ಸರಿ ಸುಮಾರು 90ರ ದಶಕ, ನಾನಿನ್ನೂ ಆಗ ತಾನೇ ವಿದ್ಯಾಭ್ಯಾಸ ಮುಗಿಸಿ ಒಳ್ಳೆಯ ಕೆಲಸ ಹುಡುಕುತ್ತಿದ್ದೆ. ಸರಿಯಾದ ಕೆಲಸ ಸಿಗುವವರೆಗೆ ಸಣ್ಣ ಪುಟ್ಟ ಕಂಪ್ಯೂಟರ್ ರಿಪೇರಿಗಳನ್ನು ಮಾಡುತ್ತಾ, ಅವಶ್ಯಕತೆ ಇದ್ದವರಿಗೆ ಅವರು ಕೇಳುತ್ತಿದ್ದ ಸಾಫ್ಟವೇರ್ ಇನ್ಸ್ಟಾಲ್ ಮಾಡುತ್ತಾ ಅಷ್ಟೋ ಇಷ್ಟು ಸಂಪಾದನೆ ಮಾಡುತ್ತಾ ತಂದೆಗೆ ಹೊರೆಯಾಗದೆ, ಕಂತಿನಲ್ಲಿ ಕೊಂಡಿದ್ದ ಹೀರೋ ಪುಕ್ ಸಾಲವನ್ನು ತೀರಿಸುತ್ತಾ ಜೀವನ ನಡೆಸುತ್ತಿದ್ದ ಕಾಲವದು. ಅಂದೆಲ್ಲಾ ಫ್ಲಾಫಿ ಡಿಸ್ಕ್ ಜಮಾನ, ಏನೇ ಸಾಫ್ಟ್ವೇರ್ ಬೇಕಿದ್ದರೂ ಫ್ಲಾಫಿ ಡಿಸ್ಕನಲ್ಲಿ ಕಾಪಿ ಮಾಡಿಕೊಂಡು ತಂದು ಇನ್ಸ್ಟಾಲ್ ಮಾಡಬೇಕಿತ್ತು. ಇನ್ನು ಒರಿಜಿನಲ್ ಸಾಫ್ಟ್ವೇರ್ ಬೇಕಿದ್ದರೆ ದುಬಾರಿ ಹಣವನ್ನು ತೆರಬೇಕಿದ್ದ ಕಾರಣ ಹೆಚ್ಚಿನ ಜನ ಪೈರೆಸಿ ಸಾಫ್ಟ್ವೇರ್ಗಳ ಮೊರೆ ಹೋಗುತ್ತಿದ್ದರು. ಅಂದು ಪೈರೆಸಿ ಸಾಫ್ಟ್ವೇರ್ಗಳು ಸಿಗುತ್ತಿದ್ದ ಏಕೈಕ ಜಾಗವೆಂದರೆ ಬ್ರಿಗೆಡ್ ರಸ್ತೆ. ಆಲ್ಲಿದ್ದ ಸಣ್ಣ ಪುಟ್ಟ ಕಂಪ್ಯೂಟರ್ ಅಂಗಡಿಗಳಲ್ಲಿ ಪರಿಚಯವ್ದಿದ್ದರೆ ಮಾತ್ರ ಕಾಪಿ ಮಾಡಿಕೊಡುತ್ತಿದ್ದ ಕಾಲ. ಅಪರಿಚಿತರು ಯಾರದರೂ ಹೋದರೆ ಅಡಿಯಿಂದ ಮುಡಿಯವರೆಗೆ ಒಮ್ಮೆ ನೋಡಿ ಹಲವಾರು ಪ್ರಶ್ನೆಗಳನ್ನು ಕೇಳಿ ಸಮಾಧಾನವಾದರೆ ಮಾತ್ರ ಕಾಪಿ ಮಾಡಿಕೊಡುತ್ತಿದ್ದರು. ಇಲ್ಲದಿದ್ದಲ್ಲಿ ಅವರು ಕೇಳಿದ ಸಾಫ್ಟ್ವೇರ್ ಇಲ್ಲವೆಂದೋ ಅಥವಾ ದುಬಾರಿ ಹಣ ಕೇಳಿ ಸಾಗಿ ಹಾಕುತ್ತಿದ್ದ ಕಾಲವದು. ಸಾಫ್ಟ್ವೇರ್ ನಕಲು ಮಾಡುವುದು ಅಪರಾಧ ಎಂದು ಗೊತ್ತಿದ್ದರೂ ಒರಿಜಿನಲ್ ಸಾಫ್ಟ್ವೇರ್ಗಳಿಗೆ ದುಬಾರಿ ಹಣ ಕೊಡಲಾಗದವರು ಅವರು ಕೇಳಿದಷ್ಟು ಇಲ್ಲವೇ ಸ್ವಲ್ಪ ಕೊಸರಾಡಿ ಕಾಪಿ ಮಾಡಿಸಿಕೊಂಡು ಹೋಗುವುದು ಸರ್ವೇ ಸಾಮಾನ್ಯವಾಗಿತ್ತು. ಒಮ್ಮೆ ಕಾಪಿ ಮಾಡಿಸಿಕೊಂಡು ಹೋದ ನಂತರ ಅದು ಮನೆಯ ಕಂಪ್ಯೂಟರ್ನಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೆ ಅದಕ್ಕೆ ಯಾವುದೇ ಖಾತರಿ ಇಲ್ಲದ ಕಾರಣ ಅದೊಂದು ರೀತಿಯ ಜೂಜಾಟವೇ ಆಗಿರುತ್ತಿತ್ತು. ಕೆಲಸ ಮಾಡಿದರೆ ಸರಿ, ಇಲ್ಲದಿದ್ದರೆ ಮತ್ತೊಮ್ಮೆ ಹಣ ವ್ಯಯಿಸುವ ಪ್ರಮೇಯವೇ ಹೆಚ್ಚಾಗಿತ್ತು. ಇಂತಹ ಸಂದಿಗ್ಡ ಪರಿಸ್ಥಿತಿ ನನ್ನಂತಹವರಿಗೆ ವರದಾನವಾಗಿತ್ತು. ಒಂದೆರಡು ವಾರ ಬ್ರಿಗೆಡ್ ರಸ್ತೆಗಳಲೆಲ್ಲಾ ಅಡ್ಡಾಡಿ ಬಹುತೇಕ ಕಂಪ್ಯೂಟರ್ ಅಂಗಡಿಗಳ ಮಾಲಿಕರನ್ನು ಪರಿಚಯಮಾಡಿಕೊಂಡು ಸಣ್ಣ ಪುಟ್ಟ ಸಾಫ್ಟ್ವೇರ್ಗಳನ್ನು ಅವರಿಂದ ಕೊಂಡು ಕೊಂಡು ಅವರ ಖಾಯಂ ಗಿರಾಕಿಯಾಗಿ ಅವರಿಗೆ ನನ್ನ ಮೇಲೆ ನಂಬಿಕೆ ಬರುವ ಹಾಗೆ ಮಾಡಿಕೊಂಡಿದ್ದರಿಂದ ನನಗೆ ಎಲ್ಲರಿಗಿಂತ ಕಡಿಮೆ ಬೆಲೆಯಲ್ಲಿ ಕಾಪಿ ಮಾಡಿ ಕೊಡುತ್ತಿದ್ದಲ್ಲದೆ, ಅವರು ಕಾಪಿ ಮಾಡಿ ಕೊಟ್ಟದ್ದು ಸರಿಯಾಗಿ ಕೆಲಸ ಮಾಡದಿದ್ದ ಸಂದರ್ಭದಲ್ಲಿ ಪುನಃ ಮತ್ತೊಮ್ಮೆ ಉಚಿತವಾಗಿ ಕಾಪಿ ಮಾಡಿಕೊಡುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ನಾನು ಯಾರಿಗಾದರೂ ಯಾವುದಾದರೂ ಸಾಫ್ಟ್ವೇರ್ಗಳು ಅಗತ್ಯವಿದ್ದಲ್ಲಿ ಬ್ರಿಗೆಡ್ ರಸ್ತೆಯ ಅಂಗಡಿಗಳಿಂದ ಕಡಿಮೆ ಬೆಲೆಯಲ್ಲಿ ಕಾಪಿ ಮಾಡಿಸಿಕೊಂಡು ಅದಕ್ಕೆ ಸ್ವಲ್ಪ ನನ್ನ ಲಾಭ ಸೇರಿಸಿ ಅವರ ಮನೆಯಲ್ಲಿಯೇ ಇನ್ಸ್ಟಾಲ್ ಮಾಡಿಕೊಡುತ್ತಿದ್ದೆ. ಮನೆಗೇ ಬಂದು ಖಾತರಿಯಾಗಿ, ಕೈಗೆಟುಕುವ ಬೆಲೆಯಲ್ಲಿ, ಸಮಯಕ್ಕೆ ಸರಿಯಾಗಿ ಖಾತರಿಯಾಗೆ ಕೆಲಸ ಮಾಡಿಕೊಡುತ್ತಿದ್ದರಿಂದ ಬಹು ಬೇಗನೆ ಬಹಳ ಜನರಿಗೆ ನಾನು ಪರಿಚಿತನಾಗಿ ಕೈ ತುಂಬಾ ಕೆಲಸವಿರುತ್ತಿತ್ತು.
ಅದೊಂದು ಶನಿವಾರ, ನನ್ನ ಪರಿಚಿತರು ನನಗೆ ಕರೆ ಮಾಡಿ ಎಂ. ಎಸ್. ಆಫೀಸ್ ಸಾಫ್ಟ್ವೇರ್ ಇನ್ಸ್ಟಾಲ್ ಮಾಡಿಕೊಡಲು ಕೇಳಿದಾಗ ಸರಿ ಆಯಿತೆಂದು ನಾನು ಮತ್ತು ಕಂಪ್ಯೂಟರ್ ಸೈನ್ಸ್ ಬಿಎಸ್ಸಿ ಮಾಡುತ್ತಿದ್ದ ನನ್ನ ಮಾವನ ಮಗ (ಅವನಿಗೂ ಅಭ್ಯಾಸವಾಗಲಿ ಎಂದು) ಇಬ್ಬರೂ ಹೀರೋ ಪುಕ್ ಏರಿ ಶಿವಾಜಿ ನಗರದತ್ತ ಹೊರಟೇ ಬಿಟ್ಟೆವು. ದಾರಿಯಲ್ಲಿ ದೂರದರ್ಶನ ಕೇಂದ್ರದ ಮುಂದೆ ಹೋಗುತ್ತಿದ್ದಾಗ, ಎದುರಿನ ಅರಮನೆ ಆವರಣದಲ್ಲಿ ಮಾವಿನ ಹಣ್ಣುಗಳನ್ನು ರಾಶಿ ರಾಶಿಯಾಗಿ ಹಾಗಿಕೊಂಡು ಸಗಟು ವ್ಯಾಪಾರ ಮಾಡುತ್ತಿದ್ದರಿಂದ ಮಾವಿನ ಹಣ್ಣಿನ ಸುವಾಸನೆ ಮೂಗಿಗೆ ಏರಿತಾದರೂ ಕೆಲಸ ಒತ್ತಡದಲ್ಲಿ ಹಾಗೆಯೇ ಮುಂದುವರಿಸಿ ಸ್ನೇಹಿತರ ಕಛೇರಿಯಲ್ಲಿ ಅವರಿಗೆ ಬೇಕಿದ್ದ ತಂತ್ರಾಂಶವನ್ನು ಅವರಿಚ್ಛೆಯಂತೆ ಅಳವಡಿಸಿದ್ದರಿಂದ ಸಂತೋಷಗೊಂಡು ಕೇಳಿದಷ್ಟು ಹಣವನ್ನು ಯಾವುದೇ ರೀತಿಯ ಕೊಸರಾಡದೇ ಕೊಟ್ಟದ್ದು ನನಗೆ ಮಹದಾನಂದವಾಗಿತ್ತು. ಕಿಸೆಯಲ್ಲಿ ಹಣವನ್ನು ಭದ್ರವಾಗಿಟ್ಟುಕೊಂಡು ಬಂದ ದಾರಿಯಲ್ಲೇ ಹಿಂದಿರುಗುತ್ತಿದ್ದಾಗ ಮತ್ತದೇ ಮಾವಿನ ಹಣ್ಣಿನ ವಾಸನೆಯತ್ತ ಆಕರ್ಷಿತರಾಗಿ ಮಾವಿನ ಹಣ್ಣುಗಳನ್ನು ಕೊಳ್ಳಲು ಮಾವಿನ ಮಂಡಿಯತ್ತ ಗಾಡಿಯನ್ನು ತಿರಿಗಿಸಿಯೇ ಬಿಟ್ಟೆವು.
ತೋತಾಪುರಿ, ರಸಪುರಿ, ಮಲಗೋಬಾ, ಬನಗಾನ ಪಲ್ಲಿ, ಆಲ್ಫಾನ್ಸೋ, ಬಾದಾಮಿ ಹೀಗೇ ಒಂದೇ ಎರಡೇ, ಜೀವಮಾನದಲ್ಲಿ ಕಂಡೂ ಕೇಳರಿಯಷ್ಟು ರೀತಿಯ ಮಾವಿನ ಹಣ್ಣುಗಳ ರಾಶಿ ರಾಶಿ ನೋಡಿ ಮಹದಾನಂದವಾಯಿತು. ಇನ್ನೂ ಮೀಸೆ ಬಾರದ ಚಿಕ್ಕ ಸಣ್ಣ ವಯಸ್ಸಿನ ಪೀಚಲು ಹುಡುಗರಾದ ನಮ್ಮನ್ನು ಕಂಡ ಅಲ್ಲಿಯ ವ್ಯಾಪಾರಿಗಳು ಬನ್ನಿ ಸಾಬ್, ಏನ್ ಬೇಕ್ ಹೇಳೀ ಎಂದಾಗ, ಯಾವ ಹಣ್ಣುಗಳನ್ನು ಕೊಳ್ಳುವುದೋ ಎಂಬ ಜಿಜ್ಞಾಸೆ ಮನದಲ್ಲಿ ಮೂಡಿತಾದರೂ ಅದನ್ನು ತೋರ್ಪಡಿಸದೆ, ಯಾವುದೋ ರಾಶಿಯತ್ತ ಕೈ ತೋರಿಸಿ ಈ ಹಣ್ಣು ಒಂದು ಡೆಝೆನ್ ಹೇಗ್ರಿ ಎಂದು ಕೇಳಿಯೇ ಬಿಟ್ಟೆ? ಸಾಬ್ ಇದು ಅಂಗಡಿಯಲ್ಲಾ, ಇದು ಮಂಡಿ. ಇಲ್ಲೇನಿದ್ರೂ ಬುಟ್ಟಿ ಬುಟ್ಟಿ ಹಣ್ಣುಗಳ ವ್ಯಾಪಾರ, ಚಿಲ್ರೆ ಗಿಲ್ರೆ ನಾವು ಕೋಡೋಕಿಲ್ಲಾ ಎಂದಾಗ ಮನಸ್ಸಿಗೆ ಪಿಚ್ ಎನಿಸಿದರೂ ಕಿಸಿಯಲ್ಲಿದ್ದ ಹಣದ ದರ್ಪದಿಂದ ಸರಿ ಒಂದು ಬುಟ್ಟಿಗೆ ಏಷ್ಟಾಗತ್ತೆ? ಒಂದು ಬುಟ್ಟಿಯಲ್ಲಿ ಎಷ್ಟು ಹಣ್ಣುಗಳಿರುತ್ತವೆ ಎಂದು ಕೇಳಿದೆ. ಬಹುಶಃ ಬಕರಾಗಳು ತಾವಾಗಿಯೇ ತಮ್ಮ ಮುಂದೆ ಬಂದಿವೆ ಎಂದು ಕೊಂಡರೋ ಏನೋ ಆ ವ್ಯಾಪಾರಿಗಳು, ಸಾಬ್, ಒಂದು ಬುಟ್ಟಿಯಲ್ಲಿ ಸುಮಾರು ಮುನ್ನೂರು ಹಣ್ಣುಗಳು ಇರ್ತೈತ್ತೆ. ಈ ಬುಟ್ಟಿ ಸಲ್ಪ ದೊಡ್ದು ಅದ್ಕೆ, ಝ್ಯಾದನೇ ಹಣ್ಣುಗಳು ಇರ್ಬೋದು, ನೀವು ಮುನ್ನೂರೈವತ್ತು ರೂಪಾಯಿ ಖೊಟ್ಬಿಟ್ಟು ತಕ್ಕೊಂಡ್ ಹೋಗಿ ಅಂದರು. ಅಯ್ಯೋ ದೇವರೇ ಒಂದು ಡಝನ್ ಹಣ್ಣುಗಳನ್ನು ತಗೊಳ್ಳಕ್ಕೆ ಬಂದವರು ನಾವು ಇದು ಜಾಸ್ತಿ ಆಯ್ತು ಬೇಡ ಬಿಡಿ ಎಂದೆ. ಅದಕ್ಕೆ ಅವರು ಏ ಲೇಲೋ ಕೋ ಸಾಬ್. ಒಂದು ಹತ್ತು ರೂಪಾಯಿ ಕಮ್ ಖೊಟ್ಬಿಡಿ ಒಳ್ಳೇ ಮಾಲ್. ಇಷ್ಟ್ ಸಸ್ತಾಗೆ ಯಾರೂ ಖೋಡಾಕ್ಕಿಲ್ಲಾ ಅಂತ ಪುಸಲಾಯಿಸತೊಡಗಿದರು. ಹೇಗೂ ನೀರಿಗೆ ಬಿದ್ದದ್ದಾಗಿದೆ ಸ್ವಲ್ಪ ಕೈ ಕಾಲು ಜಾಡಿಸಿ ದಡ ಸೇರ್ಕೋಂಡ್ಬಿಡೋಣ ಅಂತ ಅಷ್ಟೆಲ್ಲಾ ಅಗೋದಿಲ್ಲಾ ಇನ್ನೂರೈವತ್ತು ರೂಪಾಯಿ ಕೊಟ್ರೆ ಕೊಡಿ ಇಲ್ಲಾ ಅಂದ್ರೆ ಬಿಡಿ ಎಂದು ಹೊರಡಲು ಅನುವಾದಾಗ, ಕೈ ಹಿಡಿದು ಜಗ್ಗಿದ ಆತ ಸಾಬ್ ಝ್ಯಾದಾನೆ ಕಮ್ ಕೇಳ್ತೀರಿ. ಹೋಗ್ಲಿ ನಮ್ದೂಕೆನೂ ಬೇಡ ನಿಮ್ದೂಕೇನೂ ಬೇಡ ಮುನ್ನೂರು ರೂಪಾಯಿ ಖೊಟ್ಬಿಡಿ. ಅದ್ಕಿಂತ ಕಮ್ ಆಗಕಿಲ್ಲಾ. ಅಂದಾಗ, ಏನು ಮಾಡುವುದೆಂಬ ಸಂದಿಗ್ಡದ ಪರಿಸ್ಥಿತಿ ಒಳಗಾಗಿ ಸರಿ, ಇನ್ನೂರಎಪ್ಪತೈದು ಮಾಡ್ಕೋಳ್ಳಿ. ನಾವು ಹುಡುಗರು ಅದಕ್ಕಿಂತ ಜಾಸ್ತಿ ದುಡ್ಡು ನಮ್ಮ ಹತ್ರ ಇಲ್ಲ ಎಂದೆ. ಸರಿ ಸಾಬ್ ಅಸಲ್ಗೆನೇ ತೊಗೋಳಿ ನಮ್ಗೆ ಲಾಸ್ ಆದ್ರೂ ಪರ್ವಾ ನೈ. ಗಿರಾಕಿಗಳು ಚೆಂದಗಿರ್ಬೇಕ್. ಈ ಶಕ್ಕರ್ಗೆ ತರ್ಹಾ ಹಣ್ಣು ತಿನ್ಬಿಟ್ಟೀ ಮತ್ತೇ ನಮ್ದುಕೇ ತವಾನೇ ಬರ್ಬೇಕ್ ಆಂತ ಹೇಳೀ ಅಲ್ಲೇ ಹತ್ತು ರೂಪಾಯಿಗಳಿಗೆ ಪಕ್ಕದ ಅಂಗಡಿಯಲ್ಲೇ ಎರಡು ಸಿಮೆಂಟಿನ ಪ್ಲಾಸ್ಟಿಕ್ ಚೀಲಗಳನ್ನು ತೆಗೆದು ಕೊಂಡು ಇಬ್ಬರು ಐದು, ಹತ್ತು, ಹದಿನೈದು, ಇಪ್ಪತ್ತು ಅಂತಾ ಎಣಿಸಿ ಚೀಲಕ್ಕೆ ಹಣ್ಣುಗಳನ್ನು ಹಾಕಿ ಮುನ್ನೂರು ಹಣ್ಣುಗಳನ್ನು ಎಣಿಸಿ ಹಾಕಿದ ಮೇಲೂ ಇನ್ನೂ ಹಣ್ಣುಗಳು ಬುಟ್ಟಿಯಲ್ಲಿ ಮಿಕ್ಕಿದ್ದವು. ಮೇ ಬೋಲಾ ಹೈನಾ ಸಾಬ್ ಝ್ಯಾದ ಇರ್ತೈತೆ ಅಂತ. ಸರಿ ಪೂರಾ ಕೀ ಪೂರ ತಕ್ಕೊಂಡ್ ಮುನ್ನೂರು ರೂಪಾಯಿ ಖೊಟ್ಬಿಡಿ ಅಂದ್ರು. ಹೇಗೂ ಐವತ್ತಕ್ಕೂ ಹೆಚ್ಚೇ ಹಣ್ಣುಗಳು ಬುಟ್ಟಿಯಲ್ಲಿವೆ ಮುನ್ನೂರು ಕೊಡಬಹುದು ಅಂತಾ ಯೋಚಿಸಿ ಮುನ್ನೂರು ರೂಪಾಯಿಗಳನ್ನು ಕೊಟ್ಟು ಗೋಣಿ ದಾರದಿಂದ ಚೀಲಗಳನ್ನು ಕಟ್ಟಿಸಿ ಕೊಂಡು ಹೊರಡುತ್ತಿದ್ದಾಗ, ಕೈಗೆ ಸ್ವಲ್ಪ ಒಣ ಹುಲ್ಲು ಕೊಟ್ಟು, ಹಣ್ಗಳ್ನಾ ಇದ್ರಾಗ್ ಎರಡ್ ಮೂರ್ ದಿನ ಮಡಗ್ ಬಿಡಿ ಹಣ್ ಆಗ್ಬಿಡ್ ತೈತೆ ಅಂತ ಹೇಳಿ ಗಾಡಿಯವರೆಗೆ ಚೀಲ ಹೊತ್ತು ತಂದು ಕೊಟ್ಟು ಹೋದರು.
ನಾನು ಮತ್ತು ನನ್ನ ಮಾವನ ಮಗ ಅತ್ಯಂತ ಖುಷಿಯಿಂದ ದಾರಿಯಲ್ಲಿ ಬರುತ್ತಾ, ನಮ್ಮ ಮನೆಗೆ ಇಷ್ಟು, ಅವರ ಮನೆಗೆ ಇಷ್ಟು, ನಮ್ಮ ಸತ್ಯ ಸರ್ ಮನೆಗೆ ಇಷ್ಟು, ತಂಗಿ ಮನೆಗೆ ಇಷ್ಟು, ಚಿಕ್ಕಮ್ಮಂದ್ರ ಮನೆಗಳಿಗೆ ಇಷ್ಟು ಅಂತಾ ಲೆಕ್ಕ ಹಾಕೊದ್ರೊಳಗೆ ಮನೆ ಸೇರಿದ್ದೇ ಗೊತ್ತಾಗಲಿಲ್ಲ. ಮನೆಗೆ ಬಂದಿದ್ದೇ ತಡ, ಆಮ್ಮಾ ನೋಡಿ ಏನ್ ತಂದ್ದಿದ್ದೀನಿ. ಇನ್ನೂಂದ್ ವಾರ ನಮ್ಮನೇಲೆ, ಮಾವಿನ ಹಣ್ಣಿನ ಶೀಕರಣೆ, ಮನೆಗೆ ಬಂದವರಿಗೆ ಮಾವಿನ ಹಣ್ಣಿನ ಜ್ಯೂಸ್, ಹೆಂಗಸರಿಗೆ ತೆಂಗಿನ ಕಾಯಿ ಬದಲು ಮಾವಿನ ಹಣ್ಣಿನ ತಾಂಬೂಲ ಅಂತಾ ರೇಗಿಸುತ್ತಾ ತಂದೆಯವರ ಕೈಗೆ ಚೀಲಗಳನ್ನು ಕೊಟ್ಟೆವು. ಇದೇನೋ ಮಗೂ ಏನೋ ಕೆಲಸ ಇದೆ ಅಂತಾ ಹೋಗಿದ್ದವರು ಇಷ್ಟೋಂದು ಹಣ್ಣುಗಳನ್ನು ಯಾರೋ ಕೊಟ್ರು ಅಂತಾ ತಂದೆಯವರು ಕೇಳಿದಾಗ ಹೂಂ! ದಾರಿಯಲ್ಲಿ ಬರ್ತಿದ್ವೀ ಯಾರೋ ಬಂದು ನಿಮ್ಮ ತಂದೆಯವರಿಗೆ ಈ ಹಣ್ಣುಗಳನ್ನು ಕೊಟ್ಟು ಅವರನ್ನು ಕೇಳಿದೆ ಎಂದು ತಿಳಿಸಿ ಅಂದ್ರು ಅಂದೆ. ಹೌದಾ, ಯಾರಪ್ಪಾ ಅವರು ಇಷ್ಟೋಂದು ಹಣ್ಣುಗಳನ್ನು ಕೊಡುವ ಸ್ನೇಹಿತರು ಎಂದು ನಮ್ಮ ತಂದೆಯವರು ಯೋಚಿಸುತ್ತಿದ್ದಾಗ, ಆಣ್ಣಾ ಯಾರು ಯಾಕೆ ಹಾಗೆ ಸುಮ್ಮ ಸುಮ್ಮನೆ ಕೊಡ್ತಾರೆ. ಮುನಿರೆಡ್ಡಿ ಪಾಳ್ಯದ ಮಾವಿನ ಮಂಡಿಯಿಂದ ತಂದ್ವಿ ಅಂದೆ. ಸರಿ ಎಷ್ಟು ಹಣ್ಣುಗಳಿವೆ ಏಷ್ಟು ಕೊಟ್ರಿ ಅಂತ ಕೇಳಿದಾಗ. ಮುನ್ನೂರೈವತ್ತರಿಂದ ನಾಲ್ಕು ನೂರು ಹಣ್ಣುಗಳಿವೆ. ಮುನ್ನೂರು ಕೊಟ್ವಿ ಅಂದೆ. ಹೇ ಹೇ ಅಷ್ಟೋಂದು ಹಣ್ಣುಗಳು ಇರಲ್ಲಾ ಅನ್ಸತ್ತೇ. ಅಬ್ಬಬ್ಬಾ ಅಂದ್ರೆ ಇನ್ನೂರೈವತ್ತು , ಅರವತ್ತು ಇರಬಹುದು ಎಂದರು ನಮ್ಮ ತಂದೆಯವರು. ಇಲ್ಲಾ ಆಣ್ಣಾ, ನಾವೇ ಎಣಿಸಿದ್ದೀವಿ ಸರಿಯಾಗಿದೆ ಅಂದ್ದಕ್ಕೆ , ಸರಿ ಎಣಿಸಿಯೇ ಬಿಡೋಣ ಎಂದು ಹೇಳಿ ಕೋಣೆಯೊಳಗೆ ಪಂಚೆ ಹಾಸಿ ತಂದಿದ್ದ ಒಣ ಹುಲ್ಲುಗಳನ್ನು ಹರಡಿ ಒಂದೊಂದೇ ಎಣಿಸ ತೊಡಗಿದರು. ಒಂದು, ಎರಡು, ಮೂರು, ನಾಲ್ಕು…. ನೂರು, …. ಇನ್ನೂರು, ಇನ್ನೂರ ಹತ್ತು ಅಂತ ಎಣಿಸುವ ಜೊತ್ತಿಗೇ ಚೀಲದಲ್ಲಿದ್ದ ಹಣ್ಣುಗಳು ಕಡಿಮೆಯಾಗಿದ್ದನ್ನು ನೋಡಿ, ಇದೇನಪ್ಪ ಹೀಗಾಗ್ತಾ ಇದೆ ಅಂತ ಅಂದು ಕೊಳ್ಳುತ್ತಿರುವಾಗಲೇ ಇನ್ನೂರ ಐವತ್ನಾಲ್ಕು ಎಂದು ಪೂರ್ತಿ ಎಣಿಸಿದ ನಮ್ಮ ತಂದೆ ನನ್ನ ಕಡೆ ನೋಡಿ ಹುಸಿ ನಕ್ಕರು.
ಇದನ್ನು ನೋಡುತ್ತಿದ್ದ ನನ್ನ ಮಾವನ ಮಗ, ಇಲ್ಲಾ ಮಾವ ನಮ್ಮ ಕಣ್ಣ ಮುಂದೇನೇ ಅವರಿಬ್ಬರು ಸೇರಿ ಸರಿಯಾಗಿ ಮುನ್ನೂರ ಹಣ್ಣುಗಳನ್ನು ಎಣಿಸಿ ಹಾಕಿ ಆದಾದ ಮೇಲೂ ಇನ್ನೂ ಎಷ್ಟೋಂದು ಹಣ್ಣುಗಳು ಮಿಕ್ಕಿದ್ದವು ಎಂದ. ಆಗ ನಮ್ಮ ತಂದೆ ಸರಿಯಾಗಿ ಯೋಚಿಸು. ಇಬ್ಬರೂ ಬೇರೆ ಬೇರೆಯಾಗಿ ಎಣಿಸಿ ಹಾಕಿದ್ರಾ? ಇಲ್ಲಾ ಒಟ್ಟಿಗೆ ಎಣಿಸಿದ್ರಾ? ಅಂತಾ ಕೇಳಿದ್ರು. ಆದಕ್ಕೆ ನಾವಿಬ್ರೂ, ಒಕ್ಕೊರಲಿನಿಂದ ಓಬ್ಬರು ಎಣಿಸುತ್ತಾ ಹಾಕುತ್ತಿದ್ದರು ಇನ್ನೂಬ್ಬರು ಅವರ ಜೊತೆಗೆ ಹಾಕುತ್ತಿದ್ದರು ಎಂದೆವು. ಹಾಗಿದ್ರೆ ಅವರು ಸರಿಯಾಗಿಯೇ ಮೋಸ ಮಾಡಿದ್ದಾರೆ ಅಂದ್ರು, ಅದು ಸರಿ ನಮ್ಮ ಕಣ್ಣ ಮುಂದೇನೇ ಎಣಿಸಿ ಹಾಕಿದ್ದರಲ್ಲ ಅದು ಹೇಗೆ ಮೋಸ ಮಾಡಿರ ಬಹುದಪ್ಪಾ ಅಂತಾ ಅವರನ್ನೇ ಪ್ರಶ್ನಿಸಿದಾಗ ಅವರೂ ಕೆಲ ಕಾಲ ಯೋಚಿಸಿ ಹಾಂ ಗೊತ್ತಾಯ್ತು. ಓಬ್ಬ ಜೋರಾಗಿ ಎಣಿಸುತ್ತಾ ನಿಮ್ಮಿಬ್ಬರ ಗಮನವನ್ನು ಅವನ ಕಡೆಯೇ ಇರುವಂತೆ ಮಾಡಿ ಅವನು ಸರಿಯಾಗಿ ಎಣಿಸಿ ಹಾಕುತ್ತಾ ನಿಮಗೆ ನಂಬಿಕೆ ಬರುವ ಹಾಗೆ ಮಾಡಿದ್ದಾನೆ. ಅದೇ ಸಮಯದಲ್ಲಿ ಇನ್ನೂಬ್ಬ ಸುಮ್ಮನೆ ಹಣ್ಣುಗಳನ್ನು ಬುಟ್ಟಿಯಿಂದ ಚೀಲಕ್ಕೆ ಎತ್ತಿ ಹಾಕುತ್ತಿರುವ ಹಾಗೆ ನಟಿಸಿದ್ದಾನೆ. ಒಟ್ಟಿನಲ್ಲಿ ನಿಮ್ಮಿಬ್ಬರನ್ನೂ ಸರಿಯಾಗಿ ಬೇಸ್ತು ಬೀಳಿಸಿದ್ದಾರೆ ಎಂದಾಗ, ಹಣ್ಣಿನ ವ್ಯಾಪಾರಿಗಳ ಮೇಲೆ ಕೋಪ ಬಂದರೂ ನಮ್ಮ ದಡ್ಡ ತನಕ್ಕೆ ನಮ್ಮನ್ನೇ ಹಳಿದುಕೊಂಡೆವು.
ಆಗ ನಮ್ಮ ತಂದೆಯವರು ಅದು ಸರಿ ನೀವು ಅದೇನೋ ಕೆಲಸ ಎಂದು ಹೋದವರು ಅಲ್ಲಿಗೇಕೆ ಹೋಗಿದ್ರಿ? ಅಂತದೇನು ಕೆಲಸ ಇತ್ತು ಅಂದ್ರು. ಅದಕ್ಕೆ ಅದೇನಿಲ್ಲಾ ನನ್ನ ಫ್ರೆಂಡ್ ಒಬ್ಬರಿಗೆ ಒಂದು ಸಾಫ್ಟ್ವೇರ್ ಇನ್ಸ್ಟಾಲ್ ಮಾಡಲು ಶಿವಾಜಿ ನಗರದ ಕಡೆಗೆ ಹೋಗಿದ್ವಿ. ಕೆಲಸ ಮುಗಿದ ತಕ್ಷಣವೇ ಸಂತೋಷ ಪಟ್ಟು ಕೇಳಿದಷ್ಟು ದುಡ್ಡು ಕೊಟ್ರು. ಹಾಗೆ ಮನೆ ಕಡೆಗೆ ವಾಪಸ್ ಬರೋವಾಗ ಮಾವಿನ ಮಂಡಿ ನೋಡಿ, ಒಂದೆರಡು ಡಝನ್ ಹಣ್ಣು ತರಲು ಹೋಗಿ ಹೀಗಾಯ್ತು ಎಂದೆ. ಸರಿ ಹೋಯ್ತು ಬಿಡಿ. ದೂದ್ ಕಾ ದೂದ್, ಪಾನಿ ಕಾ ಪಾನಿ ಎನ್ನುವ ಹಂಸಕ್ಷೀರ ನ್ಯಾಯದಂತೆ, ನೀವು ಪೈರಸಿ ಮಾಡಿ ಅಷ್ಟೇನೂ ಕಷ್ಟ ಪಡದೆ ಹಣ ಸಂಪಾದಿಸಿದ್ರಿ ಅದನ್ನು ಅವರು ಅಷ್ಟೇ ನಿರಾಯಾಸವಾಗಿ ನಿಮ್ಮಿಂದ ಕಸಿದು ಕೊಂಡ್ರು ಅಲ್ಲಿಗೆ ಸರಿ ಹೋಯ್ತು. ಜಾಸ್ತಿ ಅದರ ಬಗ್ಗೇನೇ ಯೋಚಿಸದೆ ಕಷ್ಟ ಪಟ್ಟು ದುಡಿದು ಸಂಪಾದಿರುವುದನ್ನು ರೂಡಿ ಮಾಡಿಕೋ ಎಂದು ತಿಳಿ ಹೇಳಿದರು. ಅವರ ಹೇಳಿದ್ರಲ್ಲಿ ನಿಜಾಂಶವಿದೆ ಎಂದು ತಿಳಿದು ಸ್ವಲ್ಪ ಶ್ರಮ ವಹಿಸಿ ಬೇರೆ ಕೆಲಸ ಹುಡಿಕಿ ಕೊಂಡು ಮುಂದೆದೂ ಪೈರಸಿ ಮಾಡದೆ ಇದ್ದೀವಿ. ಈಗ ಹೇಳೀ ಯಾರಿಗೆ ಎಷ್ಟೆಷ್ಟು ಲಭ್ಯವಿರುತ್ತದೆಯೋ ಅವರಿಗೆ ಅಷ್ಟೇ ದಕ್ಕೋದು ಅಲ್ವೇ?
ಏನಂತೀರೀ?
ಇಂತಿ ನಿಮ್ಮ ಉಮಾಸುತ