ಅಲ್ಲಾಭಕ್ಷ್ ರೀ ಸರಾ!!

ಶಂಕರ ಪ್ರತಿಷ್ಠಿತ ಸಾಫ್ಟವೇರ್ ಕಂಪನಿಯಲ್ಲಿ ‌ಮ್ಯಾನೇಜರ್‌ ಆಗಿ ಕೆಲಸ‌ ಮಾಡುತ್ತಿದ್ದ. ಅದೊಂದು ದಿನ ಅವನ ಸಹೋದ್ಯೋಗಿ ವೀರೇಶ್ ತನ್ನ ಮದುವೆಗೆ ಕಛೇರಿಯಲ್ಲಿ ಎಲ್ಲರ ಸಮ್ಮುಖದಲ್ಲಿಯೂ ಆಹ್ವಾನಿಸಿದ್ದಲ್ಲದೆ, ಖುದ್ದಾಗಿ ‌ಮನೆಗೂ ಬಂದೂ ಕುಟುಂಬ ಸಮೇತರಾಗಿ ‌ಬಾಗಲಕೋಟೆಯ‌ ಸಮೀಪದ ಗುಳೇದಗುಡ್ಡದಲ್ಲಿ ನಡೆಯುವ ತನ್ನ ವಿವಾಹಕ್ಕೆ ಬರಲು ಆಹ್ವಾನಿಸಿದ. ಮದುವೆಗೆ ಒಂದೆರಡು‌‌ ದಿನ ಮುಂಚಿತವಾಗಿ ಬಂದರೆ ‌ಸುತ್ತ ಮುತ್ತಲಿನ, ಕೂಡಲ ಸಂಗಮ, ಐಹೊಳೆ, ಬಾದಾಮಿ,ಬನಶಂಕರಿ, ಪಟ್ಟದಕಲ್ಲು ಮಹಾಕೂಟ ಹೀಗೆ ಹತ್ತು ಹಲವಾರು ಪ್ರೇಕ್ಷಣೀಯ ‌ಸ್ಥಳಗಳನ್ನೂ ನೋಡಬಹುದು ಎಂದು‌ ತಿಳಿಸಿದ. ಹೇಗೂ ಕೆಲವೇ ತಿಂಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದ ಶಂಕರ‌, ದುಃಖವನ್ನು ‌ಮರೆಯಲು‌ ಒಳ್ಳೆಯ ‌ಸಂದರ್ಭ ಎಂದು ‌ತಿಳಿದು‌‌ ಶುಕ್ರವಾರದ ಮದುವೆಗೆ ಬುಧವಾರವೇ ಸ್ನೇಹಿತನ ಮದುವೆಗೆ ತಂದೆಯೊಡನೆ ‌ಕುಟುಂಬ‌ ಸಮೇತನಾಗಿ ಗುಳೇದಗುಡ್ಡದ ಪಯಣ ಬೆಳೆಸಿದ.

ಹೋಗುವ ಹಾದಿಯಲ್ಲಿ ಚಿತ್ರದುರ್ಗದ ಕಲ್ಲಿನಕೋಟೆ ನೋಡಿಕೊಂಡು ಹಾಗೆ ಕೂಡಲಸಂಗಮಕ್ಕೆ ಹೋಗಿ ಕಮಟಗಿಯ ಮಲಪ್ರಭೆಯಲ್ಲಿ ಮಿಂದು ಗುಳೇದಗುಡ್ಡದ ಸ್ನೇಹಿತನ ಮನೆಗೆ ತಲುಪುವಷ್ಟರಲ್ಲಿ ಸೂರ್ಯ ಮುಳುಗಿ ಚಂದ್ರ ಬಂದಾಗಿತ್ತು.

ಇಡೀ‌ ಕುಟುಂಬ ಸಮೇತರಾಗಿ ಎರಡು ದಿನಗಳ ಮುಂಚೆಯೇ ಮದುವೆಗೆ ಅದೂ ಬೆಂಗಳೂರಿನಿಂದ ಬಂದದ್ದು ‌ವೀರೇಶನ ಇಡೀ‌ ಕುಟುಂಬಕ್ಕೆ ಸಂತಸ ತಂದಿತ್ತು. ಗುಳೇದಗುಡ್ಡ ಇಡೀ ಊರಿಗೆ ಊರೇ ಕೈಮಗ್ಗದ ‌ವೃತ್ತಿಯವರು. ಚೆಂದದ ಇಳಕಲ್ ಸೀರೆಗಳು ಬಹುತೇಕ ಇಲ್ಲಿಯೇ ನೇಯಲ್ಪಡುತ್ತದೆ. ಹಾಗಾಗಿ ವೀರೇಶನ ಮನೆಯಲ್ಲಿಯೂ‌  ಕೈಮಗ್ಗದ ಸಲಕರಣೆಗಳು ‌ಇದ್ದು ಗುಡಿಕೈಗಾರಿಕೆಯ ಸಂಕೇತವಾಗಿತ್ತು. ಮನೆಗೆ ‌ಹೋದೊಡನೆಯೇ  ಇಡೀ‌ ಚೆಲ್ಲಾ ಕುಟುಂಬದ ಸದಸ್ಯರೆಲ್ಲರೂ ಶಂಕರನ ಕುಟುಂಬವನ್ನು ಆದರದಿಂದ ಸ್ವಾಗತಿಸಿ, ಚಹಾ ಪಾನೀಯಗಳನ್ನು ಕೊಟ್ಟು ‌ಆಗಲೇ ಸಂಜೆಯಾಗಿದ್ದರಿಂದ ಊಟಕ್ಕೆ ಎಬ್ಬಿಸಿದರು. ಶಂಕರನ ತಂದೆ‌ ಮೂರ್ತಿಯವರು ಸ್ವಲ್ಪಮಟ್ಟಿಗೆ ಸಂಪ್ರದಾಯಸ್ಥರು. ಆ‌ ಕ್ಷಣದಲ್ಲಿ ಅವರಿಗೆ ‌ಅಲ್ಲಿ ಊಟ‌ಮಾಡಲು ಸ್ವಲ್ಪ ‌ಕಸಿ‌ವಿಸಿ ತೋರಿದ್ದನ್ನು ಗಮನಿಸಿದ ಶಂಕರ ಮೆಲ್ಲನೆ ‌ಅಪ್ಪಾ ಇವರೂ ಸಹಾ ಸಸ್ಯಹಾರಿಗಳೇ ಎಂದರೆ ಅದನ್ನು ಕೇಳಲು ಸಿದ್ಧರಿಲ್ಲದ ತಂದೆಯವರನ್ನು ಕಂಡು ಯಾವುದೇ ಆಭಾಸವಾಗದ ರೀತಿ, ಅಯ್ಯೋ ನಮಗೆ ಹಸಿವೇ ಇಲ್ಲಾ. ದಾರಿಯಲ್ಲೇ  ಜೋಳದ ‌ರೊಟ್ಟಿ ಊಟ ಮಾಡಿರುವುದು ಇನ್ನೂ ಗಂಟಲಲ್ಲೇ ಇದೆ. ಹೇಗೂ ಇನ್ನೂ ಎರಡು ದಿನ ಇಲ್ಲೇ ಇರುತ್ತೀವಲ್ಲ ಎಂದು ಹೇಳಿ ಸದ್ಯದ ಸಮಸ್ಯೆ ಪರಿಹರಿಸಿದ. ವೀರೇಶ ತನ್ನ ಮನೆಯ ಪಕ್ಕದಲ್ಲೇ ‌ಇದ್ದ ತನ್ನ ಅತ್ತೆ ಮನೆಯಲ್ಲಿ ಉಳಿಯುವ ವ್ಯವಸ್ಥೆ ಮಾಡಿದ್ದ ಕೊಠಡಿಗೆ ಹೋಗಿ ಆಯಾಸ ಪರಿಹಿಸಿಕೊಂಡು ಅಲ್ಲಿಯೇ ಇದ್ದ ಸಣ್ಣ ಅಂಗಡಿಯಲ್ಲಿ ಗಿರ್ಮಿಟ್, ವಿರ್ಚಿ ತಿಂದು ಚಹಾ ಕುಡಿದು ಆ ರಾತ್ರಿಯ ಊಟ‌‌ ಮುಗಿಸಿದ್ದರು.

ಮಾರನೇ ದಿನ ಮುಂಜಾನೆಯೇ ಎದ್ದು ಮತ್ತೆ ಹತ್ತು ‌ಕಿಲೋ‌ಮೀಟರ್ ದೂರದ ಕಮಟಗಿಗೆ ಬಂದು ಮಲಪ್ರಭಾ ನದಿಯಲ್ಲಿ ಮನಸೋ ಇಚ್ಚೆ ಸ್ನಾನ ಸಂಧ್ಯಾವಂದನೆ ‌ಮುಗಿಸಿ, ಬಾದಾಮಿ, ಬನಶಂಕರಿ, ಮಹಾಕೂಟ ನೋಡಿಕೊಂಡು ಪಟ್ಟದಕಲ್ಲಿಗೆ ಬರುವಷ್ಟರಲ್ಲಿ ಮಟ‌ಮಟ ಮಧ್ಯಾಹ್ನದ ‌ಸಮಯ. ಗಂಟೆ ಎರಡಾಗಿತ್ತು. ಬಿಸಿಲಿನ ಝಳ ಮತ್ತು ‌ಪ್ರಯಾಣದ ಆಯಾಸದಿಂದ ಹೊಟ್ಟೆ ಚುರುಗುಟ್ಟುತ್ತಿತ್ತು. ಅಲ್ಲಿಯೇ ಪಟ್ಟದಕಲ್ಲಿನ ದೇವಾಲಯದ ಸಿಬ್ಬಂದಿಯವರನ್ನು ಇಲ್ಲಿ ಎಲ್ಲಿಯಾದರೂ ಊಟ ಮಾಡಲು ಖಾನಾವಳಿ ಇದೆಯೇ ಎಂದು ವಿಚಾರಿಸಲು, ಸರ್ ಖಾನಾವಳಿ ಸ್ವಲ್ಪ ‌ದೂರದಲ್ಲಿದೆ. ಇಷ್ಟು ಹೊತ್ತಿಗೆ ಅಲ್ಲಿ ಊಟ ಮುಗಿದಿರಬಹುದು. ಈ ಕಡೆ ದೇವಾಲಯದ ಮತ್ತೊಂದು ‌ಗೇಟ್ ಮುಂದೆ ಒಂದು ಸಸ್ಯಹಾರಿ ಹೋಟೆಲ್ ಇದೆ‌ ಎಂದರು. ಆಗಲೇ ಹೊಟ್ಟೆ ‌ಹಸಿದಿದ್ದ ಅವರಿಗೆ ಸಸ್ಯಾಹಾರಿ ‌ಹೊಟೆಲ್ ಎಂಬ ಪದ‌ ಕೇಳಿಯೇ ಮರುಭೂಮಿಯಲ್ಲಿ ನೀರು ಸಿಕ್ಕಷ್ಟು ಸಂತೋಷವಾಗಿ, ಹೋಟೆಲ್‌ ‌ಕಡೆ ಧಾವಿಸಿದರು. ಡಾಬಾ ಮಾದರಿಯ ಹೋಟೆಲ್‌ ‌ಪಟ್ಟದಕಲ್ ‌ಕಣ್ಣಿಗೆ ಬಿತ್ತು. ‌ಒಳಗೆ ಹೋದಾಗ ಚಿಕ್ಕದಾದರೂ ಚೊಕ್ಕವಾಗಿದ್ದನ್ನು ನೋಡಿ, ತಿನ್ನಲು ‌ಏನು‌ ಇದೇ‌‌ ಎಂದು ಕೇಳಿದಾಗ, ಹೋಟೆಲ್ ‌ಮಾಲಿಕ, ಬಿಸಿ ಬಿಸಿ ಜೋಳದ ರೊಟ್ಟಿ, ಬದನೀ ಎಣ್ಣುಗಾಯಿ‌, ಕಾಳು ಪಲ್ಲೇ‌ ಇದೆ‌‌ ಎಂದರು. ರೊಟ್ಟಿ ‌ಬಿಸಿಯಾಗಿತ್ತು ಹೊಟ್ಟೆ ‌ಹಸಿದಿತ್ತು.  ಶಂಕರ, ಅವನ ‌ಹೆಂಡತಿ, ಇಬ್ಬರು ‌ಮಕ್ಕಳು‌ ಮತ್ತು ತಂದೆಯವರು ಕೈ ತೊಳೆದು ಕೊಂಡು, ಜೋಳದ ‌ರೊಟ್ಟಿ ಊಟಕ್ಕೆ ಸಿದ್ದರಾದಾಗ, ಶಂಕರನ ಮಗ ಅಪ್ಪಾ ಇಲ್ಲಿ ನೆನ್ನೆ ‌ತಿಂದ ಮೆಣಸಿನಕಾಯಿ ಬಜ್ಜಿ ಇಲ್ಲಿ ಸಿಗುತ್ತಾ‌ ಅಂತ ಕೇಳಿದ್ದನು‌ ಕೇಳಿಸಿಕೊಂಡ ಹೋಟೆಲ್ ‌ಮಾಲಿಕ ರೀ ಸರಾ, ‌ನೀವು ಊಟ ಶುರು‌ ಹಚ್ಕೊಳ್ಳಿ. ಅಷ್ಟರಲ್ಲಿ ನಾನು ಬಿಸಿ‌ ಬಿಸಿ ಮಿರ್ಜಿ‌ ಮಾಡಿ ಬಿಡ್ತೀನಿ ಅಂದಾಗ ರೊಟ್ಡಿ‌‌ ಜೊತೆ ಮಿರ್ಜೀ ಕೂಡ ತಟ್ಟೆಗೆ ಬಿತ್ತು. ಹೊಟೆಲ್ ‌ಮಾಲಿಕನೇ ಅಡುಗೆ ‌ಮಾಡುತ್ತಿದ್ದರಿಂದ ಅಡುಗೆ ಬಡಿಸುವ ಜವಾಬ್ದಾರಿಯನ್ನು ‌ಒಬ್ಬ ನಡುವಯಸ್ಸಿನ ಆಕೆ ವಹಿಸಿಕೊಂಡು ಶ್ರದ್ಧೆಯಿಂದ, ಅಕ್ಕರೆಯಿಂದ. ಕೇಳಿ ಕೇಳಿ‌ ಬಡಿಸುತ್ತಿದ್ದರು.  ಊಟ ನಿಜಕ್ಕೂ ‌ಅತ್ಯಂತ ರುಚಿಯಾಗಿದ್ದರಿಂದ ಮತ್ತು ರಾತ್ರಿ ವೀರೇಶನ ಮನೆಯ ಊಟವನ್ನು ತಪ್ಪಿಸುವ ಸಲುವಾಗಿ ಮೂರ್ತಿಗಳು ಇನ್ನೂ ‌ಎರಡು ಹೆಚ್ಚಾಗಿಯೇ ರೊಟ್ಟಿ ತಿಂದು ಡರ್ ಎಂದು ತೇಗಿ‌ ಅಮ್ಮಾ ಅನ್ನಪೂರ್ಣೇಶ್ವರಿ ಊಟ ತುಂಬಾ ಚೆನ್ನಾಗಿತ್ತು. ನೀವು ಕೈ ತುಂಬಾ ಚೆನ್ನಾಗಿ ಬಡಿಸಿದಿರಿ‌ ‌ಅದಕ್ಕೆ ಇನ್ನೂ ಹೆಚ್ಚಾಗಿಯೇ ಊಟ ಮಾಡಿದ್ದೇವೆ ಎಂದು ಆಕೆಯನ್ನು ಹೊಗಳಿ, ಆಕೆಯ ಕತ್ತಿನಲ್ಲಿ ತಾಳಿ‌ ಮತ್ತು ಹಣೆಯಲ್ಲಿ  ಕುಂಕುಮ ಇಲ್ಲದ್ದನ್ನು ಗಮನಿಸಿ ತಮ್ಮ ಮಗ ಸೊಸೆಯ ಬಳಿ‌ ಪಾಪ  ಚಿಕ್ಕವಯಸ್ಸಿನಲ್ಲೇ ಗಂಡನ ಕಳೆದುಕೊಂಡ ಹಾಗಿದೆ. ಉದರ‌ ನಿಮ್ಮತ್ತಂ ಬಹುಕೃತ ವೇಷಂ ಎನ್ನುವ ಹಾಗೆ  ಜೀವನ ನಡೆಸಲು ಎಷ್ಟು ‌ಕಷ್ಟ ಪಡುತ್ತಿದ್ದಾರೆ ಎಂದು ಹೇಳಿ ಜೋಬಿನಿಂದ ಇಪ್ಪತ್ತು ‌ರೂಪಾಯಿ ತೆಗೆದು ಬೇಡ ಬೇಡವೆಂದರೂ ಆಕೆಯ ಕೈಗಿತ್ತು, ಚೆನ್ನಾಗಿ ‌ಇರಮ್ಮಾ‌ ಎಂದು ಹರೆಸಿದರು.‌‌ ಎಲ್ಲರೂ ಊಟ‌ ಮುಗಿಸಿ ಶಂಕರ ಬಿಲ್ ಕೊಡಲು ಮುಂದಾದಾಗ, ಮೂರ್ತಿಗಳು ಅಪ್ಪಾ ಅಡುಗೆ  ತುಂಬಾ ಚೆನ್ನಾಗಿತ್ತು. ಹಸಿದವರಿಗೆ ಊಟ ಬಡಿಸುವ ಕಾಯಕ ನಿಜಕ್ಕೂ ಅತ್ಯುತ್ತಮ ಎಂದು ಹೇಳಿ ಸರಿ, ನಿನ್ನ ಹೆಸರೇನಪ್ಪಾ ಎಂದು ಕುತೂಹಲದಿಂದ ಕೇಳಿದರು. ಗ್ರಾಹಕರು ತನ್ನ ಆದರಾಥಿತ್ಯದಿಂದ  ‌ಸಂತೃಪ್ತರಾಗಿ ಬಾಯಿ‌ ತುಂಬಾ ಮಾತನಾಡಿಸಿದರೆ ಯಾವ ಮಾಲಿಕನೀಗೂ ಸಂತೋಷವಾಗದು ಹೇಳಿ? ಸರಾ!! ನನ್ ಹೆಸ್ರು, ಅಲ್ಲಾಭಕ್ಷರೀ ಅಂದಾ. ಹೆಸರು‌‌ ಕೇಳಿ ಗಲಿಬಿಲಿಗೊಂಡ ಮೂರ್ತಿಗಳು ಆಂ!! ಏನೂ ಎಂದು ಕೇಳಿದಾಗ ‌ಬಹುಷಃ ವಯಸ್ಸಾದವರಿಗೆ  ಸರಿಯಾಗಿ ‌ಕೇಳಿಸಿಲ್ಲದಿರಬಹುದು ಎಂದೆಣಿಸಿ ಅಲ್ಲಾಭಕ್ಷ ರೀ ಸರಾ!! ಎಂದು ಸ್ವಲ್ಪ ಜೋರಾಗಿಯೇ ಹೇಳಿದಾಗ‌ ಕೆಲವು ಕ್ಷಣ ಮೌನ ಆವರಿಸಿತು. ಮೂರ್ತಿಗಳ ಮುಖ ಕಪ್ಪಿಟ್ಟಿತು. ಪರಿಸ್ಥಿತಿ ‌ಅರಿತ ಶಂಕರ ಬಿಲ್ ಗಿಂತಲೂ ಹೆಚ್ಚಾಗಿಯೇ  ಪಾವತಿಸಿ ಕಾರಿನತ್ತ ಬರುವಷ್ಟರಲ್ಲಿ ಮೂರ್ತಿಗಳು ಮೊಮ್ಮಕ್ಕಳನ್ನು ದರ ದರ ಎಂದು ಕರೆದುಕೊಂಡು ಹೋಗಿ ಕಾರನ್ನೇರಿ ಕುಳಿತಾಗಿತ್ತು. ಕಾರನ್ನೇರಿ ಕುಳಿತ ಶಂಕರ, ಹಿಂದೆ ತಿರುಗಿ ಅಪ್ಪಾ ವಾಂತಿ ಬರ್ತಾ ಇದ್ಯಾ? ಸ್ವಲ್ಪ ದೂರದಲ್ಲಿ‌ ಎಲ್ಲಿಯಾದರೂ ನಿಲ್ಲಿಸಲಾ? ಬಾಯಲ್ಲಿ ಕೈ ಇಟ್ಟು ವಾಂತಿ ಮಾಡಿಕೊಂಡು ಬಿಡಿ‌ ಸಮಾಧಾನ ಆಗುತ್ತದೆ. ಮುಂದೆ ಎಲ್ಲಿಯಾದರೂ ಹಣ್ಣು ಹಂಪಲು ಕೊಡಿಸುತ್ತೇನೆ ಎಂದು ಹಾಸ್ಯ ಭರಿತವಾಗಿ ಹೇಳಿದಾಗ, ಮೂರ್ತಿಯವರು ಸರಿ ಸರಿ ನನಗೇನು ಗೊತ್ತು? ಗೊತ್ತಿಲ್ಲದೇ ಆದ ತಪ್ಪಿಗೆ ಶಿಕ್ಷೆ ಇಲ್ಲವಂತೆ ಎಂದು ಸಮಜಾಯಿಷಿ ಹೇಳುತ್ತಿದ್ದರೆ, ಮುಂದಿನ ಆಸನದಲ್ಲಿ‌ ಕುಳಿತಿದ್ದ ಶಂಕರ ಮತ್ತು ಅವನ ಹೆಂಡತಿ‌ ಮುಸಿ‌ ಮುಸಿ ನಗುತ್ತಿದ್ದದ್ದು ಮೂರ್ತಿಗಳಿಗೆ ಕೇಳಿಸದಿದ್ದದ್ದು‌ ಪರಿಸ್ಥಿತಿ ಇನ್ನೂ ಹೆಚ್ಚಿನ ‌ವಿಕೋಪಕ್ಕೆ ಹೋಗಲಿಲ್ಲ.

ಸಂಜೆ ಮನೆಗೆ ‌ಹಿಂದಿರುಗಿ ಆಯಾಸವಾಗಿದ್ದ ಕಾರಣವೋ ಅಥವಾ ಮಧ್ಯಾಹ್ನದ ಪ್ರಸಂಗವೋ ಏನೋ ಯಾರಿಗೂ ಊಟ ಮಾಡುವ ಮನಸ್ಸಿರಲಿಲ್ಲ.

ಮಾರನೆಯ ದಿ‌ನ ಗುಳೇದಗುಡ್ಡದ ಗ್ರಾಮದೇವತೆಯ ದರ್ಶನ ಮಾಡಿ‌, ಮದುವೆ ಮನೆಗೆ ಬಂದರು. ಮದುವೆ ವಿಜೃಂಭಣೆಯಿಂದ‌ ನಡೆದು ಆರತಕ್ಷತೆಯಲ್ಲಿ ವಧುವರರನ್ನು ಆಶೀರ್ವದಿಸಿ ‌ಉಡುಗೊರೆ ಕೊಟ್ಟು‌ ಮೂರ್ತಿಗಳು ಎಲ್ಲರ ಜೊತೆಯಲ್ಲಿಯೇ  ಕಮಿಕ್ ಕಿಮಿಕ್ ಎನ್ನದೆ ಎಲ್ಲರೊಟ್ಟಿಗೆ ಊಟ ಮಾಡಿದ್ದು ವೀರೇಶನ ಮನೆಯವರಿಗೂ ಶಂಕರನಿಗೂ ನೆಮ್ಮದಿ ‌ತಂದಿತ್ತು. ಸಾಂಗೋಪಾಂಗವಾಗಿ ಮದುವೆ‌ ಮುಗಿದ ನಂತರ ಶಂಕರನ ಮನೆಯವರಿಗೆ ಇಳಕಲ್ ಸೀರೆ, ಕುಪ್ಪಸ, ಅರಿಶಿನ ಕುಂಕುಮದೊಂದಿಗೆ ಮಡಿಲು ತುಂಬಿ, ಮನೆಗೆ ತಲುಪಲು ತಡ ರಾತ್ರಿಯಾಗುವ ಕಾರಣ, ಎಲ್ಲರಿಗೂ ಸಾಕಾಗುವಷ್ಟು ರೊಟ್ಟಿ ಪಲ್ಲೆಗಳ ಬುತ್ತಿ ಕಟ್ಟಿಕೊಟ್ಟು ಕಳುಹಿಸಿದರು.

ಹಿಂತಿರುಗುವ ದಾರಿಯಲ್ಲಿ ‌ಶಂಕರ ತನ್ನ ತಂದೆಯವರನ್ನು ಕುರಿತು ಅಪ್ಪಾ ನಾವು ತಿನ್ನುವ ಅಕ್ಕಿ, ಬೇಳೆ, ತರಕಾರಿಗಳಲ್ಲಿಯೂ, ಜಾತಿ ಧರ್ಮ ನೋಡಲು‌ ಆಗುತ್ತದೆಯೇ? ಆಹಾರ ಬೆಳೆಯುವ ರೈತನಾರೋ? ಅದು ನಮ್ಮ ‌ಮನೆಗೆ ತಲುಪುವಷ್ಟರಲ್ಲಿ ಅದೆಷ್ಟು ಕೈ ಬದಲಾಗಿರುತ್ತದೆಯೋ ಯಾರಿಗೆ ಗೊತ್ತು? ಶುಚಿ‌ ರುಚಿಯಾದ ಸಸ್ಯಾಹಾರವಾಗಿದ್ದರೆ ತಿನ್ನಬಹುದಲ್ಲವೇ? ಎಂದು ಕೇಳಿದಾಗ ‌ಮೂರ್ತಿಗಳ ಮೌನ ಎಲ್ಲದಕ್ಕೂ ಉತ್ತರ ನೀಡಿತ್ತು.

ಆಚಾರ ವಿಚಾರ ನಮ್ಮಗಳ ಮನೆಯ ನಾಲ್ಕು ಗೋಡೆಗಳ ಮಧ್ಯದಲ್ಲಿ‌ ಇದ್ದು ‌ಸಮಾಜದ ಮಧ್ಯದಲ್ಲಿ ನಾವೆಲ್ಲಾ ಒಂದು, ನಾವೆಲ್ಲ ಬಂಧು ಎನ್ನುವಂತಿದ್ದರೆ ಎಷ್ಟು ಚೆನ್ನ ಅಲ್ಲವೇ?

ಎನಂತೀರೀ?

3 thoughts on “ಅಲ್ಲಾಭಕ್ಷ್ ರೀ ಸರಾ!!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s