ಕನ್ನಡದ ಅಸ್ಥಿತ್ವ ಮತ್ತು ಅಸ್ಮಿತೆ

ಇನ್ನೆರಡು ತಿಂಗಳು ಮುಗಿದು ನವೆಂಬರ್ 1 ನೇ ತಾರೀಖು ಬಂದಿತೆಂದರೆ ಕನ್ನಡಿಗರಿಗೆಲ್ಲಾ ಕನ್ನಡ ರಾಜ್ಯೋತ್ಸವದ ಸಂಭ್ರವೋ ಸಂಭ್ರಮ. ಖನ್ನಡ ಓರಾಟಗಾರರಿಗೆ ಮತ್ತು ನಮ್ಮ ರಾಜಕೀಯ ಧುರೀಣರಿಗಂತೂ ನವೆಂಬರ್ 1 ರಿಂದ 30ನೇ ತಾರೀಖಿನವರೆಗೂ ಪುರುಸೊತ್ತೇ ಇರುವುದಿಲ್ಲ. ಎಲ್ಲೆಲ್ಲಿ ನೋಡಿದರೂ ಕನ್ನಡ ಬಾವುಟದ ಭರಾಟೆ, ಉತ್ಸವಗಳು, ಮನೋರಂಜನಾ ಕಾರ್ಯಕ್ರಮಗಳು, ಒಂದೇ ಎರಡೇ ಅಬ್ಬಬ್ಬಾ ಹೇಳಲಾಗದು. ಕಲಾವಿದರು, ವಾದ್ಯಗೋಷ್ಟಿ ತಂಡಗಳು ಮಿಕ್ಕೆಲ್ಲಾ ಭಾಷೆಗಳು ಗೊತ್ತೇ ಇಲ್ಲವೇನೋ ಎನ್ನುವಂತೆ ಕೇವಲ ಕನ್ನಡ ಭಾಷೆಯನ್ನೂ ಮಾತ್ರವೇ ಆಡುವುದು ಮತ್ತು ಹಾಡುವುದನ್ನು ಕೇಳಲು ಆನಂದ. ನವೆಂಬರ್ 1 ರಂದು ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ (ಉಳಿದ 364 ದಿನ ಪರಭಾಷೆಗಳ ಚಿತ್ರಕ್ಕೇ ಮೀಸಲು) ಕಡ್ಡಾಯವಾಗಿ ಕನ್ನಡ ಚಲನ ಚಿತ್ರಗಳನ್ನು ಪ್ರದರ್ಶಿಸುವುದು ನೋಡಲು ಮಹದಾನಂದ. ನವೆಂಬರ್ ತಿಂಗಳು ಮುಗಿದು ಡಿಸೆಂಬರ್ ತಿಂಗಳಿನಿಂದ ಮುಂದಿನ ವರ್ಷ ಅಕ್ಟೋಬರ್ 31 ರ ವರೆಗೆ ಕನ್ನಡದ ಬಗ್ಗೆ ಕುಂಭಕರ್ಣ ನಿದ್ದೆಯ ಧೋರಣೆ. ಇಂಗ್ಲೀಷ್, ಕಂಗ್ಲೀಷ್, ಇಲ್ಲವೇ ಇತರೇ ಭಾಷೆಗಳದ್ದೇ ಪ್ರಾಭಲ್ಯ.

ನವೆಂಬರ್ 1 ನೇ ತಾರೀಖು ಬರುವ ಮುಂಚೆಯೇ ಇಷ್ಟೆಲ್ಲಾ ಪೀಠಿಕೆ ಏಕಪ್ಪಾ? ಎಂದು ಯೋಚಿಸುತ್ತಿದ್ದರೆ, ಕಳೆದ ಎರಡು ದಿನಗಳ ಹಿಂದೆ ನಿರ್ದೇಶಕ ರಿಷಬ್ ಶೆಟ್ಟಿಯವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಲನ ಚಿತ್ರ ನೋಡಿದ ನಂತರ ಮನಸ್ಸಿನಲ್ಲಿ ಏನೋ ಒಂದು ರೀತಿಯ ಕಳವಳ. ಸುಮಾರು 1890ನೇ ಇಸವಿಯಿಂದಲೂ ಕನ್ನಡದ ಅಸ್ತಿತ್ವಕ್ಕಾಗಿ ಕಾಸರುಗೋಡಿನಲ್ಲಿ ಹಲವಾರು ಧೀಮಂತ ಕನ್ನಡಾಭಿಮಾನಿಗಳು ಹೋರಾಡುತ್ತಾ, ಕೆಲವು ವರ್ಷಗಳು ಮುಂಬಯಿ ಕರ್ನಾಟಕದ ಭಾಗವಾಗಿ, ಇನ್ನು ಕೆಲವು ವರ್ಷ ಮದ್ರಾಸ್ ಪ್ರಾಂತ ಭಾಗವಾಗಿ ಸ್ವಾತಂತ್ರ್ಯಾನಂತರ ಇನ್ನೇನು ದಕ್ಷಿಣ ಕನ್ನಡದ ಭಾಗವಾಗಿ ಬಿಡುತ್ತೇವೆ ಎಂದು ಎಲ್ಲರೂ ಸಂತಸ ಪಡುತ್ತಿದ್ದಾಗಲೇ ಭಾಷಾವಾರು ಪ್ರಾಂತದ ವಿಂಗಡನೆಯ ಸಮಯದಲ್ಲಿ ಕೆಲವು ಅಧಿಕಾರಿಗಳ ಕುತಂತ್ರದಿಂದಾಗಿ ಕೇರಳದ ಭಾಗವಾಗಿ ಹೋದದ್ದು ಈಗ ಇತಿಹಾಸ. ಕನ್ನಡದ ಪ್ರಥಮ ರಾಷ್ಟ್ರಕವಿ ಪಂಜೆ ಮಂಗೇಶರಾಯರು, ಇತ್ತೀಚೆಗಷ್ಟೇ ನಮ್ಮನ್ನಗಲಿದ ಕಯ್ಯಾರ ಕೀಯಣ್ಣರೈ ಮುಂತಾದವರ ನೇತೃತ್ವದಲ್ಲಿ ಎಷ್ಟೆಷ್ಟೋ ಹೋರಾಟ ನಡೆಸಿದರೂ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆದರೂ ಅಲ್ಲಿಯ ಕನ್ನಡಿಗರು ಛಲ ಬಿಡದ ತ್ರಿವಿಕ್ರಮನಂತೆ ಹೋರಾಡುತ್ತಲೇ ಇದ್ದಾರೆ. ವ್ಯಾವಹಾರಿಕವಾಗಿ ಮಲೆಯಾಳಂ, ತುಳು, ಕೊಂಕಣಿ, ಮರಾಠಿ ಭಾಷೆಗಳನ್ನು ಬಳೆಸುತ್ತಿದ್ದರೂ ಮನೆಗಳಲ್ಲಿ, ಮನಸ್ಸುಗಳಲ್ಲಿ, ಮಠ ಮಂದಿರಗಳಲ್ಲಿ, ಕೊನೆಗೆ ಶಾಲೆಗಳಲ್ಲಿಯೂ ಕನ್ನಡಾಭ್ಯಾಸಕ್ಕೇ ಒತ್ತು ಕೊಟ್ಟು ಕನ್ನಡವನ್ನು ಇನ್ನೂ ಉಳಿಸಿಕೊಂಡು ಬೆಳೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ. ರಾಜ್ಯಸರ್ಕಾರದ ಅನುದಾನಗಳು ಕನ್ನಡ ಶಾಲೆಗಳಿಗೆ ಸರಿಯಾಗಿ ಬಾರದಿದ್ದರೂ ಕೆಲವು ಹೃದಯವಂತ ಕನ್ನಡಿಗರ ದಾನದ ಫಲದಿಂದ ಶಾಲೆಗಳನ್ನು ನಡೆಸಿಕೊಂಡು ಹೋಗುತ್ತಿರುವುದನ್ನು ನಿಜಕ್ಕೂ ಅಭಿನಂದನೀಯವೇ ಸರಿ. ವಿಪರೀತ ನಗರೀಕರಣದಿಂದ ಮಲೆಯಾಳಂ ಮತ್ತು ಆಂಗ್ಲ ಶಾಲೆಗಳ ಆಕರ್ಷಣೆಯಿಂದ, ಕೆಲವು ಶಿಕ್ಷಣ ಅಧಿಕಾರಿಗಳ ಧೋರಣೆಯಿಂದ ಕನ್ನಡ ಶಾಲೆಯಲ್ಲಿ ಕಲಿಯುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದರೂ ತಮ್ಮ ಮಕ್ಕಳಿಗೆ ಕನ್ನಡ ಕಲಿಸಲೇ ಬೇಕೆಂಬ ಛಲದಿಂದ ಪೋಷಕರು ಶಾಲೆಗಳನ್ನು ಪೋಷಿಸಿಕೊಂಡು ಹೋಗುತ್ತಿದ್ದಾರೆ.

ದೂರದ ಕಾಸರುಗೋಡಿನಲ್ಲಿ ಅಷ್ಟೆಲ್ಲಾ ಅಡೆಚಣೆಗಳ ಮಧ್ಯೆ ಕನ್ನಡ ಅಸ್ಮಿತೆ ಮತ್ತು ಅಸ್ಥಿತ್ವವನ್ನು ಉಳಿಸಿಕೊಂಡು ಹೋಗುತ್ತಿದ್ದರೆ ನಮ್ಮ ರಾಜ್ಯದ ಗಡಿ ಭಾಗಗಳಾದ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಯ ಹಲವಾರು ಕಡೆ, ಬೆಳಗಾಂ, ಬಳ್ಳಾರಿ, ರಾಯಚೂರು, ಅಷ್ಟೇಕೆ ನಮ್ಮ ಬೆಂಗಳೂರಿನಲ್ಲೂ ಕನ್ನಡ ಶಾಲೆಗಳು ಅಲ್ಲೋಂದು ಇಲ್ಲೋಂದು ಆಳಿದುಳಿದ ಪಳುವಳಿಕೆಯಂತೆ ಉಳಿದುಕೊಂಡಿರುವುದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ. ಕಾವೇರಿಯಿಂದ ಗೋದಾವರಿಯವರೆಗೆ ವಿಶಾಲವಾಗಿ ಅರಳಿದ್ದ ಕನ್ನಡ ನಾಡು, ಎಲ್ಲ ಭಾರತೀಯ ಭಾಷೆಗಳ ಮೂಲ ಭಾಷೆಯಾದ ಸಂಸ್ಕೃತಕ್ಕೇ ಸಡ್ಡು ಹೊಡೆಯುವಂತೆ ಸಂಸ್ಕೃತ ಪದಗಳಿಗೆ ಸಮಾನಾಂತರ ತತ್ಸಮ ತದ್ಭವ ಪದಗಳನ್ನು ಹೊಂದಿರುವ ಕನ್ನಡದ ಭಾಷೆಯನ್ನು ಇಂದು ಕಲಿಯುವವರ ಮತ್ತು ಕಲಿಸುವವರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿರುವುದು ಕಳವಳಕಾರಿಯಾಗಿದೆ. ಏಳು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವಂತಹ ಪಂಪ,ರನ್ನ ಜನ್ನ, ಕುಮಾರವ್ಯಾಸ ಮುಂತಾದ ಕವಿಪುಂಗವರ ಇತ್ತೀಚಿನ ಕವಿಗಳಾದ ಅಡಿಗರು, ಬೈರಪ್ಪನವರೂ, ಲಂಕೇಶ್, ನಾ.ಡಿಸೋಜ, ನಿಸಾರ್ ಅಹ್ಮದ್, ನಾಗತೀಹಳ್ಳಿ ಚಂದ್ರಶೇಖರ್, ಚಂಪಾ ಮುಂತಾದವರ ಅಚ್ಚುಮೆಚ್ಚಿನ ಭಾಷೆ ಇಂದು ಅವನತಿಯ ಹಂತ ತಲುಪಿರುವುದು ವಿಷಾಧನೀಯವೇ ಸರಿ.

ಹಳೇ ಮೈಸೂರು ಪ್ರಾಂತ್ಯಗಳಾದ ಮೈಸೂರು, ಮಂಡ್ಯ ಹಾಸನ, ಚಿಕ್ಕಮಗಳೂರು, ಮಧ್ಯ ಕರ್ನಾಟಕದ ಶಿವಮೊಗ್ಗ, ದಾವಣಗೆರೆ, ಉತ್ತರ ಕನ್ನಡ, ಹಾವೇರಿ, ಧಾರವಾಡ, ಹುಬ್ಬಳ್ಳಿ ಮುಂತಾದ ಕಡೆಗಳಲ್ಲಿ ಇನ್ನೂ ಕನ್ನಡ ಜೀವಂತವಾಗಿದೆಯಾದರೂ ಉಳಿದೆಲ್ಲಾ ಪ್ರದೇಶಗಳಲ್ಲಿ ನೆರೆ ಹೊರೆ ಭಾಷೆಗಳ ಅಡಿಯಾಳಾಗಿ ಕೇವಲ ಆಡು ಭಾಷೆಯಾಗಿ ಆತಂಕಕಾರಿಯಾಗಿದೆ ಹೀಗೆಯೇ ನಮ್ಮ ಭಾಷೆಯ ಮೇಲಿನ ವ್ಯಾಮೋಹ ಕಡಿಮೆಯಾಗಿ ಹೋದಲ್ಲಿ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಸಂಸ್ಕೃತ ಭಾಷೆಯಂತೆ ಕನ್ನಡ ಭಾಷೆಯೂ ಗ್ರಂಥಗಳಲ್ಲಿಯೇ ಉಳಿದು ಹೋಗಿ ಮೃತ ಭಾಷೆ ಎಂದು ಕರೆಸಿ ಕೊಳ್ಳುವುದರಲ್ಲಿ ಅನುಮಾನವೇ ಇಲ್ಲದಂತಾಗಿ ಹೋಗಿದೆ. ಒಂದು ಭಾಷೆ ಅಳಿವಾದರೆ ಅದು ಕೇವಲ ಭಾಷೆಗಾದ ನಷ್ಟವಲ್ಲ. ಅದು ಒಂದು ಸಂಸ್ಕಾರ, ಸಂಸ್ಕೃತಿಯ ಅವನತಿಯಾದಂತೆಯೇ ಸರಿ. ಹಾಗಾಗಿ ನಮ್ಮ ಕನ್ನಡ ಭಾಷೆಯ ಉಳಿವಿಗಾಗಿ ನಮ್ಮ ಮನ ಮನೆಗಳಲ್ಲಿ ಇಂತಹ ಪ್ರಯತ್ನ ಮಾಡಬಹುದೇ?

  • ಮನೆಯೇ ಮೊದಲ ಪಾಠಶಾಲೆ ಹಾಗಾಗಿ ನಮ್ಮ ಮನೆಯಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹರಿಸ ಬಹುದೇ?
  • ನಮ್ಮ ಮಕ್ಕಳಿಗೆ ಅಚ್ಚ ಕನ್ನಡದ ಹೆಸರಿಡಬಹುದೇ?
  • ನಮ್ಮ ಮಕ್ಕಳಿಗೆ ಮಮ್ಮಿ ಡ್ಯಾಡಿ, ಆಂಟಿ, ಅಂಕಲ್ ಅಂಥಾ ಹೇಳಿ ಕೊಡುವ ಬದಲು ಅಚ್ಚ ಕನ್ನಡದಲ್ಲಿ ಅಮ್ಮಾ, ಅಪ್ಪಾ, ಚಿಕ್ಕಪ್ಪಾ, ಚಿಕ್ಕಮ್ಮಾ, ಅತ್ತೆ-ಮಾವ, ಅಜ್ಜಿ-ಅಜ್ಜ ತಾತ-ಅಜ್ಜಿ ಎಂಬಂತಹ ಸಂಬಂಧ ಬೆಸೆಯುವ ಪದಗಳನ್ನೇ ಉಪಯೋಗಿಸಬಹುದೇ?
  • ಶಾಲೆಯಲ್ಲಿ ಯಾವುದೇ ಭಾಷೆಯಲ್ಲಿ ವ್ಯಾಸಂಗ ಮಾಡುತ್ತಿದ್ದರೂ ನಮ್ಮ ಮಕ್ಕಳಿಗೆ ಮನೆಯಲ್ಲಿ ನಾವೇ ಸ್ಪುಟವಾಗಿ ಕನ್ನಡ ಓದಲು ಬರೆಯಲು ಕಲಿಸುವ ಪ್ರಯತ್ನಿಸ ಬಹುದೇ?
  • ಪ್ರತಿದಿನ ಇತರೇ ವೃತಪತ್ರಿಕೆಗಳೊಂದಿಗೆ ಕನ್ನಡ ಪತ್ರಿಕೆ ಮತ್ತು ವಾರಪತ್ರಿಕೆಗಳನ್ನು ತರಿಸಿ ನಮ್ಮ ಮಕ್ಕಳಿಗೆ ಓದಲು ಅನುವು ಮಾಡಿ ಕೊಡಬಹುದೇ?
  • ಕನ್ನಡ ಹಲವಾರು ಖ್ಯಾತ ಲೇಖಕರ ಪುಸ್ತಕಗಳನ್ನೇ ಖರೀದಿಸಿ ಎಲ್ಲಾ ಸಭೇ ಸಮಾರಂಭಗಳಲ್ಲಿ ಉಡುಗೊರೆಯಾಗಿ ಕೊಡುವ ಸತ್ಸಂಪ್ರದಾಯ ಬೆಳಸಿ ಕೊಳ್ಳಬಹುದೇ?
  • ಆದಷ್ಟೂ ಕನ್ನಡ ಚಲನಚಿತ್ರಗಳು ಮತ್ತು ಕನ್ನಡ ಛಾನಲ್ಗಳನ್ನೇ ನೋಡುವ ಅಭ್ಯಾಸ ಬೆಳೆಸಿ ಕೊಳ್ಳಬಹುದೇ?
  • ಹೋಟೆಲ್ಗಳಲ್ಲಿ ರೈಸ್, ಸಾಂಬರ್, ಪಿಕ್ಕಲ್ ಬದಲಾಗಿ ಅನ್ನ, ಹುಳಿ, ಉಪ್ಪಿನ ಕಾಯಿ, ಅಂಗಡಿಗಳಲ್ಲಿ ರೈಸ್, ದಾಲ್, ಆಯಿಲ್ ಬದಲಾಗಿ ಅಕ್ಕಿ, ಬೇಳೆ, ಎಣ್ಣೆ, ತರಕಾರಿ ಅಂಗಡಿಗಳಲ್ಲಿ, ಬೀನ್ಸ್, ಕ್ಯಾಪ್ಸಿಕಾಂ, ಚಿಲ್ಲಿ ಬದಲಾಗಿ ಹುರಳಿಕಾಯಿ, ದೊಣ್ಣೆಮೆಣಸಿಕಾಯಿ, ಮೆಣಸಿನಕಾಯಿ, ಹಣ್ಣಿನ ಅಂಗಡಿಗಳಲ್ಲಿ ಆಪೆಲ್, ಆರೆಂಜ್, ಬನಾನ ಬದಲಾಗಿ, ಸೇಬು, ಕಿತ್ತಳೆ, ಬಾಳೇಹಣ್ಣುಗಳನ್ನು ಕೊಡಿ ಎಂದು ಕೇಳ ಬಹುದೇ?
  • ನೆರೆಹೊರೆಯವರ ಜೊತೆ ಮತ್ತು ಕಛೇರಿಗಳಲ್ಲಿ ಕನ್ನಡ ಗೊತ್ತಿರುವವರ ಬಳಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲೇ ಮಾತನಾಡ ಬಹುದೇ?

ಗಣೇಶೋತ್ಸವ, ಅಣ್ಣಮ್ಮ, ಊರ ಹಬ್ಬ, ನಾಡ ಹಬ್ಬಗಳ ರಾಜ್ಯೋತ್ಸವದ ಸಮಯದಲ್ಲಿ ಕನ್ನಡ ಕಲಾವಿದರಿಗೇ ಆದ್ಯತೆ ಕೊಟ್ಟು, ನಾಟಕ, ನೃತ್ಯ, ಸಂಗೀತ ವಾದ್ಯಗೋಷ್ಠಿಗಳು ಕನ್ನಡ ಭಾಷೆಯದ್ದೇ ಆಗಿರುವಂತೆ ನೋಡಿ ಕೊಳ್ಳಬಹುದೇ?

ನಮ್ಮ ಮನೆಯ ಮುಂದಿನ ಫಲಕ, ನಮ್ಮ ಅಂಗಡಿ, ಮುಗ್ಗಟ್ಟಿನ ಫಲಕಗಳು ಮತ್ತು ನಮ್ಮ ರಸ್ತೆಯ ನಾಮಫಲಕಗಳನ್ನು ಕನ್ನಡದಲ್ಲಿಯೇ ಬರೆಸುವಂತಾಗ ಬಹುದೇ?

ಖನ್ನಡಾ, ಖನ್ನಡಾ ಎಂದು ಬಸ್ಸು, ರೈಲು ಮೆಟ್ರೋಗಳ ನಿಲ್ಡಾಣಗಳಲ್ಲಿ ಹೋರಾಡುವ ಬದಲು, ಅನ್ಯ ಬಾಷಿಕರಿಗೆ ಕನ್ನಡ ಕಲಿಯಲೇ ಬೇಕೆಂದು ಬಲವಂತವಾಗಿ ಹೋರಾಟ ನಡೆಸುವ ಮೊದಲು ಕನ್ನಡಿಗರಾದ ನಾವುಗಳೇ ನಮ್ಮ ಮನೆಗಳಿಂದಲೇ ಕನ್ನಡ ಕಿಚ್ಚನ್ನು ಹಬ್ಬಿಸಿದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸೊಗಡನ್ನು ನಮ್ಮ ಮುಂದಿನ ಪೀಳಿಗೆಯವರೆಗೂ ಉಳಿಸಿ ಹೋಗಬಹುದಲ್ಲವೇ?

ನನ್ನ ಅಭಿಪ್ರಾಯವನ್ನು ಮತ್ತು ಕನ್ನಡದ ಬಗ್ಗೆಯ ಕಳಕಳಿಯನ್ನು ನಿಮ್ಮೆಲ್ಲರ ಬಳಿ ಬಿಚ್ಚುಮನಸ್ಸಿನಿಂದ ತೋಡಿಕೊಂಡಿದ್ದೇನೆ. ಕನ್ನಡ ಉಳಿಸುವಿಕೆಗೆ ನಾವುಗಳು ಸುಲಭವಾಗಿ ಹೇಗೆಲ್ಲಾ ತೊಡಗಿಕೊಳ್ಳಬಹುದೆಂದು ನನಗೆ ತೋಚಿದಂತೆ ವಿವರಿಸಿದ್ದೇನೆ. ನಾನು ತಿಳಿಸಿದ್ದಕ್ಕಿಂತಲೂ ಇನ್ನೂ ಅನೇಕ ರೀತಿಯಿಂದ, ನಿಮ್ಮ ನಿಮ್ಮಗಳ ಅಭಿಲಾಶೆಗಳಿಗೆ, ಆಸ್ತೆಗೆ ತಕ್ಕಂತೆ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಸಾಮರ್ಥ ನಿಮ್ಮೆಲ್ಲರ ಬಳಿ ಇದ್ದೇ ಇದೆ. ಆದರೆ ಅದಕ್ಕೆ ಮನಸ್ಸು ಮಾಡಬೇಕಷ್ಟೇ.

ಒಗ್ಗಟ್ಟಿನಲ್ಲಿ ಬಲವಿದೆ, ಮನಸ್ಸಿದ್ದಲ್ಲಿ ಮಾರ್ಗವಿದೆ.

ಏನಂತೀರೀ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s