ಅದೊಂದು ಸಂಪ್ರದಾಯಸ್ಥ ಕುಟುಂಬ ಮನೆಯ ತುಂಬಾ ಮಕ್ಕಳು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಾದ್ದರಿಂದ ಆ ಮನೆಯ ಮಗಳಿಗೆ ಲೋಯರ್ ಸೆಕೆಂಡರಿಗಿಂತ ಹೆಚ್ಚಿಗೆ ಓದಲಾಗಲಿಲ್ಲ. ಮನೆಯಲ್ಲಿಯೇ ಕುಳಿತು ಹಾಡು ಹಸೆ ಸಂಪ್ರದಾಯಗಳನ್ನು ತನ್ನ ಹಿರಿಯರಿಂದ ಕಲಿತುಕೊಳ್ಳುತ್ತಾಳೆ. ಮುಂದೆ ಮದುವೆಯ ವಯಸ್ಸು ಬಂದಾಗ ನೋಡಲು ಸುರದ್ರೂ ಪವತಿಯಾಗಿದ್ದರೂ ಕಡಿಮೆ ಓದಿನ ನೆಪವೊಡ್ಡಿ ಒಂದೆರಡು ಸಂಬಂಧಗಳು ಕೂಡಿ ಬರುವುದಿಲ್ಲವಾದರೂ, ಹಾಗೆ ಸಂಬಂಧ ಬೇಡ ಎಂದು ಹೋಗಿದ್ದವರೇ ಪುನಃ ಬಂದು ಆಗಿನ ಕಾಲಕ್ಕೇ ಇಂಜಿನಿಯರಿಂಗ್ ಓದಿದ್ದ ಹುಡುಗನೊಂದಿಗೆ ಆಕೆಯ ಮದುವೆಯಾಗಿ ತುಂಬು ಕುಟುಂಬದ ಸೊಸೆಯಾಗಿ, ಸುಖಃ ದಾಂಪತ್ಯದ ಕುರುಹಾಗಿ ಮುದ್ದಾದ ಮೂರು ಹೆಣ್ಣು ಮಕ್ಕಳ ತಾಯಿಯಾಗುತ್ತಾಳೆ. ತಾನು ಹೆಚ್ಚು ಓದದಿದ್ದರೇನಂತೆ, ತನ್ನ ಎಲ್ಲಾ ಆಸೆಗಳನ್ನು ತನ್ನ ಮಕ್ಕಳ ಮೂಲಕ ತೀರಿಸಿಕೊಳ್ಳುತ್ತಾಳೆ. ಮೊದಲ ಮಗಳು ಇಂಜಿನಿಯರ್, ಎರಡನೇ ಮಗಳು ಡಾಕ್ಟೃರ್ ಆದರೆ ಮೂರನೇಯವಳು ಸಂಗೀತ ಮತ್ತು ನೃತ್ಯ ಪಾರಂಗತಳನ್ನಾಗಿ ಮಾಡುವುದಲ್ಲದೇ ಅವರಿಗೆ ನಮ್ಮ ಸತ್ ಸಂಪ್ರದಾಯ ಮತ್ತು ಸಂಸ್ಕಾರಗಳನ್ನು ಕಲಿಸಿ ಎಲ್ಲರಿಗೂ ಮದುವೆ ಮಾಡುತ್ತಾಳೆ. ಆ ಮಕ್ಕಳೆಲ್ಲಾ ಈಗ ದೇಶ ವಿದೇಶಗಳಲ್ಲಿ ನೆಲೆಸಿದ್ದಾರೆ. ಆಕೆ ಅವರನ್ನು ನೋಡಲು ಆಗಿಂದ್ದಾಗ್ಗೆ ಬೆಂಗಳೂರು ಮೈಸೂರಿಗೆ ಹೋಗುವ ಹಾಗೆ ದೇಶ ವಿದೇಶಗಳಲ್ಲಿ ಸುತ್ತಾಡುತ್ತಾ, ತನ್ನ ಮೊಮ್ಮಕ್ಕಳಿಗೂ ನಮ್ಮ ಭಾಷೆ, ಸಂಸ್ಕಾರ ಮತ್ತು ಸಂಸ್ಕೃತಿಯ ಪರಿಚಯವನ್ನು ಮಾಡಿಸುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾಳೆ.
ಮನೆಯಲ್ಲಿ ಮುದ್ದಾಗಿ ಬೆಳೆದ ಹುಡುಗಿ ಕಾಲೇಜು ಕಲಿಕೆಯ ಜೊತೆ ಜೊತೆಯಲ್ಲಿಯೇ ಬೆರಳಚ್ಚು ಮತ್ತು ಶೀಘ್ರಲಿಪಿಯನ್ನು ಉತ್ತಮ ದರ್ಜೆಯಲ್ಲಿ ಮುಗಿಸಿದ ಪರಿಣಾಮವಾಗಿ ಎರಡನೇ ವರ್ಷದ ಪದವಿ ಮುಗಿಯುವಷ್ಟರಲ್ಲಿಯೇ ಸರ್ಕಾರಿ ವೃತ್ತಿಯನ್ನು ಗಳಿಸುತ್ತಾಳೆ ಆಕೆ. ಮೂರನೇ ವರ್ಷದ ಪದವಿಯನ್ನು ದೂರ ಶಿಕ್ಷಣದ ಮುಖಾಂತರ ಮುಗಿಸುತ್ತಿದ್ದಂತೆಯೇ ತುಂಬಿದ ಸಂಪ್ರದಾಯಸ್ಥರ ಮನೆಯ ಸೊಸೆಯಾಗುತ್ತಾಳೆ. ತವರು ಮನೆಯ ಪದ್ದತಿಗಳಿಗೂ ಗಂಡನ ಮನೆಯ ಪದ್ದತಿಗಳಿಗೂ ಅಜಗಜಾಂತರ ವೆತ್ಯಾಸದಿಂದ ಆರಂಭದಲ್ಲಿ ತುಸು ತೊಂದರೆಯನ್ನು ಅನುಭವಿಸಿದರೂ ಕೆಲವೇ ದಿನಗಳಲ್ಲಿ ಗಂಡನ ಮನೆಯ ಪದ್ದತಿಗಳಿಗೆ ಮತ್ತು ಆಹಾರ ಶೈಲಿಗೆ ಒಗ್ಗಿ ಹೋಗಿ ತನ್ನ ಕೈ ಚೆಳಕದಿಂದ ತನ್ನ ಅತ್ತೆಯಿಂದಲೇ ಭೇಷ್ ಪಡೆಯುವಷ್ಟರ ಮಟ್ಟಿಗೆ ಆಗುತ್ತಾಳೆ. ಅತ್ತೆ ಅಕಾಲಿಕವಾಗಿ ಕಾಲವಾದ ನಂತರ ತನ್ನ ವಯೋವೃದ್ಧ ಮಾವನವರನ್ನೂ ಮತ್ತು ಮುದ್ದಾದ ಮಕ್ಕಳನ್ನು ಆರೈಕೆ ಮಾಡುವ ಸಲುವಾಗಿಯೇ ಕೈ ತುಂಬಾ ಸಂಬಳ ಬರುತ್ತಿದ್ದ ಸರ್ಕಾರಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದು ಅಪ್ಪಟ ಗೃಹಿಣಿಯಾಗಿ ತನ್ನ ಸಂಸಾರದ ನೊಗವನ್ನು ಸಂಪೂರ್ಣವಾಗಿ ಹೊತ್ತು ಕುಟುಂಬದ ಆರೈಕೆಯೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವುದರಲ್ಲಿ ಹರಿಸಿದ್ದಾಳೆ ತನ್ನ ಚಿತ್ತ.
ಅಲ್ಲೊಂದು ಹಳ್ಳಿಯಲ್ಲಿ ಒಬ್ಬ ರೈತಾಪಿ ಕುಟುಂಬ. ಅನೇಕ ದಿನಗಳಾದರೂ ದೇವರು ಆವರಿಗೆ ಮಕ್ಕಳ ಭಾಗ್ಯವನ್ನು ಕರುಣಿಸಲೇ ಇಲ್ಲ. ಅದಕ್ಕಾಗಿ ಅವರು ಮಾಡದ ಪೂಜೆಯಿಲ್ಲ ಕಟ್ಟದ ಹರಕೆ ಇಲ್ಲ. ಆದರೂ ಭಗವಂತನ ಅವರ ಮನೆಯಲ್ಲಿ ತೊಟ್ಟಿಲು ಕಟ್ಟುವ ಭಾಗ್ಯ ಕರುಣಿಸಲೇ ಇಲ್ಲ. ಮಕ್ಕಳಿಲ್ಲದಿದ್ದರೇನಂತೆ ಮಕ್ಕಳ ಬದಲಾಗಿ ಮರಗಳನ್ನೇ ಸಾಕೋಣ, ಪೋಷಿಸೋಣ ಎಂದು ತೀರ್ಮಾನಿಸಿದರು ಆ ದಂಪತಿಗಳು. ಆದರೆ ಅಕಾಲಿಕವಾಗಿ ಪತಿಯನ್ನು ಕಳೆದುಕೊಂಡರೂ ಧೃತಿಗೆಡೆದ ಆಕೆ, ತನ್ನ ಸ್ವಪ್ರಯತ್ನದಿಂದ ಲಕ್ಷಾಂತರ ಸಾಲು ಮರಗಳನ್ನು ರಸ್ತೆಯ ಬದಿಯಲ್ಲಿ ನೆಟ್ಟಿದ್ದಲ್ಲದೆ ಅವುಗಳನ್ನು ತನ್ನ ಹೆತ್ತ ಮಕ್ಕಳಿಗಿಂತಲೂ ಹೆಚ್ಚಿಗೆ ಪೋಷಿಸಿದ ಪರಿಣಾಮವಾಗಿ ಆ ಲಕ್ಷಾಂತರ ಮರಗಳೆಲ್ಲಾ ಇಂದು ಹೆಮ್ಮರಗಳಾಗಿ ಪರಿಸರವನ್ನು ಸಂರಕ್ಷಿಸುತ್ತಿವೆ. ಕೊಟ್ಯಾಂತರ ಜನರಿಗೆ ಶುಧ್ಧ ಗಾಳಿಯನ್ನು ನೀಡುತ್ತಿದೆಯಲ್ಲದೆ ಸಾವಿರಾರು ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ತನ್ನ ಮನೆಯಲ್ಲಿ ತೊಟ್ಟಿಲು ಕಟ್ಟಲಾಗದಿದ್ದರೇನಂತೆ, ಲಕ್ಷಾಂತರ ಮನೆಗಳಲ್ಲಿ ತೊಟ್ಟಿಲು ಕಟ್ಟುವಷ್ಟು ಮರ ಮುಟ್ಟಗಳನ್ನು ಬೆಳೆಸಿದ್ದಾಳೆ ಆಕೆ.
ಅದೊಂದು ಸಣ್ಣ ಹಳ್ಳಿ. ಅಲ್ಲೊಂದು ಪುಟ್ಟ ಕುಟಂಬ, ಗಂಡ ಹೆಂಡತಿ ಮತ್ತು ಒಬ್ಬನೇ ಮಗ. ಜೀವನಕ್ಕೆ ಸಾಕಾಗುವಷ್ಟು ಜಮೀನು. ಆದರೆ ಮನೆಯ ಯಜಮಾನರಿಗೆ ನಾಟಕದ ಖಯಾಲಿ. ಸದಾ ಎಲ್ಲೆಂದರಲ್ಲಿ ನಾಟಕ ಮಾಡುವುದಾಗಲೀ ಅಥವಾ ನಾಟಕ ಕಲಿಸುವುದಕ್ಕಾಗಲೀ ತಿಂಗಳಾನು ಗಟ್ಟಲೆ ಮನೆಯನ್ನು ಬಿಟ್ಟು ಹೋಗುವ ಚಾಳಿ. ಚುರುಕಾದ ಮಗನಿಗೆ ವಿದ್ಯಾಭ್ಯಾಸ ಮಾಡಿಸಬೇಕು, ಜೀವನ ಸಾಗಿಸಬೇಕು. ಧೃತಿಗೆಡದ ಆಕೆ ಮನೆಯ ಮುಂದೆ ಪುಟ್ಟ ಹೋಟೆಲ್ ಅರಂಭಿಸಿದಳು. ಜನರಿಗೆ ಕಾಫೀ, ಟೀ, ಸಣ್ಣ ಪುಟ್ಟ ತಿಂಡಿಗಳನ್ನು ಉಣ ಬಡಿಸುತ್ತಲೇ ಸಂಸಾರ ಸಾಗಿಸ ತೊಡಗಿದಳು. ಎಂಜಲು ತಟ್ಟೆ ಲೋಟಗಳನ್ನು ತೊಳೆಯುತ್ತಾ ಜೊತೆ ಜೊತೆಗೆ ಓದುತ್ತಾ ಸ್ನಾತಕೋತ್ತರ ಪದವಿಯನ್ನು ಗಳಿಸಿ ಲಕ್ಷಾಂತರ ರೂಪಾಯಿಗಳ ಸಂಬಳ ಪಡೆಯುವಂತನಾದ ಮಗ. ಮಣ್ಣಿನ ಮೇಲಿನ ಆಸೆಯಿಂದ ಇದ್ದ ಕೆಲಸವನ್ನು ಬಿಟ್ಟು ತನ್ನ ಹಳ್ಳಿಯಲ್ಲಿಯೇ ಜಮೀನನ್ನು ಖರೀದಿಸಿ ಆಧುನಿಕ ಕೃಷಿವಂತನಾಗಿ ಲಕ್ಷಾಂತರ ರೂಪಾಯಿ ಸಂಪಾದಿಸಿದ. ನಗರದಲ್ಲಿ ಅರಮನೆಯಂತಹ ಬಂಗಲೆ ಇದ್ದರೂ, ಐಶಾರಾಮಿ ಕಾರ್ ಇದ್ದರೂ ಆ ತಾಯಿ ತನ್ನ ಹಿಂದಿನ ಕಷ್ಟಕಾರ್ಪಣ್ಯಗಳನ್ನು ಮರೆಯದೇ ಇಂದಿಗೂ ತನ್ನ ಹಳ್ಳಿಯಲ್ಲಿಯೇ ಕೃಷಿ ಮಾಡಿಸುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾಳೆ.
ಆಕೆ ತರಕಾರಿ ಮಾರುತ್ತಿದ್ದರೆ ಆಕೆಯ ಪತಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಅದೊಂದು ದಿನ ಒಂದು ಬಾರೀ ಖಾಯಿಲೆಗೆ ತುತ್ತಾಗಿ ಯಾವ ಸರ್ಕಾರೀ ಸೌಲಭ್ಯಗಳು ದೊರಕದೆ ಮತ್ತು ಸರಿಯಾದ ಚಿಕಿತ್ಸೆ ಅಗತ್ಯ ಸಮಯದಲ್ಲಿ ಸಿಗದೆ ಆತ ಮೃತ ಪಟ್ಟ. ಎರಡು ಸಣ್ಣ ಮಕ್ಕಳ ವಿಧವೆಯಾದ ಆಕೆ ಆ ಕ್ಷಣದಲ್ಲೇ ತನಗೆ ಎಷ್ಟೇ ಕಷ್ಟ ಬರಲಿ ತನ್ನ ಒಬ್ಬ ಮಗಳನ್ನು ಡಾಕ್ಟರ್ ಮತ್ತೊಬ್ಬ ಮಗನನ್ನು ಐ.ಎ.ಎಸ್ ಅಧಿಕಾರಿಯನ್ನಾಗಿ ಮಾಡಲೇ ಬೇಕೆಂದು ನಿರ್ಧರಿಸಿದಳು. ಮಕ್ಕಳೂ ಕಷ್ಟಪಟ್ಟು ಸರ್ಕಾರೀ ಶಾಲಾ ಕಾಲೇಜಿನಲ್ಲಿಯೇ ಅರ್ಹತೆಯ ಆಧಾರದ ಮೇಲೆ ಸೀಟ್ ಗಿಟ್ಟಿಸಿ ಅಮ್ಮನ ಕನಸನ್ನು ನನಸಾಗಿಸಿದರು. ಮಗಳು ತಮ್ಮದೇ ಊರಿನಲ್ಲಿ ತಾಯಿಯ ಉಳಿತಾಯದಲ್ಲೇ ಆಸ್ಪತ್ರೆಯನ್ನು ಕಟ್ಟಿಸಿ ರೋಗಿಗಳಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡುತ್ತಿದ್ದರೆ, ಮಗ ಡಿಸಿ ಆಗಿ ತಾಯಿಯ ಕನಸುಗಳನ್ನು ಸಾಕಾರ ಮಾಡುತ್ತಿದ್ದಾನೆ. ಆ ತಾಯಿ ಯಥಾ ಪ್ರಕಾರ ತನ್ನ ತರಕಾರಿ ವ್ಯವಹಾರವನ್ನೇ ಮುಂದುವರಿಸಿದ್ದಾಳೆ.
ಪರಕೀಯರ ಧಾಳಿಯಿಂದ ನಮ್ಮ ದೇಶ ಮತ್ತು ಧರ್ಮ ತತ್ತರಿಸುತ್ತಿದ್ದಾಗ ಆ ಮಹಾತಾಯಿ ಜೀಜಾಬಾಯಿ ತನ್ನ ಮಗನಿಗೆ ರಾಮಾಯಣ ಮಹಾಭಾರತದ ಜೊತೆಗೆ ನಮ್ಮ ಅನೇಕ ವೀರರ ಕಥೆಗಳನ್ನು ಹೇಳಿ ಸಮರ್ಥ ರಾಮದಾಸರ ಬಳಿ ವಿದ್ಯೆ ಕಲಿಸಿ ಹಿಂದೂ ಸಾಮ್ರಾಜ್ಯದ ಪುನರ್ ಸ್ಥಾಪನೆಗೆ ಕಾರಣೀಭೂತಳಾದರು. ಅಂತೆಯೇ ನಿಮ್ಮ ಮಗ ಬಹಳ ದಡ್ದನಾಗಿದ್ದಾನೆ. ಅವನಿಗೆ ನಮ್ಮ ಶಾಲೆಯಲ್ಲಿ ಪಾಠ ಕಲಿಸಲು ಸಾಧ್ಯವಿಲ್ಲ ಎಂದು ಗುರುಗಳು ಹೇಳಿದಾಗ ಅವರಿಗೆ ಎದುರು ಮಾತನಾಡದೆ, ಮನೆಯಲ್ಲಿಯೇ ತನ್ನ ಮಗನಿಗೆ ವಿದ್ಯೆ ಕಲಿಸಿ ವಿದ್ಯುತ್ ಬಲ್ಬ್, ಕ್ಯಾಮೆರಾ, ಫೋಟೋಗ್ರಾಫಿ, ಮೂವಿ ಕ್ಯಾಮೆರಾಗಳು ಮತ್ತಿತರ ಹಲವಾರು ಉತ್ಪನಗಳನ್ನು ಕಂಡು ಹಿಡಿದ ಥಾಮಸ್ ಆಲ್ವ ಎಡಿಸನ್ ಎಂಬುವನನ್ನು ವಿಶ್ವ ವಿಖ್ಯಾತ ವಿಜ್ಞಾನಿಯನ್ನಾಗಿ ಮಾಡಿದ್ದದ್ದು ಆತನ ತಾಯಿ ನ್ಯಾನ್ಸಿ ಮಾಥ್ಯು ಎಲಿಯಾಟ್ ಎಂಬಾಕೆ .
ಈ ಎಲ್ಲಾ ಘಟನೆಗಳು ಕಾಲ್ಪನಿಕವಾಗಿರದೆ ನಿಜ ಜೀವನದಲ್ಲಿ ನಡೆದಂತಹ ಸತ್ಯ ಘಟನೆಗಳೇ ಆಗಿವೆ. ಹೆಣ್ಣುಮಕ್ಕಳ ಇಂತಹ ನೂರಾರು ಸಾಹಸ ಗಾಥೆಗಳು ನಮ್ಮೆಲ್ಲರ ನಿಜ ಜೀವನದಲ್ಲಿ ಹಲವಾರು ಬಾರಿ ನೋಡಿರುತ್ತೇವೆ ಇಲ್ಲವೇ ಕೇಳಿಯೇ ಇರುತ್ತೇವೆ. ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಹೆಣ್ಣುಮಕ್ಕಳು ಸಾಮಾಜಿಕವಾಗಿ ಸಕ್ರಿಯರಾದಷ್ಟೂ ಒಂದು ಸ್ವಸ್ಥ, ಸದೃಢ ಮನೆ ಮತ್ತು ಸಮಾಜ ಹೇಗೆ ನಿರ್ಮಾಣ ಆಗುತ್ತದೆ ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿದೆ. ಗಂಡಸರು ಎಷ್ಟೇ ದುಡಿದು ತಂದು ಹಾಗಿದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತಿರುವುದು ಹೆಣ್ಣೇ ಅಲ್ಲವೇ? ಆಕೆ ಮಗಳಾಗಿ, ಅಕ್ಕನಾಗಿ, ತಂಗಿಯಾಗಿ, ಗೆಳತಿಯಾಗಿ, ಬಾಳ ಸಂಗಾತಿಯಾಗಿ, ಗೃಹಿಣಿಯಾಗಿ, ತಾಯಿಯಾಗಿ, ಅಜ್ಜಿಯಾಗಿ, ಕಾಲ ಕಾಲಕ್ಕೆ ತಕ್ಕಂತೆ ವಯೋಸಹಜವಾಗಿ ನಾನಾ ರೀತಿಯ ಪಾತ್ರಗಳನ್ನು ನಮ್ಮ ಜೀವನದಲ್ಲಿ ಸಕ್ರೀಯವಾಗಿ ನಿಭಾಯಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.
ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ: | ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ ಕ್ರಿಯಾ | ಅಂದರೆ ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ ಎನ್ನುತ್ತದೆ ನಮ್ಮ ಶಾಸ್ತ್ರಗಳು. ಅಹಲ್ಯ, ದ್ರೌಪತಿ, ಕುಂತಿ, ತಾರ ಮಂಡೋದರಿಯರಂತಹ ಪತಿವ್ರತೆಯರು ಜನ್ಮಿಸಿದ ನಾಡು ನಮ್ಮ ನಾಡು. ಪರ ಪುರುಷರೊಂದಿಗೆ ಸಂಭಾಷಣೆ ಮಾಡುವಾಗ ಸೆರೆಗಿನಿಂದ ಇಡೀ ಮುಖವನ್ನೇ ಮುಚ್ಚಿಕೊಂಡು ತಲೆ ಬಗ್ಗಿಸಿಯೇ ಮಾತನಾಡಿಸುವ ಸಂಸ್ಕೃತಿ ನಮ್ಮದು. ಪತಿಯೇ ತನ್ನ ಮುಂದೆ ನಿಂತಿದ್ದರೂ ಪತಿಯನ್ನು ತಲೆ ಎತ್ತಿನೋಡದೆ ಮಗನ ಅಂತ್ಯಕ್ರಿಯೆಗೆ ಗೋಳಾಡಿದ ಸತ್ಯ ಹರಿಶ್ಚಂದ್ರನ ಪತ್ನಿ ತಾರಮತಿ ಹುಟ್ಟಿದ ನಾಡಿದು. ಅಲ್ಲಾಹುದ್ದೀನ್ ಖಿಲ್ಚಿಯು ಮೋಸದಿಂದ ರಾಜನನ್ನು ಸೋಲಿಸಿ ರಾಣಿ ಪದ್ಮಾವತಿಯನ್ನು ವಶ ಪಡಿಸಿಕೊಳ್ಳಲು ಪ್ರಯತ್ನಿಸಿದಾಗ ಪರ ಪುರುಷನ ಸೆರೆ ಸಿಗಬಾರದೆಂದು ತನ್ನನ್ನೇ ಆತ್ಮಾಹುತಿ ಮಾಡಿಕೊಂಡ ಇತಿಹಾಸವಿರುವ ನಾಡಿದು.
ಹೌದು ಇಂದು ಕಾಲ ಬದಲಾಗಿದೆ. ಹೆಣ್ಣು ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಮುಸುರೆ ತೊಳೆದುಕೊಂಡು ಕುಳಿತುಕೊಳ್ಳದೆ ಪುರುಷರ ಸರಿ ಸಮನಾಗಿ ಎಲ್ಲಾ ಉದ್ದಿಮೆಗಳಲ್ಲಿಯೂ ದುಡಿಯುತ್ತಿದ್ದಾಳೆ . ನಮ್ಮ ದೇಶದಲ್ಲಿ ಈಗಾಗಲೇ ಒಬ್ಬ ಹೆಂಗಸು ಪ್ರಧಾನಿಯಾಗಿದ್ದಾರೆ, ರಾಷ್ಟ್ರಪತಿಗಳಾಗಿದ್ದಾರೆ. ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳೂ ಆಗಿದ್ದಾರೆ. ನಮ್ಮ ದೇಶದ ಜವಳಿ ಮಂತ್ರಿ, ವಿದೇಶಾಂಗ ಸಚಿವೆ, ರಕ್ಷಣಾಮಂತ್ರಿಗಳು,ಹಣಕಾಸಿನ ಮಂತ್ರಿಯಾಗಿಯೂ ಹೆಂಗಸರೇ ಆಳಿದ್ದಾರೆ. ಅದೇ ರೀತಿ ಪ್ರಪಂಚಾದ್ಯಂತ ನಾನಾ ರಾಷ್ಟ್ರಗಳ ಅಧ್ಯಕ್ಷೆಯರು ಮತ್ತು ಅನೇಕ ಬಹುರಾಷ್ಟ್ರೀಯ ಕಂಪನಿಗಳ ಆಡಳಿತ ನಿರ್ವಾಹಣಾ ಅಧಿಕಾರಿಯಾಗಳಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಒಟ್ಟಿನಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಹೆಣ್ಣು ನಿರ್ವಹಿಸದ ಪಾತ್ರವೇ ಇಲ್ಲವೇನೂ ಎನ್ನಬಹುದು. ಅದಕ್ಕೇ ಗೃಹಿಣಿ ಗೃಹಮುಚ್ಯತೆ ಎಂಬ ಸಂಸ್ಕೃತದ ನಾಣ್ಣುಡಿಯಂತೆ ಒಂದು ಗೃಹಕ್ಕೆ ಒಬ್ಬ ಗೃಹಿಣಿಯಿದ್ದರೆ ಅದು ಉತ್ತಮ ಗೃಹವಾಗುತ್ತದೆ. ಆಕೆ ಮನೆಯ ಒಳಗೆ ಮತ್ತು ಹೊರಗೂ ಗಂಡಸರ ಸರಿ ಸಮನಾಗಿ ದುಡಿಯುತ್ತಾಳಾದ್ದರಿಂದ ಆಕೆಯನ್ನು ಅಸಡ್ಡೆಯಿಂದ ಕಾಣುವುದಾಗಲಿ,ಆಕೆಯ ಕೆಲಸವನ್ನು ಅವಹೇಳನ ಮಾಡದೆ ಆಕೆಯೊಂದಿಗೆ ಆಕೆಯ ಕೆಲಸಗಳ ನ್ನು ಹಂಚಿಕೊಳ್ಳುವ ಮೂಲಕ ಆಕೆಗೆ ಸಹಕರಿಸೋಣ. ನಮಗೆಲ್ಲರಿಗೂ ತಿಳಿದುರುವಂತೆ ಒಬ್ಬ ತಾಯಿ ತನ್ನ ಹತ್ತು ಗಂಡು ಮಕ್ಕಳನ್ನು ಸಾಕ ಬಲ್ಲಳು ಆದರೆ ಅದೇ ಹತ್ತು ಗಂಡು ಮಕ್ಕಳು ಒಬ್ಬ ತಾಯಿಯನ್ನು ಸರಿಯಾಗಿ ನೋಡಿ ಕೊಳ್ಳಲಾರರು. ಪತಿಯ ಮರಣಾನಂತರ ಕುಟುಂಬದ ಸಂಪೂರ್ಣ ಜವಾಬ್ಧಾರಿಯನ್ನು ಪತ್ನಿಯೇ ವಹಿಸಿಕೊಂಡು ಸಂಸಾರವನ್ನು ಸುಗಮವಾಗಿ ಸಾಗಿಸಿದ ಅನೇಕ ಉದಾಹರಣೆಗಳಿವೆ. ಆದರೆ ಅದೇ ಪತ್ನಿಯ ಮರಣಾನಂತರ ಇಡೀ ಕುಟುಂಬವೇ ಚಿದ್ರ ಛಿದ್ರವಾದ ಉದಾಹಣೆಗಳೂ ಸಾಕಷ್ಟು ನಮ್ಮ ಮುಂದಿವೆ. ನಿಜವಾಗಿಯೂ ಹೆಣ್ಣನ್ನು ಆಲದ ಮರಕ್ಕೆ ಹೋಲಿಸಬಹುದೇನೋ? ಏಕೆಂದರೆ ಆಕೆ ಆಲದ ಮರದಂತೆ ವಿಶಾಲವಾಗಿ ಬೆಳೆದು ತನ್ನ ಸಂಸ್ಕಾರ, ಸಂಪ್ರದಾಯಗಳೆಂಬ ಬಿಳಲನ್ನು ಎಲ್ಲಾ ಕಡೆಗೂ ಹಬ್ಬಿಸಿ ತನ್ನ ಜೀವಿತಾವಧಿ ಎಲ್ಲರಿಗೂ ಆಶ್ರಯ ನೀಡಿಯೇ ತೀರುತ್ತಾಳೆ.
ಇಂದು ಮಾರ್ಚ್ 8ನೇ ತಾರೀಖು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ನಮ್ಮೆಲ್ಲರ ಬದುಕಿಗೆ ಮತ್ತು ಸಮಾಜಕ್ಕೆ ಸದಾ ದಾರಿ ದೀಪವಾಗಿರುವ ಎಲ್ಲಾ ಮಹಿಳೆಯರಿಗೂ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸೋಣ, ಕೃತಜ್ಞತೆ ಸಲ್ಲಿಸೋಣ ಮತ್ತು ಪ್ರೀತಿಯಿಂದ ವಂದಿಸೋಣ. ಈ ಆದರ ಮತ್ತು ಆಚರಣೆಗಳು ಕೇವಲ ಮಾರ್ಚ್ 8 ಒಂದೇ ದಿನಕ್ಕೇ ಸೀಮಿತವಾಗಿರದೇ, ಅದು ನಿರಂತರವಾಗಿರುವಂತೆ ನೋಡಿಕೊಳ್ಳುವ ಜವಾಬ್ಧಾರಿಯೂ ನಮ್ಮದೇ ಅಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ
Nice hennu makkale makkalu no words
LikeLiked by 1 person
Wishing you all the best Shrikant. As usual I really enjoying your each articles and the program presentation. This “Blog” will spread the word and reaching more n more people to making all of them to more knowledgeable. Expecting great words from you.
LikeLiked by 1 person
ಅದ್ಭುತವಾಗಿ ಲೇಖನ ಮೂಡಿ ಬಂದಿದೆ 👌👍🙏 ಈ ತರಹದ ಬರಹಗಳು ಎಲ್ಲಾ ಮಹಿಳಾಮಣಿಯರಲ್ಲಿ ಇನ್ನು ಹೆಚ್ಚಿನ ಚೇತನ ತುಂಬಲಿ ಎಂದು ಆಶಿಸುತ್ತೇನೆ🙏💐
LikeLike
ನಿಮ್ಮ ಒಂದೊಂದು ಉದಾಹರಣೆಯೂ ಒಂದೊಂದು ಕಥೆಯಾಗಬಹುದು. ಲೇಖನ ಉತ್ತಮವಾಗಿ ಮೂಡಿ ಬಂದಿದೆ. ಅಭಿನಂದನೆಗಳು.
LikeLiked by 1 person
Sir
You wrote very well about women, the way of you express it’s shows you are a great husband, father, son, good human being person, I am very proud of you🙏
LikeLiked by 1 person