
ಶಂಕರನ ಮನೆಯವರು ಒಟ್ಟು ಕುಟುಂಬದವರು. ಮನೆಯಲ್ಲಿ ಮಕ್ಕಳ ಸಂಖ್ಯೆಯೂ ಅಧಿಕವೇ. ಹಾಗೆಯೇ ಮನೆಗೆ ಬಂದು ಹೋಗುವವರು ತುಸು ಹೆಚ್ಚೇ. ಬಂದವರಿಗೆ ಕಾಫೀ ತಿಂಡಿ, ಊಟೋಪಚಾರ ಮಾಡುವುದು ಅವರ ಮನೆಯಲ್ಲಿ ನಡೆದು ಬಂದ ಸಂಪ್ರದಾಯ. ಹಾಗೆ ಪ್ರತೀ ಬಾರಿ ಕಾಫೀ ಮಾಡಿದಾಗಲೂ ಮಕ್ಕಳೂ ಕಾಫಿ ಕುಡಿಯಲು ಬಯಸುವುದು ಸಹಜ. ಹಾಗಾಗಿ ಸುಮ್ಮನೆ ಬಂದು ಹೋದವರೆಲ್ಲರ ಜೊತೆಯೂ ಕಾಫಿ ಕುಡಿಯುತ್ತಾ ಹೋದರೆ ಮಕ್ಕಳಿಗೆ ಕಾಫಿ ಚಟವಾಗುತ್ತದೆ ಎಂದು ತಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಕಾಫೀ ಅಭ್ಯಾಸ ಮಾಡಿಸದೇ ಇದ್ದರೆ ಮಕ್ಕಳ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ನಿರ್ಧರಿಸಿದರು. ಅದರಂತೆ ಮಕ್ಕಳಿಗೆ ಬೆಳಿಗ್ಗೆ ಮತ್ತು ಸಂಜೆ ಹಾಲು ಕೊಡುವ ಅಭ್ಯಾಸ ಮಾಡಿದರು. ಆದರೆ ಮಕ್ಕಳು ಯಾರೂ ಕಾಫಿ ಕುಡಿಯುವುದಿಲ್ಲ ಎಂದರೆ ಅವರ ಮನೆಯಲ್ಲಿ ಕಾಫಿ ಖರ್ಚು ಕಡಿಮೆ ಎಂದು ಭಾವಿಸಬೇಕಿರಲಿಲ್ಲ. ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಅವರ ಮನೆಯಲ್ಲಿ ಕಾಫಿ ಡಿಕಾಕ್ಷನ್ ಸಿದ್ದವಿದ್ದು , ಬೆಳಿಗ್ಗೆ ಎದ್ದೊಡನೆಯೇ ಕಾಫಿ, ತಿಂಡಿಗೆ ಮುಂಚೆ ಕಾಫಿ, ತಿಂಡಿ ತಿಂದಾದ ನಂತರ ಕಾಫೀ, ಮಧ್ಯಾಹ್ನ ಊಟದ ನಂತರ ಕಾಫಿ, ಸಂಜೆ ಕಾಫಿ ಹೀಗೆ ಮಕ್ಕಳ ಪಾಲನ್ನು ಸೇರಿಸಿ ಅಷ್ಟೂ ಕಾಫಿಯನ್ನು ಹಿರಿಯರೇ ಹೀರುತ್ತಿದ್ದರು. ಆದರೆ ಶಂಕರನ ಮನೆಯ ಮಕ್ಕಳಿಗೆ ಕಾಫಿ ಟೀ ರುಚಿಯೇ ಪರಿಚಯವಿರಲಿಲ್ಲ.
ಸುಮಾರು ವರ್ಷಗಳ ನಂತರ ಅದೊಂದು ದಿನ ಶಂಕರನ ಮನೆಯ ಹಿರಿಯರೆಲ್ಲಾ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಯಾವುದೋ ಸಮಾರಂಭಕ್ಕೆ ಹೋಗಿದ್ದರು. ಅದೇ ಸಮಯಕ್ಕೆ ಶಂಕರನ ತಂದೆಯ ಸ್ನೇಹಿತರು ತಮ್ಮ ಹೆಂಡತಿ ಮತ್ತು ಸಣ್ಣ ವಯಸ್ಸಿನ ಮಗನೊಂದಿಗೆ ತಮ್ಮ ಮನೆಯ ಗೃಹಪ್ರವೇಶಕ್ಕೆ ಆಮಂತ್ರಿಸಲು ಮನೆಗೆ ಬಂದಿದ್ದರು. ಸರಿ ಬಂದಿರುವವರಿಗೆ ಶಂಕರ ಮತ್ತವನ ತಂಗಿ ಸೇರಿ ಕಾಫಿ ಮಾಡಿಕೊಟ್ಟು ಬಂದವರ ಜೊತೆ ಮಾತಾನಾಡಲು ಕುಳಿತರು. ದೊಡ್ಡವರೇನೂ ಸುಮ್ಮನೆ ಕಾಫಿ ಕುಡಿಯತೊಡಗಿದರು. ಆದರೆ ಅವರ ಜೊತೆಯಲ್ಲಿ ಬಂದಿದ್ದ ಹುಡುಗ ಒಂದು ತೊಟ್ಟು ಕಾಫಿಯನ್ನು ಹೀರಿದ ಕೂಡಲೇ ಮುಖ ಕಪ್ಪಿಟ್ಟಿತು. ಅವನು ಆ ರೀತಿ ಅಸಹ್ಯ ಮಾಡಿಕೊಂಡದ್ದು ಶಂಕರ ಮತ್ತವನ ತಂಗಿಗೆ ಒಂದು ರೀತಿಯ ಕಸಿವಿಸಿ. ಯಾಕೋ ಸಂಜೀವಾ, ಕಾಫಿ ಚೆನ್ನಾಗಿಲ್ವಾ? ಸ್ವಲ್ಪ ಸ್ಟ್ರಾಂಗ್ ಆಯ್ತಾ? ಇರು ಸ್ವಲ್ಪ ಹಾಲು ಬೆರೆಸಲಾ? ಅಂತ ಕೇಳಿದ ಶಂಕರ. ಅದಕ್ಕೆ ಸಂಜೀವಾ, ಅಯ್ಯೋ ಅಣ್ಣಾ ಕಾಫಿಗೇ ಸಕ್ಕರೇನೇ ಹಾಕಿಲ್ಲ ಅದಕ್ಕೇ ತಂಬಾ ಕಹಿಯಾಗಿದೆ ಎಂದ. ಅಯ್ಯೋ ಅತ್ತೆ ಮಾವಾ ನೀವಾದರೂ ಕಾಫಿಗೆ ಸಕ್ಕರೆ ಹಾಕಿಲ್ಲಾ ಅಂತ ಹೇಳ್ಬಾರ್ದಾ ಅಂದ್ರೆ, ಅವರು ಅಯ್ಯೋ ಬಿಡ್ರೋ ಮಕ್ಕಳಾ ನಮಗೆ ಗೊತ್ತಿಲ್ವಾ ನಿಮಗೆ ಕಾಫಿ ಕುಡಿದ ಅಭ್ಯಾಸವಿಲ್ಲ ಹಾಗಾಗಿ ಇಂತಹ ಸಣ್ಣ ಪುಟ್ಟ ತಪ್ಪುಗಳು ಆಗುವುದು ಸಹಜ. ಅದನ್ನು ಎತ್ತಿ ಆಡಿ ತೋರಿಸಿ ನಿಮ್ಮಂತಹ ಸಣ್ಣ ಮಕ್ಕಳ ಮನಸ್ಸು ಬೇಜಾರು ಮಾಡುವದಕ್ಕೆ ನಮಗೆ ಮನಸ್ಸಾಗಲಿಲ್ಲ ಎಂದರು. ಆಷ್ಟರಲ್ಲಾಗಲೇ ಶಂಕರ ತಂಗಿ ಓಡಿ ಹೋಗಿ ಬಟ್ಟಲಿನಲ್ಲಿ ಸಕ್ಕರೆ ಮತ್ತು ಚಮಚಗಳನ್ನು ತಂದು ಎಲ್ಲರಿಗೂ ಅವರ ರುಚಿಗೆ ತಕ್ಕಂತೆ ಸಕ್ಕರೆ ಬೆರೆಸಿದಳು.
ಮುಂದೆ ಶಂಕರ ದೊಡ್ಡವನಾಗಿ ತನ್ನ ಮದುವೆಯ ಆಮಂತ್ರಣ ಪತ್ರ ಕೊಡಲು ತನ್ನ ತಂದೆಯವರ ಜೊತೆ ಅದೇ ಸ್ನೇಹಿತರ ಮನೆಗೆ ಹೋದಾಗಾ,ಆವರು ತಮ್ಮ ಶುಗರ್ ಲೆಸ್ ಕಾಫಿ ಪುರಾಣವನ್ನು ನೆನಸಿಕೊಂಡು, ಏನಯ್ಯಾ ಮಿತ್ರಾ, ಕಡೇ ಪಕ್ಷ ನಿನ್ನ ಭಾವೀ ಪತ್ನಿಗಾದರೂ ಕಾಫಿ, ಟೀ ಕುಡಿಯುವ ಅಭ್ಯಾಸವಿದೆಯೋ? ಪರವಾಗಿಲ್ಲಾ ಬಿಡು ಈಗ ಹೇಗಿದ್ರೂ ನಡೆಯುತ್ತೆ. ಈಗ ನಾವೆಲ್ಲಾ ಕುಡಿತಾ ಇರೋದೇ ಲೆಸ್ ಶುಗರ್ ಕಾಫಿ ಅಂತ ಹುಸಿ ನಗೆಯಾಡಿದರು. ಹೇ ಮಾವಾ, ಇನ್ಮುಂದೆ ನಿಮಗೆ ಅಂತ ಸಮಸ್ಯೆ ಇರೋದಿಲ್ಲ. ನನ್ನ ಭಾವಿ ಪತ್ನಿ ತುಂಬಾ ಚೆನ್ನಾಗಿ ಕಾಫಿ ಟೀ ಮಾಡ್ತಾಳೆ ಅಂತ ಎಲ್ಲರೂ ಹೇಳ್ತಾರೆ. ಮದುವೆ ಆದ್ಮೇಲೆ ನೀವೂ ನಮ್ಮನೆಗೆ ಒಂದ್ಸಲ ಬಂದು ಸಿಹಿ ಸಿಹಿ ರುಚಿಯಾದ ಕಾಫಿ ಜೊತೆ ಅವಳ ಕೈ ರುಚಿಯನ್ನೂ ನೋಡಿವಿರಂತೆ ಎಂದ ಶಂಕರ. ಶಂಕರನ ಈ ಮಾತನ್ನು ಕೇಳಿದ ಅಂದಿನ ಪುಟ್ಟ ಹುಡುಗ ಇಂದಿನ ಕಾಲೇಜಿಗೆ ಹೋಗುವ ವಿದ್ಯಾರ್ಥಿ ಸಂಜೀವಾ, ಅಣ್ಣಾ , ಅಪ್ಪ ಅಮ್ಮ ಜೊತೆ ನಾನೂ ಬರ್ತೀನಿ. ಮೊದಲು ನಾನು ಕಾಫೀ ಕುಡಿದು ನಂತರ ಅವರಿಗೆ ಕುಡಿಸೋಣ ಅದರಿಂದ ಆಭಾಸವೂ ತಪ್ಪುತ್ತದೆ ಎಂದಾಗ ಎಲ್ಲರೂ ಗೊಳ್ ಎಂದು ನಕ್ಕಿದ್ದೇ ನಕ್ಕಿದ್ದು.

ಅಂದಿನಿಂದ ಶಂಕರನ ಮನೆಯಲ್ಲಿ ಅಡಿಕೆಗೆ ಹೋದ ಮಾನ ಆನೆ ಕೊಟ್ಟ್ರೂ ಬರೋದಿಲ್ಲ ಅನ್ನೂ ಗಾದೆ ಜೊತೆಗೆ ಶುಗರ್ ಲೆಸ್ ಕಾಫಿಗೆ ಹೋದ ಮಾನ ಎಷ್ಟೇ ಶುಗರ್ ಹಾಕಿದ್ರೂ ಬರೋದಿಲ್ಲ ಅನ್ನೋ ಗಾದೆ ಮನೆ ಮಾತಾಯ್ತು. ಸರಿ, ಇನ್ನೇನು ಮತ್ತೇ ಹೇಗೂ ಶಂಕ್ರನ ಹೆಂಡತಿ ಘಮ ಘಮವಾದ ಕಾಫಿ ಮಾಡ್ತಾರಂತೆ ನಡೀರಿ ಎಲ್ಲಾರೂ ಒಮ್ಮೆ ಅವರ ಕೈ ರುಚಿಯ ಕಾಫಿ ಕುಡಿದೇ ಬರೋಣ.
ಏನಂತೀರೀ?
ಸರಳ ಹಾಗೂ ನವಿರಾದ ನಿರೂಪಣೆ, ಮಾಮೂಲಿ ವಿಷಯವನ್ನು ಆಕರ್ಷಣೀಯವಾಗಿಸಿದ್ದೀರಿ…
LikeLike
Thank you so much
LikeLiked by 1 person
ನಿಮ್ಮ ಬರಹ ಗಳು ತುಂಬಾ ಚೆನ್ನಾಗಿದೆ. ಧನ್ಯವಾದಗಳು.
LikeLike