ದಸರಾ ಹಬ್ಬ

ದಸರಾ ಹಬ್ಬ  ನಮ್ಮ ಕನ್ನಡಿಗರ ನಾಡಹಬ್ಬ. ಆಶ್ವಯುಜ ಮಾಸದ ಪಾಡ್ಯದಿಂದ ಹಿಡಿದು ದಶಮಿಯವರೆಗು ಹತ್ತು ದಿನಗಳವರೆಗೆ ಆಚರಿಸಲ್ಪಡುವ ವಿಶೇಷವಾದ ಹಬ್ಬ. ದೇಶಾದ್ಯಂತ ದುರ್ಗೆಯ ವಿವಿಧ ರೂಪಗಳಾದ ಶೈಲಪುತ್ರಿ ,  ಬ್ರಹ್ಮಚಾರಿಣಿ , ಚಂದ್ರಘಂಟಾ , ಖುಷ್ಮಾಂಡ, ಸ್ಕಂದಮಾತ, ಕಾತ್ಯಾಯನಿ, ಕಾಳರಾತ್ರಿ,  ಮಹಾಗೌರಿ  ಮತ್ತು ಸಿದ್ಧಿ ಧಾತ್ರಿ ಹೀಗೆ ನಾನಾ ರೂಪಗಳಿಂದ ಅಲಂಕರಿಸಲ್ಪಟ್ಟು ಹತ್ತನೇ ದಿನ ಲಕ್ಷಾಂತರ ಜನರ ಸಮ್ಮುಖದಲ್ಲಿ  ಭಾರೀ ಮೆರವಣಿಗೆಯೊಂದಿಗೆ ಕೆರೆ ಕಟ್ಟೆಗಳಲ್ಲಿ ವಿಸರ್ಜಿಸಲ್ಪಡುವ ಹಬ್ಬ.  ಉತ್ತರ ಭಾರತದಲ್ಲಂತೂ ಈ ಹತ್ತೂ ದಿನಗಳು ಬಹುತೇಕ ಜನರು ಉಪವಾಸ ವ್ರತಾವರಣೆಯಲ್ಲಿದ್ದು ಬಾರೀ ಭಕ್ತಿ ಭಾವನೆಗಳಿಂದ ಆಚರಿಸಲ್ಪಡುವ ಹಬ್ಬವಾದರೆ ನಮ್ಮ ದಕ್ಷಿಣ ಭಾರತದಲ್ಲಿ ಅದಕ್ಕೆ ತದ್ವಿರುಧ್ಧವಾಗಿ ಅತ್ಯಂತ ಸರಳ ಮಡಿ ಆದರೆ ಬಾರೀ ವೈಭವದಿಂದ ಆಚರಿಸಲ್ಪಡುತ್ತದೆ. ಅಂದೆಲ್ಲಾ  ರಾಜ ರಾಣಿಯನ್ನು ದೇವರೆಂದೇ ಭಾವಿಸುವ ಕಾಲವಾಗಿದ್ದು,  ರಾಜಾ ಪ್ರತ್ಯಕ್ಷ ದೇವತಾ ಎಂಬ ಭಾವನೆಯಿಂದ, ದಸರಾ ಹಬ್ಬದ ಸಮಯದಲ್ಲಿ   ರಾಜಾರಾಣಿಯರ ಸ್ವರೂಪವಾಗಿ ಪಟ್ಟದ ಬೊಂಬೆಗಳನ್ನು ಮನೆ ಮನೆಗಳಲ್ಲಿ ಕೂರಿಸಿ ಪೂಜಿಸುವುದು ನಡೆದುಕೊಂಡು ಬಂದಿರುವ ಸತ್ಸಂಪ್ರದಾಯ.

dasaragombe

ದಸರಾ ಹಬ್ಬಕ್ಕೆ ಎರಡು ಮೂರು ದಿನಗಳ ಮುಂಚಿತವಾಗಿಯೇ ಮನೆಗಳ ಆಟ್ಟದಲ್ಲಿ ಜೋಪಾನವಾಗಿ ಎತ್ತಿಟ್ಟಿದ್ದ ಗೊಂಬೆಗಳನ್ನು ಕೆಳಗಿಳಿಸಿ ಸ್ವಚ್ಚಗೊಳಿಸಿ, ಮದುವೆಯ ಸಂದರ್ಭದಲ್ಲಿ  ತವರು ಮನೆಯಿಂದ ಕೊಡಲ್ಪಟ್ಟಿದ್ದ  ಪಟ್ಟದ  ರಾಜಾ ಮತ್ತು  ರಾಣಿ ಗೊಂಬೆಗಳಿಗೆ ಅಂದ ಚಂದದಿಂದ  ಕಚ್ಚೆ ಪಂಚೆ, ಮೈಸೂರು ಪೇಟ, ಝರಿ ಸೀರೆ ಕುಪ್ಪಸಗಳನ್ನು ತೊಡಿಸಿ ಒಪ್ಪ ಓರಣವಾಗಿ ಅಲಂಕಾರಿಕವಾಗಿ  ಕನ್ನಡಿ ಕಳಸಗಳೊಂದಿಗೆ ಜೋಡಿಸುವುದನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲವುದಶಾವತಾರದ ಗೊಂಬೆಗಳು ಒಂದು ಸಾಲಾದರೆ, ದೇವಸ್ಥಾನದ ರಾಜಗೋಪುರದ ಜೊತೆಯಲ್ಲಿ  ರಾಮ, ಸೀತೆ ಲಕ್ಷ್ಮಣ ಮತ್ತು ಆಂಜನೇಯರದ್ದು ಮತ್ತೊಂದು ಕಡೆ.  ದೇವಸ್ಥಾನದ ಮುಂದೆ ವಾದ್ಯಮೇಳಗಳ ತಂಡದ ಬೊಂಬೆಗಳಿದ್ದರೆ ಅವುಗಳ ಮುಂದೆ ಕೀಲು ಕುದುರೆ ಚೋಮನ ಕುಣಿತದ ಗೊಂಬೆಗಳು.  ಇವುಗಳ ಬದಿಯಲ್ಲಿ ವಿವಿಧ ದೇವಾನು ದೇವತೆಗಳು ಬೊಂಬೆಗಳೂ, ಆಚಾರ್ಯ ತ್ರಯರಾದ ಶಂಕರ, ಮಧ್ವಾಚಾರ್ಯರು ಮತ್ತು ರಾಮಾನುಜರ ಜೊತೆ ಬುದ್ಡ, ಬಸವ ವಿವೇಕಾನಂದರ ಸಮ್ಮಿಳಿನಗಳ ಬೊಂಬೆ ಮಗದೊಂದಡೆ.   ಡೊಳ್ಳು ಹೊಟ್ಟೆಯ ಶೆಟ್ಟರ ಜೊತೆ  ಆತನ ದಡೂತಿ  ಹೆಂಡತಿ ದಿನಸಿಗಳೊಂದಿಗೆ ವ್ಯಾಪಾರ ಮಾಡುತ್ತಿರುವ ಗೊಂಬೆಗಳು ಮಗದೊಂದೆಡೆ. ಉದ್ಯಾನವನದಲ್ಲಿ ವಿವಿಧ ಗಿಡ ಮರಗಳೊಂದಿಗೆ ಆಟವಾಡುತ್ತಿರುವ ಮಕ್ಕಳ ಗೊಂಬೆಗಳು ಅದರ ಜೊತೆ ಜೊತೆಯಲ್ಲಿಯೇ ಮೃಗಾಲಯವನ್ನು ತೋರಿಸುವಂತೆ ಕಾಡು ಪ್ರಾಣಿಗಳಾದ  ಆನೆ, ಒಂಟೆ, ಹುಲಿ, ಸಿಂಹ, ಜಿಂಕೆ, ನರಿ ಹೀಗೆ ಹಲವಾರು ಗೊಂಬೆಗಳು ಜೊತೆ   ಇತ್ತೀಚೆಗೆ ಕ್ರಿಕೆಟ್, ಫುಟ್ವಾಲ್ ಆಟಗಾರರ ಗೊಂಬೆಗಳನ್ನು ಜೋಡಿಸುವುದೂ ಉಂಟು. ಒಟ್ಟಿನಲ್ಲಿ ಅವರವರ ಕಲ್ಪನೆಗೆ  ತಕ್ಕಂತೆ, ಅಭಿರುಚಿಗೆ ತಕ್ಕಂತೆ ವಿವಿಧ ರೀತಿಯ ಗೊಂಬೆಗಳನ್ನು ಮನೆಯಲ್ಲಿ ಅಲಂಕಾರಿಕವಾಗಿ ಜೋಡಿಸಿ ಪ್ರತಿದಿನವೂ ಸಂಜೆ ಅವುಗಳಿಗೆ ಆರತಿ ಮಾಡಿ ಮನೆಯ  ಸುತ್ತ ಮುತ್ತಲಿನ ಎಲ್ಲ ಮಕ್ಕಳನ್ನೂ ಮತ್ತು ಮುತ್ತೈದೆಯರನ್ನು ಮನೆಗೆ ಕರೆದು ಪ್ರತಿದಿನವೂ ಬಗೆ ಬಗೆಯ ಭಕ್ಷಗಳನ್ನು ತಯಾರಿಸಿ ಬಾಗಿನದ ರೂಪದಲ್ಲಿ ವಿತರಿಸುವುದು ನಡೆದುಕೊಂಡು ಬಂದಿರುವ ಸಂಪ್ರದಾಯ. ಏಳನೇ ದಿನ ಸರಸ್ವತಿ ಪೂಜೆಯಂದು ಮನೆಯಲ್ಲಿರುವ ಪ್ರಮುಖ ಪುಸ್ತಕಗಳನ್ನು ಬೊಂಬೆಗಳೊಂದಿಗೆ ಜೊಡಿಸಿಟ್ಟು ಪೂಜೆ ಗೈದರೆ, ಒಂಭತ್ತನೇ ದಿನ ಮನೆಯಲ್ಲಿರುವ ಸಕಲ ಆಯುಧಗಳು, ಯಂತ್ರೋಪಕರಣಗಳು ಮತ್ತು ವಾಹನಗಳನ್ನು ಶುಧ್ಧೀಕರಿಸಿ  ಸಾಂಕೇತಿಕವಾಗಿ ಕೆಲವೊಂದು ಆಯುಧಗಳನ್ನು ಬೊಂಬೆಗಳ ಜೊತೆಯಲ್ಲಿರಿಸಿ ಭಕ್ತಿಭಾವದಿಂದ ಪೂಜೆ ಮಾಡಿದರೆ, ಹತ್ತನೇ ದಿನ ವಿಜಯದಶಮಿಯಂದು ವಿಶೇಷವಾದ ಬಗೆ ಬಗೆಯ  ಆಡುಗೆಗಳನ್ನು ತಯಾರಿಸಿ ಗೊಂಬೆಗಳಿಗೆ  ನೈವೇದ್ಯ ಮಾಡಿ ಬಂಧು ಬಾಂಧವರೊಂದಿಗೆ ಊಟವನ್ನು ಸವಿದು ಸಂಜೆ ಬನ್ನೀ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ, ಬನ್ನೀ ಎಲೆಗಳನ್ನು ಬಂಧು ಬಾಂಧವರೊಂದಿಗೆ ಪರಸ್ಪರ ವಿನಿಮಯ ಮಾಡಿಕೊಂಡು ಹತ್ತಿರದ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿ ರಾತ್ರಿ ಪಟ್ಟದ ಗೊಂಬೆಗಳನ್ನು ವಿಸರ್ಜಿಸಿ ಮಾರನೆಯ ದಿನ ಪುನಃ ಜೋಪಾನವಾಗಿ ಬೊಂಬೆಗಳನ್ನು ದಬ್ಬಗಳಲ್ಲಿ ಇರಿಸಿ ಆಟ್ಟಕ್ಕೇಸುವುದರೊಂದಿಗೆ  ದಸರಾ ಹಬ್ಬ ಮುಕ್ತಾಯವಾಗುವುದು.

ನಮ್ಮ ಬಾಲ್ಯದಲ್ಲಿ ದಸರಾ ಹಬ್ಬ ಬಂದಿತೆಂದರೆ ನಮೆಗೆಲ್ಲಾ ಖುಷಿಯೋ ಖುಷಿ. ಹೇಗೂ ಮಧ್ಯಾಂತರ ಪರೀಕ್ಷೆಗಳು ಮುಗಿದು ಎರಡು ಮೂರು ವಾರಗಳ ಮಟ್ಟಿಗೆ ಶಾಲೆಗಳಿಗೆ ರಜಾ ಕೊಟ್ಟಿರುತ್ತಿದ್ದರು. ನಮಗೆಲ್ಲಾ  ರಜಾ ಎಂದರೆ ಮಜಾ ಎನ್ನುವ  ಅಲಿಖಿತ ನಿಯಮ. ಅಮ್ಮ ಮತ್ತು ಅಕ್ಕ ತಂಗಿಯರೊಂದಿಗೆ ಗೊಂಬೆಗಳನ್ನು ಜೋಡಿಸಲು ಹಂತ ಹಂತದ ಮೆಟ್ಟಿಲುಗಳನ್ನು  (ಹಿಂದೆಲ್ಲಾ ಬೊಂಬೆಗಳನ್ನು ಇಡುತ್ತಿದ್ದ   ದಬ್ಬಗಳನ್ನು ಜೋಡಿಸಿ ಅವುಗಳ ಮೇಲೆ ಹಲಗೆಯನ್ನಿರಿಸುತ್ತಿದ್ದರೆ, ಇಂದು ಅವುಗಳಿಗಾಗಿಯೇ ವಿಶೇಷರೀತಿಯ ಸ್ಟಾಂಡ್ಗಳು ಬಂದಿದ್ದು ಅವುಗಳಿಗೆ ನೆಟ್ ಮತ್ತು ಬೋಳ್ಟ್ಗಳನ್ನು  ಹಾಕಿ ಬಂಧಿಸಬೇಕಷ್ಟೇ) ಜೋಡಿಸುವುದಕ್ಕೆ  ಸಹಕರಿಸುವುದರೊಂದಿಗೆ ,  ಗೊಂಬೆಗಳ ಉದ್ಯಾನವನ ಮತ್ತು ಮೃಗಾಲಯಗಳಲ್ಲಿ  ಹದವಾಗಿ ಮರಳನ್ನು ಹರಡಿ ಅದರಲ್ಲಿ  ರಾಗಿ, ಗೋದಿ  ಹೆಸರುಕಾಳು ಹಾಕಿ ಪ್ರತಿದಿನ ಅವುಗಳಿಗೆ ನೀರುಣಿಸಿ ಅವುಗಳು ಮೆಲ್ಲಗೆ ಮೊಳಕೆಯೊಡೆದು ಪೈರಗಳಾಗುತ್ತಿದ್ದವನ್ನು ಕಾಪಾಡುವುದು ನಮ್ಮ ಜವಾಬ್ಡಾರಿಯಾಗಿತ್ತು.

ಸಂಜೆಯಾಯಿತಂದರೆ ಕೈಕಾಲು ಮುಖ ಶುಭ್ರವಾಗಿ ತೊಳೆದುಕೊಂಡು ಚೆಂದ ಚೆಂದ ದಿರಿಸುಗಳನ್ನು ಧರಿಸಿ ಬಗೆ ಬಗೆಯ ರೀತಿಯ ಜಡೆಗಳನ್ನು ಹಾಕಿಕೊಂಡು  ಅಲಂಕಾರಗಳನ್ನು ಮಾಡಿಕೊಂಡು ಸಿಧ್ಧವಾಗಿರುತ್ತಿದ್ದ ನಮ್ಮ ಅಕ್ಕ ತಂಗಿಯರೊಂದಿಗೆ ಕೈಯಲ್ಲಿ ಒಂದು ಚೆಂದ ಚೀಲವೋ ಇಲ್ಲವೇ ಸುಂದರ ಡಬ್ಬಿಯನ್ನು ಹಿಡಿದುಕೊಂಡು  ಸುತ್ತ ಮುತ್ತಲಿನ ಗೊಂಬೆ ಕೂರಿಸಿರುವವರ ಮನೆಗೆ ಮೇಲೆ ತಿಳಿಸಿದ ಹಾಗೆ ಜೋಡಿಸಿಟ್ಟಿರುತ್ತಿದ್ದ ಬೊಂಬೆಗಳನ್ನು ನೋಡಲು ಹೋಗುತ್ತಿದ್ದೆವು. ಬೊಂಬೆಗಳನ್ನು ನೋಡುವುದು ಒಂದು ನೆಪವಾದರೂ, ಅವರೆಲ್ಲರ ಮನೆಯಲ್ಲಿ ಕೊಡುತ್ತಿದ್ದ ಬೊಂಬೆ ಬಾಗಿಣದ ಸಿಹಿ ತಿಂಡಿಗಳೇ ಪ್ರಮುಖ ಆಕರ್ಷಣೆಯಾಗಿರುತ್ತಿತ್ತು. ಪ್ರತಿಯೊಂದು ಮನೆಗೂ ಹೋದ ಕೂಡಲೇ ನಾವು ಕಲಿತಿದ್ದ ಶ್ಲೋಕವನ್ನೋ, ದೇವರನಾಮವನ್ನೋ ಹಾಡಿ (ಒಂಭತ್ತೂ ದಿನವವೂ ಒಂದನ್ನೇ ಹೇಳುವ ಹಾಗಿರಲಿಲ್ಲ. ಪ್ರತಿದಿನವೂ ಬೇರೆ ಬೇರೆಯದನ್ನೇ ಹಾಡಬೇಕಾಗಿತ್ತು )  ಅವರು ಕೊಟ್ಟ, ಕೊಬ್ಬರಿ ಮೀಠಾಯಿ, ಲಡ್ಡು, ಚಕ್ಕುಲಿ, ಕೋಡುಬಳೆ, ಏನೂ ಮಾಡಲಾಗದಿದ್ದಲ್ಲಿ, ಬಿಸ್ಕೆಟ್ ಇಲ್ಲವೇ ಚಾಕ್ಲೇಟ್ಗಳನ್ನು ಪಡೆದುಕೊಂಡು ತಂದಿದ್ದ ಚೀಲದಲ್ಲೋ ಇಲ್ಲವೇ ಡಬ್ಬಿಯಲ್ಲಿ ಜೋಪಾನವಾಗಿ ಇರಿಸಿಕೊಂಡು ಮತ್ತೊಂದು ಮನೆಯತ್ತ ದೌಡಾಯಿಸುತ್ತಿದ್ದದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.

ನವರಾತ್ರಿಯ ಪಂಚಮಿ ದಿನ ನನ್ನ ಹುಟ್ಟಿದ ದಿನವಾದ್ದರಿಂದ ಅಮ್ಮ ಬೆಳಗ್ಗೆಯೇ ಎಬ್ಬಿಸಿ ಮೈಕೈಯ್ಯಿಗೆ ಚೆನ್ನಾಗಿ ಹರಳೆಣ್ಣೆ ಹಚ್ಚಿ  ಸ್ವಲ್ಪ ಹೊತ್ತು ಎಣ್ಣೆಯಲ್ಲೇ , ಹದವಾಗಿ ಸೀಗೆ ಪುಡಿ ಮತ್ತು ಚಿಗರೆಪುಡಿ ಬೆರೆಸಿ ಬಿಸಿ ಬಿಸಿ ನೀರಿನೊಂದಿಗೆ ಅಭ್ಯಂಜನ ಮಾಡಿಸುತ್ತಿದ್ದದ್ದು, ಕಣ್ಣಿಗೆ ಎಳ್ಳಷ್ಟೂ ಸೀಗೇಪುಡಿ ಬೀಳಬಾರದೆಂದು  ಎಷ್ಟೇ ಎಚ್ಚರ ವಹಿಸಿದರೂ ಕಣ್ಣಿಗೆ ಸೀಗೆಪುಡಿ ಬಿದ್ದು ಕಣ್ಣುರಿ ಎಂದು ಜೋರಾಗಿ ಅಳುತ್ತಿದ್ದದ್ದು ಇನ್ನೂ ಕಣ್ಣ ಮುಂದೆಯೇ ಇದೆ. ಹೊಸ ಬಟ್ಟೆ ಧರಿಸಿ  ಸಮೀಪದ ದೇವಸ್ಥಾನದಲ್ಲಿ ಕೊಟ್ಟಿರುತ್ತಿದ್ದ ಶಾಶ್ವತ ಪೂಜೆಗೆ  ಹೋಗಿ ಬರುತ್ತಿದ್ದದ್ದು ಮರೆಯಲು ಆಗುವುದೇ ಇಲ್ಲ.  ಇನ್ನು ಸರಸ್ವತಿ ಪೂಜೆಯ ಹಿಂದಿನ ದಿನವೇ ನಮಗೆಲ್ಲಾ ಕಷ್ಟಕರವಾಗಿದ್ದ ಇಂಗ್ಲೀಷ್, ಗಣಿತ ಮತ್ತು ವಿಜ್ಣಾನಗಳ ಪುಸ್ತಕವನ್ನು ಪೂಜೆಗಿರಿಸಿ ಮುಂದಿನ ನಾಲ್ಕು ದಿನ ಅಪ್ಪಾ ಅಮ್ಮಂದಿರು ಓದು ಎಂದರೆ,  ಹೇ ಹೇ, ವಿದ್ಯೆ ಚೆನ್ನಾಗಿ ನಮ್ಮ ತಲೆಗೆ ಹತ್ತಲಿ ಎಂದು ಸರಸ್ವತಿ ಪೂಜೆಗೆ ಎಲ್ಲಾ ಪುಸ್ತಕಗಳನ್ನು ಇಟ್ಟಿದ್ದೇವೆ ಇನ್ನು ಹೇಗೆ ಓದುವುದು ಎಂಬ ಸಬೂಬನ್ನು ಹೇಳುತ್ತಿದ್ದನ್ನು  ನೆವೆಸಿಕೊಂಡರೆ ಇಂದಿಗೂ ನಮಗೆ ನಗು ಬರುತ್ತದೆ.

ಆಯುಧ ಪೂಜೆಯ ದಿನ ಬೆಳಗ್ಗೆ ಹೊತ್ತಿಗೆ ಮುಂಚೆಯೇ ಎದ್ದು  ಮನೆಯಲ್ಲಿದ್ದ ಎಲ್ಲ ವಾಹನಗಳನ್ನೂ (ಅಂದೆಲ್ಲಾ ಒಂದೋ ಎರಡೂ ಸೈಕಲ್ ಹೆಚ್ಚೆಂದರೆ ಒಂದು ದ್ವಿಚಕ್ರ ವಾಹನವಿರುತ್ತಿತ್ತು ) ಸ್ವಚ್ಚಗೊಳಿಸಿ ಅವುಗಳಿಗೆ ಬಣ್ಣ ಬಣ್ಣದ ಪೇಪರ್ಗಳನ್ನು ಅಲಂಕಾರಿಕವಾಗಿ ಕತ್ತರಿಸಿ, ಬಣ್ಣ ಬಣ್ಣದ ಬಲೂನ್ಗಳೊಂದಿಗೆ, ಬಾಳೆ ಕಂದುಗಳನ್ನು ಕಟ್ಟಿ, ವೀಭೂತಿ ಕುಂಕುಮ ಹಚ್ಚಿ  ಹೂವಿನ ಹಾರದಿಂದ ಅಲಂಕರಿಸಿ ಭಕ್ತಿಯಿಂದ ಪೂಜೆ ಮಾಡಿ ನಿಂಬೆಹಣ್ಣುಗಳನ್ನು ಚಕ್ರದಡಿಗೆ ಸಿಕ್ಕಿಸಿ ಔಕಳಿ ಜೊತೆಗೆ ನಾಣ್ಯಗಳನ್ನು ಹಾಕಿರುತ್ತಿದ್ದ ಬೂದು ಕುಂಬಳ ಕಾಯಿಯನ್ನು ನಿವಾಳಿಸಿ  ದೃಷ್ಟಿ ಪರಿಹಾರವಾಗಿ ಜೋರಾಗಿ ಒಡೆದು ಪುರಿಯನ್ನು ವಾಹನಗಳ ಮೇಲೆರೆಚಿ, ಅಕ್ಕ ಪಕ್ಕದವರೆಲ್ಲರಿಗೂ ಕಡಲೇ ಪುರಿ ಮತ್ತು ಸಿಹಿ ತಿಂಡಿಗಳನ್ನು ಹಂಚಿ  ಮನೆಯವರನ್ನೆಲ್ಲಾ  ಕೂರಿಸಿಕೊಂಡು ವಾಹನವನ್ನು ಒಮ್ಮೆ ಚಲಾಸಿದೆರೆ ಆಯುಧಪೂಜೆಗೆ ಕಳೆ ಕಟ್ಟಿದಂತೆ. ವಾಹನಗಳನ್ನು ಸಿಂಗರಿಸುವುದರಲ್ಲಿ ನೆರೆ ಹೊರೆಯವರೊಂದಿಗೆ ಆರೋಗ್ಯಕರ ಪೈಪೋಟಿ ಇರುತ್ತಿತ್ತು.  ಇನ್ನು  ಹತ್ತನೇ ದಿನ ವಿಜಯದಶಮಿಯಂದು ಮನೆಗೆ ಬಂದಿರುತ್ತಿದ್ದ  ಬಂಧು ಮಿತ್ರರೊಂದಿಗೆ ಕಾಲ ಕಳೆದು ಭೂರಿ ಭೋಜನ ಮಾಡಿ ಸಂಜೆಯಾಗುತ್ತಲೇ ದೇವಸ್ಥಾನಕ್ಕೆ ಹೋಗುತ್ತಿದ್ದದ್ದು, ಎಂಬತ್ತರ ದಶಕದಲ್ಲಿ ದೂರದರ್ಶನದ ಮೂಲಕ ಮನೆಯಲ್ಲೇ ಕುಳಿತು ಮೈಸೂರಿನ ದಸರಾ ಮೆರವಣಿಗೆಯ ಸವಿಯನ್ನು ಸವಿಯುತ್ತಿದ್ದದ್ದು ನಿಜಕ್ಕೂ ಅವರ್ಣನೀಯ.

ಆಂದೆಲ್ಲಾ ನಮ್ಮ ಬಳಿ ಹಣವಿರಲಿಲ್ಲ ಆದರೆ ಹಬ್ಬದ ಆಚರಣೆಯ ಹಂಬಲವಿತ್ತು.  ಇದ್ದ ಹಣದಲ್ಲೇ ಅಚ್ಚು ಕಟ್ಟಾಗಿ ಸಂಪ್ರದಾಯಿಕವಾಗಿ ಹಬ್ಬಗಳನ್ನು ಆಚರಿಸುತ್ತಿದ್ದೆವು. ಇಂದು ಎಲ್ಲರ ಬಳಿಯೂ ಅಗತ್ಯಕ್ಕಿಂತಲೂ ಹೆಚ್ಚಿನ ಹಣವಿದ್ದರೂ ಹಬ್ಬಗಳನ್ನು ಆಚರಿಸುವ ಹಂಬಲವೇ ಇಲ್ಲವಾಗಿದೆ. ಎಲ್ಲವೂ ಯಾಂತ್ರೀಕೃತವಾಗಿ ಸಮಯದ ಅಭಾವ ಎಂಬ ನೆಪವೊಡ್ಡಿ ಸಾಂಕೇತಿವಾಗಿ ದೇವರ ಮನೆಯಲ್ಲಿ ಪಟ್ಟದ ಗೊಂಬೆಗಳಿಗೇ ದಸರಾ ಹಬ್ಬ ಸೀಮೀತವಾಗಿರುವುದು ಶೋಚನೀಯವೇ ಸರಿ. ಇನ್ನು  ಆಯುಧ ಪೂಜೆ ಮತ್ತು ವಿಜಯದಶಮಿ ವಾರಾಂತ್ಯದಲ್ಲಿ ಬಂದಿತಂದರೆ ಮನೆಗೆ ಬೀಗ ಹಾಕಿಕೊಂಡು ಮಕ್ಕಳು ಮರಿಯೊಂದಿಗೆ ವಿಹಾರತಾಣಗಳಿಗೆ  ಹೊರಟು ಹೋಗುವುದು ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳಿಗೆ ನಾವೇ  ಮಾಡುವ  ಕಗ್ಗೊಲೆಯಲ್ಲವೇ?

ಇವೆಲ್ಲಾ ವೈರುಧ್ಯಗಳ ನಡುವೆಯೂ ಇಂದಿಗೂ ಆಷ್ಟೋ  ಇಷ್ಟು ಮನೆಗಳಲ್ಲಿ ಒಪ್ಪ ಓರಣದಿಂದ  ಬೊಂಬೆಗಳನ್ನು  ಇಡುತ್ತಿದ್ದಾರೆ.  ಇರುವುದರಲ್ಲಿಯೇ ಅಲ್ಪ ಸ್ವಲ್ಪ ಸಮಯ ಮಾಡಿಕೊಂಡು ಅಂತಹ ಮನೆಗಳಿಗೆ ಸಕುಟುಂಬ ಸಮೇತರಾಗಿ ಮಕ್ಕಳೊಂದಿಗೆ  ಹೋಗಿ ನಮ್ಮ ಮಕ್ಕಳಿಗೆ ನಮ್ಮ ಸತ್ಸಂಪ್ರದಾಯವನ್ನು ಪರಿಚಯವನ್ನಾದರೂ ಮಾಡಿಸ ಬಹುದಲ್ಲವೇ?

ಇನ್ನೂ ಎರಡು ವರ್ಷಕ್ಕೋ, ಇಲ್ಲವೇ ಮೂರು ವರ್ಷಗಳಿಗೊಮ್ಮೆ ಮಕ್ಕಳು ಮರಿಗಳೊಂದಿಗೆ  ಜಗದ್ವಿಖ್ಯಾತ ಮೈಸೂರಿನ ದಸರಾ ಹಬ್ಬಕ್ಕೂ ಇಲ್ಲವೇ, ಮಡಕೇರಿಯ ದಸರಾ ಹಬ್ಬಕ್ಕೋ, ಅವೆಲ್ಲವೂ ಆಗದಿದ್ದಲ್ಲಿ ಬೆಂಗಳೂರಿನ ಜೆ.ಸಿ ನಗರದ (ದೂರದರ್ಶನ ಕೇಂದ್ರದ ಹಿಂದೆ) ಉತ್ಸವ ಇಲ್ಲವೇ ನಮ್ಮ ವಿದ್ಯಾರಣ್ಯಪುರದ ದುರ್ಗಾದೇವಿಯ ದಸರಾ ಉತ್ಸವಕ್ಕೆ  ಹೋಗಿ ನಮ್ಮ ಸಂಪ್ರದಾಯವನ್ನು ನಮ್ಮ ಮುಂದಿನ ತಲೆಮಾರಿನವರಿಗೂ ಪರಿಚಯಿಸ ಬಹುದಲ್ಲವೇ?

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s