ಸಾಧಾರಣವಾಗಿ ಬಹುತೇಕರ ಮನೆಗಳಲ್ಲಿ ಬೆಕ್ಕು, ನಾಯಿ, ಬಿಳಿ ಇಲಿ, ಮೊಲ, ಗಿಣಿ, ಪಾರಿವಾಳ ಮುಂತಾದ ಪ್ರಾಣಿ ಪಕ್ಷಿಗಳನ್ನು ಸಾಕು ಪ್ರಾಣಿಗಳಾಗಿ ಬೆಳೆಸುವ ಪರಿಪಾಠವಿದೆ. ಅದರಲ್ಲೂ ಸ್ವಾಮಿ ಭಕ್ತಿಗೆ ಮತ್ತೊಂದು ಹೆಸರೇ ಶ್ವಾನಗಳು ಅದಕ್ಕಾಗಿಯೇ ನಾಯಿಗಳನ್ನು ಉಳಿದೆಲ್ಲಾ ಪ್ರಾಣಿಗಳಿಗಿಂತ ಹೆಚ್ಚಾಗಿಯೇ ಮನೆಗಳಲ್ಲಿ ಸಾಕುತ್ತಾರೆ. ಇತ್ತೀಚೆಗೆ ಅಪಘಾತದಲ್ಲಿ ಮಡಿದ ತನ್ನ ಮಾಲೀಕನ ಶವ ಬಿಟ್ಟು ಕದಲದ ನಾಯಿಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ (https://www.msgp.pl/0goFLOw) ಆಗಿದ್ದನು ನೋಡುತ್ತಿದ್ದಾಗ, ಬಾಲ್ಯದಲ್ಲಿ ನನ್ನ ಅಜ್ಜಿಯ ಮನೆಯ ಸಾಕು ನಾಯಿ ಕರಿಯನ ನೆನಪು ಬಹಳವಾಗಿ ಕಾಡಿತು.
ನನಗಾಗ ಸುಮಾರು ಐದಾರು ವರ್ಷ. ಸಮಯ ಸಿಕ್ಕಾಗಲೆಲ್ಲಾ ನನ್ನ ಅಜ್ಜಿಯ ಊರಾದ ಕೆಜಿಎಫ್ ಹೋಗುವುದೆಂದರೆ ನನಗೆ ಬಹಳ ಪ್ರೀತಿ. ಒಂದು ರೈಲಿನಲ್ಲಿ ಹೋಗುವುದು. ಎರಡನೆಯದು ಮನೆಯ ಎದುರಿಗಿದ್ದ ಚಿನ್ನದ ಗಣಿಯಲ್ಲಿ ಆಟವಾಡುವುದು (https://wp.me/paLWvR-1K) ಮತ್ತು ಅದೆಲ್ಲದ್ದಕ್ಕಿಂತಲೂ ಹೆಚ್ಚಾಗಿ ನಮ್ಮ ಮಾವ ಸಾಕಿದ್ದ ಕರಿಯ (ಕಪ್ಪಾಗಿದ್ದ ಕಾರಣ ಅವನ ಹೆಸರನ್ನು ಕರಿಯನೆಂದೇ ಇಟ್ಟಿದ್ದರು) ನೊಂದಿಗೆ ಆಟವಾಡಲೆಂದೇ ಹೋಗುತ್ತಿದೆ. ಅಜ್ಜಿಯ ಮನೆಯಲ್ಲಿ ನಾನೇ ಮೊದಲನೇ ಮೊಮ್ಮಗನಾಗಿದ್ದರಿಂದ ಅಂದಿಗೂ, ಇಂದಿಗೂ ನನ್ನ ಕಂಡರೆ ಎಲ್ಲರಿಗೂ ತುಸು ಹೆಚ್ಚಿನ ಪ್ರೀತಿಯೇ. ಹಾಗಾಗಿ ನಾನು ಕೇಳಿದ್ದಕ್ಕೆ ಇಲ್ಲಾ ಎನ್ನದೆ ನೋಡಿ ಕೊಳ್ಳುತ್ತಿದ್ದರು ನನ್ನ ಅಜ್ಜಿ, ಮಾವ ಮತ್ತು ಚಿಕ್ಕಮ್ಮಂದಿರು.
ನನ್ನ ಮಾವ ತಮ್ಮ ಸೈಕಲ್ ಕ್ಯಾರಿಯರ್ ಪಕ್ಕದಲ್ಲಿ ಸಾಮಾನುಗಳನ್ನು ಇಟ್ಟು ಕೊಳ್ಳಲು ಬುಟ್ಟಿಯೊಂದನ್ನು ಹಾಕಿಸಿದ್ದರು. ಮಾವ ಪ್ರತಿ ದಿನ ಕಛೇರಿಗೆ ಹೋಗುವಾಗ ಕರಿಯ ಮಾವ ಸೈಕಲ್ ಹತ್ತಿದೊಡನೆಯೇ ತಾನೂ ಹಾರಿ ಆ ಬುಟ್ಟಿಯೊಳಗೆ ಕುಳಿತುಕೊಂಡು ಸ್ವಲ್ಪ ದೂರ ಜಾಲೀ ರೈಡ್ ಮಾಡಿ, ಒಂದು ನಿರ್ಧಿಷ್ಟ ಜಾಗ ಬಂದೊಡನೆಯೇ, ಕರಿಯಾ ಹೋಗೋ ಮನೆಗೆ ಅಂತಾ ಮಾವಾ ಹೇಳಿದ್ದೇ ತಡಾ, ಸೈಕಲ್ಲಿನಿಂದ ಹಾರಿ ನೆಗೆದು ಮನೆಗೆ ಬಂದು ಬಿಡುತ್ತಿದ್ದ. ಅದೇ ರೀತಿ ಮಾವ ಬರುವ ಸಮಯ ಅವನಿಗೆ ಗೊತ್ತಿದ್ದು ಅವರು ಬರುವುದನ್ನೇ ಕಾಯುತ್ತಾ ಅವರನ್ನು ನೋಡಿದ ತಕ್ಷಣವೇ ಮತ್ತೊಮ್ಮೆ ಓಡಿ ಹೋಗಿ ಅದೇ ರೀತಿ ಬುಟ್ಟಿಯೊಳಗೆ ಕುಳಿತು ಮನೆಯವರೆಗೆ ಬರುತ್ತಿದ್ದನ್ನು ಹೇಳುವುದಕ್ಕಿಂತ ಅನುಭವಿಸಿದರೇ ಚೆಂದ.
ಇನ್ನು ನಮ್ಮ ತಂದೆಯವರು ಮನೆಗೆ ಬಂದರೆಂದರೆ ಅವನಿಗೆ ಎಲ್ಲಿಲ್ಲದ ಪ್ರೀತಿ. ಅವರ ಮೇಲೆ ಹಾರಿ, ಅವರ ಮೈಯನ್ನೆಲ್ಲಾ ನೆಕ್ಕಿ ಅವನಿಗಾಗಿಯೇ ಅವರು ತಂದಿರುತ್ತಿದ್ದ ಬಿಸ್ಕೆಟ್ಗಾಗಿ ಅವರ ಚೀಲವನ್ನು ಹುಡುಕುತ್ತಿದ್ದ. ಕರಿಯ ಎತ್ತರದಲ್ಲಿ ಗಿಡ್ಡಗೆ ಇದ್ದರೂ ಅಗಲದಲ್ಲಿ ಬಹಳ ಉದ್ದಕ್ಕಿದ್ದ. ಹಾಗಾಗಿ ಬಿಸ್ಕೆಟ್ಟನ್ನು ಮೇಲಕ್ಕೆ ಎಸೆದರೆ ಛಂಗ್ ಎಂದು ಹಾರಿ ತಿನ್ನುವುದನ್ನು ನೋಡುವುದೇ ಕಣ್ಣಿಗಾನಂದ.
ನಮ್ಮ ಅಜ್ಜ ಬಹಳ ದೈವ ಭಕ್ತರು. ಬೆಳಿಗ್ಗೆ ಸ್ನಾನ ಮುಗಿದ ನಂತರ ಮಡಿಯಿಂದ ಸುಮಾರು ಮುಕ್ಕಲು ಗಂಟೆಗೂ ಅಧಿಕ ಅವಧಿ ಶ್ರಧ್ಧಾ ಭಕ್ತಿಯಿಂದ ಪೂಜೆಮಾಡುತ್ತಿದ್ದರು. ಕರಿಯ ಮೊದ ಮೊದಲು ಆಟವಾಡುತ್ತಾ ದೇವರ ಕೊಣೆಗೆ (ನಮ್ಮ ಅಜ್ಜಿಯ ಮನೆಯ ದೇವರ ಕೋಣೆ, ಬೆಂಗಳೂರಿನ ಸಾಧಾರಣ ಮನೆಯ ಹಾಲ್ ನಷ್ಟಿತ್ತು) ನುಗ್ಗಿದಾಗ ಬಹಳಷ್ಟು ಬಾರಿ ನಮ್ಮ ಅಜ್ಜ ಕೋಪದಿಂದ ನಮ್ಮ ಮಾವನನ್ನು ಥೂ.. ಎಷ್ಟು ಸರಿ ಹೇಳಿದ್ದೀನಿ. ನಾನು ಪೂಜೆ ಮಾಡುವಾಗ ಕರಿಯನನ್ನು ಕಟ್ಟಿ ಹಾಕು ಅಂತಾ ಬಯದ್ದೂ ಉಂಟು. ಸ್ವಲ್ಪ ದೊಡ್ದವನಾದ ಮೇಲೆ ಊದುಕಡ್ಡಿಯ ವಾಸನೆಯಾಗಲೀ, ಗಂಟೆಯ ಸದ್ದಾಗಲೀ ಕೇಳಿದ ಕೂಡಲೇ ತನ್ನ ಕೋಣೆಗೆ ಹೋಗಿ ಕುಳಿತು, ಪೂಜೆ ಮುಗಿಯುವವರೆಗೂ ಹೊರಗೇ ಬರುತ್ತಿರಲಿಲ್ಲ ನಮ್ಮ ಜಾಣ ಕರಿಯ.
ಮನೆಯ ಎಲ್ಲರೂ ಊಟ ಮಾಡುವಾಗ ಅವನಿಗೂ ಒಂದು ಮೂಲೆಯಲ್ಲಿ ಊಟದ ವ್ಯವಸ್ಥೆಯಾಗಿರುತ್ತಿತ್ತು. ಮಲಗುವಾಗಲೂ ಸಾಕಷ್ಟು ಬಾರಿ ಮಾವನ ಮಂಚದ ಕೆಳಗೆಯೇ ಬೆಚ್ಚಗೆ ಮಲಗುತ್ತಿದ್ದ. ಚಿಕ್ಕವರಾಗಿದ್ದ ನನ್ನನ್ನು ಮತ್ತು ನನ್ನ ತಂಗಿಯನ್ನು ಕಂಡರಂತೂ ಅವನಿಗೆ ಅದೇನೋ ಮಮತೆ. ಸಣ್ಣವಳಿದ್ದ ನನ್ನ ಕೊನೆಯ ತಂಗಿಗೆ ಎಣ್ಣೇ ಹಚ್ಚಿ ಬಿಸಿಲು ಕಾಯಿಸಲು ಮನೆಯ ಹಜಾರದಲ್ಲಿ ಮಲಗಿಸಿದ್ದರೆ ಅವಳನ್ನು ಕಾಯುವ ಕೆಲಸ ನಮ್ಮ ಕರಿಯನದ್ದೇ. ಪುಟ್ಟ ಮಕ್ಕಳಾದ ನಾವು ಅವನಿಗೆ ಏನೇ ಮಾಡಿದರೂ, ಅವನ ಮೇಲೆ ಸವಾರಿ ಮಾಡಿದರೂ ಅವನ ಮೈಮೇಲೆ ಬಿದ್ದರೂ ಒಂದು ಚೂರು ಬೇಸರಿಸಿಕೊಳ್ಳದೆ ಸುಮ್ಮನಿರುತ್ತಿದ್ದ. ಹೀಗೆ ನಮ್ಮ ಅಜ್ಜಿಯ ಮನೆಯಲ್ಲಿ ಕರಿಯ, ಕೇವಲ ಸಾಕು ನಾಯಿಯಾಗಿರದೇ, ನಮ್ಮ ಮಾವನಿಗೆ ಒಡ ಹುಟ್ಟಿದ ತಮ್ಮನಂತೆಯೇ ಇದ್ದ. ನಮ್ಮೆಲ್ಲರಿಗೂ ನೆಚ್ಚಿನ ಗೆಳೆಯನಾಗಿದ್ದ.
ಕರಿಯ ಹೊರಗೆಲ್ಲೇ ಹೋದರೂ ಸಂಜೆ ಕತ್ತಲಾಗುವ ಮುಂಚೆ ಮನೆಗೆ ಬಂದು ಬಿಡುತ್ತಿದ್ದ. ಅದೊಂದು ದಿನ ಇದ್ದಕ್ಕಿದ್ದಂತೆಯೇ ಕರಿಯ ಕಾಣೆಯಾಗಿ ಹೋದ. ರಾತ್ರಿಯಾದರೂ ಕರಿಯನ ಪತ್ತೆಯೇ ಇಲ್ಲ. ಹಿಂದೆಂದೂ ಆ ರೀತಿ ಮನೆಯನ್ನು ಬಿಟ್ಟು ಹೋಗದಿದ್ದರಿಂದ ಮನೆಯ ಎಲ್ಲರಿಗೂ ಆತಂಕ. ಆಷ್ಟು ತಡ ರಾತ್ರಿಯಲ್ಲೂ ನಮ್ಮ ಚಿಕ್ಕಮ್ಮಂದಿರು ಮತ್ತು ಮಾವ ಹುಡುಕದ ಜಾಗವಿಲ್ಲ. ಅಕ್ಕ ಪಕ್ಕದ ಮನೆಗೆಲ್ಲಾ ಹೋಗಿ ನಮ್ಮ ಕರಿಯ ಬಂದಿದ್ನಾ. ಅವನನ್ನು ಎಲ್ಲಿಯಾದರೂ ನೋಡಿದ್ರಾ ಎಂದು ಕೇಳಿಕೊಂಡು ಬಂದಿದ್ದರು. ನಮ್ಮ ಮಾವ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾರನೇ ದಿನ ಮುನ್ಸಿಪಲ್ ಕಛೇರಿಗೆ ಹೋಗಿ ಬೀದಿ ನಾಯಿ ಹಿಡಿದುಕೊಂಡು ಹೋಗುವಾಗ ನಮ್ಮ ಕರಿಯನನ್ನೂ ಹಿಡಿದುಕೊಂಡು ಹೋಗಿದ್ದಾರಾ ಎಂದು ವಿಚಾರಿಸಿಕೊಂಡು ಬಂದಿದ್ದರು. ಇಷ್ಟೆಲ್ಲಾ ಆಗಿ ಎರಡು ಮೂರು ದಿನಗಳಾದರೂ ಕರಿಯನ ಪತ್ತೆಯಾಗದೇ ನಮ್ಮ ಚಿಕ್ಕಮ್ಮ ಅಕ್ಷರಶಃ ಊಟವನ್ನೇ ಮಾಡಿರಲಿಲ್ಲ. ಮೂರನೇಯ ದಿನ ಜೋರಾಗಿ ಮಳೆ ಬಂದು ಮನೆಯ ಸ್ವಲ್ಪ ದೂರದಲ್ಲಿದ್ದ ದೊಡ್ಡ ಮೋರಿಯಲ್ಲಿ ಕಾಗೆಗಳ ಗುಂಪು ಕಾ ಕಾ ಕಾ ಎಂದು ಕಿರುಚುತ್ತಿದ್ದದ್ದನ್ನು ನೋಡಿ ಸಂಶಯಗೊಂಡ ನಮ್ಮ ಚಿಕ್ಕಮ್ಮ ಹೋಗಿ ನೋಡಿದರೆ, ಹೃದಯವೇ ಕಿತ್ತು ಬರುವ ಹಾಗಿ ಕರಿಯಾ ಎಂದು ಕಿರುಚಿದ್ದು ಮನೆಯವರಿಗೆಲ್ಲರಿಗೂ ಕೇಳಿಸಿ, ಓ ಕರಿಯಾ ಬಂದಿದ್ದಾನೆ ಎಂದು ತಿಳಿದು ಓಡಿ ಬಂದು ಎಲ್ಲಿ ಕರಿಯಾ ಎಲ್ಲಿ ಎಂದು ನೋಡಿದರೆ, ಚಿಕ್ಕಮ ದೊಡ್ಡ ಮೋರಿಯ ಬ್ರಿಡ್ಜ್ ಬಳಿ ಅಳುತ್ತಾ ನಿಂತಿದ್ದಾರೆ. ಎಲ್ಲರೂ ಅಲ್ಲಿಗೆ ಓಡಿ ಹೋಗಿ ನೋಡಿದರೆ, ನಮ್ಮ ಕರಿಯನ ಮೇಲೆ ಏನನ್ನು ಎತ್ತಿ ಹಾಗಿ ಜಜ್ಜಿ ಸಾಯಿಸಿಬಿಟ್ಟಿದ್ದಾರೆ ಮತ್ತು ಅವನ ಮೇಲೇ ಕಲ್ಲುಗಳನ್ನು ಹಾಕಿ ಬಿಟ್ಟಿದ್ದಾರೆ. ಕಾಗಿಗಳು ಕುಕ್ಕಿ ಕುಕ್ಕಿ ತಿಂದದ್ದರಿಂದ ಕರಿಯನ ಅರ್ಧಂಬರ್ಧ ದೇಹವಿದೆ. ಮನೆಯವರೆಲ್ಲರೂ ಬಂದೊಡನೆಯೇ, ಚೆರಂಡಿ ಎಂಬುದನ್ನೂ ಲೆಕ್ಕಿಸದೆ ನಮ್ಮ ಚಿಕ್ಕಮ್ಮ ಚೆರಂಡಿಯೊಳಗೆ ಇಳಿದು, ಕಲ್ಲುಗಳನ್ನೆಲ್ಲಾ ಪಕ್ಕಕ್ಕೆ ಸರಿಸಿ, ತಮ್ಮ ಎರಡೂ ಕೈಗಳಿಂದ ಬಾಚಿ ಕರಿಯನ್ನು ಎತ್ತಿ ಹೊರಕ್ಕೆ ತರುತ್ತಿದ್ದರೆ, ಮನೆಯವರಿಗೆಲ್ಲಾ ತಮ್ಮ ಮನೆಯ ಮಗನನ್ನು ಕಳೆದು ಕೊಂಡಷ್ಟೇ ದುಃಖವಾಗಿತ್ತು ಎಂದರೆ ಸುಳ್ಳಲ್ಲ.
ಮನೆಯ ಪಕ್ಕದ ಪೋಲೀಸ್ ಸ್ಟೇಷನ್ನಿಗೆ ಹೋಗಿ ಅಲ್ಲಿಂದ ಮಾವ ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಫೋನ್ ಮಾಡಿ ನೆಡೆದದ್ದೆಲ್ಲವನ್ನೂ ಅಳುತ್ತಲೇ ತಿಳಿಸಿದ ಕೂಡಲೇ, ನಮ್ಮ ಮಾವನೂ ಸಹಾ ಕೆಲವೇ ನಿಮಿಷಗಳಲ್ಲಿ ಮನೆಗೆ ಬಂದು ಕರಿಯನ್ನು ಬಾಚಿ ತಬ್ಬಿ ಅತ್ತಿದ್ದದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಸರಿ ಆದದ್ದು ಆಗಿ ಹೋಯಿತು ಎಂದು ಮನೆಯ ಮುಂದಿನ ತೋಟದಲ್ಲಿಯೇ ಗುಳಿ ತೋಡಿ ಅಲ್ಲಿಯೇ ನಮ್ಮ ಕರಿಯನನ್ನು ಶಾಶ್ವತವಾಗಿ ಮಣ್ಣು ಮಾಡಿ ಅದರ ಮೇಲೆ ಅವನ ಜ್ಞಾಪಕಾರ್ಥವಾಗಿ ಹಾಕಿದ್ದ ಮಲ್ಲಿಗೆಯ ಅಂಟು ಹಾಕಿದ್ದರು. ಕರಿಯನ ಮರಣಾ ನಂತರ ನಾವುಗಳೂ ಅಜ್ಜಿಯ ಮನೆಗೆ ಹೋಗುವುದನ್ನೇ ನಿಲ್ಲಿಸಿದೆವು. ಕರಿಯನ ನೆನಪು ಸದ ಕಾಡುತ್ತಿದ್ದರಿಂದ ನಮ್ಮ ಚಿಕ್ಕಮ್ಮಂದಿರೂ ಕೂಡಾ ಕೆಜಿಎಫ್ ಬಿಟ್ಟು ಬೆಂಗಳೂರಿಗೆ ಬಂದು ಬಿಟ್ಟರು. ಹಾಗೊಮ್ಮೆ ಎಂದಾದರೂ ಅಜ್ಜಿಯ ಮನೆಗೆ ಹೋದಾಗ ಕರಿಯನ ನೆನಪಿನ ಮಲ್ಲಿಗೆ ಗಿಡದಿಂದ ಇನ್ನೂರರಿಂದ ಮುನ್ನೂರು ಮೊಗ್ಗುಗಳನ್ನು ಬಿಡಿಸುತ್ತಲೇ ನಮ್ಮ ಕರಿಯನ್ನನ್ನು ನಾವು ನೆನಪಿಸಿ ಕೊಳ್ಳುತ್ತಿದ್ದೆವು. ನಮ್ಮ ಅಮ್ಮ ಆ ಮೊಗ್ಗುಗಳೊಂದಿಗೆ ಇತರೇ ಹೂವುಗಳನ್ನು ಮತ್ತು ಪತ್ರೆಗಳನ್ನು ಸೇರಿಸಿ ಚೆಂದನೆಯ ಹೂವಿನ ಮಾಲೆಯನ್ನು ಕಟ್ಟಿ ಅಗಲಿದ ನಮ್ಮ ತಾತನವರ ಫೋಟೋವಿಗೂ ಮತ್ತು ದೇವರ ಫೋಟೋಗಳಿಗೂ ಹಾಕುತ್ತಿದ್ದದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಇರುವಾಗ ತನ್ನ ತುಂಟಾಟಗಳಿಂದ ನಮ್ಮನ್ನೆಲ್ಲಾ ರಂಜಿಸುತ್ತಿದ್ದ ನಮ್ಮ ಕರಿಯ ಸತ್ತ ನಂತರ ಮಲ್ಲಿಗೆ ಗಿಡವಾಗಿ ದೇವರ ಪದತಲದಲ್ಲಿ ಮತ್ತು ಮನೆಯವರ ಮುಡಿಯಲ್ಲಿದ್ದು ತನ್ನ ಘಂ ಎಂಬ ಸುವಾಸನೆಯಿಂದ ಎಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದ.
ಕರಿಯ ಸತ್ತ ಐದಾರು ತಿಂಗಳಿನ ನಂತರ ತಿಳಿದು ಬಂದ ವಿಷಯವೇನೆಂದರೆ, ನಮ್ಮ ಕರಿಯ ಹಾಗೆಯೇ ಆಟವಾಡುತ್ತಾ ಪಕ್ಕದ ಮನೆಗೆ ಹೋಗಿದ್ದಾಗ ಅವರ ಮನೆಯಲ್ಲಿಟ್ಟಿದ್ದ ಕೋಳಿಯ ಮೊಟ್ಟೆಯನ್ನು ಕದ್ದು ತಿನ್ನುತ್ತಿದ್ದದ್ದನು ನೋಡಿದ ಪಕ್ಕದಮನೆಯಾಕೆ, ಕೋಪದ ಭರದಲ್ಲಿ, ಅಲ್ಲೇ ಇದ್ದ ಗುಂಡು ಕಲ್ಲನ್ನು ಕರಿಯನ ಮೇಲೆ ಎತ್ತಿ ಹಾಕಿದ್ದಾರೆ. ಮೊಟ್ಟೆ ತಿನ್ನುವ ಭರದಲ್ಲಿ ಪಕ್ಕದ ಮನೆಯಾಕೆಯನ್ನು ಗಮನಿಸದ ಕರಿಯನ ಪ್ರಾಣ ಪಕ್ಷಿ ಒಮ್ಮೆಲೆ ಹಾರಿ ಹೋಗಿದೆ. ಕತ್ತಲಾದ ಮೇಲೆ ನಮ್ಮ ಕರಿಯನನ್ನು ತೆಗೆದುಕೊಂಡು ಹೋಗಿ ಮೋರಿಯಲ್ಲಿ ಬಿಸಾಕಿ, ಕರಿಯನ ಹೆಣ ತೇಲಬಾರದೆಂದು ಅವನ ಮೇಲೆ ಒಂದೆರಡು ದೊಡ್ಡ ಕಲ್ಲುಗಳನ್ನು ಎತ್ತಿ ಹಾಕಿ ಏನೂ ತಿಳಿಯದವರಂತೆ ಸುಮ್ಮನಾಗಿ ಬಿಟ್ಟಿದ್ದಾರೆ. ಮೂರನೇ ದಿನ ಬಿದ್ದ ಭಾರಿ ಮಳೆಯಿಂದ ನೀರು ರಭಸವಾಗಿ ಬಂದ ಕಾರಣ ನಮ್ಮ ಕರಿಯನ ದೇಹ ಸ್ವಲ್ಪ ದೂರಕ್ಕೆ ಬಂದು ಕಾಗೆಗಳ ಆಹಾರವಾಗಿ ಬಿಟ್ಟಿದೆ.
ಏನೂ ಅರಿಯದ ಮೂಕ ಮುಗ್ಧ ಪ್ರಾಣಿಯು ಮಾಡಿದ ಒಂದು ಸಣ್ಣ ತಪ್ಪಿಗೆ ಅದೂ ಅಂದಿನ ಸಮಯದಲ್ಲಿ ಹೆಚ್ಚೆಂದರೆ ಹತ್ತೋ ಇಲ್ಲವೇ ಇಪ್ಪತ್ತು ಪೈಸೆಗೆ ಸಿಗುತ್ತಿದ್ದ ಒಂದು ಮೊಟ್ಟೆಗಾಗಿ ನಮ್ಮ ನೆಚ್ಚಿನ ಕರಿಯ ಬಲಿಯಾಗಿದದ್ದು ನಿಜಕ್ಕೂ ನಮ್ಮ ದೌರ್ಭ್ಯಾಗ್ಯವೇ ಸರಿ. ನಮ್ಮ ಕರಿಯ ಮಾಡಿದ್ದು ಸರಿ ಎಂದು ನಾನು ವಾದಿಸದಿದ್ದರೂ, ಮೊಟ್ಟೆ ತಿನ್ನುವಾಗ ಹಚ್ಚಾ ಎಂದು ಜೋರಾಗಿ ಕೂಗಿದ್ದಲ್ಲಿ ಒಂದು ಮುದ್ದಾದ ಪ್ರಾಣಿಯ ಜೀವವನ್ನು ಉಳಿಸಬಹುದಾಗಿತ್ತು. ನಂತರ ನಮ್ಮ ಬಳಿ ನಡೆದದ್ದನ್ನು ತಿಳಿಸಿ ಹಣವನ್ನು ಪಡೆಯ ಬಹುದಾಗಿತ್ತು. ಆದರೆ ಪ್ರತಿಯೊಬ್ಬರಿಗೂ ಹುಟ್ಟುವಾಗಲೇ ಬ್ರಹ್ಮ ಆಯಸ್ಸನ್ನು ಬರೆದು ಕಳುಹಿಸಿರುತ್ತಾನಂತೆ. ಹಾಗಾಗಿ ವಿಧಿಯ ಮುಂದೆ ನಮ್ಮದೇನೂ ನಡೆಯದು. ಅವನು ಸೂತ್ರಧಾರ ನಾವೆಲ್ಲರೂ ಪಾತ್ರಧಾರಿಗಳು ಅಷ್ಟೇ.
ಆದಾದ ನಂತರ ನಮ್ಮ ಮಾವ ಬೇರೇ ನಾಯಿಯನ್ನು ಸಾಕಲೇ ಇಲ್ಲಾ. ಕರಿಯನ ಅಕಾಲಿಕ ಅಗಲಿಕೆ ನಮ್ಮ ಮಾವ ಮತ್ತು ಚಿಕ್ಕಮ್ಮಂದಿರನ್ನು ಇಂದಿಗೂ ಕಾಡುತ್ತಲೇ ಇದೆ. ಕೇವಲ ನಮ್ಮ ಮಾವ ಏಕೆ ನಾನು ಕೂಡ ನಮ್ಮ ಮಕ್ಕಳು ಎಷ್ಟೇ ಎಷ್ಟೇ ಕಾಡಿ ಬೇಡಿದರೂ ನಾಯಿಯನ್ನು ಸಾಕಲು ನನ್ನ ಮನಸ್ಸು ಒಪ್ಪಲೇ ಇಲ್ಲ. ಏಕೆಂದರೆ ಕರಿಯನ ಸ್ಥಾನ ಬೇರೆ ಯಾರಿಂದಲೂ ತಂಬಲು ಅಸಾಧ್ಯವೇ ಸರಿ ಎಂದೇ ನನ್ನ ಭಾವನೆ.
ತಾನೊಂದು ಬಗೆದರೆ, ದೈವ ಒಂದು ಬಗೆದೀತು ಎನ್ನುವಂತೆ ಈಗ ಒಂದೆರಡು ವರ್ಷಗಳ ಹಿಂದೆ ಅದೆಲ್ಲಿಂದಲೂ ನಮ್ಮ ಬೀದಿಗೆ ಕಪ್ಪನೆಯ ನಾಯಿಯೊಂದು ಬಂದಿತು. ನೋಡಲು ಬಡಕಲಾಗಿದ್ದ ನಾಯಿಗೆ ಅಕ್ಕ ಪಕ್ಕದವರೆಲ್ಲರೂ ಅಷ್ಟೋ ಇಷ್ಟು ಊಟ ಹಾಕಿ ಸಾಕ ತೊಡಗಿದರು. ಎಲ್ಲರ ಆರೈಕೆಯಿಂದ ಕೆಲವೇ ಕೆಲವು ದಿನಗಳಲ್ಲಿ ಮೈ ತುಂಬಿ ಕೊಂಡು ದಷ್ಟಪುಷ್ಟವಾಗಿ ಎಲ್ಲರ ಅಚ್ಚುಮೆಚ್ಚಿನ ಸಾಕು ಪ್ರಾಣಿಯಾಯಿತು. ಆರಂಭದಲ್ಲಿ ನನ್ನ ಮಗಳನ್ನು ನೋಡಿ ಬೌ ಬೌ ಎನ್ನುತ್ತಿದ್ದ ಈ ಕರಿಯ ಈಗ ನನ್ನ ಮಕ್ಕಳ ಮೆಚ್ಚಿನ ಗೆಳೆಯ. ಅವನಿಗಾಗಿಯೇ ನಮ್ಮ ಮನೆಯಲ್ಲಿ ಬಿಸ್ಕೆಟ್ ಪ್ಯಾಕ್ ಸದಾ ಸಿದ್ದವಾಗಿರುತ್ತದೆ. ಇದೂ ಕೂಡಾ ನನ್ನ ಮಕ್ಕಳು ಶಾಲೆ ಕಾಲೇಜ್ ಹೋಗುವಾಗ ಅಷ್ಟು ದೂರದ ವರೆಗೂ ಹೋಗಿ ಬಿಟ್ಟು ಬರುತ್ತದೆ.
ನನ್ನ ಮಗ ಬಂದೊಡನೆಯೇ ಅವನು ಆಜ್ಞೆಯನ್ನು ಚಾಚೂ ತಪ್ಪದೆ ಪಾಲಿಸುತ್ತಾ ನನ್ನ ಮಗನ ನೆಚ್ಚಿನ ಬಂಟನಾಗಿ ನಮ್ಮ ಕರಿಯನ್ನು ಮತ್ತೆ ಮತ್ತೆ ನೆನಪಿಸುತ್ತಿದ್ದಾನೆ. ಈಗಲೂ ಸಹಾ ನನ್ನ ಮಗ ಯಾವುದೇ ಚೆಂದದ ನಾಯಿಯನ್ನು ನೋಡಿದರೂ ಸಾಕು ಓಡಿ ಹೋಗಿ ಅದನ್ನು ಮುದ್ದು ಮಾಡಿ ಕೆಲವೇ ಕ್ಷಣಗಳಲ್ಲಿ ಪಳಗಿಸುವುದರಲ್ಲಿ ಎತ್ತಿದ ಕೈ.
ಒಂದೆರಡು ದಿನ ಅನ್ನಾ ಹಾಕಿದ ಋಣಕ್ಕಾಗಿ ನೋಡಿದಾಗಲೆಲ್ಲಾ ಬಾಲ ಅಲ್ಲಾಡಿಸುವ, ಮತ್ತು ಎಷ್ಟು ದಿನಗಳ ನಂತರ ಬಂದರೂ ಓಡಿ ಬಂದು ಮೈ ಮೇಲೆ ಎಗರಿ ಪ್ರೀತಿಯಿಂದ ಸ್ವಾಮಿ ನಿಷ್ಠೆ ತೋರಿಸುವ ಮೂಕ ಪ್ರಾಣಿ ನಾಯಿಗಳಿಂದ ಅತೀ ಬುದ್ಧಿವಂತರಾದ ನಾವು ಮನುಷ್ಯರು ಕಲಿಯುವುದು ಸಾಕಷ್ಟಿದೆ ಅಲ್ಲವೇ?
ಏನಂತೀರೀ?
[…] ಈಗಾಗಲೇ ಬರೆದಿದ್ದೇನೆ. ಸಮಯ ಮಾಡಿಕೊಂಡು ಕರಿಯನ ಲೇಖನವನ್ನು ಓದಿ ಅಂದಿನ ಮತ್ತು ಇಂದಿನ […]
LikeLike
Wonderfully narrated,heart touching,no such a sincere animal in this world.
LikeLiked by 1 person
[…] ಕರಿಯ […]
LikeLike
[…] ಕರಿಯ […]
LikeLike