ಅಭ್ಯಾಸ- ದುರಭ್ಯಾಸ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪುಟ್ಟ ಹುಡುಗನೊಬ್ಬ ಜಾರುತ್ತಿರುವ ತನ್ನ ದೊಡ್ಡದಾದ ಚೆಡ್ಡಿಯನ್ನು ಎಡಗೈನಲ್ಲಿ ಹಿಡಿದುಕೊಂಡು ಹೋಗುತ್ತಿರುವ ಚಿತ್ರ ವೈರಲ್ ಆಗಿದೆ. ಆ ಪುಟ್ಟ ಬಾಲಕನು ಬೆರಳು ಚೀಪುವ ದುರಾಭ್ಯಾಸವನ್ನು ತಪ್ಪಿಸಲು ಅವನ ಪೋಷಕರು ಈ ರೀತಿಯ ಜಾಣ್ಮೆಗೆ ಮೊರೆ ಹೋಗಿದ್ದಾರೆ ಎಂಬ ತಲೆಬರಹ ನನ್ನನ್ನು ನನ್ನ ಬ್ಯಾಲ್ಯಾವಸ್ಥೆಗೆ ಕರೆದುಕೊಂಡು ಹೋಯಿತು.

cheddiನಾನು ಮತ್ತು ನನ್ನ ಚಿಕ್ಕ ತಂಗಿ ಇಬ್ಬರೂ ಸಹಾ ಬೆರಳು ಚೀಪುತ್ತಿದ್ದವರೇ. ನಾನು ಎಡಗೈ ಹೆಬ್ಬರಳನ್ನು ಮಲಗುವಾಗ ಮಾತ್ರ, ಒಂದು ಶುಭ್ರವಾದ ಪಂಚೆಯ ತುದಿಯೊಂದಿಗೆ ಚಿಪುತ್ತಿದ್ದರೆ, ನನ್ನ ತಂಗಿ ನನಗಿಂತ ಒಂದು ಚೂರು ಮುಂದೆ ಹೋಗಿ ಬಲಗೈ ಹೆಬ್ಬರಳನ್ನು ಅಮ್ಮನ ಸೆರಗಿನಡಿಯಲ್ಲಿ ಸದಾ ಚೀಪುತ್ತಲೇ ಬೆಳೆದವಳು. ಇದರ ಜೊತೆ ನನ್ನ ಮತ್ತೊಂದು ಅಭ್ಯಾಸವೆಂದರೆ ಹಾಲನ್ನ ತಿನ್ನುವುದು. ಮನೆಯವರೆಲ್ಲರೂ ಮಜ್ಜಿಗೆ ಇಲ್ಲವೆ ಮೊಸರನ್ನ ಊಟ ಮಾಡಿದರೆ ನನಗೆ ಮಾತ್ರ ಹಾಲನ್ನವೇ ಇರಬೇಕಿತ್ತು. ಆ ಹಾಲನ್ನಕ್ಕೆ ಒಂದು ತೊಟ್ಟು ಮಜ್ಜಿಗೆಯಾಗಲೀ, ಮೊಸರಾಗಲೀ ಸೋಕಿದರೂ ಸಾಕು ನನಗೆ ವಾಂತಿಯೇ ಬರುತ್ತಿತ್ತು. ಆರಂಭದಲ್ಲಿ ಚಿಕ್ಕ ಹುಡುಗ, ದೊಡ್ಡವನಾದ ಮೇಲೆ ಸರಿ ಹೋಗಬಹುದು ಎಂದು ನಮ್ಮ ಪೋಷಕರೂ ಸುಮ್ಮನಾದರೂ, ಕ್ರಮೇಣ ಅದನ್ನು ಬಿಡಿಸಲು, ಕೈ ಬೆರಳಿಗೆ ಹಿಪ್ಪೆ ಎಣ್ಣೆ ಹಚ್ಚುವುದು, ಬೆರಳಿಗೆ ಬರೆ ಎಳೆಯುವುದು, ಬೆರಳಿಗೆ ಬಟ್ಟೆ ಕಟ್ಟುವುದು ಹೀಗೆ ನಾನಾ ರೀತಿಯ ಪ್ರಯತ್ನಗಳನ್ನು ಮಾಡಿದರೂ ಪ್ರಯೋಜನವಾಗದೇ ಕೈ ಚೆಲ್ಲಿದ್ದೂ ಉಂಟು.

ಸರಿ ಸುಮಾರು ನನಗೆ ಐದಾರು ವರ್ಷಗಳಿದ್ದಾಗ ನನ್ನ ಚೌಲದ ಸಮಯದಲ್ಲಿ ನನ್ನ ಸೋದರತ್ತೆ ನನಗೊಂದು ಚೆಂದದ ಟ್ರಂಕ್ (ಅಂದೆಲ್ಲಾ ಶಾಲೆಗೆ ಚೀಲದ ಬದಲು ಟ್ರಂಕ್ ತೆಗುದುಕೊಂಡು ಹೋಗುವುದು ಹೆಮ್ಮೆಯ ಸಂಗತಿಯಾಗಿತ್ತು) ಉಡುಗೊರೆ ಕೊಟ್ಟು, ನೋಡು ಇಂದು ನಿನಗೆ ಶಾಸ್ತ್ರೋಕ್ತವಾಗಿ ಪೇಜಾವರ ಶ್ರೀಗಳ ಸಮ್ಮುಖದಲ್ಲಿ ಎಷ್ಟೋಂದು ಜನರ ಜೊತೆ ಈ ಸಮಾರಂಭದಲ್ಲಿ ಅಷ್ಟೋಂದು ಖರ್ಚು ಮಾಡಿ ಅಪ್ಪಾ ಅಮ್ಮ ನಿನಗೆ ಅಕ್ಷರಾಭ್ಯಾಸ ಮಾಡಿಸಿದ್ದಾರೆ. ಹಾಗಾಗಿ ನೀನಿಗ ದೊಡ್ಡವನಾಗಿದ್ದೀಯಾ. ಶಾಲೆಗೆ ಈ ಟ್ರಂಕ್ನಲ್ಲಿ ಪುಸ್ತಕ ತೆಗೆದುಕೊಂಡು ಹೋಗಬೇಕಾದರೆ ಶಕ್ತಿ ಬೇಕು. ಕೇವಲ ಹಾಲಾನ್ನ ತಿನ್ನುವುದರಿಂದ ಶಕ್ತಿ ಬರುವುದಿಲ್ಲ ಹಾಗಾಗಿ ಇಂದಿನಿಂದ ನೀನು ಹಾಲನ್ನ ತಿನ್ನುವುದನ್ನು ಬಿಡುವುದರ ಜೊತೆಗೆ,ಬೆರಳು ಚೀಪುವುದನ್ನೂ ಬಿಟ್ಟು ಬಿಡಬೇಕು ಎಂದು ಹೇಳಿದ್ದನ್ನು ಕೇಳಿ, ಅಂದಿನಿಂದ ಕೇವಲ ಮಜ್ಜಿಗೆ ಇಲ್ಲವೇ ಮೊಸರನ್ನ ಮಾತ್ರ ತಿನ್ನುತ್ತಾ , ಇಂದು ಹಾಲನ್ನ ತಿಂದರೆನೇ ವಾಕರಿಕೆಯೇ ಬರುವಂತಾಗಿದೆ. ಹಾಗೆ ನನ್ನ ಸೋದರತ್ತೆಯ ಮಾತು ಮನಸ್ಸಿಗೆ ನಾಟಿ ಹಾಲನ್ನ ತಿನ್ನುವುದನ್ನು ಬಿಟ್ಟರೂ ಹೈಸ್ಕೂಲ್ ಓದುವವರೆಗೂ ಬೆರಳು ಚೀಪುವುದನ್ನು ಮುಂದುವರಿಸಿ ಕಾಲ ಕ್ರಮೇಣ ಕೆಲವು ಬೇಸಿಗೆ ಶಿಬಿರಗಳಿಗೆ ವಾರಗಟ್ಟಲೆ ಹೋಗುತ್ತಿದ್ದರಿಂದ ಎಲ್ಲಿ ಆವಮಾನವಾಗುತ್ತದೆಯೋ ಎಂದು ಇಷ್ಟ ಪಟ್ಟು, ಕಷ್ಟ ಪಟ್ಟು ಬೆರಳು ಚೀಪುವ ದುರಾಭ್ಯಾಸವನ್ನು ಬಿಟ್ಟದ್ದು ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಇದೆ.

ಮಕ್ಕಳಿಗೆ ಊಟ ಮಾಡಿಸಲು ಅಮ್ಮಂದಿರು ಮನೆಯ ಹೊರಗೆ ಕರೆತಂದು ಚಂದಿರನ್ನು ತೋರಿಸುತ್ತಲೋ ಇಲ್ಲವೇ ಸಾಕು ಪ್ರಾಣಿಗಳನ್ನು ತೋರಿಸುತ್ತಲೋ ತಿನ್ನಿಸುವುದನ್ನು ಆಭ್ಯಾಸ ಮಾಡಿಸಿದರೆ, ಕ್ರಮೇಣ ಆ ಮುಗುವಿಗೆ ತನ್ನ ಕೈಯಾರೆ ತಿನ್ನುವ ಅಭ್ಯಾಸವೇ ತಪ್ಪಿ ಹೋಗುತ್ತದೆ. ಅದರ ಬದಲಾಗಿ ಮಕ್ಕಳು ತಿನ್ನಲಿ, ಚೆಲ್ಲಲಿ, ಬಿಡಲಿ ಎಲ್ಲರ ಜೊತೆಯಲ್ಲಿಯೇ ತಿಂಡಿ, ಊಟಕ್ಕೆ ಕೂರಿಸಿದರೆ ಕ್ರಮೇಣ ಅವುಗಳಿಗೆ ಅದೇ ಆಭ್ಯಾಸವಾಗುತ್ತದೆ. ಸಹ ಪಂಕ್ತಿ ಭೋಜನದ ಕಲ್ಪನೆಯೂ ಬರುತ್ತದೆ.

ಹಿಂದೆಲ್ಲಾ ಬೆರಳು ಚೀಪುವುದೋ, ಬಾಯಲ್ಲಿ ಕೈ ಇಟ್ಟು ಕೊಳ್ಳುವುದೋ ಇಲ್ಲವೇ ಸೊಂಟದ ಮೇಲೆ ಕೂರಿಸಿಕೊಂಡು ಊಟ ಮಾಡಿಸುವ ಆಭ್ಯಾಸ ಇದ್ದರೆ ಇಂದು ಅದೆಕ್ಕಿಂತ ಮಾರಕವಾದ ಆಭ್ಯಾಸ ಮಾಡಿಸುತ್ತಿದ್ದಾರೆ. ಆರು ತಿಂಗಳ ಹಸು ಕೂಸಿನಿಂದಲೇ ಮಕ್ಕಳನ್ನು ಟಿವಿಯ ಮುಂದೆ ಮಲಗಿಸುವುದು ನಂತರ ಸ್ವಲ್ಪ ದೊಡ್ಡವರಾದ ಮೇಲೆ ಅವರ ಕೈಗೆ ಮೊಬೈಲ್ ಕೊಟ್ಟು ಸಮಾಧಾನ ಪಡಿಸುವ ಅತ್ಯಂತ ಕೆಟ್ಟ ದುರಭ್ಯಾಸವನ್ನು ತಂದೆ ತಾಯಂದಿರು ಮಾಡುತ್ತಿರುವುದು ನಿಜಕ್ಕೂ ಅತ್ಯಂತ ಕಳವಳಕಾರಿಯಾಗಿದೆ. ಮಕ್ಕಳಿಗೆ ಆಹಾರ ತಿನ್ನಿಸುವ ಸಮಯದಲ್ಲಿ , ಆಟವಾಡಿಸುವ ಸಮಯದಲ್ಲಿ, ರಂಪಾಟಗಳನ್ನು ನಿಲ್ಲಿಸುವ ಸಲುವಾಗಿ, ಕೊನೆಗೆ ಮಲಗಿಸುವಾಗಲೂ ಮೊಬೈಲ್ ಕೊಡುವ ಕೆಟ್ಟ ಚಾಳಿ ಮುಂದೆ ಅದೇ ಮಕ್ಕಳಿಗೆ ತುಂಬಾ ಮಾರಕವಾಗಲಿದೆ. ಆ ಚಿಕ್ಕವಯಸ್ಸಿನಲ್ಲಿ ಮಕ್ಕಳ ಕಣ್ಣು ಮತ್ತು ಕಿವಿಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಅಂತಹ ಸಣ್ಣ ವಯಸ್ಸಿನಲ್ಲಿಯೇ ಆ ಮಕ್ಕಳಿಗೆ ಟಿವಿ, ಮೊಬೈಲ್ ನೋಡುವುದರಿಂದ ದೃಷ್ಟಿ ದೋಷಕ್ಕೆ ತುತ್ತಾಗಿ ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಕನ್ನಡಕವೋ ಇಲ್ಲವೇ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಪಡುವ ಸಾಧ್ಯತೆಗಳಿಗೆ. ಅದೇ ರೀತಿಯ ಗಡ ಚಿಕ್ಕುವ ಟಿವಿಯ ಶಬ್ಧ ಮಕ್ಕಳನ್ನು ಬದಿರರನ್ನಾಗಿ ಮಾಡುವ ಸಾಧ್ಯತೆಗಳನ್ನೂ ತಳ್ಳಿಹಾಕುವಹಾಗಿಲ್ಲ.

ರಾಮ, ಕೃಷ್ಣ, ಬಾಲ ಗಣೇಶ, ಬಾಲಾಂಜನೇಯ ಕಥೆಯನ್ನು ಹೇಳುತ್ತಲೋ ಜೋಗುಳವನ್ನು ಹಾಡುತ್ತಾಲೋ ಮಕ್ಕಳಿಗೆ ಊಟ ಮಾಡಿಸುವುದಾಗಲೀ, ಸಮಾಧಾನ ಪಡಿಸುವುದಾಗಲೀ ಇಲ್ಲವೇ ಮಲಗಿಸುವಾಗ ನಮ್ಮ ಸಾಂಪ್ರದಾಯಕ ಸಂಸ್ಕಾರಗಳಿಂದ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ನಮ್ಮ ಪುರಾಣ ಪುರುಷರ, ವೀರೋ ಧೀರರ ಶೌರ್ಯ ಸಾಹಸಗಳ ಪರಿಚಯಮಾಡುವುದಲ್ಲದೇ ಸಂಗೀತ ಸಾಹಿತ್ಯದ ಆಸಕ್ತಿಯನ್ನೂ ಹೆಚ್ಚಿಸಬಹುದು. ಯಾರಿಗೆ ಗೊತ್ತು ಯಾವ ಹುತ್ತದಲ್ಲಿ ಯಾವ ಹಾವಿದೆ ಎಂದು. ಮುಂದೆ ಇದೇ ಮಕ್ಕಳು ಯಾರ ಮನೆಯಲ್ಲಿ ವೀರ ಅಭಿಮನ್ಯು , ಛತ್ರಪತಿ ಶಿವಾಜಿ, ಥಾಮಸ್ ಆಲ್ವ ಎಡಿಸನ್, ಭಗತ್ ಸಿಂಗ್ ರಂತೆ ಆಗಬಹುದೇನೋ?

ಸಣ್ಣ ವಯಸ್ಸಿನಲ್ಲಿ ಮಕ್ಕಳು ಈ ರೀತಿಯಾಗಿ ಒಂದಲ್ಲಾ ಮತ್ತೊಂದು ರೀತಿಯ ಅಭ್ಯಾಸಗಳಿಗೆ ಸುಲಭವಾಗಿ ಒಗ್ಗಿ ಹೋಗಿ ಕಾಲ ಕ್ರಮೇಣ ಅದೇ ದುರಭ್ಯಾಸವಾಗುವುದು ಸಹಜ ಪ್ರಕ್ರಿಯೆ. ಈ ಸಂದರ್ಭದಲ್ಲಿ ಪೋಷಕರು ಅಥವಾ ನೆಂಟರಿಷ್ಟರು ಅದನ್ನು ಸರಿಯಾದ ಸಮಯದಲ್ಲಿ ಸೂಕ್ತ ರೀತಿಯಲ್ಲಿ ತಿಳಿವಳಿಕೆ ಹೇಳಿ ನಿವಾರಿಸಬಹುದಾಗಿದೆ. ಇಲ್ಲದಿದ್ದಲ್ಲಿ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎನ್ನುವ ಹಾಗೆ ಮಂದೇ ಇದೇ ಸಮಸ್ಯೆಗಳು ಮಕ್ಕಳನ್ನು ಮಾನಸಿಕವಾಗಿ ಕಾಡಲಾರಂಭಿಸುತ್ತದೆ.

ಕಾಲ ಮಿಂಚಿ ಹೋದ ಮೇಲೆ ಚಿಂತಿಸಿದರೆ ಫಲವಿಲ್ಲ ಎಂಬಂತೆ ಮಕ್ಕಳು ದುರಭ್ಯಾಸಕ್ಕೆ ಈಡಾದ ಮೇಲೆ ಪಶ್ಚಾತ್ತಾಪ ಪಡುವ ಬದಲು ಆರಂಭದಲ್ಲೇ ಅಂತಹ ಅಭ್ಯಾಸಗಳನ್ನು ಚಿವುಟುವ ಮೂಲಕ, ಮುಂದಾಗುಬಹುದಾದ ಅಭಾಸಗಳನ್ನು ತಪ್ಪಿಸಬಹುದಲ್ಲವೇ?

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s