ಪ್ರಜಾಪ್ರಭುತ್ವ ಅಂದರೆ ಕುಟುಂಬ ರಾಜಕಾರಣವೇ?

ಸಾವಿರಾರು ವರ್ಷಗಳ ಕಾಲ ಪ್ರಪಂಚಾದ್ಯಂತ ರಾಜ ಮಹಾರಾಜರ ಆಳ್ವಿಕೆಯೇ ಜಾರಿಗೆಯಲ್ಲಿತ್ತು. ರಾಜನ ಮರಣಾನಂತರ ಆತನ ಮಗನೋ ಇಲ್ಲವೇ ಆತನ ಸಂಬಂಧೀಕರೇ ಆ ರಾಜ್ಯಕ್ಕೆ  ಉತ್ತರಾಧಿಕಾರಿಯಾಗಿ ಆಡಳಿತ ವಂಶಪಾರಂಪರ್ಯವಾಗಿ ನಡೆಯುತ್ತಲಿತ್ತು. ಅಂದು ರಾಜ ಪ್ರತ್ಯಕ್ಶ ದೇವತಾ ಎಂದೇ ಭಾವಿಸಿದ್ದರು. ಆದರೆ ಕಾಲ ಕ್ರಮೇಣ ಕೆಲ ರಾಜರುಗಳ, ಮತ್ತವರ ಸಾಮಂತರ ದೌರ್ಜ್ಯನ್ಯಕ್ಕೆ , ದುರಾಡಳಿತಕ್ಕೆ ಮತ್ತು  ಸರ್ವಾಧಿಕಾರಿತನದಿಂದ ಬೇಸತ್ತು  ಜನ ದಂಗೆ ಎದ್ದ ಪರಿಣಾಮವಾಗಿಯೇ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರವಾಗಿಯೇ  ಇರುವಂತಹ ಪ್ರಜಾಪ್ರಭುತ್ವಕ್ಕೆ ನಾಂದಿಯಾಯಿತು.  ಈ ಮಾದರಿಯಲ್ಲಿ  ಪ್ರಜೆಗಳೇ ನೇರವಾಗಿ ತಮ್ಮ ಜನ ಪ್ರತಿನಿಧಿಗಳನ್ನು ಒಂದು ನಿರ್ಧಿಷ್ಟ ಅವಧಿಯವರೆಗೆ ಆಯ್ಕೆಮಾಡಿಕೊಳ್ಳುವ ಸತ್ಸಂಪ್ರದಾಯಕ್ಕೆ  ನಾಂದಿಯಾಯಿತು.  ನಮ್ಮ ದೇಶವೂ ಕೂಡ 1947ರಲ್ಲಿ ಬ್ರಿಟಿಷರ ದಾಸ್ಯದಿಂದ ಹೊರಬಂದು ಸ್ವಾತಂತ್ರ್ಯ ಪಡೆದುಕೊಂಡ ನಂತರ ಜಗತ್ತಿನ  ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಯಿತು.

ಸರ್ದಾರ್ ವಲ್ಲಭಾಯ್ ಪಟೇಲರ ನೇತೃತ್ವದಲ್ಲಿ ನಮ್ಮ ದೇಶದ ಅಂದಿನ ಎಲ್ಲಾ ರಾಜಮಹಾರಾಜರುಗಳೂ ಭಾರತದ ಒಕ್ಕೂಟಕ್ಕೆ ಸೇರುವುದರ ಮೂಲಕ ಪ್ರಜಾಪ್ರಭುತ್ವಕ್ಕೆ ತಮ್ಮ ಬೆಂಬಲ ಸೂಚಿಸಿದರು. ಜವಹರ್ ಲಾಲ್ ನೆಹರು ಭಾರತದ ಮೊದಲ ಪ್ರಧಾನಿಗಳಾದಾಗ  ಪ್ರತಿಯೊಬ್ಬ ಭಾರತೀಯರೂ ಸಂಭ್ರಮಸಿದ್ದರು. ಆದರೆ   ಆ ಸಂಭ್ರಮ ಹೆಚ್ಚು ಕಾಲ ಉಳಿಯಲೇ ಇಲ್ಲ. ಏಕೆಂದರೆ ನೆಹರು ಮತ್ತು ತಮ್ಮ ಕುಟುಂಬದವರು  ಇಡೀ ದೇಶವನ್ನು ತಮ್ಮ ಜಹಾಗೀರು ಎಂಬಂತೆ ಭಾವಿಸಿ ತಾತ, ಮಗಳು, ಮೊಮ್ಮಗನೇ ಸುಮಾರು ಐವತ್ತು ವರ್ಷಗಳಿಗೂ ಹೆಚ್ಚಿನ ಕಾಲ ಆಳ್ವಿಕೆ ನಡೆಸಿದರೆ  ಇಂದಿಗೂ ಅವರ ವಂಶಸ್ಥರೇ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಮತ್ತು ಮುಖ್ಯಕಾರ್ಯದರ್ಶಿಗಳಾಗಿ ಪ್ರಜಾಪ್ರಭುತ್ವದ ಮೂಲ ತತ್ವವನ್ನೇ ಗಾಳಿಗೆ ತೂರಿದ್ದಾರೆ ಎಂದರೆ ತಪ್ಪೇನಲ್ಲ.

ಹಾಗೆ ನೆಹರು ಮತ್ತು ಇಂದಿರಾ ಗಾಂಧಿಯವರಿಂದ ಶುರುವಾದ ಈ ಕೆಟ್ಟ ಸಂಪ್ರದಾಯ, ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎನ್ನುವಂತೆ ಇಡಿ ದೇಶಾದ್ಯಂತ  ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ಇಂತಹ ಕುಟುಂಬ ರಾಜಕಾರಣ  ಹರಡಿರುವುದು ಪ್ರಜಾಪ್ರಭುತ್ವದ ಮೂಲ ಕಲ್ಪನೆಗೇ ಧಕ್ಕೆಯಾಗಿದೆ. ದೇಶಾದ್ಯಂತ ಇರುವ ಬಹುತೇಕ ಪ್ರಾದೇಶಿಕ ಪಕ್ಷಗಳು ಕೇವಲ ತಮ್ಮ ಕುಟುಂಬದ ಉದ್ದಾರಕ್ಕಾಗಿವೆಯೇ ಇದಯೇ  ಹೊರತು ದೇಶದ ಬಗ್ಗೆಯಾಗಲೀ, ಪ್ರಜೆಗಳ ಬಗ್ಗೆಯಾಗಲೀ ಕಿಂಚಿತ್ತೂ ಕಾಳಜಿ ಇಲ್ಲವೇ ಇಲ್ಲ ಎನ್ನಬಹುದಾಗಿದೆ.

ಇನ್ನು ನಮ್ಮ ರಾಜ್ಯದ  ಪರಿಸ್ಥಿತಿ ಹೇಳುವುದೇ ಬೇಡ. ಹೇಳುವುದಕ್ಕೆ ಪ್ರಾದೇಶಿಕ ಪಕ್ಷ ಅದಕ್ಕೊಬ್ಬರು ಸಂಸ್ಥಾಪಕ ರಾಷ್ಟ್ರಾಧ್ಯಕ್ಷರು ಮತ್ತು ಅವರು ಹಾಲೀ ಸಂಸದರು, ಅವರ ಮಗ ರಾಜ್ಯದ ಸಾಂಧರ್ಭಿಕ ಶಿಶುವಾಗಿ ಮುಖ್ಯಮಂತ್ರಿಯಾದವರು. ಅವರ ಮಡದಿ ಶಾಸಕಿ. ಮತ್ತೊಬ್ಬ ಮಗ ಪ್ರಭಾವೀ ಸಚಿವ, ಅವರ ಹೆಂಡತಿ ಜಿಲ್ಲಾ ಪಂಚಾಯತಿ ಸದಸ್ಯೆ. ಒಬ್ಬ ಬೀಗರು  ಇನ್ನೊಂದು ಪ್ರಭಾವೀ ಖಾತೆಯ ಸಚಿವರು, ಇನ್ನೊಬ್ಬ ಆಳಿಯನ ತಮ್ಮ ಶಾಸಕರು. ಈಗ ಇಬ್ಬರು ಮೂಮ್ಮಕ್ಕಳು ತಾತನ ಜೊತೆ ಲೋಕಸಭಾ ಅಭ್ಯರ್ಥಿಗಳಾದರೂ ಸಹಾ ಹೇಳಿ ಕೊಳ್ಳುವುದು ತಾವು ಕುಟುಂಬ ರಾಜಕಾರಣ ಮಾಡುತ್ತಿಲ್ಲ  ಹಾಗು ಮಾಡಲೂ ಇಚ್ಚಿಸುವುದಿಲ್ಲ ಎಂದು .  ಜನರ ಒತ್ತಾಯದ ಮೇರೆಗೆ ಮತ್ತು ಅವರ ಋಣ ಸಂದಾಯ ಮಾಡಲು ಮತ್ತು  ಪ್ರಜೆಗಳ ಸೇವೆ ಮಾಡಲು ಸ್ಪರ್ಧಿಸುತ್ತಿದ್ದೇವೆ ಎನ್ನುವ ಹುಂಬತನದ ಸಬೂಬು.   ಆ ಇಬ್ಬರು ಮೊಮ್ಮಕ್ಕಳು ನಿಜಕ್ಕೂ  ಗಟ್ಟಿ ಮುಟ್ಟಾಗಿದ್ದಾರೆ. ದೇಶದ ಋಣ ತೀರಿಸುವ ಮನಸ್ಸಿದ್ದಲ್ಲಿ ಸೇನೆಯನ್ನು ಸೇರಿ ಗಡಿಯನ್ನಾದರೂ ಕಾಯಬಹುತ್ತಿಲ್ಲವೇ? ಇಲ್ಲವೇ ತಮ್ಮ  ಊರಿನಲ್ಲಿಯೇ ತಮ್ಮ ಜಮೀನಿನಲ್ಲಿಯೇ ರೈತರಾಗಿ ನಿಜವಾದ ಮಣ್ಣಿನ ಮಕ್ಕಳಾಗ ಬಹುದಿತ್ತು.  ಅದು ಬಿಟ್ಟು ಇಡೀ ಕುಟುಂಬವೇ ರಾಜ್ಯಾದ್ಯಂತ ನಾನಾ ಭಾಗಗಳಲ್ಲಿ ಚುನಾವಣೆಗೆ ನಿಲ್ಲವ ಅವಶ್ಯಕತೆ ಏನಿತ್ತು? ಹಾಗಿದ್ದಲ್ಲಿ ಇವರ ಪ್ರಕಾರ ಕುಟುಂಬ ರಾಜಕಾರಣ ಎಂದರೆ ಏನು?

ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟು ನೋಡಿ ಕೊಂಡರಂತೆ ಎನ್ನುವ ಹಾಗೆ ಕುಟುಂಬ ರಾಜಕಾರಣ ಎಂದರೆ ಸಾಕು.  ಇಡೀ ಕುಟುಂಬವೇ  ಗೋಳೊ ಅಂತಾ ಅಳ್ತಾರೆ .  ಇವರು ಅಳೋದ್ದನ್ನು ನೋಡಿ ಮನ ಕರಗಿ ಜನಾ ಇವರನ್ನೇ ಆಯ್ಕೆ ಮಾಡುತ್ತಾರೆ ಎನ್ನುವ ಸತ್ಯ ಸಂಗತಿಯನ್ನು ಚೆನ್ನಾಗಿಯೇ ಅರಿತೇ ಸರಿಯಾಗಿ ಚುನಾವಣೆ ಸಮಯದಲ್ಲಿ ಮಾತ್ರವೇ ಕೆರೆ ಕೋಡಿ ಹರಿಯುವ ಹಾಗೆ ಅಳ್ತಾರೆ. ಸಾಲದ ಬಾಧೆ ತಡೆಯಲಾರದೆ ದಿನಾ ಸಾಯುವ ರೈತರಿಗಾಗಲೀ ಅಥವಾ ಉಗ್ರರಿಂದ ಗಡಿಯಲ್ಲಿ ಸಾಯುವ ವೀರ ಸೈನಿಕರಿಗಾಗಲೀ ಈ ಕುಟುಂಬ ನಾಲ್ಕು ಕಣ್ಣೀರು ಹಾಕಿದ್ದನ್ನು  ಯಾರೂ ನೋಡಿಯೇ ಇಲ್ಲ.

ನಾವೆಲ್ಲರೂ ಪ್ರಜೆಗಳಿಂದಲೇ ನೇರವಾಗಿ ಆಯ್ಕೆಯಾದವರು ನಮ್ಮದು  ಕುಟುಂಬ ರಾಜಕಾರಣ ಹೇಗಾಗುತ್ತದೆ ಎನ್ನುವ ವಿಂತಂಡವಾದ ಬೇರೆ. ಹೌದು ಅವರು  ಹೇಳ್ತಾ ಇರೋದು ನಿಜಾನೇ. ಅವರೆಲ್ಲಾ ಪ್ರಜೆಗಳಿಂದನೇ ಆಯ್ಕೆ ಆಗಿದ್ದು ಎನ್ನುವುದು ಎಷ್ಟು ಸತ್ಯವೋ ಹಾಗೆಯೇ ಅವರು ತಮ್ಮ  ಕುಟುಂಬದ ಸದಸ್ಯರಲ್ಲದೇ ಬೇರೆಯವರಿಗೆ ಸ್ಪರ್ಧಿಸಲು ಅವಕಾಶವೇ ನೀಡುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ  ಅಲ್ಲವೇ? ಎನ್ನುದನ್ನು ಕೇಳುವವರು ಯಾರು ಇಲ್ಲವಾಗಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.

ಸಾವಿರ ವರ್ಷಗಳ  ಹಿಂದೆ ಇಡೀ ಪ್ರಪಂಚವನ್ನೇ ಗೆಲ್ಲಬೇಕೆಂಬ ಹುಂಬತನದಿಂದ ಗ್ರೀಸಿನ ಚಕ್ರವರ್ತಿ ಅಲೆಕ್ಸಾಂಡರ್ ದಂಡೆತ್ತಿ ಬಂದು ಭಾರತದ ಸಿಂಧೂ ನದಿಯನ್ನೂ ದಾಟಲಾಗದೆ ಸೋತು ಸುಣ್ಣವಾಗಿ  ಅದೇ ಖಿನ್ನತೆಯಲ್ಲಿ ಹಿಂದಿರಿಗುವಾಗಲೇ ಮಾರ್ಗದ ಮಧ್ಯದಲ್ಲಿಯೇ ಮರಣ ಹೊಂದಿದ್ದು ಈಗ ಇತಿಹಾಸ. ಹಾಗೆ ಮರಣಶ್ಯಯೆಯಲ್ಲಿದ್ದಾಗ ತನ್ನ ಮಂತ್ರಿಯೊಂದಿಗೆ ಅವನಾಡಿದ ಈ ಮೂರು ಸಂಭಾಷಣೆಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತವಾಗುತ್ತದೆ.

  • ನನ್ನ ಶವ ಪೆಟ್ಟಿಗೆಯನ್ನು ನನ್ನ ಸಾಮ್ರಾಜ್ಯದ ಅತ್ಯುತ್ತಮ ವೈದ್ಯರುಗಳೇ ಹೊರಬೇಕು.   ವೈದ್ಯಕೀಯ ಸವಲತ್ತುಗಳಿದ್ದರೂ ನನ್ನ ಮರಣವನ್ನು ತಡೆಯಲು ಸಾಧ್ಯವಾಗಲಿಲ್ಲ ಎನ್ನುವದನ್ನು ಜಗತ್ತಿಗೆ ಸಾರಬೇಕಿತ್ತು.
  • ನನ್ನ ಬರಿ ಗೈ ಎಲ್ಲರಿಗೂ ಎದ್ದು ಕಾಣುವಂತೆ ನನ್ನ ಶವವನ್ನು ಹೂಳಬೇಕು.  ಅರ್ಧ ಪ್ರಪಂಚದ ಸಂಪತ್ತೇ ತನ್ನದಾಗಿದ್ದರೂ ಹೋಗುವಾಗ ಎಲ್ಲರೂ ಬರೀ ಕೈಯಲ್ಲೇ ಹೋಗುತ್ತಾರೆ ಹೊರತು ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ.
  • ನನ್ನ  ದೇಶವನ್ನು ಮುನ್ನಡೆಸಲು ಯಾರು ಸಮರ್ಥರಾಗಿರುತ್ತಾರೋ ಅವರೇ ನನ್ನ ಉತ್ತರಾಧಿಕಾರಿಯಾಗ ಬೇಕೇ ಹೊರತು ನನ್ನ ಮಕ್ಕಳು ಅಥವಾ ನನ್ನ ಸಂಬಂಧಿಕರು ಅನುವಂಶೀಯವಾಗಿ ಪಟ್ಟಕ್ಕೆ ತರಬಾರದು.

ಈ ಎಲ್ಲಾ ಕುಟುಂಬ ರಾಜಕಾರಣಿಗಳಿಗೆ ಅಲೆಕ್ಸಾಂಡರ್ ಹೇಳಿದ ಆ ಮೂರೂ ಸತ್ಯ ಸಂಗತಿಗಳನ್ನು  ಸರಿಯಾಗಿ  ಅರ್ಥ ಮಾಡಿಸ ಬೇಕಿದ್ದಲ್ಲಿ ಈ ಬಾರಿ ಚುನಾವಣೆಯಲ್ಲಿ ಅವರ ಯಾವುದೇ ರೀತಿಯ ಆಮೀಷಕ್ಕಾಗಲೀ, ತಮ್ಮ ಜಾತಿಯ ಪ್ರೇಮದಿಂದಾಗಲೀ, ಅಥವಾ ಅವರ ಕಣ್ಣಿರಿಗಾಗಲೀ ಅಥವಾ ಅವರಾಡುವ ಸುಳ್ಳು ಮಾತಿಗಾಗಲೀ ಮರುಳಾಗದೆ ಅವರಿಗೆ ಸ್ವಲ್ಪ ವಿಶ್ರಾಂತಿ ಖಂಡಿತವಾಗಿಯೂ ಕೊಡಲೇ ಬೇಕಿದೆ. ಒಬ್ಬರಿಗೆ ವಯಸ್ಸಾಗಿದೆ. ಇನ್ನೊಬ್ಬರ ಆರೋಗ್ಯ ಚೆನ್ನಾಗಿಲ್ಲ ಮತ್ತೊಬ್ಬರಿಗೆ ಜ್ಯೋತಿಷ್ಯ  ಕೇಳುವುದು ಮತ್ತು ಶತೃ ಸಂಹಾರ ಹೋಮ ಹವನಾದಿಗಳನ್ನು  ಮಾಡಿಸುವುದಕ್ಕೇ ಸಮಯ ಸಾಗುತ್ತಿಲ್ಲ. ಇನ್ನು ಮೊಮ್ಮಕ್ಕಳಿಗೆ ಇನ್ನೂ ಹತ್ತಾರು ತಲೆಮಾರುಗಳು ಕೂತು ತಿಂದರೂ ಕರಗದಷ್ಟು ಆಸ್ತಿಯನ್ನು ರೈತರಾಗಿ ಮಾಡಿಟ್ಟಿದ್ದಾರೆ ತಾತ, ಹಾಗಾಗಿ  ಈ  ಮದುವೆಯ ವಯಸ್ಸಿನಲ್ಲಿ ಅದೂ ರಾಷ್ಟ್ರ ರಾಜಕೀಯವೇಕೆ ?  ಸುಮ್ಮನೆ ಚೆಂದದ ಹುಡುಗಿಯರನ್ನು ನೋಡಿ ಕೊಂಡು ಮದುವೆ ಮಾಡಿ ಕೊಂಡು ಮಕ್ಕಳು ಮಾಡಿಕೊಂಡು ತಮ್ಮ ಅಮ್ಮಂದಿರಿಗೂ ಮೊಮ್ಮಕ್ಕಳನ್ನು ನೋಡಿ ಕೊಳ್ಳುವ  ಜವಾಬ್ಧಾರಿಯನ್ನಾದರೂ ಕೊಡಬಹುದಲ್ಲವೇ?

ಆಯ್ಯೋ ಪಾಪ ಹೋಗ್ಲಿ ಬಿಡಿ ಮಾಡ್ದೋರ ಪಾಪ ಆಡ್ದೋರ ಬಾಯಲ್ಲಿ ಅನ್ನುವಂತೆ ನಾವೇಕೆ ಸುಮ್ಮನೆ ಅವರ ಬಗ್ಗೆ ಮಾತನಾಡುತ್ತಾ ನಮ್ಮ ಸಮಯ ಹಾಳು ಮಾಡಿಕೊಳ್ಳಬೇಕು? ಹೇಗಿದ್ದರೂ ಬರುವ ಏಪ್ರಿಲ್ 18 ಮತ್ತು 23ರಂದು ರಾಜ್ಯಾದ್ಯಂತ ಚುನಾವಣೆ ನಡೆಯುತ್ತಿದೆಯಲ್ಲಾ ಅಂದೇ ಅವರಿಗೆ ತಕ್ಕ ಪಾಠ ಕಲಿಸಿದರಾಯ್ತು ಆಲ್ಲವೇ? ಯಾವ ಪಕ್ಷ  ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು ಕಡಿಮೆ ಕುಟುಂಬ ರಾಜಕಾರಣ ಮಾಡುತ್ತಿದೆಯೋ ಅಂತಹ ಪಕ್ಷವನ್ನೇ ಬೆಂಬಲಿಸೋಣ ಮತ್ತು ವಿಜಯಶಾಲಿಗಳನ್ನಾಗಿ ಮಾಡೋಣ.

ಏನಂತೀರೀ?

Leave a comment