ನಿರ್ಮಲ ಸೀತಾರಾಮನ್ ಅವರ ಸಂವಾದ ಕಾರ್ಯಕ್ರಮ

ಭಾರತದ ರಕ್ಷಣಾ ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್

ಬೆಂಗಳೂರಿನ ವಿದ್ಯಾರಣ್ಯಪುರದ ಚಿಂತಕರ ಚಾವಡಿಯ ಆಶ್ರಯದಲ್ಲಿ ಇಂದು ದ್ವಾರಕ ಕನ್ವೆಂಷನ್ ಹಾಲ್ನಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಕಿಕ್ಕಿರಿದು ತುಂಬಿದ್ದ ದೇಶಭಕ್ತ ಆಭಿಮಾನಿಗಳ ಸಮ್ಮುಖದಲ್ಲಿ ಅತ್ಯಂತ ಸ್ಪೂರ್ತಿದಾಯಕವಾಗಿ ನರೆವೇರಿತು. ನಿರ್ಮಲ ಸೀತಾರಾಮ್ ಅವರು ಕಾರ್ಯಕ್ರಮಕ್ಕೆ ಆಗಮಿಸುವವರೆಗೂ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಇಂದಿನ ಮನ್ ಕೀ ಬಾತ್  ಮುದ್ರಿತ ಕಾರ್ಯಾಕ್ರಮವನ್ನು ತದೇಕ ಚಿತ್ತದಿಂದ ಆಲಿಸುತ್ತಿದ್ದ  ನೆರೆದಿದ್ದ ನೂರಾರು  ಕಾರ್ಯಕರ್ತರು, ನಿರ್ಮಲಾ ಸೀತಾರಾಮನ್ ಅವರು ಆಗಮಿಸುತ್ತಿದ್ದಂತೆಯೇ ಮುಗಿಲು ಮುಟ್ಟುವ ಹಾಗೇ ಬೊಲೋ ಭಾರತ್ ಮಾತಾ ಕೀ ಜೈ ಮತ್ತು ವಂದೇ ಮಾತರಮ್ ಘೋಷಣೆಗಳೊಂದಿಗೆ ಸ್ವಾಗತ ಕೋರಿದ್ದದ್ದು ವಿಶೇಷವಾಗಿತ್ತು

ದೇಶದ ರಕ್ಷಣಾ ಮಂತ್ರಿಗಳಿಂದ ಭಾರತ ಮಾತೆಗೆ ಪುಷ್ಪಾರ್ಚನೆಯ ಮೂಲಕ ಆರಂಭವಾದ ಕಾರ್ಯಕ್ರಮ, ಶ್ರೀಮತಿ ರಂಜನಿ ಕೌಸುಕಿಯವರು ಕಾರ್ಯಕ್ರಮಕ್ಕೆ ಸುಮಾರು ಅರವತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಮವಸ್ತ್ರಧಾರಿಗಳಾಗಿ ಆಗಮಿಸಿದ್ದ ನಿವೃತ್ತ ಯೋಧರನ್ನು ಮತ್ತು ಹುತಾತ್ಮ ಯೋಧ ನಿರಂಜನ್ ಅವರ ತಂದೆ ಶಿವರಾಜ್ ಅವರನ್ನು, ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ಮಾಧ್ಯಮ ಮಿತ್ರರನ್ನೂ ಮತ್ತು  ಸಭಿಕರನ್ನೂ ಇಂದಿನ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರೆ, ಕುಮಾರಿ ಸ್ನಿಗ್ಥಳ ತನ್ನ ಸುಶ್ರಾವ್ಯ ಕಂಠ ಸಿರಿಯಿಂದ  ಸ್ವಾಗತ ಗೀತೆಯನ್ನು ಹಾಡಿ ಇಡೀ ಸಭಿಕರಿಗೆ ಅವಳ  ಮಾಧುರ್ಯಕ್ಕೆ ಮರುಳಾಗುವಂತೆ ಮಾಡಿದಳು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಕಳೆದ ನಾಲ್ಕುವರೆ ವರ್ಷಗಳ ಸಾಧನೆಗಳನ್ನು ಬಿಂಬಿಸುವ *ಮನೆ ಮನೆಗೂ ಮೋದಿ ಎಂಬ* ಕಿರು ಹೊತ್ತಿಗೆಯನ್ನೂ ಇದೇ ಸಮಯದಲ್ಲಿ ವೇದಿಕೆಯ ಮೇಲೆ ಬಿಡುಗಡೆ ಮಾಡಲಾಯಿತು.

ಅತ್ಯಂತ ಸರಳ ಉಡುಪಿನಲ್ಲಿ ಹಣೆಗೆ ಗಂಧದ ತಿಲಕವನ್ನು ಇಟ್ಟು ಕೊಂಡು ಬಂದಿದ್ದ ದೇಶದ ಮಹಿಳಾ ರಕ್ಷಣಾ ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ನಿಜಕ್ಕೂ ವೀರವನಿತೆ ಓಬ್ಬವನ್ನಂತೆ ಕಂಡರು ಎಂದರೆ ಉತ್ಪ್ರೇಕ್ಷೆಯೇನಲ್ಲ.  ನೆರೆದಿದ್ದ ಅಪಾರ ಸಭಿಕರನ್ನು ನೋಡಿ ಹರ್ಷಿತರಾದ ನಿರ್ಮಲಾರವರು 2014ರ ಹಿಂದಿನ ಸರ್ಕಾರದಲ್ಲಿದ್ದ ಹಣದುಬ್ಬರ, ಭಯೋತ್ಪಾದನೆ, ಹಗರಣಗಳ ಸರಮಾಲೆಯನ್ನು ನೆನಪಿಸಿ ನಂತರ ಮೋದಿಯವರು ಅಧಿಕಾರ ಗ್ರಹಣ ಮಾಡಿದ ಕ್ಷಣದಿಂದಲೇ ಹೇಗೆ ಕಾರ್ಯಪ್ರವೃತ್ತರದರು ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಬಂದ ಕೂಡಲೇ ವಿಶ್ವದ ಬಲಾಢ್ಯ ರಾಷ್ಟ್ರಗಳಾದ ಅಮೇರಿಕಾ, ರಷ್ಯಾ ಮತ್ತು ಚೀನಾದೊಡನೆ ಸ್ನೇಹ ಸಂಬಂಧವನ್ನು ಉತ್ತಮ ಪಡಿಸಿಕೊಂಡಿದ್ದಲ್ಲದೆ, ನೆರೆ ಹೊರೆ ರಾಷ್ಟ್ರಗಳಾದ, ಭೂತಾನ್, ಬಾಂಗ್ಲಾ, ಬರ್ಮಾ ಮತ್ತು ಶ್ರೀಲಂಕಾ ದೇಶದೊಂದಿಗೆ ಹಿರಿಯಣ್ಣನ ಜವಾಬ್ಧಾರಿಯನ್ನು ನಿಭಾಯಿಸಿದ್ದನ್ನು ನೆನಪಿಸಿದರು. ನಂತರ ಮಾಹಿತಿ ತಂತ್ರಜ್ಞಾನ, ಬ್ಯಾಂಕಿಗ್ ವ್ಯವಸ್ಥೆಯನ್ನು ಸುಭಧ್ರವಾಗಿರುವಂತೆ ನೋಡಿ ಕೊಂಡರು. ದೇಶದ ಜನರು ನೆಮ್ಮದಿಯಾಗಿ ಜೀವನ ಸಾಗಿಸಬೇಕಾದರೆ ನಮ್ಮ ಗಡಿಯನ್ನು ಕಾಯುವ ಸೈನಿಕರ ಕೊಡುಗೆ ಅಪಾರ. ಆದರೆ ಬಹಳ ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ OROP (One Ranking one Pention) ಪಿಂಚಣಿಯನ್ನು  ಜಾರಿಗೆ ತಂದಿದ್ದಲ್ಲದೇ ಇದುವರೆಗೂ ಸುಮಾರು  52,000  ಕೋಟಿಗೂ ಅಧಿಕ ಹಣವನ್ನು ಸೈನಿಕರಿಗೆ ಪಿಂಚಣಿ ರೂಪದಲ್ಲಿ ಈಗಾಗಲೇ ಕೊಟ್ಟಿದ್ದು ವರ್ಷಕ್ಕೆ ಸುಮಾರು 8000 ಕೋಟಿಯಷ್ಟು ಹಣವನ್ನು ಪ್ರತೀ ವರ್ಷವೂ ಇದಕ್ಕಾಗಿಯೇ ಮೀಸಲಾಗಿಟ್ಟಿರುವುದನ್ನು ತಿಳಿಸಿದರು. ಅಂತೆಯೇ 90ರ ದಶಕದಲ್ಲಿ ವಿವಾದಿತ ಬೋಫೋರ್ಸ್ ಬಂದೂಕುಗಳನ್ನು ಹೊರತು ಪಡಿಸಿ ಇಲ್ಲಿಯವರೆಗೂ ಯಾವುದೇ ರೀತಿಯ ಆಧುನಿಕ ಶಸ್ತ್ರಾಸ್ತ್ರಗಳನ್ನು ಸೈನಿಕರಿಗೆ ಒದಗಿಸದೇ ಹವಾನಿಯಂತ್ರಿತ ಕೊಠಡಿಯಲ್ಲಿಯೇ ಕುಳಿತು ಸೈನ್ಯವನ್ನು ನಿಯಂತ್ರಿಸುತ್ತಿದ್ದ ಹಿಂದಿನ ಸರ್ಕಾರದ ಬದಲು ಮೋದಿಯವರ ಸರ್ಕಾರ, ಸೈನಿಕರಿಗೆ ಗುಂಡು ನಿರೋಧಕ ಕವಚಗಳನ್ನು ಒದಗಿಸಿದ್ದಲ್ಲದೆ, ದೇಶದ  ರಕ್ಷ್ಣಣೆಗೆ ಅವಶ್ಯಕವಾಗಿದ್ದ ಶಸ್ತ್ರಾಸ್ತ್ರಗಳನ್ನು ಯಾವುದೇ ರಾಜಕಾರಣಿಯ ಹಂಗಿಲ್ಲದೆ  ಸೇನಾ ದಂಡನಾಯಕರೇ ನಿರ್ಧರಿಸಿ ಖರೀದಿರುವ ಅಧಿಕಾರವನ್ನು ಕೊಟ್ಟ ಹೆಗ್ಗಳಿಗೆ ಮೋದಿ ಸರ್ಕಾರದ್ದು ಎಂದರು. ಅಲ್ಲಿಂದ ಇತ್ತೀಚಿನ ವಿವಾದಿತ ರಫೇಲನತ್ತ ವಿಷಯವನ್ನು ತಿರುಗಿಸಿದ ರಕ್ಷಣಾ ಸಚಿವರು,  ಬರೀ ಬಾಯಿ ಮಾತಿನಲ್ಲೇ ಹತ್ತು ವರ್ಷಗಳ ಕಾಲ ರಫೇಲ್ ಡೀಲ್ ನಡೆಸುತ್ತಾ ಯಾವುದೇ ಯುದ್ಧ ವಿಮಾನವನ್ನು ಖರೀದಿಸದೆ ಸಂಪೂರ್ಣ ಶಸ್ತೃಸ್ತ್ರಭರಿತ 36 ರಫೇಲ್ ವಿಮಾನವನ್ನು ಖರೀದಿಸಿರುವ ಮೋದಿ ಸರ್ಕಾರವನ್ನು 30000 ಕೋಟಿ ಹಗರಣ ಎಂದು ಬಿಂಬಿಸುತ್ತಿರುವ ರಾಹುಲ್ ಗಾಂದಿಯನ್ನು ಹೆಸರಿಸದೆ ಛೇಡಿಸಿದರು. ಈಗಾಗಲೇ ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ವಿವರಣೆ ನೀಡಲಾಗಿದೆ. ಸರ್ವೋಚ್ಛನ್ಯಾಯಾಲಯ ಮತ್ತು CAG Report ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದೂ ತೀರ್ಪಿತ್ತಿದ್ದರೂ, ಮೋದಿಯವರನ್ನು ಹಳಿಯಲು ಯಾವುದೇ ಕಾರಣವಿಲ್ಲದೆ ವಿರೋಧ ಪಕ್ಷದವರು ಸುಖಾಃಸುಮ್ಮನೇ ಆರೋಪಮಾಡುವುದು ಸರಿಯಲ್ಲ ಎಂದು ತಿಳಿಸಿದರು. ದೇಶದ ರಕ್ಷಣೆಯ ಹಿತದೃಷ್ಟಿಯಿಂದ ಕೆಲವುಬಾರಿ ಒಪ್ಪಂದವನ್ನು ಬಹಿರಂಗ ಪಡಿಸಬಾರದು ಎಂಬ ಕನಿಷ್ಟ ಪರಿಜ್ಞಾನವೂ ವಿರೋಧ ಪಕ್ಷದ ನಾಯಕನಿಗೆ ಇಲ್ಲದಿರುವುದರ ಕುರಿತು ನಿಜಕ್ಕೂ ಅವರಿಗೆ ಆ ವಿಷಯದಲ್ಲಿ ತಿಳುವಳಿಗೆ ಪಡೆಯಲು ಹಿಂದಿನ ರಕ್ಷಣಾ ಸಚಿವರುಗಳಾದ ಏ.ಕೆ. ಆಂಟೋನಿ ಇಲ್ಲವೇ ಶರದ್ ಪವಾರ್ ಬಳಿಯಲ್ಲಿ ಪಾಠಕ್ಕೆ ಹೋಗಲಿ ಎಂದು ಲೇವಡಿ  ಮಾಡಿದರು.

ದೇಶದ ರೈತರಿಗೆ ಅನುಕೂಲವಾಗಲೆಂದು ವರ್ಷಕ್ಕೆ ಕೇಂದ್ರ ಸರ್ಕಾರದಿಂದಲೇ ರೈತರಿಗೆ ನೇರವಾಗಿ  6000 ರೂಪಾಯಿಗಳನ್ನು ನೀಡುವ ಮಹತ್ವ ಪೂರ್ಣ ಯೋಜನೆಯನ್ನು ವಿವರಿಸಿ ಈಗಾಗಲೇ ರೈತರಿಗೆ ತಲುಪಬೇಕಾದ ಮೊದಲ ಕಂತನ್ನು ಸಂದಾಯ ಮಾಡಿರುವ ವಿಷಯವನ್ನು ತಿಳಿಸಿದರು. ಅದೇ ರೀತಿ ಕರ್ನಾಟಕದಲ್ಲಿ ಸುಮಾರು 70,00,000 ರೈತರಿದ್ದು ಅದರಲ್ಲಿ ಸುಮಾರು 62,00,000 ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೆ ಈಗಿರುವ ಸಮ್ಮಿಶ್ರ ಸರ್ಕಾರದ ಬೇಜವಾಬ್ದಾರಿ ತನದಿಂದ ಈವರೆಗೂ ಕೇವಲ 2,00,000 ರೈತರಿಗೆ ಮಾತ್ರವೇ ಮೊದಲ ಕಂತನ್ನು ಬಿಡುಗಡೆ ಮಾಡಿರುವುದಕ್ಕೆ ವಿಷಾಧ ವ್ಯಕ್ತಪಡಿಸಿದರು.  *ಮೋದಿಯವರು ತಾನು ತಿನ್ನುವುದಿಲ್ಲ, ಇತರರನ್ನು ತಿನ್ನಲು ಬಿಡುವುದಿಲ್*ಲ ಎಂದರೆ, ಕರ್ನಾಟಕದ ಇಂದಿನ ಸರ್ಕಾರ ರಾಜಕೀಯದ ನೆಪದಿಂದ ಕೇಂದ್ರಸರ್ಕಾರದ ಈ ಕಾರ್ಯಕ್ರವನ್ನು ಸರಿಯಾಗಿ ಆಚರಣೆಗೆ ತಾರದೆ, *ತಾನೂ ಬಾಳುವುದಿಲ್ಲ, ಇತರರನ್ನೂ ಬಾಳಗೊಡುವುದಿಲ್ಲ* ಎನ್ನುವ ಗಾದೆಯಂತೆ  ಕೆಲಸ ಮಾಡುತ್ತಿದೆ ಎಂದು ಕಿಡಿ ಕಾರಿದರು. ಕರ್ನಾಟಕದ ನಾಯಕರು ಮೋದಿಯವರನ್ನು ತೆಗಳುವಾಗ ತೋರುವ ಉತ್ಸಾಹ, ಮೋದಿಯವರ ಜನಪ್ರಿಯ ಕಾರ್ಯಕ್ರಮಗಳನ್ನು ಅನುಷ್ಟಾನ ತರಲು ಏಕೆ ಆನಾದರ ತೋರುತ್ತಾರೆ? ಎಂದು ಪ್ರಶ್ನಿಸಿದರು.

ಇತರೇ ರಾಜಕೀಯ ನಾಯಕರಂತೆ ರೈತರಿಗೆ ಸಾಲಮನ್ನಾ ಮಾಡಿ ಅವರನ್ನು ಸೋಮಾರಿಗಳನ್ನಾಗಿ ಮಾಡದ ಮೋದಿಯವರು ಅದರ ಬದಲಾಗಿ ರೈತರ ಪರಿಶ್ರಮಕ್ಕೆ ತಕ್ಕಂತೆ ಅವರ ಅಕೌಂಟಿಗೇ ನೇರವಾಗಿ ಅನುದಾನ ಕೊಡುವ ಮತ್ತು ಅವರ ಬೆಳೆಗೆ ತಕ್ಕ ಬೆಲೆ ಸಿಗುವಂತೆ ಮಾಡುವ  MSP ಯೋಜನೆಯಿಂದಾಗಿ ರೈತರಿಗೂ ಸಂತಸ ಮತ್ತು ಜನರಿಗೆ ಬೇಳೆ ಕಾಳುಗಳ ಬೆಲೆ 200 ರೂಪಾಯಿಗಳಿಂದ  ಇಂದು 60-80 ಕ್ಕೆ ಲಭ್ಯವಾಗುತ್ತಿರುವ ಸಾಧನೆಯನ್ನು ವಿವರಿಸಿದರು. ಅಂದು ದೇಶದೆಲೆಲ್ಲಾ ರಸಗೊಬ್ಬರಕ್ಕೆ ಹಾಹಾಕಾರ ಪಡುತ್ತಿದ್ದರೆ ಇಂದು ಬೇವು ಲೇಪಿತ ರಸಗೊಬ್ಬರ ದೇಶಾದ್ಯಂತ ಅತೀ ಸುಲಭವಾಗಿ ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ದೊರಕುವಂತೆ ಮಾಡಿರುವುದು ಮೋದಿಯವರ ಸರ್ಕಾರ ವಿರೋಧಿಗಳು ಹೇಳುವಂತೆ ಸೂಟ್-ಬೂಟ್ ಸರ್ಕಾರವಲ್ಲಾ ಇದ್ದು ರೈತರ ಪರ ಕಾಳಜಿ ಇರುವ ಸರ್ಕಾರ ಎಂದು ತಿಳಿಸಿದರು.

ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಚೋಕ್ಸಿ ಅಂತಹವರಿಗೆ ಅಪಾರವಾದ ಸಾಲ ಕೊಟ್ಟವರು ಯಾರು ಎಂದು ಪ್ರಶ್ನಿಸಿದ ರಕ್ಷಣಾ ಮಂತ್ರಿಗಳು, ಇಂದು ಮೋದಿ ಸರ್ಕಾರದ ಬಿಗಿ ನಿಲುವಿನಿಂದಾಗಿ ಹೆದರಿ  ಅಂತಹವರೆಲ್ಲಾ ದೇಶ ಬಿಟ್ಟು ಓಡಿ ಹೋಗಿದ್ದರೂ ಅವರನ್ನು ಹುಡುಕಿ ಹುಡುಕಿ ಅವರಿಂದ ಅಸಲು ಮತ್ತು ಬಡ್ಡಿ ಸಮೇತ ವಸೂಲು ಮಾಡುತ್ತಿರುವ ಕ್ರಮವನ್ನು ಎತ್ತಿ ತೋರಿಸಿದರು.

ಇಂತಹ ಇನ್ನಷ್ಟು ಮಹತ್ತರ ನಿರ್ಧಾರಗಳನ್ನು ಧೈರ್ಯದಿಂದ ಜಾರಿಗೆ ತರಲು ಬಹುಮತದ ಸರ್ಕಾರದ ಅಗತ್ಯತೆಯನ್ನು ಎತ್ತಿ ತಿಳಿಸಿದ ಸಚಿವೆ, ಯಾವುದೇ ರೀತಿಯ ಆಮೀಷಕ್ಕಾಗಲೀ ಇಲ್ಲವೇ ಹೊಸದಾಗಿ ರಾಜಕೀಯಕ್ಕೆ ಬಂದಿರುವ ಚೆಂದುಳ್ಳಿಯ ಮೋಡಿಗೆ ಒಳಗಾಗದೆ ಮೋದಿಯವರನ್ನು ಬೆಂಬಲಿಸವಂತೆ ಕೋರಿದರು. ಎಲ್ಲದಕ್ಕೂ ಹೆಚ್ಚಾಗಿ 2000 ದಲ್ಲಿ ಜನಿಸಿರುವ ಮಿಲೇನಿಯಮ್ ಮಕ್ಕಳು ಪ್ರಪ್ರಥಮವಾಗಿ ತಮ್ಮ ಓಟನ್ನು ಚಲಾಯಿಸುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಮೋದಿಯವರ ಸಾಧನೆಗಳನ್ನು ತಿಳಿಯಪಡಿಸಿ ಅವರ ಬೆಂಬಲದೊಂದಿಗೆ ಭಾರೀ ಸಂಖ್ಯೆಯೊಂದಿಗೆ ಯಾವುದೇ ಇತರೇ ಪಕ್ಷಗಳ ಬೆಂಬಲವಿಲ್ಲದೆ ಮತ್ತೊಮ್ಮೆ ಮೋದಿಯವರ ಸರ್ಕಾರವನ್ನು ಬಾರೀ ಬಹುಮತದಿಂದ ಆಳ್ವಿಕೆಗೆ ತರಬೇಕೆಂದು ಕಳಕಳಿಯಿಂದ ಕೋರುವ ಮೂಲಕ ತಮ್ಮ ಮಾತನ್ನು ಮುಗಿಸಿದರು.

ನಂತರ ಪ್ರಸನ್ನ ಕೌಸುಕಿಯವರ ಸಾರಥ್ಯದಲ್ಲಿ  ಚುಟುಕಾಗಿ ನಡೆದ ಪ್ರಶ್ನೋತ್ತರದಲ್ಲಿ ಆಯ್ದ ಓದುಗರ ಪ್ರಶ್ನೆಗಳಿಗೆ ಸರಳವಾಗಿ ಮತ್ತು ಅಷ್ಟೇ ತೀಷ್ಣವಾಗಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಉತ್ತರಿಸಿದರು.

1. ದೇಶದಲ್ಲಿ ಇಂದು ನಡೆಯುತ್ತಿರುವ ಅವಘಡಗಳಿಗೆ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಶತೃರಾಷ್ಟ್ರಗಳಿಗಿಂತ ದೇಶದ ಒಳಗಿರುವ ಹಿತಶತೃಗಳೇ ಕಾರಣ ಅಂತಹವರನ್ನು ಹೇಗೆ ಹತ್ತಿಕ್ಕುತ್ತೀರಿ ಎಂದು ಕೇಳಿದ ಪ್ರಶ್ನೆಗೆ

ಪ್ರಧಾನಿಗಳು ಈಗಾಗಲೇ ಈ ಬಗ್ಗೆ ಸಂಸತ್ತಿನಲ್ಲಿ ಹೇಳಿಯಾಗಿದೆ. ನಮ್ಮ ಸೈನಿಕರ ಬಲಿದಾನ ಎಂದೂ ವ್ಯರ್ಥವಾಗದು ಮತ್ತು ವ್ಯರ್ಥವಾಗಲು ನಮ್ಮ ಸರ್ಕಾರ ಬಿಡುವುದಿಲ್ಲ. ಈಗಾಗಲೇ ಆ ಘಟನೆಗೆ ಕಾರಣಕರ್ತರಾದ ಭಯೋತ್ಪಾದಕರನ್ನು ನಮ್ಮ ಸೈನ್ಯ ಬಲಿ ತೆಗೆದುಕೊಂಡಾಗಿದೆ. ನಮ್ಮ ಸೈನ್ಯಕ್ಕೆ  ಸಂಪೂರ್ಣ ಅಧಿಕಾರ ಕೊಡಲಾಗಿದೆ. ಅದರ ಫಲವನ್ನು ಕೆಲವೇ ದಿನಗಳಲ್ಲಿ ಕಾಣಬಹುದಾಗಿದೆ ಎಂದರು.

2. ದೇಶದ ರಕ್ಷಣೆಗಾಗಿ ಪ್ರತಿಯೊಂದು ಕುಟಂಬದಿಂದ ಖಡ್ಡಾಯವಾಗಿ ಸೇನೆಗೆ ಏಕೆ ಸೇರಿಸಿಕೊಳ್ಳಬಾರದು ಮತ್ತು  ಹಾಗೆಯೇ ಎನ್.ಸಿ.ಸಿ. ಯನ್ನು ಸರ್ಕಾರಿ ಶಾಲಾ ಕಾಲೇಜುಗಳಲ್ಲದೇ, ಖಾಸಗೀ ಶಾಲಾ ಕಾಲೇಜುಗಳಿಗೆ ಏಕೆ ವಿಸ್ತರಿಸಬಾರದು?

ನಮ್ಮ ಸರ್ಕಾರಕ್ಕೆ ಪ್ರತಿಯೊಂದು ಕುಟಂಬದಿಂದ ಖಡ್ಡಾಯವಾಗಿ ಸೇನೆಗೆ ಸೇರಿಸಿಕೊಳ್ಳುವ ಯಾವುದೇ ಪ್ರಸಾಪವಿಲ್ಲದಿದ್ದರೂ, ಇಂದಿನ ಜನ ನಿಜಕ್ಕೂ ಬದಲಾಗುತ್ತಿದ್ದಾರೆ. ಅವರುಗಳೇ ಸ್ವಇಚ್ಚೆಯಿಂದ ದೇಶದ ರಕ್ಷಣೆಗಾಗಿ ಸೇನೆಯನ್ನು ಸೇರುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು ಹಾಗೆಯೇ, ಖಾಸಗೀ ಶಾಲಾ ಕಾಲೇಜುಗಳಲ್ಲಿ ಎನ್.ಸಿ.ಸಿ.ತರಬೇತಿಗೆ ಕೋರಿದರೆ ಸರ್ಕಾರ ಅದಕ್ಕೆ ಅಗತ್ಯ ನೆರವು ನೀಡಲು ಸಿಧ್ಧವಿರುವುದಾಗಿ ತಿಳಿಸಿದರು.

3.ನಿವೃತ್ತ ಸೈನಿಕರ ಅನುಭವವನ್ನು ಏಕೆ ಬಳೆಸಿ ಕೊಳ್ಳಬಾರದು?

ನಿವೃತ್ತ ಯೋಧರ ಸಲಹೆಗಳನ್ನು ಮತ್ತು ಅನುಭವವನ್ನು ಖಂಡಿತವಾಗಿಯೂ ಅಗತ್ಯವಿದ್ದಲ್ಲಿ ಬಳೆಸಿಕೊಳ್ಳುವುದಾಗಿ ತಿಳಿಸಿದರು. ಅದಕ್ಕಾಗಿ ಹಲವಾರು ಸೇವಾ ಸಂಸ್ಥೆಗಳ ಮೂಲಕ ನೆರವು ನೀಡಬಹುದು.  kendriya sainik board web siteನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

4. ಪದೇ ಪದೇ ರಾಹುಲ್ ರಫೇಲ್ ವ್ಯವಹಾರವನ್ನು 520,540, 526, 1600 ಕೋಟಿಗಳ ಹಗರಣ ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದರೂ ಸರ್ಕಾರವೇಕೆ ಕ್ರಮ ತೆಗೆದುಕೊಳ್ಳುತ್ತಿಲ್ಲಾ?

ಸರ್ಕಾದರ ಭಧ್ರತೆಯ ದೃಷ್ಟಿಯಿಂದ ರಕ್ಷಣಾ ವ್ಯವಹಾರಗಳನ್ನು ಬಹಿರಂಗ ಪಡಿಬಾರದೆಂಬ ವಿಷಯ ಕೆಲವು ಬೇಲ್ ಮೇಲಿರುವ ಕುಟುಂಬದ ಸದ್ಯಸ್ಯರಿಗೆ ತಿಳಿದಿಲ್ಲವಿರುವುದು ವಿಷಾಧನೀಯ.  ಮತ್ತು ಸರ್ವೋಚ್ಛನ್ಯಾಯಾಲಯ ಮತ್ತು CAG Report ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದೂ ತೀರ್ಪಿತ್ತಿದ್ದರೂ, ಮಧ್ಯವರ್ತಿಗಳಿಂದ ಸಿಗಬಹುದಾಗಿದ್ದ ಕಾಣಿಕೆ ತಪ್ಪಿದ್ದಕ್ಕಾಗಿ ಕೆಲವರು ಹಳಿಯುತ್ತಿರುವುದರಲ್ಲಿ ಹುರುಳಿಲ್ಲ ಎಂದು ತಿಳಿಸಿದರು

5. ನಮ್ಮ ಮಾಧ್ಯಮದಲ್ಲಿ ಶತೃರಾಷ್ಟ್ರಗಳ ಏಜೆಂಟ್ಗಳು ಇದ್ದಾರೆ ಎಂದು ನಿಮಗೆ ಅನಿಸುವುದಿಲ್ಲವೇ? ಅಂತಹ ಮಾಧ್ಯಮದವರಿಗೆ ನಿಮ್ಮ ಸಲಹೆ ಏನು?

ನಿಮ್ಮ ಮಾತು ಕೆಲವೊಮ್ಮೆ ಸತ್ಯ ಎನಿಸಿದರೂ ನಾನು ಮಾಧ್ಯಮದವರಿಗೆ ಯಾವ ಸಲಹೆಯನ್ನೂ ನೀಡಲು ಇಚ್ಚಿಸುವುದಿಲ್ಲ. ಮಾಧ್ಯಮ ಮಿತ್ರರಲ್ಲಿ ಕೇಳಿಕೊಳ್ಳುವುದೇನೆಂದರೆ ತಾವುಗಳೆಲ್ಲರೂ ದೇಶದ ರಕ್ಷಣೆ ಮತ್ತು ಹಿತ ದೃಷ್ಟಿಯಿಂದ ತಾವೇ ಸ್ವಯಂ ನಿಯಂತ್ರಣ ಹೇರಿಕೊಂಡು ದೇಶದ ಬಗ್ಗೆ ಅಪಪ್ರಚಾರ ನಡೆಸದೆ ಸುಳ್ಳು ಸುದ್ದಿಗಳನ್ನು ಹಬ್ಬಿಸದಿರಿ ಎಂದು ಕೇಳಿಕೊಳ್ಳುತ್ತೇನೆ ಎನ್ನುವ  ಮೂಲಕ ಪ್ರಶ್ನೋತ್ತರ ಕಾರ್ಯಕ್ರಮ ಸುಸೂತ್ರವಾಗಿ ಸಂಪೂರ್ಣವಾಯಿತು..

ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಮತ್ತು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಲು ಸಹಕರಿಸಿದ ಸಭಿಕರಿಗೆ ಶ್ರೀಯುತ ಮೋಹನ್ ಗೌಡರು ಹೃತ್ಪೂರ್ವಕವಾಗಿ ವಂದನಾರ್ಪಣೆ ಸಲ್ಲಿದರೆ, ಶ್ರೀಮತಿ ಶೃತಿಕೀರ್ತಿ ಸುಬ್ರಹ್ಮಣ್ಯರವರ ಕಂಚಿನ ಕಂಠದ ವಂದೇಮಾತರಂ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.

ಕಾರ್ಯಕ್ರಮದ ನೋಂದಣಿಯಿಂದ ಹಿಡಿದು, ಪ್ರಚಾರ, ಪೀಠೋಪಕರಣಗಳ ವ್ಯವಸ್ಥೆ, ರಕ್ಷಣಾ ವ್ಯವಸ್ಥೆ, ರಂಗ ಸಜ್ಜಿಕೆ, ಉತ್ತಮ ದ್ವನಿವರ್ಧಕ ಕಾರ್ಯಕ್ರಮದ ಆಯೋಜಕರು ಮತ್ತು ಸ್ವಯಂಸೇವಕರು ಉತ್ತಮವಾಗಿ ಯೋಜನೆ ಮಾಡಿ ಅದನ್ನು ಅನುಷ್ಟಾನಕ್ಕೆ ತಂದರೆ ಒಂದು ಒಳ್ಳೆಯ ಕಾರ್ಯಕ್ರಮವನ್ನು ಹೇಗೆ  ನಡೆಸಬಹುದೆಂದು ತೋರಿಸಿಕೊಟ್ಟರು ಎಂದರೂ ಅತಿಶಯೋಕ್ತಿಯೇನಲ್ಲ.

ಏನಂತೀರಿ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s