ಸಾವಿರದ ಶರಣು

ಜೀವನದಲ್ಲಿ ಯಾವಾಗಲೂ ಲಕ್ಷ್ಯ ಮತ್ತು ಲಕ್ಷಕ್ಕೆ ಅತೀ ಮಹತ್ವವಿರುತ್ತದೆ. ಹತ್ತು, ನೂರು, ಸಾವಿರ, ಹತ್ತುಸಾವಿರ ಮತ್ತು ಲಕ್ಷ ಅಂದರೆ ಒಂದರ ಪಕ್ಕ ಐದು ಸೊನ್ನೆಗಳು. ಸೊನ್ನೆಗಳಿಗೆ ಬೆಲೆ ಇಲ್ಲಾ ಅನ್ನುವವರು ಅದೇ ಸೊನ್ನೆಯ ಹಿಂದೆ ಒಂದು ಅಂಕೆ ಸೇರಿಸಿಕೊಂಡು ಅದರ ಮುಂದೆ ಸೊನ್ನೆಗಳನ್ನು ಸೇರಿಸುತ್ತಾ ಹೋದಂತೆಲ್ಲಾ ಅದರ ಬೆಲೆ ಹೆಚ್ಚುತ್ತಲೇ ಹೋಗುತ್ತದೆ. ಹಾಗೆಯೇ ಲಕ್ಷ್ಯವಹಿಸಿ ಮಾಡಿದ ಕೆಲಸವೊಂದನ್ನು ಒಂದು ಲಕ್ಷ ಜನರು ವೀಕ್ಷಿಸಿ ಅಭಿನಂದಿಸಿದರೆ ಅದರ ಮಧುರಾನುಭವವೇ ಬೇರೆ.

Screenshot 2020-05-12 at 10.08.03 AMಹೌದು. ಮಾರ್ಚ್ 7, 2019ರಲ್ಲಿ ಸಣ್ಣದಾಗಿ ಒಂದು ಬ್ಲಾಗ್ ಆರಂಭಿಸಿ ಈಗಾಗಲೇ ಬರೆದಿದ್ದ ಕೆಲವು ಲೇಖನಗಳನ್ನು ಅದರಲ್ಲಿ ಪ್ರಕಟಿಸಿ ನಿಮ್ಮೆಲ್ಲರ ಮುಂದೆ ಭಕ್ತಿಪೂರ್ವಕವಾಗಿ ಈ ಪ್ರಯತ್ನ ಹೇಗಿದೆ ಎಂದು ಕೇಳಿದ್ದೆ. ಒಬ್ಬ ಹವ್ಯಾಸೀ ಬರಹಗಾರನ ಬರಹಗಳನ್ನು ನೀವೆಲ್ಲರೂ ಅತ್ಯಂತ ಆದರಾಭಿಮಾನಗಳಿಂದ ಅಪ್ಪಿಕೊಂಡಿರಿ ಮತ್ತು ಕಾಲ ಕಾಲಕ್ಕೆ ತಿದ್ದಿ ತೀಡಿದ ಪರಿಣಾಮವಾಗಿಯೇ ಇಂದು ನಮ್ಮ ನಿಮ್ಮೆಲ್ಲರ ಮೆಚ್ಚಿನ ಏನಂತೀರಿ.ಕಾಂ https://enantheeri.com ಬ್ಲಾಗ್ ಒಂದು ಲಕ್ಷ  (1,00,000) ವೀಕ್ಷಣೆಯನ್ನು ಪಡೆದುಕೊಂಡು ಒಂದು ಹೆಮ್ಮೆಯ ಮೈಲಿಗಲ್ಲನ್ನು ತಲುಪಿದೆ. ಈ ಪ್ರಯತ್ನಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಂದನೆ ಸಲ್ಲಿಸುವುದರೊಂದಿಗೆ ಕೆಲವರನ್ನು ನೆನೆಪಿಸಿಕೊಳ್ಳಲೇ ಬೇಕಾದದ್ದು ನನ್ನ ಆದ್ಯ ಕರ್ತವ್ಯವಾಗಿದೆ.

ಬರಹ ಎನ್ನುವುದು ನಮ್ಮ ಕುಟುಂಬದಲ್ಲಿ ಅನುವಂಶೀಯವಾಗಿ ಬಂದಿದೆ ಎಂದರೆ ತಪ್ಪಾಗಲಾರದು. ನಮ್ಮ ತಾತನವರು ಬಾಳಗಂಚಿ ದಿ. ಗಮಕಿ ನಂಜುಂಡಯ್ಯನವರು ಖ್ಯಾತ ಗಮಕಿಗಳು, ಹೆಸರಾಂತ ಹರಿಕಥಾ ದಾಸರು ಮತ್ತು ಪ್ರಖ್ಯಾತ ವಾಗ್ಗೇಯಕಾರರು. ಇನ್ನು ನಮ್ಮ ತಂದೆ. ದಿ. ಶಿವಮೂರ್ತಿಗಳು ಗಮಕಿಗಳು, ಲೇಖಕರು ಮತ್ತು ಮೋಚಿಂಗ್ ಕಲಾವಿದರಾಗಿದ್ದರು. ಅಂತಹ ದಿಗ್ಗಜರ ವಂಶವವನಾಗಿಯೂ ಅದೇಕೋ ಏನೋ ಗಮಕ ಒಲಿಯಲಿಲ್ಲ. ಒಲಿಯಲಿಲ್ಲ ಎನ್ನುವುದಕ್ಕಿಂತ ಕಲಿಯಲು ಪ್ರಯತ್ನಿಸಲಿಲ್ಲ ಎನ್ನುವುದೇ ಸೂಕ್ತ. ಹಾಗಾಗಿ ಪದ್ಯ ಒಲಿಯದಿದ್ದರೂ ಗದ್ಯವನ್ನು ಒಪ್ಪಿಕೊಂಡು ಅಪ್ಪಿಕೊಂಡೆ. ಬರವಣಿಗೆಯ ಮೂಲಕ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಬೇಕೋ ಬೇಡವೋ ಹಲವರೊಡನೆ ಜಿದ್ದಾ ಜಿದ್ದಿಗೆ ಇಳಿದು ವಿತಂಡ ವಾದ ಮಾಡುವುದಕ್ಕೇ ನನ್ನ ಬರವಣಿಗೆ ಸೀಮಿತವಾಗಿತ್ತು. ಅನೇಕ ಗೆಳೆಯರು ಅದೆಷ್ಟೋ ಗಂಪುಗಳಿಗೆ ನನ್ನನ್ನು ಸೇರಿಸಿ ಸುಖಾ ಸುಮ್ಮನೇ ಯಾವುದೋ ಅನಾವಶ್ಯಕ ವಿಷಯಗಳಿಗೆ ನನ್ನನ್ನು ರೊಚ್ಚಿಗೆಬ್ಬಿಸಿ ದ್ವೇಷಭರಿತ ಲೇಖನಗಳಿಗೆ ನನ್ನನ್ನು ಸೀಮಿತಗೊಳಿಸಿದ್ದರು. ಹಾಗೆ ಬರೆದ ಅನೇಕ ಲೇಖನಗಳಿಂದ ಗಳಿಸಿದ ಮಿತ್ರತ್ವಕ್ಕಿಂತ ಶತೃತ್ವವೇ ಹೆಚ್ಚು. ಅನೇಕ ವಿವಾದಗಳೂ ಕೇವಲ ಸಾಮಾಜಿಕ ಜಾಲತಾಣಕ್ಕೇ ಸೀಮಿತವಾಗದೇ ಮನೆಯವರೆಗೂ ಬಂದು ನಮ್ಮ ತಂದೆ ಮತ್ತು ಮಡದಿ ನನ್ನ ಪರವಾಗಿ ಕ್ಷಮೆಯಾಚಿಸಿರುವ ಉದಾಹರಣೆಗಳೆಷ್ಟೋ?

ಇಂತಹ ಸಮಯದಲ್ಲಿ ಅನಿರೀಕ್ಷಿತವಾಗಿ ನಮ್ಮ ತಂದೆಯವರು ಅಕಾಲಿಕ ಮರಣರಾದ ಸಂದರ್ಭದಲ್ಲಿ ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಬರೆದ ಲೇಖನವನ್ನು ಎಲ್ಲರೂ ಮೆಚ್ಚಿಕೊಂಡಾಗ ಅರೇ ಇದೇ ರೀತಿಯ ಬರಹವನ್ನೇಕೆ ಮುಂದುವರಿಸಬಾರದು ಎಂದೆನಿಸಿತಾದರೂ, ತೀಕ್ಷ್ಣವಾದ ರಾಜಕೀಯ ಬರಹದತ್ತಲೇ ಹರಿಯುತ್ತಿತ್ತು ಚಿತ್ತ. ನನ್ನ ಮಡದಿ ಮಂಜುಳ ಮತ್ತು ನನ್ನ ಗುರುಗಳಾದ ಶ್ರೀ ಮಹಾಬಲೇಶ್ವರ ಅವಧಾನಿಗಳು ತಲೆ ಗಟ್ಟಿ ಇದೇ ಎಂದು ಬಂಡೆಗೆ ಚಚ್ಚಿಕೊಳ್ಳುವುದು ಮೂರ್ಖತನ. ನಿನ್ನ ಬರವಣಿಗೆಯನ್ನು ಬದಲಿಸಿಕೋ ಎಂದು ಪ್ರೀತಿಪೂರ್ವಕದ ಆಜ್ಞಾನುಸಾರ ನನ್ನದೇ ಅನುಭವಗಳನ್ನು ಕಥಾ ರೂಪದಲ್ಲಿ ಬರೆದು ಸಾಮಾಜಿಕ ಅಂತರ್ಜಾಲದಲ್ಲಿ ಪ್ರಕಟಿಸುತ್ತಿದ್ದದ್ದನ್ನು ಗಮನಿಸಿದ ಗೆಳೆಯ ಮತ್ತು ನನ್ನ ಯೋಗಭ್ಯಾಸದ ಗುರು ಶ್ರೀ ವಾಸುದೇವ, ಸುಮ್ಮನೆ ಎಲ್ಲೋ ನಿಮ್ಮ ಬರಹಗಳನ್ನು ಪ್ರಕಟಿಸುವ ಬದಲು ನಿಮ್ಮದೇ ಬ್ಲಾಗ್ ಒಂದನ್ನು ಏಕೆ ಆರಂಭಿಸಬಾರದು? ಎಂದು ಸೂಚಿಸಿದರೂ ಅದರ ಕಡೆ ಗಮನ ಹರಿಸದಿದ್ದ ನಾನು. ಕಳೆದ ವರ್ಷ ಶಿವರಾತ್ರಿಯಂದು ಆ ಮಹಾಶಿವನ ಕೃಪಾಶೀರ್ವಾದದಿಂದ ಆರಂಭಿಸಿದ ನನ್ನ ಬ್ಲಾಗ್ ಈ ಮಟ್ಟಿಗೆ ಬೆಳೆಯಲು ನಿಮ್ಮೆಲ್ಲರ ಸಹಕಾರ ನಿಜಕ್ಕೂ ಶ್ಲಾಘನೀಯ. ಲೇಖನಗಳನ್ನು ಪ್ರಕಟಿಸಿದ ಕೂಡಲೇ ಅದನ್ನು ತಪ್ಪದೇ ಓದಿ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿ ಪ್ರೋತ್ಸಾಹಿಸುವ ಗೆಳೆಯ ಕನ್ನಡದ ಮೇಷ್ಟ್ರು ಶ್ರೀ ನರಸಿಂಹ ಮೂರ್ತಿಗಳು, ಆತ್ಮೀಯರಾದ ಶ್ರೀ ವೆಂಕಟರಂಗ ಮತ್ತು ಶ್ರೀ ಭರತ್ ಅವರಿಗೆ ಹೃದಯಪೂರ್ವಕ ವಂದನೆಗಳು.

friend is need is a friend indeed ಎನ್ನುವ ಆಂಗ್ಲ ನಾಣ್ಣುಡಿಯಂತೆ ನನ್ನ ಅನೇಕ ಬರಹಗಳಲ್ಲಿ ಬಂದು ಹೋಗಿರುವ ಮತ್ತು ನನ್ನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಗೆಳೆಯ ಹರಿ (ನರಹರಿ)ಯ ನಿರಂತರ ಪ್ರೋತ್ಸಾಹ ಮತ್ತು ಅಷ್ಟೇ ವಸ್ತುನಿಷ್ಟ ಪ್ರತಿಕ್ರಿಯೆಗಳು ನನ್ನ ಬರಹವನ್ನು ಮತ್ತಷ್ಟು ಚುರುಕುಗೊಳಿಸಿತು ಎಂದರೆ ತಪ್ಪಾಗಲಾರದು. ನನ್ನ ಬರಹಗಳು ಬಹಳ ಉದ್ದುದ್ದವಾಗಿರುತ್ತದೆ ಮತ್ತು ಅಚ್ಚ ಕನ್ನಡದ ಪದಗಳನ್ನು ಒದಲು ಬಹಳ ತ್ರಾಸದಾಯಕವಾಗಿರುತ್ತದೆ ಎಂಬ ಹುಸಿಕೋಪವನ್ನು ಗೆಳೆಯರ ಗುಂಪೊಂದರಲ್ಲಿ ಕೆಲವರು ವ್ಯಕ್ತಪಡಿಸಿ ಅದಕ್ಕೆ ಇನ್ನೂ ಹಲವರು ಸಹವ್ಯಕ್ತಪಡಿಸಿದಾಗ ನನ್ನ ಪರವಾಗಿ ನಿಂತವನೇ ಮತ್ತೊಬ್ಬ ಗೆಳೆಯ ಸುರೇಶ್. ಎಲ್ಲರಿಗೂ ಒಂದೊಂದು ವಯಸ್ಸಿನಲ್ಲಿ ಒಂದೊಂದು ರೀತಿಯ ಹವ್ಯಾಸಗಳು ಪ್ರಕಟವಾಗುತ್ತದೆ. ಈಗ ಅವನು ಬರೆಯುವ ಮನಸ್ಥಿತಿಯಲ್ಲಿದ್ದಾನೆ. ಹಾಗಾಗಿ ಅವನು ಬರೆಯಲಿ ಬಿಡಿ ಎಂದು ಹೇಳಿದ್ದಲ್ಲದೇ, ಮಗಾ, ನೀನು ಬರೆಯುವುದನ್ನು ನಿಲ್ಲಿಸಬೇಡ ಮುಂದುವರೆಸು, ಯಾರು ಓದದಿದ್ದರೇನಂತೇ? ನಾನೊಬ್ಬನೇ ಹತ್ತು ಸಲಾ ಓದುತ್ತೀನಿ ಎಂದು ಬೆಂಬಲ ಇತ್ತದ್ದನ್ನು ಖಂಡಿತವಾಗಿಯೂ ಮರೆಯಲು ಸಾಧ್ಯವೇ ಇಲ್ಲ.

cropped-enatheeri_updated_logoಬ್ಲಾಗ್ ಎಂದ ಮೇಲೆ ಎಲ್ಲರೂ ಸುಲಭವಾಗಿ ಅದನ್ನು ಗುರುತಿಸುವಂತಿರ ಬೇಕು ಮತ್ತು ಎಲ್ಲರ ಮನಸ್ಸೆಳೆವ ಚಿನ್ಹೆ ಇರಬೇಕು ಎಂದು ಯೋಚಿಸುತ್ತಿರುವಾಗಲೇ ನನ್ನ ಎಲ್ಲಾ ಲೇಖನಗಳಲ್ಲಿಯೂ ಓದುಗರೊಂದಿಗೆ ಸಂವಹನೆ ಇಟ್ಟುಕೊಳ್ಳಲು ಏನಂತೀರೀ? ಎಂದು ಪ್ರಶ್ನಿಸುತ್ತಿದ್ದದ್ದನೇ ಮೂಲವಾಗಿಟ್ಟು ಕೊಂಡು ಏನಂತೀರೀ.ಕಾಂ ಎಂದು ನಾಮಕರಣ ಮಾಡಲಾಯಿತಾದರೂ ಅದಕ್ಕೊಂದು ಸ್ವಂತದ ಚಿನ್ಹೆಯ ಕುರಿತು ಗೆಳೆಯರೊಡನೆ ಚರ್ಚಿಸುತ್ತಿದ್ದಾಗ, ಗೆಳೆಯ ಸುಬ್ರಹ್ಮಣ್ಯ ಐತಾಳ್ ಥಟ್ಟನೇ ಏ?  ಎಂಬುದೇ ಸೂಕ್ತ ಎಂದು ಸೂಚಿಸಿದರೆ ಅದನ್ನು ಇನ್ನೂ ಹಲವಾರು ಸ್ನೇಹಿತರು ಅನುಮೋದಿಸಿದಾಗ ಎಲ್ಲರ(ವ)ನ್ನೂ ಪ್ರಶ್ನಿಸಿ ಮತ್ತು ಪರಿಹರಿಸಿಕೊಳ್ಳಿ ಎಂಬ ತಲೆಬರಹ ಸೇರಿಸಿ ಒಂದು ಸುಂದರವಾದ ಲೋಗೋ ಸಿದ್ಧವಾಯಿತು. ಅದನ್ನು ಅಷ್ಟೇ ಸುಂದರವಾಗಿ ತನ್ನ ಕೈಚೆಳಕದಿಂದ ಮೂಡಿಸಿದ ಮಗಳು ಸೃಷ್ಟಿಯನ್ನೂ ಈ ಸಮಯದಲ್ಲಿ ನೆನಪಿಸಿಕೊಳ್ಳಲೇಬೇಕು.

ಇದುವರೆಗೂ 350 ಕ್ಕೂ ಹೆಚ್ಚಿನ ಲೇಖನಗಳು ನಮ್ಮೀ ಬ್ಲಾಗಿನಲ್ಲಿ ಪ್ರಕಟವಾಗಿದ್ದು ಅದರಲ್ಲಿ ಬೆರಳೆಣಿಕೆಯಷ್ಟು ಹೊರತಾಗಿ ಉಳಿದದ್ದೆಲ್ಲವೂ ಸ್ವರಚಿತ ಕೃತಿಗಳಾಗಿವೆ. ಇಡೀ ಬ್ಲಾಗನ್ನು ಗಮನಿಸಿದಲ್ಲಿ ಕೇವಲ ಒಂದೇ ಸಿದ್ಧಾಂತಗಳಿಗೆ ಮತ್ತು ಕಟ್ಟು ಪಾಡುಗಳಿಗೆ ಬೀಳದೆ, ಕನ್ನಡ ನಾಡು, ಭಾಷೆ, ನುಡಿ, ಸಂಸ್ಕೃತಿ ಮತ್ತು ಸಂಪ್ರದಾಯ, ಕ್ರೀಡೆಗಳು, ಪ್ರಚಲಿತ ವಿದ್ಯಮಾನಗಳು, ರಾಜಕೀಯ, ಇತ್ತೀಚೆಗೆ ನಳಪಾಕವೂ ಸೇರಿದಂತೆ ಸುಮಾರು 23 ವರ್ಗಗಳಿದ್ದು ಓದುಗರಿಗೆ ಯಾವುದೇ ರೀತಿಯಲ್ಲಿ ಬೇಸರವಾಗದಂತೆ ಓದಿಸಿಕೊಂಡು ಹೋಗುವ ಲೇಖನಗಳನ್ನು ಬರೆದಿದ್ದೇನೆ ಎನ್ನುವುದಕ್ಕಿಂತ ನಿಮ್ಮ ಪ್ರೋತ್ಸಾಹ ಬರೆಸಿಕೊಂಡು ಹೋಗಿದೆ ಎಂದರೆ ತಪ್ಪಾಗಲಾರದು. ನನ್ನ ಅನುಭವಗಳನ್ನೇ ಹೇಳುತ್ತಾ ಹೋದಲ್ಲಿ ಓದುಗರಿಗೆ ಬೇಸರವಾಗುತ್ತದೆ, ಹಾಗಾಗಿ ಅದೇ ಅನುಭವಗಳನ್ನು ಕಥಾ ರೂಪದಲ್ಲಿ ಬರೆಯಲು ಪ್ರಯತ್ನಿಸು ಎಂದು ನನ್ನೊಳಗಿನ ಕಥಾ ನಾಯಕ ಶಂಕರನನ್ನು ಬಡಿಡೆಬ್ಬಿಸಿದವರು ಶ್ರೀಮತಿ ಛಾಯಾ ಮುರಳಿ ಅವರು. ಅಣ್ಣಾ, ನಮ್ಮ ಪ್ರತೀ ಹಬ್ಬಗಳ ಆಚರಣೆ ಮತ್ತು ಅದರ ವಿಶೇಷತೆಗಳನ್ನೇಕೆ ಜನರಿಗೆ ಸುಲಭವಾಗಿ ಪರಿಚಯಿಸಬಾರದು? ಎಂದು ಯುವಾ ಬ್ರಿಗೇಡ್ ಗೆಳೆಯ ನಿತ್ಯಾನಂದ ಗೌಡರು ಹೇಳಿದಾಗಲೇ ವರ್ಷದ ಇಡೀ ಹಬ್ಬದ ಕುರಿತಂತೆ ಹಬ್ಬಗಳ ಮಾಲಿಕೆಗೆ ಮೂಲವಾಯಿತು. ಕನ್ನಡ ರಾಜ್ಯೋತ್ಸವದ ತಿಂಗಳಿನಲ್ಲಿ ಪ್ರತೀ ದಿನವೂ ಮೂಡಿ ಬಂದ ಕನ್ನಡದ ಕಲಿಗಳಿಗೆ ನೀವು ತೋರಿದ ಪ್ರೋತ್ಸಾಹ ನಿಜಕ್ಕೂ ಅವಿಸ್ಮರಣಿಯ. ಪ್ರತೀ ದಿನವೂ ಕನ್ನಡಿಗರು ಮರೆತು ಹೋದ ಒಬ್ಬೊಬ್ಬ ಹಿರಿಯರ ಬಗ್ಗೆ ಬರೆಯಬೇಕಾದಾಗ ಮತ್ತಷ್ಟು ಮಗದಷ್ಟು ಹಲವಾರು ವಿಷಯಗಳನ್ನು ಓದುವ ಮೂಲಕ ನನ್ನ ನನ್ನ ಜ್ಞಾನಸಂಪತ್ತನ್ನು ಹೆಚ್ಚಿಸಿತು. ಅದೇ ಮಾಲಿಕೆಯಲ್ಲಿ ಜಿ.ವಿ ಐಯ್ಯರ್ ಅವರು ತಮ್ಮ ವಯಕ್ತಿಕ ಕಾರಣಗಳಿಂದಾಗಿ ಚಪ್ಪಲಿಯನ್ನು ಧರಿಸುವುದನ್ನು ತ್ಯಜಿಸಿ ಬರೀಗಾಲು ನಿರ್ದೇಶಕರು ಎಂದೇ ಖ್ಯಾತರಾದರು ಎಂದು ಬರೆದಿದ್ದೆ. ಅದಕ್ಕೊಬ್ಬ ಓದುಗರು ಪ್ರತಿಕ್ರಯಿಸಿ ಆವರು ಚಪ್ಪಲಿ ಧರಿಸಿದಂತೆ ಮಾಡಿದ ವಯಕ್ತಿಕ ಕಾರಣವೇನು ಎಂದು ತಿಳಿಸಬಹುದೇ? ಎಂದು ಕೇಳಿದಾಗ, ಅ ಕುರಿತಂತೆ ಮತ್ತಷ್ಟು ಲೇಖನಗಳನ್ನು ಓದಿ ಕಡೆಗೆ ಗಾಂಧೀಯವರ ಅಪ್ಪಟ ಅಭಿಮಾನಿಯಾಗಿದ್ದ ಅಯ್ಯರ್ ಅವರು, ಗಾಂಧೀಜಿಯವರ ನೆನಪಿನಲ್ಲಿ ಚಪ್ಪಲಿ ಧರಿಸುವುದನ್ನು ಬಿಟ್ಟ ವಿಷಯ ಓದುಗರೊಬ್ಬರಿಗೆ ಉತ್ತರಿಸಲು ಸಲುವಾಗಿ ತಿಳಿಯುವಂತಹ ಸುವರ್ಣಾವಕಾಶ ದೊರೆಯಿತು.

ರಾಮ ಮತ್ತು ರಾವಣ ಲೇಖನ ಅತ್ಯಂತ ಚರ್ಚೆಗೆ ಒಳಪಟ್ಟಿತಲ್ಲದೇ ಓದುಗರಲ್ಲಿ ಅನೇಕ ಚಿಂತನೆಗಳ ಆಯಾಮಗಳನ್ನು ಹುಟ್ಟುಹಾಕಿತು. ದಾಸಯ್ಯ ಲೇಖನ ನಶಿಸುಹೋಗುತ್ತಿರುವ ಒಂದು ಅಪರೂಪದ ಕಲೆಯನ್ನು ಇಂದಿನ ಜನರಿಗೆ ಪರಿಚಯಿಸಿತು. ಬೇಡುವ ಕೈಗಳ ಹಿಂದಿನ ರಹಸ್ಯ ಲೇಖನ ವಯೋವೃದ್ಧರು ಮತ್ತವರ ಮಕ್ಕಳ ನಡುವಿನ ಬವಣೆಯನ್ನು ನವಿರಾಗಿ ತಿಳಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇನ್ನು ನೆರೆಹೊರೆ ಲೇಖನವಂತೂ ಬಹಳ ಮೆಚ್ಚುಗೆಗೆ ಪಾತ್ರವಾಗಿ ನನ್ನ ಮಿತ್ರರೊಬ್ಬರ ಜೊತೆಗಿದ್ದಾಗ ಅವರ ಗೆಳೆಯನೊಬ್ಬ ಕರೆ ಮಾಡಿ ಈಗ ಒಂದು ವಾಟ್ಶ್ಯಾಪ್ ಮೆಸೇಜ್ ಕಳುಹಿಸಿದ್ದೇನೆ. ಬಡ್ಡೀ ಮಗ ಯಾರೋ ನಾವು ಚಿಕ್ಕ ವಯಸ್ಸಿನಲ್ಲಿ ಮಾಡಿದ್ದೆಲ್ಲವನ್ನೂ ಹಾಗೆಯೇ ಬರೆದಿದ್ದಾನೆ ಎಂದಾಗ, ಅದಕ್ಕೆ ನಕ್ಕು ಅದರ ಲೇಖಕರು ಇಲ್ಲೇ ಇದ್ದಾರೆ ಅವರ ಜೊತೇನೇ ಮಾತನಾಡು ಎಂದು ಅವರೊಂದಿಗೆ ಮಾತಾನಾಡಿಸಿದಾಗ ಆದ ಅನುಭವ ನಿಜಕ್ಕೂ ಬಣ್ಣಿಸಲಸದಳ. ಅದೇ ಲೇಖನವನ್ನು ನನ್ನ ಗೆಳೆಯರೊಬ್ಬರ  ಹಿರಿಯ ವಯಸ್ಸಿನ ತಾಯಿಯವರು ಮೆಚ್ಚಿ ಅದನ್ನು ಅವರ ಕುಂಟುಂಬದ ಗುಂಪಿನಲ್ಲಿ ಕಳುಹಿಸಿದ್ದದ್ದನ್ನು ನೋಡಿದ ನಮ್ಮ ಗೆಳೆಯರು ಅಮ್ಮಾ ಇದು ನಿನಗೆ ಹೇಗೆ ಮತ್ತು ಎಲ್ಲಿ ಸಿಕ್ಕಿತು ಎಂದಾಗ, ಯಾರೋ ತುಂಬಾ ಚೆನ್ನಾಗಿ ಬರೆದಿದ್ದಾರೆ ಅದಕ್ಕೆ ಎಲ್ಲರೊಂದಿಗೆ ಹಂಚಿಕೊಂಡೆ ಎಂದರಂತೆ. ಇನ್ನೂ ನಮ್ಮ ಕುಟುಂಬದ ಸಾಹಿತ್ಯಾಸಕ್ತೆ ಒಬ್ಬರು, ನೀವು ಕಳುಹಿಸುವ ಈ ಏನಂತೀರೀ ಎಂಬ ಅನಾಮಿಕ ಲೇಖಕರನ್ನು ಒಮ್ಮೆ ಪರಿಚಯಿಸುತ್ತೀರಾ? ಎಂದು ಕೇಳಿದಾಗ ಅದೇನು ಅಂತಹ ವಿಶೇಷ? ಅವರ್ಯಾರು ಎಂಬ ಕುತೂಹಲವೇಕೆ ಎಂದು ವಿಚಾರಿಸಿದಾಗ, ಏನು ಇಲ್ಲಾ ಅವರ್ಯಾರೋ ಗೊತ್ತಿಲ್ಲಾ ಆದ್ರೇ, ನಮ್ಮವರೇ ನಮ್ಮ ಅನುಭವಗಳನ್ನೇ ಹೇಳಿದ ಹಾಗೆ ಇರುತ್ತದೆ ಎಂದಾಗ, ಸುಮ್ಮನೆ ನಕ್ಕು ಅದನ್ನು ಬರೆದವನ್ನು ನಾನೇ ಎಂದಾಗ ಅವರಿಗೆ ನಂಬಲೇ ಆಗಲಿಲ್ಲ ಎನ್ನುವುದೂ ಸತ್ಯ.

ಒಟ್ಟಿನಲ್ಲಿ ಈ ಬ್ಲಾಗಿನ ಮೂಲಕ ನೂರಾರು ಸಾಹಿತ್ಯಾಸಕ್ತ ಗೆಳೆಯರು ಪರಿಚಯವಾಗಿದ್ದಲ್ಲದೇ ಅನೇಕ ಉಪಯುಕ್ತ ಮಾಹಿತಿಗಳನ್ನೂ ತಿಳಿಯುವಂತಾಯಿತು ಮತ್ತು ತಿಳಿಸುವಂತಾಯಿತು. ಈ ಎಲ್ಲಾ ಬೆಳವಣಿಗೆಯನ್ನು ಕಣ್ಣಾರೆ ನೋಡಲು ಮತ್ತು ಸಂಭ್ರಮಿಸಲು ಇಂದು ನಮ್ಮ ತಂದೆಯವರು ಇಲ್ಲವಲ್ಲಾ ಎಂಬ ಕೊರಗಿದ್ದರೂ ಅವರ ಜಾಗದಲ್ಲಿ ನಿಮ್ಮಂತಹ ನೂರಾರು ಹಿತೈಷಿಗಳು ಮತ್ತು ಮಾರ್ಗದರ್ಶಿಗಳು ದೊರತದ್ದು ನನ್ನ ಪೂರ್ವ ಜನ್ಮದ ಸುಕೃತವೇ ಸರಿ. ಹಾಗಾಗಿಯೇ ಈ ಲೇಖನದ ಶೀರ್ಷಿಕೆಯನ್ನು ಹಂಸಲೇಖ ಅವರು ಗಾನಯೋಗಿ ಪಂಚಾಕ್ಷರಿ ಗವಾಯಿ ಸಿನಿಮಾದ ಹಾಡೋಂದರಲ್ಲಿ ಬಳೆಸಿರುವ ಸಾವಿರದ ಶರಣು ಎಂಬ ಪದವನ್ನು ಬಳೆಸಿದ್ದೇನೆ. ಮೊದಲಿಗೆ ನನ್ನ ಬರಹವನ್ನು ನಿರಂತರವಾಗಿ ಓದುತ್ತಿರುವ ನಿಮ್ಮಂತಹ ಸಾಹಿತ್ಯಾಸಕ್ತರಿಗೆ ಒಂದು ಸಾವಿರ ಶರಣು ಎಂಬ ಅರ್ಥವಾದರೆ ಮತ್ತೊಂದು ಸಾವು + ಇರದ= ಸಾವಿರದ, ಅಂದರೇ ಸಾವೇ ಇರದಷ್ಟು ಚಿರಋಣಿ ಎಂದರ್ಥ.

ನಮ್ಮ ಬ್ಲಾಗಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ಮತ್ತು ಅದನ್ನು ಮತ್ತಷ್ಟು ಹೇಗೆ ಉತ್ತಮ ಪಡಿಸ ಬಹುದು ಎಂಬ ಸೂಕ್ತ ಸಲಹೆಗಳನ್ನು ಈ ಕೂಡಲೇ ನೀಡುವ ಮುಖಾಂತರ ನಿಮ್ಮೀ ಬ್ಲಾಗನ್ನು ಮತ್ತಷ್ಟು ಮಗದಷ್ಟು ಉತ್ತಮ ಸಾಹಿತ್ಯತಾಣವನ್ನಾಗಿ ಮಾಡೋಣ. ಇದುವರೆಗೂ ನಮ್ಮ ಮಸ್ತಕದಲ್ಲಿ ಇದ್ದದ್ದನ್ನು ಡಿಜಿಟಲ್ ಪುಸ್ತಕರೂಪದಲ್ಲಿ ನಮ್ಮ ಮುಂದಿನ ಪೀಳಿಗೆಯವರಿಗೂ ಉಳಿಯುವಂತೆ ಮಾಡೋಣ.

ಏನಂತೀರೀ?