ಆಂಬ್ಯುಲೆನ್ಸ್ ಬಂತು ದಾರಿ ಕೊಡಿ

ಆಂಬ್ಯುಲೆನ್ಸ್ ಬಂತು ದಾರಿ ಕೊಡಿ

ನಾವುಗಳು ಎಂತಹದ್ದೇ ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ  ಆಂಬ್ಯುಲೆನ್ಸ್ ಶಬ್ಧ ಕೇಳಿದ ತಕ್ಷಣ ಎಲ್ಲರೂ ಅಕ್ಕ ಪಕ್ಕಕ್ಕೆ ಕಷ್ಟ ಪಟ್ಟಾದರೂ ಸರಿದು ಆಂಬ್ಯುಲೆನ್ಸ್ ಹೋಗಲು ಜಾಗ ಮಾಡಿ ಕೊಡುತ್ತೇವೆ. ಅಕಸ್ಮಾತ್ ಯಾರಾದರೂ ಜಾಗ ಮಾಡಿ ಕೊಡಲು ತಡ ಮಾಡಿದಲ್ಲಿ ಅವರ ಮೇಲೆ ಜೋರು ಮಾಡಿಯಾದರೂ ಆಂಬ್ಯುಲೆನ್ಸ್ ಹೋಗಲು ಅನುವು ಮಾಡಿಕೊಡುತ್ತೇವೆ.  ಏಕೆಂದೆರೆ,  ಆ ಆಂಬ್ಯುಲೆನ್ಸ್ ಗಾಡಿಯಲ್ಲಿ ಯಾವುದೋ ಒಂದು ಜೀವ  ಜೀವನ್ಮರಣ ಸ್ಥಿತಿಯಲ್ಲಿರುತ್ತದೆ. ಆ ಜೀವಕ್ಕೆ  ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ತಲುಪಿ ಸೂಕ್ತವಾದ ಚಿಕಿತ್ಸೆ ದೊರೆತು ಚೇತರಿಸಿಕೊಳ್ಳಬಹುದೇನೋ ಎನ್ನುವ ಆಶಾಭಾವನೆ ಎಲ್ಲರದ್ದು. ಇನ್ನು ಆಂಬ್ಯುಲೆನ್ಸ್ ಒಳಗೆ ಇರುವ ರೋಗಿಗೆ ಮತ್ತು ಅವರ ಕುಟುಂಬದವರ ಅತಂಕ ನಿಜಕ್ಕೂ ಹೇಳಲಾಗದು ಮತ್ತು ಆಂತಹ ಪರಿಸ್ಥಿತಿ ಯಾವ ಶತೃಗಳಿಗೂ ಬಾರದಿರಲಿ ಎಂದೇ ನನ್ನ  ಹಾರೈಕೆ.   ವಯಕ್ತಿವಾಗಿ  ಈ ವಿಷಯದಲ್ಲಿ ನನಗೆ ಬಹಳ ಅನುಭವಿದೆ. ಏಕೆಂದೆರೆ  ತಾವೇ ಆಂಬ್ಯುಲೆನ್ಸ್ ಏರಿ  ಆಮ್ಲಜನಕದ ಮುಸುಕನ್ನು ತಾವೇ ಧರಿಸಿ ಮಲಗಿದ ಕೆಲವೇ ನಿಮಿಷಗಳಲ್ಲಿ  ನಮ್ಮ ತಂದೆಯವರು ಆಂಬ್ಯುಲೆನ್ಸ್ ಗಾಡಿಯಲ್ಲೇ  ಪ್ರಾಣ ತ್ಯಜಿಸಿರುವುದು ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ.  ತಂದೆಯವರು ಆಂಬ್ಯುಲೆನ್ಸನಲ್ಲೇ  ಮೃತರಾದದ್ದು ತಿಳಿದ ಮೇಲೂ , ಆಶಾವಾದಿಯಾಗಿ ಚಾಲಕನಿಗೆ ತುಸು ವೇಗದಿಂದ  ಹೋಗಲು ತಿಳಿಸಿ  ಆಸ್ಪತ್ರೆಗೆ ತಂದೆಯವರನ್ನು  ಕರೆದು ಕೊಂಡು ಹೋದಾಗ, ಅಯ್ಯೋ ಸಾರ್ ಇನ್ನು ಸ್ವಲ್ಪ ಹೊತ್ತಿನ ಮುಂಚೆ ಕರೆದು ಕೊಂಡು ಬಂದಿದ್ದರೆ ಅವರ ಪ್ರಾಣವನ್ನು ಉಳಿಸಬಹುದಿತ್ತೇನೋ, ಈಗ ಅವರ ಪ್ರಾಣ ಪಕ್ಷಿ ಹಾರಿಹೋಗಿದೆ  ನಾವು ಏನೂ ಮಾಡಲಾಗುತ್ತಿಲ್ಲ ದಯವಿಟ್ಟು ಕ್ಷಮಿಸಿ  ಎಂದು ಡಾಕ್ಟರ್ ಅವರು ಹೇಳಿರುವುದು ಇನ್ನೂ ನನ್ನ ಕಿವಿಯ ಮೇಲಿದೆ. ಹಾಗಾಗಿ ಅಂದಿನಿಂದ  ನಾನು  ಎಷ್ಟು ದೂರದಲ್ಲಿಂದಲಾದರೂ ಆಂಬ್ಯುಲೆನ್ಸ್ ಶಬ್ಧ ಕೇಳಿದೊಡನೆಯೇ  ಇದ್ದ  ಸ್ಥಳದಲ್ಲಿಯೇ ದಾರಿ ಮಾಡಿಕೊಟ್ಟು ಭಗವಂತಾ ಆ ರೋಗಿಯನ್ನು ಅಪಾಯದಿಂದ ಆದಷ್ಟು ಬೇಗನೇ ಪಾರು ಮಾಡು ಎಂದೇ ಕೇಳಿ ಕೊಳ್ಳುತ್ತೇನೆ. ಬಹುಷಃ ನನ್ನಂತೆಯೇ ಎಲ್ಲರೂ ಅದೇ ಭಾವನೆಯಲ್ಲಿಯೇ ಇರುತ್ತಾರೆ.

ಆದರೆ ಇಂತಹ ವಿಶೇಷ ಸವಲತ್ತುಗಳನ್ನು ಕೆಲ ವಿದ್ರೋಹಿಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ನಿಜಕ್ಕೂ ಗಾಭರಿ ತರಿಸುತ್ತಿರುವ  ಸಂಗತಿಯಾಗಿದೆ. ಮೊನ್ನೆ ವಿಶಾಖಪಟ್ಟಣದಲ್ಲಿ ಸುಮಾರು ಮೂರು ಕೋಟಿಗಳಷ್ಟು ಬೆಲೆ ಬಾಳುವ 1,813 ಕೆಜಿ ಗಾಂಜಾವನ್ನು ಆ್ಯಂಬುಲೆನ್ಸ್​ ಮೂಲಕ ಕೆಲ  ದೇಶ ದ್ರೋಹಿಗಳು ಸಾಗಿಸುತ್ತಿದ್ದಾಗ ಪೋಲೀಸರ ಕೈಗೆ ಸಿಕ್ಕಿ ಬಿದ್ದಿರುವುದು ನಿಜಕ್ಕೂ ಆತಂಕ ತರುವಂತಾಗಿದೆ. ಇಂದೇನೂ ಸಿಕ್ಕಿ ಬಿದ್ದಿದ್ದಾರೆ. ಆದರೆ ಇಂತಹ ಕೃತ್ಯ ಎಷ್ಟು ದಿನಗಳಿಂದ ನಡೆಯುತ್ತಿತ್ತೋ ಯಾರು ಬಲ್ಲರು? ಅದೇ ರೀತಿ ಕೆಲ ದಿನಗಳ ಹಿಂದೆ ಆಂಬ್ಯುಲೆನ್ಸ್ ಚಾಲಕನೊಬ್ಬ ತನ್ನ ಪ್ರೇಯಸಿಯನ್ನು ಕಾಲೇಜಿಗೆ ಬಿಡಲು ಕರ್ಕಶವಾಗಿ ಆಂಬ್ಯುಲೆನ್ಸ್ ಶಬ್ಧ ಮಾಡುತ್ತಾ ಹೋಗುತ್ತಿದ್ದಾಗ ಪೋಲಿಸರ ಕೈಗೆ ಸಿಕ್ಕಿಬಿದ್ದು ಗೂಸಾ ತಿಂದ್ದಿದ್ದ ವಿಡಿಯೋ ವ್ಯಾಟ್ಸಾಪ್ನಲ್ಲಿ ವೈರಲ್ ಆಗಿದೆ. ಆಂಬ್ಯುಲೆನ್ಸಗಳನ್ನು ಪೋಲೀಸರು ತಪಾಸಣೆ ಮಾಡುವುದಿಲ್ಲ ಎಂಬುದನ್ನೇ ನಪ ಮಾಡಿಕೊಂಡು ದೇಶ ವಿದ್ರೋಹಿಗಳನ್ನೂ ಸಮಾಜಘಾತಕರನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶವಕ್ಕೆ ಸುರಕ್ಷಿತವಾಗಿ ತಲುಪಿಸುವಂತಹ ಕುಕೃತ್ಯಗಳನ್ನೂ ಮಾಡಿರುವ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ.

ರೋಗಿಗಳು ಸರಿಯಾದ ಸಮಯದಲ್ಲಿ  ಆಸ್ಪತ್ರೆಗೆ ತಲುಪಿ ಗುಣಮುಖರಾಗಲೀ ಎಂದು  ಯಾವುದೇ ತಪಾಸಣೆ ಇಲ್ಲದೇ ಮತ್ತು ಯಾವುವೇ  ರಸ್ತೆ ಸಂಚಾರ ನಿಯಮಗಳು ಇಲ್ಲದೇ ಸುಗಮವಾಗಿ ತಲುಪಲು ಅನುವು ಮಾಡಿಕೊಟ್ಟಿರುವುದನ್ನೇ  ಈ ರೀತಿಯಾಗಿ ದುರುಪಯೋಗ ಮಾಡಿ ಕೊಳ್ಳುವ ದುರುಳರಿಗೆ  ಆ ಭಗವಂತನೇ ಬುದ್ದಿ ಕೊಟ್ಟು ಸರಿಯಾದ ಮಾರ್ಗದಲ್ಲಿ ನಡೆಯುವಂತಾಗಬೇಕು.  ಅಮೇರಿಕಾದ ಮಾಜೀ ಅಧ್ಯಕ್ಷ ಜಾನ್ ಎಫ್ ಕೆನಡಿಯವರು ಹೇಳಿರುವಂತೆ ದೇಶ ನಿನಗೇನು ಮಾಡಿದೆ ಎಂದು ಪ್ರಶ್ನಿಸುವ ಮೊದಲು, ದೇಶಕ್ಕೆ ನೀನೇನು ಮಾಡಿದೆ ಎಂದು ಹೇಳು ಎನ್ನುವಂತೆ  ಕೊಟ್ಟ ಸವಲತ್ತುಗಳನ್ನು ದುರುಪಯೋಗಿಸಿ ಕೊಳ್ಳಬಾರದೆಂಬ  ಮನೋಭಾವ ಜನರಿಗೆ ವಯಕ್ತಿಕವಾಗಿಯೇ ಬರಬೇಕೇ ಹೊರತು ಸರ್ಕಾರದ ಯಾವುದೇ ಕಾನೂನಿಗಳಿಂದಲ್ಲ ಮತ್ತು ಪೋಲೀಸರ ಒತ್ತಡಗಳಿಂದಲ್ಲ ಎನ್ನುವುದನ್ನು ಎಲ್ಲರೂ  ಮನಗೊಂಡರೆ ಇಡೀ ನಾಡಿಗೇ ಒಳ್ಳೆಯದು

ಏನಂತೀರೀ?

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s