ಕೆಲ ವರ್ಷಗಳ ಹಿಂದೆ ಹೊರಗೆಲ್ಲೋ ಹೋಗಿದ್ದಾಗ ಬಾಯರಡಿಕೆಯಾದಾಗ, ಸೀದಾ ಯಾವುದಾದರೂ ಹೋಟೆಲ್ಗಳಿಗೆ ಹೋಗಿ ಯಾರನ್ನೂ ಕೇಳದೇ ನೀರನ್ನು ಕುಡಿದು ಬರಬಹುದಾಗಿತ್ತು. ಅದೇ ರೀತಿ ಯಾವುದೇ ಅಪರಿಚಿತರ ಮನೆಯ ಕದವನ್ನು ತಟ್ಟಿ ಕುಡಿಯಲು ನೀರನ್ನು ಕೇಳಿದರೆ, ನಿಸ್ಸಂಕೋಚವಾಗಿ ನೀರನ್ನು ಕೊಡುತ್ತಿದ್ದರು. ಇನ್ನೂ ಕೆಲವರ ಮನೆಯವರು ನೀರಿನ ಜೊತೆ ಬೆಲ್ಲವನ್ನೂ ಕೊಡುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದರು. ಅದೂ ಇಲ್ಲದೇ ಹೋದಲ್ಲಿ, ಅನೇಕ ಸಂಘಸಂಸ್ಥೆಗಳು ನಗರದ ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಅರವಟ್ಟಿಕೆಗಳನ್ನು ಸ್ಥಾಪಿಸಿ ಎಲ್ಲರ ನೀರಡಿಕೆಯನ್ನು ನೀಗಿಸುತ್ತಿದ್ದರು. ಆದರೆ ಇಂದು ಅವೆಲ್ಲವೂ ಸಂಪೂರ್ಣವಾಗಿ ಬದಲಾಗಿ ಹೋಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಕೆಲ ದಿನಗಳ ಹಿಂದೆ ಮೈಸೂರಿನ ಹೋಟೆಲ್ ಒಂದರಲ್ಲಿ ತಿಂಡಿ ತಿಂದ ನಂತರ ಕುಡಿಯಲು ನೀರು ಕೇಳಿದರೆ, ಆ ಹೋಟೆಲ್ಲಿನವರು ಎಂದಿನಂತೆ ಲೋಟದಲ್ಲಿ ನೀರನ್ನು ತಂದು ಕೊಡದೇ, Packed Water Bottle ತಂದು ಕೊಟ್ಟರಂತೇ. ಅಯ್ಯಾ ನನಗೆ ಈ ರೀತಿಯಾದ ಬಾಟಲ್ ನೀರು ಬೇಡ ಶುದ್ಧವಾದ ಸಾಧಾರಣವಾಗಿ ಎಲ್ಲರೂ ಕುಡಿಯುವ ನೀರನ್ನು ತಂದು ಕೊಡಿ ಎಂದಾಗ, ಅಂತಹ ಶುದ್ಧ ನೀರು ನಮ್ಮಲ್ಲಿಲ್ಲ ಎಂದು ಜೋರಾಗಿಯೇ ಗದರಿಸಿ ಹೇಳಿದರಂತೆ ಆ ಹೋಟೆಲ್ಲಿನವರು. ಈ ಕುರಿತಂತೆ ರಾಜ್ಯಾದ್ಯಂತ ಎಲ್ಲಾ ಮಾಧ್ಯಮಗಳಲ್ಲಿಯೂ ವೈರಲ್ ಆಗಿ ಆ ಹೋಟೆಲ್ ವಿರುದ್ಧ ಪ್ರತಿಭಟನೆ ನಡೆಸಿದ್ದು ಈಗ ಇತಿಹಾಸ.
ನಿಜ ಹೇಳಬೇಕೆಂದರೆ, ಇದು ವಾಸ್ತವದ ಕಠು ಸತ್ಯವೇ ಆಗಿದೆ ಇಂದು ಶುದ್ಧವಾದ ನೀರು ಉಚಿತವಾಗಿ ಸಿಗುವುದೇ ದುರ್ಲಭವಾಗಿ ಹೋಗಿರುವುದು ನಿಜಕ್ಕೂ ಆತಂಕವಾಗಿದೆ. ನೀರು ಸಕಲ ಜೀವರಾಶಿಗಳಿಗೆ ಅತ್ಯಾವಶ್ಯಕವಾದದ್ದು. ಒಂದು ಪಕ್ಷ ಆಹಾರವಿಲ್ಲದೇ ಬದುಕ ಬಹುದೇನೋ? ಆದರೆ ನೀರಿಲ್ಲದೆ ಜೀವನವನ್ನು ಊಹಿಸಲೂ ಅಸಾಧ್ಯ. ಎಲ್ಲರ ಪ್ರಾತರ್ವಿಧಿಯಿಂದ ಹಿಡಿದು ರಾತ್ರಿ ಮಲಗುವ ವರೆಗೆ ನೀರು ಮನುಷ್ಯರ ಜೀವನಾವಶ್ಯಕವಾಗಿದೆ. ಇನ್ನೂ ಕೃಷಿ, ಹೈನುಗಾರಿಕೆ ಮತ್ತಾವುದೇ ಉದ್ಯೋಗಗಳೇ ಆಗಲಿ ಅದು ಒಂದಲ್ಲಾ ಒಂದು ರೀತಿಯಿಂದ ಅದು ನೀರಿನ ಮೇಲೆ ಅವಲಂಭಿತವಾಗಿದೆ. ಇಡೀ ಭೂ ಮಂಡಲದ ಶೇ 60ಕ್ಕೂ ಹೆಚ್ಚಿನ ಭಾಗ ಜಲಾವೃತವಾಗಿದ್ದರೂ ಇಡೀ ವಿಶ್ವದಲ್ಲಿ ಇಂದು ನೀರಿಗೆ ಹಾಹಾಕಾರವಾಗಿರುವುದು ನಿಜಕ್ಕೂ ಕಳಕಳಕಾರಿಯಾಗಿದೆ.
ಭಾರತದಲ್ಲಿ ಗಂಗಾ, , ಯಮುನಾ, ಗೋದಾವರಿ, ಸರಸ್ವತಿ,ನರ್ಮದಾ, ಸಿಂಧೂ, ಕಾವೇರಿ ಬ್ರಹ್ಮಪುತ್ರ, ಕೃಷ್ಣಾ, ಶರಾವತಿ, ತುಂಗಭದ್ರಾ ಇನ್ನೂ ಮುಂತಾದ ಅನೇಕ ನದಿಗಳು ನಮ್ಮ ದೇಶಾದ್ಯಂತ ಹರಿಯುತ್ತವಾದರೂ ಈ ರೀತಿಯ ನೀರಿನ ಬರಕ್ಕೆ ಕಾರಣವೇನು ಎಂದು ಯೋಚಿಸಿ ನೋಡಿದಲ್ಲಿ, ಈ ಎಲ್ಲಾ ನದಿಗಳಲ್ಲಿ ಅಂದಿನ ಸೊಬಗು ಇಂದು ಮಾಯವಾಗಿದೆ. ಹರಿಯುತ್ತಿರುವ ನೀರಿನ ಪ್ರಮಾಣವೂ ಅತ್ಯಂತ ಗಣನೀಯವಾಗಿ ಕಡಿಮೆಯಾಗಿದೆ. ಹಿಮಾಲಯ ತಪ್ಪಲು ಪ್ರದೇಶಗಳಲ್ಲಿ ಉಗಮವಾಗಿ ಹರಿಯುವ ಕೆಲವು ಪ್ರಮುಖ ನದಿಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ನದಿಗಳು ಮಳೆಯನ್ನೇ ಆಶ್ರಯಿಸಿವೆ. ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣವೂ ಗಣನೀಯವಾಗಿ ಕಡಿಮೆಯಾದ ಪರಿಣಾಮವಾಗಿಯೇ ಇಂದು ಹಲವಾರು ನದಿಗಳು ಕೇವಲ ಮಳೆಗಾಲದಲ್ಲಿ ಮಾತ್ರವೇ ಪ್ರಸ್ತುತವಾಗಿದ್ದು ಉಳಿದ ಸಮಯದಲ್ಲಿ ಬತ್ತಿ ಹೋಗುತ್ತಿರುವುದು ನೀರಿನ ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗಿವೆ.
ನದಿಗಳು ತುಂಬಿ ಹರಿಯುತ್ತಿದ್ದಲ್ಲಿ ನದಿ ಪಾತ್ರಗಳ ಪ್ರದೇಶಗಳ ಕರೆ ಕಟ್ಟೆಗಳು ತುಂಬುತ್ತವೆ. ಕೆರೆ ಕಟ್ಟೆಗಳು ತುಂಬಿದ್ದಲ್ಲಿ ಸಹಜವಾಗಿ ಅ ಭಾಗಗಳಲ್ಲಿ ಅಂತರ್ಜಲ ಉತ್ತಮವಾಗಿದ್ದು ಜೀವನ ಅವಶ್ಕಕ್ಕೆ ಮತ್ತು ಕೃಷಿಗೆ ಅಗತ್ಯವಾದ ನೀರು ದೊರಕಿ ಎಲ್ಲವೂ ಸುಭಿಕ್ಷವಾಗಿರುತ್ತವೆ. ಹಾಗೆ ನದಿಗಳು ತುಂಬಿ ಹರಿಯಬೇಕಿದ್ದಲ್ಲಿ ಮಳೆಯ ಅವಶ್ಯಕವಿದೆ. ಸರಿಯಾದ ಸಮಯದಲ್ಲಿ ಸರಿಪ್ರಮಾಣದ ಮಳೆ ಸುರಿಯಲು ಗಿಡ ಮರಗಳ ಅವಶ್ಯಕವಿದೆ. ಭೂಮಿಯ ಮೇಲಿನ ನೀರು ಆವಿಯಾಗಿ ಮೋಡಗಳಾಗಿ ಮಾರ್ಪಾಡಗಿರುವುದನ್ನು ಈ ಎತ್ತರೆತ್ತರದ ಮರಗಿಡಗಳು ಆಕರ್ಷಿಸಿ ನಿಲ್ಲಿ ಮೋಡಗಳೇ, ಎಲ್ಲಿ ಹೋಗುವಿರಿ ನಾಲ್ಕು ಹನಿಯ ಚೆಲ್ಲೀ ಎಂಬ ಕವಿ ಶಿವರುದ್ರಪ್ಪನವರ ಕವಿತೆಯಂತೆ ಮಳೆ ಸುರಿಸುತ್ತವೆ. ಇಳೆಯನ್ನು ತಂಪಾಗಿಸುತ್ತವೆ.
ದುರದೃಷ್ಟವಶಾತ್ ನದಿ ಪಾತ್ರಗಳಲ್ಲಿ ಮರಗಳ್ಳರ ಹಾವಳಿ ಹೆಚ್ಚಾದ ಪರಿಣಾಮ ಸದ್ದಿಲ್ಲದೆ ಮರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾದ ಪರಿಣಾಮ ಆ ನದೀ ಪಾತ್ರಗಳಲ್ಲಿ ಸರಿಯಾಗಿ ಮಳೆಯೇ ಆಗುತ್ತಿಲ್ಲ. ಮಳೆಯೇ ಆಗದಿದ್ದರೆ ಇನ್ನು ನದಿಗಳು ತುಂಬುವುದು ಎಲ್ಲಿಂದ ಬಂತು? ನದಿಗಳೇ ತುಂಬದಿದ್ದರೆ ಕೆರೆ ಕಟ್ಟೆಗಳಿಗೆ ನೀರು ಎಲ್ಲಿಂದ ಬರಬೇಕು? ಮಾನವ ತನ್ನ ದುರಾಸೆಯಂದ ನಿತ್ಯಹರಿದ್ವರ್ಣ ಕಾಡುಗಳನ್ನು ಬರಿದು ಮಾಡುತ್ತಾ ಕಾಂಕ್ರೀಟ್ ನಾಡನ್ನು ಕಟ್ಟುವ ಭರದಲ್ಲಿ ನದಿ ಪಾತ್ರಗಳ ಮರಳನ್ನು ಸದ್ದಿಲ್ಲದೆ, ಎಗ್ಗಿಲ್ಲದೆ ದೋಚುತ್ತಿರುವ ಪರಿಣಾಮವೂ ನೀರಿನ ಆಭಾವಕ್ಕೆ ಕಾರಣವಾಗಿದೆ. ಇನ್ನು ಅಲ್ಪ ಸ್ವಲ್ಪ ಹರಿಯುವ ನದಿಗಳಿಗೆ ಅಥವಾ ಕೆರೆಗಳಿಗೆ ವಿವಿಧ ಕಾರ್ಖಾನೆಗಳ ಮತ್ತು ಜನರ ತ್ಯಾಜ್ಯದ ನೀರನು ಹರಿಸಿ ನೀರನ್ನು ಮಲಿನಗೊಳಿಸುತ್ತಿರುವ ಪರಿಣಾಮ ಅಂತಹ ನೀರು ಕಲುಷಿತಗೊಂಡು ಕುಡಿಯಲು ಮತ್ತು ಬಳೆಸಲು ಅಯೋಗ್ಯವಾಗುತ್ತಿರುವುದು ಮಾರಕವಾಗಿದೆ.
ಸುಮಾರು ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಕೇವಲ ಎಂಟು ಹತ್ತು ಅಡಿ ಭಾವಿ ತೋಡಿದರೆ ಸಾಕಷ್ಟು ದೊರಕುತ್ತಿದ್ದ ನೀರು ಇಂದು ಸಾವಿರಾರು ಅಡಿಗಳಷ್ಟು ಕೊರೆದರೂ ಕೊಳವೆ ಭಾವಿಗಳಲ್ಲಿ ಚಿಲುಕು ನೀರು ದೊರೆಯುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ. ಇದೇ ರೀತಿ ಮುಂದುವರಿದರೆ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ನೀರು ಸಂಪೂರ್ಣವಾಗಿ ಬಟ್ಟ ಬರಿದಾಗುವ ಅಪಾಯವೇ ಕಣ್ಣ ಮುಂದಿದೆ. ಈ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇ? ಇದೆ. ಖಂಡಿತವಾಗಿಯೂ ಈ ಸಮಸ್ಯೆಗೆ ನಮ್ಮಲ್ಲಿಯೇ ಪರಿಹಾರವಿದೆ. ಅದರೆ ಅದಕ್ಕಾಗಿ ನಮ್ಮ ಜೀವನ ಶೈಲಿಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಿದೆ.
ಮೊಟ್ಟ ಮೊದಲಿಗೆ ಅಗತ್ಯವಿದ್ದಷ್ಟೇ ನೀರನ್ನು ಬಳಸಬೇಕಿದೆ. ಸ್ನಾನ ಮಾಡಲು, ಶೌಚಾಲಯಗಳಲ್ಲಿ, ಪಾತ್ರೆ ತೊಳಯಲು, ಬಟ್ಟೆ ಒಗೆಯುವಾಗ ಧಾರಳವಾಗಿ ನೀರನ್ನು ಬಳೆಸದೆ ಎಷ್ಟು ಬೇಕೋ ಅಷ್ಟನ್ನೇ ಬಳಸುವ ಅಭ್ಯಾಸ ರೂಡಿಸಿಕೊಳ್ಳ ಬೇಕಾಗಿದೆ. ಹಿಂದಿನ ಕಾಲದಲ್ಲಿ ಈ ರೀತಿಯಾಗಿ ಬಳೆಸಿದ ಎಲ್ಲಾ ನೀರೂ, ಮನೆಯ ಹಿಂದಿನ ಹಿತ್ತಲಿಗೆ ಹೋಗುತ್ತಿತ್ತು. ಆಹಿತ್ತಲಿನಲ್ಲಿಯೇ ಸುಂದರವಾದ ಕೈತೋಟವಿದ್ದು, ಅಲ್ಲಿ ಮನೆಗೆ ಬೇಕಾದ ಹಣ್ಣು ವಿಶೇಷವಾಗಿ ಬಾಳೆಹಣ್ಣು, ವಿವಿಧ ತರಕಾರಿಗಳು ಹೂವಿನ ಗಿಡಗಳನ್ನು ಹಾಗಿ ಬಳೆಸಿದ ನೀರನ್ನು ಮರುಬಳಕೆ ಮಾಡುತ್ತಿದ್ದರು. ಇಂದು ಎಲ್ಲವನ್ನೂ ಒಳ ಚೆರಂಡಿಗೆ ಹಾಯಿಸಿ ನೀರನ್ನು ವ್ಯರ್ಥ ಮಾಡದೆ ಮೊದಲಿನಂತೆಯೇ ಉಪಯೋಗ ಮಾಡಿಕೊಳ್ಳಬೇಕಾಗಿದೆ.
ಹಿಂದೆ ಯಾವುದೇ ಪಾಳೇಗಾರರಿರಲಿ, ಸಾಮಂತರಿರಲಿ ಇಲ್ಲವೇ ರಾಜ ಮಹಾರಾಜರುಗಳೇ ಇರಲಿ ಪ್ರತೀ ನಾಲ್ಕೈದು ಹಳ್ಳಿಗಳ ಮಧ್ಯೆ ಒಂದು ದೊಡ್ಡದಾದ ಕೆರೆಯನ್ನು ನಿರ್ಮಿಸಿ ಎಲ್ಲಾ ಹಳ್ಳಿಗಳಿಂದಲೂ ರಾಜ ಕಾಲುವೆಗಳ ಮುಖಾಂತರ ಮಳೆಯ ನೀರೆಲ್ಲವೂ ಆ ಕೆರೆಯನ್ನು ತುಂಬಿಸುವುದರ ಮೂಲಕ ಆ ಎಲ್ಲಾ ಹಳ್ಳಿಗಳ ನೀರಿನ ಅವಶ್ಯಕತೆಗಳನ್ನು ಪೂರೈಸುತ್ತಿದ್ದರು. ಆದರೆ ಇಂದು ಇದ್ದ ರಾಜಕಾಲುವೆ ಮತ್ತು ಕೆರೆಗಳನ್ನೆಲ್ಲಾ ಮುಚ್ಚಿ ದೊಡ್ದದೊಡ್ಡ ಗಗನಚುಂಬಿ ಕಟ್ಟಡಗಳನ್ನು ಕಟ್ಟಿರುವುದರಿಂದಲೇ ನೀರಿಗೆ ಹಾಹಾಕಾರವಾಗಿದೆ. ಅಳಿದುಳಿದಿರುವ ಕೆರೆ ಕಟ್ಟೆಗಳ ಹೂಳನ್ನು ಎತ್ತಿಸಿ, ದಂಡೆಗಳನ್ನು ಭದ್ರಪಡಿಸಿ ರಾಜಕಾಲುವೆಗಳನ್ನು ಒತ್ತುವರಿಯನ್ನು ತೆರವು ಮಾಡಿಸಿ ಮಳೆ ನೀರು ಸರಾಗವಾಗಿ ಹರಿದು ಕೆರೆ ಕಟ್ತೆಗಳನ್ನು ತುಂಬುವಂತೆ ಮಾಡಬೇಕಿದೆ.
ದೇಶಾದ್ಯಂತ ಎಲ್ಲರ ಮನೆಗಳಲ್ಲಿಯೂ ಖಡ್ಡಾಯವಾಗಿ ಮಳೆಯ ನೀರಿನ ಕೊಯ್ಲಿನ ಪದ್ದತಿಯನ್ನು ಅಳವಡಿಸಿಕೊಂಡು ಮನೆಯ ಮಾಳಿಗೆಯ ಮೇಲೆ ಬಿದ್ದ ಪ್ರತಿ ಹನಿ ನೀರನ್ನೂ ಸಂಗ್ರಹಿಸಿ ಅದರ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಹಾಗೆ ಹೆಚ್ಚಾದ ಮಳೆ ನೀರನ್ನು ಅಲ್ಲಿಯೇ ಇಂಗು ಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ಹೆಚ್ಚಿಸಿಕೊಳ್ಳಬಹುದಾಗಿದೆ.
ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಎಲ್ಲರ ಮನೆಯ ಮುಂದೆಯೂ ಖಡ್ಡಾಯವಾಗಿ ಮರಗಳನ್ನು ನೆಟ್ಟು ಅದರ ಸಂಪೂರ್ಣ ಪೋಷಣೆಯ ಜವಾಬ್ದಾರಿ ಅವರದ್ದೇ ಆಗಬೇಕಿದೆ. ಹಾಗೆ ಮರ ಗಿಡಗಳನ್ನು ನೆಡುವುದರಿಂದ ಶುಧ್ಧವಾದ ಆಮ್ಲಜನಕವನ್ನು ನಮ್ಮಲ್ಲೇ ಪಡೆಯಬಹುದಲ್ಲದೆ ಆ ಮರಗಳು ಅನೇಕ ಪಕ್ಷಿಗಳ ಆಶ್ರಯ ತಾಣವಾಗುವುದಲ್ಲದೇ, ಮೋಡಗಳನ್ನು ಆಕರ್ಷಿಸಿ ಮಳೆಯನ್ನು ಸುರಿಸಬಲ್ಲದಾಗಿದೆ.
ಕಳೆದ ವಾರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ಉಧ್ಘಾಟಿಸಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಬಳಿಯ ಉಜಿರೆಗೆ ಹೋಗಿದ್ದಾಗ ಬೇಸಿಗೆಯ ಸಮಯದಲ್ಲಿ ನೀರಿನ ಅಭಾವದಿಂದಾಗಿ ಎಷ್ಟೋ ಹೋಟೆಲ್ಲುಗಳು ಮುಚ್ಚಿಬಿಡುತ್ತದಲ್ಲದೇ, ನೀರಿನ ಅಭಾವದಿಂದಾಗಿಯೇ ಧರ್ಮಸ್ಥಳ, ಕುಕ್ಕೆ ಮತ್ತು ಉಡುಪಿ ಶ್ರೀ ಕ್ಷೇತ್ರಗಳಿಗೆ ದಯವಿಟ್ಟು ಬಾರದಿರಿ ಎಂದು ಧರ್ಮಾಧಿಕಾರಿಗಳೇ ಭಕ್ತಾದಿಗಳನ್ನು ವಿನಂತಿಸಿಕೊಳ್ಳುವ ವಿಷಯ ತಿಳಿದು ಬಹಳ ಅಚ್ಚರಿ ಮೂಡಿಸಿದ್ದಂತೂ ಸುಳ್ಳಲ್ಲ. ಅಂತಹ ಅಂತಹ ಮಲೆನಾಡಿನ ನಿತ್ಯಹರ್ದ್ವರ್ಣ ಪ್ರದೇಶಗಳಲ್ಲಿಯೇ ನೀರಿಗೆ ಈ ಪರಿಯ ಅಭಾವವಾದರೇ ಸಾವಿರಾರು ಅಡಿಗಳಷ್ಟು ಕೊಳವೇ ಭಾವಿಗಳನ್ನು ಕೊರೆದು ಅಂತರ್ಜಲವನ್ನೇ ಬರಿದು ಮಾಡುತ್ತಿರುವ ನಗರ ಪ್ರದೇಶಗಳ ಪರಿಸ್ಥಿತಿ ಹೇಗಾಗಬಹುದು ಎಂಬುದನ್ನು ಊಹಿಸಿಕೊಳ್ಳಲೂ ಕಷ್ಟವಾಗುತ್ತದೆ.
ಮಾರ್ಚ್ 22 ವಿಶ್ವನೀರಿನ ದಿನ. ನೀರನ್ನು ಸದ್ಬಳಕೆ ಮಾಡಿಕೊಳ್ಳುವುದು ಕೇವಲ ಇದೊಂದೇ ದಿನಕ್ಕೆ ಸೀಮಿತವಾಗಿರದೆ ಪ್ರತಿ ದಿನವೂ, ಪ್ರತಿಕ್ಷಣವೂ ನಮ್ಮ ಮನಸ್ಸಿನಲ್ಲಿ ಗಮನವಿಟ್ಟು ಕೊಂಡು ಎಲ್ಲೆಲ್ಲಿ ಎಷ್ಟು ಸಾಧ್ಯವೋ ಅಷ್ಟು ನೀರನ್ನು ಅತ್ಯಗತ್ಯವಾಗಿ ಉಳಿಸಬೇಕಾದ ಜವಾಬ್ಧಾರಿ ನಮ್ಮ ಮೇಲಿಯೇ ಇದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಗರ ಈಗಾಗಲೇ ಅಕ್ಷರಶಃ ನೀರಿಲ್ಲದ ನಗರ ಎಂದು ಘೋಷಿಸಲಾಗಿದೆ ಮತ್ತು ಅದೇ ರೀತಿ ನಮ್ಮ ದೇಶದಲ್ಲೂ 21 ನಗರಗಳಲ್ಲಿ ಅಂತರ್ಜಲ ಸಂಪೂರ್ಣವಾಗಿ ಬತ್ತಿಹೋಗಿದೆ ಎಂದು ಫೋಷಿಸಲಾಗಿದೆ. ಮಿಂಚಿ ಹೋದರೆ ಚಿಂತಿಸಿ ಫಲವಿಲ್ಲ ಎಂಬಂತೆ, ಪ್ರತಿ ಹನಿ ಹನಿ ನೀರನ್ನೂ ಸರಿಯಾದ ರೀತಿಯಲ್ಲಿ ಬಳಸದೇ, ಉಳಿಸದೇ ಹೋದಲ್ಲಿ , ಮುಂದೆ ನೀರಲ್ಲ, ಕಣ್ಣೀರನ್ನೂ ಸುರಿಸಲು ಆಗದಂತಹ ಪರಿಸ್ಥಿತಿ ಬರುವ ಎಲ್ಲ ಸಂಭವೂ ಹೆಚ್ಚಾಗಿದೆ. ಹಾಗಾಗಿ ಹನಿ ಹನಿ ಗೂಡಿದರೆ ಹಳ್ಳ ಎನ್ನುವಂತೆ ನಾವು ಬಳಸುವ ಪ್ರತಿಯೊಂದು ಹನಿ ಹನಿ ನೀರನ್ನೂ ಎಚ್ಚರಿಕೆಯಂದ ಬಳಸುವ ಮೂಲಕ ಮುಂದಿನ ಪೀಳಿಗೆಗೆ ನೀರನ್ನು ಉಳಿಸಲೇ ಬೇಕಿದೆ.
ಏನಂತೀರೀ?
ನಿಮ್ಮವನೇ ಉಮಾಸುತ
ಉತ್ತಮವಾದ ಲೇಖನ,
ನಾನು ಹಲವು ವರ್ಷಗಳ ಹಿಂದೆ ನಮ್ಮ ಊರಿಗೆ ಹೋಗುವ ದಾರಿಯಲ್ಲಿ ಸಣ್ಣದೊಂದು ತೊರೆ ಹರಿಯುತ್ತಿತ್ತು, ಈ ತೊರೆ ಸದಾಕಾಲವೂ ಅಂದರೆ ವರ್ಷದ ೧೨ ತಿಂಗಳು ನೀರು ಹರಿಯುತ್ತ ಸದಾ ಸುತ್ತ ಮುತ್ತಲಿನ ತೋಟ, ಗದ್ದೆ ಹಸಿರು ನಿಂದ ಕಾಣುತ್ತಿತ್ತು , ಆಗೆ ಊರಿಗೆ ಬರುವಾಗ ಎತ್ತಿನಗಾಡಿಯ ಚಕ್ರ ಕಾಲುಭಾಗ ನೀರಿನಲ್ಲಿ ಮುಳುಗಿ ಗಾಡಿ ಮುಂದೆ ಸಾಗುತ್ತಿದ್ದ ವು, ಈ ತೊರೆ ನೀರು ಗ್ರಾಮದ ಸುತ್ತ ಮುತ್ತ ಲ್ಲಿನ ಕೆರೆಗಳಿಂದ ಹರಿದು ಬರುತ್ತಿತ್ತು.
ಆದರೆ ಕಾಲ ಕಳೆದಂತೆ ನೋಡುನೋಡುತಿದಂತೆ ಇಂದು ತೊರೆ ನೀರು ಎಲ್ಲಿ ಹರಿಯುತ್ತಿತ್ತು ಎಂದು ಹುಡುಕಿದರು ಸಿಗುವುದಿಲ್ಲ, ಸುತ್ತ ಮುತ್ತಲ್ಲಿನ ಕೆರೆಕಟ್ಟೆಗಳು, ಬಾವಿ, ನೀರು ಬತ್ತುಹೋಗಿವೆ, ವರ್ಷಗಳು ಕಳೆದು ಹೋಗಿವೆ ಕೆರೆ ತುಂಬಿ, ಇಂದು ಬರೀ ನೆನಪು, ಎಷ್ಟೇ ನಾವು ಮುಂದುವರಿದರು ಮೂಲ ಸೌಲಭ್ಯಕಡೆ ನಿರ್ಲಕ್ಷ್ಯ ತೋರಿದ್ದಾರೆ ಮುಂದೆ ಪಶ್ಚಾತ್ತಾಪ ಪಡುವ ದಿನ ದೂರ ವಿಲ್ಲ. ಉರಿನ ಯುವಕರು ನಗರದ ಕಡೆ ಕೆಲಸಕ್ಕೆ ವಲಸೆ ಬರುತ್ತಿರುವ ಸಂಖ್ಯೆ ಹೆಚ್ಚಾಗಿದೆ.
ಹಿಂದೆ ಊರಿನಲ್ಲಿ ಒಟ್ಟಾಗಿ ಇರುತ್ತಿದ್ದ ಅಣ್ಣ ತಮ್ಮಂದಿರು ಇಂದು ಒಬ್ಬರು ಕಂಡರೆ ಇನೊಬ್ಬರಿಗೆ ಆಗುವುದಿಲ್ಲ ಅಷ್ಟರ ಮಟ್ಟಿಗೆ ಬದುಕುತ್ತಿದ್ದಾರೆ
ಇನ್ನೂ ನಗರ ಪ್ರದೇಶದ ಜನರು ನೀರಿನ ಬೆಲೆ ಬಿಸಿ ಇನ್ನೂ ತಟ್ಟಿಲ್ಲ , ಕುಡಿಯುವ ನೀರು ಕ್ಯಾನ್ ಗಳಲ್ಲಿ ಮಾರಾಟ ಮಾಡುತ್ತ ಇಂದು ಸಣ್ಣಪುಟ್ಟ ಅಂಗಡಿಗಳಲ್ಲಿ ಕಾಣಬಹುದು, ದುರಂತ ವೆಂದರೆ ಸರ್ಕಾರವು ಕೈಯ ತೊಳೆದು ಕೊಂಡು ಕುಳಿತ್ತಿದೆ, ನಗರ ಪ್ರದೇಶಗಳಲ್ಲಿ ಮಳೆಗಾಲದಲ್ಲಿಯು ನೀರಿನ Tractor ನೀರು ಸರಬರಾಜು ಮಾಡುವ ದೃಶ್ಯ ಕಾಣಬಹುದು.
ಮಾರ್ಚ್ 22 ರಂದು ವಿಶ್ವ ನೀರು ಸಂರಕ್ಷಣಾ ದಿನ, ನಾವು ನೀರಿನ ಹಿತ ಮಿತ ಬಲಕ್ಕೆಗೆ ಎಚ್ಚರ ವಹಿಸಬೇಕಾಗುತ್ತದೆ, ಇಲ್ಲವಾದರೆ ಮುಂದೊಂದು ದಿನ ನಮ್ಮ ನಮ್ಮ ನಡುವೆ ಜಗಳ, ದೇಶ ದೇಶಗಳ ನಡುವೆ ಯುದ್ಧ ನಡೆಯುವ ಕಾಲ ದೂರ ವಿಲ್ಲ ಎಚ್ಚರ ಎಚ್ಚರ.,!!
ಆರ್.ಸುದರ್ಶನ
LikeLiked by 1 person