ಭಗವಂತ ನಮ್ಮಿಂದ ಎಷ್ಟು ದೂರದಲ್ಲಿದ್ದಾನೆ? ಕಣ್ಣಿಗೆ ಕಾಣದಿದ್ದರೂ ಹೃದಯಕ್ಕೆ ಹತ್ತಿರವಿರುವ ದೇವರು!

ಕೆಲವೊಮ್ಮೆ ಭಗವಂತ ನಮ್ಮ ಸಂಕಷ್ಟಗಳನ್ನು ಪರಿಹರಿಸಲು ನಮ್ಮ ಮುಂದೆ ಪ್ರತ್ಯಕ್ಷನಾಗುವುದಿಲ್ಲ. ಬದಲಿಗೆ, ಯಾವುದೋ ವ್ಯಕ್ತಿಯ ರೂಪದಲ್ಲಿ, ಅನಿರೀಕ್ಷಿತ ಸಹಾಯದ ರೂಪದಲ್ಲಿ ಅಥವಾ ನಮ್ಮೊಳಗಿನ ಧೈರ್ಯದ ರೂಪದಲ್ಲಿ ನಮ್ಮ ಕೈಹಿಡಿಯುತ್ತಾನೆ. ಬದುಕಿನುದ್ದಕ್ಕೂ ನಮ್ಮನ್ನು ಪ್ರೀತಿಸಿ, ಕಾಪಾಡಿ, ಮಾರ್ಗದರ್ಶನ ಮಾಡಿದ ತಂದೆ-ತಾಯಿಯರೂ ನಮಗೆ ಪ್ರತ್ಯಕ್ಷ ದೇವರುಗಳೇ. ಅವರು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ನೆನಪುಗಳು, ಸಂಸ್ಕಾರಗಳು ಮತ್ತು ಆಶೀರ್ವಾದಗಳು ನಮ್ಮ ಬದುಕಿನಲ್ಲಿ ಸದಾ ಜೀವಂತವಾಗಿರುತ್ತವೆ.

ಗುರುಗಳು ಕೇಳಿದ ಪ್ರಶ್ನೆ,  ಭಗವಂತ ನಮ್ಮಿಂದ ಎಷ್ಟು ದೂರದಲ್ಲಿದ್ದಾನೆ?

ಅದೊಂದು ಪ್ರಸಿದ್ಧ ಗುರುಕುಲ. ಅನೇಕ ವಿದ್ಯಾರ್ಥಿಗಳು ಅಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ವಿವಿಧ ವಿಷಯಗಳನ್ನು ಅಧ್ಯಯನ ಮಾಡುತ್ತಿದ್ದರು. ಒಂದು ದಿನ ಗುರುಗಳಿಗೆ ತಮ್ಮ ಶಿಷ್ಯರ ಜ್ಞಾನವನ್ನು ಪರೀಕ್ಷಿಸುವ ಮನಸ್ಸಾಯಿತು. ಎಲ್ಲರನ್ನೂ ಒಟ್ಟುಗೂಡಿಸಿ ಒಂದು ಸರಳವಾದ, ಆದರೆ ಆಳವಾದ ಅರ್ಥವನ್ನು ಒಳಗೊಂಡ ಪ್ರಶ್ನೆಯನ್ನು ಕೇಳಿದರು.

ನಮಗೂ ಭಗವಂತನಿಗೂ ಇರುವ ಅಂತರ ಎಷ್ಟು?

ಗುರುಗಳ ಪ್ರಶ್ನೆಯನ್ನು ಕೇಳಿದ ಶಿಷ್ಯರು ಕ್ಷಣಕಾಲ ಯೋಚನೆಯಲ್ಲಿ ಮುಳುಗಿದರು. ಒಬ್ಬ ಶಿಷ್ಯ, ಗುರುಗಳೇ, ಭೂಮಿಗೂ ಆಕಾಶಕ್ಕೂ ಇರುವಷ್ಟು ದೂರವಿರಬಹುದು ಎಂದನು. ಮತ್ತೊಬ್ಬ, ಭೂಮಿಗೂ ಪಾತಾಳಕ್ಕೂ ಇರುವಷ್ಟು ದೂರವಿರಬಹುದು” ಎಂದು ಉತ್ತರಿಸಿದನು. ಇನ್ನೊಬ್ಬನು ಭಗವಂತ ಸ್ವರ್ಗದಲ್ಲಿರುತ್ತಾನೆ, ಆದ್ದರಿಂದ ಅವನಿಗೂ ನಮಗೂ ಬಹಳ ಅಂತರವಿದೆ ಎಂದು ಅಭಿಪ್ರಾಯಪಟ್ಟನು.

ಶಿಷ್ಯರ ಉತ್ತರಗಳನ್ನು ಆಲಿಸಿದ ಗುರುಗಳು ಮಂದಹಾಸ ಬೀರುತ್ತಾ ಹೇಳಿದರು: ಮಕ್ಕಳೇ, ಭಗವಂತ ನಮ್ಮಿಂದ ಅಷ್ಟು ದೂರವೇನಿಲ್ಲ. ಆತ ನಮ್ಮಿಂದ ಕೇವಲ ಕೂಗಳತೆಯ ದೂರದಲ್ಲಿದ್ದಾನೆ! ಗುರುಗಳ ಮಾತು ಕೇಳಿದ ಶಿಷ್ಯರಿಗೆ ಆಶ್ಚರ್ಯವಾಯಿತು. ಗುರುಗಳೇ, ಭಗವಂತ ನಮ್ಮಿಂದ ಕೂಗಳತೆಯ ದೂರದಲ್ಲಿದ್ದಾನೆ ಎಂದರೆ ಹೇಗೆ? ನಾವು ಅವನನ್ನು ಕಣ್ಣಾರೆ ಕಾಣುವುದಿಲ್ಲವಲ್ಲ? ಎಂದು ಪ್ರಶ್ನಿಸಿದರು. ಆಗ ಗುರುಗಳು ತಮ್ಮ ಉತ್ತರದ ಹಿಂದಿರುವ ಅರ್ಥವನ್ನು ವಿವರಿಸಿದರು.

ನಮಗೆ ಸಂಕಷ್ಟ ಎದುರಾದಾಗ ಮೊದಲು ನೆನಪಾಗುವುದು ಭಗವಂತನೇ. ದೇವರೇ, ನನ್ನನ್ನು ಈ ಕಷ್ಟದಿಂದ ಪಾರು ಮಾಡು ಎಂದು ಪ್ರಾರ್ಥಿಸುತ್ತೇವೆ. ಸಂತೋಷದ ಕ್ಷಣಗಳಲ್ಲಿ ಎಲ್ಲವೂ ನಿನ್ನ ಕೃಪೆ ಎಂದು ಅವನನ್ನು ಸ್ಮರಿಸುತ್ತೇವೆ. ಯಾರಾದರೂ ನಮ್ಮ ಆರೋಗ್ಯ ಮತ್ತು ಕ್ಷೇಮವನ್ನು ವಿಚಾರಿಸಿದಾಗಲೂ ‘ಭಗವಂತನ ದಯೆಯಿಂದ ಚೆನ್ನಾಗಿದ್ದೇವೆ ಎಂದು ಹೇಳುತ್ತೇವೆ. ಅಂದರೆ, ನಮ್ಮ ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ಭಗವಂತನನ್ನು ಸ್ಮರಿಸುತ್ತಲೇ ಇರುತ್ತೇವೆ. ಕೆಲವೊಮ್ಮೆ ಅಪರಿಚಿತ ಸ್ಥಳದಲ್ಲಿ ದಾರಿ ತಪ್ಪಿ, ದೇವರೇ, ಇಲ್ಲಿಂದ ಹೇಗೆ ಹೋಗುವುದು? ಎಂದು ಚಿಂತಿಸುತ್ತಿರುವಾಗ ಯಾರೋ ಒಬ್ಬರು ಬಂದು ಸರಿಯಾದ ದಾರಿಯನ್ನು ತೋರಿಸುತ್ತಾರೆ. ಆ ಕ್ಷಣದಲ್ಲಿ ಆ ಅಪರಿಚಿತ ವ್ಯಕ್ತಿಯೇ ದೇವರ ರೂಪದಲ್ಲಿ ಬಂದಂತೆ ಅನಿಸುವುದಿಲ್ಲವೇ?

ಮಹಾಭಾರತದ ಪ್ರಸಂಗವನ್ನು ನೆನಪಿಸಿಕೊಳ್ಳಿ. ದ್ರೌಪದಿಯ ಮಾನಕ್ಕೆ ಧಕ್ಕೆ ಉಂಟಾದಾಗ ಆಕೆ ಶ್ರೀಕೃಷ್ಣನನ್ನು ಭಕ್ತಿಯಿಂದ ಸ್ಮರಿಸಿದಳು. ಗಜೇಂದ್ರ ಮೋಕ್ಷದ ಕಥೆಯಲ್ಲಿಯೂ ಮೊಸಳೆಯ ಹಿಡಿತದಲ್ಲಿ ಸಿಲುಕಿದ ಗಜೇಂದ್ರನು ವಿಷ್ಣುವನ್ನು ಆರ್ತಿಯಿಂದ ಪ್ರಾರ್ಥಿಸುತ್ತಾನೆ. ಈ ಕಥೆಗಳು ಸಂಕಷ್ಟದ ಸಮಯದಲ್ಲಿ ಭಗವಂತನ ಮೇಲಿನ ಭಕ್ತಿಯ ಮಹತ್ವವನ್ನು ಸಾರುತ್ತವೆ. ಹಾಗಾಗಿ ಭಗವಂತನನ್ನು ಕಾಣಲು ನಾವು ಸಾವಿರಾರು ಮೈಲು ದೂರ ಪ್ರಯಾಣಿಸಬೇಕಿಲ್ಲ. ನಿಷ್ಕಲ್ಮಶವಾದ ಭಕ್ತಿಯಿಂದ ಆತನನ್ನು ಸ್ಮರಿಸುವುದರ ಜೊತೆಗೆ, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಪ್ರತಿಯೊಬ್ಬರಲ್ಲಿಯೂ ದೈವತ್ವವನ್ನು ಕಾಣಲು ಕಲಿಯಬೇಕು.

ಗುರುಗಳ ಮಾತುಗಳನ್ನು ಕೇಳಿದ ಶಿಷ್ಯರು ಸಂತೃಪ್ತಿಯಿಂದ ತಲೆದೂಗಿದರು. ಭಗವಂತನ ಸಾಮೀಪ್ಯವೆಂಬುದು ಕೇವಲ ಭೌತಿಕ ದೂರದ ಪ್ರಶ್ನೆಯಲ್ಲ; ಅದು ನಮ್ಮ ನಂಬಿಕೆ, ಅನುಭವ ಮತ್ತು ಹೃದಯದ ಭಾವನೆಗಳಿಗೆ ಸಂಬಂಧಿಸಿದ್ದು ಎಂಬುದನ್ನು ಅವರು ಅರಿತುಕೊಂಡರು. ಆದರೆ, ಈ ಪ್ರಶ್ನೆಗೆ ನನ್ನ ಬದುಕು ಕಲಿಸಿದ ಉತ್ತರ ಇನ್ನೂ ಭಾವನಾತ್ಮಕವಾದದ್ದು. ಏಕೆಂದರೆ, ನನ್ನ ಪಾಲಿಗೆ ಭಗವಂತನ ರೂಪದಲ್ಲಿದ್ದವರು ನನ್ನ ತಂದೆಯವರು!

ನನ್ನ ಬದುಕಿನ ಪ್ರತ್ಯಕ್ಷ ದೇವರುಗಳು, ಅಪ್ಪ ಮತ್ತು ಅಮ್ಮ

ನನ್ನನ್ನು ಹೆತ್ತು, ಹೊತ್ತು, ಸಾಕಿ, ಸಲಹಿ, ವಿದ್ಯೆ ಕಲಿಸಿ, ವಿವೇಕ ಮತ್ತು ಸಂಸ್ಕಾರಗಳನ್ನು ನೀಡಿ, ಇಂದಿನ ನನ್ನ ವ್ಯಕ್ತಿತ್ವ ರೂಪುಗೊಳ್ಳಲು ಕಾರಣರಾದವರು ನನ್ನ ತಂದೆ-ತಾಯಿಯವರು. ಅವರ ಋಣವನ್ನು ಎಷ್ಟು ಜನ್ಮಗಳಲ್ಲಿಯೂ ತೀರಿಸಲು ಸಾಧ್ಯವಿಲ್ಲ. ನನ್ನ ಪಾಲಿಗೆ ಅಮ್ಮ ಎಂದರೆ ಎಲ್ಲವೂ ಆಗಿದ್ದರು. ಪ್ರತಿಯೊಂದು ವಿಷಯಕ್ಕೂ ಅಮ್ಮನನ್ನೇ ಆಶ್ರಯಿಸುತ್ತಿದ್ದ, ಅಮ್ಮನ ಮುದ್ದಿನ ಮಗನಾಗಿದ್ದ ನಾನು,  2010ರಲ್ಲಿ ಅಮ್ಮನನ್ನು ಕಳೆದುಕೊಂಡಾಗ ಬದುಕಿನಲ್ಲಿ ದೊಡ್ಡ ಶೂನ್ಯವೊಂದು ಆವರಿಸಿತು. ಆ ಸಂದರ್ಭದಲ್ಲಿ ನನ್ನ ಬೆನ್ನೆಲುಬಾಗಿ ನಿಂತವರೇ ನನ್ನ ತಂದೆಯವರು.

ತಮ್ಮ ಪ್ರೀತಿಯ ಧರ್ಮಪತ್ನಿಯನ್ನು ಕಳೆದುಕೊಂಡಿದ್ದ ಅವರು, ತಾಯಿಯ ಪ್ರೀತಿಯಿಂದ ವಂಚಿತನಾಗಿದ್ದ ನನ್ನನ್ನು ಸಂತೈಸಿದರು. ಇಬ್ಬರೂ ಪರಸ್ಪರ ನೋವನ್ನು ಹಂಚಿಕೊಳ್ಳುತ್ತಾ, ಒಬ್ಬರಿಗೊಬ್ಬರು ಆಸರೆಯಾಗಿ ನಿಂತೆವು. ಕ್ರಮೇಣ ನಮ್ಮ ನಡುವಿನ ಸಂಬಂಧ ಹೊಸ ರೂಪ ಪಡೆದುಕೊಂಡಿತು. ಅಪ್ಪನ ಮೇಲಿನ ಗೌರವಕ್ಕೆ ಧಕ್ಕೆಯಾಗದಂತೆಯೇ, ತಂದೆ-ಮಗನ ಸಂಬಂಧವನ್ನು ಮೀರಿದ ಆತ್ಮೀಯ ಸ್ನೇಹ ನಮ್ಮ ನಡುವೆ ಬೆಳೆದಿತ್ತು. ನಮ್ಮಿಬ್ಬರ ನಡುವೆ ಮುಚ್ಚುಮರೆಯಿರಲಿಲ್ಲ. ದಿನನಿತ್ಯದ ಸಣ್ಣಪುಟ್ಟ ವಿಚಾರಗಳಿಂದ ಹಿಡಿದು ದೇಶದ ಆಗುಹೋಗುಗಳವರೆಗೆ ಎಲ್ಲವನ್ನೂ ಮುಕ್ತವಾಗಿ ಚರ್ಚಿಸುತ್ತಿದ್ದೆವು.

ಪ್ರತಿದಿನ ಬೆಳಿಗ್ಗೆ ಒಟ್ಟಿಗೆ ಏಳುತ್ತಿದ್ದೆವು. ವಾಯುವಿಹಾರಕ್ಕೆ ಜೊತೆಯಾಗಿ ಹೋಗುತ್ತಿದ್ದೆವು. ದಾರಿಯಲ್ಲಿ ದೇಶದ ರಾಜಕೀಯ ವಿದ್ಯಮಾನಗಳು, ಕ್ರೀಡೆ, ಸಂಗೀತ, ಸಾಹಿತ್ಯ, ಹೊಸ ಪುಸ್ತಕಗಳು ಹಾಗೂ ಸಮಾಜದ ಆಗುಹೋಗುಗಳ ಬಗ್ಗೆ ಚರ್ಚಿಸುತ್ತಿದ್ದೆವು. ಮಾತನಾಡಲು ಬೇರೆ ವಿಷಯಗಳಿಲ್ಲದಿದ್ದರೆ ಕುಟುಂಬದ ವಿಚಾರಗಳನ್ನು ಮೆಲುಕು ಹಾಕುತ್ತಿದ್ದೆವು. ಆರೋಗ್ಯ ತಪಾಸಣೆಗಿರಲಿ, ಅಂಗಡಿಗೆ ಹೋಗುವುದಿರಲಿ, ಊರಿನ ಜಾತ್ರೆಗಿರಲಿ ಅಥವಾ ಯಾವುದಾದರೂ ಸಭೆ-ಸಮಾರಂಭವಿರಲಿ, ಬಹುತೇಕ ಎಲ್ಲದಕ್ಕೂ ಒಟ್ಟಿಗೆ ಹೋಗಿ ಒಟ್ಟಿಗೆ ಬರುತ್ತಿದ್ದೆವು. ನಾನು ಕಚೇರಿಯಿಂದ ಮನೆಗೆ ಬರಲು ಸ್ವಲ್ಪ ತಡವಾದರೂ ಅಪ್ಪನಿಗೆ ಚಿಂತೆಯಾಗುತ್ತಿತ್ತು. ಹತ್ತಾರು ಬಾರಿ ಕರೆ ಮಾಡಿ, ಮಗೂ, ಎಲ್ಲಿದ್ದೀಯಾ? ಮನೆಗೆ ಬರಲು ಇನ್ನೂ ಎಷ್ಟು ಹೊತ್ತಾಗುತ್ತದೆ? ಎಂದು ವಿಚಾರಿಸುತ್ತಿದ್ದರು.

ನಾನು ಮನೆಗೆ ಬರುವವರೆಗೂ ಎಚ್ಚರವಾಗಿಯೇ ಇರುತ್ತಿದ್ದ ಅವರು, ಕಾರು ಮನೆಯ ಮುಂದೆ ನಿಲ್ಲಿಸಿದ ಕೂಡಲೇ ಧಾವಿಸಿ ಬಂದು ಬಾಗಿಲು ತೆರೆಯುತ್ತಿದ್ದರು. ನಾನು ಮನೆಯೊಳಗೆ ಬರುವಷ್ಟರಲ್ಲಿ ಆ ದಿನದ ಎಲ್ಲ ವಿಚಾರಗಳನ್ನೂ ಚುಟುಕಾಗಿ ಹೇಳಿಬಿಡುತ್ತಿದ್ದರು. ಆ ದಿನಗಳಲ್ಲಿ ಅಪ್ಪನ ಈ ಕಾಳಜಿ ಸಹಜವೆನಿಸುತ್ತಿತ್ತು. ಆದರೆ ಇಂದು ಹಿಂದಿರುಗಿ ನೋಡಿದಾಗ, ಆ ಸಣ್ಣಪುಟ್ಟ ಕ್ಷಣಗಳೇ ಬದುಕಿನ ಅತ್ಯಮೂಲ್ಯ ಸಂಪತ್ತು ಎಂಬುದು ಅರಿವಾಗುತ್ತದೆ.

2017ರ ಅಕ್ಟೋಬರ್ 1. ಅಪ್ಪನಿಗೆ ಸ್ವಲ್ಪ ಜ್ವರ ಬಂದಿತ್ತು. ಮೇಲಿಂದ ಮೇಲೆ ಬಿಕ್ಕಳಿಕೆ ಬರುತ್ತಿತ್ತು. ಕುಟುಂಬ ವೈದ್ಯರಿಗೆ ಕರೆ ಮಾಡಿ ಔಷಧೋಪಚಾರವನ್ನೂ ಮಾಡಿಸಲಾಗಿತ್ತು. ಅಂದು ನಾನು ನನ್ನ ಮಗನನ್ನು ಆರ್‌ಎಸ್‌ಎಸ್‌ನ ಶಿಕ್ಷಾ ವರ್ಗಕ್ಕೆ (RSS ITC)  ಬಿಟ್ಟು ಬಂದಿದ್ದೆ. ಒಂದು ವಾರದ ಕಾಲ ಮೊಮ್ಮಗನಿಂದ ದೂರವಿರಬೇಕಲ್ಲ ಎಂಬ ಬೇಸರ ಅಪ್ಪನಿಗಿತ್ತು. ಅದೇ ಸಮಯದಲ್ಲಿ ಮನೆಯ ಮೂರನೇ ತಲೆಮಾರಿಗೂ ಸಂಘದ ಶಿಕ್ಷಣ ದೊರೆಯುತ್ತಿದೆ ಎಂಬ ಸಂತೋಷವೂ ಅವರಲ್ಲಿತ್ತು.

ಅಂದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಕ್ರಿಕೆಟ್ ಸರಣಿಯ ಐದನೇ ಪಂದ್ಯ ನಡೆಯುತ್ತಿತ್ತು. 2-2 ಸರಣಿ ನಿರ್ಣಾಯಕ ಘಟ್ಟದಲ್ಲಿದ್ದ ಕಾರಣ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿತ್ತು. ಮೊಮ್ಮಗನ ಅನುಪಸ್ಥಿತಿಯ ಬೇಸರ ಮರೆಯಲು ಅಪ್ಪ ಮತ್ತು ನಾನು ಅವರ ಕೋಣೆಯಲ್ಲೇ ಕುಳಿತು ಪಂದ್ಯ ವೀಕ್ಷಿಸುತ್ತಿದ್ದೆವು. ಭಾರತ ತಂಡ ಗೆಲುವು ಸಾಧಿಸಿದಾಗ ನಮ್ಮ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅಪ್ಪನೊಂದಿಗೆ ಆ ಸಂತೋಷವನ್ನು ಹಂಚಿಕೊಂಡ ಕ್ಷಣಗಳು ಇಂದಿಗೂ ನನ್ನ ಕಣ್ಣ ಮುಂದೆ ಹಸಿರಾಗಿವೆ. ರಾತ್ರಿ ತಡವಾಗುವವರೆಗೂ ಪಂದ್ಯದ ಕುರಿತು ಮಾತನಾಡುತ್ತಾ, ಗೆಲುವಿನ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ ಕುಳಿತಿದ್ದೆವು. ಸಮಯದ ಅರಿವೇ ಇಲ್ಲದೆ ನಮ್ಮ ಸಂಭ್ರಮ ಮುಂದುವರಿದಿತ್ತು. ಕೊನೆಗೆ ನನ್ನ ಪತ್ನಿ ನೆನಪಿಸಿದಾಗಲೇ ತಡರಾತ್ರಿಯಾಗಿದೆ ಎಂಬುದು ಅರಿವಾಯಿತು. ಅಂದು ಅಪ್ಪನೊಂದಿಗೆ ಕಳೆದ ಆ ಸಂತೋಷದ ಕ್ಷಣಗಳೇ ನಮ್ಮಿಬ್ಬರ ಕೊನೆಯ ಕ್ರಿಕೆಟ್ ಸಂಭ್ರಮವಾಗುತ್ತವೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ.

2017ರ ಅಕ್ಟೋಬರ್ 2.  ನನ್ನ ಜೀವನದಲ್ಲಿ  ಮರೆಯಲಾಗದ  ದಿನ

ಅಕ್ಟೋಬರ್ 2. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ.

ಹಿಂದಿನ ರಾತ್ರಿ ತಡವಾಗಿ ಮಲಗಿದ್ದ ಅಪ್ಪನನ್ನು ಬೆಳಿಗ್ಗೆ ಬೇಗ ಎಬ್ಬಿಸುವುದು ಬೇಡವೆಂದುಕೊಂಡೆ. ಪ್ರತಿದಿನದಂತೆ ಮುಂಜಾನೆಯೇ ಎದ್ದು, ವ್ಯಾಯಾಮಕ್ಕಾಗಿ ಹೊರಡಲು ಸಿದ್ಧನಾದೆ. ನಾನು ಬಾಗಿಲು ತೆರೆಯುತ್ತಿದ್ದಂತೆ, ಮಗೂ, ನಾನೂ ಬರುತ್ತೇನೆ, ತಡಿ ಎಂದು ಅಪ್ಪ ಹೇಳಿದರು. ಅಣ್ಣಾ, ರಾತ್ರಿ ತುಂಬ ತಡವಾಗಿ ಮಲಗಿದ್ದೀರಿ. ನೀವು ಇನ್ನೂ ಸ್ವಲ್ಪ ಹೊತ್ತು ಆರಾಮವಾಗಿ ಮಲಗಿ. ನಾನು ಜಿಮ್‌ಗೆ ಹೋಗಿ ಬರುತ್ತೇನೆ ಎಂದು ಹೇಳಿ ಬಾಗಿಲು ಹಾಕಿಕೊಂಡು ಹೊರಟೆ. ಜಿಮ್ ಮುಗಿಸಿ ಮನೆಗೆ ಹಿಂದಿರುಗುವಷ್ಟರಲ್ಲಿ ಅಪ್ಪ ಎದ್ದು ಸ್ನಾನ, ಸಂಧ್ಯಾವಂದನೆಗಳನ್ನು ಮುಗಿಸಿದ್ದರು. ಎಂದಿನಂತೆ ಮನೆಗೆ ಬರುತ್ತಿದ್ದ ಮೂರು ದಿನಪತ್ರಿಕೆಗಳನ್ನು ತಿರುವಿ ಹಾಕುತ್ತಾ ಕುಳಿತಿದ್ದರು. ಅಡುಗೆಮನೆಯಿಂದ ಬಿಸಿಬಿಸಿ ದೋಸೆಯ ಪರಿಮಳ ಬರುತ್ತಿತ್ತು. ನನ್ನ ಪತ್ನಿ, ಮಾವನವರಿಗೆ ತಿಂಡಿ ಕೊಟ್ಟು ನೀವು ಸ್ನಾನ ಮುಗಿಸಿಕೊಳ್ಳಿ. ನಿಮಗೂ ಬಿಸಿಬಿಸಿ ದೋಸೆ ಹಾಕಿಕೊಡುತ್ತೇನೆ ಎಂದರು.

ನಾನು ದೋಸೆ ಮತ್ತು ಚಟ್ನಿಯನ್ನು ತಟ್ಟೆಯಲ್ಲಿ ಹಾಕಿಕೊಂಡು ಅಪ್ಪನಿಗೆ ತಂದುಕೊಟ್ಟೆ. ಅಪ್ಪ ಎರಡು-ಮೂರು ತುಂಡು ದೋಸೆಗಳನ್ನು ತಿಂದರು. ಆದರೆ ಇದ್ದಕ್ಕಿದ್ದಂತೆ ಗಂಟಲಿನಲ್ಲಿ ಏನೋ ಸಿಕ್ಕಿಕೊಂಡಂತಾಗಿ, ತಿಂದ ದೋಸೆಯನ್ನು ಹೊರಹಾಕಿದರು. ಪಕ್ಕದಲ್ಲೇ ಇದ್ದ ನಾನು ಅವರ ಬೆನ್ನು ಸವರಿ ಸಂತೈಸಿದೆ. ಅವರ ಮೈ ಸ್ವಲ್ಪ ಬಿಸಿಯಾಗಿತ್ತು. ತಕ್ಷಣ ಕುಟುಂಬ ವೈದ್ಯರಿಗೆ ಕರೆ ಮಾಡಿ ವಿಷಯ ತಿಳಿಸಿದೆವು. ಅವರು ಗಾಬರಿಯಾಗುವ ಅಗತ್ಯವಿಲ್ಲವೆಂದರೂ, ಆಸ್ಪತ್ರೆಗೆ ಕರೆತಂದು ಪರೀಕ್ಷಿಸಲು ಹೇಳಿದರು. ನನ್ನ ಪತ್ನಿ ಮತ್ತು ನಾನು ತುರಾತುರಿಯಲ್ಲಿ ಸಿದ್ಧರಾಗಿ, ಮಗಳಿಗೆ ದೇವರ ಪೂಜೆ ಮುಂದುವರಿಸಲು ತಿಳಿಸಿದೆವು. ಅಪ್ಪನವರು ಸ್ವತಃ ನಡೆದುಕೊಂಡೇ ಬಂದು ಕಾರಿನಲ್ಲಿ ಕುಳಿತರು. ಕೆಲವೇ ನಿಮಿಷಗಳಲ್ಲಿ ಹತ್ತಿರದ ನರ್ಸಿಂಗ್ ಹೋಮ್ ತಲುಪಿದೆವು.

ಅಲ್ಲಿ ವೈದ್ಯರು ಪರೀಕ್ಷಿಸಿ, ಇಸಿಜಿ ವರದಿಯನ್ನು ಪರಿಶೀಲಿಸಿದರು. ತಕ್ಷಣ ಆತಂಕಪಡುವ ಅಗತ್ಯವಿಲ್ಲವೆಂದು ತಿಳಿಸಿದರೂ, ಮುನ್ನೆಚ್ಚರಿಕೆಯ ದೃಷ್ಟಿಯಿಂದ ದೊಡ್ಡ ಆಸ್ಪತ್ರೆಗೆ ಕರೆದೊಯ್ದು ಹೃದ್ರೋಗ ತಜ್ಞರನ್ನು ತೋರಿಸಲು ಸೂಚಿಸಿದರು. ಪ್ರಥಮ ಚಿಕಿತ್ಸೆ ನೀಡಿ, ತಮ್ಮದೇ ಆಂಬುಲೆನ್ಸ್‌ನಲ್ಲಿ ಅಪ್ಪನನ್ನು ಕಳುಹಿಸುವ ವ್ಯವಸ್ಥೆ ಮಾಡಿದರು. ಅಪ್ಪನವರು ಆಸ್ಪತ್ರೆಯಲ್ಲಿದ್ದ ಪರಿಚಯಸ್ಥರೊಂದಿಗೆ ಮಾತನಾಡಿದರು. ಆಂಬುಲೆನ್ಸ್‌ನಲ್ಲಿ ಕುಳಿತು, ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ? ಎಂದು ವಿಚಾರಿಸಿದರು. ರಾಮಯ್ಯ ಆಸ್ಪತ್ರೆಗೆ ಹೋಗುತ್ತಿದ್ದೇವೆ ಎಂದು ಖಚಿತಪಡಿಸಿಕೊಂಡರು. ಬಳಿಕ ಆಮ್ಲಜನಕದ ಮುಖವಾಡವನ್ನು ತಾವೇ ಧರಿಸಿ ಮಲಗಿಕೊಂಡರು.

ಆ ಕ್ಷಣದಲ್ಲಿಯೂ ನನಗೆ ಅಪ್ಪನ ಆರೋಗ್ಯದ ಬಗ್ಗೆ ಅತಿಯಾದ ಆತಂಕವಿರಲಿಲ್ಲ. ಅವರು ನಮ್ಮೊಂದಿಗೆ ಮಾತನಾಡುತ್ತಿದ್ದರು, ತಾವೇ ನಡೆದುಕೊಂಡು ಬಂದಿದ್ದರು. ಎಲ್ಲವೂ ಸರಿಯಾಗುತ್ತದೆ ಎಂಬ ಭರವಸೆಯಿತ್ತು. ಆಂಬುಲೆನ್ಸ್‌ನಲ್ಲಿ ನನ್ನ ಪತ್ನಿಯೂ ನನ್ನೊಂದಿಗೆ ಇದ್ದರು. ಅಪ್ಪ ನಮ್ಮಿಬ್ಬರನ್ನೂ ನಿರಾಳವಾಗಿ ನೋಡಿದರು. ಕೆಲವೇ ನಿಮಿಷಗಳ ಬಳಿಕ ಕಣ್ಣು ಮುಚ್ಚಿಕೊಂಡರು. ಆಸ್ಪತ್ರೆಯಲ್ಲಿ ನೀಡಿದ್ದ ಔಷಧಿಯ ಪರಿಣಾಮವಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದೇ ನಾನು ಭಾವಿಸಿದೆ. ಆದರೆ ವಿಧಿಯ ನಿರ್ಧಾರವೇ ಬೇರೆಯಾಗಿತ್ತು.

ನನ್ನ ಕಣ್ಣೆದುರೇ ನನ್ನ ದೇವರು ದೂರವಾದ ಕ್ಷಣ

ಆಂಬುಲೆನ್ಸ್  ಅಪ್ಪನವರ ಕರ್ಮಭೂಮಿಯಾಗಿದ್ದ ಬಿಇಎಲ್ ಕಾರ್ಖಾನೆಯನ್ನು ದಾಟುತ್ತಿದ್ದಾಗ, ಅವರು ಎರಡು ಬಾರಿ ಜೋರಾಗಿ ಉಸಿರೆಳೆದರು. ಅಣ್ಣಾ, ಅಣ್ಣಾ… ಏನಾಗುತ್ತಿದೆ?” ಎಂದು ನಾನು ಆತಂಕದಿಂದ ಕೇಳಿದೆ. ಮೂರನೇ ಬಾರಿ ಅವರು ಜೋರಾಗಿ ಉಸಿರೆಳೆದರು. ಆದರೆ ಈ ಬಾರಿ ಉಸಿರು ಹೊರಬರಲಿಲ್ಲ. ನಾನು ಅವರ ಪಕ್ಕದಲ್ಲೇ ಇದ್ದೆ. ಅವರ ಕೈಹಿಡಿಯಲು, ಅವರನ್ನು ಕರೆಯಲು, ಏನಾದರೂ ಮಾಡಲು ಪ್ರಯತ್ನಿಸಿದೆ. ಆದರೆ ನನ್ನ ಬದುಕಿನ ಅತ್ಯಂತ ಪ್ರೀತಿಯ ವ್ಯಕ್ತಿ ನನ್ನ ಕಣ್ಣೆದುರೇ ದೂರವಾಗುತ್ತಿದ್ದರು. ನನ್ನಿಂದ ಅವರನ್ನು ದೂರವಾಗದಂತೆ ತಡೆಯಲು ಸಾಧ್ಯವಾಗಲಿಲ್ಲ.

ನನ್ನ ತಂದೆ ನನ್ನಿಂದ ಕೇವಲ ಕೂಗಳತೆಯ ದೂರದಲ್ಲಿದ್ದರು. ಆದರೆ ನಾನು ಎಷ್ಟು ಕರೆದರೂ, ಈ ಬಾರಿ ನನ್ನ ಕರೆಗೆ ಓಗೊಡಲು ಅವರು ಬದುಕಿರಲಿಲ್ಲ.

ಆ ಕ್ಷಣವನ್ನು ನೆನಪಿಸಿಕೊಂಡಾಗಲೆಲ್ಲಾ ಇಂದಿಗೂ ಮನಸ್ಸು ಭಾರವಾಗುತ್ತದೆ. ಅಮ್ಮನನ್ನು ಕಳೆದುಕೊಂಡಾಗ ನನ್ನನ್ನು ಸಂತೈಸಿದ ಅಪ್ಪ, ನನ್ನ ಬದುಕಿನ ಆಸರೆಯಾಗಿದ್ದ ಅಪ್ಪ, ನನ್ನ ಪ್ರತಿಯೊಂದು ಸಂತೋಷ ಮತ್ತು ಸಂಕಟಕ್ಕೂ ಸಾಕ್ಷಿಯಾಗಿದ್ದ ಅಪ್ಪ, ಕ್ಷಣಮಾತ್ರದಲ್ಲಿ ನನ್ನಿಂದ ದೂರವಾಗಿದ್ದರು. ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ನೋವು ಒಂದೆಡೆಯಾದರೆ, ಇನ್ನು ಮುಂದೆ ನನ್ನ ಪ್ರತಿಯೊಂದು ಅನುಭವವನ್ನೂ ಹಂಚಿಕೊಳ್ಳಲು ಅವರು ಇರುವುದಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳುವುದು ಮತ್ತೊಂದೆಡೆಯ ನೋವಾಗಿತ್ತು. ಆ ದಿನ ನನಗೆ ಅರ್ಥವಾದದ್ದು ಒಂದೇ.  ಕೆಲವೊಮ್ಮೆ ನಮ್ಮ ಅತ್ಯಂತ ಪ್ರೀತಿಯ ವ್ಯಕ್ತಿ ನಮ್ಮ ಪಕ್ಕದಲ್ಲೇ ಇದ್ದರೂ, ವಿಧಿಯ ಮುಂದೆ ನಮ್ಮ ಅಸಹಾಯಕತೆ ಎಷ್ಟು ದೊಡ್ಡದು ಎಂಬುದು.

ಅಪ್ಪ ಇಲ್ಲವೆಂಬುದನ್ನು ಮನಸ್ಸು ಇಂದಿಗೂ ಒಪ್ಪಿಕೊಳ್ಳುತ್ತಿಲ್ಲ

ಅಪ್ಪನವರು ನಮ್ಮನ್ನು ಅಗಲಿದ ದಿನದಿಂದ ವರ್ಷಗಳು ಕಳೆದಿವೆ. ಕಾಲ ಎಲ್ಲ ನೋವುಗಳನ್ನೂ ಸಂಪೂರ್ಣವಾಗಿ ಅಳಿಸದಿದ್ದರೂ, ಅವುಗಳೊಂದಿಗೆ ಬದುಕುವುದನ್ನು ಕಲಿಸುತ್ತದೆ. ಆದರೆ ಕೆಲವು ನೆನಪುಗಳಿಗೆ ಕಾಲದ ಮಿತಿಯೇ ಇಲ್ಲ. ಇಂದಿಗೂ ಅಪ್ಪನ ನೆನಪಾದಾಗಲೆಲ್ಲಾ ಅವರು ನನ್ನನ್ನು ಕರೆಯುತ್ತಿದ್ದ ಧ್ವನಿ ಕಿವಿಯಲ್ಲಿ ಮೊಳಗುತ್ತದೆ. ಮಗೂ… ಕೆಲವೊಮ್ಮೆ, ಅವರ ಕಡೆಯ ದಿನಗಳಲ್ಲಿ  ಶ್ರೀಕಂಠ್…” ಎಂದು ಕರೆಯುತ್ತಿದ್ದ ಅವರ ಧ್ವನಿ ಮನಸ್ಸಿನೊಳಗೆ ಪ್ರತಿಧ್ವನಿಸುತ್ತದೆ. ನಾನು ಹೊಸ ಪುಸ್ತಕ ಓದಿದಾಗ, ಯಾವುದಾದರೂ ಪದದ ಅರ್ಥ ತಿಳಿದುಕೊಳ್ಳಬೇಕಾದಾಗ, ನನ್ನ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾದಾಗ, ನಾನು ಭಾಷಣ ಮಾಡಿದ ವಿಡಿಯೋಗಳು ಜನಪ್ರಿಯವಾದಾಗ ಅಥವಾ ಪ್ರಶಸ್ತಿ-ಪುರಸ್ಕಾರಗಳು ದೊರೆತಾಗ, ಮೊದಲಿಗೆ ನೆನಪಾಗುವುದು ಅಪ್ಪನೇ.

ನನ್ನ ಕೆಲಸದಲ್ಲಿ ಬದಲಾವಣೆಗಳಾದಾಗ, ಮಕ್ಕಳ ಸಾಧನೆಗಳನ್ನು ನೋಡಿದಾಗ, ಕುಟುಂಬದಲ್ಲಿ ಯಾವುದಾದರೂ ವಿಶೇಷ ಕಾರ್ಯಕ್ರಮ ನಡೆದಾಗ, ಅಪ್ಪನಿದ್ದರೆ ಎಷ್ಟು ಸಂತೋಷಪಡುತ್ತಿದ್ದರು ಎಂಬ ಯೋಚನೆ ಬರುತ್ತದೆ. ಮನೆಯ ಮುಂದೆ ದುರ್ಗಾದೇವಿಯ ಮೆರವಣಿಗೆಯ ವಾದ್ಯಗಳ ಸದ್ದು ಕೇಳಿದಾಗಲೂ ಅವರ ನೆನಪು ಕಾಡುತ್ತದೆ. ಜೋರಾಗಿ ಮಳೆ ಸುರಿಯುವಾಗ, ಸಂಗೀತ ಅಥವಾ ಗಮಕ ವಾಚನ ಕೇಳಿದಾಗ, ದೂರದರ್ಶನದಲ್ಲಿ ಕ್ರಿಕೆಟ್ ಪಂದ್ಯ ಪ್ರಸಾರವಾಗುವಾಗಲೂ ಅಪ್ಪನ ನೆನಪು ಮನಸ್ಸನ್ನು ಆವರಿಸುತ್ತದೆ. ಮನೆಯಲ್ಲೇ ವಿಶೇಷ ಅಡುಗೆ ಮಾಡಿದಾಗ, ಅದರಲ್ಲೂ ಅಪ್ಪನಿಗೆ ಬಹಳ ಇಷ್ಟವಾಗಿದ್ದ ತಂಬುಳಿ, ರಾಗಿ ಮುದ್ದೆ, ಬಸ್ಸಾರು ಮತ್ತು ಹುಗ್ಗಿಯನ್ನು ತಯಾರಿಸಿದಾಗ, ಅವರು ನಮ್ಮೊಂದಿಗೆ ಕುಳಿತು ಊಟ ಮಾಡುತ್ತಿದ್ದ ದೃಶ್ಯ ಕಣ್ಣ ಮುಂದೆ ಬರುತ್ತದೆ.

ಮಲ್ಲೇಶ್ವರಂನ ನಶ್ಯದ ಅಂಗಡಿಯ ಮುಂದೆ ಹಾದುಹೋಗುವಾಗಲೂ ಅಪ್ಪ ನೆನಪಾಗುತ್ತಾರೆ. ಅವರ ಸ್ನೇಹಿತರು ಅಥವಾ ದೂರದ ಸಂಬಂಧಿಕರು ಎಲ್ಲಾದರೂ ಭೇಟಿಯಾಗಿ, ನೀನು ಶಿವಮೂರ್ತಿಯವರ ಮಗ ಶ್ರೀಕಂಠ ಅಲ್ಲವೇ? ನಿನ್ನ ತಂದೆ ಬಹಳ ಒಳ್ಳೆಯ ಮನುಷ್ಯ. ಸಂಪ್ರದಾಯಸ್ಥರು, ಸುಸಂಸ್ಕೃತರು, ಉತ್ತಮ ವಾಗ್ಮಿಗಳು, ಕವಿಗಳು ಮತ್ತು ಗಮಕಿಗಳು. ಅಷ್ಟು ಆರೋಗ್ಯವಾಗಿದ್ದ ಅವರನ್ನು ಭಗವಂತ ಇಷ್ಟು ಬೇಗ ಕರೆಸಿಕೊಂಡನಲ್ಲ!” ಎಂದಾಗ ಮನಸ್ಸು ಮತ್ತೆ ಹಳೆಯ ನೆನಪುಗಳತ್ತ ಓಡುತ್ತದೆ. ಅವರ ನೆನಪುಗಳನ್ನು ಕೇಳಿದಾಗ ಹೆಮ್ಮೆಯಾಗುತ್ತದೆ. ಅದೇ ಸಮಯದಲ್ಲಿ, ಅವರನ್ನು ಮತ್ತೊಮ್ಮೆ ನೋಡಲು ಸಾಧ್ಯವಿಲ್ಲವಲ್ಲ ಎಂಬ ನೋವೂ ಎದೆಯನ್ನು ಹಿಂಡುತ್ತದೆ.

ಅಪ್ಪನ ನೆನಪನ್ನು ಮರಳಿ ತರುವ ನಮ್ಮ ಮಗ ಸಾಗರ್ ಮತ್ತು ಆ ನಶ್ಯದ ಡಬ್ಬಿ!

ತಾತನ ಕೆಲವು ಹಾವಭಾವ, ನಡೆಯುವಾಗ ಬೆನ್ನ ಹಿಂದೆ ಕೈ ಹಿದಿಯುವುದು, ಮಲಗುವ ಶೈಲಿಯ ಮೂಲಕ ತಾತನ ನಡವಳಿಕೆ, ಅವರಂತೆಯೇ ಯೋಚಿಸಿ ಮಾತನಾಡುವುದಷ್ಟೇ ಅಲ್ಲದೇ ಅವರಂತೆಯೇ ಕೆಲವು ಹವ್ಯಾಸಗಳು ನಮ್ಮ ಮಗ ಸಾಗರನಿಗೆ ಅರಿವಿಲ್ಲದಂತೆಯೇ ಬಂದಿರುವುದನ್ನು ಕಂಡಾಗ, ಅಪ್ಪ ನಮ್ಮನ್ನು ಬಿಟ್ಟು ಹೋಗಿಲ್ಲಾ. ಅವರ ಮೊಮ್ಮಗನ ರೂಪದಲ್ಲಿ ನಮ್ಮ ಜೊತೆ ನಮ್ಮ ಕುಟುಂಬದಲ್ಲಿಯೇ ಇದ್ದಾರೆ ಎಂಬ ಭಾವನೆ ಮೂಡುವುದಂತೂ ಸುಳ್ಳಲ್ಲಾ. ಒಂದು ತಲೆಮಾರಿನ ಒಳ್ಳೆಯ ಗುಣಗಳು ಮತ್ತೊಂದು ತಲೆಮಾರಿಗೆ ವರ್ಗಾವಣೆಯಾಗುವುದಕ್ಕಿಂತ ದೊಡ್ಡ ಪರಂಪರೆ ಇನ್ನೇನಿದೆ?

ಜ್ಞಾನಚೂರ್ಣ ನಶ್ಯ – ಏನಂತೀರೀ? Enantheeri?

ಯಾವುದಾದರೂ ಸಂಧರ್ಭದಲ್ಲಿ ಅಪ್ಪನ ನೆನಪು ಕಾಡಿದಾಗ, ಅವರನ್ನು ಥಟ್ ಎಂದು ಜೀವಂತವಾಗಿಡುವ ವಸ್ತುಗಳ ಪೈಕಿ ಅವರ ನೆಚ್ಚಿನ ನಶ್ಯದ ಡಬ್ಬಿಯೂ ಒಂದು. ಅವರ ನೆನಪಾದಾಗಲೆಲ್ಲಾ, ಬೀರುವಿನಲ್ಲಿ ಭಧ್ರವಾಗಿ ಎತ್ತಿಟ್ಟಿರುವ ಆ ನಶ್ಯದ ಡಬ್ಬಿಯನ್ನು ಕೈಗೆತ್ತಿಕೊಂಡು ತೆರೆದಾಗ, ಅದರಿಂದ ಬರುವ ಪರಿಚಿತ ಘಮಲು ಕ್ಷಣಮಾತ್ರದಲ್ಲಿ ನನ್ನನ್ನು ಹಳೆಯ ದಿನಗಳಿಗೆ ಕರೆದೊಯ್ಯುವುದಲ್ಲದೇ, ಅಪ್ಪ ನನ್ನ ಪಕ್ಕದಲ್ಲೇ ಕುಳಿತಿರುವಂತೆ ಭಾಸವಾಗುತ್ತದೆ. ಅವರ ಮಾತು, ನಗು, ನಡವಳಿಕೆ ಎಲ್ಲವೂ ಕಣ್ಣ ಮುಂದೆ ಬರುತ್ತವೆ. ಒಂದು ವಸ್ತುವಿಗೆ ಇಷ್ಟೊಂದು ಭಾವನಾತ್ಮಕ ಶಕ್ತಿ ಇರಬಹುದೇ ಎಂದು ಕೆಲವೊಮ್ಮೆ ಆಶ್ಚರ್ಯವಾಗುತ್ತದೆ.

ಆದರೆ ಪ್ರೀತಿಯ ಸಂಬಂಧಗಳಲ್ಲಿ ವಸ್ತುಗಳ ಮೌಲ್ಯವನ್ನು ಅವುಗಳ ಬೆಲೆಯಿಂದ ಅಳೆಯಲು ಸಾಧ್ಯವಿಲ್ಲ. ಅವುಗಳಿಗೆ ಅಂಟಿಕೊಂಡಿರುವ ನೆನಪುಗಳೇ ಅವುಗಳನ್ನು ಅಮೂಲ್ಯವಾಗಿಸುತ್ತವೆ. ಅಪ್ಪನ ಆ ಡಬ್ಬಿ ನನಗೆ ಕೇವಲ ಒಂದು ಹಳೆಯ ವಸ್ತುವಲ್ಲ. ಅದು ನನ್ನ ಬದುಕಿನ ಒಂದು ಕಾಲಘಟ್ಟದ ನೆನಪು. ನನ್ನ ತಂದೆಯೊಂದಿಗೆ ಕಳೆದ ಅಸಂಖ್ಯಾತ ಕ್ಷಣಗಳ ಪ್ರತೀಕ. ಅದನ್ನು ನೋಡಿದಾಗಲೆಲ್ಲಾ ಮನಸ್ಸು ಹೇಳುತ್ತದೆ: ಅಪ್ಪ ಎಲ್ಲಿಗೂ ಹೋಗಿಲ್ಲ. ನನ್ನ ನೆನಪುಗಳಲ್ಲಿ, ನನ್ನ ಮಾತುಗಳಲ್ಲಿ, ನನ್ನ ನಡವಳಿಕೆಯಲ್ಲಿ ಮತ್ತು ನನ್ನ ಬದುಕಿನ ಮೌಲ್ಯಗಳಲ್ಲಿ ಅವರು ಇಂದಿಗೂ ಇದ್ದಾರೆ.

ಹಾಗಾದರೆ, ಭಗವಂತ ನಮ್ಮಿಂದ ಎಷ್ಟು ದೂರದಲ್ಲಿದ್ದಾನೆ?

ಗುರುಗಳು ತಮ್ಮ ಶಿಷ್ಯರಿಗೆ ಹೇಳಿದ ಮಾತುಗಳನ್ನು ನಾನು ಇಂದು ಮತ್ತೊಂದು ಅರ್ಥದಲ್ಲಿ ಅನುಭವಿಸುತ್ತಿದ್ದೇನೆ. ನನ್ನ ಬದುಕಿನಲ್ಲಿ ಅಪ್ಪನೇ ನನಗೆ ದೇವರಂತಿದ್ದರು. ಕಷ್ಟ ಬಂದಾಗ ಧೈರ್ಯ ತುಂಬುತ್ತಿದ್ದರು. ನಿರ್ಧಾರ ತೆಗೆದುಕೊಳ್ಳಬೇಕಾದಾಗ ಮಾರ್ಗದರ್ಶನ ನೀಡುತ್ತಿದ್ದರು. ಸಂತೋಷದ ಸಂದರ್ಭಗಳಲ್ಲಿ ನನ್ನೊಂದಿಗೆ ಸಂಭ್ರಮಿಸುತ್ತಿದ್ದರು. ನನ್ನ ಸಾಧನೆಗಳನ್ನು ಕಂಡು ಹೆಮ್ಮೆಪಡುತ್ತಿದ್ದರು. ಅವರಿದ್ದಾಗ ನನಗೆ ಅವರ ಪ್ರೀತಿಯ ಆಳ ಎಷ್ಟು ಎಂಬುದು ತಿಳಿದಿತ್ತು. ಆದರೆ ಅವರು ಇಲ್ಲವಾದ ಮೇಲೆ, ನನ್ನ ಬದುಕಿನ ಪ್ರತಿಯೊಂದು ಸಣ್ಣ ಸಂಗತಿಯಲ್ಲಿಯೂ ಅವರ ಉಪಸ್ಥಿತಿಯನ್ನು ಅನುಭವಿಸುತ್ತಿದ್ದೇನೆ.

ಅವರು ಭೌತಿಕವಾಗಿ ನನ್ನೊಂದಿಗಿಲ್ಲ. ಆದರೆ ಅವರು ಕಲಿಸಿದ ಮೌಲ್ಯಗಳು ನನ್ನ ನಿರ್ಧಾರಗಳಲ್ಲಿ ಇವೆ. ಅವರು ನೀಡಿದ ಸಂಸ್ಕಾರ ನನ್ನ ನಡವಳಿಕೆಯಲ್ಲಿ ಇದೆ. ಅವರು ಹೇಳಿದ ಮಾತುಗಳು ನನ್ನ ಆಲೋಚನೆಗಳಲ್ಲಿ ಇವೆ. ಅವರು ತೋರಿದ ಪ್ರೀತಿ ನನ್ನ ಕುಟುಂಬವನ್ನು ಪ್ರೀತಿಸುವ ರೀತಿಯಲ್ಲಿ ಪ್ರತಿಫಲಿಸುತ್ತದೆ.

ಇದೇನಾ ಭಗವಂತನ ಸಾಮೀಪ್ಯ?  ಎಂದರೆ ನನ್ನ ಪಾಲಿಗೆ ಉತ್ತರ ಹೌದು ಎನ್ನಿಸುತ್ತದೆ.

ಭೌತಿಕವಾಗಿ ದೂರವಾಗುವುದು ಒಂದು ಸಂಗತಿ; ಹೃದಯದಿಂದ ದೂರವಾಗುವುದು ಮತ್ತೊಂದು ಸಂಗತಿ. ಪ್ರೀತಿಸಿದವರು ನಮ್ಮ ಕಣ್ಣಿಗೆ ಕಾಣದಿದ್ದರೂ, ಅವರು ನಮ್ಮ ಬದುಕಿನಲ್ಲಿ ಬೀರಿದ ಪ್ರಭಾವ ಎಂದಿಗೂ ಅಳಿಸಿಹೋಗುವುದಿಲ್ಲ. ಅಪ್ಪನ ಅಕಾಲಿಕ ಅಗಲಿಕೆ ಇಂದಿಗೂ ನನ್ನನ್ನು ಕಾಡುತ್ತದೆ. ಆದರೆ ಅವರು ನೀಡಿದ ಸಂಸ್ಕಾರ, ಪ್ರೀತಿ ಮತ್ತು ಆಶೀರ್ವಾದಗಳು ನನ್ನನ್ನು ಸದಾ ಮುನ್ನಡೆಸುತ್ತಿವೆ ಎಂಬ ನಂಬಿಕೆ ನನಗಿದೆ. ಅವರು ನನ್ನ ಕರೆಗೆ ಓಗೊಡದಿದ್ದರೂ, ಅವರ ನೆನಪುಗಳಿಗೆ ನನ್ನ ಮನಸ್ಸು ಇಂದಿಗೂ ಓಗೊಡುತ್ತದೆ. ಅವರನ್ನು ನೆನೆದಾಗ ನಾನು ಒಂಟಿಯಲ್ಲ ಎಂಬ ಭಾವನೆ ಮೂಡುತ್ತದೆ.

ಬದುಕಿರುವಾಗಲೇ ತಂದೆ-ತಾಯಿಯನ್ನು ಗೌರವಿಸೋಣ

ಈ ಲೇಖನವನ್ನು ಬರೆಯುತ್ತಿರುವಾಗ ಮನಸ್ಸಿನಲ್ಲಿ ಮೂಡುವ ಮತ್ತೊಂದು ಪ್ರಶ್ನೆ ನಮ್ಮೆಲ್ಲರಿಗೂ ಸಂಬಂಧಿಸಿದ್ದು. ತಂದೆ-ತಾಯಿಯರು ನಮ್ಮೊಂದಿಗಿರುವಾಗ ಅವರಿಗಾಗಿ ಎಷ್ಟು ಸಮಯ ಮೀಸಲಿಡುತ್ತೇವೆ? ಅವರ ಮಾತುಗಳನ್ನು ಎಷ್ಟು ತಾಳ್ಮೆಯಿಂದ ಕೇಳುತ್ತೇವೆ? ಅವರ ಆಸೆ-ಆಕಾಂಕ್ಷೆಗಳಿಗೆ ಎಷ್ಟು ಬೆಲೆ ಕೊಡುತ್ತೇವೆ?

ಉದ್ಯೋಗ, ವ್ಯಾಪಾರ, ಕುಟುಂಬದ ಜವಾಬ್ದಾರಿ ಮತ್ತು ಆಧುನಿಕ ಜೀವನದ ಒತ್ತಡಗಳ ನಡುವೆ ನಾವು ಅನೇಕ ಬಾರಿ ತಂದೆ-ತಾಯಿಯರೊಂದಿಗೆ ಕಳೆಯಬೇಕಾದ ಸಮಯವನ್ನು ಮುಂದೂಡುತ್ತೇವೆ. ಅವರಿಗೆ ಬೇಕಾಗಿರುವುದು ಹಣ, ಉಡುಗೊರೆ ಅಥವಾ ಐಷಾರಾಮಿ ಸೌಲಭ್ಯಗಳು ಮಾತ್ರವಲ್ಲ. ನಮ್ಮ ಪ್ರೀತಿ, ಗಮನ, ಆತ್ಮೀಯ ಮಾತು ಮತ್ತು ಜೊತೆಯೂ ಅವರಿಗೆ ಅಷ್ಟೇ ಮುಖ್ಯ.

ಅವರು ವಯಸ್ಸಾದಂತೆ ಅವರ ದೈಹಿಕ ಸಾಮರ್ಥ್ಯ ಕಡಿಮೆಯಾಗಬಹುದು. ಒಂದೇ ವಿಚಾರವನ್ನು ಮತ್ತೆ ಮತ್ತೆ ಹೇಳಬಹುದು. ಕೆಲವೊಮ್ಮೆ ಅವರ ಅಭಿಪ್ರಾಯಗಳು ನಮಗೆ ಹಳೆಯದಾಗಿ ಕಾಣಬಹುದು. ಆದರೆ ನಾವು ಇಂದು ಬದುಕುತ್ತಿರುವ ಜೀವನದ ಹಿಂದೆ ಅವರ ಪರಿಶ್ರಮ, ತ್ಯಾಗ ಮತ್ತು ಪ್ರೀತಿ ಇರುವುದನ್ನು ಮರೆಯಬಾರದು. ಅವರು ನಮ್ಮನ್ನು ಬೆಳೆಸಿದಾಗ ನಮ್ಮ ಬಾಲಿಶ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದರು. ನಾವು ನಡೆಯಲು ಕಲಿಯುವಾಗ ಕೈಹಿಡಿದರು. ನಾವು ಎಡವಿದಾಗ ಎತ್ತಿ ನಿಲ್ಲಿಸಿದರು. ತಪ್ಪು ಮಾಡಿದಾಗ ತಿದ್ದಿದರು. ನಮ್ಮ ಭವಿಷ್ಯಕ್ಕಾಗಿ ತಮ್ಮ ಅನೇಕ ಆಸೆಗಳನ್ನು ಬದಿಗಿಟ್ಟರು.

ಇಂದು ಅವರಿಗೆ ನಮ್ಮ ಸಮಯ ಮತ್ತು ಪ್ರೀತಿಯನ್ನು ನೀಡುವುದು ನಮ್ಮ ಕರ್ತವ್ಯ. ತಂದೆ-ತಾಯಿಯರು ನಮ್ಮೊಂದಿಗಿರುವಾಗ ಅವರನ್ನು ಪ್ರೀತಿಯಿಂದ ನೋಡಿಕೊಳ್ಳುವುದು, ಅವರ ಮಾತುಗಳಿಗೆ ಕಿವಿಗೊಡುವುದು ಮತ್ತು ಅವರ ವೃದ್ಧಾಪ್ಯದಲ್ಲಿ ಆಸರೆಯಾಗುವುದು ನಿಜವಾದ ಕೃತಜ್ಞತೆ. ಅವರು ನಮ್ಮನ್ನು ಅಗಲಿದ ಮೇಲೆ ಮಾಡುವ ಶ್ರದ್ಧಾಂಜಲಿಗಿಂತ, ಅವರು ಬದುಕಿರುವಾಗ ತೋರುವ ಪ್ರೀತಿ ಮತ್ತು ಕಾಳಜಿ ಹೆಚ್ಚು ಅರ್ಥಪೂರ್ಣ.

ಅವರು ಅಗಲಿದ ನಂತರ ನೂರಾರು ಜನರನ್ನು ಕರೆಸಿ ಭೋಜನ ಮಾಡಿಸಬಹುದು. ದಾನಧರ್ಮಗಳನ್ನು ಮಾಡಬಹುದು. ಅವರ ಹೆಸರಿನಲ್ಲಿ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಇವೆಲ್ಲವೂ ತಮ್ಮದೇ ಆದ ಮಹತ್ವ ಹೊಂದಿವೆ. ಆದರೆ ಯಾವುದೂ ಅವರೊಂದಿಗೆ ಕಳೆಯಬಹುದಾಗಿದ್ದ ಒಂದು ಆತ್ಮೀಯ ಕ್ಷಣವನ್ನು ಮರಳಿ ತರಲಾರದು.

ಆದ್ದರಿಂದ, ತಂದೆ-ತಾಯಿಯರು ನಮ್ಮೊಂದಿಗಿರುವಾಗಲೇ ಅವರ ಪ್ರೀತಿಯ ಮೌಲ್ಯವನ್ನು ಅರಿಯೋಣ. ಅವರಿಗಾಗಿ ಸಮಯ ಮೀಸಲಿಡೋಣ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸೋಣ. ಅವರ ಅನುಭವಗಳಿಂದ ಕಲಿಯೋಣ. ಅವರು ನಮ್ಮೊಂದಿಗೆ ಇರುವುದನ್ನೇ ಒಂದು ವರವೆಂದು ಭಾವಿಸೋಣ.

ಕೊನೆಯ ಮಾತು. ಪ್ರೀತಿಯೇ ಅಂತರವನ್ನು ಅಳಿಸುತ್ತದೆ

ಭಗವಂತ ಎಲ್ಲಿದ್ದಾನೆ ಎಂಬ ಪ್ರಶ್ನೆಗೆ ಪ್ರತಿಯೊಬ್ಬರೂ ತಮ್ಮ ನಂಬಿಕೆ ಮತ್ತು ಅನುಭವಕ್ಕೆ ಅನುಗುಣವಾಗಿ ಉತ್ತರಿಸಬಹುದು. ಕೆಲವರಿಗೆ ಆತ ದೇವಾಲಯದಲ್ಲಿದ್ದಾನೆ. ಇನ್ನು ಕೆಲವರಿಗೆ ಪ್ರಕೃತಿಯಲ್ಲಿ ಕಾಣಿಸುತ್ತಾನೆ. ಮತ್ತೊಬ್ಬರಿಗೆ ಸಂಕಷ್ಟದ ಸಮಯದಲ್ಲಿ ನೆರವಾಗುವ ಮನುಷ್ಯನಲ್ಲಿ ಕಾಣಿಸುತ್ತಾನೆ. ನನ್ನ ಪಾಲಿಗೆ, ಭಗವಂತನ ಸಾಮೀಪ್ಯವನ್ನು ಅರ್ಥಮಾಡಿಕೊಳ್ಳಲು ನನ್ನ ತಂದೆಯೊಂದಿಗಿನ ಸಂಬಂಧವೇ ಒಂದು ದೊಡ್ಡ ಪಾಠವಾಗಿದೆ.

ಅಪ್ಪ ಇಂದು ನನ್ನೊಂದಿಗೆ ಕುಳಿತು ಮಾತನಾಡಲಾರರು. ನಾನು ಓದಿದ ಹೊಸ ಪುಸ್ತಕದ ಬಗ್ಗೆ ಅವರೊಂದಿಗೆ ಚರ್ಚಿಸಲಾರೆ. ನನ್ನ ಲೇಖನ ಪ್ರಕಟವಾದಾಗ ಅವರ ಪ್ರತಿಕ್ರಿಯೆ ಕೇಳಲಾರೆ. ಕ್ರಿಕೆಟ್ ಪಂದ್ಯದಲ್ಲಿ ಭಾರತ ಗೆದ್ದಾಗ ಅವರೊಂದಿಗೆ ಸಂಭ್ರಮಿಸಲಾರೆ. ಆದರೆ ಅವರು ನನಗೆ ಕಲಿಸಿದ ಮೌಲ್ಯಗಳೊಂದಿಗೆ ಬದುಕಬಹುದು. ಅವರು ಹೆಮ್ಮೆಪಡುವಂತಹ ಕೆಲಸಗಳನ್ನು ಮಾಡಲು ಪ್ರಯತ್ನಿಸಬಹುದು. ಅವರು ನೀಡಿದ ಸಂಸ್ಕಾರವನ್ನು ಮುಂದಿನ ತಲೆಮಾರಿಗೆ ತಲುಪಿಸಬಹುದು. ಅವರು ತೋರಿದ ಪ್ರೀತಿಯನ್ನು ನನ್ನ ಮಕ್ಕಳಿಗೆ ಮತ್ತು ನನ್ನ ಸುತ್ತಲಿನ ಜನರಿಗೆ ಹಂಚಬಹುದು. ಬಹುಶಃ ಇದೇ ಅವರು ನನ್ನೊಂದಿಗಿರುವ ರೀತಿಯಾಗಿರಬಹುದು.

ನನ್ನ ಪೂಜ್ಯ ತಂದೆಯವರು ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನನ್ನ ಕೂಗಳತೆಯ ದೂರದಲ್ಲಿಯೇ ಇದ್ದಾರೆ. ಅವರ ನೆನಪು ನನ್ನ ಶಕ್ತಿ; ಅವರ ಸಂಸ್ಕಾರ ನನ್ನ ದಾರಿ; ಅವರ ಆಶೀರ್ವಾದ ನನ್ನ ಬದುಕಿನ ಭರವಸೆ.

ಅವರನ್ನು ಕಳೆದುಕೊಂಡ ನೋವು ಎಂದಿಗೂ ಸಂಪೂರ್ಣವಾಗಿ ಮಾಯವಾಗದಿರಬಹುದು. ಆದರೆ ಅವರು ನೀಡಿದ ಪ್ರೀತಿಯನ್ನು ನೆನಪಿಸಿಕೊಂಡು ಬದುಕುವುದು ನನ್ನ ಪಾಲಿಗೆ ಒಂದು ಸೌಭಾಗ್ಯ. ಹಾಗಾಗಿ, ಭಗವಂತ ನಮ್ಮಿಂದ ಎಷ್ಟು ದೂರದಲ್ಲಿದ್ದಾನೆ ಎಂಬ ಪ್ರಶ್ನೆಗೆ ನನ್ನ ಉತ್ತರ ಇಷ್ಟೇ, ಪ್ರೀತಿ ಇರುವಲ್ಲಿ ದೂರವಿಲ್ಲ. ನೆನಪು ಇರುವಲ್ಲಿ ಅಗಲಿಕೆಯಿಲ್ಲ. ಸಂಸ್ಕಾರ ಬದುಕಿರುವಲ್ಲಿ ಸಂಬಂಧದ ಅಂತ್ಯವಿಲ್ಲ.

ಇದ್ದಾಗ ನೋಡಿಕೊಳ್ಳದೇ ಸತ್ತಾಗ ಅತ್ತು ಕರೆದು,‌ನೂರಾರು ಜನರನ್ನು ಕರೆಸಿ ಭಕ್ಷ ಭೋಜನಗಳನ್ನು ಬಡಿಸಿ ಕೈತುಂಬಾ ದಾನ ಧರ್ಮ ಮಾಡಿದರೆ ಎದ್ದು ಬರುವವರೇ ಹೆತ್ತವರು?. ನಮ್ಮನ್ನು ಹೆತ್ತು, ಹೊತ್ತು, ಬೆಳೆಸಿ, ಬದುಕಿನ ದಾರಿಯಲ್ಲಿ ಮುನ್ನಡೆಸಿದ ತಂದೆ-ತಾಯಿಯರನ್ನು ಅವರು ನಮ್ಮೊಂದಿಗಿರುವಾಗಲೇ ಪ್ರೀತಿಯಿಂದ ನೋಡಿಕೊಳ್ಳೋಣ. ಏಕೆಂದರೆ, ಅವರು ನಮ್ಮ ಜೀವನದಲ್ಲಿ ಇರುವುದು ನಾವು ಪಡೆದಿರುವ ಅತ್ಯಮೂಲ್ಯ ವರಗಳಲ್ಲಿ ಒಂದು ಅಲ್ವೇ?

ಏನಂತೀರಿ?
ಸೃಷ್ಟಿಕರ್ತ ಉಮಾಸುತ

5 thoughts on “ಭಗವಂತ ನಮ್ಮಿಂದ ಎಷ್ಟು ದೂರದಲ್ಲಿದ್ದಾನೆ? ಕಣ್ಣಿಗೆ ಕಾಣದಿದ್ದರೂ ಹೃದಯಕ್ಕೆ ಹತ್ತಿರವಿರುವ ದೇವರು!”

  1. ಅದ್ಭುತವಾದ ಲೇಖನ. ನನ್ನ ಕಣ್ಣಂಚಿನಲ್ಲಿ ನೀರು ಇಣುಕಿದ್ದು ಸುಳ್ಳಲ್ಲ.ಕಾರಣಗಳು:
    ೧.ನನ್ನ ತಾಯಿ ತಂದೆ ಯವರನ್ನು ಹೆಚ್ಚು ಕಡಿಮೆ ಇದೇ ರೀತಿ ಕಳೆದು ಕೊಂಡ ನೆನಪು ಮರುಕಳಿಸಿತು.
    ೨.ನಿಮ್ಮ ತಾಯಿ ತಂದೆ ಯವರ ಪರಿಚಯವಿದೆ.
    ನಮ್ಮ ಚಂದ್ರು ಅಂಕಲ್ ಮೂಲಕ ಪರಿಚಯವಾಗಿ ನಮ್ಮ ಮನೆಗೆ ಅವರೊಡನೆ ಬಂದು, ಸುಶ್ರಾವ್ಯವಾಗಿ ಗಮಕ ವನ್ನು ಹಾಡಿದರು.ನಮ್ಮಗಳಿಗೆ ಬಹಳ ದಿನಗಳ ನಂತರ ಗಮಕ ಕೇಳಿ ಮಹದಾನಂದವಾಗಿತ್ತು.🙏 ಆಗಾಗ್ಗೆ ಬರುತ್ತಿರಿ ಎಂದು ಬೀಳ್ಕೊಟ್ಟಿದ್ದೆವು.
    ಆದರೆ ವಿಧಿ ಬರಹ ಬೇರೆ ಯೇ ಇತ್ತು ಎಂದು ತಿಳಿದಿರಲಿಲ್ಲ.

  2. ಜಾತಸ್ಯಮರಣಂ ದೃವಂ, ಅಪ್ಪಾಜಿಯವರ ಸ್ಥಾನ ಯಾರೂ ತುಂಬಲು ಸಾಧ್ಯವಿಲ್ಲ. ಶ್ರೀಕಂಠ ಜೀ. ನೀವು ನಂಬಿದ ದೈವ ನಿಮಗೆ ಶಕ್ತಿಕೊಡಲಿ….

  3. Great write up. The narration is so vivid that I could visualise every development in my mind. A true story with a true love.
    May the God Shivamurthy sir be with u always.
    H V venkatesh

  4. Really heartfelt after reading the article,have few memories of your beloved father during the refurbishment of your first floor. May the godess Durga give almighty strength to bear this pain and bless you all with health,wealth,joy and happiness for ever. Jaisriram

  5. ನಿಮ್ಮ ಲೇಖನ ಚೆನ್ನಾಗಿದೆ. ರಮೇಶನೊಬ್ಬನ ಕಥೆ ಅಲ್ಲ ಇದು, ಇದು ಭಾರತದ ಪ್ರತಿಯೊಂದು ಹಳ್ಳಿಯ, ಪ್ರತಿಯೊಂದು ಮನೆಯ ಅಪ್ಪನ ಕಥೆ.

    ನಮ್ಮ ಶಾಸ್ತ್ರಗಳಲ್ಲಿ ಅಪ್ಪನ ಸ್ಥಾನವನ್ನು ಎಷ್ಟು ಎತ್ತರದಲ್ಲಿ ಇಟ್ಟಿದ್ದಾರೆ.

    मातृदेवो भव । पितृदेवो भव ।

    ಸ್ಕಂದ ಪುರಾಣದಲ್ಲಿ ಹೇಳುವ ಮಾತು:

    पिता धर्मः पिता स्वर्गः पिता हि परमं तपः। पितरि प्रीतिमापन्ने प्रीयन्ते सर्वदेवताः॥
    ತಂದೆಯೇ ಧರ್ಮ, ತಂದೆಯೇ ಸ್ವರ್ಗ, ತಂದೆಯೇ ಪರಮ ತಪಸ್ಸು. ತಂದೆ ಸಂತೋಷಗೊಂಡರೆ ಸಕಲ ದೇವತೆಗಳೂ ಸಂತೋಷಗೊಳ್ಳುತ್ತಾರೆ.

    ರಮೇಶ ಸಾಲ ಮಾಡಿ ಮಗಳ ಮದುವೆ ಮಾಡಿ, ಆ ಸಾಲ ತೀರಿಸಲು ಅಡಿಕೆ-ಕಾಯಿ ಕೀಳಲು ಹೋದನಲ್ಲ, ಅದೇ ಅವನ ಪರಮ ತಪಸ್ಸು.

    ಪದ್ಮ ಪುರಾಣದ ಸಂದೇಶ: ತಂದೆಯ ಋಣವನ್ನು ಮಕ್ಕಳು ಎಂದಿಗೂ ತೀರಿಸಲಾರರು. ಅವನು ತನ್ನ ಸುಖವನ್ನು ತ್ಯಜಿಸಿ, ಮಕ್ಕಳ ಭವಿಷ್ಯಕ್ಕಾಗಿ ಬದುಕುತ್ತಾನೆ.

    ರಮೇಶ ಬಡವನಾಗಿದ್ದರೂ *”ಬೌದ್ಧಿಕವಾಗಿ ಶ್ರೀಮಂತ”*ನಾಗಿದ್ದ ಎಂದು ನೀವು ಬರೆದಿದ್ದೀರಲ್ಲ, ಅದೇ ನಿಜವಾದ ಅಪ್ಪನ ಆಸ್ತಿ. ಅವನು ಮಹೇಶನಿಗೆ ದುಬಾರಿ ಮೊಬೈಲ್ ಕೊಡಲಿಲ್ಲ, ಆದರೆ ಸ್ಪರ್ಧೆಯಲ್ಲಿ ಗೆಲ್ಲುವ ಛಲವನ್ನು ಕೊಟ್ಟ. ಅದೇ ನಿಜವಾದ ಶಿಕ್ಷಣ.

    ಇಂದು ಪಟ್ಟಣದ ಹೊಳಪು ನೋಡಿ ಮಕ್ಕಳು ಅಪ್ಪನ ಬೆವರನ್ನು ಮರೆತುಬಿಡುತ್ತಾರೆ. ಆದರೆ ಈ ಕಥೆ ನೆನಪಿಸುತ್ತದೆ.

    – *ಅಪ್ಪನ ಹಳೆಯ ಚಪ್ಪಲಿ ಸವೆದಿದ್ದರೆ, ಮಗನ ಭವಿಷ್ಯ ಸವೆದು ಹೋಗದಿರಲಿ ಎಂದೇ.*

    ಅದ್ಭುತ ಬರಹ. ಮತ್ತಷ್ಟು ಬರಹಗಳು ಬರಲಿ.🙏🙏

Leave a Reply