ಅದೊಮ್ಮೆ ಗಂಡ ತನ್ನ ಹೆಂಡತಿಗೆ ತಮ್ಮ ವಿವಾಹ ವಾರ್ಷಿಕೋತ್ಸವ ನೆನಪಿನ ಕಾಣಿಕೆಯಾಗಿ ವಿಶೇಷ ಉಡುಗೊರೆಯನ್ನು ನೀಡಲು ಹತ್ತಿರದ ಚಿನ್ನದ ಅಂಗಡಿಗೆ ಕರೆದುಕೊಂಡು ಹೋದರು. ಸೀರೆ, ಚಿನ್ನದ ಅಂಗಡಿಗಳಿಗೆ ಹೆಂಗಸರೊಂದಿಗೆ ಹೋದರೆ ಆಗಬಹುದಾದ ಸಮಯವೇ ಅಂದೂ ಕೂಡಾ ಆಗಿತ್ತು. ಇದು ತೋರಿಸಿ, ಅದು ತೋರಿಸಿ. ಇಷ್ಟೇ ದುಡ್ದಿನಲ್ಲಿ ಮತ್ತೊಂದು ಡಿಝೈನ್ ತೋರಿಸಿ. ಇದು ಸ್ವಲ್ಪ ದೊಡ್ಡದಾಯ್ತು. ಸ್ವಲ್ಪ ಚಿಕ್ಕದಿದ್ದರೆ ನೋಡಿ. ಇಲ್ಲಾ ಇಲ್ಲ ಇದು ತುಂಬಾನೇ ಚಿಕ್ಕದಾಯ್ತು ನನಗೆ ಸರಿ ಹೊಂದದು ಎಂದು ಹೀಗೇ ಹಾಗೆ ತರತರಹದ ಆಭರಣಗಳನ್ನು ನೋಡುತ್ತಾ ಒಂದೆರಡು ಗಂಟೆಗಳು ಕಳೆದದ್ದೇ ಗೊತ್ತಾಗಲಿಲ್ಲ. ರೀ ಇದು ಚೆನ್ನಾಗಿ ಕಾಣುತ್ತಾ ಅಂತ ಆಕೆ ಕೇಳಿದ್ದಕ್ಕೆ. ಹೂಂ. ತುಂಬಾನೇ ಚೆನ್ನಾಗಿದೆ ಅಂದ್ರೆ. ಏ ಹೋಗ್ರೀ ನಿಮಗೆ ಸರಿಯಾಗಿ ಹೇಳೋದಕ್ಕೇ ಬರೋದಿಲ್ಲ. ಇದು ನನಗೆ ಅಷ್ಟೋಂದು ಚೆನ್ನಾಗಿ ಕಾಣೋದಿಲ್ಲ. ಹೋಗ್ಲಿ ಬಿಡಿ ಇದನ್ನು ನೋಡಿ ಹೇಗನ್ನಿಸುತ್ತೇ ಎಂದಾಗ, ಅವನಿಗೆ ಕಳೆದ ಬಾರಿಯ ಅನುಭವದ ನೆನಪಾಗಿ, ಇದು ನಿನಗೆ ಒಂದು ಚೂರೂ ಚೆನ್ನಾಗಿ ಕಾಣಿಸುವುದಿಲ್ಲ ಎಂದಾಗ. ಏನ್ರೀ ನಿಮಗೇ ಕೊಂಚವೂ ಟೇಸ್ಟೇ ಇಲ್ಲ. ಇದು ನನಗೆ ತಂಬಾ ಚೆನ್ನಾಗಿ ಕಾಣುತ್ತದೆ. ನಾನು ಇದನ್ನೇ ತೆಗೆದುಕೊಳ್ತೀನಿ ಅಂದಾಗ ಅದಾಗಲೇ ಒಂದೆರಡು ಗಂಟೆ ಸುಮ್ಮನೆ ಕಳೆದಿದ್ದ ಪತಿರಾಯರ ಹೊಟ್ಟೆಯೂ ಚುರುಗುಟ್ಟುತ್ತಿತ್ತು. ಇನ್ನೇನಾದರೂ ಹೇಳಿದರೆ ಮತ್ತೆ ಕಾಲ ವ್ಯರ್ಥವಾಗುತ್ತದೆ ಎಂದು ಆಲೋಚಿಸಿ ವಿಧಿ ಇಲ್ಲದೆ ಸರಿ ಎಂದು ತಲೆ ಅಲ್ಲಾಡಿಸಿದ ಪತಿರಾಯ, ಅಂಗಡಿಯವನತ್ತ ತಿರುಗಿ ಏನಪ್ಪಾ, ಇದೇ ಇರ್ಲಿ ಬಿಡಿ. ಲೆಖ್ಖ ಮಾಡಿ ದುಡ್ಡು ಎಷ್ಟು ಆಗುತ್ತೇ ಅಂತಾ ಕೇಳ್ತಾನೆ.
ಅದಕ್ಕೆ ಅಂಗಡಿಯಾತ, ಸಾರ್ ಹಿಂದೆ ಎಂದಾದರೂ ನಮ್ಮ ಅಂಗಡಿಗೆ ಬಂದಿದ್ರಾ? ಎಂದು ಕೇಳಿದಕ್ಕೆ, ಇಲ್ಲಪ್ಪ. ಇದೇ ಮೊದಲ ಬಾರಿ ನಿಮ್ಮ ಅಂಗಡಿಗೆ ಬಂದಿರೋದು ಎಂದ ಪತಿರಾಯ. ಸರಿ ಪರ್ವಾಗಿಲ್ಲ ಬಿಡಿ. ಈ ಫಾರ್ಮ್ ಸ್ವಲ್ಪ ಭರ್ತಿಮಾಡಿ. ನಿಮ್ಮ ಹೊಸಾ ಅಕೌಂಟ್ ತರೆದು ಬಿಲ್ ಮಾಡಿಬಿಡ್ತೀನಿ ಎಂದ ಅಂಗಡಿಯವ. ಛೇ ಅದಕ್ಕೇ ಇಂತಾ ದೊಡ್ಡ ಅಂಗಡಿಗಳಿಗೆ ಬರಬಾರದು ಎಂದು ಮನಸ್ಸಿನಲ್ಲೇ ಗೊಣಗುತ್ತಾ ಫಾರ್ಮ್ ಭರ್ತಿ ಮಾಡ್ತಿದ್ದಾಗ. ಸಾರಿ ಸರ್ ನಿಮ್ಮ ಮೊಬೈಲ್ ನಂಬರ್ ಕೊಡ್ತೀರಾ! ಎಂದು ಮೊಬೈಲ್ ನಂಬರರನ್ನು ಕೇಳಿ ತನ್ನ ತನ್ನ ಕಂಪ್ಯೂಟರ್ನಲ್ಲಿ ಎಂಟರ್ ಮಾಡುತ್ತಿದ್ದಂತೆಯೇ, ಇದೇನ್ ಸಾರ್? ನೀವಾಗ್ಲೆ ನಮ್ಮ ಗ್ರಾಹಕರಿದ್ದೀರಿ! ನೀವು ಆ ಫಾರ್ಮ್ ಭರ್ತಿ ಮಾಡೋ ಅವಶ್ಯಕತೆ ಇಲ್ಲಾ. ನಮ್ಮ ಕೆಲಸ ಸುಲಭವಾಯ್ತು. ನೋಡಿ ಇದೇನಾ ನಿಮ್ಮ ಮನೆ ವಿಳಾಸ? ಇದೇನಾ ನಿಮ್ಮ ಹುಟ್ಟಿದ ದಿನ? ಮತ್ತು ಇದೇ ಅಲ್ವಾ ನಿಮ್ಮ ಮದುವೆ ದಿನ ಅಂತ ಎಲ್ಲವನ್ನೂ ಪಟ ಪಟನೇ ಪುರೋಹಿತರಂತೆ ಇಡೀ ಜಾತಕಾನೇ ಹೇಳಿದ್ದನ್ನು ಕೇಳಿ, ಒಮ್ಮಿಂದೊಮ್ಮೆಲೆ ಕರೆಂಟ್ ಶಾಕ್ ಹೊಡೆದ ಕಾಗೆಯಂತಾದ ಪತಿರಾಯ!. ಹೇ ಅದು ಹೇಗಾಗತ್ತೇ?. ನಾನು ಇದೇ ಮೊದಲಬಾರಿಗೆ ನಿಮ್ಮ ಅಂಗಡಿಗೆ ಬರ್ತಾ ಇರೋದು. ನನ್ನ ಡೇಟಾ ನಿಮ್ಮ ಬಳಿ ಇರೋದಕ್ಕೇ ಛಾನ್ಸೇ ಇಲ್ಲ ಎಂದು ದಬಾಯಿಸಿ ತನ್ನ ಮಡದಿಯತ್ತ ಆತಂಕದಿಂದಲೇ ನೋಡಿದ!. ಇವರಿಬ್ಬರ ಸಂಭಾಷಣೆಯನ್ನಾಲಿಸುತ್ತಿದ್ದ ಮಡದಿ ತನ್ನ ಪತಿಯತ್ತ ಅನುಮಾನಾಸ್ಪದವಾಗಿ ನೋಡುತ್ತಾ, ಮನಸ್ಸಿನಲ್ಲಿಯೇ ನನಗೆ ಗೊತ್ತಿಲ್ಲದೆ ಇವರು ಯಾರ ಜೊತೆ ಇಲ್ಲಿಗೆ ಬಂದು ಏನು ಕೊಡಿಸಿರಬಹುದು? ಎಂದು ಯೋಚಿಸುತ್ತಾ , ಅಂಗಡಿಯವರ ಮುಂದೆ ಅದನ್ನೆಲ್ಲಾ ತೋರಿಸದೆ, ಸ್ವಲ್ಪ ಸರಿಯಾಗಿ ನೋಡಾಪ್ಪಾ, ನಮ್ಮ ಮನೆಯವರು ಆ ತರಹದವರಲ್ಲಾ. ಶ್ರೀರಾಮ ಚಂದ್ರನಂತಹವರು ಎಂದು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದಳು.
ಸರಿ ಸಾರ್ ಸ್ವಲ್ಪ ಸಮಯ ಕೊಡಿ ನಾನು ನೋಡಿ ಹೇಳ್ತೀನಿ ಎಂದು ತನ್ನ ಹಿರಿಯವರನ್ನು ವಿಚಾರಿಸಲು ಒಳಗೆ ಹೋದಾಗ, ಅಬ್ಬಾ! ಬೀಸೋ ದೊಣ್ಣೆ ತಪ್ಪಿದರೆ ನೂರು ವರ್ಷ ಆಯಸ್ಸು ಎಂದು ಕೊಂಡು ಪೆಚ್ಚು ಮೊರೆಯಿಂದ ತನ್ನ ಪತ್ನಿಯತ್ತ ನೋಡಿದರೆ ಆಕೆಯ ಮುಖದಲ್ಲಿ ದುರ್ಗಿಯೇ ಕಾಣುತ್ತಿದ್ದಳು. ಲೇ, ಲೇ.. ಅಲ್ವೇ ನನಗೇನು ಗೊತ್ತಿಲ್ಲ ಕಣೇ. ನನ್ನದೇನೂ ತಪ್ಪಿಲ್ಲ. ನಿನ್ನ ಅಣೆಗೂ ನಾನು ಇಲ್ಲಿಗೆ ಯಾವತ್ತೂ ಬಂದಿಲ್ಲ ಕಣೇ.. ನನ್ನ ಮೇಲೆ ನಂಬಿಕೆ ಇಲ್ವಾ? ಅಂತ ಮೆಲು ಧನಿಯಲ್ಲಿ ಪರಿಪರಿಯಾಗಿ ಸಮಾಧಾನ ಪಡಿಸುತ್ತಾ, ಅದು ಹೇಗೆ ಅವರಬಳಿ ನನ್ನ ಡೇಟ ಇದೆಯೋ ನನಗಂತೂ ಗೊತ್ತಾಗ್ತಾ ಇಲ್ಲಾ ಎಂದು ಆಕೆಯನ್ನು ಸಮಾಧಾನ ಪಡಿಸಲು ಯತ್ನಿಸಿದರೆ, ಇಲ್ಲೇನು ಮಾತು? ಮೊದಲು ಮನೆಗೆ ಬನ್ನಿ. ಎಲ್ಲವನ್ನೂ ಕೂಲಂಕುಶವಾಗಿ ಮಾತಾನಾಡೋಣ ಎಂದಳು ಪತ್ನಿ. ಛೇ ಇದೊಳ್ಳೆ ಗ್ರಹಚಾರ ಆಯ್ತಲ್ಲಪ್ಪಾ! ಸುಖಾ ಸುಮ್ಮನೆ ಬೇಡವಾದ ವಿಷಯದಲ್ಲಿ ತಗಲುಹಾಕಿ ಕೊಂಡು ಬಿಟ್ನಲ್ಲಪ್ಪಾ! ಎಂದು ಕೊಳ್ಳುತ್ತಿರುವಾಗಲೇ, ಒಳಗಿನಿಂದ ತನ್ನ ಹಿರಿಯ ಅಧಿಕಾರಿಯೊಂದಿಗೆ ಬಂದ ಅಂಗಡಿಯವ, ಸಾರ್ ಇತ್ತೀಚೆಗೆ ನೀವೇನಾದ್ರೂ ವಾಚ್ ಕೊಂಡು ಕೊಂಡಿದ್ರಾ? ಅಂತ ಕೇಳಿದ್ದಕ್ಕೆ ಹೌದು ಹೌದು. ನಾನೇ ನಮ್ಮೆಜಮಾನರ ಹುಟ್ಟಿದ ಹಬ್ಬಕ್ಕೆ ಉಡುಗೊರೆಯಾಗಿ ಒಳ್ಳೆಯ ಕೈ ಗಡಿಯಾರ ಕೊಡ್ಸಿದ್ದೇ ಅದಕ್ಕೇನಿವಾಗಾ? ಎಂದು ಸ್ವಲ್ಪ ಜೋರಾಗಿಯೇ ಕೇಳಿದಳು ಪತ್ನಿ. ಏನಿಲ್ಲಾ ಮೇಡಂ. ಸ್ವಲ್ಪ ಸಮಾಧಾನ ಮಾಡಿಕೊಳ್ಳಿ. ನೀವು ವಾಚ್ ತೆಗೆದುಕೊಂಡ್ರಲ್ಲಾ ಆ ಕಂಪನಿ ಮತ್ತು ನಮ್ಮ ಅಂಗಡಿ ಒಂದೇ ಗ್ರೂಪ್ ಕಂಪನಿ. ಹಾಗಾಗಿ ಅಲ್ಲಿ ನೀವು ಕೊಟ್ಟಿದ್ದ ಡೀಟೈಲ್ಸ್ ನಮ್ಮ ಸೆಂಟ್ರಲ್ ಡೇಟಾಬೇಸ್ನಲ್ಲಿ ಇದ್ದಿದ್ದರಿಂದಲೇ ಇಂದು ನಿಮ್ಮ ಡೇಟಾ ಹೇಳಿದ್ದು ಎಂದು ಅಂಗಡಿಯವನು ಹೇಳಿದಾಗ, ಗಂಡನ ಮೇಲಿದ್ದ ಕೋಪ ಜರ್ ಅಂತಾ ಇಳಿದು ಹೋಗಿ, ಛೇ ! ಸುಮ್ಮನೇ ನಮ್ಮ ಮನೆಯವರ ಕುರಿತು ಅಪಾರ್ಥ ಮಾಡಿಕೊಂಡೆನಲ್ಲಾ ಎಂದು ಪತ್ನಿ ತನ್ನ ಪತಿಯ ಕಡೆ ಹುಸಿ ನಗೆಯಿಂದ ನೋಡಿದ್ದನ್ನು ಕಂಡ ಪತಿರಾಯನಿಗೆ ಅಬ್ಬಾ ಬದುಕಿದೆಯಾ ಬಡ ಜೀವ ಎನ್ನುವಂತಾಗಿ ಅಂಗಡಿಯಲ್ಲಿ ಇರುವುದನ್ನೇ ಮರೆತು ಪತ್ನಿಯನ್ನು ಬರ ಸೆಳೆದು ಮುತ್ತಿಟ್ಟ.
ಸರ್ ಹೇಗೋ ನಿಮ್ಮ ಮದುವೆ ಆನಿವರ್ಸರಿ ಇನ್ನು ಒಂದು ವಾರದಲ್ಲಿರೋದರಿಂದ ನಿಮಗೆ ಇನ್ನೂ ಐದು ಪರ್ಸೆಂಟ್ ಡಿಸ್ಕೌಂಟ್ ಕೊಡ್ತಾ ಇದ್ದೀವಿ. ಬಿಲ್ ಮಾಡ್ಲಾ ಸರ್ ಎಂದಾಗ ನಿರಾಳ ಮನಸ್ಸಿನಿಂದ ಸರಿ ಬೇಗ ಬೇಗ ಮುಗಿಸಿ. ಇನ್ನೂ ಸ್ವಲ್ಪ ಹೊತ್ತು ಇಲ್ಲೇ ಇದ್ರೆ ಮತ್ತೆ ಯಾವುದಕ್ಕಾದ್ರು ಸಿಕ್ಕಿ ಹಾಕಿಸ್ಬಿಟ್ರೆ ಕಷ್ಟ ಎಂದು ಹಣ ಕೊಟ್ಟು ಸಂತೋಷದಿಂದ ಪತ್ನಿಯೊಡನೆ ಭರ್ಜರಿಯಾಗಿ ಹೊರಗಡೆ ಊಟ ಮುಗಿಸಿ ಮನೆಯತ್ತ ಸಾಗಿದರು.
ಒಟ್ನಲ್ಲಿ ಜನರಿಗೆ ಉಪಯೋಗಕ್ಕೆ ಅಂತಾ ಇರೋ ಈ ಟೆಕ್ನಾಲಜಿಗಳು ಕೆಲವೊಮ್ಮೆ ಇಂತಹ ಅಭಾಸಕ್ಕೀಡು ಮಾಡುವುದಂತೂ ಸುಳ್ಳಲ್ಲಾ.
ಏನಂತೀರಿ?
ಇಂತಿ ನಿಮ್ಮ ಉಮಾಸುತ