ಜೂನ್ 25, 1983, ಆಗ ನಾನು ಎಂಟನೇ ತರಗತಿಯಲ್ಲಿ ಓದುತ್ತಿದೆ. ಸಾಧಾರಣ ಮಧ್ಯಮ ಕುಟುಂಬದವರಾಗಿದ್ದ ನಮಗೆ ಸ್ವಂತ ಟಿವಿ ಹೊಂದುವುದು ಕಷ್ಟಕರವಾದ ದಿನವದು. ಅಲ್ಲೋ ಇಲ್ಲೋ ಒಬ್ಬೊಬ್ಬರ ಮನೆಯಲ್ಲಿ, ಕೋನಾರ್ಕ್ ಅಥವಾ ಸಾಲಿಡೇರ್ ಅಥವಾ ಡಯೋನೋರಾ ಅಥವಾ ಬಿಪಿಎಲ್ ಕಂಪನಿಗಳ ಕಪ್ಪು ಬಿಳಿಪಿನ ಟಿವಿ ಇರುತ್ತಿದ್ದ ಕಾಲವದು. ಮೂಗಿಗಿಂತ ಮೂಗಿನ ನತ್ತೇ ಭಾರವೆಂಬಂತೆ, ಟಿವಿಗಿಂತ ಆಂಟೆನಾ ಬಾರೀ ದೊಡ್ಡದಾಗಿರುತ್ತಿತ್ತು. ಮನೆಯ ಮೇಲಿನ ಆಂಟೆನಾದ ಗಾತ್ರದಿಂದಲೇ ಮನೆಯವರ ಸಿರಿತನ ಗುರುತಿಸುತ್ತಿದ್ದ ಕಾಲವದು.
ಶಾಲೆ ಮುಗಿಸಿ ಮನೆಗೆ ಬಂದ ನನಗೆ ಅಚಾನಕ್ಕಾಗಿ ಫೈನಲ್ ತಲುಪಿದ್ದ ಭಾರತ ಮತ್ತು ಅಂದಿನ ಕ್ರಿಕೆಟ್ ಜಗತ್ತಿನಲ್ಲಿ ದೈತ್ಯರೆಂದೇ ಪ್ರಸಿದ್ದರಾಗಿದ್ದ ಹಾಗೂ ಎರಡು ಸಲ ಪ್ರಶಸ್ತಿಯನ್ನು ಪಡೆದು ಮೂರನೇ ಬಾರಿಗೆ ಪ್ರಶಸ್ತಿಯನ್ನು ಎತ್ತಿ ಹ್ಯಾಟ್ರಿಕ್ ಸಾಧಿಸಲು ಹಾತೊರೆಯುತ್ತಿದ್ದ ವೆಸ್ಟ್ ಇಂಡೀಸ್ ತಂಡಗಳ ನಡುವೆ ಇಂಗ್ಲೇಂಡಿನ ಕ್ರಿಕೆಟ್ ಕಾಶೀ ಎಂದೇ ಖ್ಯಾತಿ ಹೊಂದಿರುವ ಲಾರ್ಡ್ಸ್ ಮೈದಾನದಲ್ಲಿ ಪಂದ್ಯ ನೋಡುವ ತವಕ.
ನಮ್ಮ ನೆರೆ ಹೊರೆಯ ಯಾರ ಮನೆಯಲ್ಲಿಯೂ ಟಿವಿ ಇರದ ಕಾರಣ ನನ್ನ ಸ್ನೇಹಿತ ಗುರುಪ್ರಸನ್ನನ ಮನೆಗೆ ಹೋಗಲು ಅಮ್ಮನ ಅಪ್ಪಣೆ ಕೋರಿದೆ. ಆದರೆ ಸ್ನೇಹಿತನ ಮನೆ ಸುಮಾರು ದೂರವಿದ್ದ ಕಾರಣ ಅಮ್ಮಾ ಕಳುಹಿಸಲು ಒಪ್ಪದ ಕಾರಣ ವಿಧಿ ಇಲ್ಲದೆ ಮನೆಯಲ್ಲಿಯೇ ಇದ್ದ ಟ್ರಾನ್ಸಿಸ್ಟರ್ ರೇಡಿಯೋನಲ್ಲಿ ವೀಕ್ಷಕ ವಿವರಣೆ ಕೇಳಲಾರಂಬಿಸಿದೆ. ನನ್ನ ಅಂದಿನ ಹೀರೋ ಆಗಿದ್ದ ಕೃಷ್ಣಮಾಚಾರಿ ಶ್ರೀಕಾಂತ್, (ನನ್ನ ಹೆಸರು ಶ್ರೀಕಂಠ ಅಂತಾದರೂ ಕೆಲವರು ನನ್ನನ್ನು ಶ್ರೀಕಾಂತ್ ಎಂದೇ ಕರೆಯುತ್ತಿದ್ದರಿಂದ ನಾನು ನನ್ನನ್ನು ಕೆ.ಶ್ರೀಕಾಂತ್ ನೊಂದಿಗೆ ಹೋಲಿಸಿಕೊಂಡು ಒಳಗೊಳಗೇ ಸಂತೋಷ ಪಡುತ್ತಿದ್ದೆ) ಮತ್ತು ಗವಾಸ್ಕರ್ ಆಡಲು ಬಂದಾಗ ಮೈಯ್ಯೆಲ್ಲಾ ಕಿವಿಯಾಗಿಸಿ ವೀಕ್ಷಕವಿವರಣೆ ಕೇಳುತ್ತಾ, ಶ್ರೀಕಾಂತನ ಆಕ್ರಮಣಕಾರಿ ಆಟವನ್ನು ಮನಸ್ಸಿನಲ್ಲೇ ನೆನಪಿಕೊಳ್ಳುತ್ತಿರುವಾಗಲೇ ಗವಾಸ್ಕರ್ ಕೇವಲ ಎರಡು ರನ್ ಗಳಿಸಿ ಔಟಾದಾಗ ಹಿಡಿ ಶಾಪಹಾಕಿದ್ದೆ. ನಂತರ ಬಂದ ಮೋಹಿಂದರ್ ಅಮರ್ ನಾಥ್ ಮತ್ತು ಶ್ರೀಕಾಂತ್ ಪಟ ಪಟನೆ ರನ್ ಗಳಿಸಿ ತಂಡದ ಮೊತ್ತ 59 ಆಗಿದ್ದಾಗ 32 ರನ್ ಗಳಿಸಿದ್ದ ಶ್ರೀಕಾಂತ್ ಔಟಾದಾಗ ಆಕಾಶವೇ ಕಳಚಿಬಿದ್ದ ಅನುಭವ.
ಆನಂತರ ಬಂದ ಯಶ್ಪಾಲ್ ಶರ್ಮಾ, ಸೆಮಿ ಫೈನಲ್ ವೀರ ಸಂದೀಪ್ ಪಾಟೀಲ್, ದಿಟ್ಟ ನಾಯಕ ಕಪಿಲ್ ದೇವ್ ಅಷ್ಟಿಷ್ಟು ರನ್‌ಗಳಿಸಿ 111ಕ್ಕೆ 6 ವಿಕೆಟ್ ಕಳೆದುಕೊಂಡಾಗಲಂತೂ ತಡೆಯಲಾರದಂರಹ ದುಖಃ. ತಿರುಪತಿ ತಿಮ್ಮಪ್ಪನ ಮೂರು ನಾಮದಂತೆ ನಮ್ಮ ತಂಡಕ್ಕೂ ಸೋಲೇ ಗತಿ ಎಂಬ ನೋವು ಒಂದೆಡೆಯಾದರೆ, ಅಚಾನಕ್ಕಾಗಿ ಫೈನಲ್ ತಲುಪಿರುವುದೇ ಹೆಚ್ಚು ಇನ್ನು ಟ್ರೋಫಿ ಗೆಲ್ಲುವ ಕನಸು ಕಾಣುವುದು ಎಷ್ಟು ಸರೀ ? ಅದೂ ದೈತ್ಯ ವೆಸ್ಟ್ ಇಂಡೀಸರ ಮುಂದೆ ಎಂಬ ಜಿಜ್ಞಾಸೆ.
ಅಂತೂ ಇಂತೂ ಅಂದಿನ ಕಾಲದ ಆಪತ್ಬಾಂಧವ ಕಿರ್ಮಾನಿ, ಮದನ್ ಲಾಲ್ ಮತ್ತು ಸಂಧುಗಳಂತಹ ಬಾಲಂಗೋಚಿಗಳು ಅಡ್ಡಾದಿಡ್ಡಿ ಬ್ಯಾಟ್ ಬೀಸಿದುದರ ಪರಿಣಾಮವಾಗಿ ಹಾಗೂ 20 ಇತರೇ ರನ್ಗಳ ಸಹಾಯದಿಂದಾಗಿ 54.4 ಓವರ್‌ಗಳಲ್ಲಿ( ಆಗ 60 ಓವರ್‌ಗಳ ಪಂದ್ಯ) 183ಕ್ಕೆ ಆಲ್ ಔಟಾದಾಗ, ನಾನು ಪಂದ್ಯವನ್ನು ನನ್ನ ಮನಸ್ಸಿನಿಂದ ತೆಗೆದುಹಾಕಿ ಸೋತು ಹೋದವೆಂಬ ಭಾವನೆ ನನ್ಲಲ್ಲಿ.
ಅಷ್ಟು ಹೊತ್ತಿಗೆ ನಮ್ಮ ತಂದೆಯವರು ಕಛೇರಿ ಮುಗಿಸಿ ಮನೆಗೆ ಬಂದು ಸ್ಕೋರ್ ಎಷ್ಟಾಯಿತೆಂದಾಗ ಕೋಪದಿಂದಲೇ ಸೋಲುವ ಪಂದ್ಯದ ಸ್ಕೋರ್ ಕೇಳಿ ಏನು ಪ್ರಯೋಜನ? ಎಂದು ರೇಗಾಡಿದ ನೆನಪು. ಸಂಗೀತ, ಸಾಹಿತ್ಯದ ಜೊತೆಗೆ ಅಪಾರವಾದ ಕ್ರಿಕೆಟ್ ಪ್ರೇಮಿಯಾಗಿದ್ದ (ಇತ್ತೀಚೆಗೆ ಸಾಯುವ ಹಿಂದಿನ ದಿನವೂ ರಾತ್ರಿ 11ರ ವರೆಗೆ ಕ್ರಿಕೆಟ್ ನೋಡಿ ಮರುದಿನ ಬೆಳಿಗ್ಗೆ ನಿಧನರಾದದ್ದು ವಿಪರ್ಯಾಸ) ನನ್ನ ತಂದೆಯವರ ಒತ್ತಾಯದ ಮೇರೆಗೆ ಅವರೊಂದಿಗೆ ಸೈಕಲ್ ಏರಿ ಕೈಯಲ್ಲಿ ಟ್ರಾನ್ಸಿಸ್ಟರ್ ಹಿಡಿದು ಸ್ನೇಹಿತನ ಮನೆಗೆ ಟಿವಿ ನೋಡಲು ಹೊರಟೇ ಬಿಟ್ಟೆವು.
ಅಂದಿನ ದಿನಗಳಲ್ಲಿ ಅತ್ಯಂತ ನೆಚ್ಚಿನ ಆರಂಭ ಆಟಗಾರರಾದ. ಗ್ರೀನೀಚ್ ಮತ್ತು ಹೇನ್ಸ್ ಕ್ರೀಸ್ಗೆ ಇಳಿದಾಗ ಇವರಿಬ್ಬರೇ ಪಂದ್ಯ ಮುಗಿಸುತ್ತಾರೆಂಬ ಕಲ್ಪನೆ ನನ್ನದು. ಆದರೆ ನಾವೊಂದು ಬಗೆದರೆ ದೈವ ಒಂದು ಬಗೆದೀತು ಎನ್ನುವ ಹಾಗೆ ಕೇವಲ ಒಂದು ರನ್ ಗಳಿಸಿ ಸಂಧು ಬೌಲಿಂಗ್ನಲ್ಲಿ ಗ್ರೀನಿಚ್ ಔಟಾದಾಗ ರಸ್ತೆ ಎಂಬ ಪರಿಯೂ ಇಲ್ಲದೆ ಬಿಇಎಲ್ ಕಾರ್ಖಾನೆಯ ಮುಂಭಾಗದಲ್ಲಿ ಸೈಕಲ್ ಮೇಲೇ ಕುಳಿತೇ ಜೋರಾಗಿ ಕಿರುಚಿದ ನೆನಪು ಇನ್ನೂ ಹಚ್ಚ ಹಸಿರಾಗಿದೆ. ನಂತರ ಬಂದ ವಿವಿಯನ್ ರಿಚರ್ಡ್ಸ್ ಪಟಪಟನೆ ರನ್ ಗಳಿಸುತ್ತಿದ್ದಾಗ ಅಯ್ಯೋ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲಾ ಎಂಬ ಹಪಾಹಪಿ. ಅಂತೂ ಇಂತೂ ಸ್ನೇಹಿತನ ಮನೆಗೆ ತಲುಪುವ ವೇಳೆ ಹೇನ್ಸ್ ಕೂಡಾ ಔಟಾಗಿ 55ಕ್ಕೆ 2 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು ವೆಸ್ಟ್ ಇಂಡೀಸ್ ತಂಡ. ದೇವೆರ ಕೃಪೆ ಮತ್ತು ಅದೃಷ್ಟ ನಮ್ಮ ಕಡೆ ಇದ್ದರೆ ನಮ್ಮನ್ನು ತಡೆಗಟ್ಟಲು ಯಾರಿಗೂ ಸಾಧ್ಯವಿಲ್ಲ ಎನ್ನುವ ಹಾಗೆ ಮದನ್ ಲಾಲ್ ಎಸೆತದಲ್ಲಿ ರಿಚರ್ಡ್ಸ ಆಗಸಕ್ಕೇ ಗುರಿ ಇಟ್ಟಂತೆ ಹೊಡೆದ ಚೆಂಡನ್ನು ಹಿಂಬದಿಗೆ ಓಡುತ್ತಾ ಇಡೀ ಗಮನವನ್ನೆಲ್ಲಾ ಚೆಂಡಿನ ಮೇಲೆಯೇ ಕೇಂದ್ರೀಕರಿಸಿ ಎದೆಯೆತ್ತರದಲ್ಲೇ ಕಪಿಲ್ ದೇವ್ ಹಿಡದೇ ಬಿಟ್ಟಾಗ ಹೃದಯ ಬಾಯಿಗೆ ಬಂದ ಅನುಭವ. ಮುಂದೆ ಬಂದ ಅತಿರಥ ಮಹಾರಥ ಲಾಯ್ಡ್, ಗೋಮ್ಸ್ ಬಚ್ಚೂಸ್ ತರೆಗಲೆಗಳಂತೆ ಬಿನ್ನಿ, ಮದನ್ ಲಾಲರಿಗೆ ಔಟಾದಾಗ, ನಮಗೂ ಪಂದ್ಯ ಗೆಲ್ಲುವ ಭರವಸೆ ಮೂಡುತ್ತಿರುವಾಗಲೇ ವಿಕೆಟ್ ಕೀಪರ್ ಡೂಜಾನ್ ಮತ್ತು ವೇಗಿ ಮಾಲ್ಕಮ್ ಮಾರ್ಷಲ್ ಚೆಂಡನ್ನು ಮೈದಾನದ ಮೂಲೆ ಮೂಲೆಗೂ ಅಟ್ಟುತ್ತಿದ್ದಾಗ ನನ್ನ ಮನದಲ್ಲಿ ಮತ್ತೊಮ್ಮೆ ದಟ್ಟವಾದ ಕಾರ್ಮೋಡ ಕವಿದ ವಾತಾವರಣ.
ಅಲ್ಲಿಯವರೆಗೂ ಸುಮ್ಮನಿದ್ದ ಕಪಿಲ್, ಮೊಹಿಂದರ್ ಅಮರ್‌ನಾಥ್ ಕೈಯಲ್ಲಿ ಚೆಂಡನ್ನು ಕೊಟ್ಟಾಗ ಛೇ, ಇದ್ಯಾಕೆ ಹೀಗೆ ಮಾಡಿ ಬಿಟ್ಟ? ಕಪಿಲ್ಗೇನು ತಲೆ ಕೆಟ್ಟದೆಯೇ, ಕೀರ್ತಿ ಆಝಾದ್ ಇಲ್ಲವೇ ಸಂದೀಪ್ ಪಾಟೀಲ್ ಅಂತಹ ಅನುಭವಿಗಳ ಕೈಯಲ್ಲಿ ಬೋಲಿಂಗ್ ಮಾಡಿಸ ಬಾರದೇ? ಎಂದು ಗೊಣಗಿದ್ದೂ ಉಂಟು. ಆಟ ಸಾಗುತ್ತಿದ್ದ ಡೋಲಾಯಮಾನ ಪರಿಸ್ಥತಿಯಲ್ಲಿ ನನ್ನ ಸ್ನೇಹಿತನ ಅಮ್ಮ ಕೊಟ್ಟ ತಿಂಡಿಯನ್ನೂ ತಿನ್ನಲು ಸಾಧ್ಯವಾಗಲೇ ಇಲ್ಲ. ಪ್ಯಾಂಟಿನ ಹಿಂದಕ್ಕೆ ಸಿಕ್ಕಿಸಿ ಕೊಂಡಿದ್ದ ಕೈವಸ್ತ್ರದಿಂದ ಒದ್ದೆಯಾಗಿದ್ದ ಚೆಂಡನ್ನು ಒರೆಸಿಕೊಂಡು ಮೊಹಿಂದರ್ ನಿಧಾನವಾಗಿ ವಿಕೇಟ್ ದಾಟಿಕೊಂಡು ಬಂದು ಡುಜಾನ್ ಕಡೆ ಎಸೆದ ಚೆಂಡು, ಜೋರಾಗಿ ಬೀಸಿದ ಬ್ಯಾಟಿಗೆ ತಾಕದೆ ಸೀದಾ ಹೋಗಿ ವಿಕೆಟ್ ಉರುಳಿಸಿದಾಗ ನನ್ನ ಪಾಲಿಗೆ ಭಾರತ ಮುಕ್ಕಾಲು ಭಾಗ ಪಂದ್ಯ ಗೆದ್ದಾಗಿತ್ತು. ನೆರೆದಿದ್ದ ಪ್ರೇಕ್ಷಕರೆಲ್ಲರೂ ಹುಚ್ಚೆದ್ದು ಕುಣಿಯಲಾರಂಭಿಸಿ ಮೈದಾನಕ್ಕೂ ನುಗ್ಗಲಾರಂಭಿಸಿದಾಗ ಅವರನ್ನು ತಡೆಯುವುದು ಪೋಲಿಸರಿಗೆ ಅಸಾಧ್ಯವಾಯಿತು. ನಂತರ ನಡೆದದ್ದೆಲ್ಲಾ ಇತಿಹಾಸ. ಮೊಹಿಂದರ್ ಬೋಲಿಂಗ್ನಲ್ಲಿ ಮೈಕಲ್ ಹೋಲ್ಡಿಂಗ್ ಎಲ್ಬಿಗೆ ಔಟಾದ ಕೂಡಲೇ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಊಹಿಸಲೂ ಅಸಾಧ್ಯವಾದ ಫಲಿತಾಂಶ ಅದಾಗಿತ್ತು ಕೇವಲ 140ಕ್ಕೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ವೆಸ್ಟ ಇಂಡೀಸ್ ಭಾರತದ ವಿರುದ್ಧ 43ರನ್ಗಳ ಅಂತರದಲ್ಲಿ ಸೋಲನ್ನೊಪ್ಪಿತ್ತು.
ಇಂದಿಗೆ ಸರಿಯಾಗಿ 35 ವರ್ಷಗಳ ಹಿಂದೆ ಕ್ರಿಕೆಟ್ನಲ್ಲಿ ಏನೇನೂ ಆಗಿರದಿದ್ದ ಭಾರತ, ಅಂದಿನ ಕ್ರಿಕೆಟ್ ದೈತ್ಯರಾದ ವೆಸ್ಟ್ ಇಂಡೀಸರನ್ನು ಸೋಲಿಸಿ ಇಡೀ ವಿಶ್ಚಕ್ಕೇ ಅಚ್ವರಿಯನ್ನು ಮೂಡಿಸಿತ್ತು.
ಪಂದ್ಯದ ನಂತರ ಕಪಿಲ್ ದೇವ್ ಸೂಟ್ ಹಾಕಿಕೊಂಡು ವರ್ಲ್ಡ್ ಕಪ್ಪನ್ನು ಎತ್ತಿ ಹಿಡಿದು ಮುತ್ತಿಕ್ಕುತ್ತಿದ್ದಾಗ ಟಿವಿಯ ಮುಂದೆ ಕುಳಿತಿದ್ದ ಇಡೀ ಮಂದಿಗೆ ಅದೇನನ್ನೂ ಸಾಧಿಸಿದ ಸಾರ್ಥಕ ಅನುಭವ.
ಪಂದ್ಯ ಮುಗಿದ ಕೂಡಲೇ ಮನೆಯಿಂದ ಹೊರಬಂದು ಸ್ನೇಹಿತರೊಂದಿಗೆ ತಂದೆಯವರ ಜೊತೆಗೂಡಿ ಬೋಲೋ……. ಭಾ…..ರ…ತ್… ಮಾತಾಕೀ ಜೈ ಎಂದು ಅದೆಷ್ಟು ಬಾರಿ ಕೂಗಿದ್ದೆವೂ ಲೆಕ್ಕಕ್ಕಿಲ್ಲ.
ಇದಾದ ನಂತರ ಭಾರತ ಹಲವಾರು ನಾಯಕರ ಅಡಿಯಲ್ಲಿ ಸಾವಿರಾರು ಪ್ರಶಸ್ತಿಗಳನ್ನು ಗೆದ್ದಿರ ಬಹುದು. ಇದಾದ ನಂತರ ಹಲವಾರು ಜಗತ್ಪ್ರಸಿದ್ಧ ಆಟಗಾರರು ಭಾರತ ತಂಡವನ್ನು ಪ್ರತಿನಿಸಿದ್ದಿರಬಹುದಾದರೂ ವಯಕ್ತಿಕವಾಗಿ ನನಗೆ ನಾಯಕ ಕಪಿಲ್ ಮತ್ತವರ ಅಂದಿನ ತಂಡವೇ ಭಾರತದ ಶ್ರೇಷ್ಠ ಕ್ರಿಕೆಟ್ ತಂಡ ಎನಿಸುತ್ತದೆ.
ಈ ವಿಶ್ವಕಪ್ ಗೆದ್ದ ನಂತರ ಪ್ರಪಂಚಾದ್ಯಂತ ನೆಲೆಸಿದ್ದ ಅಪಾರ ಭಾರತೀಯರಲ್ಲಿ ಹೆಮ್ಮೆ ಮೂಡಿಸಿದ್ದಂತೂ ಸತ್ಯ. ಈ ಪ್ರಶಸ್ತಿ ಭಾರತದ ಎಲ್ಲಾ ವರ್ಗದ ಜನರಲ್ಲೂ ಸ್ವಾಭಿಮಾನ ಬಡಿದೆಬ್ಬಿಸಿದ್ದಂತೂ ಸುಳ್ಳಲ್ಲ.
ಏನಂತೀರೀ?
