ಆಮೀರನ ಅಹಂಗೆ ವೆಂಕಟೇಶನ ಪ್ರಸಾದ

ಮಾರ್ಚ್-9 ಅಂದರೆ ಕ್ರಿಕೆಟ್ ಪ್ರಿಯರಿಗೆಲ್ಲಾ ಥಟ್ ಅಂತಾ ನೆನಪಗೋದೇ ಭಾರತ ಮತ್ತು ಪಾಕಿಸ್ಥಾನದ ನಡುವಿನ ಈ ಹೈವೋಲ್ಟೇಜ್ ಪಂದ್ಯ. 1996ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಕ್ವಾಟರ್ ಫೈನಲ್ ಪಂದ್ಯವನ್ನು ಮೈದಾನದಲ್ಲೇ ಕುಳಿತು ನೋಡಿದ ರಸಾನುಭವವನ್ನು ಒಮ್ಮೆ ಮೆಲುಕನ್ನು ಹಾಕೋಣ ಬನ್ನಿ.

ಮಾರ್ಚ್ 9, 1996 ಸದಾ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕೀಸ್ಥಾನಗಳ ನಡುವೆ ಕ್ರಿಕೆಟ್ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಎಲ್ಲದ್ದಕ್ಕಿಂತ ವಿಶೇಷವಾಗಿ ಅದು ಆ ಕ್ರೀಡಾಂಗಣದ ಮೊತ್ತ ಮೊದಲಿನ ಹೊನಲು ಬೆಳಕಿನ ಪಂದ್ಯ. ಎರಡು ಮೂರು ವಾರಗಳಿಂದಲೇ ಕ್ರಿಕೆಟ್ ಜ್ಚರ ನಗರದಾದ್ಯಂತ ಹರಡಿಯಾಗಿತ್ತು. ಯಾರು ಕೇಳಿದರೂ ಮ್ಯಾಚ್ ಟಿಕೆಟ್ ಸಿಕ್ತಾ ಅಂತಾ ಕೇಳುವುದು ಸಹಜವಾಗಿತ್ತು. ಲೀಗ್ ಪಂದ್ಯಗಳು ಮುಗಿದು ಭಾರತ ಮತ್ತು ಪಾಕೀಸ್ಥಾನಗಳ ನಡುವಿನ ಪಂದ್ಯ ಅಂತಾ ಗೊತ್ತಾದ ಮೇಲಂತೂ ಕಾಳ ಸಂತೆಯಲ್ಲಿ ಟಿಕೆಟ್ಗಳು ಯದ್ವ ತದ್ವಾ ಬೆಲೆಗೆ ಬಿಕರಿಯಾಗ ತೊಡಗಿದೆವು. ನಮ್ಮ ಭಾವ (ತಂಗಿಯ ಗಂಡ) ತಮ್ಮ ಪ್ರಭಾವ ಬಳೆಸಿ ಎಲ್ಲಿಂದಲೂ ಎರಡು ಗ್ಯಾಲರೀ ಟಿಕೆಟ್ ತಂದುಕೊಟ್ಟರು. ಮನೆಯ ಮಂದಿ ಮತ್ತು ಸ್ನೇಹಿತರೆಲ್ಲಾ ಹೋಗ ಬೇಕೆಂದು ನಿರ್ಧರಿದ್ದರೂ ಟಿಕೆಟ್ ಇಲ್ಲದ ಕಾರಣ ನಾನೂ ಮತ್ತು ನಮ್ಮ ಮಾವ ಒಟ್ಟಿಗೆ ಹೋಗುವುದೆಂದು ನಿರ್ಧರಿಸಿದೆವು. ನಗರದಲ್ಲಿ ಕ್ರಿಕೆಟ್ ಸಂಭ್ರಮವಾದರೆ, ಹಿಂದಿನ ದಿನ ಮಾರ್ಚ್ 8, ಅಂತಾರಾಷ್ಟ್ರೀಯ ಮಹಿಳಾ ದಿನದಂದು ನಮ್ಮ ತಂಗಿ ನಮ್ಮ ಮನೆಯ ಮೊದಲ ಮೊಮ್ಮಗಳಿಗೆ ಜನ್ಮವಿತ್ತಿದ್ದ ಸಂಭ್ರಮ. ತಡ ರಾತ್ರಿ ಆಸ್ಪತ್ರೆಯಲ್ಲಿ ಜನನವಾದ ಕಾರಣ ಸರಿಯಾಗಿ ನನ್ನ ಸೋದರ ಸೊಸೆಯನ್ನು ನೋಡಲಾಗಿರಲಿಲ್ಲ. ಮಾರನೇ ದಿನ ಕ್ರಿಕೆಟ್ ಪಂದ್ಯಾವಳಿಗೆ ಮುಂಚೆ ನಾನೂ ಮತ್ತು ನಮ್ಮ ಮಾವ ಆಸ್ಪತ್ರೆಗೆ ಹೋದರೆ ವೈದ್ಯರು ಬಾರದಿದ್ದ ಕಾರಣ ಮಗುವನ್ನು ತೋರಿಸಲೇ ಇಲ್ಲ. ಸರಿ. ಹೇಗೂ ಪಂದ್ಯ ಮುಗಿದ ನಂತರ ನೋಡೋಣವೆಂದು ನಿರ್ಧರಿಸಿ ಪಕ್ಕದ ಹೋಟೆಲ್ ನಲ್ಲಿಯೇ ಗಬ ಗಬನೆ ತಿಂದು ನನ್ನ ಹೀರೋ ಪುಕ್ ಗಾಡಿ ಏರಿ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಹೊರೆಟೆವು.

ಜೆನರಲ್ ಪೋಸ್ಟ್ ಆಫೀಸ್ನಿಂದಲೇ ಜನ ಜಂಗುಳಿ. ವಾಹನಗಳನ್ನು ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಿಲ್ಲಿಸಲು ಅವಕಾಶ ಕಲ್ಪಿಸಿದ್ದ ಕಾರಣ ಅಲ್ಲಿ ಗಾಡಿ ನಿಲ್ಲಿಸಿ ಸರ ಸರನೆ ಮೈದಾನದತ್ತ ಬಂದು ನೋಡಿದರೆ ಸರದಿಯ ಸಾಲು ಹನುಮಂತನ ಬಾಲದಂತೆ ಕಬ್ಬನ್ ರೋಡಿನಿಂದ ಎಂ.ಜಿ. ರೋಡ್ ವರೆಗೂ ಬೆಳೆದು ಬಿಟ್ಟಿದೆ. ಸರಿ ಸಾಲಿನ ಕೊನೆಯನ್ನು ಹುಡುಕುತ್ತಾ ಹೋದಂತೆ ಮಹತ್ಮಾ ಗಾಂಧಿಯ ಪ್ರತಿಮೆ ಬಳಿಗೆ ತಲುಪಿದ್ದೆವು. ನೆರೆದಿದ್ದ ಕ್ರೀಡಾಸಕ್ತರೆಲ್ಲರಿಗೂ ಪ್ರಪಥಮ ಬಾರಿಗೆ ನಮ್ಮ ನಗರದಲ್ಲಿ ಹೊನಲು ಬೆಳಕಿನ ಪಂದ್ಯವನ್ನು ನೋಡುವ ತವಕ. ಅದೂ ಭಾರತ ಮತ್ತು ಪಾಕೀಸ್ಥಾನ ಎಂದೆರೆ ಕಿಚ್ಚು ಒಂದಷ್ಟು ಹೆಚ್ಚು. ಒಂದು ಟಿಕೆಟ್ ನಾನು ಇಟ್ಟು ಕೊಂಡು ಮತ್ತೊಂದನ್ನು ನಮ್ಮ ಮಾವನ ಕೈಗೆ ಕೊಟ್ಟೆ. ಯಾಕೋ ಒಟ್ಟಿಗೆ ನೀನೇ ಇಟ್ಟುಕೊಂಡರೆ ಆಗುವುದಿಲ್ಚಾ? ಎಂದು ಮಾವ ಕೇಳಿದಾಗ. ಅಂದು ನನಗೆ ಅದೇಕೆ ಹಾಗನ್ನಿಸಿತೋ ಕಾಣೆ, ಸುಮ್ಮನೆ ಇಟ್ಕೋಳ್ಳಿ ಮಾವ ಏನಾದರೂ ಹೆಚ್ಚು ಕಡಿಮೆ ಆಗಿ ಕಳೆದು ಹೋದ್ರೆ ತೊಂದರೆ ಆಗುತ್ತೆ ಎಂದು ಅವರನ್ನು ಸುಮ್ಮನಾಗಿರಿಸಿದೆ.

ಒಂದು ನಿಮಿಷ ನೀವು ಇಲ್ಲೇ ಇರಿ. ನಾನು ಮುಂದೆ ಎಲ್ಲಾದರೂ ನನ್ನ ಸ್ನೇಹಿತರು ಸಿಗ್ತಾರ? ಅಂತ ನೋಡಿ ಕೊಂಡು ಬರ್ತೀನಿ. ಯಾರಾದರೂ ಸಿಕ್ರೇ ಅವರ ಜೊತೆನೇ ಹೋಗೋಣ ಎಂದು ಹೇಳೀ ಹಾಗೆ ಸಾಲಿನಲ್ಲಿ ಮುಂದೆ ಹೋಗ್ತಾ ಇದ್ದ ಹಾಗೆ, ಇದ್ದಕ್ಕಿದ್ದಂತೆಯೇ ನೂಕು ನುಗ್ಗಲು ಶುರುವಾಗಿ ನಾನು ಮತ್ತು ನನ್ನ ಮಾವ ತಪ್ಪಿಸಿಕೊಂಡು ಬಿಟ್ಟೆವು. ಆಗಿನ್ನೂ ಮೊಬೈಲ್ ಇರಲಿಲ್ಲ. ನಾನೂ ಕೂಡಾ ಅತ್ತ ಇತ್ತ ಹುಡುಕಿದೆ. ಆ ಜನ ಜಂಗುಳಿಯಲ್ಲಿ ನನ್ನ ಮಾವ ಸಿಗಲೇ ಇಲ್ಲ. ಸರಿ ಹೇಗೂ ಇಬ್ಬರ ಬಳಿಯೂ ಟಿಕೆಟ್ ಇದೆಯಲ್ಲಾ ಒಳಗೆ ಹೋಗಿ ಹುಡುಕಿದರೆ ಆಯ್ತು ಎಂದು ಕೊಂಡು ಅದೇ ಸಾಲಿನಲ್ಲಿ ನುಸುಳಿ ಎಲ್ಲಾ ರೀತಿಯ ತಪಾಸಣೆ ಮುಗಿಸಿಕೊಂಡು ಕ್ರೀಡಾಂಗಣದ ಒಳಗೆ ಹೋಗುವಷ್ಟರಲ್ಲಿ ಸಾಕು ಸಾಕಾಗಿ ಹೋಗಿತ್ತು. ಉಸ್ಸಪ್ಪಾ ಎಂದು ಗ್ಯಾಲರಿಯಲ್ಲಿ ಕುಳಿತುಕೊಂಡು ಅಲ್ಲಿಯೇ ಇಟ್ಟಿದ್ದ ಬೌಂಡರಿ-ಸಿಕ್ಸರ್ ಪ್ಲಕಾರ್ಡ್ ನಲ್ಲಿ ಗಾಳಿ ಬೀಸಿಕೊಳ್ಳುತ್ತಾ ನನ್ನ ಮಾವನನ್ನು ಹುಡುಕಲು ಪ್ರಯತ್ನಿಸಿದನಾದರೂ ಅಷ್ಟೋಂದು ಜನರ ಮಧ್ಯೆ ನನಗೆ ಅವರು ಸಿಗಲೇ ಇಲ್ಲ. ಸರಿ ಹೇಗೂ ಆಮೇಲೆ ಹುಡುಕಿದರೆ ಆಯಿತು ಎಂದು ಆಭ್ಯಾಸ ಮಾಡುತ್ತಿದ್ದ ಆಟಗಾರರನ್ನು ನೋಡುತ್ತಾ ಕುಳಿತೆ.

ವಾಸೀಂ ಅಕ್ರಮ್ ಹುಶಾರಾಗಿಲ್ಲದಿದ್ದ ಕಾರಣ ಅಮೀರ್ ಸೋಹೆಲ್ ಪಾಕೀಸ್ಥಾನದ ಹಂಗಾಮಿ ನಾಯಕರಾದರೆ ನಮ್ಮ ಕಡೆ ಅಜರ್ ನಾಯಕ. ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಾಗ ನಮೆಗೆಲ್ಲಾ ಸಂಭ್ರಮವೋ ಸಂಭ್ರಮ. ಸಚಿನ್ ಮತ್ತು ಸಿದ್ಧು ಆರಂಭಿಕ ಆಟಗಾರರಾಗಿ ಬಂದರೆ ಅತ್ತ ಕಡೆ, ವೇಗಿಗಳಾದ ವಖಾರ್ ಯೂನಸ್ ಮತ್ತು ಅಖೀಬ್ ಜಾವೇದ್ ಬೋಲಿಂಗ್ ಅರಂಭಿಸಿದರು.

ಒಂದು ತುದಿಯಲ್ಲಿ ಸಚಿನ್ ಎಚ್ಚರಿಕೆಯ ಆಟವಾಡುತ್ತಿದ್ದರೆ ಮತ್ತೊಂದೆಡೆ ಸಿದ್ದು ಆಕ್ರಾಮಿಕವಾಗಿ ಆಡುತ್ತಾ ಪಟ ಪಟನೆ ಬೌಂಡರಿ ಬಾರಿಸುತ್ತಿದ್ದರೆ ಇಡೀ ಕ್ರೀಡಾಂಗಣದಲ್ಲಿ ಗಡಚಿಕ್ಕುವ ಕೂಗಾಟ. ಭಾರತದ ಮೊತ್ತ 90 ರನ್ ಆಗಿದ್ದಾಗ 31ರನ್ ಗಳಿಸಿದ್ದ ಸಚಿನ್ ಔಟಾದಾಗ ಇಡೀ ಕ್ರೀಡಾಂಗಣ ಸ್ಥಬ್ಧವಾಗಿತ್ತು. ನಂತರ ಬಂದ ಮಂಜ್ರೇಕರ್, ಅಜರ್, ಕಾಂಬ್ಲೀ ಇಪ್ಪತ್ತು ಮೂವತ್ತು ರನ್ ಹೊಡೆದರೆ, ಅಲ್ಲಿಯವರೆಗೂ ಚೆನ್ನಾಗಿ ಆಡುತ್ತಿದ್ದ ಸಿದ್ದು 93 ರನ್ ಗಳಿಸಿ ಔಟಾದಾಗ ಭಾರತ 250 ರನ್ ಕೂಡಾ ದಾಟುವುದು ಅನುಮಾನವಾಯಿತು. ಅಷ್ಟರಲ್ಲಾಗಲೇ ಕತ್ತಲಾಗಿ ಹೊನಲು ಬೆಳಕಿನ ದೀಪವನ್ನು ಹತ್ತಿಸಿಯಾಗಿತ್ತು. ಝಗ ಝಗಝಗಿಸುವ ದೀಪ, ಹಚ್ಚ ಹಸುರಿನ ಹುಲ್ಲಿನ ಕ್ರೀಡಾಂಗಣದಲ್ಲಿ ಬಿಳಿ ಬಣ್ಣದ ಚೆಂಡು ನೀಲಿ ಮತ್ತು ಹಸಿರು ಬಟ್ಟೆ ಧರಿಸಿದ್ದ ಆಟಗಾರರನ್ನು ಬಣ್ಣಿಸುವುದಕ್ಕಿಂತ ನೋಡುವುದಕ್ಕೇ ಕಣ್ಣಿಗಾನಂದ. ಸ್ಥಳೀಯ ಹುಡುಗರಾದ ಕುಂಬ್ಲೆ. ಶ್ರೀನಾಥ್ ಪಟ ಪಟನೆ ಎರೆಡೆರಡು ಬೌಂಡರಿ ಹೊಡೆದು ತಂಡದ ಮೊತ್ತ 250ಕ್ಕೆ ತಲುಪುವಂತೆ ಮಾಡುವಷ್ಟರಲ್ಲಿ ಪೆವಿಲಿಯನ್ಗೆ ಮರಳಿದ್ದರು. ಉಳಿದಿದ್ದ ಒಂದೇ ಒಂದು ಭರವಸೆ ಎಂದರೆ ಅಜಯ್ ಜಡೇಜ ಒಬ್ಬನೇ.

ಬಹುಶಃ ಅಂದು ಆಂಜನೇಯನೇ ಅಜೇಯನ ಮೈಮೇಲೆ ಬಂದಿದ್ದಿರಬಹುದು. ಅದುವರೆವಿಗೂ ಅತ್ಯುತ್ತಮವಾಗಿ ಬೋಲಿಂಗ್ ಮಾಡಿದ್ದ ಅಖೀಬ್ ಮತ್ತು ವಕಾರ್ ಅವರನ್ನು ಅಕ್ಷರಶಃ ಚೆಂಡಾಡಿದ ಅದರಲ್ಲೂ ವಕಾರ್ ಯೂನಿಸ್ ಕಡೆಯ ಓವರಿನ ಪ್ರತೀ ಬಾಲನ್ನು ಫೋರ್, ಸಿಕ್ಸ್ ಅಟ್ಟುತ್ತಾ ಕೇವಲ 25 ಚೆಂಡಿನಲ್ಲಿ 4 ಫೋರ್ ಮತ್ತು 2 ಸಿಕ್ಸರ್ ಗಳೊಂದಿಗೆ 45 ರನ್ ಗಳಿಸಿ ತಂಡದ ಮೊತ್ತ 50 ಓವರ್ ಗಳಿಗೆ ಗೌರವಯುತವಾದ 8 ವಿಕೆಟ್ ನಷ್ಟಕ್ಕೆ 287 ರನ್ ತಲುಪುವಂತೆ ನೋಡಿಕೊಂಡಿದ್ದ ಆಪದ್ಬಾಂಧವ ಅಜಯ್ ಜಡೇಜ. ಛೇ ಸಿದ್ದು ಇನ್ನೂ ಸ್ವಲ್ಪ ಹೊತ್ತು ಇದ್ದಿದ್ರೆ ಖಂಡಿತವಾಗಿಯೂ 300 ರ ಗಡಿ ದಾಟಿಸುತ್ತಿದ್ದ. ಹೋಗಲಿ ಬಿಡಿ ಪರವಾಗಿಲ್ಲ ಇದೂ ಕೂಡಾ ಸ್ಪರ್ಧಾತ್ಮಕ ಮೊತ್ತವೇ, ಹೇಗೂ ಸ್ಥಳೀಯ ಬೋಲರ್ ಗಳಾದ ಶ್ರೀನಾಥ್, ಪ್ರಸಾದ್ ಮತ್ತು ಅನಿಲ್ ಚೆನ್ನಾಗಿ ಬೋಲ್ ಮಾಡಿದ್ರೆ ಗೆಲುವು ನಮ್ಮದೇ ಎಂದು ಅಕ್ಕ ಪಕ್ಕದವರೊಡನೆ ಮಾತನಾಡುತ್ತಾ ಚುರು ಚುರುಗುಟ್ಟುತ್ತಿದ್ದ ಹೊಟ್ಟೆಗೆ ಒಂದಕ್ಕೆ ಎರಡು ಬೆಲೆ ಕೊಟ್ಟು ಸಿಕ್ಕಿದ್ದನ್ನೇ ತಿಂದು ನೀರು ಕುಡಿದು ಪಾಕೀಸ್ಥಾನದ ಬ್ಯಾಟಿಂಗ್ ನಮ್ಮವರ ಬೋಲಿಂಗ್ ನೋಡಲು ಸಿದ್ಧವಾದೆವು.

ಭಾರತದ ತಂಡ ವೇಗಿಗಳಾದ, ಅಪ್ಪಟ ಕನ್ನಡಿಗರೇ ಆದ ಶ್ರೀನಾಥ್ ಮತ್ತು ಪ್ರಸಾದ್ ಮೇಲೆ ಅಪಾರ ಭರವಸೆಯನ್ನಿಟ್ಟಿದ್ದ ಭಾರತ ತಂಡಕ್ಕೆ ನಿರಾಶೆ ಮೂಡಿಸುವಂತೆ ಹಂಗಾಮಿ ನಾಯಕ ಅಮೀರ್ ಸೋಹೇಲ್ ಮತ್ತು ಸಯೀದ್ ಅನ್ವರ್ ಪವರ್ ಪ್ಲೇ ಫೀಲ್ಡಿಂಗ್ ನಿರ್ಭಂಧದ ಸದುಯೋಗ ಪಡೆದುಕೊಂಡು ಮೈದಾನದ ಅತ್ತಿತ್ತ ಪಟ ಪಟನೆ ರನ್ ಬಾರಿಸ ತೊಡಗಿದರು. ಅಲ್ಲಿಯವರೆಗೂ ಸಂಭ್ರದಲ್ಲಿದ್ದ ಇಡೀ ಮೈದಾನ ಇದ್ದಕ್ಕಿದ್ದಂತೆ ಸೂಜಿ ಚುಚ್ಚಿದ ಬೆಲೂನ್ ನಂತೆ ಟುಸ್ ಆಗಿತ್ತು. ಪಾಕಿಗಳ ಮೊತ್ತ ವಿಕೆಟ್ ನಷ್ಟವಿಲ್ಲದೇ 84 ಆಗಿದ್ದಾಗ ಶ್ರೀನಾಥ್ ಎಸತದಲ್ಲಿ ಭಾರೀ ಹೊಡೆತ ಬಾರಿಸಲು ಹೋಗಿ ಕುಂಬ್ಲೆಗೆ ಕ್ಯಾಚ್ ನೀಡಿ 48 ರನ್ ಗಳಿಸಿದ್ದ ಸಯೀದ್ ಅನ್ವರ್ ಔಟಾದಾಗ ಭಾರತ ತಂಡಕ್ಕೆ ಕೊಂಚ ನಿರಾಳ.

ಆದರೆ ಮತ್ತೊಂದು ತುದಿಯಲ್ಲಿದ್ದ ನಾಯಕ ಮೈಮೇಲೆ ಯಾವುದೂ ಭೂತ ಬಂದಂತೆ ಭಾರತದ ಎಲ್ಲಾ ಬೋಲರ್ಗಳನ್ನು ಮನಸೋ ಇಚ್ಚೆ ದಂಡಿಸುತ್ತಾ ಅರ್ಧ ಶತಕವನ್ನು ದಾಟಿ ಅಟ್ಟಹಾಸದಿಂದ ಬೀಗುತ್ತಿದ್ದ. ಪಾಕಿಗಳ ಮೊತ್ತ 109 ರನ್ ಆಗಿದ್ದಾಗ, ಸೋಹೇಲ್ ಪೆವಿಲಿಯನ್ ತುದಿಯಿಂದ ಬೋಲಿಂಗ್ ಮಾಡುತ್ತಿದ್ದ ಪ್ರಸಾದ್ ಎಸೆತವನ್ನು ಕವರ್ ಡ್ರೈವ್ ಮಾಡಿ ಬೌಂಡರಿ ಗೆರೆ ದಾಟಿಸಿ ಪ್ರಸಾದ್ ಕಡೆ ಕೈ ತೋರಿಸಿ ಏನನ್ನೋ ಬಡ ಬಡಿಸಿದ್ದು ನಮಗೆ ಗೋಚರಿಸಿತಾದರೂ ದೂರದ ಗ್ಯಾಲರಿಯಲ್ಲಿದ್ದ ನಮಗೆ ಏನೂ ಕೇಳಿಸಲಿಲ್ಲ.

ಅಮೀರನ ಆ ಆಕ್ರಮಣದಿಂದ ಪ್ರಸಾದ್ ಬುಸು ಬುಸು ಗುಟ್ಟುತ್ತಿದ್ದದ್ದು ಕಾಣಿಸಿತು. ಆಮೀರ್ ಮೇಲಿನ ಕೋಪದಿಂದಲೇ ಪ್ರಸಾದ್ ವೇಗವಾಗಿ ಓಡಿ ಬಂದು ನಂತರದ ಎಸೆದ ಚೆಂಡನ್ನು ಮತ್ತೊಮ್ಮೆ ಅದೇ ರೀತಿ ರಭಸದಿಂದ ಅತೀಯಾದ ವಿಶ್ವಾಸದಿಂದ ಭಾರಿಸುವ ಭರದಲ್ಲಿ ಅಮೀರ್ ಎಚ್ಚರತಪ್ಪಿ, ಚೆಂಡು ವಿಕೆಟ್ಗೆ ಬಡಿದಾಗಿತ್ತು. ಈಗ ಪ್ರಸಾದ್ ಅಮೀರ್ ಸೋಹೆಲ್ಗೆ ಪೆವಿಲಿಯನ್ ಕಡೆ ಕೈ ತೋರಿಸುತ್ತಾ ಎನೋ ಪ್ರತ್ಯುತ್ತರವನ್ನು ನೀಡಿದಂತೆ ಕಾಣಿಸಿತು. ಈ ಪ್ರಹಸನ ಇಡೀ ಮೈದಾನದಲ್ಲಿದ್ದ 35 ಸಾವಿರಕ್ಕೂ ಅಧಿಕ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ ಕುಣಿದಾಡಿಸಿತು.

ಆನಂತರ ಆಡಲು ಬಂದ ಇನ್ಜಮಾಮ್ ಮತ್ತು ಇಜಾಜ್ ಬಹಳ ಹೊತ್ತು ನಿಲ್ಲಲಿಲ್ಲ. ನಂತರ ಬಂದ ಹಿರಿಯ ಆಟಗಾರರಾದ ಮಿಯಾಂದಾದ್ ಮತ್ತು ಸಲೀ ಮಲ್ಲಿಕ್ ಕೆಲ ಕಾಲ ಎಚ್ಚರಿಕೆಯಿಂದ ಆಡಿದರಾದರೂ ರನ್ ಗತಿ ಹೆಚ್ಚಿಸುವ ಭರದಲ್ಲಿ ವಿಕೆಟ್ ಒಪ್ಪಿಸಿ ಹೋದರು. ಪ್ರತೀ ವಿಕೆಟ್ ಬಿದ್ದಾಗಲೂ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಹರ್ಶೋದ್ಗಾರ ಮುಗಿಲು ಮುಟ್ಟುತ್ತಿತ್ತು. ನಂತರ ಬಂದ ವಿಕೆಟ್ ಕೀಪರ್ ರಶೀದ್ ಲತೀಫ್ ಒಂದೆರಡು ಸಿಕ್ಸರ್ ಹೊಡೆದು ಆತಂಕ ಮೂಡಿಸಿದನಾದರೂ ಮತ್ತೊಂದು ತುದಿಯಿಂದ ತರಗೆಲೆಗಳಂತೆ ಉದುರುತ್ತಿದ್ದ ವಿಕೆಟ್ಗಳಿಂದಾಗಿ ಅಂತಿಮವಾಗಿ 248 ರನ್ ಗಳಿಸುವಷ್ಟರಲ್ಲಿ ಓವರ್ ಮುಗಿದಿತ್ತು. ಭಾರತ ವಿಶ್ವಕಪ್ ನ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕೀಸ್ಥಾನವನ್ನು 39 ರನ್ ಗಳಿಂದ ಬಗ್ಗು ಬಡಿದಿತ್ತು. ಇಡೀ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಮತ್ತು ಭಾರತದ ಆಟಗಾರರು ಕೇಕೇ ಹಾಕಿ ಸಂಭ್ರಮಿಸುತ್ತಿದ್ದರೆ ಹ್ಯಾಪು ಮೋರೆ ಹಾಕಿಕೊಂಡಿದ್ದರು ಪಾಕ್ ಆಟಗಾರರು.

ನಿರೀಕ್ಷೆಯಂತೆ ಭಾರತದ ಪರ ಕೆಚ್ಚೆದೆಯಿಂದ ಹೋರಾಡಿ 93 ರನ್ ಗಳಿಸಿದ್ದ ನವಜೋತ್ ಸಿಂಗ್ ಸಿದ್ದು ಪಂದ್ಯ ಪುರುಶೋತ್ತಮ ಪ್ರಶಸ್ತಿಪಾತ್ರರಾದರು. ಕ್ರೀಡಾಂಗಣದಲ್ಲಿ ನೆರೆದಿದ್ದ ಎಲ್ಲರಿಂದಲೂ ಒಂದೇ ಮಾತು ಭಾರತ ವರ್ಲ್ ಕಪ್ ಗೆಲ್ಲದಿದ್ದರೂ ಚಿಂತೆ ಇಲ್ಲ. ಪಾಕೀಸ್ಥಾನವನ್ನು ಸೋಲಿಸಿತಲ್ಲಾ ಅಷ್ಟೇ ಸಾಕು. ಅದೇ ನಮ್ಮದಿ ಎನ್ನುತ್ತಿದ್ದಂತೂ ಸತ್ಯ.

ಪಂದ್ಯ ಮುಗಿಯುವವರೆಗೂ ಕಳೆದು ಹೋದ ನನ್ನ ಮಾವನ ಬಗ್ಗೆ ಯೋಚಿಸದಿದ್ದ ನಾನು, ಪಂದ್ಯ ಮುಗಿಯುತ್ತಿದ್ದಂತೆಯೇ ಲಗು ಬಗೆಯಿಂದ ಹೊರ ಬಂದು ಗಾಡಿ ನಿಲ್ಲಿಸಿದ್ದೆಡೆ ಬಂದು ನೋಡಿದರೆ ನನಗಿಂತಲೂ ಮುಂಚೆ ನಮ್ಮ ಮಾವ ಅಲ್ಲಿ ಬಂದು ನಿಂತಿದ್ದರು. ಅಯ್ಯೋ ರಾಮ, ಬಿಟ್ಟು ಹೋಗಿದ್ದಕ್ಕೆ ಬಯ್ಯುತ್ತಾರೋ ಏನೋ ಅಂತಾ ಅಂದು ಕೊಂಡರೆ ಭಾರತ ಗೆದ್ದ ಭರದಲ್ಲಿ ಅವರಿಗೆ ಕೊಂಚವೂ ಕೋಪ ಇರಲಿಲ್ಲ ಬದಲಾಗಿ ತಣ್ಣಗೆ ಎಲ್ಲೋ ಹೋಗ್ಬಿಟ್ಟೇ ಮೊದಲು ಸ್ವಲ್ಪ ಹೊತ್ತು ಭಯ ಮತ್ತು ಬೇಸರವಾಯ್ತು ನಂತರ ಆಟ ನೋಡುವ ಭರದಲ್ಲಿ ಎಲ್ಲವೂ ಮರೆತು ಹೋಯ್ತು ಅಂದಾಗ ಬದುಕಿದೆಯಾ ಬಡ ಜೀವ ಎನ್ನುವಂತಾಯಿತು.

ಅಷ್ಟರಲ್ಲಾಗಲೇ ಗಂಟೆ ಹತ್ತಾಗಿತ್ತು. ಅಲ್ಲಿಂದ ಹಿಂದಿನ ದಿನವೇ ಹುಟ್ಟಿದ್ದ ನನ್ನ ಸೋದರ ಸೊಸೆಯನ್ನು ನೋಡಲು ಸೀದಾ ಆಸ್ಪತ್ರೆಗೆ ಹೋದರೆ ಅಸ್ಪತೆಯ ಮಂಭಾಗದಲೆಲ್ಲಾ ಜನರೋ ಜನ. ಎಲ್ಲರೂ ಟಿವಿ ಮುಂದೆ ನಿಂತು ಪಂದ್ಯ ಗೆದ್ದದ್ದನ್ನು ಸಂಭ್ರಮಿಸುತ್ತಿದ್ದರು. ಟಿವಿಯವರು ಅಮೀರ್ ಸೋಹೇಲ್ ಮತ್ತು ವೆಂಕಟೇಶ್ ಪ್ರಸಾದ್ ನಡುವಿನ ತಿಕ್ಕಾಟವನ್ನು ಹಿಗ್ಗೀ ಹಿಗ್ಗೀ ತೋರಿಸುತ್ತಿದ್ದನ್ನು ನೋಡಿದಾಗಲೇ ನಮಗೆ ಅಮೀರನ ಅಹಂಕಾರಕ್ಕೆ ವೆಂಕಟೇಶ ತಕ್ಕ ಪ್ರಸಾದ ಕೊಟ್ಟಿದ್ದು ತಿಳಿಯಿತು. ನಮ್ಮ ತಂದೆಯವರಂತೂ ಮೊಮ್ಮಗಳನ್ನು ನೋಡಲು ಆಸ್ಪತ್ರೆಗೆ ಬಂದವರಿಗೆ ಕೊಡಲು ತಂದಿಟ್ಟಿದ್ದ ಸಿಹಿ ತಿಂಡಿಯನ್ನು ಪಂದ್ಯ ಗೆದ್ದದ್ದಕ್ಕಾಗಿ ಆಸ್ಪತ್ರೆಯಲ್ಲಿ ಟಿವಿ ಮುಂದೆ ಕ್ರಿಕೆಟ್ ನೋಡುತ್ತಿದ್ದವರಿಗೆಲ್ಲಾ ಕೊಟ್ಟು ಸಂಭ್ರಮಿಸುತ್ತಿದ್ದರು.

ನನ್ನನ್ನೂ ಮತ್ತು ನನ್ನ ಮಾವನನ್ನು ನೋಡಿ ನೀವೇ ಅದೃಷ್ಟವಂತರು. ಪಂದ್ಯವನ್ನು ನೇರವಾಗಿ ಮೈದಾನದಲ್ಲೇ ನೋಡಿದಿರಿ. ಆದೂ ಹೊನಲು ಬೆಳಕಿನ ರೋಚಕ ಪಂದ್ಯ. ನಿಮ್ಮ ಅನುಭವ ಹೇಗಿತ್ತು ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದರೆ, ನಮಗೂ ಮಗುವನ್ನು ನೋಡುವ ಕಾತುರದಿಂದ ನನ್ನ ತಂಗಿ ಇದ್ದ ಕೋಣೆಗೆ ಹೋಗಿ ನೋಡಿದರೆ, ಅಮ್ಮಾ ಮತ್ತು ಮಗು ಆದಾಗಲೇ ನಿದ್ರಾ ಲೋಕಕ್ಕೆ ಜಾರಿಯಾಗಿತ್ತು. ಸುಮ್ಮನೆ ತೊಂದರೆ ಕೊಡಬಾರದೆಂದು ನಿರ್ಧರಿಸಿ ಹೊರ ಬಂದು ಸಂಜೆ ಮನೆಯಿಂದ ತಂದಿದ್ದ ಊಟದಲ್ಲಿ ಉಳಿದು ಪಳಿದಿದ್ದನ್ನು ತಿಂದೆವು. ಪಂದ್ಯ ಗೆದ್ದ ಖುಷಿಯಲ್ಲಿ ನಮಗೆ ಹಸಿವೇ ಇರಲಿಲ್ಲ. ಸೋದರ ಸೊಸೆಯನ್ನು ಅಂದೂ ನೋಡಲು ಆಗದಿದ್ದರೂ ಬೇಸರವಾಗಿರಲಿಲ್ಲ ಏಕೆಂದರೆ ಅಂದಿನ ಪಾಕೀಸ್ಧಾನದ ವಿರುಧ್ದದ ಅಮೋಘ ವಿಜಯ ಎಲ್ಲವನ್ನೂ ಮೆಟ್ಟಿ ನಿಂತಿತ್ತು.

ಆ ಪಂದ್ಯ ನಡೆದು ಇಂದಿಗೆ 25 ವರ್ಷಗಳು ಕಳೆದಿದೆ. ಅದಾದ ನಂತರ ನಡೆದ ಎಲ್ಲಾ ವಿಶ್ವಕಪ್ ಪಂದ್ಯಾವಳಿಯಲ್ಲಿಯೂ ಭಾರತ, ಪಾಕೀಸ್ಥಾನವನ್ನು ಸೋಲಿಸಿ ಅಜೇಯವಾಗಿದೆ.

ಪ್ರಸ್ತುತ ರಾಜಕೀಯ ಪರಿಸ್ಥಿಯಲ್ಲಿ ಪಾಕೀಸ್ತಾನದ ತನ್ನ ವಿದೇಶಾಂಗ ನೀತಿ ನಿಯಮಗಳನ್ನು ಬದಲಿಸಿ ಕೊಳ್ಳದಿರುವವರೆಗೂ, ಭಾರತದ ವಿರುದ್ಧ ಭಯೋತ್ಪಾದನಾ ಚಟುವಟಿಕೆಗಳನ್ನು ನಿಲ್ಲಿಸದಿರುವವರೆಗೂ ಪಾಪೀಸ್ಥಾನದ ಜೊತೆ ಯಾವುದೇ ವ್ಯವಹಾರಗಳಾಗಲೀ , ಆಟವನ್ನಾಗಲೀ ಅಥವಾ ಯಾವುದೇ ರೀತಿಯ ಸಂಬಂಧಗಳನ್ನು ಬೆಳೆಸುವುದು ಭಾರತೀಯರಿಗೆ ಬೇಡವಾಗಿದೆ.

ಅಂದು ಅದೇ ಪಾಪೀಸ್ಥಾನದ ಬೆಂಕಿಯಂತಹ ಚೆಂಡನ್ನು ವೀರಾವೇಶದಿಂದ ಎದುರಿಸಿ ಭಾರತದ ಪರ ಬ್ಯಾಟಿಂಗ್ ಮಾಡಿ 93 ರನ್ ಗಳಿಸಿ, ಪಂದ್ಯ ಗೆಲ್ಲಲು ಕಾರಣೀಭೂತನಾಗಿದ್ದ ನವಜೋತ್ ಸಿಂಗ್ ಸಿದ್ದು ಇಂದು ತನ್ನ ರಾಜಕೀಯ ವೃತ್ತಿ ಬದುಕಿನ ಅಸ್ತಿತ್ವಕ್ಕಾಗಿ ನಮ್ಮ ಶತ್ರು ದೇಶ ಪಾಪೀಸ್ಥಾನದ ಪರವಾಗಿ ಇಂದು ಬ್ಯಾಟಿಂಗ್ ಮಾಡುತ್ತಿರುವುದು ನಿಜಕ್ಕೂ ಹೇಯಕರವಾಗಿದೆ ಮತ್ತು ಈ ಸಂಗತಿ ಎಲ್ಲಾ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಒಂದು ಮಾತಂತೂ ಸತ್ಯ. ಅದು ಕ್ರಿಕೆಟ್ ಮೈದಾನವೇ ಆಗಿರಲಿ, ಅಥವಾ ವಿಶ್ವಸಂಸ್ಥೆಯ ಸಭೆಯೇ ಆಗಲಿ ಅಥವಾ ಬೇರಾವುದೇ ಯಾವುದೇ ಆಟದ ಮೈದಾದಲ್ಲೇ ಆಗಲೀ, ಹೋಗಲೀ ರಣರಂಗದಲ್ಲೇ ಆಗಲೀ ಭಾರತದ ಎದುರಾಳಿ ಪಾಪೀಸ್ಥಾನವಾಗಿದ್ದರೆ, ಗೆಲುವು ನಿಶ್ವಿತವಾಗಿಯೂ ನಮ್ಮದೇ ಆಗಿರುತ್ತದೆ. ಏಕೆಂದರೆ ಅಧರ್ಮಮಿಗಳ ವಿರುದ್ಧ ಸದಾ ಧರ್ಮವಂತರಿಗೇ ಜಯ. ಧರ್ಮವಂತರಿಗೇ ಸದಾ ಭಗವಂತನ ಅಭಯ.

ಧರ್ಮೋ ರಕ್ಷತಿ ರಕ್ಷಿತಃ  ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

4 thoughts on “ಆಮೀರನ ಅಹಂಗೆ ವೆಂಕಟೇಶನ ಪ್ರಸಾದ

 1. Vivarane thumba thumba chenagide, Indanu mathe mathe nenepirallu karana gotha, Adu nimma Mudhina sose Aishwaraya Huttida karana, Jeevanadalli mareyalagade gatenagallu

  Liked by 1 person

 2. ವ್ಹಾವ್ ಅದ್ಭುತ ವಿವರಣೆ, ನಿನಗೆ ನೆನಪಿದೆಯಾ ೮೩ರ ವಿಕ್ರಮ ನೀನು ಬಣ್ಣಿಸಿ ಬರೆದಾಗ ಈ ರೋಮಾಂಚಕ ಪಂದ್ಯದ ಬಗ್ಗೆ ಬರೆಯಲು ನನ್ನ ಅಪೇಕ್ಷೆ ಸಲ್ಲಿಸಿದ್ದೆ. ಪಂದ್ಯದ ಪ್ರತಿ ರೋಚಕ ಕ್ಷಣಗಳ ಪ್ರತ್ಯಕ್ಷ ಅನುಭವ ಪಡೆದು ಮತ್ತು ಅದನ್ನು ಅಷ್ಟೇ ರಸವತ್ತಾಗಿ ಬಣ್ಣಿಸಿರುವುದು ನನ್ನನು ೨೩ ವರ್ಷಗಳ ಹಿಂದೆ ಕರೆದೊಯ್ಯಿತು. ಆಗ ನಾವು ಬಿಇಎಲ್ ಕಾಲೋನಿಯಲ್ಲಿ (ನರ್ಸರಿ ಸ್ಕೂಲ್ ಹಿಂಭಾಗ) ವಾಸವಾಗಿದ್ದೆವು. ನಾನು ನನ್ನ ತಂದೆ ಪಂದ್ಯದ ನೇರ ಪ್ರಸಾರ ನೋಡುತ್ತಿದ್ದೆವು. ಪಾಕ್ ಆರಂಭಿಕ ಆಟಗಾರರ ಅಟ್ಟಹಾಸ ಮತ್ತು ನನ್ನ ತಂದೆಯವರ ಆಗ್ರಹಕ್ಕೆ ತುತ್ತಾಗಿ ಟಿ ವಿ ಬಂದಾಯಿತು. ಊಟ ಮಾಡಲು ಮನಸ್ಸಾಗದೆ ಎಲ್ಲರೂ ಮೌನಕ್ಕೆ ಶರಣಾಗಿದ್ದೆವು. ಇದ್ದಕ್ಕಿದ್ದಂತೆ ಪಟಾಕಿ ಸದ್ದು ಮತ್ತು “ಎಲ್ಲಾ” ಮನೆಗಳ ಸಂಭ್ರಮದ ಕೇಕೆ ಮುಗಿಲು ಮುಟ್ಟಿದಾಗ ಟಿವಿ ರಿಮೋಟ್ ಗೆ ಮುಗಿಬಿದ್ದೆ. ಆಮೀರ್ ಮತ್ತು ವೆಂಕಟೇಶ್ ಚಕಮಕಿ ರೀಪ್ಲೇ ನೋಡಿ ಒಂದು ರೀತಿಯ ಸಂತೃಪ್ತ ಭಾವ ಮೂಡಿದರೆ ನೇರ ಪ್ರಸಾರದ ಅನುಭವ ತಪ್ಪಿಸಿಕೊಂಡ ಹತಾಶೆಯೂ ಕಾಡಿತು. ನಂತರ ಮನೆಮಂದಿಯೆಲ್ಲ ಪಂದ್ಯದ ಪ್ರತಿ ಕ್ಷಣವೂ ಕಣ್ತುಂಬಿಸಿಕೊಂಡು ಸಂಭ್ರಮಿಸಿದೆವು. ಗೆಲುವಿನ ಹೊಸ್ತಿಲಲ್ಲಿ ಬಂದಾಗ ಕಾತುರ ಮತ್ತು ಉದ್ವೇಗದಿಂದ ವಯೋಮಿತಿಯಿಲ್ಲದೆ ಎಲ್ಲರೂ ಸಮಾನಮನಸ್ಕರಾಗಿದ್ದೆವು. ಕೊನೆಯ ವಿಜಯದ ಎಸೆತ ಮುಗಿಯುತ್ತಿದ್ದಂತೆ ಸಂಭ್ರಮದ ಕಟ್ಟೆಯೊಡೆದು ಅರಿವಿಲ್ಲದೆ ಕಣ್ಣಾಲಿಗಳು ತುಂಬಿದ್ದವು. ನಾನು ಮತ್ತು ಕಾಲೋನಿ ಗೆಳೆಯರ ಬಳಗ ರಾತ್ರಿ ಅವೇಳೆಯನ್ನು ಲೆಕ್ಕಿಸದೆ ಪ್ರತಿ ರಸ್ತೆಯಲ್ಲಿ ಭಾರತ್ ಮಾತಾ ಕೀ ಜೈ ಮತ್ತು ಹಿಂದುಸ್ತಾನ್ ಜಿಂದಾಬಾದ್ ಎಂದು ಗೆಲುವಿನ ಜೈಕಾರ ಹಾಕಿದೆವು. ಈ ಪಂದ್ಯ ಎಲ್ಲ ಸ್ವಾಭಿಮಾನಿ ಭಾರತೀಯರನ್ನು ಭಾವನಾತ್ಮಕವಾಗಿ ಬೆಸೆದಿತ್ತು. ಹೆಮ್ಮೆ ಮತ್ತು ವಿಶ್ವಾಸ ನೂರ್ಮಡಿ ಮಾಡಿದ ಈ ಪಂದ್ಯದ ಕ್ಷಣಗಳ ಮೆಲುಕು ಹಾಕುವ ಅವಕಾಶ ಒದಗಿಸಿದಕ್ಕೆ ಧನ್ಯವಾದಗಳು.

  Liked by 1 person

  1. ಇಂತಹ ಗೆಲುವುಗಳು ಅದೂ ನಮ್ಮ ಸಾಂಪ್ರದಾಯಿಕ ವಿರೋಧಿಗಳ ವಿರುದ್ಧ ನಿಜಕ್ಕೂ ವಿಶೇಷವಾಗಿರುತ್ತದೆ. ನನ್ನ ಮುಂದಿನ ಬರವಣಿಗೆ ನಾನೂ ನೀನು ವೀಕ್ಷಿಸಿದ ಮತ್ತು ಕಡೆಯ ರಸ ಕ್ಷಣಗಳನ್ನು ತಪ್ಪಿಸಿಕೊಂಡ ಭಾರತ ಮತ್ತು ಆಸ್ಟ್ರೇಲಿಯ ಪಂದ್ಯ. ಅದೂ ಕನ್ನಡಿಗರಾದ ಕುಂಬ್ಲೆ ಮತ್ತು ಶ್ರೀನಾಥ್ ರೋಜಕವಾಗಿ ಆಡಿ ಗೆಲ್ಲಿಸಿದ ಪಂದ್ಯ

   Like

 3. ಸೊಗಸಾದ ವಿವರಣೆ 🙏

  ವೆಂಕಟೇಶ್ ಪ್ರಸಾದ್ ಅಮೀರ್ ನನ್ನು ಪೆವಿಲಿನ್ಗೆ ಅಟ್ಟಿದ್ದು ಮರೆಯಲಾಗದ ನೆನಪು 🤩

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s