ನೆನ್ನೆ ಮಧ್ಯಾಹ್ನ ಕಛೇರಿಯಲ್ಲಿ ಕೆಲಸನಿರತನಾಗಿದ್ದಾಗ ನನ್ನ ಆತ್ಮೀಯ ಗೆಳೆಯ ಹರಿ ಕರೆ ಮಾಡಿದ. ಸಾಮಾನ್ಯವಾಗಿ ವಾರಂತ್ಯದಲ್ಲಿಯೋ ಇಲ್ಲವೇ ರಾತ್ರಿಯ ಹೊತ್ತು ನಾವಿಬ್ಬರು ಮಾತನಾಡುವ ಪ್ರತೀತಿ. ಇಂದು ಅಚಾನಕ್ಕಾಗಿ ಕರೆ ಮಾಡಿರುವುದು ನನ್ನಲ್ಲಿ ಒಂದು ಕ್ಷಣ ಆತಂಕವನ್ನೇ ಸೃಷ್ಟಿಮಾಡಿತು. ಸರಿ ಏನಾದರೂ ಆಗಲೀ ಎಂದು ಕರೆಯನ್ನು ಸ್ವೀಕರಿಸಿ, ಹೇಳಪ್ಪಾ ಏನು ಸಮಾಚಾರ ಎಂದು ಕೇಳುತ್ತಿದ್ದಂತೆಯೇ. ನನ್ನ ಊಹೆ ಸರಿಯಾಗಿ, ಕ್ಷೀಣ ಸ್ವರದಲ್ಲಿ ದುಃಖಭರಿತನಾಗಿ ಶ್ರೀಕಂಠಾ ನಮ್ಮ ತಾತ ಹೋಗ್ಬಿಟ್ರೋ ಎಂದ. ಹರಿ ಹಾಗೆ ಹೇಳುತ್ತಿದ್ದಂತೆಯೇ, ಛೇ ಹೋಗ್ಬಿಟ್ರಾ? ಎಲ್ಲಿ? ಯಾವಾಗ? ಮುಂದಿನ ಕಾರ್ಯ ಹೇಗೆ ಮತ್ತು ಎಲ್ಲಿ ಎಂದು ಒಂದೇ ಸಮನೇ ಕೇಳಿದ್ದಕ್ಕೆ. ನಾನೂ ಮಾವನ ಮನೆಗೆ ಹೋಗ್ತಾ ಇದ್ದೀನಿ. ಅಲ್ಲಿಗೆ ಹೋದ ಮೇಲೆ ಎಲ್ಲಾ ವಿಚಾರ ತಿಳಿಸ್ತೀನಿ ಅಂತ ಹೇಳಿ ಕರೆ ನಿಲ್ಲಿಸಿದ. ಒಂದು ಕ್ಷಣ ನನ್ನ ಸ್ಮೃತಿ ಪಟಲದಲ್ಲಿ ವರ ನಟ ರಾಜಕುಮಾರರ ನಾಸಿಕವನ್ನು ಮತ್ತು ಅವರ ನಗೆಯನ್ನೇ ಹೋಲುತ್ತಿದ್ದ ಎತ್ತರದ ಸದಾ ಸ್ಥಿತ ಪ್ರಜ್ಞರಾದ, ಮೃದು ಭಾಷಿಗಳು ಮತ್ತು ಸ್ನೇಹಮಯಿಯಾದ ಶ್ರೀ ರಾಮಚಂದ್ರರಾಯರು ಕಣ್ಣ ಮುಂದೆ ಬಂದರು. ತಮ್ಮ ಮೊಮ್ಮಗನ ಸ್ನೇಹಿತನಾಗಿದ್ದ ನನ್ನನ್ನೂ ಅವರ ಸ್ವಂತ ಮೂಮ್ಮಗನಂತೆಯೇ ಪ್ರೀತಿಸುತ್ತಿದ್ದವರು. ಊರಿಂದ ತಂದ ತಿಂಡಿಗಳಲ್ಲಿ ನಗಗೂ ಒಂದು ಪಾಲನ್ನು ಎತ್ತಿಟ್ಟು ನನಗೆ ಕೊಡುತ್ತಿದ್ದವರು. ನನ್ನ ಹೈಸ್ಕೂಲ್ ಮತ್ತು ಕಾಲೇಜಿನ ಸಮಯದಲ್ಲಿ ನನ್ನ ವಿದ್ಯಾಭ್ಯಾಸದ ಖರ್ಚಿಗೆಂದು ಪುಸ್ತಕ ಬೈಂಡಿಂಗ್ ಮಾಡುತ್ತಿದ್ದ ಸಮಯದಲ್ಲಿ ತಮ್ಮಎಲ್ಲಾ ಮೊಮ್ಮಕ್ಕಳ ಪುಸ್ತಕಗಳಿಗೂ ನನ್ನಲ್ಲಿಯೇ ಬೈಂಡಿಗ್ ಮಾಡಿಸುತ್ತಿದ್ದಲ್ಲದೆ, ಅವರ ದೇವರ ಪುಸ್ತಕಗಳು ಮತ್ತು ಅವರ ಸ್ನೇಹಿತರ ದೇವರ ಪುಸ್ತಕಗಳನ್ನೂ ವಾರಾಂತ್ಯದಲ್ಲಿ ತೆಗೆದು ಕೊಂಡು ಬಂದು ನನ್ನಿಂದ ಬೈಂಡಿಗ್ ಹಾಕಿಸಿಕೊಂಡು ನಾನು ಕೇಳಿದ್ದಕ್ಕಿಂತಲೂ ಹೆಚ್ಚಿನ ಹಣವನ್ನು ಆಶೀರ್ವಾದ ಮುಖೇನ ಕೊಡುತ್ತಿದ್ದದ್ದು ನೆನಪಾಗಿ ನನಗೇ ಅರಿವಿಲ್ಲದಂತೆಯೇ ಕಣ್ಣು ತುಂಬಿ ಬಂತು. ದುಃಖ ಉಮ್ಮಳಿಸಿತು.
ಶ್ರೀಯುತರದ್ದು, ಕೋಲಾರ ಸಮೀಪದ ಒಂದು ಊರಿನ ದೊಡ್ಡ ಜಮೀನ್ದಾರ ಕುಟುಂಬ. ಎಪ್ಪತ್ತರ ದಶಕದಲ್ಲಿ ಉಳುವವನಿಗೇ ಭೂಮಿ ಎಂಬ ಕಾನೂನಿನಂತೆ ಇದ್ದ ಎಲ್ಲಾ ಜಮೀನನ್ನೂ ಕಳೆದು ಕೊಂಡು ವಾಸಕ್ಕಿದ್ದ ಮನೆಯನ್ನು ಹೊರತು ಪಡಿಸಿ ಅಕ್ಷರಶಃ ನಿರ್ಗತಿಕರಾದ್ದದ್ದು ನಿಜಕ್ಕೂ ಬೇಸರ ಸಂಗತಿ. ಅಷ್ಟೆಲ್ಲಾ ಭೂಮಿಯನ್ನು ಕೆಳೆದುಕೊಂಡರೂ ಒಂದು ದಿನವೂ ಅದರ ಬಗ್ಗೆ ಬೇಸರಿಸಿಕೊಳ್ಳದೆ, ಎಲ್ಲಾ ಆ ಭಗವಂತನ ಇಚ್ಛೆ ಹುಟ್ಟಿಸಿದವ ಹುಲ್ಲು ಮೇಯಿಸಲಾರ ಎಂದು ಭಗವಂತನ ಧ್ಯಾನ ಮಾಡುತ್ತಾ ನಿಮ್ಮದಿಯ ಜೀವ ಕಳೆದ ಹಿರಿಯ ಜೀವ ಅವರು. ಭಗವಂತನ ಅನುಗ್ರಹ ಮತ್ತು ಕಠಿಣ ಪರಿಶ್ರಮದಿಂದ ಅವರ ಗಂಡು ಮಕ್ಕಳು ಬೆಂಗಳೂರಿನಲ್ಲಿ ಕೆಲಸ ಗಿಟ್ಟಿಸಿದರು. ಗಂಡು ಮಕ್ಕಳೇನೋ ತಮ್ಮ ಹೆತ್ತ ತಂದೆ ತಾಯಿಯರ ಋಣ ಸಂದಾಯ ಮಾಡಲು ನೋಡಿಕೊಳ್ತಾರೆ ಮತ್ತು ನೋಡಿಕೊಳ್ಳಲೇ ಬೇಕು ಎಂದರೆ ಮನೆಗೆ ಬಂದ ಸೊಸೆಯಂದಿರೂ ಕೂಡಾ ಅತ್ತೆ ಮಾವನವರನ್ನು ತಮ್ಮ ಸ್ವಂತ ಜನ್ಮ ಕೊಟ್ಟ ತಂದೆ ತಾಯಿಯರಂತೆಯೇ ಈ ಇಳಿ ವಯಸ್ಸಿನಲ್ಲಿಯೂ ಯಾವುದೇ ತೊಂದರೆಯಾಗಂತೆ ಅದೂ ಈ ಕಾಲದಲ್ಲೂ ನೋಡಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ ಮತ್ತು ಅನುಕರಣೀಯ. ತಮ್ಮ ಕಣ್ಣ ಮುಂದೆಯೇ ತಮ್ಮ ಹಿರಿಯ ಮಗಳು, ಕಿರಿಯ ಮಗ ಮತ್ತು ಇತ್ತೀಚೆಗೆ ತಮ್ಮ ಮಡದಿಯನ್ನೂ ಕಳೆದುಕೊಂಡದ್ದು ಅವರ ಸ್ಥೈರ್ಯವನ್ನು ಸ್ವಲ್ಪ ಮಟ್ಟಿಗೆ ಕುಗ್ಗಿಸಿತ್ತಾದರೂ,ಮನಸ್ಸಿನಲ್ಲಿಯೇ ದುಃಖವನ್ನಿಟ್ಟುಕೊಂಡು ಅದನ್ನು ಎಂದೂ ಯಾರಲ್ಲೂ ತೋರಿಸಿಕೊಳ್ಳದೆ ಎಲ್ಲರೊಂದಿಗೆ ನಗುನಗುತ್ತಾ ಇದ್ದದ್ದು ನಿಜಕ್ಕೂ ಅಚ್ಚರಿಯೇ ಸರಿ. ಕಳೆದ ದೀಪಾವಳಿ ಸಮಯದಲ್ಲಿ ನನ್ನ ಸ್ನೇಹಿತನ ಮನೆಯಲ್ಲಿ ನಮ್ಮ ಇಡೀ ಕುಟುಂಬದೊಡನೆ ಅವರನ್ನು ಭೇಟಿ ಮಾಡಿ ಅವರೊಂದಿಗೆ ಸ್ವಲ್ಪ ಸಮಯವನ್ನು ಕಳೆದ್ದದ್ದು ಮತ್ತು ಅವರ ತುಂಬು ಹೃದಯದ ನಿಶ್ಕಲ್ಮಶ ಆಶೀರ್ವಾದ ಪಡೆದದ್ದು ಇನ್ನು ಮುಂದೆ ಸದಾ ಕಾಲವೂ ನಮಗೆ ನೆನಪಾಗಿಯೇ ಉಳಿಯಲಿದೆ .
ವಿಷಯ ಕೇಳಿದೊಡನೆಯೇ ಸಹೋದ್ಯೋಗಿಗಳಿಗೆ ತಿಳಿಸಿ ಬೆಂಗಳೂರಿನ ಟ್ರಾಫಿಕ್ ಸಿಕ್ಕಿಕೊಳ್ಳುವ ಮುಂಚೆಯೇ ಕಛೇರಿಯಿಂದ ಹೊರಟೆನಾದರೂ, ಆ ಭಗವಂತನೇ ಬಂದರೂ ನಿವಾರಿಸಲು ಅಸಾಧ್ಯವಾದ ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿ ಕೊಂಡೇ ಬಿಟ್ಟೆ. ಅಷ್ಟರಲ್ಲಿ ಹರಿ ಕರೆ ಮಾಡಿ ಅಂತ್ಯಕ್ರಿಯೆಗಳನ್ನು ಆ ಸಂಜೆಯೇ ಚಾಮರಾಜ ಪೇಟೆಯ ಕರ್ಮಭೂಮಿಯಲ್ಲಿ ಮಡುತ್ತಾರೆ ಎಂದು ತಿಳಿಸಿದಾಗ ಸರಿ ನಾನು ಮನೆಗೆ ಬರದೆ ಅಲ್ಲಿಯೇ ನೇರವಾಗಿ ಹೋಗುತ್ತೇನೆ ಎಂದು ತಿಳಿಸಿ, ರುದ್ರಭೂಮಿಗೆ ತಲುಪಿದಾಗ ಗಂಟೆ ಆರಾಗಿತ್ತು. ನೇಸರ ತನ್ನ ಕೆಲಸ ಮುಗಿಸಿ ಮನೆಗೆ ಹೋಗುವ ಸಮಯವಾಗಿತ್ತು. ನನ್ನಂತೆಯೇ ಅವರ ಕೆಲ ಸಂಬಂಧಿಗಳು ಕಾಯುತ್ತಿದ್ದವರೊಂದಿಗೆ ಮಾತನಾಡುವಷ್ಟ್ರರಲ್ಲಿಯೇ ಹರಿಯವರ ಅಜ್ಜನ ಪಾರ್ಥೀವ ಶರೀರ ತಲುಪಿ, ಪುರೋಹಿತರು ಅಂತ್ಯಕ್ರಿಯೆಯ ಕಾರ್ಯಗಳನ್ನು ಆರಂಭಿಸಿದರು. ಸಣ್ಣ ವಯಸ್ಸಿನ ಪುರೋಹಿತರು ಅತ್ಯಂತ ಶ್ರದ್ಧೆಯಿಂದ ಪ್ರತಿಯೊಂದು ಕರ್ಮಗಳ ಕುರಿತಂತೆ ಅರ್ಥವನ್ನು ಹೇಳುತ್ತಾ ಶಾಸ್ತ್ರೋಕ್ತವಾಗಿ ಕಾರ್ಯ ಮಾಡಿಸುತ್ತಿದ್ದಂತೆಯೇ, ಸೂರ್ಯ ಸಂಪೂರ್ಣವಾಗಿ ಮಾಯವಾಗಿ ಸಂಪೂರ್ಣ ಕತ್ತಲಾಯಿತು ಆ ಪ್ರದೇಶ. ಬಂದ ಹಲವು ನೆಂಟರಿಷ್ಟರು ಸಮಯಾಭಾವದಿಂದ ಅಗಲಿದ ಹಿರಿಯರಿಗೆ ನಮಸ್ಕಾರ ಮಾಡಿ ಅಲ್ಲಿಂದ ಹೋಗುತ್ತಿದ್ದಂತೆಯೇ ಕೆಲವೇ ಕೆಲವು ಗಂಡಸರುಗಳು ಮತ್ತು ಒಂದೆರಡು ಹಸು, ನಾಯಿಗಳು ಮತ್ತು ಕೆಲ ಕೋಳಿಗಳು ಮಾತ್ರವೇ ಅಲ್ಲಿದ್ದವು.
ಸಾವಿನ ಮನೆಯಲ್ಲಿ ಸಂಭ್ರಮ ಎಲ್ಲಿಂದ ಬಂತು ಎನ್ನುವಂತೆ ಅಲ್ಲಿದ್ದ ಎಲ್ಲರೂ ಯಾವುದೇ ಮಾತುಗಳನ್ನಾಡದೇ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನೇ ನೋಡುತ್ತಿದ್ದರೆ, ಅಲ್ಲಿ ಕತ್ತಲಾಗಿತ್ತು ನೀರವ ಮೌನ ಆವರಿಸಿತ್ತು. ಇದ್ದಕ್ಕಿದ್ದಂತೆಯೇ ಎಲ್ಲಿಂದಲೋ ಘಲ್ ಘಲ್ ಎನ್ನುವ ಗೆಜ್ಜೆಯ ಸಪ್ಪಳ ಕೇಳಿ ಬಂತು. ಹೇಳಿ ಕೇಳಿ ಸ್ಮಶಾನ ಮೌನ. ಸಾಮಾನ್ಯವಾಗಿ ಹೆಂಗಸರುಗಳು ಸ್ಮಶಾನಕ್ಕೆ ಬರುವುದಿಲ್ಲ. ಅದೂ ಅಷ್ಟು ಹೊತ್ತಿನಲ್ಲಿ ಆ ಪ್ರದೇಶದಲ್ಲಿ ಹೆಂಗಸರನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಆದರೂ ಗೆಜ್ಜೆಯ ಘಲ್ ಘಲ್ ಎಂದು ಕೇಳುತ್ತಲೇ ಇದೆ. ಬರ ಬರುತಾ ಗೆಜ್ಜೆಯ ಶಭ್ಧ ಹೆಚ್ಚಾದಂತೆಲ್ಲಾ ಇದ್ದವರೆಲ್ಲಾ ಒಬ್ಬರನ್ನೊಬ್ಬರ ಮುಖವನ್ನು ಆಶ್ಚರ್ಯಚಕಿತರಾಗಿ ನೋಡ ತೊಡಗಿದರು. ಎಲ್ಲರ ಹುಬ್ಬೇರಿತು ಎಲ್ಲರ ಚಿತ್ತ ಗೆಜ್ಜೆಯ ಶಬ್ಧದತ್ತ. ಎಲ್ಲರ ಮುಖದಲ್ಲೂ ಒಂದು ರೀತಿಯ ಆತಂಕ ಎದೆಯಲ್ಲಿ ಝಲ್ ಝಲ್ ಎನ್ನುವ ಭೀತಿ. ನೋಡ ನೋಡುತ್ತಿದ್ದಂತೆಯೇ ದೂರದಲ್ಲಿ ಒಂದು ಹೆಂಗಸು ನಿಧಾನವಾಗಿ ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡುತ್ತ ತಮ್ಮತ್ತಲೇ ಬರುತ್ತಿದ್ದಾಳೆ. ಆ ಕತ್ತಲೆಯಲ್ಲಿ ಆಕೆಯ ಮುಖ ಸರಿಯಾಗಿ ಕಾಣಿಸುತ್ತಿಲ್ಲವಾದರೂ ಆಕೆಯ ಕಾಲ್ಗೆಜ್ಜೆಯ ಘಲ್ ಘಲ್ ಶಬ್ಧ ಮತ್ತಷ್ಟೂ ಸ್ಪಷ್ಟವಾಗಿ ಕೇಳುತ್ತಲೇ ಹೋಯಿತು.
ಊರಿಗೆ ಬಂದವಳು ನೀರಿಗೆ ಬಾರದಿರುವಳೇ ಎನ್ನುವಂತೆ ಆಕೆ ಹತ್ತಿರ ಬರುತ್ತಿದ್ದಂತೆಯೇ ರೀ.. ಇನ್ನು ಎಷ್ತು ಹೊತ್ತು? ಆಗಲೇ ಗಂಟೆ ಎಂಟಾಯ್ತು. ಎಲ್ಲಾರೂ ಹೋಗಾಯ್ತು ಎಂದಳು. ಅದಕ್ಕೆ ನಮ್ಮ ಪಕ್ಕದಲ್ಲಿದ್ದ ಒಬ್ಬ ವ್ಯಕ್ತಿ, ಈ ಸ್ವಾಮ್ಗಳು ಸ್ವಲ್ಪ ನಿಧಾನ. ಇನ್ನೊಂದು ಅರ್ಧಗಂಟೆ ಎಲ್ಲಾ ಮುಗ್ದೋಯ್ತದೆ. ಬಂದೇ ನಡೀ. ಅದಕ್ಕೆ ಈಟೊತ್ನಲ್ಲಿ ಇಲ್ಲಿ ಗಂಟಾ ಉಡಿಕ್ಕೊಂದು ಬಂದಾ? ಎಂದ. ಅಲ್ಲಿಯವರೆಗೆ ನಮ್ಮ ಪಕ್ಕದಲ್ಲಿದ್ದ ವ್ಯಕ್ತಿ ಚಾಂಡಾಳ(ಹೆಣ ಸುಡುವವ, ಸ್ಮಶಾನ ಕಾಯುವವ)ನೆಂದೂ ಹಾಗೆ ಘಲ್ ಘಲ್ ಎಂದು ಗೆಜ್ಜೆಯ ಸಪ್ಪಳ ಮಾಡಿಕೊಂಡು ಬಂದ ಹೆಂಗಸು ಆತನ ಧರ್ಮ ಪತ್ನಿಯೆಂದೂ, ಗಂಟೆ ಎಂಟಾದರೂ ಮನೆಗೆ ಬಾರದ ಪತಿರಾಯನನ್ನು ಹುಡುಕಿಕೊಂಡು ಬಂದಿದ್ದು ತಿಳಿದು ಎಲ್ಲರೂ ಉಸ್ಸಪ್ಪ ಎಂದು ನಿಟ್ಟಿಸಿರು ಬಿಟ್ಟರು. ಈ ಭಯಾನಕ ಸನ್ನಿವೇಶದಿಂದ ಬಾಯಿಗೆ ಬಂದಿದ್ದ ಕೆಲವರ ಹೃದಯ ಮತ್ತೆ ತನ್ನ ಯಥಾಸ್ಧಾನಕ್ಕೆ ಹಿಂದಿರುಗಿತು. ದುಗುಡ ದುಮ್ಮಾನಗಳಿಂದ ನೀರವವಾಗಿದ್ದ ಸಂಧರ್ಭದಲ್ಲಿ ಅಚಾನಕ್ಕಾಗಿ ಕೆಲ ಕ್ಷಣ ಎಲ್ಲರನ್ನೂ ಗಲಿ ಬಿಲಿ ಗೊಳಿಸಿ ಅಂತಿಮವಾಗಿ ನಿಜ ಗೊತ್ತಾದಾಗ ಆ ದುಃಖದ ನಡುವೆಯೂ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿದ್ದಂತೂ ಸುಳ್ಳಲ್ಲ.
ಅದಾದ ಸ್ವಲ್ಪ ಹೊತ್ತಿನಲ್ಲಿಯೇ ಅಂತಿಮ ವಿಧಿ ವಿಧಾನಗಳು ಮುಗಿದು ಚಿತೆಯನ್ನು ಚಟ್ಟಕ್ಕೇರಿಸಿ ಮೈಮೇಲಿದ್ದ ಎಲ್ಲಾ ವಸ್ತ್ರಗಳನ್ನೆಲ್ಲಾ, ಅದೂ ಉಡುದಾರ ಮತ್ತು ಜನಿವಾರಗಳನ್ನು ಒಳಗೊಂಡು ತೆಗೆದು ಹಾಕಿ ಕೇವಲ ಬಿಳಿ ವಸ್ತ್ರದಿಂದ ಮೈ ಮುಚ್ಚಿ ಗೋವಿಂದಾ ಗೋವಿಂದಾ ಎಂದು ಭಗವಂತನ ನಾಮ ಸ್ಮರಣೆ ಮಾಡುತ್ತಾ ಅಗ್ನಿಸ್ಪರ್ಷವಾಗುತ್ತಿದ್ದಂತೆಯೇ ಎರಡು ಶತಮಾನಗಳ ಕೊಂಡಿಯಾಗಿದ್ದ ಹಿರಿಯ ಜೀವ, ನಿರ್ಜೀವವಾಗಿ ಧಗಧಗನೆ ಪಂಚ ಭೂತಗಳಲ್ಲಿ ವಿಲೀನವಾಯಿತು. ಕತೃಗಳು ಹಿಂದಿರಿಗಿ ನೋಡದೆ ಅಲ್ಲಿಯೇ ಸ್ನಾನ ಮುಗಿಸಿ ನೇರವಾಗಿ ತಮ್ಮ ಮನೆಯ ಕಡೆ ನಡೆದರೆ, ಬಂದ ನೆಂಟರಿಷ್ಟ್ರರು ಅಲ್ಲಿಯೇ ಕೈಕಾಲು ತೊಳೆದುಕೊಂಡು ತಮ್ಮ ತಮ್ಮ ಮನೆಯತ್ತ ತೆರಳಿದರು. ನಾನು ಕೂಡಾ ಭಾರವಾದ ಹೃದಯದಿಂದ ಅಗಲಿದ ಹಿರಿಯ ಜೀವಕ್ಕೆ ಮನಸ್ಸಿನಲ್ಲಿಯೇ ಶ್ರದ್ಧಾಂಜಲಿ ಸಲ್ಲಿಸುತ್ತಾ, ಅವರ ಜೀವಕ್ಕೆ ಶಾಶ್ವತ ಮುಕ್ತಿಯನ್ನು ಕೊಡು ಮತ್ತು ಅವರ ಮನೆಯವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡು ಎಂದು ಭಗಂತನಲ್ಲಿ ಕೇಳುತ್ತಾ ಹೊರಟಾಗ ಗಂಟೆ ಹತ್ತಾಗಿತ್ತು. ಮನೆಯನ್ನು ತಲುಪಿಯಾಗಿತ್ತು.
ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಬಂದು ಹೋಗುವ ನಡುವೆ, ಬರೀ ಕತ್ತಲೆ ಭಕ್ತಿಯ ಬೆಳಕು, ಬಾಳಿಗೆ ಬೇಕು ಮುಕ್ತಿಗೆ ಎಂಬ ರಾಜಕುಮಾರ್ ಅಭಿನಯದ ಭಕ್ತ ಕಂಬಾರ ಚಿತ್ರದ ಹಾಡು ನೆನಪಿಗೆ ಬಂದಿತು. ಹುಟ್ಟುವಾಗ ಉಸಿರು ಇರುತ್ತದೆ ಹೆಸರು ಇರುವುದಿಲ್ಲ. ಬದುಕಿರುವಾಗ ಉಸಿರು ಮತ್ತು ಹೆಸರು ಎರಡೂ ಇರುತ್ತದೆ. ಸತ್ತಾಗ ಉಸಿರು ಮತ್ತು ಹೆಸರು ಎರಡೂ ಇರುವುದಿಲ್ಲ ಅದು ಕೇವಲ ಹೆಣವಾಗಿರುತ್ತದೆ. ಹಾಗೊಂದು ಬಾರಿ ಸತ್ತಮೇಲೂ ಹೆಸರು ಉಳಿಯಬೇಕೆಂದರೆ ಆತ ಮಹಾನ್ ವ್ಯಕ್ತಿಯೇ ಆಗಿರಬೇಕು ಮತ್ತು ಮಹಾನ್ ಸಾಧನೆ ಮಾಡಿರಲೇ ಬೇಕು. ಖಂಡಿತವಾಗಿಯೂ ಸತ್ತ ಮೇಲೂ ಶ್ರೀಯುತ ರಾಮಚಂದ್ರ ರಾಯರ ಹೆಸರು ಶಾಶ್ವತವಾಗಿ ಅಜರಾಮರವಾಗಿತ್ತದೆ. ಭೌತಿಕವಾಗಿ ಅವರು ನಮ್ಮನ್ನಿಂದು ಅಗಲಿರಬಹುದು ಆದರೆ ಮಾನಸಿಕವಾಗಿ ಸದಾಕಾಲವೂ ನಮ್ಮೊಂದಿಗೆ ಇದ್ದೇ ಇರುತ್ತಾರೆ. ಅವರ ಅನುಪಸ್ಥಿತಿ ನಮ್ಮನ್ನು ಕಾಡುತ್ತದಾದರೂ ಅವರ ಆಶೀರ್ವಾದ ನಮ್ಮನ್ನು ಸದಾ ಕಾಪಾಡುತ್ತಲೇ ಇರುತ್ತದೆ.
ಏನಂತೀರಿ.
ಶೋಕದ ಪರಿಸ್ಥಿತಿಯ ಗಂಭೀರತೆ, ಘಲ್ ಘಲ್ ಶಬ್ಧದಿಂದ ಉಂಟಾದ ಕಳವಳ, ಸ್ಮಶಾನಕ್ಕೆ ಗೆಜ್ಜೆ ಕಟ್ಟಿಕೂಂಡು ಬಂದು ಓಡಾಡುವ ಮೌಢ್ಯ, ವಿಷಯ ಅರ್ಥವಾದಾಗ ಆದ ನೆಮ್ಮದಿ, ದಿವಂಗತರ ಬಗ್ಗೆ ವ್ಯಕ್ತ ಪಡಿಸಿರುವ ಗೌರವ, ಅಭಿಮಾನ, ಎಲ್ಲವನ್ನೂ ಉತ್ತಮವಾಗಿ ಲೇಖನದಲ್ಲಿ ಮೂಡಿಬಂದಿದೆ. ಅಭಿನಂದನೆಗಳು. 👌👏👏💐🌹
LikeLiked by 1 person
ಶ್ರೀಕಂಠ ನಿಜವಾಗಿಯೂ ನಿನ್ನ ಸ್ನೇಹಿತನಾಗಿ ಪಡೆದಿದ್ದು ನನ್ನ ಸುಕೃತದ ಫಲ ಎಂದರೆ ಅತಿಶಯೋಕ್ತಿಯಲ್ಲ. ನನ್ನ ಅಜ್ಜನ ಮೇಲೆ ನಿನಗಿರುವ ಅಭಿಮಾನ ಮತ್ತು ಪ್ರೀತಿ ಆದರ ಕಂಡು ನಿನ್ನ ಮೇಲಿನ ಗೌರವ ಅಧಿಕವಾಯಿತು. ನಾನು ಎಂದೋ ತಿಳಿಸಿದ ಸಣ್ಣ ಪುಟ್ಟ ವಿಷಯ ಸಹ ನಿನ್ನ ಮನದಲ್ಲಿ ಅಚ್ಚೊತ್ತಿ ಚಿಂತನ ಮನನವಾಗಿ ಪದಗಳ ರೂಪದಲ್ಲಿ ಶ್ರದ್ಧಾಂಜಲಿ ಸಲ್ಲಿಸಿರುವುದು ನೀನು ಗ್ರಹಿಸುವ ಶಕ್ತಿ ಮತ್ತು ಮನಃಪೂರ್ವಕವಾಗಿ ಎದುರಿರುವ ವ್ಯಕ್ತಿಯ ಮಾತುಗಳನ್ನು ಆಲಿಸುವುದರ ಸಾಕ್ಷಿ. ನನ್ನ ಮನಸ್ಸಿನಲ್ಲಿ ನೆನ್ನೆಯಿಂದ ಹೊಯ್ದಾಡುತ್ತಿರುವ ಎಲ್ಲ ಭಾವನೆಗಳೂ ಇಲ್ಲಿ ವ್ಯಕ್ತವಾಗಿದೆ ಅದೂ ನಾವು ಕೇವಲ ಕೆಲವು ನಿಮಿಷಗಳ ಕಾಲ ಮೊಬೈಲ್ ನಲ್ಲಿ ಮಾತಾಡಿದಷ್ಟೇ. ನಮ್ಮ ಅಜ್ಜನ ಬಗ್ಗೆ ಇನ್ನೊಂದೆರಡು ವಿಷಯ ತಿಳಿಸಲು ಬಯಸುತ್ತೇನೆ, ನಿನಗೆ ಗೊತ್ತಿರುವ ಹಾಗೆ ಉತ್ತಮ ದೇಹದಾರ್ಢ್ಯ ಹೊಂದಿದ್ದ ಅವರು ಸದಾ ಚುರುಕಾಗಿ ಕೆಲಸ ಮಾಡುವುದು, ಯಾವಾಗಲೂ ಶ್ವೇತ ವಸ್ತ್ರಧಾರಿಯಾಗಿದ್ದ ಅವರು ಇತ್ತೀಚಿನ ದಿನಗಳವರೆಗೂ ತಮ್ಮ ಬಟ್ಟೆ ತಾವೇ ಒಗೆಯುತ್ತಿದ್ದರು. ಉತ್ತಮ ವಾಲೀಬಾಲ್ ಆಟಗಾರಾಗಿದ್ದ ಅವರು ಜಿಲ್ಲಾ ತಂಡದ ಸದಸ್ಯರೂ ಆಗಿದ್ದರು. ಊಟ, ನಿದ್ದೆ , ದೈನಂದಿನ ಎಲ್ಲ ಚಟುವಟಿಕೆಗಳಲ್ಲಿ ಶಿಸ್ತಿನ ಸಿಪಾಯಿಯಾಗಿದ್ದ ಅವರು ಆಧ್ಯಾತ್ಮಿಕ ಕಾರ್ಯಗಳನ್ನು ನಿಷ್ಠೆ ಮತ್ತು ಪ್ರಜ್ಞಾಪೂರ್ವಕವಾಗಿ ನಡೆಸಿಕೊಂಡು ಬಂದಿದ್ದರು. ತಮ್ಮ ಹುಟ್ಟೂರಾದ ಯಗವಕೋಟೆಯ ವೀರನಾರಾಯಣನ ಭಕ್ತನಾಗಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಹಳಷ್ಟು ಕಾಯಾ ವಾಚಾ ಮನಸಾ ದುಡಿದಿದ್ದರು. ೯೫ರ ಇಳಿ ವಯಸ್ಸಿನಲ್ಲಿ ಅನಂತದೆಡೆ ನಡೆದು ಸಂಪೂರ್ಣ ಜೀವನ್ಮುಖಿ ಸಾಧನೆಯ ಫಲ ನಮಗೆ ಪರಿಚಯಿಸಿದ್ದಾರೆ ಎಂದು ನನ್ನ ಭಾವನೆ.
LikeLiked by 1 person
ಓಂ ಶಾಂತಿಃ ಶಾಂತಿಃ ಶಾಂತಿಃ. ನಿಮ್ಮ ಲೇಖನಗಳಲ್ಲಿ ಯಾವುದೋ ಒಂದು ಎಳೆ ನಮ್ಮನ್ನು ಬಿಡದೆ ಕಟ್ಟಿಹಾಕಿದಹಾಗೆ ಪೂರ್ಣ ಲೇಖನ ಓದಿಸಿಕೊಂಡುಹೋಗುತ್ತದೆ. ಆ ಹಿರಿಯರನ್ನ ಹತ್ತಿರದಲ್ಲೇ ಕಂಡಹಾಗೆ ಭಾಸವಾಯಿತು.
LikeLiked by 1 person
ತಾತನವರ ಆತ್ಮಕ್ಕೆ ಭಗವಂತ ಚಿರ ಶಾಂತಿ ಕರುಣಿಸಲಿ
ಶೋಕಭರಿತ ಸನ್ನಿವೇಶವನ್ನು ತುಂಬು ಮನದಿಂದ ಚಿತ್ರಿಸಿರುವ ನಿಮಗಿದೋ ನನ್ನದೊಂದು ಮನಃ ಪೂರ್ವಕ ನಮಸ್ಕಾರ
LikeLiked by 2 people