ವೀರ ಸಾವರ್ಕರ್

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸುಖಾಸುಮ್ಮನೆ ಒಂದು ದಿನದ ಮಟ್ಟಿಗೆ ಸೆರೆಮನೆ ವಾಸ ಅನುಭವಿಸಿದವರೆಲ್ಲಾ, ಸ್ಚಾತಂತ್ರ್ಯ ಹೋರಾಟಗಾರರು ಎಂದು ಬಿಂಬಿಸಿಕೊಂಡು ಸರ್ಕಾರದ ಸವಲತ್ತು ಪಡೆಕೊಂಡರೆ, ಸ್ವತಃ ಉಗ್ರ ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರೇರಣಾದಾಯಕರಾಗಿದ್ದ ಜನರಿಂದ ಪ್ರೀತಿಯಿಂದ ವೀರ್ ಸಾವರ್ಕರ್ ಎಂದು ಕರೆಸಿಕೊಳುತ್ತಿದ್ದ ವಿನಾಯಕ ದಾಮೋದರ ಸಾವರ್ಕರ್ ಅವರ ಜನ್ಮದಿನವಾದ ಮೇ 28ರಂದು ಅವರ ಸಾಧನೆಗಳನ್ನು ಮತ್ತು ಅವರು ಅನುಭವಿಸಿದ ಕಷ್ಟಗಳನ್ನು ಮೆಲುಕು ಹಾಕುವ ಪ್ರಯತ್ನವೇ ಈ ಲೇಖನ.

ವೀರ ಸಾವರ್ಕರ್ ಅವರನ್ನು ಮತ್ತು ಅವರ ಸಾಧನೆ ಅವರು ಅನುಭವಿಸಿದ ಕಷ್ಟವನ್ನು ಸರಿಯಾಗಿ ಅರ್ಥ ಮಾಡಿಕೊಂಡವರಿಗಿಂತ ಅವರ ಬಗ್ಗೆ ತಪ್ಪಾಗಿ ಪೂರ್ವಾಗ್ರಹ ಪೀಡಿತರಾಗಿ ಅವರ ಬಗ್ಗೆ ಆಡಿಕೊಂಡವರೇ ಹೆಚ್ಚು. ಸಾವರ್ಕರ್ ಅವರಿದ್ದ ಅಂಡಮಾನ್ ಸೆಲ್ಯುಲಾರ್ ಜೈಲಿನ ಕ್ರೂರತನ ಅಲ್ಲಿ ಅವರು ಅನುಭಬಿಸಿದ ಕಷ್ಟವನ್ನು ಒಮ್ಮೆ ಅರಿತಲ್ಲಿ ಸಾವರ್ಕರ್ ಅವರ ಬಗ್ಗೆ ಅವರ ಖಂಡಿತವಾಗಿಯೂ ಗೌರವ ಮೂಡುತ್ತದೆ.

ಅಂದು 1910 ಮಾರ್ಚ್ 13, ಭಾನುವಾರ. ಆ ವ್ಯಕ್ತಿ ಪ್ಯಾರಿಸ್ ನಿಂದ ಲಂಡನ್ನಿನ ಕಡೆಗೆ ಹೊರಡುವ ರೈಲು ಹತ್ತಿದ್ದರು. ಲಂಡನ್ನಿನ ವಿಕ್ಟೋರಿಯಾ ನಿಲ್ದಾಣ ಪ್ರವೇಶಿಸುವ ಹೊತ್ತಿಗೆ ರಾತ್ರಿ 2 ಗಂಟೆ. ನಾಲ್ಕಾರು ಗುಪ್ತಚರರು ಧಡಧಡನೆ ಓಡಿ ಬಂದವರೇ ಕೂಡಲೇ ಅವರನ್ನು ಬಂಧಿಸಿದರು. ರಾಜದ್ರೋಹ, ಜಾಕ್ಸನ್ ಕೊಲೆಗೆ ನೆರವಾದ ಅಪರಾಧ, ಲಂಡನ್ನಿನಲ್ಲಿ ಶಸ್ತ್ರಾಸ್ತ್ರ ಶೇಖರಣೆ, ಭಾರತ ಹಾಗೂ ಲಂಡನ್ನಿನಲ್ಲಿ ಮಾಡಿದ ರಾಜದ್ರೋಹ ಭಾಷಣಗಳು, ಪರಾರಿ ಹೀಗೆ ಹತ್ತಾರು ಆರೋಪಗಳನ್ನು ಹೊರಿಸಿದ್ದರು.   ಜೂನ್ ಪ್ರಾರಂಭದಲ್ಲಿ ಕೋರ್ಟ್ ಆಫ್ ಕ್ರಿಮಿನಲ್ ಅಪೀಲ್ ಇವರನ್ನು ಭಾರತ ಸರಕಾರಕ್ಕೆ ಒಪ್ಪಿಸಬೇಕಾಗಿ ತೀರ್ಪು ಹೊರಹಾಕಿತು. ಜುಲೈ ಮೊದಲ ದಿನ ಆ ವ್ಯಕ್ತಿಯನ್ನು ಹೊತ್ತ ಠಮೊರಿಯಾ ಹಡಗು ಭಾರತದ ಕಡೆ ಬರುತ್ತಿದ್ದಾಗ, ಹಡಗಿನ ಶೌಚಾಲಯದ ಕಿಟಕಿಯಿಂದ ಸ್ವಾತಂತ್ರ್ಯ ಲಕ್ಷ್ಮೀ ಕೀ ಜೈ ಎಂದು ಹಾರಿ ಜಿಗಿದವರೇ, ಮುಳುಗುತ್ತಾ, ಏಳುತ್ತಾ ದಡ ಸೇರಿದರು. ಅಲ್ಲಿನ ಸ್ಥಳೀಯ ಪೋಲೀಸರ ಕೆಟ್ಟ ನಿರ್ಧಾರದಿಂದಾಗಿ ಆವರನ್ನು ಮತ್ತೆ ಬಂಧಿಸಿ ಕೈ ಕಾಲುಗಳಿಗೆ ಬೇಡಿ ಹಾಕಿ ಮತ್ತೆ ಹಡಗಿಗೆ ಎಳೆದೊಯ್ದರು. ಆ ರೀತಿಯ ದುರ್ವಿಧಿಗೆ ಬಲಿಯಾದವರೇ ಶ್ರಿ ವೀರ ಸಾವರ್ಕರ್.

ಹಡಗು ಜುಲೈ 22 ಮುಂಬೈ ತಲುಪಿದ ಕೂಡಲೇ ನಾಸಿಕದ ಜೈಲು ಸೇರಿದರು. ಕೆಲ ದಿನಗಳ ನಂತರ ಯರವಡಾ ಜೈಲಿಗೆ ವರ್ಗಾವಣೆಯಾಗಿ. ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಸಮುದ್ರದ ಮಧ್ಯದಲ್ಲಿಯೇ ತಪ್ಪಿಸಿ ಕೊಂಡ ಈ ವ್ಯಕ್ತಿಯನ್ನು ಇಲ್ಲಿಯ ಸೆರೆಮನೆಗೆ ಹಾಕಿದರೆ ಸುಮ್ಮನಿರುವುದಿಲ್ಲ ಎಂದು ಭಾವಿಸಿ 24.12.1910 25 ವರ್ಷಗಳ ಕಾಲಾಪಾನಿ ಶಿಕ್ಷೆ ಹಾಗೂ ಆಸ್ತಿ ಪಾಸ್ತಿಗಳ ಜಪ್ತಿ. ಮತ್ತೆ 30.01.1911 ರಂದು ಜಾಕ್ಸನ್ ಕೊಲೆಗೆ ನೆರವಾದ ಆರೋಪಕ್ಕಾಗಿ ಮತ್ತೊಂದು ಆಜನ್ಮ ಕಾರಾವಾಸದ ತೀರ್ಪು ಹೊರಬಂದಿತು. ಹೀಗೆ ಒಟ್ಟಿನಲ್ಲಿ 50 ವರ್ಷಗಳ ಕರಿನೀರಿನ ಶಿಕ್ಷೆಗೆ ಒಳಪಡಿಸಿ ಸಾವರ್ಕರ್ ಅವರನ್ನು
1911 ಜೂನ್ 27 ರಂದು ‘ಮಹಾರಾಜ’ ಹಡಗಿನಲ್ಲಿ ಸಾಗಿಸಸಿ ಜುಲೈ 4 ರಂದು ಅಂಡಮಾನಿನ ಸೆಲ್ಯುಲರ್ ಜೈಲಿಗೆ ಸೇರಿಸಲಾಯಿತು.

andaman1ಈ ಅಂಡಮಾನ್ ಸೆಲ್ಯುಲಾರ್ ಸೆರೆಮನೆಯನ್ನು 1896 ರಲ್ಲಿ ಕಟ್ಟಲು ಆರಂಭಿಸಿ, ಅದು ಪೂರ್ಣಗೊಂಡಿದ್ದು 1906 ರಲ್ಲಿ!! ಇದರ ಮೂಲ ಕಟ್ಟಡವು ಕಡುಗೆಂಪಿನ-ಇಟ್ಟಿಗೆಯದ್ದಾಗಿತ್ತು. ಕಟ್ಟಡ ನಿರ್ಮಾಣಕ್ಕೆ ಬೇಕಾದ ಇಟ್ಟಿಗೆಗಳನ್ನು ಬರ್ಮಾದಿಂದ ತರಲಾಗಿತ್ತು. ಈ ಕಟ್ಟಡಕ್ಕೆ ಏಳು ರೆಕ್ಕೆಗಳಂತೆ ಕಮಾನುಗಳಿದ್ದು, ಮಧ್ಯದ ಗೋಪುರವು ಅದರ ಸಮತೋಲನ ಮಾಡಿದಂತೆ ಕಾಣಿಸುತ್ತದೆ. ಅಲ್ಲಿನ ಗೃಹರಕ್ಷಕ ದಳದವರು ಕೈದಿಗಳ ಮೇಲೆ ಸದಾ ಕಣ್ಣಿಡಲೂ ಸಹ ಇದು ನೆರವಾಗುತ್ತಿತ್ತು. ಈ ರೆಕ್ಕೆಗಳ ಆಕಾರದ ಅಂಚುಗಳು ಗೋಪುರದ ಮೇಲ್ಭಾಗದಲ್ಲಿ ಸಾಲಿನಂತೆ ಬೈಸಿಕಲ್ ಚಕ್ರಕ್ಕಿರುವ ಮೊನೆಗಳಂತೆ ಕಾಣುತ್ತಿದ್ದವು. ದೊಡ್ಡದಾದ ಗಂಟೆಯೊಂದನ್ನು ಗೋಪುರದಲ್ಲಿಡಲಾಗಿತ್ತು, ಯಾವಾಗಲಾದರೂ ತುರ್ತು ಸಂದರ್ಭ ಬಂದಾಗ ಸಂಭಂಧಿಸಿದವರನ್ನು ಎಚ್ಚರಿಸಲು ಇದು ಅನುಕೂಲವಾಗುತ್ತಿತ್ತು.

andaman3ಪ್ರತಿ ರೆಕ್ಕೆಯ ಅಂಚಿನಲ್ಲಿ ಪೂರ್ಣಗೊಂಡ ಭಾಗದಲ್ಲಿ ಮೂರು ಮಹಡಿಯ ಅಂಕಣಗಳಿದ್ದವು. ಒಟ್ಟು 698 ಕೋಶದಂತಹ ಗೂಡುಗಳಿದ್ದವೇ ವಿನಹ ಮಲಗುವ ಅಥವಾ ವಿಶ್ರಾಂತಿಯ ಪಡಶಾಲೆಗಳಿರಲಿಲ್ಲ. ಪ್ರತಿ ಕೋಶದಲ್ಲೂ 4.5 ಮೀಟರ್ * 2.7 ಮೀಟರ್ಸ್ ಅಥವಾ 15*8 ಅಡಿ ಉದ್ದದ ಈ ಕೊಠಡಿಗಳಿಗೆ ಮೂರು ಮೀಟರ್ ಎತ್ತರದಲ್ಲಿ ಗಾಳಿ-ಬೆಳಕಿಗೊಂದು ಕಿಂಡಿಯಿತ್ತು. ಈ ಸೆಲ್ಯುಲರ್ ಜೈಲ್ ಅನ್ನುವ ಶಬ್ದವು ಯಾವುದೇ ಕೈದಿಯು ಇನ್ನೊಬ್ಬನೊಂದಿಗೆ ಯಾವುದೇ ರೀತಿಯ ಸಂವಹನ-ಸಂಪರ್ಕ ಮಾಡಬಾರದೆಂಬ ಉದ್ದೇಶದಿಂದ ಇದನ್ನು ಕೋಶದ ಮಾದರಿ ನಿರ್ಮಿಸಲಾಗಿತ್ತು. ಅವರೆಲ್ಲರನ್ನೂ ಒಂಟಿಯಾಗಿ ಏಕಾಂಗಿತನದಲ್ಲೇ ಇರುವಂತೆ ನೋಡಿಕೊಳ್ಳಲಾಗುತ್ತಿತ್ತು.

ಈ ಸೆಲ್ಯುಲರ್ ಜೈಲನ್ನು ಹಿಂದಿಯಲ್ಲಿ ಕಾಲಾಪಾನಿ ಎಂದು ಕರೆಯಲಾಗುತ್ತಿತ್ತು, ಅಕ್ಷರಶಃ ಇದನ್ನು ಕಪ್ಪು ನೀರು ಎಂದು ಭಾಷಾಂತರಿಸಲಾಗಿದ್ದು, ಸಮುದ್ರದ ಆಳದ ನೀರಿನಲ್ಲಿನ ಮತ್ತು ದೂರದಲ್ಲಿರುವ ಅಜ್ಞಾತವಾಸದ ಮನೆ ಇದಾಗಿತ್ತು. ಈ ಜೈಲಿನ ಸುತ್ತಲಿರುವ ಸಮುದ್ರದ ನೀರು ಬಹಳ ಆಳವಾಗಿದ್ದು ಕಪ್ಪು ಬಣ್ಣದ್ದಾಗಿ ಕಾಣುತ್ತದೆ. ಹಾಗಾಗಿ ಕಾಲಾಪಾನಿ ಎಂದು ಹೆಸರು ಬಂದಿರಬಹುದು. ಜೊತೆಯಲ್ಲಿ ಇಲ್ಲಿನ ಚಿತ್ರ ವಿಚಿತ್ರ ಅಮಾನವೀಯ ಶಿಕ್ಷೆಯನ್ನು ಅನುಭವಿಸಿದವರು ಕೊಟ್ಟ ಹೆಸರೂ ಇದಾಗಿರಬಹುದು. ಅಷ್ಟೇ ಅಲ್ಲದೇ ಇಲ್ಲಿ ನೀಡುತ್ತಿರುವ ನರಕ ಸದೃಶ ಶಿಕ್ಷೆ ಹೊರಜಗತ್ತಿಗೆ ಗೊತ್ತಾಗುತ್ತಲೇ ಇರಲಿಲ್ಲ. ಅದೂ ಒಂದು ಕಾರಣದಿಂದ ಕಾಲಾಪಾನೀ ಎಂಬ ಹೆಸರು ಬಂದಿರಬಹುದು.

ಈ ಸೆರೆಮನೆಗೆ ಕಳುಹಿಸಲಾಗುತ್ತಿದ್ದ ಖೈದಿಗಳಿಗೆ ಅತಿ ಕೆಟ್ಟ ರೀತಿಯಲ್ಲಿ ಶಿಕ್ಷೆಗಳನ್ನು ನೀಡಲಾಗುತ್ತಿತ್ತು. ಆದರೆ ಈ ಪ್ರದೇಶವನ್ನು ಭಾರತದ ಪ್ರಮುಖ ಭಾಗವೆಂದು ಯಾವತ್ತು ಯಾರು ಕೂಡ ಪರಿಗಣಿಸಿರಲಿಲ್ಲ, ಬದಲಾಗಿ ಇದನ್ನು ವಿದೇಶವೆಂದೇ ಭಾವಿಸಲಾಗಿತ್ತು. ಅಷ್ಟೇ ಅಲ್ಲದೇ, ಇದನ್ನು ರಾಜಕೀಯ ಖೈದಿಗಳ ಕುಖ್ಯಾತ ದ್ವೀಪ ಎಂದೂ ಭಾವಿಸಲಾಗಿತ್ತು.

ಮಟ ಮಟ ಮಧ್ಯಾಹ್ನದ ಸೂರ್ಯನ ಭಯಂಕರವಾದ ಬಿಸಿಲಿನ ಬೇಗೆಯ ನಡುವೆಯೂ ತೆಂಗಿನಕಾಯಿಯ ನಾರನ್ನು ಹಲವರು ತೆಗೆಯುತ್ತಿದ್ದರೆ ಮತ್ತೆ ಹಲವರು ಅದೇ ನಾರನ್ನು ಬಳೆಸಿಕೊಂಡು ತಮ್ಮ ಕೈಗಳ ಮೂಲಕ ತೊಡೆಯ ಮೇಲೆ ಹಗ್ಗವನ್ನು ಹೊಸೆಯಬೇಕಾಗುತ್ತಿತ್ತು. ನೆತ್ತಿಯ ಮೇಲೆ ಉರಿಯುವ ಸೂರ್ಯನ ಕಿರಣಗಳು ಹಗ್ಗ ಹೊಸೆದೂ ಹೊಸೆದೂ ನೆತ್ತರು ಹರಿಸುವ ಕೈ ಮತ್ತು ತೊಡೆಗಳು ಹೀಗೆ ರಕ್ತದ ಮಡುವಿನಲ್ಲಿ ತುಂಬಿಹೋದರೂ ಒಂದು ಚೂರೂ ಕರಗದ ಕಲ್ಲಿನಂತಹ ಹೃದಯದ ಬ್ರಿಟಿಷ್ ಆಧಿಕಾರಿಗಳು. ಸತತ ಕೆಲಸದಿಂದ ದೇಶ ದಣಿದು ನಿಶಕ್ತಿಯಿಂದ ಕೆಲಕಾಲ ಕೆಲಸ ನಿಲ್ಲಿಸಿದರೆ ಅಥವಾ ಗಂಟಲಿನ ಪಸೆ ಆರಿ ಹೋಗಿ ಕುಡಿಯಲು ಒಂದು ಲೋಟ ಕೇಳಿದರೆ ಅಲ್ಲಿನ ಸಿಬ್ಬಂದಿಗಳು ನಿಲ್ಲಿಸದೇ ಕೊಡುತ್ತಿದ್ದದ್ದು ಕೇವಲ ಚಾವಟಿ ಏಟುಗಳನ್ನು ಮಾತ್ರ. ಇದು ಬಂಗಾಳ ಕೊಲ್ಲಿಯ ಭಾರತದದ್ದೇ ಭೂಭಾಗವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿದ್ದ ಕ್ರೂರ ಬ್ರಿಟಿಷ್‍ರ ವಸಾಹತುಗಳ ಸೆಲ್ಯುಲರ್ ಜೈಲಿಗೆ ಕಳುಹಿಸಲಾದ ರಾಜಕೀಯ ಖೈದಿಗಳ ಪರಿಸ್ಥಿತಿಯಾಗಿತ್ತು.

sav1ಸಣ್ಣ ಪುಟ್ಟ ಕಾರಣಗಳಿಗೂ ಕೂಡ ಬ್ರಿಟಿಷ್ ಸರ್ಕಾರ ಭಾರತೀಯರಿಗೆ ಕಾಲಾಪಾನೀ ಶಿಕ್ಷೆ ವಿಧಿಸುತ್ತಿತ್ತು. ಅಷ್ಟೇ ಅಲ್ಲದೇ, ಅಪರಾಧಿಗಳನ್ನು ಪ್ರಾಣಿಗಿಂತಲೂ ಕಡೆಯಾಗಿ ನೋಡುತ್ತಿದ್ದರು. ಹುಳುಗಳಿಂದ ಕೂಡಿದ ಆಹಾರ, ಕುಡಿಯಲು ಕೊಳಕು ನೀರು ಅದರಲ್ಲೂ ದಿನಕ್ಕೆ ಎರಡು ಲೋಟ ಮಾತ್ರ ನೀಡಲಾಗುತ್ತಿತ್ತಲ್ಲದೇ, ಅವರು ಕೊಟ್ಟ ಆಹಾರಗಳನ್ನು ತಿನ್ನಲೇಬೇಕು. ಒಂದು ವೇಳೆ ಅದನ್ನು ತಿರಸ್ಕರಿಸಿದರೆ ಕಠಿಣ ಶಿಕ್ಷೆ. ಮಲ-ಮೂತ್ರ ವಿಸರ್ಜನೆಗೂ ಜೈಲರನ ಅನುಮತಿ ಕೇಳಬೇಕಾಗುತ್ತಿತ್ತು. ಅಲ್ಲಿಯ ವ್ಯವಸ್ಥೆಯನ್ನು ವಿರೋಧೀಸುವ ಖೈದಿಗಳಿಗಂತೂ ಊಹಿಸಲು ಸಾಧ್ಯವಾಗದ ಶಿಕ್ಷೆಗಳು. ಆಯಾಸಗೊಂಡು ನಿಲ್ಲಿಸಿದರೆ ಛಾಟಿ ಏಟು. ಕೈಕಾಲು ಮಡಚದ ಹಾಗೆ ಕಬ್ಬಿಣದ ಸರಳುಗಳನ್ನು ಹಾಕಿ ವಾರಗಟ್ಟಲೆ ನಿಲ್ಲಿಸುತ್ತಿದ್ದರು. ಆದರೆ ಬ್ಯಾರಿ ಮತ್ತು ಇತರ ಬ್ರಿಟಿಷ್ ಅಧಿಕಾರಿಗಳು ಮಾತ್ರ ಐಷಾರಾಮಿ ಜೀವನವನ್ನು ನಡೆಸುತ್ತಿದ್ದರು. ಅಷ್ಟೇ ಅಲ್ಲದೇ,ಟೆನ್ನಿಸ್ ಕೋರ್ಟ್, ಬೇಕರಿ, ಈಜುಕೊಳ ಮತ್ತು ಕ್ಲಬ್ ಹೌಸ್ ಗಳನ್ನು ಅಧಿಕಾರಿಗಳು ಹೊಂದಿದ್ದರು.

ಇನ್ನು ತಿನ್ನಲು ಅವರಿಗೆ ಕೊಡುತ್ತಿದ್ದದ್ದೂ ಅನ್ನದ ಗಂಜಿ. ಅದೂ ಒಂದು ತೆಂಗಿನ ಕರಟವನ್ನು ಬೆತ್ತಕ್ಕೆ ಕಟ್ಟಿ ಮಾಡಿದ ಕಚ್ಚಾ ಸೌಟು ಡಬ್ಬುವಿನಲ್ಲಿ ಒಂದು ಡಬ್ಬು. ಅದಕ್ಕೂ ಉಪ್ಪು ಸಾಲುತ್ತಿರಲಿಲ್ಲ. ಏಕೆಂದರೆ ಇಡೀ ದಿನಕ್ಕೆ ಚಿಟಿಕೆ ಉಪ್ಪು ಕೊಡುತ್ತಿದ್ದರು. ಅದು ಮಧ್ಯಾಹ್ನದ ದಾಲ್‍ಗೂ ಬೇಕಾಗುತ್ತಿತ್ತು. ಹೀಗಾಗಿ ರುಚಿಯಏ ಇಲ್ಲದೇ ಉಪ್ಪಿಲ್ಲದ ಗಂಜಿಯನ್ನು ಸೇವಿಸಿಯೇ ಅದೆಷ್ಟೋ ದಿನಗಳನ್ನು ಕಳೆದರು.

ಸಾವರ್ಕರ್ ಅವರನ್ನು 1911 ಜುಲೈ 4 ರಂದು ಅಂಡಮಾನಿನ ಸೆಲ್ಯುಲರ್ ಜೈಲಿಗೆ ಕರೆತಂದು ಅವರನ್ನು ಗಾಣದಿಂದ ಎಣ್ಣೆಯನ್ನು ತೆಗೆಯುವ ಕೆಲಸಕ್ಕೆ ಹೂಡಲಾಯಿತು. ಪ್ರತೀ ದಿನ ಅವರು ಕಡ್ಡಾಯವಾಗಿ ಮೂವತ್ತು ಪೌಂಡ್ ಕೊಬ್ಬರಿ ಎಣ್ಣೆ ತೆಗೆಯಬೇಕಾಗಿತ್ತು. ತಪ್ಪಿದರೆ ಶಿಕ್ಷೆ, ದಣಿವಾಗಿ ನಿಂತರೆ ಚಾವಟಿಯ ಹೊಡೆತ, ಕೈಗಳಲ್ಲಿ ರಕ್ತ, ಎದೆಯಲ್ಲಿ ಉರಿ, ತಲೆ ಸುತ್ತು… ಹೀಗೆ ನರಕಯಾತನೆ. ಮಲಮೂತ್ರ ವಿಸರ್ಜನೆಗೂ ಸಮಯ ನಿಶ್ಚಿತ! ಬೆಳಿಗ್ಗೆ 6 ರಿಂದ 10 ರವರೆಗೆ, ಮಧ್ಯಾಹ್ನ 12 ರಿಂದ 5 ರವರೆಗೆ ಗೋಡೆ ಕಡೆ ಮುಖ ಮಾಡಿ ಬೇಡಿ ಹಾಕಲಾಗುತ್ತಿತ್ತು. ವರ್ಷಕ್ಕೆ ಒಂದು ಸಲ ಕಾಗದ ಬರೆಯುವ ಅವಕಾಶ. ಅರೆ ಅನ್ನ, ಗಬ್ಬು ನೀರು, ಮಣ್ಣು ಕಲ್ಲು ಬೆವರು ಬೆರೆಸಿದ ಊಟ, ಇದು ಅಲ್ಲಿನ ಆಹಾರ ವ್ಯವಸ್ಥೆ. ಬೆಳಗ್ಗೆ ಎದ್ದರೆ ಅದೇ ಜೈಲು ಖಾನೆ, ಮರದ ಹಲಗೆ, ಕೊರೆಯುವ ಚಳಿ, ಹರಕು ಕಂಬಳಿ! ಅದೇ ತೆಂಗಿನ ನಾರು ಬಿಡಿಸುವ ಕೆಲಸ, ಅದೇ ಎಣ್ಣೆಯ ಗಾಣ, ನೀರು ಇಟ್ಟಿಗೆ ಹೊರುವುದು ಸಾವಕರ್ರರ ಪ್ರತಿನಿತ್ಯದ ಕರ್ತವ್ಯವಾಗಿತ್ತು. ಇಷ್ಟೆಲ್ಲಾ ಕಷ್ಟಗಳ ಮಧ್ಯೆಯೂ ಸಾವರ್ಕರ್ ಅವರು ತಮ್ಮ ಕೈಗಳಿಗೆ ಹಾಕಿದ ಬೇಡಿಯಿಂದಲೇ ಗೋಡೆಗಳ ಮೇಲೆ ತಮ್ಮ ಕವನಗಳನ್ನು ರಚಿಸಿ ಅದನ್ನು ಕಂಠಸ್ಥ ಮಾಡಿ  ಅವರು ಬಿಡುಗಡೆಯಾದ ನಂತರ ಅದನ್ನು ಪುಸ್ತಕ ರೂಪಕಕ್ಕೆ ತರಲಾಯಿತು.

andaman9ಸೆಲ್ಯುಲಾರ್ ಜೈಲಿನಿಂದ ಬಿಡುಗಡೆಯ ನಂತರ, ಸಾವಾರ್ಕರ್ ಅವರು ತಾವು ಎದುರಿಸಿದ ಅಸಹನೀಯ ಪರಿಸ್ಥಿತಿಗಳ ಬಗ್ಗೆ, ವಿಶೇಷವಾಗಿ ಕ್ರೂರ ಐರಿಶ್ ಜೈಲರ್ ಡೇವಿಡ್ ಬ್ಯಾರಿಯ ಬಗ್ಗೆ, ಸ್ವಯಂ ಘೋಷಿತ ಗಾಡ್ ಆಫ್ ಪೋರ್ಟ್ ಬೇರ್ ಬಗ್ಗೆ ವ್ಯಾಪಕವಾಗಿ ಹೀಗೆ ಬರೆದಿದ್ದಾರೆ. ಈ ಜೈಲಿಗೆ ಪ್ರವೇಶಿಸುವುದು ಎಂದರೆ ಸಾವಿನ ದವಡೆಗೆ ಪ್ರವೇಶಿಸಿದಂತೆ. ದೇಹ ಮತ್ತು ಮನಸ್ಸುಗಳು ಅನುಭವಿಸುತ್ತಿದ್ದ ಯಾತನೆಯನ್ನು ಹೇಗೆ ವಿವರಿಸುವುದು? ಜೈಲಿನ ಬದುಕು, ಕಠಿಣ ಕೆಲಸ, ಕಡಿಮೆ ಊಟ, ಕಡಿಮೆ ಬಟ್ಟೆ, ಹೊಡೆತ ಇವೆಲ್ಲವಕ್ಕಿಂತಲೂ ಮಲಮೂತ್ರ ಬಾಧೆ ತೀರಿಸಿಕೊಳ್ಳುವುದೇ ಕಷ್ಟವಾಗಿತ್ತು. ಅದರ ವ್ಯವಸ್ಥೆಯಾಗುವ ತನಕ ಖೈದಿ ಕಾಯಬೇಕಿತ್ತು. ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಹೀಗೆ ದಿನಕ್ಕೆ ಮೂರು ಸಲ ಮಾತ್ರ ಅವಕಾಶವಿತ್ತು. ನಿಯಮಿತ ಸಮಯದ ನಡುವೆ ಹೋಗುವುದು ಕೆಟ್ಟ ನಡತೆಯೆಂದು ಭಾವಿಸಲಾಗುತ್ತಿತ್ತು. ರಾತ್ರಿ ಪುಟ್ಟ ಮಣ್ಣಿನ ಕುಡಿಕೆಯಲ್ಲಿ ಮೂತ್ರಬಾಧೆ ತೀರಿಸಿಕೊಳ್ಳಬೇಕು. ಜೈಲರ್ ಬ್ಯಾರಿ ಕೆಲವೊಮ್ಮೆ ಹೀಗೆನ್ನುತ್ತಿದ್ದ: “ಕೇಳಿ, ಖೈದಿಗಳೇ. ಇಡಿಯ ಜಗತ್ತಿಗೆ ಒಬ್ಬನೆ ದೇವರು. ಅವನು ಮೇಲೆ ಸ್ವರ್ಗದಲ್ಲಿದ್ದಾನೆ. ಆದರೆ ಇಲ್ಲಿ ಪೋರ್ಟ್ ಬ್ಲೇರಿನಲ್ಲಿ ಇಬ್ಬರು ದೇವರು. ಆಕಾಶದಲ್ಲಿ ಅವನು, ನೆಲದ ಮೇಲಿನ ದೇವರು ನಾನು. ಆಕಾಶದ ದೇವರು ನೀವು ಸತ್ತ ನಂತರ ಬಹುಮಾನ ಕೊಡಬಹುದು, ಆದರೆ ನೆಲದ ಮೇಲಿನ ದೇವರು ಹಾಗಲ್ಲ, ನಾನು ಬದುಕಿರುವಾಗಲೆ ನಿಮಗೆ ಒಳ್ಳೆಯದು ಮಾಡುತ್ತೇನೆ. ಆದ್ದರಿಂದ ಖೈದಿಗಳಾಗಿ ಸನ್ನಡತೆ ತೋರಿಸಿ. ನನ್ನ ವಿರುದ್ಧ ಯಾವುದೇ ಮೇಲಧಿಕಾರಿಗೆ ನೀವು ದೂರಿತ್ತರೂ ಉಪಯೋಗವಿಲ್ಲ, ನೆನಪಿಡಿ. ಎಂದು.

ಆದ್ಯಾಗೂ, ಇಂದು ಜೈಲು “ಭಾರತದಲ್ಲಿನ ಸ್ವಾತಂತ್ರ್ಯ ಚಳುವಳಿಯ ಸಂಕೇತವಾಗಿದೆ” . ಭಾರತದ ಮೂಲೆಮೂಲೆಯ ತರುಣ ಕ್ರಾಂತಿಕಾರಿಗಳ ಬೆವರು, ನೆತ್ತರು, ಕಣ್ಣೀರು ಹೀರಿದ ಸೆಲ್ಯುಲಾರ್ ಜೈಲು 1979ರಲ್ಲಿ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲ್ಪಟ್ಟಿತು. ಜೈಲಿನಲ್ಲಿದ್ದವರು ಧರಿಸುತ್ತಿದ್ದ ಗೋಣಿ ಉಡುಪು, ದಿನಕ್ಕೆ ಕನಿಷ್ಟ 30 ಪೌಂಡ್ ಎಣ್ಣೆ ತೆಗೆಯಲು ಕಾಯಿ ಒಡೆದು ರುಬ್ಬಬೇಕಿದ್ದ ಎಣ್ಣೆಗಾಣ, ನೇಣುಮನೆ, ಅಂತ್ಯಸಂಸ್ಕಾರ ವಿಧಿಯ ಪೀಠ, ಹೊಡೆತ ತಿನ್ನುವ ಸ್ಥಳ ಎಲ್ಲವೂ ಮೂಕಸಾಕ್ಷಿಗಳಾಗಿ ಆವರಣದಲ್ಲಿ ನಿಂತಿವೆ. ಪ್ರಸ್ತುತ ಜೈಲಿನಲ್ಲಿ ಪ್ರತಿದಿನ ಸಂಜೆ ನಡೆಯುವ ಸೌಂಡ್ ಅಂಡ್ ಲೈಟ್ ಶೋನಲ್ಲಿ ಜೈಲುವಾಸಿಗಳ ದನಿ ಹಾಗೂ ಜೈಲು ಆವರಣದ ಮರ ಮಾತನಾಡುವಂತೆ ನಿರೂಪಿಸುತ್ತ ನೋಡುಗರ ದೇಶಪ್ರೇಮವನ್ನು ರಿಚಾರ್ಜ್ ಮಾಡಲು ಪ್ರಯತ್ನಿಸಲಾಗುತ್ತಿದೆ.

1921 ರಲ್ಲಿ ಅಂಡಮಾನಿನಿಂದ ಭಾರತದ ಆಲಿ ಪುರ ಜೈಲಿಗೆ ಸಾವರ್ಕರ್ ಅವರನ್ನು ವರ್ಗಾಯಿಸಲಾಯಿತು, ನಂತರ ರತ್ನಗಿರಿಯ ಸೆರೆಮನೆ ವಾಸ, ತದನಂತರ 1923 ರಲ್ಲಿ ಯರವಡಾ ಜೈಲಿಗೆ ಸ್ಥಳಾಂತರಿ ಸಲಾಯಿತು. ಜನವರಿ 6, 1924 ಇನ್ನು 5 ವರುಷಗಳ ಕಾಲ ರಾಜಕಾರಣದಲ್ಲಿ ಭಾಗವಹಿಸಬಾರದು ಮತ್ತು ರತ್ನಗಿರಿ ಯಲ್ಲಿಯೇ ಸ್ಥಾನ ಬದ್ಧತೆಯಲ್ಲಿ ಇರಬೇಕು ಎಂಬ ಷರತ್ತಿನೊಂದಿಗೆ ಅವರನ್ನು ಬಿಡುಗಡೆ ಮಾಡಲಾಯಿತು. ಒಂದು ವೇಳೆ ಈ ರೀತಿಯಾಗಿ ಮುಂಗಡವಾಗಿಯೇ ಸಾವರ್ಕರರು ಬಿಡುಗಡೆಯಾಗದಿದ್ದರೆ, ತಮ್ಮ 50 ವರುಷಗಳ ಶಿಕ್ಷೆಯ ಅವಧಿಯನ್ನು ಸಂಪೂರ್ಣ 1960 ರ ಡಿಸೆಂಬರ್ 24 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಅಂಡಮಾನ್ ನ ಸೆರೆ ವಾಸದ ಭಾರತಕ್ಕೆ ಮರಳಿ ಇಲ್ಲಿಯೂ ಸುಮಾರು 13 ವರ್ಷಗಳ ಕಾಲ ರತ್ನಾಗಿರಿಯಲ್ಲಿ ಗೃಹ ಬಂಧನದಲ್ಲಿ ಒಳಗಾಗಿ, ಒಟ್ಟಾರೆ 27 ವರ್ಷಗಳ ಕಾಲ ಸಾವರ್ಕರ್ ಅವರು ಬ್ರಿಟಿಷರ ಸೆರೆಯಾಳಾಗಿದ್ದು ನಿಜಕ್ಕೂ ದೌರ್ಭಾಗ್ಯವೇ ಸರಿ.

ಸ್ವಾತಂತ್ರ್ಯಾ ನಂತರ ರಾಜಕೀಯದಿಂದ ದೂರವಿದ್ದ ಸಾವರ್ಕರ್ ಅವರನ್ನು ಗಾಂಧಿ ಹತ್ಯೆಯ ಆರೋಪವನ್ನು ಸಾವರ್ಕರ ಅವರ ಮೇಲೆ ಹೊರಿಸಲಾಯಿತು. 1948 ರ ಮೇ 24 ರಂದು ದಿಲ್ಲಿಗೆ ಬಂದ ಕೂಡಲೇ ಮೇ 27 ರಂದು ವಿಚಾರಣೆ ಆರಂಭಸಿ 1949 ಫೆಬ್ರವರಿ 10 ವಿನಾಯಕ ಡಿ.ಸಾವಕರ್ರ ಅವರು ತಪ್ಪಿತಸ್ಥರಲ್ಲದಿರುವುದರಿಂದ ಅವರನ್ನು ಬಿಡುಗಡೆ ಮಾಡಲಾಗಿದೆ ಎನ್ನುವ ತೀರ್ಪು ಹೊರಬರುವ ಮೂಲಕ ಸತ್ಯವೇ ಗೆದ್ದಿತು.

savarkarಇಂದು ಮೇ 28 ಸಾವರ್ಕರ ರ ಜನ್ಮ ದಿನ, ಭಾರತೀಯರಿಗೆ ಸುದಿನ. ಭಾರತದ ಇತಿಹಾಸದಲ್ಲಿ ಸಾವರ್ಕರ್ ಎನ್ನುವ ಹೆಸರೇ ಹೋರಾಟಕ್ಕೆ ಪರ್ಯಾಯ, ಕ್ರಾಂತಿಕಾರಿಗಳಿಗೆ ಸ್ಪೂರ್ತಿ, ಜಗತ್ತಿನ ಕ್ರಾಂತಿಕಾರಿಗಳ ಇತಿಹಾಸದಲ್ಲಿ ಸಾವರ್ಕರರಿಗೆ ಸರಿಸಾಟಿ ಬೇರೊಬ್ಬರಿಲ್ಲ. ಮೃತ್ಯುವನ್ನು ಚಕ್ರವ್ಯೂಹದಂತೆ ಭೇದಿಸಿದ ವೀರ. ಆ ವೀರ ಕಲಿಯನ್ನು ನೆನಪಿಸಿಕೊಂಡಾಗಲೆಲ್ಲ ಮನಸ್ಸಿಗೆ ಒಂಥರ ಸಂತೋಷ ವಾಗುತ್ತದೆ. ಜಗತ್ತಿನಲ್ಲಿ ಅವರು ಅನುಭವಿಸಿದಷ್ಟು ನೋವುಗಳನ್ನು ದೀರ್ಘಕಾಲದ ಕಠಿಣ ಕರಿನೀರಿನ ಕಾರ್ಯಾಗೃಹದ ವಾಸ ಅನುಭವಿಸಿದವರು ವಿರಳ. ಮೃತ್ಯುಂಜಯ ಎಂಬ ಅಭಿದಾನಕ್ಕೆ ಅವರಷ್ಟು ಅರ್ಹರಾದವರು ಬೇರಾರೂ ಇಲ್ಲ. ಇಪ್ಪತ್ತನೆಯ ಶತಮಾನದ ಭಾರತದ ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿ ಅಂದು ಭಾರತದ ಸ್ವಾತಂತ್ರ್ಯ ಆಂದೋಲನಕ್ಕೆ ಭದ್ರ ಅಡಿಪಾಯವನ್ನು ಹಾಕಿದವರು ವಿನಾಯಕ ದಾಮೋದರ ಸಾವರರ್ಕರ್ ಎಂದರೆ ಅತಿಶಯೋಕ್ತಿಯೇನಲ್ಲ.

1950ರ ದೇಶದ ಮೊದಲ ಗಣರಾಜ್ಯೋತ್ಸವಕ್ಕೆ ಸಾವರ್ಕರರಿಗೆ ಆಮಂತ್ರಣ ನೀಡಿರಲಿಲ್ಲ. ಅದೇ ಸಮಯದಲ್ಲಿ ಲಿಯಾಖತ್ ಅಲಿಯ ಭಾರತ ಭೇಟಿಯ ಸಂದರ್ಭದಲ್ಲಿ ಕಾನೂನು ವ್ಯವಸ್ಥೆಗೆ ಭಂಗವಾಗುತ್ತದೆಂಬ ನೆಪವೊಡ್ಡಿದ ನೆಹರೂ ಸರಕಾರ ಅರವತ್ತೇಳು ವರ್ಷದ ವೃದ್ಧ ಸಾವರ್‌ಕರರನ್ನು ಬಂಧಿಸಿ ಬೆಳಗಾವಿ ಜೈಲಿಗೆ ಕಳುಹಿಸಿತು. ಆಗ ಸಾವರ್ಕರ ಗೌರವಾರ್ಥ ದೇಶಾದ್ಯಂತ ಯುವಕರು ‘ಮೃತ್ಯುಂಜಯ ದಿವಸ್’ ಆಚರಿಸಿದಾಗ ಸಾವರ್ಕರರನ್ನು ಬಂಧಿಸಿಟ್ಟ ಜೈಲನ್ನು ನೆಲಸಮ ಮಾಡಬೇಕೆಂಬ ಪ್ರಸ್ತಾಪ ಬಂದಿತ್ತು. ಆದರೆ ಸಂಸದ ಕೆ.ಆರ್. ಗಣೇಶ್ ಅವರ ಪ್ರತಿಭಟನೆಯಿಂದ ಅದು ನಿಂತಿತು.

1966 ಫೆಬ್ರುವರಿ 26 ಸಾವರರ್ಕರ್ ನಿಧನರಾದಾಗ ಇಡೀ ದೇಶವೇ ಕಣ್ಣಿರಿಟ್ಟರೂ. ಅಂದಿನ ಕಾಂಗ್ರೇಸ್ ಸರ್ಕಾರ ಅವರ ಶರೀರವನ್ನು ಕೊಂಡೊಯ್ಯಲು ಗನ್ ಕ್ಯಾರೇಜ್ ಕೊಡಲು ನಿರಾಕರಿಸಿತು. ಆಗ ಸಾವರ್ಕರ್ ಅವರ ಕಟ್ಟಾ ಅಭಿಮಾನಿ, ನಟ ವಿ. ಶಾಂತಾರಾಮ್ ತಮ್ಮ ಸ್ವಂತ ಖರ್ಚಿನಿಂದ ಗನ್ ಕ್ಯಾರೇಜ್ ವ್ಯವಸ್ಥೆ ಮಾಡಿದರು. ಅಂದಿನ ಮಹಾರಾಷ್ಟ್ರ ಸರಕಾರದ ಯಾವೊಬ್ಬ ಸಚಿವರೂ ಸಹಾ ಸಾವರ್ಕರ್ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲಿಲ್ಲ. ಲೋಕಸಭೆ ಅವರಿಗೆ ಗೌರವಾರ್ಪಣೆ ಮಾಡಬೇಕೆಂಬ ಪ್ರಸ್ತಾವನೆ ಬಂದಾಗ ಸಾವರ್ಕರ್ ಈ ಸಂಸತ್ತಿನ ಸದಸ್ಯನಾಗಿರಲಿಲ್ಲ ಎಂಬ ಕಾರಣ ನೀಡಿ ಅದನ್ನು ಸಭಾಧ್ಯಕ್ಷರು ತಿರಸ್ಕರಿಸಿದರು. ಅವರ ಭಾವಚಿತ್ರವನ್ನು ಸಂಸತ್ತಿನಲ್ಲಿ ಹಾಕಲು ಕಾಂಗ್ರೇಸ್ ಸರ್ಕಾರ ಹಿಂದೇಟು ಹಾಕುತ್ತಿದ್ದಾಗ ವಾಜಪೇಯಿಯವರ ಸರ್ಕಾರದ ಕಾಲದಲ್ಲಿ ವಿರೋಧ ಪಕ್ಷಗಳ ಭಾರೀ ಸದ್ದು ಗದ್ದಲಗಳ ನಡುವೆಯೂ ಅವರ ಭಾವಚಿತ್ರವನ್ನು ಸಂಸತ್ತಿನಲ್ಲಿ ಹಾಕಲಾಯಿತು. ಇಂದಿಗೂ ಸಹಾ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ಕೊಡುವ ವಿಷಯದಲ್ಲಿ ಅನೇಕ ಚರ್ಚೆಗಳು ಆಗುತ್ತಿದೆ.

sav2ಸರ್ಕಾರದ ನಿಲುವುಗಳು ಏನೇ ಇದ್ದರೂ ಸಾವರ್ಕರ್ ಒಬ್ಬ ಸಾಮಾನ್ಯ ವ್ಯಕ್ತಿಯಾಗಿರದೇ, ಇಡೀ ಭಾರತದ ಆಸ್ತಿ. ಸ್ವಾತಂತ್ರ್ಯ , ಸ್ವಾಭಿಮಾನ, ಹಿಂದುತ್ವ, ಧೈರ್ಯ, ಯುಕ್ತಿ , ಶಕ್ತಿ , ಎದೆಗಾರಿಕೆ, ನಿಸ್ವಾರ್ಥ ರಾಷ್ಟ್ರಭಕ್ತಿ, ಇವಲ್ಲವುಗಳ ಸಂಕೇತ. ಸಾವರ್ಕರ್ ಎಂದರೆ ಕಿಚ್ಚು, , ಆತ್ಮಾಭಿಮಾನ, ದೇಶಭಕ್ತಿ , ಸಮರ್ಪಣೆ. ಆದರ್ಶ, ನಿಷ್ಠೆ, ಸಾಹಸ, ಪರಾಕ್ರಮ, ಸಂಯಮ, ಸಹನಶೀಲತೆ, ಆತ್ಮವಿಶ್ವಾಸ, ಛಲ, ಜಾಣ್ಮೆ, ವಿವೇಕ, ನೇತೃತ್ವ, ಆತ್ಮಾರ್ಪಣೆ ಅವೆಲ್ಲದರ ಸಂಗಮವೇ ವಿನಾಯಕ ದಾಮೋದರ ಸಾವರ್ಕರ್. ಇಂತಹ ವೀರ ಸಾವರ್ಕರ್ ನಿಜಕ್ಕೂ ಪ್ರಾಥಃಸ್ಮರಣಿಯರೇ ಸರಿ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s