ಇಂದು ಬೆಳಿಗ್ಗೆ ಮನೆಯಿಂದ ಕಛೇರಿ ತಲುಪಿ, ಇನ್ನೇನು ದೈನಂದಿನ ಕೆಲಸಕ್ಕೆ ತೊಡಗಿಕೊಳ್ಳಬೇಕು ಎನ್ನುವಷ್ಟರಲ್ಲಿ ನನ್ನ ಕಂಪ್ಯೂಟರ್ ತೆರೆಯ ಮೇಲೆ ಖ್ಯಾತ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ ಎಂಬ ಸಂದೇಶ ಧುತ್ತೆದು ಸುನಾಮಿಯ ರೀತಿ ಅಪ್ಪಳಿಸಿ ನನ್ನ ಮನಸ್ಸನ್ನು ಅಲ್ಲೋಲ ಕಲ್ಲೋಲ ಮಾಡಿತು. ಒಂದು ಕ್ಷಣ ಮಂಕು ಕವಿದ ವಾತಾವರಣ. ಮನಸ್ಸಿನಲ್ಲಿ ನಮ್ಮ ತಂದೆಯವರನ್ನು ಕಳೆದು ಕೊಂಡಾಗ ಆದ ಪರಿಸ್ಥಿತಿಯೇ ಆಗಿತ್ತು ಎಂದರೆ ಉತ್ಪ್ರೇಕ್ಷೆಯೇನಲ್ಲ.
ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡು ಎಂದು, ದೇವರೇ ನಾನು ಓದಿದ ಸುದ್ದಿ ಸುಳ್ಳಾಗಿರಲಿ ಎಂದು ಮನದಲ್ಲಿಯೇ ಅಂದು ಕೊಳ್ಳುತ್ತಾ, ಹಲವಾರು ಅಂತರ್ಜಾಲ ನೋಡಿದಾಗ, ಎಲ್ಲದರಲ್ಲಿಯೂ ಅದೇ ಪ್ರಮುಖ ಸುದ್ದಿಯನ್ನು ಓದಿ, ಮನಸ್ಸಿಗೆ ಖೇದವಾಯಿತು. ಕೂಡಲೇ ನನ್ನ ಅತ್ಮೀಯರಿಗೆಲ್ಲರಿಗೂ ವ್ಯಾಟ್ಯಾಪ್ ಮುಖಾಂತರ ಸುದ್ದಿ ಮುಟ್ಟಿಸಿ ನನ್ನ ಮತ್ತು ಹಿರಣ್ಣಯ್ಯನವರ ಏಕಲವ್ಯ ಮತ್ತು ದ್ರೋಣಾಚಾರ್ಯರ ರೀತಿಯ ಶಿಷ್ಯ ಮತ್ತು ಗುರುಗಳ ಸಂಬಂಧವನ್ನು ಮೆಲುಕು ಹಾಕ ತೊಡಗಿದೆ.
ಸುಮಾರು 1970-74ನೇ ಇಸ್ವಿಯಿರಬಹುದು. ವಾಟಾಳ್ ನಾಗರಾಜರ ಕನ್ನಡ ಹೋರಾಟದ ಉಚ್ಛ್ರಾಯ ಸ್ಥಿತಿ. ರಾಜಾಜೀನಗರದ ಬಳಿ ಅವರು ಏರ್ಪಡಿಸಿದ ಕನ್ನಡ ರಾಜ್ಯೋತ್ಸವದಲ್ಲಿ ಮಾ.ಹಿರಣ್ಣಯ್ಯನವರ ನಾಟಕ ಪ್ರದರ್ಶನಕ್ಕೆ ಕರೆದುಕೊಂಡು ಹೋದ ನಮ್ಮ ತಂದೆಯವರು ಮೊತ್ತ ಮೊದಲಬಾರಿಗೆ ನನಗೆ ಶ್ರೀಯುತರ ಪರಿಚಯ ಮಾಡಿಸಿಕೊಟ್ಟರು. ಆನಂತರ ಪ್ರತೀ ವರ್ಷವೂ ನಮ್ಮ ಬಿಇಎಲ್ ಲಲಿತಕಲಾ ಅಕಾಡೆಮಿಯವರು ನಡೆಸುತ್ತಿದ್ದ ಬೇಸಿಗೆ ಮೇಳದಲ್ಲಿ ಹಿರಣ್ಣಯ್ಯನವರ ಒಂದಲ್ಲಾ ಒಂದು ನಾಟಕದ ಪ್ರದರ್ಷನ ಕಡ್ಡಾಯವಾಗಿದ್ದು, ಅವರ ನಾಟಕಗಳನ್ನು ನೋಡಿ ಬೆಳೆದೆ ಎಂದರೆ ತಪ್ಪಾಗಲಾರದು. ಇನ್ನು ಎಂಬತ್ತರ ದಶಕದಲ್ಲಿ ಟೇಪ್ ರೆಕಾರ್ಡರ್ಗಳ ಜಮಾನ. ಅದಕ್ಕೆ ತಕ್ಕಂತೆ ಹಿರಣ್ಣಯ್ಯನವರು ತಮ್ಮ ಹಲವಾರು ನಾಟಕಗಳ ಕ್ಯಾಸೆಟ್ ರೂಪದ ಮುಖಾಂತರ ರಾಜ್ಯಾದ್ಯಾಂತ ಎಲ್ಲರ ಮನೆ ಮತ್ತು ಮನವನ್ನು ತಲುಪಿದರು ಎಂಬುದು ಅಕ್ಷರಶಃ ಸತ್ಯ. ಅಂತೆಯೇ ನಮ್ಮ ಮನೆಯಲ್ಲಿಯೂ ಅವರ ಹಲವಾರು ಕ್ಯಾಸೆಟ್ಗಳನ್ನು ಕೊಂಡು ತಂದು ಅವರ ಪ್ರತಿಯೊಂದು ನಾಟಕಗಳೂ ನನಗೆ ಕಂಠಪಾಠವಾಗಿದ್ದವು.
1983ನೇ ಇಸ್ವಿ. ಆಗಿನ್ನೂ ಶ್ರೀಮತಿ ಇಂದಿರಾಗಾಂಧಿಯವರು ನಮ್ಮ ದೇಶದ ಪ್ರಧಾನಿಗಳಾಗಿದ್ದರು. ನಮ್ಮ ಶಾಲಾ ವಾರ್ಷಿಕೋತ್ಸವದ ಸಂದರ್ಭಕ್ಕೆ ನಾನು ಮಾ. ಹಿರಣ್ಣಯ್ಯನವರ ಪಶ್ಚಾತ್ತಾಪ ನಾಟಕದ ಏಕಪಾತ್ರಾಭಿನಯ ಮಾಡುವವನಿದ್ದೆ. ಕಾರ್ಯಕ್ರಮದ ರಿಹರ್ಸಲ್ ದಿನ ಎಲ್ಲಾ ಕಾರ್ಯಕ್ರಮಗಳನ್ನು ನಮ್ಮ ಮುಖ್ಯೋಪಾಧ್ಯಾಯರು ಮತ್ತು ಉಪಮುಖ್ಯೋಪಾಧ್ಯಾಯರು ನೋಡಿ, ಅಳೆದು, ತೂಗಿ, ಒಪ್ಪಿಗೆ ಕೊಟ್ಟ ಮೇಲಷ್ಟೇ, ಶಾಲಾ ವಾರ್ಷಿಕೋತ್ಸವದಿನದಂದು ಪ್ರದರ್ಶಿತವಾಗುತ್ತಿತ್ತು. ಅಂತೆಯೇ ಎಲ್ಲರ ಸಮ್ಮುಖದಲ್ಲಿ ನಾನೂ ಪಶ್ಚಾತ್ತಾಪ ನಾಟಕದ ಏಕಪಾತ್ರಾಭಿನಯ ಮಾಡಿ ತೋರಿಸಿ ಸೈ ಎನಿಸಿಕೊಂಡೆ. ಮಾರನೇಯ ದಿನ ಶಾಲಾ ವಾರ್ಷಿಕೋತ್ಸವದಂದು, ಹಿಂದೆ ನೃತ್ಯ ಅಥವಾ ನಾಟಕಕ್ಕೆ ರಂಗ ಸಜ್ಜಿಕೆ ಮಾಡಿಕೊಳ್ಳುವ ಸಮಯದಲ್ಲಿ ತೆರೆಯ ಮುಂದಿನ ಸಣ್ಣ ಭಾಗದಲ್ಲಿ ನನ್ನ ಏಕಪಾತ್ರಾಭಿನಯಕ್ಕೆ ಅನುವು ಮಾಡಿಕೊಟ್ಟಿದ್ದರು. ಬಿಇಎಲ್ ಕಲಾಕ್ಷೇತ್ರದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನು ನೋಡಿದ ಕೂಡಲೇ ನನ್ನಲ್ಲಿನ ಉತ್ಸಾಹ ಇನ್ನೂ ಇಮ್ಮಡಿಯಾಗಿ, ನನ್ನ ಹಲವಾರು ಸಂಭಾಷಣೆಗೆ ಬಾರೀ ಕರತಾಡನಗಳ ಮುಖಾಂತರ ನನ್ನ ಎಕಪಾತ್ರಾಭಿನಯ ಅತ್ಯಂತ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ನಂತರ ಹಲವರು ಸ್ನೇಹಿತರು ಮತ್ತು ಪೋಷಕರು ನನ್ನ ಅಭಿನಯ ಮತ್ತು ಡೈಲಾಗ್ ಡೆಲಿವರಿಯನ್ನು ಹೊಗಳಿದ್ದು ನನ್ನನ್ನು ಅಟ್ಟಕ್ಕೇರಿಸಿತ್ತು. ಆದರೆ ಆ ಉತ್ಸಾಹ ಹೆಚ್ಚು ಕಾಲ ಬಾಳಲಿಲ್ಲ. ನಮ್ಮ ಶಿಕ್ಷಕರೊಬ್ಬರು ನಮ್ಮ ಉಪಮುಖ್ಯೋಪಾಧ್ಯಾಯರು ನನ್ನನ್ನು ಹುಡುಕುತ್ತಿದ್ದಾರೆಂದೂ ಅವರನ್ನು ಈ ಕೂಡಲೇ ಕಾಣ ಬೇಕೆಂದು ತಿಳಿಸಿದರು. ಬಹುಶಃ ನನ್ನನ್ನು ಹೊಗಳಲು ಕರೆದಿರ ಬಹುದು ಎಂದು ಅವರನ್ನು ಭೇಟಿಯಾಗಲು ಹೋದರೆ, ನನ್ನ ಆಗಮನವನ್ನೇ ಕಾಯುತ್ತಿದ್ದಂತೆ ನಾನು ಹೋದ ಕೂಡಲೇ ಕಿವಿಯನ್ನು ಹಿಂಡಿ ಏನೋ ಭಡವಾ, ಈ ಸಣ್ಣ ವಯಸ್ಸಿನಲ್ಲಿಯೇ ರಾಜಕೀಯ ಪುಡಾರಿಯಾಗಲೂ ಹೋರಟಿದ್ದೀಯಾ ಎಂದು ಹೇಳುತ್ತಾ ಫಟಾರ್ ಎಂದು ಕೆನ್ನೆಗೆ ಬಾರಿಸಿದರು. ಮೊದಲೇ ಕುಳ್ಳಗೆ ಸಣ್ಣಗಿದ್ದೆ. ಕಿವಿ ಹಿಂಡಿದ ನೋವನ್ನೇ ಸಹಿಸಿಕೊಳ್ಳಲು ಒದ್ದಾಡುತ್ತಿದ್ದವನಿಗೆ ಅದೂ ಎಲ್ಲರ ಸಮ್ಮುಖದಲ್ಲೇ, ನನ್ನ ನುಣುಪಾದ ಕೆನ್ನೆಯ ಮೇಲೆ ಅಚಾನಕ್ಕಾಗಿ ಬಿದ್ದ ಏಟು ತಡೆಯಲು ಆಗದೇ ಕಣ್ಣಿನಿಂದ ನೀರು ಧಾರಾಕಾರವಾಗಿ ಬಂದು ಬಿಟ್ಟಿತು. ನನ್ನ ಕಣ್ಣೀರು ನೋಡಿದ ಕೂಡಲೇ ನಮ್ಮ ಶಿಕ್ಷರಿಗೂ ನನ್ನ ಮೇಲಿದ್ದ ಕೋಪ ಜರ್ ಎಂದು ಇಳಿದು ಬಿಟ್ಟಿತು. ಕೂಡಲೇ ನನ್ನ ಪರಿಸ್ಥಿತಿಯನ್ನು ತಿಳಿ ಗೊಳಿಸಲು ನನ್ನನ್ನು ಸಂತೈಸುತ್ತಾ , ನೆನ್ನೆ ರಿಸರ್ಸಲ್ ಸಮಯದಲ್ಲಿ ಇಲ್ಲದಿದ್ದ ಕೆಲವಾರು ಸಂಭಾಷಣೆಗಳನ್ನು ಇಂದೇಕೇ ಹೇಳಿದೆ ಎಂದು ಕೇಳಿದರು. ಆಗ ನನಗೆ ಗೊತ್ತಾದ ಸಂಗತಿ ಏನೆಂದರೆ, ಪಶ್ವಾತ್ತಾಪ ನಾಟಕದ ಒಂದು ಸಂದರ್ಭದಲ್ಲಿ, ಪ್ರಪಂಚದಲ್ಲಿ ಎಲ್ಲರಿಗೂ ಎರಡು ಕೈ ಇದ್ದರೇ, ನಮ್ಮ ದೇಶದಲ್ಲಿ ಮಾತ್ರ ಎಲ್ಲರಿಗೂ ಮೂರು ಕೈ ಎನ್ನುತ್ತಾರೆ. ಅದು ಯಾವುದು ಆ ಮೂರನೇ ಕೈ ಎಂದರೆ, ಅದೇ ನಮ್ಮ ಮಾತಾಜೀ ಇಂದಿರಮ್ಮನ ಕೈ. ಅದುವೇ ಮೊಗುಚೇ ಕೈ. ಅದು ದೇಶವನ್ನು ಹೀಗೆ ಬೇಕಾದರೂ ಹಾಕಬಹುದು. ಇಲ್ಲವೇ ಹಾಗೆ ಬೇಕಾದರೂ ಹಾಕಬಹುದು ಎಂದಿದೆ. ರಿಹರ್ಸಲ್ ಸಮಯದಲ್ಲಿ ಈ ಸಂಭಾಷಣೆಯನ್ನು ನಾನು ಮರೆತಿದ್ದ ಕಾರಣ ಹೇಳಿರಲಿಲ್ಲ. ಆದರೆ ವಾರ್ಷಿಕೋತ್ಸವದ ದಿನ ನನ್ನ ಆಭಿನಯದ ರಭಸದಲ್ಲಿ ಸುಲಲಿತವಾಗಿ ಮೇಲಿನ ಸಂಭಾಷಣೆ ಹೊರಬಂದು ಅಂದಿನ ನಮ್ಮ ಪ್ರಧಾನಿಯವರನ್ನು ಒಬ್ಬ ಯಕ್ಶಶ್ಚಿತ್ ಬಾಲಕ, ಅದೂ ತಮ್ಮ ಶಾಲೆಯ ವಿಧ್ಯಾರ್ಥಿ ನಿಂದನೆ ಮಾಡಿದ್ದು ನಮ್ಮ ಶಿಕ್ಷಕರನ್ನು ಕಕ್ಕಾಬಿಕ್ಕಿಯಾಗಿಸಿತ್ತು ಮತ್ತು ಕೋಪ ತರಿಸಿತ್ತು. ನಂತರ ಆ ಸಂಭಾಷಣೆ ಮೂಲ ನಾಟಕದಲ್ಲಿ ಹಾಗೆಯೇ ಇದೆ ಎಂಬುದನ್ನು ನಮ್ಮ ಕನ್ನಡ ಪ್ರಾಧ್ಯಾಪಕರು ಹೇಳಿದಾಗ, ಹಿರಣ್ಣಯ್ಯನವರು ದೊಡ್ಡ ನಟರು ಅವರು ಏನು ಬೇಕಾದರೂ ಹೇಳಿ ದಕ್ಕಿಸಿಕೊಳ್ಳುತ್ತಾರೆ. ಇವನು ಸಣ್ಣವ. ಇನ್ನೂ ರಾಜಕೀಯ ತಿಳಿಯದವ. ಹೀಗೆಲ್ಲಾ ಮಾತಾನಾಡಬಾರದು ಎಂದು ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿಕೊಟ್ಟಿದ್ದರು.
ಅವರ ನಾಟಕದ ಒಂದು ಸಂಭಾಷಣೆಯೇ ಇಷ್ಟೋಂದು ಪ್ರಭಾವ ಬೀರಬಲ್ಲದೆಂದರೆ, ಅವರ ಇಡೀ ನಾಟಕ ಸಮಾಜದ ಮೇಲೆ ಇನ್ನೆಷ್ಟು ಪ್ರಭಾವ ಬೀರುತ್ತಿತ್ತು ಎಂದು ನಾವೇ ಊಹಿಸಿಕೊಳ್ಳಬಹುದು. ಪ್ರಸ್ತೃತ ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳನ್ನು ತಮ್ಮ ನಾಟಕದ ಸಂಭಾಷಣೆಗಳ ಮೂಲಕ ಅದೂ ರಾಜಕೀಯ ನಾಯಕರುಗಳನ್ನು ವಿಶೇಷ ಆಹ್ವಾನಿತರನ್ನಾಗಿ ಕರೆಸಿಕೊಂಡು ಮುಂದಿನ ಸಾಲಿನಲ್ಲಿಯೇ ಕುಳ್ಳರಿಸಿಕೊಂಡು ತಮ್ಮ ವಿಡಂಬಣಾತ್ಮಕವಾದ ಶೈಲಿಯಲ್ಲಿ ಅವರನ್ನೇ ದೂಷಿಸುತ್ತಾ ಅವರನ್ನು ಖಂಡಿಸುತ್ತಿದ್ದದ್ದು ನಿಜಕ್ಕೂ ಶ್ಲಾಘನೀಯವೇ ಸರಿ. ಸಮಾಜದ ಅಂಕು ಡೊಂಕುಗಳನ್ನು ಮುಲಾಜಿಲ್ಲದೆ ಟೀಕಿಸುತ್ತಿದ್ದ ಹಿರಣ್ಣಯ್ಯ ಅವರು ಯಾವ ರಾಜಕಾರಣಿಯನ್ನು ಟೀಕಿಸಲು ಹಿಂಜರಿದವರಲ್ಲ. ಅಂದೆಲ್ಲಾ ರಾಜಕಾರಣಿಗಳು ಏನಾದರೂ ತಪ್ಪು ಮಾಡಿದಲ್ಲಿ ಮಾರನೇಯ ದಿನವೇ ಹಿರಣ್ಣಯ್ಯನವರು ತಮ್ಮ ನಾಟಕಗಳಲ್ಲಿ ಅದನ್ನು ಎತ್ತಿ ತೋರಿಸುತ್ತಿದ್ದರು. ಹಾಗೆ ಹಿರಣ್ಣಯ್ಯನವರು ತಮ್ಮ ನಾಟಕಗಳಲ್ಲಿ ಆಡಿ ತೋರಿಸುತ್ತಿದ್ದದ್ದನ್ನು ವಿರೋಧಪಕ್ಷದ ನಾಯಕರುಗಳು ವಿಧಾನದ ಸೌಧದಲ್ಲಿ ಎತ್ತಿ ತೋರಿಸಿ ಆಡಳಿತ ಪಕ್ಷದ ಬೆವರು ಇಳಿಸುತ್ತಿದ್ದದ್ದು ಹಿರಣ್ಣಯ್ಯನವರ ನಾಟಕದ ಪ್ರಭಾವಕ್ಕೆ ತೋರಿದ ಕೈಗನ್ನಡಿಯಾಗಿತ್ತು. ಆವರ ನಾಟಕಗಳನ್ನು ಪ್ರತಿಬಾರಿ ನೋಡಿದರೂ ಅದರಲ್ಲಿ ಹೊಸದೊಂದನ್ನು ಕಾಣ ಬಹುದಾಗಿತ್ತು. ಪ್ರತೀಬಾರಿಯೂ ಅವರ ಸಂಭಾಷಣೆಯೂ ಬೇರೆ ಬೇರೆಯದೇ ಆಗಿರುತ್ತಿದ್ದದ್ದು ಅವರ ಪ್ರೌಢಿಮೆಯನ್ನು ತೋರುತ್ತಿತ್ತು. ರಾಜಕಾರಣಿಗಳ ಬಗ್ಗೆ ವೇದಿಕೆಯಲ್ಲಿಯೇ ಟೀಕಿಸಿ, ನೂರಾರು ಕೇಸುಗಳನ್ನು ಮೈಮೇಲೆ ಎಳೆದುಕೊಂಡು ಸುಪ್ರೀಂಕೋರ್ಟ್ ಮೆಟ್ಟಿಲನ್ನೂ ಏರಿ ನ್ಯಾಯ ಪಡೆದಂತಹ ಗಟ್ಟಿಗ ಮಾ. ಹಿರಣ್ಣಯ್ಯನವರು.
ಮಂದೆ ನಾನು ದೊಡ್ಡವನಾಗಿ ಹೋದಂತೆಲ್ಲಾ ಅವರ ಪಾತ್ರ ಪೋಷಣೆ, ಡೈಲಾಗ್ ಡೆಲಿವರಿಯನ್ನು ಏಕಲವ್ಯನಂತೆ ಅವರ ನಾಟಕಗಳನ್ನು ಕೇಳುತ್ತಾ, ನೋಡುತ್ತಾ ಆಭ್ಯಾಸ ಮಾಡಿಕೊಂಡೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಅವರಿಂದ ಕಲಿತದ್ದೆಂದರೆ, ಒಂದು ನಾಟಕ ಚೆನ್ನಾಗಿ ಮೂಡಿ ಬರಬೇಕೆಂದರೆ, ನಾಟಕದ ಮಧ್ಯೆ ಯಾವುದೇ ರೀತಿಯ ಆಭಾಸಗಳು ಆಗಬಾರದೆಂದರೆ, ನಾಟಕದ ನಿರ್ದೇಶಕ, ಒಂದಲ್ಲಾ ಒಂದು ಪಾತ್ರಧಾರಿಯಾಗಿ ಇಡೀ ನಾಟಕದ ಪೂರ್ತಿ ವೇದಿಕೆಯ ಮೇಲೆಯೇ ಇರಬೇಕು ಮತ್ತು ಯಾರಾದರೂ ಎಲ್ಲಿಯಾದರೂ ಎಡವಿದಲ್ಲಿ ಅವನು ಆ ಕ್ಷಣಕ್ಕೆ ತಕ್ಕಂತೆ ತನ್ನ ಸಂಭಾಷಣೆಯಿಂದ ಸರಿ ಪಡಿಸಿ ನಾಟಕವನ್ನು ಮುಂದುವರಿಸಿಕೊಂಡು ಹೋಗುವ ಚಾಕಚಕ್ಯತೆ ಇರಬೇಕು. ಹಾಗಾಗಿ ನಾನು ಮುಂದೆ ಹಲವಾರು ಕಡೆ ಮಾಡಿದ ಎಲ್ಲಾ ನಾಟಕಗಳಲ್ಲಿಯೂ ನಾನು ಪ್ರಮುಖ ಪಾತ್ರಧಾರಿಯಾಗಿರದೇ, ಸೂತ್ರಧಾರಿಯಾಗಿ ನಾಟಕ ಯಶಸ್ವಿಯಾಗುವಂತೆ ನೋಡಿಕೊಂಡು ಹೋಗುವ ಗುರುತರ ಜವಾಬ್ಧಾರಿಯನ್ನು ಹೊರುತ್ತಿದ್ದೆ ಮತ್ತು ಅವರಂತೆಯೇ ಪ್ರತೀಬಾರಿಯೂ ನನ್ನ ಸಂಭಾಷಣೆಯೂ ಅಂದಿನ ಪರಿಸ್ಥಿತಿಗೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಿದ್ದೆ. ಮೊದ ಮೊದಲು ಸಹ ಪಾತ್ರಧಾರಿಗಳಿಗೆ ಇದು ಕಷ್ಟಕರವೆನಿಸಿದರೂ ಆನಂತರ ಅವರಿಗೂ ಅಭ್ಯಾಸವಾಗಿ ಹೋಗಿದ್ದು ಈಗ ಇತಿಹಾಸ.
ಮಾಸ್ಟರ್ ಹಿರಣ್ಣಯ್ಯನವರ ಮೂಲ ಹೆಸರು ನರಸಿಂಹ ಮೂರ್ತಿ. 1934 ಫೆಬ್ರವರಿ 15 ರಂದು ಮೈಸೂರಿನಲ್ಲಿ ಕಲ್ಚರ್ಡ್ ಕಾಮೆಡಿನ್ ಎನಿಸಿಕೊಂಡಿದ್ದ ಹಿರಣ್ಣಯ್ಯ ಮತ್ತು ಶಾರಾದಮ್ಮ ದಂಪತಿಗಳ ಮಗನಾಗಿ ಜನಿಸಿದ ಶ್ರೀಯುತರು ತಮ್ಮ ತಂದೆಯಿಂದ ರಕ್ತಗತವಾಗಿ ಕಲೆಯನ್ನು ಮೈಗೂಡಿಸಿಕೊಂಡರು. ತಂದೆಯವರಿಗೆ ತಮ್ಮ ಮಗ ನಾಟಕರಂಗಕ್ಕೆ ಬರಲು ಇಷ್ಟವಿಲ್ಲದಿದ್ದರೂ, ತಂದೆಯವರ ಮರಣಾನಂತರ ಸ್ವಲ್ಪ ಕಾಲ ವಿಚಲಿತರಾಗಿ, ಊಟಕ್ಕೂ, ಗತಿಇಲ್ಲದೇ ಊರೂರು ಅಲೆಯುತ್ತಿದ್ದಾಗ, ಖ್ಯಾತ ಸಾಹಿತಿ ಅ.ನ.ಕೃಷ್ಣರಾಯರು ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಸಾಂತ್ವನಾ ಮಾಡಿ ರಂಗಭೂಮಿಗೆ ಬೇಕಾದ ಎಲ್ಲಾ ರೀತಿಯ ಸಹಾಯ ಮಾಡಿ ಹಿರಣ್ಣಯ್ಯ ಮಿತ್ರ ಮಂಡಲಿ ಎಂಬ ನಾಟಕ ತಂಡವನ್ನು ಪುನರಾಂಭಮಾಡಿಸಿದರು. ತಂದೆಯವರ ಹೆಸರನ್ನು ಅಜರಾಮರಮಾಡಬೇಕೆಂದು ತೀರ್ಮಾನಿಸಿದ ನರಸಿಂಹ ಮೂರ್ತಿಯವರು ಅಂದಿನಿಂದ ತಮ್ಮ ಹೆಸರನ್ನು ಮಾಸ್ಟರ್ ಹಿರಣ್ಣಯ್ಯ ಎಂದು ಬದಲಾಯಿಸಿಕೊಂಡು ತಮ್ಮ ತಂದೆಯವರ ಲಂಚಾವತಾರ, ಮಕ್ಮಲ್ ಟೋಪಿ, ಸದಾರಮೆ ನಾಟಕಗಳ ಜೊತೆಗೆ ತಮ್ಮದೇ ಆದ, ಪಶ್ಚಾತ್ತಾಪ, ಫೋನಾವತಾರ , ಚಪಲಾವತಾರ, ಡಬ್ಬಲ್ ತಾಳಿ, ಲಾಟರಿ ಸರ್ಕಾರ, ಸನ್ಯಾಸಿ ಸಂಸಾರ ಮುಂತಾದ ಅನೇಕ ನಾಟಕಗಳನ್ನೂ ತಾವೇ ರಚಿಸಿ, ನಾಟಕಗಳಿಗೇ ಮಾಸ್ಟರ್, ಮಾಸ್ಟರ್ ಹಿರಣ್ಣಯ್ಯ ಎನಿಸಿಕೊಂಡರು.
ಮುಂದೆ ಚಲನಚಿತ್ರ ರಂಗದಲ್ಲೂ ತಮ್ಮ ಛಾಪನ್ನು ಮೂಡಿಸಲು ಪ್ರಯತ್ನಿಸಿದರಾದರೂ, ಚಿತ್ರರಂಗ ಅವರಿಗೆ ಹಿಡಿಸದೇ
ಗೆ ಹಿಂದಿರುಗಿದರು ಅಲ್ಲಿ ಮಾಹಾರಾಜನಾಗಿ ವಿಜೃಂಭಿಸಿದರು. ಮುಂದೆ ದೂರದರ್ಶನದ ಕೆಲವು ಕಾರ್ಯಕ್ರಮಗಳು ಮತ್ತು ಚರ್ಚಾ ಕಾರ್ಯಕ್ರಮಗಳು, ಹಬ್ಬ ಹರಿದಿನಗಳಲ್ಲಿ ನಡೆಯುವ ವಿಶೇಷ ಹಾಸ್ಯ ಕಾರ್ಯಕ್ರಮಗಳು ಮತ್ತು ವಿಡಂಬಣಾತ್ಮಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರಸ್ತುತ ಹಿರಣ್ಣಯ್ಯ ನಾಟಕ ಮಂಡಳಿಯನ್ನು ಮೂರನೇ ತಲೆಮಾರಿನವರಾದ ಮಾ. ಹಿರಣ್ಣಯ್ಯನವರ ಹಿರಿಯ ಮಗ ಬಾಬು ಹಿರಣ್ಣಯ್ಯನವರು ನಡೆಸಿಕೊಂಡು ತಮ್ಮ ವಂಶಪಾರಂಪರ್ಯವನ್ನು ಉಳಿಸಿಕೊಂಡು ಹೋಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ.
ನಾನಾ ರಂಗದಲ್ಲಿ ಖ್ಯಾತರಾದವರು ಒಂದಲ್ಲಾ ಒಂದು ದುಶ್ವಟಕ್ಕೆ ದಾಸರಾಗಿ ಹೋಗುವಂತೆ ಮಾಸ್ಟರ್ ಹಿರಣ್ಣಯ್ಯನವರೂ ಸಹಾ ಕುಡಿತ ಮತ್ತು ಇಸ್ಪೀಟ್ ಚಟಕ್ಕೆ ಬಿದ್ದು ಹೋಗಿ, ಅವರು ಕುಡಿಯದಿದ್ದರೆ ಅವರ ಬಾಯಿಯಿಂದ ಸಂಭಾಷಣೆಯೇ ಹೊರಬಾರದಂತೆ ಆಗಿ ಹೋಗಿದ್ದರು. ಪ್ರತೀ ನಾಟಕಕ್ಕೆ ವೇದಿಕೆಯ ಮೇಲೆ ಬರುವ ಮುನ್ನ ಪರದೆಯ ಹಿಂದೆ ಕಂಠ ಪೂರ್ತಿ ಕುಡಿದೇ ವೇದಿಕೆಯನ್ನು ಏರಿದರೂ ಅದು ನಾಟಕದ ಮೇಲೆ ಯಾವುದೇ ಪ್ರಭಾವವನ್ನು ಬೀರದಿದ್ದರೂ ಅವರ ಅರೋಗ್ಯದ ಮೇಲೆ ಬಹಳ ಮಟ್ಟಿಗೆ ಪ್ರಭಾವ ಬೀರಿತು. ಒಮ್ಮೆ ತಮ್ಮ ತಂಡದೊಡನೆ ಅಮೆರಿಕಾ ಪ್ರವಾಸದಲ್ಲಿದ್ದಾಗ ಅವರ ಅರೋಗ್ಯ ಕೈ ಕೊಟ್ಟಗ ಅಲ್ಲಿಯ ವೈದ್ಯರು ಸಾರ್ ಇನ್ನು ಮುಂದೆ ಡ್ರಿಂಕ್ಸ್ ಮಾಡಬಾರದು ಎಂದದ್ದು ಅವರ ಮೇಲೆ ಗಾಢವಾಗಿ ಪ್ರಭಾವ ಬೀರಿ ಆಕ್ಷಣದಿಂದಲೇ ಮದ್ಯಪಾನ ಮತ್ತು ಧೂಮಪಾನವನ್ನು ಬಿಟ್ಟವರು ಮುಂದೆಂದೂ ಅದನ್ನು ಮುಟ್ಟಲೇ ಇಲ್ಲ.
ತಮ್ಮ ಧರ್ಮ ಪತ್ನಿ ಶ್ರೀಮತಿ ಶಾಂತರವ ಮೇಲೆ ಅವರಿಗೆ ಅಪಾರವಾದ ಗೌರವ. ಆಕೆಯನ್ನು ಅವರು ತಮ್ಮ ಪತ್ನಿ ಎನ್ನುವುದಕ್ಕಿಂತ ತನ್ನ ಎರಡನೆಯ ತಾಯಿ ಎಂದೇ ಎಲ್ಲರಿಗೂ ಪರಿಚಯಿಸುತ್ತಿದ್ದರು. ಮದುವೆಯಾದ ಆರಂಭದ ದಿನಗಳಲ್ಲಿ ಕುಡಿತದ ದಾಸರಾಗಿದ್ದ ಸಮಯದಲ್ಲಿ ಪತ್ನಿಗೆ ಬಹಳವಾಗಿ ತೊಂದರೆ ಕೊಟ್ಟಿದ್ದನ್ನು ನೆನೆಸಿಕೊಂಡು ಪರಿತಪಿಸುತ್ತಿದ್ದರು. ಆದರೆ ಆಕೆ ಅದನ್ನು ಎಂದೂ ತಮ್ಮ ಮಕ್ಕಳ ಮುಂದೆ ಹಂಗಿಸದೇ, ತಮ್ಮ ಪತಿಯನ್ನು ತಮ್ಮ ಮಕ್ಕಳ ಮುಂದೆ ಕುಬ್ಜರನ್ನಾಗಿಸದೇ ಸದಾ ನಿಮ್ಮ ತಂದೆಯವರು ಖ್ಯಾತಿವಂತರು ನೀವು ಸಹಾ ದೊಡ್ಡವರಾದ ಮೇಲೆ ಅವರಷ್ಟೇ ಪ್ರಖ್ಯಾತರಾಗಬೇಕು ಎಂದು ತಮ್ಮ ಮಕ್ಕಳಿಗೆ ಹುರಿದುಂಬಿಸುತ್ತಿದ್ದನ್ನು ಸದಾ ನೆನೆಸಿಕೊಳ್ಳುತ್ತಿದ್ದರು. ಅವರ ಜೀವನದ ಮೊದಲಾರ್ಧ , ಅವರೇ ನಟಿಸಿದ್ದ, ತ್ಯಾಗರಾಜ್ ಅವರು ನಿರ್ದೇಶಿಸಿದ್ದ ಆನಂದಸಾಗರ ಎಂಬ ಚಲನ ಚಿತ್ರದಲ್ಲಿನ ಬೇಜಾವಾಬ್ದಾರಿ ತಂದೆಯ ಪಾತ್ರದಂತೆಯೇ ಇತ್ತು. ಅವರ ದ್ವಿತೀಯಾರ್ಧದಲ್ಲಿ ಅತ್ಯಂತ ಪ್ರೌಡಿಮೆಯಿಂದ ಸಾತ್ವಿಕ ಜೀವನ ನಡೆಸಿದರು. ಇತ್ತೀಚಿನ ದಿನಗಳಲ್ಲಿ ಶ್ರೀಮತಿ ಶಾಂತಾರವರು ಹಿರಣ್ಣಯ್ಯನವರನ್ನು ಮಗುವಿನಂತೆಯೇ ನೋಡಿಕೊಳ್ಳುತ್ತಿದ್ದರು. ತಮ್ಮ ಇಳಿ ಜೀವನದಲ್ಲಿ ಬನಶಂಕರಿ ಎರಡನೇ ಹಂತದಲ್ಲಿ ಭಧ್ರವಾಗಿ ಕಲ್ಲಿನ ಕೋಟೆಯಂತೆ ಕಟ್ಟಿದ್ದ ತಮ್ಮ ಮನೆ ರಂಗಭೂಮಿಯಲ್ಲಿ ತಮ್ಮ ಮಕ್ಕಳು ಮೊಮ್ಮಕ್ಕಳೊಂದಿಗೆ ತುಂಬು ಜೀವನ ನಡೆಸುತ್ತಿದ್ದರು. ವಯಸ್ಸಾದ ಮೇಲೆ ಮೂಮ್ಮಕ್ಕಳು ತಾತ, ಅಜ್ಜಿಯರೊಂದಿಗೆ ಗೆಳೆಯರೊಂದಿಗೆ ಇರಬೇಕು ಎಂದೇ ಹೇಳುತ್ತಿದ್ದ ಶ್ರೀಯುತರು, ಮೊಮ್ಮಕ್ಕಳು ಗೆಳೆಯರಂತಾದ ಮೇಲೆ ಅವರಿಬ್ಬರ ನಡುವೆ ಬಹುಚವನವೇಕೇ ಎಂದು ಎಲ್ಲಾ ಮೊಮ್ಮಕ್ಕಳು ತಾತಾ ಹೋಗು ಬಾ ಎಂದೇ ಸಂಭೋದಿಸುತ್ತಿದ್ದರು. ಮೂಮ್ಮಕ್ಕಳು, ತಮ್ಮ ಅಪ್ಪಾ ಅಮ್ಮನೊಂದಿಗೆ ಹೇಳಿ ಕೊಳ್ಳಲಾಗದ ವಿಷಯವನ್ನು ತಾತನೊಂದಿಗೆ ಮುಕ್ತವಾಗಿ ಚರ್ಚಿಸುತ್ತಿದ್ದದ್ದು ಅವರ ನಡುವಿನ ಬಾಂಧವ್ಯವನ್ನು ತೋರಿಸುತ್ತಿತ್ತು.
ಖಾಸಗೀ ವಾಹಿನಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅಂತ್ಯದಲ್ಲಿ, ಜೀವನದಲ್ಲಿ ನೀವು ಯಾರಿಗಾದರೂ ಸಾರಿ ಹೇಳಬೇಕೆಂದರೆ ಯಾರಿಗೆ ಹೇಳುತ್ತೀರೀ ಎಂದಾಗ, ಒಂದು ಕ್ಷಣವೂ ಯೋಚಿಸದೇ, ನಾನು ಸಾರಿ ಕೇಳಬೇಕೆಂದಿದ್ದರೆ ಮೊದಲು ಅವಳಲ್ಲಿ ಅಂದರೆ ತಮ್ಮ ಧರ್ಮ ಪತ್ನಿ ಶಾಂತರ ಬಳಿ ಕೇಳುತ್ತೇನೆ ನಂತರ, ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಅನ್ನದಾತರಿಗೆ ನನ್ನ ಥ್ಯಾಂಕ್ಸ್ ಹೇಳುತ್ತೇನೆ ಎಂದಿದ್ದ ಮಹಾನ್ ವ್ಯಕ್ತಿಯವರು.
ತಮ್ಮ ರಂಗಭೂಮಿಯ ಕಲಾ ಸೇವೆಗಾಗಿ ಗುಬ್ಬಿ ವೀರಣ್ಣ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿಶ್ವಾದ್ಯಂತ ಸಾವಿರಾರು ಸನ್ಮಾನಗಳನ್ನು ಪಡೆದಿದ್ದರಾದರೂ, ಸಮಸ್ತ ಕನ್ನಡಿಗರ ಹೃದಯದಲ್ಲಿ ಪಡೆದಿದ್ದ ವಿಶೇಷ ಸ್ಥಾನಮಾನದ ಮುಂದೆ ಈ ಪ್ರಶಸ್ತಿ ಪುರಸ್ಕಾರಗಳೆಲ್ಲವೂ ನಗಣ್ಯವೇ ಎಂದೇ ಹೇಳಬಹುದು.
ಹಿರಣ್ಣಯ್ಯನವರೇ ಹೇಳಿಕೊಂಡಂತೆ ಅವರಿಗೆ ಎರಡು ಆಸೆಗಳಿದ್ದವು.
ಒಂಡು ಅವರನ್ನು ಮದುವೆಯಾಗಿ ಅವರ ಎಲ್ಲಾ ಕಾಟಗಳನ್ನು ಸಹಿಸಿಕೊಂಡ ಸಹನಾ ಮಣಿ ಅವರ ಧರ್ಮಪತ್ನಿ ಶಾಂತಾರವರು ಮುತ್ತೈದೆಯಾಗಿ ಹಿರಣ್ಣಯ್ಯನವರ ತೊಡೆಯ ಮೇಲೆ ಅಂತ್ಯಕಾಣಬೇಕು ಮತ್ತು ಆಕೆ ಸತ್ತ ಅರ್ಧ ಘಂಟೆಯೊಳಗೆ ತಾವೂ ಮರಣವನ್ನು ಹೊಂದಬೇಕು
ಎರಡನೆಯದು ಹಿರಣ್ಣಯ್ಯನವರು ಸತ್ತ ಮೇಲೂ ಜೀವಂತವಾಗಿರಬೇಕು.
ಮೊದಲನೆಯ ಆಸೆ ಸಾವಿನ ಮಾತು ಈಗ ಅಪ್ರಸ್ತುತವಾದರೂ, ಅವರ ಸಾಧನೆಗಳ ಮೂಲಕ ಅವರ ವೃತ್ತಿ ರಂಗಭೂಮಿಯ ಕಲಾ ಸೇವೆಯ ಮೂಲಕ ಕನ್ನಡ ಭಾಷೆ ಇರುವವರೆಗೂ ಮಾಸ್ಟರ್ ಹಿರಣ್ಣಯ್ಯನವರು ಅಜರಾಮರವಾಗಿರುತ್ತಾರೆ. ಇನ್ನು ಮಮತೆಯ ಮಾತೆ ಶಾಂತಾರವರು ಇನ್ನೂ ನೂರ್ಕಾಲ ಆರೋಗ್ಯವಂತರಾಗಿ ಬಾಳಿ ಹಿರಣ್ಣಯ್ಯನವರ ಆದರ್ಶಗಳನ್ನು ಎಲ್ಲರಿಗೂ ತಿಳಿಸುವಂತಾಗಲಿ.
ಇಂದಿನಿಂದ ಭೌತಿಕವಾಗಿ ಮಾ.ಹಿರಣ್ಣಯ್ಯನವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ನಾಟಕಗಳು ಮತ್ತು ಅವರ ಕಲಾಸೇವೆಯಿಂದಾಗಿ ಆಚಂದ್ರಾರ್ಕವಾಗಿ ಅವರು ನಮ್ಮೊಂದಿಗೆ ಸದಾಕಾಲವೂ ಇದ್ದೇ ಇರುತ್ತಾರೆ.
ಏನಂತೀರೀ?
good one..keep writing
LikeLiked by 1 person
ನಿಮ್ಮೆಲ್ಲರ ಶುಭ ಹಾರೈಕೆಗಳೇ, ನಮ್ಮ ಬರಹಕ್ಕೆ ಸ್ಪೂರ್ತಿ
LikeLike
Hats off boss
LikeLiked by 1 person
Thank you very much
LikeLike
ತುಂಬಾ ಚೆನ್ನಾಗಿದೆ … ನಾವಿಬ್ಬರು ಬಿಇಎಲ್ ಕುವೆಂಪು ಕಲಾಕ್ಷೇತ್ರದಲ್ಲಿ ಮಾಸ್ಟರ್ ಹಿರಣ್ಣಯ್ಯನವರ ಲಂಚಾವತಾರ ನಾಟಕ ನೋಡಿದ ನೆನಪಾಯಿತು. ಚಿತ್ರ ನಟ ಜಗ್ಗೇಶ್ ಮತ್ತು ಹಿರಣ್ಣಯ್ಯನವರ ನಡುವೆ ನಡೆದ ಟಿವಿ ಮತ್ತು ಸಿನಿಮಾ ಕಲಾವಿದರ ಹಿತಾಸಕ್ತಿಯ ಕುರಿತು ನಡೆದ ಸಂಘರ್ಷ ಒಮ್ಮೆ ಸ್ಮೃತಿಪಟಲದಲ್ಲಿ ಮೂಡಿ ಹೋಯಿತು. ಅಗಲಿದ ಹಿರಿಯರಿಗೆ ಗೌರವ ಪೂರ್ವಕ ನಮನ 🙏
LikeLiked by 1 person
Too good
LikeLiked by 1 person
ಅತ್ಯುತ್ತಮ ವಿವರಣೆ….
ಮಾಸ್ಟರ್ ಹಿರಣ್ಣಯ್ಯನವರ ಸಂಕ್ಷಿಪ್ತ ಮಾಹಿತಿಗೆ
ತುಂಬು ಹೃದಯದ ಧನ್ಯವಾದಗಳು Sir
LikeLiked by 1 person