ಇತ್ತೀಚೆಗೆ ಮಗಳನ್ನು ಕಾಲೇಜಿನ ಬಸ್ ಹತ್ತಿಸಲು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ನಿಧಾನವಾಗಿ ಹೋಗುತ್ತಿರುವಾಗ ಎದುರುಗಡೆಯಿಂದ ಮತ್ತೊಂದು ಭಾರೀ ವಾಹನ ಬಂದಾಗ ಸಹಜವಾಗಿಯೇ ರಸ್ತೆಯ ಬದಿಗೆ ಬಂದು ಎದುರುಗಡೆಯ ವಾಹನ ಸರಾಗವಾಗಿ ಹೋಗಲು ಅನುವು ಮಾಡಿಕೊಡುತ್ತಿರುವಾಗಲೇ, ಇದ್ದಕ್ಕಿದ್ದಂತೆಯೇ ಹಿಂದಿನಿಂದ ಜೋರು ಜೋರಾಗಿ ಕರ್ಕಶವಾದ ಹಾರ್ನ್ ಶಬ್ದ ಕೇಳಿಸಿ, ಅರೇ ಇರುವುದಷ್ಟೇ ಜಾಗ ಈಗಾಗಲೇ ರಸ್ತೆಯ ಅಂಚಿನಲ್ಲಿದ್ದೇನೆ. ಇನ್ನೇಷ್ಟು ಪಕ್ಕಕ್ಕೆ ಸರಿಯುವುದು ಎಂದು ಯೋಚಿಸಿ ಎದುರಿನ ವಾಹನ ಹೋದ ನಂತರ ಹಿಂದಿನವರಿಗೆ ಜಾಗ ಬಿಟ್ಟರಾಯಿತು ಎಂದು ನಿರ್ಧರಿಸುತ್ತಿರುವಾಗಲೇ ಕರ್ಕಶವಾದ ಹಾರ್ನ್ ಶಬ್ದ ಇನ್ನೂ ಹೆಚ್ಚಾಯಿತು. ಸರಿ ಯಾಕೋ ಹಿಂದಿನವರ ಆರ್ಭಟ ಜೋರಾಗಿದೆ ಸುಮ್ಮನೆ ತಕರಾರು ಏಕೆ ಎಂದು ನಿಧಾನವಾಗಿ ಗಾಡಿಯನ್ನು ನಿಲ್ಲಿಸಿ ಕೈಸನ್ನೆಯಿಂದ ಮುಂದಕ್ಕೆ ಹೋಗಲು ಸೂಚಿಸಿ, ಆ ದ್ವಿಚಕ್ರ ವಾಹನ ನಮ್ಮನ್ನು ದಾಟಿದ ಮೇಲೆ, ರಾಮ ರಾಮ ಜನರಿಗೆ ಒಂದು ಚೂರು ತಾಳ್ಮೆಯೇ ಇಲ್ಲವಲ್ಲ ಎಂದು ನೆನೆದು ನನ್ನ ತಲೆಯನ್ನೇ ನಾನು ಬಡಿದುಕೊಳ್ಳುವುದನ್ನು ಕನ್ನಡಿಯಲ್ಲಿ ಗಮನಿಸಿದ ಆ ದ್ವಿಚಕ್ರ ವಾಹನದವನು ತನ್ನ ಪತ್ನಿ ಹಿಂದಿನಿಂದ ತಡೆಯುತ್ತಿದ್ದರೂ ಏಕಾಏಕಿ ಅವಾಚ್ಯ ಪದಗಳಿಂದ ನಿಂದಿಸ ತೊಡಗಿದ.
ಅದೇ ರೀತಿ ಮತ್ತೊಮ್ಮೆ ನಮ್ಮ ಬಡಾವಣೆಯ ಮುಖ್ಯರಸ್ತೆಯಲ್ಲಿ ಹೋಗುತ್ತಿರುವಾಗ ಇಬ್ಬರು ಹದಿ ಹರೆಯದ ವಯಸ್ಸಿನ ಹುಡುಗರು ಬೈಕ್ ಒಂದರಲ್ಲಿ ಜೋರಾಗಿ ಹಾರ್ನ್ ಮಾಡುತ್ತಾ ನನ್ನನ್ನು ಹಾದು ಮುಂದೆ ಸಾಗಿ ರಸ್ತೆಯ ಬದಿಯಲ್ಲಿ ನಡೆದು ಹೋಗುತ್ತಿದ್ದ ಅಮಾಯಕ ತಾಯಿ ಮಗಳನ್ನು ಛೇಡಿಸಿದರು. ಅಚಾನಕ್ಕಾಗಿ ಯಾರೋ ಅಪರಿಚಿತರು ಏಕಾಏಕಿ ರಸ್ತೆಯಲ್ಲಿ ತನ್ನನ್ನು ರೇಗಿಸಿದಾಗ ಆ ಯುವತಿಯು ತಬ್ಬಿಬ್ಬಾಗಿ ಇರುಸು ಮುರುಸು ಗೊಂಡಿದ್ದನ್ನು ಗಮನಿಸಿದ ನಾನು ಸ್ವಲ್ಪ ವೇಗವಾಗಿ ನನ್ನ ವಾಹನ ಚಲಾಯಿಸಿ ಹುಡುಗಿಯನ್ನು ರೇಗಿಸಿದ್ದಕ್ಕೆ ಸಂತಸ ಗೊಂಡು ಕೇಕೆ ಹಾಕಿ ಸಾಗುತ್ತಿದ್ದ ಆ ಯುವಕರನ್ನು ಉದ್ದೇಶಿಸಿ ಸೌಮ್ಯದಿಂದ ಏನಪ್ಪಾ ನೀವು ನಡು ರಸ್ತೆಯಲ್ಲಿ ಈ ರೀತಿ ಮಾಡುವುದು ಸರಿಯೇ? ಇದೇ ಕೆಲಸವನ್ನು ನಿಮ್ಮ ಅಕ್ಕ ತಂಗಿಯರಿಗೆ ಬೇರೇ ಯಾರಾದರೂ ಮಾಡಿದ್ದರೆ ನೀವೇನು ಮಾಡುತ್ತಿದ್ದಿರಿ? ಎಂದು ಕೇಳಿದೆ. ಅದಕ್ಕವರು ಮಾಡಿದ ತಪ್ಪಿಗೆ ಒಂದು ಚೂರೂ ಪ್ರಾಯಶ್ಚಿತ್ತವಿಲ್ಲದೆ ಏ! ಅವರೇನು ನಿನ್ನ ಹೆಂಡತಿ ಮಗಳಾ? ನಿನ್ನ ಕೆಲಸ ನೀನು ನೋಡಿಕೊಂಡು ಸುಮ್ಮನೆ ಹೋಗು ಎಂದು ಏಕವಚನದಲ್ಲಿಯೇ ನನ್ನನ್ನು ಬೈಯ್ಯಲು ಶುರುಮಾಡಿದರು. ಹಿಂದೆ ಕುಳಿತಿದ್ದ ಮಹಾಶಯನಂತೂ, ನಾವೇನೂ ಅವರನ್ನು ಗೇಲಿ ಮಾಡಲಿಲ್ಲ ಸುಮ್ಮನೆ ನಮ್ಮ ಪಾಡಿಗೆ ನಾವು ನಗುತ್ತಾ ಹೋಗುತ್ತಿದ್ದೆವು. ನೀನು ನೋಡುವ ದೃಷ್ಟಿಕೋನವೇ ಸರಿಯಿಲ್ಲ. ನಮಗೆ ಹೇಳುವ ಮೊದಲು ನೀನು ನಿನ್ನ ಮನಸ್ಥಿತಿಯನ್ನು ಬದಲಿಸಿಕೋ ಎಂದು ತಿಳಿ ಹೇಳಲು ಹೋದ ನನ್ನನ್ನೇ ದಬಾಯಿಸಿದ್ದಲ್ಲದೇ ನನ್ನ ಗಾಡಿಗೆ ಅಡ್ಡ ಕಟ್ಟಿ ಎಲ್ಲರ ಮುಂದೇ ನನ್ನದೇ ತಪ್ಪು ಎನ್ನುವ ಹಾಗೆ ಕೂಗಾಡಿದ್ದನ್ನು ನೋಡಿ, ಛೇ! ವೃಥಾ ಕೆಸರಿನ ಮೇಲೆ ಕಲ್ಲು ಎಸೆದು ಮೈಮೇಲೆ ಕೊಚ್ಚೆ ಹಾರಿಸಿಕೊಂಡೆನಲ್ಲಾ ಎನ್ನುವಂತಾಗಿತ್ತು ನನ್ನ ಪರಿಸ್ಥಿತಿ.
ಇತ್ತೀಚಿಗೆ ಸಿಗ್ನಲ್ ಒಂದರಲ್ಲಿ NO free left turn ಎಂದು ಬರೆದಿದ್ದನ್ನು ನೋಡಿ ಹಸಿರು ದೀಪ ಬರುವವರೆಗೂ ಕಾಯುತ್ತಿದ್ದೆ. ಆತ್ಯಂತ ರಭಸವಾಗಿ ನನ್ನ ಗಾಡಿಗೇ ಗುದ್ದುವ ಹಾಗೆ ಬಂದು ಝರ್ ಎಂದು ಬ್ರೇಕ್ ಹಾಕಿ, ಏ ಸೈಡ್ ಬಿಡಲೋ ಎಂದ್ದದ್ದು ಕೇಳಿಸಿತು. ನಾನು ಸುಮ್ಮನೆ ಹಿಂತಿರುಗಿ ನೋಡಿದರೆ ಮೂರು ಜನ ಪಡ್ಡೆ ಹುಡುಗರು ಹೆಲ್ಮೆಟ್ ಕೂಡಾ ಇಲ್ಲದೆ ಜರ್, ಜರ್ ಜರ್ ಎಂದು ಗಾಡಿಯನ್ನು ಶಬ್ಧಮಾಡುತ್ತಿದ್ದರು. ಸೂಕ್ಷ್ಮವಾಗಿ ಗಮನಿಸಿದರೆ ಅವರಾಗಲೇ ಪಾನಮತ್ತರಾಗಿದ್ದರು ಎನ್ನುವಂತಿತ್ತು. ಸುಮ್ಮನೆ ಅವರಿಗೆ ಮುಂದಿದ್ದ ಕೆಂಪು ದೀಪ ತೋರಿಸಿ, ಸಿಗ್ನಲ್ ಬಿಡಲಿ ತಡಿರಪ್ಪಾ ಎಂದೆ. ಅವರಲ್ಲೊಬ್ಬ ನನ್ನ ಅಕ್ಕ, ಅಮ್ಮ ಅಜ್ಜಿಯರನ್ನೆಲ್ಲಾ ಜ್ಞಾಪಿಸುತ್ತಾ , ಇದೇನೂ ರಸ್ತೆ ನಿಂದಾ, ನಿಮ್ಮಪ್ಪಂದಾ ಸುಮ್ಮನೆ ಸೈಡ್ ಬಿಡ್ತಿಯೋ ಇಲ್ವೋ ಎಂದು ಹಾರಾಡಿದಾಗ, ತಲೆ ಗಟ್ಟಿಗಿದೆ ಎಂದು ಬಂಡೆಗೆ ಏಕೆ ಚೆಚ್ಚೆಕೊಳ್ಳುವುದು ಎಂದು ಸ್ವಲ್ಪ ಮುಂದಕ್ಕೆ ಹೋಗಿ, ಏನಾದರೂ ಆಗಲಿ ಎಂದು ಅವರಿಗೆ ಹೋಗಲು ಅನುವು ಮಾಡಿ ಕೊಟ್ಟೆ. ಅದನ್ನೇ ಕಾಯುತ್ತಿದ್ದರು ಜೋರಾಗಿ ಹಾರ್ನ್ ಮಾಡುತ್ತಾ ರೋಂಯ್ ಎಂದು ಬೈಕ್ ಚಲಾಯಿಕೊಂಡು ಕೆಂಪು ಸಿಗ್ನಲ್ ಇದ್ದರೂ ಎಡಕ್ಕೆ ತಿರುಗಿ ಹೋಗಿಯೇ ಬಿಟ್ಟರು. ಸಿಗ್ನಲ್ ಬಿಟ್ಟ ನಂತರ ಎಡಕ್ಕೆ ತಿರುಗಿ ಸ್ವಲ್ಪ ದೂರ ಹೊದ ತಕ್ಷಣ ಆ ಮೂವರೂ ಪೋಲೀಸರ ಕೈಗೆ ಸಿಕ್ಕಿ ಬಿದ್ದಿದ್ದನ್ನು ನೋಡಿದೆ. ಆ ಒಂದು ಕ್ಷಣ ಮನಸ್ಸಿಗೆ ಸಂತಸವಾಯಿತಾದರೂ, ನಂತರ ಅಯ್ಯೋ ಒಂದು ನಿಮಿಷ ಕಾದಿದ್ದರೆ ಈ ರೀತಿ ಸುಖಾ ಸುಮ್ಮನೆ ಪೋಲಿಸರಿಗೆ ದಂಡ ತೆರುವುದು ತಪ್ಪುತ್ತಿತ್ತಲ್ಲಾ ಎಂದು ಮರುಗಿದೆ.
ಇನ್ನು ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಒಬ್ಬರ ಹಿಂದೆ ಒಬ್ಬರು ಸರದಿಯಲ್ಲಿ ನಿಂತಿರುವಾಗ ಒಬ್ಬ ಏಕಾಏಕಿ ಎಲ್ಲರನ್ನೂ ದಾಟಿಕೊಂಡು ಮುಂದೆ ಬಂದು ಬಿಟ್ಟ. ಅಪ್ಪಾ ರಾಜಾ, ನಾವೂ ಕೂಡಾ ಪೆಟ್ರೋಲ್ ಹಾಕಿಸಿಕೊಳ್ಳಲೆಂದೇ ಸರದಿಯಲ್ಲಿ ನಿಂತಿದ್ದೇವೆ. ದಯವಿಟ್ಟು ಸರದಿಯಲ್ಲಿ ಬಾಪ್ಪ ಎಂದು ಹೇಳಿದೆ. ಹೇ ನಾನು ಯಾರು ಗೊತ್ತಾ? ಸುಮ್ಮನೆ ನನ್ನ ಎದುರು ಹಾಕೋಬೇಡಾ. ನಾನು ವೈಲೆಂಟ್ ಆದ್ರೆ ಮನುಷ್ಯನೇ ಅಲ್ಲಾ ಎಂದು ಬಡಬಡಾಯಿಸಿದ. ಅಲ್ಲಿದ್ದವರೆಲ್ಲಾ ಸೇರಿ ಒಟ್ಟಿಗೆ ಅದನ್ನು ಖಂಡಿಸಿ ನನ್ನ ಬೆಂಬಲಿಸಿದ್ದರ ಪರಿಣಾಮವಾಗಿ ತನ್ನದ್ದೇನೂ ನಡೆಯುವುದಿಲ್ಲ ಎಂದು ಅರಿತು, ಓಕೆ, ಓಕೆ ನೀವೇ ಮೊದಲು ಹಾಕ್ಸಿ ಕೊಳ್ಳಿ ಎಂದು ಏನೋ ಬಾರಿ ದಾನ ಶೂರ ಕರ್ಣನಂತೆ ಫೋಸ್ ಕೊಟ್ಟಿದ್ದು ಇನ್ನೂ ಹಚ್ಚ ಹಸಿರಾಗಿದೆ.
ಮೊನ್ನೆ ಮೊನ್ನೆ ತರಕಾರಿ ತರಲು ಅಂಗಡಿಗೆ ಹೋಗಿ ಗಾಡಿ ನಿಲ್ಲಿಸಬೇಕೆಂದು ಆಲೋಚಿಸುತ್ತಿರುವಾಗಲೇ ಅಲ್ಲಿಗೆ ಮತ್ತೊಂದು ಗಾಡಿಯಲ್ಲಿ ಬಂದ ಹುಡುಗಿಯೊಬ್ಬಳು ಅಡ್ಡಾ ದಿಡ್ಡಿ ತನ್ನ ವಾಹನ ನಿಲ್ಲಿಸಿದಳು. ಆಕೆಗೆ ಅಮ್ಮಾ ಸ್ವಲ್ಪ ಗಾಡಿನಾ ಸರಿಯಾಗಿ ನಿಲ್ಲಿಸಿದರೆ, ನಾನೂ ಕೂಡ ಗಾಡಿಯನ್ನು ನಿಲ್ಲಿಸಬಹುದು ಎಂದೆ. ಅದಕ್ಕವಳು ದುರುದುರು ನೋಡುತ್ತಾ, ನಿಮ್ಮಪ್ಪಂದಾ ಜಾಗ? ನೀವು ಬೇಕಿದ್ರೆ ಬೇರೆ ಎಲ್ಲಾದ್ರೂ ನಿಲ್ಲಿಸಿಕೊಳ್ಳಿ ಅನ್ನೋದಾ? ಸರಿ ರಸ್ತೆಯಲ್ಲಿ ಹೆಣ್ಣುಮಗಳ ಜೊತೆ ಜಗಳವಾಡೋದೋ ಸರಿಯಾದ ಮಾರ್ಗವಲ್ಲ ಎಂದು ತಿಳಿದು ನಾನೇ ಅಂಗಡಿಯ ತುಸು ದೂರದಲ್ಲಿ ಗಾಡಿ ನಿಲ್ಲಿಸಿ ತರಕಾರಿ ಖರೀದಿಸಿ ಮನೆಗೆ ಹಿಂದಿರುಗಿದೆ.
ಇನ್ನು ಮನೆಯಲ್ಲಿ ನಮ್ಮ ಮಕ್ಕಳನ್ನು ಯಾವುದಾದರೂ ಕೆಲಸ ಹೇಳಲು ಕಂದಾ ಸ್ವಲ್ಪ ಬರ್ತೀಯಾ ಎಂದು ಕರೆದು ನೋಡಿ ಮೊದಲ ನಾಲ್ಕು ಕರೆಗಳಿಗೆ ಅವರಿಂದ ಉತ್ತರವೇ ಇರುವುದಿಲ್ಲ. ಐದನೇ ಕರೆ ಸ್ವಲ್ಪ ಜೋರಾಗಿ ಮಗೂ…. ಎಷ್ಟು ಸಾರೀನೋ ಕರಿಯೋದು ಎಂದು ನೋಡಿ, ಹಾಂ…. ಎನಮ್ಮಾ/ಪ್ಪಾ ನಿಮ್ಮದು ಸುಮ್ಮನೆ ಟಿವಿ ನೋಡೋದಕ್ಕೂ /ಮೊಬೈಲ್ ಆಡೋದುಕ್ಕೂ ಬಿಡೋದಿಲ್ಲಾ. ನನಗೇನೂ ಹೇಳ್ಬೇಡಿ ನಾನು ಇಷ್ಠು ಹೊತ್ತಿನವರೆಗೂ ಓದಿ ಓದಿ ಸುಸ್ತಾಗಿದ್ದೀನಿ. ಸ್ವಲ್ಪ ಅರಾಮಾಗಿ ಇರೂದಿಕ್ಕೆ ಬಿಡೋದಿಲ್ಲಾ.. ಅಂತಾನೇ ಹೇಳ್ತಾರೆ.
ಈ ಎಲ್ಲಾ ಘಟನೆಗಳನ್ನು ಸ್ವಲ್ಪ ಕೂಲಂಕುಶವಾಗಿ ಅವಲೋಕಿಸಿದರೆ ಎಲ್ಲಾ ಸಂಧರ್ಭದಲ್ಲೂ ಎದ್ದು ಕಾಣುವ ಸಮಸ್ಯೆ ಎಂದರೆ ತಾಳ್ಮೆಯ ಮತ್ತು ಸಹನೆಯ ಕೊರತೆ. ಇಂದು ಎಲ್ಲರಿಗೂ, ಎಲ್ಲವೂ ಯಾವುದೇ ಪರಿಶ್ರಮ ಪಡದೆ ಸುಲಭವಾಗಿ ಸಿಗಬೇಕು ಎಂದು ನಿರೀಕ್ಷಿಸುತ್ತಿರುವುದೇ ಮೂಲ ಸಮಸ್ಯೆಯಾಗಿದೆ. ಇದಲ್ಲದೇ ಮತ್ತೊಂದು ಅಂಶವೆಂದರೆ ನಾನು ಮಾತ್ರ ಸರಿ ಉಳಿದವರೆಲ್ಲರೂ ತಪ್ಪು ಎನ್ನುವ ಸ್ವಪ್ರತಿಷ್ಠೆಯೂ ಕಾರಣವಾಗಿದೆ ಎಂದರೂ ತಪ್ಪಾಗಲಾರದು. ಎಲ್ಲದರಲ್ಲೂ ತಾನು ಹೇಳಿದ್ದೇ ನಡೆಯಬೇಕು ಎಲ್ಲರೂ ತಾನು ಹೇಳಿದ ತಾಳಕ್ಕೆ ತಕ್ಕಂತೆ ಕುಣಿಯಲೇ ಬೇಕು ಎನ್ನುವ ಭಾವನೆ. ಅದಕ್ಕೂ ಮಿಗಿಲಾಗಿ ಸಮಯ ಪ್ರಜ್ಞೆಯ ಕೊರತೆ. ಎಲ್ಲಿಗೇ ಆಗಲೀ ಯಾವುದೇ ಕೆಲಸಕ್ಕೆ ಆಗಲಿ ಹೋಗ ಬೇಕಾದ ಸಂಧರ್ಭದಲ್ಲಿ ತುಸು ಮುಂಚೆಯೇ ಹೊರಡುವ ಮೊದಲು ಸುಮ್ಮನೆ ಕಾಲಾಹರಣ ಮಾಡಿ ಕಡೇ ಗಳಿಗೆಯಲ್ಲಿ ಹೊರಟು ರಸ್ತೆಯಲ್ಲಿ ಅನಾವಶ್ಯಕವಾಗಿ ಆತುರ ಮತ್ತು ಇತರರ ಮೇಲೆ ಅಸಹನೆ ತೋರುವುದೇ ಆಗಿದೆ.
ಈ ಎಲ್ಲದ್ದಕ್ಕೂ ಮೂಲ ಕಾರಣ, ಇಂದಿನ ಸ್ಪರ್ಥಾತ್ಮಕ ಅಂಕಗಳಿಕೆಯ ಶಿಕ್ಷಣ ಪದ್ದತಿ ಎಂದರೂ ತಪ್ಪಾಗಲಾರದು. ಹಿಂದೆಲ್ಲಾ ನಮ್ಮ ಶಿಕ್ಷಣ ಪದ್ದತಿಯಲ್ಲಿ ವಿದ್ಯೆಯ ಜೊತೆ ವಿದ್ಯಾರ್ಥಿಗಳ ವಿವೇಚನಾ ಶಕ್ತಿಯನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದರು. ಅಂದು ಅಂಕಿಗಳಿಗಿಂತ ಅಂಕೆಗಳಿಗೆ ಪ್ರಾಶಸ್ತ್ಯ ಕೊಡುತ್ತಿದ್ದರು. ಗುರುವಿನ ಗುಲಾಮನಾಗದ ತನಕ ದೊರೆಯದಣ್ಣಾ ಮುಕುತಿ ಎನ್ನುತ್ತಿದ್ದ ಕಾಲ. ಇಂದು ಗುರುವೇ ಗುಲಾಮನಾಗುವ ದುಸ್ತಿತಿಗೆ ಬಂದಿರುವುದು ಶೋಚನೀಯವೇ ಸರಿ. ವಿದ್ಯೆಯನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಕೇವಲ ಉರು ಹೊಡೆದು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದರೆ ಸಾಕು ಇನ್ನಾರಿಗೂ ನಾವು ತಲೆ ಬಾಗುವ ಅವಶ್ಯಕತೆ ಇಲ್ಲಾ ಎನ್ನುವ ಭಾವನೆ ಮೂಡಿರುವುದು ಸೋಜಿಗವೇ ಸರಿ. ವಿದ್ಯಾ ದಧಾತಿ ವಿನಯಂ ಎನ್ನುವುದು ಮಾಯವಾಗಿ ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವುದು ರೂಡಿಯಾಗಿರುವುದು ಕಳವಳಕಾರಿಯಾಗಿದೆ.
ಇದೆಲ್ಲಕ್ಕೂ ಪರಿಹಾರವೇ ಇಲ್ಲವೇ? ಖಂಡಿತವಾಗಿಯೂ ಎಲ್ಲ ಸಮಸ್ಯೆಗಳಿಗೂ ಹಲವಾರು ರೀತಿಯ ಪರಿಹಾರಗಳು ಇದ್ದೇ ಇರುತ್ತದೆ. ನಾವು ಸ್ವಲ್ಪ ಗಮನ ಹರಿಸಬೇಕಷ್ಟೇ. ಮನೆಯಲ್ಲಿ ಮಕ್ಕಳಿಗೆ ಪಾಠದ ಜೊತೆ ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆಯತ್ತ ಗಮನಹರಿಸಬೇಕು. ಮನೆಯೇ ಮೊದಲ ಪಾಠ ಶಾಲೆ, ಪೋಷಕರೇ ಮೊದಲ ಗುರುಗಳು. ಹಾಗಾಗಿ ನಮ್ಮ ಮನೆಗಳಲ್ಲಿ ನಮ್ಮ ಧರ್ಮ, ಸಂಸ್ಕೃತಿ ಮತ್ತು ಸಂಪ್ರದಾಯದ ಜೊತೆಗೆ ನಮ್ಮ ಮಾತೃಭಾಷೆ, ಲಲಿತಕಲೆಗಳು, ಯೋಗಾಭ್ಯಾಸ, ಧ್ಯಾನ, ಭಜನೆ, ಎಲ್ಲದಕ್ಕೂ ಮಿಗಿಲಾಗಿ ಮನೆಯವರೆಲ್ಲರೂ ದಿನಕ್ಕೊಮ್ಮೆಯಾದರೂ ಒಟ್ಟಿಗೆ ಕುಳಿತು ಊಟ ಮಾಡುವ ಪದ್ದತಿಯನ್ನು ಖಡ್ಡಾಯವಾಗಿ ಹೇಳಿಕೊಡಲೇ ಬೇಕು. ಮನೆಯಲ್ಲಿರುವ ಎಲ್ಲರನ್ನೂ ಅಪ್ಪ ಅಮ್ಮಾ , ತಾತಾ ಅಜ್ಜಿ, ಅಕ್ಕ ಅಣ್ಣ,ತಂಗಿ ತಮ್ಮ, ಅತ್ತೆ ಮಾವ, ಚಿಕ್ಕಪ್ಪ, ಚಿಕ್ಕಮ್ಮ ಹೀಗೆ ಅವರರವರ ಸಂಬಂಧ ಅನುಸಾರ ಗೌರವವನ್ನು ಕೊಡುವುದನ್ನು ಕಲಿಸಿಕೊಡ ಬೇಕು. ಮಕ್ಕಳ ಅಭಿರುಚಿಗೆ ತಕ್ಕಂತೆ ಹಾಡು ಹಸೆ, ನೃತ್ಯ, ಸಂಗೀತ, ಸಾಹಿತ್ಯ ಕಲಿಸುವುದರಿಂದ ತಾಳ್ಮೆ ಹೆಚ್ಚುತ್ತದೆ ಮತ್ತು ಮಕ್ಖಳ ಮೇಲಿನ ಮಾನಸಿಕ ಒತ್ತಡ ಕಡಿಮೆ ಮಾಡುವುದರಲ್ಲಿ ಸಹಕರಿಸುತ್ತದೆ. ಕೇವಲ ಮನೆಯ ನಾಲ್ಕು ಗೋಡೆಗಳ ಮಧ್ಯೆಯಲ್ಲಿ ಆಡುವ ಆಟಗಳಿಗಿಂತ ಹೊರಗಿನ ಮೈದಾನದಲ್ಲಿ ಸ್ವಲ್ಪ ದೇಹಕ್ಕೆ ಪರಿಶ್ರಮವಾಗುವಂತಹ ಆಟಗಳಿಗೆ ಪ್ರೋತ್ಸಾಹಿಸ ಬೇಕು. ಪಾಶ್ಚಾತ್ಯ ಆಟಳಿಗಿಂತ ನಮ್ಮ ದೇಸೀ ಆಟಗಳತ್ತ ಹರಿಸಲಿ ನಮ್ಮ ಚಿತ್ತ. ಯೋಗ ಮತ್ತು ಪ್ರಾಣಾಯಾಮಗಳನ್ನು ಕೇವಲ ಪ್ರದರ್ಶನಕ್ಕೆ ಸೀಮಿತಗೊಳಿಸದೆ ದೇಹ ಮತ್ತು ಆರೋಗ್ಯ ಕಾಪಾಡುತ್ತದೆ ಎನ್ನುವುದನ್ನು ನಮ್ಮ ಮಕ್ಕಳಿಗೆ ತಿಳಿಯ ಪಡಿಸಬೇಕು. ಎಲ್ಲಕಿಂತ ಮೊದಲು ದುಡ್ಡಿನ ಪ್ರಾಮುಖ್ಯತೆಯನ್ನು ಅವರಿಗೆ ತಿಳಿಯ ಪಡಿಸಿ ಸಾಧ್ಯವಾದಷ್ಟೂ ಕಡಿಮೆ ಖರ್ಚು ಹೆಚ್ಚಿನ ಉಳಿತಾಯ ಮಾಡುವುದನ್ನು ಕಲಿಸಿಕೊಡಬೇಕು.
ಇಂದಿನ ದಿಡೀರ್ ಮತ್ತು ಪೋಷಕಾಂಶವಿಲ್ಲದ ಆಹಾರವೂ ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವ ಪರಿಣಾಮ ಆದಷ್ಟೂ ನಮ್ಮ ಮಕ್ಕಳಿಗೆ ಮನೆಯಲ್ಲಿಯೇ ಮಾಡಿದ ಪೌಷ್ಟಿಕ ಸಾಥ್ವಿಕ ಆಹಾರ ಪದ್ದತಿಯನ್ನು ಹಿತ ಮಿತವಾಗಿ ರೂಡಿ ಮಾಡಿಸುವು ಒಳ್ಳೆಯದು.
ಸ್ ತಲಕಟ್ಟು ಸ, ಹ್ ತಲಕಟ್ಟು ಹ, ನ್ ಏತ್ವಾ ನೆ ಸಹನೆ. ಹೀಗೆ ಸಹನೆಯನ್ನು ಯಾವುದೇ ಒತ್ತಕ್ಷರವಿಲ್ಲದೆ ಬರೆಯಲು ಬಹಳ ಸುಲಭವಾದರೂ, ಅದೇ ಸಹನೆಯನ್ನು ಆಚರಣೆಯಲ್ಲಿ ತರುವುದು ತುಸು ಕಷ್ಟವೇ. ಆದರೂ ಮನಸ್ಸಿದ್ದಲ್ಲಿ ಮಾರ್ಗ ಎನ್ನುವಂತೆ ತುಸು ಶ್ರಮವಹಿಸಿ ಮೇಲೆ ತಿಳಿಸಿದ ಜೀವನ ಶೈಲಿಯಂತೆ ತುಸು ಬದಲಾವಣೆ ಮಾಡಿಕೊಂಡರೆ ಸ್ವಾರ್ಥಕ್ಕೂ ಮತ್ತು ಸಮಾಜಕ್ಕೂ ನೆಮ್ಮದಿ. ಇಂದಿನ ಮಕ್ಕಳೇ ನಾಳಿನ ಸತ್ಪ್ರಜೆಗಳಲ್ಲವೇ?
ಏನಂತೀರೀ?
ಹೌದು, ಸಂಸ್ಕಾರ ನೀಡಬೇಕಾದ್ದು ತಂದೆತಾಯಿಗಳ ಆದ್ಯ ಕರ್ತವ್ಯ, ಆದರೆ ಕಲಿಸುವ ಸಹನೆ &ಕಲಿಯುವ ಸಹನೆಯ ಕೊರತೆ ಇಂದು ಎದ್ದುಕಾಣುತ್ತಿದೆ.
LikeLiked by 1 person