ಚಾಂದ್ರಮಾನ ಯುಗಾದಿ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹರುಷವ ಹೊಸತು ಹೊಸತು ತರುತಿದೆ. ಶ್ರೀ ದ. ರಾ. ಬೇಂದ್ರೆಯವರ ಈ ಜನಪ್ರಿಯ ಭಾವಗೀತೆಯನ್ನು ಕುಲವಧು ಚಲನಚಿತ್ರದಲ್ಲಿ ಅಳವಡಿಸಿಕೊಂಡು ಲೀಲಾವತಿಯವರು ಹಾಡುತ್ತ ನರ್ತಿಸುವುದನ್ನು ನೋಡುತ್ತಿದ್ದರೆ ಅದುವೇ ಕಣ್ಣಿಗೆ ಹಬ್ಬ. ಮನಸ್ಸಿಗೆ ಆನಂದ.

yugadi5

ನಮ್ಮ ಹಿರೀಕರು ನಮ್ಮ ಹವಾಮಾನಕ್ಕೆ ಅನುಗುಣವಾಗಿಯೇ ಬಹುತೇಕ ಹಬ್ಬಗಳನ್ನು ಆಚರಿಸುವ ಪದ್ದತಿಯನ್ನು ರೂಢಿಮಾಡಿದ್ದಾರೆ. ಅಂತೆಯೇ ಪ್ರಕೃತಿಯೂ ತನ್ನ ಹಳೆಯದ್ದನೆಲ್ಲಾ ಕಳೆದು ಕೊಂಡು ಹೊಸ ಹೊಸದಾಗಿ ಚಿಗುರು ಎಲೆಗಳಿಂದ ಕಂಗೊಳಿಸುತ್ತಾ ಸೂರ್ಯನೂ ಕೂಡಾ ಕೆಲವೇ ದಿನಗಳ ಹಿಂದಷ್ಟೇ ದಕ್ಷಿಣಾಯನದಿಂದ ಉತ್ತರಾಯಣದ ಕಡೆಗೆ ತನ ಪಥ ಬದಲಿಸಿ ತನ್ನ ಪ್ರಖರತೆಯನ್ನು ಹೆಚ್ಚಿಸಿಕೊಂಡು ಎಲ್ಲವೂ ಹೊಸದಾಗಿಯೇ ಇರುವುದರಿಂದ ಚೈತ್ರಮಾಸದ ಶುದ್ಧ ಪ್ರತಿಪದವನ್ನು ಹೊಸ ವರ್ಷ ಯುಗಾದಿ ಹಬ್ಬ ಎಂದು ಆಚರಿಸುತ್ತೇವೆ. ಯುಗಾದಿ ಎಂಬ ಶಬ್ದವು ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಶಬ್ದಗಳ ಸಮ್ಮಿಳನವಾಗಿದೆ. ಇಲ್ಲಿ ಯುಗ ಎಂದರೆ ನಾವು ವರ್ಷೆಂದು ಭಾವಿಸಿಕೊಂಡು ಹೊಸವರ್ಷವೆಂದು ಆಚರಿಸುತ್ತೇವೆ.

ಹಿಂದುಗಳ ಪಾಲಿಗೆ ಹೊಸ ವರ್ಷದ ಆರಂಭವಾದ ಈ ಯುಗಾದಿಯನ್ನು ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ಸೂರ್ಯ ಮತ್ತು ಚಂದ್ರನ ಚಲನೆಯ ಆಧಾರದ ಮೇಲೆ ತಮಿಳುನಾಡು, ಕೇರಳ ಮತ್ತು ಕರಾವಳಿ ಭಾಗದ ಕರ್ನಾಟಕದವರು ಸೌರಮಾನ ಯುಗಾದಿಯನ್ನು ಆಚರಿಸಿದರೆ, ಬಹುತೇಕ ಕರ್ನಾಟಕ ಮತ್ತು ಆಂದ್ರ ಪ್ರದೇಶದವರು ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ. ಅಂತೆಯೇ ಗೋವಾ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಯುಗಾದಿಯನ್ನು ಗುಢಿಪಾಡವಾ ಎಂಬ ಹೆಸರಿನಲ್ಲಿ ಪ್ರತಿಯೊಂದು ಮನೆಗಳ ಮುಂದೆಯೂ ಗುಢಿ (ರೇಷ್ಮೆಯ ಧ್ವಜ ಅಥವಾ ಬಟ್ಟೆ)ಯನ್ನು ಒಂದು ಕೋಲಿನ ತುದಿಗೆ ಕಟ್ಟಿ ಮನೆಯ ಮುಂದೆ ನಿಲ್ಲಿಸುವ ಪದ್ದತಿ ಇದೆ.

ನಮಗೆ ಕಾಣುವ ಪ್ರತ್ಯಕ್ಷ ದೇವರುಗಳಲ್ಲಿ ಚಂದ್ರ ಮತ್ತು ಸೂರ್ಯ ಇಬ್ಬರಾಗಿದ್ದು ಅವುಗಳ ಚಲನವಲನದ ಆಧಾರದ ಮೇಲೆ ಚಾಂದ್ರಮಾನ ಮತ್ತು ಸೌರಮಾನ ಯುಗಾದಿ ಎಂಬ ಎರಡು ರೀತಿಯಲ್ಲಿ ಆಚರಿಸುವ ಸಂಪ್ರದಾಯವಿದೆ. ಚಂದ್ರನ ಚಲನೆಯನ್ನು ಆಧರಿಸಿ ವರ್ಷದಲ್ಲಿನ ದಿನಗಳನ್ನು ಲೆಕ್ಕಮಾಡುವುದಕ್ಕೆ ಚಾಂದ್ರಮಾನ ಎಂದು ಕರೆಯಲಾಗುತ್ತದೆ. ನಮಗೆ ಎಲ್ಲರಿಗೂ ತಿಳಿದಿರುವಂತೆ ಸೂರ್ಯನ ಸುತ್ತ ಭೂಮಿ ಸುತ್ತುತ್ತಿದ್ದು, ಭೂಮಿಯ ಸುತ್ತಾ ಚಂದನು ಸುತ್ತುತ್ತಾನೆ. ಹೀಗೆ ಚಂದ್ರ ಭೂಮಿಯನ್ನು ಒಂದು ಸುತ್ತು ಹಾಕುವುದಕ್ಕೆ ಸುಮಾರು 27 ದಿನಗಳು ಬೇಕಾಗುತ್ತದೆ. ಇನ್ನು ಒಂದು ತಿಂಗಳನ್ನು ಎರಡು ಪಕ್ಷಗಳಾಗಿ ವಿಂಗಡಿಸಿದ್ದು, ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೂ ಕೃಷ್ಣ ಪಕ್ಷ ಎಂದು ಮತ್ತು ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೂ ಶುಕ್ಲ ಪಕ್ಷ ಎಂದು ಕರೆಯಲಾಗುತ್ತದೆ. ಒಂದು ವರ್ಷದಲ್ಲಿ 12 ತಿಂಗಳು ಗಳು ಇದ್ದು ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕ, ಮಾರ್ಗಶೀರ್ಷ, ಪುಷ್ಯ, ಮಾಘ, ಫಾಲ್ಗುಣ ಎಂಬುದಾಗಿದ್ದು, ಈ ತಿಂಗಳುಗಳ ಹೆಸರು ಬರಲು ಒಟ್ಟು ೨೭ ನಕ್ಷತ್ರಗಳಲ್ಲಿ ಮೊದಲ ೧೨ ನಕ್ಷತ್ರಗಳು ಕಾರಣವಾಗಿವೆ. ಪಾಲ್ಗುಣ ಮಾಸದ ಅಮಾವಾಸ್ಯೆ ಕಳೆದು ಪಾಡ್ಯದ ದಿನ ಚಿತ್ರ ನಕ್ಷತ್ರ ಇರುವ ಕಾರಣ ಆ ತಿಂಗಳನ್ನು ಚೈತ್ರ ಮಾಸ ಎಂದು ಕರೆಯಾಗುತ್ತದೆ, ಚೈತ್ರ ಮಾಸದ ಅಮಾವಾಸ್ಯೆಯ ನಂತರ ಪಾಡ್ಯದ ದಿನ ವಿಶಾಖಾ ನಕ್ಷತ್ರ ಬರುವ ಕಾರಣ ಆ ತಿಂಗಳನ್ನು ವೈಶಾಖ ಮಾಸ ಎಂದು ಕರೆಯಲಾಗುತ್ತದೆ ಹೀಗೆ ಪ್ರತಿಯೊಂದು ತಿಂಗಳ ಹಿಂದೆ ನಕ್ಷತ್ರಗಳ ಹೆಸರು ಇದೆ, ಹಾಗಾಗಿಯೇ ಚಾಂದ್ರಮಾನದ ಯುಗಾದಿಯ ದಿನ ಕಾಲ ಕಾಲಕ್ಕೆ ಬದಲಾಗುತ್ತಿರುತ್ತದೆ.

ಸೌರಮಾನದವರು ಸೂರ್ಯನ ಅನುಗುಣವಾಗಿ ರಾಶಿಗಳಾದ ಮೇಷ ವೃಷಭ ಕಟಕ ಆಧಾರಿತವಾಗಿ ಲೆಕ್ಕಾಚಾರ ಮಾಡಲಾಗುತ್ತದೆ. ಪ್ರಪಂಚಲ್ಲಿ ಅತ್ಯಂತ ನಿಖರತೆ ಎಂದರೆ ಅದು ಸೂರ್ಯ ಮಾತ್ರಾವಾಗಿದ್ದು ಅದು ಎಂದಿಗೂ ಬದಲಾವಣೆ ಇಲ್ಲದ ಕಾರಣ ಸೌರಮಾನದ ಯುಗಾದಿ ಪ್ರತಿ ವರ್ಷ ಏಪ್ರಿಲ್ 14ಕ್ಕೆ ಮತ್ತು ಅದೇ ರೀತಿ ಮಕರ ಸಂಕ್ರಾಂತಿಯು ಜನವರಿ 14ಕ್ಕೆ ಬರುತ್ತದೆ

ಅಂದು ಪ್ರತಿಯೊಬ್ಬರ ಮನೆಯಲ್ಲೂ ಮುಖ್ಯದ್ವಾರಗಳು ಮತ್ತು ದೇವರ ಮನೆಯ ಬಾಗಿಲಿಗೆ ಮಾವಿನ ಎಲೆಗಳ ತಳಿರು ತೋರಣದ ಜೊತೆಗೆ ತುದಿಯಲ್ಲಿ ಚಿಗುರು ಬೇವಿನ ಕಡ್ದಿಗಳನ್ನು ಸಿಕ್ಕಿಸಿ ಅಲಂಕರಿಸುವ ಪರಿಪಾಠವಿದೆ. ನಾಗರ ಪಂಚಮಿ, ಗೌರಿ, ಗಣೇಶ, ಸುಬ್ಬರಾಯನ ಶ್ರಷ್ಠಿ ಮುಂತಾದ ಹಬ್ಬಗಳಿಗಿರುವಂತೆ ಇರುವ ನಿಷ್ಠೆ ನಿಯಮಗಳು ಈ ಹಬ್ಬಕ್ಕೆ ಇಲ್ಲವಾದರೂ, ಬೆಳ್ಳಂಬೆಳಿಗ್ಗೆ ಎಲ್ಲರೂ ಎದ್ದು, ತಮ್ಮ ನಿತ್ಯಕರ್ಮಗಳನ್ನು ಮುಗಿಸಿ, ಮನೆಯನ್ನು ಚೊಕ್ಕಗೋಳಿಸಿ ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ, ಆಬಾಲವೃಧ್ಧರಾದಿಯಾಗಿ ಕಡ್ಡಾಯವಾಗಿ ಎಣ್ಣೆಯ ಸ್ನಾನ ಮಾಡಿ ಹೊಸ ಹೊಸ ಬಟ್ಟೆಗಳನ್ನು ತೊಟ್ಟು , ದೇವರ ಮುಂದೆ ಹೊಸದಾಗಿ ತಂದಿದ್ದ ಪಂಚಾಂಗವನ್ನು ಇರಿಸಿ, ಬೇವು, ಬೆಲ್ಲ ಮತ್ತು ತುಪ್ಪ ಬೆರೆಸಿದ ನೈವೇದ್ಯ ದೊಂದಿಗೆ ಕುಲದೇವತೆಗಳನ್ನು ಪೂಜೆ ಮಾಡಿ,

yugadi

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ,

ಸರ್ವಾರಿಷ್ಟ ವಿನಾಶಾಯ ನಿಂಬಕಂ ದಳಭಕ್ಷಣಂ

ಎಂಬ ಶ್ಲೋಕ ಹೇಳುತ್ತಾ ಮನೆಯವರೆಲ್ಲರೂ, ಬೇವು ಬೆಲ್ಲವನ್ನು ಪ್ರಸಾದ ರೂಪದಲ್ಲಿ ಸೇವಿಸುವುದರ ಮೂಲಕ ಮೊದಲ ಹಂತದ ಹಬ್ಬ ಮುಗಿಯುತ್ತದೆ.

 

yugadi3

ಹಬ್ಬ ಎಂದ ಮೇಲೆ ಊಟ ಉಪಚಾರಗಳೇ ಅತ್ಯಂತ ಮಹತ್ವವಾಗಿರುತ್ತದೆ. ಅಂತೆಯೇ ನಮ್ಮ ಪ್ರತಿ ಹಬ್ಬಗಳಿಗೂ ಅದರದೇ ಆದ ವಿಶೇಷವಾದ ಸಿಹಿ ಪದಾರ್ಥವಿದ್ದಂತೆ ಕರ್ನಾಟಕ, ತಮಿಳು ನಾಡು ಮತ್ತು ಆಂಧ್ರ ಪ್ರದೇಶಗಳ ಯುಗಾದಿಯ ಹಬ್ಬಕ್ಕೆ ಕಾಯಿ ಹೋಳಿಗೆ ಅಥವಾ ಬೇಳೆ ಒಬ್ಬಟ್ಟು ಮಾಡುವ ಪದ್ದತಿಯಿದ್ದರೆ, ಕೊಂಕಣ ಮತ್ತು ಮಹಾರಾಷ್ಟ್ರಗಳಲ್ಲಿ ಅದನ್ನೇ ಪೂರನ್ ಪೋಳಿ ಎಂಬ ಹೆಸರಿನಲ್ಲಿ ಸಿಹಿ ಪದಾರ್ಥ ತಯಾರಿಸುತ್ತಾರೆ. ಈ ಒಬ್ಬಟ್ಟಿನ ಜೊತೆ, ಎಲೆಯ ತುದಿಗೆ ಒಬ್ಬಟ್ಟಿನ ಹೂರಣ, ಪಲ್ಯ, ಕೋಸಂಬರಿ, ಆಗಷ್ಟೇ ಮರದಿಂದ ಕಿತ್ತು ತಂದ ಎಳೆಯ ಮಾವಿನ ಕಾಯಿಯ ಚಿತ್ರಾನ್ನದ ಜೊತೆ ಒಬ್ಬಟ್ಟಿನ ಸಾರು ಅದಕ್ಕೆ ಒಂದೆರಡು ಮಿಳ್ಳೆ ಹಸನಾದ ತುಪ್ಪ ಸೇರಿಸಿ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಸೊರ್ ಸೊರ್ ಎಂದು ಶಬ್ಧ ಮಾಡುತ್ತಾ ಊಟ ಮಾಡುವುದನ್ನು ಹೇಳುವುದಕ್ಕಿಂತ ಸವಿಯುವುದೇ ಆನಂದ. ತಮ್ಮ ಮನೆಯಲ್ಲಿ ಮಾಡಿದ ಒಬ್ಬಟ್ಟನ್ನು ಅಕ್ಕ ಪಕ್ಕದವರಿಗೆ ಹಂಚಿ ಭಕ್ಷ ಭೂರಿ ಊಟ ಮಾಡಿದ ಪರಿಣಾಮವಾಗಿ ಆದ ಭುಕ್ತಾಯಾಸ ಕಳೆಯಲು ಒಂದೆರಡು ಘಂಟೆ ನಿದ್ದೆ ಮಾಡುವ ಮೂಲಕ ಎರಡನೇ ಹಂತದ ಹಬ್ಬದ ಆಚರಣೆ ಮುಗಿಯುತ್ತದೆ.

yugadi1

ಸಂಜೆ ಕೈಕಾಲು ಕೈಕಾಲು ಮುಖ ತೊಳೆದುಕೊಂಡು ಮನೆಯಲ್ಲಿ ದೇವರದೀಪ ಹಚ್ಚಿ ಮನೆಯ ಎಲ್ಲರೂ ದೇವರ ಮುಂದೆ ಕುಳಿತು ಬೆಳಿಗ್ಗೆ ಪೂಜೆ ಮಾಡಿದ್ದ ಪಂಚಾಂಗವನ್ನು ಶ್ರವಣ ಮಾಡುವ ಪದ್ದತಿಯಿದೆ. ಮನೆಯ ಹಿರಿಯರು ಪಂಚಾಂಗದಲ್ಲಿ ನಾಡಿನ ಈ ವರ್ಷದ ಫಲ, ಮಳೆ- ಬೇಳೆ, ದೇಶದ ಆದಾಯ ಮತ್ತು ವ್ಯಯಗಳನ್ನು ಓದಿದ ನಂತರ, ಮನೆಯ ಪ್ರತೀ ಸದಸ್ಯರ ರಾಶಿಗಳ ಅನುಗುಣವಾಗಿ ಅವರ ಆದಾಯ-ವ್ಯಯ, ಆರೋಗ್ಯ-ಅನಾರೋಗ್ಯ, ರಾಜ ಪೂಜಾ-ರಾಜ ಕೋಪ, ಸುಖ-ದುಃಖಗಳ ಜೊತೆ ಕಂದಾಯ ಫಲವನ್ನು ತಿಳಿಸುತ್ತಾರೆ. ದೇಶ ಫಲ ಮತ್ತು ತಮ್ಮ ರಾಶಿಯ ಫಲ ಚೆನ್ನಾಗಿದ್ದವರು ಸಂತಸವಾಗಿದ್ದರೆ, ತಮ್ಮ ರಾಶಿಯ ಫಲ ಚೆನ್ನಾಗಿಲ್ಲದವರು ತಮ್ಮ ಗ್ರಹಚಾರವನ್ನು ಹಳಿಯುತ್ತಾ , ಅದು ಏನಾಗುತ್ತಾದೆಯೋ ನೋಡೇ ಬಿಡೋಣ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ. ಕಾಲ ಕಾಲಕ್ಕೆ ಪೂಜಿಸುತ್ತಾ ಅವನನ್ನು ನಂಬಿದರೆ ಯಾವುದೇ ತೊಂದರೆಗಳು ಬರುವುದಿಲ್ಲ ಎಂದು ಭಗವಂತನ ಮೇಲೆ ಹೊಣೆ ಹಾಕುತ್ತಾರೆ. ಆದಾದ ನಂತರ ಎಲ್ಲರೂ ಹತ್ತಿರದ ದೇವಾಲಯಗಳಿಗೆ ಹೋಗಿ ದೇವರ ದರ್ಶನ ಮಾಡಿ ಮನೆಗೆ ಹಿಂದಿರುಗಿದ ನಂತರ ಮಧ್ಯಾಹ್ನ ಮಾಡಿದ್ದ ಅಡುಗೆಯನ್ನೇ ಬಿಸಿ ಮಾಡಿಕೊಂಡು ತಿನ್ನುವುದರ ಮೂಲಕ ಯುಗಾದಿ ಹಬ್ಬ ಸಂಪೂರ್ಣವಾಗುತ್ತದೆ.

ಇನ್ನು ಹಳ್ಳಿಗಳಲ್ಲಿ ಊರಿನ ಕುಲ ಪುರೋಹಿತರು ಅಥವಾ ಪಂಡಿತರು ಯುಗಾದಿಯ ಸಂಜೆ ಊರಿನ ದೇವಸ್ಥಾನಗಳಲ್ಲೋ ಅಥವಾ ಅರಳಿ ಕಟ್ಟೆಯ ಮುಂದೆ ಕುಳಿತುಕೊಂಡು ಎಲ್ಲರ ಸಮ್ಮುಖದಲ್ಲಿ ಹೊಸ ಪಂಚಾಂಗದ ಪ್ರಕಾರ ಮಳೆ, ಬೆಳೆ, ದೇಶಕ್ಕೆ ಮುಂದೆ ಬಹುದಾದ ವಿಪತ್ತುಗಳು ಮತ್ತು ಸೂರ್ಯ ಚಂದ್ರ ಗ್ರಹಣಗಳ ಬಗ್ಗೆ ಓದಿ ಹೇಳುತ್ತಾರೆ. ಸದಾ ಪುರದ ಹಿತವನ್ನೇ ಕಾಪಾಡುವ ಪುರೋಹಿತರಿಗೆ ರೈತಾಪಿ ಜನರುಗಳು ಯಥಾ ಶಕ್ತಿ ಧನ ಧಾನ್ಯಗಳನ್ನು ಕೊಟ್ಟು ಅವರ ಆಶೀರ್ವಾದ ಪಡೆಯುವ ಸಂಪ್ರದಾಯ ಹಲವೆಡೆ ಇನ್ನೂ ಜಾರಿಯಲ್ಲಿದೆ. ಅಂತೆಯೇ ಯುಗಾದಿ ಹಬ್ಬದ ಸಂಜೆ ಏನಾದರೂ ಮಳೆ ಬಂತೆಂದರೆ , ಆ ವರ್ಷ ಉತ್ತಮ ಮಳೆಯಾಗಿ, ಉತ್ತಮ ಬೆಳೆ ಬಂದು, ಊರು ಸುಭಿಕ್ಷವಾಗಿರುತ್ತದೆ ಎಂಬ ನಂಬಿಕೆಯೂ ರೈತಾಪಿ ಜನರಲ್ಲಿದೆ

ಇನ್ನು ಯುಗಾದಿಹಬ್ಬ ಮುಗಿದ ಮಾರನೇ ದಿನವನ್ನು ವರ್ಷತೊಡಕು ಎಂದೂ ಆಚರಿಸುತ್ತಾರೆ. ಅಂದೂ ಕೂಡಾ ಹಬ್ಬದ ವಾತಾವರಣವೇ ಇದ್ದು, ಮುಂಜಾನೆ ಎದ್ದು ಸ್ನಾನ ಮಾಡಿ ಮಡಿಯುಟ್ಟು ದೇವರನ್ನು ಪೂಜಿಸಿ ಗುರುಹಿರಿಯರಿಗೆ ನಮಸ್ಕರಿಸುತ್ತಾರೆ. ವರ್ಷ ತೊಡಕು ಎಂದರೆ ಒಳ್ಳೆಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ದಿನ. ಈ ದಿನದ ಫಲ ಹೇಗಿರುತ್ತದೇಯೋ ಅದು ವರ್ಷವಿಡೀ ಇರುತ್ತದೆ ಎಂಬ ನಂಬಿಕೆ ಇರುವ ಕಾರಣ ಅಂದು ಉದ್ದೇಶ ಪೂರ್ವಕವಾಗಿ ಯಾವುದೇ ಕೆಟ್ಟ ಕೆಲಸಗಳನ್ನು ಮಾಡುವುದಿಲ್ಲ. ಇದನ್ನೇ ನೆಪ ಮಾಡಿಕೊಳ್ಳುವ ಮಕ್ಕಳು ಅಮ್ಮಾ ಇವತ್ತು ವರ್ಷದ ತೊಡಕು ಸುಮ್ಮನೆ ಬಯ್ಯಬೇಡಿ, ಹೊಡೆಯಬೇಡಿ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದು ಪರಿಸ್ಥಿತಿಯ ಲಾಭವನ್ನೂ ಪಡೆಯುವುದುಂಟು

ಇನ್ನು ಮಾಂಸಾಹಾರಿಗಳು, ಯುಗಾದಿ ಹಬ್ಬದಂದು ಕೇವಲ ಸಿಹಿ ಪದಾರ್ಥಗಳನ್ನೇ ತಿಂದವರು, ವರ್ಷದ ತೊಡಕಿನಂದು ಕಡ್ಡಾಯವಾಗಿ ಮಾಂಸದ ಅಡುಗೆಗಳನ್ನೇ ಮಾಡುವ ಪರಿಪಾಠವಿದೆ. ಮಾಂಸಾಹಾರದ ಜೊತೆಗೆ ಮದ್ಯ ಸೇವನೆಯೂ ಈ ವರ್ಷತೊಡಕಿನ ಆಚರಣೆಯ ಭಾಗಗಳಲ್ಲೊಂದಾಗಿ ಹೋಗಿರುವುದು ವಿಪರ್ಯಾಸವಾಗಿದೆ.

ಬೇರೆ ಯಾವ ಹಬ್ಬದಲ್ಲಿ ಇಲ್ಲದಿದ್ದರೂ ಯುಗಾದಿ ಮತ್ತು ವರ್ಷತೊಡಕಿನಂದು ಜೂಜಾಡುವುದೂ ಒಂದು ಆಚರಣೆಯಾಗಿ ಬೆಳೆದುಬಿಟ್ಟಿದೆ. ಹಳ್ಳಿಗಳಲ್ಲಿ ಸಂಜೆ ಪಂಚಾಂಗ ಶ್ರವಣಕ್ಕೆ ಮುಂಚೆ, ಹುಡುಗರು ಕಬಡ್ಡಿ, ವಾಲೀಬಾಲ್, ಖೋಖೋ, ಲಗೋರಿ, ಗುಂಡುಕಲ್ಲು ಎತ್ತಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರೆ, ವಯಸ್ಕರುಗಳು ಬಾಜಿ ಕಟ್ಟಿ ಕೋಳಿ ಕಾಳಗ, ಟಗರು ಕಾಳಗ ಇಲ್ಲವೇ ಇಸ್ಪೀಟ್ ಆಟವಾಡುತ್ತಾ ದಿನ ಕಳೆಯುತ್ತಾರೆ. ಈ ಹಬ್ಬದಂದು ಜೂಜು ಸಾಂಪ್ರಾದಾಯವಾಗಿರುವ ಕಾರಣ ಪೋಲೀಸರೂ ಅದೋಂದು ದಿನ ನೋಡಿದರೂ ನೋಡದ ಹಾಗೆ ಜಾಣ ಕುರುಡನ್ನು ಪ್ರದರ್ಶಿಸುತ್ತಾರೆ.

ಇನ್ನು ನಮಗೆಲ್ಲೆರಿಗೂ ತಿಳಿದಿರುವಂತೆ ನಮ್ಮ ಸನಾತನ ಧರ್ಮದಲ್ಲಿ 60 ಸಂವತ್ಸರಗಳಿದ್ದು ಆ ಸಂವತ್ಸರಗಳ ಹೆಸರುಗಳು ನಾರದರ ಮಕ್ಕಳ ಹೆಸರುಗಳು ಎಂದು ಪುರಾಣದಲ್ಲಿ ಉಲ್ಲೇಖವಿದೆ. ನಮಗೆಲ್ಲರಿಗೂ ತಿಳಿದಿರುವಂತೆ ನಾರದರು ಬ್ರಹ್ಮಚಾರಿಗಳು ಆದರೆ ಅವರಿಗೆ 60ಮಕ್ಕಳೇ ಎಂಬ ಸಂದೇಹ ಬರುವುದು ಸಹಜ. ಮಹಾವಿಷ್ಣುವಿನ ಪರಮ ಭಕ್ತರಾದ ನಾರದರ ಗರ್ವವನ್ನು ಕಡಿಮೆ ಮಾಡುವ ಸಲುವಾಗಿ ಮಹಾವಿಷ್ಣುವು ನಾರದರನ್ನು ಮಹಿಳೆಯನ್ನಾಗಿ ಪರಿವರ್ತನೆ ಮಾಡುತ್ತಾರೆ. ಸ್ತ್ರೀ ರೂಪದಲ್ಲಿದ್ದ ನಾರದರನ್ನು ರಾಜನೊಬ್ಬನು ಮದುವೆಯಾಗಿ ಅವರಿಗೆ 60 ಮಕ್ಕಳಾಗುತ್ತದೆ. ಮುಂದೆ ನಡೆದ ಯುದ್ಧವೊಂದರಲ್ಲಿ ಆ 60 ಮಕ್ಕಳೂ ಸತ್ತುಹೋದಾಗ, ತನ್ನ ಮಕ್ಕಳನ್ನು ಬದುಕಿಸಿಕೊಡು ಎಂದು ಆ ಮಕ್ಕಳ ತಾಯಿ ಭಗವಾನ್ ವಿಷ್ಣುವಿನಲ್ಲಿ ಶರಣಾದಾಗ, ಭಗವಾನ್ ವಿಷ್ಣುವು ನಾರದರ ಅಹಂನ್ನು ತೊಡೆದು ಹಾಕಿ, ನಿನ್ನ ಮಕ್ಕಳು ಸಂವತ್ಸರಗಳ ಹೆಸರಿನಿಂದ ಖ್ಯಾತಿ ಪಡೆಯುವಂತಾಗಿ ಎಂದು ವರವನ್ನು ನೀಡುತ್ತಾನೆ.

ಆ 60 ಸಂವತ್ಸರಗಳ ಹೆಸರು ಮತ್ತು ಅದರ ಅರ್ಥಗಳು ಹೀಗಿದೆ

1. ಪ್ರಭವ – ಯಜ್ಞಗಳು ಹೇರಳವಾಗಿ ನಡೆಯುತ್ತವೆ
2. ವಿಭವ – ಆರಾಮವಾಗಿ ಜೀವಿಸುತ್ತಾರೆ
3. ಶುಕ್ಲ – ಸಮೃದ್ಧ ಬೆಳೆಗಳನ್ನು ಬಯಸುತ್ತಾರೆ
4. ಪ್ರಮೋದೂತ – ಎಲ್ಲರಿಗೂ ಸಂತೋಷವನ್ನು ನೀಡುತ್ತದೆ
5. ಪ್ರಜೋತ್ಪತ್ತಿ – ಎಲ್ಲರಿಗೂ ಸಂತೋಷವನ್ನು ನೀಡುತ್ತದೆ
6. ಆಂಗೀರಸ – ಭೋಗಗಳು ಉಂಟಾಗುತ್ತವೆ
7. ಶ್ರೀಮುಖ – ಸಂಪನ್ಮೂಲಗಳು ಹೇರಳವಾಗಿದೆ
8. ಭಾವ – ಉನ್ನತ ಭಾವನೆಗಳನ್ನು ಹೊಂದಿರುತ್ತಾರೆ
9. ಯುವ – ಮಳೆ ಬೀಳುತ್ತದೆ, ಬೆಳೆಗಳು ಸಮೃದ್ಧವಾಗಿ ಕೊಯ್ಲು ಮಾಡಲಾಗುತ್ತದೆ
10. ಧಾತ್ರಿ – ರೋಗಗಳು ಕಡಿಮೆಯಾಗುವುದು
11. ಈಶ್ವರ – ಯೋಗಕ್ಷೇಮ, ಆರೋಗ್ಯವನ್ನು ಸೂಚಿಸುತ್ತದೆ
12. ಬಹುಧಾನ್ಯ – ದೇಶವು ಸಮೃದ್ಧ ಮತ್ತು ಸಂತೋಷದಿಂದ ಇರಬೇಕೆಂದು ಸೂಚಿಸುತ್ತದೆ
13. ಪ್ರಮಾಥಿ – ಮಳೆ ಸಾಧಾರಣವಾಗಿದೆ
14. ವಿಕ್ರಮ – ಬೆಳೆಗಳು ಚೆನ್ನಾಗಿ ಬೆಳೆದು ರೈತರಿಗೆ ಸಂತೋಷ
15. ವೃಷ/ ವಿಷು – ಮಳೆ ಸಮೃದ್ಧವಾಗಿ ಬೀಳುತ್ತದೆ
16. ಚಿತ್ರಭಾನು – ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುವರು
17. ಸ್ವಭಾನು – ಸಮೃದ್ಧವಾಗಿ ಮಳೆ ಆಗುತ್ತದೆ.
18. ತಾರಣ – ಯೋಗಕ್ಷೇಮ, ಆರೋಗ್ಯ
19. ಪಾರ್ಥಿವ – ಸಂಪತ್ತು ಹೆಚ್ಚಾಗುತ್ತದೆ
20. ವ್ಯಯ – ಸಾಕಷ್ಟು ಮಳೆಯಾಗುತ್ತದೆ
21. ಸರ್ವಜಿತ್ – ಸಮೃದ್ಧಿ ಆಗಲಿದೆ.
22. ಸರ್ವಧಾರಿ – ಸಮೃದ್ಧಿಯಾಗಲಿದೆ
23. ವಿರೋಧಿ – ಮಳೆಯಿಲ್ಲದೆ ಸಂಕಷ್ಟದ ಕಾಲ
24. ವಿಕೃತ – ಈ ಸಮಯ ಭಯಾನಕವಾಗಿದೆ
25. ಖರ – ಪರಿಸ್ಥಿತಿ ಸಹಜವಾಗಿರುತ್ತದೆ
26. ನಂದನ – ಸಾಮಾನ್ಯ ಪರಿಸ್ಥಿತಿಗಳಿವೆ
27. ವಿಜಯ – ಶತ್ರುಗಳನ್ನು ಗೆಲ್ಲುತ್ತಾರೆ
28. ಜಯ – ಲಾಭ ಮತ್ತು ಯಶಸ್ಸು
29. ಮನ್ಮಥ – ಜ್ವರ ಬಾಧೆಗಳು ದೂರಾಗುತ್ತದೆ
30. ದುರ್ಮುಖಿ – ಕಷ್ಟ ಇರುವವರಿಗೆ ಸಮಸ್ಯೆ ಕಳೆಯುತ್ತದೆ
31. ಹೇವಿಳಂಬಿ – ಜನರು ಸಂತೋಷವಾಗಿರುತ್ತಾರೆ
32. ವಿಳಂಬಿ – ಸಮೃದ್ಧಿಯಾಗಲಿದೆ
33. ವಿಕಾರಿ – ಅನಾರೋಗ್ಯ ಉಂಟು ಮಾಡುತ್ತದೆ
34. ಶಾರ್ವರಿ – ಬೆಳೆಗಳ ಇಳುವರಿ ಕಡಿಮೆ
35. ಪ್ಲವ – ನೀರು ಸಮೃದ್ಧವಾಗಿರುತ್ತದೆ
36. ಶುಭಕೃತ್ – ಮಂಗಳಕರ
37. ಶೋಭಾಕೃತ್ – ಲಾಭ ನೀಡುತ್ತದೆ
38. ಕ್ರೋಧಿ – ಕೋಪ ಉಂಟು ಮಾಡುತ್ತದೆ
39. ವಿಶ್ವಾವಸು – ಸಂಪತ್ತು ಹೇರಳವಾಗುತ್ತದೆ
40. ಪರಾಭವ – ಜನರು ಭ್ರಮೆಗಳಿಂದ ನರಳುತ್ತಾರೆ
41. ಪ್ಲವಂಗ – ನೀರು ಸಮೃದ್ಧವಾಗಿರುತ್ತದೆ
42. ಕೀಲಕ – ಪ್ರಮುಖ ಬೆಳೆಗಳು ಚೆನ್ನಾಗಿರತ್ತದೆ
43. ಸೌಮ್ಯ – ಅನೂಕೂಲಕರ ಫಲಿತಾಂಶಗಳು ಹೆಚ್ಚು
44. ಸಾಧಾರಣ – ಸಾಮಾನ್ಯವಾಗಿರುತ್ತದೆ
45. ವಿರೋಧಿಕೃತ್ – ಜನರಲ್ಲಿ ದ್ವೇಷ ಉಂಟಾಗುತ್ತದೆ
46. ಪರಿಧಾವಿ – ಜನರಲ್ಲಿ ಭಯ ಕಾಡುತ್ತದೆ
47. ಪ್ರಮಾದೀ – ಪ್ರಮಾದಗಳು ಹೆಚ್ಚು
48. ಆನಂದ – ಸಂತೋಷವಾಗಿರುತ್ತದೆ
49. ರಾಕ್ಷಸ – ಕಠಿಣ ಹೃದಯ
50. ನಳ – ಬೆಳೆಗಳು ಚೆನ್ನಾಗಿರುತ್ತದೆ
51. ಪಿಂಗಳ – ಸಾಮಾನ್ಯ ಫಲಿತಾಂಶ
52. ಕಾಳಯುಕ್ತಿ – ಸಮಯೋಚಿತ ಫಲಿತಾಂಶಗಳು ದೊರೆಯುತ್ತವೆ
53. ಸಿದ್ಧಾರ್ಥಿ – ಕಾರ್ಯ ಸಿದ್ಧಿ
54. ರುದ್ರ / ರೌದ್ರಿ – ಜನರಿಗೆ ಸಣ್ಣ ನೋವುಗಳಿರುತ್ತವೆ
55. ದುರ್ಮತಿ – ಮಳೆ ಸಾಮಾನ್ಯವಾಗಿರುತ್ತದೆ
56. ದುಂದುಭಿ – ಯೋಗಕ್ಷೇಮ, ಧ್ಯಾನ
57. ರುಧಿರೋದ್ಗಾರಿ – ಪ್ರಮಾದಗಳು ಹೆಚ್ಚು
58. ರಕ್ತಾಕ್ಷಿ – ಅಶುಭಗಳು ಸಂಭವಿಸುತ್ತವೆ
59. ಕ್ರೋಧನ – ಯಶಸ್ಸು ಲಭಿಸುತ್ತದೆ
60. ಅಕ್ಷಯ/ಕ್ಷಯ – ಅಕ್ಷಯ ಸಂಪತ್ತು

ಪರಾಭವ ನಾಮ ಸಂವತ್ಸರವು ಹಿಂದೂ ಪಂಚಾಂಗದ 60 ವರ್ಷಗಳ ಚಕ್ರದಲ್ಲಿ 40ನೇ ವರ್ಷ ಆಗಿದ್ದು, ಈ ಸಂವತ್ಸರದಲ್ಲಿ, ನಮ್ಮ ಅಹಂಕಾರ ಮತ್ತು ನಕಾರಾತ್ಮಕ ಗುಣಗಳ ಪರಾಭವವನ್ನು (ಸೋಲನ್ನು) ಸೂಚಿಸುತ್ತದೆ. ಈ ವರ್ಷವು ನಮ್ಮ ಆತ್ಮ ಪರಿಶೀಲನೆ ಮತ್ತು ಆತ್ಮ ಶುದ್ಧಿಗೆ ಹೆಚ್ಚಿನ ಮಹತ್ವ ನೀಡಿ, ಆಧ್ಯಾತ್ಮದತ್ತ ಹೆಚ್ಚಿನ ಒಲವನ್ನು ತೋರಿಸಲು ಸಹಕರಿಸುತ್ತದೆ. ಹೀಗೆ ನಮ್ಮ ಹಿರಿಯರು ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಒಂದೊಂದು ಪ್ರತೀತಿಯನ್ನು ಸಂಪ್ರದಾಯದ ಮೂಲಕ ಆಚರಣೆಯಲ್ಲಿ ತಂದಿದ್ದಾರೆ. ನಾವುಗಳು ಆ ಹಬ್ಬಗಳ ನಿಜವಾದ ಅರ್ಥವನ್ನು ತಿಳಿದು ಆಚರಿಸಿದರೆ ಹಬ್ಬ ಮಾಡಿದ್ದಕ್ಕೂ ಸಾರ್ಥಕ ಮತ್ತು ಎಲ್ಲರ ಮನಸ್ಸಿಗೂ ನಮ್ಮದಿ, ಸುಖಃ ಮತ್ತು ಸಂತೋಷ ಇರುತ್ತದೆ.

ಏನಂತೀರೀ?

3 thoughts on “ಚಾಂದ್ರಮಾನ ಯುಗಾದಿ

  1. Very well explained, I remember my father use to tell us when we were young, I didn’t knew how to explain about the importance of Ugadi to our kids, now I can explain and also I shared this link with my elder daughter and asked her to go thru this article.

    Liked by 1 person

  2. Very well explained, I remember my father use to tell us when we were young, I didn’t knew how to explain about the importance of Ugadi to our kids, now I can explain and also I shared this link with my elder daughter and asked her to go thru this article.

    Liked by 1 person

Leave a reply to Narasimha Raju Cancel reply