ಮದುವೆಯ ಈ ಬಂಧ ಅನುರಾಗದ ಅನುಬಂಧ

ಮದುವೆ ಎನ್ನುವುದು ಕೇವಲ ಗಂಡು ಹೆಣ್ಣಿನ ಒಗ್ಗೂಡಿಸುವಿಕೆಯಲ್ಲದೇ ಅದು ಆ ಎರಡು ಕುಟುಂಬಗಳ ನಡುವೆ ಸಂಬಂಧವನ್ನು ಬೆಸೆಯುವುದಲ್ಲದೇ ಆ ಎರಡೂ ಕುಟುಂಬಗಳ ಮುಂದಿನ ಗುಣ ನಡುವಳಿಕೆಗಳನ್ನು ಮುಂದಿನ ತಲಮಾರಿಗೂ ಮುಂದುವರೆಸಿಕೊಂಡು ಹೋಗುವ ಸುಂದರವಾದ ಸಂದರ್ಭವಾಗಿದೆ. ಮದುವೆ ಎನ್ನುವುದು ಉಚ್ಚರಿಸಲು ಕೇವಲ ಮೂರೇ ಅಕ್ಷರಗಳಾದರೂ ಅದರ ಹಿಂದಿರುವ ಕಷ್ಟವನ್ನು ಅರಿತೇ ಮದುವೇ ಮಾಡಿ ನೋಡು, ಮನೆ ಕಟ್ಟಿ ನೋಡು ಎಂಬುವ ಗಾದೆಯನ್ನೇ ನಮ್ಮ ಹಿರಿಯರು ಮಾಡಿದ್ದಾರೆ. ಸುಮಾರು 53ವರ್ಷಗಳ ಹಿಂದೇ ಇದೇ ದಿನ ಎಲ್ಲಾ ಎಡರು ತೊಡರುಗಳನ್ನೂ ಮೀರಿ ನಡೆದ ಸುಂದರ ಮದುವೆಯೊಂದರ ಚಿತ್ರಣ ಇದೋ ನಿಮಗಾಗಿ

appa

ಸರಿ ಸುಮಾರು 1969ನೇ ಇಸ್ವಿ, ಹಾಸನ ಮೂಲದ ಗಮಕಿಗಳು ಮತ್ತು ಖ್ಯಾತ ಹರಿಕಥಾ ವಿದ್ವಾಂಸರೊಬ್ಬರು ಅಂದಿನ ದಿನಗಳಲ್ಲೇ ಸಾಕಷ್ಟು ಪ್ರಖ್ಯಾತವಾಗಿದ್ದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಅದಾಗ ತಾನೇ ಉದ್ಯೋಗಿಯಾಗಿದ್ದ ತಮ್ಮ ಜೇಷ್ಠ ಪುತ್ರನಿಗೆ ವಧುವನ್ನು ಹುಡುಕುತ್ತಿರುತ್ತಾರೆ. ಹಲವಾರು ಕಡೆ ನಾನಾ ರೀತಿಯ ಕೆಲಗಳನ್ನು ಮಾಡಿ ಕಟ್ಟ ಕಡೆಯದಾಗಿ ಬಿಇಎಲ್ ಕಾರ್ಖಾನೆಗೆ ಸೇರಿಕೊಂಡಿದ್ದ ಅವರ ಮಗನಿಗೆ ಅದಾಗಲೇ ವಯಸ್ಸು ಮೂವತ್ತು ದಾಟಿರುತ್ತದೆ.

amma

ಇನ್ನು ಮೂಲತಃ ಬೆಳ್ಳೂರಿನವರಾದರೂ, ತಮ್ಮ ತಂದೆ ತಾಯಿಯವರ ಕಾಲವಾದ ನಂತರ ಸೋದರತ್ತೆಯ ಆಶ್ರಯದಲ್ಲಿ ಬೆಳೆದು, ಕರ್ನಾಟಕದಿಂದ ಅಂದಿನಕಾಲದಲ್ಲೇ ಉತ್ತರ ಪ್ರದೇಶದ ವಾರಣಾಸಿಗೆ (ಕಾಶೀ) ಹೋಗಿ ಅಲ್ಲಿ ವಿದ್ಯಾಭ್ಯಾಸ ಮಾಡಿಕೊಂದು ಕೆಲಸವನ್ನು ಅರೆಸುತ್ತಾ, ಕೋಲಾರದ ಚಿನ್ನದ ಗಣಿಯಲ್ಲಿ ಅತ್ಯುನ್ನತ ಹುದ್ದೆಯನ್ನು ಪಡೆದಿದ್ದಂತಹ ಹಿರಿಯರೊಬ್ಬರು, ಮೆಟ್ರಿಕ್ಯುಲೇಷನ್ ವರೆಗೂ ಓದಿ, ತಕ್ಕ ಮಟ್ಟಿಗೆ ಹಾಡು, ಹಸೆ, ಅಡಿಗೆ ಕಲಸಗಳನ್ನು ಕಲಿತಿದ್ದ ಅತ್ಯಂತ ರೂಪವತಿ ಮತ್ತು ಬಹುಭಾಷೆ ಪಂಡಿತೆಯಾಗಿದ್ದ ತಮ್ಮ ಮುದ್ದಿನ ಜೇಷ್ಠಪುತ್ರಿಗೂ ಒಳ್ಳೆಯ ಸಂಬಂಧ ಹುಡುಕುತ್ತಿರುತ್ತಾರೆ.

ಒಂದು ಗಂಡಿಗೆ ಒಂದು ಹೆಣ್ಣು ಎಂದು ಸೃಷ್ಟಿ ಕರ್ತ ಬ್ರಹ್ಮ ಹುಟ್ಟಿಸುವಾಗಲೇ ನಿರ್ಧರಿಸಿರುತ್ತಾನಂತೆ ಎಂಬಂತೆ ಮದುವೆ ಎಂಬುದು ಸ್ವರ್ಗದಲ್ಲಿಯೇ ನಿರ್ಧಾರಿವಾಗಿ ಇಲ್ಲಿ ಗಂಡು ಹೆಣ್ಣು ಹುಡುಕುವುದು ನೆಪ ಮಾತ್ರ ಎನ್ನುವಂತೆ ಅದೊಮ್ಮೆ ಗಮಕಿಗಳು ತಮ್ಮ ಕಾರ್ಯಕ್ರಮವೊಂದನ್ನು ನಡೆಸಿಕೊಡುವ ಸಲುವಾಗಿ ಬೆಂಗಳೂರಿನ ಮಲ್ಲೇಶ್ವರದ ಪೈಪ್ ಲೈನ್ ರಸ್ತೆಯ ಆರಂಭದಲ್ಲೇ ಇರುವ ದತ್ತಾತ್ರೇಯ ದೇವಸ್ಥಾನಕ್ಕೆ ಹೋಗಿರುತ್ತಾರೆ. ಆ ಕಾರ್ಯಕ್ರಮವನ್ನು ಕೇಳಲು ಬಂದಿದ್ದಂತಹ ಸ್ಥಳೀಯರೊಬ್ಬರು ಕಾರ್ಯಕ್ರಮ ಮುಗಿದ ನಂತರ ಗಮಕಿಗಳೊಂದಿಗೆ ಪರಿಚಯ ಮಾಡಿಕೊಳ್ಳುತ್ತಾ ಉಭಯ ಕುಶಲೋಪರಿಯನ್ನು ವಿಚಾರಿಸುತ್ತಿದ್ದಂತಹ ಸಂಧರ್ಭದಲ್ಲೇ, ಎಲ್ಲಿ ಉಳಿದುಕೊಂಡಿದ್ದೀರೀ? ಎಂದು ವಿಚಾರಿಸಿದಾಗ, ಇಲ್ಲೇ ನನ್ನ ಮಗನ ಮನೆಯಲ್ಲಿ ಉಳಿದುಕೊಂಡಿದ್ದೇವೆ. ಮಗನಿಗೂ ಮದುವೆಯ ವಯಸ್ಸಾಗಿದ್ದು ಹುಡುಗಿ ಹುಡುಕುತ್ತಿದ್ದೇವೆ ಎಂದಾಗ, ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವಂತೆ ಅಯ್ಯೋ ನನ್ನ ಮೊಮ್ಮಗಳಿಗೂ ಗಂಡು ಹುಡುಕುತ್ತಿದ್ದೇವೆ ಎಂದು ಆರಂಭವಾದ ಮಾತು ಕತೆ ನೋಡ ನೋಡುತ್ತಿದ್ದಂತೆಯೇ ಮುಂದುವರೆದು ಮಾರನೇ ದಿನವೇ ಅದೇ ಪೈಪ್ ಲೈನ್ ನಲ್ಲಿ ಇದ್ದ ಅವರ ಮನೆಯಲ್ಲೇ ಹುಡುಗಿ ನೋಡುವ ಶಾಸ್ತ್ರವೆಲ್ಲವೂ ಮುಗಿದು ಮದುವೆಯೂ ನಿಶ್ಚಯವಾಗಿಯೇ ಬಿಡುತ್ತದೆ.

wedding

ಗಂಡಿನ ಮನೆಯವರು ಹಾಸನದ ಮೂಲದವರು, ಹೆಣ್ಣಿನ ಮನೆಯವರು ಇರುವುದು ಕೋಲಾರದ ಚಿನ್ನದ ನಾಡಿನಲ್ಲಿ ಇಬ್ಬರಿಗೂ ಸರಿಯಾಗಲಿ ಎಂದು ಮಧ್ಯ ಭಾಗವಾದ ಬೆಂಗಳೂರಿನಲ್ಲಿ ಮದುವೆ ಮಾಡಿಕೊಡಲು ಗಂಡಿನ ಮನೆಯವರು ಕೇಳಿಕೊಳ್ಳುತ್ತಾರಾದರೂ, ಹುಡುಗಿಯ ಪೋಷಕರು, ಬೆಂಗಳೂರಿನಲ್ಲಿ ಮದುವೆ ಮಾಡಿಕೊಡಲು ತಮ್ಮ ಅಸಹಾಯಕತೆಯನ್ನು ತೋರಿ, ಪರಿಚಯಸ್ಥರೇ ಇರುವ ಕೆಜಿಎಫ್ ನಲ್ಲಿಯೇ ಮದುವೆ ಮಾಡಿದರೆ ತಮಗೆ ಎಲ್ಲಾ ರೀತಿ ಅನುಕೂಲವಾಗುತ್ತದೆೆ ಎಂದಿದ್ದಲ್ಲದೇ, ವರನ ಊರಿನಿಂದ ಮದುವೆಗೆ ಬಂದು ಹೋಗುವ ಖರ್ಚನ್ನು ಭರಿಸಲು ಒಪ್ಪಿಕೊಂಡಾಗ, ಹುಡುಗನಿಗೆ ಲೋಕಾರೂಢಿಯಂತೆ ವಾಚು ಉಂಗುರ ಸೂಟು ಬೂಟಿನ ಹೊರತಾಗಿ ಇನ್ನಾವುದೇ ಬೇಡಿಕೆ ಇಲ್ಲದೇ ಮಾತು ಕಥೆ ಎಲ್ಲವೂ ಸುಗಮವಾಗಿ ಮುಗಿದು ಮೇ 3-4 ರಂದು ಕೆಜಿಎಫ್ ರಾಬರ್ಟ್ಸನ್ ಪೇಟೆಯಲ್ಲಿರುವ ವೆಂಕಟರಮಣ ಸ್ವಾಮಿ ದೇವಾಲಯದ ಎದುರಿಗಿರುವ ಇರುವ ಮದ್ದಯ್ಯ ಕಲ್ಯಾಣ ಮಂಟಪದಲ್ಲಿ ನೆರೆವೇರಿಸಲು ನಿರ್ಧರಿಸಲಾಗುತ್ತದೆ

invitationಹಾಸನದ ಕಡೆಯ ವರನ ಕುಟುಂಬವನ್ನು ಹೊತ್ತ ಬಸ್ ಕೋಲಾರದತ್ತ ಬರುತ್ತಿದ್ದಾದಾಗಲೇ, ಧುತ್ ಎಂದು ಆಕಾಶವಾಣಿಯಲ್ಲಿ ಭಾರತದ ಮೂರನೇ ರಾಷ್ಟ್ರಪತಿಗಳಾಗಿದ್ದ ಶ್ರೀ ಝಾಕಿರ್ ಹುಸೇನ್ ಖಾನ್ 3 ಮೇ 1969 ರಂದೇ ನಿಧನರಾಗಿ ದೇಶಾದ್ಯಂತ ಶೋಕಚರಣೆ ಜಾರಿಯಾದ ಸುದ್ದಿ ತಿಳಿಯುತ್ತಿದ್ದಂತೆಯೇ, ಕೋಲಾರದ ಸುತ್ತ ಮುತ್ತಲೂ ಅವರ ಬಂಧು ಬಾಂಧವರೇ ಇರುವ ಕಾರಣ ಅಲ್ಲಲ್ಲಿ ಸಣ್ಣ ಗಲಭೆಗಳು ನಡೆದು ಬಸ್ ಕೆಲವು ಗಂಟೆಗಳ ಕಾಲ ಮಾರ್ಗದ ಮಧ್ಯದಲ್ಲೇ ತಡೆ ಹಿಡಿಯಲ್ಪಟ್ಟಾಗ, ಆರಂಭದಲ್ಲಿಯೇ ಈ ರೀತಿಯ ಅಪಶಕುನವಾದರೇ, ಇನ್ನು ಮದುವೆ ಹೇಗೆ ನಡೆಯುತ್ತದೆಯೋ ಎನ್ನುವ ಆತಂಕ ಗಂಡಿನ ಮನೆಯವರದ್ದಾದರೆ, ಬೆಳಿಗ್ಗೆ ಹೊರಟ ಬಸ್ ಮಧ್ಯಾಹ್ನವಾದರೂ ಬಾರದೇ ಹೋದ್ದದ್ದಕೆ ಹೆಣ್ಣಿನ ಕಡೆಯವರಲ್ಲಿ ಆತಂಕ ಮನೆ ಮಾಡಿತ್ತಾದರೂ, ಅದೃಷ್ಟವಷಾತ್ ಮದುವೆಯ ದಿಬ್ಬಣ ಎಂದು ಬಸ್ಸನ್ನು ಅನುವು ಮಾಡಿಕೊಟ್ಟ ಪರಿಣಾಮ ಮತ್ತು ಕೆಜಿಎಫ್ ನಲ್ಲಿ ಆದರ ಅಷ್ಟಾಗಿ ಗಲಭೆ ಇರದ ಕಾರಣ, ವರನ ಮನೆಯೆವರೆಲ್ಲರೂ ಸುರಕ್ಷಿತವಾಗಿ ಮದುವೆ ಮಂಟಪ ತಲುಪುವಷ್ಟರಲ್ಲಿ ಸಂಜೆಯಾಗಿ, ಅವರನ್ನು ಸಂಭ್ರಮದಿಂದ ಸ್ವಾಗತ ಮಾಡಲು ಹಾಕಿದ ಲೌಡ್ ಸ್ಪೀಕರಿನಲ್ಲಿ ಇದ್ದಕ್ಕಿದ್ದಂತೆಯೇ ತಮಿಳು ಹಾಡು ಮೊಳಗುತ್ತಿದ್ದಂತೆಯೇ, ಮಧುಮಗನ ಮನೆಯವರೆಲ್ಲರಿಗೂ ಕಸಿವಿಸಿ. ಅರೇ ಇದೇನು ಹುಡುಗಿ ಕಡೆಯವರು ತಮಿಳುನವರಾ? ಎಂಬ ಗುಲ್ಲು. ಇದನ್ನು ತಕ್ಷಣವೇ ಅರಿತ ವಧುವಿನ ಸಹೋದರ ಕೂಡಲೇ ಲೌಡ್ ಸ್ಪೀಕರ್ ಆರಿಸಿ ಮುಂದೆ ನಡೆಯಬಹುದಾಗಿದ್ದ ಆತಂಕವನ್ನು ಕಡಿಮೆ ಮಾಡಿ, ಹಾಗೂ ಹೀಗೂ ಮಾಡಿ ಮದುವೆಯ ಈ ಬಂಧ ಅನುರಾಗದ ಅನುಬಂಧ ಎಂಬ ಹಾಡಿನ ರೆಕಾರ್ಡ್ ತಂದು ಎಲ್ಲರಿಗೂ ಕೇಳಿಸಿ ಸಂತೋಷ ಪಡಿಸಿ ಪರಿಸ್ಥಿತಿಯನ್ನು ನಿಭಾಯಿಸಿದರೆ, ಅದೇ ಹಾಡು ಆರಂಭವಾಗುವ ಶುಭಾಶಯ, ಶುಭಾಶಯ ಪದಗಳನ್ನು ಕೇಳಿದ ಸ್ಥಳೀಯರೊಬ್ಬರು ಇದ್ಯಾರು ಸುಬ್ಬಾ ಜಯಾ? ಮದುವೆ ಗಂಡು ಎಣ್ಣಿನ ಎಸ್ರೂ, ಸಿವಾ, ಮಣಿ ಅಲ್ವಾ? ಎಂದಾಗ ನೆರೆದಿದ್ದವರೆಲ್ಲಾ ಗೊಳ್ ಎಂದು ನಕ್ಕಿದ್ದರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ವವೇ?

dding2

ವರಪೂಜೆ ಸುಸೂತ್ರವಾಗಿ ಮುಗಿದು ಊರು ಸುತ್ತು ಹಾಕಲು ಹೊರ ಬಂದವರಿಗೆ ವ್ಯವಹರಿಸಲು ಭಾಷಾ ಸಮಸ್ಯೆ ಎದುರಗಿತ್ತು. ಹೇಳಿಕೊಳ್ಳಲು ಕರ್ನಾಟಕದ ಅವಿಭಾಜ್ಯ ಅಂಗವಾದರೂ ಇಡೀ ಊರಿಗೆ ಊರೇ ತಮಿಳುಮಯವಾಗಿದ್ದ ಕಾರಣ, ಕೆಲವು ನೆಂಟರಿಷ್ಟರಿಗೆ ಇದೇನೂ ಅಪ್ಪಟ ಕನ್ನಡಿಗರಾಗಿ ತಮಿಳು ಹುಡುಗಿಯನ್ನು ಮದುವೆ ಮಾಡಿಕೊಳ್ಳುತ್ತಿದ್ದಾರಾ? ಎಂಬ ಸಂದೇಹ ಮತ್ತೊಮ್ಮೆ ಮೂಡಿ ಅದನ್ನು ನಿವಾರಿಸಲು ಹುಡುಗನ ಮನೆಯವರು ಪಟ್ಟ ಪರಿಶ್ರಮ ಅಷ್ಟಿಷ್ತಲ್ಲಾ. ಮಾರನೇ ದಿನ ಕಾಶೀ ಯಾತ್ರೆ ಮುಗಿದು, ಜೀರಿಗೆ ಧಾರಣೆಯಾಗಿ ವರ-ವಧುವಿನ ತಾಳಿಗೆ ಮೂರು ಗಂಟು ಹಾಕಿ ನಿರ್ವಿಘ್ನವಾಗಿ ಧಾರೆಯೂ ಮುಗಿದು ಬಂದಿದ್ದವರೆಲ್ಲರೂ ವಧು ವರರಿಗೆ ಅಕ್ಷತೆ ಹಾಕಿ ಆಶೀರ್ವದಿಸಿ ಮದುವೆ ಮುಗಿದು, ಊಟಕ್ಕೆ ಕುಳಿತುಕೊಳ್ಳ ಬೇಕು ಎಂದು ಊಟದ ಮನೆಗೆ ಧಾವಿಸಿದರೆ ಆದಾಗಲೇ ಊಟದ ಮನೆಯಲ್ಲಿ ಸ್ಥಳಿಯ ನೂರಾರು ಜನರಿಂದ ತುಂಬಿ ತುಳುಕುತ್ತಿದ್ದು ನೋಡಿ ಹೌರಾರಿದ್ದಂತೂ ಸುಳ್ಳಲ್ಲ.

wedd4

ರಾಮಾಯಣ ಕಾಲದಲ್ಲಿದ್ದ ಮಂಥರೆಯಂತೆ, ಎಲ್ಲಾ ಮದುವೆ ಮನೆಗಳಲ್ಲೂ ಸಮಯಕ್ಕೆ ತಕ್ಕಂತೆ ಹುಟ್ಟಿಕೊಳ್ಳುವ ಕೆಲ ಮಂಥರೆಯರೂ ಸಹಾ ಇದೇ ಸಂದರ್ಭವನ್ನು ಬಳಸಿಕೊಂಡು, ಅರೇ ಇದೇನು? ಗಂಡಿನ ಮನೆಯವರನ್ನು ಹೀಗಾ ನೋಡಿಕೊಳ್ಳೋದು? ನಾವೇನು ಊಟಕ್ಕೆ ಗತಿ ಕೆಟ್ಟು ಅಷ್ಟು ದೂರದಿಂದ ಬಂದಿದ್ದೇವಾ? ಈ ಪರಿಯಾಗಿ ನೋಡಿಕೊಳ್ಳುವುದಕ್ಕಾ 220 ಕಿಮೀ ದೂರದ ಹೆಣ್ಣನ್ನು ತರಬೇಕಿತ್ತಾ? ಗಂಡಿನ ಮನೆಯವರಿಗಲ್ಲವೇ ಮೊದಲು ಊಟ ಹಾಕೋದು? ಎಂದು ಅಲ್ಲೊಂದು ಸಣ್ಣದಾದ ಅಸಮಧಾನವನ್ನು ಹುಟ್ಟು ಹಾಕಲು ಪ್ರಯತ್ನಿಸಿದರಾದರೂ, ವರನ ತಂದೆಯವರ ಸಮಯೋಚಿತ ತಾಳ್ಮೆಯಿಂದಾಗಿ ನಡೆಯಬಹುದಾಗಿದ್ದ ಎಲ್ಲಾ ಅವಗಢಗಳನ್ನೂ ಅರಂಭದಲ್ಲೇ ಚಿವುಟಿ ಹಾಕಿದ್ದು ವಧುವಿನ ತಂದೆಯವರಿಗೆ ತುಸು ನೀರಾಳವನ್ನು ನೀಡಿದ್ದಂತೂ ಸುಳ್ಳಲ್ಲ. ಕೂಡಲೇ ಕಲ್ಯಾಣ ಮಂಟಪಕ್ಕೆ ಹೊಂದಿಕೊಂಡೇ ಇದ್ದ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪರಿಚಯಸ್ಥರನ್ನು ಕೇಳಿಕೊಂಡು ಅಲ್ಲೇ ಇದ್ದ ಮತ್ತೊಂದು ಪ್ರಾಂಗಣದಲ್ಲಿ ಗಂಡಿನ ಮನೆಯವರೆಲ್ಲರನ್ನೂ ಕೂಡಿಸಿ ಸಾಂಗೋಪಾಂಗವಾಗಿ ಊಟೋಪಚಾರಗಳನ್ನು ಮಾಡಿಸಿದರೂ ಮಂಥರೆಯರ ಮನಸ್ಸಿನಲ್ಲಿ ಮೂಡಿದ್ದ ಜ್ವಾಲೆ ಆರದೇ ಸಣ್ಣ ಪುಟ್ಟದಾಗಿ ಪಿಸುಧನಿಯಲ್ಲಿ ಮಾತನಾಡಿ ಕೊಳ್ಳುತ್ತಿದ್ದದ್ದು ಗುಟ್ಟಾಗೇನು ಉಳಿಯಲಿಲ್ಲ.

saptapadi

ಮದುವೆಯ ಮನೆಯಲ್ಲಿ ಇಷ್ಟೆಲ್ಲಾ ರಂಪ ರಾದ್ಧಾಂತಳು ನಡೆಯುತ್ತಿದ್ದರೂ ಮಧುಮಗ ಮಧುಮಗಳು ಮತ್ತು ಪುರೋಹಿತರಿಗೂ ಇದ್ಯಾವುದರ ಪರಿವೇ ಇಲ್ಲದೇ, ಲಾಜಾ ಹೋಮ, ಎನ್ನರಸ ನನ್ನ ಉಪ್ಪಿನ ಮನೆ ಕೊಡ್ತೀನಿ ನಿಮ್ಮ ಅಕ್ಕಿಯ ಮನೆ ಕೊಡು ಎಂದೋ ಇಲ್ಲವೇ ಆನೆ ಕೊಡು ಎಂದು ಶಾಸ್ತ್ರವನ್ನು ಮುಂದುವರೆಸುತ್ತಾ ಸಪ್ತ ಪದಿಯ ಶಾಸ್ತ್ರದಲ್ಲಿ ಕನ್ಯಾ ಪಿತೃವು ವರನಿಂದ ಮಾಡಿಸಿಕೊಳ್ಳುವಂತಹ ಧರ್ಮೇಚ, ಅರ್ಥೇಚ, ಕಾಮೇಚ, ನಾತಿ ಚರಾಮಿ. ಅಂದರೆ ಧರ್ಮದ ವಿಷಯದಲ್ಲಿ ಹಣ ಗಳಿಸುವ ವಿಷಯದಲ್ಲಿ, ಸಂಭೋಗಾದಿ ವಿಷಯದಲ್ಲಿ ನಿನ್ನ ಒಪ್ಪಿಗೆ ಇಲ್ಲದೆ ಕಾರ್ಯ ಪ್ರವೃತ್ತವಾಗುವುದಿಲ್ಲ ಎಂದರ್ಥ ಬರುವ ಪ್ರತಿಜ್ಞೆಯನ್ನು ಮುಗಿಸಿಕೊಂಡು ಭೂಮದೂಟಕ್ಕೆ ಅಣಿಯಾಗುವಷ್ಟರಲ್ಲಿ ಉಳಿದೆಲ್ಲಾ ವಿಷಯಗಳೂ ಭೂದಿ ಮುಚ್ಚಿದ ಕೆಂಡದಂತೆ ಆರಿರುತ್ತದೆ.

ಮದುವೆಗೆ ಬಂದಿದ್ದ ನೆಂಟರಿಷ್ಟರೆಲ್ಲರೂ ನವದಂಪತಿಗಳು ಒಂದೇ ಎಲೆಯಲ್ಲಿ ಭೂಮದೂಟ ಮಾಡುತ್ತಿರುವುದನ್ನು ನೋಡುವುದಲ್ಲಿ ತಲ್ಲೀನರಾಗಿದ್ದರೆ, ಹುಡುಗಿಯ ತಂದೆ ಮದುವೆಗೆ ನಿರೀಕ್ಷೆಗೂ ಮೀರಿದ ಜನರು ಬಂದಿದ್ದಾರೆ. ಅವರಿಗೆಲ್ಲಾ ಸರಿಯಾದ ಊಟೋಪಚಾರಗಳು ನಡೆಯಿತೇ? ಅಡುಗೆಯವರು ಅವರನ್ನು ಹೇಗೆ ಸಂಭಾಳಿಸಿರಬಹುದು? ತಮ್ಮ ಕೆಲಸ ಮುಗಿಸಿ ಹೊರಡಲು ಅನುವಾದ ಓಲಗದವರಿಗೆ ದಕ್ಷಿಣೆ ನೀಡಬೇಕು? ಎಂಬ ಧಾವಂತದಲ್ಲೇ ಬಾಹ್ಯ ನೋಟಕ್ಕೆ ನಗುತ್ತಿದ್ದರೂ ಅಂತರ್ಮುಖಿಯಾಗಿ ಆತಂಕದಿಂದಲೇ ಒಂದೆರಡು ತುತ್ತನ್ನು ಬಾಯಿಗೆ ಹಾಕಿಕೊಂಡು ಊಟದ ಶಾಸ್ತ್ರವನ್ನು ಮುಗಿಸಿ ಮದುವೆಯ ಜವಾಬ್ಧಾರಿಯನ್ನು ಹೊತ್ತಿದ್ದ ತಮ್ಮ ಮಗನೊಂದಿಗೆ ಮದುವೆ ಮಾರನೆಯ ದಿನದ ಸತ್ಯನಾರಾಯಣ ಪೂಜೆ ಮತ್ತು ಬೀಗರ ಔತಣದ ಉಳಿದ ವ್ಯವಸ್ಥೆಗಳತ್ತ ಗಮನ ಹರಿಸಲು ಎದ್ದು ಬಿಡುತ್ತಾರೆ.

WhatsApp Image 2022-05-04 at 10.12.06 AM

ಸಾವಿರ ಸುಳ್ಳುಗಳನ್ನು ಹೇಳಿ ಒಂದು ಮದುವೆ ಮಾಡು ಎಂಬ ಗಾದೆ ಇದ್ದರೂ, ಎಲ್ಲಾ ಕಡೆಯಲ್ಲೂ ಸತ್ಯಗಳನ್ನೇ ಹೇಳಿದರೂ ಮದುವೆ ಮಾಡುವುದು ಎಷ್ಟು ಕಷ್ಟ ಎಂದು ಹೆಣ್ಣು ಹೆತ್ತವರಿಗೆ ಮಾತ್ರ ಗೊತ್ತು. ಇಷ್ಟೆಲ್ಲಾ ಸಂಕಷ್ಟಗಳನ್ನೂ ದಾಟಿಕೊಂಡು ಹೀಗೆ 53 ವರ್ಷಗಳ ಹಿಂದೆ ನಡೆದದ್ದೇ ನಮ್ಮ ಅಪ್ಪ ಬಾ. ನಂ. ಶಿವಮೂರ್ತಿ(ಶಿವು) ಮತ್ತು ಅಮ್ಮ ( ಉಮಾವತಿ (ಮಣಿ)) ಅವರ ಮದುವೆ. ಇವತ್ತು ಅಪ್ಪಾ ಅಮ್ಮಾ ನಮ್ಮೊಂದಿಗೆ ಇಲ್ಲದಿದ್ದರೂ ಅವರು ನಮಗೆ ಕಲಿಸಿಕೊಟ್ಟ ಆದರ್ಶಗಳು ಮತ್ತು ಅವರ ತದ್ರೂಪುಗಳಾದ ಮೊಮ್ಮಕಳ ಮೂಲಕ ಸದಾ ಕಾಲವೂ ನಮ್ಮೊಂದಿಗೆ ಇದ್ದೇ ಇರುತ್ತಾರೆ. ಮನುಷ್ಯನ ದೇಹಕ್ಕೆ ಅಂತ್ಯವಿದೆಯಾದರು ಮನುಷ್ಯರು ಮಾಡಿದ ಕೆಲಸಗಳಿಗೆ ಎಂದೂ ಅಂತ್ಯವಿರುವುದಿಲ್ಲ ಎನ್ನುವುದಕ್ಕೆ ನಮ್ಮ ಅಪ್ಪಾ ಅಮ್ಮನ ಮದುವೆಯಲ್ಲಿ ನಾನಿಲ್ಲದಿದ್ದರು ತಮ್ಮ ಮದುವೆಯ ಬಗ್ಗೆ ಅವರುಗಳು ಮತ್ತು ಮನೆಯ ಇತರೇ ಸದಸ್ಯರು ಮಾತನಾಡಿಕೊಳ್ಳುತ್ತಿದ್ದದ್ದನ್ನು ಕೇಳಿಸಿಕೊಂಡು ಅದನ್ನೇ ಯಥಾವತ್ತಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನೇ ಹೇಳಿರುವಂತೆ, ಕರ್ಮಾಣ್ಯೇವಾಧಿಕಾರಸ್ತೇ, ಮಾ ಫಲೇಷು ಕದಾಚನ. ಅಂದರೆ, ನಿನ್ನ ಕೆಲಸಗಳನ್ನು ನೀನು ಅಚ್ಚುಕಟ್ಟಾಗಿ ಮಾಡು ಫಲಾಪಲಗಳನ್ನು ನನ್ನ ಮೇಲೆ ಬಿಡು ಎಂದಿದ್ದಾನೆ. ಹಾಗಾಗಿ ನೆನಪುಗಳೇ ಮಧುರ ಮತ್ತು ಅಮರ ಹಾಗಾಗಿ ನಮ್ಮ ಮನೆಗಳ ಸಭೆ ಸಮಾರಂಭಗಳಲ್ಲಿ ಮಂಥರೆಯರ ಮಾತುಗಳಿಗೆ ಬೆಲೆ ಕೊಡದೇ ಕಾರ್ಯಕ್ರಮವನ್ನು ನಿರ್ವಿಘ್ನವಾಗಿ ನಡೆಸಿಕೊಂಡು ಹೋಗುವುದರ ಮೂಲಕ ಆ ಕಾರ್ಯಕ್ರಮದ ನೆನಪು ಸದಾಕಾಲವೂ ಹಸಿರಾಗಿರುವಂತೆ ನೋಡಿ ಕೊಳ್ಳುವ ಜವಾಬ್ಧಾರಿ ನಮ್ಮ ನಿಮ್ಮದೇ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಶ್ರೀ ಶಂಕರ ಭಗವತ್ಪಾದರ ಸಂಕ್ಷಿಪ್ತ ಜೀವನ ಚರಿತ್ರೆ

ಅದು ಕ್ರಿ.ಶ, 7ನೇ ಶತಮಾನದಲ್ಲಿ ಅಹಿಂಸಾ ಪರಮೋಧರ್ಮಃ ಎಂದು ಹೇಳುತ್ತಲೇ ಬೌದ್ಧ ಧರ್ಮ ದೇಶ ವಿದೇಶಗಳಲ್ಲೆಲ್ಲಾ ಹರಡಿಯಾಗಿತ್ತು. ಸನಾತನ ಧರ್ಮದ ಕಟ್ಟುಪಾಡು ಮತ್ತು ಅತೀಯಾದ ಆಚಾರ ಮಡಿ ಹುಡಿಗಳಿಂದ ಬೇಸತ್ತವರು ಬೌದ್ಧ ದರ್ಮದ ಕಡೆ ಆಕರ್ಷಿತರಾಗಿದ್ದರೆ, ಮತ್ತೊಂದೆಡೆ, ದೇವರು ಎಂಬುವುದೇ ಇಲ್ಲ ಅದೆಲ್ಲಾ ಕಟ್ಟು ಕಥೆ ಎನ್ನುವಂತಹ ಚಾರ್ವಾಕರ ಹಾವಳಿಯಿಂದಾಗಿ ಒಂದು ರೀತಿಯಲ್ಲಿ ಸನಾತನ ಧರ್ಮ ಅಳಿವಿನಂಚಿಗೆ ತಲುಪಿತ್ತು. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಸನಾತನ ಧರ್ಮಕ್ಕೆ ಆಶಾಕಿರಣವಾಗಿ ಹುಟ್ಟಿ ಬಂದವರೇ ಶ್ರೀ ಶಂಕರಾಚಾರ್ಯರು.

ಕೇರಳದ ಪೂರ್ಣಾ ನದಿ ತಟದಲ್ಲಿದ್ದ ಸಸಲಂ ನಂತರ ಕಾಲಟಿ ಎಂದು ಪ್ರಸಿದ್ಧವಾದ ಸ್ಥಳದಲ್ಲಿ ವಾಸವಾಗಿದ್ದ ಶ್ರೀ ಕಾಯ್‌ಪಿಳ್ಳೆ ಶಿವಗುರು ನಂಬೂದರಿ ಮತ್ತು ಶೀಮತಿ ಆರ್ಯಾಂಬಾ ಎಂಬ ದಂಪತಿಗಳಿಗೆ ತ್ರಿಶೂರಿನ ವಡಕ್ಕನಾಥ ದೇವರ ಫಲವಾಗಿ ಶ್ರೀ ಶಂಕರರರು ಕ್ರಿ. ಶ. 788 ವೈಶಾಖ ಶುದ್ಧ ಪಂಚಮಿಯಂದು ಜನಿಸುತ್ತಾರೆ.

ಬಹಳ ಸಣ್ಣ ವಯಸ್ಸಿನಲ್ಲಿಯೇ ತಂದೆಯವರನ್ನು ಕಳೆದುಕೊಂಡ ಶಂಕರರಿಗೆ 5 ವರ್ಷದವರಿದ್ದಾಗಲೇ ಅವರ ತಾಯಿ ಉಪನಯನವನ್ನು ನೆರವೇರಿಸುತ್ತಾರೆ. ಆ ಸಣ್ಣ ವಯಸ್ಸಿಗೇ ಅಸಾಧಾರಣ ಮೇಧಾವಿಯಾದ ಶಂಕರರು 8 ವರ್ಷಕ್ಕೆಲ್ಲಾ ನಾಲ್ಕು ವೇದಗಳನ್ನೂ ಕರಗತ ಮಾಡಿಕೊಂಡಿದ್ದಲ್ಲದೇ ಶಾಸ್ತ್ರ ಮತ್ತು ಪುರಾಣಗಳನ್ನು ಅನೇಕ ಗುರುಗಳಿಂದ ಆಭ್ಯಾಸ ಮಾಡಿ ಕೇವಲ 12ನೇ ವರ್ಷಕ್ಕೆಲ್ಲಾ ಸಕಲ ಶಾಸ್ತ್ರ ಪಾರಂಗತರಾಗುತ್ತಾರೆ.

shank3ಇಂತಹ ಬಾಲ ಶಂಕರರು ಲೌಕಿಕಕ್ಕಿಂತಲೂ ಸಂನ್ಯಾಸತ್ವದ ಕಡೆಗೇ ಹೆಚ್ಚಿನ ಒಲವು ಇದ್ದ ಕಾರಣ, ಸನ್ಯಾಸಿಯಾಗಲು ಅಪ್ಪಣೆ ಕೊಡಬೇಕೆಂದು ತಾಯಿಯನ್ನು ಕೋರುತ್ತಾರೆ. ಇರುವ ಒಬ್ಬ ಮಗ ಸನ್ಯಾಸಿಯಾಗಿಬಿಟ್ಟರೆ ಈ ಇಳೀ ವಯಸ್ಸಿನಲ್ಲಿ ತನ್ನನ್ನು ನೋಡಿಕೊಳ್ಳುವವರು ಯಾರೂ ?  ಎಂಬ ಚಿಂತೆಯಿಂದಾಗಿ ಅವರ ತಾಯಿಯವರು ಶಂಕರರಿಗೆ ಸನ್ಯಾಸತ್ವ ಸ್ವೀಕರಿಸಲು ಒಪ್ಪಿಗೆ ಕೊಡುವುದಿಲ್ಲ. ಹೇಗಾದರೂ ಮಾಡಿ ತಾಯಿಯನ್ನು ಒಪ್ಪಿಸಲೇ ಬೇಕೆಂದು ನಿರ್ಧರಿಸಿದ ಶಂಕರಾಚಾರ್ಯರು ಅದೊಂದು ಮುಂಜಾನೆ ಹೊಳೆಯಲ್ಲಿ ಸ್ನಾನಕ್ಕೆ ಇಳಿದಾಗ ಮೊಸಳೆಯೊಂದು ಅವರ ಕಾಲನ್ನು ಹಿಡಿಯುತ್ತದೆ. ಅದರಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಆಗದಿದ್ದಾಗ, ಅಮ್ಮಾ, ಹೇಗೂ ಸಾಯುತ್ತಿದ್ದೇನೆ. ಕೊನೆಯ ಹೊತ್ತಿಗಾದರೂ ಸಂನ್ಯಾಸ ಸ್ವೀಕರಿಸಲು ಒಪ್ಪಿಕೋ! ಎಂದು ಕೇಳಿಕೊಳ್ಳುತ್ತಾರೆ. ಮಗನ ಆರ್ತನಾದಕ್ಕೆ ಮರುಗಿ ಅಲ್ಲಿಯೇ ಇದ್ದ ಅವರ ತಾಯಿ ಸನ್ಯಾಸ ಸ್ವೀಕರಿಸಲು ಒಪ್ಪಿಗೆ ನೀಡಿದಾಗ, ಶಂಕರರು ಅಲ್ಲಿಯೇ ಸ್ವಯಂ ಸಂನ್ಯಾಸ ಸ್ವೀಕರಿಸಿದಾಗ ಮೊಸಳೆ ಅವರ ಕಾಲು ಬಿಟ್ಟಿತು. ತಾಯಿಯ ಮನಸ್ಸಿನ ಇಂಗಿತವನ್ನು ಅರಿತಿದ್ದ ಶಂಕರರು ಅಮ್ಮಾ, ನಿಮ್ಮ ಅಂತಿಮ ಕ್ಷಣಗಳಲ್ಲಿ ನಾನು ಎಲ್ಲಿದ್ದರೂ ನಿನ್ನ ಎದುರು ಬಂದು ನಿಲ್ಲುತ್ತೇನೆ ಎಂಬುದಾಗಿ ಮಾತು ನೀಡೀ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸೂಕ್ತ ಗುರುಗಳನ್ನು ಅರಸುತ್ತಾ ಉತ್ತರದ ಕಡೆ ಪ್ರಯಾಣಿಸುತ್ತಾರೆ.

shank4ಹಾಗೆ ಗುರುಗಳನ್ನು ಅರಸುತ್ತಿರುವಾಗ ನರ್ಮದಾ ನದಿ ತೀರದಲ್ಲಿ ಬಹು ದೊಡ್ಡ ಜ್ಞಾನಿಗಳಾದ ಗೌಡಪಾದರ ಶಿಷ್ಯರಾದ ಗೋವಿಂದ ಭಗವತ್ಪಾದರನ್ನು ಈ ಗುಹೆಯಲ್ಲಿ ಭೇಟಿಯಾಗಿ ತಮ್ಮನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಎಂದು ಕೇಳಿಕೊಳ್ಳುತ್ತಾರೆ. ಆಗ ಗೋವಿಂದ ಭಗವತ್ಪಾದರು ನೀನಿನ್ನು ಚಿಕ್ಕಹುಡುಗ. ಸ್ವಲ್ಪ ದೊಡ್ಡವನಾದ ಮೇಲೆ ಬಾ ಎಂದಾಗ, ಛಲ ಬಿಡದ ತ್ರಿವಿಕ್ರಮನಂತೆ ಶಂಕರರು ಅವರ ಹಿಂದೆಯೇ ದುಂಬಾಲು ಬೀದ್ದಾಗ, ಅವರಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂಬ ಉದ್ದೇಶದಿಂದ, ಅವರ ಕೈಯ್ಯಿಗೆ ವಿಷ್ಣು ಸಹಸ್ರನಾಮದ ತಾಳೆ ಗರಿ ಕೊಟ್ಟು ಇದಕ್ಕೆ ಭಾಷ್ಯ ಬರೆದರೆ ನಾನು ನಿನ್ನನ್ನು ನನ್ನ ಶಿಷ್ಯನನ್ನಾಗಿ ಸ್ವೀಕರಿಸುತ್ತೇನೆ ಎಂದು ಹೇಳಿ ಸಾಗಹಾಕುತ್ತಾರೆ. ಹೇಗೂ ಈ ಭಾಷ್ಯ ಬರೆಯುವುದಕ್ಕೆ ಕನಿಷ್ಟ ಪಕ್ಷ 2 ವರ್ಷವಾದರೂ ಬೇಕಾಗುತ್ತದೆ ಅಲ್ಲಿಯವರೆಗೆ ಈ ಹುಡುಗನ ಕಾಟ ತಪ್ಪುತ್ತದೆ ಎಂಬುದು ಗೋವಿಂದ ಭಗವತ್ಪಾದರ ಆಶಯವಾಗಿರುತ್ತದೆ ಆದರೆ ದೈವೀ ಸ್ವರೂಪವಾದ ಶಂಕರರು ಮರುದಿನವೇ ಭಾಷ್ಯದ ಸಮೇತ ಗುರುಗಳಿಗೆ ಒಪ್ಪಿಸುತ್ತಾರೆ. ಇಂತಹ ಅದ್ಭುತವನ್ನು ನೋಡಿ ಆನಂದಭರಿತರಾದ ಗೋವಿಂದಪಾದರು. ಅಯ್ಯಾ ನಾನು ನಿನಗೆ ಗುರುವಲ್ಲ. ನೀನೇ ನನಗೆ ಗುರು ಎಂದು ನಮಸ್ಕರಿಸಿ ಮನಸಾರೆ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಅವರಿಗೆ ಯೋಗ, ವೇದ, ಉಪನಿಷತ್, ವೇದಾಂತಗಳನ್ನು ಕಲಿಸುತ್ತಾರೆ.

ಸಕಲ ವೇದ ಶಾಸ್ತ್ರ ಪಾರಂಗತರಾದ ಶಂಕರರು, ಸನಾತನ ಧರ್ಮದ ಉಳಿವಿಗಾಗಿ ಮತ್ತು ಪುನರುತ್ಥಾನಕ್ಕಾಗಿ ಮನೋವೇಗದಲ್ಲಿ ಕಾಲ್ನಡಿಗೆಯಲ್ಲಿಯೇ ಪ್ರಯಾಣಿಸಿ, ದೇಶದ ನಾಲ್ಕು ದಿಕ್ಕುಗಳಾದ ಉತ್ತರದಲ್ಲಿ: ಬದರಿ ಪೀಠ – ಉತ್ತರ ಜ್ಯೋತಿರ್ ಮಠ, ದಕ್ಷಿಣದಲ್ಲಿ: ಶೃಂಗೇರಿ ಪೀಠ – ದಕ್ಷಿಣ ಶಾರದಾ ಮಠ, ಪೂರ್ವದಲ್ಲಿ: ಪುರಿ ಪೀಠ – ಪೂರ್ವಾ ಗೋವರ್ಧನ ಮಠ ಮತ್ತು ಪಶ್ಚಿಮದಲ್ಲಿ ದ್ವಾರಕಾ ಪೀಠ – ಪಶ್ಚಿಮ ಮಠ ಹೀಗೆ ನಾಲ್ಕು ಶಕ್ತಿ ಪೀಠ ಗಳನ್ನು ಸ್ಥಾಪಿಸಿ, ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ ಶಿಷ್ಯರನ್ನು ಪೀಠಾಧಿಪತಿಯನ್ನಾಗಿಸಿ ಅದ್ವೈತ ಸಿದ್ಧಾಂತ ವನ್ನು ಜನಪ್ರಿಯಗೊಳಿಸಿದರು.

shank2ಹೀಗೆ ಕೇವಲ 32 ವರ್ಷಗಳಲ್ಲಿ ದೇಶಾದ್ಯಂತ ಪರ್ಯಟನೆ ಮಾಡಿ ಅವನತಿಯ ಹಾದಿಯಲ್ಲಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಿದ್ದಲ್ಲದೇ ಹಲವಾರು ಪಂಡಿತರನ್ನೂ ಶಾಸ್ತ್ರವೇತ್ತರನ್ನೂ ಜಯಿಸಿ, ಸರ್ವಜ್ಞ ಪೀಠವನ್ನೇರಿದರು ಶ್ರೀ ಶಂಕರಾಚಾರ್ಯರು. ಅವರ ಜೀವನದ ಅಂತಿಮ ದಿನಗಳಲ್ಲಿ ಹಿಮಾಲಯಕ್ಕೆ ಪ್ರಯಾಣ ಬೆಳೆಸಿ ಅಲ್ಲಿ ಕೇದಾರ ದೇವಾಲಯದ ಹತ್ತಿರ ತಮ್ಮ ದೇಹದಿಂದ ಮುಕ್ತಿಯನ್ನು ಪಡೆಯುತ್ತಾರೆ. ಅದಕ್ಕೆ ಪ್ರತೀಕವಾಗಿ ಇಂದಿಗೂ ಸಹಾ ಕೇದಾರದ ಕೇದಾರನಾಥ ದೇವಾಲಯದ ಹಿಂಭಾಗದಲ್ಲಿ ಶ್ರೀ ಶಂಕರರ ಸಮಾಧಿ ಇದೆ ಮತ್ತು ಅವರ ಶಿಲಾಪ್ರತಿಮೆಯೂ ಇದೆ.

ಶಂಕರರ ಜೀವನದ ಬಗೆಗೆ ಒಂದು ಸಂಕ್ಷಿಪ್ತ ಶ್ಲೋಕ ಹೀಗಿದೆ

ಅಷ್ಟವರ್ಷೇ ಚತುರ್ವೇದೀ, ದ್ವಾದಶೇ ಸರ್ವಶಾಸ್ತ್ರ ವಿತ್ |
ಷೋಡಶೇ ಕೃತವಾನ್ ಭಾಷ್ಯಂ, ದ್ವಾತ್ರಿಂಶೇ ಮುನಿರಭ್ಯಗಾತ್ ||

ಅಂದರೇ 8 ವರ್ಷಕ್ಕೆ 4 ವೇದಗಳನ್ನು ಕಲಿತವರು, 12ನೇ ವರ್ಷಕ್ಕೆ ಸರ್ವಶಾಸ್ತ್ರಗಳನ್ನು ತಿಳಿದವರು, 16ನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು 32ನೇ ವರ್ಷದಲ್ಲಿ ಅಭ್ಯಗತರು- ಎಂದರೆ ಕಾಲವಾದರು ಎಂದರ್ಥ.

ಆತ್ಮ ಮತ್ತು ಪರಮಾತ್ಮ ಎಂಬುದು ಎರಡು ಬೇರೆ ಬೇರೆ ಅಂಶಗಳಲ್ಲ. ಎರಡೂ ಒಂದೇ. ಆತ್ಮನೇ ಪರಮಾತ್ಮನು. ಪರಮಾತ್ಮನೇ ಆತ್ಮನು ಎಂದು ಅಹಂ ಬ್ರಹ್ಮಾಸ್ಮಿ ಎಂಬ ಅದ್ವೈತ ಸಿದ್ಧಾಂತ ವನ್ನು ಜಗತ್ತಿಗೆ ತಿಳಿಸಿ ಕೊಟ್ಟವರು.

ಅಳಿವಿನಂಚಿನಲ್ಲಿದ್ದ ಸನಾತಧರ್ಮವನ್ನು ಪುನರುತ್ಥಾನ ಮಾಡಿದ ಆದಿ ಗುರು ಶ್ರೀ ಶಂಕರಾಚಾರ್ಯರ ಸಾಧನೆಗಳನ್ನು ಸದಾಕಾಲವೂ ಭಕ್ತಿ ಪೂರ್ವಕವಾಗಿ ಸ್ಮರಿಸುವ ಮೂಲಕ ಅವರು ಬೋಧಿಸಿದ ತತ್ವ, ವಿಚಾರಗಳನ್ನು ಅರಿಯೋಣ, ಪಾಲಿಸೋಣ‌ ಮತ್ತು ಸನ್ಮಾರ್ಗದಲ್ಲಿ ನಡೆಯೋಣ.

ಏನಂತೀರೀ?
ನಿಮ್ಮವನೇ ಉಮಾಸುತ

ಬೆಲಗೂರು ಬಿಂಧು ಮಾಧವ ಶರ್ಮ ಅವಧೂತರು

ನಮ್ಮ ಸನಾತನ ಧರ್ಮದಲ್ಲಿ ತಂದೆ, ತಾಯಿ, ಸೂರ್ಯ ಮತ್ತು ಚಂದ್ರರಂತಹ ಪ್ರತ್ಯಕ್ಷ ದೇವರುಗಳ ಹೊರತಾಗಿ ಶ್ರದ್ಧಾ ಭಕ್ತಿಗಳಿಂದ ಪೂಜಿಸುವುದೇ ಗುರು ಪರಂಪರೆ. ನಮ್ಮ ಸನಾತನ ಧರ್ಮದ ಮೂಲ ಅಡಗಿರುವುದೇ ಗುರು ಪರಂಪರೆಯಾಗಿದ್ದು ಈ ದೇಶದಲ್ಲಿ ಈಗಾಗಲೇ ಲಕ್ಷಾಂತರ ಗುರುಗಳು ಮತ್ತು ಅವಧೂತರುಗಳು ಬಂದು ಹೋಗಿದ್ದಾರೆ. ಅವಧೂತ ಎಂಬುದು ಸಂಸ್ಕೃತದಿಂದ ಬಂದ ಪದವಾಗಿದ್ದು, ಭಾರತೀಯ ಧರ್ಮಗಳಲ್ಲಿ ಅಹಂಕಾರ-ಪ್ರಜ್ಞೆ, ದ್ವಂದ್ವತೆ ಮತ್ತು ಸಾಮಾನ್ಯ ಲೌಕಿಕ ಕಾಳಜಿಗಳನ್ನು ಮೀರಿದ ಮತ್ತು ಪ್ರಮಾಣಿತ ಸಾಮಾಜಿಕ ಶಿಷ್ಟಾಚಾರವನ್ನು ಪರಿಗಣಿಸದೆ ವರ್ತಿಸುವ ಒಂದು ರೀತಿಯ ಅತೀಂದ್ರಿಯವಾದ ಜ್ಞಾನ ಹೊಂದಿರುವ ಸಂತರನ್ನು ಸೂಚಿಸುತ್ತದೆ.

ನಾವಿಂದು ಅಂತಹದೇ, ನಾನು ದೇವನು ಅಲ್ಲಾ ದೇವ ಮಾನವನೂ ಅಲ್ಲಾ ನಾನೊಬ್ಬ ನಿಮ್ಮಂತೆಯೇ ಸಾಮಾನ್ಯ ಮನುಷ್ಯ ಎಂದೇ ಹೇಳುತ್ತಲೇ ಲಕ್ಷಾಂತರ ಭಕ್ತರನ್ನು ಹೊಂದಿದ್ದಂತಹ ಬೆಲಗೂರಿನ ಬಿಂದು ಮಾಧವ ಶರ್ಮಾ ಅವಧೂತರ ಬಗ್ಗೆ ತಿಳಿದುಕೊಳ್ಳೋಣ. ಬೆಲಗೂರು ಎನ್ನುವುದು ಅರಸೀಕೆರೆ ಮತ್ತು ಹೊಸದುರ್ಗದ ನಡುವೆ ಇರುವ ಸಣ್ಣ ಗ್ರಾಮವಾಗಿದ್ದು 70ರ ದಶಕದ ವರೆಗೂ ಸ್ಥಳೀಯರ ಹೊರತಾಗಿ ಕರ್ನಾಟಕದ ಉಳಿದ ಭಾಗದ ಜನರಿಗೆ ಪರಿಚಯವೇ ಇರಲಿಲ್ಲ. ಸುಮಾರು 750 ವರ್ಷಗಳಿಗಿಂತಲೂ ಹಳೆಯದಾದ ವೀರ ಪ್ರತಾಪ ದೇವಾಲಯದ ಅರ್ಚಕರ ವಂಶದದಲ್ಲಿ ಏಪ್ರಿಲ್ 30, 1947ರಲ್ಲಿ ಜನಿಸಿದ ಶ್ರೀ ಬಿಂಧು ಮಾಧವರವರು ತಮ್ಮ 17ನೇ ವಯಸ್ಸಿನಲ್ಲಿ ಅವರಿಗಾದ ಅಭೂತಪೂರ್ವವಾದ ದೈವಾನುಭವದಿಂದಾಗಿ ಅವಧೂತರಾಗಿ ಬೆಳೆಯಲ್ಪಟ್ಟು ಅವರ ಮಾರ್ಗದರ್ಶನದಲ್ಲಿ ತಮ್ಮ ಊರನ್ನು ಪ್ರಪಂಚದ ಇತಿಹಾಸದ ನಕ್ಷೆಯಲ್ಲಿ ಶಾಶ್ವತವಾಗಿ ಇರಿಸಿದ್ದಾರೆ ಎಂದರೂ ತಪ್ಪಾಗದು.

anjaneyaಬೆಲಗೂರಿನಲ್ಲಿ ಸುಮಾರು 750 ವರ್ಷಗಳ ಹಿಂದೆ ಋಷಿ ವ್ಯಾಸರಾಯರು ಸ್ಥಾಪಿಸಿದರು ಎನ್ನಲಾಗುವ ಮುಖ್ಯ ದೇವರು ವೀರ ಪ್ರತಾಪ ಆಂಜನೇಯ ಸ್ವಾಮಿಯ ದೇವಾಲಯವನ್ನು ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ಅವಧೂತರು ಜೀರ್ಣೋದ್ಧಾರ ಮಾಡಿದ್ದಲ್ಲದೇ ಆ ಊರಿನ ಗ್ರಾಮ ದೇವತೆ ಮತ್ತು ಇತರೇ ದೇವಾಲಯಗಳನ್ನು ಸಹಾ ಬೇಲೂರಿನ ದೇವಾಲಯಗಳಂತೆ ಭರಪೂರ ಶಿಲ್ಪಕಲೆಗಳಿಂದ ತುಂಬಿ ತುಳುಕುವಂತೆ ಮಾಡಿ ಬೆಲಗೂರಿಗೆ ದೇಶ ವಿದೇಶಗಳಿಂದ ಪ್ರತೀ ದಿನವೂ ನೂರಾರು ಭಕ್ತಾದಿಗಳು ಭೇಟಿ ನೀಡುವಂತಹ ಆಧ್ಯಾತ್ಮಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಿರುವುದು ನಿಜಕ್ಕೂ ಶ್ಲಾಘನೀಯ.

temp1ಆಂಜನೇಯ, ಶಿವ ಮತ್ತು ವಿಷ್ಣುವಿನ ಮೂರು ದೇವಾಲಯಗಳನ್ನು ಆಧುನಿಕತೆಗೆ ತಕ್ಕಂತೆ ವೈಭವೋಪೇತವಾಗಿ ಜೀರ್ಣೋದ್ಧಾರ ಮತ್ತು ಪುನರ್ನಿರ್ಮಾಣ ಮಾಡುವುದರ ಜೊತೆಗೆ, ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ತಂಗಲು ವಿಶಾಲವಾದ ಕೊಠಡಿಗಳನ್ನು ನಿರ್ಮಿಸಿದ್ದಾರೆ. ಪ್ರತಿ ಪೂರ್ಣಿಮೆಯ ದಿನದಂದು ಹೋಮವಾದ ನಂತರ ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನಸಂತರ್ಪಣೆ ಮಾಡುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ.

ಅವಧೂತರು ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆದಿಲ್ಲವಾದರೂ, ತಾಯಿ ಸರಸ್ವತಿ ದೇವಿಯು ಅವರ ನಾಲಿಗೆಯ ಮೇಲೆ ಸದಾಕಾಲವೂ ನೆಲೆಸಿದ್ದ ಕಾರಣ, ವೇದ ಮತ್ತು ಉಪನಿಷತ್ತುಗಳು ಅವರ ಬಾಯಿಯಿಂದ ಸರಾಗವಾಗಿ ಹರಿಯುತ್ತಿದ್ದವು. ಸ್ವಾಮೀಜಿಗಳ ಪವಾಡದಿಂದ ಅನೇಕ ಭಕ್ತರಿಗೆ ಅವರ ಮೇಲಿನ ನಂಬಿಕೆ ಹೆಚ್ಚಾಗಿದ್ದಲ್ಲದೇ, ಅನೇಕ ಕಠಿಣಾತೀತ ನಾಸ್ತಿಕರನ್ನು ಸಹಾ ಆಸ್ತಿಕರನ್ನಾಗಿ ಪರಿವರ್ತನೆ ಮಾಡಿದ ಉದಾಹಣೆಯೂ ಸಾಕಷ್ಟಿತ್ತು.

s2ವೀರ ಪ್ರತಾಪ ಆಂಜನೇಯನ ಪರಭಕ್ತರಾದ ಅವಧೂತರು ಭಕ್ತರೊಳಗೆ ಭಕ್ತರಾಗಿ ಭಕ್ತಿಯ ಮಾರ್ಗವನ್ನೇ ಅನುಸರಿಸುತ್ತಿದ್ದರೂ, ಪ್ರತೀ ಅರ್ಥದಲ್ಲಿಯೂ ಭಗವಂತನೊಂದಿಗೆ ಒಂದಾಗಿದ್ದರು ಎಂದರೂ ತಪ್ಪಾಗದು. ಆಧ್ಯಾತ್ಮಿಕ ಋಷಿ ಪರಂಪರೆಗೆ ಋಣಿಯಾಗಿರುವ ಈ ದೇಶದಲ್ಲಿ ಮಹಾನ್ ಋಷಿಗಳ ದೀರ್ಘ ಸಾಲಿಗೆ ಈ ಅವಧೂತರೂ ಸಹಾ ಒಬ್ಬರಾಗಿದ್ದು, ಸಂಕಷ್ಟದ ಕಾಲದಲ್ಲಿ ಧರ್ಮದ ಮರುಸ್ಥಾಪನೆಗಾಗಿ ದೈವತ್ವದ ಅಂಶವಾಗಿ ಶ್ರೀಕೃಷ್ಣನ ಪ್ರತಿರೂಪದಂತೆ ಮಾನವನ ರೂಪದಲ್ಲಿ ಅವಧೂತರು ಅವತರಿಸಿದ್ದಾರೆ ಎಂದೇ ಅವರ ಭಕ್ತರ ನಂಬಿಕೆಯಾಗಿತ್ತು.

s6ಆಧ್ಯಾತ್ಮಿಕ ಆಚರಣೆಗಳನ್ನು ಬಿಂದು ಮಾಧವ ಅನುಸರಿಸಿದರಾದರೂ ಅವರು ಯಾವುದೇ ಆಧ್ಯಾತ್ಮಿಕ ಅಭ್ಯಾಸಗಳನ್ನು ಅನುಸರಿಸಲಿಲ್ಲ. ದೀರ್ಘ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದ ಅವಧೂತರು, ಆಂಜನೇಯನ ದೇವಸ್ಥಾನದಲ್ಲಿ ನಿರಾಹಾರಿಗಳಾಗಿ 7 ರಿಂದ 10 ದಿನಗಳವರೆಗೆ ಧ್ಯಾನಕ್ಕಾಗಿ ಕುಳಿತ ಉದಾಹಣೆಯೂ ಇತ್ತು. ಬ್ರಾಹ್ಮಣ ಅಂದರೆ ಬ್ರಹ್ಮ ಜ್ಞಾನಿ, ಸಮಾಜದಲ್ಲಿ ಜಾತಿ ನಿರ್ಮೂಲನೆಯಾಗಬೇಕು ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವಂತವನೇ ನಿಜವಾದ ಬ್ರಾಹ್ಮಣ ಎನ್ನುತ್ತಿದ್ದರು. ಹಾಗಿಯೇ ಕಳೆದ 30-40 ವರ್ಷಗಳಲ್ಲಿ, ನಿರಂತರವಾಗಿ ಭಕ್ತರುಗಳು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿಕೊಳ್ಳುವ ಸಲವಾಗಿ ಬೆಲಗೂರಿಗೆ ಬರುತ್ತಿದ್ದರು. ಹಾಗೆ ಬಂದ ಎಲ್ಲಾ ಭಕ್ತ ಸಮೂಹವನ್ನು ಬಹಳ ಪ್ರೀತಿಯಿಂದ ಒಮ್ಮೆ ದಿಟ್ಟಿಸಿ ನೋಡಿದರೆ ಇಲ್ಲವೇ ಅವರ ಮೇಲೆ ಕೈ ಹಾಕಿ ಆಶೀರ್ವದಿಸಿದರೂ ಸಾಕು ಹಲವರಿಗೆ ಅವರ ಸಮಸ್ಯೆಯ ಪರಿಹಾರವಾಗಿರುವ ಉದಾಹರಣೆಗಳೆಷ್ಟೋ. ತಮ್ಮನ್ನು ಕಾಣಲು ಬರುವ ಪ್ರತಿಯೊಬ್ಬ ಭಕ್ತರಿಗೂ ಆಧ್ಯಾತ್ಮಿಕ ಮತ್ತು ಸಾತ್ವಿಕ ಆಹಾರವನ್ನು ಉಣಬಡಿಸುವುದರಲ್ಲಿ ಸ್ವಾಮಿಗಳು ಎತ್ತಿದ ಕೈ. ಶ್ರೀ ಕ್ಷೇತ್ರದ ಅಡುಗೆ ಮನೆ ಅಕ್ಷಯ ಪಾತ್ರೆ ಎಂದಿಗೂ ಬರಿದಾಗದೇ, ಬರುವ ಭಕ್ತಾದಿಗಳು ಹಸಿವಿನಿಂದ ಎಂದೂ ಹಿಂದಿರುಗಿದ ಪ್ರಮೇಯವೇ ಬಂದಿರಲಿಲ್ಲ. ಸ್ವಾಮೀಜಿಯವರ ಪಾಕಶಾಲೆಯಲ್ಲಿ ಯಾವುದೇ ಪಂಗಡ, ಜಾತಿ, ಪಂಥದ ಭೇದವಿಲ್ಲದೆ ಎಲ್ಲ ಭಕ್ತರಿಗೂ ಸದಾ ಕಾಲವೂ ತೆರೆದಿರುತ್ತದೆ.

s8ಭಕ್ತರ ಜೊತೆಯಲ್ಲಿಯೇ ಭಜನೆ ಮಾಡುವುದು, ಭಕ್ತರ ಭಜನೆಯಲ್ಲಿ ಸುಶ್ರಾವ್ಯವಾಗಿ ಕೊಳಲನ್ನು ನುಡಿಸುವುದು ಇಲ್ಲವೇ ಪಕ್ಕವಾದ್ಯಗಾರರಾಗಿ ತಬಲ ನುಡಿಸುವುದೋ ಇಲ್ಲವೇ ಭಕ್ತಿಯ ಪರವಶರಾಗಿ ಅವರೊಂದಿಗೆ ನರ್ತನ ಮಾಡುತ್ತಾ ಸಾಮಾನ್ಯರಾಗಿಯೇ ಬೆರೆಯುತ್ತಿದ್ದದ್ದು ನಿಜಕ್ಕೂ ಅನನ್ಯವಾಗಿತ್ತು.

ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಸಂದರ್ಭಗಳಿಗಾಗಿ ರಥ ಇದ್ದೇ ಇರುತ್ತದೆ. ಆದರೆ ಸ್ವಾಮಿಗಳ ಸಾರಥ್ಯದಲ್ಲಿ ನಿರ್ಮಾಣವಾದ ಈ ಊರಿನ ಮತ್ತೊಂದು ಪ್ರಾಚೀನವಾದ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿರುವ ಭಾರತ ಮಾತ ರಥ ಅತ್ಯಂತ ವಿಶೇಷವಾಗಿದೆ. ಈ ರಥದಲ್ಲಿ ಸುಮಾರು 210 ಸಾಧಕರ ಉಬ್ಬು ಚಿತ್ರಗಳ ಮೂಲಕ ಕೆತ್ತಲಾಗಿದ್ದು ಇದರಲ್ಲಿ ದೇಶಕ್ಕಾಗಿ ಹೋರಾಡಿದ ಹೋರಾಟಗಾರರು, ಸಿನಿಮಾ ಸಾಧಕರು, ಕವಿಗಳು, ವಿಜ್ಞಾನಿಗಳು, ಋಷಿ ಮುನಿಗಳ ಚಿತ್ರಗಳನ್ನು ಕೆತ್ತಿಸುವ ಮೂಲಕ ಭಾರತಾಂಬೆಗೆ ಗೌರವವನ್ನು ಗುರುಗಳು ಸಲ್ಲಿಸಿರುವುದು ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತದೆ.

RATHAಸಾಧಾರಣವಾಗಿ ರಥದ ಮೇಲೆ ತಳಿರು ತೋರಣಗಳ ವಿನ್ಯಾಸದ ಜತೆಗೆ ಸಾಲು ಸಾಲು ದೇವರ ಪ್ರತಿಮೆಗಳನ್ನು ಕೆತ್ತಿಸಿದರೆ, ಈ ಬೆಲಗೂರಿನಲ್ಲಿ ರಥದಲ್ಲಿ ಅಡಿಯಿಂದ ಮುಡಿಯವರೆಗೆ, ದೇಶಕ್ಕಾಗಿ ಜೀವ– ಜೀವನವನ್ನೇ ಮುಡುಪಾಗಿಟ್ಟವರ ಶಿಲ್ಪಗಳನ್ನು ಕೆತ್ತಿಸಿದ್ದಾರೆ. ಚಕ್ರದ ಮೇಲ್ಭಾಗದಿಂದ ಹಿಡಿದು, ನಡು ಭಾಗದ ಸುತ್ತ ಹಾಗೂ ಶಿಖರದವರೆಗೂ ಈ ಶಿಲ್ಪಗಳನ್ನು ಕೆತ್ತಿಸಿದ್ದಾರೆ. ಮಾರುತಿಪೀಠದ ಅವಧೂತ ಬಿಂದುಮಾಧವ ಶರ್ಮ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ, ಉಡುಪಿಯ ಶಿಲ್ಪಿ ರಾಜಶೇಖರ್‌ ಹೆಬ್ಬಾರ್‌ ಮತ್ತವರ 40 ಮಂದಿಯ ತಂಡದೊಂದಿಗೆ ಸುಮಾರು 59 ಅಡಿ ಎತ್ತರವಿರುವ 21 ಅಡಿ ಅಗಲವಿರುವ, ಸುಮಾರು 75 ಸಾವಿರ ಕೆ.ಜಿ ತೂಕವಿರುವ ಈ ರಥವನ್ನು ಸಾಗುವಾನಿ, ಹೊನ್ನೆ ಮತ್ತು ಕಿರಾಲುಬೋಗಿ ಮರಗಳನ್ನು ಉಪಯೋಗಿಸಿ ಸರಿಸುಮಾರು ₹ 3.5 ಕೋಟಿ ವೆಚ್ಚದಲ್ಲಿ ತಯಾರಿಸಲಾಗಿದೆ.

ನಮ್ಮನ್ನು ನಾದಲೋಕಕ್ಕೆ ಕರೆದೊಯ್ದು ನಮ್ಮಲ್ಲಿ ಕರ್ಣಾನಂದ, ಆತ್ಮಾನಂದ, ಬ್ರಹ್ಮಾನಂದ, ಜ್ಞಾನಾನಂದವನ್ನುಂಟು ಮಾಡುವ ಎಲ್ಲರನ್ನೂ ಕೂಡ ರಥದಲ್ಲಿ ತೋರಿಸಲಾಗಿದೆ. ಮನುಷ್ಯನಲ್ಲಿ ದೈವತ್ವವನ್ನು ಗುರುತಿಸಿ, ಮುಂದಿನ ಪೀಳಿಗೆಗೆ ಅವರ ಸಾಧನೆಯನ್ನು ತೋರಿಸಬೇಕೆನ್ನುವ ಉದ್ದೇಶದಿಂದ ಈ ರಥವನ್ನು ನಿರ್ಮಾಣ ಮಾಡಲಾಗಿದೆ. ಇದನ್ನು ಲಕ್ಷ್ಮಿನಾರಾಯಣ ಸ್ವಾಮಿಗೆ ಅರ್ಪಿಸಿದ್ದರೂ, ದೇಶದ ಮಹಾನ್ ನಾಯಕರ ಶಿಲ್ಪಗಳು ಇದರಲ್ಲಿ ಅಡಕವಾಗಿರುವ ಕಾರಣ ಇದನ್ನು ಭಾರತಾಂಬೆ ರಥ ಅಥವಾ ಭಾರತ ಮಾತಾ ರಥ ಎಂದೂ ಕರೆಯುವುದೇ ಸೂಕ್ತವೆನಿಸುತ್ತದೆ.

ಈ ರಥದಲ್ಲಿ ಒಟ್ಟು 4 ದ್ವಾರಗಳಿದ್ದು, ಮೊದಲನೆಯದರಲ್ಲಿ ಲಕ್ಷ್ಮೀನಾರಾಯಣ, ಎರಡನೆಯದರಲ್ಲಿ ಭಾರತಾಂಬೆ, ಮೂರನೆಯದರಲ್ಲಿ ಸೀತಾ,ರಾಮ, ಲಕ್ಷ್ಮಣ, ಆಂಜನೇಯ ಹಾಗೂ ನಾಲ್ಕನೆಯದರಲ್ಲಿ ಬಿಂದು ಮಾಧವಶರ್ಮ ಅವಧೂತರ ವಿಗ್ರಹಗಳಿವೆ. ಈ ರಥದಲ್ಲಿ ಒಂದು ಪ್ರಧಾನ ಕಳಶದ ಜೊತೆ, 33 ಉಪ ಕಳಶ, 2 ಗುಮ್ಮಟ, 12 ಆನೆಗಳು, 24 ಕಂಬಗಳು, 365 ಗಂಟೆಗಳು ಇದ್ದು ಈ ಬೃಹತ್ ರಥವನ್ನು ಎಳೆಯಲು ಸರಿ ಸುಮಾರು 1 ಸಾವಿರ ಜನರ ಸಹಾಯವಿದೆ. ಪ್ರತೀ ವರ್ಷ ಚೈತ್ರ ಮಾಸದಲ್ಲಿ ಈ ಊರಿನಲ್ಲಿ ಲಕ್ಷ್ಮೀ ನಾರಾಯಣ ದೇವಾಲಯ ಮತ್ತು ವೀರ ಪ್ರತಾಪ ಆಂಜನೇಯ ದೇವಾಲಯಗಳ ಬ್ರಹ್ಮ ರಥೋತ್ಸವ ಒಟ್ಟಾಗಿ ನಡೆಸುವುದು ಇಲ್ಲಿನ ವಿಶೇಷವಾಗಿದೆ.

ಈ ದೇವಾಲಯದಲ್ಲಿ ರಾಮಸೇತುವಿನಲ್ಲಿ ಬಳಸಲಾಗಿರುವ ತೇಲುವ ಕಲ್ಲನ್ನು ಒಂದು ಅಗಲವಾದ ಪಾತ್ರೆಯ ನೀರನಲ್ಲಿ ಇಟ್ಟಿದ್ದು, ಸದಾ ಕಾಲವೂ ತೇಲುತ್ತಾ ಇರುವ ಈ ಕಲ್ಲನ್ನು ಪ್ರತಿಯೊಬ್ಬ ಭಕ್ತರಿಗೂ ಮುಟ್ಟಿ ನೋಡಿ ಆನಂದವನ್ನು ಅನುಭವಿಸುವ ಭಾಗ್ಯವನ್ನು ಒದಗಿಸಲಾಗಿದೆ.

ಸದಾ ಕಾಲವೂ ಭಕ್ತರೊಂದಿಗೆ ಕಾಲ ಕಳೆಯುತ್ತಿದ್ದ ಬಿಂಧು ಮಾಧವ ಅವಧೂತರು ತಮ್ಮ 75ನೇ ವಯಸ್ಸಿನಲ್ಲಿ ನವೆಂಬರ್ 27 2020ರಂದು ಇಹಲೋಕವನ್ನು ತ್ಯಜಿಸಿದಾಗ ಕರೋನ ಮಹಾ ಮಾರಿ ಇದ್ದ ಕಾರಣ ಸರಳವಾಗಿ ನಡೆದ ಅವರ ಅಂತ್ಯಕ್ರಿಯೆಯಲ್ಲಿ ಅಂತಿಮ ದರ್ಶನ ಪಡೆಯದೇ ಇದ್ದದ್ದಕ್ಕಾಗಿ ದುಃಖಿಸಿದ ಭಕ್ತ ಸಮೂಹಕ್ಕೆ ಕಡಿಮೇ ಏನಿಲ್ಲ. ಅದೇ ರೀತೀಯಲ್ಲಿ 2021 ರಲ್ಲಿಯೂ ಕರೋನಾ ಲಾಕ್ಡೌನ್ ಮುಂದುವರೆದು ಈಗ 2022 ರಂದು ಸ್ವಲ್ಪ ಕಡಿಮೆ ಆಗಿರುವ ಕಾರಣ, ಸ್ವಾಮಿಗಳ ಹೆಸರಿನಲ್ಲಿ ಧಾರ್ಮಿಕ ಟ್ರಸ್ಟ್ ನಿರ್ಮಾಣ ಮಾಡಿಕೊಂಡು 28.4.2022 ಗುರುವಾರದಂದು ಅವಧೂತರ ಅಮೃತಶಿಲೆಯ ಮೂರ್ತಿಯನ್ನು ಲೋಕಾರ್ಪಣೆ ಮಾಡಿರುವುದಲ್ಲದೇ, ಏಪ್ರಿಲ್ 30 ರಂದು ಅವರ ಜಯಂತಿ ಮಹೋತ್ಸವದ ಜೊತೆ ಮೇ 2, ಕೋಟಿ ಗಾಯತ್ರಿ ಜಪ ಸಾಂಗತ ಹೋಮದ ಪೂರ್ಣಾಹುತಿಯನ್ನು ಮಾಡುವ ಮೂಲಕ ಬಹಳ ಅದ್ದೂರಿಯಿಂದ ಗುರುಗವಂದನೆಯನ್ನು ಅವರ ಭಕ್ತಾದಿಗಳು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕಾಗಿ ಈಗಾಗಲೇ ದೇಶವಿದೇಶಗಳಿಂದ ಸಾವಿರಾರು ಭಕ್ತಾದಿಗಳು ಶ್ರೀಕ್ಷೇತ್ರಕ್ಕೆ ಆಗಮಿಸಿದ್ದು ಇನ್ನೂ ಸಹಸ್ರಾರು ಭಕ್ತಾದಿಗಳು ಹೋಮದ ಕಡೆಯ ದಿನ ಬರುವ ನಿರೀಕ್ಷೆ ಇದೆ.

WhatsApp Image 2022-04-29 at 3.12.12 PMಚಿರಂಜೀವಿ ಆಂಜನೇಯನ ಪರಮಭಕ್ತರಾಗಿದ್ದ, ಭಕ್ತರ ಪಾಲಿಗೆ ಸಾಕ್ಷಾತ್ ಆಂಜನೇಯ ಸ್ವರೂಪಿ ಮತ್ತು ನಡೆದಾಡುವ ಮಾರುತಿ ಎಂದೇ ಖ್ಯಾತರಾಗಿದ್ದ ನಾವು ದೇವರನ್ನು ಮನುಷ್ಯರಲ್ಲೇ ಕಾಣಬೇಕು. ಸಾಯುವರಾರೂ ದೇವರಾಗುವುದಿಲ್ಲ. ಸತ್ತು ಬದುಕಿದವನು ಮಾತ್ರ ದೇವರಾಗುತ್ತಾನೆ ಎಂದು ಹೇಳುತ್ತಿದ್ದ ಶ್ರೀ ಬಿಂಧು ಮಾಧವ ಶರ್ಮ ಅವಧೂತರು ಇಂದು ಬೆಲಗೂರಿನ ಶ್ರೀ ಕ್ಷೇತ್ರದಲ್ಲಿ ಭೌತಿಕವಾಗಿ ಇಲ್ಲದಿದ್ದರೂ, ಭಾವನಾತ್ಮಕವಾಗಿ ಶ್ರೀಕ್ಷೇತ್ರಕ್ಕೆ ಬರುವ ಎಲ್ಲಾ ಭಕ್ತರ ಭವರೋಗಗಳನ್ನು ನಿವಾರಿಸಲು ಸದಾಕಾಲವೂ ಇರುವುದರಿಂದ ಸ್ವಲ್ಪ ಸಮಯ ಮಾಡಿಕೊಂಡು ಬೆಂಗಳೂರಿನಿಂದ ಅರಸೀಕೆರೆಗೆ ಬಸ್ ಇಲ್ಲವೇ ರೈಲು ಮುಖಾಂತರ ತಲುಪಿ ಅಲ್ಲಿಂದ 48.4 ಕಿ.ಮೀ. ದೂರದಲ್ಲಿರುವ ಬೆಲಗೂರಿಗೆ ಬಂದು ಅವಧೂತರ ಕೃಪೆಗೆ ಪಾತ್ರರಾಗ್ತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ

ಮನೆಯೇ ಮೊದಲ ಪಾಠ ಶಾಲೆ, ತಾಯಿ ತಂದೆಯರೇ ಮೊದಲ ಗುರುಗಳು

ನಾವೆಲ್ಲರೂ ಚಿಕ್ಕವಯಸ್ಸಿನಿಂದಲೂ ಕುಲವಧು ಚಿತ್ರದಲ್ಲಿ, ಪ್ರಬುದ್ಧ ನಟಿ ಲೀಲಾವತಿಯವರ ಅಭಿನಯಿಸಿರುವ ದ. ರಾ. ಬೇಂದ್ರೆಯವರ ಈ ಕವನವನ್ನು ಕೇಳಿಯೇ ದೊಡ್ಡವರಾಗಿದ್ದೇವೆ.
ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ |
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ||

ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೇ ಒಂದು ಜನ್ಮದಲಿ ಒಂದೇ ಬಾಲ್ಯ, ಒಂದೇ ಹರೆಯ ನಮಗದಷ್ಟೇ ಏತಕೋ. ||

ಈ ಕವನದಲ್ಲಿ ಕವಿಗಳು ಪ್ರತೀ ಫಾಲ್ಗುಣ ಮಾಸದಲ್ಲಿ ಪ್ರಕೃತಿಯಲ್ಲಿ ಗಿಡಮರಗಳ ಎಲೆಗಳೆಲ್ಲಾ ಉದುರಿ ಹೋಗಿ, ಮತ್ತೆ ಚೈತ್ರ ಮಾಸದಲ್ಲಿ ಚಿಗುರುವ ಮೂಲಕ ನಿರಂತರವಾಗಿ ಹೊಸಾ ಜನ್ಮವನ್ನು ಪಡೆಯುತ್ತಲೇ ಇರುತ್ತದೆ. ಆದರೆ ಮನುಷ್ಯರಿಗೆ ಮಾತ್ರ ಒಂದೇ ಜನ್ಮ, ಒಂದೇ ಬಾಲ್ಯ, ಒಂದೇ ಹರೆಯ ಎಂದು ಬೇಸರ ವ್ಯಕ್ತ ಪಡಿಸುತ್ತಾರೆ. ಹಾಗಾಗಿ ನಮ್ಮ ಜೀವನದಲ್ಲಿ ಗತಿಸಿ ಹೋದ ಪ್ರತೀ ಕ್ಷಣಗಳೂ ಅಮೂಲ್ಯವೇ ಆಗಿರುವ ಕಾರಣ ಪ್ರತಿಯೊಂದು ಸುಂದರ ಕ್ಷಣಗಳನ್ನೂ ಆಹ್ವಾದಿಸಬೇಕು ಎನ್ನುವುದೇ ಕವಿಗಳ ಆಶಯವಾಗಿದೆ.

kids6ಅದರಲ್ಲೂ ನಮ್ಮ ಬಾಲ್ಯದ ದಿನಗಳಂತೂ ನಮ್ಮ ಜೀವನದಲ್ಲಿ ಅತ್ಯಮೂಲ್ಯವೇ ಹೌದು. ಒಮ್ಮೆ ಬಾಲ್ಯ ಕಳೆದು ಪ್ರೌಢಾವಸ್ಥೆಗೆ ಬರುತ್ತಿದ್ದಂತೆಯೇ ಆ ಬಾಲ್ಯದ ಮುಗ್ಧ ಮನಸ್ಸು, ಭಾವನೆಗಳು ಎಲ್ಲವೂ ಬದಲಾಗಿ ಎಲ್ಲವೂ ವ್ಯಾವಹಾರಿಕವಾಗಿ ಬಿಡುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಹಾಗಾಗಿ ಬಾಲ್ಯದಲ್ಲಿ ಆದಷ್ಟೂ ಮನೆಯಲ್ಲಿಯೇ ಇದ್ದು ಅಪ್ಪಾ, ಅಮ್ಮಾ, ಅಣ್ಣಾ, ತಂಗಿ, ಅಜ್ಜ, ಅಜ್ಜಿ ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆ ಮಾವ, ನೆರೆ ಹೊರೆಯವರೊಂದಿಗೆ ಆಟವಾಡುತ್ತಾ, ನೋಡಿದ್ದನ್ನು ಕೇಳಿದ್ದನ್ನು ಅನುಕರಿಸುತ್ತಾ, ಮುದ್ದು ಮುದ್ದಾಗಿ ಮಾತನಾಡುತ್ತಾ, ಲೋಕ ಜ್ಞಾನವನ್ನು ಗ್ರಹಿಸುತ್ತಾ ಹೋಗುವುದು ನಿಜಕ್ಕೂ ಅನನ್ಯ ಮತ್ತು ಅದ್ಭುತವೇ ಸರಿ.

kids5ಚಿಕ್ಕಮಕ್ಕಳ ಗ್ರಹಿಕೆ ಬಹಳ ಚೆನ್ನಾಗಿ ಇರುತ್ತದೆ ಮತ್ತು ಚಿಕ್ಕವಯಸ್ಸಿನಲ್ಲಿ ಕಲಿತದ್ದು ಎಷ್ಟು ವರ್ಷಗಳ ಕಾಲವೂ ಮರೆಯುವುದಿಲ್ಲ. ಅದೇ ರೀತಿ ಸಣ್ಣ ವಯಸ್ಸಿನಲ್ಲಿ ಮಕ್ಕಳು ಹೆಚ್ಚು ಹೆಚ್ಚು ವಿಷಯಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಕಲಿಯುತ್ತಾರೆ ಎನ್ನುವುದಕ್ಕಾಗಿಯೇ ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಸಣ್ಣ ಸಣ್ಣ ಮಕ್ಕಳಿಗೆ ಶ್ಲೋಕಗಳು, ದೇವರ ನಾಮಗಳು, ಭಗವದ್ಗೀತೆ, ವಿವಿಧ ದೇವರುಗಳ ಸುಪ್ರಭಾತಗಳ ಜೊತೆಗೆ ರಾಮಾಯಣ ಮಹಾಭಾರತ, ಶ್ರೀ ಕೃಷ್ಣ, ಬಾಲ ಹನುಮಾನ್, ಗಣೇಶನ ಕತೆಗಳನ್ನು ಮಕ್ಕಳಿಗೆ ತಿಳಿಸಿ ಕೊಡುವುದು ರೂಢಿಯಲ್ಲಿದೆ. . ಆಷ್ಟು ಸಣ್ಣ ವಯಸ್ಸಿನಲ್ಲಿ ತೊದಲು ನುಡಿಗಳಲ್ಲಿ ಅ ಪುಟ್ಟ ಪುಟ್ಟ ಮಕ್ಕಳು ಹಾಡು, ಸಂಗೀತ, ಶ್ಲೋಕಗಳನ್ನು ಹೇಳುವುದನ್ನು ಅದಕ್ಕೆ ಸರಿಯಾಗಿ ನೃತ್ಯ ಇಲ್ಲವೇ ಅಭಿನಯಿಸುವುದನ್ನು ವರ್ಣಿಸುವುದಕ್ಕಿಂತಲೂ ನೋಡುವುದಕ್ಕೇ ಮಹದಾನಂದ. ಹಾಗಾಗಿಯೇ ಹಿಂದಿನ ಕಾಲದಲ್ಲಿ ಮಕ್ಕಳು ಏಳೆಂಟು ವರ್ಷಗಳ ಕಾಲ ಅಮ್ಮನ ಎದೆ ಹಾಲನ್ನೇ ಕುಡಿಯುತ್ತಾ ಅಮ್ಮನ ಸೆರಗನ್ನು ಹಿಡಿದುಕೊಂಡು ಅಮ್ಮನ ಸುತ್ತಮುತ್ತಲೇ ಗಿರಕಿ ಹೊಡೆಯುತ್ತಲೇ ಬಹಳಷ್ಟು ವಿಷಯಗಳನ್ನು ಕಲಿಯುತ್ತಿದ್ದರಿಂದಲೇ, ಮನೆಯೇ ಮೊದಲ ಪಾಠ ಶಾಲೆ, ತಾಯಿ ತಂದೆಯರೇ ಮೊದಲ ಗುರುಗಳು ಎಂಬ ಗಾದೆ ಮಾತು ರೂಢಿಗೆ ಬಂದಿತು.

ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಇಂದಿನ ದುಬಾರಿ ಜೀವನವನ್ನು ಸರಿದೂಗಿಸಲು ತಂದೆ ಮತ್ತು ತಾಯಿ ಇಬ್ಬರೂ ಕೆಲಸಕ್ಕೆ ಹೋಗುವ ಕಾರಣ, ಮಕ್ಕಳಿಗೆ 2 ವರ್ಷ ತುಂಬುತ್ತಿದ್ದಂತೆಯೇ ಹತ್ತಿರದ ಪ್ಲೇಹೋಮ್ ಇಲ್ಲವೇ ಶಿಶುವಿಹಾರ (ನರ್ಸರಿ)ಕ್ಕೆ ಸೇರಿಸಿ ಮಕ್ಕಳ ಕಲಿಕೆಯ ಜವಾಬ್ಧಾರಿಯೆಲ್ಲಾ ಆ ಶಾಲೆಯ ಶಿಕ್ಷಕ/ಶಿಕ್ಷಕಿಯರದ್ದೇ ಆಗಿದೆ ಎಂದು ಭಾವಿಸಿರುವವರೇ ಹೆಚ್ಚಾಗಿದ್ದಾರೆ. ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ತಾಯಿಯ ಆಶ್ರಯದಿಂದ ವಂಚಿತವಾದ ಆ ಮಕ್ಕಳು ಸರಿಯಾದ ರೀತಿಯಲ್ಲಿ ಬಾಲ್ಯವನ್ನು ಸವಿಯಲಾಗದೇ 2-3 ವಯಸ್ಸಿನಲ್ಲೇ ಕನ್ನಡ, ಇಂಗ್ಲೀಷ್ ಹಿಂದಿ ಹೀಗೆ ಹತ್ತು ಹಲವಾರು ಭಾಷೆಗಳನ್ನು ಓದಲು ಬರೆಯಲು ಕಲಿಯುವುದರ ಜೊತೆಗೆ ಗಣಿತ, ವಿಜ್ಞಾನ ಮತ್ತು ಸಮಾಜ ಶಾಸ್ತ್ರಗಳ ಪರಿಚಯವನ್ನು ಮಾಡಿಕೊಳ್ಳುವ ಮೂಲಕ ಅನಗತ್ಯವಾಗಿ ತಮ್ಮ ಬಾಲ್ಯದ ಸವಿಯನ್ನೇ ಅನುಭವಿಸದೇ ಹೋಗುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇನ್ನು ಮೊಬೈಲ್ ಮತ್ತು ಕಂಪ್ಯೂಟರ್ ಗೇಮ್ ಗಳಿಂದಾಗಿ ಮಕ್ಕಳು ಸ್ವಚ್ಚಂದವಾಗಿ ಆಟದ ಮೈದಾನಗಳಲ್ಲಿ ಆಡುವುದೇ ಇಲ್ಲದ ಕಾರಣ ಸಣ್ಣ ಸಣ್ಣ ವಯಸ್ಸಿಗೇ ನಾನಾ ಮಕ್ಕಳು ಸ್ಥೂಲಕಾಯರಾಗಿ ಕಣ್ಣಿನ ವಿವಿಧ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.

kid2ಅಷ್ಟು ಸಣ್ಣ ವಯಸ್ಸಿನಲ್ಲೇ ತಮ್ಮ ವಯಸ್ಸಿಗೂ ಮೀರಿದ ಶಾಲಾ ಪಠ್ಯಪುಸ್ತಕಗಳ ಹೊರೆಯನ್ನು ಹೊತ್ತು ಕೊಂಡು ಹೋಗುವ ಮಕ್ಕಳ ಯಾತನೆಯನ್ನೇ ಮನಗಂಡ ಸುಪ್ರಿಂ ಕೋರ್ಟ್ ಇತ್ತೀಚೆಗೆ ಮಕ್ಕಳ ಶಾಲಾ ಪ್ರವೇಶ ಕುರಿತಂತೆ ಅತ್ಯಂತ ಮಹತ್ವದ ಅಭಿಪ್ರಾಯವೊಂದನ್ನು ದಾಖಲಿಸಿದೆ. ಸದ್ಯಕ್ಕೆ ಕೇಂದ್ರೀಯ ವಿದ್ಯಾಲಯಗಳಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ 6 ವರ್ಷ ವಯಸ್ಸಿನ ಮಾನದಂಡ ರೂಪಿಸಿರುವುದನ್ನೇ ಪ್ರಶ್ನಿಸಿ ಪೋಷಕರೊಬ್ಬರು ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ, ಪಾಲಕರು ತಮ್ಮ ಮಕ್ಕಳಿಗೆ 2 ವರ್ಷ ತುಂಬಿದ ಕೂಡಲೇ ಶಾಲೆಗೆ ಕಳಿಸಬೇಕೆಂದು ಬಯಸುವುದು ನಿಜಕ್ಕೂ ಅವೈಜ್ಞಾನಿಕ. ಈ ರೀತಿ ಮಾಡುವುದರಿಂದ ಅದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನ್ಯಾಯಮೂರ್ತಿಗಳಾದ ಶ್ರೀ ಸಂಜಯ್ ಕಿಶನ್ ಕೌಲ್ ಮತ್ತು ಶ್ರೀ ಎಂ.ಎಂ. ಸುಂದರೇಶ್ ಅವರಿದ್ದ ಪೀಠ ಪ್ರತಿಕ್ರಿಯಿಸಿರುವುದು ಅತ್ಯಂತ ಸಮಂಜಸವಾಗಿದೆ.

ಈ ಹಿಂದಿನಿಂದಲೂ ರೂಢಿಯ ಪ್ರಕಾರ 1ನೇ ತರಗತಿ ಪ್ರವೇಶಕ್ಕೆ ವಯೋಮಿತಿ 5 ವರ್ಷವಾಗಿದ್ದರೂ, ಮಕ್ಕಳನ್ನು ಶಾಲೆಗೆ ಕಳುಹಿಸಲು ಸರಿಯಾದ ವಯಸ್ಸು ಯಾವುದು ಎಂಬ ಬಗ್ಗೆ ಜಿಜ್ಞಾಸೆ ಇದ್ದ ಕಾರಣ, ವಿಚಾರಣೆಯ ವೇಳೆಯಲ್ಲಿ ನ್ಯಾಯಾಧೀಶರು ಸುಧೀರ್ಘವಾದ ಅಧ್ಯಯನ ನಡೆಸಿ ಮಕ್ಕಳನ್ನು 6 ವರ್ಷಕ್ಕಿಂಗಲೂ ಕಡಿಮೆ ವಯಸ್ಸಿನಲ್ಲಿ ಶಾಲೆಗೆ ಕಳುಹಿಸುವುದರಿಂದ ಮಕ್ಕಳ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರಬಹುದು ಎಂಬ ಸಲಹೆಯನ್ನು ನೀಡಿದೆ.

kid1ಅತ್ಯಂತ ವೇಗದಲ್ಲಿ ಹೋಗುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಅನೇಕ ಪೋಷಕರಿಗೆ ತಮ್ಮ ಮಕ್ಕಳು ಅತ್ಯಂತ ಬೇಗ ದೊಡ್ಡವರಾಗ ಬೇಕು ಅದರ ಜೊತೆಗೆ ತಾವು ಏನೇನು ಕಲಿತಿಲ್ಲವೋ ಅವೆಲ್ಲವನ್ನೂ ತಮ್ಮ ಮಕ್ಕಳು ಕಲಿತು ಕೊಳ್ಳಲೇ ಬೇಕು ಎಂಬ ಧಾವಂತದಿಂದಾಗಿ ಅನೇಕ ಪಾಲಕರು ತಮ್ಮ ಮಕ್ಕಳನ್ನು ಕೇವಲ 2 ವರ್ಷ ತುಂಬಿದಾಗಲೇ ನಾನಾ ಬಗೆಯ ಶಾಲೆಗೆ ಕಳುಹಿಸಿ ಆ ಮಕ್ಕಳ ಮೇಲೆ ಬಲವಂತದ ಮಾಘಸ್ನಾನ ಮಾಡಿಸುತ್ತಿರುವುದು ನಿಜಕ್ಕೂ ಆಘಾತಕಾರಿಯಾದ ವಿಷಯವಾಗಿದೆ.

kids8ಇತ್ತೀಚೆಗೆ ಹತ್ತು ಹಲವಾರು ಟಿವಿ ಛಾನೆಲ್ಲುಗಳಲ್ಲಿ ಮಕ್ಕಳ ನೃತ್ಯ, ಸಂಗೀತ ಮತ್ತು ನಾಟಕಗಳ ರಿಯಾಲಿಟಿ ಶೋಗಳು ಬಂದ ನಂತರವಂತೂ ಬಹುತೇಕ ಪಾಲಕರು ತಮ್ಮ ಮಕ್ಕಳು ಆ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕೆಂದು ಬಯಸುತ್ತಾರೆ. ಹಾಗಾಗಿ ಸಣ್ಣ ಸಣ್ಣ ವಯಸ್ಸಿನ ಮಕ್ಕಳ ಬಾಯಲ್ಲಿ ದೊಡ್ಡ ದೊಡ್ಡ ಮಾತುಗಳನ್ನು ಆಡಿಸುತ್ತಾ ವಿಕೃತ ಸಂತೋಷ ಪಡುತ್ತಾರೆ. ಆದರೆ ಪೋಷಕರ ಈ ರೀತಿಯ ಪ್ರಯತ್ನ ನಿಜಕ್ಕೂ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಗಮನನಿಸದೇ ಇರುವುದು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ.

kids4ಇಂದಿನ ಬಹುತೇಕ ಪಾಲಕರು ಅಯ್ಯೋ ಕಾಲ ಕೆಟ್ಟು ಹೋಯ್ತು ರೀ.. ಈಗಿನ ಮಕ್ಕಳು ನಮ್ಮ ರೀತಿ ಇಲ್ಲಾ ಎಂಬ ಮಾತನ್ನು ಪದೇ ಪದೇ ಹೇಳುವುದನ್ನು ಕೇಳುತ್ತಲೇ ಇರುತ್ತೇವೆ. ಆದರೆ ಸೂಕ್ಷ್ಮವಾಗಿ ಯೋಚಿಸಿದಲ್ಲಿ ಇಲ್ಲಿ ಕಾಲವೂ ಕೆಟ್ಟಿಲ್ಲ ಮಕ್ಕಳದ್ದು ತಪ್ಪಿಲ್ಲ. ತಪ್ಪೆಲ್ಲವೂ ನಮ್ಮದೇ ಆಗಿದೆ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಹೀಗಾಗಿ ತಂದೆ-ತಾಯಿಯರೇ ಮೊದಲ ಗುರು. ಸಣ್ಣ ಮಕ್ಕಳು ತಮ್ಮ ತಂದೆ ತಾಯಿಯರನ್ಣೇ ನೋಡಿ ಅನುಸರಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಮನೆಯಲ್ಲಿ ಏನೇನು ಹೇಳಿಕೊಡಬೇಕು? ಯಾವ ರೀತಿಯ ಸಂಸ್ಕಾರ ನೀಡಬೇಕು? ಅವರನ್ನು ಹೇಗೆ ಬೆಳೆಸಬೇಕು? ಎಂಬುದನ್ನು ಮೊದಲು ಹೆತ್ತವರು ಯೋಚಿಸಿ, ಮಕ್ಕಳ ತಪ್ಪುಗಳನ್ನು ಸಣ್ಣ ವಯಸ್ಸಿನಲ್ಲೇ ಸೂಕ್ಷ್ಮವಾಗಿ ತಿದ್ದಿ ಉತ್ತಮ ನಡತೆ ಕಲಿಸಿಕೊಟ್ಟರೆ ಮುಂದೆ ಅವರು ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಿದೆ. ನಮ್ಮ ಪೋಷಕರು ಆ ರೀತಿ ಕಲಿಸಿದ್ದರಿಂದಲೇ ನಾವು ರೀತಿಯಾಗಿದ್ದೇವೆ. ಆದರೆ ನಾವೇ ನಮ್ಮ ಮಕ್ಕಳಿಗೆ ಆ ರೀತಿಯಲ್ಲಿ ಕಲಿಸದ ಕಾರಣ ನಮ್ಮ ಮಕ್ಕಳಿಗೆ ನಮ್ಮ ಆಚಾರ, ವಿಚಾರ, ಸಂಪ್ರದಾಯಗಳ ಪರಿಚಯವೇ ಇಲ್ಲವಾಗಿದೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ.

kids7ವಿದ್ಯಾ ದದಾತಿ ವಿನಯಂ, ವಿನಯಾದ್ಯಾತಿ ಪಾತ್ರತಾಂ।
ಪಾತ್ರತ್ವಾದ್ಧನ ಮಾಪ್ನೋತಿ, ಧನಾದ್ಧರ್ಮಂ ತತಃ ಸುಖಂ।। ಎಂಬ ಶ್ಲೋಕವನ್ನು ನಾವೆಲ್ಲರೂ ಕೇಳಿಯೇ ಇರುತ್ತೇವೆ. ನಾವು ಕಲಿಯುವ ವಿದ್ಯೆಯಿಂದ ನಮಗೆ ವಿನಯ ದೊರೆಯುತ್ತದೆ, ಆ ರೀತಿಯಾದ ವಿನಯದಿಂದ ಯೋಗ್ಯತೆ ದೊರೆತು, ಆ ಯೋಗ್ಯತೆಯಿಂದ ವೃತ್ತಿಪರನಾಗಿ ಹಣ ಸಂಪಾದನೆ ಮಾಡಿ, ಆ ರೀತಿ ಗಳಿಸಿದ ಹಣದಿಂದ ಧರ್ಮಕಾರ್ಯಗಳನ್ನು ಮಾಡುವುದೇ ನಿಜವಾದ ಸುಖ ಎಂಬುದಾಗಿದೆ. ನಿಜವಾದ ಸುಖಕ್ಕೆ ವಿದ್ಯೆಯೇ ಮೂಲ ಕಾರಣ ಎಂದು ಈ ಶ್ಲೋಕ ಹೇಳುತ್ತದಾದರೂ, ಪ್ರಸಕ್ತ ಸಂದರ್ಭದಲ್ಲಿ ವಿದ್ಯೆಗಿಂತಲೂ ವಿವೇಕವಿದ್ದಲ್ಲಿ ಎಲ್ಲವನ್ನೂ ಸಾಧ್ಯಗೊಳಿಸಬಹುದಾಗಿದೆ ಎನ್ನುವುದೇ ಅತ್ಯಂತ ಸೂಕ್ತವಾಗಿದೆ. ಹಾಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ಶಾಲೆಗೆ ಸೇರಿಸಿ ವಿದ್ಯೆಯನ್ನು ಬಲವಂತವಾಗಿ ಅವರ ಮೇಲೆ ಹೇರುವ ಬದಲು ಮನೆಯಲ್ಲಿಯೇ ಮಕ್ಕಳನ್ನು ವಿವೇಕವಂತರಾಗಿ ಮಾಡುವ ಮೂಲಕ ಮನೆಗೂ ಮತ್ತು ನಾಡಿಗೂ ಉತ್ತಮ ನಾಗರೀಕರನ್ನಾಗಿ ಮಾಡಬಹುದಾಗಿದೆ. ಏಕೆಂದರೆ, ಇಂದಿನ ಮಕ್ಕಳೇ, ದೇಶದ ನಾಳಿನ  ಪ್ರಭುದ್ಧ ಪ್ರಜೆಗಳು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ವೀರ ಕುನ್ವರ್ ಸಿಂಗ್

ಬ್ರಿಟೀಷರ ಸೇನೆಯಲ್ಲಿ ಸಾಮಾನ್ಯ ಸೈನಿಕನಾಗಿದ್ದ ಮಂಗಲ್ ಪಾಂಡೆ 1857ರಲ್ಲಿ ಬ್ರಿಟೀಷ್ ಸೈನ್ಯದ ವಿರುದ್ಧವೇ ತಿರುಗಿ ಬಿದ್ದು ನಡೆಸಿದ ಹೋರಾಟವನ್ನು ಬ್ರಿಟೀಷರು ಸಿಪಾಯಿದಂಗೆ ಎಂದು ದಾಖಲಿಸಿದರೆ, ಭಾರತದ ನಿಜವಾದ ಇತಿಹಾಸಕಾರರು ಅದನ್ನು ಪ್ರಥಮ ಸ್ವಾತ್ರಂತ್ರ್ಯ ಸಂಗ್ರಾಮ ಎಂದೇ ಹೆಮ್ಮೆಯಿಂದ ಕರೆಯುತ್ತಾರೆ. ಮಂಗಲ್ ಪಾಂಡೆ ಹತ್ತಿಸಿದ ಸ್ವಾತ್ರಂತ್ರ್ಯದ ಕಿಚ್ಚನ್ನು ಬಿಹಾರ್ ಪ್ರಾಂತ್ಯದಲ್ಲಿ ಪ್ರಜ್ವಲಿಸುವಂತೆ ಮಾಡಿದ ಕೀರ್ತಿ ಪ್ರಸ್ತುತ ಭಾರತದ ಬಿಹಾರದ ಭೋಜ್‌ಪುರ ಜಿಲ್ಲೆಯ ಭಾಗವಾಗಿರುವ ಜಗದೀಸ್‌ಪುರದ ಪರ್ಮಾರ್ ರಜಪೂತರ ಉಜ್ಜೈನಿಯಾ ಕುಲದ ಕುಟುಂಬಕ್ಕೆ ಸೇರಿದ್ದ ವೀರ್ ಕುನ್ವರ್ ಸಿಂಗ್ ಅವರಿಗೆ ಸಲ್ಲುತ್ತದೆ. ತಮ್ಮ 80 ನೇ ವಯಸ್ಸಿನಲ್ಲಿ ಸಾಮಾನ್ಯ ಸೈನಿಕರ ಪಡೆಯನ್ನು ಮುನ್ನಡೆಸುತ್ತಾ, ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯವನ್ನು ಹಣ್ಣುಗಾಯಿ ನೀರು ಗಾಯಿ ಮಾಡಿದ್ದ ವೀರ ಕುನ್ವರ್ ಸಿಂಗ್ ಅವರ ಬಲಿದಾನ ದಿನವಾದ ಏಪ್ರಿಲ್ 26 ರಂದು ಅವರ ಸಂಸ್ಮರಣೆಯನ್ನು ಮಾಡುವುದು ಪ್ರತಿಯೊಬ್ಬ ಭಾರತೀಯರ ಅದ್ಯ ಕರ್ತವ್ಯವೇ ಆಗಿದೆ.

kanvar4ಏಪ್ರಿಲ್ 1777 ರಲ್ಲಿ ಪ್ರಸ್ತುತ ಬಿಹಾರದ ಭೋಜ್‌ಪುರ ಜಿಲ್ಲೆಗೆ ಸೇರಿರುವ ಜಗದೀಸ್‌ಪುರದಲ್ಲಿ ಮಹಾರಾಜ ಶಬ್ಜದಾ ಸಿಂಗ್ ಮತ್ತು ರಾಣಿ ಪಂಚ್ರತನ್ ದೇವಿಯವರಿಗೆ ಕುನ್ವರ್ ಸಿಂಗ್ ಜನಿಸುತ್ತಾರೆ. ಅವರ ತಂದೆಯವರೂ ಸಹಾ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದವರೇ ಆಗಿದ್ದರು. ಕುನ್ವರ್ ಅವರ ಎಲ್ಲಾ ಸಾಹಸಕ್ಕೆ ಅವರ ಸಹೋದರ ಬಾಬು ಅಮರ್ ಸಿಂಗ್ ಮತ್ತು ಅವರ ಸೈನ್ಯಧಿಕಾರಿಯಾಗಿದ್ದ ಕೃಷ್ಣ ಸಿಂಗ್ ಬೆಂಗಾವಲಾಗಿರುತ್ತಾರೆ. ಈ  ತ್ರಿಮೂರ್ತಿಗಳು ಸುಮಾರು ಒಂದು ವರ್ಷಗಳ ಕಾಲ ಬ್ರಿಟಿಷ್ ಪಡೆಗಳಿಗೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಛತ್ರಪತಿ ಶಿವಾಜಿ ಮಹಾರಾಜರಂತೆ ಗೆರಿಲ್ಲಾ ಮಾದರಿಯ ಯುದ್ಧದಲ್ಲಿ ಪರಿಣಿತಿ ಹೊಂದಿದ್ದ ಇರುವರು ಸಾಯುವವರೆಗೂ ಅಜೇಯರಾಗಿದ್ದು ಅವರ ತಂತ್ರ ಮತ್ತು ಪ್ರತಿತಂತ್ರಗಳು ಬ್ರಿಟಿಷರನ್ನು ಸದಾಕಾಲವೂ ಗೊಂದಲಕ್ಕೀಡು ಮಾಡಿದ್ದವು ಎಂದರೂ ಅತಿಶಯೋಕ್ತಿಯೇನಲ್ಲ.

ಶತ್ರುಗಳನ್ನು ಬಗ್ಗು ಬಡಿಯುವ ಮುನ್ನ ಅವರ ಶಕ್ತಿಯನ್ನು ಅರಿಯಲು ಅವರೊಂದಿಗೇ ಸ್ನೇಹ ಬೆಳಸಿ ಅದರ ಪ್ರತಿಫಲವಾಗಿ ಬ್ರಿಟಿಷ್ ಅವರಿಂದಲೇ ಮದ್ದುಗುಂಡು ಕಾರ್ಖಾನೆಯನ್ನೂ ಆರಂಭಿಸಿ ಅಲ್ಲಿ ತಯಾರಾಗುತ್ತಿದ್ದ ಮದ್ದು ಗುಂಡುಗಳನ್ನು ಬ್ರಿಟಿಷರಿಗೆ ಅನುಮಾನವೇ ಬಾರದಂತೆ ಅವರ ವಿರುದ್ದವೇ ಬಳಸಲು ಸ್ವತಂತ್ರ ಹೋರಾಟಗಾರರಿಗೆ ನೀಡುತ್ತಿರುತ್ತಾರೆ. 1857 ಜುಲೈ 25 ರಂದು ಬ್ರಿಟೀಷರ ವಿರುದ್ದ ತಮ್ಮದೇ ಸೈನ್ಯದೊಂದಿಗೆ ಹೋರಾಟಿ ಬ್ರಿಟಿಷರನ್ನು ಸೋಲಿಸಿ ಅವರ ಖಜಾನೆಯನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. ಕುನ್ವರ್ ಸಿಂಗ್ ವಿರುದ್ಧ ಹೋರಾಡಲು ಮೊದಲು ಕ್ಯಾಪ್ಟನ್ ಡನ್ ಬಾರ್ ಅವರ ನೇತೃತ್ವದಲ್ಲಿ ಸೈನ್ಯ ಬರುತ್ತಿರುವುದನ್ನು ತಿಳಿದ ಕುನ್ವರ್ ಅವರ ತಂಡ ಗಾಂಗೀ ಎಂಬಲ್ಲಿ ಡನಬಾರ್ ನ ಸಮೇತ ಇಡೀ ಬ್ರಿಟಿಷ್ ಸೇನೆಯನ್ನು ಕೊಂದು ಹಾಕಿದ್ದರಿಂದ ಹತಾಶರಾಗಿ ಮೇಜರ್ ಐಲ್ ಎಂಬುವನೊಂದಿಗೆ ಕಳುಹಿಸಿದ ದೊಡ್ಡ ಸೈನ್ಯದೊಂದಿಗೆ ಕುನ್ವರ್ ಸಿಂಹ ರ ಅತ್ಯಂತ ಚಿಕ್ಕ ಪಡೆ ಹೋರಾಡಲು ಅಸಮರ್ಥರಾಗಿ ಹಿಂದಿರುಗುತ್ತಾರೆ.

kanvar3ಕೆಲ ಕಾಲದ ನಂತರ ಅಲ್ಲಿನ ಅಲ್ಲಿನ ಸ್ಥಳೀಯ ಜಮೀನ್ದಾರರ ಬೆಂಬಲದ ಜೊತೆಗೆ ವಾರಣಾಸಿ ಮತ್ತು ಗಾಜಿಪುರದ ಸೈನ್ಯದ ನೆರವು ಪಡೆದು ತಮ್ಮ ನೆಚ್ಚಿನ ಹೋರಾಟಗಾರರಲ್ಲಿ ಸ್ಪೂರ್ತಿಯನ್ನು ತುಂಬಿ ಕೆಲವೇ ಕೆಲವು ದಿನಗಳಲ್ಲಿ ಬ್ರಿಟಿಷ್ ಸೈನ್ಯವನ್ನು ಸಂಪೂರ್ಣವಾಗಿ ಸೋಲಿಸುತ್ತಾರೆ. ಈ ಸೋಲಿನಿಂದ ಅವಮಾನಿತನಾದ ಗವರ್ನರ್‌ ಜನರಲ್‌ ಲಾರ್ಡ್ ಕ್ಯಾನಿಂಗ್, ಲಾರ್ಡ್ ಕೆಡ್ ನಾಯಕತ್ವದಲ್ಲಿ ಕಳುಹಿಸಿದ ಮತ್ತೊಂದು ದೊಡ್ಡ ಸೈನ್ಯವನ್ನೂ ಸಹಾ ತನ್ನ ಚಾಣಕ್ಷ ಯುದ್ದತಂತ್ರಗಳಿಂದ ಕುನ್ವರ್ ಸಿಂಗ್ ಸೋಲಿಸಿದಾಗ ಬ್ರಿಟಿಷ್ ಅಥಿಕಾರಿಗಳು ಅಕ್ಷರಶಃ ಹೈರಾಣಾಗುತ್ತಾರೆ. ಮರಳಿ ಯತ್ನವ ಮಾಡು ಎಂಬಂತೆ ಲುಗಾರ್ಡ್ ನಾಯಕತ್ವದಲ್ಲಿ ಅತಿ ದೋಡ್ಡ ಬ್ರಿಟಿಷ್ ಸೈನ್ಯ ಆಕ್ರಮಣಕ್ಕೆ ಸಿದ್ದವಾಗುತ್ತಿದ್ದದ್ದನ್ನು ತಿಳಿದ ಕುನ್ವರ್ ಸಿಂಹ ಈ ಮೊದಲೇ ಹೇಳಿದಂತೆ ಛತ್ರಪತಿ ಶಿವಾಜಿ ಮಹಾರಾಜರು ಪರಿಚಯಿಸಿದ ಗೆರಿಲ್ಲಾ ಯುದ್ಧ ತಂತ್ರಗಾರಿಕೆಯಂತೆ, ಚಾಣಕ್ಷ ತನದಿಂದ ಅವರ ಸೈನ್ಯದ ಗಮನವನ್ನು ಬೇಕೆ ಕಡೆಗೆ ಚದುರಿಸಿ, ಆಪ್ರದೇಶದಲ್ಲಿ ಯುದ್ಧವನ್ನು ಎದುರಿಸಲು ಕುನ್ವರ್ ಸಿಂಗ್ ಸೈನ್ಯವೇ ಇರದಿದ್ದದ್ದನ್ನು ಕಂಡು ಹೆದರಿ ಓಡಿ ಹೋಗಿರಬಹುದೆಂದು ಭಾವಿಸಿ ಯುದ್ದವನ್ನು ಗೆದ್ದವರಂತೆ ಸಂಭ್ರಮಿಸುತ್ತಿದ್ದಾಗ ಏಕಾ ಏಕಿ ಅವರ ಮೇಲೆ ಗೆರಿಲ್ಲಾ ರೀತಿಯಿಂದ ಧಾಳಿ ಅಂತಹ ದೊಡ್ಡ ಸೈನ್ಯವನ್ನು ಸುಲಭವಾಗಿ ಸೋಲಿಸಿ ಬಿಡುತ್ತಾರೆ. ಕುನ್ವರ್ ಸಿಂಹ ನನ್ನು ಮತ್ತು ಅವನ ಸಹೋದರ ಅಮರ್ ಸಿಂಗನನ್ನು ಜೀವಂತವಾಗಲೀ ಅಥವಾ ಮರಣೋತ್ತರವಾಗಲೀ ಹಿಡಿದು ಕೊಟ್ಟವರಿಗೆ ತಲಾ 25,000ರೂ ಮತ್ತು 5,000ರೂಗಳ ಬಹುಮಾನವನ್ನು ಕೊಡುತ್ತೇವೆ ಎಂದು ಅಂದಿನ ಬ್ರಿಟಿಷ್ ಸರ್ಕಾರವೇ ಘೋಷಿಸಿತ್ತು ಎಂದರೆ ಕನ್ವರ್ ಸಿಂಗ್ ಅವರ ತಂಡ ಬ್ರಿಟೀಷರಿಗೆ ಯಾವ ಪರಿಯಲ್ಲಿ ಕಾಟ ಕೊಟ್ಟಿತ್ತು ಎಂಬುದನ್ನು ಊಹಿಸಿಕೊಳ್ಳಬಹುದಾಗಿದೆ.

ಅದೊಮ್ಮೆ ಕುನ್ವರ್ ಸಿಂಗ್ ಜಗದೀಶಪುರ ತಲಪಲು ಗಂಗಾ ನದಿಯನ್ನು ದಾಟುತ್ತಿದ್ದಾಗ ಬ್ರಿಟಿಷರ ಸೈನಿಕನೊಬ್ಬ ಹಾರಿಸಿದ ಗುಂಡು ಅವರ ಮಣಿಕಟ್ಟಿಗೆ ಬಡಿಯಿತು. ಅದಾಗಲೇ 80 ವರ್ಷ ವಯೋಮಾನದವರಾಗಿದ್ದ ಕುನ್ವರ್ ತನ್ನ ಕೈ ಎತ್ತಲೂ ಅಸಾಧ್ಯವಾದಾಗ, ಅದರಿಂದ ತನ್ನ ಆರೋಗ್ಯಕ್ಕೆ ಮತ್ತಷ್ಟು ಹಾನಿಯಾಗದಂತೆ ತಡೆಯುವ ಸಲುವಾಗಿ ತಂತಾನೇ ತನ್ನ ತನ್ನ ಕೈಯನ್ನು ಕತ್ತರಿಸಿಕೊಂಡಿದ್ದಂತಹ ಪರಮ ವೀರರಾಗಿದ್ದರು. ಮಾರ್ಚ್ 1858 ರಲ್ಲಿ, ಈಗಿನ ಉತ್ತರ ಪ್ರದೇಶಕ್ಕೆ ಸೇರಿದ ಅಜಂಗಢವನ್ನು ಒಂದೇ ಕೈಯ್ಯಲ್ಲಿ ಹೋರಾಟ ಮಾಡಿ ವಶಪಡಿಸಿಕೊಂಡದ್ದಲ್ಲದೇ, 22 ಮತ್ತು 23 ಏಪ್ರಿಲ್ ರಂದು ಜಗದೀಸ್‌ಪುರದ ಬಳಿ ಕ್ಯಾಪ್ಟನ್ ಲೆ ಗ್ರ್ಯಾಂಡ್ ನೇತೃತ್ವದ ಬ್ರಿಟಿಷ ಸೈನ್ಯದ ವಿರುದ್ದ ನಡೆದ ಯುದ್ದದಲ್ಲಿ ಕ್ಯಾಪ್ಟನ್ ಲೆ ಗ್ರ್ಯಾಂಡ್ ಸೇರಿದಂತೆ ಸುಮಾರು 130 ಜನರನ್ನು ಕೊಂದು ಯುದ್ದವನ್ನು ಗೆದ್ದರೂ ಸಹಾ ಆ ಹೋರಾಟದಲ್ಲಿ 80 ವರ್ಷದ ಕುನ್ವರ್ ಸಿಂಗ್ ತೀವ್ರವಾಗಿ ಗಾಯಗೊಂಡರೂ ಜಗದೀಶ್ ಪುರ ಕೋಟೆಯ ಮೇಲೆ ಹಾರುತ್ತಿದ್ದ ಯೂನಿಯನ್ ಜ್ಯಾಕ್ ಧ್ವಜವನ್ನು ಕೆಳಕ್ಕೆ ಇಳಿಸಿ ತಮ್ಮ ಧ್ವಜವನ್ನು ಹಾರಿಸಿ, 1858ರ ಏಪ್ರಿಲ್ 23 ರಂದು ತಮ್ಮ ಅರಮನೆಗೆ ಮರಳಿ ವಿಜಯೋತ್ಸವವನ್ನು ಆಚರಿಸಿದರು. ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಈ ಉತ್ಸಾಹ ಕೇವಲ ಮೂರು ದಿನಗಳ ಕಾಲವಿದ್ದು 26 ಏಪ್ರಿಲ್ 1858 ರಂದು ಕುನ್ವರ್ ಸಿಂಗ್ ಅವರ ದೇಹಾಂತ್ಯವಾಗುತ್ತದೆ. ಸಹೋದರನ ಸಾವಿನಿಂದ ವಿಚಲಿತರಾಗದೆ ಅವರ ಉತ್ತರಾಧಿಕಾರಿಯಾಗಿ ಸೈನ್ಯದ ನೇತೃತ್ವವನ್ನು ವಹಿಸಿಕೊಂಡ ಅವರ ಸೋದರ ಅಮರಸಿಂಗ್ ಬ್ರಿಟಿಷ್ ವಿರುದ್ದ ಹೋರಾಟ ಮುಂದುವರಿಸುತ್ತಲೇ ಹೋಗುತ್ತಾರೆ.

kanvar2ಎಷ್ಟೆಲ್ಲಾ ವಿರೋಧಾಭಾಸಗಳ ನಡುವೆಯೂ ತನ್ನ ಸಣ್ಣದಾದ ಸ್ಥಳೀಯ ಸೈನ್ಯದೊಂದಿಗೆ ಧೈರ್ಯದಿಂದ ಬ್ರಿಟೀಷರ ವಿರುದ್ದ ಹೋರಾಡಿ ಅವರಿಗೆ ಚಳ್ಳೇ ಹಣ್ಣು ತಿನಿಸಿದ್ದ ಕಾರಣ ಅವರನ್ನು ವೀರ್ ಕುನ್ವರ್ ಸಿಂಗ್ ಎಂದು ಕರೆಯಲಾಗುತ್ತದೆ. ಸ್ವಾತ್ರಂತ್ರ್ಯಾನಂತರ ಅವರ ಗೌರವಾರ್ಥವಾಗಿ ಭಾರತ ಸರ್ಕಾರವು 1966 ರಲ್ಲಿ ಕನ್ವರ್ ಸಿಂಗ್ ಅವರ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರೆ, ಬಿಹಾರ ರಾಜ್ಯ ಸರ್ಕಾರವು ವೀರ ಕುನ್ವರ್ ಸಿಂಗ್ ವಿಶ್ವವಿದ್ಯಾಲಯವನ್ನು , ಅರ್ರಾದಲ್ಲಿ 1992 ರಲ್ಲಿ ಸ್ಥಾಪಿಸಿತು.

paark2017 ರಲ್ಲಿ, ಉತ್ತರ ಮತ್ತು ದಕ್ಷಿಣ ಬಿಹಾರವನ್ನು ಸಂಪರ್ಕಿಸಲು ಇದ್ದ ಅರ್ರಾ-ಛಾಪ್ರಾ ಸೇತುವೆಗೆ ವೀರ್ ಕುನ್ವರ್ ಸಿಂಗ್ ಸೇತುವೆ ಎಂದು ಕರೆದದ್ದಲ್ಲದೇ, 2018 ರಲ್ಲಿ, ಕುನ್ವರ್ ಸಿಂಗ್ ಅವರ ಮರಣದ 160 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರ ನೆನಪಿಗಾಗಿ ಬಿಹಾರ ಸರ್ಕಾರವು ಅವರ ಪ್ರತಿಮೆಯನ್ನು ಹಾರ್ಡಿಂಜ್ ಪಾರ್ಕ್‌ಗೆ ಸ್ಥಳಾಂತರಿಸಿ, ಆ ಉದ್ಯಾನವನವನ್ನು ಅಧಿಕೃತವಾಗಿ ವೀರ್ ಕುನ್ವರ್ ಸಿಂಗ್ ಆಜಾದಿ ಪಾರ್ಕ್ ಎಂದು ಮರುನಾಮಕರಣ ಮಾಡುವ ಮೂಲಕ ಇಂದಿನ ಯುವ ಜನತೆಗೂ ವೀರ್ ಕನ್ವರ್ ಸಿಂಗ್ ಅವರನ್ನು ಪರಿಚಯಿಸುವ ಕಾರ್ಯವನ್ನು ಮಾಡಿದ್ದು ನಿಜಕ್ಕೂ ಅನನ್ಯ ಮತ್ತು ಅಭಿನಂದನಾರ್ಹವೇ ಸರಿ.

kanvar4ಕೆಲವರು ಮಾಡಿದ ಅಹಿಂಸಾ ತತ್ವದ ಹೋರಾಟ ಮತ್ತು ಉಪವಾಸಗಳಿಗೆ ಹೆದರಿ ಬ್ರಿಟೀಷರು ಭಾರತವನ್ನು ಬಿಟ್ಟು ಹೋದರು ಎಂದೇ ಇತಿಹಾಸದಲ್ಲಿ ಓದುತ್ತಿರುವ ನಮ್ಮ ಇಂದಿನ ಮಕ್ಕಳಿಗೆ ವೀರ ಕನ್ವರ್ ಸಿಂಗ್ ನಂತಹ ಲಕ್ಷಾಂತರ ಕಾಂತ್ರಿಕಾರಿಗಳ ತ್ಯಾಗ ಮತ್ತು ಬಲಿದಾನಗಳಿಂದಾಗಿ ಈ ದೇಶಕ್ಕೆ ಸ್ವಾತ್ರಂತ್ಯ ದೊರಕಿದೆ ಎಂಬ ಸತ್ಯ ಸಂಗತಿಯನ್ನು ತಿಳಿಸುವ ಜವಾಬ್ಧಾರಿ ನಮ್ಮ ನಿಮ್ಮದೇ ಆಗಿದೇ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಅನಂತ ಲಕ್ಷ್ಮಣ ಕಾನ್ಹೇರೆ

savarkarಇತಿಹಾಸ ತಿಳಿಯದ ಕೆಲವು ಅರಿವುಗೇಡಿಗಳು ವೀರ ಸಾವರ್ಕರ್ ಅವರೊಬ್ಬ ಹೇಡಿ ಹಾಗೂ ಬ್ರಿಟಿಷರಿಗೆ ಕ್ಷಮೆ ಅರ್ಜಿ ಬರೆದು ಅವರೊಂದಿಗೆ ಶಾಮೀಲಾರಾಗಿದ್ದರು ಎಂದು ಪದೇ ಪದೇ ಹೇಳುವಾಗ ನಿಜಕ್ಕೂ ಮೈಯ್ಯಲ್ಲಿರುವ ರಕ್ತ ಕುರಿಯುತ್ತದೆ. ನಿಜ ಹೇಳಬೇಕೆಂದರೆ ಸ್ವಾತ್ರಂತ್ರ್ಯ ಹೋರಾಟದ ಸಮಯದಲ್ಲಿ ಬಹುತೇಕ ಕ್ರಾಂತಿಕಾರಿಗಳಿಗೆ ಪ್ರೇರಣಾದಾಯಕರಾಗಿದ್ದಲ್ಲದೇ ಅವರ ಹಿಂದೆ ನಿಂತು ಅವರ ಎಲ್ಲಾ ಹೋರಾಟಗಳಿಗೂ ಶಕ್ತಿ ತುಂಬುತಿದ್ದದ್ದೇ ವೀರ ಸಾವರ್ಕರ್. ಅಂತಹ ವೀರ ಸಾವರ್ಕರ ಗರಡಿಯಲ್ಲಿ ತಯಾರಾಗಿ ದೇಶದ ಸ್ವಾತ್ರಂತ್ರ್ಯಕ್ಕಾಗಿ ತಮ್ಮ 18ರ ಪ್ರಾಯದಲ್ಲೇ 19 ಎಪ್ರಿಲ್ 1910 ರಂದು ಹುತಾತ್ಮರಾದವರೇ ಶ್ರೀ ಅನಂತ ಲಕ್ಷ್ಮಣ ಕಾನ್ಹೇರೆ ಅವರೂ ಸಹಾ ಒಬ್ಬರು.

anant2ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಆಯನಿ ಮೇಟೆಯಲ್ಲಿ 1891ರಲ್ಲಿ ಜನಿಸಿದ ಅನಂತರಾವ್ ಅವರು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವ ಸಲುವಾಗಿ ಔರಂಗಾಬಾದಿನಲ್ಲಿದ್ದ ತಮ್ಮ ಸೋದರಮಾವನ ಮನೆಗೆ ಬರುತ್ತಾರೆ. ಶಾಲೆಯಲ್ಲಿ ಓದುತ್ತಿರುವಾಗಲೇ ಸ್ವಾತ್ರಂತ್ರ್ಯ ಹೋರಾಟದ ಕಿಚ್ಚನ್ನು ಹತ್ತಿಸಿಕೊಂಡು ಕೆಲವು ತೀವ್ರವಾದಿಗಳ ಪರಿಚಯವಾಗಿ ತಮ್ಮ ಮಾವನ ಮನೆಯಲ್ಲಿದ್ದರೆ ಸರಿಹೋಗುವುದಿಲ್ಲ ಎಂದು ತಿಳಿದು, ತಮ್ಮ ಸೋದರ ಮಾವನ ಮನೆಯಿಂದ ಹೊರಬಂದು ತಾವೇ ಅಲ್ಲಿಯ ಗಂಗಾರಾಮ ಮಾರವಾಡಿಯವರ ವಠಾರದಲ್ಲಿ ಸಣ್ಣ ಕೋಣೆಯೊಂದರಲ್ಲಿ ಬಾಡಿಗೆಗೆ ಬರುತ್ತಾರೆ. ಅಷ್ಟರಲ್ಲಾಗಲೇ ಅವರಿಗೆ ನಾಸಿಕ್ಕಿನ ಸ್ವಾತಂತ್ರ್ಯವಾದಿ ಗುಪ್ತ ಸಂಸ್ಥೆಯ ಕಾಶಿನಾಥ ಟೋಣಪೆಯವರು ಗಂಗಾರಾವ್ ಅವರ ಪರಿಚಯವಾಗಿ ಅನಂತರಾವ್ ಅವರನ್ನು ಗುಪ್ತ ಸಂಸ್ಥೆಯ ಸದಸ್ಯರನ್ನಾಗಿಸಿಕೊಂಡಿದ್ದಲ್ಲದೇ ದೇಶದ ಸ್ವಾತ್ರಂತ್ಯ್ರಕ್ಕಾಗಿ ಎಂತಹ ಕಠಿಣ ತ್ಯಾಗವನ್ನು ಮಾಡಲು ಸಿದ್ಧರಿರುವುದಾಗಿ ಪ್ರತಿಜ್ಞೆಯನ್ನೂ ಮಾಡಿಸಿ ಕೊಂಡಿರುತ್ತಾರೆ.

ಇದೇ ಸಮಯದಲ್ಲಿ ಸಾವರ್ಕರ್ ಆವರ ಮತ್ತೊಬ್ಬ ಪರಮ ಶಿಷ್ಯ ಮದನಲಾಲ್ ಢಿಂಗ್ರಾ ಲಂಡನ್ನಿನಲ್ಲಿಯೇ ಕರ್ಜನ್ ವಾಲಿಯ ಹತ್ಯೆ ಮಾಡಿದ್ದರಿಂದ ಉತ್ಸಾಹಗೊಂಡ ಅನಂತ್ ರಾವ್ ಸಹಾ ತಾವೂ ಸಹಾ ಅಂತಹದ್ದೇ ಹತ್ಯೆಗೆ ಸಿದ್ದ ಎಂಬುದನ್ನು ಗಂಗಾರಾವ್ ಅವರ ಬಳಿ ಹೇಳಿಕೊಳ್ಳುತ್ತಾರೆ. ಅನಂತರಾವ್ ಅವರ ಧೈರ್ಯ ಮತ್ತು ಕ್ಷಮತೆಯನ್ನು ಪರಿಕ್ಷೀಸುವ ಸಲುವಾಗಿ ಅವರ ಕೈಗೆ ಬಿಸಿ ಬಿಸಿಯಾಗಿ ಕಾಯಿಸಿದ್ದ ಕಬ್ಬಿಣದ ಇಕ್ಕಳವನ್ನು ಹಿಡಿಸಿದರೆ ಮತ್ತೊಮ್ಮೆ ಉರಿಯುತ್ತಿರುವ ದೀಪದ ಚಿಮಣಿಯ ಬಿಸಿಯಾದ ಗಾಜನ್ನು ಎರಡೂ ಕೈಯಲ್ಲಿ ಹಿಡಿಯಲು ಹೇಳಿದಾಗ, ಒಂದು ಕ್ಷಣವೂ ವಿಚಲರಿತರಾಗದೇ, ಎರಡೂ ಪರೀಕ್ಷೆಯಲ್ಲಿಯೂ ಸಫಲತೆ ಹೊಂದಿದಾಗ ಗಂಗರಾವ್ ಅವರಿಗೆ ಅನಂತರಾವ್ ಅವರ ಮೇಲೆ ಭರವಸೆ ಬರುತ್ತದೆ.

ananth4ಇದೇ ಸಮಯದಲ್ಲಿ ನಾಸಿಕ್ಕಿನ ಜಿಲ್ಲಾಧಿಕಾರಿಯಾಗಿದ್ದ ಜಾಕ್ಸನ್ ಎಂಬ ಬ್ರಿಟೀಷ್ ವ್ಯಕ್ತಿ ಅತ್ಯಂತ ಕ್ರೂರ ಮತ್ತು ಕಪಟಿಯಗಿದ್ದು ನಿರಪರಾಧಿಗಳಾಗಿದ್ದ ಶ್ರೇಷ್ಠ ನ್ಯಾಯವಾದಿ, ಕೀರ್ತನಕಾರರಾದ ತಾಂಬೇಶಾಸ್ತ್ರಿ ಮತ್ತು ವೀರ ಸಾವರ್ಕರ್ ಅವರ ಅಣ್ಣ ಬಾಬುರಾವ್ ಸಾವರ್ಕರ್ ಅವರಂತಹ ದೇಶಭಕ್ತರನ್ನು ಸೆರೆಮನೆಗೆ ಕಳುಹಿಸುವ ಮೂಲಕ ಕ್ರಾಂತಿಕಾರಿಗಳ ಕೆಂಗಣ್ಣಿಗೆ ತುತ್ತಾಗಿದ್ದಲ್ಲದೇ, ಅವನನ್ನು ಮುಗಿಸಲು ಹೊಂಚು ಹಾಕುತ್ತಿರುತ್ತಾರೆ. ಅದೇ ಸಮಯದಲ್ಲಿಯೇ ಇಂಗ್ಲೇಂಡಿಲ್ಲಿದ್ದ ವೀರ ಸಾವರ್ಕರ್ ಬೈಬಲ್ ಪುಸ್ತಕದವನ್ನು ಕೊರೆದು ಅದರಲ್ಲಿ ಗುಪ್ತವಾಗಿ ಬಂದೂಕುಗಳನ್ನು ಇರಿಸಿ ಭಾರತದ ಕ್ರಾಂತಿಕಾರಿಗಳಿಗೆ ಬಂದೂಕನ್ನು ರವಾನಿಸುತ್ತಿರುತ್ತಾರೆ. ಕ್ರೂರಿ ಜಾಕ್ಸನ್ ನನ್ನು ಕೊಂದು ಹಾಕಲು ಅನಂತ್ ರಾವ್ ಆವರೇ ಸೂಕ್ತವ್ಯಕ್ತಿ ಎಂದು ನಿರ್ಧರಿಸಿ ಅವರಿಗೆ ಸಾವರ್ಕರ್ ಅವರು ಕಳುಹಿಸಿದ ಬಂದೂಕನ್ನು ಬಳಸಲು ತರಭೇತಿಯನ್ನು ನೀಡಲಾಗುತ್ತದೆ. ಜಾಕ್ಸನನನ್ನು ಹತ್ಯೆ ಮಾಡುವ ಸಲುವಾಗಿ ಅನಂತರಾವರವರು ಪ್ರತೀ ದಿನವೂ ಗುಪ್ತವಾಗಿ ಬಂದೂಕಿನಿಂದ ಗುರಿ ಸಾಧಿಸುವ ಅಭ್ಯಾಸ ಮಾಡುತ್ತಿದ್ದದ್ದಲ್ಲದೇ, ಜಿಲ್ಲಾಧಿಕಾರಿಯ ಕಾರ್ಯಾಲಯಕ್ಕೂ ಹೋಗಿ ತಮ್ಮ ಶಿಖಾರಿ ಜಾಕ್ಸನ್‌ನ್ನು ಸರಿಯಾಗಿ ನೋಡಿಕೊಂಡೂ ಬಂದಿದ್ದರು. ಬ್ರಿಟಿಷ್ ಅಧಿಕಾರಿ ಜಾಕ್ಸನ್‌ನನ್ನು ಕೊಂದ ಹೇಗೂ ಗಲ್ಲು ಶಿಕ್ಷೆ ಖಚಿತ ಎಂದೇ ತಿಳಿದ್ದ ಅನಂತರಾವ್ ಅವರು ತಮ್ಮ ಭಾವಚಿತ್ರವನ್ನು ಸ್ಟುಡಿಯೋದಲ್ಲಿ ತೆಗೆಸಿ ತಮ್ಮ ಮರಣದನಂತರ ತಮ್ಮ ತಂದೆ-ತಾಯಿಯವರಿಗೆ ತನ್ನ ನೆನಪಿಗಾಗಿ ಈ ಛಾಯಾಚಿತ್ರವಿರಲಿ ಎಂಬುದು ಅವರ ಭಾವನೆಯಾಗಿತ್ತು.

ಡಿಸೆಂಬರ್ 21,, 1909  ರಂದು ಕಿರ್ಲೋಸ್ಕರ್ ನಾಟಕ ಮಂಡಳಿಯು ನಾಸಿಕ್ಕಿನ ವಿಜಯಾನಂದ ನಾಟಕ ಗೃಹದಲ್ಲಿ ಶಾರದಾ ಎಂಬ ನಾಟಕವನ್ನು ಅಯೋಜಿದ್ದಲ್ಲದೇ ಅದೇ ಸಮಾರಂಭದಲ್ಲೇ ಜಾಕ್ಸನ್‌ ಅವರನ್ನೂ ಸಹಾ ಸನ್ಮಾನಿಸಲು ತೀರ್ಮಾನಿಸಿದ್ದ ವಿಷಯವನ್ನು ತಿಳಿದ ಅನಂತರಾವ್, ಜಾಕ್ಸನ್ ನನ್ನು ಮುಗಿಸಲು ಇದೇ ಸರಿಯಾದ ಸಮಯ ಎಂದು ಭಾವಿಸಿ ನಾಟಕ ಆರಂಭಕ್ಕೂ ಮುನ್ನವೇ ಅಲ್ಲಿ ಹೋಗಿ ಜಾಕ್ಸನ್‌ ಬರುವಿಕೆಗಾಗಿಯೇ ಕಾಯುತ್ತಿದ್ದರು. ಜಾಕ್ಸನ್ ಮುಂಬಾಗಿಲಿನಿಂದ ನಾಟಕಗೃಹವನ್ನು ಪ್ರವೇಶಿಸುತ್ತಿದ್ದಂತೆಯೇ ಏಕಾ ಏಕಿ ಮುನ್ನುಗ್ಗಿದ ಅನಂತರಾವ್ ಜಾಕ್ಸನ್ ಮೇಲೆ ಹಾರಿಸಿದ ಗುಂಡು ಗುರಿ ತಪ್ಪಿ ಅದು ಜಾಕ್ಸನ್ನಿನ ಕಂಕುಳಿನಿಂದ ಹೊರಬಿದ್ದಿತು. ಇದರಿಂದ ಕೊಂಚವೂ ವಿಚಲಿತರಾಗದ ಅನಂತ್ ರಾವ್ ಮೇಲಿಂದ ಮೇಲೆ ನಾಲ್ಕು ಗುಂಡು ಹಾರಿಸಿದಾಗ ಗುಂಡೇಟಿನಿಂದ ರಕ್ತದ ಮುಡುವಿನಲ್ಲಿ ಜಾರಿಹೋದ ಜಾಕ್ಸನ್‌ ಅಲ್ಲಿಯೇ ಕುಸಿದು ಬಿದ್ದನು.

ananth1ಜಾಕ್ಸನ್ ಅವರನ್ನು ಕೊಂದ ನಂತರ ಎಲ್ಲಿಯೂ ಓಡಿ ಹೋಗದೇ ಖುದ್ದಾಗಿ ಪೋಲೀಸರಿಗೆ ಶರಣಾದ ಅನಂತರಾವ್ ಅವರಿಗೆ ಪೂರ್ವ ನಿರ್ಧಾರದಂತೆಯೇ ಜಿಲ್ಲಾಧಿಕಾರಿ ಜಾಕ್ಸನ್ ವಧೆಯ ಆರೋಪದಲ್ಲಿ ಮತ್ತು ಅವರಿಗೆ ಸಹಕರಿಸಿದ ಅವರ ಸ್ನೇಹಿತರಾದ ಅಣ್ಣಾ ಕರ್ವೆ ಮತ್ತು ವಿನಾಯಕ ದೇಶಪಾಂಡೆಯವರನ್ನು ಸೇರಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಲಾಯಿತು. ಏಪ್ರಿಲ್ 19, 1910 ಥಾನೆಯ ಸೆರೆಮನೆಯಲ್ಲಿ ಬೆಳಗ್ಗೆ 7 ಗಂಟೆಗೆ ಆ ಮೂವರನ್ನೂ ಗಲ್ಲಿಗೆ ಏರಿಸಿದ್ದಲ್ಲದೇ, ಅವರ ಕಳೇಬರಕ್ಕಾಗಿ ಕಾಯುತ್ತಿದ್ದ ಆವರ ಬಂಧು ಮಿತ್ರರಿಗೆ ತಿಳಿಸದಂತೆ ರಹಸ್ಯವಾಗಿ ಅ ಮೂವರು ಕ್ರಾಂತಿಕಾರಿಗಳ ದೇಹಗಳನ್ನು ಥಾನೆ ಖಾಡಿಕಿನಾರಿ ಎಂಬಲ್ಲಿ ದಹಿಸಿದ್ದಲ್ಲದೇ ಅವರ ಚಿತಾಭಸ್ಮವನ್ನೂ ಸಹಾ ಯಾರಿಗೂ ಸಿಗದಂತೆ ಸಮುದ್ರದ ಜಲಸಂಧಿಯೊಳಗೆ ಎಸೆಯುವ ಮೂಲಕ ತಮ್ಮ ಕ್ರೌಯ್ರವನ್ನು ಬ್ರಿಟೀಷ್ ಪೋಲಿಸರು ತೋರಿಸಿದ್ದರು.

ಜಾಕ್ಸನ್ ಅವರನ್ನು ಕೊಲೆ ಮಾಡಲು ಅಂದಿನ ಕಾಲದಲ್ಲಿನ ಆಧುನಿಕ ಬಂದೂಕು ಹೇಗೆ ಸಿಕ್ಕಿತು? ಎಂಬುದರ ತನಿಖೆಗೆ ಹೊರಟ ಪೋಲಿಸರಿಗೆ ಅದರ ಮೂಲ ಬ್ರಿಟನ್ನಿನದಾಗಿತ್ತು ಎಂದು ತಿಳಿದ ಆ ಕಾರ್ಯಚರಣೆಯ ತನಿಖೆಯನ್ನು ಸ್ಕಾಟ್‌ಲ್ಯಾಂಡ್ ಯಾರ್ಡಿನ ಪೋಲಿಸರಿಗೆ ಒಪ್ಪಿಸಿದರು. ಅಲ್ಲಿನ ಪೋಲೀಸರು ತ್ವರಿತವಾಗಿ ನಡೆಸಿದ ತನಿಖೆಯಲ್ಲಿ ಸಾವರ್ಕರ್ ಮತ್ತು ಲಂಡನ್ನಿನ ಇಂಡಿಯಾ ಹೌಸ್ ನಲ್ಲಿದ್ದ ಸಹಚರರು ಭಾರತಕ್ಕೆ ಗುಟ್ಟಾಗಿ ಬೈಬಲ್ ಪುಸ್ತಕದ ಮೂಲಕ ಬ್ರೌನಿಂಗ್ ಪಿಸ್ತೂಲ್ ರವಾನಿಸಿದ್ದ ವಿಷಯವನ್ನು ಅರಿತು ಸಾವರ್ಕರ್ ಅವರನ್ನು ಬಂಧಿಸಲು ಹೊಂಚು ಹಾಕಿದ್ದರು.

ಈ ವಿಷಯವನ್ನು ಅರಿತ ಸಾವರ್ಕರ್ ಮತ್ತು ಅವರ ಗೆಳೆಯ ಶ್ಯಾಮ್ ಜಿ ಕೃಷ್ಣವರ್ಮ ಲಂಡನ್‌ನಿಂದ ಫ್ರಾನ್ಸ್‌ಗೆ ತೆರಳಿ ಅಲ್ಲಿ ಕೆಲ ಕಾಲ ಭೂಗತರಾಗಿದ್ದರು. ಅಷ್ಟರಲ್ಲಿ ಬ್ರಿಟೀಷರ ಬಂಧನದಲ್ಲಿದ್ದ ಅವರ ಅಣ್ಣ ಬಾಬಾರಾವ್ ಸಾವರ್ಕರ್ (ಗಣೇಶ್ ಸಾವರ್ಕರ್) ಅವರನ್ನು ಬ್ರಿಟಿಷ್‌ರು ಇದೇ ಪ್ರಕರಣದಲ್ಲಿ  ಕಾಲಾಪಾನಿಗೆ ಕಳುಹಿಸಿ ಚಿತ್ರಹಿಂಸೆ ಕೊಡುತ್ತಿದ್ದ ಸುದ್ದಿಯನ್ನು ಕೇಳಿ ಸಾವರ್ಕರ್ ವಿಚಲಿತರಾದ ಸಾವರ್ಕರ್ ಅಂತಿಮವಾಗಿ ಬ್ರಿಟೀಷರಿಗೆ ಸೆರೆ ಸಿಕ್ಕಿದ್ದು ಈಗ ಇತಿಹಾಸವಾಗಿದೆ.

anand3ಕೆಲ ನಾಯಕರುಗಳು ಮಾಡಿದ ಅಹಿಂಸಾ ಹೋರಾಟ ಮತ್ತು ಸತ್ಯಾಗ್ರಹಗಳಿಗೆ ಹೆದರಿ ಬ್ರಿಟೀಷರು ಭಾರತಕ್ಕೆ ಸ್ವಾತಂತ್ಯ್ರವನ್ನು ಕೊಟ್ಟರು ಎಂಬ ಗಿಣಿ ಪಾಠದ ಇತಿಹಾಸವನ್ನೇ ಓದುವ ನಮ್ಮ ಇಂದಿನ ಮಕ್ಕಳಿಗೆ, ಅನಂತ್ ಲಕ್ಷ್ಮಣ ಕಾನ್ಹರೆಯಂತಹ 18 ವರ್ಷವನ್ನು ದಾಟದ ಸಾವಿರಾರು ಯುವಕರುಗಳು ನಿಸ್ವಾರ್ಥವಾಗಿ ಈ ದೇಶಕ್ಕಾಗಿ ದೇಹವನ್ನು ಬಲಿದಾನ ಮಾಡಿದ್ದರಿಂದಲೇ ನಾವು ಸರ್ವ ಸ್ವತಂತ್ರ್ಯವಾಗಿ ಈ ದೇಶದಲ್ಲಿ ಜೀವಿಸುತ್ತಿದ್ದೇವೆ ಎಂಬ ನೈಜ ಇತಿಹಾಸವನ್ನು ತಿಳಿಸುವ ಜವಾಬ್ಧಾರಿ ನಮ್ಮ ನಿಮ್ಮಲ್ಲರದ್ದಾಗಿದೇ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಬಾಳಗಂಚಿ ಚೋಮನ ಹಬ್ಬ

balaganchiಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಹಳ್ಳಿಯೇ ನಮ್ಮೂರು ಬಾಳಗಂಚಿ. ಸದ್ಯಕ್ಕೆ 350-500 ಮನೆಗಳು ಇದ್ದು ಸುಮಾರು ಹಲವರು ಈಗಾಗಲೇ ಕೆಟ್ಟು ಪಟ್ಟಣಕ್ಕೆ ಸೇರು ಎನ್ನುವಂತೆ ದೇಶಾದ್ಯಂತ ವಿವಿಧ ನಗರ ಪ್ರದೇಶಗಳಿಗೆ ವಲಸೆ ಹೋಗಿರುವ ಕಾರಣ, ಸದ್ಯಕ್ಕೆ ಎರಡು ಮೂರು ಸಾವಿರದವರೆಗೂ ಜನಸಂಖ್ಯೆ ಇರುವಂತಹ ಹಳ್ಳಿ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು ಮಾಡಿದ ಪ್ರದೇಶವೆಂದೂ ಹೇಳುತ್ತಾರೆ. ಈ ಹಳ್ಳಿಯಲ್ಲಿ ಸುಮಾರು ಹತ್ತು ಹದಿನೈದಕ್ಕೂ ಹೆಚ್ಚಿನ ದೇವಾಲಯಗಳಿದ್ದು, ಶ್ರೀ ಸ್ವರ್ಣಾಂಬ ಅಥವಾ ಹೊನ್ನಾದೇವಿ ಎಂಬ ದೇವಿ ಗ್ರಾಮ ದೇವತೆಯಾಗಿದ್ದು, ಪ್ರತೀ ವರ್ಷ ಚೈತ್ರಮಾಸದಲ್ಲಿ ಬಹಳ ವಿಜೃಂಭಣೆಯಿಂದ ಸುಮಾರು ಎರಡು ವಾರಗಳ ಕಾಲ ಊರ ಹಬ್ಬ ನಡೆಸಿಕೊಂಡು ಬರುವ ಪದ್ದತಿ ಇದೆ. ಇದರ ಮೂಲ ಹೆಸರು ಬಾಳ್ಗಚ್ಚು, ಬಾಲಕಂಚಿ ಎಂಬುದಾಗಿದ್ದು ನಂತರದ ದಿನಗಳಲ್ಲಿ ಅದು ಜನರ ಆಡು ಬಾಷೆಯಲ್ಲಿ ಬಾಳಗಂಚಿ ಎಂದಾಗಿದೆ ಎನ್ನುತ್ತಾರೆ ಸ್ಥಳಿಯರು.

ಪ್ರತೀ ವರ್ಷ ಸಂಕ್ರಾಂತಿ ಹಬ್ಬ ಮುಗಿದ ನಂತರ ಬೆಳೆದ ಫಸಲನ್ನು ಹದ ಮಾಡಿ ಮನೆಗೆ ಬೇಕಾದಷ್ಟನ್ನು ಉಳಿಸಿಕೊಂಡು ಹೆಚ್ಚಾಗಿದ್ದನ್ನು ಮಾರಿ ಕೈಯಲ್ಲಿ ಅಲ್ಪ ಸ್ವಲ್ಪ ಹಣವನ್ನು ಇಟ್ಟು ಕೊಂಡಿರುತ್ತಾರೆ. ನಮ್ಮೂರಿನ ಸುತ್ತಮುತ್ತಲಿನ  ಹಳ್ಳಿಯ ರೈತರುಗಳಿಗೆ ಸೂಕ್ತವಾದ ನೀರಾವರಿಯ ಸೌಲಭ್ಯವಿಲ್ಲದ ಕಾರಣ ಹೆಚ್ಚಾಗಿ ಮಳೆಯ ನೀರನ್ನೇ ಆಶ್ರಯಿಸಿ ತಮ್ಮ ತಮ್ಮ ಜಮೀನಿನಲ್ಲಿ ಮುಂದಿನ ಬೇಸಾಯಕ್ಕೆ ಹದಗೊಳಿಸಲು ಮಳೆಯನ್ನೇ ಕಾಯುತ್ತಿರುವ ಸಂದರ್ಭದಲ್ಲಿ ತುಸು ವಿಶ್ರಾಂತರಾಗಿರುತ್ತಾರೆ. ಹಾಗಾಗಿ   ಯುಗಾದಿ ಹಬ್ಬ ಬಂದ ನಂತರ ಬರುವ ಮಳೆಗಾಗಿ ಕಾಯುತ್ತಾ ಇಂದಿನ ಕಾಲದಂತೆ ಅಂದೆಲ್ಲಾ ದೂರದರ್ಶನ, ಚಲನಚಿತ್ರಗಳಂತಹ ಮನೋರಂಜನೆ ಇಲ್ಲದಿದ್ದ ಕಾಲದಲ್ಲಿ, ನಮ್ಮ ಪೂರ್ವಿಕರು ರಾಮನವಮಿ, ರಾಮಸಾಮ್ರಾಜ್ಯ ಪಟ್ಟಾಭಿಷೇಕ, ಹನುಮ ಜಯಂತಿ ಇಲ್ಲವೇ ಊರ ಹಬ್ಬಗಳ ಮುಖಾಂತರ ಎಲ್ಲರನ್ನೂ ಒಗ್ಗೂಡಿಸಿ ಅವರ ಮನಮುದಗೊಳಿಸುವಂತಹ ಭಜನೆ, ಸಂಗೀತ ಕಾರ್ಯಕ್ರಮಗಳು, ಹರಿಕಥೆ ಮತ್ತು ಪೌರಾಣಿಕ ನಾಟಕಗಳನ್ನು ಏರ್ಪಡಿಸುವ ಸತ್ಸಂಪ್ರದಾಯವಿದೆ.

ಆದರಂತೆಯೇ ನನ್ನೂರು ಬಾಳಗಂಚಿ ಮತ್ತು ಸುತ್ತಮತ್ತಲಿನ ಹೊನ್ನಶೆಟ್ಟ ಹಳ್ಳಿ, ಹೊನ್ನಾದೇವಿಹಳ್ಳಿ, ಬ್ಯಾಡರಹಳ್ಳಿ, ಗೌಡರಹಳ್ಳಿ, ಅಂಕನಹಳ್ಳಿ, ಕಬ್ಬಳಿ, ಮೂಕಿಕೆರೆ ಮುಂತಾದ ಹದಿನಾರು ಊರುಗಳಲ್ಲಿ ಯುಗಾದಿ ಹಬ್ಬ ಕಳೆದ ನಂತರದ ಸುಮಾರು ಮೂರುವಾರಗಳ ಕಾಲ ಹಬ್ಬದ ಸಂಭ್ರಮದ ವಾತಾವರಣ. ಯುಗಾದಿ ಮುಗಿದ ಮೊದಲನೇ ಗುರುವಾರ ಸಾರಣೇ ಹಬ್ಬದ (ಮೊದಲನೇ ಕಂಬ) ಮುಖಾಂತರ ಹಬ್ಬದ ಸಂಭ್ರಮ ಶುರುವಾಗುತ್ತದೆ. ಅಂದಿನ ದಿನ ಊರಿನ ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ ಶುಚಿಗೊಳಿಸುವುದರ ಮೂಲಕ ಇಡೀ ಊರನ್ನೂ ಶುಚಿಗೊಳಿಸಿ ಊರಿನ ಅಷ್ಟದಿಕ್ಕುಗಳಲ್ಲಿಯೂ ಮಾವಿನ ತಳಿರು ತೋರಣ ಕಟ್ಟುವ ಮೂಲಕ ಊರಿಗೆ ಹಬ್ಬದ ಕಳೆಯನ್ನು ಕಟ್ಟುತ್ತಾರೆ. ಅಂದು ಇಡೀ ಗ್ರಾಮಸ್ಥರು, ಗ್ರಾಮದೇವತೆ ಹೊನ್ನಾದೇವಿ ದೇವಾಲಯದ ಅರ್ಚಕರು ಮತ್ತು ಅರೆ, ಡೊಳ್ಳು. ತಮಟೆ ಮತ್ತು ನಾದಸ್ವರ ವಾದಕರೊಂದಿಗೆ ಊರಿನ ಈಶಾನ್ಯದಿಕ್ಕಿನಲ್ಲಿ ಸಂಪ್ರದಯದಂತೆ ಪೂಜೆ ಮಾಡಿ ಅಲ್ಲಿಂದ ಕೆಮ್ಮಣ್ಣು ತಂದು ಊರಿನ ದೇವಾಯವನ್ನು ಶುಚಿಗೊಳಿಸಿ ಸುದ್ದೆ ಕೆಮ್ಮಣ್ಣು ಸಾರಿಸಿ ಅಲಂಕರಿಸುವ ಮೂಲಕ ಅಧಿಕೃತವಾಗಿ ಊರ ಹಬ್ಬಕ್ಕೆ ನಾಂದಿ ಹಾಡಲಾಗುತ್ತದೆ. ಹಾಗೆ ಅಷ್ಟ ದಿಕ್ಕುಗಳಲ್ಲಿ ತೋರಣ ಕಟ್ಟಿದ ಮೇಲೆ ಊರಿನಲ್ಲಿ ಯಾವುದೇ ಮಡಿ ಮೈಲಿಗೆಗಳು ಆಗದಂತೆ ನೋಡಿಕೊಳ್ಳಲಾಗುತ್ತದೆ ಮತ್ತು ಹಬ್ಬ ಮುಗಿಯುವ ವರೆಗೂ ಇಡೀ ಊರಿನ ಒಳಗೆ ಯಾರೂ ಪಾದರಕ್ಷೆಗಳನ್ನು ಧರಿಸಿ ಓಡಾಡುವಂತಿಲ್ಲ ಮತ್ತು ಮಾಂಸಾಹಾರ ಸೇವಿಸುವಂತಿಲ್ಲ. ಅಂದಿನಿಂದ ಊರ ಹಬ್ಬ ಮುಗಿಯುವವರೆಗೂ ಪ್ರತೀ ದಿನ ಸಂಜೆ, ರಂಗ ಮಂಟಪದ ಹಿಂದೆ ಅಂದರೆ ಊರ ಒಳಗಿನ ಹೊನ್ನಮ್ಮನ ಗುಡಿಯ ಮುಂದೆ ಊರಿನ ಎಲ್ಲಾ ಗಂಡು ಮಕ್ಕಳು ಮತ್ತು ಹಿರಿಯರಾದಿ ತಮಟೆಗಳ ತಾಳಕ್ಕೆ ವಿಶೇಷ ಗತ್ತಿನಿಂದ ತಮ್ಮದೇ ಗ್ರಾಮೀಣ ಶೈಲಿಯಲ್ಲಿ ರಂಗ ಕುಣಿಯುತ್ತಾರೆ. ತಮ್ಮ ಊರಿನ ಗಂಡಸರು ಮತ್ತು ಮಕ್ಕಳು ಕೈಯಲ್ಲಿ ಶಲ್ಯವೋ ಇಲ್ಲವೇ ಹೆಗಲು ಮೇಲಿನ ವಸ್ತ್ರವನ್ನು ಹಿಡಿದುಕೊಂಡು ಅಲ್ಯೋ ಅಲ್ಯೋ ಅಲ್ಯೋ ಎಂದು ರಂಗ ಕುಣಿಯುವುದನ್ನು ನೋಡಲು ಊರ ಹೆಂಗಸರು ಮಕ್ಕಳು ಸುತ್ತುವರಿದಿರುವುದನ್ನು ವರ್ಣಿಸುವುದಕ್ಕಿಂತ ಕಣ್ತುಂಬ ನೋಡಿ ಆನಂದಿಸಬೇಕು.

ಇನ್ನು ಎರಡನೇ ಕಂಬ ಮುಗಿದ ಎರಡು ದಿನ ಕಳೆದ ನಂತರದ ಶನಿವಾರವೇ ಚೋಮನ ಹಬ್ಬ. ಹಬ್ಬಕ್ಕೆ ಎರಡು ದಿನಗಳ ಮುಂಚೆಯೇ ರಂಗ ಮಂಟಪದ ಮೇಲಿನ ಕಳಶವನ್ನು ತೆಗೆದು ಅದನ್ನು ಚೆನ್ನಾಗಿ ಶುಚಿಗೊಳಿಸಲಾಗಿರುತ್ತದೆ. ಚೋಮನ ಹಬ್ಬದ ಸಂಜೆ ಸೂರ್ಯಾಸ್ತಕ್ಕೆ ಸರಿಯಾಗಿ ಬಾಜಾಭಜಂತ್ರಿಯ ಸಮೇತ ಹೊನ್ನಾದೇವಿಯ ಅರ್ಚಕರು ರಂಗ ಮಂಟಪಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಎಲ್ಲರ ಸಮ್ಮುಖದಲ್ಲಿ ರಂಗಮಂಟಪ ಶಿಖರಮೇಲೆ ಕಳಸವನ್ನು ಇಡುವುದರ ಮೂಲಕ ಚೋಮನ ಹಬ್ಬಕ್ಕೆ ಚಾಲನೆ ಕೊಡುತ್ತಾರೆ.

WhatsApp Image 2022-04-18 at 8.05.06 AM (1)ರಂಗ ಮಂಟಪಕ್ಕೆ ಕಳಶ ಇಡುತ್ತಿದ್ದಂತೆಯೇ, ಹಿಂದೆಲ್ಲಾ ಎತ್ತಿನಗಾಡಿಗಳು ಇರುತ್ತಿದ್ದವು ಈಗ ಟ್ರಾಕ್ಟರ್ ಮೇಲೆ ಪಲ್ಲಕ್ಕಿಯನ್ನು ಕಟ್ಟಲು ಅರಂಭಿಸಿದರೆ, ಊರಿನ ದೊಡ್ಡ ಹಟ್ಟಿಯಲ್ಲಿ ( ಹರಿಜನರ ಕೇರಿಯಲ್ಲಿ ) ಹೆಬ್ಬಾರಮ್ಮ ಮತ್ತು ಚಾವಟಿಯಮ್ಮನ ಪೂಜೆ ಶುರುವಾಗಿರುತ್ತದೆ  ಅದೇ ರೀತಿ ಎರಡನೇ ಕಂಬದ ದಿನ ಪಟ್ಟಕ್ಕೆ ಕೂರಿಸಿದ್ದ ಚೋಮನನ್ನು ಹೊರಲು ಊರಿನ ಅಕ್ಕಸಾಲಿಗರ ಕುಟುಂಬದ ಒಬ್ಬ ಸದಸ್ಯ ಮತ್ತು ಮತ್ತೊಂದು ಚೋಮನನ್ನು ಹೊರಲು ಸವಿತಾ ಜನಾಂಗ (ಕ್ಷೌರಿಕರು)ದ ಒಬ್ಬ ಸದಸ್ಯ ಇಡೀ ದಿನ ಮಡಿಯಿಂದ ಹೊಸದಾದ ಶುಭ್ರ ವೇಷಧಾರಿಗಳಾಗಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಸಿದ್ದರಾಗಿರುತ್ತಾರೆ. ಊರಿನ ಹೊನ್ನಾದೇವಿಯ ಒಕ್ಕಲಿನ ಪ್ರತೀ ಮನೆಯವರೂ ಶ್ರಧ್ದೆಯಿಂದ ದೇವಸ್ಥಾನಕ್ಕೆ ಬಂದು ಹಣ್ಣು ಕಾಯಿ ಮಾಡಿಸಿಕೊಂಡು ಹೋಗುತ್ತಿರುತ್ತಾರೆ. ಇಷ್ಟೆಲ್ಲಾ ಸಿದ್ಧವಾಗುವ ವೇಳೆಗೆ ಗಂಟೆ ರಾತ್ರಿ ಹನ್ನೆರಡು ಘಂಟೆಯಾಗಿರುತ್ತದೆ . ಅಷ್ಟು ಹೊತ್ತಿಗೆ ಅಕ್ಕ ಪಕ್ಕದ ಊರಿನವರೆಲ್ಲರೂ ಊಟ ಮುಗಿಸಿ ದೇವಸ್ಧಾನದ ಸುತ್ತ ಮುತ್ತ ಸೇರಲಾರಂಭಿಸಿರುತ್ತಾರೆ. ಹೆಂಗಳೆಯರು ಸೋಬಾನೇ ಹಾಡುತ್ತಿದ್ದರೆ ಇನ್ನು ಮಕ್ಕಳು ಜಾತ್ರೆಯ ಬೆಂಡು ಬತ್ತಾಸು ಈಗ ಗೋಬಿ ಮಂಚೂರಿ ತಿನ್ನುವುದರಲ್ಲಿ ಮಗ್ನರಾಗಿರುತ್ತಾರೆ. ಗಂಡು ಮಕ್ಕಳೆಲ್ಲಾ ದೊಡ್ಡ ಹಟ್ಟಿಯ ಮುಂದೆ ಚಾವಟೀ ಅಮ್ಮನ ಬರುವಿಕೆಗಾಗಿಯೇ ಕಾದು ನಿಂತು, ಅಲ್ಯೋ ಅಲ್ಯೋ ಅಲ್ಯೋ ಎಂದು ಹುರಿದುಂಬಿಸುತ್ತಿರುತ್ತಾರೆ. ಅಷ್ಟು ಹೊತ್ತಿಗೆ, ಪಲ್ಲಕ್ಕಿಯ ಅಲಂಕಾರಮುಗಿದು, ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ನಾನಾ ರೀತಿಯ ಪುಷ್ಪಾಲಂಕಾರದಿಂದ ಅಲಂಕರಿಸಿ ಮೆರವಣಿಗೆ ಸಿದ್ದಗೊಳಿದ ತಕ್ಷಣ, ಊರಿನ ಮಡಿವಾಳರ ಹಿರಿಯ ಸದಸ್ಯ, ಸರ್ವೇ ಮರದ ತುಂಡಿಗೆ ಬಟ್ಟೆಯನ್ನು ಚೆನ್ನಾಗಿ ಸುತ್ತಿ ಅದನ್ನು ಎಣ್ಣೆಯಡಬ್ಬದಲ್ಲಿ ಅದ್ದಿ ಪತ್ತನ್ನು (ಪಂಜು) ಸಿದ್ದಗೊಳಿಸಿಕೊಂಡು ಉತ್ಸವ ಮೂರ್ತಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಪತ್ತಿನಿಂದ ಆರತಿ ಬೆಳಗುತ್ತಿದ್ದಂತೆ ಅರ್ಚಕರು ಉತ್ಸವ ಮೂರ್ತಿಗೆ ಮಂಗಳಾರತಿ ಮಾಡುವ ಮೂಲಕ ಉತ್ಸವಕ್ಕೆ ಅಧಿಕೃತವಾಗಿ ಸಿದ್ದತೆ ದೇವರಿಗೆ ಸುಮಾರು ಮಧ್ಯರಾತ್ರಿ ಒಂದು ಗಂಟೆಯ ಹೊತ್ತಿಗೆ ಢಂ ಎಂದು ದೊಡ್ಡ ಹಟ್ಟಿಯ ಹೆಬ್ಬಾರಮ್ಮನ ಗುಡಿಯಿಂದ ಶಬ್ಧ ಬಂದಿತೆಂದರೆ ಸಾಕು ಇಡೀ ಊರು ಊರಿಗೇ ವಿದ್ಯುತ್ ಸಂಚಾರವಾದ ಹಾಗೆ ಆಗಿ ಎಲ್ಲರೂ ದಡಾ ಬಡಾ ಎಂದು ಎದ್ದು ನಿಂತು ಚಾವಟೀ ಅಮ್ಮನ ಬರುವಿಕೆಗಾಗಿ ಸಿದ್ಧರಾಗುತ್ತಾರೆ. ಜ್ವಾಲಾರ ಹೂವಿನಿಂದ ಅಲಂಕೃತಳಾದ ಚಾವಟೀ ಅಮ್ಮನನ್ನು ಎದೆಯ ಮೇಲೆ ಧರಿಸಿರುವ ಪೂಜಾರಿಯನ್ನು ನಾಲ್ಕಾರು ಜನ ಹಿಂದಿನಿಂದ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದರೂ ಕಳೆದ ಹದಿನೈದು ದಿನಗಳಿಂದ ಕೇವಲ ದೇವಸ್ಥಾನದ ಮೂರು ಪಿಡಿಚೆ ಪ್ರಸಾದ ತಿಂದು ಬಹಳ ಶ್ರಧ್ಧಾ ಭಕ್ತಿಯಿಂದ ಇದ್ದರೂ, ಮೈಮೇಲೆ ಧರಿಸಿರುವ ದೇವಿಯ ಪ್ರಭಾವವೋ, ದೋಣ್ ಮತ್ತು ಡೊಳ್ಳಿನ ಶಬ್ಧಕ್ಕೋ ಅಥವಾ ಊರ ಗಂಡು ಮಕ್ಕಳ ಅಲ್ಯೋ ಅಲ್ಯೋ ಅಲ್ಯೋ ಎಂದು ಹುರಿದುಂಬಿಸುವಿಕೆಯ ಪ್ರಭಾವವೋ ಎನೋ? ಕೈಯಲ್ಲಿ ಬೆಳ್ಳಿಯ ರೇಕನ್ನು ಸುತ್ತಿದ ನಾಗರ ಬೆತ್ತವನ್ನು ಹಿಡಿದು ಝಳುಪಿಸುತ್ತಾ ಆರ್ಭಟದಿಂದ ದೊಡ್ಡ ಹಟ್ಟಿ ಬಿಟ್ಟು ಹೊನ್ನಮ್ಮನ ಗುಡಿಯ ಬಳಿ ಬರುತ್ತಿದ್ದರೆ ಎಲ್ಲರೂ ಎದ್ದೆನೋ ಬಿದ್ದೆನೋ ಎಂದು ದಿಕ್ಕಾಪಲಾಗಿ ದೇವಸ್ಥಾನದ ಮುಂದಕ್ಕೆ ಓಡಿ ಹೋಗಿ ಹೊನ್ನಮ್ಮನ್ನ ದೇವಾಲಯದ ಮುಂದೆ ರಪ್ ರಪ್ ರಪ್ ಎಂದು ನೂರಾರು ತೆಂಗಿನ ಕಾಯಿಯ ಈಡುಗಾಯಿ ಹಾಕಿ ಚಾವಟಿ ಅಮ್ಮನನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದರೆ, ಉಳಿದವರು ಅಲ್ಯೋ ಅಲ್ಯೋ ಅಲ್ಯೋ ಎಂದು ಮತ್ತಷ್ಟೂ ಹುರಿದುಂಬಿಸಲು ಪ್ರಯತ್ನಿಸುತ್ತಿರುತ್ತಾರೆ. ಹಾಗೆ ಪ್ರೇರೇಪಿತವಾಗಿ ಕೆಲವೊಂದು ಬಾರಿ ಚಾವಟಿ ಅಮ್ಮ ಜನರ ಮೇಲೆ ಏರಿ ಹೋಗಿ ತನ್ನ ಬೆತ್ತದಿಂದ ಬಾರಿಸುವುದೂ ಉಂಟು. ಒಮ್ಮೆ ಹಾಗೆ ಯಾರಿಗಾದರೂ ಚಾವಟಿ ಅಮ್ಮನಿಂದ ಪೆಟ್ಟು ಬಿದ್ದಿತೆಂದರೆ ಆತನೋ ಇಲ್ಲವೇ ಆಕೆಯೋ ಎನೋ ತಪ್ಪು ಮಾಡಿರಬೇಕು ಇಲ್ಲವೇ ಮಡಿ ಮೈಲಿಗೆ ಇಲ್ಲವೇ ಆಚಾರ ವಿಚಾರಗಳಲ್ಲಿ ಲೋಪ ಎಸಗಿರಬೇಕೆಂಬ ಭಾವನೆ ಊರಿನವರಿಗಿದ್ದು ಹಾಗೆ ಪೆಟ್ಟು ತಿಂದವರು ನಂತರ ದೇವರಲ್ಲಿ ಕ್ಷಮಾಪಣೇ ಬೇಡುವ ಪರಿಪಾಠವಿದೆ. ಹಾಗಾಗಿ ಈ ಚಾವಟಿಯಮ್ಮನೇ  ಇಡೀ  ಚೋಮನ ಹಬ್ಬಕ್ಕೆ ಪ್ರಮುಖ ಅಕರ್ಷಣೆ  ಎಂದರೂ ತಪ್ಪಾಗದು.

choma3ಹಾಗೆ ಈಡುಗಾಯಿಯಿಂದ ಶಾಂತವಾದ ಚಾವಟಿ ಅಮ್ಮಾ ಹೊನ್ನಾದೇವಿಯ ಗುಡಿಯ ಮುಂದೆ ನಿಂತು ಆರತಿ ಮಾಡಿಸಿಕೊಂಡು ಅದರ ಮುಂದೆ ಆ ಇಬ್ಬರೂ ಚೋಮನ ವೇಷಧಾರಿಗಳು ಮತ್ತು ಹಸಿರು ಮುಖ ಹೊತ್ತ ಹೊನ್ನಮ್ಮ ಸಹಿತ ಹಿಮ್ಮುಖವಾಗಿ ನಡೆದುಕೊಂಡು ಊರ ಮುಂದಿನ ಅರಳೀ ಕಟ್ಟೆಯತ್ತ ಸಾಗಿದರೆ, ಅದರೆ ಹಿಂದೆಯೇ ಸರ್ವಾಲಂಕೃತವಾದ ಪಲ್ಲಕ್ಕಿ ಸಾಗುತ್ತದೆ. ಊರ ತುಂಬಾ ಬಣ್ಣ ಬಣ್ಣದ ಸೀರಿಯಲ್ ಸೆಟ್ ಮತ್ತು ನಾನಾ ರೀತಿಯ ದೇವಾನು ದೇವತೆಗಳಿಂದ ಕಂಗೊಳಿಸುತ್ತಿರುತ್ತದೆ. ಹಬ್ಬಕ್ಕೆಂದೇ ವಿಶೇಷವಾಗಿ ನುಗ್ಗೇಹಳ್ಳಿಯಿಂದ ಮನೆಯಲ್ಲಿಯೇ ಪಟಾಕಿ ತಯಾರಿಸಿಕೊಂಡು ಬರುವ ಸಾಬರು ನಾನಾ ರೀತಿಯ ಬಾಣ ಬಿರುಸಿಗಳನ್ನು ಗಗನಕ್ಕೇರಿಸುತ್ತಾ , ನಾನಾ ರೀತಿಯ ಬಾಂಬ್ಗಳನ್ನು ಸಿಡಿಸುತ್ತಾ ಊರ ಹಬ್ಬಕ್ಕೆ ಮತ್ತಷ್ಟು ವಿಶೇಷ ಮೆರಗನ್ನು ಬರುತ್ತದೆ.

choma1ಹೀಗೆ ನಿಧಾನವಾಗಿ ತಮಟೆ, ನಾದಸ್ವರದೊಂದಿಗೆ ಊರ ಮುಂದಿನ ಅರಳಿಕಟ್ಟೆಯ ಬಳಿ ತಲುಪಿ ಅಲ್ಲಿ ಮಳೆ ಬೆಳೆ ಶಾಸ್ತ್ರ ಕೇಳುವ ಪರಿಪಾಠವಿದೆ. ಎರಡನೆಯ ಕಂಬದ ದಿನ ದೇವಸ್ಥಾನದಲ್ಲಿ ಮಡಕೆಯಲ್ಲಿ ಬಿತ್ತನೆ ಮಾಡಿದ್ದ ಧವಸ ಧಾನ್ಯಗಳ ಚಿರುರುವಿಕೆಯ ಮೇಲೆ ಆ ವರ್ಷದ ಊರಿನ ಬೆಳೆ ಅವಲಂಭಿವಾಗಿರುತ್ತದೆ ಎಂಬ ನಂಬಿಕೆ ಊರಿನ ಜನರಿಗಿರುತ್ತದೆ. ಅಲ್ಲಿ ಮಳೆ ಬೆಳೆ ಶಾಸ್ತ್ರ ಮುಗಿದು ಡಣ್ ಎಂದು ಶಬ್ಧ ಕೇಳಿಸುತ್ತಿದ್ದಂತೆಯೇ ಹಸಿರು ಮುಖದ ಹೊತ್ತಿರುವ ಹೊನ್ನಮ್ಮನ ಅರ್ಚಕರು, ಅವರ ಪರಿಚಾರಕಾರೂ, ಛತ್ರಿ ಹಿಡಿದ ವೀರಶೈವರೂ ರಭಸವಾಗಿ ಒಲಂಪಿಕ್ಸ್ ಕ್ರೀಡೆಗಿಂತಲೂ ಅಧಿಕ ವೇಗದಿಂದ ಓಡಿ ಬಂದು ಗುಡಿ ಸೇರುವುದನ್ನು ನೋಡುವುದೇ ಚೆಂದ. ನಂತರ ಪಲ್ಲಕ್ಕಿಯ ಮೇಲಿದ್ದ ಉತ್ಸವ ಮೂರ್ತಿಯನ್ನು ರಂಗ ಮಂಟಪದಲ್ಲಿ ಉಯ್ಯಾಲೆಮಣೆಯಲ್ಲಿ ಇಟ್ಟರೆ, ಚಾವಟಿ ಅಮ್ಮಾ ಊರಿನ ಒಳಗಿರುವ ಲಕ್ಷ್ಮೀ ನರಸಿಂಹ, ಶಂಭು ಲಿಂಗ, ಗಾಣಿಗರ ಹಟ್ಟಿಯ ಲಕ್ಷ್ಮೀ ದೇವಿ, ರಂಗ ಮಂಟಪದ ಮುಂದಿನ ಗಣೇಶನ ಗುಡಿಯ ಮಂದೆ ಹೋಗಿ ಆರತಿ ಬೆಳಗಿಸಿಕೊಂಡು ಊರ ಶಾನುಭೋಗರಾದ ನಮ್ಮ ಮನೆಯ ಮುಂದೆ ಬರುವ ಹೊತ್ತಿಗೆ ಶಾಂತ ಸ್ವರೂಪಳಾಗಿರುತ್ತಾಳೆ. ನಮ್ಮ ಮನೆಯ ಹೆಂಗಸರು ಮನೆಯ ಹಿರಿಯ ಮುತ್ತೈದೆಯ ನೇತೃತ್ವದಲ್ಲಿ ಹೆಬ್ಬಾರಮ್ಮ, ಚಾವಟಿಯಮ್ಮ ಮತ್ತು ಚೋಮಗಳಿಗೆ ಆರತಿ ಬೆಳಗಿ ಅವರಿಗೆಲ್ಲರಿಗೂ ಎಳನೀರು ಕೊಟ್ಟು ಈಡುಗಾಯಿ ಹೊಡೆಯುತ್ತಿದ್ದಂತೆ ಚಾವಟಿಯಮ್ಮ ತನ್ನ ಗುಡಿಗೆ ಹೋಗಿ ಸೇರಿಕೊಂಡರೆ, ಚೋಮ ವೇಷಧಾರಿಗಳು ಹೊನ್ನಮ್ಮನ ಗುಡಿಗೆ ಹೋಗಿ ತಮ್ಮ ವೇಷ ಕಳಸಿ ಸ್ವಲ್ಪ ವಿಶ್ರಮಿಸಿಕೊಳ್ಳುತ್ತಾರೆ.

choma5ಇಷ್ಟೆಲ್ಲಾ ಮುಗಿಯುತ್ತಿದ್ದಂತೆಯೇ ರಂಗ ಮಂಟಪದ ಮುಂದೆ ತೆಂಗಿನ ಗರಿಯ ಸೋಗೆಗಳಿಗೆ ಬೆಂಕಿಹಾಕಿ ಚರ್ಮದ ತಮಟೆಗಳನ್ನು ಹದವಾಗಿ ಕಾಯಿಸಿ, (ಈಗೆಲ್ಲಾ ಪಾಲೀಥೀನ್ ತಮಟೆಗಲು ಬಂದಿವೆಯಾದರೂ ಚರ್ಮದ ತಮಟೆಯ ನಾದ ಮುಂದೆ ಇವುಗಳು ಏನು ಇಲ್ಲ ಎನ್ನುವಂತಿದೆ) ಟ್ರಣ ಟ್ರಣ್ ಎನ್ನುತ್ತಿದ್ದಂತೆಯೇ ಅಬಾಲಾ ವೃಧ್ಧರಾದಿಯರೂ ಕೈಯಲ್ಲಿ ಕೈಯಲ್ಲಿ ಶಲ್ಯವೋ ಇಲ್ಲವೇ ಹೆಗಲು ಮೇಲಿನ ವಸ್ತ್ರವನ್ನು ಹಿಡಿದುಕೊಂಡು ಅಲ್ಯೋ ಅಲ್ಯೋ ಅಲ್ಯೋ ಎಂದು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ರಂಗ ಕುಣಿಯುವುದಕ್ಕೆ ಸಿದ್ದರಾಗಿರುತ್ತಾರೆ. ಸುಮಾರು ಹತ್ತು ಹದಿನೈದು ನಿಮಿಷ ವಿವಿಧ ಗತ್ತಿನಲ್ಲಿ ರಂಗ ಕುಣಿಯುತ್ತಿದ್ದಂತೆಯೇ ಅವರ ಆಯಸವನ್ನು ತಣಿಸಲು ಮತ್ತು ಅವರನ್ನು ಮನರಂಜಿಸಲು ವಿವಿಧ ವೇಷಗಳನ್ನು ಹೊತ್ತು ತಂದು ನಾನಾ ರೀತಿಯ ಹಾಸ್ಯ ಕುಚೇಷ್ಟೆಗಳಿಂದ ಐದು ಹತ್ತು ನಿಮಿಷ ಎಲ್ಲರನ್ನೂ ರಂಜಿಸುತ್ತಾರೆ. ಹಾಗೆ ಹಾಸ್ಯ ಕುಚೇಷ್ಟೆಗಳನ್ನು ಮಾಡುವ ಸಂಧರ್ಭದಲ್ಲಿ ಕೆಲವೊಂದು ಬಾರಿ ಗ್ರಾಮೀಣ ರೀತಿಯ ಅಶ್ಲೀಲಕ್ಕೆ ತಿರುಗಿ ಅಲ್ಲಿರುವ ಹೆಂಗಳೆಯರಿಗೆ ಮುಜುಗರ ತರುವ ಸಂದರ್ಭಗಳು ಉಂಟು ಹೀಗೆ ಸುಮಾರು ಒಂದು ಗಂಟೆಗಳ ಕಾಲ ರಂಗ ಕುಣಿಯುವುದು ಮತ್ತು ಹಾಸ್ಯಗಳನ್ನು ನೋಡುವಷ್ಟರಲ್ಲಿಯೇ ಮೂಡಣದಲ್ಲಿ ಉದಯನ ಆಗಮನದ ಸೂಚನೆಯನ್ನು ಪಕ್ಕದ ಗೌಡರ ಹಟ್ಟಿಯ ಹುಂಜ ಕೊಕ್ಕೊರುಕ್ಕೊ ಎಂದು ಸೂಚ್ಯವಾಗಿ ತೋರಿಸುತ್ತದೆ.

ಬೆಳಗಾಗುವಷ್ಟರಲ್ಲಿ ಊರಿನ ಗುಡಿಗೌಡ, ಶುಚಿರ್ಭೂತನಾಗಿ ಕಂಬಳಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಮತ್ತು ಹೊದ್ದುಕೊಂಡು ಹಣೆಗೆ ತಿಲಕ, ಕೈ ಕಾಲುಗಳಿಗೆ ಬಾಜೂ ಬಂದಿ, ಗೆಜ್ಜೆಗಳನ್ನು ಕಟ್ಟಿಕೊಂಡು ನೇಗಿಲುಧಾರಿಯಾಗಿ ರಂಗಮಂಟಪದ ಮುಂದೆ ಹೊನ್ನಾರು ಕಟ್ಟಲು ಸಿದ್ಧರಾಗುತ್ತಾರೆ. ಹಾಗೆ ತಂದ ನೇಗಿಲಿಗೆ ಊರಿನ ಬಡಿಗೇರರು ಅಂದರೆ ಮರ ಮುಟ್ಟು ಕೆಲಸ ಮಾಡುವ ಆಚಾರಿಗಳು ನೇಗಿಲನ್ನು ಬಂದೋಬಸ್ತು ಮಾಡಿದರೇ, ಊರಿನ ಕಮ್ಮಾರರು, ಅಂದರೆ ಕುಲುಮೆ ಕೆಲಸಮಾಡುವ ಆಚಾರಿಗಳು ನೇಗಿಲಿನ ತುದಿಯ ಲೋಹದ ಭಾಗವನ್ನು ಮೊನಚು ಮಾಡಿ ಸರಿಯಾದ ಉಳುಮೆಗೆ ಅನುವು ಮಾಡಿಕೊಡುತ್ತಾರೆ. ಇನ್ನು ಹಿಂದಿನ ರಾತ್ರಿ ಚೋಮನನ್ನು ಧರಿಸಿದ್ದವರು ಇಂದು ಮುಖಕ್ಕೆ ಕಪ್ಪು ಬಣ್ಣ ಬಳಿದು ಕೊಂಡು ಎತ್ತಿನ ಸಂಕೇತವಾಗಿ ನೇಗಿಲಿಗೆ ತಮ್ಮ ಹೆಗಲನ್ನು ಕೊಟ್ಟರೆ, ಗುಡಿಗೌಡ ಜೂಲ್ ಜೂಲ್ ಎಂದು ಸಾಂಕೇತಿಕವಾಗಿ ನೆಲವನ್ನು ಉತ್ತಿ ನಂತರ ಉತ್ತ ಜಾಗದಲ್ಲಿ ಲಡರ್ ಬಡರ್, ಲಡರ್ ಬಡರ್ ಎಂದು ಶಬ್ಧಮಾಡುತ್ತಾ ರಾಗಿ, ಬತ್ತ, ಅವರೇ ಕಾಳು ಹುರಳೀ ಕಾಳು ಮುಂತಾದ ಕಾಳುಗಳನ್ನು ಸಾಂಕೇತಿವಾಗಿ ಬಿತ್ತುವ ಮೂಲಕ ಅಧಿಕೃತವಾಗಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಮ್ಮ ಮುಂದಿನ ಬೆಳೆಗಾಗಿ ಊಳುಮೆಗೆ ಚಾಲನೆ ನೀಡುತ್ತಾರೆ. ಹೀಗೆ ಗುಡಿ ಗೌಡರಿಂದ ಸಾಂಕೇತಿಕವಾಗಿ ಅಧಿಕೃತವಾಗಿ ಉಳುಮೆಮಾಡಿದ ನಂತರವೇ ಸುತ್ತಮುತ್ತಲಿನ ಹದಿನಾರು ಹಳ್ಳಿಗಳಲ್ಲಿ ಬೇಸಾಯ ಆರಂಭಿಸುವ ಪರಿಪಾಠವಿದೆ.

ಹೊನ್ನಾರು ಕಟ್ಟಿದ ನಂತರ ತಮಟೆ ಮತ್ತು ನಾದಸ್ವರ ವಾದ್ಯಗಳೊಂದಿಗೆ ರಂಗಮಂಟಪಕ್ಕೆ ಮೂರು ಸುತ್ತು ಹಾಕಿ ಹೊನ್ನಮ್ಮನ ಗುಡಿಯಲ್ಲಿ ಮಹಾಮಂಗಳಾರತಿ ನಡೆದು ಪ್ರಸಾದ ವಿನಿಯೋಗದೊಂದಿಗೆ ಚೋಮನ ಹಬ್ಬ ಮುಗಿಸಿ, ಅಕ್ಕ ಪಕ್ಕದ ಊರಿನಿಂದ ಬಂದವರೆಲ್ಲರೂ ತಮ್ಮ ತಮ್ಮ ಊರಿಗೆ ತೆರಳಲು ಅನುವಾದರೆ, ಈ ಉತ್ಸವಕ್ಕಾಗಿ ಮಾಡಿದ ಖರ್ಚು ವೆಚ್ಚಗಳ ಲೆಕ್ಕಹಾಕಿ ಮುಂದಿನ ವರ್ಷ ಮತ್ತಷ್ಟೂ ಅದ್ದೂರಿಯಾಗಿ ಚೋಮನ ಹಬ್ಬವನ್ನು ಆಚರಿಸುವಂತಾಗಲು ಇಂದಿನಿಂದಲೇ ಹಣ ಸಂಗ್ರಹಣ ಮಾಡುವ ಕಾಯಕ ಆರಂಭವಾಗುತ್ತದೆ.

choma2ಇಂದು ಎಲ್ಲರೂ ಊರಿನಲ್ಲಿ ಭಾವೈಕ್ಯತೆ, ಸಾಮರಸ್ಯದ ಬಗ್ಗೆ ಮಾತನಾಡುತ್ತಿದ್ದರೆ, ನಮ್ಮೂರಿನ ಪೂರ್ವಜರು ಬಹಳ ಹಿಂದೆಯೇ ನಮ್ಮ ಊರ ಹಬ್ಬದಲ್ಲಿ ಯಾವುದೇ ಜಾತಿ ಬೇಧವಿಲ್ಲದೆ, ಇಡೀ ಹಬ್ಬದ ಸಮಯದಲ್ಲಿ ಎಲ್ಲಾ ಜಾತಿಯವರಿಗೂ  ಒಂದೊಂದು ಜವಾಬ್ಧಾರಿಯನ್ನು ವಹಿಸಿ ಕೊದುವ ಮೂಲಕ  ಎಲ್ಲರೂ,  ಒಗ್ಗೂಡಿ ನಾಡಿನ ಹಿತಕ್ಕಾಗಿ ಜನರ ಸುಖಕ್ಕಾಗಿ ಹಬ್ಬವನ್ನು ಆಚರಿಸುವ ಪದ್ದತಿಯನ್ನು  ನೂರಾರು ವರ್ಷಗಳ ಹಿಂದೆಯೇ ರೂಡಿಯಲ್ಲಿ ತಂದಿರುವುದು ಶ್ಲಾಘನೀಯವೇ ಸರಿ.  ಅಂತಹ ಜವಾಬ್ಧಾರಿಯನ್ನು ವಹಿಸಿಕೊಂಡಿರುವ ಬಹುತೇಕರು   ಊರಿನಲ್ಲಿ ವಾಸಿಸದೇ ಇದ್ದರೂ ಹಬ್ಬದ ಸಮಯದಲ್ಲಿ ಸರಿಯಾಗಿ ಬಂದು ಊರಿನ ಸಂಪ್ರದಾಯದ ಪ್ರಕಾರ ಎಲ್ಲಾ ಶಾಸ್ತ್ರ ಸಂಪ್ರದಾಯಗಳನ್ನೂ ಚಾಚೂ ತಪ್ಪದೇ ನಡೆಸಿಕೂಂಡು ಹೋಗುತ್ತಿರುವುದು  ನಿಜಕ್ಕೂ ಅನನ್ಯ ಮತ್ತು ಅನುಕರಣಿಯವೇ ಸರಿ.

ಇದೇ ಗುರುವಾರ ನಮ್ಮೂರಿನಲ್ಲಿ ದೊಡ ಹಬ್ಬ ಎಂದೇ ಹೆಸರಾಗಿರುವ ಹೊನ್ನಮ್ಮನ  ಹಬ್ಬದ ಬಗ್ಗೆ ತಿಳಿಸಿಕೊಡುತ್ತೇನೆ.  ಮುಂದಿನ ಬಾರಿ ಸಮಯ ಮಾಡಿಕೊಂಡು ನಮ್ಮೂರಿಗೆ ಖುದ್ದಾಗಿ ಬಂದು ಎಲ್ಲವನ್ನೂ ಕಣ್ಣಾರೆ ನೋಡಿ ಆನಂದಿಸುವುದರ ಜೊತೆಗೆ ಆ ತಾಯಿ ಹೊನ್ನಮ್ಮನ ಕೃಪಾಶೀರ್ವಾದ ನಿಮ್ಮ ಮೇಲೆ ಇರಲಿ.  ಮುಂದಿನ ವರ್ಷದ ಚೋಮನ ಹಬ್ಬಕ್ಕೆ ನಿಮ್ಮ ಆಗಮನಕ್ಕಾಗಿ ನಾವು ಕಾಯ್ತಾ ಇರ್ತೀವಿ. ನೀವೆಲ್ಲರೂ ಬರ್ತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ

ಉಡುಪಿ ಉಪಹಾರ ಗೃಹ

udu6ಉಡುಪಿ ಎಂದೊಂಡನೆಯೇ ಆಸ್ಥಿಕರಿಗೆ ಉಡುಪಿಯ ಶ್ರೀ ಕೃಷ್ಣ, ಅಷ್ಟ ಮಠಗಳು, ಸಂಸ್ಕೃತ-ವೇದ ಪಾಠ ಶಾಲೆಗಳು,  ರಥದ ಬೀದಿ, ಇತ್ತೀಚೆಗೆ ಅಗಲಿದ ಪೇಜಾವರ ಶ್ರೀಗಳು ನೆನಪಿಗೆ ಬಂದರೆ, ವಾಣಿಜ್ಯೋದ್ಯಮಿಗಳಿಗೆ  ಅವಿಭಜಿತ ದಕ್ಷಿಣ ಕರ್ನಾಟಕದ ಭಾಗವಾಗಿ ಉಡುಪಿಯಿಂದಲೇ ಆರಂಭವಾಗಿ ಇಂದು ಹಲವಾರು ರಾಷ್ಟ್ರೀಕೃತ ಬ್ಯಾಂಕಿನೊಂದಿಗೆ ವಿಲೀನವಾಗಿ ಹೋದ, ಕೆನರ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕುಗಳು ನೆನಪಾಗುತ್ತದೆ.  ಇನ್ನು  ತಿಂಡಿ ಪೋತರಿಗೆ ಉಡುಪಿ ಎಂದೊಡನೆ ನೆನಪಿಗೆ ಬರುವುದೇ, ಉಡುಪಿ ಶ್ರೀಕೃಷ್ಣ ಮಠದ ಭೋಜನಶಾಲೆ ಮತ್ತು  ರಾಜ್ಯಾದ್ಯಂತ, ದೇಶಾದ್ಯಂತ ಏನು ಪ್ರಪಂಚಾದ್ಯಂತ ಹರಡಿಕೊಂಡಿರುವ ಶುಚಿ ರುಚಿಯಾದ, ಶುಧ್ಧ ಸಸ್ಯಾಹಾರಿ  ಅಪ್ಪಟ ದಕ್ಷಿಣ ಭಾರತದ ಅಡುಗೆಯ  ಉಡುಪಿ ಹೋಟೆಲ್ಗಳು ಎಂದರೆ ಅತಿಶಯೋಕ್ತಿಯೇನಲ್ಲ.

udupiಇದಕ್ಕೆ ಪೂರಕವಾಗುವಂತಹ  ಬಹಳ ಹಳೆಯದಾದ ಜೋಕ್ ಒಂದಿದೆ. ಪ್ರಪಂಚಾದ್ಯಂತ  ಎಲ್ಲಿಂದ ಎಲ್ಲಿಗೆ ಹೋದರೂ, ಅಲ್ಲೊಂದು ಮಲೆಯಾಳೀ ಟೀ ಅಂಗಡಿ ಸಿಗುತ್ತದಂತೆ.  ಚಂದ್ರನ ಮೇಲೆ  ಪ್ರಪ್ರಥಮವಾಗಿ ಕಾಲಿಟ್ಟವರು ನಾವೇ ಎಂದು ಬೀಗುತ್ತಿದ್ದ  ನೀಲ್ ಆರ್ಮ್ ಸ್ಟ್ರಾಂಗ್ ಮತ್ತು ಬುಝ್ ಆಲ್ಡ್ರಿನ್  ಅವರಿಗೆ ಚಾಯ್ ಚಾಯ್ ಎಂದು ಒಬ್ಬ ಮಲೆಯಾಳಿ ಎದುರಾದರೆ ಅವನ ಹಿಂದೆ ಬಿಸಿ ಬಿಸಿ ಇಡ್ಲಿ ವಡೆ, ಉಪ್ಪಿಟ್ಟು ಇದೆ ಏನ್ ಕೊಡ್ಲಿ ಮಾರಾಯಾ ಅಂತಾ ಕೇಳಿದ್ರಂತೇ ಉಡುಪಿಯ ಭಟ್ಟರುಸಿರಿಗನ್ನಡಂ ಗೆಲ್ಗೆ ಎನ್ನುವುದನ್ನು ಸಿರಿಗನ್ನಡಂ ಗಲ್ಲಿ ಗಲ್ಲಿಗೆ  ಎಂದು ಬದಲಾವಣೆ ಮಾಡಿಕೊಂಡಂತೆ ಈಗ  ಗಲ್ಲಿ ಗಲ್ಲಿಗೊಂದು ಉಡುಪಿ ಹೋಟೆಲ್ಗಳಿದ್ದು ಎಲ್ಲಡೆಯಲ್ಲೂ  ಕನ್ನಡದ ಆಹಾರ ಪದ್ದತಿಯ ಜೊತೆ ಕನ್ನಡತನವನ್ನು ಪಸರಿಸಿದ ಕೀರ್ತಿ ಉಡುಪಿ ಹೋಟೆಲ್ ಅವರದ್ದು ಎಂದರೂ ತಪ್ಪಾಗಲಾರದು.

ಈಗಂತೂ ಒಂದು ಊರಿನಲ್ಲಿ ಒಂದು ಹೊಸಾ ಬಡಾವಣೆ  ತಲೆ  ಎದ್ದಿತೆಂದರೆ  ಖಂಡಿತವಾಗಿಯೂ ಅಲ್ಲೊಂದು  ಉಡುಪಿ ಹೋಟೆಲ್ ಇದ್ದೇ ಇರುತ್ತದೆ.  ಆಡು ಮುಟ್ಟದ ಸೊಪ್ಪಿಲ್ಲ, ಅನ್ನೋ ಹಾಗೆ ಉಡುಪಿ ಹೋಟೆಲ್ ಗಳಿಲ್ಲದ ಊರೇ ಇಲ್ಲ. ಮೊದ ಮೊದಲು ಹೋಟೆಲ್ ನಡೆಸುವ ಆಸೆ, ಅಥವಾ ಯೋಚನೆ ಉಡುಪಿಯವರಿಗೇ ಏಕೆ ಬಂತು? ಅನ್ನುವ ಬಗ್ಗೆ ಸರಿಯಾದ ಮಾಹಿತಿ ಎಲ್ಲಿಯೂ ಸಿಗುವುದಿಲ್ಲವಾದರೂ, ಶಿವರಾಮ ಕಾರಾಂತರ ಮರಳಿ ಮಣ್ಣಿಗೆ ಪುಸ್ತಕದಲ್ಲಿ ಬರುವ ಎಳೆಯಂತೆ ಕುಂದಾಪುರದ ಕಡೆಯ ಶಿವಳ್ಳಿ ಬ್ರಾಹ್ಮಣರು ತಮ್ಮ ಮಕ್ಕಳು ತಮ್ಮಂತೆಯೇ ಊರಿನಲ್ಲಿಯೇ ಇರುವ ಬದಲು ದೂರದ ಪಟ್ಟಣಗಳಿಗೆ ಹೋಗಿ ಓದಿ ದೊಡ್ಡ ಕಛೇರಿಗಳಲ್ಲಿ ಕೆಲಸ ಮಾಡಲಿ ಎಂದು ಬಯಸಿದ್ದರಿಂದ ಮಕ್ಕಳನ್ನು ಹೊರ ಊರಿಗೆ ಕಳುಹಿಸಿದರು. ಅಲ್ಲಿ ತಮ್ಮ ಮಕ್ಕಳಿಗೆ ಊಟ ಸರಿಯಾಗಿ ಸಿಗದ ಕಾರಣ ಅವರ ಜೊತೆ ಇಡೀ ಸಂಸಾರಗಳೂ ಆ ಪಟ್ಟಣಗಳಲ್ಲಿ  ವಲಸೆ ಹೋಗಿ ಜೀವನಾವಶ್ಯಕಕ್ಕಾಗಿ ಬೇಸಾಯ ಮತ್ತು  ಅಡುಗೆ ಬಿಟ್ಟು  ಬೇರೇನೂ ಬಾರದ ಕಾರಣ ಅಲ್ಲಿಯೇ ಸಣ್ಣದಾಗಿ ಹೋಟೆಲ್ ಆರಂಭಿಸಿದರುಇಂಗು ತೆಂಗು ಕೊಟ್ಟರೆ ಮಂಗವೂ ಅಡುಗೆ ಚೆನ್ನಾಗಿಯೇ ಮಾಡುತ್ತದೆ ಎನ್ನುವ ಗಾದೆಯಂತೆ,  ಯಥೇಚ್ಚಚಾಗಿ ಇಂಗು ತೆಂಗು ಬಳಸಿ ಶುಚಿ ರುಚಿಯಾಗಿ ಮಾಡಿದ ಅಡುಗೆಗಳು ಎಲ್ಲರ ನಾಲಿಗೆ ಬರವನ್ನು ಕಳೆದದ್ದರಿಂದ ಆ ಹೋಟೇಲ್ಗಳು  ಬಹುಬೇಗನೆ ಹೆಸರುವಾಸಿಯಾಗ ತೊಡಗಿದವು. ಇದರ ಹೊರತಾಗಿ ಬೇರೇ ಯಾವುದಾದರೂ ಕಾರಣಕ್ಕಾಗಿ ಉಡುಪಿಯ ಹೊಟೇಲ್ಗಳು ಪ್ರಸಿದ್ಧವಾಗಿದೆ ಎಂದರೆ ಬಲ್ಲವರಾಗಲೀ ಅಥವಾ ಉಡುಪಿ  ಕಡೆಯವರೇ ಹೇಳಬೇಕು. ತಿಂಡಿಪೋತ ಅನ್ನೋ ಹೆಸರು ಗಳಿಸಿರೋ ಕೃಷ್ಣ ಇರೋ ಊರಿನವರಾದ್ದರಿಂದ,  ಆಷ್ಟ ಮಠಗಳ ಪಾಕ ಶಾಲೆ ಮತ್ತು ದೇವಾಲಯಗಳಲ್ಲಿ ಇದ್ದವರೇ   ಕರ್ನಾಟಕಾದ್ಯಂತ,  ಭಾರತಾದ್ಯಂತ  ಹಲವಾರು ರಾಜ್ಯಗಳಲ್ಲಿ,ಅದರಲ್ಲೂ, ಮಹಾರಾಷ್ಟ್ರ, ತಮಿಳುನಾಡು,  ದೆಹಲಿಯಯ ಕಡೆಗಳಲ್ಲಿ   ಅಲ್ಲದೇ ವಿದೇಶಗಳಲ್ಲಿಯೂ ವಿಶೇಷವಾಗಿ ಉಡುಪಿ ಹೋಟೆಲ್ಗಳನ್ನು   ಆರಂಭಿಸಿ ಉಡುಪಿಯ ಹೆಸರನ್ನು ವಿಶ್ವವಿಖ್ಯಾತ ಮಾಡಿರುವುದಂತೂ ಸತ್ಯವೇ ಸರಿ.

udu918ನೇ ಶತಮಾನದ ಅಂತ್ಯ ಮತ್ತು  19ನೇ ಶತಮಾನದ ಆರಂಭದಲ್ಲಿ ತಮಿಳುನಾಡಿಗೆ ಲಗ್ಗೆ ಇಟ್ಟ  ಈ ಉಡುಪಿ ಹೋಟೆಲ್ಗಳು  ತಮಿಳ್ನಾಡಿನಲ್ಲಿನಲ್ಲಂತೂ ಹೇಗೆ ಹಾಸುಹೊಕ್ಕಾಗಿದೆ ಎಂದರೆ  ಉಡುಪಿ ಎಂದರೆ   ಸಸ್ಯಾಹಾರಿ ಎನ್ನುವಂತಹ ಅನ್ವರ್ಥನಾಮ ಬಂದುಬಿಟ್ಟಿದೆ. ವನಸ್ಪತಿ ಎಣ್ಣೆ ಎಂದರೆ ಜನರಿಗೆ ಹೇಗೆ   Dalda ಎನ್ನುವುದು ಮನಸ್ಸಿಗೆ ಮೂಡುತ್ತದೆಯೋ ಅದೇ ರೀತಿ   ವೆಜಿಟೇರಿಯನ್ (ಸಸ್ಯಹಾರಿ)  ಅಂತ ಹೇಳುವ  ಬದಲು ಎಲ್ಲರೂ ಉಡುಪಿ ಅಂತಷ್ಟೇ ಹೇಳುತ್ತಾರೆ. ಸರವಣ ಭವನ್ (ಉಡುಪಿ) ಅನ್ನೋ ಬೋರ್ಡ್ ಇಂದೂ ಸಹಾ ಎಲ್ಲಾ ಕಡೆಯಲ್ಲಿಯೂ ಕಾಣಬಹುದಾಗಿದೆ.  ಹೀಗೆ  ಆ ಹೋಟೆಲ್ ಗಳ ಮಾಲಿಕರು   ಆಂಧ್ರದವರಾಗಿರಬಹುದು, ಅಥವಾ ಉತ್ತರ ಭಾರತೀಯರೇ ಆಗಿರಬಹುದು ಅದು ವೆಜಿಟೇರಿಯನ್  ಹೋಟೆಲ್ ಆಗಿದ್ದಲ್ಲಿ ಅಲ್ಲಿಯ ಜನ ಗುರುತಿಸೋದೇ  ಉಡುಪಿ ಹೋಟೆಲ್ ಅಂತಲೇ.

udupi10ಇದೇ ರೀತಿಯ ಅನುಭವ ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲದೇ ದೂರದ ಅಮೇರಿಕಾದಲ್ಲಿಯೂ ಸ್ವತಃ ನಮಗಾಗಿದೆಅಮೇರೀಕಾದ ಲಾಸ್ ಏಂಜಲೀಸ್ ನಗರದಲ್ಲಿ ಭಾರತೀಯ ಅಂಗಡಿಗಳೇ ಹೆಚ್ಚಾಗಿರುವ ಲಿಟಲ್ ಇಂಡಿಯಾ ರಸ್ತೆಯಲ್ಲಿ ಹೋಗುತ್ತಿರುವಾಗ ಧುತ್ತೆಂದು ನಮ್ಮ ಕಣ್ಣಿಗೆ ಉಡುಪಿ ಪ್ಯಾಲೇಸ್ ಕಾಣಿಸಿದ ಕೂಡಲೇ ಎಲ್ಲೋ ನಿಧಿ ಸಿಕ್ಕಿದಂತೆ  ಅನುಭವವಾಗಿ  ಗೂಳಿಯಂತೆ  ಒಳಗೆ ನುಗ್ಗಿದೆವುಮೆನು ಏನೋ ಕನ್ನಡದ ಆಡುಗೆಗಳಾಗಿದ್ದರೂ, ಕನ್ನಡದ ಕಂಪು ಒಂದು ಚೂರು ಅಲ್ಲಿಲ್ಲದ್ದನ್ನು ಕಂಡು ಕಸಿವಿಸಿಗೊಂಡು ಹೋಟೆಲ್ ಮ್ಯಾನೇಜರ್ ಅವರನ್ನು ವಿಚಾರಿಸಿದಾಗ ತಿಳಿದ ವಿಷಯವೇನೆಂದರೆ  ಹೋಟೆಲ್ಲಿನ ಒಬ್ಬ ಮಾಲಿಕರು ಮಂಗಳೂರು ಕಡೆಯ ಕೊಂಕಣಿಯವರಾಗಿದ್ದ ಕಾರಣ  ತಮ್ಮ ಸಸ್ಯಹಾರೀ ಹೋಟೆಲ್ಲಿನ ಜನಾಕರ್ಷಣೆಗೆಂದು ಉಡುಪಿಯ ಹೆಸರಿಟ್ಟಿರುವುದಾಗಿ ತಿಳಿದುಬಂದಿತು.

ಈಗಾಗಲೇ ತಿಳಿಸಿದಂತೆ ಸಣ್ಣ ಸಣ್ಣದಾಗಿ ಮೈಸೂರು,  ಬಾಂಬೆ, ತಮಿಳುನಾಡು ಮತ್ತು ಆಂಧ್ರದ ಕೆಲವು ಕಡೆ ಆರಂಭವಾದ ಉಡುಪಿ ಹೋಟೆಲ್ಲುಗಳಲ್ಲಿ ಅತ್ಯಂತ  ವೇಗವಾಗಿ ಪ್ರಸಿದ್ಧಿ ಪಡೆದು ದೊಡ್ಡ ಮಟ್ಟದಲ್ಲಿ ಬೆಳೆದ  ಹೋಟೆಲ್ಲುಗಳೆಂದರೆ ಮೈಸೂರಿನ ದಾಸ್ ಪ್ರಕಾಶ್, ತಮಿಳುನಾಡಿನ ವುಡ್ ಲ್ಯಾಂಡ್ ಮತ್ತು ಬೆಂಗಳೂರಿನ  ಎಂಟಿಆರ್ ಹೋಟೆಲ್ಲುಗಳು. ಸರಿ ಸುಮಾರು 1920ನೇ ಇಸ್ವಿಯಲ್ಲಿ  ಹತ್ತು ಹನ್ನೆರಡು ವರ್ಷದ  ಉಡುಪಿಯ ಮೂಲದ ರಾಮ ನಾಯಕ್ ಎನ್ನುವರು ಉದ್ಯೋಗ ಅರೆಸಿಕೊಂಡು  ದಕ್ಷಿಣ ಭಾರತೀಯರೇ ಹೆಚ್ಚಾಗಿರುವ ಮಾತುಂಗ  ಪ್ರದೇಶಕ್ಕೆ ಬರುತ್ತಾರೆ. ಆರಂಭದಲ್ಲಿ  ಅಲ್ಲಿಯೇ ಸಣ್ಣ ಹೋಟೆಲ್ ಒಂದರಲ್ಲಿ  ಮುಸುರೆ ಕೆಲಸಕ್ಕೆ  ಸೇರಿ, ನಂತರ ತರಕಾರಿ ಹೆಚ್ಚಿಕೊಡುವ ಕೆಲಸ ಮಾಡುತ್ತಲೇ ಕೆಲವೇ ವರ್ಷಗಳಲ್ಲಿ ಒಳ್ಳೆಯ ಬಾಣಸಿಗರಾಗಿ ಭಡ್ತಿ ಪಡೆದು ಉತ್ತರ ಭಾರತದ ಎಲ್ಲಾ ರೀತಿಯ ಅಡುಗೆಯನ್ನು ಕರಗತ ಮಾಡಿಕೊಳ್ಳುತ್ತಾರೆ.

ಹೇಳಿ ಕೇಳಿ ಮುಂಬೈ ನಗರದ ಸದಾ ಜನಗಂಗುಳಿಯಿಂದ ಗಿಜಿ ಗಿಜಿ ಗುಟ್ಟುತ್ತಲೇ ಇರುತ್ತದೆ. ಬೆಳಗಿನ ಜಾವ ನಾಲ್ಕಕ್ಕೆ ದಿನ ಆರಂಭವಾದರೆ  ಮಧ್ಯರಾತ್ರಿ ಎರಡಕ್ಕೆ ಮುಕ್ತಾಯವಾಗುವಂತಹ ನಗರ ಅಲ್ಲಿ  1930ರಲ್ಲಿ ರಾಮ ನಾಯಕರು ಸಣ್ಣದಾಗಿ ತಮ್ಠ ಸ್ವಂತದ್ದೊಂದು ಹೋಟೆಲ್ ಆರಂಭಿಸಿ  ಇಡ್ಲಿ, ವಡೆ, ಉಪ್ಪಿಟ್ಟು ದೋಸೆ ಹೀಗೆ ಉಡುಪಿ ಶೈಲಿಯ ಅಡುಗೆಗಳನ್ನು  ಅಲ್ಲಿಯ ಜನಕ್ಕೆ ಪರಿಚಯಿಸಿ, ಕಡೆಗೆ 1942 ರಲ್ಲಿ ಉಡುಪಿ ಹೋಟೆಲ್ ಎಂಬ ಹೆಸರಿನಲ್ಲಿ ದೊಡ್ದದಾಗಿ ಹೋಟೆಲ್ ಆರಂಭಿಸುವ ಮೂಲಕ  ಉಡುಪಿಯ ಹೆಸರು ಮುಂಬೈಯಲ್ಲಿ ಅಜರಾಮರವಾಗುವಂತೆ ಮಾಡುತ್ತಾರೆ. ಮುಂದೇ ಇದೇ ಹೋಟೆಲ್  ದಕ್ಷಿಣ ಕನ್ನಡದ ಅದೆಷ್ಟೋ ಹುಡುಗರಿಗೆ ಆಶ್ರಯ ತಾಣವಾಗುತ್ತದೆ.  ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಹೆಸರುವಾಸಿಯಾಗಿರುವ ದಯಾನಾಯಕ್ ಅವರೂ ಸಹಾ ಮುಂಬೈಯ್ಯಿಗೆ ಹೋದ ಆರಂಭದ ದಿನಗಳಲ್ಲಿ ಇದೇ ಹೋಟೆಲ್ ಆಶ್ರಯ ನೀಡಿತ್ತು ಎಂದು ತಮ್ಮ ಸಂದರ್ಶನವೊಂದರಲ್ಲಿ ಹೇಳಿ ಕೊಂಡಿರುವುದು ಈ ಉಡುಪಿ ಹೋಟೆಲ್ಲಿನ ಹೆಗ್ಗಳಿಕೆಯಾಗಿದೆ.

udu7ಮೈಸೂರಿನಲ್ಲಿ  ಉಡುಪಿಯ ಮೂಲದವರೇ ಆದ  ಕೆ. ಸೀತಾರಾಮ ರಾವ್ ಅವರು   ದಾಸ್ ಪ್ರಕಾಶ್ ಹೋಟೆಲ್ ಎಂಬ ಹೆಸರಿನಲ್ಲಿ ಉಡುಪಿಯ ಪ್ರಸಿದ್ಧ ಖಾದ್ಯಗಳಾದ ಕಡುಬು ಚಟ್ನಿ, ಕಾಯಿ ಹಾಲು, ನೀರು ದೋಸೆ, ಕಾಯಿ ಕಡುಬು, ಹಲಸಿನ ಎಲೆ ಕಡುಬು, ಸುಳಿ ಕಡಬು, ಉಂಡೆ ಕಡಬು, ಗಸಿ ಪತ್ರೊಡೆ, ಹಲಸಿನ ಹಣ್ಣಿನ ಗಟ್ಟಿ, ಯಲ್ಲಪ್ಪ, ಗುಳಿಯಪ್ಪ, ಅಕ್ಕಿರೊಟ್ಟಿ, ಉದ್ದಿನ ನಿಟ್ಟು, ಮಣ್ಣಿ ಲಡ್ಡು, ಹೋಳಿಗೆಗಳ ಮುಖಾಂತರ ದೇಶ ವಿದೇಶಗಳಲ್ಲಿ ಹೋಟೆಲ್ಲುಗಳನ್ನು ಆರಂಭಿಸಿ  ವಿಶ್ವವಿಖ್ಯಾತ ಗಳಿಸಿದ್ದು ಈಗ ಇತಿಹಾಸವಾಗಿದೆ.

udu5ಅವಿಭಜಿತ ದಕ್ಷಿಣ ಕನ್ನಡ  ಕಡಂಡಲೆ  ಎಂಬ ಗ್ರಾಮದಲ್ಲಿ ಜನಿಸಿದ ಕೆ. ಕೃಷ್ಣ ರಾವ್ ಬಾಲ್ಯದಲ್ಲಿಯೇ  ಉಡುಪಿಯ ಪುತ್ತಿಗೆ ಮಠದಲ್ಲಿ ತಮ್ಮ ಚಿಕ್ಕಪ್ಪನೊಂದಿಗೆ ಕೆಲಸಕ್ಕೆ ಸೇರಿಕೊಂಡು ನಂತರ  ಮಠದ ಕಡೆಯಿಂದಲೇ ಮದ್ರಾಸಿಗೆ ಹೋಗಿ ಅಲ್ಲಿಯ ಮಠವೊಂದರ  ಸ್ವಾಮಿಗಳ ಶಿಷ್ಯರಾಗಿ ಸೇರಿಕೊಂಡು ಸಮಯ ಸಿಕ್ಕಾಗಲೆಲ್ಲಾ ಹತ್ತಿರದ  ರೆಸ್ಟೋರೆಂಟ್‌ನಲ್ಲಿ  ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು  ಅದಾದ ಕೆಲದಿನಗಳಲ್ಲಿ ಮದ್ರಾಸಿನ  ಜಾರ್ಜ್ ಟೌನ್‌ನ ಶಾರದಾ ವಿಲಾಸ್ ಬ್ರಾಹ್ಮಣರ ಹೋಟೆಲ್ಲಿಗೆ  ಅಡುಗೆ ಹುಡುಗನಾಗಿ ಸೇರಿಕೊಂಡು 1925 ರಲ್ಲಿ  ಅದೇ ಹೋಟೆಲ್ಲನ್ನು  700 ರೂಪಾಯಿಗಳಿಗೆ ಖರೀದಿಸಿ ತಕ್ಕ ಮಟ್ಟಿಗಿನ ವ್ಯಾಪಾರ ನಡೆಸತೊಡಗಿದರು.  ಈಗಲೂ ನಮ್ಮೆಲ್ಲರ ಅಚ್ಚುಮೆಚ್ಚಿನ ವಿಶ್ವವಿಖ್ಯಾತ ಗರಿ ಗರಿಯದ  ಮಸಾಲೇ ದೋಸೆಯ ಜನಕರೂ ಸಹಾ ಇದೇ ಕೆ ಕೃಷ್ಣರಾವ್ ಎಂಬುದು ಗಮನಾರ್ಹ ಸಂಗತಿ.

udu2ಮದ್ರಾಸಿನ ಮೌಂಟ್ ರಸ್ತೆಯಲ್ಲಿ   ಒಂದೇ ಒಂದು  ಯೋಗ್ಯ ಸಸ್ಯಾಹಾರಿ ರೆಸ್ಟೋರೆಂಟ್  ಇರಲಿಲ್ಲವಾದ್ದರಿಂದ  1926-27 ರ ಸಮಯದಲ್ಲಿ   ಕೃಷ್ಣ ರಾವ್  ಅವರು ಅಲ್ಲಿ ಉಡುಪಿ ಶ್ರೀ ಕೃಷ್ಣ ವಿಲಾಸ್ ಮತ್ತು ಉಡುಪಿ ಹೋಟೆಲ್ ಎಂಬ ಹೆಸರಿನಲ್ಲಿ ಎರಡು ಹೋಟೆಲ್ಲನ್ನು  ಆರಂಭಿಸಿದರು. ಪುನಃ  1939 ರಲ್ಲಿ ರಾವ್ ಉಡ್ ಲ್ಯಾಂಡ್ಸ್ ಎಂಬ ಹೋಟೆಲ್ ಆರಂಭಿಸಿದರು     (ಪ್ರಸ್ತುತ ಅದನ್ನು ಓಲ್ಡ್ ವುಡ್ಲ್ಯಾಂಡ್ಸ್  ಎಂದು ಕರೆಯಲ್ಪಡುತ್ತದೆ)  1952 ರಲ್ಲಿ  ಮೈಲಾಪುರದ ಕ್ಯಾಥೆಡ್ರಲ್ ರಸ್ತೆಯಲ್ಲಿ ನ್ಯೂ ಉಡ್ ಲ್ಯಾಂಡ್ಸ್  ಎಂಬ ಹೆಸರಿನಲ್ಲಿ  ಮತ್ತೊಂದು  ಹೋಟೆಲ್  ಆರಂಭಿಸಿ ಅತ್ಯಂತ ಹೆಸರುವಾಸಿಯಾಗಿದ್ದಲ್ಲದೆ. ಸಾಂಪ್ರದಾಯಿಕ ಹೋಟೆಲ್ ಗಳಲ್ಲದೇ ಡ್ರೈವ್-ಇನ್ ರೆಸ್ಟೋರೆಂಟ್ ಕೂಡಾ ಆರಂಭಿಸಿ ಜನರು ತಮ್ಮ ವಾಹನಗಳಲ್ಲಿಯೇ ಕುಳಿತು ತಿನ್ನುವಂತಹ ವ್ಯವಸ್ಥೆಯನ್ನು ಅಂದಿನ ಕಾಲದಲ್ಲಿಯೇ ಆರಂಭಿಸಿದರು. ಮುಂದೆ  ಇವರದ್ದೇ ಹೋಟೆಲ್ಗಳು  ಬೆಂಗಳೂರು, ಕೊಯಮತ್ತೂರು, ಸೇಲಂ, ಅಹಮದಾಬಾದ್, ನವದೆಹಲಿ, ಮತ್ತು ಬಾಂಬೆ ಮುಂತಾದ ನಗರಗಳಲ್ಲದೇ  ಲಂಡನ್, ನ್ಯೂಯಾರ್ಕ್ ಮತ್ತು ಸಿಂಗಾಪುರಗಳಲ್ಲಿಯೂ ಉಡ್ ಲ್ಯಾಂಡ್ಸ್ ಎಂಬ ಹೆಸರಿನಲ್ಲಿ ಹೊಟೆಲ್ಗಳನ್ನು ಆರಂಭಿಸಿ  ವಿಶ್ವವಿಖ್ಯಾತರಾದರು.

udu3ಇನ್ನು ಬೆಂಗಳೂರಿನ ಲಾಲ್ ಬಾಗ್ ಪ್ರದೇಶದ ಮಾವಳ್ಳಿಯಲ್ಲಿ 1924 ರಲ್ಲಿ ಪರಂಪಲ್ಲಿ ಯಜ್ಞನಾರಾಯಣ ಮೈಯ್ಯ ಮತ್ತು ಅವರ ಸಹೋದರರು  ಎಂಟಿಆರ್  ( ಮಾವಳ್ಳಿ ಟಿಫನ್ ರೂಮ್ )  ಎಂಬ ಹೆಸರಿನಲ್ಲಿ  ಸಣ್ಣ ಪ್ರಮಾಣದ  ರೆಸ್ಟೋರೆಂಟ್ ಒಂದನ್ನು ಆರಂಭಿಸಿ ಕೆಲವೇ ಕೆಲವು ವರ್ಷಗಳಲ್ಲಿ ವಿಶ್ವ ವಿಖ್ಯಾತವಾಗುವಂತೆ ಮಾಡುವುದರಲ್ಲಿ ಯಶಸ್ವಿಯಾದರು.   ಅಪ್ಪಟ್ಟ ದೇಸೀ ಬೆಣ್ಣೆ ಮತ್ತು ತುಪ್ಪ ಬಳೆಸುವ ಮೂಲಕ ಯಾವುದೇ ರೀತಿಯ ಕಲಬೆರಕೆ ಇಲ್ಲದ ಪರಿಶುದ್ಧವಾದ  ಶುದ್ಧವಾದ ಸಾಮಾನುಗಳನ್ನು ಬಳೆಸಿ ತಯಾರಿಸುತ್ತಿದ್ದ  ಆಹಾರ ಬಲು ಬೇಗನೆ ಪ್ರಸಿದ್ಧಿಯನ್ನು ಪಡೆದುಕೊಂಡಿತು.  ಲಾಲ್ ಬಾಗಿನಲ್ಲಿ ಬೆಳಗಿನ ವಾಕಿಂಗ್ ಮುಗಿಸಿ ಕೊಂಡು ಅಲ್ಲಿಯ ಬಿಸಿ ಬಿಸಿ ಫಿಲ್ಟರ್ ಕಾಫೀ ಮತ್ತು ತಿಂಡಿಗಳನ್ನು ತಿನ್ನಲು ಜನ ಇಂದಿಗೂ ಸಾಲು ಸಾಲು ನಿಲ್ಲುತ್ತಾರೆ.

ಅಲ್ಲಿಯ ಜನದಟ್ಟಣೆ  ಆಂದಿಗೂ ಮತ್ತು ಇಂದಿಗೂ ಎಷ್ಟು ಇರುತ್ತದೆ ಎಂದರೆ ಒಬ್ಬರು ತಿಂಡಿ ತಿನ್ನುತ್ತಿದ್ದರೆ ಅವರ ಪಕ್ಕದಲ್ಲಿ ಆ ಜಾಗ ಹಿಡಿಯಲು ಮತ್ತೊಬ್ಬರು ನಿಂತುಕೊಂಡಿರುತ್ತಾರೆ. ಕಲವೊಮ್ಮೆ ಗಂಟೆ ಗಟ್ಟಲೆ ಕಾಯಬೇಕಾದಂತಹ ಪರಿಸ್ಥಿತಿ ಇದೆ.  ಆರಂಭದಲ್ಲಿ  ಪರಿಶುದ್ಧತೆಗಾಗಿ ಬೆಳ್ಳಿ ತಟ್ಟೆ, ಲೋಟ ಮತ್ತು ಚಮಚಗಳನ್ನು ಬಳೆಸುತ್ತಿದ್ದವರು ಈಗ ಊಟದ ಸಮಯದಲ್ಲಿ ಬೆಳ್ಳಿ ಲೋಟಗಳಿಗೆ ಮಾತ್ರವೇ ಸೀಮಿತ ಗೊಳಿಸಿದ್ದಾರೆ.    ಕೆಲವರು ಹೇಳುವ ಪ್ರಕಾರ ಎಂಟಿಆರ್ ದೋಸೆಗಳು ಬೆಳ್ಳಂಬೆಳಿಗ್ಗೆ ವಿಮಾನದಲ್ಲಿ  ಬೆಂಗಳೂರಿನಿಂದ ಬಾಂಬೆಗೆ ವಿಮಾನದಲ್ಲಿ ಪಾರ್ಸಲ್ ಆಗುತ್ತಿದ್ದಂತೆ. 1970 ರ ದಶಕದಲ್ಲಿ ಭಾರತ ಪಾಕೀಸ್ಥಾನದ ಯುದ್ಧದ ಸಮಯದಲ್ಲಿ  ದೇಶಾದ್ಯಂತ ಅಕ್ಕಿಯ ಸಮಸ್ಯೆಯಾದಾಗ, ಅನೇಕ ಹೋಟೆಲ್ಲುಗಳಲ್ಲಿ ಇಡ್ಲಿ ಮಾಡಲು  ಅಕ್ಕಿಯೇ ಪ್ರಧಾನವಾಗಿದ್ದ ಕಾರಣ ಅಕ್ಕಿಯೇ ಸಿಗದೇ ಮುಚ್ಚ ಬೇಕದಂತಹ ಸಮಯ ಬಂದಾಗ ಎಂಟಿಆರ್ ಹೋಟೆಲ್ಲಿನವರು  ರವೆ ಇಡ್ಲಿಯನ್ನು ಆವಿಷ್ಕರಿಸಿ ವಿಶ್ವವಿಖ್ಯಾತರಾದರು. ಇದರಿಂದ ಉತ್ತೇಜಿತರಾಗಿ  ಮುಂದೆ ಪಾಕಶಾಸ್ತ್ರದಲ್ಲಿ  ಅನೇಕ ರೀತಿಯ ಈ ಆವಿಷ್ಕಾರಗಳಿಗೆ  ಮುಂದಾಗಿ ಬಹಳಷ್ಟು  ದಿನಗಳು ಇಟ್ಟರೂ ಹಾಳಾಗದಂತಹ  ದಿಢೀರ್ ಎಂದು ಸಿದ್ಧ ಪಡಿಸಬಹುದಾದಂತಹ ಸಿದ್ಧಪಡಿಸಿದ ತಿಂಡಿ ಪದಾರ್ಥಗಳು, ಬಗೆ ಬಗೆಯ  ಸಾರಿನ ಪುಡಿ, ಹುಳಿ ಪುಡಿ ಚೆಟ್ನಿ ಪುಡಿಗಳಂತಹ    ಮಸಾಲಾ ಪುಡಿಗಳು ಅವರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿತು.  ಗಡಿ ಕಾಯುವ ಯೋಧರಿಗೆ  ಅತ್ಯಂತ  ಪೌಷ್ಹಿಕವಾದ ಮತ್ತು  ಎತ್ತರ ಪ್ರದೇಶಗಳಿಗೆ ಕೊಂಡೊಯ್ಯಲು ಸುಲಭವಾದ ಮತ್ತು ಅಂತಹ  ಹವಾಗುಣಕ್ಕೆ ಹಾಳಗದಂತಹ  ಸಿದ್ಧ ಆಹಾರಗಳನ್ನು ಸಹಾ ತಯಾರಿಸಿಕೊಟ್ಟು ಎಲ್ಲಾ ಮೆಚ್ಚುಗೆಗೆ ಪಾತ್ರವಾಗಿದೆ ಎಂಟಿಆರ್ ಬಳಗ.  2007 ರಲ್ಲಿ ನಾರ್ವೇಜಿಯನ್ ಕಂಪನಿಯಾದ ಓರ್ಕ್ಲಾಕ್ಕೆ ಎಂಟಿಆರ್ ಸಿದ್ಧ ಪಡಿಸಿದ ಆಹಾರದ ಉದ್ಯಮವನ್ನು ಮಾರಿ ಕೆಲವು ವರ್ಷಗಳ ನಂತರ ಮಯ್ಯಾಸ್ ಹೆಸರಿನಲ್ಲಿ ಮತ್ತೆ  ಅನೇಕ ರೆಸ್ಟೋರೆಂಟ್ ಮತ್ತು  ಸಿದ್ಧ ಪಡಿಸಿದ ಆಹಾರಗಳನ್ನು ತಯಾರಿಸುತ್ತಾ ಇಂದಿಗೂ ಜನ ಮನ್ನಣೆಗಳಿಸಿದೆ.  ಎಂಟಿಆರ್ ಏಳು ಗಂಟೆಗಳಲ್ಲಿ 21,000 ಗ್ರಾಹಕರಿಗೆ ಸೇವೆ ಸಲ್ಲಿಸಿದ ವಿಶ್ವದ ಮೊದಲ ಫಾಸ್ಟ್ ಫುಡ್ ರೆಸ್ಟೋರೆಂಟ್ ಎಂಬ ದಾಖಲೆಯನ್ನೂ ಹೊಂದಿದೆ

udu4ಉಡುಪಿಯ ಅಷ್ಟ ಮಠದ  ಭೋಜನ ಶಾಲೆಯಲ್ಲಿ ಪಾಕ ತಜ್ಞರಾಗಿದ್ದವರು ಅಥವಾ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದ ಶಿವಳ್ಳಿ ಬ್ರಾಹ್ಮಣರು ಮತ್ತು ಮಾಧ್ವ ಸಂಪ್ರದಾಯದ ಬ್ರಾಹ್ಮಣರು ಕಾಲ ಕ್ರಮೇಣವಾಗಿ ದೇಶ ವಿದೇಶಗಳಲ್ಲಿ ನಾನಾ ಹೆಸರಿನಲ್ಲಿ  ಉಡುಪಿ ಹೋಟೆಲ್ ಗಳನ್ನು ಆರಂಭಿಸಿ ದೇವಾಲಯದ ಪಾಕಶಾಲೆಯ ಸಾತ್ವಿಕ ರುಚಿ  ಮತ್ತು ಅಭ್ಯಾಸಗಳ ಜೊತೆ ಉಡುಪಿಯ ತಿಂಡಿಗಳನ್ನು ಮತ್ತು ಆಹಾರ ಪದ್ದತಿಯನ್ನು  ಎಲ್ಲರಿಗೂ ಪರಿಚಯಿಸಿ ಹೋಟೆಲ್ ಎಂದರೆ ಉಡುಪಿ ಹೋಟೆಲ್ ಎಂಬ ಅನ್ವರ್ಥನಾಮ ಬರುವಂತೆ ಮಾಡಿದ್ದಲ್ಲದೇ ಲಕ್ಷಾಂತರ ಜನರಿಗೆ  ಉದ್ಯೋಗದಾತರಾಗಿದ್ದಾರೆ. ಇಂದಿಗೂ ಸಹಾ ಜನ ಉಡುಪಿ ಎಂಬ ಹೆಸರಿದ್ದರೆ ಸಾಕು ಸಕ್ಕರೆಗೆ ಇರುವೆಗಳು ಮುತ್ತುವಂತೆ  ಹೋಟೆಲ್ಲಿಗೆ ಪ್ರವೇಶಿಸುವಂತೆ  ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.   ಉಡುಪಿಯಲ್ಲದವರು, ಉಡುಪಿ ಹೋಟೆಲ್ ಎಂಬ ತಮ್ಮ ಬ್ರಾಂಡ್ ಬಳೆಸಿಕೊಂಡರೂ ಯಾವುದೇ ದಾವೆ ಹೂಡದೇ, ಅದಕ್ಕೆ ಕೊಂಚವೂ ಬೇಸರಿಸಿಕೊಳ್ಳದೇ ಸರ್ವೇ ಜನಾಃ ಸುಖಿನೋ ಭವಂತು. ಸಮಸ್ತ ಲೋಕಾನಿ ಸನ್ಮಂಗಳಾನಿ ಭವಂತು ಎಂದು  ಎಲ್ಲರೂ ಉದ್ದಾರವಾಗಲಿ ಎಂಬ ವಿಶಾಲ ಹೃದಯವಂತರಾಗಿದ್ದಾರೆ.

ಶ್ರೀಮತಿ ಲಕ್ಷ್ಮೀ ಜೋಷಿ ಅವರ ಅವರ ಸಂಪಾದಕತ್ವದಲ್ಲಿ ಶ್ರೀ ವಿಜೇಂದ್ರ ರಾವ್ ಅವರ ಮಾರ್ಗದರ್ಶನದಲ್ಲಿ ದಿ. 14.04.2022 ರಂದು ಮೈಸೂರಿನಲ್ಲಿ ಬಿಡುಗಡೆಯಾದ ಬ್ರಾಹ್ಮಣ ಶಿಕಾರಿ ಎಂಬ ಪುಸ್ತಕದಲ್ಲಿ ಈ ಲೇಖನ ಪ್ರಕಟವಾಗಿದೆ. ಕೆಲಸದ ಒತ್ತಡಗಳಿಂದಾಗಿ ಖುದ್ದಾಗಿ ಪುಸ್ತಕ ಬಿಡುಗಡೆಗೆ ಹೋಗಲು ಆಗದ ಕಾರಣ ನನ್ನ ಪರವಾಗಿ ನನ್ನ ಚಿಕ್ಕಪ್ಪನವರಾದ                 ಶ್ರೀ ಬಿ. ಎನ್ ಮುರಳೀಧರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನನ್ನ ಈ ಲೇಖನವೂ ಸೇರಿದಂತೆ ನಾಡಿನ ಪ್ರಖ್ಯಾತ ಲೇಖಕರ ಉಳಿದ 24 ಸ್ವಾರಸ್ಯಕರ ಲೇಖನಕ್ಕಾಗಿ ದಯವಿಟ್ಟು ಈ ಪುಸ್ತಕವನ್ನು ಮೈಸೂರಿನ ಭಾರತ್ ವೆಂಚರ್ಸ್, ಪ್ರಕಾಶನ ವಿಭಾಗದ ಶ್ರೀ ಅತುಲ್ಯ 9740063596 ಇವರಿಂದ ಕೊಂಡು ಓದಬೇಕೆಂದು ಸವಿನಯ ಪ್ರಾರ್ಥನೆ.

ನಿಮ್ಮವನೇ ಉಮಾಸುತ

bs

ಸಿನಿಮಾ ಎನ್ನುವುದು ಮನೋರಂಜನೆಯೋ ಇಲ್ಲವೇ ಹಗಲು ದರೋಡೆಯೋ?

ಮನುಷ್ಯ ಸಂಘ ಜೀವಿಯ ಜೊತೆಗೆ ಭಾವುಕ ಜೀವಿಯೂ ಸಹಾ ಹೌದು.  ಅವನು ತನ್ನ ಸುಖಃ ಮತ್ತು ದುಃಖಗಳನ್ನು  ಸಂಭ್ರಮಿಸಲು ಮತ್ತು ಮರೆಯಲು ಯಾವುದಾದರು ಹವ್ಯಾಸಕ್ಕೆ ಮೊರೆ ಹೋಗುತ್ತಾನೆ. ಅದೇ ರೀತಿ ದಿನವಿಡೀ  ಕಷ್ಟ ಪಟ್ಟು ದುಡಿದು ಸಂಜೆ ಮನೆಗೆ ಹಿಂದಿರುಗಿ ವಿಶ್ರಾಂತಿ ಮಾಡುತ್ತಿದ್ದಾಗ ಆತನ ಮನಸ್ಸಿಗೆ ಹಿಡಿಸುವಂತಹ ಸಂಗೀತ, ಸಾಹಿತ್ಯ,  ನೃತ್ಯ, ನಾಟಕ, ಯಕ್ಷಗಾನ ಮುಂತಾದವುಗಳನ್ನು ಕೇಳಿ, ನೋಡಿ ಮನಸ್ಸನ್ನು ಹಗುರು ಮಾಡಿಕೊಳ್ಳುತ್ತಿದ್ದರು. ತಂತ್ರಜ್ಞಾನ ಮುಂದುವರೆದಂತೆಲ್ಲಾ ಮೂಕಿ ಚಲನ ಚಿತ್ರಗಳು, ಟಾಕಿ ಚಲನ ಚಿತ್ರಳು, 3-ಡಿ ಚಲಚಿತ್ರಗಳು ಆರಂಭವಾಗಿ ಜನರನ್ನು ಮನರಂಜಿಸುತ್ತಿವೆ.

ci5ಇತ್ತೀಚಿನವರೆಗೂ ಚಲಚಿತ್ರಗಳಿಗೆ ಹೋಗುವುದೆಂದೆರೆ ಅದೇನೋ ಸಂಭ್ರಮ. ಒಂದೆರಡು ಘಂಟೆಗಳ ಮುಂಚೆಯೇ ಮನೆಯಿಂದ ಯಾರೋ ಒಬ್ಬರು ಥಿಯೇಟರ್ಗೆ ಹೋಗಿ ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿ ಮಾಡುತ್ತಿದ್ದರೆ ಸಿನಿಮಾ ಶುರುವಾಗುವ ಸಮಯಕ್ಕೆ ಸರಿಯಾಗಿ ಉಳಿದ ಕುಟುಂಬಸ್ಥರೆಲ್ಲಾ ಅಲ್ಲಿಗೆ ತಲುಪಿ ಒಟ್ಟಿಗೆ ಆನಂದಮಯವಾಗಿ ಸಿನಿಮಾ ನೋಡಿ ಕೊಂಡು ಹಾಗೇ ಬರುವಾಗ ಹೋಟೆಲ್ಲಿಗೆ ಹೋಗಿ ಮಸಾಲೆ ದೋಸೆ ತಿಂದು ಬಿಸಿ ಬಿಸಿ ಕಾಫಿ ಕುಡಿಯುತ್ತಾ ಆಗ ತಾನೇ ನೋಡಿದ ಸಿನಿಮಾದ ಬಗ್ಗೆ ಅವರವರಿಗೆ ತೋಚಿದಂತೆ ವಿಮರ್ಶೆ ಮಾಡುತ್ತಿದ್ದದ್ದು ರೂಡಿಯಾಗಿತ್ತು.

ಇನ್ನು ಹಳ್ಳಿಗಳಲ್ಲಿ ಟೂರಿಂಗ್ ಟಾಕಿಸ್ ಎಂಬ ಟೆಂಟುಗಳಿಗೆ ದೂರ ದೂರದ ಊರಿನಿಂದ ಎತ್ತಿನ ಗಾಡಿಗಳಲ್ಲಿ ಸಕುಟುಂಬ ಸಮೇತರಾಗಿ ಬಂದು ಅಲ್ಲಿ ತಮ್ಮ ನೆಚ್ಚಿನ ನಾಯಕ ನಾಯಕಿಯರ ಸಿನಿಮಾಗಳನ್ನು ನೋಡುತ್ತಾ ಜೋರಾಗಿ ಕೂಗುತ್ತಾ,  ಸೀಟಿ ಹೋಡೆಯುತ್ತಾ, ತಮ್ಮ ನಾಯಕ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಂತೆಯೇ  ಚಿಲ್ಲರೆ ಕಾಸುಗಳನ್ನು ತೂರುತ್ತಾ ಅತ್ಯಂತ ಸಡಗರ ಸಂಭ್ರಮಗಳಿಂದ ಸಿನಿಮಾ ನೋಡಿ ಆನಂದಿಸುತ್ತಿದ್ದರು. ಇನ್ನು ಥಿಯೇಟರ್ ಹೊರೆಗೆ ಭಾರೀ ಗಾತ್ರದ ಸ್ಟಾರುಗಳು, ಕಟೌಟ್ ಗಳನ್ನು ಹಾಕಿ ಕೆಲವೊಂದು ಕಡೆಯಲ್ಲಿ ಅವುಗಳಿಗೆ ಹಾಲಿನ ಅಭಿಷೇಕ ಮಾಡಿದರೆ ಇನ್ನೂ ಕೆಲವೆಡಿ ಕುರಿ ಕೋಳಿಗಳನ್ನು ಕಡಿದು ಸಿನಿಮಾ ಮುಗಿಯುವುದರೊಳಗೆ ಅದರಲ್ಲೇ ಬಿರ್ಯಾನಿ ಮಾಡಿ ಸಿನಿಮಾ ನೋಡಲು ಬಂದಿರುವ ವೀಕ್ಷಕರಿಗೆ ಹಂಚಿರುವ ಉದಾಹರಣೆಗಳೂ ಸಾಕಷ್ಟಿವೆ.

ci1ಆದರೆ ಕಳೆದ 10-15 ವರ್ಷಗಳಲ್ಲಿ ಸಿನಿಮಾ ಮಂದಿರಗಳ ರೂಪುರೇಷೆಗಳೇ ಸಂಪೂರ್ಣವಾಗಿ ಬದಲಾಗಿ ಹೋಯಿತು.  ಒಂದು ಥಿಯೇಟರ್ ಇದ್ದದ್ದನ್ನು ಕೆಡವಿ ಅದೇ ಜಾಗದಲ್ಲೇ ಶಾಪಿಂಗ್ ಮಾಲ್ ಕಟ್ಟಿ ಅದರೊಳಗೆಯೇ  ಮಲ್ಟಿಪ್ಲೆಕ್ಸ್ಗಳನ್ನು ಸೇರಿಸಿ ಅದರಲ್ಲಿ  ಐದಾರು ಪರದೆಯ ಸಿನಿಮಾಗಳನ್ನು ತೋರಿಸಲು ಆರಂಭಿಸುತ್ತಿದ್ದಂತೆಯೇ ಜನರ ಮನರಂಜನೆಯ ಶೈಲಿಯೇ ಬದಲಾಗಿ ಹೋಯಿತು. ಧೂಳು ಭರಿತ, ಸ್ವಚ್ಚವಿಲ್ಲದ ತಿಗಣೆ ಕಾಟದ,  ಸಿಂಗಲ್ ಥಿಯೇಟರ್ ಬದಲು ನೋಡಲು ಸ್ವಚ್ಚವಾದ ಐಶಾರಾಮಿ ಹವಾನಿಯಂತ್ರಿತ ಥಿಯೇಟರ್ಗಳಲ್ಲಿ ಡಾಲ್ಬಿ ಸರೌಂಡ್ ಸಿಸ್ಟಮ್ ಗಳೊಂದಿಗೆ ಸಿನಿಮಾ ನೋಡುವುದೇ ಜೀವನ ಶೈಲಿಯಾಗಿ ಬದಲಾಯಿತು.

ticketಒಂದೊಂದೇ ಸೌಲಭ್ಯಗಳನ್ನು ಕೊಡುತ್ತಾ ಹೋಗುತ್ತಿದ್ದಂತೆಯೇ ಪ್ರೇಕ್ಷಕರ ಅರಿವಿಗೆ ಬಾರದಂತೆಯೇ ಟಿಕೆಟ್ ಬೆಲೆಯನ್ನು ಏರಿಸುತ್ತಲೇ ಹೋದರು. 70-80 ರ ದಶಕದಲ್ಲಿ ಟಿಕೆಟ್ ಬೆಲೆ 10-30 ರೂಪಾಯಿಗಳು ಇದ್ದರೆ 90ರ ದಶಕದಲ್ಲಿ ಬರೋಬ್ಬರಿ ಅರ್ಧ ಶತಕ ದಾಟಿ 2000ದ ಹೊತ್ತಿಗೆ ಶತಕವನ್ನೂ ದಾಟಿ ಧಾಪುಗಾಲು ಹಾಕಿದರೆ ಈಗ 300-900ರ ವರೆಗೂ ತಲುಪಿ  ಥಿಯೇಟರ್ಗಳಲ್ಲಿ ಸಿನಿಮಾ ನೋಡುಲು ಹೋಗುವುದಕ್ಕೇ ಭಯವಾಗುತ್ತಿದೆ. ಇನ್ನು ಸಿನಿಮಾ ಮಧ್ಯಾಂತರದಲ್ಲಿ ಕೈ ಬಾಯಾಡಿಸಲು ಪಾಪ್ ಕಾರ್ನ್, ಚಿಪ್ಸ್, ಸಮೋಸ  ಇನ್ನು ಮುಂತಾದ ಕುರುಕುಲು ತಿಂಡಿಗಳು  ಕಾಫಿ, ಟೀ ಜೊತೆಗೆ ತಂಪಾದ ಪಾನೀಯಗಳ ಬೆಲೆಗಳಂತೂ 300-450 ರೂಗಳಷ್ಟಿದ್ದು ಮೂಗಿಗಿಂತ ಮೂಗಿನ ನತ್ತೇ ಹೆಚ್ಚಿನ ಭಾರ ಎನ್ನುವಂತೆ  ಸಿನಿಮಾದ ಟಿಕೆಟ್ಟಿಗಿಂತಲೂ ದುಬಾರಿಯಾಗಿರುವುದು ನಿಜಕ್ಕೂ  ಅಚ್ಚರಿಯ ಸಂಗತಿಯಾಗಿದೆ. ಸೋಮವಾರದಿಂದ ಗುರುವಾರದ ವರೆಗೆ ಒಂದು ಬೆಲೆಯಾದರೆ, ವಾರಾಂತ್ಯದಲ್ಲಿ ಅದೇ ಸಿನಿಮಾಗೆ ದುಪ್ಪಟ್ಟು ದರ ತೆತ್ತು ನೋಡಬೇಕಾಗಿರುವುದು ಅನಿವಾರ್ಯವಾಗಿದೆ.

cutout8-10 ವರ್ಷಗಳ ಹಿಂದೆ ಹತ್ತಾರು ಥಿಯೇಟರ್ಗಳಲ್ಲಿ ಸಿನಿಮಾ  ಶತದಿನೋತ್ಸವವನ್ನು ಅಚರಿಸಿದಲ್ಲಿ ಮಾತ್ರವೇ ಹಿಟ್ ಎಂದು ಪರಿಗಣಿಸಿ ನಿರ್ಮಾಪಕರ ಜೋಬನ್ನು ತುಂಬಿಸುತ್ತಿದ್ದವು. ಹಾಗಾಗಿಯೇ ಬಹುತೇಕ ಸಿನಿಮಾ ನಟ ನಟಿಯರು, ತಂತ್ರಜ್ಣರು ವರ್ಷಕ್ಕೆ ಮೂರ್ನಾಲ್ಕು ಸದಭಿರುಚಿಯ ಮನೆ ಮಂದೆಯೆಲ್ಲಾ ಕುಳಿತು  ನೋಡುವಂತಹ ಸಿನಿಮಾಗಳನ್ನು ಮಾಡುತ್ತಿದ್ದದ್ದಲ್ಲದೇ ಆ ಸಿನಿಮಾ ಒಂದು ಪ್ರಭಲ ಮಾಧ್ಯಮವಾಗಿರುವ ಕಾರಣ  ತಮ್ಮ ಸಿನಿಮಾದ ಮೂಲಕ ಪ್ರೇಕ್ಷಕರ ಮನಸ್ಸಿಗೆ ನಾಟುವಂತಹ ಸಂದೇಶಗಳನ್ನು ತಲುಪಿಸುತ್ತಿದ್ದರು.  ಕಾಲ ಬದಲಾದಂತೆ ಹಳ್ಳಿಗಳೆಲ್ಲಾ ನಗರೀಕರಣಗೊಂಡು ರಿಯಲ್ ಎಸ್ಟೇಟ್ ಮತ್ತು ಗಣಿಗಾರಿಕೆಗಳ ಮೂಲಕ  ಹಣ ಮಾಡಿದವರೆಲ್ಲರೂ ಶೋಕಿಗಾಗಿ ಸಿನಿಮಾ ಮಾಡಲು ಮುಂದಾದಂತೆ  ಸಿನಿಮಾ ನಿರ್ಮಾಣದ ರೀತಿಯೂ  ಸಂಪೂರ್ಣವಾಗಿ ಬದಲಾಗಿ ಹೋಗಿದ್ದಲ್ಲದೇ ಚಿತ್ರಕ್ಕೆ ಅವಶ್ಯಕತೆ ಇದೆಯೋ ಇಲ್ಲವೋ  ಖಡ್ಡಾಯವಾಗಿ  ಸಿನಿಮಾದ ಹಾಡುಗಳು ವಿದೇಶದಲ್ಲೇ ಚಿತ್ರೀಕರಣವಾಗ ಬೇಕು. ಅದ್ಯಾವುದೋ ಭಾಷೆಯ ನಟಿಗೆ ಒಂದಕ್ಕೆ ನಾಲ್ಕು ಪಟ್ಟು ಹಣ ನೀಡಿ ಆಕೆಯ ಅರೆಬೆತ್ತಲೆಯ ಹಸೀ ಬಸೀ  ಹಾಡನ್ನು ತುರುಕಿ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡುತ್ತಾ ಸಿನಿಮಾ ಎಂಬುದು ಮನೋರಂಜನೆ ಎನ್ನುವುದಕ್ಕಿಂತಲೂ ವ್ಯಾಪಾರವಾಗಿ ಹೋಯಿತು.

ನಿರ್ಮಾಪಕರೂ ಸಹಾ  ಹತ್ತಿಪ್ಪತ್ತು ಥಿಯೇಟರ್ಗಳಲ್ಲಿ ತಮ್ಮ ಸಿನಿಮಾ ಪ್ರದರ್ಶಿಸಿ  ತಾವು ಹಾಕಿದ ದುಡ್ಡನ್ನು ಹಿಂದಿರುಗಿ ಪಡೆಯಲು ತಿಂಗಳಾನು ಗಟ್ಟಲೇ ಕಾಯುವ ಬದಲು, ಏಕ ಕಾಲಕ್ಕೆ 300-400 ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಮಾಡಿ ಮೂರ್ನಾಲ್ಕು ವಾರಗಳಲ್ಲೇ ಹಾಕಿದ ಬಂಡವಾಳ ಪಡೆಯ ತೊಡಗಿದರು. ಇನ್ನು ಜನಪ್ರಿಯ ನಾಯಕರು ಅಥವಾ ನಿರ್ಮಾಪಕರು ಇನ್ನೂ ಒಂದು ಹೆಚ್ಚೆ ಮುಂದು ಹೋಗಿ ಸಿನಿಮಾ ಬಿಡುಗಡೆಯಾಗುವ ಮೊದಲ ಎರಡ್ಮೂರು ವಾರಗಳ ಕಾಲ ಸಿನಿಮಾ ಟಿಕೆಟ್ ಬೆಲೆಯನ್ನು ಏಕಾಏಕಿ 300-1200 ರೂಪಾಯಿಗಳಿಗೆ ಹೆಚ್ಚಿಸುವ ಮೂಲಕ ಹಗಲು ದರೋಡೆಗೆ ಮುಂದಾಗಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ.

ci8ಟಿಕೆಟ್ ದರ ಮತ್ತು ಸಿನಿಮಾ ಮಂದಿರಗಳಲ್ಲಿ ತಿಂಡಿ ತಿನಿಸುಗಳ ಕುರಿತಾಗಿ ಏಕರೂಪವಾಗಿ  ಜನರಿಗೆ ಕೈಗೆಟುಕುವಂತಹ ಬೆಲೆಯನ್ನು ಸರ್ಕಾರವೇ  ನಿಗಧಿ ಪಡಿಸಬೇಕೆಂದು ಐದಾರು ವರ್ಷಗಳಿಂದಲೂ ಬೇಡಿಕೆ ಸಲ್ಲಿಸುತ್ತಿದ್ದರೂ, ಬಂದ ಎಲ್ಲಾ  ಸರ್ಕಾರಗಳೂ ಸಹಾ ಜನರ ಹಿತಕ್ಕಿಂತ ಅವರಿಂದ ಬರುವ ಮನೋರಂಜನೆ ತೆರಿಗೆಗೇ ಆಸೆ ಪಟ್ಟು ಈ ಕುರಿತಂತೆ ಇದುವರೆವಿಗೂ ಯಾವುದೇ ಕ್ರಮ ಕೈಗಳ್ಳದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಪದೇ ಪದೇ ಕನ್ನಡ ಚಿತ್ರಗಳನ್ನು ಅಕ್ಕ ಪಕ್ಕದ ತಮಿಳು ಮತ್ತು ತೆಲುಗು ಸಿನಿಮಾಗಳ ಜೊತೆ ಹೋಲಿಸಿಕೊಂಡು ನೋಡುವವರು  ಆ ರಾಜ್ಯಗಳಲ್ಲಿ ಸರ್ಕಾರವೇ ಮಧ್ಯಸ್ಥಿಕೆ ವಹಿಸಿಕೊಂಡು ನಿಗಧಿ ಪಡಿಸಿರುವ ಟಿಕೆಟ್ ಬೆಲೆಯನ್ನು  ಮಾತ್ರಾ ಹೇಳದೇ ಜಾಣ ಮೌನ ವಹಿಸಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.

  • ದೇಶದಲ್ಲಿ ಅತಿ ಹೆಚ್ಚು ಚಿತ್ರಗಳು ತಯಾರಾಗುವುದೇ ತೆಲುಗು ಭಾಷೆಯದ್ದಾಗಿದ್ದು, ಆಂಧ್ರ ಮತ್ತು ತೆಲಂಗಾಣದಲ್ಲಿ  ಮುನ್ಸಿಪಲ್ ಕಾರ್ಪೊರೇಷನ್ ನಗರಗಳಲ್ಲಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಈ ಹಿಂದೆ ಇದ್ದ 75, 150 ಮತ್ತು 250 ರೂ.ಗಳಿಂದ 125 ಮತ್ತು 250 ರೂ.ಗಳಿಗೆ ಬೆಲೆಗಳನ್ನು ಪರಿಷ್ಕರಿಸಲಾಗಿದೆ. ಅದೇ ರೀತಿ, ಸಣ್ಣ ಸಣ್ಣ ನಗರಗಳಲ್ಲಿ ರೂ 40, ರೂ 60 ಮತ್ತು ರೂ 100 ರಿಂದ ರೂ 70- ರೂ 100 ಕ್ಕೆ ನಿಗದಿಪಡಿಸಲಾಗಿದೆ.
  • ತಮಿಳುನಾಡಿನಲ್ಲಿ ಸಾಮಾನ್ಯ ಥಿಯೇಟರ್ಗಳಲ್ಲಿ  ತಮಿಳು ಚಿತ್ರಗಳಿಗೆ 60.12 ರೂ., ಇತರ ಭಾರತೀಯ ಭಾಷೆಯ ಚಿತ್ರಗಳಿಗೆ 63.72 ಮತ್ತು ಇಂಗ್ಲಿಷ್ ಚಲನಚಿತ್ರಗಳಿಗೆ 66.3 ರೂ.ಗಳಿದ್ದರೆ ಮಲ್ಟಿಪ್ಲೆಕ್ಸ್ ಸಿನಿಮಾಗಳಲ್ಲಿ ರೂ 125-175ನ್ನು ನಿಗಧಿ ಪಡಿಸಲಾಗಿದೆ.
  • ಕೇರಳ ರಾಜ್ಯದಲ್ಲಿ ಚಲನಚಿತ್ರ ಟಿಕೆಟ್‌ನ ಸರಾಸರಿ ಬೆಲೆ 130 ರೂ. ಇದ್ದು ಒಂದು  ಕುಟುಂಬವು ಐದಕ್ಕಿಂತಲೂ ಹೆಚ್ಚಿನ ಟಿಕೆಟ್‌ಗಳನ್ನು ಖರೀದಿಸಿದರೆ,ಟಿಕೆಟ್ ಬೆಲೆ ಕೇವಲ 100 ರೂ. ನಿಗಧಿ ಪಡಿಸುವ ಮೂಲಕ ಹೆಚ್ಚು ಹೆಚ್ಚಿನ ಜನರನ್ನು ಥಿಯೇಟರ್ಗಳಿಗೆ ಬರುವಂತೆ ಆಕರ್ಷಣೆ ಮಾಡಲಾಗುತ್ತಿದೆ.
  • ದುರಾದೃಷ್ಟವಷಾತ್ ಕನ್ನಡ ಚಿತ್ರಗಳ ಟಿಕೆಟ್ ದರ 203 ರೂ ಇದ್ದರೆ, ಕನ್ನಡೇತರ ಚಿತ್ರಗಳ ಗರಿಷ್ಠ ಟಿಕೆಟ್ ದರ 60 ರೂ. ಮನರಂಜನಾ ತೆರಿಗೆ ಮತ್ತಿತರ ಸೇವಾ ತೆರಿಗೆಯೂ ಸೇರಿದಂತೆ 270 ರೂಗಳಿದ್ದು ಮಲ್ಟಿ ಪ್ಲೆಕ್ಸ್ ಗಳಲ್ಲಿ ಅವರ ಇಷ್ಟಕ್ಕೆ ಏರಿಸಿಕೊಳ್ಳುವ ಅನುಕೂಲಗಳನ್ನು  ಮಾಡಿಕೊಟ್ಟಿರುವ ಪರಿಣಾಮ   ಒಂದೇ ಸಿನಿಮಾ ಒಂದೊದು ಮಾಲ್ ನಲ್ಲಿ ಒಂದೊಂದು ಸಮಯಕ್ಕೆ ಬೇರೆ ಬೇರೆ ರೀತಿಯಾದ ದರವಿದೆ. ಇನ್ನು ಬಹುತೇಕರು online ticket booking ಮಾಡಿದರೆ, ಪ್ರತೀ ಟಿಕೆಟ್ಟಿನ ಮೇಲೆ ಅವರ service charge ಎಂದು  ರೂ 40-50 ಸೇರಿ ಟಿಕೆಟ್ ಬೆಲೆ ಅಧಿಕವಾಗುವ ಪರಿಣಾಮ ಕುಟುಂಬ ಸಮೇತ ಸಿನಿಮಾ ಮಂದಿರಕ್ಕೆ ಹೋಗಿ ಸಿನಿಮಾಗಳನ್ನು ನೋಡುವುದು ನಿಜಕೂ  ಕಷ್ಟಕರವಾಗುತ್ತಿದೆ  ಎಂದರೂ ತಪ್ಪಾಗದು.

Supply Chain Management ಯೋಜನೆಯಂತೆ ಗುಣಮಟ್ಟ, ವಿತರಣೆ, ಗ್ರಾಹಕರ ಅನುಭವ ಮತ್ತು ಲಾಭದಾಯಕತೆಯನ್ನು ಗರಿಷ್ಠಗೊಳಿಸಲು ಸರಕು ಅಥವಾ ಸೇವೆಯು ಗ್ರಾಹಕರ ಅಗತ್ಯಗಳಿಗೆ ತಕ್ಕಂತಿದ್ದು ಗ್ರಾಹಕರ ಬೇಡಿಕೆ ಹೆಚ್ಚಾದಂತೆಲ್ಲಾ ಉತ್ಪನ್ನಗಳ ಬೆಲೆಯು ಕಡಿಮೆಯಾಗಬೇಕು ಎಂದಿದೆ. ದುರದೃಷ್ಟವಷಾತ್ ಸರ್ಕಾರ ಮತ್ತು ಸಿನಿಮಾ ನಿರ್ಮಾಪಕರು ಈ ಕುರಿತಂತೆ ಸ್ವಲ್ಪವೂ ಗಮನ ಹರಿಸದೇ, ಕಡಿಮೆ ಬೆಲೆಯಲ್ಲಿ ಉತ್ತಮ ವಿಚಾರಭರಿತ ಸದಭಿರುಚಿಯ ಸಿನಿಮಾ ಮೂಲಕ ಮನೋರಂಜನೆ ಒದಗಿಸುತ್ತಾ ಲಾಭ ಗಳಿಸುವ ಬದಲು ಸಿನಿಮಾ ಹೇಗಿದ್ದರೇನಂತೆ, ಟಿಕೆಟ್ ಬೆಲೆ ಎಷ್ಟಿದ್ದರೇನಂತೇ? ಎಂದು  ಸಿನಿಮಾವನ್ನು ಇತರೇ ವ್ಯಾಪಾರದ ರೀತಿಯಲ್ಲಿ ಹೊಡೀ ಬಡೀ ಕಡೀ ಎಂಬಂತಹ ಸಿನಿಮಾಗಳ ಮೂಲಕ ಇಂದು ಬಂಡವಾಳ ಹಾಕಿ ನಾಳೆಯೇ  ದರ ಹತ್ತು ಪಟ್ಟು ಲಾಭ ಗಳಿಸಬೇಕು ಎನ್ನುವ ನಿಟ್ಟಿನಲ್ಲಿ ಇರುವ ಕಾರಣ ಸಾಮಾನ್ಯ ಮಧ್ಯಮ ವರ್ಗದ  ಕನ್ನಡ ಚಿತ್ರ ರಸಿಕರು ಸಿನಿಮಾ ಮಂದಿರಗಳಿಂದ ದೂರವಿದ್ದು ಸಿನಿಮಾ ಟಿವಿಯಲ್ಲಿ ಬರುವುದನ್ನೇ ಜಾತಕ ಪಕ್ಷಿಗಳಂತೆ ಕಾಯುವಂತಾಗಿದೆ.

ci2ನಮ್ಮ ಅಕ್ಕ ಪಕ್ಕದ ರಾಜ್ಯದಲ್ಲಿ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಸಿನಿಮಾ ತೋರಿಸಿ ಕೋಟಿ ಕೋಟಿ ಲಾಭ ಗಳಿಸಿ ವರ್ಷಕ್ಕೆ 100-150 ಸಿನಿಮಾಗಳನ್ನು ತಯಾರು ಮಾಡುತ್ತಿದ್ದಲ್ಲಿ ಅದೇ ನೀತಿ ನಿಯಮಗಳನ್ನು ಕರ್ನಾಟಕದಲ್ಲೂ ಕನ್ನಡ ಚಿತ್ರ ಮಂದಿರಗಳಲ್ಲೂ ಅಳವಡಿಸಿ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಸಿನಿಮಾ ಮಂದಿರಕ್ಕೆ ಆಕರ್ಷಿಸುವ ಮೂಲಕ ಜನರಿಗೆ ಮನೋರಂಜನೆ ಒದಗಿರುವುದಲ್ಲದೆ  ಅಧಿಕ ಲಾಭವನ್ನೂ ಗಳಿಸಬಹುದಲ್ಲವೇ? ಎನ್ನುವುದೇ ಸಕಲ ಕನ್ನಡಿಗರ  ಅಶಯವಾಗಿದೆ.

ಏನಂತೀರೀ?
ನಿಮ್ಮವನೇ ಉಮಾಸುತ