Time Bank, ಸಮಯದ ಬ್ಯಾಂಕು

ಮೊನ್ನೆ ಪರಿಚಯಸ್ತರೊಬ್ಬರ ಮನೆಗೆ ಹೋಗಿದ್ದೆ. ಹೀಗೇ ಅವರ ಬಳಿ ಮಾತಾನಾಡುತ್ತಿದ್ದಾಗ ಮಾತಿನ ಮಧ್ಯದಲ್ಲಿ ಸ್ವಿಡ್ವರ್ಲ್ಯಾಂಡಿನಲ್ಲಿ ಇರುವ ನಿಮ್ಮ ಮಗ ಹೇಗಿದ್ದಾರೆ ಎಂದು ಕೇಳಿದೆ. ಓ ಆವನಾ… ಹೂಂ ಈಗ ಚೆನ್ನಾಗಿದ್ದಾನೆ ಅಂದರು. ಓ ಅವನಾ.. ಎಂಬ ದೀರ್ಘ ಎಳೆದದ್ದು ನನಗೆ ಏನೂ ಸಮಸ್ಯೆ ಇರಬೇಕು ಎಂದು ತಿಳಿದು, ಯಾಕೆ ಏನಾಯ್ತು? ಎಲ್ಲಾ ಸರಿಯಾಗಿದೆ ತಾನೇ ಎಂದು ಮರು ಪ್ರಶ್ನಿಸಿದೆ. ಹೇ.. ಹೇ.. ಹಾಗೇನಿಲ್ಲಾ ಎಲ್ಲಾವೂ ಚೆನ್ನಾಗಿದೆ. ಒಂದೆರಡು ತಿಂಗಳ ಹಿಂದೆ ನಮ್ಮ ಮಗ ಅಲ್ಲಿ ತನ್ನ ಆಫೀಸಿಗೆ ಹತ್ತಿರದಲ್ಲೇ ಇರುವ ಹೊಸ ಮನೆಗೆ ಹೋದ. ಸಂಜೆ ಆಫೀಸ್ ಮುಗಿಸಿದ ನಂತರ ಮತ್ತು ವಾರಾಂತ್ಯದಲ್ಲಿ ನಮ್ಮ ಮಗ ಮನೆಯಲ್ಲಿ ಇರದೆ ಸದಾ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ಇರುವುದನ್ನು ನೋಡಿ ಅವನ ಮನೆಯ ಮಾಲಿಕರಿಗೆ ಆಶ್ವರ್ಯವಾಗಿತ್ತಂತೆ. ಎರಡು ವಾರಗಳ ಹಿಂದೆ ನಮ್ಮ ಮಗ ಇದ್ದಕ್ಕಿದ್ದಂತಯೇ ಹುಷಾರು ತಪ್ಪಿ, ಏಳಲೂ ಆಗದೇ ಕೂರಲೂ ಆಗದೆ ಮನೆಯಲ್ಲಿಯೇ ಉಳಿದು ಬಿಟ್ಟಿದ್ದಾನೆ. ಇಡೀ ದಿನ ಮನೆಯಿಂದ ಹೊರಗೆ ಬಂದಿಲ್ಲದಿದ್ದನ್ನು ಗಮನಿಸಿದ ಅವರ ಮನೆಯ ಮಾಲಿಕರು ನಮ್ಮ ಮಗನ ಮನೆಗೆ ಬಂದು ನೋಡಿದಾಗ, ನಮ್ಮ ಮಗ ಹುಷಾರು ತಪ್ಪಿದ್ದನ್ನು ನೋಡಿ ಅವರ ಕಾರ್ನಲ್ಲಿಯೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಡ್ಮಿಟ್ ಮಾಡಿಸಿದ್ದಾರೆ. ಡಾಕ್ಟರ್ ನನ್ನ ಮಗನನ್ನು ಪರೀಕ್ಷಿಸಿ ವೈರಲ್ ಜ್ವರ ಬಂದಿರುವುದರಿಂದ ಎರಡು ಮೂರು ದಿನ ಆಸ್ಪತ್ರೆಯಲ್ಲಿಯೇ ಉಳಿಯಬೇಕು ಎಂದು ತಿಳಿಸಿದ್ದಾರೆ. ಇದನ್ನು ಕೇಳಿದ ಮನೆಯ ಮಾಲಿಕರಿಗೆ ಕಸಿವಿಸಿ. ಇದೊಳ್ಳೆ ಗ್ರಹಚಾರವಾಯಿತಲ್ಲಾ. ಇವನೋ ಬ್ರಹ್ಮಚಾರಿ ಇವನನ್ನು ನೋಡಿ ಕೊಳ್ಳಲು ಯಾರೂ ಇಲ್ಲ. ಸುಮ್ಮನೆ ಆಸ್ಪತ್ರೆಗೆ ಕರೆದು ಕೊಂಡು ಬಂದ ತಪ್ಪಿಗೆ ತಾವೇ ನೋಡಿಕೊಳ್ಳಬೇಕಾಯಿತಲ್ಲಾ ಎಂದು ಪರಿತಪಿಸುತ್ತಿರುವುದನ್ನು ಗಮನಿಸಿದ ನಮ್ಮ ಮಗ. ಸಾರ್ ನೀವೇನೂ ಯೋಚನೆ ಮಾಡಬೇಡಿ. ನನ್ನನ್ನು ನೋಡಿಕೊಳ್ಳಲು ಜನರಿದ್ದಾರೆ. ನನ್ನ ಟೈಮ್ ಬ್ಯಾಂಕ್ನಲ್ಲಿ ಸಾಕಷ್ತು ಪಾಯಿಂಟ್ ಇದೆ ಎಂದನಂತೆ. ಸುಮ್ಮನೆ ನಾನು ನನ್ನ ಅನಾರೋಗ್ಯದ ವಿಷಯವನ್ನು ನಮ್ಮ Time Bank Appನಲ್ಲಿ ತಿಳಿಸಿದರೆ ಆಯಿತು. ಸಹಾಯ ಮಾಡಲು ಸುಮಾರು ಜನ ಸದಸ್ಯರು ಬರುತ್ತಾರೆ ಎಂದನಂತೆ. ಹಾಗೆ update ಮಾಡಿದ ಗಂಟೆಯೊಳಗೆ ಒಂದಿಬ್ಬರು ಆಸ್ಪತ್ರೆಗೆ ಬಂದು ಇವನ ಆರೋಗ್ಯವನ್ನು ವಿಚಾರಿಸಿ, ಆವನಿಗೆ ಬೇಕಾಗಿರುವ ವ್ಯವಸ್ಥೆ ಮತ್ತು ಸೇವೆಗಳನ್ನು ವಿಚಾರಿಸಿ, ಮನೆಯ ಮಾಲಿಕರಿಗೆ ಧನ್ಯವಾದಗಳನ್ನು ತಿಳಿಸಿ, ತಾವು ಇನ್ನು ಹೊರಡಬಹುದು ಇವರು ಆಸ್ಪತ್ರೆಯಲ್ಲಿ ಇರುವವರೆಗೂ ನಾವೇ ನೋಡಿಕೊಳ್ಳುತ್ತೇವೆ ಎಂದರಂತೆ.

ಇದನ್ನು ಗಮನಿಸಿದ ಮನೆಯ ಮಾಲೀಕರು, ನಮ್ಮ ಮನೆಯ ಬಾಡಿಗೆದಾರ ಭಾರತೀಯ, ಅವನಿಗೆ ಸಹಾಯ ಮಾಡಲು ಬಂದಿರುವವರು ಸ್ಥಳಿಯರು ಹಾಗಾಗಿ ಕುತೂಹಲದಿಂದ ನಿಮ್ಮ ಪರಿಚಯ ಆಗಲಿಲ್ಲ. ನೀವೇನು ಇವರ ಸ್ನೇಹಿತರಾ? ಇಲ್ಲವೇ ಸಹೋದ್ಯೋಗಿಗಳಾ ಎಂದು ವಿಚಾರಿಸಿದಾಗ, ಇಲ್ಲಾ ಸಾರ್. ನಮಗೆ ಇವರ ಪರಿಚಯವಿಲ್ಲ. ಆದರೆ ಇವರು ನಮ್ಮ Time Bank ಸದಸ್ಯರು. ತಮ್ಮ ಸಂದಿಗ್ದ ಪರಿಸ್ಥಿತಿಯಲ್ಲಿ ತಮ್ಮ ಉಳಿತಾಯದ ಸಮಯವನ್ನು ಈಗ ತಮ್ಮ ಸೇವೆಗಾಗಿ ಬಳೆಸಿಕೊಳ್ಳುತ್ತಿದ್ದಾರೆ. ನಾವು ಇವರಿಗೆ ಸಹಾಯ ಮಾಡುತ್ತಾ ನಮ್ಮ ಪರಿಶ್ರಮದ ಸಮಯವನ್ನು ಸಮಯದ ಬ್ಯಾಂಕಿನಲ್ಲಿ ಜಮೆ ಮಾಡುತ್ತೇವೆ ಎಂದರಂತೆ ಎಂದು ತಿಳಿಸಿ, ಸಮಯ ಬ್ಯಾಂಕು ಎಂಬುದು ಒಂದು ಪರಸ್ಪರ-ಆಧಾರಿತ ಕೆಲಸದ ವ್ಯಾಪಾರ ವ್ಯವಸ್ಥೆಯಾಗಿದ್ದು ಇದರಲ್ಲಿ ಗಂಟೆಗಳ ಕರೆನ್ಸಿ ಇರುತ್ತದೆ. ಸಮಯ ಬ್ಯಾಂಕಿಂಗ್ನೊಂದಿಗೆ, ಒಂದು ಕೌಶಲ್ಯ ಹೊಂದಿದ ವ್ಯಕ್ತಿಯು ಬ್ಯಾಂಕುಗಳು ಮತ್ತು ಸೇವೆಗಳಿಗೆ ಪಾವತಿಸಬೇಕಾದ ಅಥವಾ ಪಾವತಿಸುವ ಬದಲು ಮತ್ತೊಂದು ಕೌಶಲ್ಯ ಸೆಟ್ನಲ್ಲಿ ಸಮಾನ ಸಮಯದ ಕೆಲಸಕ್ಕೆ ಕೆಲಸ ಮಾಡುವ ಸಮಯವನ್ನು ವಹಿಸಬಹುದು. ಇವರು ತಮ್ಮ ಬಿಡುವಿನ ವೇಳೆಯಲ್ಲಿ ಇತರರಿಗೆ ಸೇವೆ ಮಾಡಿದ್ದಾರೆ. ಹಾಗೆ ಸೇವೆ ಮಾಡಿದಷ್ಟು ಸಮಯವನ್ನು ನಮ್ಮಲ್ಲಿ ದಾಖಲಿಸಿದ್ದಾರೆ. ಈಗ ಅವರೇ ತೊಂದರೆಯಲ್ಲಿದ್ದಾಗ, ನಮ್ಮಂತಹ ಸದಸ್ಯರು ಅವರಲ್ಲಿದ್ದ ಕರೆನ್ಸಿಗೆ ತಕ್ಕಂತೆ ಅವರಿಗೆ ಬೇಕಾದ ಸೇವೆಗೆ ತಮ್ಮ ಉಳಿತಾಯದ ಸಮಯವನ್ನು ವಿನಿಯೋಗಿಸಿಕೊಳ್ಳಬಹುದು. ಇದೊಂದು ರೀತಿ ಪರಸ್ಪರ ಸೇವೆಯ ವಿನಿಮಯ ಮಾಡಿಕೊಳ್ಳುವ ಪದ್ದತಿ ಎಂದು ಸೂಕ್ಷ್ಮವಾಗಿ ವಿವರಿಸಿದ್ದಾನೆ. ಸದ್ಯ Time Bankನಿಂದಾಗಿ ನಮ್ಮ ಮಗ ಶೀಫ್ರವಾಗಿ ಗುಣಮುಖನಾಗಿ ಈಗ ಒಂದು ವಾರದ ಹಿಂದೆಯಿಂದ ಪುನಃ ಕೆಲಸಕ್ಕೆ ಹೋಗುತ್ತಿದ್ದಾನೆ ಎಂದು ತಿಳಿಸಿ ದೀರ್ಘ ನಿಟ್ಟುಸಿರು ಬಿಟ್ಟರು ಆ ಹಿರಿಯರು. ಮುಂದೆ ಹೀಗೆ ಆಗಬಾರದು ಎಂದು ಇನ್ನು ಎರಡು ಮೂರು ತಿಂಗಳ ಒಳಗೆ ಮದುವೆ ಮಾಡಬೇಕು ಎಂದು ನಿರ್ಧರಿಸಿದ್ದೇವೆ. ನಿನಗೆ ಗೊತ್ತಿರುವ ಯಾವುದಾದರೂ ಸಂಪ್ರದಾಯಸ್ತ, , ವಿದ್ಯಾವಂತ ಹುಡುಗಿ ಇದ್ದರೆ ತಿಳಿಸು ಎಂದು ಕೇಳಿಕೊಂಡರು. ಈಗ ನಾನು ನನ್ನ ಸಮಯವನ್ನು ಅವರ ಕುಟುಂಬಕ್ಕೆ ಅನುಗುಣವಾದ ಸೊಸೆಯನ್ನು ಹುಡುಕುವುದರಲ್ಲಿ ವಿನಿಯೋಗಿಸುತ್ತಿದ್ದೇನೆ.

ಮನೆಗೆ ಹಿಂತಿರುಗಿದ ನಂತರ ಕುತೂಹಲದಿಂದ ಸಮಯದ ಬ್ಯಾಂಕ್ (https://www.moneyland.ch/en/time-banking-currency-switzerland-guide) ಬಗ್ಗೆ ಅಂತರ್ಜಾಲದಲ್ಲಿ ಓದಿನೋಡಿದಾಗ, ಸಮಯ ಬ್ಯಾಂಕಿಂಗ್ ಹಿಂದಿನ ಕಲ್ಪನೆ ಬಹಳ ಸರಳವಾಗಿದೆ. ಒಬ್ಬ ವ್ಯಕ್ತಿ ಅಥವಾ ಘಟಕದ ಇನ್ನೊಂದು ಘಟಕದ ಸಮಯದ ಆಧಾರಿತ ಸೇವೆಯನ್ನು ಒದಗಿಸುತ್ತದೆ. ಈ ಸೇವೆ, ಐಟಿ ಸೇವೆಗಳು, ಸಮಾಲೋಚನೆ, ಶಿಶುಪಾಲನಾ, ಹೇರ್ ಡ್ರೆಸ್ಸಿಂಗ್, ತೋಟಗಾರಿಕೆ, ನಿರ್ಮಾಣ, ಪಾಠ ಅಥವಾ ಯಾವುದೇ ಸಮಯ ಆಧಾರಿತ ಸೇವೆಯನ್ನು ಒದಗಿಸುವ ಸಮಯವನ್ನು ಸಮಯ ಬ್ಯಾಂಕಿನಲ್ಲಿ ದಾಖಲಿಬಹುದಾಗಿದೆ. ಈ ರೀತಿಯಾಗಿ ಸಮಯ ಬ್ಯಾಂಕಿನಲ್ಲಿ ಸಂಗ್ರಹವಾದ ಸಮಯಗಳನ್ನು ಅಗತ್ಯವಿದ್ದಾಗ ಇತರ ವ್ಯಕ್ತಿಗಳಿಂದ ಸಮಯ-ಆಧಾರಿತ ಸೇವೆಗಳನ್ನು ಖರೀದಿಸಲು ಬಳಸಬಹುದಾಗಿದೆ.

ಸ್ವಿಜರ್ಲ್ಯಾಂಡಿನಲ್ಲಿ ಇಂತಹ ಪರ್ಯಾಯ ಕರೆನ್ಸಿಯ ದೀರ್ಘ ಸಂಪ್ರದಾಯಗಳೊಂದಿಗೆ, ಬ್ಯಾಂಕಿಂಗ್ ಮತ್ತು ಸಾಮಾಜಿಕ ಐಕಮತ್ಯವು ಹಲವಾರು ವರ್ಷಗಳಿಂದ ಜಾರಿಗೆಯಲ್ಲಿದೆ. . ದೇಶಾದ್ಯಂತ ಸುಮಾರು 40ಕ್ಕೂ ವಿಭಿನ್ನ ಸಮಯ ವಿನಿಮಯಗಳೊಂದಿಗೆ, ಈ ಕಾರ್ಯಕ್ರಮಗಳು ಸಮಯವನ್ನು ಗಳಿಸಲು ಮತ್ತು ಖರ್ಚು ಮಾಡಲು ಅವಕಾಶಗಳನ್ನು ಒದಗಿಸುತ್ತವೆ. ಸದಸ್ಯರು ಮಾಡಿದ ಸೇವೆಗಳ ಸಮಯಕ್ಕೆ ಬದಲಾಗಿ ಅವುಗಳನ್ನು ನಗದಾಗಿಯೂ ವಿನಿಮಯ ಮಾಡುವ ಅವಕಾಶವಿರುತ್ತದೆ. ಹಾಗಾಗಿ ಸ್ವಿಜರ್ಲ್ಯಾಂಡಿನ ಬಹುತೇಕರು ತಮ್ಮ ಬಿಡುವಿನ ಸಮಯದಲ್ಲಿ ಇಂತಹ ಸೇವೆಯನ್ನು ಮಾಡಿ ಸಮಯದ ಬ್ಯಾಂಕ್ನಲ್ಲಿ ಜಮೆ ಮಾಡುತ್ತಿದ್ದಾರೆ. ಅನೇಕ ಸಶಕ್ತ ನಿವೃತ್ತದಾರರೂ ಇದರ ಉಪಯೋಗದಿಂದ ನಿವೃತ್ತಿಯಾದ ನಂತರವೂ ಹಣವನ್ನು ಗಳಿಸುತ್ತಿದ್ದಾರೆ.

ಈ ವಿಷಯವನ್ನು ಓದುತ್ತಿದ್ದಾಗ, ಅರೇ ಭಾರತೀಯರಾದ ನಮಗೆ ಇದೇನೂ ಹೋಸದಲ್ಲ. ವಸುದೈವ ಕುಟುಂಬಕಂ ಅಂದರೆ ಇಡೀ ಜಗತ್ತೇ ಒಂದು ಕುಟುಂಬ ಎನ್ನುವುದೇ ನಮ್ಮ ಮೂಲ ಮಂತ್ರವಾಗಿದೆ.

ಪರೋಪಕಾರಾಯ ಫಲಂತಿ ವೃಕ್ಷಾಃ| ಪರೋಪಕಾರಾಯ ವಹಂತಿ ನದ್ಯಃ |

ಪರೋಪಕಾರಾಯ ದುಹಂತಿ ಗಾವಃ | ಪರೋಪಕಾರಾರ್ಥಮ್ ಇದಂ ಶರೀರಮ್ ||

ಪರೋಪಕಾರಕ್ಕಾಗಿಯೇ ಮರಗಳು ಹಣ್ಣುಕೊಡುತ್ತವೆ, ನದಿಗಳು ನೀರು ಇತರರ ಅನುಕೂಲಕ್ಕಾಗಿಯೇ ಇದೆ. ಹಸುಗಳು ಹಾಲನ್ನು ಕೊಡುವುದೂ ಸಹ ಬೇರೆಯವರಿಗಾಗಿಯೇ, ಆದೇ ರೀತಿ ನಮ್ಮ ದೇಹ ಇರುವುದೂ ಸಹ ಬೇರೆಯವರಿಗೆ ಉಪಕಾರ ಮಾಡುವುದಕ್ಕಾಗಿಯೇ ಎಂಬ ಈ ಪುರಾತನ ಸಂಸ್ಕೃತ ಶ್ಲೋಕವೇ ನಮ್ಮ ಸಂಸ್ಕೃತಿಯನ್ನು ನಮ್ಮ ಪರಸ್ಪರ ಉಪಕಾರವನ್ನು ಎತ್ತಿ ತೋರಿಸುತ್ತಿದೆ.

ನಾನೂ ಕೂಡ ನನ್ನ ಬ್ಲಾಗ್ನಲ್ಲಿ ನೆರೆಹೊರೆ (https://wp.me/paLWvR-I) ಎಂಬ ಲೇಖನವನ್ನು ಇದೇ ಕುರಿತಾಗಿಯೇ ಕೆಲವು ತಿಂಗಳಗಳ ಹಿಂದೆಯೇ ಬರೆದಿದ್ದೆ. ನಾವು ಯಾವುದೇ ಕೆಲಸವನ್ನು ಮಾಡುವಾಗಲೂ ನಾವು ಮಾಡುವ ಪುಣ್ಯ ಕೆಲಸಗಳು ನಮ್ಮ ಮಕ್ಕಳನ್ನು ಇಲ್ಲವೇ ಮೊಮ್ಮಕ್ಕಳನು ಕಾಪಾಡುತ್ತದೆ ಎಂದೇ ಭಾವಿಸಿಯೇ ಮಾಡುತ್ತೇವೆ. ನಾವು ಮಾಡಿದ ಒಳ್ಳೆಯ ಕೆಲಸಗಳನ್ನು ಆ ಭಗವಂತ ಲೆಕ್ಕ ಇಟ್ಟಿರುತ್ತಾನೆ ಮತ್ತು ಸಮಯ ಬಂದಾಗ ನಮ್ಮನ್ನು ಕಾಪಾಡುತ್ತಾನೆ ಎಂದೇ ನಂಬಿದ್ದೇವೆ ಮತ್ತು ಅಂತೆಯೇ ಇತರಿಗೆ ಸಹಾಸ ಹಸ್ತವನ್ನು ಚಾಚುತ್ತೇವೆ. ಇದೇ ಪರಿಕಲ್ಪನೆಯನ್ನು ಸ್ವಿಜರ್ಲ್ಯಾಂಡಿನಲ್ಲಿ ಮತ್ತು ಹಲವಾರು ವಿದೇಶಗಳಲ್ಲಿ ಸಮಯದ ಬ್ಯಾಂಕ್ ಎಂಬ ಹೆಸರಿನಲ್ಲಿ ಆಧುನೀಕರಣಗೊಳಿಸಿ ಅದಕ್ಕೊಂದು ವ್ಯವಹಾರ ರೂಪವನ್ನು ಕೊಟ್ಟಿದ್ದಾರೆ ಅಷ್ಟೇ.

ಇಂದಿಗೂ ನಮ್ಮ ಹಳ್ಳಿಗಳಲ್ಲಿ ಯಾವುದೇ ಸಭೆ ಸಮಾರಂಭಗಳಾಗಲೀ, ಜಾತ್ರೆಗಳಾಗಲೀ, ಸಾಮೂಹಿಕ ಮದುವೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಊರಿನ ಪ್ರತಿ ಮನೆಯ ಸದಸ್ಯರೂ ಒಂದಾಗಿಯೇ ತಮ್ಮ ತಮ್ಮ ಕುಶಲತೆಯ ತಕ್ಕಂತೆ ಜೋಡಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಾರೆ. ಇಂದಿಗೂ ಹಳ್ಳಿಗಳಲ್ಲಿ ಬೆಳೆ ಕಟಾವು ಮಾಡಿದ ನಂತರ ಹತ್ತಾರು ರೈತರು ಒಂದು ಕಡೆ ಕಣ ಮಾಡಿ ಎಲ್ಲರೂ ಒಗ್ಗಟ್ಟಾಗಿ ಎಲ್ಲರ ಬೆಳೆಗಳನ್ನೂ ಸ್ವಚ್ಚಗೊಳಿಸುತ್ತಾರೆ. ಇಲ್ಲಿ ತಾನು ಹೆಚ್ಚು ಇನ್ನೊಬ್ಬ ಕಡಿಮೆ ಎಂಬ ಭಾವನೆಗಳು ಇರುವುದಿಲ್ಲ ಮತ್ತು ಆಳು ಕಾಳುಗಳಿಗಳಿಗೆ ಕೂಲಿಯನ್ನು ಕೊಡುವುದಿಲ್ಲ. ಎಲ್ಲರ ಒಗ್ಗಟ್ಟಿನ ಪರಿಶ್ರಮವೇ ಇಲ್ಲಿ ಪ್ರಧಾನವಾಗುತ್ತದೆಯೇ ಹೊರತು ಯಾರೂ ಇಲ್ಲಿ ಯಾರೂ ತಮ್ಮ ಸೇವೆಯನ್ನು ಲೆಖ್ಖ ಇಡುವುದಿಲ್ಲ ಮತ್ತು ಅವರು ಮಾಡಿದ ಕೆಲಸಕ್ಕೆ ಪ್ರತಿಫಲಾಪೇಕ್ಷೆಯನ್ನೂ ಬಯಸುತ್ತಿರಲಿಲ್ಲ.

ಪಾಶ್ಚಾತ್ಯ ಸಂಸ್ಕೃತಿಯನ್ನು ಆದರಿಸುತ್ತಾ, ನಾವು ನಮ್ಮದೇ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ನಾವು ಮರೆಯುತ್ತಿದ್ದರೆ, ಪಾಶ್ಚಾತ್ಯರು ನಮ್ಮ ಸತ್ಸಂಪ್ರದಾಯಗಳಿಗೆ ಹೊಸಮೆರಗು ನೀಡುತ್ತಾ ಸದುಪಯೋಗ ಪಡಿಸಿಸಿಕೊಳ್ಳುತ್ತಿದ್ದಾರೆ. ಈಗಲೂ ಕಾಲ ಮಿಂಚಿಲ್ಲ. ನಮ್ಮ ಮಕ್ಕಳಿಗೆ ನಮ್ಮ ಸನಾತನ ಸಂಪ್ರದಾಯ ಮತ್ತು ಸಂಸ್ಕೃತಿಗಳನ್ನು ಕಲಿಸಿಕೊಡೋಣ. ಸಾಧ್ಯವಾದಷ್ಟೂ ನಮ್ಮ ಮನೆಗಳಲ್ಲಿ ನಮ್ಮ ಮಾತೃಭಾಷೆಗೇ ಒತ್ತು ಕೊಡುವುದರ ಮೂಲಕ ನಮ್ಮ ಸಂಸೃತಿಗಳಿಗೆ ಪುನಶ್ಚೇತನ ಕೊಡೋಣ. ಹಿಂದಿನಂತೆಯೇ ಪರಸ್ಪರ ಸಹಾಯ ಮಾಡೋಣ ನಮ್ಮ ಮುಂದಿನ ಪೀಳಿಗೆಗಳಿಗೂ ನಮ್ಮ ತನವನ್ನು ಉಳಿಸೋಣ ಬೆಳೆಸೋಣ. ಧರ್ಮೋ ರಕ್ಷತಿ ರಕ್ಷಿತಃ. ಭಾರತವನ್ನು ಮತ್ತೊಮ್ಮೆ ವಿಶ್ವ ಗುರುವನ್ನಾಗಿ ಮಾಡೋಣ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s