ಸಾವಿರದ ಶರಣು

ಜೀವನದಲ್ಲಿ ಯಾವಾಗಲೂ ಲಕ್ಷ್ಯ ಮತ್ತು ಲಕ್ಷಕ್ಕೆ ಅತೀ ಮಹತ್ವವಿರುತ್ತದೆ. ಹತ್ತು, ನೂರು, ಸಾವಿರ, ಹತ್ತುಸಾವಿರ ಮತ್ತು ಲಕ್ಷ ಅಂದರೆ ಒಂದರ ಪಕ್ಕ ಐದು ಸೊನ್ನೆಗಳು. ಸೊನ್ನೆಗಳಿಗೆ ಬೆಲೆ ಇಲ್ಲಾ ಅನ್ನುವವರು ಅದೇ ಸೊನ್ನೆಯ ಹಿಂದೆ ಒಂದು ಅಂಕೆ ಸೇರಿಸಿಕೊಂಡು ಅದರ ಮುಂದೆ ಸೊನ್ನೆಗಳನ್ನು ಸೇರಿಸುತ್ತಾ ಹೋದಂತೆಲ್ಲಾ ಅದರ ಬೆಲೆ ಹೆಚ್ಚುತ್ತಲೇ ಹೋಗುತ್ತದೆ. ಹಾಗೆಯೇ ಲಕ್ಷ್ಯವಹಿಸಿ ಮಾಡಿದ ಕೆಲಸವೊಂದನ್ನು ಆರು ಲಕ್ಷಕ್ಕೂ ಅಧಿಕ ಸಾಹಿತ್ಯಾಸಕ್ತರು ಜನರು ವೀಕ್ಷಿಸಿ ಅಭಿನಂದಿಸಿದರೆ ಅದರ ಮಧುರಾನುಭವವೇ ಬೇರೆ.

Enanthirri_Hitsಹೌದು. ಮಾರ್ಚ್ 7, 2019ರಲ್ಲಿ ಸಣ್ಣದಾಗಿ ಒಂದು ಬ್ಲಾಗ್ ಆರಂಭಿಸಿ ಈಗಾಗಲೇ ಬರೆದಿದ್ದ ಕೆಲವು ಲೇಖನಗಳನ್ನು ಅದರಲ್ಲಿ ಪ್ರಕಟಿಸಿ ನಿಮ್ಮೆಲ್ಲರ ಮುಂದೆ ಭಕ್ತಿಪೂರ್ವಕವಾಗಿ ಈ ಪ್ರಯತ್ನ ಹೇಗಿದೆ ಎಂದು ಕೇಳಿದ್ದೆ. ಒಬ್ಬ ಹವ್ಯಾಸೀ ಬರಹಗಾರನ ಬರಹಗಳನ್ನು ನೀವೆಲ್ಲರೂ ಅತ್ಯಂತ ಆದರಾಭಿಮಾನಗಳಿಂದ ಅಪ್ಪಿಕೊಂಡಿರಿ ಮತ್ತು ಕಾಲ ಕಾಲಕ್ಕೆ ತಿದ್ದಿ ತೀಡಿದ ಪರಿಣಾಮವಾಗಿಯೇ ಇಂದು ನಮ್ಮ ನಿಮ್ಮೆಲ್ಲರ ಮೆಚ್ಚಿನ ಏನಂತೀರಿ.ಕಾಂ https://enantheeri.com ಬ್ಲಾಗ್ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು (679154) ಪಡೆದು ಅಮೋಘವಾಗಿ ಮುನ್ನೆಡೆಯುತ್ತಿದೆ.  ಈ ಪ್ರಯತ್ನಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಂದನೆ ಸಲ್ಲಿಸುವುದರೊಂದಿಗೆ ಕೆಲವರನ್ನು ನೆನೆಪಿಸಿಕೊಳ್ಳಲೇ ಬೇಕಾದದ್ದು ನನ್ನ ಆದ್ಯ ಕರ್ತವ್ಯವಾಗಿದೆ.

ಬರಹ ಎನ್ನುವುದು ನಮ್ಮ ಕುಟುಂಬದಲ್ಲಿ ಅನುವಂಶೀಯವಾಗಿ ಬಂದಿದೆ ಎಂದರೆ ತಪ್ಪಾಗಲಾರದು. ನಮ್ಮ ತಾತನವರು ಬಾಳಗಂಚಿ ದಿ. ಗಮಕಿ ನಂಜುಂಡಯ್ಯನವರು ಖ್ಯಾತ ಗಮಕಿಗಳು, ಹೆಸರಾಂತ ಹರಿಕಥಾ ದಾಸರು ಮತ್ತು ಪ್ರಖ್ಯಾತ ವಾಗ್ಗೇಯಕಾರರು. ಇನ್ನು ನಮ್ಮ ತಂದೆ. ದಿ. ಶಿವಮೂರ್ತಿಗಳು ಗಮಕಿಗಳು, ಲೇಖಕರು ಮತ್ತು ಮೋರ್ಚಿಂಗ್ ಕಲಾವಿದರಾಗಿದ್ದರು. ಅಂತಹ ದಿಗ್ಗಜರ ವಂಶವವನಾಗಿಯೂ ಅದೇಕೋ ಏನೋ ಗಮಕ ಒಲಿಯಲಿಲ್ಲ. ಒಲಿಯಲಿಲ್ಲ ಎನ್ನುವುದಕ್ಕಿಂತ ಕಲಿಯಲು ಪ್ರಯತ್ನಿಸಲಿಲ್ಲ ಎನ್ನುವುದೇ ಸೂಕ್ತ. ಹಾಗಾಗಿ ಪದ್ಯ ಒಲಿಯದಿದ್ದರೂ ಗದ್ಯವನ್ನು ಒಪ್ಪಿಕೊಂಡು ಅಪ್ಪಿಕೊಂಡೆ. ಬರವಣಿಗೆಯ ಮೂಲಕ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಬೇಕೋ ಬೇಡವೋ ಹಲವರೊಡನೆ ಜಿದ್ದಾ ಜಿದ್ದಿಗೆ ಇಳಿದು ವಿತಂಡ ವಾದ ಮಾಡುವುದಕ್ಕೇ ನನ್ನ ಬರವಣಿಗೆ ಸೀಮಿತವಾಗಿತ್ತು. ಅನೇಕ ಗೆಳೆಯರು ಅದೆಷ್ಟೋ ಗಂಪುಗಳಿಗೆ ನನ್ನನ್ನು ಸೇರಿಸಿ ಸುಖಾ ಸುಮ್ಮನೇ ಯಾವುದೋ ಅನಾವಶ್ಯಕ ವಿಷಯಗಳಿಗೆ ನನ್ನನ್ನು ರೊಚ್ಚಿಗೆಬ್ಬಿಸಿ ದ್ವೇಷಭರಿತ ಲೇಖನಗಳಿಗೆ ನನ್ನನ್ನು ಸೀಮಿತಗೊಳಿಸಿದ್ದರು. ಅಂದು ಹಾಗೆ ಬರೆದ ಅನೇಕ ಲೇಖನಗಳಿಂದ ಗಳಿಸಿದ ಮಿತ್ರತ್ವಕ್ಕಿಂತ ಶತೃತ್ವವೇ ಹೆಚ್ಚು. ಅನೇಕ ವಿವಾದಗಳೂ ಕೇವಲ ಸಾಮಾಜಿಕ ಜಾಲತಾಣಕ್ಕೇ ಸೀಮಿತವಾಗದೇ ಮನೆಯವರೆಗೂ ಬಂದು ನಮ್ಮ ತಂದೆ ಮತ್ತು ಮಡದಿ ನನ್ನ ಪರವಾಗಿ ಕ್ಷಮೆಯಾಚಿಸಿರುವ ಉದಾಹರಣೆಗಳೆಷ್ಟೋ?

ಇಂತಹ ಸಮಯದಲ್ಲಿ ಅನಿರೀಕ್ಷಿತವಾಗಿ ನಮ್ಮ ತಂದೆಯವರು ಅಕಾಲಿಕ ಮರಣರಾದ ಸಂದರ್ಭದಲ್ಲಿ ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಬರೆದ ಲೇಖನವನ್ನು ಎಲ್ಲರೂ ಮೆಚ್ಚಿಕೊಂಡಾಗ ಅರೇ ಇದೇ ರೀತಿಯ ಬರಹವನ್ನೇಕೆ ಮುಂದುವರಿಸಬಾರದು? ಎಂದೆನಿಸಿತಾದರೂ, ತೀಕ್ಷ್ಣವಾದ ರಾಜಕೀಯ ಬರಹದತ್ತಲೇ ಹರಿಯುತ್ತಿತ್ತು ಚಿತ್ತ. ನನ್ನ ಮಡದಿ ಮಂಜುಳ ಮತ್ತು ನನ್ನ ಗುರುಗಳಾದ ಶ್ರೀ ಮಹಾಬಲೇಶ್ವರ ಅವಧಾನಿಗಳು ತಲೆ ಗಟ್ಟಿ ಇದೇ ಎಂದು ಬಂಡೆಗೆ ಚಚ್ಚಿಕೊಳ್ಳುವುದು ಮೂರ್ಖತನ. ನಿನ್ನ ಬರವಣಿಗೆಯನ್ನು ಬದಲಿಸಿಕೋ ಎಂದು ಪ್ರೀತಿಪೂರ್ವಕದ ಆಜ್ಞಾನುಸಾರ ನನ್ನದೇ ಅನುಭವಗಳನ್ನು ಕಥಾ ರೂಪದಲ್ಲಿ ಬರೆದು ಸಾಮಾಜಿಕ ಅಂತರ್ಜಾಲದಲ್ಲಿ ಪ್ರಕಟಿಸುತ್ತಿದ್ದದ್ದನ್ನು ಗಮನಿಸಿದ ಗೆಳೆಯ ಮತ್ತು ನನ್ನ ಯೋಗಭ್ಯಾಸದ ಗುರು ಶ್ರೀ ವಾಸುದೇವ, ಸುಮ್ಮನೆ ಎಲ್ಲೋ ನಿಮ್ಮ ಬರಹಗಳನ್ನು ಪ್ರಕಟಿಸುವ ಬದಲು ನಿಮ್ಮದೇ ಬ್ಲಾಗ್ ಒಂದನ್ನು ಏಕೆ ಆರಂಭಿಸಬಾರದು? ಎಂದು ಸೂಚಿಸಿದರೂ ಅದರ ಕಡೆ ಗಮನ ಹರಿಸದಿದ್ದ ನಾನು, 2019ರ ಶಿವರಾತ್ರಿಯಂದು ಭಕ್ತಿಯಿಂದ ನಮ್ಮ ಮನೆಯ ದೇವರು ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿಯನ್ನು ನೆನೆದು ಬ್ಲಾಗ್ ಒಂದನ್ನು ಆರಂಭಿಸಿ ಅದಕ್ಕೆ ಏನಂತೀರೀ? (ಹಿರೇಮಗಳೂರು ಕಣ್ಣನ್ ಅವರಿಂದ ಪ್ರಭಾವಿತನಾಗಿ) ಎಂಬ ವಿಶಿಷ್ಯವಾದ ಹೆಸರನ್ನಿತ್ತು ಅದಾಗಲೇ ಬರೆದಿದ್ದ 50-60 ಲೇಖನಗಳನ್ನು ಅದರೊಳಗೆ ಪ್ರಕಟಿಸಿ ನನ್ನೀ ಹೊಸಾ ಸಾಹಸವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದೇ ತಡಾ, ನಿಮ್ಮೆಲ್ಲರ ಅದ್ಭುತವಾದ ಮೆಚ್ಚುಗೆ, ಪ್ರೋತ್ಸಾಹ ಮತ್ತು ಸಹಕಾರದಿಂದಾಗಿ ಇಂದು ನಮ್ಮೀ ಬ್ಲಾಗ್ ಕನ್ನಡ ನಾಡಿನ ಜನರಿಗೆ ಚಿರಪರಿಚಿತವಾಗಿದೆ. ನಾನು ಲೇಖನಗಳನ್ನು ಪ್ರಕಟಿಸಿದ ಕೂಡಲೇ ಅದನ್ನು ತಪ್ಪದೇ ಓದಿ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿ ಪ್ರೋತ್ಸಾಹಿಸುವ ಗೆಳೆಯ ಕನ್ನಡದ ಮೇಷ್ಟ್ರು ಶ್ರೀ ನರಸಿಂಹ ಮೂರ್ತಿಗಳು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಶ್ರೀ ವಿಜಯ್ ಭರ್ತೂರ್ ಆತ್ಮೀಯರಾದ ಶ್ರೀ ವೆಂಕಟರಂಗ ಮತ್ತು ಶ್ರೀ ಭರತ್, ಅಯ್ಯಂಗಾರ್ ಆಹಾರದ ಶ್ರೀ ವಿಜಯ್ ಹೆರಗು ಅವರಿಗೆ ಹೃದಯಪೂರ್ವಕ ವಂದನೆಗಳನ್ನು ಅರ್ಪಿಸಲೇ ಬೇಕಾದದ್ದು ನನ್ನ ಆದ್ಯ ಕರ್ತವ್ಯವಾಗಿದೆ

friend is need is a friend indeed ಎನ್ನುವ ಆಂಗ್ಲ ನಾಣ್ಣುಡಿಯಂತೆ ನನ್ನ ಅನೇಕ ಬರಹಗಳಲ್ಲಿ ಬಂದು ಹೋಗಿರುವ ಮತ್ತು ನನ್ನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಗೆಳೆಯ ಹರಿ (ನರಹರಿ)ಯ ನಿರಂತರ ಪ್ರೋತ್ಸಾಹ ಮತ್ತು ಅಷ್ಟೇ ವಸ್ತುನಿಷ್ಟ ಪ್ರತಿಕ್ರಿಯೆಗಳು ನನ್ನ ಬರಹವನ್ನು ಮತ್ತಷ್ಟು ಚುರುಕುಗೊಳಿಸಿತು ಎಂದರೆ ತಪ್ಪಾಗಲಾರದು. ನನ್ನ ಬರಹಗಳು ಬಹಳ ಉದ್ದುದ್ದವಾಗಿರುತ್ತದೆ ಮತ್ತು ಅಚ್ಚ ಕನ್ನಡದ ಪದಗಳನ್ನು ಒದಲು ಬಹಳ ತ್ರಾಸದಾಯಕವಾಗಿರುತ್ತದೆ ಎಂಬ ಹುಸಿಕೋಪವನ್ನು ಗೆಳೆಯರ ಗುಂಪೊಂದರಲ್ಲಿ ಕೆಲವರು ವ್ಯಕ್ತಪಡಿಸಿ ಅದಕ್ಕೆ ಇನ್ನೂ ಹಲವರು ಸಹವ್ಯಕ್ತಪಡಿಸಿದಾಗ ನನ್ನ ಪರವಾಗಿ ನಿಂತವನೇ ಮತ್ತೊಬ್ಬ ಗೆಳೆಯ ಸುರೇಶ್. ಎಲ್ಲರಿಗೂ ಒಂದೊಂದು ವಯಸ್ಸಿನಲ್ಲಿ ಒಂದೊಂದು ರೀತಿಯ ಹವ್ಯಾಸಗಳು ಪ್ರಕಟವಾಗುತ್ತದೆ. ಈಗ ಅವನು ಬರೆಯುವ ಮನಸ್ಥಿತಿಯಲ್ಲಿದ್ದಾನೆ. ಹಾಗಾಗಿ ಅವನು ಬರೆಯಲಿ ಬಿಡಿ ಎಂದು ಹೇಳಿದ್ದಲ್ಲದೇ, ಮಗಾ, ನೀನು ಬರೆಯುವುದನ್ನು ನಿಲ್ಲಿಸಬೇಡ ಮುಂದುವರೆಸು, ಯಾರು ಓದದಿದ್ದರೇನಂತೇ? ನಾನೊಬ್ಬನೇ ಹತ್ತು ಸಲಾ ಓದುತ್ತೀನಿ ಎಂದು ಬೆಂಬಲ ಇತ್ತದ್ದನ್ನು ಖಂಡಿತವಾಗಿಯೂ ಮರೆಯಲು ಸಾಧ್ಯವೇ ಇಲ್ಲ.

cropped-enatheeri_updated_logoಬ್ಲಾಗ್ ಎಂದ ಮೇಲೆ ಎಲ್ಲರೂ ಸುಲಭವಾಗಿ ಅದನ್ನು ಗುರುತಿಸುವಂತಿರ ಬೇಕು ಮತ್ತು ಎಲ್ಲರ ಮನಸ್ಸೆಳೆವ ಚಿನ್ಹೆ ಇರಬೇಕು ಎಂದು ಯೋಚಿಸುತ್ತಿರುವಾಗಲೇ ನನ್ನ ಎಲ್ಲಾ ಲೇಖನಗಳಲ್ಲಿಯೂ ಓದುಗರೊಂದಿಗೆ ಸಂವಹನೆ ಇಟ್ಟುಕೊಳ್ಳಲು ಏನಂತೀರೀ? ಎಂದು ಪ್ರಶ್ನಿಸುತ್ತಿದ್ದದ್ದನೇ ಮೂಲವಾಗಿಟ್ಟು ಕೊಂಡು ಏನಂತೀರೀ.ಕಾಂ ಎಂದು ನಾಮಕರಣ ಮಾಡಲಾಯಿತಾದರೂ ಅದಕ್ಕೊಂದು ಸ್ವಂತದ ಚಿನ್ಹೆಯ ಕುರಿತು ಗೆಳೆಯರೊಡನೆ ಚರ್ಚಿಸುತ್ತಿದ್ದಾಗ, ಗೆಳೆಯ ಸುಬ್ರಹ್ಮಣ್ಯ ಐತಾಳ್ ಥಟ್ಟನೇ ಏ?  ಎಂಬುದೇ ಸೂಕ್ತ ಎಂದು ಸೂಚಿಸಿದರೆ ಅದನ್ನು ಇನ್ನೂ ಹಲವಾರು ಸ್ನೇಹಿತರು ಅನುಮೋದಿಸಿದಾಗ ಎಲ್ಲರ(ವ)ನ್ನೂ ಪ್ರಶ್ನಿಸಿ ಮತ್ತು ಪರಿಹರಿಸಿಕೊಳ್ಳಿ ಎಂಬ ತಲೆಬರಹ ಸೇರಿಸಿ ಒಂದು ಸುಂದರವಾದ ಲೋಗೋ ಸಿದ್ಧವಾಯಿತು. ಅದನ್ನು ಅಷ್ಟೇ ಸುಂದರವಾಗಿ ತನ್ನ ಕೈಚೆಳಕದಿಂದ ಮೂಡಿಸಿದ ಮಗಳು ಸೃಷ್ಟಿಯನ್ನೂ ಈ ಸಮಯದಲ್ಲಿ ನೆನಪಿಸಿಕೊಳ್ಳಲೇಬೇಕು.

emantheeri+updatd_smallನಂತರದ ದಿನಗಳಲ್ಲಿ ಇದೇ ಲೋಗೋವನ್ನು ಹೀಗೆ ಮತ್ತಷ್ತು ಚಂದವಾಗಿ ವಿನ್ಯಾಸಗೊಳಿಸಿ ಕೊಟ್ಟ ಸಹೋದರ ವಸಿಷ್ಠ ಬಾಳಗಂಚಿಯ ಅಳಿಲು ಸೇವೆಯನ್ನೂ ಸಹಾ ಮರೆಯಲು ಸಾಧ್ಯವೇ ಇಲ್ಲ

ಇದುವರೆಗೂ 1070 ಕ್ಕೂ ಹೆಚ್ಚಿನ ಲೇಖನಗಳು ನಮ್ಮೀ ಬ್ಲಾಗಿನಲ್ಲಿ ಪ್ರಕಟವಾಗಿದ್ದು ಅದರಲ್ಲಿ ಬೆರಳೆಣಿಕೆಯಷ್ಟು ಹೊರತಾಗಿ ಉಳಿದದ್ದೆಲ್ಲವೂ ಸ್ವರಚಿತ ಕೃತಿಗಳಾಗಿವೆ. ಇಡೀ ಬ್ಲಾಗನ್ನು ಗಮನಿಸಿದಲ್ಲಿ ಕೇವಲ ಒಂದೇ ಸಿದ್ಧಾಂತಗಳಿಗೆ ಮತ್ತು ಕಟ್ಟು ಪಾಡುಗಳಿಗೆ ಬೀಳದೆ, ಕನ್ನಡ ನಾಡು, ಭಾಷೆ, ನುಡಿ, ಸಂಸ್ಕೃತಿ ಮತ್ತು ಸಂಪ್ರದಾಯ, ಕ್ರೀಡೆಗಳು, ಪ್ರಚಲಿತ ವಿದ್ಯಮಾನಗಳು, ರಾಜಕೀಯ, ಇತ್ತೀಚೆಗೆ ನಳಪಾಕವೂ ಸೇರಿದಂತೆ ಸುಮಾರು 25 ವರ್ಗಗಳಿದ್ದು ಓದುಗರಿಗೆ ಯಾವುದೇ ರೀತಿಯಲ್ಲಿ ಬೇಸರವಾಗದಂತೆ ಓದಿಸಿಕೊಂಡು ಹೋಗುವ ಲೇಖನಗಳನ್ನು ಬರೆದಿದ್ದೇನೆ ಎನ್ನುವುದಕ್ಕಿಂತ ನಿಮ್ಮ ಪ್ರೋತ್ಸಾಹ ಬರೆಸಿಕೊಂಡು ಹೋಗಿದೆ ಎಂದರೆ ತಪ್ಪಾಗಲಾರದು. ನನ್ನ ಅನುಭವಗಳನ್ನೇ ಹೇಳುತ್ತಾ ಹೋದಲ್ಲಿ ಓದುಗರಿಗೆ ಬೇಸರವಾಗುತ್ತದೆ, ಹಾಗಾಗಿ ಅದೇ ಅನುಭವಗಳನ್ನು ಕಥಾ ರೂಪದಲ್ಲಿ ಬರೆಯಲು ಪ್ರಯತ್ನಿಸು ಎಂದು ನನ್ನೊಳಗಿನ ಕಥಾ ನಾಯಕ ಶಂಕರನನ್ನು ಬಡಿಡೆಬ್ಬಿಸಿದವರು ಶ್ರೀಮತಿ ಛಾಯಾ ಮುರಳಿ ಅವರು. ಅಣ್ಣಾ, ನಮ್ಮ ಪ್ರತೀ ಹಬ್ಬಗಳ ಆಚರಣೆ ಮತ್ತು ಅದರ ವಿಶೇಷತೆಗಳನ್ನೇಕೆ ಜನರಿಗೆ ಸುಲಭವಾಗಿ ಪರಿಚಯಿಸಬಾರದು? ಎಂದು ಯುವಾ ಬ್ರಿಗೇಡ್ ಗೆಳೆಯ ನಿತ್ಯಾನಂದ ಗೌಡರು ಹೇಳಿದಾಗಲೇ ವರ್ಷದ ಇಡೀ ಹಬ್ಬದ ಕುರಿತಂತೆ ಹಬ್ಬಗಳ ಮಾಲಿಕೆಗೆ ಮೂಲವಾಯಿತು. ಕನ್ನಡ ರಾಜ್ಯೋತ್ಸವದ ತಿಂಗಳಿನಲ್ಲಿ ಪ್ರತೀ ದಿನವೂ ಮೂಡಿ ಬಂದ ಕನ್ನಡದ ಕಲಿಗಳಿಗೆ ನೀವು ತೋರಿದ ಪ್ರೋತ್ಸಾಹ ನಿಜಕ್ಕೂ ಅವಿಸ್ಮರಣಿಯ. ಪ್ರತೀ ದಿನವೂ ಕನ್ನಡಿಗರು ಮರೆತು ಹೋದ ಒಬ್ಬೊಬ್ಬ ಹಿರಿಯರ ಬಗ್ಗೆ ಬರೆಯಬೇಕಾದಾಗ ಮತ್ತಷ್ಟು ಮಗದಷ್ಟು ಹಲವಾರು ವಿಷಯಗಳನ್ನು ಓದುವ ಮೂಲಕ ನನ್ನ ನನ್ನ ಜ್ಞಾನಸಂಪತ್ತನ್ನು ಹೆಚ್ಚಿಸಿತು. ಅದೇ ಮಾಲಿಕೆಯಲ್ಲಿ ಜಿ.ವಿ ಐಯ್ಯರ್ ಅವರು ತಮ್ಮ ವಯಕ್ತಿಕ ಕಾರಣಗಳಿಂದಾಗಿ ಚಪ್ಪಲಿಯನ್ನು ಧರಿಸುವುದನ್ನು ತ್ಯಜಿಸಿ ಬರೀಗಾಲು ನಿರ್ದೇಶಕರು ಎಂದೇ ಖ್ಯಾತರಾದರು ಎಂದು ಬರೆದಿದ್ದೆ. ಅದಕ್ಕೊಬ್ಬ ಓದುಗರು ಪ್ರತಿಕ್ರಯಿಸಿ ಆವರು ಚಪ್ಪಲಿ ಧರಿಸಿದಂತೆ ಮಾಡಿದ ವಯಕ್ತಿಕ ಕಾರಣವೇನು ಎಂದು ತಿಳಿಸಬಹುದೇ? ಎಂದು ಕೇಳಿದಾಗ, ಅ ಕುರಿತಂತೆ ಮತ್ತಷ್ಟು ಲೇಖನಗಳನ್ನು ಓದಿ ಕಡೆಗೆ ಗಾಂಧೀಯವರ ಅಪ್ಪಟ ಅಭಿಮಾನಿಯಾಗಿದ್ದ ಅಯ್ಯರ್ ಅವರು, ಗಾಂಧೀಜಿಯವರ ನೆನಪಿನಲ್ಲಿ ಚಪ್ಪಲಿ ಧರಿಸುವುದನ್ನು ಬಿಟ್ಟ ವಿಷಯ ಓದುಗರೊಬ್ಬರಿಗೆ ಉತ್ತರಿಸಲು ಸಲುವಾಗಿ ತಿಳಿಯುವಂತಹ ಸುವರ್ಣಾವಕಾಶ ದೊರೆಯಿತು.

ರಾಮ ಮತ್ತು ರಾವಣ ಲೇಖನ ಅತ್ಯಂತ ಚರ್ಚೆಗೆ ಒಳಪಟ್ಟಿತಲ್ಲದೇ ಓದುಗರಲ್ಲಿ ಅನೇಕ ಚಿಂತನೆಗಳ ಆಯಾಮಗಳನ್ನು ಹುಟ್ಟುಹಾಕಿತು. ದಾಸಯ್ಯ ಲೇಖನ ನಶಿಸುಹೋಗುತ್ತಿರುವ ಒಂದು ಅಪರೂಪದ ಕಲೆಯನ್ನು ಇಂದಿನ ಜನರಿಗೆ ಪರಿಚಯಿಸಿತು. ಬೇಡುವ ಕೈಗಳ ಹಿಂದಿನ ರಹಸ್ಯ ಲೇಖನ ವಯೋವೃದ್ಧರು ಮತ್ತವರ ಮಕ್ಕಳ ನಡುವಿನ ಬವಣೆಯನ್ನು ನವಿರಾಗಿ ತಿಳಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇನ್ನು ನೆರೆಹೊರೆ ಲೇಖನವಂತೂ ಬಹಳ ಮೆಚ್ಚುಗೆಗೆ ಪಾತ್ರವಾಗಿ ನನ್ನ ಮಿತ್ರರೊಬ್ಬರ ಜೊತೆಗಿದ್ದಾಗ ಅವರ ಗೆಳೆಯನೊಬ್ಬ ಕರೆ ಮಾಡಿ ಈಗ ಒಂದು ವಾಟ್ಶ್ಯಾಪ್ ಮೆಸೇಜ್ ಕಳುಹಿಸಿದ್ದೇನೆ. ಬಡ್ಡೀ ಮಗ ಯಾರೋ ನಾವು ಚಿಕ್ಕ ವಯಸ್ಸಿನಲ್ಲಿ ಮಾಡಿದ್ದೆಲ್ಲವನ್ನೂ ಹಾಗೆಯೇ ಬರೆದಿದ್ದಾನೆ ಎಂದಾಗ, ಅದಕ್ಕೆ ನಕ್ಕು ಅದರ ಲೇಖಕರು ಇಲ್ಲೇ ಇದ್ದಾರೆ ಅವರ ಜೊತೇನೇ ಮಾತನಾಡು ಎಂದು ಅವರೊಂದಿಗೆ ಮಾತಾನಾಡಿಸಿದಾಗ ಆದ ಅನುಭವ ನಿಜಕ್ಕೂ ಬಣ್ಣಿಸಲಸದಳ. ಅದೇ ಲೇಖನವನ್ನು ನನ್ನ ಗೆಳೆಯರೊಬ್ಬರ  ಹಿರಿಯ ವಯಸ್ಸಿನ ತಾಯಿಯವರು ಮೆಚ್ಚಿ ಅದನ್ನು ಅವರ ಕುಂಟುಂಬದ ಗುಂಪಿನಲ್ಲಿ ಕಳುಹಿಸಿದ್ದದ್ದನ್ನು ನೋಡಿದ ನಮ್ಮ ಗೆಳೆಯರು ಅಮ್ಮಾ ಇದು ನಿನಗೆ ಹೇಗೆ ಮತ್ತು ಎಲ್ಲಿ ಸಿಕ್ಕಿತು ಎಂದಾಗ, ಯಾರೋ ತುಂಬಾ ಚೆನ್ನಾಗಿ ಬರೆದಿದ್ದಾರೆ ಅದಕ್ಕೆ ಎಲ್ಲರೊಂದಿಗೆ ಹಂಚಿಕೊಂಡೆ ಎಂದರಂತೆ. ಇನ್ನೂ ನಮ್ಮ ಕುಟುಂಬದ ಸಾಹಿತ್ಯಾಸಕ್ತೆ ಒಬ್ಬರು, ನೀವು ಕಳುಹಿಸುವ ಈ ಏನಂತೀರೀ ಎಂಬ ಅನಾಮಿಕ ಲೇಖಕರನ್ನು ಒಮ್ಮೆ ಪರಿಚಯಿಸುತ್ತೀರಾ? ಎಂದು ಕೇಳಿದಾಗ ಅದೇನು ಅಂತಹ ವಿಶೇಷ? ಅವರ್ಯಾರು ಎಂಬ ಕುತೂಹಲವೇಕೆ ಎಂದು ವಿಚಾರಿಸಿದಾಗ, ಏನು ಇಲ್ಲಾ ಅವರ್ಯಾರೋ ಗೊತ್ತಿಲ್ಲಾ ಆದ್ರೇ, ನಮ್ಮವರೇ ನಮ್ಮ ಅನುಭವಗಳನ್ನೇ ಹೇಳಿದ ಹಾಗೆ ಇರುತ್ತದೆ ಎಂದಾಗ, ಸುಮ್ಮನೆ ನಕ್ಕು ಅದನ್ನು ಬರೆದವನ್ನು ನಾನೇ ಎಂದಾಗ ಅವರಿಗೆ ನಂಬಲೇ ಆಗಲಿಲ್ಲ ಎನ್ನುವುದೂ ಸತ್ಯ.

ಉಪಾಕರ್ಮ, ಆಪ್ಪಾ, ಆರತಿ ಡೋಗ್ರಾ, ಸ್ವಾಮೀ ಹರ್ಷಾನಂದರು, ಪರಿಶಂಚನೆ ಮತ್ತು ಚಿತ್ರಾವತಿ ಮುಂತಾದ ಲೇಖನಗಳು ಓದುಗರ ಪ್ರೀತಿ ಪಾತ್ರವಾದ ಲೇಖನಗಳಾದರೆ, ಈಗಾಗಲೇ ನಾಲ್ಕು ಸಂಚಿಕೆಗಳಲ್ಲಿ ಸುಮಾರು 120 ಅಪರೂಪದ ಅವಿಖ್ಯಾತ ಕನ್ನಡಿಗರನ್ನು ಪರಿಚಯಿಸುವ ಕನ್ನಡದ ಕಲಿಗಳು ಸಹಾ ಅಪಾರವಾದ ಮನ್ನಣೆಯನ್ನು ಗಳಿಸಿದೆ. ಅದೇ ರೀತಿ ಅಯಾಯಾ ಸಂದರ್ಭಕ್ಕೆ ಅನುಗುಣವಾಗಿ ಪ್ರಕಟವಾಗುವ ಸ್ವಾತ್ರಂತ್ರ್ಯ ವೀರಯೋಧರ ಲೇಖನಗಳ ಪ್ರಯೋಜನವನ್ನು ಅನೇಕ ಶಾಲಾ ಶಿಕ್ಶಕರುಗಳು ಸದುಪಯೋಗ ಪಡಿಸಿಕೊಂಡಿರುವುದು ನಮ್ಮ ಶ್ರಮಕ್ಕೆ ಸಾರ್ಥಕವಿನಿಸಿದೆ. ನಾಡಿನ ಹೆಮ್ಮೆಯ ಆಚಾರ್ಯ ತ್ರಯರ ಕುರಿತಾದ ಲೇಖನದ ಜೊತೆ 100ಕ್ಕೂ ಹೆಚ್ಚಿನ ಹಬ್ಬ ಹರಿದಿನಗಳ ಕುರಿತಾದ ಲೇಖನಗಳು ಆಧ್ಯಾತ್ಮಿಕ ವಲಯದ ಓದುಗರ ಮೆಚ್ಚುಗೆ ಗಳಿಸಿದೆ.

jayanagarಸದ್ಯಕ್ಕೆ ಈ ಎಲ್ಲಾ ರಾಜಕೀಯ ಜಂಜಾಟಗಳನ್ನು ಹೊರತು ಪಡಿಸಿ ಬೆಂಗಳೂರಿನ ಪ್ರಮುಖ ಸ್ಥಳಗಳು, ವೃತ್ತಗಳು, ರಸ್ತೆಗಳು, ಆಟದ ಮೈದಾನ, ಹೀಗೆ ಹತ್ತು ಹಲವು ಕುತೂಹಲಕಾರಿ ಮಾಹಿತಿಗಳನ್ನೊಳಗೊಂಡ ಲೇಖನದ ಸರಣಿ “ಬೆಂಗಳೂರಿನ ಇತಿಹಾಸ” ಅದರ ಮೊದಲ ಕಂತಾಗಿ ಆನಂದ ರಾವ್ ಸರ್ಕಲ್ ಲೇಖನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತು ನಂತರ ಅದೇ ಮಾಲಿಕೆಯ ಎರಡನೇ ಲೇಖನವಾಗಿ ಜಯನಗರದ ಕುರಿತಾದ ಲೇಖನಕ್ಕೆ ಬಂದ ಓದುಗರ ಪ್ರತಿಕ್ರಿಯೆ ನಿಜಕ್ಕೂ ಅಗಾಧ. ಕೇವಲ ಮೂರ್ನಾಲ್ಕು ದಿನಗಳಲ್ಲಿಯೇ ಸುಮಾರು 35000 ಕ್ಕೂ ಹೆಚ್ಚು ಓದುಗರು ಆ ಲೇಖನವನ್ನು ಓದಿದ್ದಲ್ಲದೇ ಅನೇಕರು, ಜಯನಗರಕ್ಕೆ ಸಂಬಂಧಿಸಿದ ತಮ್ಮ ಮಧುರ ಅನುಭವಗಳನ್ನು ಹಂಚಿಕೊಳ್ಳುತ್ತಿರುವ ಪ್ರಕ್ರಿಯೆ, ಅದೇ ರೀತಿ ನಮ್ಮ ಬಡಾವಣೆಯ ಕುರಿತಾಗಿ ಬರೆಯಿರಿ, ಆ ಸರ್ಕಲ್ ಬಗ್ಗೆ ಬರೆಯಿರಿ, ಈ ಥಿಯೇಟರ್ ಬಗ್ಗೆ ಬರೆಯಿರಿ, ಬೆಂಗಳೂರಿನ ಸುತ್ತಮುತ್ತಲಿನ ಕೋಟೆಗಳು, ಕೆರೆಗಳ ಬಗ್ಗೆ ಬರೆಯಿರಿ ಎಂಬ ಪ್ರೀತಿಪೂರ್ವಕ ಆಗ್ರಹಗಳು ಈ ಮಾಲಿಕೆಯ ಕುರಿತಾದ ಜವಾಬ್ಧಾರಿಯನ್ನು ಹೆಚ್ಚಿಸುತ್ತಿದೆ ಎಂದರೂ ತಪ್ಪಾಗದು.

enant_youtubeಆರಂಭದ ದಿನಗಳಲ್ಲಿ ನನ್ನ ಲೇಖನಗಳು ಹೆಚ್ಚು ಜನರಿಗೆ ತಲುಪುತ್ತಿಲ್ಲ ಅಥವಾ ತಲುಪಿದರೂ ಓದುತ್ತಿಲ್ಲಾ. ಅದನ್ನು ಹೇಗೆ ಉತ್ತಮ ಪಡಿಸಿಕೊಳ್ಳಬಹುದು? ಎಂದು ಹೀಗೆ ಮನೆಯಲ್ಲಿ ಚರ್ಚೆ ಮಾಡುತ್ತಿರುವಾಗ, ಆಗಿನ್ನೂ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಮಗ ಸಾಗರ್ ಬಾಳಗಂಚಿ, ಅಪ್ಪಾ!, ಈಗೆಲ್ಲಾ ಜನರು ಓದುವುದನ್ನು ಕಡಿಮೆ ಮಾಡೀ, ವೀಡೀಯೋಗಳನ್ನು ಹೆಚ್ಚಾಗಿ ನೋಡುತ್ತಾರೆ. ಹಾಗಾಗಿ ನೀವೇಕೇ ನಿಮ್ಮ ಬರಹಗಳ ವಿಡೀಯೋ ಮಾಡಬಾರದು? ಎಂದು ನೀಡಿದ ಸಲಹೆಯನ್ನು ಪರಿಗಣಿಸಿ 2020ರ ಯುಗಾದಿ ಹಬ್ಬದಂದು ಆರಂಭಿಸಿದ ಏನಂತೀರೀ? YouTube Channel ಸಹಾ 300+ ಅಧಿಕ ವಿಡೀಯೋಗಳ ಮೂಲಕ ಕನ್ನಡಿಗರ ಹೆಮ್ಮೆಯ ಛಾನೆಲ್ ಆಗಿರುವುದು ಸಂತಸದ ವಿಷಯವಾಗಿದೆ. ತಿಂಡಿಪೋತ, ಅನ್ನಪೂರ್ಣ, ಪ್ರವಾಸ, ದೃಷ್ಟಾಂತ ಅವಿಖ್ಯಾತ ಕಲಿಗಳು ಮಾಲಿಕೆಗಳು ಒಂದಾದರೆ, ಹುಳಿಮಾವು ಭಾಗದ 2022ರ ನವೆಂಬರ್ ತಿಂಗಳಿನ ಮಂಥನ ಕಾರ್ಯಕ್ರಮದಲ್ಲಿ ಕರ್ನಾಟಕಕ್ಕೆ ಮೈಸೂರು ಅರಸರ ಕೊಡುಗೆಗಳು ಕುರಿತಾದ ಬೌದ್ಧಿಕ್ಕನ್ನು ಐದು ಭಾಗಗಳಾಗಿ ವಿಭಜಿಸಿ ಸಂವಾದ ಛಾನೆಲ್ಲಿನವರು ಪ್ರಕಟಿಸಿದಾಗ ಆ ಎಲ್ಲಾ ವೀಡೀಯೋಗಳು ಪ್ರಪಂಚಾದ್ಯಂತ ವೈರಲ್ ಆಗಿ ಹೋದ ಬಂದ ಕಡೆಯಲೆಲ್ಲಾ ಸರ್ ನಿಮ್ಮ ವೀಡೀಯೋ ಚನ್ನಾಗಿತ್ತು. ಕನ್ನಡಿಗರಾಗಿ ನಮ್ಮ ಊರಿನ ಇತಿಹಾಸವೇ ಅರಿಯದಿದ್ದ ನಮಗೆ ಈ ನಿಮ್ಮ ವೀಡಿಯೋ ಬಹಳ ಸೊಗಸಾಗಿತ್ತು ಎಂದಾಗ ದೊರತ ಆನಂದ ನಿಜಕ್ಕೂ ಕೋಟಿ ಹಣ ಸಂಪಾದಿಸಿದರೂ ಸಿಗದು.

bookಸಾಮಾನ್ಯವಾಗಿ ವಯಕ್ತಿಕವಾಗಿ ನನ್ನನ್ನು ಮತ್ತೊಬ್ಬರಿಗೆ ಪರಿಚಯಿಸುವಾಗ ಇವರೊಬ್ಬರು ಅಂಕಣಕಾರರು. ಇವರದ್ದೇ ಆದ ಏನಂತೀರೀ? ಬ್ಲಾಗ್ ಮತ್ತು YouTube Channel ಇದೆ ಎಂದು ಹೇಳಿದ ತಕ್ಷಣ, ಆಕಡೆಯವರು ಕೇಳುವುದೇ, ಓಹೋ!! ಹಾಗಾದ್ರೇ ಬಹಳ ದುಡ್ಡು ಸಂಪಾದನೆ ಮಾಡಿರಬಹುದು ಅಲ್ವೇ? ನಿಜ ಹೇಳ ಬೇಕಂದರೆ, ಈ ಎಲ್ಲಾ ಬರಹ ಮತ್ತು ವೀಡಿಯೋಗಳು ಕೇವಲ ನನ್ನ ಆತ್ಮತೃಪ್ತಿಗಾಗಿ ಮಾಡುವ ಪ್ರವೃತ್ತಿಯಾಗಿದ್ದು IT Companyಯೊಂದರಲ್ಲಿ ಎಲ್ಲರಂತೆ ನಾನು ಸಹಾ ವೃತ್ತಿಯಲ್ಲಿದ್ದೇನೆ. ಸತ್ಯವಾಗಿಯೂ, ನನ್ನ ಪ್ರವೃತ್ತಿಯಿಂದ ಅಪಾರವಾದ ಜನರ ಮನ್ನಣೆಯನ್ನು ಗಳಿಸಿರುವುದಲ್ಲದೇ, ಎಲ್ಲೇ ಹೋದರೋ ಜನರು ನನ್ನನ್ನು ಗುರುತಿಸುವಂತೆಯೋ ಇಲ್ಲವೇ, ನನ್ನ ಬ್ಲಾಗ್ ಅಥವಾ YouTube Channel ಹೆಸರು ಹೇಳುತ್ತಿದ್ದಂತೆಯೇ, ಓ ಉಮಾಸುತ ಎಂದರೆ ನೀವೇನಾ? ನಿಮ್ಮ ಬರಹಗಳನ್ನು ಓದಿದ್ದೇನೆ. ನಿಮ್ಮ ವೀಡಿಯೋಗಳನ್ನು ನೋಡಿದ್ದೇನೆ ಎಂದು ಹೇಳುವಷ್ಟು ಚಿರಪರಿಚನಾಗಿದ್ದೇನೆಯೇ ಹೊರತು, ಅದರಿಂದ ಒಂದು ನಯಾ ಪೈಸೆಯನ್ನೂ ಇದುವರೆವಿಗೂ ಸಂಪಾದನೆ ಮಾಡಿಲ್ಲ. ನನ್ನ 50ನೇ ಹುಟ್ಟು ಹಬ್ಬದ ಸಮಯಕ್ಕೆ ಉಡುಗೊರೆಯಾಗಿ ಓದುಗರು ಬಹಳವಾಗಿ ಇಷ್ಟಪಟ್ಟ ಸುಮಾರು 20 ಜನಪ್ರಿಯ ಲೇಖನಗಳ ಏನಂತೀರೀ? ಪುಸ್ತಕವನ್ನು ನಮ್ಮದೇ ಸೃಷ್ಟಿ ಪ್ರಕಾಶನದಲ್ಲಿ ನಮ್ಮಾಕಿ ಪ್ರಕಟಗೊಳಿಸಿದ್ದು, ಆ ಪುಸ್ತಕಕ್ಕೇ ಹಾಕಿರುವ ಬಂಡವಾಳವೂ ಸಹಾ ಇನ್ನೂ ಹಿಂದುರಿಗಿ ಬಾರದೇ ಇರುವ ಕಾರಣ, ಮುಂದೆ ನಮ್ಮ ಪ್ರಕಾಶನದ ವತಿಯಿಂದ ಮತ್ತಷ್ಟು ಸಾಹಿತ್ಯ ಪ್ರಕಟಣೆಗಳು ಪ್ರಕಟವಾಗದೇ, ಹಾಗೆಯೇ ನೆನೆಗುದಿಗೆ ಬಿದ್ದಿರುವುದು ವಾಸ್ತವದ ಸಂಗತಿಯಾಗಿದೆ. ನಮ್ಮಂತಹ ಹವ್ಯಾಸಿ ಬರಹಗಾರರ ಪುಸ್ತಕಗಳನ್ನು ಕೊಂಡು ಓದಿದಲ್ಲಿ ಮಾತ್ರವೇ, ಮುಂದಿನ ಹೊಸಾ ಸಾಹಸಗಳಿಗೆ ಪ್ರೇರಣೆಯಾಗಬಲ್ಲದು.

ಒಟ್ಟಿನಲ್ಲಿ ಈ ಬ್ಲಾಗಿನ ಮೂಲಕ ನೂರಾರು ಸಾಹಿತ್ಯಾಸಕ್ತ ಗೆಳೆಯರು ಪರಿಚಯವಾಗಿದ್ದಲ್ಲದೇ ಅನೇಕ ಉಪಯುಕ್ತ ಮಾಹಿತಿಗಳನ್ನೂ ತಿಳಿಯುವಂತಾಯಿತು ಮತ್ತು ತಿಳಿಸುವಂತಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಲೇಖನಗಳನ್ನು ಓದಿದ್ದ ಅನೇಕ ಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಯ ಸಂಪಾದಕರು ತಮ್ಮ ಪತ್ರಿಕೆಗಳಲ್ಲಿ ನನ್ನ ಲೇಖನಗಳನ್ನು ಪ್ರಕಟಿಸಿದ್ದಲ್ಲದೇ ಕೆಲವೊಂದು ಸಂಪಾದಕರು ವಿಶೇಷವಾದ ಅಂಕಣವನ್ನೇ ನನಗಾಗಿ ಮೀಸಲಾಗಿರಿಸಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಇದೇ ಕಾರಣದಿಂದಾಗಿಯೇ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪರಿಚಯೂ ಆಗಿ ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎನ್ನುವಂತೆ ಆ ಸಂಘಟನೆಯಲ್ಲಿರುವ ದಿಗ್ಗಜರುಗಳ ಜೊತೆಯಲ್ಲಿ ಒಟ್ಟಿಗೆ ಕೂಡಿ ಕಲಿತುಕೊಳ್ಳುವ ಅವಕಾಶ ನನಗೆ ದೊರೆತಿದ್ದು, ಸದ್ಯಕ್ಕೆ ಅಭಾಸಾಪ ಬೆಂಗಳೂರು ಮಹಾನಗರದ ಕಾರ್ಯದರ್ಶಿಯಾಗಿ ಜವಾಬ್ಧಾರಿಯನ್ನು ನಿಭಾಯಿಸುವ ಹೊಣೆ ದೊರೆತಿದೆ.

ನನ್ನ ಈ ಎಲ್ಲಾ ಬೆಳವಣಿಗೆಗೆ ಮೂಲಭೂತ ಕಾರಣೀಕೃತರಾದ ನಮ್ಮ ತಂದೆ-ತಾಯಿಯರು ಇವೆಲ್ಲವನ್ನೂ ಕಣ್ಣಾರೆ ನೋಡಿ ಸಂಭ್ರಮಿಸಲು ಇಂದು ನಮ್ಮೊಂದಿಗೆ ಇಲ್ಲವಲ್ಲಾ! ಎಂಬ ಕೊರಗಿದ್ದರೂ ಅವರ ಜಾಗದಲ್ಲಿ ನಿಮ್ಮಂತಹ ಲಕ್ಷಾಂತರ ಹಿತೈಷಿಗಳು ಮತ್ತು ಮಾರ್ಗದರ್ಶಿಗಳು ದೊರತದ್ದು ನನ್ನ ಪೂರ್ವ ಜನ್ಮದ ಸುಕೃತವೇ ಸರಿ. ಹಾಗಾಗಿಯೇ ಈ ಲೇಖನದ ಶೀರ್ಷಿಕೆಯನ್ನು ಹಂಸಲೇಖ ಅವರು ಗಾನಯೋಗಿ ಪಂಚಾಕ್ಷರಿ ಗವಾಯಿ ಸಿನಿಮಾದ ಹಾಡೋಂದರಲ್ಲಿ ಬಳೆಸಿರುವ ಸಾವಿರದ ಶರಣು ಎಂಬ ಪದವನ್ನು ಬಳೆಸಿದ್ದೇನೆ. ಮೊದಲಿಗೆ ನನ್ನ ಬರಹವನ್ನು ನಿರಂತರವಾಗಿ ಓದುತ್ತಿರುವ ನಿಮ್ಮಂತಹ ಸಾಹಿತ್ಯಾಸಕ್ತರಿಗೆ ಒಂದು ಸಾವಿರ ಶರಣು ಎಂಬ ಅರ್ಥವಾದರೆ ಮತ್ತೊಂದು ಸಾವು + ಇರದ= ಸಾವಿರದ, ಅಂದರೇ ಸಾವೇ ಇರದಷ್ಟು ಚಿರಋಣಿ ಎಂದರ್ಥ.

ನಮ್ಮ ಏನಂತೀರೀ? ಬ್ಲಾಗ್ ಮತ್ತು YouTube Channel ಕುರಿತಾಗಿ  ನಿಮ್ಮ ಅಭಿಪ್ರಾಯವೇನು? ಮತ್ತು ಅದನ್ನು ಮತ್ತಷ್ಟು ಹೇಗೆ ಉತ್ತಮ ಪಡಿಸ ಬಹುದು? ಎಂಬುದರ ಕುರಿತಾಗಿ ನಿಮ್ಮ ಸೂಕ್ತ ಸಲಹೆಗಳನ್ನು ನಮಗೆ ನೀಡುವ ಮುಖಾಂತರ ನಿಮ್ಮೀ ಬ್ಲಾಗನ್ನು ಮತ್ತಷ್ಟು ಮಗದಷ್ಟು ಉತ್ತಮ ಸಾಹಿತ್ಯತಾಣವನ್ನಾಗಿ ಮಾಡ ಬೇಕೆಂದು ಸವಿನಯ ಪ್ರಾರ್ಥನೆ. ಇದುವರೆಗೂ ನಮ್ಮ ಮಸ್ತಕದಲ್ಲಿ ಇದ್ದದ್ದನ್ನು ಈಗ ಡಿಜಿಟಲ್ ಪುಸ್ತಕ ರೂಪದಲ್ಲಿ ನಮ್ಮ ಮುಂದಿನ ಪೀಳಿಗೆಯವರಿಗೂ ಉಳಿಯುವಂತೆ ಮಾಡುವುದರಲ್ಲಿ ನಿಮ್ಮ ಸಹಕಾರ ಅತ್ಯಗತ್ಯ. ಅದಕ್ಕೆ ನಿಮ್ಮ ಸಲಹೆ ಮತ್ತು ಸಹಕಾರಗಳು ನಮ್ಮೊಂದಿಗೆ ಸದಾಕಾಲವೂ ಇದ್ದೇ ಇರುತ್ತದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

14 thoughts on “ಸಾವಿರದ ಶರಣು

  1. ಬರಹ ನಿಮಗೆ ಒಲಿದಿದೆ.
   ಬಹಳ ಚೆನ್ನಾಗಿ ಲೇಖನಗಳು ನಿಮ್ಮಿಂದ ಬಂದಿವೆ.
   ಇದನ್ನು ಹೀಗೆ ಮುಂದುವರೆಸಿ, ನಾವು ಸದಾ ಓದುತ್ತೇವೆ.

   Liked by 1 person

 1. ಶ್ರೀಕಂಠರೇ,

  ಲಕ್ಷ ಕಣ್ಗಳ ಲಕ್ಷ್ಯ ಸೆಳೆದ ಶುಭ ಸಂದರ್ಭದಲ್ಲಿ ಅಭಿನಂದನೆಗಳು.

  ಈ ಲೇಖನ ಸರಣಿ ಕೇವಲ ಬ್ಲಾಗ್ ಆಗದೆ ಹೊತ್ತಿಗೆಯಾಗುವ ಹೊತ್ತನ್ನು ಎದುರುನೋಡುತ್ತೇನೆ.

  Liked by 1 person

 2. ನಿಮ್ಮ ಈ ಪ್ರಯತ್ನ ಹೀಗೆ ಮುಂದುವರೆಯಲಿ

  ಈ ಸಂದರ್ಭದಲ್ಲಿ ಡಾ. ರಾಜಕುಮಾರ್ ರವರ “ಆಡಿಸಿ ನೋಡು ಬೀಲಿಸಿ ನೋಡು ಉರುಳಿ ಹೋಗದು… ” ಹಾಡು ನನಗೆ ನೆನಪಿಗೆ ಬರುತ್ತದೆ.
  ನಿಮ್ಮ ಬ್ಲಾಗ್ 1 ಲಕ್ಷ ಜನರನ್ನು ತಲುಪಿದ ಈ ಸುಸಂದರ್ಭದಲ್ಲಿ ನಿಮಗೂ ಮತ್ತು ನಿಮ್ಮ ಈ ಕಾರ್ಯವನ್ನು ಸುಗಮವಾಗಿ ತಲುಪಲು ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು…

  Liked by 1 person

 3. ತಮ್ಮ ಲೇಖನಗಳನ್ನು ಬಹಳ ದಿನಗಳಿಂದ ಓದಿ ಸಂತೋಷಪಟ್ಟಿದ್ದೇನೆ. ಲೇಖನಗಳು ಅರ್ಥವತ್ತಾಗಿದ್ದು ಅನೇಕ ಮಾಹಿತಿಗಳನ್ನು ಒಳಗೊಂಡಿರುತ್ತದೆ. ನಿಮ್ಮ ಬರವಣಿಗೆಗಳಿಂದ ಅನೇಕ ವಿಚಾರಗಳನ್ನು ಮಾಹಿತಿಗಳನ್ನು ಪಡೆದುಕೊಂಡು ನನ್ನ
  ತಿಳುವಳಿಕೆಯನ್ನು ಹೆಚ್ಚಿಸಿಕೊಂಡಿದ್ದೇನೆ. ಮುಂದೆಯೂ ಹೀಗೇ ಅವ್ಯಾಹತವಾಗಿ ಬರವಣಿಗೆ ಮುಂದುವರೆಯಲಿ.

  ಎಸ್.ದ್ವಾರಕಾನಾಥ್
  ನಿವೃತ್ತ ಮುಖ್ಯ ಸಂಪಾದಕ
  ವಿಧಾನ ಪರಿಷತ್ ಸಚಿವಾಲಯ

  Liked by 1 person

 4. ಆತ್ಮೀಯ ಗೆಳೆಯ ಶ್ರೀಕಂಠನಿಗೆ ಅಭಿನಂದನೆಗಳು. ಸಂಖ್ಯೆಗಳು ಯಶಸ್ಸಿನ ಮಾನದಂಡಗಳನ್ನು ಮೀರಿ ಮುಂದಿನ ಸಾಧನೆಯ ಹಾದಿಗೆ ಪ್ರಜ್ಞಾಪೂರ್ವಕವಾಗಿ ನಿಲ್ಲುವ ಗುರುತರ ಜವಾಬ್ದಾರಿಯನ್ನು ಹೊರಿಸುವುದು. ಸಹೃದಯ ಓದುಗರ ಅಭಿಪ್ರಾಯ ಬಯಸಿ ಮತ್ತಷ್ಟು ಧನಾತ್ಮಕ ಅಂಶಗಳನ್ನು ನಿನ್ನ ಬರಹಗಳಿಗೆ ತುಂಬುವ ತುಡಿತ ನಿನ್ನಲ್ಲಿರುವ ವಿನೀತ ಬರಹಗಾರನನ್ನು ಪರಿಚಯಿಸಿದೆ. ಅಭಿಪ್ರಾಯ ಭೇದ ಗೌರವಿಸಿ ವಿವಿಧ ಆಯಾಮಗಳಿಂದ ಸತ್ಯಾನ್ವೇಷಣೆ ನಡೆಸಿ ಇದಮಿತ್ಥಂ ಎಂದು ನಿರೂಪಿಸುವುದು ನಾರಿನ ಮೇಲೆ ನಡೆದ ಹಾಗೆ. ನನಗೆ ನಿನ್ನ ಬರಹಗಳಲ್ಲಿ ನಮ್ಮ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಿರುವ ಹಲವು ಸಂಗತಿಗಳನ್ನು ಆತ್ಮೀಯವಾಗಿ ಹೃದಯ ಮುಟ್ಟುವಂತೆ ನಿರೂಪಿಸುವ ಶೈಲಿ ತುಂಬಾ ಹಿಡಿಸಿದೆ.
  ನನ್ನ ಅಜ್ಜ ಶ್ರೀಯುತ ರಾಮಚಂದ್ರ ರಾವ್ ದೈವಾಧೀನರಾದಾಗ ಮತ್ತು ಇತ್ತೀಚೆಗೆ ನಾನು ಮಾತೃವಿಯೋಗ ಅನುಭವಿಸಿದಾಗ ನೀನು ನನಗಿತ್ತ ಬೆಂಬಲ ಹಾಗು ನನ್ನಲ್ಲಿ ಪ್ರವಾಹದಂತೆ ಉಕ್ಕುತ್ತಿದ್ದ ಭಾವನೆಗಳನ್ನು ನಿನ್ನ ಪದಗಳಿಂದ ಹಿಡಿದಿಟ್ಟು ಸಲ್ಲಿಸಿದ ನುಡಿ ನಮನಕ್ಕೆ ನಾನು ಚಿರಋಣಿ.
  ಮಕ್ಕಳ ಸಾಹಿತ್ಯಕ್ಕೆ ಯಾವುದೇ ಮಾಧ್ಯಮದಲ್ಲಿ ಹೆಚ್ಚಿನ ಮಹತ್ವ ನೀಡದಿರುವುದು ನಿರಾಸಾದಾಯಕವಾಗಿದೆ . ನಿನ್ನ ಬರಹಗಳಲ್ಲಿ ಶಿಶು ಸಾಹಿತ್ಯಕ್ಕೂ ಆದ್ಯತೆ ನೀಡಬೇಕು ಎಂದು ನನ್ನ ಸವಿನಯ ಪ್ರಾರ್ಥನೆ.
  ನಿನ್ನೆಲ್ಲಾ ಮುಂದಿನ ಕಾರ್ಯಗಳಲ್ಲಿ ಯಶಸ್ಸು ಮತ್ತು ನಿನ್ನ ಸಾಹಿತ್ಯ ಸೇವೆ ನಿರಂತರವಾಗಿ ಸಾಗಲಿ ಎಂದು ಹಾರೈಸುತ್ತೇನೆ.

  Liked by 1 person

 5. Dear Sir, I have been one of the reader and admirer of your articles and you. Your articles covering various aspects have made me to share your articles to my friends, family and children. Please Keep up the good work. May Maa Saraswati bless you with health, energy and time to write more and more and enlighten the readers.

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s