ಹಿಂದಿನ ಲೇಖನದಲ್ಲಿ ನಮ್ಮೂರಿನ ಚೋಮನ ಹಬ್ಬದ ಬಗ್ಗೆ ತಿಳಿದುಕೊಂಡಿದ್ದೆವು. ಇಂದು ನಮ್ಮ ಊರಿನ ಗ್ರಾಮ ದೇವತೆ, ಹೊನ್ನಾದೇವಿ ಅಥವಾ ಹೊನ್ನಮ್ಮ ಅಥವಾ ಸ್ವರ್ಣಾಂಬಾ ದೇವಿಯ ಊರ ಹಬ್ಬದ ಬಗ್ಗೆ ತಿಳಿದುಕೊಳ್ಳೊಣ.
ಸಾವಿರಾರು ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ನಮ್ಮ ಬಾಳಗಂಚಿ ಗ್ರಾಮವನ್ನು ಹೊಯ್ಸಳರ ದೊರೆ ವಿಷ್ಣುವರ್ಧನನ ವಂಶಸ್ಥ ನಾರಸಿಂಹದೇವ 76 ವೃತ್ತಿನಿರತ ಬ್ರಾಹ್ಮಣರಿಗೆ ದಾನವಾಗಿ ಕೊಟ್ಟಿದ್ದ ಎಂಬ ಬಗ್ಗೆ 1256ರಲ್ಲಿ ಬರೆಸಿದ ತಾಮ್ರ ಶಾಸನ ಸಾರುತ್ತದೆ. ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಎಂದೇ ಖ್ಯಾತರಾಗಿದ್ದ ಹಾಗೂ ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದ ಹಕ್ಕ ಬುಕ್ಕರ ಗುರುಗಳೂ ಆಗಿದ್ದ ಶ್ರೀ ವಿದ್ಯಾರಣ್ಯರು ಕೂಡ ಭೇಟಿ ನೀಡಿ ಇಲ್ಲಿ ಮಠವನ್ನು ಸ್ಥಾಪಿಸಿದ್ದರು ಎಂದರೆ, ಶೃಂಗೇರಿಯ ಕೆಲವೊಂದು ಗ್ರಂಥದಲ್ಲಿ ಉಲ್ಲೇಖಿಸಿರುವ ಪ್ರಕಾರ ಗುರು ವಿದ್ಯಾರಣ್ಯರು ಹುಟ್ಟಿದ್ದು ನಮ್ಮ ಬಾಳಂಚಿಯಲ್ಲಿ. ಮತ್ತೆ ಕೆಲವರು ಇಲ್ಲಿಯೇ ವಿದ್ಯಾರಣ್ಯರು ತಪಸ್ಸು ಮಾಡಿದ ಸ್ಥಳ ಎಂದು ಕೆಲ ಬಲ್ಲವರು ಹೇಳುತ್ತಾರೆ. ಒಟ್ಟಿನಲ್ಲಿ ಗುರು ವಿದ್ಯಾರಣ್ಯರಿಗೂ ನಮ್ಮೂರಿಗೂ ಅವಿನಾವಭಾವ ಸಂಭಂಧವಿದೆ.
ಮುಸಲ್ಮಾನರ ಆಕ್ರಮಣದಿಂದ ಜರ್ಜರಿತವಾಗಿದ್ದ ಕಾಲದಲ್ಲಿ ,ಹಿಂದೂಗಳ ರಕ್ಷಣೆಗಾಗಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಮಾಡಲು ನಿರ್ಥರಿಸಿದ ಗುರು ವಿದ್ಯಾರಣ್ಯರು ಲೋಕರಕ್ಷಕಿಯಾದ ಪಾರ್ವತಿ ದೇವಿಯನ್ನು ಕುರಿತು ತಪವನ್ನು ಆಚರಿಸಿದಾಗ ದೇವಿ ಹೊನ್ನಿನ ಮಳೆಗರೆದಳಂತೆ. ಹೊನ್ನಿನ ಮಳೆ ಗರೆದ ಪಾರ್ವತಿಯನ್ನು ಹೊನ್ನಾದೇವಿ ಎಂದು ಸ್ತುತಿಸಿ, ವಿದ್ಯಾರಣ್ಯರು ಪೂಜಿಸಿದರೆಂದೂ, ಆ ತಾಯಿಯೇ ಇಲ್ಲಿ ನೆಲೆಸಿರುವ ಹೊನ್ನಾದೇವಿ ಎಂದೂ ಊರಿನ ಕೆಲವು ಹಿರಿಯರು ಹೇಳುತ್ತಾರೆ. ಅಂದಿನಿಂದಲೂ ಇಲ್ಲಿ ಅನೂಚಾನವಾಗಿ ಪೂಜೆ ನಡೆದು ಬಂದಿದ್ದು, ಹೊನ್ನಾದೇವಿ ಬಾಳಗಂಚಿ ಗ್ರಾಮದೇವತೆಯಾಗಿ ಬೇಡಿ ಬರುವ ಭಕ್ತರ ಇಚ್ಛೆಯನ್ನು ನೆರವೇರಿಸುತ್ತಾಳೆ, ಊರನ್ನು ಪೊರೆಯುತ್ತಿದ್ದಾಳೆ ಎಂಬುದು ಭಕ್ತರ ನಂಬಿಕೆ. ಈ ದೇವಿಗೆ ನೂರಾರು ವರ್ಷಗಳ ಹಿಂದೆ ಕಟ್ಟಿಸಿದ್ದ ಕಲ್ಲು ಕಟ್ಟಡದ ಪುಟ್ಟ ದೇವಾಲಯ ಸಂಪೂರ್ಣ ಶಿಥಿಲವಾಗಿ ಕುಸಿಯುತ್ತಿದ್ದ ಹಿನ್ನೆಲೆಯಲ್ಲಿ ಊರಿನ ಸಮಸ್ತ ಗ್ರಾಮಸ್ಥರೂ ಮತ್ತು ದೇಶದ್ಯಂತ ನೆಲೆಸಿರುವ ಹೊನ್ನಾದೇವಿ ಒಕ್ಕಲಿನವರು, ಹೊನ್ನಾದೇವಿ ಸೇವೆ ಹಾಗೂ ಅಭಿವೃದ್ಧಿ ಸಮಿತಿ, ಹಳೆಯ ದೇಗುಲ ಕೆಡವಿ, ಸುಮಾರು ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯವಾದ ಸುಂದರ ದೇವಾಲಯ ನಿರ್ಮಾಣ ಮಾಡಿದ್ದಾರೆ.
ಪುನರ್ನಿರ್ಮಾಣಗೊಂಡ ನೂತನ ದೇವಾಲಯದಲ್ಲಿ ತಾಯಿ ಹೊನ್ನಾದೇವಿ, ಗಣಪತಿ ಹಾಗೂ ಕಾಲಭೈರವ ಸ್ವಾಮಿಯ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಕುಂಭಾಭಿಷೇಕವನ್ನು ದಕ್ಷಿಣಾಮ್ನೇಯ ಶ್ರೀಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಹಾಗೂ ಕಿರಿಯ ಸ್ವಾಮೀಜಿಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ 2015ರ ಜೂನ್ 12ರಂದು ವಿಧ್ಯುಕ್ತವಾಗಿ ಹಾಗೂ ಶಾಸ್ತ್ರೋಕ್ತವಾಗಿ ನೆರವೇರಿಸಿದರು.
ಯುಗಾದಿ ಹಬ್ಬ ಮುಗಿದ ಮೊದಲನೇ ಗುರುವಾರ ಮೊದಲನೇ ಕಂಬ ಮತ್ತು ಎರಡನೇ ಗುರುವಾರ ಎರಡನೆಯ ಕಂಬ. ಅದಾಗಿ ಎರಡು ದಿನಗಳ ನಂತರದ ಶನಿವಾರ ಚೋಮನ ಹಬ್ಬ ಮುಗಿದ ನಂತರ ಮೂರನೇ ಗುರುವಾರವೇ ನಮ್ಮೂರ ಹೊನ್ನಮ್ಮನ ಜಾತ್ರೆ ಅರ್ಥಾತ್ ದೊಡ್ಡ ಹಬ್ಬ.
ಒಂದು ಕಾಲದಲ್ಲಿ ಬ್ರಾಹ್ಮಣರೇ ಹೆಚ್ಚಾಗಿದ್ದು ನರಸಿಂಹ ಅಗ್ರಹಾರ ಎನಿಸಿಕೊಂಡಿದ್ದ ಗರಳಪುರಿ ಎಂದು ಹೆಸರಾಗಿದ್ದ ನಮ್ಮೂರಿನಲ್ಲಿ ಇಂದು ಇರುವುದು ಐದೇ ಬ್ರಾಹ್ಮಣರ ಮನೆ ಅದರಲ್ಲಿ ಮೂರು ಮನೆ ಹೊನ್ನಾದೇವಿ ಮತ್ತು ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಅರ್ಚಕರ ಅಣ್ಣ ತಮ್ಮಂದಿರ ಮನೆಯಾದರೆ ನಾಲ್ಕನೆಯದು ಬಾಳಗಂಚಿಯ ಶಾನುಭೋಗರಾದ ನಮ್ಮ ಮನೆ ಮತ್ತೊಂದು ಪಕ್ಕದ ಊರಿನ ಶಾನುಭೋಗರಾದ ನಮ್ಮ ಬಂಧುಗಳ ಮನೆ. ಸದ್ಯಕ್ಕೆ ಐದರಲ್ಲಿ ಕೇವಲ ಮೂರು ಮನೆಯಲ್ಲಿ ಮಾತ್ರವೇ ವಾಸವಾಗಿದ್ದು, ನಮ್ಮ ಮನೆಯೂ ಸೇರಿದಂತೆ ಮತ್ತೊಂದು ಮನೆ ಕೇವಲ ಹಬ್ಬದ ಸಮಯದಲ್ಲಿ ಮಾತ್ರವೇ ದೀಪ ಹಚ್ಚುವಂತಾಗಿದೆ. ಹಿಂದೆಲ್ಲಾ, ಪ್ರತೀ ವರ್ಷ ಪರ್ಯಾಯವಾಗಿ ನಮ್ಮ ಮನೆಯಲ್ಲೋ ಇಲ್ಲವೇ ನಮ್ಮ ಬಂಧುಗಳ ಮನೆಯವರು ಹಬ್ಬದ ಹಿಂದಿನ ದಿನವಾದ ಬುಧವಾರವೇ ಹೊನ್ನಮ್ಮನ ಅರ್ಚಕರಿಗೂ ಮತ್ತು ಗುಡಿಗೌಡರಿಗೂ ತಿಳಿಸಿ ಹಬ್ಬದ ದಿನ ಬೆಳಿಗ್ಗೆ ಅಡ್ಡೆಯ ಸಮೇತ ಹೊನ್ನಾದೇವಿಯ ಉತ್ಸವಮೂರ್ತಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ, ತಾಯಿಗೆ ಹೊಸಾ ಸೀರೆ ಉಡಿಸಿ ಸರ್ವಲಂಕಾರಭೂಷಿತಳನ್ನಾಗಿ ಮಾಡಿ ಯತೇಚ್ಚವಾಗಿ ಹೂವಿನ ಅಲಂಕಾರ ಮಾಡುವ ಹೊತ್ತಿಗೆ ಅರ್ಚಕರು ಮನೆಗೆ ಬಂದು ಸಾಂಗೋಪಾಂಗವಾಗಿ ಪೂಜೆ ಮಾಡಿ ಮಂಗಳಾರತಿ ಮಾಡಿ ಮುಗಿಸಿದ ನಂತರ ಊರಿನಿಂದ ಹೊರಗಿರುವ ಹೊನ್ನಾದೇವಿ ದೇವಾಲಯಕ್ಕೆ ಪಲ್ಲಕ್ಕಿಯಲ್ಲಿ ವಾದ್ಯ ಮತ್ತು ಡೋಲಿನ ಸಹಿತ, ಪತ್ತು ಮತ್ತು ಛತ್ರಿ ಚಾಮರಗಳ ಸಮೇತವಾಗಿ ಅಂದು ಮಾಡಿದ ನೈವೇದ್ಯವನ್ನು ತೆಗೆದುಕೊಂಡು ಹೋಗುತ್ತಾರೆ. ಹಿಂದೆಲ್ಲಾ ದೇವರ ಪಲ್ಲಕ್ಕಿ ಹೊರಲು ಸಾಕಷ್ಟು ಜನರಿದ್ದು ತಾಮುಂದು ನಾಮುಂದು ಎಂದು ಕಾಲು ಕಾಲಿಗೆ ಸಿಕ್ಕಿ ಕೊಳ್ಳುತ್ತಿದ್ದವರು ಇಂದು ವೆಂಕ, ನಾಣಿ, ಸೀನ ಎನ್ನುವ ಹಾಗೆ ಮೂರು ಮತ್ತೊಂದು ಜನರು ಮಾತ್ರ ಬೆಳಗಿನ ಉತ್ಸವದ ಸಮಯದಲ್ಲಿಉಪಸ್ಥಿತರಿರುವುದುನಿಜಕ್ಕೂ ಶೋಚನೀಯ ಮತ್ತು ಕಳವಳಕಾರಿಯಾಗಿದೆ, ಹೆಚ್ಚಿನವರು ಆಧುನಿಕತೆಯ ಜೀವನದ ಶೈಲಿಯ ಭಾಗವಾಗಿ, ನಾನಾ ರೀತಿಯ ಖಾಯಿಲೆ ಮತ್ತು ಕಸಾಲೆಗಳಿಂದಾಗಿ ದೇವರ ಪಲ್ಲಕ್ಕಿಯನ್ನೂ ಹೊರಲು ಸಾಧ್ಯವಾಗದಿರುವ ಪರಿಸ್ಥಿತಿಗೆ ಬಂದಿರುವ ಕಾರಣ, ಕಳೆದ ಮೂರು ವರ್ಷಗಳಿಂದ ಟ್ರಾಕ್ಟರ್ ಮುಖಾಂತರವೇ ದೇವರನ್ನು ತೆಗೆದುಕೊಂಡು ಹೋಗುತ್ತಿರುವುದು ನಿಜಕ್ಕೂ ವಿಷಾಧನೀಯವೇ ಸರಿ.
ಇದೊಂದು ದಿವಸ ಮಾತ್ರವೇ, ಉತ್ಸವ ಮೂರ್ತಿಯನ್ನು ಊರ ಹೊರಗೆ ಇರುವ ಮೂಲ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ನೂರಾರು ವರ್ಷಗಳ ಪುರಾತನವಾದ ನಾಲ್ಕೂವರೆ ಅಡಿ ಎತ್ತರದ ಪ್ರಭಾವಳಿ ಸಹಿತವಾದ ಕೃಷ್ಣ ಶಿಲೆಯ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಯವರು ಪೂಜಿಸಿದ ಇದೊಂದು ಪರಮ ಪುಣ್ಯಕ್ಷೇತ್ರ ಎಂದು ಘೋಷಿಸಿದ ಶ್ರೀ ಹೊನ್ನಾದೇವಿಯ ಮೂಲ ವಿಗ್ರಹಕ್ಕೆ ಅಂದು ನಾನಾರೀತಿಯ ಪುಷ್ಪಗಳಿಂದ ಅಲಂಕರಿಸಿ, ಸಾಂಗೋಪಾಂಗವಾಗಿ ಪೂಜೆಗೈದು, ಜಾತ್ರೆಗೆ ಬಂದಿರುವ ಎಲ್ಲಾ ಮುತ್ತೈದೆಯರ ಲಲಿತಾ ಸಹಸ್ರನಾಮದ ಪಠಣದ ನಂತರ ನೆರೆದಿರುವ ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ತಾಯಿ ಹೊನ್ನಮ್ಮನಿಗೆ ಮಂಗಳಾರತಿ ಬೆಳಗುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಆಲ್ಲಿ ಮಹಾಮಂಗಳಾರತಿ ಮುಗಿದ ನಂತರ ಸಮಸ್ತ ಭಕ್ತಾದಿಗಳೂ ಸರತಿಯಲ್ಲಿ ಬಂದು ಹಣ್ಣು ಕಾಯಿ ನೈವೇದ್ಯ ಮಾಡಿಸಿ, ದೇವಿಗೆ ಭಕ್ತಿ ಪೂರ್ವಕವಾಗಿ ಮಡಿಲಕ್ಕಿ ತುಂಬಿ ಕಣ್ತುಂಬ ದೇವಿಯ ದರ್ಶನ ಮಾಡಿಕೊಳ್ಳುತ್ತಿದ್ದರೆ, ಇನ್ನು ಹರಕೆ ಹೊತ್ತಿದ್ದರು ದೇವರಿಗೆ ತಮ್ಮ ಕೂದಲನ್ನು ಸಮರ್ಪಿಸಿ ದೇವಸ್ಥಾನದ ಮುಂದೆ ಇರುವ ಕಲ್ಯಾಣಿಯಲ್ಲಿ ಮಡಿಯುಟ್ಟು ದೇವರ ದರ್ಶನ ಪಡೆಯುತ್ತಾರೆ. ನಾವೆಲ್ಲಾ ಚಿಕ್ಕವರಿದ್ದಾಗ ಮತ್ತು ನಾವೆಲ್ಲಾ ಈಜುವುದನ್ನು ಕಲಿಯುತ್ತಿದ್ದಾಗ, ದೊಡ್ಡ ಕೆರೆಯ ನಾಲೆಯಿಂದ ಭರ್ತಿಯಾಗಿ ತುಂಬಿ ತುಳುಕುತ್ತಿದ್ದ ಕಲ್ಯಾಣಿ ಇಂದು ಮಳೆಯಿಲ್ಲರಿರುವ ಕಾರಣ, ದೊಡ್ಡ ಕೆರೆಯೂ ಬರಿದಾಗಿದೆ ಮತ್ತು ಕಲ್ಯಾಣಿಯೂ ಬರಿದಾಗಿದೆ. ಹಬ್ಬದ ಸಮಯದಲ್ಲಿ ಮೂರ್ನಾಲ್ಕು ಕೊಳವೇ ಬಾವಿಗಳಿಂದ ಕಲ್ಯಾಣಿಗೆ ನೀರನ್ನು ತುಂಬಿಸಲು ಪ್ರಯತ್ನಿಸುತ್ತಾರಾದರೂ ಹಿಂದಿನ ಗತ ವೈಭವ ಇಂದು ಇಲ್ಲದಾಗಿದೆ. ಕಳೆದ ಹತ್ತು ಹದಿನೈದು ವರ್ಷಗಳಿಂದಲೂ ಬರುವ ಭಕ್ತಾದಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಊಟದ ವ್ಯವಸ್ಥೆಯನ್ನು ಮಾಡಲಾಗಿರುವುದರಿಂದ ಬರುವ ಭಕ್ತಾದಿಗಳಿಗೆ ತಾಯಿ ಹೊನ್ನಮ್ಮ ಮನವನ್ನು ತಣಿಸಿದರೆ, ಇಲ್ಲಿಯ ಊಟೋಪಚಾರ ಭಕ್ತರ ಭವವನ್ನು ತುಂಬಿಸುತ್ತದೆ.
ಪೂಜೆ ಮುಗಿದ ನಂತರ ಉತ್ಸವ ಮೂರ್ತಿಯನ್ನು ಪುನಃ ಹಿಂದಿರುಗಿ ಗುಡಿ ತುಂಬಿಸುವ ಮೊದಲು ಸದ್ಯದಲ್ಲಿ ಇರುವ ಎಲ್ಲಾ ಬ್ರಾಹ್ಮಣರ ಮನೆಗಳಿಗೂ ಹೋಗಿ ಹಣ್ಣು ಕಾಯಿ ಪೂಜೆ ಮಾಡಿಸುತ್ತಾರೆ. ಹಿಂದೆಲ್ಲಾ ಬಿಸಿಲಿನಲ್ಲಿ ದೇವರ ಅಡ್ಡೆಯನ್ನು ಹೊತ್ತು ತರುತ್ತಿದ್ದ ಕಾರಣ, ಎಲ್ಲರ ಕಾಲುಗಳನ್ನೂ ತಣ್ಣೀರಿನಲ್ಲಿ ತೊಳೆದು ಎಲ್ಲರಿಗೂ ತಂಪಾದ ಪಾನಕ ಮಾಡಿಕೊಡುತ್ತಿದ್ದರು. ಈಗೆಲ್ಲಾ ಆಧುನಿಕ ಶೈಲಿಗೆ ಮಾರುಹೋಗಿ ತರತರಹದ ಶರಬತ್ತುಗಳನ್ನು ಮಾಡಿಕೊಡುತ್ತಾರೆ. ದೇವರ ಉತ್ಸವ ಎಲ್ಲರ ಮನೆಗಳಿಗೂ ಹೋಗಿ ಕಡೆಗೆ ನಮ್ಮ ಆರಾಧ್ಯದೈವ ಗರಳಪುರಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿದ ನಂತರ ಉತ್ಸವ ಮೂರ್ತಿಯನ್ನು ಗುಡಿ ತುಂಬಿಸಿದ ನಂತರ, ನರಸಿಂಹ ಸ್ವಾಮಿ ದೇವಾಸ್ಥಾನದಲ್ಲಿಯೂ ಕೂಡಾ ಸಾಂಗೋಪಾಂಗವಾಗಿ ಪೂಜೆ ನೆಡೆದು, ಬಂದಿರುವ ಎಲ್ಲಾ ಮುತ್ತೈದೆಯರಿಗೂ ಅರಿಶಿನ ಕುಂಕುಮ ಕೊಟ್ಟ ನಂತರ ನಮ್ಮ ಮನೆಯಿಂದ ಪಾನಕ ಮತ್ತು ಕಡಲೇಬೇಳೆ ಕೋಸಂಬರಿ ಮತ್ತು ನಮ್ಮ ಸಂಬಂಧೀಕರ ಮನೆಯ ಹಣ್ಣಿನ ರಸಾಯನದ ಸೇವೆ ನಡೆಯುತ್ತದೆ. ನಂತರ ಇದೇ ಚರ್ಪನ್ನು (ಹಾಸನ ಕಡೆ ದೇವರ ಪ್ರಸಾದಕ್ಕೆ ಚೆರ್ಪು ಎನ್ನುತ್ತಾರೆ) ನೆರೆದಿದ್ದ ಎಲ್ಲರಿಗೂ ಕೊಡುತ್ತಾರೆ.
ಇದಾದ ನಂತರ ನಮ್ಮ ಮನೆಯಲ್ಲೂ ಮತ್ತು ನಮ್ಮ ಸಂಬಂಧೀಕರ ಮನೆಯಲ್ಲಿ ಹಬ್ಬಕ್ಕೆ ಬಂದಿದ್ದ ಎಲ್ಲಾ ನೆಂಟರಿಷ್ಟರಿಗೂ ಮತ್ತು ಅಕ್ಕ ಪಕ್ಕದ ಊರಿನಿಂದ ಬರುವ ಎಲ್ಲಾರಿಗೂ ಅನ್ನ ಸಂತರ್ಪಣೆ ನಡೆಯುತ್ತಿತ್ತು. ಇಂದು ಹಬ್ಬಕ್ಕೆ ಬರುವವರ ಸಂಖ್ಯೆ ಬಹಳಷ್ಟು ಕಡಿಮೆ ಆಗಿರುವ ಕಾರಣ ಮತ್ತು ನಮ್ಮ ಮನೆಯೂ ಬಹಳಷ್ಟು ಪಾಳು ಬಿದ್ದಿರುವ ಕಾರಣ, ಇಂದು ನಾವು ಮತ್ತು ನಮ್ಮ ಸಂಬಂಧಿಗಳು ಒಟ್ಟಿಗೇ ಸೇರಿ ಅವರ ಮನೆಯಲ್ಲಿಯೇ ಸಂತರ್ಪಣೆ ನಡೆಯುತ್ತದೆ. ಇಂದಿಗೂ ಕೂಡ ಮಧ್ಯಾಹ್ನದ ಊಟಕ್ಕೆ ಸುಮಾರು ಐವತ್ತು ಅರವತ್ತು ಜನರು ಇದ್ದರೆ ಇನ್ನು ಸಂಜೆ ಅದರ ಸಂಖ್ಯೆ ಇನ್ನೂ ಹೆಚ್ಚಾಗಿಯೇ ಇರುತ್ತದೆ.
ಜಾತ್ರೆಯ ದಿನ ಬೆಳ್ಳಂ ಬೆಳಿಗ್ಗೆಯೇ, ದೇವಸ್ಥಾನದ ಸುತ್ತಲೂ ಬಾಳೇಹಣ್ಣು, ತೆಂಗಿನಕಾಯಿ ಊದುಕಡ್ಡಿ ಹೂವುಗಳನ್ನು ಮಾರುವವರು ಬಂದರೆ ಅವರ ಮುಂದೆ, ಕಡಲೇ ಪುರಿ,ಕಲ್ಯಾಣ ಸೇವೆ, ಬೆಂಡು ಬತ್ತಾಸುಗಳ ಜೊತೆಗೆ ಕಾರಾಸೇವೆ, ಬಾದುಶಾ, ಬಣ್ಣ ಬಣ್ಣದ ಕೊಬ್ಬರೀ ಮೀಠಾಯಿ, ಮೈಸೂರು ಪಾಕ್ ಹೀಗೆ ತರತರಹದ ಸಿಹಿತಿಂಡಿಗಳನ್ನು ಮಾರುವುವವರು ಸಾಲಾಗಿ ಅಂಗಡಿಗಳನ್ನು ಹಾಕಿಕೊಂಡಿದ್ದರೆ ಅದರ ಪಕ್ಕ ಬೊಂಡಾ ಬಜ್ಜಿ ಮಾರುವವರು ಇದ್ದರೆ, ಇಂದಿನ ಕಾಲಕ್ಕೆ ತಕ್ಕಂತೆ ಗೋಬಿ ಮಂಚೂರಿ, ಪಾನಿಪುರಿ, ಮಸಾಲೆ ಪುರಿ ಮಾರುವವರು ಬಂದಿರುತ್ತಾರೆ. ಅಲ್ಲೇ ಎಳನೀರು, ಕಬ್ಬಿನಹಾಲು ಮಾರುವವರು ಬಂದಿರುತ್ತಾರೆ. ಹೀಗೆ ತಿಂಡಿ ತಿನಿಸುಗಳ ಜೊತೆ, ಹತ್ತು ಹದಿನೈದಕ್ಕೂ ಹೆಚ್ಚಿನ ಅಂಗಡಿಯವರು ಬಣ್ಣ ಬಣ್ಣದ ಗಾಜಿನ ಬಳೆಗಳು, ಲೋಹದ ಬಳೆಗಳು, ತರತರಹದ ಸರಗಳು, ಹೆಣ್ಣು ಮಕ್ಕಳ ಮನಸೆಳೆಯುವ ಹೇರ್ಪಿನ್, ಕ್ಲಿಪ್ಗಳು, ಟೇಪುಗಳ ಜೊತೆ ಸಣ್ಣ ಮಕ್ಕಳಿಂದ ದೊಡ್ಡ ಮಕ್ಕಳಿಗೂ ಇಷ್ಟವಾಗುವಂತಹ ಪಿಸ್ತೂಲಗಳು, ಕಾರು, ಲಾರಿ, ಏರೋಪ್ಲೇನ್ ಹೀಗೆ ನಾನಾ ರೀತಿಯ ಆಟಿಕೆಗಳನ್ನು ಕೊಂಡು ತಂದು ಅದರೊಡನೆಯೇ ನಾವು ಬೆಳೆದದ್ದಲ್ಲದೇ, ನಮ್ಮ ಮಕ್ಕಳೂ ಬೆಳೆದಿದ್ದಾರೆ. ಸಂಜೆ ಮನೆಯವರೆಲ್ಲರೂ ಒಟ್ಟಾಗಿ ಮತ್ತೊಮ್ಮೆ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಒಟ್ಟಾಗಿ ದೇವಸ್ಥಾನದ ಅಂಗಳದಲ್ಲಿ ಕುಳಿತು ಪುರಿ, ಕಾರಾಸೇವೆ ಜೊತೆಗೆ ತೆಂಗಿನಕಾಯಿ ಚೂರನ್ನು ತಿನ್ನುವುದನ್ನು ವರ್ಣಿಸುವುದಕ್ಕಿಂತ ಅನುಭವಿಸಿದರೇ ಚೆಂದ.
ಸಂಜೆ ಸುತ್ತಮುತ್ತಲಿನ ಹೊನ್ನಾದೇವಿ ಒಕ್ಕಲಿನವರೆಲ್ಲರೂ ದೇವಸ್ಥಾನದ ಸುತ್ತಲೂ ಸಣ್ಣ ಸಣ್ಣ ಕಲ್ಲುಗಳಲ್ಲು ಜೋಡಿಸಿ ಅದರ ಮೇಲೆ ಹೊಸದಾಗಿ ಕೊಂಡು ತಂದ ಮಡಿಕೆಯಲ್ಲಿ ಮಡೆ (ಅಕ್ಕಿ, ಬೆಲ್ಲ, ಬೇಳೆ, ಮೆಣಸು, ಜೀರಿಗೆ, ತೆಂಗಿನ ತುರಿ ಎಲ್ಲವನ್ನೂ ಸೇರಿಸಿ ಮಾಡುವ ಹುಗ್ಗಿ) ಮಾಡಿ ದೇವಿಗೆ ನೈವೇದ್ಯ ಮಾಡಿ ಮನೆಗೆ ತೆಗೆದುಕೊಂಡು ಹೋಗಿ ಮನೆ ಮಂದಿಯೆಲ್ಲಾ ಅದನ್ನೇ ಪ್ರಸಾದ ರೂಪದಲ್ಲಿ ಸೇವಿಸುತ್ತಾರೆ.
ರಾತ್ರಿ ಸುಮಾರು ಎಂಟು ಗಂಟೆಯ ಹೊತ್ತಿಗೆ ಊರಿನ ಹೊನ್ನಮ್ಮನ ಗುಡಿಯ ಮುಂದೆ ರಾತ್ರಿಯ ಉತ್ಸವಕ್ಕೆ ಸಿದ್ಧತೆ ನಡೆಸುತ್ತಾರೆ. ಹಿಂದೆಲ್ಲಾ ಎತ್ತಿನ ಗಾಡಿಯಲ್ಲಿತ್ತಿದ ಪಲ್ಲಕ್ಕಿ ಇಂದು ತರತರಹದ ಬಣ್ಣ ಬಣ್ಣದ ವಿದ್ಯುದಾಲಂಕಾರಗಳಿಂದ ಅಲಂಕೃತವಾಗಿ ಟ್ರಾಕ್ಟರ್ ಮೇಲೆ ಭವ್ಯವಾಗಿ ಮಧ್ಯದಲ್ಲಿ ಹೊನ್ನಮ್ಮನ ಉತ್ಸವ ಮೂರ್ತಿ ಅಕ್ಕ ಪಕ್ಕದಲ್ಲಿ ಗೌಡರ ಹಳ್ಳಿಯ ಮಸ್ಣಕಮ್ಮ ಮತ್ತು ಹೊನ್ನಮಾರನಹಳ್ಳಿ ಮಾರಮ್ಮನಿಗೆ ನಾನಾರೀತಿಯ ಹೂವಿನ ಅಲಂಕಾರ ಮಾಡುತ್ತಾರೆ. ನಮ್ಮೂರಿನವರೇ ಆದರೂ ಇಂದು ನಾನಾ ಕಾರಣಗಳಿಂದಾಗಿ ನೀಲಗಿರಿ (ಊಟಿ), ಕೊಯಂಬತ್ತೂರು ಮತ್ತಿತರ ತಮಿಳುನಾಡಿನ ಪ್ರದೇಶಗಳಿಗೆ ಹೋಗಿ ನೆಲಸಿರುವವರು ಈ ಹಬ್ಬಕ್ಕೆಂದೇ ವಿಶೇಷವಾಗಿ ತಮಿಳುನಾಡಿನಿಂದ ವಿಶೇಷವಾಗಿ ತಯಾರಿಸಿಕೊಂಡು ತರುವ ಹೂವಿನ ತೋಮಾಲಗಳು ಪಲ್ಲಕ್ಕಿಗೆ ಇನ್ನೂ ಹೆಚ್ಚಿನ ಮೆರಗನ್ನು ತರುತ್ತವೆ. ಹಾಗೆ ದೇವರ ಅಲಂಕಾರ ನಡೆಯುತ್ತಿದ್ದಾಗ ಅಲ್ಲಿನೆರೆರಿರುವ ಸಹಸ್ರಾರು ಜನರರ ಮನವನ್ನು ತಣಿಸಲು, ಹಿಂದೆಲ್ಲಾ ಕೀಲು ಕುದುರೆ, ನಂದಿಕೋಲುಗಳು ಇಲ್ಲವೇ ನಮ್ಮೂರಿನವರೇ ಜಡೇ ಕೋಲು ಹುಯ್ಯುತ್ತಿದ್ದರೆ ಇಂದು ಕಾಲ ಬದಲಾಗಿ ಅದರ ಜಾಗದಲ್ಲಿ ತಮಟೆಯ ಬಗೆ ಬಗೆಯ ತಾಳಗಳೊಂದಿಗೆ ಬೀರಪ್ಪನ ಕುಣಿತವಿದ್ದರೆ, ಮತ್ತದೇ ನುಗ್ಗೇಹಳ್ಳಿಯ ಸಾಹೇಬರು ತಮ್ಮ ಕೈಯಿಂದ ತಯಾರು ಮಾಡಿದ ನಾನಾ ತರಹದ ಸಿಡಿ ಮದ್ದುಗಳು ಜಾತ್ರೆಯ ಮೆರಗನ್ನು ಇನ್ನಷ್ಟು ಹೆಚ್ಚಿಸುತ್ತವೆ.
ಸರಿ ಸುಮಾರು ರಾತ್ರಿ ಹತ್ತು ಗಂಟೆಗೆ ಜಾತ್ರೆಯ ನಡುವೆಯೂ ನಿಶ್ಯಬ್ಧವಾಗಿ ಹೆಬ್ಬಾರಮ್ಮ ದೊಡ್ಡಟ್ಟಿಯಿಂದ ಹೊರಟು ಊರ ಹೊರಗಿನ (ದೊಡ್ಡ ಗುಡಿ) ಹೊನ್ನಾದೇವಿ ದೇವಸ್ಥಾನಕ್ಕೆ ಹೋಗಿ ಬಂದ ನಂತರ ಸರಿ ಸುಮಾರು ರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ದೊಡ್ಡ ಹಟ್ಟಿಯಿಂದ ಎಲ್ಲರ ಅಲ್ಯೋ ಅಲ್ಯೋ ಎಂಬ ಹುರಿದುಂಬಿಸುವಿಕೆಯೊಂದಿಗೆ ಚಾವಟಿಯಮ್ಮನೊಂದಿಗೆ ಹೆಬ್ಬಾರಮ್ಮನೂ ಸಹಾ ಹೊರಟು ದೇವರ ಮುಂದೆ ಬರುವುದರೊಂದಿಗೆ ಅಧಿಕೃತವಾಗಿ ಉತ್ಸವಕ್ಕೆ ಚಾಲನೆ ದೊರಕುತ್ತದೆ. ದೇವರ ಪಲ್ಲಕ್ಕಿಯ ಮುಂದೆ ಗೌಡರಹಳ್ಳಿಯ ಬ್ರಹ್ಮಚಾರಿಯೇ ಹೊರುವ ಕನ್ನಾಕರಡಿಯಮ್ಮ ಅದರ ಮುಂದೆ ಹಿಮ್ಮುಖವಾಗಿಯೇ, ಡಣ್, ಡಣ್,ಡಣ್, ಡಣ್ ಡಣಣ್ಣಢನ್ ಎಂಬ ಸುಶ್ರಾವ್ಯವಾದ ತಾಳದೊಂದಿಗೆ ಚಾವಟಿಯಮ್ಮ ಮತ್ತು ಹೆಬ್ಬಾರಮ್ಮ ಊರಿನ ಒಳಗಿನಿಂದ ಹೊರಟು, ಊರ ಹೊರಗಿನ ದೊಡ್ಡ ದೇವಸ್ಥಾನ ತಲುಪುವ ವೇಳೆಗೆ ಪೂರ್ವದಲ್ಲಿ ಸೂರ್ಯ ತನ್ನ ಆಗಮನವನ್ನು ತೋರುಪಡಿಸುತ್ತಿರುತ್ತಾನೆ. ಚಾವಟಿಯಮ್ಮ ಮತ್ತು ಹೆಬ್ಬಾರಮ್ಮನಿಗೆ ದೊಡ್ಡ ದೇವಸ್ಥಾನದಲ್ಲಿ ಮಂಗಳಾರತಿ ಮಾಡಿದ ನಂತರ ಪುನಃ ದೊಡ್ಡ ಹಟ್ಟಿಗೆ ಬಂದು ಸೇರುವಷ್ಟರಲ್ಲಿ ಬೆಳಗಾಗಿರುತ್ತದೆ. ಅಷ್ಟರ ಹೊತ್ತಿಗೆ ಊರ ಹೊರಗಿನ ಜಾತ್ರೆ, ಊರ ಒಳಗೆ ಬಂದಿರುತ್ತದೆ. ಅಲ್ಲಿರುವ ಬಹಳಷ್ಟು ವ್ಯಾಪಾರಿಗಳು ತಮ್ಮ ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಊರ ಒಳಗಿರುವ ರಂಗ ಮಂಟಪದ ಸುತ್ತ ಮುತ್ತಲೂ ತಮ್ಮ ಅಂಗಡಿಗಳನ್ನು ಹಾಕಿಕೊಳ್ಳುವ ಮೂಲಕ ಮರಿ ಜಾತ್ರೆಯ ಸಂಭ್ರಮವನ್ನು ಹೆಚ್ಚಿಸುತ್ತಾರೆ.
ಹೀಗೆ ಎರಡು ದಿನಗಳೂ ಸಂಭ್ರಮದಿಂದ ನಮ್ಮೂರ ಬಾಳಗಂಚಿಯ ಹೊನ್ನಾದೇವಿ ಜಾತ್ರೆ ಸುತ್ತ ಮುತ್ತಲಿನ ಹತ್ತು ಹದಿನಾರು ಹಳ್ಳಿಗಳ ಜನರ ಸಮ್ಮುಖದಲ್ಲಿ ಇಂದಿನ ಆಧುನಿಕ ಕಾಲದಲ್ಲೂ ಯಾವುದೇ ಜಾತಿಯ ಬೇಧಭಾವವಿಲ್ಲದೆ ಭಾವೈಕ್ಯದಲ್ಲಿ ನಡೆಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ. ಹೇಗೂ ನೀವೆಲ್ಲಾ ನಮ್ಮೂರ ಇತಿಹಾಸ ಮತ್ತು ಹಬ್ಬಗಳನ್ನು ಈಗ ಓದಿ ತಿಳಿದಿದ್ದೀರಿ. ಮುಂದಿನ ವರ್ಷ ತಪ್ಪದೇ ಪುರುಸೊತ್ತು ಮಾಡಿಕೊಂಡು ನಮ್ಮೂರ ಜಾತ್ರೆಯಲ್ಲಿ ಭಾಗಿಯಾಗಿ ಆ ತಾಯಿ ಹೊನ್ನದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪ್ರಾರ್ಥನೆ. ನಿಮ್ಮ ಆಗಮನಕ್ಕಾಗಿ ನಾವು ಕಾಯುತ್ತಿರುತ್ತೇವೆ. ನೀವು ಬರ್ತೀರೀ ತಾನೇ?
ಏನಂತೀರಿ?
ನಿಮ್ಮವನೇ ಉಮಾಸುತ
ಆಧಾರ: ಕನ್ನಡರತ್ನ.ಕಾಂ
[…] ಬಾಳಗಂಚಿಯ ಹೊನ್ನಾದೇವಿ ಹಬ್ಬ https://wp.me/paLWvR-9g […]
LikeLike