ನವೆಂಬರ್ 28, 1986ರಲ್ಲಿ ಶಾರ್ಜಾದಲ್ಲಿ ವೆಸ್ಟ್ಇಂಡೀಸ್ ಮತ್ತು ಪಾಕೀಸ್ಥಾನದ ನಡುಬೆ ನಡೆಯುತ್ತಿದ್ದ ಛಾಂಪಿಯನ್ ಟ್ರೋಫಿ ಪಂದ್ಯಾವಳಿಯಲ್ಲಿಯ ಪಂದ್ಯದಲ್ಲಿ ಒಂದೇ ಒಂದು ಬೌಲ್ ಮಾಡದೇ ಮತ್ತು ಬ್ಯಾಟಿಂಗ್ ಸಹಾ ಮಾಡದೇ, ಗಸ್ ಲೋಗಿ ಪಂದ್ಯದ ಪುರುಷೋತ್ತಮನಾದ ಅಪರೂಪದ ಸಂಗತಿಯನ್ನು ಕೆಲ ವರ್ಷಗಳ ಹಿಂದೆ ನಮ್ಮದೇ ಬ್ಲಾಗ್ ನಲ್ಲಿ ಹಾಕಿದ್ದು (ಈ ಲಿಂಕ್ ಮೂಲಕ ಆ ಲೇಖನವನ್ನು ಓದಬಹುದಾಗಿದೆ) ಪ್ರಸ್ತುತ 2026ರ ಐಪಿಎಲ್ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಏಪ್ರಿಲ್ 29ರಂದು ನಡೆದ ಪಂದ್ಯಾವಳಿಯಲ್ಲಿಯೂ ಬ್ಯಾಟಿಂಗ್ ಮತ್ತು ಬೋಲಿಂಗ್ ಮಾಡದೇ ಹೋದರೂ ವಿಚಿತ್ರವಾದ ದಾಖಲೆಗೆ ಶಾರ್ದೂಲ್ ಠಾಕೂರ್ ಪಾತ್ರರಾಗಿದ್ದಾರೆ.
ಬೋಲ್ ಮಾಡ್ಲಿಲ್ಲಾ , ಬ್ಯಾಟ್ ಮಾಡ್ಲಿಲ್ಲಾ . ಆದ್ರೂ ಪಂದ್ಯ ಪುರುಷೋತ್ತಮ
ಕ್ರಿಕೆಟ್ ಆಟದಲ್ಲಿ ದಾಖಲೆಗಳು ನಿರ್ಮಾಣ/ನಿರ್ನಾಮವಾಗುವುದು ಸಹಜ ಪ್ರಕ್ರಿಯೆ. ಅದರಲ್ಲೂ ಐಪಿಎಲ್ ಪಂದ್ಯಾವಳಿಯಲ್ಲಿ ಪ್ರತಿ ಕ್ಷಣ ಕ್ಷಣಕ್ಕೂ ದಾಖಲೆಗಲು ಧೂಳಿಪಟವಾಗುತ್ತಲೇ ಇರುತ್ತದೆ. ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಮತ್ತು ಅತಿ ಹೆಚ್ಚು ವಿಕೆಟ್ ಗಳಿಸಿ ಪರ್ಪಲ್ ಕ್ಯಾಪ್ ಗಳಿಸಿ ಅದನ್ನು ಸಂಭ್ರಮಿಸುವ ಮೊದಲೇ ಎರಡನೇ ಇನ್ನಿಂಗ್ಸ್ ಮುಗಿಯುವಷ್ಟರಲ್ಲಿ ಮತ್ತೊಬ್ಬ ಆ ದಾಖಲೆಯನ್ನು ಮುರಿದಿರುತ್ತಾನೆ. ಆಟದ ಮಧ್ಯದಲ್ಲಿ ಇವರಿಗೇ ಪಂದ್ಯ ಪುರುಷೋತ್ತಮ ಪ್ರಶಸ್ತಿ ಎಂದು ಭಾವಿಸಿದ್ದರೆ, ಪಂದ್ಯ ಮುಗಿಯುವಷ್ಟರಲ್ಲಿ ಆ ಪ್ರಶಸ್ತಿ ಮತ್ತೊಬ್ಬರ ಮುಡಿಲಿಗೇರುತ್ತದೆ. ಅದೇ ರೀತಿಯಾಗಿ ಯಾರೂ ಬಯಸದ, ಅತ್ಯಂತ ವಿಲಕ್ಷಣವಾದ ದಾಖಲೆಯೊಂದಕ್ಕೆ ಭಾರತದ ಪರ ಆಡಿರುವ ಮತ್ತು ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಪಾತ್ರರಾಗಿರುವುದು ವಿಚಿತ್ರವಾದರೂ ಸತ್ಯವಾಗಿದೆ.
2008 ರಲ್ಲಿ ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಐದು ಬಾರಿ (2013, 2015, 2017, 2019, 2020) ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಐಪಿಎಲ್ ಪಂದ್ಯಾವಳಿಯ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಐಪಿಎಲ್ ಪಂದ್ಯಗಳನ್ನು ಮತ್ತಷ್ಟು ರೋಚಕವಾಗಿಸಲು 2023ರಲ್ಲಿ ಮೊದಲ ಬಾರಿಗೆ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಐಪಿಎಲ್ ನಲ್ಲಿ ಪರಿಚಯಿಸಲಾಯಿತು. ತಂಡದಲ್ಲಿ ಆಡುವ 11 ಆಟಗಾರನ ಜೊತೆ ಮತ್ತೊಬ್ಬ ಹೆಚ್ಚುವರಿ ಆಟಗಾರನನ್ನು ಪಂದ್ಯದ ಯಾವುದೇ ಹಂತದಲ್ಲಿ ಆಡಿಸಬಹುದಾಗಿದ್ದು, ಆಟಗಾರನಿಗೆ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡನ್ನೂ ಮಾಡುವ ಅವಕಾಶವಿರುತ್ತದೆ. ಹಾಗಾಗಿ ಮೊದಲು ಬ್ಯಾಟಿಂಗ್ ಮಾಡುವ ತಂಡವು ತನ್ನ ತಂಡದಲ್ಲಿ ಉತ್ತಮ ಬೌಲರ್ ಳನ್ನು ಆಡಿಸಿ ನಂತರ ಬ್ಯಾಟಿಂಗ್ ಮಾಡುವಾಗ, ಬ್ಯಾಟಿಂಗ್ ಬಾರದ ಒಬ್ಬ ಬೌಲರ್ ಬದಲಾಗಿ ಉತ್ತಮ ಬ್ಯಾಟರ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದೇ ರೀತಿ ಮೊದಲು ಬ್ಯಾಟಿಂಗ್ ಮಾಡುವಾಗ ಉತ್ತಮ ಬ್ಯಾಟರ್ಗಳನ್ನು ಆಡಿಸಿ ಬೋಲಿಂಗ್ ಮಾಡುವಾಗ ಒಬ್ಬ ಬ್ಯಾಟರ್ ಬದಲು ಒಳ್ಳೆಯ ಬೋಲರ್ ನನ್ನು ಆಡಿಸಲಾಗುತ್ತದೆ. ಈ ಪದ್ದತಿಯು ಕುರಿತಾಗಿ ಅನೇಕ ಹಿರಿಯ ಆಟಗಾರರ ಆಕ್ಷೇಪಣೆಗಳ ನಡುವೆಯೂ ಅನೇಕ ತಂಡಗಳು ಇದರ ಸದುಪಯೋಗವನ್ನು ಪಡೆದುಕೊಂಡು ತಂಡವನ್ನು ಬಲಿಷ್ಟಗೋಲಿಸುತ್ತಿವೆ.
ಇತ್ತೀಚೆಗಂತೂ Toss wins the matches ಎನ್ನುವಂತೆ ಟಾಸ್ ಗೆದ್ದ ಕೂಡಲೇ ಬೋಲಿಂಗ್ ಆಯ್ಕೆ ಮಾಡಿಕೊಂಡು ಕನಿಷ್ಟ ಮೊತ್ತಕ್ಕೆ ಎದುರಾಳಿಗಳನ್ನು ಕಟ್ಟಿ ಹಾಕಿ ನಂತರ ಬಹಳ ವ್ಯವಸ್ಥಿತವಾಗಿ ಗುರಿಯನ್ನು ಮುಟ್ಟಲು ಬಹುತೇಕ ತಂಡಗಳು ಬಯಸುತ್ತವೆ. ಅಚ್ಚರಿ ಎನ್ನುವಂತೆ ವಾಂಖೇಡೆ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ರಯಾನ್ ರಿಕೆಲ್ಸನ್ ಅವರ ಸ್ಫೋಟಕ ಶತಕದ (123 ರನ್*) ನೆರವಿನಿಂದ 243 ರನ್ ಗಳಷ್ಟು ಬೃಹತ್ ಮೊತ್ತ ಗಳಿಸಿದಾಗ, ನಾಯಕ ಹಾರ್ಧಿಕ್ ಪಾಂಡ್ಯನ ನಿರ್ಧಾರ ಸರಿಯಾಗಿದೆ ಎಂದೇ ಎಲ್ಲರೂ ಸಂತಸವನ್ನು ವ್ಯಕ್ತಪಡಿಸಿದ್ದರು.
243 ರನ್ ಗಳಷ್ಟು ಬೃಹತ್ ಮೊತ್ತದ ಬೆನ್ನೆತ್ತಿದ ಸನ್‌ರೈಸರ್ಸ್ ಹೈದರಾಬಾದ್ ನ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಕೇವಲ 8 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 126 ರನ್ ಗಳಿಸಿದಾಗಲೇ ಪಂದ್ಯದ ಫಲಿತಾಂಶ ನಿರ್ಧಾರವಾಗಿತ್ತು. ಬೋಲ್ಟ್, ಬೂಮ್ರಾ ನಂತಹ ಘಟಾನುಘಟಿ ಬೌಲರ್ಗಳಿಗೆ ದಯೆ ದಾಕ್ಷಿಣ್ಯ ತೋರದೇ ಮೇಲಿಂದ ಮೇಲೆ ಬೌಂಡರಿ ಸಿಕ್ಸರ್ ಗಳ ಸುರಿಮಳೆಯನ್ನು ಸುರಿಸುತ್ತಿದ್ದರೂ, ಮುಂಬೈ ತಂಡದ ನಾಯಕ ಪಾಂಡ್ಯಾ. ಇಂಪ್ಯಾಕ್ಟ್ ಪ್ಲೇಯರ್ ನಿಯಮದಡಿಯಲ್ಲಿ ಹೆಚ್ಚಿನ ಬೌಲರ್ ಆಗಿ ಸೇರಿಸಿಕೊಂಡ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರಿಂದ ಒಂದೇ ಒಂದು ಬಾಲ್ ಸಹಾ ಬೋಲಿಂಗ್ ಮಾಡಿಸದೇ ಇರುವುದು ಎಲ್ಲರಿಗೂ ಅಚ್ಚರಿ ಮೂಡಿಸಿರುವುದಲ್ಲದೇ, ಐಪಿಎಲ್ ಇತಿಹಾಸದಲ್ಲೇ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮೈದಾನ ಪ್ರವೇಶಿಸಿ, ಬ್ಯಾಟಿಂಗ್ ಅಥವಾ ಬೌಲಿಂಗ್ ಯಾವುದನ್ನೂ ಮಾಡದ ಮೊದಲ ಆಟಗಾರ ಎಂಬ ಅನಗತ್ಯವಾದರೂ, ವಿಚಿತ್ರ ಹೆಗ್ಗಳಿಕೆಗೆ ಶಾರ್ದೂಲ್ ಭಾಜನರಾಗಿದ್ದಾರೆ.
ಇದೇ ಪಂದ್ಯಾವಳಿಯಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಕಬಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಗಳಿಸಿ ತನ್ನ ಬೌಲಿಂಗ್ ಸಾಮರ್ಥ್ಯ ಮತ್ತು ಫಾರ್ಮ್ ಯಾವ ಪರಿಯಾಗಿದೆ ಎಂದು ಸಾಭೀತು ಮಾಡಿದ್ದ ಶಾರ್ದೂಲ್ ಅವರಿಗೆ ಬೃಹತ್ ಮೊತ್ತವನ್ನು ಬೆನ್ನೆತ್ತಿದ್ದ ಹೈದರಾಬಾದ್ ತಂಡದ ಆರಂಭಿಕ ಆಟಗಾರರು ಮನಸೋ ಇಚ್ಚೆ ಎಲ್ಲಾ ಬೌಲರ್ಗಳನ್ನು ದಂಡಿಸುತ್ತಿರುವಾಗ 2025-26ರ ರಣಜಿ ಟ್ರೋಫಿ ಋತುವಿವಿನಲ್ಲಿ ಮುಂಬೈ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದ, ವಾಂಖೇಡೆ ಕ್ರೀಡಾಂಗಣದಲ್ಲಿ ಬಹಳಷ್ಟು ಪಂದ್ಯಗಳನ್ನು ಆಡಿ ಅಲ್ಲಿನ ಪಿಚ್ ಗಳ ಸಾಧಕ ಬಾಧಕಗಳನ್ನು ಚೆನ್ನಾಗಿಯೇ ಅರಿತಿದ್ದ ಅನುಭವಿ ಬೌಲರ್ ಶಾರ್ದೂಲ್ ಅವರಿಂದ ಒಂದೇ ಒಂದು ಬಾಲ್ ಬೌಲಿಂಗ್ ಮಾಡಿಸದೇ ಅವರನ್ನು ಕೇವಲ ಫೀಲ್ಡರ್ ಆಗಿ ಬಳಸಿಕೊಂಡಿದ್ದು ಕೇವಲ ಮುಂಬೈ ಅಭಿಮಾನಿಗಳಷ್ಟೇ ಅಲ್ಲದೇ ಸಕಲ ಕ್ರಿಕೆಟ್ ಪ್ರೇಮಿಗಳಲ್ಲಿಯೂ ಅಚ್ಚರಿ ಮೂಡಿಸಿದೆ.
ಹಾಗೆಂದ ಮಾತ್ರಕ್ಕೆ ಶಾರ್ದೂಲ್ ಅವರಿಂದ ಬೌಲಿಂಗ್ ಮಾಡಿಸಿದ್ದರೆ ಮುಂಬೈ ಗೆಲ್ಲುತ್ತಿತ್ತು ಎಂಬ ಭರವಸೇಯೂ ಇರಲಿಲ್ಲ. ಏಕೆಂದರೆ, ಸನ್ ರೈಸ್ ಹೈದರಾಬಾದ್ ತಂಡ ಕೇವಲ 4 ವಿಕೆಟ್ ಕಳೆದುಕೊಂಡು 18.4 ಓರರ್ಗಳಲ್ಲಿಯೇ ಸರಾಸರಿ 13.34 ರನ್ ಗಳಿಂದ 249 ರನುಗಳನ್ನು ಗಳಿಸಿ ಜಯಗಳಿಸುವ ಮೂಲಕ ಸದ್ಯಕ್ಕೆ ಪಂಜಾಬ್ ಮತ್ತು ಆರ್.ಸಿ.ಬಿ. ನಂತರ ಮೂರನೇ ಸ್ಥಾನದಲ್ಲಿದ್ದಾರೆ. ಅಕಸ್ಮಾತ್ ತಜ್ಞ ಬೌಲರ್ ಆಗಿ ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ ಬಂದ ಶಾರ್ದೂಲ್ ಏನಾದರೂ ಬೊಲಿಂಗ್ ಮಾದಿದ್ದರೆ ಫಲಿತಾಂಶದಲ್ಲಿ ಸ್ವಲ್ಪ ಬದಲಾವಣೆಯಾದರೂ ಆಗುಬಹುದಿತ್ತು ಮತ್ತು ಇಂಪ್ಯಾಕ್ಟ್ ಪ್ಲೇಯರ್ ಆಗಿಯೂ ಬ್ಯಾಟಿಂಗ್/ಬೋಲಿಂಗ್ ಮಾಡದ ಏಕೈಕ ಆಟಗಾರ ಎಂಬ ಬಯಸದೇ ಬಂದ ಭಾಗ್ಯಕ್ಕೆ ಗುರಿಯಾಗುತ್ತಿರಲಿಲ್ಲವೇನೋ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ