ಅಕ್ಷಯ ತೃತೀಯ/ತದಿಗೆ

akshya_tadige

ವೈಶಾಖ ಮಾಸದ ಶುದ್ಧ ತೃತೀಯದ ತಿಥಿಯನ್ನು ಅಕ್ಷಯ ತದಿಗೆ ಅಥವಾ ಅಕ್ಷಯ ತೃತೀಯ ಎಂದು ಆಚರಿಸಲಾಗುತ್ತದೆ. ಈ ದಿನದಂದು ಯಾವುದೇ ವಸ್ತುವನ್ನು ಅಥವಾ ಸಂಪತ್ತನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿದಲ್ಲಿ,‌ ಯಥೇಚ್ಛವಾಗಿ ದಾನ ಧರ್ಮ ಮಾಡಿದಲ್ಲಿ ಕಾಲಕ್ರಮೇಣ ಆ ಸಂಪತ್ತು ದ್ವಿಗುಣಗೊಳ್ಳುತ್ತದೆ ಎನ್ನುವುದು ಎಲ್ಲರ ನಂಬಿಕೆ ಇರುವ ಕಾರಣ ಎಲ್ಲೆಡೆಯೂ ದಾರ್ಮಿಕ ಅಚರಣೆಗಳು ಸಂಭ್ರಮದಿಂದ ನಡೆಸಲಾಗುತ್ತದೆ.

ಇನ್ನು ಪೌರಾಣಿಕವಾಗಿ ಅಕ್ಷಯ ತದಿಗೆಯ ಮಹತ್ವವನ್ನು ನೋಡಿದಲ್ಲಿ,

  • ಕೃಷ್ಣ ಸ್ನೇಹಿತ ಕುಚೇಲ ತನ್ನ ಗೆಳೆಯನಿಂದ ಸಹಾಯ ಪಡೆಯಲು ದ್ವಾರಕೆಗೆ ಬಂದು ಕೃಷ್ಣನ ಆತಿಥ್ಯವನ್ನು ಕಂಡು ಸಹಾಯವನ್ನು ಕೇಳಲು ಮನಸ್ಸಾಗದೇ ತಾನು ತಂದಿದ್ದ ಅವಲಕ್ಕಿಯನ್ನು ಕೊಟ್ಟು ಏನನ್ನೂ ಕೇಳದೇ ಮನೆಗೆ ಮರಳಿದ ದಿನವೂ ಅಕ್ಷಯ ತೃತೀಯವಾಗಿತ್ತು.
  • ಪಾಂಡವರು ಕೌರವರ ಕುಟಿಲತೆಯಿಂದ ಜೂಜಿನಲ್ಲಿ ಸೋತು 12 ವರ್ಷ ವನವಾಸಕ್ಕೆ ಹೋಗಿದ್ದಾಗ ಶ್ರೀಕೃಷ್ಣನ ಆದೇಶದಂತೆ ದ್ರೌಪದಿಯು ಸೂರ್ಯ ದೇವನನ್ನು ಪ್ರಾರ್ಥಿಸಿ ಅಕ್ಷಯ ಪಾತ್ರೆಯನ್ನು ಪಡೆದಿದ್ದು ಅಕ್ಷಯ ತೃತೀಯ ದಿನದಂದೇ, ಅದೇ ರೀತಿ ಪಾಂಡವರು ತಮ್ಮ ವನವಾಸದ ನಂತರ ಅಜ್ಞಾತವಾಸ ಮುಗಿಸಿ ಮರದ ಮೇಲೆ ಕಟ್ಟಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ಪಡೆದದ್ದೂ ಸಹಾ ಅಕ್ಷಯ ತೃತೀಯದಂದೇ.
  • ದೇವಾನು ದೇವತೆಗಳ ಕೋರಿಕೆಯಂತೆ ಶ್ರೀ ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದ ದಿನವೂ ಸಹಾ ಅಕ್ಷಯ ತೃತೀಯವಾಗಿತ್ತು.
  • ಮಹಾಭಾರತದ ಕರ್ತೃ ವೇದವ್ಯಾಸರು ಮಹಾಭಾರತ ಬರೆಯಲು ಶ್ರೀ ಗಣೇಶನೊಂದಿಗೆ ಒಪ್ಪಂದ ಮಾಡಿಕೊಂಡ ದಿನವೂ ಅಕ್ಷಯ ತೃತೀಯವಾಗಿತ್ತು.
  • ಜಾತೀಯತೆಯಲ್ಲಿ ತುಂಬಿ ಹೋಗಿದ್ದ ಈ ದೇಶದಲ್ಲಿ ಸಮಾನತೆ ತರುವ ಸಲುವಾಗಿ ಅನುಭವ ಮಂಟಪವನ್ನು ಸ್ಥಾಪಿಸಿ ಎಲ್ಲರಿಗೂ ಲಿಂಗ ಧಾರಣೆ ಮಾಡಿ ತಮ್ಮ ವಚನಗಳ ಮೂಲಕ ಸಮಾನತೆಯ ಸಾರವನ್ನು ಸಾರಿದ ಹರಿಕಾರ ಜಗಜ್ಯೋತಿ ಬಸವಣ್ಣನವರು ಜನಿಸಿದ್ದೂ ಅಕ್ಷಯ ತದಿಗೆಯಂದೇ.

ಯುಗಾದಿ, ವಿಜಯ ದಶಮಿ ಮತ್ತು ಬಲಿಪಾಡ್ಯಮಿ ಅರ್ಧ ದಿವಸಗಳಂದು ಯಾವುದೇ ಮಹೂರ್ತವನ್ನು ನೋಡದೇ ಶುಭಕಾರ್ಯಗಳನ್ನು ಪ್ರಾರಂಭಿಸುವ ಹಾಗೆ ಅಕ್ಷಯ ತೃತೀಯದಂದೂ ಒಳ್ಳೆಯ ತಿಥಿಯನ್ನು ನೋಡುವ ಅವಶ್ಯಕತೆ ಇಲ್ಲದೇ ಶುಭಕಾರ್ಯಗಳನ್ನು ಮಾಡಿದಲ್ಲಿ ಅದು ಅತ್ಯಂತ ಅಕ್ಷಯವಾಗುತ್ತದೆ ಎಂಬ ನಂಬಿಕೆ ಇದೆ.

goldಇಂತಹ ಭಾವನಾತ್ಮಕ ವಿಷಯಗಳನ್ನೇ ಬಂಡವಾಳವನ್ನು ಮಾಡಿಕೊಂಡ ಕೆಲವು ವ್ಯಾಪಾರಿಗಳು ಈ ಸಮಯದಲ್ಲಿ ಚಿನ್ನಾಭರಣವನ್ನು ಕೊಂಡುಕೊಂಡಲ್ಲಿ‌ ಅದು ಅಕ್ಷಯವಾಗುತ್ತದೆ ಎಂಬ ವಿಷಯವನ್ನು ಹರಿಯಬಿಟ್ಟು ಇತ್ತೀಚೆಗೆ ಬಹುತೇಕ ಹೆಂಗಳೆಯರು ಅದೇ ದಿನ ಬೇಕೋ ಬೇಡವೋ ಸಿಕ್ಕಾಪಟ್ಟೆ ಚಿನ್ನಾಭರಣವನ್ನು ಕೊಳ್ಳುವ ಪದ್ದತಿಯನ್ನು ರೂಡಿಸಿಕೊಂಡಿದ್ದಾರೆ. ತನ್ಮೂಲಕ ಚಿನ್ನಾಭರಣ ಕೊಳ್ಳುವವರಿಗಿಂತಲೂ ಚಿನ್ನಾಭರಣ ಮಾರುವವರ ಆದಾಯವಂತೂ ಅಕ್ಷಯವಾಗುತ್ತಿದೆ ಎನ್ನುವುದಂತೂ ವಿಪರ್ಯಾಸವಾಗಿದೆ.

lake

ಆದರೆ ಇಂದು ಜಗತ್ತಿಗೆ ನಿಜವಾಗಿಯೂ ಅಕ್ಷಯವಾಗ ಬೇಕಾಗಿರುವುದು ಅಭರಣಗಳಲ್ಲ ಬದಲಾಗಿ ಉತ್ತಮವಾದ ಆರೋಗ್ಯ, ಉಸಿರಾಡಲು ಶುದ್ಧ ಗಾಳಿ ಮತ್ತು ಕುಡಿಯಲು ಕಲುಷಿತವಿಲ್ಲದ ಜೀವ ಜಲ. ಸ್ವಲ್ಪ ಸಮಯದ ಹಿಂದೆ ಒಂದು ವಾಟ್ಸಾಪ್ ಗುಂಪಿನಲ್ಲಿ ನೋಡಿದ ಈ ಚಿತ್ರ, ನಿಜಕ್ಕೂ ನನ್ನ ಮನ ಕಲಕಿತು. ಕ್ಷಣ ಕಾಲ ಅದೇ ಚಿತ್ರವನ್ನು ದಿಟ್ಟಿಸಿ ನೋಡುತ್ತಿದ್ದಂತೆಯೇ ಮುಂದೆ ನಮಗೆ ಒದಗಬಹುದಾದ ಕರಾಳ ದಿನಗಳು ಕಣ್ಣ ಮುಂದೆ ಬಂದು ದಿಗ್ಭ್ರಮೆಯಾಯಿತು ಎಂದರೆ ಅತಿಶಯೋಕ್ತಿಯೇನಲ್ಲ. ಭೂಮಿಯನ್ನು ನಾವು ತಾಯಿ ಎಂದು ಸಂಭೋಧಿಸುತ್ತೇವೆ. ಅಂತೆಯೇ ಒಂದು ಹೆಣ್ಣನ್ನೂ ಸಹಾ ತಾಯಿಯೆಂದೇ ಕಾಣುತ್ತೇವೆ. ನಮ್ಮೆಲ್ಲರ ಜನ್ಮಕರ್ತೆ ತಾಯಿಯೇ. ಅಂತಹ ಒಂದು ಹೆಣ್ಣು ಮತ್ತು ಭೂಮಿ ಎರಡೂ ನೀರಿಲ್ಲದೆ ಬರಡಾಗಿ ನೀರಿಗೆ ಬಾಯ್ಬಿಟ್ಟು ಕೊಂಡಿರುವ ಧಾರುಣ ಚಿತ್ರ ನಿಜಕ್ಕೂ ಆಘಾತಕಾರಿಯಾಗಿದೆ.

ಪ್ರಪಂಚದ ಮುಕ್ಕಾಲು ಭಾಗ ನೀರಿನಿಂದಲೇ ಆವೃತವಾಗಿದ್ದರೂ, ವಿಶ್ವಾದ್ಯಂತ ಪ್ರಸ್ತುತ ಕುಡಿಯುವ ನೀರಿಗೆ ಹಾಹಾಕಾರ ಎದ್ದಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಗರ ಈಗಾಗಲೇ ಕುಡಿಯುವ ನೀರಿಲ್ಲದ ನಗರ ಎಂದು ಘೋಷಿಸಿಯಾಗಿದೆ ಮತ್ತು ಇನ್ನೂ ಹತ್ತಾರು ನಗರಗಳಲ್ಲಿಯೂ ಇದೇ ಪರಿಸ್ಥಿತಿಯೇ ಇದೆ .‌ಈ ವರ್ಷವಂತೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಸರಿಯಾಗಿ ಮಳೆಯಾಗದೇ, ಬೆಂಗಳೂರಿನಲ್ಲಿಯೂ ನೀರಿಗೆ ಹಾಹಾಕಾರವಿರುವ ಸಂಗತಿ‌ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.

ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ ಸಿಂಧು, ಕಾವೇರಿ, ಕೃಷ್ಣಾ ಮುಂತಾದ ಮಹಾನದಿಗಳು ಇದ್ದರೂ ಭಾರತದಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ. ದುಡ್ದು ಕೊಟ್ಟರೂ ನೀರು ಸಿಗದ ಪರಿಸ್ಥಿತಿ ತಲುಪಿಯಾಗಿದೆ. ಈ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ರಾಜ್ಯ ರಾಜ್ಯಗಳ ನಡುವೆ ವೈಮನಸ್ಯ ಉಂಟಾಗಿದೆ.

tree cutting

ಮಾನವ ಪ್ರಕೃತಿಯನ್ನು ಎಗ್ಗಿಲ್ಲದೆ ದುರುಪಯೋಗ ಪಡಿಸಿಕೊಂಡ ಪರಿಣಾಮ ಮತ್ತು ಕಾಡುಗಳನ್ನು ಕಡಿದು ನಾಡುಗಳನ್ನಾಗಿ ಮಾಡಿದ ದುಷ್ಪರಿಣಾಮಗಳನ್ನು ನಾವಿಂದು ಅನುಭವಿಸುತ್ತಿದ್ದೇವೆ.

  • ಹಾಗಾಗಿ ಅಳಿದುಳಿದಿರುವ ಕಾಡು ಮತ್ತು ಜಲಸಂಪತ್ತನ್ನು ಜೋಪಾನವಾಗಿ ಬಳಸಿಕೊಳ್ಳುವ ಮೂಲಕ ಈ ಅಮೂಲ್ಯ ಸಂಪತ್ತನ್ನು ನಮ್ಮ ಮುಂದಿನ ಪೀಳಿಗೆಯವರಿಗೂ ಉಳಿಸಿ ಹೋಗಬೇಕಾಗಿದೆ.
  • ಅದಕ್ಕಾಗಿ ನಮ್ಮ ಜೀವನ ಶೈಲಿಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಿದೆ. ಮೊಟ್ಟ ಮೊದಲಿಗೆ ಅಗತ್ಯವಿದ್ದಷ್ಟೇ ನೀರನ್ನು ಬಳಸ ಬೇಕಿದೆ.
  • ಸ್ನಾನ ಮಾಡಲು, ಶೌಚಾಲಯಗಳಲ್ಲಿ, ಪಾತ್ರೆ ತೊಳಯಲು, ಬಟ್ಟೆ ಒಗೆಯುವಾಗ ಧಾರಳವಾಗಿ ನೀರನ್ನು ಖರ್ಖು ಮಾಡದೇ, ಅಗತ್ಯವಿದ್ದಷ್ಟನ್ನೇ ಬಳೆಸುವ ಅಭ್ಯಾಸ ರೂಡಿಸಿಕೊಳ್ಳ ಬೇಕಾಗಿದೆ.
  • ಪಾತ್ರೆ ತೊಳೆದ ಮತ್ತು ಸ್ನಾನ ಮಾಡಿದ ನೀರನ್ನು ಸುಮ್ಮನೆ ಮೋರಿಗೆ ಹರಿಸಿ ಪೋಲು ಮಾಡದೇ ಮನೆಯ ಮಂದಿನ ಕೈತೋಟಕ್ಕೋ ಇಲ್ಲವೇ ನಮ್ಮ ಸುತ್ತಮುತ್ತಲಿನ ಗಿಡ ಮರಗಳಿಗೆ ಹಾಕುವ ವ್ಯವಸ್ಥೆ ಮಾಡಿ ಕೊಳ್ಳಬೇಕಿದೆ.
  • ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಎಲ್ಲರ ಮನೆಯ ಮುಂದೆಯೂ ಖಡ್ಡಾಯವಾಗಿ ಮರಗಳನ್ನು ನೆಟ್ಟು ಅದರ ಸಂಪೂರ್ಣ ಪೋಷಣೆಯ ಜವಾಬ್ದಾರಿ ಅವರದ್ದೇ ಆಗಬೇಕಿದೆ. ಹಾಗೆ ಮರ ಗಿಡಗಳನ್ನು ನೆಡುವುದರಿಂದ ಶುಧ್ಧವಾದ ಆಮ್ಲಜನಕವನ್ನು ನಮ್ಮಲ್ಲೇ ಪಡೆಯಬಹುದಲ್ಲದೆ ಆ ಮರಗಳು ಅನೇಕ ಪಕ್ಷಿಗಳ ಆಶ್ರಯ ತಾಣವಾಗುವುದಲ್ಲದೇ, ಮೋಡಗಳನ್ನು ಆಕರ್ಷಿಸಿ ಮಳೆಯನ್ನು ಸುರಿಸಬಲ್ಲದಾಗಿದೆ.
  • ಹೀಗೆ ಬೀಳುವ ಮಳೆಯ ನೀರನ್ನು ಪೋಲುಮಾಡದೇ ಎಲ್ಲರ ಮನೆಗಳಲ್ಲಿಯೂ ಖಡ್ಡಾಯವಾಗಿ ಮಳೆಯ ನೀರಿನ ಕೊಯ್ಲಿನ ಪದ್ದತಿಯನ್ನು ಅಳವಡಿಸಿಕೊಂಡು ಮನೆಯ ಮಾಳಿಗೆಯ ಮೇಲೆ ಬಿದ್ದ ಪ್ರತಿ ಹನಿ ನೀರನ್ನೂ ಸಂಗ್ರಹಿಸಿ ಅದರ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಹಾಗೆ ಹೆಚ್ಚಾದ ಮಳೆ ನೀರನ್ನು ಅಲ್ಲಿಯೇ ಇಂಗು ಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ಹೆಚ್ಚಿಸಿಕೊಳ್ಳಬಹುದಾಗಿದೆ.

ಮಿಂಚಿ ಹೋದರೆ ಚಿಂತಿಸಿ ಫಲವಿಲ್ಲ ಎಂಬಂತೆ, ಪ್ರತಿ ಹನಿಯನ್ನೂ ಸರಿಯಾದ ರೀತಿಯಲ್ಲಿ ಬಳಸದೇ, ಉಳಿಸದೇ ಹೋದಲ್ಲಿ , ನೀರಲ್ಲ, ಕಣ್ಣೀರನ್ನೂ ಸುರಿಸಲು ಆಗದಂತಹ ಪರಿಸ್ಥಿತಿ ಬರುವ ಎಲ್ಲ ಸಂಭವವೂ ಹೆಚ್ಚಾಗಿದೆ. ಹಾಗಾಗಿ ಹನಿ ಹನಿ ಗೂಡಿದರೆ ಹಳ್ಳ ಎನ್ನುವಂತೆ ನಾವು ಬಳಸುವ ಪ್ರತಿಯೊಂದು ಹನಿ ಹನಿ ನೀರನ್ನೂ ಎಚ್ಚರಿಕೆಯಂದ ಬಳಸಲೇ ಬೇಕಿದೆ.

ಚಿನ್ನಾಭರಣ ಇಲ್ಲದಿದ್ದರೂ ಜೀವನ ನಡೆಸಬಹುದು ಆದರೆ ಉಸಿರಾಡಲು ಶುದ್ಧ ಗಾಳಿ ಕುಡಿಯಲು ಶುದ್ಧವಾದ ನೀರಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ಹಾಗಾಗಿ ಈ ಅಕ್ಷಯ ತದಿಗೆಯಿಂದಲೇ ಚಿನ್ನಾಭರಣಗಳನ್ನು ಅಗಣಿತಗೊಳಿಸುವುದಕ್ಕಿಂತ ಮತ್ತೆ ಪ್ರಕೃತಿಯನ್ನು ಉಳಿಸುವ ಮತ್ತು ಬೆಳೆಸುವ ಸಂಕಲ್ಪವನ್ನು ಕೈಗೊಳ್ಳೋಣ. ಈಗ ಬೆಳೆಸಿದ ಮರ ಗಿಡಗಳು ಇನ್ನು ಕೆಲವೇ ವರ್ಷಗಳಲ್ಲಿ ಹೆಮ್ಮರವಾಗಿ ಮೋಡಗಳನ್ನು ಆಕರ್ಷಿಸಿ ಉತ್ತಮವಾಡ ಮಳೆಯಾಗಿ, ಆ ಮಳೆಯಿಂದ ಬತ್ತಿ ಹೋಗಿರುವ ನದಿ, ಕೆರೆ ಕಟ್ಟೆಗಳೆಲ್ಲವೂ ತುಂಬಿ ಹರಿದು ಅಂತರ್ಜಲ ಹೆಚ್ಚಾಗಿ ಮತ್ತೆ ನಮ್ಮ ಭೂಮಿ ಸಂವೃದ್ಧವಾಗಿ ರೋಗರುಜಿನಗಳಿಂದ ಮುಕ್ತವಾಗಲಿ ಎಂದು ಆಶಿಸೋಣ. ಒಗ್ಗಟ್ಟಿನಲ್ಲಿ ಬಲವಿದೆ ಛಲವಿದೆ ಮತ್ತು ನಿಶ್ಚಿತವಾಗಿಯೂ ಗೆಲುವಂತೂ ಇದ್ದೇ ಇದೆ‌ ಅಲ್ವೇ?

ಏನಂತೀರೀ?

ಸೃಷ್ಟಿಕರ್ತ ಉಮಾಸುತ

6 thoughts on “ಅಕ್ಷಯ ತೃತೀಯ/ತದಿಗೆ

  1. 👌 👌 ಇದು ಅಕ್ಷರಶಃ ಸತ್ಯ…. ನಾವೆಲ್ಲರೂ ಅರ್ಥೈಸಿಕೊಂಡು ತುರ್ತು ಕಾರ್ಯಗತಗೊಳಿಸಬೇಕಾಗಿದೆ

    Liked by 1 person

  2. ತುಂಬಾ ಅದ್ಭುತವಾದ ಅರ್ಥ ಕೊಡುವ ಹಾಗೂ ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ವಿಷಯ. 🙏🙏

    Like

Leave a reply to M.S.NAGENDRA PRASAD Cancel reply