ಯುಗಾದಿ ಹಬ್ಬ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹರುಷವ ಹೊಸತು ಹೊಸತು ತರುತಿದೆ. ಶ್ರೀ ದ. ರಾ. ಬೇಂದ್ರೆಯವರ ಈ ಜನಪ್ರಿಯ ಭಾವಗೀತೆಯನ್ನು ಕುಲವಧು ಚಲನಚಿತ್ರದಲ್ಲಿ ಅಳವಡಿಸಿಕೊಂಡು ಲೀಲಾವತಿಯವರು ಹಾಡುತ್ತ ನರ್ತಿಸುವುದನ್ನು ನೋಡುತ್ತಿದ್ದರೆ ಅದುವೇ ಕಣ್ಣಿಗೆ ಹಬ್ಬ. ಮನಸ್ಸಿಗೆ ಆನಂದ.

yugadi5

ನಮ್ಮ ಹಿರೀಕರು ನಮ್ಮ ಹವಾಮಾನಕ್ಕೆ ಅನುಗುಣವಾಗಿಯೇ ಬಹುತೇಕ ಹಬ್ಬಗಳನ್ನು ಆಚರಿಸುವ ಪದ್ದತಿಯನ್ನು ರೂಢಿಮಾಡಿದ್ದಾರೆ. ಅಂತೆಯೇ ಪ್ರಕೃತಿಯೂ ತನ್ನ ಹಳೆಯದ್ದನೆಲ್ಲಾ ಕಳೆದು ಕೊಂಡು ಹೊಸ ಹೊಸದಾಗಿ ಚಿಗುರು ಎಲೆಗಳಿಂದ ಕಂಗೊಳಿಸುತ್ತಾ ಸೂರ್ಯನೂ ಕೂಡಾ ಕೆಲವೇ ದಿನಗಳ ಹಿಂದಷ್ಟೇ ದಕ್ಷಿಣಾಯನದಿಂದ ಉತ್ತರಾಯಣದ ಕಡೆಗೆ ತನ ಪಥ ಬದಲಿಸಿ ತನ್ನ ಪ್ರಖರತೆಯನ್ನು ಹೆಚ್ಚಿಸಿಕೊಂಡು ಎಲ್ಲವೂ ಹೊಸದಾಗಿಯೇ ಇರುವುದರಿಂದ ಚೈತ್ರಮಾಸದ ಶುದ್ಧ ಪ್ರತಿಪದವನ್ನು ಹೊಸ ವರ್ಷ ಯುಗಾದಿ ಹಬ್ಬ ಎಂದು ಆಚರಿಸುತ್ತೇವೆ. ಯುಗಾದಿ ಎಂಬ ಶಬ್ದವು ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಶಬ್ದಗಳ ಸಮ್ಮಿಳನವಾಗಿದೆ. ಇಲ್ಲಿ ಯುಗ ಎಂದರೆ ನಾವು ವರ್ಷೆಂದು ಭಾವಿಸಿಕೊಂಡು ಹೊಸವರ್ಷವೆಂದು ಆಚರಿಸುತ್ತೇವೆ.

ಹಿಂದುಗಳ ಪಾಲಿಗೆ ಹೊಸ ವರ್ಷದ ಆರಂಭವಾದ ಈ ಯುಗಾದಿಯನ್ನು ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ಸೂರ್ಯ ಮತ್ತು ಚಂದ್ರನ ಚಲನೆಯ ಆಧಾರದ ಮೇಲೆ ತಮಿಳುನಾಡು, ಕೇರಳ ಮತ್ತು ಕರಾವಳಿ ಭಾಗದ ಕರ್ನಾಟಕದವರು ಸೌರಮಾನ ಯುಗಾದಿಯನ್ನು ಆಚರಿಸಿದರೆ, ಬಹುತೇಕ ಕರ್ನಾಟಕ ಮತ್ತು ಆಂದ್ರ ಪ್ರದೇಶದವರು ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ. ಅಂತೆಯೇ ಗೋವಾ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಯುಗಾದಿಯನ್ನು ಗುಢಿಪಾಡವಾ ಎಂಬ ಹೆಸರಿನಲ್ಲಿ ಪ್ರತಿಯೊಂದು ಮನೆಗಳ ಮುಂದೆಯೂ ಗುಢಿ (ರೇಷ್ಮೆಯ ಧ್ವಜ ಅಥವಾ ಬಟ್ಟೆ)ಯನ್ನು ಒಂದು ಕೋಲಿನ ತುದಿಗೆ ಕಟ್ಟಿ ಮನೆಯ ಮುಂದೆ ನಿಲ್ಲಿಸುವ ಪದ್ದತಿ ಇದೆ.

ಅಂದು ಪ್ರತಿಯೊಬ್ಬರ ಮನೆಯಲ್ಲೂ ಮುಖ್ಯದ್ವಾರಗಳು ಮತ್ತು ದೇವರ ಮನೆಯ ಬಾಗಿಲಿಗೆ ಮಾವಿನ ಎಲೆಗಳ ತಳಿರು ತೋರಣದ ಜೊತೆಗೆ ತುದಿಯಲ್ಲಿ ಚಿಗುರು ಬೇವಿನ ಕಡ್ದಿಗಳನ್ನು ಸಿಕ್ಕಿಸಿ ಅಲಂಕರಿಸುವ ಪರಿಪಾಠವಿದೆ. ನಾಗರ ಪಂಚಮಿ, ಗೌರಿ, ಗಣೇಶ, ಸುಬ್ಬರಾಯನ ಶ್ರಷ್ಠಿ ಮುಂತಾದ ಹಬ್ಬಗಳಿಗಿರುವಂತೆ ಇರುವ ನಿಷ್ಠೆ ನಿಯಮಗಳು ಈ ಹಬ್ಬಕ್ಕೆ ಇಲ್ಲವಾದರೂ, ಬೆಳ್ಳಂಬೆಳಿಗ್ಗೆ ಎಲ್ಲರೂ ಎದ್ದು, ತಮ್ಮ ನಿತ್ಯಕರ್ಮಗಳನ್ನು ಮುಗಿಸಿ, ಮನೆಯನ್ನು ಚೊಕ್ಕಗೋಳಿಸಿ ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ, ಆಬಾಲವೃಧ್ಧರಾದಿಯಾಗಿ ಕಡ್ಡಾಯವಾಗಿ ಎಣ್ಣೆಯ ಸ್ನಾನ ಮಾಡಿ ಹೊಸ ಹೊಸ ಬಟ್ಟೆಗಳನ್ನು ತೊಟ್ಟು , ದೇವರ ಮುಂದೆ ಹೊಸದಾಗಿ ತಂದಿದ್ದ ಪಂಚಾಂಗವನ್ನು ಇರಿಸಿ, ಬೇವು, ಬೆಲ್ಲ ಮತ್ತು ತುಪ್ಪ ಬೆರೆಸಿದ ನೈವೇದ್ಯ ದೊಂದಿಗೆ ಕುಲದೇವತೆಗಳನ್ನು ಪೂಜೆ ಮಾಡಿ,

yugadi

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ,

ಸರ್ವಾರಿಷ್ಟ ವಿನಾಶಾಯ ನಿಂಬಕಂ ದಳಭಕ್ಷಣಂ

ಎಂಬ ಶ್ಲೋಕ ಹೇಳುತ್ತಾ ಮನೆಯವರೆಲ್ಲರೂ, ಬೇವು ಬೆಲ್ಲವನ್ನು ಪ್ರಸಾದ ರೂಪದಲ್ಲಿ ಸೇವಿಸುವುದರ ಮೂಲಕ ಮೊದಲ ಹಂತದ ಹಬ್ಬ ಮುಗಿಯುತ್ತದೆ.

yugadi3

ಹಬ್ಬ ಎಂದ ಮೇಲೆ ಊಟ ಉಪಚಾರಗಳೇ ಅತ್ಯಂತ ಮಹತ್ವವಾಗಿರುತ್ತದೆ. ಅಂತೆಯೇ ನಮ್ಮ ಪ್ರತಿ ಹಬ್ಬಗಳಿಗೂ ಅದರದೇ ಆದ ವಿಶೇಷವಾದ ಸಿಹಿ ಪದಾರ್ಥವಿದ್ದಂತೆ ಕರ್ನಾಟಕ, ತಮಿಳು ನಾಡು ಮತ್ತು ಆಂಧ್ರ ಪ್ರದೇಶಗಳ ಯುಗಾದಿಯ ಹಬ್ಬಕ್ಕೆ ಕಾಯಿ ಹೋಳಿಗೆ ಅಥವಾ ಬೇಳೆ ಒಬ್ಬಟ್ಟು ಮಾಡುವ ಪದ್ದತಿಯಿದ್ದರೆ, ಕೊಂಕಣ ಮತ್ತು ಮಹಾರಾಷ್ಟ್ರಗಳಲ್ಲಿ ಅದನ್ನೇ ಪೂರನ್ ಪೋಳಿ ಎಂಬ ಹೆಸರಿನಲ್ಲಿ ಸಿಹಿ ಪದಾರ್ಥ ತಯಾರಿಸುತ್ತಾರೆ. ಈ ಒಬ್ಬಟ್ಟಿನ ಜೊತೆ, ಎಲೆಯ ತುದಿಗೆ ಒಬ್ಬಟ್ಟಿನ ಹೂರಣ, ಪಲ್ಯ, ಕೋಸಂಬರಿ, ಆಗಷ್ಟೇ ಮರದಿಂದ ಕಿತ್ತು ತಂದ ಎಳೆಯ ಮಾವಿನ ಕಾಯಿಯ ಚಿತ್ರಾನ್ನದ ಜೊತೆ ಒಬ್ಬಟ್ಟಿನ ಸಾರು ಅದಕ್ಕೆ ಒಂದೆರಡು ಮಿಳ್ಳೆ ಹಸನಾದ ತುಪ್ಪ ಸೇರಿಸಿ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಸೊರ್ ಸೊರ್ ಎಂದು ಶಬ್ಧ ಮಾಡುತ್ತಾ ಊಟ ಮಾಡುವುದನ್ನು ಹೇಳುವುದಕ್ಕಿಂತ ಸವಿಯುವುದೇ ಆನಂದ. ತಮ್ಮ ಮನೆಯಲ್ಲಿ ಮಾಡಿದ ಒಬ್ಬಟ್ಟನ್ನು ಅಕ್ಕ ಪಕ್ಕದವರಿಗೆ ಹಂಚಿ ಭಕ್ಷ ಭೂರಿ ಊಟ ಮಾಡಿದ ಪರಿಣಾಮವಾಗಿ ಆದ ಭುಕ್ತಾಯಾಸ ಕಳೆಯಲು ಒಂದೆರಡು ಘಂಟೆ ನಿದ್ದೆ ಮಾಡುವ ಮೂಲಕ ಎರಡನೇ ಹಂತದ ಹಬ್ಬದ ಆಚರಣೆ ಮುಗಿಯುತ್ತದೆ.

yugadi1

ಸಂಜೆ ಕೈಕಾಲು ಕೈಕಾಲು ಮುಖ ತೊಳೆದುಕೊಂಡು ಮನೆಯಲ್ಲಿ ದೇವರದೀಪ ಹಚ್ಚಿ ಮನೆಯ ಎಲ್ಲರೂ ದೇವರ ಮುಂದೆ ಕುಳಿತು ಬೆಳಿಗ್ಗೆ ಪೂಜೆ ಮಾಡಿದ್ದ ಪಂಚಾಂಗವನ್ನು ಶ್ರವಣ ಮಾಡುವ ಪದ್ದತಿಯಿದೆ. ಮನೆಯ ಹಿರಿಯರು ಪಂಚಾಂಗದಲ್ಲಿ ನಾಡಿನ ಈ ವರ್ಷದ ಫಲ, ಮಳೆ- ಬೇಳೆ, ದೇಶದ ಆದಾಯ ಮತ್ತು ವ್ಯಯಗಳನ್ನು ಓದಿದ ನಂತರ, ಮನೆಯ ಪ್ರತೀ ಸದಸ್ಯರ ರಾಶಿಗಳ ಅನುಗುಣವಾಗಿ ಅವರ ಆದಾಯ-ವ್ಯಯ, ಆರೋಗ್ಯ-ಅನಾರೋಗ್ಯ, ರಾಜ ಪೂಜಾ-ರಾಜ ಕೋಪ, ಸುಖ-ದುಃಖಗಳ ಜೊತೆ ಕಂದಾಯ ಫಲವನ್ನು ತಿಳಿಸುತ್ತಾರೆ. ದೇಶ ಫಲ ಮತ್ತು ತಮ್ಮ ರಾಶಿಯ ಫಲ ಚೆನ್ನಾಗಿದ್ದವರು ಸಂತಸವಾಗಿದ್ದರೆ, ತಮ್ಮ ರಾಶಿಯ ಫಲ ಚೆನ್ನಾಗಿಲ್ಲದವರು ತಮ್ಮ ಗ್ರಹಚಾರವನ್ನು ಹಳಿಯುತ್ತಾ , ಅದು ಏನಾಗುತ್ತಾದೆಯೋ ನೋಡೇ ಬಿಡೋಣ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ. ಕಾಲ ಕಾಲಕ್ಕೆ ಪೂಜಿಸುತ್ತಾ ಅವನನ್ನು ನಂಬಿದರೆ ಯಾವುದೇ ತೊಂದರೆಗಳು ಬರುವುದಿಲ್ಲ ಎಂದು ಭಗವಂತನ ಮೇಲೆ ಹೊಣೆ ಹಾಕುತ್ತಾರೆ. ಆದಾದ ನಂತರ ಎಲ್ಲರೂ ಹತ್ತಿರದ ದೇವಾಲಯಗಳಿಗೆ ಹೋಗಿ ದೇವರ ದರ್ಶನ ಮಾಡಿ ಮನೆಗೆ ಹಿಂದಿರುಗಿದ ನಂತರ ಮಧ್ಯಾಹ್ನ ಮಾಡಿದ್ದ ಅಡುಗೆಯನ್ನೇ ಬಿಸಿ ಮಾಡಿಕೊಂಡು ತಿನ್ನುವುದರ ಮೂಲಕ ಯುಗಾದಿ ಹಬ್ಬ ಸಂಪೂರ್ಣವಾಗುತ್ತದೆ.

ಇನ್ನು ಹಳ್ಳಿಗಳಲ್ಲಿ ಊರಿನ ಕುಲ ಪುರೋಹಿತರು ಅಥವಾ ಪಂಡಿತರು ಯುಗಾದಿಯ ಸಂಜೆ ಊರಿನ ದೇವಸ್ಥಾನಗಳಲ್ಲೋ ಅಥವಾ ಅರಳಿ ಕಟ್ಟೆಯ ಮುಂದೆ ಕುಳಿತುಕೊಂಡು ಎಲ್ಲರ ಸಮ್ಮುಖದಲ್ಲಿ ಹೊಸ ಪಂಚಾಂಗದ ಪ್ರಕಾರ ಮಳೆ, ಬೆಳೆ, ದೇಶಕ್ಕೆ ಮುಂದೆ ಬಹುದಾದ ವಿಪತ್ತುಗಳು ಮತ್ತು ಸೂರ್ಯ ಚಂದ್ರ ಗ್ರಹಣಗಳ ಬಗ್ಗೆ ಓದಿ ಹೇಳುತ್ತಾರೆ. ಸದಾ ಪುರದ ಹಿತವನ್ನೇ ಕಾಪಾಡುವ ಪುರೋಹಿತರಿಗೆ ರೈತಾಪಿ ಜನರುಗಳು ಯಥಾ ಶಕ್ತಿ ಧನ ಧಾನ್ಯಗಳನ್ನು ಕೊಟ್ಟು ಅವರ ಆಶೀರ್ವಾದ ಪಡೆಯುವ ಸಂಪ್ರದಾಯ ಹಲವೆಡೆ ಇನ್ನೂ ಜಾರಿಯಲ್ಲಿದೆ. ಅಂತೆಯೇ ಯುಗಾದಿ ಹಬ್ಬದ ಸಂಜೆ ಏನಾದರೂ ಮಳೆ ಬಂತೆಂದರೆ , ಆ ವರ್ಷ ಉತ್ತಮ ಮಳೆಯಾಗಿ, ಉತ್ತಮ ಬೆಳೆ ಬಂದು, ಊರು ಸುಭಿಕ್ಷವಾಗಿರುತ್ತದೆ ಎಂಬ ನಂಬಿಕೆಯೂ ರೈತಾಪಿ ಜನರಲ್ಲಿದೆ

ಇನ್ನು ಯುಗಾದಿಹಬ್ಬ ಮುಗಿದ ಮಾರನೇ ದಿನವನ್ನು ವರ್ಷತೊಡಕು ಎಂದೂ ಆಚರಿಸುತ್ತಾರೆ. ಅಂದೂ ಕೂಡಾ ಹಬ್ಬದ ವಾತಾವರಣವೇ ಇದ್ದು, ಮುಂಜಾನೆ ಎದ್ದು ಸ್ನಾನ ಮಾಡಿ ಮಡಿಯುಟ್ಟು ದೇವರನ್ನು ಪೂಜಿಸಿ ಗುರುಹಿರಿಯರಿಗೆ ನಮಸ್ಕರಿಸುತ್ತಾರೆ. ವರ್ಷ ತೊಡಕು ಎಂದರೆ ಒಳ್ಳೆಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ದಿನ. ಈ ದಿನದ ಫಲ ಹೇಗಿರುತ್ತದೇಯೋ ಅದು ವರ್ಷವಿಡೀ ಇರುತ್ತದೆ ಎಂಬ ನಂಬಿಕೆ ಇರುವ ಕಾರಣ ಅಂದು ಉದ್ದೇಶ ಪೂರ್ವಕವಾಗಿ ಯಾವುದೇ ಕೆಟ್ಟ ಕೆಲಸಗಳನ್ನು ಮಾಡುವುದಿಲ್ಲ. ಇದನ್ನೇ ನೆಪ ಮಾಡಿಕೊಳ್ಳುವ ಮಕ್ಕಳು ಅಮ್ಮಾ ಇವತ್ತು ವರ್ಷದ ತೊಡಕು ಸುಮ್ಮನೆ ಬಯ್ಯಬೇಡಿ, ಹೊಡೆಯಬೇಡಿ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದು ಪರಿಸ್ಥಿತಿಯ ಲಾಭವನ್ನೂ ಪಡೆಯುವುದುಂಟು

ಇನ್ನು ಮಾಂಸಾಹಾರಿಗಳು, ಯುಗಾದಿ ಹಬ್ಬದಂದು ಕೇವಲ ಸಿಹಿ ಪದಾರ್ಥಗಳನ್ನೇ ತಿಂದವರು, ವರ್ಷದ ತೊಡಕಿನಂದು ಕಡ್ಡಾಯವಾಗಿ ಮಾಂಸದ ಅಡುಗೆಗಳನ್ನೇ ಮಾಡುವ ಪರಿಪಾಠವಿದೆ. ಮಾಂಸಾಹಾರದ ಜೊತೆಗೆ ಮದ್ಯ ಸೇವನೆಯೂ ಈ ವರ್ಷತೊಡಕಿನ ಆಚರಣೆಯ ಭಾಗಗಳಲ್ಲೊಂದಾಗಿ ಹೋಗಿರುವುದು ವಿಪರ್ಯಾಸವಾಗಿದೆ.

ಬೇರೆ ಯಾವ ಹಬ್ಬದಲ್ಲಿ ಇಲ್ಲದಿದ್ದರೂ ಯುಗಾದಿ ಮತ್ತು ವರ್ಷತೊಡಕಿನಂದು ಜೂಜಾಡುವುದೂ ಒಂದು ಆಚರಣೆಯಾಗಿ ಬೆಳೆದುಬಿಟ್ಟಿದೆ. ಹಳ್ಳಿಗಳಲ್ಲಿ ಸಂಜೆ ಪಂಚಾಂಗ ಶ್ರವಣಕ್ಕೆ ಮುಂಚೆ, ಹುಡುಗರು ಕಬಡ್ಡಿ, ವಾಲೀಬಾಲ್, ಖೋಖೋ, ಲಗೋರಿ, ಗುಂಡುಕಲ್ಲು ಎತ್ತಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರೆ, ವಯಸ್ಕರುಗಳು ಬಾಜಿ ಕಟ್ಟಿ ಕೋಳಿ ಕಾಳಗ, ಟಗರು ಕಾಳಗ ಇಲ್ಲವೇ ಇಸ್ಪೀಟ್ ಆಟವಾಡುತ್ತಾ ದಿನ ಕಳೆಯುತ್ತಾರೆ. ಈ ಹಬ್ಬದಂದು ಜೂಜು ಸಾಂಪ್ರಾದಾಯವಾಗಿರುವ ಕಾರಣ ಪೋಲೀಸರೂ ಅದೋಂದು ದಿನ ನೋಡಿದರೂ ನೋಡದ ಹಾಗೆ ಜಾಣ ಕುರುಡನ್ನು ಪ್ರದರ್ಶಿಸುತ್ತಾರೆ.

ನಮ್ಮ ಹಿರಿಯರು ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಒಂದೊಂದು ಪ್ರತೀತಿಯನ್ನು ಸಂಪ್ರದಾಯದ ಮೂಲಕ ಆಚರಣೆಯಲ್ಲಿ ತಂದಿದ್ದಾರೆ. ನಾವುಗಳು ಆ ಹಬ್ಬಗಳ ನಿಜವಾದ ಅರ್ಥವನ್ನು ತಿಳಿದು ಆಚರಿಸಿದರೆ ಹಬ್ಬ ಮಾಡಿದ್ದಕ್ಕೂ ಸಾರ್ಥಕ ಮತ್ತು ಎಲ್ಲರ ಮನಸ್ಸಿಗೂ ನಮ್ಮದಿ, ಸುಖಃ ಮತ್ತು ಸಂತೋಷ ಇರುತ್ತದೆ.

ಏನಂತೀರೀ?

3 thoughts on “ಯುಗಾದಿ ಹಬ್ಬ

  1. Very well explained, I remember my father use to tell us when we were young, I didn’t knew how to explain about the importance of Ugadi to our kids, now I can explain and also I shared this link with my elder daughter and asked her to go thru this article.

    Liked by 1 person

  2. Very well explained, I remember my father use to tell us when we were young, I didn’t knew how to explain about the importance of Ugadi to our kids, now I can explain and also I shared this link with my elder daughter and asked her to go thru this article.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s