ನೆನ್ನೆ ಮುಂಜಾನೆ ರಾಜ್ಯಾದ್ಯಂತ ಕೆಲ ಭ್ರಷ್ಟ ಸರಕಾರಿ ಇಂಜಿನೀಯರುಗಳು ಮತ್ತು ಗುತ್ತಿಗೆದಾರರ ಮನೆಗಳ ಮೇಲೆ ಐಟಿ ದಾಳಿ ನಡೆದಿರುವುದು ಈಗ ಜಗಜ್ಜಾಹೀರಾತಾಗಿದೆ. ದಾಳಿಯಾಗಿರುವುದು ಹಾಸನ, ಮಂಡ್ಯ, ಕನಕಪುರ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಾದರೂ ಅದರ ಪರಿಣಾಮ ಮತ್ತು ಪ್ರತಿಭಟನೆ ಬೆಂಗಳೂರಿನಲ್ಲಿ ಆಗುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಅದರಲ್ಲೂ ಮುಖ್ಯಮಂತ್ರಿಯ ಮತ್ತು ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇಡೀ ಸರ್ಕಾರವೇ ಈ ದಾಳಿಯ ವಿರುದ್ಧ ಐಟಿ ಸಂಸ್ಥೆಯ ಎದುರು ಪ್ರತಿಭಟನೆ ನಡೆಸಿದ್ದಲ್ಲದೆ, ಅನಾವಶ್ಯಕವಾಗಿ ಪ್ರಧಾನಿಗಳನ್ನೂ, ಬಿಜೆಪಿಯರವನ್ನು ಇದು ರಾಜಕೀಯ ಪ್ರೇರಿತ ಧಾಳಿ ಎಂದು ದೂರುತ್ತಾ ಚುನಾಚಣೆ ಸಮಯದಲ್ಲಿ ಸೋಲುವ ಭೀತಿಯಿಂದ ಅನುಕಂಪ ಗಿಟ್ಟಿಸಲು ಹೊರಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಚುನಾವಣಾ ಸಮಯದಲ್ಲೇ ಆದಾಯ ತೆರಿಗೆ ದಾಳಿ ನಡೆದರೆ ರಾಜಕೀಯ ಪ್ರೇರಿತ ಎನಿಸಬಹುದಾದರೂ, ಸಚಿವರುಗಳಿಂದಲೋ, ರಾಜಕಾರಣಿಗಳಿಂದಲೂ ಉಪಕೃತರಾದ ಗುತ್ತಿಗೆದಾರರು ,ಅಬ್ಕಾರಿ ಗುತ್ತಿಗೆದಾರರು ,ಸರಕಾರಿ ಇಂಜಿನಿಯರುಗಳು ಮತ್ತು ಅಧಿಕಾರಿಗಳು, ಪ್ರತ್ಯುಪಕಾರವಾಗಿಯೋ ಇಲ್ಲವೇ ಋಣ ಸಂದಾಯ ಮಾಡುವಂತೆಯೋ ಚುನಾವಣೆಯ ಸಮಯದಲ್ಲಿ ಹಣದ ಹೊಳೆ ಹರಿಸುವುದು ಎಲ್ಲರಿಗೂ ಗೊತ್ತಿಲ್ಲದ ವಿಷಯವೇನಲ್ಲ. ಹಾಗಿಲ್ಲದೇ ಹೋಗಿದ್ದಲ್ಲಿ ಕೋಟಿ ಕೋಟಿ ಹ,ಣ ಕೆಜಿಗಟ್ಟಲೆ ಚಿನ್ನಾಭರಾಣಗಳೊಂದಿಗೆ ಸಿಕ್ಕಿ ಹಾಕಿಕೊಂಡ ಜಯರಾಜ್, ಚಿಕ್ಕರಾಯಪ್ಪ, ಎನ್. ಜಿ. ಗೌಡಯ್ಯ, ಟಿ.ಆರ್. ಸ್ವಾಮಿ ಮುಂತಾದವರು ಸದ್ದಿಲ್ಲದೇ ಇಂದು ಸಹಾ ಅದೇ ಹುದ್ದೆಗಳಲ್ಲಿ ಯಾವುದೇ ರೀತಿಯ ಶಿಕ್ಷೆಯಿಲ್ಲದೆ ಮರುನೇಮಕವಾಗಿ ಮುಂದುವರೆಯುತ್ತಿದ್ದರೆ ?
ಹಾಗೆ ಉಪಕೃತರಾದವರ ಮೇಲೆ ನೆನ್ನೆ ನಡೆದ ದಾಳಿ ನಿಜಕ್ಕೂ ಕಾಂಗ್ರೆಸ್ ಜೆಡಿಎಸ್ ಪಕ್ಷದವರ ಚುನಾವಣಾ ಮೂಲ ಆದಾಯಕ್ಕೆ ಹೊಡೆತ ಬೀಳುತ್ತಿದ್ದಂತೆಯೇ, ದೋಸ್ತಿ ಸರ್ಕಾರದ ಅಷ್ಟೂ ಮಂದಿ ಅಂಡು ಸುಟ್ಟ ಬೆಕ್ಕುಗಳಂತೆ ಆದಾಯ ತೆರಿಗೆ ಇಲಾಖೆಯ ಮೇಲೂ ಮತ್ತು ಕೇಂದ್ರ ಸರ್ಕಾರದ ಮೇಲೇ ಮುಗಿ ಬೀಳಲಾರಂಬಿಸಿರುವುದನ್ನು ರಾಜ್ಯದ ಮತದಾರರೂ ಖಂಡಿತವಾಗಿಯೂ ಗಮನಿಸುತ್ತಿದ್ದಾರೆ. ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿವಾಗ ಗೌಪ್ಯತೆಯನ್ನು ಕಾಪಾಡುವ ಶಪತವನ್ನು ತೆಗೆದುಕೊಂಡದ್ದನ್ನು ಮರೆತು, ಬಹಿರಂಗವಾಗಿಯೇ ಒಂದು ದಿನದ ಮುಂಚೆ ಆದಾಯ ತೆರಿಗೆ ದಾಳಿ ನಡೆಯುತ್ತಿರುವುದನ್ನು ಬಹಿರಂಗ ಪಡಿಸಿ ತನ್ನ ಕಡೆಯವರನ್ನು ಎಚ್ಚರಿದ್ದದ್ದು ಎಷ್ಟುಸರಿ? ಅದಕ್ಕೂ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟು, ನಮ್ಮವರ ಮೇಲೆ ದಾಳಿಯಾದರೆ ಪಶ್ಚಿಮ ಬಂಗಾಳದ ಮಾದರಿ ನಾವೂ ಕೂಡ ಮಾಡಬೇಕಾದೀತು ಎಂದು ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಧಮ್ಕಿ ಹಾಕುವುದು ನ್ಯಾಯ ಸಮ್ಮತವೇ?
ಕೆಲ ದಿನಗಳ ಹಿಂದೆ ಏರ್ ಸರ್ಜಿಕಲ್ ಸ್ಟ್ರೈಕ್ ನಡೆದಾಗ ಅದರ ಕೀರ್ತಿ ಸೈನ್ಯಕ್ಕೆ ಸೇರಬೇಕು. ಮೊನ್ನೆ ಎ ಸ್ಯಾಟ್ ಮಿಷನ್ ಶಕ್ತಿ ಪರೀಕ್ಷೆಗೆ ಒಳಪಟ್ಟಾಗ, ಅದು ವಿಜ್ಞಾನಿಗಳ ನಿರಂತರ ಕಾರ್ಯ ಅದರ ಕೀರ್ತಿ ಅವರಿಗೇ ಸಲ್ಲಬೇಕು ಎಂದಾಗ ನೆನ್ನೆ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿಯ ರೂವಾರಿಗಲೂ ಆದಾಯ ತೆರಿಗೆ ಅಧಿಕಾರಿಗಳೇ ಆಗಿರಬೇಕಲ್ಲವೇ? ಇದಕ್ಕೆ ಮಾತ್ರಾ, ಮೋದಿಯವರನ್ನು ಅಮಿತ್ ಶಾ ಅವರನ್ನು ದೂರುವುದು ಎಷ್ಟು ಸರಿ? ಮೋದಿಯವರ ಕಾಲದಲ್ಲಿಯೇ ಎಷ್ಟು ಬಿಜೆಪಿ ನಾಯಕರುಗಳ ಮೇಲೆ ದಾಳಿಗಳಾಗಿರುವುದು ನೆನಪಿಲ್ಲವೇ? ಒಂದು ತಿಂಗಳ ಹಿಂದೆ ಕನ್ನಡ ಚಲನಚಿತ್ರ ನಟರು, ನಿರ್ಮಾಪಕರುಗಳ ಮೇಲೆ ಇದೇ ರೀತಿಯ ಧಾಳಿ ನಡೆದಾಗ ಅವರೆಲ್ಲಾ ಹೀಗೆಯೇ ಗೂಳಿಟ್ಟರೇ? ಅವರೆಲ್ಲರೂ ಶಾಂತ ರೀತಿಯಲ್ಲಿ ಆದಾಯ ತೆರಿಗೆ ಇಲಾಖೆಗಳ ಅಧಿಕಾರಿಗಳಿಗೆ ಸಹಕರಿಸಿ ಅಗತ್ಯವಿದ್ದ ದಾಖಲೆಗಳನ್ನು ತೋರಿಸಿ ತಪ್ಪಾಗಿದ್ದನ್ನು ಒಪ್ಪಿಕೊಂಡು ಅದನ್ನು ಸರಿ ಪಡಿಸಿಕೊಂಡು ಎಲ್ಲರಿಗೂ ಮಾದರಿಯಾಗಲಿಲ್ಲವೇ?
ಭ್ರಷ್ಟರೆಲ್ಲರೂ ಒಂದಾಗಿ ಲೂಟಿಗಿಳಿದಿದ್ದನ್ನು ಪತ್ತೆ ಹಚ್ಚಿ ಅದನ್ನು ಜಗ್ಗಜ್ಜಾಹೀರಾತು ಮಾಡಿದ್ದನ್ನು ,
ಹಾಗೆ ಆದಾಯ ತೆರಿಗೆ ಕಾರ್ಯಾಲಯದ ಎದುರು ಧರಣಿಯ ಹೆಸರಲ್ಲಿ ಮೋದಿಯವರನ್ನೂ ಮತ್ತು ಬಿಜೆಪಿಯನ್ನೂ ಜರಿಯಲು ವೇದಿಕೆ ಮಾಡಿಕೊಂಡಿದ್ದು ಎಷ್ಟು ಸರಿ? ಬೇಲ್ ಮೇಲೆ ಇರುವ ಜೋಡೆತ್ತುಗಳಾದ ಮುಖ್ಯ ಮಂತ್ರಿ ಮತ್ತು ಕಾಂಗ್ರೇಸ್ ಪ್ರಭಾವಿ ಸಚಿವ ಚೌಕಿದಾರ್ ಚೋರ್ ಹೈ ,ಕುಮಾರಣ್ಣ… ಡಿಕೆಶಿ.. ಶೇರ್ ಹೈ ಎಂದು ಘೋಷಣೆ ಹಾಕಿಸಿಕೊಳ್ಳುತ್ತಿದ್ದದ್ದು, ತಾನು ಕಳ್ಳ ಪರರ ನಂಬ ಎನ್ನುವ ಗಾದೆಯನ್ನು ನೆನಪಿಸುತ್ತಿತ್ತು. ನಿಜವಾಗಿಯೂ ದುಡಿಯುವ ಎತ್ತುಗಳಿಗೆ ಭಯ ಇರುವುದಿಲ್ಲ ಕಳ್ಳೆತ್ತುಗಳಿಗೆ ಮಾತ್ರವೇ ಭಯ ಅದಕ್ಕೆಂದೇ ನಾನಾ ಸಬೂಬು ಹೊಡೆಯುತ್ತವೆ ಎಂಬುದನ್ನು ಮತ್ತೊಮ್ಮೆ ಈ ಜೋಡಿ ಸಾಭಿತು ಪಡಿಸಿತು.
ಕಳೆದ ಐದು ವರ್ಷಗಳ ಮೋದಿಯವರ ಆಳ್ವಿಕೆಯಲ್ಲಿ ಅವರೇ ಹೇಳಿ ಕೊಂಡಂತೆ ತಾನು ತಿನ್ನುವುದಿಲ್ಲ ಮತ್ತು ಇತರರನ್ನು ತಿನ್ನಲು ಬಿಡುವುದಿಲ್ಲ ಎನ್ನುವುದನ್ನು ಅಕ್ಷರಶಃ ಭಾರತೀಯರಿಗೆ ತೋರಿಸಿ ಕೊಟ್ಟಿದ್ದಾರೆ. ಮತ್ತೊಮ್ಮೆ ಇದೇ ಪ್ರಧಾನಿಗಳೇ ಮುಂದುವರಿದರೆ ತಮ್ಮಂತಹವರಿಗೆ ಉಳಿಗಾಲವಿಲ್ಲ ಎಂಬುದನ್ನು ಮನಗಂಡ ಈ ವಿರೋಧಿಬಣಗಳು ಕೇವಲ ತಮ್ಮ ಸ್ವಹಿತಾಸಕ್ತಿಗಾಗಿ ಮಹಾಘಟ್ ಬಂಧನ್ ಎಂಬ ಲಜ್ಜೆರಹಿತ ತಂಡವನ್ನು ಕಟ್ಟಿ ಕೊಂಡು ಮೋದಿಯವರ ಮೇಲೆ ಬೀಳುತ್ತಿರುವುದು ನಿಜಕ್ಕೂ ದೇಶದ ಹಿತದಿಂದ ಮಾರಕವಾಗಿದೆ. ಈ ಚುನಾವಣಾ ಸಮಯದಲ್ಲಿ ಎಲ್ಲರೂ ಸ್ವಲ್ಪ ತಾಳ್ಮೆ ವಹಿಸಿ ಜಾಣ್ಮೆಯಿಂದ ಯೋಚಿಸಿ ನೋಡಿದಲ್ಲಿ, ನಮಗೇ ಅರಿವಾಗುವಂತೆ ಮೋದಿಯವರ ಮೋಡಿ ಕೇವಲ ದೇಶದಲ್ಲಿ ಮಾತ್ರವಲ್ಲದೇ, ದೇಶ ವಿದೇಶಗಳಲೆಲ್ಲಾ ಹರಡಿಯಾಗಿದೆ. ಎಲ್ಲರೂ ಮೋದಿಯವರು ಮತ್ತೊಮ್ಮೆ ಪ್ರಧಾನಿಗಳಾಗದಿದ್ದಲ್ಲಿ ಭಾರತದ ಆಭಿವೃದ್ಧಿ ಸುಮಾರು ಐವತ್ತು ವರ್ಷಗಳ ಹಿಂದೆ ಹೋಗುತ್ತದೆ ಎಂದು ಹೇಳುತ್ತಿರುವುದರಲ್ಲಿ ಯಾವುದೇ ಉತ್ಪೇಕ್ಷೆ ಇಲ್ಲವೇನಿಸುತ್ತದೆ. ಹಾಗಾಗಿ ಈ ಬಾರಿ ಮೋದಿಯವರನ್ನೇ ಮತ್ತೊಮ್ಮೆ ಅಭೂತ ಪೂರ್ವ ಬಹುಮತಗಳೊಂದಿಗೆ ಜಯಶಾಲಿ ಮಾಡಬೇಕಾದ ಕರ್ತವ್ಯ ನಮ್ಮ ಮೇಲೆ ಇದೆಯಲ್ಲವೇ? ಆನೆ ಅಂಬಾರಿ ಹೋಗುತ್ತಿರುವಾಗ ನಾಯಿಗಳು ಬೊಗುಳುವುದು ಸಹಜ. ಜನ ನಾಯಿಯತ್ತ ಕಲ್ಲೆಸೆಯುತ್ತಾರೆ ಅಂಬಾರಿಗೆ ನಮಿಸುತ್ತಾರೆ.
ಮೋದಿಯವರು ಹೀಗೇ ತಮ್ಮ ಭಾಷಣದಲ್ಲಿ ಎಲ್ಲಾ ಭ್ರಷ್ಟ್ರರನ್ನು ಬೀದಿಗೆ ತರುತ್ತೇನೆ ಎಂದು ಹೇಳಿದ್ದರು. ಒಂಬತ್ತು ತಿಂಗಳ ಹಿಂದೆ ನಮ್ಮ ವಿಧಾನಸೌಧದ ಮುಂದೆ ಬಹೇತೇಕ ಭ್ರಷ್ಟರನ್ನು ನೋಡಿದ್ದೆವು, ಒಂದು ತಿಂಗಳ ಹಿಂದೆ ಕಲ್ಕತ್ತಾದಲ್ಲಿ ಮಹಾವಿಘಟನ್ ಹೆಸರಿನಲ್ಲಿ ಎಲ್ಲರನ್ನೂ ಮತ್ತೇ ಕಾಣುವ ಸೌಭಾಗ್ಯ ನಮಗೆ ಸಿಕ್ಕಿತ್ತು. ಈಗ ಅದರ ಜೊತೆ ಮತ್ತಷ್ಟೂ ಭ್ರಷ್ಟರನ್ನು ಆದಾಯ ತೆರಿಗೆ ಇಲಾಖೆಯ ಮುಂದೆ ನೋಡಿದೆವು. ಇದಕ್ಕೇ ಅಲ್ವೇ ಹೇಳುವುದು ಅಚ್ಚೇ ದಿನ್ ಅಂತಾ
ಏನಂತೀರೀ?