ಈಸ ಬೇಕು, ಇದ್ದು ಜಯಿಸಬೇಕು

ಶಂಕರ  ತನ್ನ ಸ್ನೇಹಿತರ ಒಡಗೂಡಿ ಕಂಪ್ಯೂಟರ್ ಸಂಬಂಧಿತ ವ್ಯವಹಾರಗಳನ್ನು ಮಾಡುತ್ತಿದ್ದಾಗ, ಅವನ  ಸ್ನೇಹಿತನ ಸಂಬಂಧಿ ಗಣಿ ಇವರ ಜೊತೆಗೆ ಸೇರಿಕೊಂಡ. ಗಣಿ ಎಲೆಕ್ಟ್ರಾನಿಕ್ಸ್ ಸಂಬಂಧ ಪಟ್ಟ ವಿಷಯಗಳಲ್ಲಿ ನಿಜಕ್ಕೂ ಅಪ್ರತಿಮ ಬುದ್ಧಿವಂತ . ಎಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೊಟ್ಟರೂ ಅದನ್ನು  ರಿಪೇರಿ ಮಾಡಿ ಬಿಡುವ ಛಾತಿ ಇತ್ತಾದರೂ, ಆಗ  ಕಂಪ್ಯೂಟರ್ ಬಗ್ಗೆ ಅಷ್ಟೋಂದು ತಿಳುವಳಿಕೆ ಇರಲಿಲ್ಲ.  ಶಂಕರ ಅದರ ತದ್ವಿರುದ್ಧ. ಶಂಕರನಿಗೆ ಕಂಪ್ಯೂಟರ್ ಬಳಕೆ ತಿಳಿದಿತ್ತು. ಎಲೆಕ್ಟ್ರಾನಿಕ್ಸ್ ಉಪಕರಣಗಳ ಬಗ್ಗೆ ಅಲ್ಪ ಸ್ವಲ್ಪ ಗೊತ್ತಿತ್ತು. ಹಾಗಾಗಿ ಇಬ್ಬರೂ ಕೆಲವೇ ದಿನಗಳಲ್ಲಿ ಒಬ್ಬರಿಗೊಬ್ಬರು ತಮಗೆ ತಿಳಿದದ್ದನ್ನು ಹೇಳಿಕೊಡುತ್ತಾ ಅನ್ಯೋನ್ಯ ಗೆಳೆಯರಾಗಿಬಿಟ್ಟರು. ಏನೇ ಮಾಡಬೇಕಿದ್ದರೂ ಇಬ್ಬರೂ ಒಟ್ಟೋಟ್ಟಿಗೆ ಮಾಡುತ್ತಿದ್ದರು. ಇಬ್ಬರೂ ಆರಂಭದ ದಿನಗಳನ್ನು ಹೀರೋ ಪುಕ್ ದ್ವಿಚಕ್ರವಾಹನದಿಂದ ಆರಂಭಿಸಿ ನಂತರ ಬಜಾಜ್ ಚೇತಕ್, ನಂತರ ಮಾರುತಿ ಆಮ್ನಿ ಹೀಗೆ ಹಂತ ಹಂತವಾಗಿ ಜೀವನದಲ್ಲಿ ಏಳ್ಗೆಯಾಗ ತೊಡಗಿದರು.  ಮದುವೆಯಾದದ್ದೂ ಬಹುತೇಕ ಒಂದೇ ಸಮಯ, ಕೆಲವೇ ಕೆಲವು ತಿಂಗಳುಗಳ ಅಂತರ. ಮೊದಲು ಶಂಕರ ಮದುವೆಯಾದ  ನಂತರ ಅವನ ಇತರೇ ಸ್ನೇಹಿತರೂ ಕೆಲವು ದಿನಗಳ ಅಂತರದಲ್ಲಿ ಮದುವೆ ಮಾಡಿಕೊಂಡ ನಂತರ ಸಹಜವಾಗಿ ಗಣಿಯ ಮನೆಯಲ್ಲೂ ಗಣಿಗೆ ಹೆಣ್ಣು ನೋಡಲು ಆರಂಭಿಸಿದರು.  ಗಣಿ ಮೊದಲೇ ವರ್ಕೋಹಾಲಿಕ್. ಕೆಲಸದ ಚಟ ಬಿಟ್ಟರೆ ಮತ್ತೀನ್ನೇನೂ ಇಲ್ಲದವ. ಕೆಲಸಕ್ಕೆ ಒಮ್ಮೆ ಕುಳಿತನೆಂದರೆ ಅದು ಮುಗಿಯುವವರೆಗೂ, ತಿಂಡಿ ಊಟಗಳ ಪರಿವೇ ಇಲ್ಲದವ. ಅಂತಹ ಗಣಿ ತನಗೆ ಮದುವೆ ಬೇಡ ಎಂದು ಹಟ ಹಿಡಿದ.  ಕೊನೆಗೆ ಇಷ್ಟು ಬೇಗ ಬೇಡ ಎಂದು ವರಾತ ತೆಗೆದ.  ನಂತರ ತಂದೆ ತಾಯಿ, ಬಂಧುಗಳು ಮತ್ತು ಶಂಕರನ  ಒತ್ತಾಯಗಳಿಗೆ ಮಣಿದು ತಂದೆ ತಾಯಿ ನೋಡಿದ್ದ ಹೆಣ್ಣನ್ನು ಒಪ್ಪಿ, ವಧುವಿನ ಮನೆಯಲ್ಲಿನ ನಿಶ್ವಿತಾರ್ಥಕ್ಕೆ ಎಲ್ಲರನ್ನೂ ಆಹ್ವಾನಿಸಿದ.  ಮದುವೆ ಆಗುವುದೇ ಇಲ್ಲವೆಂದವ ಮದುವೆ ಆಗುತ್ತಿದ್ದಾನೆ ಎಂದರೆ  ಯಾರಿಗೆ ತಾನೇ ಸಂತೋಷವಾಗದು ಹಾಗಾಗಿ ಎಲ್ಲರೂ ಅವನ ನಿಶ್ವಿತಾರ್ಥಕ್ಕೆ ಅವನ ಭಾವಿ ಪತ್ನಿಯ ಮನೆಗೆ ನಿಗಧಿತ ದಿನದಂದು ಹೋದರು.

ಹುಡುಗಿಯ ತಂದೆಯವರು ಖಾಸಗೀ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದರೆ, ತಾಯಿ ಅಪ್ಪಟ ಗೃಹಿಣಿ. ಇನ್ನು ಅಣ್ಣ ಮತ್ತು ತಂಗಿ ಓದುತ್ತಿದ್ದರೆ, ಹುಡುಗಿ ಪದವಿಯನ್ನು ಆಗ ತಾನೇ ಮುಗಿಸಿದ್ದಾಕೆ. ಹೀಗೆ ಅದೊಂದು ಅಪ್ಪಟ ಮಧ್ಯಮ ವರ್ಗದ, ಸಂಪ್ರದಾಯಸ್ತ ಕುಟುಂಬ. ಗಣಿ ತನ್ನ ಭಾವೀ ಮಾವನವರಿಗೆ  ಶಂಕರನನ್ನು ಪರಿಚಯಿಸುತ್ತಾ ಈತ ನನ್ನ ಪ್ರಾಣ ಸ್ನೇಹಿತ ಎಂದರೆ ಗಣಿಯ ತಂದೆ ಇಂದು ಈ ಶುಭ ಸಮಾರಂಭ ನಡೆಯಲು ಈತನ ಪಾಲೂ ಇದೆ.  ಗಣಿ ಯಾರ ಮಾತನ್ನು ಕೇಳದಿದ್ದರೂ ಇವನ ಮಾತನನ್ನಂತೂ ತೆಗೆದು ಹಾಕುವುದಿಲ್ಲ. ಅವನೂ ಅಷ್ಟೇ, ನಮ್ಮ ಮಗ ಏನಾದರೂ ಹೇಳಿದಲ್ಲಿ ಹಾಗೆಯೇ ನಡೆದುಕೊಳ್ಳುತ್ತಾನೆ. ಒಟ್ಟಿನಲ್ಲಿ ಒಡ ಹುಟ್ಟದಿದ್ದರೂ ಅದಕ್ಕಿಂತ ಮಿಗಿಲಾಗಿ ಇವರಿಬ್ಬರೂ ಇದ್ದಾರೆ ಎಂದು ಹೇಳುತ್ತಿದ್ದರೆ, ಶಂಕರನಿಗೆ ಅವರ ಮಾತುಗಳೆಲ್ಲಾ ಕಿವಿಗೆ ಬೀಳುತ್ತಲೇ ಇರಲಿಲ್ಲ.  ಅವನ ಗಮನವೇನಿದ್ದರೂ ಗಣಿಯ ಮಾವನವರ ಮುಖದ ಮೇಲಿದ್ದ ಕ್ಷಾತ್ರ ತೇಜಸ್ಸಿನ ಕಡೆಗೇ ಇತ್ತು.  ಸತತ ಗಾಯತ್ರೀ ಮಂತ್ರದ ಪಠಣೆಯಿಂದ, ವೇದಾಧ್ಯಯನದಿಂದ ಮತ್ತು ಯೋಗಾಭ್ಯಾಸಗಳಿಂದ ಬೌಧ್ಧಿಕವಾಗಿಯೂ ಮತ್ತು ಶಾರೀರಿಕವಾಗಿಯೂ ಅತ್ಯಂತ ಪ್ರಜ್ವಲವಾಗಿ ಪ್ರಕಾಶಿಸುವಂತಿದ್ದರು.  ಆ ವಯಸ್ಸಿನಲ್ಲಿಯೂ ಅವರನ್ನು ಯಾರೇ ಆಗಲೀ ಒಮ್ಮೆ ನೋಡಿದರೆ, ಶಿರಬಾಗಿ  ಕೈ ಮುಗಿದು ನಮಸ್ಕರಿಸಲೇ ಬೇಕು ಎನ್ನುವಂತಿದ್ದರು. ಅಂತೆಯೇ ಶಂಕರನೂ ಸಹಾ ಆವರಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದ ಹಾಗೆಯೇ ಉಭಯ ಕುಶಲೋಪರಿಯನ್ನು ವಿಚಾರಿಸಿ, ನಿಜಕ್ಕೂ ಗಣಿಯಂತಹ ಅಳಿಯನ್ನು ಪಡೆಯುವುದಕ್ಕೆ ಪುಣ್ಯ ಮಾಡಿದ್ದೀರಿ. ನನ್ನ ಸ್ನೇಹಿತ ಎಂದು ಮುಖಃ ಸ್ತುತಿ ಮಾಡುತ್ತಿಲ್ಲ. ನಿಜಕ್ಕೂ ಅಪ್ಪಟ  ಆಪರಂಜಿಯಂತಹ ಸದಾ ಪರರ ಹಿತವನ್ನೇ ಬಯಸುವ ಹುಡುಗ. ನಿಮ್ಮ ಮಗಳು ನಿಶ್ವಿಂತವಾಗಿರುತ್ತಾಳೆ.  ಇಲ್ಲಿಯವರೆಗೂ ನಿಮಗೆ ಒಬ್ಬ ಗಂಡು ಮಗನಿದ್ದರೆ, ಇನ್ನು ಮುಂದೆ ಅವನ ಜೊತೆ ಹಿರಿಯಣ್ಣನಾಗಿ ನಮ್ಮ ಗಣಿ ಇರುತ್ತಾನೆ ಎಂದು ಧೈರ್ಯದಿಂದ ಹೇಳುತ್ತೇನೆ ಎಂದಾಗ  ಭಾವೀ ಅಳಿಯನ ಬಗ್ಗೆ ಇಂತಹ ಒಳ್ಳೆಯ ಮಾತುಗಳನ್ನು ಕೇಳಿ ಅವರ ಮನಸ್ಸಂತೋಷವಾಗಿದ್ದಂತೂ ಸುಳ್ಳಲ್ಲ. ಹೀಗೆ  ಶಂಕರ ಮತ್ತು ಗಣಿಯ ಮಾವನವರ ಮೊದಲ ಪರಿಚಯವಾಯಿತು.

ಕೆಲ ವರ್ಷಗಳ ನಂತರ  ಗಣಿಯ ಮಾವನವರ ಮನೆಗೆ ಶಂಕರ ಹೋಗಿದ್ದ.   ಮನೆಗೆ ಪ್ರವೇಶಿಸುತ್ತಿದ್ದಂತಯೇ ಮನೆಯ ಮುಂದಿನ ತೋಟ, ನಾನಾ ವಿಧದ ಹೂವಿನ ಗಿಡಗಳಿಂದ  ಎಂದಿಗಿಂತಲೂ ಹೆಚ್ಚಿಗೆ ನಳ ನಳಿಸುತ್ತಿತ್ತು. ಮನೆಯ ಒಳಗಿನಿಂದ ಸುಶ್ರಾವ್ಯ ಸಂಗೀತ ಕೇಳಿ ಬರುತ್ತಿತ್ತು.   ಇಬ್ಬರು ಹೆಣ್ಣು ಮಕ್ಕಳ ಮದುವೆಯನ್ನು ಮಾಡಿ ಮುಗಿಸಿ ಗಣಿನಿಗೂ ಮಗ ಹುಟ್ಟಿದ್ದರಿಂದ ಅವನ ಮಾವನವರು  ಮೊಮ್ಮಕ್ಕಳೊಂದಿಗೆ ನೆಮ್ಮದಿಯಿಂದ  ಕಾಲ ಕಳೆಯಲು ನಿರ್ಧರಿಸಿ, ತಮ್ಮ  ಕೆಲಸದಿಂದ ಸ್ವಯನಿವೃತ್ತಿ ಪಡೆದು ಕೈತೋಟವನ್ನು ನೋಡಿ ಕೊಂಡು ತಮ್ಮ ವೇದಾಧ್ಯಯನ, ಯೋಗ ಮತ್ತು ಸಾಹಿತ್ಯಾಸಕ್ತಿಗಳನ್ನು  ಮುಂದುವರಿಸಿಕೊಂಡು ಹೋಗುತ್ತಿದ್ದದ್ದು ತಿಳಿದುಬಂತು.  ಪರ ಊರಿನಲ್ಲಿದ್ದ  ಗಣಿಯ ಭಾವಮೈದುನ  ಅಂದು ಮನೆಯಲ್ಲಿಯೇ ಇದ್ದನ್ನು  ನೋಡಿ ಹಾಗೆಯೇ ಅವನೊಂದಿಗೆ ಮಾತನಾಡಿಸುತ್ತಿದ್ದಾಗ ಆತ ಅಲ್ಲಿಯ ಕೆಲಸ ಬಿಟ್ಟು ಬಂದು ಇಲ್ಲಿಯೇ  ಕೆಲಸಕ್ಕೆ  ಬಹಳ ದಿನಗಳಿಂದ ಹುಡುಕುತ್ತಿರುವುದನ್ನು ತಿಳಿದ ಶಂಕರ ಕೂಡಲೇ ತನ್ನ ಸ್ನೇಹಿತನಿಗೆ ಕರೆ ಮಾಡಿ ಅವನ ಬಳಿ ಗಣಿಯ ಭಾವ ಮೈದುನನಿಗೆ ಕೆಲಸ ಕೊಡಿಸಿದ. ಬಹಳ ದಿನಗಳಿಂದ ಕೆಲಸವಿಲ್ಲದೇ ಮನೆಯಲ್ಲಿಯೇ ಕಾಲಾಹರಣ ಮಾಡುತ್ತಿದ್ದ ಮಗನಿಗೆ ಕೂಡಲೇ ಕೆಲಸ ಕೊಡಿಸಿದ್ದರಿಂದ ಸಂತಸಗೊಂಡ ಗಣಿಯ ಮಾವನವರು ಶಂಕರನೊಂದಿಗಿನ ಅವರಿಬ್ಬರಲ್ಲಿಯೂ ಇದ್ದ  ಸಮಾನ ವಿಷಯಗಳಾದ ಸಾಹಿತ್ಯ ಮತ್ತು ದೇಶದ ಆಗು ಹೋಗುಗಳ  ಬಗ್ಗೆ ವಿಚಾರಿಸುತ್ತ  ಪರಸ್ಪರ ಇನ್ನೂ ಹೆಚ್ಚಿಗೆ ಆತ್ಮೀಯರಾದರು.

ಕೆಲವು ದಿನಗಳಲ್ಲಿಯೇ ಶಂಕರಿನಿಗೆ ಗಣಿಯಿಂದ ಕರೆ ಬಂದು ತಮ್ಮ ಮಾವನವರಿಗೆ   ಅಪಘಾತವಾದ ಪರಿಣಾಮ ತುರ್ತಾಗಿ ಶಸ್ತ್ರ ಚಿಕಿತ್ಸೆಯ ಪರಿಣಾಮವಾಗಿ ರಕ್ತದ ಅವಶ್ಯಕತೆ ಇದೆಯೆಂದು ತಿಳಿಸಿದ. ಶಂಕರ ತನ್ನ ಪರಿಚಯಸ್ಥರಿಗೆ ಕರೆ ಮಾಡಿ ಅಗತ್ಯವಿದ್ದ ರಕ್ತದಾನಿಗಳನ್ನು  ಆಸ್ಪತ್ರೆಗೆ ಕರೆತಂದು ರಕ್ತವನ್ನು ಕೊಡಿಸಿದ.  ಪರ ಊರಿನಲ್ಲಿ ತಮ್ಮ ಸಂಬಂಧೀಕರ ಮನೆಯಲ್ಲಿ ಹೋಮ ಮುಗಿಸಿಕೊಂಡು ರಾತ್ರಿಯಲ್ಲಿಯೇ ಪ್ರಯಾಣ ಮಾಡುತ್ತಿದ್ದ ಸಂಧರ್ಭದಲ್ಲಿ ಚಾಲಕ ಅಚಾನಕ್ಕಾಗಿ ನಿದ್ರೆಗೆ ಜಾರಿದ ಪರಿಣಾಮ ಗಾಡಿ ಹಳ್ಳಕ್ಕೆ ಬಿದ್ದು ಗಾಢನಿದ್ದೆಯಲ್ಲಿದ್ದ  ಗಣಿಯ ಕುಟುಂಬದವರಿಗೆಲ್ಲರಿಗೂ ಪೆಟ್ಟಾದರೆ ಹಿಂದಿನ ಆಸನದಲ್ಲಿ ಕುಳಿತಿದ್ದ ಗಣಿನ ಮಾವನವರ

ಬೆನ್ನುಹುರಿಗೆ  ತೀವ್ರತರವಾಗಿ ಪೆಟ್ಟಾಗಿ ಸುಮಾರು ಒಂದು ತಿಂಗಳಿಗೂ ಅಧಿಕ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದು ಲಕ್ಷಾಂತರ ರೂಪಾಯಿ ಖರ್ಚುಮಾಡಿದ ಪರಿಣಾಮವೋ, ಗಣಿ ತಮ್ಮ ಮಾವನವರನ್ನು  ಅವರ  ಸ್ವಂತ ಮಗನಿಗಿಂತಲೂ ಅಧಿಕ ಶ್ರಧ್ಧೆಯಿಂದ  ಮತ್ತು ಆಸ್ತೆಯಿಂದ ನೋಡಿಕೊಂಡ ಪರಿಣಾಮವೋ, ಅಥವಾ ಅವರು ಆ ವರೆವಿಗೂ ಮಾಡಿದಂತಹ ಪುಣ್ಯದ ಫಲವೋ ಎಂಬಂತೆ  ಜೀವಾಪಾಯದಿಂದ ಹೊರಬಂದರೂ ಸೊಂಟದ ಕೆಳಗಿನ ಭಾಗ ಸಂಪೂರ್ಣವಾಗಿ ನಿಶ್ಕ್ರಿಯೆಗೊಂಡು ಅವರು ಮಂದೆಂದೂ ನಡೆಯಲೂ ಆಗದಂತೆ ಗಾಲಿಕುರ್ಚಿಯನ್ನೇ ಆಶ್ರಯಯಿಸುವಂತಾಗುತ್ತಾರೆ.

ಸಾಮಾನ್ಯವಾಗಿ ಇಂತಹ ಪರಿಸ್ಥಿತಿ ಇತರರಿಗೆ ಆಗಿದ್ದಲ್ಲಿ ಆಕಾಶವೇ ಕಳಚಿ ತಲೆಮೇಲೆ  ಬಿದ್ದಂತಾಗಿ, ದೇವರೇ  ನಮ್ಮ ಪಾಲಿಗೆ ನೀನಿಲ್ಲ. ನಿನ್ನನ್ನು ಅಷ್ಟು ಶ್ರಧ್ಧಾ ಭಕ್ತಿಯಿಂದ ಪೂಜಿಸಿರುವ ನನ್ನಂತಹ ಭಕ್ತನಿಗೆ  ಹೀಗೇಕೆ ಮಾಡಿದೆ ಎಂದು ದೇವರನ್ನು ಶಪಿಸುವುದು ಸಹಜ. ಆದರೆ ಇಲ್ಲಿ ಆದದ್ದೇ ಬೇರೆ.  ಗಣಿನ ಮಾವನವರು ತಮ್ಮ  ಪರಿಸ್ಥಿತಿಗೆ ಯಾರನ್ನೂ ಹಳಿಯದೆ, ಅಜಾಗರೂಕತೆಯಿಂದ ಅಪಘಾತ ಮಾಡಿದ ಚಾಲಕನ್ನೂ ದೂರದೆ, ಎಲ್ಲಾವೂ ತನ್ನ  ಹಿಂದಿನ ಜನ್ಮದ ಪ್ರಾರಬ್ಧ ಕರ್ಮ. ಅದನ್ನು  ಅನುಭವಿಸುತ್ತಲೇ ಅದನ್ನು ಮೆಟ್ಟಿ ನಿಲ್ಲುವ ಧೃಢ ಸಂಕಲ್ಪ ಮಾಡಿ ತಮ್ಮ ಜೀವನದ ಎರಡನೇ ಮಗ್ಗಲನ್ನು ಪ್ರಾರಂಭಿಸುತ್ತಾರೆ.

ನಡೆಯಲು ಆಗದೆ ತಮ್ಮೆಲ್ಲಾ ದಿನ ನಿತ್ಯದ ಕಾರ್ಯಗಳಿಗೆ  ಮಗನನ್ನೋ ಇಲ್ಲವೇ ಅಳಿಯನ್ನೋ ಆಶ್ರಯಸಬೇಕಾದಿದ್ದ ಶ್ರೀಯುತರು, ಕಾಲುಗಳಿಗೆ ಸ್ವಾದೀನವಿಲ್ಲದಿದ್ದರೇನಂತೆ ಕೈಗಳಲ್ಲಿ  ಕಸುವಿದೆ ಬುಧ್ದಿ ಶಕ್ತಿ ಚೆನ್ನಾಗಿಯೇ ಇದೆ. ಈಗ ಮೊದಲಿಗಿಂತಲೂ ಅಧಿಕ ಸಮಯವಿದೆ. ಇದನ್ನು  ಸುಮ್ಮನೆ ಕಾಲಾಹರಣ ಮಾಡದೆ ಸದ್ವಿನಿಯೋಗ ಮಾಡಿಕೊಳ್ಳಲು ನಿರ್ಧರಿಸಿ, ತಮ್ಮ ಪಾಡಿಗೆ ತಾವೇ ಗಾಲೀ ಕುರ್ಚಿಯನ್ನು ನಡೆಸುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಗಾಲಿ ಕುರ್ಚಿಯಲ್ಲಿಯೇ ಓಡಾಡುವುದು. ಮತ್ತು ಆ ಕೋಣೆಗಳ ಮಧ್ಯೆ ಇದ್ದ ಹೊಸಿಲುಗಳನ್ನು ದಾಟಲು ಎರಡೂ ಬದಿಯಲ್ಲಿ ಇಳಿಜಾರುಗಳನ್ನು ನಿರ್ಮಿಸಿಕೊಂಡು ಸುಲಭವಾಗಿ ತಮ್ಮ ದಿನನಿತ್ಯದ ಕಾರ್ಯಕ್ರಮಗಳನ್ನು ಯಾರ ಆಶ್ರಯವೂ  ಇಲ್ಲದೆ ತಾವೇ ಮಾಡುಕೊಳ್ಳುವಂತಾಗುತ್ತಾರೆ.  ತಮ್ಮ ಗಾಲಿ ಕುರ್ಚಿಯ ಎತ್ತರಕ್ಕೆ ಸರಿಹೋಗುವಂತೆ ಮಂಚ ಮತ್ತು ಹಾಸಿಗೆಯನ್ನು ಸರಿಪಡಿಸಿಕೊಂಡು ಹಾಸಿಗೆಯ ಪಕ್ಕದಲ್ಲಿಯೇ ಪುಸ್ತಕಗಳನ್ನು ಇಡಲು ಕಪಾಟು ಮತ್ತು ಅದರ ಪಕ್ಕದಲ್ಲಿಯೇ ಕುಳಿತು ಓದಲು ಅನುವಾಗವಂತೆ ಮೇಜನ್ನು ಅಳವಡಿಸಿ ಕೊಂಡು ಅದುವರೆಗೂ ಓದದೆ ಕಪಾಟಿನಲ್ಲಿ ಧೂಳು ಹಿಡಿದಿದ್ದ ಎಲ್ಲಾ ಪುಸ್ತಕಗಳನ್ನು ತಮ್ಮ ಮಸ್ತಕದಲ್ಲಿ ಅಳವಡಿಸಿಕೊಂಡು ಅದರಿಂದ ಸಂತೃಪ್ತರಾಗದೆ, ಸಂಸ್ಕೃತ ಭಾಷೆಯಲ್ಲಿದ್ದ ಹಲವಾರು ಶ್ಲೋಕಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಲು ನಿರ್ಧರಿಸಿ ಅದನ್ನು  ಲೇಖನಿಸತೊಡಗಿದರು. ನಂತರ ಅದನ್ನು ಪುಸ್ತಕ ರೂಪದಲ್ಲಿ ತರಲು ಅವರ ಕೈ ಬರಹವನ್ನು ಹೊರಗಿನ ವ್ಯಕ್ತಿಗಳ ಸಹಾಯದಿಂದ ಡಿಟಿಪಿ ಮಾಡಿಸಿ ನಂತರ ಅದನ್ನು ತಿದ್ದುಪಡಿ ಮಾಡಲು ಬೇರೆಯವರ ಸಹಾಯ ಬೇಕಾಗಿದ್ದನ್ನು ಮನಗೊಂಡ ಶ್ರೀಯುತರು ಆ ವಯಸ್ಸಿನಲ್ಲಿ ತಮ್ಮ ಅಳಿಯನ ಸಹಾಯದಿಂದ  ಅಲ್ಪ ಸ್ವಲ್ಪ ಕಂಪ್ಯೂಟರ್ ಬಳಕೆಯನ್ನು ಕಲಿತು ನಂತರ ಪುಸ್ತಕಗಳು ಮತ್ತದೇ   ಕಂಪ್ಯೂಟರ್ ಸಹಾಯದಿಂದ  ಸಂಪೂರ್ಣವಾಗಿ ಕಂಪ್ಯೂಟರ್ ಬಳೆಸುವುದನ್ನು ಕಲಿತೇ ಬಿಟ್ಟರು. ಶಂಕರನ ಸಹಾಯದಿಂದ ಅದೇ ಗಣಕ ಯಂತ್ರಕ್ಕೆ ಕನ್ನಡ ತಂತ್ರಾಂಶ ಅಳವಡಿಸಿ ಕೊಂಡು ಅವನಿಂದಲೇ ಕನ್ನಡದ ಕೀಲಿಮಣೆ ಬಳಕೆಯನ್ನು ಕಲಿತು ಕೆಲವೇ ಕೆಲವು ದಿನಗಳಲ್ಲಿ ತಮ್ಮ ಎಲ್ಲಾ ಕೈಬರಹಗಳನನ್ನೂ ತಾವೇ ಖುದ್ದಾಗಿ ಗಣಕೀಕರಣಗೊಳಿಸಿದ್ದಲ್ಲದೆ ತಮ್ಮ ಮುಂದಿನ ಎಲ್ಲಾ ಬರಹಗಳನ್ನು ನೇರವಾಗಿ ಗಣಕಯಂತ್ರದಲ್ಲೇ ಬರೆಯಲು ಆರಂಭಿಸಿದರು.

ಕೆಲ ದಿನಗಳ ನಂತರ ಶಂಕರ ಅವರ ಮನೆಗೆ ಮತ್ತೊಮ್ಮೆ ಹೋದಾಗ, ಶ್ರೀ ಶಂಕರಾಚಾರ್ಯರ ಕೃತಿಗಳು, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮಗಳನ್ನು ಶ್ತೀಮತಿ ಎಂ.ಎಸ್. ಸುಬ್ಬಲಕ್ಷ್ಮಿಯವರು ಹಾಡಿದ್ದ ರಾಗ ಮತ್ತು ತಾಳಗಳ ಅನುಗುಣವಾಗಿಯೇ ತರ್ಜುಮೆ ಮಾಡಿ ಅದನ್ನು  ಅವರೇ ಸುಶ್ರಾವ್ಯವಾಗಿ ಹಾಡಿ ತೋರಿಸಿದಾಗ ಶಂಕರನ ಕಣ್ಣಿನಲ್ಲಿ  ಅವನಿಗೇ ಅರಿವಿಲ್ಲದಂತೆ ಆನಂದ ಭಾಷ್ಪ  ಉಕ್ಕಿ ಬಂದು, ಛೇ ಭಗವಂತ ನಿಮ್ಮಂತಹವರಿಗೆ ಎಂತಹ ನೋವು ಕೊಟ್ಟು ಬಿಟ್ಟನಲ್ಲಾ ಎಂದ ತಕ್ಷಣವೇ ಒಂದು ಚೂರು ಬೇಸರಿಸದೇ, ಛೇ, ಛೇ ಛೇ! ಭಗವಂತನನ್ನೇಕೆ ದೂಷಿಸುತ್ತೀರೀ *ಆದದ್ದೆಲ್ಲಾ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತೂ* ಎನ್ನುವ ದಾಸರ ಪದವನ್ನು ಉಲ್ಲೇಕಿಸಿ, ಇದೂ ಕೂಡ ಭಗವಂತನ ಪ್ರೇರಣೆಯೇ.. ಹಿಂದಿನ ಜನ್ಮದ ಪಾಪದ ಫಲವನ್ನು ಈ ಜನ್ಮಮದಲ್ಲಿ ಅನುಭವಿಸಿಯೇ ತೀರಬೇಕಂತೆ ಎಂದು, ಆದರೆ ತಾವು ಇದನ್ನು  *ದೇವರು ಕೊಟ್ಟ ಶಿಕ್ಷೆ ಎಂದು ಭಾವಿಸದೆ ದೇವರೇ ನೀಡಿದ ವರ ಎಂದು ಭಾವಿಸುತ್ತೇನೆ* ಎಂದು ಸ್ಪಷ್ಟವಾಗಿ ಹೇಳಿದಾಗ, ಶಂಕರನಿಗೆ ಒಮ್ಮಂದೊಮ್ಮೆಲೆ ಆಶ್ಚರ್ಯ. ಅರೇ ಇದೇನು? ಹೀಗೇಕೆ ಹೇಳುತ್ತಿದ್ದಾರೆ ಎಂದು ಯೋಚಿಸುತ್ತಿರುವಾಗಲೇ, ಅವನ ಆ ಕ್ಷಣದ ಮೌನವನ್ನರಿತ ಶ್ರೀಯುತರು, ನೋಡೀ, ನನಗೆ ಹಿಂದಿನಂತೆ ಎಲ್ಲವೂ ಸರಿ ಇದ್ದಿದ್ದರೆ,  ಕೇವಲ ಲೌಕಿಕದಲ್ಲೇ ನನ್ನ  ಜೀವನವನ್ನು ಕಳೆಯುತ್ತಿದ್ದೆ ಮತ್ತು ಖಂಡಿತವಾಗಿಯೂ ಈ ಪರಿಯಾಗಿ ಭಗವಂತನನ್ನು  ಕಾಣಲು ಸಾಧ್ಯವಾಗುತ್ತಿರಲಿಲ್ಲ ಮತ್ತು  ಅವನ ಸೇವೆಯನ್ನು ಮಾಡಲು ಆಗುತ್ತಿರಲಿಲ್ಲ. ಈಗ ನನಗೆ ನನ್ನ ಕೆಲಸದ ಬಗ್ಗೆ ಸಾರ್ಥಕತೆ ಇದೆ ಹೆಮ್ಮೆಯಿದೆ. ಆ ಭಗವಂತನಲ್ಲಿ ಕೇಳಿಕೊಳ್ಳುವುದಿಷ್ಟೇ.  ಇರುವಷ್ಟು ದಿನ ಇದೇ ರೀತಿಯಲ್ಲೇ ಸಾಹಿತ್ಯ ರೂಪದಲ್ಲಿ  ನಿನ್ನ ಸೇವೆಯ ಮಾಡುವ ಅವಕಾಶ ಕೊಡು. *ಅನಾಯಾಸೇನ ಮರಣಂ, ವಿನಾದೈನೇನ ಜೀವನಂ* ಎನ್ನುವಂತೆ ಯಾರನ್ನೂ ಆಶ್ರಯಿಸದೇ, ಯಾರಲ್ಲೂ ಬೇಡದೆ, ಶಾಶ್ವತ ನೆಮ್ಮದಿಯನ್ನು ಕೊಡು ಎಂದಷ್ಟೇ ಕೇಳಿಕೊಳ್ಳುತ್ತೇನೆ ಎಂದಾಗ, ಶಂಕರ ತನಗರಿವಿಲ್ಲದಂತೆಯೇ ಅವರ ಕಾಲುಗಳಿಗೆರಗಿ, ಹಾಗೇಕೆ ಹೇಳುತ್ತೀರಿ,  ಪುರಾಣ ಕಥೆಗಳಲ್ಲಿ ರಾಜಋಷಿಗಳ ಬಗ್ಗೆ ಕೇಳಿದ್ದೆವು ಮತ್ತು ನೋಡಿದ್ದೆವು ಈಗ ಅದನ್ನು ಪ್ರತ್ಯಕ್ಷವಾಗಿ ನಿಮ್ಮ ಮೂಲಕ ಕಾಣುವ ಸೌಭಾಗ್ಯ  ನಮ್ಮದಾಗಿದೆ. ನೀವೂ ಇನ್ನೂ ಬಹಳಷ್ಟು ಸಾಧನೆ ಮಾಡುವುದಿದೆ ಮತ್ತು ನಮ್ಮಂತಹ ಕಿರಿಯರಿಗೆ ಮಾರ್ಗದರ್ಶನ ಮಾಡಬೇಕಿದೆ ಎಂದಿದ್ದಕೆ. ಎಲ್ಲವೂ ಆ ಶ್ರೀ ಹರಿಯ ಇಚ್ಚೆ. ಅವನ ಅನುಗ್ರಹವಿದ್ದಷ್ಟು ದಿನ  ಮುಂದುವರಿಸಿಕೊಂಡು ಹೋಗುತ್ತೇನೆ ಎಂದಿದ್ದರು.

ಭಗವಂತನೂ ಕೂಡಾ ತುಂಬಾ ಸ್ವಾರ್ಥಿನೇ.  ಈ ಭೂಲೋಕದಲ್ಲಿ ಇರುವ ಸಜ್ಜನರನ್ನೆಲ್ಲಾ  ಬಹಳ ಬೇಗನೆ ತನ್ನ ಬಳಿಗೆ ಕರೆಸಿಕೊಳ್ಳುತ್ತಾನೆ. ಹಾಗೆಯೇ ಇನ್ನೂ ಎಷ್ಟೋ ಕೆಲಸಗಳನ್ನು ಮಾಡಬೇಕೆಂದು ನಿರ್ಧರಿಸಿದ್ದ ಗಣಿಯವರ ಮಾವನವರನ್ನೂ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಬಳಿಗೆ ಕರಿಸಿಕೊಂಡೇ ಬಿಟ್ಟ, ಇಂದು ಅವರು ನಮ್ಮೊಂದಿಗೆ  ಭೌತಿವಾಗಿ ಇಲ್ಲದಿರಬಹುದು. ಆದರೆ ಅವರ ಛಲ,ಧೈರ್ಯ, ಮಾನಸಿಕ ಸ್ಥೈರ್ಯ, ಬಂದಂತಹ ವಿಷಮ ಪರಿಸ್ಥಿತಿಯನ್ನೂ ಆನಂದಿಸುವ ಪರಿ, ಅವರ ಸಾಹಿತ್ಯ ಕೃಷಿಯಿಂದಾಗಿ ನಮ್ಮ ಸ್ಮೃತಿ ಪಟಲದಲ್ಲಿ ಸದಾ ಕಾಲವೂ ಇದ್ದೇ ಇರುತ್ತದೆ.

ಈಸಬೇಕು ಇದ್ದು ಜಯಿಸಬೇಕು!

ಹೇಸಿಗೆ ಸಂಸಾರದಲ್ಲಿ ಆಶಾಲೇಶ ಇಡದ್ಹಾಂಗ

ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು

ಸ್ವಾಮಿ ರಾಮ ಎನುತ ಪಾಡಿ ಕಾಮಿತ ಕಯ್ಗೊಂಬರೆಲ್ಲ

ಗೇರು ಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ

ಮೀರಿಯಾಸೆ ಮಾಡದಲೆ ಧೀರಕೃಷ್ಣನ ಭಕುತರೆಲ್ಲ

ಮಾಂಸದಾಸೆಗೆ ಮತ್ಸ್ಯ ಸಿಲುಕಿ ಹಿಂಸೆ ಪಟ್ಟ ಪರಿಯಂತೆ

ಮೋಸ ಹೋಗದ್ಹಾಂಗೆ *ಜಗದೀಶ ಪುರಂದರ ವಿಠಲನ* ನೆನೆದು!!

ಎನ್ನುವ ದಾಸರ ಪದದ ಹಾಗೆ ಅಕ್ಷರಶಃ ಮಾತು ಮತ್ತು ಕೃತಿಯಲ್ಲಿ  ಮಾಡಿ ತೋರಿಸಿ ಹೋದ ಆಂತಹ ಮಹಾಚೇತನರು ನಿಜಕ್ಕೂ ನಮ್ಮಂತಹವರಿಗೆ ಆದರಣಿಯರು ಮತ್ತು ಅನುಕರಣಿಯರು. ಇಂತಹ ಸಜ್ಜನರು ಮತ್ತೊಮ್ಮೆ  ಹುಟ್ಟಿಬರಲಿ ಎಂದಷ್ಟೇ  ನಾವು ಭಗವಂತನಲ್ಲಿ  ಪ್ರಾರ್ಥಿಸಬಹುದು

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s