಿದಲ್ಲಿ ಫಲಿತಾಂಶವನ್ನು ಹೇಗೆ ಬದಲಿಸ ಬಹುದು ಎನ್ನುವುದಕ್ಕೆ ಈ ಪಂದ್ಯ ಉದಾಹರಣೆಯಾಗಿದೆ.

ಯಾವುದೇ ಒತ್ತಡಡವಿಲ್ಲದೇ ಆಟವಾಡಿದ ಭೂಮ್ರಾ ಮತ್ತು ಶಮಿ ಅವರಿಂದ ಪೂಜಾರ ಮತ್ತು ರೆಹಾನೆಯವರು ಒತ್ತಡವನ್ನು ನಿಭಾಯಿಸುವ ಕಲೆಯನ್ನು ಕಲಿಯ ಬೇಕಾಗಿದೆ.

ಐದನೆಯ ದಿನ ಪಂದ್ಯ ಇನ್ನೇನು ಗೆದ್ದೇ ತೀರುತ್ತೇವೆ ಎಂದು ವಿಪರೀತ ಆತ್ಮ ವಿಶ್ವಾಸದಿಂದ ಸ್ಲೆಡ್ಜಿಂಗ್ ಮಾಡುತ್ತಾ ಭಯಂಕರ ಬೌನ್ಸರ್ಗಳನ್ನು ಹಾಕುತ್ತಾ ಭಾರತೀಯ ಆಟಗಾರರ ಮೇಲೆ ದೈಹಿಕ ಧಾಳಿ ಮಾಡಿದ ಇಂಗ್ಲೇಂಡ್ ತಂಡಕ್ಕೆ ತಕ್ಕ ಶಾಸ್ತಿಯಾಗಿದೆ.

ಪಂದ್ಯದ ಪರಿಸ್ಥಿತಿಗೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಆಡಿಸದೇ ನಾಲ್ಕು ವೇಗಿಗಳನ್ನು ಆಡಿಸಿದ್ದ ಬಗ್ಗೆ ಕೊಂಕು ಎತ್ತಿದ್ದವರಿಗೆ ಪಂದ್ಯ ಗೆಲ್ಲುವುದು ಮುಖ್ಯವೇ ಹೊರತು ವಯಕ್ತಿಯ ಆಟಗಾರರಲ್ಲ ಎಂಬುದನ್ನು ಅದ್ಭುತವಾಗಿ ತೋರಿಸಲಾಗಿದೆ.

cr2

ಎಂತಹ ಸಂಧರ್ಭದಲ್ಲಿಯೂ ತನ್ನ ತಂಡದ ಎಲ್ಲಾ ಆಟಗಾರರ ಮೇಲೆ ಭರವಸೆ ಇಟ್ಟು ಸಕಾರಾತ್ಮಕವಾಗಿ ತಂಡವನ್ನು ಹುರಿದುಂಬಿಸಿದಲ್ಲಿ ಕೈಜಾರುತ್ತಿದ್ದ ಪಂದ್ಯವನ್ನು ಹೇಗೆ ಗೆಲ್ಲಬಹುದು ಎಂಬುದನ್ನು ವಿರಾಟ್ ಕೋಹ್ಲಿ ಎಲ್ಲರಿಗೂ ತೋರಿಸಿಕೊಟ್ಟಿದ್ದಲ್ಲದೇ ತನ್ನ ನಾಯಕತ್ವದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಒಟ್ಟಿನಲ್ಲಿ ಇಡೀ ತಂಡದ ಸಾಂಘಿಕ ಕೊಡುಗೆಯಿಂದಾಗ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಪಂದ್ಯವನ್ನು ಗೆದ್ದ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ಇದೇ ಪ್ರಯತ್ನವನ್ನು ಉಳಿದ ಪಂದ್ಯಗಳಲ್ಲಿಯೂ ಮುಂದುವರೆಸಿಕೊಂಡು ಸರಣಿಯನ್ನು ವಶಪಡಿಸಿಕೊಳ್ಳಲೀ ಎಂದೇ ಸಕಲ ಕ್ರಿಕೆಟ್ ಪ್ರಿಯರ ಆಶೆಯಾಗಿದೆ. ಇನ್ನು ವಯಕ್ತಿಕವಾಗಿ ಪರಮ ಕ್ರಿಕೆಟ್ ಅಭಿಮಾನಿ ಮತ್ತು ದೇಶಾಭಿಮಾನಿಯಾಗಿದ್ದ ಭಾರತ ತಂಡ ಪ್ರತೀ ಪಂದ್ಯವನ್ಜು ಗೆದ್ದಾಗ ಪುಟ್ಟ‌ಮಗುವಿನಂತೆ ಸಂಭ್ರಮಿಸುತ್ತಿದ್ದ ನಮ್ಮ ತಂದೆಯವರು ಇರಬಾರದಿತ್ತೇ ಎಂಬ ನೋವು ಸಹಾ ಕಾಡುತ್ತದಾದರೂ, ಅವರು ಸಾಯುವ ಹಿಂದಿನ ದಿನ ನ್ಯೂಜಿಲೆಂಡ್ ವಿರುದ್ಧ 3-2ರ ಅಂತರದಲ್ಲಿ ಸರಣಿಯನ್ನು ಗೆದ್ದದ್ದನ್ನು ನೋಡಿದ್ದರಲ್ಲಾ ಎಂದು ಸಮಾಧಾನ ಪಟ್ಟುಕೊಳ್ಳಬೇಕಿದೆ.

cr1

ಕ್ರಿಕೆಟ್ ಜನಕರ ನಾಡಿನಲ್ಲಿಯೇ ಆಂಗ್ಲರನ್ನು ಈ ಪರಿಯಾಗಿ ರೋಚಕವಾಗಿ ಬಗ್ಗು ಬಡಿಯುವ ಮೂಲಕ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಕೊಡುಗೆಯಾಗಿ ನೀಡಿದ ಭಾರತೀಯ ಕ್ರಿಕೆಟ್ ತಂಡವನ್ನು ಹೃತ್ಪೂರ್ವಕವಾಗಿ ಅಭಿನಂದಿಸೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಉಪಕಾರ ಸ್ಮರಣೆ

chanu4

ಆಂಗ್ಲ ಭಾಷೆಯಲ್ಲಿ ಒಂದು ನಾಣ್ಣುಡಿ ಇದೆ. success has many fathers, failure is an orphan. ಅಂದರೆ, ಯಾರಾದರೂ ಯಶಸ್ಸನ್ನು ಗಳಿಸಿದಲ್ಲಿ ಅದಕ್ಕೆ ಪ್ರತಿಫಲವನ್ನು ಬಯಸುವವರೇ ಹೆಚ್ಚಿನವರಿರುತ್ತಾರೆ. ಅದೇ ತಪ್ಪಾದಲ್ಲಿ ಅದಕ್ಕೆ ಹೊಣೆಗಾರರಾಗಲು ಯಾರೂ ಬಯಸುವುದಿಲ್ಲ. ಈಗಾಗಲೇ ನಮಗೆಲ್ಲರಿಗೂ ಗೊತ್ತಿರುವಂತೆ ಈ ಬಾರಿಯ ಓಲಂಪಿಕ್ಸ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಮೊದಲ ಪದಕವನ್ನು ಗಳಿಸುವ ಮೂಲಕ ಹೆಮ್ಮೆ ತಂದಿದ್ದು ವೇಯ್ಟ್ ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು. ಈ ಪದಕದ ಹಿಂದೆ ಇರುವ ಪರಿಶ್ರಮ ನಿಜಕ್ಕೂ ಅಧ್ಭುತ ಮತ್ತು ಅನನ್ಯವೇ ಸರಿ. ಅದಕ್ಕಿಂತಲೂ ಹೆಮ್ಮೆ ಪಡಬೇಕಾಗಿರುವುದು ಆಕೆ ತನ್ನ ಗೆಲುವಿನ ಪಾಲನ್ನು ಅರ್ಪಿಸಿರುವ ಪರಿ ನಿಜಕ್ಕೂ ಅಭಿನಂದನಾರ್ಹ. ಹಾಗಾದರೇ ಆಕೆ ಅದನ್ನು ಯಾರಿಗೆ ಅರ್ಪಿಸಿದ್ದಾರೆ ಎನ್ನುವುದನ್ನು ತಿಳಿಯೋಣ ಬನ್ನಿ.

ಸೈಖೋಮ್ ಮೀರಾಬಾಯಿ ಚಾನು 8 ಆಗಸ್ಟ್ 1994 ರಂದು ಮಣಿಪುರದ ಇಂಫಾಲ್ ನಗರದಿಂದ ಸುಮಾರು 30 ಕಿಮೀ ದೂರದಲ್ಲಿ ಇರುವ ನಾಂಗ್‌ಪಾಕ್ ಕಾಕ್ಚಿಂಗ್‌ ಎಂಬ ಗ್ರಾಮದಲ್ಲಿ ಮೀಟೇಯ್ ಕುಟುಂಬದಲ್ಲಿ ಜನಿಸುತ್ತಾರೆ. ಮನೆಯಲ್ಲಿ ನಿಜಕ್ಕೂ ಕಡು ಬಡತನವಿತ್ತು. ಆಕೆ ಸುಮಾರು 12 ವರ್ಷದವಳಿದ್ದಾಗ ಆಕೆಯ ಮನೆಯಲ್ಲಿ ಅಡುಗೆಯನ್ನು ಮಾಡಲು ಉರುವಲುಗಳನ್ನು ತರಲು ಹತ್ತಿರದ ಕಾಡಿನಿಂದ ಉರುವಲುಗಳನ್ನು ಅಯ್ದುಕೊಂಡು ಬರುವಾಗ ಆಕೆ ತನ್ನ ಅಣ್ಣನಿಗಿಂತಲೂ ಹೆಚ್ಚಿನ ಭಾರದ ಹೊರೆಗಳನ್ನು ಹೊತ್ತು ತರುತ್ತಿದ್ದನ್ನು ಗಮನಿಸಿದ ಆಕೆಯ ಕುಟುಂಬ ಆಕೆಯನ್ನು ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿತು.

chanu3

ಮಣಿಪುರದಲ್ಲಿ ಮಕ್ಕಳಿಗೆ ಅವರಿಗಿಷ್ಟ ಪಡುವೆ ಕ್ರೀಡೆಯನ್ನು ಆರಿಸಿಕೊಳ್ಳುವ ನಿರ್ಧಾರವನ್ನು ಕೊಡಲಾಗುತ್ತದೆ ಮತ್ತು ಅದಕ್ಕೆ ಸೂಕ್ತವಾದ ತರಭೇತಿಯನ್ನೂ ಸಹಾ ನೀಡಲಾಗುತ್ತದೆ. ಹಾಗಾಗಿಯೇ ಮಣಿಪುರ ನಮ್ಮ ದೇಶಕ್ಕೆ ಅನೇಕ ಹೆಮ್ಮೆಯ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದೆ. ಅದೇ ರೀತಿ ಮೀರಾಬಾಯಿ ಚಾನು ತನ್ನ ಮನೆಯಿಂದ ಇಂಫಾಲ್‌ನಿಂದ 30 ಕಿಮೀ ದೂರದಲ್ಲಿರುವ ಕ್ರೀಡಾ ತರಭೇತಿ ಕೇಂದ್ರಕ್ಕೆ ಬಂದು ಆರಂಭದಲ್ಲಿ ಬಾಕ್ಸಿಂಗ್ ಆಟವನ್ನು ಕಲಿಯಲು ಇಚ್ಚಿಸಿದರು ಆಕೆ ಬಹಳವಾಗಿ ಕುಳ್ಳಗಿದ್ದ ಕಾರಣ ಬೇರೊಂದು ಆಟವನ್ನು ಆಯ್ಕೆ ಮಾಡಿಕೊಳ್ಳಲು ಅಲ್ಲಿನ ತರಭೇತುದಾರರು ಸೂಚಿಸುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಭಾರವಾದ ಮರದ ದಿಮ್ಮಿಗಳನ್ನು, ಊರುವಲುಗಳನ್ನು ಎತ್ತುತ್ತಿದ್ದನ್ನು ನೆನಪಿಸಿಕೊಂಡು ಭಾರ ಎತ್ತುವ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡಾಗ ಭಾರತದ ಮಾಜಿ ಅಂತರಾಷ್ಟ್ರೀಯ ವೇಟ್ ಲಿಫ್ಟರ್ ಮತ್ತು ತರಬೇತುದಾರರಾಗಿದ್ದ ಅನಿತಾ ಅವರ ಗಮನಕ್ಕೆ ಚಾನು ಬಂದಿದ್ದೇ ತಡಾ ಅವರ ಬದುಕಿನಲ್ಲಿ ಬಾರೀ ಬದಲಾವಣೆಯಾಗುತ್ತದೆ.

chanu4

2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 49 ಕೆಜಿಯಲ್ಲಿ ಬೆಳ್ಳಿ ಪದಕ ಗೆಲ್ಲುವುದಕ್ಕೆ ಮೊದಲು, ಮೀರಾಬಾಯಿ ಚಾನು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವಿಶ್ವ ಚಾಂಪಿಯನ್‌ಶಿಪ್ ಮತ್ತು ಬಹು ಪದಕಗಳನ್ನು ಗೆದ್ದಿದ್ದಾರೆ. ಹೀಗಾಗಿ ಭಾರತ ಸರ್ಕಾರವು ಕ್ರೀಡೆಗೆ ಆಕೆ ನೀಡಿರುವ ಕೊಡುಗೆಗಳನ್ನು ಗಮನಿಸಿ ಈಗಾಗಲೇ ಪದ್ಮಶ್ರೀ ನೀಡಿ ಗೌರವಿಸಿದೆಯಲ್ಲದೇ, 2018 ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹಿಸಿದೆ.

chanu5

ಭಾರತ ಸರ್ಕಾರ ಆಕೆಯ ಮೇಲಿಟ್ಟ ಭರವಸೆಯನ್ನು ಹುಸಿಗೊಳಿಸದೇ, ಟೋಕಿಯೋ ಓಲಂಪಿಕ್ಸಿನಲ್ಲಿ ರಜತ ಪದಕವನ್ನು ಗೆದ್ದು ಭಾರತಕ್ಕೆ ಹಿಂದಿರುಗಿದಾಗ ಮೀರಾಬಾಯಿಯವರಿಗೆ ಭರ್ಜರಿಯಾದ ಸ್ವಾಗತವನ್ನು ನೀಡಿದ್ದಲ್ಲದೇ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲದೇ ಅನೇಕ ಸಂಘ ಸಂಸ್ಥೆಗಳೂ ಬಾರಿ ಮೊತ್ತದ ಬಹುಮಾನಗಳ ಸುರಿಮಳೆಯನ್ನು ಸುರಿದಿದೆ. ಮೀರಾ ಇಲ್ಲಿಯವರೆಗೆ ತಲುಪಲು ಜೀವನದಲ್ಲಿ ಅನೇಕ ಸಂಘರ್ಷಗಳನ್ನು ಮೆಟ್ಟಿ ನಿಂತಿದ್ದಾರೆ. ಅಕೆಯ ಕಷ್ಟದ ಸಮಯದಲ್ಲಿ ಮೀರಾ ಅವರಿಗೆ ಹಲವರು ಜನರು ಪತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿ ಸಹಾಯವನ್ನು ಮಾಡಿದ್ದಾರೆ. ಹಾಗೆ ಆಕೆಗೆ ಸಹಾಯ ಮಾಡಿದವರಲ್ಲಿ ಟ್ರಕ್ ಚಾಲಕರು ಇದ್ದಾರೆ ಎಂದರೆ ಅಚ್ಚರಿ ಆಗುತ್ತದೆ ಅಲ್ಲವೇ?

chanu2

ತಮ್ಮ ಊರಾದ ನಾಂಗ್‌ಪಾಕ್ ಕಾಕ್ಚಿಂಗ್‌ ನಿಂದ 30 ಕಿಮೀ ದೂರದ ಇಂಫಾಲ್ ನಗರ ದಲ್ಲಿರುವ ಖುಮಾನ್ ಲಂಪಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿರುವ ತರಬೇತಿ ಶಿಬಿರಕ್ಕೆ ಪ್ರತಿದಿನವೂ ಬರಲು ಆಕೆ ಬಸ್ ಮುಖಾಂತರ ಬರಬೇಕಿತ್ತು. ಆದರೆ ಮನೆಯಲ್ಲಿದ್ದ ಕಿತ್ತು ತಿನ್ನುವ ಬಡತನದಿಂದಾಗಿ ಅಕೆಗೆ ಬಸ್ ಪ್ರಯಾಣದ ಹಣವನ್ನು ಹೊಂದಿಸಲಾಗದೇ ಮನೆಯಲ್ಲಿ ಕೊಡುತ್ತಿದ್ದ 10/20 ರೂಪಾಯಿಗಳನ್ನು ಆದೇ ದಾರಿಯಲ್ಲಿ ಹೋಗುತ್ತಿದ್ದ ಟ್ರಕ್ ಚಾಲಕರಿಗೆ ನೀಡಿ ಪ್ರಯಾಣಿಸುತ್ತಿದ್ದರು. ಮೊದ ಮೊದಲು ಆಕೆಯಿಂದ ಹಣವನ್ನು ಸ್ವೀಕರಿಸುತ್ತಿದ್ದ ಟ್ರಕ್ ಚಾಲಕರಿಗೆ ಕೆಲ ದಿನಗಳ ನಂತರ ಆಕೆಯ ಪರಿಶ್ರಮವು ಅರ್ಧವಾಗಿ ಬಹುತೇಕ ಟ್ರಕ್ ಚಾಲಕರು ಆಕೆಗೆ ಸ್ನೇಹಿತರಾಗಿ ಅಕೆಯ ಬಳಿ ಹಣವನ್ನೇ ತೆಗೆದುಕೊಳ್ಳದೇ ಉಚಿತವಾಗಿ ಕರೆದುಕೊಂಡು ಹೋಗಲಾರಂಭಿಸಿದರು. ಈ ಸ್ನೇಹ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಟ್ರಕ್ ಆಕೆಯ ಮನೆಯ ಮುಂದೆ ಬಂದ ತಕ್ಷಣ ಜೋರಾಗಿ ಹಾರ್ನ್ ಮಾಡಿ ಅಕೆಯ ಮನೆಯಿಂದಲೇ ಕರೆದುಕೊಂಡು ಹೋಗುವಷ್ಟ ಮಟ್ಟಿಗಿನ ಗೆಳೆತನ ಬೆಳೆದಿತ್ತು. ಹಾಗಾಗಿ ಮೀರಾಬಾಯಿ ಚಾನು ನೆಮ್ಮದಿಯಿಂದ ಯಾವುದೇ ಭಯ, ಭೀತಿ ಅಥವಾ ಸಂಕೋಚವಿಲ್ಲದೇ ಧೈರ್ಯದಿಂದ ತರಬೇತಿ ಶಿಬಿರಕ್ಕೆ ಹೋಗಿ ತನ್ನ ಕಠಿಣವಾದ ತರಭೇತಿ ಮುಗಿಸಿ ಮನೆಗೆ ಹಿಂದಿರುಗುವ ಸಮಯದಲ್ಲಿ ಮತ್ತೊಂದು ಪರಿಚಿತ ಟ್ರಕ್ ಮುಖಾಂತರ ಮನೆಗೆ ಬರುತ್ತಿದ್ದರು.

chanu1

ಟ್ರಕ್ ಚಾಲಕರು ಮತ್ತು ಮೀರಾಳ ನಡುವಿನ ಈ ಅವಿನಾಭಾವ ಸಂಬಂಧದಿಂದಾಗಿ ಟ್ರಕ್ ಚಾಲಕರು ಉಚಿತವಾಗಿ ಕರೆದುಕೊಂಡು ಹೋಗಿ ಕರೆದುಕೊಂಡು ಬರುತ್ತಿದ್ದ ಕಾರಣ, ಪ್ರಯಾಣಕ್ಕೆಂದು ಮನೆಯಲ್ಲಿ ಕೊಡುತ್ತಿದ ಹಣ ಉಳಿತಾಯವಾಗಿ ಅದೇ ಹಣದಿಂದಲೇ ತರಬೇತಿಯ ಮಧ್ಯದಲ್ಲಿ ಇಷ್ಟ ಪಟ್ಟಿದ್ದನ್ನು ತಿನ್ನಲು ಸಹಕಾರಿಯಾಗಿತು. ಹಾಗಾಗಿ ಆಕೆ ತನ್ನ ಈ ಗೆಲುವಿನ ಪಾಲನ್ನು ತನ್ನ ತರಭೇತಿ ಸಮಯದಲ್ಲಿ ನಿಸ್ವಾರ್ಥವಾಗಿ ಸಹಾಯ ಮಾಡಿದ ಆ ಎಲ್ಲಾ ಟ್ರಕ್ ಚಾಲಕರಿಗೆ ಅರ್ಪಿಸಿರುವುದಲ್ಲದೇ,ಅಕೆ ಅವರೆಲ್ಲರನ್ನು ತನ್ನ ಮನೆಗೆ ಕರೆಸಿ ಅವರಿಗೆ ಸತ್ಕಾರ ಮಾಡುವ ಮೂಲಕ ಉಪಕಾರ ಸ್ಮರಣೆ ಮಾಡಿರುವುದು ನಿಜಕ್ಕೂ ಅನನ್ಯವೇ ಸರಿ.

chanu6

ಎಷ್ಟೇ ಕಷ್ಟಗಳಿದ್ದರೂ ಗೆಲ್ಲುವ ಛಲ ಮತ್ತು ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಲು ಸಾಧ್ಯ ಎನ್ನುವುದಕ್ಕೆ ಮೀರಾಬಾಯಿ ಚಾನು ಅವರ ಬದುಕೇ ಜ್ವಲಂತ ಉದಾಹರಣೆ. ಆ ರೀತಿಯಾಗಿ ಛಲ ಬಿಡದ ತ್ರಿವಿಕ್ರಮನಂತೆ ಸಾಧನೆ ಮಾಡಲು ಹೊರಟಿರುವವರಿಗೆ ಯಾರದ್ದೋ ಮುಖಾಂತರ ಸಹಾಯ ಮಾಡಿಸಲು ಭಗವಂತನ ಅನುಗ್ರಹ ಸದಾಕಾಲವೂ ಇರುತ್ತದೆ ಎನ್ನುವುದಕ್ಕೆ ಈ ಟ್ರಕ್ ಚಾಲಕರ ನಿಸ್ವಾರ್ಥ ಸೇವೆಯೇ ಸಾಕ್ಷಿ. ಜೀವನದಲ್ಲಿ ಎಷ್ಟೇ ಎತ್ತರಕ್ಕೇರಿದರು ತನ್ನ ಹುಟ್ಟೂರು ಮತ್ತು ತನಗೆ ಸಹಾಯ ಮಾಡಿದವರನ್ನು ಮರೆಯದೇ ಅವರ ಉಪಕಾರ ಸ್ಮರಣೆ ಮಾಡಿರುವುದು ಎಲ್ಲರಿಗೂ ಅನುಕರಣೀಯವಾಗಿದೆ ಎಂದರೂ ತಪ್ಪಾಗಲಾರದು. ಇದೇ ಅಲ್ವೇ ನಮ್ಮ ಸನಾತನ ಸಂಸ್ಕಾರ ಮತ್ತು ಸಂಪ್ರದಾಯ.
ಮೀರಾಬಾಯಿ ಚಾನು ಅವರ ಸಾಧನೆ ಮತ್ತು ಅವರ ಸಂಸ್ಕಾರಗಳಿಂದ ಪ್ರೇರಣೆಗೊಂಡು ಇನ್ನೂ ಲಕ್ಷಾಂತರ ಕ್ರೀಡಾಪಟುಗಳು ನೂರಾರು ಕ್ರೀಡಾಕೂಟದಲ್ಲಿ ಸಾವಿರಾರು ಪದಕಗಳನ್ನು ಗೆಲ್ಲುವ ಮೂಲಕ ನಮ್ಮ ಭಾರತ ದೇಶದ ಹಿರಿಮೆ ಮತ್ತು ಗರಿಮೆಯನ್ನು ಎತ್ತಿಹಿಡಿಯುವಂತಾಗಲಿ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಬಿ ವಿಜಯಕೃಷ್ಣ

ಅದು ಎಪ್ಪತ್ತು ಮತ್ತು ಎಂಭತ್ತರ ದಶಕ. ಕರ್ನಾಟಕ ರಾಜ್ಯದ ರಣಜಿ ತಂಡದಲ್ಲಿ ಘಟಾನುಘಟಿಗಳು ಇದ್ದಂತಹ ಕಾಲ. ಕಾರ್ಲ್ಟನ್ ಸಲ್ಡಾನ, ಬಿನ್ನಿ, ಅಭಿರಾಂ, ಸುಧಾಕರ್ ರಾವ್, ಎ ವಿ ಜಯಪ್ರಕಾಶ್, ಬ್ರಿಜೇಶ್ ಪಟೇಲ್, ಅವಿನಾಶ್ ವೈದ್ಯ, ರಘುರಾಂ ಭಟ್ ಅವರುಗಳು ಇದ್ದ ಕಾಲ. ಅವರ ಜೊತೆಯಲ್ಲಿಯೇ ಮತ್ತೊಬ್ಬ ಸಧೃಢವಾದ ಚಂಡು ಇರುವುದೇ ಬಾರೀ ಹೊಡೆತಕ್ಕೇ ಎಂದು ಭರ್ಜರಿಯಾಗಿ ಸಿಕ್ಸರ್ ಗಳನ್ನು ಬಾರಿಸುತ್ತಿದ್ದ ಇನ್ನು ಚಂಡನ್ನು ಕೈಯಲ್ಲಿ ಹಿಡಿದು ಬೋಲಿಂಗ್ ಮಾಡಿದರೆ ದಾಂಡಿಗರನ್ನು ವಂಚಿಸಿ ಸೀದಾ ವಿಕೆಟ್ ಉರುಳಿಸುತ್ತಿದ್ದಂತಹ ಚಾಣಾಕ್ಷ ಎಡಗೈ ಆಟಗಾರ ಆಗಿದ್ದಂತಹ ಬಿ ವಿಜಯಕೃಷ್ಣ ಅವರು ಸಹಾ ಅದೇ ತಂಡದಲ್ಲಿ ಇದ್ದರು.

viji3

ಆಗೆಲ್ಲಾ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಲೀಗ್ ಪಂದ್ಯಗಳನ್ನು ವೀಕ್ಷಿಸಲು ನೂರಾರು ಕ್ರೀಡಾಪ್ರೇಮಿಗಳು ಸೇರುತ್ತಿದ್ದ ಕಾಲ. ಅದರಲ್ಲೂ ಪ್ರತಿಷ್ಠಿತ ಬ್ಯಾಂಕುಗಳಾದ ಎಸ್.ಬಿ.ಐ, ಎಸ್. ಬಿ.ಎಂ, ಕೆನರಾಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ತಂಡಗಳು ಬಹುತೇಕ ರಣಜಿ ಆಟಗಾರಿಂದಲೇ ಕೂಡಿರುತ್ತಿದ್ದ ಈ ಬ್ಯಾಂಕ್ ತಂಡಗಳ ನಡುವಿನ ಪಂದ್ಯ ಅತ್ಯಂತ ರೋಚಕವಾಗಿರುತ್ತಿದ್ದ ಕಾರಣ, ಈ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಪ್ರೇಮಿಗಳ ಸಂಖ್ಯೆ ಸಾವಿರದಕ್ಕೂ ಅಧಿಕವಾಗಿರುತ್ತಿತ್ತು. ನಾನೂ ಸಹಾ 2:30 ಕ್ಕೆ ಸ್ಕೂಲ್ ಮುಗಿಸಿದೊಡನೆಯೇ ಸೀದಾ ನಮ್ಮ ಶಾಲೆಯ ಪಕ್ಕದಲ್ಲೇ ಇದ್ದ ಬಿಇಎಲ್ ಗ್ರೌಂಡ್ಸ್ ಗೆ ಧಾಳಿ ಇಡುತ್ತಿದ್ದೆ. ಅಂದೆಲ್ಲಾ ಬಹುತೇಕ ತಂಡಗಳ ಆಟಗಾರರ ಪರಿಚಯ ಇದ್ದ ಕಾರಣ ನಾನು ಹೋಗಿ ಸೀದಾ ಸ್ಕೋರ್ ಮಾಡಲು ಕೂರುತ್ತಿದ್ದೆ.

ಸಿಂಡಿಕೇಟ್ ಬ್ಯಾಂಕ್ ಮತ್ತು ಸಿಟಿ ಕ್ರಿಕೆಟರ್ಸ್ ಪರವಾಗಿ ಆಡುತ್ತಿದ್ದ ವಿಜಯಕೃಷ್ಣ ಆವರು ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಇಳಿದರೆ, ನಮಗೆ ಸ್ಕೋರ್ ಮಾಡಲು ಮಜವಾಗುತ್ತಿತ್ತು. ಆಡುತ್ತಿದ್ದದ್ದು ಸ್ವಲ್ಪ ಹೊತ್ತೇ ಆದರೂ ಪಟಪಟನೇ ಔಂಡರಿ ಮತ್ತು ಸಿಕ್ಸರ್ ಬಾರಿಸಿ ಸ್ಕೋರರ್ಗಳನ್ನೂ ಸಹಾ ಸದಾ ಕಾಲವೂ ಚುರುಕಾಗಿಯೇ ಇರಿಸುತ್ತಿದ್ದಂತಹ ದಾಂಡಿಗರವರು. ಅವರು ಬಾರಿಸುತ್ತಿದ್ದ ಸಿಕ್ಸರ್ಗಳಿಂದಾಗಿ ಅದೆಷ್ಟೋ ಚೆಂಡುಗಳು ಕಳೆದು ಹೋಗಿದ್ದ ಉದಾಹರಣೆಗಳೂ ಸಾಕಷ್ಟು ಇತ್ತು.

ಇಂತಹ ಬಿ. ವಿಜಯಕೃಷ್ಣ, 12 ಅಕ್ಟೋಬರ್ 1949 ರಂದು ಬಾರೀ ಸ್ಥಿತಿವಂತ ಕುಟುಂಬದಲ್ಲೇ ಜನಿಸಿದರು. ವಿಜಯಕೃಷ್ಣರ ತಂದೆ ಕರ್ನಾಟಕದ ದಲಿತ ಸಮುದಾಯದ ಮೊದಲ ಐ ಎ ಎಸ್ ಅಧಿಕಾರಿಗಳಾಗಿ ನಂತರ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿಯೂ ನಿಸ್ಪೃಹರಾಗಿ ಸೇವೆ ಸಲ್ಲಿಸಿದ್ದ ಆರ್ ಭರಣಯ್ಯನವರು. ಇಬ್ಬರು ಸಹೋದರರು ಮತ್ತು ಏಳು ಸಹೋದರಿಯರ ತುಂಬು ಕುಟುಂಬದಲ್ಲಿ ಜನಿಸಿದ್ದರು ವಿಜಯಕೃಷ್ಣ.

viji1

ತಂದೆಯವರ ಹೆಸರನ್ನು ಎಲ್ಲೂ ಬಳಸಿಕೊಳ್ಳದೇ, ಸ್ವಸಾಮರ್ಥ್ಯದಿಂದ ಕ್ರಿಕೆಟ್ಟಿನಲ್ಲಿ ಮೇಲೆ ಬಂದಂತಹವರು. 1960 ರ ದಶಕದ ಕೊನೆಯಲ್ಲಿ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಆದಾಗಲೇ ಆಡಿದ್ದಂತಹ ಕೆ.ನಾಗಭೂಷಣ್ ಅವರು ವಿಜಯಕೃಷ್ಣ ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ಅವರ ಕಾರ್ ಶೆಡ್‌ನಲ್ಲಿ ಟೆನಿಸ್ ಚೆಂಡಿನೊಂದಿಗೆ ಬೌಲಿಂಗ್ ಮಾಡುವಂತೆ ಪ್ರೋತ್ಸಾಹಿಸಿದರು. ನಂತರ ನಿಧಾನವಾಗಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದ ಸಿಟಿ ಕ್ರಿಕೆಟರ್ಸ್ ತಂಡದ ಪರ ಆಡತೊಡಗಿದರು. ಎಡಗೈ ಆಟಗಾರರಾಗಿ ಅತ್ಯಂತ ಬಲಶಾಲಿ ಹೊಡೆತಗಳನ್ನು ಬಾರಿಸುತ್ತಿದ್ದ ವಿಜಯ ಕೃಷ್ಣರವರ ಪರಿ ಹೇಗಿತ್ತೆಂದರೆ, ಅವರು ಸ್ಕ್ವೇರ್ ಲೆಗ್ನತ್ತ ಎತ್ತರದಲ್ಲಿ ಬಾರಿಸುತ್ತಿದ್ದ ಚೆಂಡು ರಭಸವಾಗಿ ಪಂಪ ಮಹಾಕವಿ ರಸ್ತೆಯಲ್ಲಿ ತರಗುಪೇಟೆ ಕಡೆಗೆ ಮೂಟೆಗಳನ್ನು ಹೊತ್ತು ಚಲಿಸುತ್ತಿದ್ದ ಲಾರಿಗಳೊಳಗೆ ಬಿದ್ದು ಚೆಂಡು ಕಳೆದು ಹೋದ ಅನೇಕ ಪ್ರಸಂಗಗಳೂ ಉಂಟು. ಬ್ಯಾಟಿಂಗ್ ಮುಗಿಸಿದೊಡನೆ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಅಲ್ಲೇ ರಸ್ತೆ ಬದಿಯ ಪೆಟ್ಟಿ ಅಂಗಡಿಯಲ್ಲೇ ಬೀಡಿ ಸೇದಿ ಹೋಗುತ್ತಿದ್ದಂತಹ ಸರಳ ಜೀವಿ.

viji2

ಲೀಗ್ ಪಂದ್ಯಾವಳಿಗಳಲ್ಲಿನ ತಮ್ಮ ಭರ್ಜರಿ ಪ್ರದರ್ಶನದಿಂದಾಗಿ 60ರ ದಶಕದಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾದರೂ ತಂಡದಲ್ಲಿ ಎರ್ರಪ್ಪಳ್ಳಿ ಪ್ರಸನ್ನ ಮತ್ತು ಬಿ ಎಸ್ ಚಂದ್ರಶೇಖರ್ ಅವರಂತಹ ಘಟಾನುಘಟಿಗಳು ಇದ್ದ ಕಾರಣ ತಮ್ಮ ಚೊಚ್ಚಲು ಪಂದ್ಯಕ್ಕೆ ಕೆಲ ಸಮಯ ಕಾಯಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಅವರಿಗಿತ್ತು. 1968-69ರಲ್ಲಿ ಹೈದರಾಬಾದ್ ವಿರುದ್ಧ ತಮ್ಮ ಚೊಚ್ಚಲ ರಣಜಿ ಪಂದ್ಯವನ್ನು ಆಡುವ ಅವಕಾಶ ಪಡೆದ ವಿಜಿ, ಆ ಪಂದ್ಯದಲ್ಲಿ 3 ವಿಕೆಟ್ ಗಳಿಸಿದರೆ, ಮದ್ರಾಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ 6 ವಿಕೆಟ್ ಪಡೆದರಾದರೂ, ಮತ್ತೆ ತಂಡಕ್ಕೆ ಚಂದ್ರ ಮತ್ತು ಪ್ರಸನ್ನ ಅವರು ಬಂದಾಗಲೆಲ್ಲಾ ಬೆಂಚ್ ಕಾಯಿಸಲೇ ಬೇಕಾಗುತ್ತಿತ್ತು. 1969ರಲ್ಲಿಯೇ ದಕ್ಷಿಣ ವಲಯ ತಂಡಕ್ಕೆ ದುಲೀಪ್ ಟ್ರೋಫಿಗಾಗಿ ಆಯ್ಕೆಯಾದರೂ ಪಂದ್ಯದ 11ರ ಬಳಗದಲ್ಲಿ ಅವಕಾಶ ಸಿಗದೇ, ಸುಮಾರು 10 ವರ್ಷಗಳ ಕಾಲ ಕಾಯಬೇಕಾಯಿತು.

1971-72ರಲ್ಲಿ ರಾಜಸ್ಥಾನ ವಿರುದ್ಧದ ಕ್ವಾರ್ಟರ್ ಫೈನಲ್ನಲ್ಲಿ, ಕಾಲು ನೋವಿನಿಂದ ನರಳುತ್ತಿದ್ದರೂ ಭರ್ಜರಿಯಾಗಿ ಆಟವಾಡಿ 71* ಗಳಿಸಿ ನಾಟ್ ಔಟ್ ಆಗಿ ಉಳಿದಿದ್ದರು. 1975-76ರ ಮಹಾರಾಷ್ಟ್ರ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಜಿ ಮೊದಲ ಇನ್ನಿಂಗ್ಸ್‌ನಲ್ಲಿ 66 ರನ್ನುಗಳನ್ನು ಗಳಿಸಿದರೆ, ಎರಡನೇ ಇನ್ನಿಂಗ್ಸಿನಲಿ ಕೇವಲ 138 ನಿಮಿಷಗಳಲ್ಲಿ 102* ರನ್ ಗಳಿಸುವ ಮೂಲಕ ಆ ಋತುವಿನ ಅತ್ಯಂತ ವೇಗದ ಶತಕದ ಪ್ರಶಸ್ತಿಗೂ ಭಾಜನಾದರು. 77-78ರಲ್ಲಿ ಬಿಹಾರ ವಿರುದ್ಧ ಮತ್ತೊಂದು ಭರ್ಜರಿ ಶತಕ ಬಾರಿಸಿದ್ದರು.

1978–79ರಲ್ಲಿ ಆಲ್ವಿನ್ ಕಾಳೀಚರಣ್ ನಾಯಕತ್ವದ ಪ್ರವಾಸೀ ವೆಸ್ಟ್ ಇಂಡೀಸ್ ತಂಡದ ವಿರುದ್ಧ, ಕರ್ನಾಟಕ್ ತಂಡದ ಐತಿಹಾಸಿಕ ಗೆಲುವಿನಲ್ಲಿ ವಿಜಿ ಅವರ ಪಾತ್ರ ಬಹಳವಾಗಿತ್ತು. ಅ ಪಂದ್ಯದಲ್ಲಿ 6/79 ಮತ್ತು 3/89 ಪಡೆಯುವ ಮೂಲಕ ವಿಂಡೀಸ್ ದಾಂಡಿಗರಿಗೆ ಸಿಂಹಸ್ವಪ್ನವಾಗಿ ಕಾಡಿದ್ದರು. ಕರ್ನಾಟಕ ಪರ ಆಡಿದ ಎಡಗೈ ಸ್ಪಿನ್ನರ್ ಮತ್ತು ಎಡಗೈ ಬ್ಯಾಟ್ಸ್‌ಮನ್‌ ಆಗಿ ಸುಮಾರು 15 ವರ್ಷಗಳ ಕಾಲ ಸುಮಾರು 80 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ, ಸರಾಸರಿ 25.8 ರನ್ನುಗಳೊಂದಿಗೆ 2297 ರನ್ ಗಳಿಸಿದ್ದಲ್ಲದೇ, 194 ವಿಕೆಟ್ಗಳನ್ನು ಪಡೆದಿದ್ದರು. ಇದರಲ್ಲಿ ಎರಡು ಶತಕಗಳೊಂದಿಗೆ 16 ಅರ್ಧಶತಕಗಳನ್ನು ಒಳಗೊಂಡಿತ್ತು. ವಿಜಿ ಕರ್ನಾಟಕದ ಪರ ಆಡುತ್ತಿದ್ದ ಸಮಯದಲ್ಲಿ ಒಟ್ಟು 5 ಬಾರಿ ಕರ್ನಾಟಕ ತಂಡ ರಣಜಿ ಟ್ರೋಫಿ ಫೈನಲ್ ತಲುಪಿ 1973-74, 1977-78 ಮತ್ತು 1982-83 ಮೂರು ಬಾರಿ ಛಾಂಪಿಯನ್ ಆಗುವುದರಲ್ಲಿ ವಿಜಿ ಅವರ ಕೊಡುಗೆಯೂ ಅಪಾರವಾಗಿತ್ತು.

ಬಹುಶಃ ಅವರ ಕಾಲದಲ್ಲಿ one day matches ಈಗಿನಂತೆ ಹೆಚ್ಚಾಗಿದ್ದು, T20‌ ಪಂದ್ಯಾವಳಿಗಳು ಏನಾದರೂ ಇದ್ದಿದ್ದಲ್ಲಿ ವಿಜಯಕೃಷ್ಣ ನಿಸ್ಸಂದೇಹವಾಗಿ ಧ್ರುವತಾರೆಯಂತೆ ಮಿಂಚಿ ಮಿನುಗುತ್ತಿದ್ದರಲ್ಲಿ ಅನುಮಾನವೇ ಇಲ್ಲಾ

ರಣಜಿ ಪಂದ್ಯಗಳ ಅತ್ಯಂತ ಉತ್ತಮ ಪ್ರದರ್ಶವನ್ನು ನೀಡಿದ ಫಲವಾಗಿ ಸಹಜವಾಗಿಯೇ ಭಾರತ ತಂಡದ ಪರವಾಗಿ ಆಡಲು ಕಾತುರತೆಯಿಂದ ಕಾಯುತ್ತಿದ್ದರೂ ಅದೇಕೋ ಏನೋ ಆಯ್ಕೆದಾರರ ದೃಷ್ಟಿ ವಿಜಿಯವರ ಮೇಲೆ ಬೀಳಲೇ ಇಲ್ಲ. ಹರ್ಯಾಣ ಪರ 750ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದ ರಾಜಿಂದರ್ ಸಿಂಗ್ ಗೋಯಲ್ ಮತ್ತು ಕರ್ನಾಟಕದ ವಿಜಯ್ ಕೃಷ್ಣ ಇಬ್ಬರೂ ಸಹಾ ಅಗಾಧವಾದ ಪ್ರತಿಭೆಯಿದ್ದರೂ ರಾಷ್ಟ್ರೀಯ ತಂಡದಲ್ಲಿ ಅವಕಾಶ ವಂಚಿತರಾದ ನತದೃಷ್ಟರು ಎಂದರು ತಪ್ಪಾಗಲಾರದು. ಇವರು ಆಡುತ್ತಿದ್ದ ಸಮಯದಲ್ಲೇ, ಬೇಡಿ, ವೆಂಕಟ ರಾಘವನ್, ಚಂದ್ರಾ, ಪ್ರಸನ್ನ ನಂತರ ದಿಲೀಪ್ ದೋಷಿ ಅಂತಹ ಆಟಗಾರರು ಇದ್ದ ಕಾರಣ ಇವರಿಬ್ಬರಿಗೂ ಸಹಜವಾಗಿ ಭಾರತ ತಂಡದಲ್ಲಿ ಸ್ಥಾನ ಸಿಗಲಿಲ್ಲ ಎನ್ನುವುದೇ ವಾಸ್ತವ. 34 ವರ್ಷಗಳಾದರೂ ಭಾರತ ತಂಡದ ಪರ ಆಡಲು ಅವಕಾಶ ಸಿಗದ ಕಾರಣ, ಸುಮ್ಮನೇ ರಾಜ್ಯ ತಂಡದಲ್ಲಿ ಆಡುತ್ತಾ ಮುಂದುವರೆದು ಮತ್ತೊಬ್ಬ ಎಳೆಯ ಪ್ರತಿಭಾವಂತನ ಅವಕಾಶವನ್ನು ಕಿತ್ತುಕೊಳ್ಳಲು ಬಯಸದ ವಿಜಯಕೃಷ್ಣ 1982–83ರಲ್ಲಿ ಬಾಂಬೆ ವಿರುದ್ಧದ ರಣಜಿ ಫೈನಲ್ ಪಂದ್ಯದ ವಿಜಯದ ನಂತರ ವಿಜಯಕೃಷ್ಣ ಎಲ್ಲಾ ರೀತಿಯ ಪ್ರಥಮ ದರ್ಜೆಯ ಕ್ರಿಕೆಟ್ ನಿಂದ ನಿವೃತ್ತರಾದರೂ, ಕೆಲ ವರ್ಷಗಳ ಕಾಲ ತಮ್ಮ ಬ್ಯಾಂಕ್ ಮತ್ತು ಕ್ಲಬ್ ಪರ ತಮ್ಮ ನೆಚ್ಚಿನ ಕ್ರಿಕೆಟ್ ಆಡವಾಡುತ್ತಾ ತಮ್ಮ ಮನಮೋಹಕ ಭರ್ಜರಿ ಹೊಡೆತಗಳ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದರು. ಅವರು ಸಿಂಡಿಕೇಟ್ ಬ್ಯಾಂಕ್ ಪರ ಆಡುತ್ತಿದ್ದಾಗ ಆ ತಂಡದಲ್ಲಿ ಬಿ. ಎಸ್. ಚಂದ್ರಶೇಖರ್, ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ, ಸದಾನಂದ ವಿಶ್ವನಾಥ್, ಸುಧಾಕರ್ ರಾವ್, ಎ.ವಿ.ಜಯಪ್ರಕಾಶ್ ರಂತಹ ಘಟಾನುಘಟಿಗಳ ಜೊತೆಗೆ ವಿಜಯಕೃಷ್ಣವರು ಆಡುತ್ತಿದ್ದರು.

1998-99ರಲ್ಲಿ ರಾಜ್ಯ ಕ್ರಿಕೆಟ್ ತಂಡದ ಆಯ್ಕೆಗಾರರಾಗಿದ್ದಾಗ ಬೆಂಗಳೂರಿನ ಹೊರಗಿನ ಪ್ರದೇಶದ ಅನೇಕ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ರಾಜ್ಯ ತಂಡದಲ್ಲಿ ಆಡಲು ಅವಕಾಶ ಮಾಡಿಕೊಟ್ಟಿದ್ದು ನಿಜಕ್ಕೂ ಅಭಿನಂದನಾರ್ಹವಾಗಿತ್ತು. ತಮ್ಮ ನಿವೃತ್ತಿಯ ನಂತರವೂ ಯುವ ಆಟಗಾರೊಂದಿಗೆ ನೆಟ್ ನಲ್ಲಿ ಬರಿಗಾಲಿನಲ್ಲಿಯೇ ತಮ್ಮ ಡ್ರಿಫ್ಟ್, ಫ್ಲೈಟ್, ಆರ್ಮ್ ಬಾಲ್ ಮುಖಾಂತರ ಯುವ ಆಟಗಾರರನ್ನು ಚಕಿತಗೊಳಿಸುತ್ತಿದ್ದರು.

ಕೆಲ ವರ್ಷಗಳ ಹಿಂದೆ ಯುವರಾಜ್ ಸಿಂಗ್ ಜಾಹೀರಾತಿನಲ್ಲಿ ಹೇಳಿರುವಂತೆ जब तक बल्ला चल रहा है तब तक ठाट हैं. जिस दिन बल्ला नहीं चलेगा….. उस दिन और ज्यादा थाथ है भाई ಲ್ಲಿಯವರೆಗೂ ಬ್ಯಾಟ್ ಸದ್ದು ಮಾಡುತ್ತಿರುತ್ತದೋ ಅಲ್ಲಿಯವರೆಗೂ ಎಲ್ಲವೂ ಉತ್ತಮವಾಗಿರುತ್ತದೆ. ಒಮ್ಮೆ ಬ್ಯಾಟ್ ಸದ್ದು ಮಾಡುವುದನ್ನು ನಿಲ್ಲಿಸಿದರೆ ಅದಕ್ಕಿಂತಲೂ ಕೆಟ್ಟ ಗಳಿಗೆ ಮತ್ತೊಂದು ಇರುವುದಿಲ್ಲ ಎನ್ನುವುದು ವಿಜಿ ಅವರ ಕ್ರಿಕೆಟ್ ಜೀವನದಲ್ಲಿ ಅಕ್ಷರಶಃ ಸತ್ಯವಾಗಿತ್ತು. ಕೇವಲ ಅಧ್ಭುತವಾದ ಪ್ರತಿಭೆಯಿದ್ದರೆ ಸಾಲದು, ಪ್ರತಿಭೆಯ ಜೊತೆಗೆ ಅದೃಷ್ಟವೂ ಇರಬೇಕು ಎಂಬುದಕ್ಕೆ ವಿಜಯಕೃಷ್ಣ ಅವರ ಕ್ರಿಕೆಟ್ ಬದುಕೇ ಸಾಕ್ಷಿ.

viji5

ಒಮ್ಮೆ ಕ್ರಿಕೆಟ್ಟಿನಿಂದ ನಿವೃತ್ತರಾದ ಕೂಡಲೇ ಸಾರ್ವಜನಿಕವಾಗಿ ಅಷ್ಟೇನೂ ಗುರುತಿಸಿಕೊಳ್ಳದ ವಿಜೀ, ಕಳೆದ ಗುರುವಾರ 17 ಜೂನ್ 2021ರಂದು ತಮ್ಮ 71 ನೇ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆಯೇ, ಹೃದಯಾಘಾತದಿಂದ ನಿಧನರಾದರು. ಈ ಮೂಲಕ ಕರ್ನಾಟಕ ಕ್ರಿಕೆಟ್ ತಂಡದ ಅಮೂಲ್ಯ ರತ್ನವೊಂದು ಕಳಚಿ ಬಿದ್ದಂತಾಯಿತು. ತಮ್ಮ ವೃತ್ತಿಪರ ಕ್ರಿಕೆಟ್ ಜೀವನದಲ್ಲಿ ಚೈನಾಮನ್ ಸ್ಪಿನ್ನರ್ ಆಗಿ, ಕೆಳ ಮಧ್ಯಮ ಕ್ರಮಾಂಕದ ಬಿರುಸಿನ ದಾಂಡಿಗನಾಗಿ, ತಂಡಕ್ಕೆ ಆಪಧ್ಭಾಂಧವನಾಗಿ, ಶಾರ್ಟ್ ಫೈನ್ ಲೆಗ್ ನಲ್ಲಿ ಅತ್ಯಂತ ಚುರುಕಿನ ಫೀಲ್ಡರಾಗಿ ಕ್ರಿಕೆಟ್ ಪ್ರಿಯರ ಮನಸಿನಲ್ಲಿ ಸದಾಕಾಲವೂ ಹಚ್ಚ ಹಸಿರಾಗಿಯೇ ಉಳಿಯುತ್ತಾರೆ. ಗಟ್ಟಿಯಾದ ಅಧಿಕಾರಯುತ ಕುಟುಂಬದ ಹಿನ್ನೆಲೆ ಇದ್ದರೂ, ಪ್ರತಿಭೆ, ಅಧಿಕಾರ ಮತ್ತು ಪ್ರಸಿದ್ಧಿ ಎಲ್ಲವೂ ಸನಿಹದಲ್ಲೇ ಕೈಗೆಟುಕುವಂತೆ ಇದ್ದರೂ ಅದಾವುದರ ಗೊಡವೆಯೂ ಇಲ್ಲದೆ ಎಲೆಮರೆಕಾಯಿಯಂತೆ ಸರಳವಾಗಿ ಸದ್ದಿಲ್ಲದೇ ಇಹಲೋಕವನ್ನು ತ್ಯಜಿಸಿ ಹೋದ ಬಿ. ವಿಜಯಕೃಷ್ಣ ನಿಜವಾಗಿಯೂ ಕರ್ನಾಟಕ ಕ್ರಿಕೆಟ್ ಪ್ರಿಯರ ಮನಸ್ಸಿನಲ್ಲಿ ಶಾಶ್ವತವಾಗಿ ಮನೆ ಮಾಡಿರುವುದಂತೂ ಸತ್ಯ.

ಏನಂತೀರೀ?

ನಿಮ್ಮವನೇ ಉಮಾಸುತ

ಹಾರುವ ಸಿಖ್, ಮಿಲ್ಕಾ ಸಿಂಗ್

ಅದು 1960ರ ಸಮಯ ರೋಮ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಲಿದೆ. ಎಂದಿನಂತೆ ಭಾರತದಿಂದಲೂ ಕೆಲ ಆಟಗಾರರು ಹೋದಾ ಪುಟ್ಟಾ ಬಂದಾ ಪುಟ್ಟಾ ಎನ್ನುವಂತೆ ಬರಿಗೈಯಲ್ಲಿ ವಾವಾಸಾಗುತ್ತಿದ್ದ ದಿನಗಳಾದರೂ ಈ ಒಲಿಂಪಿಕ್ಸ್ ಭಾರತೀಯರ ಪಾಲಿಗೆ ಅತ್ಯಂತ ವಿಶೇಷವಾಗಿತ್ತು. ಭಾರತದ ಪರ 31ರ ತರುಣ ಅಥ್ಲೆಟಿಕ್ಸ್ ನಲ್ಲಿ ಏನಾದರೂ ಸಾಧಿಸಬಹುದು ಎಂಬ ನಿರೀಕ್ಷೆ ಇತ್ತು. ಏಕೆಂದರೆ 1956ರಲ್ಲಿ ನಡೆದ ಮೆಲ್ಬೊರ್ನ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮೊದಲಬಾರಿಗೆ ಭಾಗವಹಿಸಿದ್ದ ಇದೇ ಓಟಗಾರ, ಸಾಕಷ್ಟು ಅನುಭವವಿಲ್ಲದ ಕಾರಣ ಅಷ್ಟೆನೂ ಸಾಧನೆ ಮಾಡಲಾಗದಿದ್ದರೂ, ಆ ಕ್ರೀಡಾಕೂಟದಿಂದ ಕಲಿತು, ಮುಂದಿನ ನಾಲ್ಕು ವರ್ಷಗಳಷ್ಟರಲ್ಲಿ ವಿಶ್ವದ ನಾನಾ ಕಡೆಯಲ್ಲಿ ನಡೆದ ಅಥ್ಲೆಟಿಕ್ಸ್‌ ಸ್ಪರ್ಧೆಯಲ್ಲಿ ಎಲ್ಲರಿಗೂ ಬಹಳ ಪೈಪೋಟಿ ನೀಡಿ ಅನೇಕ ಪ್ರಶಸ್ತಿಗಳನ್ನು ಚಾಚಿದ್ದರಿಂದ ಆತನ ಮೇಲೆ ಬಹಳಷ್ಟು ಭರವಸೆಗಳೊಂದಿಗೆ ನಿರೀಕ್ಷೆಯೂ ಸಹಾ ಹೆಚ್ಚಾಗಿತ್ತು.

ರೋಮ್ ನ ಆ ಒಲಿಂಪಿಕ್ಸ್‌ ಕ್ರೀಡಾಕೂಟದ 400 ಮೀಟರ್‌ ಓಟದ ಆರಂಭಿಕ ಸುತ್ತಿನಲ್ಲಿ ಆತ ಮೀಟರ್‌ ಓಟವನ್ನು 47.6 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ, 2ನೇ ಸ್ಥಾನ ಗಳಿಸಿದ್ದ. ಮುಂದಿನ ಸುತ್ತಿನಲ್ಲಿ 46.5 ಸೆಕೆಂಡ್‌ಗಳಲ್ಲಿ ಓಟವನ್ನು ಪೂರ್ಣಗೊಳಿಸುವ ಮೂಲಕ ತನ್ನದೇ ದಾಖಲೆಯನ್ನು ಉತ್ತಮಗೊಳಿಸಿ ಮತ್ತೆ ೨ನೇ ಸ್ಥಾನ ಗಳಿಸಿದ್ದ.

ಸೆಮಿಫೈನಲ್‌ ಸುತ್ತಿನಲ್ಲಿ ತಮ್ಮ ಓಟದ ಓಘವನ್ನು ಮತ್ತಷ್ಟೂ ತೀವ್ರಗೊಳಿಸಿ 45.9 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ಮೂಅನೇ ಬಾರಿಗೆ 2ನೇ ಸ್ಥಾನಗಳಿಸುವ ಮೂಲಕ ನೆರೆದಿದ್ದ ಎಲ್ಲಾ ಕ್ರೀಡಾಸಕ್ತರ ಗಮನವನ್ನು ಸೆಳೆದಿದ್ದಲ್ಲದೇ, ಭಾರತಕ್ಕೆ ಮೊದಲ ಬಾರಿಗೆ ಓಲಂಪಿಕ್ಸ್ ನಲ್ಲಿ ವಯಕ್ತಿಯವಾಗಿ ಪದಕವನ್ನು ತರುವ ಭರವಸೆ ಮೂಡಿಸಿದ್ದ.

ಅಂತಿಮ ಸುತ್ತಾದ ಫೈನಲ್ಸಿನಲ್ಲಿ ಡಂ! ಎಂದು ಪಿಸ್ತೂಲಿನ ಸದ್ದಾಗುತ್ತಿದ್ದಂತೆಯೇ ಧುಮ್ಮಿಕ್ಕಿ ಭೋರ್ಗರೆಯುವ ಜಲಧಾರೆಯಂತೆ ಗಾಳಿಯಲ್ಲಿ ಹಾರಿಕೊಂಡು ಶರವೇಗದಲ್ಲಿ ಓಡುತ್ತಿದ್ದ ನಮ್ಮ ಭಾರತೀಯ ಆಟಗಾರ ಆರಂಭದ 250 ಮೀಟರ್ ದೂರದ ವರೆಗೂ ತನ್ನ ಪ್ರತಿಸ್ಪರ್ಥಿಗಳಿಗಿಂತಲೂ ಬಹಳವಾಗಿ ಮುಂಚೂಣಿಯಲ್ಲಿರುವ ಮೂಲಕ ಅಗ್ರಸ್ಥಾನದಲ್ಲಿದ್ದಾಗ ಅಲ್ಲಿದ್ದ ಪ್ರತಿಯೊಬ್ಬರಿಗೂ ಈ ಬಾರಿ ಚಿನ್ನ ಭಾರತದ್ದೇ ಎಂಬ ಆಶಾಭಾವನೆ ಮೂಡಿತ್ತು. ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಮುಂದೆ ನಡೆದದ್ದೇ ಇತಿಹಾಸ.

ಅದಾಗಲೇ ಬಹಳಷ್ಟು ಮುಂದಿದ್ದ ಆ ಆಟಗಾರ ಒಂದು ಕ್ಷಣ ಮೈಮರೆತು ತನ್ನ ವೇಗದ ಗತಿಯನ್ನು ತುಸು ನಿಧಾನ ಮಾಡಿ ಹಿಂದಿರುಗಿ ನೋಡಿದ್ದೇ ತಪ್ಪಾಗಿ ಹೋಯಿತು. ಕಣ್ಣಿನ ರೆಪ್ಪೆ ಮಿಟುಕಿಸಿ ತೆಗೆಯುವಷ್ಟರಲ್ಲಿ ಅವರ ಪ್ರತಿಸ್ಪರ್ಧಿಗಳು ಅವರನ್ನು ಹಿಂದಿಕ್ಕಿ ಓಡತೊಡಗಿದ್ದರು. ಪರಿಸ್ಥಿತಿ ಅರಿವಾಗಿದ್ದೇ ತಡಾ ನಮ್ಮ ಓಟಗಾರ ಶಕ್ತಿಮೀರಿ ಓಡಿದರೂ, ಇತರೆ ಪ್ರತಿಸ್ಪರ್ಧಿಗಳು ಆತನನ್ನು ಹಿಂದಿಕ್ಕಿ ಸಾಕಷ್ಟು ಮುಂದೆ ಧಾವಿಸಿಯಾಗಿತ್ತು

milkha1

ಅಂತಿಮವಾಗಿ ಒಟಿಸ್‌ ಡೇವಿಸ್‌ ಮತ್ತು ಕಾರ್ಲ್‌ ಕೌಫ್ಮನ್‌ 44.9 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದರೆ, ದಕ್ಷಿಣ ಆಫ್ರಿಕಾದ ಮಾಲ್ಕಮ್‌ ಸ್ಪೆನ್ಸ್‌ ಜೊತೆ ಜೊತೆಯಲ್ಲಿಯೇ ನಮ್ಮ ಓಟಗಾರನೂ 45.5 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಆ ಪಂದ್ಯಕ್ಕೆ ರೋಚಕತೆಯನ್ನು ತಂದಿಟ್ಟಿದ್ದರು. ಮೊದಲ ಎರಡು ಸ್ಥಾನಗಳು ನಿರ್ವಿವಾದವಾಗಿ ನಿಶ್ಚಿತಗೊಂಡರೂ, ಮೂರನೇ ಸ್ಥಾನವನ್ನು ನಿರ್ಧರಿಸಲು ತೀರ್ಪುಗಾರರು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಬೇಕಾಯಿತು. ಹಲವಾರು ಬಾರೀ ವೀಡೀಯೋ ಗಳನ್ನು ನೋಡಿ ಅಂತಿಮವಾಗಿ ಮಾಲ್ಕಮ್‌ ಸ್ಪೆನ್ಸ್‌ಗಿಂತ ಕೇವಲ 0.1 ಸೆಕೆಂಡಷ್ಟು ತಡವಾಗಿ, ಅಂದರೆ, 45.6 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದ ಕಾರಣ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ನಮ್ಮ ದೇಶದ ಓಟಗಾರ ಕೆಲ ಕ್ಷಣಗಳ ಕಾಲ ಮೈಮರೆತದ್ದಕ್ಕಾಗಿ ಸೂಜಿ ಮೊನಚಿನಷ್ಟು ಅಂತರದಲ್ಲಿ ಪದಕವನ್ನು ತಪ್ಪಿಸಿಕೊಂಡು,ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡರೂ ಒಲಂಪಿಕ್ಸ್ ನಲ್ಲಿ ಭಾರತದ ಪರ ಇತಿಹಾಸವನ್ನು ಸೃಷ್ಟಿಸಿಯಾಗಿತ್ತು. ಈ ರೀತಿಯ ವಿರೋಚಿತ ಸೋಲಿನ ಮೂಲಕವೇ ಜಗತ ಪ್ರಸಿದ್ಧರಾದವರೇ, ನಮ್ಮ ದೇಶ ಕಂಡ ಅತ್ಯಂತ ವೇಗದ ಓಟಗಾರ, ಹಾರುವ ಸಿಖ್ ಎಂದೇ ಖ್ಯಾತಿ ಹೊಂದಿದ್ದಂತಹ ಶ್ರಿ ಮಿಲ್ಕಾ ಸಿಂಗ್.

ಮುಂದೇ, 1984ರ ಲಾಸ್‌ ಏಂಜೆಲೀಸ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ವೇಗದ ರಾಣಿ ಪಿ. ಟಿ. ಉಷಾ ಮಿಲ್ಖಾ ಸಿಂಗ್‌ರಿಗಿಂತಲೂ ಉತ್ತಮ ಸಾಧನೆ ಮಾಡಿದರೂ, 400 ಮೀಟರ್‌ ಹರ್ಡ್‌ಲ್ಸ್‌ ಸ್ಪರ್ಧೆಯಲ್ಲಿ ಮಿಲ್ಕಾ ಸಿಂಗರಂತೆಯೇ, ಕೇವಲ ಸೆಕೆಂಡಿಗೆ 1/100ರ ಅಂತರದಲ್ಲಿ ಕಂಚಿನ ಪದಕ ಕಳೆದು ಕೊಂಡು ಮತ್ತೊಮ್ಮೆ ಅದೇ ರೀತಿಯ ಇತಿಹಾಸವನ್ನು ನಿರ್ಮಿಸಿದ್ದರು.

milka5

ಪ್ರಸ್ತುತ ಪಾಕಿಸ್ತಾನದಲ್ಲಿರುವ ಗೋವಿಂದಪುರದಲ್ಲಿ 20ನೇ ನವೆಂಬರ್ 1929ರಂದು ಮಿಲ್ಖಾಸಿಂಗ್ ಜನಿಸಿದರು. ಸ್ವಾತಂತ್ರ್ಯಾನಂತರ ವಿಭಜನೆಯ ಸಮಯದಲ್ಲಿ ಮುಲ್ತಾನಿನಿಂದ ಭಾರತಕ್ಕೆ ರೈಲಿನಲ್ಲಿ ಲಕ್ಷಾಂತರ ಹಿಂದೂಗಳು ಹಿಂದಿರುಗುತ್ತಿದ್ದ ಸಮಯದಲ್ಲಿ ನಡೆದ ಮಾರಣ ಹೋಮದಲ್ಲಿ ತನ್ನ ಕಣ್ಣಮುಂದೆಯೇ ತನ್ನ ಹೆತ್ತವರು ಮತ್ತು ಮೂವರು ಸಹೋದರರ ಹತ್ಯೆ ಮಿಲ್ಕಾರವರನ್ನು ಧೃತಿಗೆಡಿಸಿತ್ತು. ನಂತರ ಭಾರತದ ಮಿಲಿಟರಿ ಟ್ರಕ್‌ನಲ್ಲಿ ಫಿರೋಜ್‌ಪುರಕ್ಕೆ ಬಂದಿಳಿದಾಗ ಅವರಿನ್ನೂ ಸಣ್ಣ ವಯಸ್ಸಿನ ಹುಡುಗ, ಹಾಗಾಗಿ ಕೆಲ ದಿನಗಳ ಕಾಲ ಅದೇ ಸೈನಿಕರ ಬೂಟುಗಳನ್ನು ಪಾಲೀಶ್ ಮಾಡಿ ಹೊಟ್ಟೆ ಹೊರೆಯುತ್ತಾರೆ. ಎಷ್ಟೋ ದಿನಗಳು ತಿನ್ನಲು ಏನೂ ಸಿಗದಿದ್ದಾಗ, ಹೊಟ್ಟೆ ಪಾಡಿಗೆ ಸಣ್ಣ ಪುಟ್ಟ ಕಳ್ಳತನವನ್ನೂ ಮಾಡಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಆ ಅನಾಥ ಮಿಲ್ಕಾ ಸಿಂಗ್ ಅವರಿಗಿರುತ್ತದೆ.

milka4

ನಂತರ ಸತತ ಎರಡು ವಿಫಲ ಸೇನಾ ನೇಮಕಾತಿಯ ಪ್ರಯತ್ನಗಳ ನಂತರ, ಅಂತಿಮವಾಗಿ ಮಿಲ್ಕಾ ಸಿಕಂದರಾಬಾದ್‌ನ ಇಎಂಇಗೆ ಸೇರಿಕೊಳ್ಳುತ್ತಾರೆ, ಅಲ್ಲಿ ಗೋಲ್ಕೊಂಡ ಕೋಟೆಯ ನೆರಳಿನಲ್ಲಿ ಅವರ ಅಭ್ಯಾಸ ಆರಂಭವಾಗುತ್ತದೆ. ಅಲ್ಲಿನ ಕ್ರೀಡಾಪಟುತ್ವವನ್ನು ಮೊದಲ ಬಾರಿಗೆ ಗುರುತಿಸಿದ ಸೇನೆಯ ತರಬೇತುದಾರ ಹವಾಲ್ದಾರ್ ಗುರುದೇವ್ ಸಿಂಗ್ 6 ಮೈಲಿ ಓಟಕ್ಕಾಗಿ ಆಯ್ಕೆ ಮಾಡಿದ 500 ಜನರಲ್ಲಿ ಮೊದಲ 10 ಮಂದಿಯ ಪಟ್ಟಿಯಲ್ಲಿ ಮಿಲ್ಕಾಸಿಂಗ್ ಅವರ ಹೆಸರು ಇರುತ್ತದೆ.

ನಂತರ ನೋಡ ನೋಡುತ್ತಿದ್ದಂತೆಯೇ ಇಂಟರ್-ಸರ್ವೀಸಸ್ ಮೀಟ್‌ಗಳಲ್ಲಿ ಸ್ಪರ್ಧೆಯಲ್ಲಿ ಪದಕಗಳ ಕೊಳ್ಳೆ ಹೊಡೆಯುತ್ತಾ, 1956ರ ಹೊತ್ತಿಗೆ ಮೆಲ್ಬೋರ್ನ್ ಒಲಿಂಪಿಕ್ಸ್‌ನಲ್ಲಿ ಭಾರತದ 400 ಮೀಟರ್ ಓಟಗಾರರಾಗಿ ಮೈದಾನಕ್ಕೆ ಇಳಿಯವಷ್ಟು ಎತ್ತರಕ್ಕೆ ಬೆಳೆದಿರುತ್ತಾರೆ. ನಾನು ಹುಟ್ಟಿರುವುದಕ್ಕೇ ಓಡುವುದಕ್ಕಾಗಿ ಎಂದು ಭಾವಿಸಿ, ಸಾಧ್ಯವಾದಷ್ಟೂ ವೇಗವಾಗಿ ಓಡಬೇಕೆಂಬ ಮಹತ್ವಾಕಾಂಕ್ಷೆಯಿಂದಾಗಿ, ಗೆಲ್ಲುವ ಗೀಳಿನಿಂದ ಒಂದೊಂದೇ ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸತೊಡುಗುತ್ತಾರೆ.

ಒಬ್ಬ ಅಥ್ಲೀಟ್‌ ಆಗಿ ಮಿಲ್ಕಾ ಸಿಂಗ್‌ರ ಪಾಲಿಗೆ 1958ರಿಂದ 1962ರ ಅವಧಿಯು ಸುವರ್ಣ ಯುಗ ಎಂದೇ ಹೇಳಬಹುದಾಗಿದೆ,

milka3

1958ರಲ್ಲಿ ಬ್ರಿಟನ್ನಿನ ವೇಲ್ಸ್‌ ರಾಜಧಾನಿ ಕಾರ್ಡಿಫ್‌ನಲ್ಲಿ ನಡೆದ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ 46.16 ಸೆಕೆಂಡ್‌ಗಳಲ್ಲಿ 400 ಮೀಟರ್‌ ಓಟ ಮುಗಿಸಿ ಸ್ವರ್ಣ ಪದಕ ಗೆಲ್ಲುವ ಮೂಲಕ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಅಥ್ಲೀಟ್ ಎನಿಸಿ ಎಲ್ಲರ ಗಮನ ಸೆಳೆಯುತ್ತಾರೆ, ಅದೇ ಸಮಯದಲ್ಲಿಯೇ ಪಾಕಿಸ್ತಾನದಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಸ್ಪರ್ಧೆಯಲ್ಲಿ, ದೇಶ ಇಬ್ಭಾಗದ ಸಮಯದಲ್ಲಿ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳಿಂದಾಗಿ ಪಾಕೀಸ್ಥಾನಕ್ಕೆ ಹೋಗಲು ಮಿಲ್ಕಾ ಸಿಂಗ್ ನಿರಾಕರಿಸುತ್ತಾರೆ. ವಯಕ್ತಿಕ ಕಾರಣಗಳಿಂದಾಗಿ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಂದ ಅವರು ಸ್ಪರ್ಧಿಸಲು ಹಿಂಜರಿದಲ್ಲಿ, ರಾಜಕೀಯ ಅಡ್ಡ ಪರಿಣಾಮಗಳ ಕುರಿತಂತೆ ಅಂದಿನ ಪ್ರಧಾನಿಗಳಾಗಿದ್ದ ನೆಹರುವರು ವಿವರಿಸಿದ ನಂತರ ಮಿಲ್ಕಾ ಸಿಂಗ್‌ ಆ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಲ್ಲದೇ, ಅಲ್ಲಿ ತಮ್ಮ ಎಲ್ಲ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದ್ದಲ್ಲದೇ, ಪಾಕೀಸ್ಥಾನದ ಅಂದಿನ ಪ್ರಬಲ ಕ್ರೀಡಾಪಟು ಅಬ್ದುಲ್ ಖಲೀಕ್ ಅವರನ್ನು ಸೋಲಿಸಿದದ್ದನ್ನು ಕಂಡಪಾಕಿಸ್ತಾನದ ಸರ್ವಾಧಿಕಾರಿ ಆಡಳಿತಗಾರ ಜನರಲ್ ಅಯೂಬ್ ಖಾನ್ ಮಿಲ್ಕಾ ಸಿಂಗರಿಗೆ ವೇಗವಾಗಿ ಚಲಿಸುವ,ಹಾರುವ ಸಿಖ್ (ಫ್ಲೈಯಿಂಗ್ ಸಿಖ್) ಈ ಹೆಸರನ್ನು ನೀಡುವ ಮೂಲಕ ಗೌರವ ಸಲ್ಲಿಸುತ್ತಾರೆ.

1958ರಲ್ಲಿ ಟೋಕಿಯೋದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ 200 ಮೀಟರ್ ಮತ್ತು 400 ಮೀಟರ್ ವಿಭಾಗದಲ್ಲಿ ಮಿಲ್ಕಾ ಸಿಂಗ್ ಚಿನ್ನದ ಪದಕ ಗೆದ್ದಿದ್ದರು. 1962ರ ಏಷ್ಯನ್ ಗೇಮ್ಸ್‌ನಲ್ಲಿ 400 ಮೀಟರ್ ಮತ್ತು 4X400 ರಿಲೇ ವಿಭಾಗದಲ್ಲಿಯೂ ಇಂಥದ್ದೇ ಸಾಧನೆಯನ್ನು ಮಾಡುವ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿಯೇ ಏಷ್ಯಾದ ಅತ್ಯುತ್ತಮ ಓಟಗಾರ ಎಂಬ ಕೀರ್ತಿಗೆ ಪಾತ್ರರಾಗುತ್ತಾರೆ.

milka2

ಇದರ ಮಧ್ಯೆ ಅಂದಿನ ಭಾರತದ ಮಹಿಳಾ ವಾಲಿಬಾಲ್ ತಂಡದ ನಾಯಕಿಯಾಗಿದ್ದ ನಿರ್ಮಲ್ ಕೌರ್ ಅವರನ್ನು ವಿವಾಹವಾಗಿ ಅವರಿಬ್ಬರ ಸುಂದರ ದಾಂಪತ್ಯದ ಫಲವಾಗಿ, ಮೋನಾ ಸಿಂಗ್, ಅಲೀಜಾ ಗ್ರೋವರ್ ಮತ್ತು ಸೋನಿಯಾ ಸಾನ್‌ವಲ್ಕಾ ಎಂಬ ಮೂವರು ಪುತ್ರಿಯರೊಂದಿಗೆ ಜೀವ್ ಮಿಲ್ಖಾ ಸಿಂಗ್ ಹೆಸರಿನ ಮಗ ಜನಿಸುತ್ತಾನೆ. ತಂದೆಯಂತೆಯೇ ಮಗನು ಸಹಾ ಕ್ರೀಡಾಳುವಾಗಿದ್ದು ಭಾರತದ ಪರ ಖ್ಯಾತವೃತ್ತಿಪರ ಗಾಲ್ಫ್ ಆಟಗಾರರಾಗಿದ್ದಾರೆ.

ಮಿಲ್ಕಾ ಸಿಂಗ್ ಅವರ ಕ್ರೀಡಾಸಾಧನೆಗಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಲಭಿಸಿದೆಯಲ್ಲದೇ, ಶ್ರೀಯುತರಿಗೆ 1959 ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಆವರ ಪುತ್ರ ಜೀವ್ ಸಹಾ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವುದು ವಿಶೇಷವಾಗಿದೆ. ಮಿಲ್ಕಾ ಸಿಂಗ್ ಅವರ ಜೀವನ ಆಧರಿಸಿದ ಭಾಗ್ ಮಿಲ್ಕಾ ಭಾಗ್ ಎಂಬ ಚಲನಚಿತ್ರ 2013ರಲ್ಲಿ ತೆರೆಕಂಡು ಅವರ ಸಾಧನೆಗಳು ಇಂದಿನ ಅನೇಕ ಯುವ ಜನರಿಗೆ ತಿಳಿಯುವಂತಾಗಿ ಪ್ರೇರಣೆಯಾಗಿದೆ.

ವಯಸ್ಸು 90ನ್ನು ದಾಟಿದ್ದರೂ ಉತ್ತಮರೀತಿಯ ದೈಹಿಕ ಪರಿಶ್ರಮದಿಂದಾಗಿ ಸದಾಕಾಲವೂ ಬಹಳ ಚಟುವಟಿಕೆಯಿಂದಾಗಿ ಕೂಡಿದವರಾಗಿ ಕೇವಲ 60ರ ವಯಸ್ಸಿನಂತೆ ಕಾಣುತ್ತಿದ್ದರು. ದೇಶದಲ್ಲಿ ಯಾರೇ ಎಲ್ಲಿಗೇ ಯಾವುದೇ ಸಮಾರಂಭಕ್ಕೆ ಕರೆದಲ್ಲಿ ಯಾವುದೇ ಹಮ್ಮು ಬಿಮ್ಮಿಲ್ಲದೇ ಭಾಗವಹಿಸಿ ಯುವಕರಿಗೆ ಶಿಸ್ತು ಸಂಯಮ, ದೇಶ ಭಕ್ತಿ, ಕ್ರೀಡಾಸಕ್ತಿಗಳ ಬಗ್ಗೆ ಹುರಿದುಂಬಿಸುತ್ತಿದ್ದಂತಹ ಬಹಳ ಸರಳ ಸಜ್ಜನ ವ್ಯಕ್ತಿಯಾಗಿದ್ದರು.

ಕೆಲವು ವಾರಗಳ ಹಿಂದೆ ಪತಿ ಪತ್ನಿ ಇಬ್ಬರೂ ಸಹಾ ಕೋವಿಡ್ ಮಹಾಮಾರಿಗೆ ತುತ್ತಾಗಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ದುರಾದೃಷ್ಟವಶಾತ್ ವಯಸ್ಸಾಗಿದ್ದ ಕಾರಣ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸದ ಆವರ ಪತ್ನಿ ನಿರ್ಮಲ್ ಕೌರ್ ಕಳೆದ ವಾರ ಚಂಡೀಗಡದಲ್ಲಿ ನಿಧನಹೊಂದಿದರೆ, ಅವರನ್ನೇ ಹಿಂಬಾಲಿಸಿದ ಮಿಲ್ಕಾ ಸಿಂಗ್ ಅವರು ಸಹಾ ಶುಕ್ರವಾರ ಜೂನ್ 18ರ ತಡರಾತ್ರಿ ಕೊವಿಡ್ ಸೋಂಕಿನಿಂದಾಗಿ ನಿಧನರಾಗುವ ಮೂಲಕ ಈ ದೇಶ ಕಂಡ ಅತ್ಯುತ್ತಮ ಚಾಂಪಿಯನ್ ಒಬ್ಬರನ್ನು ಕಳೆದುಕೊಂಡಿದೆ ಎಂದರೂ ತಪ್ಪಾಗಲಾರದು.

ದೇಶವಿಭಜನೆಯಲ್ಲಿ ತನ್ನ ಕುಟುಂಬ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಯುವಕನೊಬ್ಬ ತನ್ನ ಅಚಲವಾದ ನಂಬಿಕೆ, ನಿರಂತರ ಸಾಧನೆಗಳಿಂದ ಎಲ್ಲವನ್ನೂ ಮೆಟ್ಟೆ ನಿಂತು ಹೇಗೆ ಅಂತರಾಷ್ಟ್ರೀಯ ಮಟ್ಟದವರೆಗೂ ಏರಬಹುದು ಎಂಬುದನ್ನು ಸಾಧಿಸಿ ತೋರಿಸಿದ ಹಾರುವ ಸಿಖ್ ಮಿಲ್ಕಾ ಸಿಂಗ್ ಅವರಿಗೆ ನಮ್ಮೆಲ್ಲರ ಪರವಾಗಿ ತುಂಬು ಹೃದಯದ ಶ್ರದ್ಧಾಂಜಲಿಯನ್ನು ಸಲ್ಲಿಸೋಣ.

ಏನಂತೀರೀ?
ನಿಮ್ಮವನೇ ಉಮಾಸುತ

ದಾಖಲೆಗಳು, ವಿಚಿತ್ರ ಎನಿಸಿದರೂ ಸತ್ಯ

IPL2

ಯಾವುದೇ ಆಟಗಳೇ ಆಗಲಿ ಪಂದ್ಯ ಆರಂಭವಾಗಿ ಆಟಗಾರರು ಮೈದಾನದಲ್ಲಿ/ಆಖಾಡದಲ್ಲಿ ಆಡುತ್ತಾ ಹೋದಂತೆಲ್ಲಾ, ಅಲ್ಲಿ ದಾಖಲೆಗಳು ನಿರ್ಮಾಣವಾಗುವುದು, ಅದನ್ನು ಮತ್ತೊಬ್ಬರು ಮತ್ತೊಂದು ದಿನ ಮುರಿಯುವುದು ಸರ್ವೇ ಸಾಮಾನ್ಯವಾಗಿದೆ. ದಾಖಲೆಗಳಿಗಾಗಿಯೇ ಯಾವ ಆಟಗಾರರೂ ಆಡುವುದಿಲ್ಲವಾದರೂ, ಅವರುಗಳು ಆಡಿದಾಗಲೆಲ್ಲಾ ದಾಖಲೆಗಳು ಆವರ ಅರಿವಿಗೆ ಬಾರದೆಯೇ ಹುಟ್ಟುಕೊಳ್ಳುತ್ತವೆ. ಅದಕ್ಕೆ ಈ ಬಾರಿಯ ಐಪಿಎಲ್ 2021 ಕೂಡಾ ಹೂರತಾಗಿಲ್ಲ. ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಮೊದಲ ಪಂದ್ಯದಿಂದ ಹಿಡಿದು ನೆನ್ನೆ ನಡೆದ ಆರ್ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪಂದ್ಯದವರೆಗೂ ಈ ವರೆಗೂ ನಡೆದಿರುವ ಆರು ಪಂದ್ಯಗಳಲ್ಲಿಯೂ ಮೊದಲು ಆಟವಾಡಿದ ತಂಡದ, ಕಡೆಯ ಎಸೆತದಲ್ಲಿ, ಆಟಗಾರ ಔಟ್ ಆಗುವ ಮೂಲಕ ಒಂದು ಅಪರೂಪದ ದಾಖಲೆಯ ನಿರ್ಮಾಣಕ್ಕೆ ಎಲ್ಲಾ 8 ತಂಡಗಳೂ ಸಹಕರಿಸಿವೆ ಎನ್ನುವುದು ಗಮನಾರ್ಹವಾಗಿದೆ.

IPL,2021, 1 ನೇ ಪಂದ್ಯ ಎಂ.ಎ.ಚಿದಂಬರಂ ಕ್ರೀಡಾಂಗಣ,ಚೆನ್ನೈ, 9 ಏಪ್ರಿಲ್ 2021
ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು
ಮುಂಬೈ ಆರ್‌ಡಿ ಚಹರ್ ರನ್ ಔಟ್ 0 (ಕೊಹ್ಲಿ / ಡಿವಿಲಿಯರ್ಸ್) 9-159 (ಚಹರ್, 19.6 ಓವರ್).

IPL,2021, 2 ನೇ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂ, 10 ಏಪ್ರಿಲ್ 2021
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್
ಚೆನ್ನೈ ಎಸ್.ಎಂ.ಕರ್ರನ್ ಬಿ ವೋಕ್ಸ್ 34, 7-188 (ಕರ್ರನ್, 19.6 ಓವರ್).

IPL,2021, 3 ನೇ ಪಂದ್ಯ ಎಂ.ಎ.ಚಿದಂಬರಂ ಕ್ರೀಡಾಂಗಣ, ಚೆನ್ನೈ, 11 ಏಪ್ರಿಲ್ 2021
ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತಾ ನೈಟ್ ರೈಡರ್ಸ್
ಕೋಲ್ಕತಾ ಶಕೀಬ್ ಅಲ್ ಹಸನ್ ಸಿ ಅಬ್ದುಲ್ ಸಮದ್ ಬಿ ಕುಮಾರ್ 3, 6-187 (ಶಕೀಬ್ ಅಲ್ ಹಸನ್, 19.6 ಓವರ್).

IPL,2021, 4 ನೇ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂ, 12 ಏಪ್ರಿಲ್ 2021
ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್
ಪಂಜಾಬ್ ಜೆಎ ರಿಚರ್ಡ್ಸನ್ ಸಿ ಮೋರಿಸ್ ಬಿ ಸಕರಿಯಾ 0 6-221 (ರಿಚರ್ಡ್ಸನ್, 19.6 ಓವರ್).
ರಾಜಸ್ಥಾನ ಎಸ್‌ವಿ ಸ್ಯಾಮ್ಸನ್ ಸಿ ಹೂಡಾ ಬಿ ಅರ್ಷ್‌ದೀಪ್ ಸಿಂಗ್ 119 7-217 (ಸ್ಯಾಮ್ಸನ್, 19.6 ಓವರ್).

ಈ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರೂ ಸಹಾ ಕೊನೆಯ ಓವರಿನ ಕೊನೆಯ ಎಸೆತದಲ್ಲಿ ಔಟ್ ಆಗಿರುವುದು ಮತ್ತೊಂದು ವಿಶೇಷವಾಗಿದೆ.

IPL,2021, 5 ನೇ ಪಂದ್ಯ ಎಂ.ಎ.ಚಿದಂಬರಂ ಕ್ರೀಡಾಂಗಣ, ಚೆನ್ನೈ, 13 ಏಪ್ರಿಲ್ 2021
ಕೋಲ್ಕತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್
ಮುಂಬೈ ಆರ್‌ಡಿ ಚಹರ್ ಸಿ ಶುಬ್ಮನ್ ಗಿಲ್ ಬಿ ರಸ್ಸೆಲ್ 8 10-152 (ಚಹರ್, 19.6 ಓವರ್).

ಮುಂಬೈನ ಆರ್‌ಡಿ ಚಹರ್ ಆಡಿರುವ ಎರಡೂ ಪಂದ್ಯದಲ್ಲಿ ಕಡೆಯ ಎಸೆತಕ್ಕೆ ಔಟ್ ಆಗಿರುವುದು ಮತ್ತೊಂದು ವಿಶೇಷವಾಗಿದೆ.

IPL,2021, 6 ನೇ ಪಂದ್ಯ ಎಂ.ಎ.ಚಿದಂಬರಂ ಕ್ರೀಡಾಂಗಣ, ಚೆಪಾಕ್, 14 ಏಪ್ರಿಲ್ 2021
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿ ಸನ್‌ರೈಸರ್ಸ್ ಹೈದರಾಬಾದ್
ಆರ್ಸಿಬಿ ಜಿ ಮ್ಯಾಕ್ಸ್ ವೆಲ್ ಸಿ ಸಹಾ ಬಿ ಜೆ ಹೋಲ್ಡರ್ 59 8-149 (ಜಿ ಮ್ಯಾಕ್ಸ್ ವೆಲ್, 19.6 ಓವರ್).

IPL1

ಈಗಾಗಲೇ ತಿಳಿಸಿದಂತೆ ಮೈದಾನದಲ್ಲಿ ಆಡುವಾಗ, ಆಟಗಾರರಿಗೆ ಇಂತಹ ದಾಖಲೆಗಳ ಬಗ್ಗೆ ಅರಿವಿಲ್ಲದಿದ್ದರೂ ಮತ್ತು ಅವರುಗಳು ದಾಖಲೆಗಳಿಗಾಗಿ ಆಡುವುದಿಲ್ಲವಾದರೂ (ಮುಂಬೈ ಮೂಲದ ಕ್ರಿಕೆಟ್ ಆಟಗಾರರು ಇದಕ್ಕೆ ಅಪವಾದವಾಗಿರುವುದು ವಿಪರ್ಯಾಸ) ಪ್ರತಿ ಪಂದ್ಯಗಳಲ್ಲೂ ಒಂದಲ್ಲಾ ಒಂದು ದಾಖಲೆಗಳು ನಿರ್ಮಾಣವಾಗುತ್ತಲೇ ಹೋಗುವುದು ಈ ಎಲ್ಲಾ ಆಟಗಳ ವೈಶಿಷ್ಟ್ಯವಾಗಿದೆ.

IPL3

ಈಗಿನ್ನೂ IPL ಪಂದ್ಯಾವಳಿಗಳು ಆರಂಭವಾಗಿದ್ದು, ಪಂದ್ಯಾವಳಿ ಮುಂದುವರೆದಂತೆಲ್ಲಾ ಖಂಡಿತವಾಗಿಯೂ ಇಂತಹ ಹತ್ತು ಹಲವಾರು ವಿಶೇಷ ದಾಖಲೆಗಳು ಯಾರಿಗೂ ಅರಿವಿಗೇ ಬಾರದೇ ನಿರ್ಮಾಣವಾಗುತ್ತಲೇ ಹೋಗುತ್ತದೆ. ಇಂತಹ ದಾಖಲೆಗಳಿಗಾಗಿಯೇ ಬಕ ಪಕ್ಷಿಗಳಂತೆ ಕಾಯುತ್ತಾ ದಾಖಲೆ ನಿರ್ಮಾಣವಾದಾಗಲೆಲ್ಲಾ ಅದನ್ನು ಹೆಕ್ಕಿ ತೋರಿಸುವ ಕ್ರಿಕೆಟ್ ಅಂಕಿ ಸಂಖ್ಯಾ ತಜ್ಞರಿಗೆ ನಮ್ಮೆಲ್ಲರ ಪರವಾಗಿ ಒಂದು ಧನ್ಯವಾದಗಳನ್ನು ಅರ್ಪಿಸೋಣ.

ಏನಂತೀರೀ?
ನಿಮ್ಮವನೇ ಉಮಾಸುತ

ಇಂತಹ ಅದ್ಭುತ ಮಾಹಿತಿಯನ್ನು ತಿಳಿಸಿ ಈ ಲೇಖನ ಬರೆಯಲು ಪ್ರೇರೇಪಿಸಿದ ಕ್ರಿಕೆಟ್ ಅಂಕಿ ಸಂಖ್ಯಾ ತಜ್ಞ ಶ್ರೀ ಗೋಪಾಲಕೃಷ್ಣ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು

ಮುಲ್ತಾನ್ ಕಾ ಸುಲ್ತಾನ್ ವೀರೇಂದ್ರ ಸೆಹ್ವಾಗ್

ಈ ಬಾರಿ ಹುಣ್ಣಿಮೆ ಭಾನುವಾರ ಮತ್ತು ಸೋಮವಾರ ಬಂದಿದ್ದ ಕಾರಣ ಬಹುತೇಕ ಭಾರತೀಯರು ಎರಡೂ ದಿನ ಹೋಳಿ ಹಬ್ಬದ ಆಚರಣೆಯಲ್ಲಿದ್ದ ಕಾರಣವೋ ಅಥವಾ ಇಂಗ್ಲೇಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕಷ್ಟ ಪಟ್ಟು ಗೆದ್ದದ್ದರ ಸಂಭ್ರಮದಲ್ಲಿ ಮಾರ್ಚ್​ 29, 2004 ರಂದು ಅಂದರೆ ಸರಿಯಾಗಿ 17 ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ಸ್ಪೋಟಕ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಪಾಕಿಸ್ತಾನದ ಮುಲ್ತಾನಿನಲ್ಲಿ ಸುಲ್ತಾನನಾಗಿ ಮೆರೆದು ಭಾರತದ ಪರ ಚೊಚ್ಚಲು ತ್ರಿಶತಕವನ್ನು ಬಾರಿಸಿ, ಪಾಕೀಸ್ಥಾನಿಗಳಿಗೆ ಅವರ ತವರಿನಲ್ಲಿಯೇ ಸೋಲಿನ ರುಚಿ ತೋರಿಸಿದ ನೆನಪಿಗೆ ಮಾಡಿಕೊಳ್ಳದೇ ಹೋದದ್ದು ನಿಜಕ್ಕೂ ವಿಷಾಧನೀಯವೇ ಸರಿ.

ಹೇಳೀ ಕೇಳೀ ಭಾರತ ಮತ್ತು ಪಾಕೀಸ್ಥಾನದ ಸಾಂಪ್ರದಾಯಿಕ ಎದುರಾಳಿಗಳು. ಈ ಎರಡೂ ತಂಡಗಳ ನಡುವಿನ ಯಾವುದೇ ಆಟದ ಪಂದ್ಯವಿರಲಿ ಅದೊಂದು ರೀತಿ ಯುದ್ಧದ ರೀತಿಯಲ್ಲಿಯೇ ಮಾರ್ಪಾಟಾಗಿರುತ್ತದೆ. ಕೇವಲ ಆ ಆಟದಲ್ಲಿ ಆಡುವವರಷ್ಟೇ ಅಲ್ಲದೇ ನೇರವಾಗಿ ಪಂದ್ಯವನ್ನು ವೀಕ್ಷಿಸುವವರ ಮತ್ತು ಪ್ರಪಂಚಾದ್ಯಂತ ಟಿವಿ ಮುಂದೆ ಕುಳಿತು ವೀಕ್ಷೀಸುವವರನ್ನು ಜಾಗೃತಗೊಳಿಸಿ ಹೃದಯಬಡಿತವನ್ನು ಹೆಚ್ಚು ಮಾಡಿ ಬಿಡುತ್ತದೆ.

2004ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಭಾರತ ತಂಡ ಪಾಕಿಸ್ಥಾನಕ್ಕೆ ಪ್ರವಾಸ ಕೈಗೊಂಡು Mar 28 – Apr 1 ರ ವರಗೆ ಮುಲ್ತಾನಿನಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಆಕಾಶ್ ಚೋಪ್ರಾ ಮತ್ತು ಸೆಹ್ವಾಗ್ ಆರಂಭಿಕ ಆಟಗಾರಾಗಿ ಮೈದಾನಕ್ಕೆ ಇಳಿಯುತ್ತಾರೆ. ಒಂದು ಕಡೆ ಬಂಡೆಯಂತೆ ಆಕಾಶ್ ಚೋಪ್ರಾ ನಿಧಾನ ಗತಿಯಲ್ಲಿ ಎಚ್ಚರಿಕೆಯಿಂದ ಆಡುತ್ತಿದ್ದರೆ ಮತ್ತೊಂದು ಕಡೆ ಸೆಹ್ವಾಗ್ ಎಂದಿನಂತೆ ಏಕದಿನ ಮಾದರಿಯಲ್ಲಿ ವಿರೋಚಿತವಾಗಿ ತಮ್ಮ ಬ್ಯಾಟ್ ಬೀಸಲಾರಂಭಿಸಿ ಮಧ್ಯಾನ ಊಟದ ವೇಳೆಗಾಗಲೇ ಶತಕದ ಸಮೀಪಕ್ಕೆ ಬಂದಿರುತ್ತಾರೆ. ತಂಡದ ಮೊತ್ತ 160 ಆಗಿದ್ದಾಗ 42 ರನ್ ಗಳಿಸಿದ್ದ ಆಕಾಶ್ ಚೋಪ್ರಾ ಔಟಾಗುತ್ತಾರೆ. ನಂತರ ಬಂದ ನಾಯಕ ರಾಹುಲ್ ದ್ರಾವಿಡ್ ತಂಡದ ಮೊತ್ತ 173 ಅಗಿರುವಾಗ ಕೇವಲ 6 ರನ್ ಗಳಿಸಿ ಔಟಾದಾಗ ಇದ್ದಕ್ಕಿದ್ದಂತೆಯೇ ಭಾರತ ತೀವ್ರ ಒತ್ತಡಕ್ಕೆ ಸಿಲುಕುತ್ತದೆ. ಆಗ ಮೈದಾನಕ್ಕೆ ಇಳಿದ ಸಚಿನ್ ತೆಂಡೂಲ್ಕರ್ ಎಚ್ಚರಿಕೆಯಿಂದ ಒಂದು ತುದಿಯಲ್ಲಿ ಆಡುತ್ತಾ ಹೋದರೆ, ವೀರೇಂದ್ರ ಸೆಹ್ವಾಗ್ ಮಾತ್ರ ತಮ್ಮ ಬಿರುಸಿನ ಆಟ ಮುಂದುವೆರೆಸಿ ನೋಡ ನೋಡುತ್ತಿದ್ದಂತೆಯೇ ದ್ವಿಶತಕ ದಾಟಿ ಮೊದಲ ದಿನದ ಅಂತ್ಯಕ್ಕೆ ಅಜೇಯ 228 ರನ್​ ಸಿಡಿಸಿ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಳ್ಳುತ್ತಾರೆ.

shew3ನೆನ್ನೆಗೆ ಸರಿಯಾಗಿ 17 ವರ್ಷಗಳ ಹಿಂದೆ, ಮಾರ್ಚ್​ 29, 2004 ರಂದು ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಸೆಹ್ವಾಗ್ ಅಂದು ಆಡುತ್ತಿದ ಪರಿಯನ್ನು ನೋಡಿ ಖಂಡಿತವಾಗಿಯೂ ಈ ಬಾರಿ ಭಾರತದ ಪರ ಒಂದು ತ್ರಿಶತಕ ಗಳಿಸಬಹುದು ಎಂಬ ಆಸೆಯನ್ನು ಮೂಡಿಸಿದ ಕಾರಣ ಆ ದಿನ ಎಲ್ಲರೂ ಕಣ್ಣು ಟಿವಿಯ ಪರದೆಯತ್ತ ಇರುತ್ತದೆ. ಕೋಟ್ಯಾಂತರ ಭಾರತೀಯರ ಆಸೆಯನ್ನು ಹುಸಿಗೊಳಿಸದೇ, ಪಾಕ್ ತಂಡದ ಅಷ್ಟೂ ಬೋಲರ್ಗಳನ್ನು ಲೀಲಾಜಾಲವಾಗಿ ಎದುರಿಸಿ ಅವರ ಪ್ರತಿಯೂಂದು ಚೆಂಡುಗಳನ್ನೂ ಮೈದಾನದ ಮೂಲೆ ಮೂಲೆಗೂ ಅಟ್ಟಿ ತಮ್ಮ ವೈಯಕ್ತಿಕ ಮೊತ್ತ 294 ಆಗಿರುವಾಗ ಮತ್ತೊಂದು ತುದಿಯಲ್ಲಿದ್ದ ಸಚಿನ್ ತೆಂಡೂಲ್ಕರ್ ಸೆಹ್ವಾಗ್ ಬಳಿ ಬಂದು ವೀರೂ, 300ರ ಗಡಿಯಲ್ಲಿ ಇದ್ದೀಯಾ. ಸ್ವಲ್ಪ ನಿಂತು ನೋಡಿ ಕೊಂಡು ಆಡು. ಸುಮ್ಮನೆ ಹುಚ್ಚಾ ಪಟ್ಟೆಯಾಗಿ ಸಿಕ್ಸರ್ ಬಾರಿಸಲು ಹೋಗಬೇಡ ಎಂಬ ಕಿವಿಮಾತನ್ನು ಹೇಳುತ್ತಾರೆ. ತಮ್ಮ ಪಾಡಿಗೆ ಸೀಟಿ ಹೊಡೆದುಕೊಂಡು ಆಟವಾಡುತ್ತಿದ್ದ ಸೆಹ್ವಾಗ್ ಹೂಂ ಪಾಜೀ.. ಎಂದು ತಲೆಯಾಡಿಸಿ ಎಂದಿನಂತ ತನ್ಮ ಬ್ಯಾಟ್ ಅನ್ನು ಒಮ್ಮೆ ತಿರುಗಿಸಿ ಸಕ್ಲೇನ್ ಮುಷ್ತಾಕ್ ಚೆಂಡನ್ನು ಎದುರಿಸಲು ಸಿದ್ಧವಾಗುತ್ತಾರೆ. ಪಾಕ್ ತಂಡದ ಪ್ರಮುಖ ಸ್ಪಿನ್ನರ್ ಸಕ್ಲೇನ್ ಎಸೆತವನ್ನು ಭರ್ಜರಿಯಾಗಿ ಸಿಕ್ಸರ್ ಬಾರಿಸುವ ಮೂಲಕ ಸೆಹ್ವಾಗ್ ತಮ್ಮ ಮತ್ತು ಭಾರತದ ಪರ ಚೊಚ್ಚಲ 300 ರನ್ ಪೂರೈಸುತ್ತಿದ್ದಂತೆಯೇ ಟಿವಿ ಮುಂದೆ ಕುಳಿತು ಆನಂದಿಸುತ್ತಿದ್ದ ಕೋಟ್ಯಾಂತರ ಮಂದಿಯ ಆನಂದ ಅವರ್ಣನೀಯವಾದರೇ, ಯಾರೇ ಕೂಗಾಡಲೀ ಊರೇ ಹೋರಾಡಲಿ ನಿನ್ನ ನೆಮ್ಮದಿಗೆ ಭಂಗವಿಲ್ಲ ಎನ್ನುವ ರಾಜಕುಮಾರರ ಸಂಪತ್ತಿಗೆ ಸವಾಲಿನ ಹಾಡಿನಂತೆ ವೀರೇಂದ್ರ ಸೆಹ್ವಾಗ್ ಆನೆ ನಡೆದದ್ದೇ ದಾರಿ ಎನ್ನುವಂತೆ ತನ್ನ ನೈಜ ಆಟವನ್ನು ಆಡಿಯೇ ತೀರುತ್ತಾನೆ ಎಂದು ತೆಂಡೂಲ್ಕರ್ ಮನಸ್ಸಿನಲ್ಲಿ ಅಂದುಕೊಂಡರಂತೆ.

shew1ಈ ಮೂಲಕ ಕೇವಲ 364 ಎಸೆತಗಳನ್ನು ಎದುರಿಸಿ ಭಾರತದ ಪರ ಮೊದಲ ತ್ರಿಶತಕ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡ ವೀರೂ ಅಂತಿಮವಾಗಿ ಪಾಕ್ ವೇಗಿ ಮಹಮದ್ ಸಮಿ ಬೌಲಿಂಗ್ ನಲ್ಲಿ ಸೆಹ್ವಾಗ್ ತೌಫಿಕ್ ಉಮರ್ ಗೆ ಕ್ಯಾಚ್ ನೀಡಿ ಔಟ್ ಆಗುವ ಮುನ್ನಾ ವೀರೂ 531 ನಿಮಿಷಗಳ ಕಾಲ ಆಟವಾಡಿ, 375 ಎಸೆತಗಳನ್ನು ಎದುರಿಸಿ, 39 ಬೌಂಡರಿ ಮತ್ತು 6 ಸಿಕ್ಸರ್ಗಳ ಮೂಲಕ 309 ರನ್ಗಳನ್ನು ಸಿಡಿಸಿ ಚೊಚ್ಚಲು ಟ್ರಿಪಲ್ ಟೆಸ್ಟ್ ಶತಕವನ್ನು ಗಳಿಸಿದರು.

tendulkarಸೆಹ್ವಾಗ್ ಅವರ ನಿರ್ಗಮನದ ನಂತರ, 348 ಎಸೆತಗಳಲ್ಲಿ 21 ಬೌಂಡರಿ ಬಾರಿಸಿದ ಸಚಿನ್ ತೆಂಡೂಲ್ಕರ್ ತಮ್ಮ 194 ರನ್ ಗಳಿಸಿ ನಿಧಾನ ಗತಿಯಲ್ಲಿ ಆಟವಾಡುತ್ತಿದ್ದದ್ದನು ಗಮನಿಸಿದ ನಾಯಕ ಅವರಿಗೆ ದ್ವಿಶತಕ ಬಾರಿಸಲು ಆಸ್ಚದ ನೀಡದೇ, 675/5 ಗಳಿಸಿದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು ಇಂದಿಗೂ ವಿವಾದಾತ್ಮಕವಾಗಿಯೇ ಉಳಿಯಿತು.

ಎರಡನೇ ದಿನಾಂತ್ಯಕ್ಕೆ ಬ್ಯಾಟಿಂಗ್ ಅರಂಭಿಸಿದ ಪಾಕ್ ತಂಡ ಮೊಹಮ್ಮದ್ ಯೂಸುಫ್ ಶತಕದ ಹೊರತಾಗಿಯೂ, ಇರ್ಫಾನ್ ಪಠಾಣ್ ಮಾರಕ ಬೋಲಿಂಗ್ ಮಾಡಿ ನಾಲ್ಕು ವಿಕೆಟ್ ಗಳಿಸಿದ ಪರಿಣಾಮ ಕೇವಲ 407 ರನ್ನುಗಳಿಗ್ ಔಟಾಗಿ ಫಾಲೋ ಆನ್ ಪಡೆದು ಮತ್ತೇ ಎರಡನೇ ಇನ್ನಿಂಗ್ಸಿನಲ್ಲಿ ಅನಿಲ್ ಕುಂಬ್ಲೇ ಆರು ವಿಕೆಟ್ ಗಳಿಸಿದ ಪರಿಣಾಮ ಕೇವಲ 216 ರನ್ ಗಳಿಸಿ, ಭಾರತದ ವಿರುದ್ಧ ಪಾಕಿಸ್ತಾನವನ್ನು ಇನ್ನಿಂಗ್ಸ್ ಮತ್ತು 52 ರನ್ಗಳಿಂದ ಸೋಲನ್ನು ಅನುಭವಿಸಿತು.

ಅದುವರೆಗೂ ಭಾರತದ ಪರ ಟೆಸ್ಟ್ ಕ್ರಿಕೆಟ್ ಎಂದರೆ ಸಚಿನ್, ಸೌರವ್ ಲಕ್ಷ್ಮಣ್, ದ್ರಾವಿಡ್ ಮತ್ತು ಕುಂಬ್ಲೆ ಎನ್ನುತ್ತಿದ್ದವರು ಈ ಪಂದ್ಯದ ನಂತರ ವೀರೇಂದ್ರ ಸೆಹ್ವಾಗ್ ಕೂಡಾ ಭಾರತದ ಟೆಸ್ಟ್ ಪಂದ್ಯಗಳ ಅವಿಭಾಜ್ಯ ಆಟಗಾರ ಎಂದು ಪರಿಗಣಿಸಲಾರಂಭಿಸಿ ಅಲ್ಲಿಯವರೆಗೂ ನಜಾಫ್ ಘಡದ ಸುಲ್ತಾನ ಎಂಬ ಬಿರುದಾಕಿಂತ ವೀರು ಅಂದಿನಿಂದ ಮುಲ್ತಾನ್ ಕಾ ಸುಲ್ತಾನ್ ಎಂಬ ಪದವಿಯನ್ನು ಅಧಿಕಾರಯುತವಾಗಿ ಪಡೆದದ್ದು ಶ್ಲಾಘನೀಯವೇ ಸರಿ.

shew2ಇದಾದ 4 ವರ್ಷದ ಬಳಿಕ ಮತ್ತೆ ಅದೇ ದಿನ ಚೆನ್ನೈನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ನಲ್ಲಿ 278 ಎಸೆತಗಳಲ್ಲಿ ತ್ರಿಶತಕ ಪೂರೈಸಿ ಅಂತಿಮವಾಗಿ 42 ಭರ್ಜರಿ ಬೌಂಡರಿ ಹಾಗೂ 5 ಸಿಕ್ಸರಗಳ ಸಮೇತ 304 ಎಸೆತಗಳಲ್ಲಿ 319 ರನ್ನುಗಳನ್ನು ಗಳಿಸುವ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ತ್ರಿಶತಕ ಎಂಬ ಹೊಸ ದಾಖಲೆಯನ್ನು ಬರೆದರು.

musthaqಮುಲ್ತಾನಿನಲ್ಲಿ ಅಬ್ಬರದ ತಮ್ಮ ಚೊಚ್ಚಲು ತ್ರಿಶತಕ ಸಿಡಿಸುವ ಮೂಲಕ ಭಾರತ ಟೆಸ್ಟ್ ಪಂದ್ಯದ ಅವಿಭಾಜ್ಯ ಅಂಗವಾಗಿ ಹೋದ ವೀರೂ ಯಾರೋ ಯಾರೋ ಗೀಚೀ ಹೋದಾ ಹಾಳೂ ಹಣೆಯ ಬರಹ ಎಂಬ ಸಿನಿಮಾ ಹಾಡಿನಂತೆ, ಪಾಕಿಸ್ತಾನ ತಂಡದ ಪ್ರಮುಖ ಬೌಲರ್ ಒಬ್ಬರ ಕೆರಿಯರ್ ಬಹುತೇಕ ಅಂತ್ಯಕ್ಕೆ ಕಾರಣೀಭೂತರಾಗಿ ಹೋದದ್ದು ವಿಪರ್ಯಾಸವೇ ಸರಿ.

sq2ವೇಗಿಗಳಾದ ಶೋಯೆಬ್ ಅಖ್ತರ್, ಮೊಹಮ್ಮದ್ ಶಮಿ ಅಬ್ದುಲ್ ರಝಾಕ್ ಆಫ್ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಮುಂತಾದ ಬೋಲಿಂಗ್ ದಿಗ್ಗಜರು ಕೂಡಾ ವೀರೂ ಆರ್ಭಟಕ್ಕೆ ಅಕ್ಷರಶಃ ತತ್ತರಿಸಿ ಹೋಗಿದ್ದರು. ಅದರಲ್ಲೂ ಪಾಕಿಸ್ತಾನದ ಪ್ರಮುಖ ಬೋಲರ್ ಸಕ್ಲೇನ್ ಮುಷ್ತಾಕ್ 43 ಓವರ್ ಬೋಲಿಂಗ್ ಮಾಡಿ 204 ರನ್ನುಗಳಿಗೆ ಕೇವಲ 1 ವಿಕೆಟ್ ಪಡೆದಿದ್ದದ್ದು ಆಫ್-ಸ್ಪಿನ್ನರ್​ನ ಟೆಸ್ಟ್ ಕೆರಿಯರ್ ಅಂತ್ಯಕ್ಕೆ ಕಾರಣವಾಯಿತು. ಈ ಪಂದ್ಯದ ಬಳಿಕ ಸಕ್ಲೇನ್​ ಅವರನ್ನು ತಂಡವನ್ನು ಕೈ ಬಿಟ್ಟು ಮತ್ತೊಬ್ಬ ಉದಯೋನ್ಮುಖ ಹಿಂದೂ ಆಟಗಾರ ದಾನೇಶ್ ಕನೇರಿಯಾ ಅವರರನ್ನು ಪಾಕ್ ತಂಡ ಕಣಕ್ಕಿಳಿಸಿತು. ಆ ನಂತರ ಸಕ್ಲೇನ್ ಮುಷ್ತಾಕ್ ಗೆ ಅವಕಾಶಗಳು ಸಿಗದೇ ಇದೇ ಪಂದ್ಯ ಅವರ ಕೊನೆಯ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವಾಗಿ ಹೋಗಿದ್ದು ನಿಜಕ್ಕೂ ದುಃಖಕರವಾದ ಸಂಗತಿ. ಪಾಕ್ ತಂಡದಿಂದ ಕೈ ಬಿಟ್ಟ ನಂತರ ದೇಶವನ್ನೇ ತೊರೆದು ತನ್ನ ಹೆಂಡತಿಯ ಸಹಾಯದಿಂದ ಬ್ರಿಟಿಷ್ ಪೌರತ್ವವನ್ನು ಪಡೆದು ಇಂಗ್ಲೇಂಡ್ ತಂಡ ಬೋಲಿಂಗ್ ತರಭೇತಿದಾರಾಗಿದ್ದು ಈಗ ಇತಿಹಾಸ.

ಕೈಯ್ಯಲ್ಲಿ ಬ್ಯಾಟ್ ಇರುವುದೇ ಚೆಂಡನ್ನು ಹೊಡೆಯುವುದಕ್ಕಾಗಿ ಎಂದು ಯಾವುದೇ ಬೋಲರ್ಗಳ ಮುಖಾ ಮೂತಿ ನೋಡದೇ ಬೌಂಡರಿ ಮತ್ತು ಸಿಕ್ಸರ್ಗಳಿಗೆ ನಿರ್ಭಯವಾಗಿ ಅಟ್ಟುತ್ತಿದ್ದ ವೀರೇಂದ್ರ ಸೆಹ್ವಾಗ್ ಅವರ ವಿರೋಚಿತ ಆಟ ಆಚಂದ್ರಾರ್ಕವಾಗಿ ಭಾರತೀಯರ ಹೃದಯದಲ್ಲಿ ಶಾಶ್ವತವಾಗಿ ಇರುತ್ತದೆ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಛಲದಂಕ ಮಲ್ಲ ಕೆ. ವೈ. ವೆಂಕಟೇಶ್

ಅದು 1989, ಆರ್. ಟಿ. ನಗರದ ಆದರ್ಶ ಪಾಲಿಟೆಕ್ನಿಕ್ಕಿಗೆ ಮೊದಲ ವರ್ಷದ ಡಿಪ್ಲಮೋಗೆ ಸೇರಿಕೊಂಡು ಮೊದನೇ ದಿನ ಕಾಲೇಜಿಗೆ ಹೋಗಿದ್ದೆ. ಸಣ್ಣಗೆ ಪೀಚಲು ಹುಡುಗನಂತಿದ್ದ ನನ್ನನ್ನು ಯಾರೋ ಏಯ್ ಏನೋ ನಿನ್ನ ಹೆಸ್ರೂ? ಅಂತಾ ಕೇಳಿದ ಹಾಗಾಯ್ತು. ಯಾರಪ್ಪಾ ಅದೂ ಅಂತ ಹಿಂದುರಿಗಿ ನೋಡಿದರೆ ನನ್ನ ಹಿಂದೆ ಕುಳ್ಳಗಿನ ದಪ್ಪದಾದ (ಸೋಡಾಬುಡ್ದಿ) ಕನ್ನಡಕ ಹಾಕಿಕೊಂಡಿದ್ದ ಹುಡುಗನೊಬ್ಬ ಕಾಣಿಸಿದ. ಅವನ ಜೊತೆ ಮೂರ್ನಾಲ್ಕು ಹುಡುಗರಿದ್ದರು. ನಾನು ಸಹಾ ಭಯದಿಂದಲೇ ನನ್ನ ಹೆಸರು ಹೇಳಿದೆ. ಎಲ್ಲಿಂದ ಬರೋದು.. ಇತ್ಯಾದಿ ಇತ್ಯಾದಿ. ಪ್ರಶ್ನೆಗಳನ್ನು ರ್ಯಾಗಿಂಗ್ ಮಾಡುವ ರೀತಿ ಕೇಳಿ ನಂತರ ನನ್ನ ಹೆಸ್ರೂ ವೆಂಕಟೇಶ. ಈ ಕಾಲೇಜಿನಲ್ಲಿ ಸೀನಿಯರ್. ನಿನ್ನ ತಂಟೆಗೆ ಯಾರಾದ್ರೂ ಬಂದ್ರೇ ನನ್ನ ಹೆಸ್ರು ಹೇಳು ಅಂತ ಹೇಳಿ ಕಳುಹಿಸಿದ. ಹೂಂ ಸರಿ ಎಂದು ಬದುಕಿದೆಯಾ ಬಡ ಜೀವ ಎಂದು ಅಲ್ಲಿಂದ ಓಟ ಕಿತ್ತಿದ್ದೆ.

ಆಮೇಲೆ ಇತರೇ ಸೀನಿಯರ್ ಬಳಿ ವಿಚಾರಿಸಿದಾಗ ಓ ಅವನಾ, ಕುಳ್ಳಾ ವೆಂಕಟೇಶ. ನಮ್ಮ ಕಾಲೇಜಿನ ತುಂಬಾ ಸೀನಿಯರ್. ಅವಾಗವಾಗ ಸಪ್ಲಿಮೆಂಟರಿ ಬರೆಯೋದಿಕ್ಕೆ ಬರ್ತಾ ಇರ್ತಾನೆ ಅಂತ ಹೇಳಿದ್ರು, ಆದಾದ ಮೇಲೆ ಒಂದೆರಡು ಬಾರಿ ವೆಂಕಟೇಶನನ್ನು ನಮ್ಮ ಕಾಲೇಜಿನಲ್ಲಿ ನೋಡಿ ಪರಿಚಯದ ನಗೆ ಬೀರಿದ್ದೆ, ಮೂರ್ನಾಲ್ಕು ವರ್ಷಗಳ ನಂತರ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಎಸ್. ರಮೇಶ್ ಅವರು ಯಾವುದೋ ಧಾರ್ಮಿಕ ಸಮಾರಂಭಕ್ಕೆ ಬಂದಿದ್ದಾಗ ಅವರ ಜೊತೆ ವೆಂಕಟೇಶನನ್ನು ನೋಡಿ ಆಶ್ಚರ್ಯಚಕಿತನಾಗಿ ಇದೇನು ಇಲ್ಲಿ ಎಂದು ಕೇಳಿದಾಗ, ನಾನು ರಮೇಶ್ ಅವರ ಪರ್ಸನಲ್ ಸೆಕ್ರೆಟರಿ ಎಂದು ಹೆಮ್ಮೆಯಿಂದ ವೆಂಕಟೇಶ ಹೇಳಿದ್ದ.

ಆಮೇಲೆ ವೆಂಕಟೇಶನನ್ನು ನೋಡಿದ್ದೇ ಟಿವಿಯಲ್ಲಿ. ಯಾವುದೋ ಕ್ರೀಡಾ ಕೂಟದಲ್ಲಿ ಗುಡು ಗುಡು ಅಂತ ತನ್ನ ಪುಟ್ಟ ಪುಟ್ಟ ಹೆಜ್ಜೆ ಹೆಜ್ಜೆಗಳನ್ನು ಇಟ್ಟುಕೊಂಡು ಓಡುತ್ತಾ ಮೊದಲಿಗನಾಗಿ ಪ್ರಶಸ್ತಿಯನ್ನು ಮಡಿಲುಗೇರಿಸಿಕೊಂಡಿದ್ದನ್ನು ನೋಡಿ, ಅರೇ ನಮ್ಮ ವೆಂಕಟೇಶ ನಿಜಕ್ಕೂ ಸೂಪರ್ ಅಂತಾ ಹೆಮ್ಮೆ ಪಟ್ಟಿದ್ದೆ. ಇವತ್ತು ಬೆಳಿಗ್ಗೆ ಪೇಪರ್ ನೋಡಿದಾಗ ಅದೇ ನಮ್ಮ ವೆಂಕಟೇಶನಿಗೆ ಆತನ ಕ್ರೀಡಾ ಸಾಧನೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ ಗೌರವದ ಪದ್ಮಶ್ರೀ ಪ್ರಶಸ್ತಿಗಾಗಿ ಕೇಂದ್ರ ಸರ್ಕಾರ ಆಯ್ಕೆ ಮಾಡಿರುವ ವಿಷಯ ತಿಳಿದು ವೆಂಕಟೇಶನ ಮೇಲಿದ್ದ ಗೌರವ ನಿಜಕ್ಕೂ ಇನ್ನೂ ಹೆಚ್ಚಾಯಿತು.

ಮೂಲತಃ ತುಮಕೂರಿನ ಕಡೆಯವರಾದರೂ ಬೆಂಗಳೂರಿನಲ್ಲಿಯೇ ಸಾಂಪ್ರದಾಯಿಕ ಮಧ್ಯಮ ವರ್ಗದ ಕುಟುಂಬದಲ್ಲಿಯೇ ಬೆಳೆದ ವೆಂಕಟೇಶ, ಚಿಕ್ಕಂದಿನಲ್ಲಿಯೇ, ಅಕೋಂಡ್ರೊಪ್ಲಾಸಿಯಾ ಎಂಬ ಬವಣೆಗೆ ತುತ್ತಾಗಿ ಕೇವಲ 4.2″ ಕುಬ್ಜನಾದಾಗ ಅನುಭವಿಸಿದ ನೋವಿಗೆ ಲೆಕ್ಕವಿಲ್ಲ. ಸದಾಕಾಲವೂ ಮೊಣಕಾಲುದ್ದದ ಬರ್ಮುಡ ಚೆಡ್ಡಿ ಕಣ್ಣಿಗೆ ದಪ್ಪನೆಯ ಕನ್ನಡಕ ಧರಿಸಿ ರಸ್ತೆಯಲ್ಲಿ ಓಡಾಡುತ್ತಿದ್ದರೆ, ಎಲ್ಲರೂ ಅವರನ್ನನ್ನೇ ದಿಟ್ಟಿಸಿ ನೋಡುತ್ತಾ ಅವರ ಎತ್ತರದ ಬಗ್ಗೆ ಆಡಿಕೊಂಡವರಿಗೆ ಲೆಖ್ಖವೇ ಇಲ್ಲ. ಇಷ್ಟೆಲ್ಲಾ ಆದರೂ ವೆಂಕಟೇಶನ ಕುಟುಂಬ ಸದಾಕಾಲವೂ ಇದೆಕ್ಕೆಲ್ಲಾ ತಲೆ ಕೆಡಸಿಕೊಳ್ಳದೇ ಆತನ ಬೆಂಬಲಕ್ಕೆ ನಿಂತದ್ದು ವೆಂಕಟೇಶನಿಗೆ ಆನೆಯ ಬಲ ತಂದಿತ್ತು.

ಇದೇ ಸಮಯದಲ್ಲಿ ಎರಡೂ ಕಾಲುಗಳು ಇಲ್ಲದಿದ್ದರೂ ಬ್ರಿಟೀಶ್ ಕಾಲುವೆಯನ್ನು ಈಜಿ ದಾಖಲೆ ನಿರ್ಮಿಸಿದ್ದ ಸಿ ಎನ್ ಜಾನಕಿಯವರ ಭೇಟಿ ವೆಂಕಟೇಶನಿಗೆ‌ ಆಗಿ, ಅವರಿಂದ ಪ್ರೇರಿತನಾಗಿ, ಕಾಲೇ ಇಲ್ಲದವರು ಇಂತಹ ಸಾಧನೆ ಮಾಡ ಬಹುದಾದರೇ, ಎಲ್ಲವೂ ಸರಿಯಿದ್ದು ಕೇವಲ ಕುಬ್ಜನಾಗಿರುವ ನಾನೇಕೆ ಪ್ರಯತ್ನಿಸ ಬಾರದು? ಎಂದು ಪ್ಯಾರಾ ಓಲಂಪಿಕ್ಸ್ ಕ್ರೀಡಾ ಕೂಟಗಳಲ್ಲಿ ಭಾಗವಹಿಸಲಾರಂಬಿಸಿದ.

ಆಕಾರದಲ್ಲಿ ಚಿಕ್ಕದಾಗಿದ್ದರೇನಂತೆ ನೋಡ ನೋಡುತ್ತಿದ್ದಂತೆಯೇ, ಛಲ ಬಿಡದ ತ್ರಿವಿಕ್ರಮನಂತೆ ಭಾಗವಹಿಸಿದ ಕ್ರೀಡಾ ಸ್ಪರ್ಧೆಗಳಲ್ಲಿ ಪದಕಗಳನ್ನು ಬಾಚುತ್ತಾ ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿ ವಿದೇಶಗಳಲ್ಲಿಯೂ ಭಾರತವನ್ನು ಪ್ರತಿನಿಧಿಸುವ ಹಂತಕ್ಕೆ ಎರಿದ ನಮ್ಮ ವೆಂಕಟೇಶ. 1994 ರಲ್ಲಿ, ಬರ್ಲಿನ್‌ನಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ (ಐಪಿಸಿ) ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ವೆಂಕಟೇಶ್, ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್, ಹಾಕಿ, ವಾಲಿಬಾಲ್, ಫುಟ್‌ಬಾಲ್ ಮತ್ತು ಬ್ಯಾಡ್ಮಿಂಟನ್ ಸೇರಿದಂತೆ ಅನೇಕ ಪಂದ್ಯಗಳಲ್ಲಿ ಭಾಗವಹಿಸಿ ಪದಕಗಳನ್ನು ಕೊಳ್ಳೇ ಹೊಡೆದ ವೆಂಕಟೇಶ್. 1999ರಲ್ಲಿ ಆಸ್ಟ್ರಿಯಾದಲ್ಲಿ ನಡೆದ ಮಲ್ಟಿ ಡಿಸೆಬಿಲಿಟಿ ಚಾಂಪಿಯನ್‌ಶಿಪ್‌ನಲ್ಲಿ ಶಾಟ್ ಪುಟ್ ನಲ್ಲಿ ಆತನಿಗೆ ಮೊದಲ ಅಂತರರಾಷ್ಟ್ರೀಯ ಚಿನ್ನ ಲಭಿಸಿದ ನಂತರ ಹಿಂದಿರುಗಿ‌ ನೋಡುವ ಪ್ರಮೇಯವೇ ಬರಲಿಲ್ಲ.

2002 ರಲ್ಲಿ ಬ್ಯಾಡ್ಮಿಂಟನಲ್ಲಿ ಬೆಳ್ಳಿ ಪದಕವನ್ನು ಪಡೆದದ್ದಲ್ಲದೇ ಓಪನ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‌ಶಿಪ್ 2004 ರಲ್ಲಿ ಶಾಟ್ ಪುಟ್, ಡಿಸ್ಕಸ್ ಥ್ರೋ ಮತ್ತು ಜಾವೆಲಿನ್ ಥ್ರೋನಲ್ಲಿ ಮೂರು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಪಡೆದ. ಅದೇ ವರ್ಷ, ಮತ್ತೊಂದು ಚಿನ್ನದ ಪದಕ ಗಳಿಸಿದ., ಸ್ವೀಡಿಷ್ ಓಪನ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ. ಹಾಕಿ ಸ್ಪರ್ಧೆಯಲ್ಲಿ ಚಿನ್ನದ ಪದಕ, ಫುಟ್ಬಾಲ್ ಮತ್ತು ಬ್ಯಾಸ್ಕೆಟ್‌ಬಾಲ್ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿದ್ದಾನೆ ನಮ್ಮ ವೆಂಕಟೇಶ್.

2005ರಲ್ಲಿ ನಡೆದಿದ್ದ 4ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ, ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಭಾರತದ ಮೊದಲ ಕ್ರೀಡಾಪಟು ಎನ್ನುವ ದಾಖಲೆ ಬರೆದಿದ್ದಲ್ಲದೇ, ಈ ಕ್ರೀಡಾಕೂಟದಲ್ಲಿ ‌ ಅಥ್ಲೆಟಿಕ್ಸ್‌ ಹಾಗೂ ಬ್ಯಾಡ್ಮಿಂಟನ್‌ನಲ್ಲಿ 2 ಚಿನ್ನ, 1 ಬೆಳ್ಳಿ ಹಾಗೂ 3 ಕಂಚಿನ ಪದಕ ಗಳಿಸಿದ್ದರು. ಇವನ ಪದಕಗಳ ಸಾಧನೆ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ ನಲ್ಲಿಯೂ ಸೇರ್ಪಡೆಯಾಗಿತ್ತು. 2006 ರಲ್ಲಿ ಯುರೋಪಿಯನ್ ಓಪನ್ ಚಾಂಪಿಯನ್‌ಶಿಪ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕವನ್ನು ಗೆದ್ದಿದ್ದಲ್ಲದೇ,ಆನೇಕ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ಗಳಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿಧಿಸಿ ಹಲವಾರು ಪ್ರಶಸ್ತಿಗಳನ್ನು ಮತ್ತು ಪದಕಗಳನ್ನು ಗೆಲ್ಲುವ ಮೂಲಕ ದೇಶದ ಕೀರ್ತಿಪತಾಕೆಯನ್ನು ವಿಶ್ವಾದ್ಯಂತ ಹಾರಿಸಿದ್ದಾನೆ ನಮ್ಮ ವೆಂಕಟೇಶ್.

2012 ರಲ್ಲಿ ವಯೋಸಹಜ ಕಾರಣಗಳಿಂದ ಸ್ಪರ್ಧಾತ್ಮಕ ಕ್ರೀಡೆಗಳಿಂದ ನಿವೃತ್ತಿ ಪಡೆದರೂ, ಅಂಗವಿಕಲರ ವಿವಿಧ ಕ್ರೀಡೆಗಳ ಆಡಳಿತ, ಅಭಿವೃದ್ಧಿ ಮತ್ತು ಪ್ರಚಾರದಲ್ಲಿ ತನ್ನನ್ನು ತಾವು ತೊಡಗಿಸಿಕೊಂಡಿದ್ದಲ್ಲದೇ ಅಂಗವಿಕಲರಿಗಾಗಿ ಕರ್ನಾಟಕ ಪ್ಯಾರಾ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಕಾರ್ಯದರ್ಶಿಯಾಗಿದ್ದರು. ಇದರ ಜೊತೆಗೆ ಐಪಿಸಿ ಮಾನ್ಯತೆ ಪಡೆದ ಕೋಚಿಂಗ್‌ ಕೂಡಾ ಪಡೆದು ಕೂಂಡು ತನ್ನಂತೆಯೇ ಅಂಗವೈಕಲ್ಯತೆಯಿಂದ ಬಳುತ್ತಿರುವವರಿಗೆ ಅನೇಕ ಕ್ರೀಡೆಗಳಲ್ಲಿ ತರಭೇತಿ ನೀಡುವ ಮೂಲಕ ಭಾರತದಲ್ಲಿ ಪ್ಯಾರಾ ಕ್ರೀಡೆಯನ್ನು ಉತ್ತೇಜಿಸುವುದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದ್ದಾರೆ. ಇದಲ್ಲದೇ, ವೆಂಕಟೇಶನ ನೇತೃತ್ವದಲ್ಲಿಯೇ ಅನೇಕ ಅಂತರರಾಷ್ಟ್ರೀಯ ಪ್ಯಾರಾ ಕ್ರೀಡಾ ಕೂಟಗಳಿಗೆ ಹಲವಾರು ಆಟಗಾರರನ್ನು ಕರೆದುಕೊಂಡು ಹೋಗಿ ಪದಕಗಳನ್ನು ಗೆದ್ದು ಬಂದಿದ್ದಾರೆ.

ವೆಂಕಟೇಶ್ ಅವರ ಇಷ್ಟೆಲ್ಲಾ ಸಾಧನೆಗಳನ್ನು ಪರಿಗಣಿಸಿದ ಅನೇಕ ಸಂಘ ಸಂಸ್ಥೆಗಳು ವೆಂಕಟೇಶ್ ಅವರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಸನ್ಮಾನಿಸಿದೆ. ಭಾರತ ಸರ್ಕಾರವೂ ಪ್ಯಾರಾಓಲಂಪಿಕ್ಸ್ ನಲ್ಲಿನ ವೆಂಕಟೇಶ್ ಅವರ ಸಾಧನೆಗಾಗಿ 20-21ರ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ತೊಂಬತ್ತರ ದಶಕದಲ್ಲಿ ನಾನು ನೋಡಿದ್ದ ನಮ್ಮ ಕಾಲೇಜಿನ ಸೀನಿಯರ್ ಕುಳ್ಳಾ ವೆಂಕಟೇಶ ಇಂದು ಇಷ್ಟು ಎತ್ತರಕ್ಕೆ ಬೆಳೆದಿರುವುದು ನಿಜಕ್ಕೂ ಗರ್ವ ಪಡುವ ಸಂಗತಿಯಾಗಿದೆ. ಅಯ್ಯೋ ನಮ್ಮ ಮಗ ಈ‌ರೀತಿ ಅಂಗವೈಕುಲ್ಯನಾದನಲ್ಲಾ, ಮುಂದೆ ಇವನ ಜೀವನ ಹೇಗಪ್ಪಾ ಎಂದು ಚಿಂತಿಸುತ್ತಿದ್ದ ಪೋಷಕರಿಗೆಲ್ಲಾ ಸ್ಪೂರ್ತಿ ನೀಡುವಂತೆ ಸಾಧನೆ‌ ಮಾಡಲು, ಛಲವೊಂದಿದ್ದರೆ, ತನ್ನ ಅಂಗವೈಕಲ್ಯವನ್ನೇ ಮೆಟ್ಟಿಲಾಗಿಸಿಕೊಂಡು ಪರಿಶ್ರಮದಿಂದ ಹೆತ್ತವರು ‌ಮತ್ತು ಇಡೀ‌ ದೇಶವೇ ಹೆಮ್ಮೆ‌ ಪಡುವಂತಹ ಸಾಧನೆ ಮಾಡಬಹುದು ಎಂಬುದಕ್ಕೆ ಜ್ವಲಂತ ಸಾಕ್ಷಿಯೇ ನಮ್ಮ ವೆಂಕಟೇಶ.

ಏನಂತೀರೀ?
ನಿಮ್ಮವನೇ ಉಮಾಸುತ

2020-21 ಭಾರತ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸ ಪಕ್ಷಿನೋಟ

ಭಾರತ ತಂಡದ ಆಟಗಾರರು ಸುಮಾರು ಆರೆಂಟು ತಿಂಗಳುಗಳ ಕಾಲ ಕರೋನಾ ಪ್ರಭಾವದಿಂದಾಗಿ ಯಾವುದೇ ಕ್ರಿಕೆಟ್ ಆಟವಾಡದೇ, ಎಲ್ಲರೂ ನೇರವಾಗಿ ದುಬೈನಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಆಡುವ ಮೂಲಕ ಮೈ ಕೈ ಸಡಿಲಗೊಳಿಸಿದರು. ಅಲ್ಲಿಂದ ನೇರವಾಗಿ ಆಸ್ಟ್ರೇಲಿಯಾಕ್ಕೆ ಏಕದಿನ, ಟಿ20 ಮತ್ತು ಟೆಸ್ಟ್ ಸರಣಿಯನ್ನು ಆಡಲು ಪ್ರಯಾಣಿಸಿ, ೧೪ ದಿನಗಳ ಕಾಲ ಕ್ವಾರಂಟೈನ್ ಮುಗಿಸಿ ಸಿಡ್ನಿಯಲ್ಲಿ ಮೊದಲ ಏಕದಿನ ಪಂದ್ಯದಲ್ಲಿ 66 ರನ್ ಗಳ ಹೀನಾಯ ಸೋಲನ್ನು ಕಂಡಾಗ, ಭಾರತದ ಕ್ರಿಕೆಟ್ ಪ್ರೇಮಿಗಳೆಲ್ಲರೂ ಇನ್ನೂ ಎರಡು ಪಂಡ್ಯಗಳು ಇದೆಯಲ್ಲಾ! ಆಗ ಜಯ ನಮ್ಮದೇ ಎಂದು ಸಮಾಧಾನ ಪಟ್ಟುಕೊಂಡಿದ್ದರು. ಮತ್ತೆ ಎರಡನೇ ಪಂದ್ಯದಲ್ಲೂ 51 ರನ್ ಗಳ ಸೋಲು ಕಂಡಾಗ ಇವರ ಕಥೆ ಇಷ್ಟೇ ಎಂದು ಎಳ್ಳು ನೀರು ಬಿಟ್ಟು ಸುಮ್ಮನಾಗಿದ್ದರು. ಆದರೆ ಮೂರನೇ ಪಂದ್ಯದಲ್ಲಿ ಪುಡಿದೆದ್ದ ಭಾರತ ತಂಡ, 13 ರನ್ನುಗಳ ಅಂತರದಲ್ಲಿ ರೋಚವಾಗಿ ಪಂದ್ಯ ಗೆದ್ದಾಗ ಒಂದು ರೀತಿಯ ಸಮಾಧಾನ.

ಗೆಲುವಿನ ನಾಗಲೋಟವನ್ನು ಮುಂದುವರೆಸಿದ ಭಾರತ ತಂಡ ಮೊದಲ ಎರಡು ಟಿ-20 ಪಂದ್ಯಗಳನ್ನು ಗೆದ್ದು ಮೂರನೆಯದ್ದೂ ಕೂದಲೆಳೆಯಲ್ಲಿ ಸೋತಾಗ ಪರವಾಗಿಲ್ಲಪ್ಪಾ ಆಸ್ಟ್ರೇಲಿಯಾ ತಂಡ ಏಕದಿನ ಸರಣಿಯನ್ನು 2-1 ರಿಂದ ಕೈವಶ ಮಾಡಿಕೊಂಡರೇ ಅದಕ್ಕೆ ಪ್ರತ್ಯುತ್ತರ ನೀಡಿದ ಭಾರತ ತಂಡ ಟಿ-20 ಸರಣಿಯನ್ನು 2-1 ರಿಂದ ಗೆಲ್ಲುವ ಮೂಲಕ ಸಮಬಲದ ಹೋರಾಟ ನೀಡುವ ಮೂಲಕ ನಾಲ್ಕು ಟೆಸ್ಟ್ ಪಂದ್ಯಾವಳಿಯ ಸರಣಿಯನ್ನು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು.

ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ ತಂದೆಯಾಗುವ ಸಂಭ್ರದಲ್ಲಿದ್ದ ಕಾರಣ ಮೊದಲನೇ ಟೆಸ್ಟ್ ನಂತರ ಭಾರತಕ್ಕೆ ಹಿಂದಿರುಗುವುದಾಗಿ ಅದಾಗಲೇ ಪ್ರಕಟಿಸಿಯಾಗಿತ್ತು. ತಂಡದ ಪ್ರಮುಖ ಬ್ಯಾಟ್ಸ್ ಮನ್ ರೋಹಿತ್ ಮತ್ತು ಬೋಲರ್ ಇಶಾಂತ್ ಶರ್ಮಾ ಗಾಯಾಳುಗಳ ಪಟ್ಟಿಯಲ್ಲಿ ಸೇರಿದ್ದ ಕಾರಣ, ಬಿಸಿಸಿಐ ಏಕದಿನ ಸರಣಿಯಲ್ಲಿದ್ದ ಕೆಲವು ಆಟಗಾರರನ್ನು ಮುಂಜಾಗೃತಾ ಕ್ರಮವಾಗಿ ಆಸ್ಟ್ರೇಲಿಯಾದಲ್ಲಿಯೇ ಉಳಿಸಿಕೊಂಡಿತ್ತು. ಹಿಂದಿನ ಸರಣಿಯನ್ನು ಸೋತಿದ್ದ ಕಾರಣ ಶತಾಯ ಗತಾಯ ಈ ಬಾರೀ ಬಾರ್ಡರ್-ಗವಾಸ್ಕರ್ ಸರಣಿಯನ್ನು ಗೆಲ್ಲಲೇ ಬೇಕೆಂದು ನಿರ್ಧರಿಸಿದ್ದ ಆಸ್ಟ್ರೇಲಿಯಾ ಭಾರತದ ವಿರುದ್ಧ ಬಲಿಷ್ಟ ತಂಡವನ್ನೇ ಆಯ್ಕೆಮಾಡಿಕೊಂಡಿತ್ತು. ವಿರಾಟ್ ಇಲ್ಲದ ಭಾರತ ತಂಡ ಆಸ್ಟ್ರೇಲಿಯಾ ತಂಡದ ಎದುರು ಲೆಖ್ಖಕ್ಕೇ ಇಲ್ಲಾ. ಈ ಸರಣಿ 4-0 ಅಂತರದಲ್ಲಿ ಆಸ್ಟ್ರೇಲಿಯಾ ಗೆಲ್ಲುತ್ತದೆ ಎಂದು ಅಸ್ಟ್ರೇಲಿಯಾದ ಮಾಜಿ ಆಟಗಾರರೆಲ್ಲಾ ಪುಂಖಾನುಪುಂಖವಾಗಿ ಹೇಳಿಕೆ ನೀಡುವ ಮೂಲಕ ಭಾರತದ ತಂಡದ ಮೇಲೆ ಒಂದು ರೀತಿಯ ಒತ್ತಡ ಹೇರುದ್ದರು.

ಮೊದಲನೇ ಟೆಸ್ಟ್ ಪಂದ್ಯ ಹಗಲುರಾತ್ರಿಯ ಪಂದ್ಯವಾಗಿದ್ದು ಟಾಸ್ ಗೆದ್ದ ಭಾರತ ಮೊದಲು ಅಟವಾಡಲು ನಿರ್ಧರಿಸಿತು. ಮೊದಲನೇ ಓವರಿನಲ್ಲಿಯೇ ಪೃಥ್ವೀ ಶಾ ವಿಕೆಟ್ ಒಪ್ಪಿಸಿ ನಡೆದರೆ ಪೂಜಾರಾ ಮತ್ತು ಮಯಾಂಕ್ ಕೂಡಾ ಹೆಚ್ಚು ಹೊತ್ತು ನಿಲ್ಲದೇ ಪೆವಿಲಿಯನ್ ಸೇರಿಕೊಂಡಾಗ ಭಾರತದ ತಂಡದಲ್ಲಿ ಆತಂಕ ಮೂಡಿತ್ತು. ತಂಡದ ನಾಯಕ ವಿರಾಟ್ ಮತ್ತು ಉಪನಾಯಕ ರೆಹಾನೆ ಎಚ್ಚರಿಕೆಯಿಂದ ನಿಂತು ಆಡುವ ಮೂಲಕ ತಂಡ ಉತ್ತಮ ಮೊತ್ತ ಕಲೆ ಹಾಗುವತ್ತ ದಾಪುಗಾಲು ಹಾಕಿತ್ತು. 74 ರನ್ ಗಳಿಸಿದ್ದ ಕೊಹ್ಲಿ ಮತ್ತೊಂದು ಶತಕದತ್ತ ಹೆಜ್ಜೆ ಹಾಗುತ್ತಿದ್ದಾಗಲೇ, ರೆಹಾನೆ ಮಾಡಿದ ತಪ್ಪಿಗಾಗಿ ರನ್ ಔಟ್ ಆಗಬೇಕಾಗಿದ್ದು ಪಂದ್ಯದ ಗತಿಯನ್ನೇ ಬದಲಿಸಿದ್ದಲ್ಲದೇ ಭಾರತ 244 ರನ್ನುಗಳಿಗೆ ಮೊದಲ ಇನ್ನಿಂಗ್ಸ್ ಮುಗಿದಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಮೈದಾನಕ್ಕೆ ಇಳಿದ ಆಸ್ಟ್ರೇಲಿಯಾ ಆಟಗಾರರು ಆಶ್ವಿನ್, ಉಮೇಶ್ ಮತ್ತು ಬ್ರುಮ್ರಾ ದಾಳಿಗೆ ನಲುಗಿ ಕೇವಲ 191ಕ್ಕೆ ಆಲ್ ಔಟ್ ಆಗುವ ಮೂಲಕ ಭಾರತಕ್ಕೆ ಅಲ್ಪ ಮೊತ್ತದ ಮುನ್ನಡೆ ಲಭಿಸಿತ್ತು. ಭಾರತದ ಎರಡನೇ ಇನ್ನಿಂಗ್ಸಿನಲ್ಲಿ ಹೇಜಲ್ ವುಡ್ಸ್ ಮತ್ತು ಪ್ಯಾಟ್ ಕಮಿನ್ಸ್ ಎಸೆದ ಬೆಂಕಿಯ ಉಂಡೆಗಳಂತೆ ಚೆಂಡಿನ ಎದುರು ತರೆಗಲೆಗಳಂತೆ ಉದುರಿದ ಭಾರತ ತಂಡ ತನ್ನ ಅತ್ಯಂತ ಕನಿಷ್ಠ ಮೊತ್ತವಾದ 36/9 ರನ್ನುಗಳಿಗೆ ಔಟ್ ಆಗಿ, ಆಸ್ಟ್ರೇಲಿಯಾ ಸುಲಭವಾಗಿ 2 ವಿಕೆಟ್ ನಷ್ಟಕ್ಕೆ 93 ರನ್ ಗಳಿಸುವ ಮೂಲಕ ಪಂದ್ಯವನ್ನು ವಶ ಮಾಡಿಕೊಂಡಿತ್ತು. ಗಾಯದ ಮೇಲೆ ಬರೆ ಎಳೆದಂತೆ ತಂಡ ಪ್ರಮುಖ ಬೋಲರ್ ಶಮಿ ಗಾಯಾಳು ಪಟ್ಟಿಯಲ್ಲಿ ಸೇರಿಕೊಂಡಿದ್ದ.

ಮೊದಲ ಪಂದ್ಯ ಹೀನಾಯವಾಗಿ ಸೋತ ನಂತರ ಆಳಿಗೊಂದು ಕಲ್ಲು ಎಂದು ಎಲ್ಲರೂ ಸರಣಿಯನ್ನು ೪-೦ ಅಂತರದಿಂದ ಅಸ್ಟ್ರೇಲಿಯಾ ಪರವಾಗಿಯೇ ಆಗುತ್ತದೆ ಎಂದೇ ಷರಾ ಬರೆದಿದ್ದರು. ತಂಡದ ಪ್ರಮುಖ ಆಟಗಾರರು ಮತ್ತು ನಾಯಕನ ಅನುಪಸ್ಥಿತಿಯಲ್ಲಿ ರಹಾನೆ ತಂಡವನ್ನು ಮುನ್ನೆಡೆಸುವ ಜವಾಬ್ಧಾರಿಯನ್ನು ಹೊತ್ತುಕೊಂಡಿದ್ದರು. ಮೊದಲ ಪಂದ್ಯ ಸುಲಭವಾಗಿ ಗೆದ್ದ ಅತಿಯಾದ ರಣೋತ್ಸಾಹದಲ್ಲಿದ್ದ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ, ಬುಮ್ರಾ, ಅಶ್ವಿನ್ ಮತ್ತು ಸಿರಾಜ್ ಮಾರಕ ಬೋಲಿಂಗ್ ಎದರು 195 ಕ್ಕೆ ಔಟಾದರೆ, ಮೂರು ಜೀವದಾನಗಳ ಲಾಭ ಪಡೆದ ನಾಯಕ ರಹಾನೆ, ರವೀಂದ್ರ ಜಡೇಜರ ಆಕರ್ಶಕ ಅರ್ಧ ಶಕಕದ ನೆರವಿನಿಂದಾಗಿ ಜವಾಬ್ದಾರಿಯುತ ಮೊತ್ತವಾದ 326 ರನ್ ಗಳಿಸಿತು. ಎರಡನೇ ಇನ್ನಿಂಗ್ಸಿನಲ್ಲಿ ಮತ್ತೊಮ್ಮೆ ಭಾರತೀಯರ ಸಂಘಟಿನ ಬೋಲಿಂಗ್ ಪರಿಣಾಮ 200ಕ್ಕೆಲ್ಲಾ ಔಟಾದಾಗ, ಅಗತ್ಯವೈದ್ದ 70ರನ್ನುಗಳನ್ನು 2 ವಿಕೆಟ್ ನಷ್ಟಕ್ಕೆ ಗಳಿಸಿ ಭಾರತ ತಂಡ ಅಭೂತ ಪೂರ್ವವಾಗಿ ೮ ವಿಕೆಟ್ ಗಳ ವಿಜಯ ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಿದ್ದಲ್ಲದೇ ಮುಂದಿನ ಪಂದ್ಯಗಳಲ್ಲಿ ಪುಟಿದೇಳುವ ಮುನ್ನೆಚ್ಚರಿಕೆಯನ್ನೂ ನೀಡಿತು. ಈ ಮಧ್ಯೆ ಉಮೇಶ್ ಯಾದವ್ ಗಾಯಾಳುವಾದ ಕಾರಣ ಭಾರತಕ್ಕೆ ಮರಳಬೇಕಾಯಿತು

ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮ ತಂಡಕ್ಕೆ ಮರಳಿ ಬಂದ ಕಾರಣ ತಂಡದಲ್ಲಿ ಅಮಿತೋತ್ಸಾಹ ಮೂಡಿತ್ತು. ಮತ್ತೆ ಟಾಸ್ ಗೆದ್ದ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಆಕರ್ಷಕ ಶತಕ ಮತ್ತು ಲಾಬೂಸ್ಚಂಗ್ನೆ ಅರ್ಧಶತಕದ ನೆರವಿನಿಂದ ಗೌರವಯುತ ಮೊತ್ತವಾದ 338 ರನ್ ಗಳಿಸಿದರೆ ಅದಕ್ಕುತ್ತರವಾಗಿ ಗಿಲ್ ಮತ್ತು ಪೂಜಾರ ಅವರ ಅರ್ಧ ಶತಕದ ನೆರವಿನಿಂದ ಭಾರತ ಕೇವಲ 244 ರನ್ ಗಳಿಸಲು ಮಾತ್ರವೇ ಸಾಧ್ಯವಾಯಿತು. ಎರಡನೇ ಇನ್ನಿಂಗ್ಸಿನಲ್ಲಿ 6 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿ ಡಿಕ್ಲೇರ್ ಮಾಡಿ ಕೊಂಡ ಆಸ್ಟ್ರೇಲಿಯಾ ಭಾರತಕ್ಕೆ ಗೆಲ್ಲಲು ೪೧೦ ರನ್ನುಗಳ ಸವಾಲನ್ನು ನೀಡಿತು. ಈ ಸವಾಲನ್ನು ಧನಾತ್ಮಕವಾಗಿ ಸ್ವೀಕರಿಸಿದ ಭಾರತದ ಆರಂಭಿಕ ಆಟಗಾರರು ಉತ್ತಮ ಆಟವಾಡಿ ಭರವಸೆ ಮೂಡಿಸಿದರಾದರೂ102-3 ವಿಕೆಟ್ ಕಳೆದುಕೊಂಡಾಗ ಮರುಭೂಮಿಯಲ್ಲಿ ಓಯಸಿಸ್ಸ್ ಕಂಡಂತೆ ರಿಷಭ್ ಪಂತ್ ಆಕ್ರಮಣ ಆಟವಾಡಿ 97 ರನ್ ಗಳಿಸಿ ಪಂದ್ಯವನ್ನು ಗೆಲ್ಲುವ ಭರವಸೆ ಮೂಡಿಸಿ ಶತಕ ವಂಚಿತರಾಗಿ ಔಟಾದಾಗ ಗೆಲ್ಲುವ ಕನಸನ್ನು ಕೈಬಿಟ್ಟು ಪಂದ್ಯ ಉಳಿಸಿಕೊಂಡರೆ ಸಾಕಪ್ಪಾ ಎನ್ನುವ ಸ್ಥಿತಿಯಾಗಿತ್ತು. ಈ ಮಧ್ಯದಲ್ಲಿ ಜಡೇಜಾ ಕೂಡಾ ಬೆರಳಿಗೆ ಪೆಟ್ಟು ಮಾಡಿಕೊಂಡು ಗಾಯಳು ಪಟ್ಟಿಗೆ ಸೇರಿಯಾಗಿತ್ತು. ಈಗ ಉಳಿದಿದ್ದ ಹನುಮ ವಿಹಾರಿ ಮತ್ತು ರವಿ‍ಚಂದ್ರ ಆಶ್ಚಿನ್ ಮಾತ್ರ. ಭಾರತದ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಾ ಕೈ ಬಿಟ್ಟು ಹೋಯಿತು ಎಂದು ಭಾವಿಸಿದ್ದರೇ, ಆಸ್ಟ್ರೇಲಿಯಾ ಪ್ರೇಕ್ಷಕರು ಭಾರತದ ಆಟಗಾರರ ಮೇಲೆ ವರ್ಣಬೇಧದ ಮೂಲಕ ಅವಹೇಳನ ಮಾಡುವ ಮೂಲಕ ಭಾರತೀಯರ ಛಲವನ್ನು ಕುಗ್ಗಿಸಲು ಪ್ರಯತ್ನಿಸಿದರು. ಈ ನೋವುಗಳನ್ನೆಲ್ಲವನ್ನೂ ನುಂಗಿಕೊಂಡು ಮತ್ತು ಬೆಂಕಿಯಂತೆ ಮೈಮೇಲೆಯೇ ಹಾಕುತ್ತಿದ್ದ ಚೆಂಡುಗಳನ್ನು ಸಮರ್ಥವಾಗಿ ಎದುರಿಸಿದ ವಿಹಾರಿ ಮತ್ತು ಅಶ್ವಿನ್ ಪಂದ್ಯಾ ಡ್ರಾ ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾದಾಗ ಎಲ್ಲರೂ ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುವಂತಾಗಿತ್ತು. ಈ ಮಧ್ಯೆ ಭಾರತ ತಂಡದಲ್ಲಿ ಅಶ್ವಿನ್, ಬೂಮ್ರಾ ಮತ್ತು ಹನುಮ ವಿಹಾರಿ ಯೂ ಸಹಾ ಗಾಯಾಳು ಪಟ್ಟಿ ಸೇರಿಕೊಂಡಿದ್ದರು.

ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬಲಿಷ್ಟ ತಂಡದೆದರು ಹನ್ನೊಂದು ಆಟಗಾರರನ್ನು ಆಯ್ಕೆ ಮಾಡುವುದೇ ಭಾರತಕ್ಕೆ ತಲೆ ನೋವಾಗಿತ್ತು. ಇದೇ ಪಂದ್ಯದ ಮೂಲಕ ಏಕದಿನ ಮತ್ತು ಟಿ-20 ಪಂದ್ಯಾವಳಿಗಳಲ್ಲಿ ಭರವಸೆ ಮೂಡಿಸಿದ್ದ ತಮಿಳುನಾಡಿನ ಟಿ. ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್ ಟೆಸ್ಟ್ ಪಾದಾರ್ಪಣೆ ಮಾದಿದರೆ ಅವರ ಜೊತೆ ಮತ್ತೊಬ್ಬ ವೇಗಿ ಶಾರ್ದೂಲ್ ಠಾಕೂರ್ ಕೂಡಾ ಹನ್ನೊಂದರ ಬಳಗಕ್ಕೆ ಸೇರಿಕೊಂಡು ಸಂಪೂರ್ಣ ಉತ್ಸಾಹಿ ಆದರೆ ಟೆಸ್ಟ್ ಅನನುಭವಿ ಬೋಲಿಂಗ್ ಪಡೆಯಾಗಿತ್ತು. ಮತ್ತೊಮ್ಮ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಲಾಬೂಸ್ಚಂಗ್ನೆ ಅಕರ್ಷಕ ಶತಕದೊಂದಿಗೆ 369 ರನ್ ಗಳಿಸಿದರೆ, ಭಾರತದ ಪರ ನಟ್ಟು, ಸುಂದರ್ ಮತ್ತು ಶಾರ್ದೂಲ್ ತಲಾ ಮೂರು ವಿಕೆಟ್ ಗಳಿಸಿದ್ದರು. ಈ ಮಧ್ಯೆ ಸೈನಿ ಕೂಡಾ ಗಾಯಾಳುವಾಗಿ ಮೈದಾನದಿಂದ ಹೊರನಡೆದಿದ್ದರು. ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಮೊತ್ತ 186 ಆಗುವಷ್ಟರಲ್ಲಿ ಪ್ರಮುಖ 6 ಆಟಗಾರರನ್ನು ಕಳೆದುಕೊಂಡು ಇನ್ನೇನು ಹತ್ತಿಪ್ಪತ್ತು ರನ್ ಗಳಿಸುವಷ್ಟರಲ್ಲಿ ಭಾರತ ತಂಡ ಆಲೌಟ್ ಆಗಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಮೊದಲ ಪಂದ್ಯವಾಡುತ್ತಿದ್ದ ಸುಂದರ್ ಚಕ್ರವ್ಯೂಹ ಬೇಧಿಸಿದ ಅಭಿಮನ್ಯುವಿನಂತೆ ಛಲದಿಂದ ಹೋರಾಡಿ 62 ರನ್ ಗಳಿಸಿದರೆ, ಅದಕ್ಕೆ ಅಷ್ಟೇ ಬೆಂಬಲವಾಗಿ ಶಾರ್ದೂಲ್ ಕೂಡ 67 ರನ್ ಗಳಿಸುವ ಮೂಲಕ ಭಾರತ ತಂಡ ಆಚ್ಚರಿಯ ಹೋರಾಟ ತೋರಿ 336 ರನ್ನುಗಳನ್ನು ಗಳಿಸಿತ್ತು.

ಎರಡನೇ ಇನ್ನಿಂಗ್ಸ್ ಅರಂಭಿಸಿದ ಆಸ್ಟ್ರೇಲಿಯಾಕ್ಕೆ ಸಿರಾಜ್ ಮತ್ತು ಶರ್ದೂಲ್ ಅವರ ಧಾಳಿಗೆ ನಲುಗಿ 294 ಕ್ಕೆಲ್ಲಾ ಪತನವಾದಾಗ ಭಾರತಕ್ಕೆ ಪಂದ್ಯ ಗೆಲ್ಲಲು 328 ರನ್ನುಗಳು ಇಲ್ಲವೇ ಪಂದ್ಯ ಉಳಿಸಿಕೊಳ್ಳಲು ಸುಮಾರು 100 ಓವರ್ಗಳನ್ನು ಆಡ ಬೇಕಿತ್ತು. ನಾಯಕ ಮತ್ತು ಉಪನಾಯಕರು ಆವರ ಖ್ಯಾತಿಗೆ ತಕ್ಕಂತೆ ನಿಂತು ಆಡದೆ ಪಟಪಟನೇ ಔಟಾದಾಗ, ಯುವ ಆರಂಭಿಕ ಆಟಗಾರ್ ಶುಭಮನ್ ಗಿಲ್ 91 ರನ್ ಗಳಿಸಿದರೆ ಮತ್ತೊಂದು ತುದಿಯಲ್ಲಿ ತಾಳ್ಮೆಯ ಪ್ರತಿರೂಪವಾಗಿ ಬ್ಯಾಟ್ ಇರುವುದೇ ರಕ್ಷಣಾತ್ಮಕವಾಗಿ ಅಡುವುದಕ್ಕಾಗಿ ಎಂದು ಜವಾಬ್ಧಾರಿಯುತ ೫೬ ರನ್ ಗಳಿಸಿ ಪಂದ್ಯ ಸೋಲುವುದಕ್ಕಿಂದ ಕನಿಷ್ಠ ಪಕ್ಷ ಡ್ರಾ ಮಾಡಿಕೊಂಡರೆ ಸಾಕು ಎನ್ನುವತ್ತ ಪೂಜಾರ ಕೊಂಡೊಯ್ದಿದ್ದರು. ಆದರೆ ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರಿಷಭ್ ಪಂತ್ ಬ್ಯಾಟ್ ಇರುವುದೇ ಭಯಂಕರವಾಗಿ ಬೀಸುವುದಕ್ಕಾಗಿ ಎಂದು ಆಕರ್ಷಕವಾಗಿ ಆಟವಾಡಿ ಮತ್ತೊಂದು ತುದಿಯಲ್ಲಿ ಸತತವಾಗಿ ವಿಕೆಟ್ ಉರುಳುತ್ತಿದ್ದದ್ದನ್ನೂ ಲೆಕ್ಕಿಸಿದೇ 89 ರನ್ ಗಳಿಸುವ ಮೂಲಕ ಭಾರತ ತಂಡ 7 ವಿಕೆಟ್ ನಷ್ಟಕ್ಕೆ 329 ರನ್ ಗಳಿಸುವ ಮೂಲಕ ೩ ವಿಕೆಟ್ ಗಳ ಐತಿಹಾಸಿಕ ಗೆಲುವನ್ನು ಪಡೆದದ್ದಲ್ಲದೇ ಸರಣಿಯನ್ನು ೨-೧ ರ ಮೂಲಕ ಕೈವಶಮಾಡಿ ಕೊಂಡಿತ್ತು.

ಈ ಟೆಸ್ಟ್ ಸರಣಿಯನ್ನು ಅವಲೋಕಿಸಿದಲ್ಲಿ, ತಂಡದ ನಾಯಕನ‌ ಅನುಪಸ್ಥಿತಿಯಲ್ಲಿ, ತಂಡದ ಪ್ರಮುಖ 12 ಆಟಗಾರರು ಗಾಯಾಳುಗಳಾಗಿದ್ದರೂ, ಆಸ್ಟ್ರೇಲಿಯಾದ ಈ ಎಲ್ಲಾ ಹೊಗಳು ಭಟ್ಟರ ಲೆಕ್ಕಾಚಾರವನ್ನೂ ತಲೆ ಕೆಳಗು ಮಾಡಿ, ಅನಾಗರಿಕ ಪ್ರೇಕ್ಷಕರ ದುಂಡಾವರ್ತಿಯ ನಡುವೆಯೂ, ಇಡೀ ತಂಡವಾಗಿ ಆಡಿ, ಆಸ್ಟ್ರೇಲಿಯದಲ್ಲಿಯೇ ಬಾರ್ಡರ್ ಮತ್ತು ಗವಾಸ್ಕರ್ ಸರಣಿಯನ್ನು 2-1 ರಿಂದ ಗೆದ್ದಿದ್ದಲ್ಲದೇ, ವಿಶ್ವ ಟೆಸ್ಟ್ ಸರಣಿಯಲ್ಲಿ ಮತ್ತೆ ಅಗ್ರಗಣ್ಯ ಸ್ಥಾನಕ್ಕೇರಿದ ಭಾರತ ತಂಡದ ಸಾಧನೆ ನಿಜಕ್ಕೂ ಅಪ್ರತಿಮವಾದದ್ದು ಎಂದರೆ ಅತಿಶಯೋಕ್ತಿಯೇನಲ್ಲ.

ಈ ಸರಣಿಯ ಮೂಲಕ ಎಲ್ಲರೂ ಕಲಿಯಬೇಕಾದ ಪಾಠವೇನೆಂದರೆ, ಯಾರ ಸಾಮರ್ಧ್ಯವನ್ನೂ ಕಡೆಗಣಿಸಲಾಗದು. ಯಾವ ಹುತ್ತದಲ್ಲಿ ಯಾವ ಹಾವಿರುತ್ತದೆಯೋ ಗೊತ್ತಾಗದು ಎನ್ನುವಂತೆ ಯಾವ ಆಟಗಾರ ಯಾವಾಗ ಪ್ರವರ್ಧಮಾನಕ್ಕೆ ಬರುತ್ತಾನೆ ಎನ್ನುವುದು ಗೊತ್ತಾಗುವುದಿಲ್ಲ ಎನ್ನುವುದು ತಿಳಿದು ಬಂದಿತು. ಇದಲ್ಲದೇ ತಂಡಕ್ಕೆ ಯಾವ ಆಟಗಾರನೂ ಅನಿವಾರ್ಯವಲ್ಲ. ತಮ್ಮ ಕೋಳಿ ಕೂಗಿದರೇ ಬೆಳಗಾಗುತ್ತದೆ ಎಂದೇನೂ ಇಲ್ಲ. ಒಬ್ಬ ಆಟಗಾರರಿಲ್ಲದಿದ್ದರೇ ಖಂಡಿತವಾಗಿಯೂ ಆತನ ಸ್ಥಾನವನ್ನು ಸರಿದೂಗಬಲ್ಲ ಮತ್ತೊಬ್ಬ ಆಟಗಾರ ಇದ್ದೇ ಇರುತ್ತಾನೆ. ಅಂತಹವರನ್ನು ಗುರುತಿಸಿದ ಬೇಕಾದ ಗುರುತರ ಜವಾಬ್ಧಾರಿ ತಂಡದ ಆಡಳಿತ ಮಂಡಳಿಯದ್ದಾಗಿರುತ್ತದೆ.

ಸಿಕ್ಕ ಅವಕಾಶಗಳನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು ಎನ್ನುವುದನ್ನು ಸಿರಾಜ್, ವಾಷಿಂಗ್ಟನ್, ಶಾರ್ದುಲ್, ಗಿಲ್, ನಟರಾಜನ್ ಅವರು ತೋರಿಸಿಕೊಟ್ಟರೇ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳದಿದ್ದರೆ ಹೇಗೆ ಮೂಲೆ ಗುಂಪಾಗುತ್ತಾರೆ ಎನ್ನುವುದಕ್ಕೆ ಪೃಥ್ವಿ ಶಾ ಮತ್ತು ಮಯಾಂಕ್ ಸಾಕ್ಷಿಗಳಗಿದ್ದಾರೆ.

ಇಡೀ ಸರಣಿಯ ಗೆಲುವು ತಂಡದ ಗೆಲುವಾಗಿದ್ದು ಅದರ ಶ್ರೇಯ ಒಬ್ಬರಿಗೇ ಕೊಡುವಂತಹ ಪ್ರಯತ್ನ ಸಲ್ಲದು. ಈ ಮಧ್ಯೆ ವಿರಾಟ್ ಕೊಹ್ಲಿಯ ಮೇಲಿನ ಕೆಲ ವಯಕ್ತಿಕ ದ್ವೇಷದ ಕಾರಣದಿಂದ ಹಂಗಾಮಿ ನಾಯಕ ರಹಾನೆ ನೇತೃತ್ವದಲ್ಲಿ ಈ ಸರಣಿ ಗೆದ್ದ ತಕ್ಷಣ ಕೊಹ್ಲಿ ನಾಯಕತ್ವದ ಬದಲಾವಣೆಗೆ ಬೆಂಕಿ ಕಾರುತ್ತಿರುವ ಕೆಲ ಪಟ್ಟ ಭಧ್ರಹಿತಾಸಕ್ತಿಗಳಿಗೆ ಬರುವ ಇಂಗ್ಲೇಂಡ್ ಸರಣಿಯಲ್ಲಿ ಇದೀಗ ತಾನೇ ತಂದೆಯಗಿ ಸಂಭ್ರಮಿಸುತ್ತಿರುವ ಕೊಹ್ಲಿ ತಮ್ಮ ಬ್ಯಾಟಿನ ಮೂಲಕವೇ ಉತ್ತರ ನೀಡಲಿದ್ದಾರೆ ಎಂಬ ಭರವಸೆ ಎಲ್ಲಾ ಭಾರತೀಯ ಕ್ರಿಕೆಟ್ ಪ್ರೇಮಿಗಳದ್ದಾಗಿದೆ.

ಏನಂತೀರೀ?

ನಿಮ್ಮವನೇ ಉಮಾಸುತ