ಮದುವೆ ಎಂಬುದು ಕೇವಲ ಗಂಡು ಮತ್ತು ಹೆಣ್ಣುಗಳ ಬಂಧವಲ್ಲ. ಅದು ಎರಡು ಕುಟುಂಬಗಳ ನಡುವಿನ ಸಂಬಂಧದ ಬೆಸುಗೆ. ಕೇವಲ ಕುಟುಂಬ ಏಕೆ ? ಹಿಂದೆಲ್ಲಾ ಅದು ಎರಡು ಊರುಗಳನ್ನು ಒಗ್ಗೂಡಿಸುವ ಇಲ್ಲವೇ ಎರಡು ದೇಶಗಳ ನಡುವಿನ ಶತ್ರುತ್ವವನ್ನು ಬಂಧುತ್ವವನ್ನಾಗಿ ಬೆಸೆಯುವ ಕೊಂಡಿಯಾಗಿತ್ತು. ಮದುವೆಯ ಬಗ್ಗೆ ಇಷ್ಟೆಲ್ಲಾ ಏಕೆ ಪೀಠಿಕೆ ಅಂದ್ರಾ, ಅದು ಏನು ಇಲ್ಲಾ ಕಳೆದ ಎರಡು ಮೂರು ದಿನಗಳಿಂದ ನಮ್ಮ ಕುಟುಂಬದ ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾಗ ಮದುವೆಯಲ್ಲಿ ಆಗುವ ಕೆಲವೊಂದು ಗಂಭಿರವಾದ ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳ ಬೇಕೆನಿಸಿದೆ.
ಮದುವೆಯ ವಯಸ್ಸಿಗೆ ಬಂದ ಹೆಣ್ಣುಮಕ್ಕಳು ಮನೆಯಲ್ಲಿದ್ದರೆ ಹೆತ್ತವರಿಗೆ ಒಂದು ರೀತಿಯ ವಿಶೇಷ ಕಾಳಜಿ ಮತ್ತು ಜವಾಬ್ದಾರಿ. ಮಗಳಿಗೆ ಒಳ್ಳೆಯ ಸಂಬಂಧ ಹುಡುಕಿ ಅವಳಿಗೆ ಮದುವೆ ಮಾಡಿ ಕಳುಹಿಸಿಕೊಟ್ಟರೆ ಸಾಕಪ್ಪ ಎನ್ನುತ್ತಿರುತ್ತಾರೆ. ಅದಕ್ಕಾಗಿ ಅಪ್ಪಾ ಮಗಳು ಹುಟ್ಟಿದಾಗಿನಿಂದಲೂ ಪ್ರತೀ ತಿಂಗಳು ಅಲ್ಪ ಸ್ವಲ್ಪ ಹಣವನ್ನು ಜೋಪಾನವಾಗಿ ಮಗಳ ಮದುವೆಗೆಂದೇ ಉಳಿತಾಯ ಮಾಡುತ್ತಿದ್ದರೆ, ತಾಯಿ ಅಲ್ಪ ಸ್ವಲ್ಪವೇ ಉಳಿಸಿ, ಚಿನ್ನದ ಅಂಗಡಿಯಲ್ಲಿ ಚೀಟಿ-ಗೀಟಿ ಹಾಕಿ ಮಗಳ ಮದುವೆಗೆಂದು ಚಿನ್ನಾಭರಣ ಮತ್ತು ಬೆಳ್ಳಿ ಸಾಮಾನುಗಳನ್ನು ತೆಗೆದು ಇಡುತ್ತಾಳೆ. ಹಾಗೆಯೇ, ಸಂಕ್ರಾಂತಿಗೋ ಇಲ್ಲವೇ ಯುಗಾದಿ ಅಥವಾ ಗೌರಿ ಹಬ್ಬಕ್ಕೆ ಪ್ರಿಯದರ್ಶಿನಿ ಇಲ್ಲವೇ ಮೈಸೂರು ಸಿಲ್ಕ್ ನವರು ರಿಯಾಯಿತಿ ದರದಲ್ಲಿ ರೇಶ್ಮೆ ಸೀರೆಯ ಮಾರಾಟವಿದ್ದಲ್ಲಿ, ಮಗಳ ಮದುವೆಗೆ ಬೇಕಿದ್ದ ಸೀರೆಗಳನ್ನು ಎತ್ತಿ ತೆಗೆದಿಡುತ್ತಾಳೆ. ಇನ್ನು ಒಳ್ಳೆಯ ಸಂಬಂಧ ಗೊತ್ತಾದ ಮೇಲಂತೂ ಹುಡುಗಾ ಹುಡುಗಿ ಪಾರ್ಕು, ಸಿನಿಮಾ, ಹೋಟೆಲ್, ಕಾಫೀ ಬಾರ್ ಅಂತಾ ಸುತ್ತಾಡ್ತಾ , ಮೊಬೈಲ್ನಲ್ಲಿ ಗಂಟೆ ಗಟ್ಟಲೆ ಮಾತನಾಡುತ್ತಾ , ವ್ಯಾಟ್ಯಾಪ್, ಇಸ್ಟಾಗ್ರಾಂ ಚಾಟ್ ಮಾಡ್ತಾ ಇದ್ರೇ, ಅಪ್ಪಾ- ಅಮ್ಮಾ ಮದುವೆಗೆ ಖರ್ಚಿಗೆ ಹಣವನ್ನು ಹೊಂಚುತ್ತಾ, ಛತ್ರದವರಿಗೆ, ಅಡುಗೆಯವರಿಗೆ, ಪುರೋಹಿತರಿಗೆ ಮುಂಗಡ ಕೊಟ್ಟು ಪ್ರಿಂಟಿಂಗ್ ಪ್ರೆಸ್ಗೆ ಹೋಗಿ ಆಹ್ವಾನ ಪತ್ರ ಅಚ್ಚು ಹಾಕಿಸುವುದರಲ್ಲಿ ನಿರತರಾಗಿತ್ತಾರೆ.
ಪುರೋಹಿತರು ಎಂದು ಹೇಳಿದಾಗ ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ಚಿಕ್ಕ ತಂಗಿಯ ಮದುವೆ ಮಾಡಿದ ಸಂದರ್ಭ ಜ್ಞಾಪಕಕ್ಕೆ ಬರ್ತಾ ಇದೆ. ಮದುವೆ ಬೆಂಗಳೂರಿನಲ್ಲಿದ್ದರೂ ಕುಲಪುರೋಹಿತರೆಂದು ಊರಿನ ಪುರೋಹಿತರಿಗೆ ನಾಲ್ಕು ತಿಂಗಳ ಮುಂಚೆಯೇ ವಿಷಯ ತಿಳಿಸಿ ಅವರಂದಲೇ ಲಗ್ನ ಹಾಕಿಸಿಕೊಂಡು ಛತ್ರಕ್ಕೆ ಮುಂಗಡ ಕೊಟ್ಟ ಕೂಡಲೇ ಅವರಿಗೂ ತಿಳಿಸಿ, ಒಂದು ತಿಂಗಳ ಮುಂಚೆಯೇ ಖುದ್ದಾಗಿ ಮುಖತಃ ಭೇಟಿಯಾಗಿ ಅವರಿಗೆ ಆಹ್ವಾನ ಪತ್ರ ಕೊಟ್ಟು, ಮದುವೆಯ ಹಿಂದಿನ ದಿನವೇ ನಾಂದಿಯಿಂದ ಹಿಡಿದು, ವರಪೂಜೆ, ಮಾರನೇ ದಿನ ಧಾರೆ, ನಾಗೋಲಿ ಮತ್ತು ಮೂರನೆಯ ದಿನ ಸತ್ಯನಾರಾಯಣ ಪೂಜೆಗೂ ಅವರಿಗೇ ಒಪ್ಪಿಸಲಾಗಿತ್ತು. ಇಂದಿನ ಹಾಗೆ ಅಂದೆಲ್ಲಾ ಫೋನ್ ಅಥವಾ ಮೊಬೈಲ್ ಇಲ್ಲದಿದ್ದರಿಂದ ಎಲ್ಲವೂ ಅಂಚೆ ಕಾಗದ ಮೂಲಕವೇ ವ್ಯವಹಾರವಾಗಿತ್ತು. ಮದುವೆ ಹಿಂದಿನ ದಿನ ಬೆಳಿಗ್ಗೆ ನಾವೆಲ್ಲರೂ ಛತ್ರಕ್ಕೆ ಹೋಗಿ ಸಾಮಾನು ಸರಂಜಾಮುಗಳನ್ನೆಲ್ಲಾ ಇಳಿಸಿ, ನಮ್ಮ ದೊಡ್ಡಪ್ಪನ ಮಗ ಅಣ್ಣನನ್ನು ಬಸ್ ಸ್ಟಾಂಡಿನಿಂದ ಪುರೋಹಿತರನ್ನು ಕರೆತರಲು ಕಳುಹಿಸಿದ್ದೆವು. ಅಡಿಗೆಯವರು ಬಂದು ತಮ್ಮ ಕೆಲಸ ಆರಂಭಿಸಿ ಎಲ್ಲರಿಗೂ ಕಾಫಿ, ತಿಂಡಿ ಮಾಡಿ ಕೊಟ್ಟರೂ ಪುರೋಹಿತರ ಆಗಮನವಾಗಲೇ ಇಲ್ಲ, ಗಂಟೆ, ಒಂಭತ್ತಾಗಿ, ಹತ್ತಾದರೂ ಪುರೋಹಿತರು ಮತ್ತು ಅವರನ್ನು ಕರೆ ತರಲು ಹೋಗಿದ್ದ ನಮ್ಮ ಅಣ್ಣನ ಸುದ್ದಿಯೇ ಇಲ್ಲವಾದಾಗ ನಮ್ಮ ಎಲ್ಲರಲ್ಲೂ ಆತಂಕವಾದಾಗ, ನಮ್ಮ ಮಾವನ ಮಗ ತನಗೆ ಹತ್ತಿರದಲ್ಲೇ ಪರಿಚಯವಿದ್ದ ದೇವಸ್ಥಾನದ ಅರ್ಚಕರ ಬಳಿ ವಿಚಾರಿಸಿದಾಗ, ಅವರು ನನಗೆ ಮದುವೆ ಪೂರ್ತಿ ಮಾಡಿಸಲು ಬರುವುದಿಲ್ಲ. ಬೇಕಾದರೆ ನಾಂದಿ ಮಾಡಿಸಿ ಕೊಡುತ್ತೇನೆ ಎಂದಾಗ, ಸರಿ ಈಗ ನಾಂದಿ ಮಾಡಿಸಿ ಕೊಡಿ ಮಧ್ಯಾಹ್ನದ ಹೊತ್ತಿಗೆ ನಮ್ಮ ಶಾಸ್ತ್ರಿಗಳು ಬಂದು ಬಿಡಬಹುದು ಎಂದು ಅವರನ್ನು ಕರೆತಂದು ಅವರಿಂದ ನಾಂದಿ ಶಾಸ್ತ್ರ ಮಾಡಿಸಿ, ಮುತ್ತೈದೆಯರಿಗೆ ಹೂವಿಳ್ಯ ಮುಗಿಸಿ ಊಟಕ್ಕೆ ಅಣಿಯಾಗುವ ಹೊತ್ತಿಗೆ ಶಾಸ್ತ್ರಿಗಳನ್ನು ಕರೆತರಲು ಹೋಗಿದ್ದ ಅಣ್ಣ ಬರಿಗೈಯ್ಯಲ್ಲಿ ಬಂದಾಗ , ಇನ್ನು ಕಾಯ್ದು ಪ್ರಯೋಜನವಿಲ್ಲ ಎಂದು ನಿರ್ಧರಿದ ನಮ್ಮ ತಂದೆಯವರು, ಬೇಗನೆ ಊಟದ ಶಾಸ್ತ್ರ ಮುಗಿಸಿ, ನಾನು ಮತ್ತು ನಮ್ಮ ತಂದೆಯವರು ನಮಗೆ ಪರಿಚಯವಿದ್ದ ಒಬ್ಬಬ್ಬರೇ ಪುರೋಹಿತರನ್ನು ಭೇಟಿ ಮಾಡಿದಾಗ ಬಹುತೇಕ ಎಲ್ಲರೂ ಒಂದಲ್ಲಾ ಒಂದು ಕಾರ್ಯಕ್ರಮ ಒಪ್ಪಿಕೊಂಡಿದ್ದರು. ಕಡೆಯ ಪ್ರಯತ್ನವೆಂಬಂತೆ ಹತ್ತಿರದ ಗಣೇಶ ದೇವಸ್ಥಾನದ ಪುರೋಹಿತರ ಮನೆಗೆ ಹೋಗಿ ಅವರನ್ನು ವಿಚಾರಿಸಿದಾಗ, ಅಯ್ಯೋ ರಾಮಾ, ಎಂಥಾ ಕೆಲಸವಾಯಿತು. ಒಂದೆರಡು ದಿನ ಮುಂಚೆ ಹೇಳಿದ್ದರೆ, ದೇವಸ್ಥಾನದ ಪೂಜೆಗೆ ಯಾರನ್ನಾದರೂ ಅಣಿಮಾಡಿ ಬರುತ್ತಿದ್ದೆ. ಈಗ ಹೇಳಿದರೆ ಆಗುವುದಿಲ್ಲವಲ್ಲಾ ಎಂದಾಗ, ಸರಿ ಬೇರೆಯವರನ್ನು ಹುಡುಕೋಣ ಎಂದು ಅವರ ಮನೆಯಿಂದ ಹೊರಗೆ ಬರುತ್ತಿದ್ದಾಗ, ಅವರ ಮಗ ಗೋಪಾಲ, ತನ್ನ ಕೆಲಸ ಮುಗಿಸಿಕೊಂಡು ಮನಗೆ ಬರುತ್ತಿದ್ದ. ನನ್ನನ್ನು ನೋಡಿದ ಕೂಡಲೇ ಓ ಶ್ರೀಕಂಠಾ, ಚೆನ್ನಾಗಿದ್ದೀಯಾ? ಏನು ಸಮಾಚಾರ ಇಷ್ಟು ದೂರ ಬಂದ್ದೀದ್ದೀಯಾ ಎಂದ? ಅವನಿಗೆ ನಡೆದದ್ದೆಲ್ಲವನ್ನೂ ವಿವರಿಸಿ, ದೇವಸ್ಥಾನದ ಪೂಜೆ ಮಾಡಲು ಯಾರೂ ಇಲ್ಲದ ಕಾರಣ ನಿಮ್ಮ ತಂದೆಯವರೂ ಕೂಡಾ ಬರಲು ಒಪ್ಪಿಕೊಳ್ಳಲಿಲ್ಲ ಎಂದೆ. ಅಷ್ಟೇ ತಾನೇ, ನಾನು ಇಲ್ವಾ, ಬನ್ನಿ ಒಳಗೆ ಎಂದು ಕರೆದು, ಅಪ್ಪಾ, ನೀವು ಅವರ ಮನೆಯ ಮದುವೆ ಖಂಡಿತವಾಗಿಯೂ ಮಾಡಿಸಿಕೊಡಲೇ ಬೇಕು. ನಾನು ದೇವಸ್ಥಾನದ ಪೂಜೆ ಮಾಡುತ್ತೇನೆ ಎಂದ. ಆದಕ್ಕೆ ಅವರ ತಂದೆ ಅಲ್ಲಾ ಮಗು ನಿನಗೆ ಕೆಲಸ ಇದೆಯಲ್ಲವೇ ಎಂದಾಗ, ಮದುವೆಯ ಹುಡುಗಿ ಲಕ್ಷ್ಮೀ, ನನ್ನ ಸಹಪಾಠಿ, ಶ್ರೀಕಂಠ ಮತ್ತು ಅವನ ಇನ್ನೊಬ್ಬ ತಂಗಿ ನಮ್ಮ ಅಕ್ಕಂದಿರ ಸಹಪಾಠಿಗಳು ಹಾಗಾಗಿ ಒಬ್ಬ ಸ್ನೇಹಿತನಾಗಿ ಅವರ ಕಷ್ಟಕ್ಕೆ ಆಗುವುದು ನಮ್ಮ ಧರ್ಮ. ನೀವು ಮದುವೆ ಮಾಡಿಸಿಕೊಡಿ ನಾನು ರಜಾ ಹಾಕಿ ದೇವಸ್ಥಾನ ನೋಡಿ ಕೊಳ್ಳುತ್ತೇನೆ ಎಂದಾಗ, ಸರಿಯಪ್ಪಾ. ನನ್ನ ಮಗ ಹೇಳಿದ ಮೇಲೆ ನಾನು ಬರ್ತೀನಿ. ಆದರೆ ನನಗೆ ಓಡಾಲು ಆಗದ ಕಾರಣ ನೀವೇ ಬಂದು ಕರೆದು ಕೊಂಡು ಹೋಗಿ, ಕರೆದು ಕೊಂಡು ಬಿಡಬೇಕು ಎಂದಾಗ, ನಮ್ಮ ತಂದೆಯವರ ಕಣ್ಣಿನಲ್ಲಿ ಆನಂದ ಭಾಷ್ಪ ಉಕ್ಕಿ ಹರಿಯುತ್ತಿತ್ತು. ಅವರನ್ನು ಸಮಾಧಾನ ಪಡಿಸಿ, ಸರಿ ಶಾಸ್ತ್ರಿಗಳೇ, ಆ ಜವಾಬ್ಧಾರಿ ನನಗೆ ಬಿಡಿ. ನಾನು ನಿಮಗೆ ವಾಹನದ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿ. ಗೋಪಾಲನ ಎರಡೂ ಕೈಗಳನ್ನು ಹಿಡಿದು, ಗೋಪಾಲ ನಿನ್ನಿಂದ ಬಾರೀ ಉಪಕಾರವಾಯಿತು. ನಿನ್ನ ಈ ಉಪಕಾರವನ್ನು ನಮ್ಮ ಜೀವಮಾನ ಇರುವ ತನಕ ಮರೆಯುವುದಿಲ್ಲ ಎಂದು ಹೇಳಿದೆ. ಶಾಸ್ತ್ರಿಗಳು ವರಪೂಜೆ ಮತ್ತು ಮದುವೆಯ ಶಾಸ್ತ್ರವನ್ನು ಸಾಂಗೋಪಾಂಗವಾಗಿ ಯಾವುದೇ ಲೋಪವಿಲ್ಲದೆ ನಡೆಸಿಕೊಟ್ಟ ನಂತರ, ಅವರಿಗೆ ಸಂಭಾವನೆ ಎಷ್ಟು ಕೊಡಬೇಕು ಎಂದು ಕೇಳಿದಾಗ, ನೀವು ನಮ್ಮ ಸ್ನೇಹಿತರು ನಿಮ್ಮ ಮನಸ್ಸಿಗೆ ಸಂತೋಷವಾದಷ್ಟು ಕೊಡಿ ಎಂದಾಗ ನಮ್ಮ ತಂದೆಯವರು, ಸಮಯಕ್ಕೆ ಸರಿಯಾಗಿ ಶಾಸ್ತ್ರೋಕ್ತವಾಗಿ ಮದುವೆ ಶಾಸ್ತ್ರ ಮುಗಿಸಿಕೊಟ್ಟು ನಮ್ಮ ಮಾನ ಕಾಪಾಡಿದ ಶಾಸ್ತ್ರಿಗಳಿಗೆ ಉತ್ತಮ ಸಂಭಾವನೆಯ ಜೊತೆಗೆ, ಅವರ ಮಗ ಗೋಪಾಲನಿಗೂ ಒಳ್ಳೆಯ ಶರ್ಟ್ ಪೀಸ್ ಕಾಣಿಕೆ ಕೊಟ್ಟಿದ್ದು ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚ ಹಸುರಾಗಿದೆ.
ಇನ್ನು ಮದುವೆ ಎಂದ ಮೇಲೆ ಖರ್ಚು ಹೆಚ್ಚೇ. ಅದಕ್ಕಾಗಿ ಪ್ರತಿಯೊಂದು ಪೈಸೆ ಉಳಿಸಿದರೂ ನಮಗೇ ಲಾಭ. ಅದಕ್ಕಾಗಿಯೇ ಅಡುಗೆಯ ಎಲ್ಲಾ ಸಾಮಾನುಗಳನ್ನು ವಾರಕ್ಕೇ ಮುಂಚೆಯೇ ಎಪಿಎಂಸಿ ಯಾರ್ಡ್ ನಿಂದ ತಂದು, ತೆಂಗಿನ ಕಾಯಿಯನ್ನು ಚೆನ್ನಪಟ್ಟಣದ ನಮ್ಮ ಸ್ನೇಹಿತನ ಮಾವನ ತೋಟದಿಂದ, ಅಕ್ಕಿಯನ್ನು ಕುಣಿಗಲ್ಲಿನ ನಮ್ಮ ಅತ್ತೆಯವರ ಮನೆಯ ಹತ್ತಿರದ ಅಕ್ಕಿ ಮಿಲ್ನಿಂದ ತಂದಿದ್ದರೆ, ಸಕ್ಕರೆಯನ್ನು ಪರಿಚಯವಿದ್ದ ಫುಡ್ ಡಿಪಾರ್ಟ್ಮೆಂಟ್ ನವರು ಕೊಡಿಸಿದ್ದರು. ಸೀಮೇ ಎಣ್ಣೆಯನ್ನು ನಮ್ಮ ತಂದೆಯವರಿಗೆ ಪರಿಚಯವಿದ್ದ ನ್ಯಾಯಬೆಲೆ ಅಂಗಡಿಯವರು ಕೊಡಿಸಿದ್ದರು. ಬಾಳೆಎಲೆ ಮತ್ತು ವಿಳ್ಳೇದೆಲೆಯನ್ನು ನೇರವಾಗಿ ತೋಟದಿಂದಲೇ ಕೊಂಡು ತಂದಿದ್ದೆವು. ಹೀಗೆ ಪ್ರತಿಯೊಂದರಲ್ಲೂ ಆದಷ್ಟೂ ಶ್ರಮವಹಿಸಿ ಹಣ ಉಳಿತಾಯ ಮಾಡಿದ್ದೆವು. ಮದುವೆಯ ಬೆಳಿಗ್ಗೆ ಹತ್ತಿರದ ಹಾಲಿನ ಬೂತ್ನಿಂದ ಹಾಲು ತೆಗೆದುಕೊಂಡರೆ ಲೀಟರಿಗೆ ಒಂದು ರೂಪಾಯಿ ಜಾಸ್ತಿ ತೆಗೆದುಕೊಳ್ಳುತ್ತಾರೆ ಎಂದು, ಬೆಳ್ಳಂಬೆಳಿಗ್ಗೆಯೇ ಯಲಹಂಕ ಮದರ್ ಡೈರಿಗೆ ಹೋಗಿ ಬೇಕಾಗಿದ್ದ ಹಾಲನ್ನು ತೆಗೆದುಕೊಂಡು ಮದುವೆ ಮನೆಗೆ ಬಂದರೆ ಅಡುಗೆಯ ಮನೆಯ ಸ್ಟೋರ್ ಬೀಗ ಹಾಕಿತ್ತು.
ಅಡುಗೆಯ ಮನೆಯ ಸ್ಟೋರ್ ನೋಡಿಕೊಳ್ಳಲು ನಮ್ಮ ತಾಯಿಯ ತಂಗಿಯ ಯಜಮಾನರಿಗೆ ಅಂದರೆ ನಮ್ಮ ಚಿಕ್ಕಪ್ಪನಿಗೆ ವಹಿಸಿತ್ತು. ಅವರ ಮನೆ ಅಲ್ಲೇ ಛತ್ರದ ಬಳಿ ಇದ್ದುದರಿಂದ ಅಡುಗೆಯವರಿಗೆ ಏನಾದರೂ ಸಾಮಾನುಗಳು ಬೇಕಾದಲ್ಲಿ ತಂದು ಕೊಡಬಹುದು ಎಂಬ ಆಲೋಚನೆ ನಮ್ಮದಾಗಿತ್ತು. ಸರಿ ಚಿಕ್ಕಪ್ಪ ಇಲ್ಲೇ ಎಲ್ಲೋ ಹೋಗಿರಬಹುದೆಂದು ಇಡೀ ಕಲ್ಯಾಣ ಮಂಟಪ ಹುಡುಕಾಡಿದರೂ ಚಿಕ್ಕಪ್ಪನ ಸುಳಿವೇ ಇಲ್ಲ. ಆಗಲೇ ಒಂದಿಬ್ಬರು ಬೀಗರ ಮನೆಯವರು ಕಾಫಿ ರೆಡಿ ಆಗಿದ್ಯಾ ಅಂತಾ ಕೇಳಿಕೊಂಡು ಬಂದಿದ್ದರು. ಇದೊಳ್ಳೆ ಗ್ರಹಚಾರವಾಯ್ತಲ್ಲಪ್ಪಾ ಎಂದು ಯೋಚಿಸುತ್ತಾ ಎಲ್ಲಿ ಹೋಗಿರಬಹುದು ಎಂದು ಎಲ್ಲರ ಬಳಿ ಕೇಳುತ್ತಿದ್ದಾಗ, ನಮ್ಮ ಸಂಬಂಧೀಕರು ಹೇಳಿದ ಕಥೆ ಕೇಳಿ ಗಾಬರಿಯಾಗಿ ಬಿಟ್ಟೆ. ಸಾಮಾನ್ಯವಾಗಿ ಮದುವೆ ಮನೆಯಲ್ಲಿ ಇಸ್ಪೀಟ್ ಆಡುವ ಕೆಲವರು ಬಂದೇ ಬಂದಿರುತ್ತಾರೆ. ಊಟ ತಿಂಡಿ ಹೊತ್ತಿಗೆ ಆಟದಿಂದ ಏಳುವುದು ಬಿಟ್ಟರೆ, ಹಗಲು ರಾತ್ರಿ ಎನ್ನದೇ, ನಿದ್ದೇ ಕೂಡಾ ಬಿಟ್ಟು ಇಸ್ಪೀಟ್ ಆಟದಲ್ಲಿ ಮಗ್ನರಾಗಿರುತ್ತಾರೆ. ಹಾಗೆಯೇ ಹಿಂದಿನ ದಿನ ರಾತ್ರಿ ಇಸ್ಪೀಟ್ ಆಟ ಆಡುತ್ತಿದ್ದವರ ಬಳಿ ತಡ ರಾತ್ರಿಯಲ್ಲಿ ನಮ್ಮ ಚಿಕ್ಕಪ್ಪ ಕಾಫಿ ತೆಗೆದುಕೊಂಡು ಹೋಗಿದ್ದಾರೆ. ಕಾಫಿ ಪ್ರಿಯನಾದ ನಮ್ಮ ದೂರದ ಸಂಬಂಧಿಗೆ ಅಂದು ಚಾಕ್ ಪಾಟ್ ಹೊಡೆದಿದ್ದ ಕಾರಣ, ಬನ್ನೀ ಭಟ್ರೇ. ಒಳ್ಳೆಯ ಸಮಯಕ್ಕೆ ಬಂದ್ರೀ. ಬಿಸಿ ಬಿಸಿ ಕಾಫಿ ಕೊಡಿ ಎಂದು ಪಟ ಪಟ ಮಾತನಾಡುತ್ತಾ ಕಾಫಿ ಕೆಟಲ್ನಿಂದ ಅವನೇ ಕಾಫಿ ಬಗ್ಗಿಸಿಕೊಂಡು ತಗೊಳ್ಳಿ ಭಟ್ರೇ ಭಕ್ಷೀಸು ಎಂದು ನಮ್ಮ ಚಿಕ್ಕಪ್ಪನ ಕೈಗೆ ನೋಟೋಂದ್ದನ್ನು ತುರುಕಿದ್ದಾನೆ. ಮೊದಲೇ ದೂರ್ವಾಸ ಮುನಿಯಾದ ನಮ್ಮ ಚಿಕ್ಕಪ್ಪನ ಪಿತ್ತ ನೆತ್ತಿಗೇರಿದೆ. ಪಾಪ ಆಡ್ತಾ ಇದ್ದಾರಲ್ಲಾ ಅಂತಾ ಕಾಫಿ ಮಾಡಿಕೊಂಡು ಬಂದ್ರೇ, ನನ್ನನ್ನೇ ಅಡುಗೆ ಭಟ್ಟ ಅಂತಾನಲ್ಲಾ ಎಂದು ಮನಸ್ಸಿನಲ್ಲೇ ಅವನನ್ನು ಶಪಿಸುತ್ತಾ. ಅವನು ಕೊಟ್ಟ ನೋಟನ್ನು ಅವನ ಕೈಗೇ ಕೊಟ್ಟು, ಕಾಫೀ ಕೆಟಲ್ ಅಲ್ಲಿಯೇ ಕುಕ್ಕಿ ದುರು ದುರು ಅಂತಾ ಕೋಪದಿಂದ ತಮ್ಮ ಮನೆಗೆ ಹೋಗಿಬಿಟ್ಟಿರುವ ವಿಷಯ ತಿಳಿಯಿತು.
ಕೂಡಲೇ ಚಿಕ್ಕಮ್ಮನ ಮನೆಯ ಕಡೆ ಗಾಡಿ ತೆಗೆದುಕೊಂಡು ಹೋಗಿ, ಬಾಗಿಲು ಎಷ್ಟೇ ತಟ್ಟಿದರೂ, ಕಾಲಿಂಗ್ ಬೆಲ್ ಮಾಡಿದರೂ ಬಾಗಿಲು ತೆಗೆಯುತ್ತಲೇ ಇಲ್ಲ. ಈಗೇನಪ್ಪಾ ಮಾಡೋದು? ಸ್ಟೋರ್ ಬೀಗನೇನೋ ಒಡೆದು ಹಾಕಬಹುದು ಅದರೆ ಚಿಕ್ಕಪ್ಪನನ್ನು ಸಮಾಧಾನ ಮಾಡದಿದ್ದರೆ, ದೊಡ್ಡ ರಾದ್ದಾಂತವೇ ಆಗಬಹುದು ಎಂದು ಯೋಚಿಸುತ್ತಲೇ, ಜೋರಾಗಿ ಮತ್ತೊಮ್ಮೆ ಕಾಲಿಂಗ್ ಬೆಲ್ ಭಾರಿಸಿ, ಬಾಗಿಲನ್ನು ತಟ್ಟಿದಾಗ, ಯಾರೂ? ಬಂದೆ ಬಂದೆ ಎಂಬ ಚಿಕ್ಕಪ್ಪ ಶಬ್ಧ ಕೇಳಿ, ಅಬ್ಬ ಬದುಕಿದೆಯಾ ಬಡ ಜೀವ ಎಂಬಂತಾಗಿ ಅಲ್ಲೇ ಒಂದೈದು ನಿಮಿಷ ಕಾಯುವ ಹೊತ್ತಿಗೆ, ಚಿಕ್ಕಪ್ಪ ಸ್ನಾನ ಮುಗಿಸಿ ಮೈ ಒರೆಸಿಕೊಂಡು ಬಾಗಿಲು ತೆಗೆದರು. ಚಿಕ್ಕಪ್ಪಾ, ರಾತ್ರಿ ನಡೆದ ವಿಷಯ ಈಗ ಗೊತ್ತಾಯ್ತು. ದಯವಿಟ್ಟು ಅಪಾರ್ಥ ಮಾಡಿಕೊಳ್ಳಬೇಡಿ. ಏನೋ ಆಡುವ ಭರದಲ್ಲಿ ನಿದ್ದೆ ಮೂಡಿನಲ್ಲಿ ಅವನು ಹಾಗೆ ಹೇಳ್ಬಿಟ್ಟಿದ್ದಾನೆ. ಕೋಪ ಮಾಡಿಕೊಳ್ಳಬೇಡಿ. ನಾನು ಅವನ ಪರವಾಗಿ ಕ್ಷಮೆ ಕೇಳುತ್ತೇನೆ ಎಂದು ಒಂದೇ ಸಮನೆ ಉಸುರಿದೆ. ಅಯ್ಯೋ ಬಿಡೋ ರಾಜಕುಮಾರಾ (ವರನಟ ಡಾ. ರಾಜಕುಮಾರರ ಅಪ್ಪಟ ಅಭಿಮಾನಿಯಾದ ನಮ್ಮ ಚಿಕ್ಕಪ್ಪ ಎಲ್ಲಾ ಮಕ್ಕಳನ್ನೂ ರಾಜಕುಮಾರಾ ಎಂದೇ ಕರೆಯುತ್ತಿದ್ದರು). ಅವನಾಡಿದ ಮಾತಿಗೆ ರಾತ್ರಿ ಸಿಕ್ಕಪಟ್ಟೆ ಕೋಪ ಬಂದು ಬಿಡ್ತು. ಅಲ್ಲೇ ಉಗಿದು ಬಂದು ಬಿಡೋಣ ಅನ್ನಿಸ್ತು. ಆದ್ರೆ, ಅವನು ಹೆಣ್ಣಿನ ಮನೆಯ ಕಡೆಯವರಾ? ಇಲ್ಲಾ ಗಂಡಿನ ಮನೆ ಕಡೆಯವರಾ? ಎಂದು ತಿಳಿಯದೆ, ಸುಮ್ಮನೆ ಮದುವೆ ಮನೆಯಲ್ಲಿ ಯಾಕೆ ಗಲಾಟೆ ಎಂದು ಕೋಪ ನುಂಗಿಕೊಂಡು ಮನೆಗೆ ಬಂದು ನಿದ್ದೆ ಮಾಡಿಬಿಟ್ಟೆ. ಅಲಾರಾಂ ಹೊಡೆದದ್ದೂ ಗೊತ್ತಾಗಲಿಲ್ಲ. ಸರಿ ಸರಿ ನಡಿ ಸ್ಟೋರ್ ಕೀ ಕೂಡಾ ನನ್ನ ಹತ್ತಿರಾನೇ ಇದೇ. ಇನ್ನೂ ತಿಂಡಿ ಅಡುಗೆ ಎಲ್ಲಾ ಮಾಡಬೇಕು. ಮಹೂರ್ತ ಬೇರೆ ಬೇಗ ಇದೇ ಎಂದು ನಮ್ಮ ಚಿಕ್ಕಪ್ಪ ಹೇಳಿದಾಗಾ, ಸದ್ಯ ಕೋಪ ಎಲ್ಲಾ ಇಳಿದು ಚಿಕ್ಕಪ್ಪ ತಣ್ಣಗಾಗಿದ್ದಾರೆ ಎಂದು ಮನಸ್ಸಿನಲ್ಲೇ ಅಂದು ಕೊಂಡು ಚಿಕ್ಕಪ್ಪನ್ನನ್ನು ಗಾಡಿಯಲ್ಲಿ ಕೂರಿಸಿಕೊಂಡು ಮದುವೆ ಮನೆಗೆ ಬಂದು ಸ್ವಲ್ಪ ಸಮಯದ ನಂತರ ನನ್ನ ಸಂಬಂಧಿಯ ಬಳಿ ನಮ್ಮ ಚಿಕ್ಕಪ್ಪನವರಿಗೆ ಕ್ಷಮೆಯನ್ನೂ ಕೇಳಿಸಿ ಸಮಸ್ಯೆ ಬಗೆ ಹರಿಸಿದ್ದೆ.
ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ ಎಂಬಂತೆ ಮದುವೆ ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆಂಬ ವಾಡಿಕೆ ಮಾತಾಗಿದ್ದರೂ ಅಂತಹ ಮದುವೆ ಮಾಡುವಾಗ ಇಂತಹ ನೂರಾರು ಸಮಸ್ಯೆಗಳು, ಕಷ್ಟ ಕಾರ್ಪಣ್ಯಗಳು ಹೆಣ್ಣಿನ ಮನೆಯವರಿಗೆ ಎದುರಾಗಿರುತ್ತವೆ. ಆದರೆ ಇದರ ಅರಿವಿಲ್ಲದ ಬಹಳಷ್ಟು ಮಂದಿ, ಮದುವೆ ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆಯುವುದು, ವಿನಾಕಾರಣ ಅದು ಸರಿ ಇಲ್ಲಾ ಇದು ಸರಿ ಇಲ್ಲಾ ಎಂದು ಕಿತಾಪತಿ ಮಾಡುವುದು, ಗಂಡಿನ ಕಡೆಯವರು ಎಂದು ಹೆಣ್ಣಿನ ಮನೆಯವರ ಮೇಲೆ ದರ್ಪ ತೋರುವುದು ಎಷ್ಟು ಸರಿ?. ಮದುವೆ ಮನೆಗೆ ಹೋದಾಗ ಅಲ್ಲಿಯ ಸ್ಥಿತಿ ಗತಿಯ ಅನುಗುಣವಾಗಿ ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕು. ಇಲ್ಲದಿದ್ದಲ್ಲಿ ಮದುವೆಗೆ ಬಂದ ಸಂಬಂಧೀಕರನ್ನು ಬಾಯಿ ತುಂಬಾ ಮಾತನಾಡಿಸುತ್ತಾ ಸತ್ಕರಿಸಬೇಕು. ಅದು ಬಿಟ್ಟು ಬಂದವನ್ನು ಸರಿಯಾಗಿ ಗಮನಿಸಿಕೊಳ್ಳಲಿಲ್ಲಾ ಎಂದೂ ಅಡುಗೆ ಸರಿ ಇಲ್ಲಾ ಎಂದೂ ಕೊಂಕು ತೆಗೆಯುವುದು ಒಳ್ಳೆಯ ಲಕ್ಷಣವಲ್ಲ. ಹತ್ತಿರದ ಸಂಬಂಧೀಕರಿಗೆ ಮಾತ್ರವೇ ಮದುವೆಯ ನಂಟಿದ್ದರೆ, ಇನ್ನು ಮದುವೆಗೆ ಬಂದವರಿಗೆ ಆಥಿತ್ಯ ಮತ್ತು ಊಟೋಪಚಾರಗಳೇ ಹೆಚ್ಚಿನ ಮಹತ್ವವಾಗುವುದು ಸೋಜಿಗವೇ ಸರಿ.
ಇಂದಿಗೂ ಕೂಡಾ ನನಗೆ ಮದುವೆ ಮನೆಯಲ್ಲಿ ಊಟ ಮಾಡುವ ಸಮಯದಲ್ಲಿ ಬಹಳವಾಗಿ ಕಾಡುವ ಪ್ರಶ್ನೆಯೆಂದರೆ, ಆ ಹೆಣ್ಣು ಹೆತ್ತ ತಂದೆಯ ಕಣ್ಣೀರಿನ ಶ್ರಮದ ಫಲ ಮತ್ತು ಅವರ ಬೆವರಿನ ಪರಿಶ್ರಮದಿಂದ ತಯಾರಾದ ಅಡುಗೆಯನ್ನು ತಿನ್ನಲು ನಾವು ಎಷ್ಟು ಅರ್ಹರು?
ಮದುವೆ ಮನೆಯಲ್ಲಿನ ಊಟದಲ್ಲಿ ಸ್ವಲ್ಪ ಉಪ್ಪು ಹೆಚ್ಚಾಗಿದ್ದರೆ ಅದನ್ನು ಎತ್ತಿ ಆಡಿ ತೋರಿಸಬೇಡಿ. ಅದು ಹೆಣ್ಣು ಹೆತ್ತ ತಂದೆತಾಯಿಯರ ಕಣ್ಣೀರು ಅಡಿಗೆಗೆ ಬಿದ್ದು ಉಪ್ಪಾಗಿರುಬಹುದು ಎಂದು ಎಲ್ಲೋ ಓದಿದ ನೆನಪು. ಅದಕ್ಕೇ ಏನೋ ಇಂತಹ ಎಲ್ಲಾ ಸಮಸ್ಯೆಗಳನ್ನು ಅನುಭವಿಸಿಯೇ ನಮ್ಮ ಹಿರಿಯರು ಮದುವೆ ಮಾಡಿ ನೋಡು ಮನೆಕಟ್ಟಿ ನೋಡು ಎಂಬ ಗಾದೆ ಮಾಡಿದ್ದಾರೆ.
ಏನಂತೀರೀ?
ಸೂಪರ್ ಜೀ, ಬೇರೆ ಬೇರೆ ಮದುವೆಗಳಲ್ಲಿನ ಅವಾಂತರಗಳ ಬಗ್ಗೆಯೂ ಬರೆಯಬಹುದಿತ್ತು. ಹಾಗೆಯೇ ಇವತ್ತಿನ ಕೇಟರಿಂಗ್ ವ್ಯವಸ್ಥೆ, ತಾಂಬೂಲ ನೀಡುವ ಬಾಡಿಗೇ ನೀರೆಯರ ಬಗ್ಗೆಯೂ ಬರೀಬಹುದಿತ್ತು. ಒಟ್ಟರೆ ಲೇಖನ ಚೆನ್ನಾಗಿದೆ
LikeLiked by 1 person
ಮುಂದೆ ಅದರ ಬಗ್ಗೆ ಬರೆಯುತ್ತೇನೆ. ಅಷ್ಟೆಲ್ಲಾ ಬರೆದರೆ ಲೇಖನ ದೊಡ್ಡದಾಗಿ ಯಾರೂ ಓದಲು ಮನಸ್ಸು ಮಾಡುವುದಿಲ್ಲ
LikeLike
ಒಳ್ಳೆಯ ಲೇಖನ. ನಡೆದ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದೀರಿ. ಅಭಿನಂದನೆಗಳು.👌
LikeLiked by 1 person
ಧನ್ಯವಾದಗಳು
LikeLike
ತುಂಬಾ ಸೊಗಸಾಗಿದೆ. ಓದುತಿದ್ದರೆ
ಮುಂದೇನಾಗುವುದೋ ಎಂಬ ಕಾತುರ ಹೆಚ್ಚಾಗುತ್ತದೆ.
LikeLiked by 1 person
ಧನ್ಯವಾದಗಳು
LikeLike