ಮೌನವೇ ಪರಿಣಾಮಕಾರಿ ಅಸ್ತ್ರ

ಅಂದೊಂದು ದೊಡ್ಡ ಕಾಡು. ಅಲ್ಲಿ ಅನೇಕ ಬಗೆ ಬಗೆಯ ಗಿಡ ಮರಗಳು ನಾನಾ ರೀತಿಯ ಕಾಡು ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಆಶ್ರಯತಾಣವಾಗಿತ್ತು. ಎಲ್ಲಾ ಪ್ರಾಣಿ ಪಕ್ಷಿಗಳು ಸುಖಃದಿಂದ ನೆಮ್ಮದಿಯಿಂದ ತಮ್ಮ ಜೀವನವನ್ನು ನಡೆಸುತ್ತಿದ್ದವಾದರೂ ಅಗಾಗ ಅವುಗಳಿಗೆ ಪಕ್ಕದ ಊರಿನ ಬೇಟೆಗಾರಿಂದ ಸದಾ ತೊಂದರೆಯಾಗುತ್ತಲೇ ಇತ್ತು. ಕಾಡಿನ ರಾಜ ಇದು ಕಾಡಿನಲ್ಲಿ ಆಗುವ ಸಹಜ ಪ್ರಕ್ರಿಯೆ ಎಂದು ಸದಾ ಸುಮ್ಮನಾಗಿ ಬಿಡುತ್ತಿರಿಂದ ದಿನೇ ದಿನೇ ಬೇಟೆಗಾರರ ಧಾಳಿ ಹೆಚ್ಚುತ್ತಿತ್ತು. ಇದರಿಂದ ಬೇಸತ್ತು ನರಸತ್ತ ರಾಜನನ್ನು ಬದಲಿಸಿ ಭಲಾಡ್ಯ ರಾಜನನ್ನು ಆರಿಸಿಕೊಂಡವು. ಆದರೆ ಇದನ್ನು ಒಪ್ಪಿಕೊಳ್ಳದ ಕೆಲವು ಪ್ರಾಣಿಗಳು ತಮ್ಮಲ್ಲೇ ಗುಂಪು ರಚಿಸಿ ಕೊಂಡು ಹೊಸಾ ರಾಜನನ್ನು ಹೇಗಾದರೂ ಬಗ್ಗು ಬಡಿಯಬೇಕೆಂದು ಸದಾ ಕಾಲವೂ ಹವಣಿುಸುತ್ತಾ ಗುಟ್ಟಾಗಿ ಬೇಟೆಗಾರನಿಗೆ ಸಹಾಯ ಮಾಡತೊಡಗಿದವು. ಇದರ ಪರಿಣಾಮವಾಗಿ ಪ್ರಾಣಿ ಪಕ್ಷಿಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸತೊಡಗಿದವು. ಇದರಿಂದಾಗಿ ಕಾಡಿನ ರಾಜನಿಗೂ ಕೆಟ್ಟ ಹೆಸರು ಬರತೊಡಗಿತು ಮತ್ತು ಪ್ರಾಣಿ ಪಕ್ಷಿಗಳು ನೆಮ್ಮದಿಯಿಂದ ಇರಲು ಸಾಧ್ಯವಾಗದೇ ಸದಾಕಾಲವೂ ಭಯದ ವಾತಾವರಣದಲ್ಲಿಯೇ ಇರುವಂತಾಯಿತು. ಇದನ್ನು ಮನಗಂಡ ಕಾಡಿನ ಹಿರಿಯ ಪ್ರಾಣಿಗಳು ಎಲ್ಲರನ್ನೂ ಒಂದೆಡೆಗೆ ಸೇರಿಸಿ ನಾವೆಲ್ಲಾ ಒಗ್ಗಾಟ್ಟಾಗಿ ಇರದಿದ್ದಲ್ಲಿ ಉಳಿಗಾಲವೇ ಇರುವುದಿಲ್ಲ. ಕೆಲವೇ ದಿನಗಳಲ್ಲಿ ಇಡೀ ಕಾಡಿನ ಪ್ರಾಣಿಗಳಲ್ಲದೇ ಗಿಡಮರಗಳೂ ನಾಶವಾಗಿ ಬರಡಾಗುವುದರಲ್ಲಿ ಸಂದೇಹವೇ ಇಲ್ಲ. ಹಾಗಾಗಿ ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯಗಳು ಇದ್ದರೂ ಶತ್ರುಗಳ ಎದುರು ಅದನ್ನು ತೋರಿಸಿ ಕೊಳ್ಳದೆ ಒಗ್ಗಟ್ಟಾಗಿ ಹೋರಾಡಿದರೆ ಜಯವು ನಮ್ಮದೇ ಎಂದು ತಿಳಿ ಹೇಳಿದವು. ಅದೋಂದು ದಿನ ಅತಂತಹ ಪರಿಸ್ಥಿತಿ ಎದುರಾಗಿಯೇ ಬಿಟ್ಟಿತು. ಅತ್ತ ಬೇಟೆಗಾರರು ಹಾಕಿದ್ದ ಕಾಳುಗಳ ಆಸೆಗೆ ಬಿದ್ಡು ಪಕ್ಷಿಗಳು ಅವರನ ಬಲೆಗೆ ಬಿದ್ದರೆ ಇತ್ತ ಮರ ಕಟುಕರು ಬಾರೀ ಅಸ್ತ್ರಗಳೊಡನೆ ಕಾಡಿನ ಮರಗಳನ್ನು ಕಡಿಯಲು ಸಿಧ್ಧರಾಗಿ ಕಾಡಿಗೆ ದಾಂಗುಡಿ ಇಟ್ಟಿದ್ದರು. ಇದನ್ನು ನೋಡಿದ ಕಾಡಿನ ರಾಜ ತನ್ನೆಲ್ಲಾ ಪ್ರಾಣಿಗಳನ್ನು ಕರೆದು ಒಮ್ಮಿಂದೊಮ್ಮೆಲೆ ಮರ ಕಟುಕರ ಮೇಲೆ ಧಾಳಿ ಮಾಡಲು ಹೇಳಿ ತನ್ನ ಮುಂದಾಳತ್ವದಲ್ಲಿಯೇ ಅವರನ್ನು ಅಟ್ಟಿಸಿಕೊಂಡು ಹೋಯಿತು. ಪ್ರಾಣಿಗಳ ಈ ಪರಿಯ ಧಾಳಿಯನ್ನು ನಿರೀಕ್ಷಿಸದಿದ್ದ ಮರ ಕಟುಕರು ಎದ್ದೆನೋ ಬಿದ್ದೆನೋ ಎಂದು ಬದುಕಿದೆಯಾ ಬಡ ಜೀವ ಎಂದು ಚೆಲ್ಲಾ ಪಿಲ್ಲಿಯಾಗೆ ದಿಕ್ಕಾಪಾಲಾಗಿ ಓಡಿದರೆ ಕೆಲವರು ಪ್ರಾಣಿಗಳ ಕಾಲ್ತುಳಿತಕ್ಕೆ ಸಿಕ್ಕಿ ಕೈಕಾಲು ಮುರಿದುಕೊಂಡರು. ಅದೇ ರೀತಿ ಇಲಿಗಳು ಸರ ಸರನೆ ಒಂದಾಗಿ ಬಂದು ತಮ್ಮ ಹರಿತವಾದ ಹಲ್ಲುಗಳಿಂದ ಬೇಟೆಗಾರ ಬೀಸಿದ್ದ ಬಲೆಯನ್ನು ಕೆಲವೇ ನಿಮಿಷಗಳಲ್ಲಿ ಛಿದ್ರ ಛಿದ್ರಗೊಳಿಸಿ ಬಲೆಗೆ ಸಿಲುಕಿದ್ದ ಎಲ್ಲಾ ಪಕ್ಷಿಗಳನ್ನೂ ಕಾಪಾಡಿದವು. ಇದೇ ರೀತಿಯಾಗಿ ಒಂದೆರಡು ಧಾಳಿಗಳನ್ನು ಎಲ್ಲರೂ ಒಂದಾಗಿ ವಿರೋಧಿಸಿದ ಪರಿಣಾಮ ಮರ ಕಟುಕರು ಮತ್ತು ಬೇಟೆಗಾರರು ಮುಂದೆಂದೂ ಕಾಡಿನತ್ತ ತಲೆ ಹಾಕಬಾರದೆಂದು ತೀರ್ಮಾನಿಸಿ ಅತ್ತ ಕಡೆ ತಲೆ ಹಾಕಲೇ ಇಲ್ಲ. ಹಾಗಾಗಿ ಎಲ್ಲಾ ಪ್ರಾಣಿ ಪಕ್ಷಿಗಳು ಒಗ್ಗಟ್ಟಿನಲ್ಲಿ ಬಲವಿದೆ ಎಂದು ಎತ್ತಿ ತೋರಿ ನೆಮ್ಮದಿಯಿಂದ ಅದೇ ಕಾಡಿನಲ್ಲಿ ನೂರ್ಕಾಲ ಜೀವಿಸಿದವು.

ಎರಡು ವಾರಗಳ ಹಿಂದೆ ಪಾಪೀಸ್ಥಾನದ ಉಗ್ರರಿಂದ ಕಾಶ್ಮೀರದ ಪುಲ್ವಾಮ ಬಳಿ ನಡೆದ ಧಾಳಿಯಲ್ಲಿ ನಮ್ಮ 40ಕ್ಕೂ ಅಧಿಕ ಸಂಖ್ಯೆಯ ಯೋಧರು ಹುತಾತ್ಮರಾದಾಗ ಇಡೀ ದೇಶವೇ ತಮ್ಮ ಸಂಬಂಧೀಕರೇ ಸತ್ತರೇನೋ ಎನ್ನುವಂತೆ ದುಃಖ್ಖಿಸಿ ದೇಶದ ನಾನಾ ಕಡೆ ತಮ್ಮ ಅಗಲಿದವರಿಗೆ ಶ್ರಧ್ಧಾಂಜಲಿ ಅರ್ಪಿಸಿದರಾದರೂ ಮನದಲ್ಲಿ ಪಾಪಿಗಳ ಪ್ರತಿಕಾರಕ್ಕೆ ಮನಸ್ಸು ಹಾತೊರೆಯುತ್ತಿತ್ತು. ಸಾಮಾನ್ಯ ಜನರ ಭಾವನೆಗಳೇ ಹಾಗಿರುವಾಗ ಇನ್ನು ದೇಶವಾಳುತ್ತಿರುವ ನಾಯಕರು ಮತ್ತು ದೇಶವನ್ನು ಕಾಪಾಡುತ್ತಿರುವ ಸೈನಿಕರ ರಕ್ತ ಇನ್ನೆಷ್ಟು ಕುದಿಯುತ್ತಿರಬೇಕು. ತಮ್ಮವರು ಸತ್ತ ಹನ್ನೆರಡನೇ ದಿನಕ್ಕೆ ಶ್ರಾಧ್ಧವನ್ನು ಮಾಡಿ ಹದಿಮೂರನೇ ದಿನ ವೈಕುಂಠ ಸಮಾರಾಧನೆಯ ಮೂಲಕ ಸದ್ಗತಿಯನ್ನು ಕೊಡಿಸುವಂತೆ ಸರಿಯಾಗಿ ಹದಿಮೂರನೇ ದಿನ ಬೆಳ್ಳಂಬೆಳಿಗ್ಗೆ ಇಡೀ ಜಗವೆಲ್ಲಾ ಮಲಗಿರಲು, ಶತ್ರುರಾಷ್ಟ್ರದ ಗಡಿಯನ್ನೂ ದಾಟಿ ಉಗ್ರರ ನೆಲೆಯನ್ನು ಧೂಳೀಪಟ ಮಾಡಿದರು. ಈ ಅಚಾನಕ್ಕಾದ ಧಾಳಿಯನ್ನು ಇಡೀ ವಿಶ್ವವೇ ಮೂಗಿನ ಮೇಲೆ ಬೆರಳಿಟ್ಟು ನೋಡಿದರೆ ಇಡೀ ದೇಶದ ಜನ ಜಾತೀ ಧರ್ಮವನ್ನು ಲೆಕ್ಕಿಸದೆ ಸಂಭ್ರಮಿಸಿದ್ದದ್ದು ಈಗ ಇತಿಹಾಸ.

ಶತ್ರು ರಾಷ್ಟ್ರ ಹಾಗು ಉಗ್ರಗಾಮಿಗಳ ನಾಯಕರುಗಳೇ ಭಾರತದ ವಾಯುಧಾಳಿಯನ್ನು ಒಪ್ಪಿಕೊಂಡವಾದರೂ ವಿಶ್ವದ ಮುಂದೆ ಅನುಮಾನ ತಾಳಲಾರದೇ ಯಾವುದೇ ಸಾವು ನೋವುಗಳಾಗಿಲ್ಲ. ಆರಂಭದಲ್ಲಿ ಭಾರತದ ಧಾಳಿಯನ್ನು ನಮ್ಮ ವಾಯುಸೇನಾ ಪಡೆಗಳು ಹಿಮ್ಮೆಟ್ಟಿಸಿದವು ಎಂದರೆ ನಂತರ ಕತ್ತಲಾಗಿದ್ದರಿಂದ ತಮ್ಮ ಸೇನೆ ಪ್ರತಿಧಾಳಿ ಮಾಡಲಾಗಲಿಲ್ಲ ಎಂದು ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ತಮ್ಮ ಅಳಲನ್ನು ತೋಡಿಕೊಂಡವು.

ಹೇಳಿ ಕೇಳಿ ಈಗ ದೇಶದಲ್ಲಿ ಚುನಾಚಣಾ ಕಾಲ. ಜನಮಾನಸದ ನೆನಪು ಬಹಳ ಕಡಿಮೆ ಕಳೆದ ನಾಲ್ಕೂವರೆ ವರ್ಷಗಳ ಸಾಧನೆಗಿಂತ ಈಗಿನ ಪ್ರಸ್ತುತ ಸಾಧನೆಗಳೇ ಮುಖ್ಯವಾಗುತ್ತದೆ. ಇದನ್ನು ಅರಿತ ಆಡಳಿತ ಪಕ್ಷದ ಕೆಲ ಹರುಕು ಬಾಯಿ ನಾಯಕರು ಇಂತಹ ಸಾಧನೆ ನಮಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿ ಕೊಡಬಹುದೆಂದು ಹೇಳಿದ್ದೇ ತಡ, ವಿರೋಧ ಪಕ್ಷಗಳು ತಮ್ಮ ಕುತ್ಸುಕ ಬುದ್ಧಿ ತೋರಿಸತೊಡಗಿದವು. ಇನ್ನು ಅಲ್ಲಿಯವರೆಗೂ ಅಂಡು ಸುಟ್ಟ ಬೆಕ್ಕಿನಂತಾಗಿ ಅತ್ತಿಂದಿತ್ತ ಅಲೆಯುತ್ತಿದ್ದ ಬಹುತೇಕ ವಿರೋಧ ಪಕ್ಷಗಳು ಒಮ್ಮಿಂದ್ದೊಮ್ಮೆಲೆ ಮುಗಿಬಿದ್ದವು. ಅದೆಲ್ಲೋ ದೂರದ ಪಶ್ವಿಮ ಬಂಗಾಳದಲ್ಲಿ ಕುಳಿತು ಬಾಂಗ್ಲಾದೇಶದವರಿಗೆ ಮಣೆ ಹಾಕುತ್ತಿರುವ ನಾಯಕಿ ಒಮ್ಮಿಂದೊಮ್ಮೆಲೆ ಸತ್ತವರ ಲೆಕ್ಕವನ್ನು ಕೇಳಿದರೆ, ತಾನು ಮತ್ತು ತನ್ನ ಪಕ್ಷದವರು ಮಾತ್ರವೇ ಸಾಚ ಮತ್ತು ಬುದ್ಧಿವಂತರು ಎಂದು ಕೊಂಡಿರುವ ದೆಹಲಿಯ ಮುಖ್ಯಮಂತ್ರಿ ಮತ್ತೊಮ್ಮೆ ಧಾಳಿಯ ಬಗ್ಗೆ ಅಪನಂಬಿಕೆ ತೋರಿಸಿ ಸಾಕ್ಷಿ ಪುರಾವೆ ಕೇಳಿದರೆ, ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಸತ್ತವರು ಉಗ್ರರಾಗಿರದೆ ತಮ್ಮ ಬಂಧುಬಾಂಧವರೇನೂ ಎನ್ನುವಂತೆ ವಾಯುಧಾಳಿಯನ್ನು ಸಮರ್ಥಿಸುವರೆಲ್ಲಾ ಕೋಮುವಾದಿಗಳು ಎಂದು ಜರಿದು ಸೇನೆಯ ಶೌರ್ಯವನ್ನು ಕೊಂಡಾಡಿದರೆ ಒಂದು ಧರ್ಮದವರಿಗೆ ನೋವುಂಟಾಗಿ ರಾಜ್ಯದಲ್ಲಿ ಕೋಮು ಸೌಹಾರ್ಧಕ್ಕೆ ಧಕ್ಕೆ ಬರುತ್ತದೆ ಎಂದು ಗೀಳಿಟ್ಟರು. ಇನ್ನೂ ರಾಜಕಾರಣ ಮತ್ತು ಚಿತ್ರರಂಗದಲ್ಲಿಯೂ ಸವಕಲಾಗಿ ಚಲಾವಣೆಯಲ್ಲಿ ಇಲ್ಲದ ನಾಣ್ಯವಾಗಿರುವ ನಟಿ ಮಣಿ ವಾಯುಧಾಳಿಯಿಂದ ಉಗ್ರರು ಹತರಾಗಿದ್ದಾರೆ ಎನ್ನುವುದನ್ನು ನಂಬಲಾಗದು ಎಂದು ಉರಿಯುತ್ತಿದ್ದ ಬೆಂಕಿಯನ್ನು ನಂದಿಸುವುದಕ್ಕಿಂತ ತುಪ್ಪಾ ಹಾಕಿ ಉರಿಯನ್ನು ಜೋರು ಮಾಡಿದಳು.

ಇನ್ನೂ ಮಾಧ್ಯಮದವರ ಕುರಿತು ಮಾತನಾಡುವುದಕ್ಕಿಂತ ಸುಮ್ಮನಿರುವುದೇ ಲೇಸು. ಯಾವ ಸಂಧರ್ಭದಲ್ಲಿ ಹೇಗೆ ಮಾತನಾಡಬೇಕು ಎಂಬುದರ ಪರಿವೇ ಇಲ್ಲದೇ, ಕೇವಲ ಟಿಆರ್ಪಿಯ ಹಪಾಹಪಿಯಲ್ಲಿ ಅನ್ಯಗತ್ಯವಾಗಿ ಇಲ್ಲ ಸಲ್ಲದ ಅನಾವಶ್ಯಕ ಚರ್ಚೆಗಳನ್ನು ನಡೆಸುತ್ತಾ, ದೇಶಾದ್ಯಂತ ಜನರನ್ನು ಭಯಭೀತರನ್ನಾಗಿ ಮಾಡಿದರು ಎಂದರೆ ಅತಿಶಯೋಕ್ತಿಯೇನಲ್ಲ. ಮೊನ್ನೆ ಅಭಿನಂದನ್ ಅವರನ್ನು ಪಾಕ್ ಸೇನೆ ಪ್ರಶ್ನಿಸುತ್ತಿದ್ದಾಗ ಆತ, ಸಾರಿ ಸರ್, ನನ್ನ ವೃತ್ತಿ ಧರ್ಮದ ಅನುಗುಣವಾಗಿ ನಾನು ಏನನ್ನೂ ಹೇಳಲಾಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಿದ್ದರೆ, ಅವರು ಕೇಳಿದ ಪ್ರಶ್ತೆಗಳಿಗೆಲ್ಲಾ ನಮ್ಮ ಮಾಧ್ಯಮದವರೇ ಉತ್ತರಿಸಿ ಪಾಪೀಸ್ಥಾನಕ್ಕೆ ಪರೋಕ್ಷವಾಗಿ ಸಹಾಯ ಮಾಡಿದ್ದು ನಿಜಕ್ಕೂ ಖಂಡನೀಯ. ಅದೇ ರೀತಿ 2008 ಸೆಪ್ಟೆಂಬರ್ 11ರ ತಾಜ್ ಹೋಟೆಲ್ ಧಾಳಿಯ ಸಮಯದಲ್ಲಿಯೂ ಉಗ್ರರಿಗೆ ಹೊರ ಪ್ರಪಂಚದಲ್ಲಿ ಎನೇನಾಗುತ್ತಿದೆ ಎಂಬುದರ ವರದಿಯನ್ನು ಒದಗಿಸಿದ್ದೇ ನಮ್ಮೀ ಮಾಧ್ಯಮಗಳು ಎನ್ನುವುದು ವಿಷಾಧನೀಯ.

ಅದೇ ರೀತಿ ಮೊನ್ನೆ ವ್ಯಾಟ್ಯಾಪ್ನಲ್ಲಿ ಬಂದಿದ್ದ ಉಗ್ರರ ನಾಯಕನೊಬ್ಬನ ವಿಡಿಯೋದಲ್ಲಿ ಆತ ಮೋದಿಯವರನ್ನು ವಿರೋಧಿಸುವ ಭರದಲ್ಲಿ ತಮಗೆ ಭಾರತದಲ್ಲಿ ತಮ್ಮ ಸಂಘಟನೆಗೆ ಸಹಾಯ ಮಾಡಿದ ಭರ್ಕಾ ದತ್ ಮತ್ತು ಕಾಂಗ್ರೇಸ್ ನಾಯಕರರನ್ನು ಮನಸೋ ಇಚ್ಚೆ ಹೊಗಳಿರುವುದು ನಿಜಕ್ಕೂ ಆಶ್ಚರ್ಯ ಮತ್ತು ಖಂಡನೀಯ. ಮೋದಿಯವರು ಅಧಿಕಾರಕ್ಕೇರಿದ ಕೂಡಲೇ ಕಾಂಗ್ರೇಸ್ ಹಿರಿಯ ನಾಯಕ ಮಣಿಶಂಕರ್ ಐಯ್ಯರ್ ಪಾಪೀಸ್ಥಾನಕ್ಕೆ ಹೋಗಿ ಮೋದಿಯವರನ್ನು ಸೋಲಿಸಲು ಅವರ ಸಹಾಯ ಕೋರಿದರೆ, ಪಾಪಿಸ್ಥಾನದ ನೂತನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅಧಿಕಾರಗ್ರಹಣ ಸಂಧರ್ಭಕ್ಕೆ ಕಾಂಗ್ರೇಸ್ ಪಕ್ಷದ ಪ್ರತಿನಿಧಿಯಾಗಿ ಮಾಜಿ ಕ್ರಿಕೆಟ್ ಆಟಗಾರ ಮತ್ತು ಹಾಲಿ ಪಂಜಾಬ್ ಕಾಂಗ್ರೇಸ್ ಸರ್ಕಾರದ ಸಚಿವ ನವಜೋತ್ ಸಿಂಗ್ ಸಿದ್ಧು ಖುದ್ದಾಗಿ ಹಾಜರಿದ್ದು, ಐಸಿಸ್ ಸೇನಾ ದಂಡಾನಾಯಕನ್ನು ಅಪ್ಪಿ ಮುದ್ಡಾಡಿ ವಾಚಾಮಗೋಚರವಾಗಿ ಹೊಗಳಿದ್ದು ಮತ್ತು ಈ ವಾಯುಧಾಳಿಯನ್ನು ವಿರೋಧಿಸುತ್ತಾ ಅದಕ್ಕೆ ಸಾಕ್ಷಿ ಪುರಾವೆಗಳನ್ನು ಕೇಳಿದ್ದಲ್ಲದೆ, ಧಾಳಿಗೆ ಪ್ರತಿಧಾಳಿ ಮಾಡುವ ಬದಲು ಶಾಂತಿ ಮಾತುಕಥೆ ನಡೆಸಿ ಬಗೆ ಹರಿಸಿಕೊಳ್ಳಬೇಕು ಎಂದು ಪಾಪೀಸ್ಥಾನದ ಪರ ವಕಾಲತ್ತನ್ನು ವಹಿಸಿರುವುದು ನಿಜಕ್ಕೂ ಶೋಚನೀಯ.

ಪಾಪೀಸ್ಥಾನದ ಪ್ರತೀಬಾರಿಯ ಧಾಳಿಯ ಸಮಯದಲ್ಲಿ ಆ ಕ್ಷಣಕ್ಕೆ ಒಂದೆರಡು ಮಾತನಾಡಿ ಸುಮ್ಮನಾಗುತ್ತಿದ್ದ ನಮ್ಮ ದೇಶದ ನಾಯಕರ ಸ್ಥಾನದಲ್ಲಿ 56 ಇಂಚಿನ ಎದೆಗಾರಿಕೆಯ ಪ್ರಧಾನಿ ಆದ ಮೇಲಂತೂ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಸ್ಪಷ್ಟ ನಿಲುವಿನೊಂದಿಗೆ ಪುಲ್ವಾಮ ಧಾಳಿಯಾದ ನಂತರ ಅತ್ಯುತ್ತಮ ರಾಜತಂತ್ರಿಕ ನಡೆಯಿಂದ ವಿಶ್ವದ ನಾಯಕರನ್ನೆಲ್ಲಾ ತಮ್ಮೆಡೆಗೆ ಒಗ್ಗೂಡಿಸಿಕೊಂಡು, ಮೂರೂ ಸೇನಾ ನಾಯಕರ ಸಹಮತದೊಂದಿಗೆ ಯಾವುದೇ ರೀತಿಯ ಸುಳಿವನ್ನೂ ನೀಡದೇ ಏಕಾ ಏಕಿಯಾಗಿ ಪ್ರತಿಧಾಳಿ ನಡೆಸಿದ್ದದ್ದು ಪಾಪಿಸ್ಥಾನದ ಉಗ್ರಗಾಮಿಗಳ ನೆಲೆ ಮತ್ತು ಉಗ್ರಗಾಮಿಗಳನ್ನು ನಾಶ ಪಡಿಸುವದಷ್ಟೇ ಅಲ್ಲದೇ, ಅನಾವಶ್ಯಕವಾಗಿ ನಮ್ಮ ತಂಟೆಗೆ ಬಂದರೆ ಗಡಿಯನ್ನೂ ದಾಟಿ ಧಾಳಿ ಮಾಡುವ ಛಾತಿ ನಮಗಿದೆ ಎನ್ನುವುದನ್ನು ಪಾಪೀಸ್ಥಾನಕ್ಕೂ ಮತ್ತು ಇಡೀ ಜಗತ್ತಿಗೆ ತೋರಿಸುವುದಷ್ಟೇ ಆಗಿತ್ತು. ಕೇವಲ 21 ನಿಮಿಷಗಳ ವಾಯುಧಾಳಿಯಲ್ಲಿ ಕರಾರುವಾಕ್ಕಾಗಿ ಮೂರು ಉಗ್ರರ ನೆಲೆಗಳ ಮೇಲೆ ಧಾಳಿ ಮಾಡುವುದಷ್ಟೇ ನಮ್ಮ ಧ್ಯೇಯವಾಗಿತ್ತೇ ಹೊರತು ಸತ್ತವರು ಎಷ್ಟು ಎಂದು ಎಣಿಸುವುದಾಗಿರಲಿಲ್ಲ ಎಂಬುದನ್ನು ಈ ಹಿತಶತ್ರುಗಳಿಗೆ ಅರಿವು ಮೂಡಿಸಬೇಕಾಗಿದೆ.

ಒಟ್ಟಿನಲ್ಲಿ ದೇಶದ ಭಧ್ರತೆಗಾಗಿ ಭಾರತ ದೇಶದ ಸರ್ಕಾರ ತೆಗೆದುಕೊಂಡ ಇಂತಹ ದಿಟ್ಟ ನಿರ್ಧಾರಗಳಿಗೆ ಧರ್ಮ, ಜಾತಿ ಮತ್ತು ಓಟ್ ಬ್ಯಾಂಕ್ ರಾಜಕಾರಣವನ್ನು ಬೆರೆಸದೆ ಇಡೀ ದೇಶದ ಜನರೇ ಒಂದಾಗಿ ಪರಿಸ್ಥಿತಿ ಎದುರಿಸ ಬೇಕಾದ ಸಂಧರ್ಭದಲ್ಲಿ ನಮ್ಮವರೇ ಈ ರೀತಿಯ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ನಮ್ಮ ಸೈನಿಕರ ಪರಿಶ್ರಮವನ್ನು ಪ್ರಶ್ನಿಸುತ್ತಾ ಅವರ ನೈತಿಯತೆಯನ್ನು ಅಧೋಮುಖಗೊಳಿಸುವುದು ಎಷ್ಟು ಸರಿ? ದೇಶದ ನಾಯಕರು, ದೇಶದಲ್ಲಿ ಪ್ರಭಾವಿ ವ್ಯಕ್ತಿಗಳು, ಪ್ರಗತಿ ಪರರು, ದೇಶದ ಹಿತಚಿಂತಕರು, ದೇಶದ ಬುದ್ಧಿ ಜೀವಿಗಳು ಎಂದು ಬಿಂಬಿಸಿಕೊಳ್ಳುವವರೇ ಈ ರೀತಿಯಾಗಿ ಅಸಂಬದ್ಧ ಹೇಳಿಕೆಗಳನ್ನು ಕೊಡುವುದರ ಮೂಲಕ ಮತ್ತು ದೇಶದ ಭದ್ರತೆಯನ್ನು ಬದಿಗೊಟ್ಟು ಅನಾವಶ್ಯಕ ದೃಶ್ಯಗಳನ್ನು ತೋರಿಸಿ ಮತ್ತು ಚರ್ಚೆಗಳನ್ನು ನಡೆಸಿ ಶತ್ರು ರಾಷ್ಟ್ರಗಳಿಗೆ ವಿಷಯವನ್ನು ಸೋರುವುದನ್ನು ತಡೆಗಟ್ಟಲೇ ಬೇಕಾಗಿದೆ.

ನಮ್ಮ ದೇಶದ ಸೈನಿಕರು ಸರ್ಕಾರದ ಆಜ್ಞೆಯ ಮೇರೆಯಂತೆ ಕೆಲವೇ ನಿಮಿಷಗಳಲ್ಲಿ ಶತ್ರುರಾಷ್ಟ್ರಗಳ ಮೇಲೆ ಧಾಳಿ ನಡೆಸಿ ಭಯೋತ್ಪಾದರಕರ ಹುಟ್ಟನ್ನು ಅಡಗಿಸ ಬಲ್ಲರು. ಆದರೆ ನಮ್ಮ ದೇಶದೊಳಗೇ ನಮ್ಮ ನಿಮ್ಮ ನಡುವೆಯೇ ಇದ್ದು ನಮಗೇ ಅರಿವಿಲ್ಲದಂತೆಯೇ ಪ್ರತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿಯೋ ಶತ್ರುಗಳಿಗೆ ನೆರವಾಗುವವರನ್ನು ಕಂಡು ಹಿಡಿಯಲು ಯಾರಿಗೇ ಆಗಲೀ ಅಸಾಧ್ಯ. ಹಾಗಾಗಿ ಸುಮ್ಮನೆ ತಮ್ಮ ಕೈಗಳಲ್ಲಿ ಏನೂ ಮಾಡಲಾಗದಿದ್ದರೂ ಕನಿಷ್ಠ ಪಕ್ಷ ಮೌನವೇ ಅಭರಣ ಎನ್ನುವ ರೀತಿಯಲ್ಲಿ ವರ್ತಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಅಲ್ಲವೇ? ಬಿಜೆಪಿ ಅಥವಾ ಮೋದಿಯವರ ಮೇಲೆ ವಯಕ್ತಿಕ ದ್ವೇಷವಿದ್ದರೆ ಅಥವಾ ಅವರ ಕಾರ್ಯ ವೈಖರಿ ಇಷ್ಟವಿಲ್ಲದಿದ್ದರೆ, ಖಂಡಿತವಾಗಿ ಅವರನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಎಲ್ಲಾ ಅವಕಾಶಗಳೂ ನಮ್ಮ ಮುಂದಿಲ್ಲವೇ?

ಮಾತು ಮನೆ ಕೆಡೆಸಿತು ತೂತು ಒಲೆ ಕೆಡೆಸಿತು ಎನ್ನುವ ಗಾದೆಯಂತೆ, ದೇಶವನ್ನು ಹಾಳು ಮಾಡಲು ಶತ್ರುಗಳು ಹೊರಗಿನಿಂದಲೇ ಬರಬೇಕೆಂದಿಲ್ಲ. ಒಳಗಿರುವ ಕೆಲ ಹಿತ ಶತ್ರುಗಳ ಇಂತಹ ಅನಾದರ ಮಾತುಗಳೇ ಸಾಕಲ್ಲವೇ? ದೇಶವಿದ್ದಲ್ಲಿ ಮಾತ್ರವೇ ಇವರಿಗೆ ಅಧಿಕಾರ. ಇನ್ನು ದೇಶವೇ ಶತ್ರುಗಳ ಧಾಳಿಯಿಂದ ನಾಶವಾದಲ್ಲಿ ಇವರು ಮಾಡುವುದಾದರೂ ಏನು ಎನ್ನುವ ಪರಿಜ್ಞಾನವಾದರೂ ಬೇಡವೇ? ಮೌನತೋ ಕಲಹಂ ನಾಸ್ತಿ ಎನ್ನುವ ಹಾಗೆ ಕೆಲವು ಬಾರಿ ಮೌನವೇ ಪರಿಣಾಮಕಾರಿ ಅಸ್ತ್ರ ಅದರಿಂದ ಯುದ್ಧವೇ ಇರುವುದಿಲ್ಲ ಎಂಬುದನ್ನು ಇವರಿಗೆ ಹೇಳುವ ಜವಾಬ್ಧಾರಿ ನಮ್ಮದೇ ಅಲ್ಲವೇ? ಆರಂಭದಲ್ಲಿ ಓದಿದ ಪ್ರಾಣಿಗಳು ಒಗ್ಗಟ್ಟಿನಿಂದಾಗಿ ತಮ್ಮ ಶತ್ರುಗಳನ್ನು ಹತ್ತಿಕ್ಕಿದ ಕಥೆಯಂತೆ ನಾವೆಲ್ಲರೂ ಒಗ್ಗೂಡಿದರೆ ನಮ್ಮ ಮೇಲೆ ಧಾಳಿ ಮಾಡುವ ದುಸ್ಸಾಹವನ್ನು ಯಾರೂ ಮಾಡಲಾರರು ಅಲ್ಲವೇ?

ಏನಂತೀರೀ?

2 thoughts on “ಮೌನವೇ ಪರಿಣಾಮಕಾರಿ ಅಸ್ತ್ರ

Leave a comment