ಕಳೆದ ಸೋಮವಾರ News 9 ಆಂಗ್ಲ ಛಾನೆಲ್ಲಿನ ದೀಪಾವಳಿಯಲ್ಲಿ ಪಟಾಕಿಗಳಿಂದ ಪರಿಸರಕ್ಕಾಗುವ ಪರಿಣಾಮಗಳ ಬಗ್ಗೆ ನಡೆದ ವಿಶೇಷ ನೇರ ಪ್ರಸಾರದ ಚರ್ಚೆಯಲ್ಲಿ ನಾನು ಪಾಲ್ಗೊಂಡಿದ್ದ ಸಂಧರ್ಭದಲ್ಲಿ ವಾರ್ತಾವಾಚಕಿ ಪದೇ ಪದೇ Green Crackers ಬಗ್ಗೆ ಏನಾದರೂ ಯೋಚಿಸಬಹುದೇ ಎಂದು ಕೇಳುತ್ತಿದ್ದಾಗ ನನ್ನಲ್ಲೂ ಕುತೂಹಲ ಮೂಡಿತ್ತು. ಹೇಳಿ ಕೇಳಿ ದೀಪಾವಳಿ ಬೆಳಗಿನ ಹಬ್ಬ. ಇಲ್ಲಿ ಶಬ್ಧ ಮತ್ತು ಪ್ರಕಾಶಮಾನಗಳಿಗೇ ಹೆಚ್ಚಿನ ಪ್ರಾಶಸ್ತ್ಯ. ಅಂತಹ ಶಬ್ಧ ಮತ್ತು ಬೆಳಕನ್ನು ಪರಿಸರ ಸ್ನೇಹಿಯಾಗಿ ಹೇಗೆ ಮಾಡಬಹುದು ಎಂದು ಯೋಚಿಸುತ್ತಿರುವಾಗ ನೆನ್ನೆ ನಡೆದ ಬಂಧುಗಳ ಸಮಾರಂಭವೊಂದರಲ್ಲಿ ನಮ್ಮ ಚಿಕ್ಕಪಂದಿರೊಂದಿಗೆ ಮಾತು ಮಾತಿಗೆ ಇದೇ ವಿಷಯ ಬಂದಾಗ ಅವರಿಬ್ಬರೂ ಹೇಳಿದ ಸಂಗತಿ ನಿಜಕ್ಕೂ ರೋಚಕವಾಗಿತ್ತು.
ನಮ್ಮ ಊರು ಬಾಳಗಂಚಿ ಅಂದು ಹೇಳಿ ಕೇಳಿ ಕುಗ್ರಾಮವಾಗಿತ್ತು. ಪ್ತತಿಯಂದು ಪದಾರ್ಥಗಳಿಗೂ ಹತ್ತಿರದ ಕದಬಳ್ಳಿ ಇಲ್ಲವೇ ಹಿರೀಸಾವೆ ಸಂತೆಯನ್ನೇ ಆಶ್ರಯ ಬೇಕಾಗಿತ್ತು. ಹಾಸನದ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ದೀಪಾವಳಿಗಿಂತಲೂ ಗಣೇಶ ಹಬ್ಬದಲ್ಲಿಯೇ ಪಟಾಕಿ ಹೊಡೆಯುವ ಸಂಪ್ರದಾಯ. ಹಾಗೆ ಗಣೇಶ ಇಲ್ಲವೇ ದೀಪಾವಳಿ ಹಬ್ಬಗಳು ಬಂದಿತೆಂದರೆ ಸಂತೆಗಳಲ್ಲಿ ನುಗ್ಗೇಹಳ್ಳಿಯ ಸಾಹೇಬರು ಮಾರುತ್ತಿದ್ದ ಪಟಾಕಿಗಳದ್ದೇ ಕಾರು ಬಾರು. ತಲೆ ತಲಾಂತದಿಂದಲೂ ನುಗ್ಗೇಹಳ್ಳಿಯ ಒಂದು ಮುಸ್ಲಿಂ ಕುಟುಂಬ ತಮ್ಮ ಮನೆಯಲ್ಲಿಯೇ ಪಟಾಕಿ ತಯಾರಿಸಿ ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಮಾರಾಟ ಮಾಡುತ್ತಾರೆ. ಇಂದಿಗೂ ನಮ್ಮ ಊರಿನ ಸುತ್ತ ಮುತ್ತಲಿನ ಪ್ರತಿ ವರ್ಷದ ಜಾತ್ರೆಗಳಲ್ಲಿನ ಬಾಣ ಬಿರುಸುಗಳು ನುಗ್ಗೇಹಳ್ಳಿಯ ಸಾಹೇಬರ ಮನೆಯದ್ದೇ ಆಗಿರುತ್ತದೆ. ಹೀಗೆ ನೂರಾರು ವರ್ಷಗಳಿಂದ ಸೌಹಾರ್ಧವನ್ನು ಕಾಪಾಡಿ ಕೊಂಡು ಬಂದಿದ್ದಾರೆ ನಮ್ಮ ಹಿರೀಕರು. ಪಟಾಕಿಯೇನೂ ಸಂತೆಯಲ್ಲಿ ಸಿಗುತ್ತಿತ್ತು. ಆದರೆ ಕೊಳ್ಳಲು ಕಾಸಿದ್ದರೆ ತಾನೆ. ಅದಕ್ಕಾಗಿಯೇ ಅವರು ಕಂಡು ಕೊಂಡ ಉಪಾಯವೇ ಗಂಧದ ಕಾಯಿಯ ಪೆಟ್ಲು ಕಾಯಿ.
ಚಿತ್ರದಲ್ಲಿ ತೋರಿಸಿರುವಹಾಗೆ ಒಂದು ಗಟ್ಟಿಯಾದ ಬಿದುರಿನ ಕೊಳವೆ. ಅದರೊಳಗೆ ಸುಲಭವಾಗಿ ಹೋಗುವಂತಹ ಮತ್ತೊಂದು ಬಿದುರಿನ ತುಂಡು ಅದಕ್ಕೆ ಒಂದು ಉದ್ದದ ಹಿಡಿ. ಹಿಡಿಯನ್ನು ಕೊಳವಿಯ ತುದಿಯವರೆಗೂ ಎಳೆದು ಆ ಕೊಳವಿಯೊಳಗೆ ಗಂಧದ ಮರದ ಕಾಯಿಗಳನ್ನು ತುಂಬಿ ಜೋರಾಗಿ ಹಿಡಿಯನ್ನು ಅದುಮಿದರೆ ಕೊಳವಿಯಲ್ಲಾಗುವ ಒತ್ತಡದಿಂದ ಮುಂದಿದ್ದ ಗಂಧದ ಕಾಯಿ ಚಟ ಚಟ ಎಂದು ಶಭ್ಧ ಮಾಡುತ್ತಾ ಸುಮಾರು ದೂರ ಹಾರಿ ಬೀಳುತ್ತದೆ. ಅದನ್ನು ವರ್ಣಿಸುವುದಕ್ಕಿಂತ ಅನುಭವಿಸಿದರೇ ಚೆಂದ. ಅದುವೇ ಅವರಿಗೆ ಗನ್. ಗಣೇಶ ಮತ್ತು ದೀಪಾವಳಿ ಹಬ್ಬಗಳು ಬರುವ ಒಂದೆರಡು ದಿನಗಳ ಮುಂಚೆಯೇ ಊರಿನ ಹೊರಭಾಗದ ಜಮೀನಿನಲ್ಲಿರುತ್ತಿದ್ದ ಗಂಧದ ಮರಗಳ ಬಳಿ ಎಲ್ಲರೂ ಏಳುವ ಮುಂಚೆಯೇ ಹೋಗಿ ಕೆಳಗಿ ಬಿದ್ದ ಗಂಧದ ಕಾಯಿಗಳನ್ನು ಹೆಕ್ಕಿ ತಂದು ಯಾರ ಬಳಿಯಲ್ಲಿ ಹೆಚ್ಚಿನ ಕಾಯಿ ಇರುತ್ತದೆಯೋ ಅವನೇ ಗೆಳೆಯರ ನಡುವೆ ಸ್ವಘೋಷಿತ ನಾಯಕ. ಉಳಿದವರೆಲ್ಲರೂ ಅವನ ಹಿಂಬಾಲಕರು.
ಅದೇ ರೀತೀ ಸವಕಲಾದ ದೊಡ್ಡ ದೊಡ್ಡ ಕಾಸುಗಳಿಗೆ ತೂತು ಮಾಡಿ ಅದಕ್ಕೆ ನೆಟ್ಟು ಬೋಲ್ಟು ಹಾಕಿ ಅದರ ಮಧ್ಯದಲ್ಲಿ ಅಡುಗೆ ಮನೆಯಿಂದಲೋ ಇಲ್ಲವೇ ದೇವರ ಮನೆಯಿಂದ ಕದ್ದು ತಂದಿರುತ್ತಿದ್ದ ಬೆಂಕಿ ಪೊಟ್ಟಣದ ತುದಿಯಲ್ಲಿರುತ್ತಿದ ಮದ್ದನ್ನು ಸಣ್ಣ ಸಣ್ಣ ಕಾಗದಗಳಲ್ಲಿ ಗಟ್ಟಿಯಾಗಿ ಸುತ್ತಿಟ್ಟು, ಗಟ್ಟಿಯಾಗಿ ನೆಟ್ತು ಬೋಲ್ಟನ್ನು ತಿರುವಿ ಕಲ್ಲಿನ ಮೇಲೆ ಜೋರಾಗಿ ಹೊಡೆದಾಗ ಕಾಸಿನ ನಡುವೆಯಿದ್ದ ಬೆಂಕಿ ಪೊಟ್ಟಣದ ಮದ್ದು ಕಲ್ಲಿನೊಡನೆ ಆಗುವ ಘರ್ಷಣೆಯಿಂದ ಜೋರಾಗಿ ಶಬ್ಧ ಮಾಡುತ್ತಿತ್ತು. ಅದುವೇ ಅವರಿಗೆ ಮೋಜನ್ನುಂಟು ಮಾಡುತ್ತಿತ್ತು. ಅದುವೇ ಅವರಿಗೆ ಬಿಜಲಿ ಪಟಾಕಿ.
ಅದರ ಜೊತೆ ಜೊತೆಯಲ್ಲಿಯೇ ಮನೆಯಲ್ಲಿರುತ್ತಿದ್ದ ಕುಟ್ಟಾಣಿ (ಎಲೆ ಅಡಿಕೆ ಕುಟ್ಟುವ ಸಾಧನ) ಒಳಗೆ ಪಶುವೈದ್ಯರ ಬಳಿ ಕಾಡಿ ಬೇಡಿ ತಂದಿರುತ್ತಿದ್ದ ಗಂಧಕವನ್ನು ತಂಬಿ ಅದರೊಳಗೆ ಸಣ್ಣನೆಯ ಹಾರೆ ಕೋಲನ್ನಿಟ್ಟು ಕಲ್ಲಿನ ಮೇಲೆ ಜೋರಾಗಿ ಬಡಿದರೇ ಆಗುತ್ತಿದ್ದ ಭಾರೀ ಶಭ್ದವೇ ಅವರಿಗೆ ಬಾಂಬ್ ರೀತಿ.
ಇನ್ನು ಹಬ್ಬಕ್ಕೂ ಒಂದೆರಡು ವಾರಗಳ ಮುಂಚೆಯೇ ಕಮ್ಮಾರರ (blacksmith) ಮನೆಗಳಿಗೆ ಹೋಗಿ ಅವರ ಕುಲುಮೆಯ ಬಳಿ ಬಿದ್ದಿರುತ್ತಿದ್ದ ಕಬ್ಬಿಣದ ಅದಿರುಗಳನ್ನು ಜೋಪಾನವಾಗಿ ಸಂಗ್ರಹಿಸಿ ಹಬ್ಬದ ರಾತ್ರಿ ಕತ್ತಲಾದ ನಂತರ ಮನೆಯ ಮುಂದೆ ಸೋಗೆ ಗರಿಗಳಿಗೆ ಬೆಂಕಿ ಹಚ್ಚಿ ಆ ಬೆಂಕಿಗೆ ಮೇಲಿನಿಂದ ಸಣ್ಣ ಗೆ ಕಬ್ಬಿಣದ ಅದಿರುಗಳನ್ನು ಹಾಕುತ್ತಿದ್ದರೆ, ಬೆಂಕಿಯ ಸ್ಪರ್ಶಕ್ಕೆ ಕಬ್ಬಿಣದ ಅದಿರುಗಳು ಕರಗಿ ಸುರು ಸುರು ಎಂದು ಶಬ್ಧಮಾಡುತ್ತ ಪ್ರಕಾಶಮಾನವಾಗಿ ಹೊಳೆಯುತ್ತಿದ್ದರೆ ಅದುವೇ ಅವರಿಗೆ ಸುರ್ ಸುರ್ ಬತ್ತಿ ಇಲ್ಲವೇ ಹೂವಿನ ಕುಂಡ.
ಈ ರೀತಿಯಾಗಿ ದುಡ್ಡಿಲ್ಲದೆ ಪರಿಸರ ಸ್ನೇಹಿಯಾಗಿ ಬೆಳಗಿನ ಹಬ್ಬವಾದ ದೀಪಾವಳಿಯನ್ನು ಪ್ರಕಾಶಮಾನವಾಗಿಯೂ ಹಿತಮಿತವಾದ ಶಬ್ದದೊಡನೆ ಆಚರಿಸುತ್ತಿದ್ದರು ನಮ್ಮ ಹಿರಿಯರು. ಇಂದು ತರತಹದ ಬಣ್ಣಗಳಿಗಾಗಿಯೋ, ಇಲ್ಲವೇ ಚಿತ್ರ ವಿಚಿತ್ರ ಶಬ್ಧಗಳಿಗಾಗಿ ನಾನಾ ರೀತಿಯ ರಾಸಾಯನಿಕಗಳನ್ನು ಜೊತೆಗೆ ರಾಶಿ ರಾಶಿ ಕಾಗದಗಳನ್ನು ಬಳೆಸುತ್ತಿರುವುದು ದುರಂತವೇ ಸರಿ. ಇನ್ನೆರಡು ವಾರದಲ್ಲಿಯೇ ಉತ್ತಾನ ದ್ವಾದಸಿ, ತುಳಸೀ ಹಬ್ಬ. ಅಂದರೆ ಮರಿ ದೀಪಾವಳಿ. ಸಾಧ್ಯವಾದಲ್ಲಿ ಮಲೆನಾಡಿನಲ್ಲಿಯೋ, ಕರಾವಳಿ ಭಾಗದಲ್ಲಿಯೋ ಇಲ್ಲವೇ ಉತ್ತರ ಕನ್ನಡ ಭಾಗಗಳಲ್ಲಿ ಇಂದಿಗೂ ಸಿಗುವ ಪೆಟ್ಲು ಕಾಯಿ ಪಟಾಕಿಗಳೊಂದಿಗೆ ಸಂಭ್ರಮದಿಂದ ಮರಿದೀಪಾವಳಿ ಹಬ್ಬವನ್ನು ಆಚರಿಸಲು ಪ್ರಯತ್ನಿಸಬಹುದಲ್ಲವೇ. ನಮಗೆ ಹಿತ ಮಿತವಾಗಿ ಮೋಜು ಕೊಡುವ ಶಬ್ಧವೂ ಆಗುತ್ತದೆ ಸಂಭ್ರಮದಿಂದ ಸಾಂಪ್ರದಾಯಿಕವಾಗಿ ಪರಿಸರ ಸ್ನೇಹಿಯಾಗಿ ಹಬ್ಬವನ್ನೂ ಆಚರಿಸಿದಂತಾಗುತ್ತದೆ.
ಇದೇ ರೀತಿ ಹಲವಾರು ತರಹಗಳಲ್ಲಿ ಪರಿಸರ ಸ್ನೇಹಿಯಾಗಿ ನಿಮ್ಮೆಲ್ಲರ ಊರುಗಳಲ್ಲಿಯೂ ನೀವೆಲ್ಲರೂ ದೀಪಾವಳಿಯನ್ನು ಆಚರಿಸುತ್ತಿರ ಬಹುದು. ದಯವಿಟ್ಟು ಸ್ವಲ್ಪ ಸಮಯ ಮಾಡಿಕೊಂಡು ಅದರ ಬಗ್ಗೆ ಒಂದೆರಡು ಸಾಲಿನ ಲೇಖನ ಬರೆದರೆ ನಿಮ್ಮ ಮನಸ್ಸಿಗೂ ಮುದ ನೀಡುತ್ತದೆ. ನಮ್ಮೆಲ್ಲರಿಗೂ ಮಾಹಿತಿ ದೊರೆತಂತಾಗುತ್ತದೆ ಮತ್ತು ಪರೋಕ್ಷವಾಗಿ ನೀವು ಪರಿಸರವನ್ನೂ ಕಾಪಾಡಿದ ಹಾಗೆ ಆಗುತ್ತದೆ.
ಏನಂತೀರೀ?