Nation First Everything Next

ಒಂದನೊಂದು ಊರಿನ ಪಕ್ಕದಲ್ಲಿ ಒಂದು ದೊಡ್ಡ ಕಾಡು ಇತ್ತು. ಆ ಕಾಡಿನ ಒಂದು ದೊಡ್ಡ ಮರವೊಂದರಲ್ಲಿ ಹಲವಾರು ಪಕ್ಷಿಗಳು ಸುಖವಾಗಿ ವಾಸಮಾಡಿ ಕೊಂಡಿದ್ದವು. ಅಂತಹ ಪಕ್ಷಿಗಳ ಸಂಕುಲಗಳಲ್ಲಿ ಒಂದು ಗಂಡುಬೇರುಂಡ ಪಕ್ಷಿಯೂ ಇತ್ತು. ಎಲ್ಲರಿಗೂ ತಿಳಿದಿರುವಂತೆ ಗಂಡುಬೇರುಂಡ ಪಕ್ಷಿಗೆ ಒಂದೇ ದೇಹ ಎರಡು ತಲೆಗಳು ಇರುತ್ತಿದ್ದವು. ಈಗ ಈ ಪಕ್ಷಿಗಳು ನಶಿಸಿ ಹೋಗಿರುವುದರಿಂದ ಅದರ ಜ್ಣಾಪಕಾರ್ಥವಾಗಿ ನಮ್ಮ ರಾಜ್ಯದ ಅಧಿಕೃತ ಲಾಂಛನದ ಮಧ್ಯಭಾಗದಲ್ಲಿ ಗಂಡುಬೇರುಂಡ ಪಕ್ಷಿಯನ್ನು ಅಳವಡಿಸಿಕೊಂಡಿದ್ದಾರೆ. ಇಂತಹ ಗಂಡುಬೇರುಂಡ ಪಕ್ಷಿಯು ಇತರೇ ಪಕ್ಷಿಗಳಂತೆ ಕಾಡಿನಲ್ಲಿದ್ದ ಹಲವಾರು ಹಣ್ಣು ಹಂಪಲುಗಳ ಮರದಿಂದ ಹಣ್ಣುಗಳನ್ನು ತಿನ್ನುತ್ತಾ ಹತ್ತಿರದಲ್ಲೇ ಇದ್ದ ನೀರಿನ ಝರಿಯಲ್ಲಿ ನೀರು ಕುಡಿಯುತ್ತಾ ಸುಖಃವಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದವು.

ಎರಡು ತಲೆ ಇದ್ದ ಮೇಲೆ ಎರಡು ಮೆದಳುಗಳು ಇರುವ ಕಾರಣ ಎರಡೂ ವಿಭಿನ್ನ ರೀತಿಯಲ್ಲಿ ಅಲೋಚಿಸುತ್ತಿದ್ದವು ಮತ್ತು ಅದರಂತೆ ಅವುಗಳ ವ್ಯವಹಾರ ಮತ್ತು ಸಂಭಾಷಣೆ ನಡೆದುಕೊಂಡು ಹೋಗುತ್ತಿದ್ದವು. ಒಂದು ತಲೆ ಅತ್ಯಂತ ಮೃದು ಸ್ವಭಾವದ್ದಾಗಿದ್ದು. ಸದಾ ಧನಾತ್ಮಕವಾಗಿ ಚಿಂತಿಸುತ್ತಾ , ಇತರೇ ಎಲ್ಲಾ ಪ್ರಾಣಿ ಪಕ್ಷಿಗಳೊಡನೆ ಉತ್ತಮವಾಗಿ ಸಂಭಾಷಣೆ ನಡೆಸುತ್ತ ಎಲ್ಲರೊಡನೆ ಸ್ನೇಹ ಭಾವದಿಂದ ನೋಡುತ್ತಾ ಸದಾ ಚಟುವಟಿಕೆಯಿಂದ ಇರುತ್ತಿದ್ದ ಕಾರಣ ಎಲ್ಲ ಪ್ರಾಣಿ ಪಕ್ಷಿಗಳು ಅದನ್ನು ಬಹಳವಾಗಿ ಇಷ್ಟ ಪಡುತ್ತಾ ಅದರೊಂದಿಗೆ ಸ್ನೇಹದಿಂದ ಇರಲು ಬಯಸುತ್ತಿದ್ದವು. ಮತ್ತೊಂದು ತಲೆ ಇದಕ್ಕೆ ತದ್ವಿರುಧ್ಧವಾಗಿತ್ತು. ಸದಾ ಸಿಡುಕು ಮೊರೆ ಹಾಕಿಕೊಂಡು ಸದಾಕಾಲವೂ ಎಲ್ಲರನ್ನೂ ದ್ವೇಷಿಸುತ್ತಾ ಅಸಂಬಧ್ಧವಾಗಿ ಸಂಭಾಷಿಸುತ್ತಿದ್ದ ಕಾರಣ ಯಾವ ಪಶು ಪಕ್ಷಿಗಳೂ ಅದರೊಡನೆ ಸ್ನೇಹದಿಂದ ಇರಲು ಹಿಂಜರಿಯುತ್ತಿದ್ದವು. ಎಲ್ಲಾ ಪ್ರಾಣಿ ಪಕ್ಷ್ತಿಗಳು ಸದಾ ಕಾಲ ಸೌಮ್ಯದೊಂದಿಗೆ ಪ್ರೀತಿಯಿಂದ ಮಾತನಾಡುತ್ತಾ ಇದ್ದಂತಹ ಸೌಮ್ಯ ತಲೆಯ ಪಕ್ಷಿಯೊಂದಿಗೆ ಸ್ನೇಹಪೂರ್ವವಾಗಿದ್ದು ಅದಕ್ಕೆ ಬಗೆ ಬಗೆಯ ಹಣ್ಣು ಹಂಪಲುಗಳನ್ನು ತಂದು ಕೊಡುತ್ತಿದ್ದವು. ಸೌಮ್ಯ ಪಕ್ಷಿ ಏನೇ ತಿಂದರೂ ಸಿಡುಕು ಮುಖದ ಪಕ್ಷಿಯ ಹೊಟ್ಟೆ ತುಂಬುತ್ತಿತ್ತಾದರೂ ತನ್ನ ನಾಲಿಗೆ ಬರವನ್ನು ತಣಿಯಲಿಲ್ಲವಲ್ಲಾ ಎಂದು ಮನಸ್ಸಿನಲ್ಲೇ ಮರುಗುತ್ತಿತ್ತು ಮತ್ತು ಸೌಮ್ಯ ಮುಖದ ಮೇಲೆ ಸದಾ ದ್ವೇಷ ಸಾಧಿಸುತ್ತಿತ್ತು.

ಆದೊಂದು ದಿನ ಸಮೀಪದ ಮರದ ತುದಿಯಲ್ಲಿದ್ದ ಒಂದು ಚೆನ್ನಾಗಿ ಮಾಗಿದ ಹಣ್ಣನ್ನು ಒಂದು ವಿಷ ಪೂರಿತ ಹಾವು ತನ್ನ ವಿಷವನ್ನು ಆ ಹಣ್ಣಿನ ಮೇಲೆ ಕುಕ್ಕಿದ್ದನ್ನು ಸಿಡುಕು ಮುಖದ ಪಕ್ಷಿಯು ಗಮನಿಸಿತು. ಕೂಡಲೇ ಸೌಮ್ಯ ಮುಖದ ಪಕ್ಷಿಯ ಮೇಲಿನ ದ್ವೇಷವನ್ನು ತೀರಿಸುವ ಸುಸಂದರ್ಭ ಸಿಕ್ಕಿದೆ ಎಂದು ಮನದಲ್ಲಿಯೇ ಹಿರಿ ಹಿರಿ ಹಿಗ್ಗಿ , ಹೇ ನೋಡಲ್ಲಿ ಆ ಹಣ್ನು ಎಷ್ಟು ಚೆನ್ನಾಗಿದೆ ಎಂದು ಸೌಮ್ಯ ಮುಖದ ಪಕ್ಷಿಗೆ ತೋರಿಸಿ ಆ ಹಣ್ಣನ್ನು ತಿಂದರೆ ಹೊಟ್ಟೆ ತಂಪಾಗಿರುತ್ತದಂತೆ, ಬಾ ಹೋಗಿ ತಿನ್ನೋಣ ಎಂದಿತು. ನೋಡಲು ಬಹಳ ಸುಂದರವಾಗಿದ್ದ ಹಣ್ಣನ್ನು ನೋಡಿದಲ್ಲಿ ಯಾರಿಗಾದರೂ ತಿನ್ನದೇ ಬಿಡುವ ಮನಸ್ಸಾಗುತ್ತಿರಲಿಲ್ಲವಾದ್ದರಿಂದ ಸೌಮ್ಯ ಮುಖದ ಪಕ್ಷಿಯೂ ಅದಕ್ಕೆ ಒಪ್ಪಿ ಅವೆರಡೂ ಹಾರಿ ಹಣ್ಣಿನ ಬಳಿ ಬಂದು ಹಣ್ಣನ್ನು ತಿನ್ನುವ ಮನಸ್ಸಾಯಿತಾದರೂ, ಮೊದಲು ಸಿಡುಕು ಮುಖದ ಪಕ್ಷಿ ನೋಡಿದ್ದರಿಂದ ಅದಕ್ಕೇ ತಿನ್ನಲು ಕೇಳಿಕೊಂಡಿತು. ಆದರೆ ಆ ಹಣ್ಣು ವಿಷಪೂರಿತವಾಗಿದ್ದನ್ನು ಅರಿತಿದ್ದ ಸಿಡುಕು ಮುಖ ನಾನೇ ಮೊದಲು ನೋಡಿದ್ದು ಹೌದಾದರೂ ಅದನ್ನು ತಾನೇ ತಿನ್ನುವುದು ಸರಿಯಾದ ಮಾರ್ಗವಲ್ಲದ ಕಾರಣ ನೀನೇ ಅದನ್ನು ಮೊದಲು ತಿನ್ನು ಎಂದು ಒತ್ತಾಯ ಮಾಡಿತು. ಸಿಡುಕು ಮುಖದ ಒತ್ತಾಯವನ್ನು ಒಲ್ಲದ ಮನಸ್ಸಿನಿಂದಲೇ ಒಪ್ಪಿದ ಸೌಮ್ಯ ಮುಖದ ಪಕ್ಷಿ ಹಣ್ಣಿಗೆ ಬಾಯಿ ಹಾಕಿತು. ಹಣ್ಣು ನಿಜಕ್ಕೂ ರಸವತ್ತಾಗಿದ್ದರಿಂದ ನಿಧಾನವಾಗಿ ಸವಿಯ ತೊಡಗಿದ್ದಾಗ ಅದನ್ನು ಗಮನಿಸುತ್ತಿದ್ದ ಸಿಡುಕು ಮುಖದ ಮೇಲೂ ಮುಗುಳ್ನಗೆ. ಏನನ್ನೂ ಸಾಧಿಸಿದ ಭಾವನೆ ಮೂಡಿತ್ತು.

ವಿಷ ಪೂರಿತ ಹಣ್ಣಿನ ರಸ ನಿಧಾನಕ್ಕೆ ಗಂಟಲುನಿಂದ ಹೊಟ್ಟೆಗೆ ಸೇರುತ್ತಿದ್ದಂತೆ, ಗಂಟಲಿನಲ್ಲಿ ಎನೋ ಒಂದು ರೀತಿಯ ಉರಿ ಮತ್ತು ತಳಮಳ ಶುರುವಾಗಿ ಸೌಮ್ಯ ಪಕ್ಷಿ ಚೀರಾಡ ತೊಡಗಿದಾಗ, ಅದರ ಸಂಕಟವನ್ನು ಗಮನಿಸಿದ ಸಿಡುಕು ಮುಖ. ಆಹಾ!! ಈಗ ಗೊತ್ತಾಯಿತಾ ನನ್ನ ಸಾಮರ್ಥ್ಯ? ನೀನು ಆ ಕಷ್ಟವನ್ನು ಅನುಭವಿಸುತ್ತಿರುವುದನ್ನು ನೋಡಲು ಮಹದಾನಂದವಾಗುತ್ತಿದೆ. ಎಲ್ಲರೊಂದಿಗೂ ನೀನೇ ಮೆರೆಯುತ್ತಿದ್ದೆ. ಯಾರೂ ನನ್ನನ್ನು ಮಾತನಾಡಿಸುತ್ತಿರಲಿಲ್ಲ. ಈಗ ನೀನೇ ಇಲ್ಲವಾದಾಗ ನಾನೇ ಅಧಿಪತಿ ಎಂದು ಕೂಗಿ ಹೇಳಿತು.

ನಿಧಾನವಾಗಿ ವಿಷ ಗಂಟಲು ನಾಳದಿಂದ ಇಳಿದು ಜಠರಕ್ಕೆ ಸೇರುತ್ತಿದ್ದಂತೆ ಹೊಟ್ಟೆಯಲ್ಲಿ ಉರಿ ಶುರುವಾಗಿ ವಿಲವಿಲನೆ ಒದ್ದಾಟ ಶುರುವಾದಾಗ, ಸಿಡುಕು ಮುಖಕ್ಕೂ ಅದರ ಅನುಭವವಾಗ ತೊಡಗಿದಾಗ, ಹೇ ಇದೇನಾಗುತ್ತಿದೆ? ವಿಷಪೂರಿತ ಹಣ್ಣನ್ನು ತಾನು ತಿನ್ನಲಿಲ್ಲವಾದರೂ ತನಗೇಗೆ ಹೀಗಾಗುತ್ತಿದೆ ಎಂದು ಆಲೋಚಿಸಿದಾಗ, ತಲೆಗಳು ಎರಡಾದರೂ ದೇಹವೊಂದೇ ಎಂಬ ಸತ್ಯಸಂಗತಿಯನ್ನು ಮರೆತಿದ್ದರ ನೆನಪಾಯಿತಾದರೂ. ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ವಿಷವೆಲ್ಲಾ ದೇಹದ ಪೂರ್ತಿ ಹರಡಿ ಗಂಡುಬೇರುಂಡ ಪಕ್ಷಿ ವಿಲ ವಿಲನೆ ಕೆಲ ಕಾಲ ಹೊರಳಾಡಿ ಮರಣ ಹೊಂದಿತು.

ದೇಶ ಮತ್ತು ರಾಜ್ಯಗಳಲ್ಲಿ ಧರ್ಮ ಮತ್ತು ಜಾತಿಯ ವೈಮನಸ್ಯದಿಂದಾಗಿ ನಡೆಯುತ್ತಿರುವ ಪರಸ್ಪರ, ಕೆಸರೆಚಾಟ, ಕಚ್ಚಾಟ,‌ ಕೋಮು ದಳ್ಳುರಿಗಳು, ವೈಚಾರಿಕ ಭಿನ್ನತೆಗಳನ್ನು ಆಂತರಿಕವಾಗಿ ಶಮನಗೊಳಿಸದೇ, ಆಡಳಿತಾತ್ಮಕವಾಗಿ ವಿರೋಧ ಪಕ್ಷವಾಗದೇ, ಶತ್ರು ರಾಷ್ಟ್ರಗಳೊಂದಿಗೆ ಕೈ ಜೋಡಿಸಿ ನಮ್ಮ ದೇಶವನ್ನೇ ಹಾಳು ಮಾಡಲು ಮುಂದಾಗಿರುವುದು, ಧರ್ಮ, ಭಾಷೆ, ಬಡವ ಬಲ್ಲಿದ, ದೀನ ದಲಿತ ಎಂಬ ಹೆಸರಿನಲ್ಲಿ ಮತ್ತೊಮ್ಮೆ ದೇಶವನ್ನು ಚೂರು ಚೂರು ಮಾಡಲು ಹೊರಟಿರುವುದನ್ನು ಗಮನಿಸಿ, ಬಹಳ ದುಃಖದಿಂದ ಈ ಎಕ್ಲಾ ವಿಷಯಗಳನ್ನು ಎಲ್ಲರಿಗೂ ಮನದಟ್ಟು ಮಾಡಬೇಕಿನಿಸಿದೆ.

ಒಂದು ಕಾಲದಲ್ಲಿ ಮಧ್ಯ ಪ್ರಾಚ್ಯದವರೆಗೂ ವಿಸ್ತಾರವಾಗಿದ್ದ, ವಿಶ್ವ ಗುರುವಾಗಿದ್ದ ನಮ್ಮ ಹಿಂದೂಸ್ತಾನ ನಂತರ ಒಗ್ಗಟ್ಟಿನ ಕೊರತೆಯಿಂದಾಗಿ, ಹಲವಾರು ಪರಕೀಯರ ಸತತ ಧಾಳಿಯಿಂದಾಗಿ, ಹತ್ತಾರು ಧರ್ಮಗಳು‌ ಇಲ್ಲಿ ಬೇರೂರಲು ಸಾಧ್ಯವಾಯಿತು. ನಮ್ಮೆಲ್ಲರ ಧರ್ಮಗಳು, ಆಚರಣೆಗಳು, ಬಾಷೆಗಳು, ಅಲೋಚನೆಗಳು ಬೇರೆಯದ್ದಾಗಿರಬಹುದು ಆದರೆ ಮೊದಲಿಗೆ ನಾವೆಲ್ಲರೂ ಭಾರತೀಯರು. ದೇಶಕ್ಕಿಂತ ಮಿಗಿಲಾವುದೂ ಇಲ್ಲಾ. ದೇಶದ ರಕ್ಷಣೆಯ ವಿಷಯ ಬಂದಾಗ ನಮ್ಮೆಲ್ಲಾ ವಿರೋಧಾಭಾಸಗಳನ್ನು ಬದಿಗಿಟ್ಟು ಒಂದಾಗಿ, ದೇಶವನ್ನು ಸಧೃಡ ಮತ್ತು ಸಶಕ್ತವಾಗಿಸುವ ಜವಾಬ್ದಾರಿ ನಮ್ಮೆಲರ ಮೇಲಿದೆ. ಹಾಗಾಗಿಯೇ ನಮಗೆಲ್ಲಾ Nation first everything next.

ಆದರೇ ಅದನ್ನು ಬಿಟ್ಟು ಮತ್ತೆ ಜಾತಿ, ಭಾಷೆ ಧರ್ಮದ ಹೆಸರಿನಲ್ಲಿ ನಮ್ಮ‌‌ ನಮ್ಮಲ್ಲಿಯೇ ಕಿತ್ತಾಡುವಂತಾದರೆ, ಅದರ ದುರುಪಯೋಗ ಪಡಿಸಿಕೊಂಡು ದೇಶವನ್ನು ಛಿದ್ರ ಛಿದ್ರಗೊಳಿಸಲು ಹಲವಾರು ವಿಛಿದ್ರಕಾರಿ ಶಕ್ತಿಗಳು ಬಕಪಕ್ಷಿಗಳಂತೆ ಕಾಯುತ್ತಿವೆ ಮತ್ತು ಇಂತಹ ಕುಕೃತ್ಯಕ್ಕೆ ಇಂಬನ್ನೂ ಕೊಡುತ್ತಿದೆ. ಹಾಗಾಗಿ ನಮಗೆಲ್ಲಾ ರಾಷ್ಟ್ರ ಮೊದಲು‌. ಮಿಕ್ಕಿದ್ದೆಲ್ಲಾ ಆನಂತರ ಎನ್ನುವ ಮನಸ್ಥಿತಿಯನ್ನು ಬೆಳೆಸಿಕೊಳ್ಳೋಣ ಮತ್ತು ಸಶಕ್ತ ರಾಷ್ಟ್ರವನ್ನಾಗಿಸೋಣ. ತನ್ಮೂಲಕ ಭಾರತವನ್ನು ಮತ್ತೊಮ್ಮೆ ವಿಶ್ವ ಗುರುವನ್ನಾಗಿಸೋಣ.

ಏನಂತೀರೀ?

ನಿಮ್ಮವನೇ ಉಮಾಸುತ.

One thought on “Nation First Everything Next

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s